Sunday, August 09, 2015

ಪ್ರಿನ್ಸಿಪಾಲ್ ವೀ.ಕೆ.ಗೋಕಾಕರಿಗೇ ಆವಾಜ್ ಹಾಕಿ ಕಾಲೇಜ್ ಸೀಟ್ ಗಿಟ್ಟಿಸಿಕೊಂಡ ಮಾಣಿಯೊಬ್ಬನ ಬಗ್ಗೆ.....

ಶ್ರೀ  ವೀ. ಕೆ. ಗೋಕಾಕ

ಆಗಸ್ಟ್ ೯. ಇವತ್ತು ಡಾ. ವೀ.ಕೆ. ಗೋಕಾಕರ ಜನ್ಮದಿವಸವಂತೆ. ನಿನ್ನೆ, ಆಗಸ್ಟ್ ೮,  ನಮ್ಮ ತಂದೆಯವರ ಜನ್ಮದಿನ. ವೀ.ಕೆ. ಗೋಕಾಕರಿಗೇ ಆವಾಜ್ ಹಾಕಿ ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡ ಭೂಪ ಅವರು.

ಆಗಿದ್ದು ಇಷ್ಟೇ. ಪಾಪ. ನಮ್ಮ ತಂದೆಯವರು. ಅದೂ ೧೯೫೪ ರ ಕಾಲ. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಆಗಿನ ಮ್ಯಾಟ್ರಿಕ್ ಮುಗಿಸಿದ್ದರು. ಇಪ್ಪತ್ತನೇ ವರ್ಷಕ್ಕೆ ಮ್ಯಾಟ್ರಿಕ್ ಮುಗಿಸಿದರೇ? ಹೌದು. ಬಾಲ್ಯದಲ್ಲಿ ನಾನಾ ತೊಂದರೆ. ಹುಟ್ಟಿದ್ದು, ಬೆಳೆದಿದ್ದು ಎಲ್ಲ ಕುಗ್ರಾಮ. ಸರಿಯಾದ ಶಾಲೆಗಳು ಇರುತ್ತಿರಲಿಲ್ಲ. ಬಾಲ್ಯದಲ್ಲಿ ಆರೋಗ್ಯ ಬೇರೆ ಸರಿಯಿರುತ್ತಿರಲಿಲ್ಲ. ಎರಡನೇ ಮಹಾಯುದ್ಧದ ಸಮಯ ಬೇರೆ. ಮೇಲಿಂದ ದೊಡ್ಡ economic depression. ಮೂಲ ಊರಾದ ಹೊನ್ನಾವರದ ಸಮೀಪದ ಬೊಮ್ಮನಹೊಂಡದಲ್ಲಿ ಬೆಳೆದು ರಾಶಿಹಾಕಿದ್ದ ಅಡಿಕೆ ಬೇಕಾದಷ್ಟು ಇತ್ತು. ಆದರೆ ಅಡಿಕೆಗೆ ರೇಟೇ ಇಲ್ಲ. ಹಾಗಾಗಿ ಕೈಯಲ್ಲಿ ರೊಕ್ಕವೇ ಇಲ್ಲ. ಅಂತಹ ಸಂದರ್ಭದಲ್ಲಿ ವಿಪರೀತ ಜಡ್ಡು ಬಿದ್ದ ಮಗನಿಗೆ ಔಷಧ ಕೊಡಿಸೋಣ ಅಂದರೆ ಅಜ್ಜನ ಕಡೆ ರೊಕ್ಕವಿಲ್ಲ. ಎಂತೆಂತದೋ ಕಠಿಣ ಪರಿಸ್ಥಿತಿಯಲ್ಲಿ 'ಬಾಲ್ ಬಾಲ್ ಬಚ್ ಗಯೇ' ಮಾದರಿಯಲ್ಲಿ ಬದುಕುಳಿದವರು ತಂದೆಯವರು. ಹೇಗೋ ಮಾಡಿ ಆಕಾಲದಲ್ಲಿ ಮೆಟ್ರಿಕ್ ಪರೀಕ್ಷೆ ಎಲ್ಲಿಂದಲೋ ಪಾಸ್ ಮಾಡಿದರು. ಗೋಕರ್ಣದ ಭದ್ರಕಾಳಿ ಹೈಸ್ಕೂಲಿನಿಂದ ಪಾಸ್ ಮಾಡಿದರೆ ಅಥವಾ ಬೆಳಗಾವಿಯ ಹೈಸ್ಕೂಲಿನಿಂದ ಪಾಸ್ ಮಾಡಿದರೆ ಅನ್ನುವದು ಮರೆತು ಹೋಗಿದೆ. ತಂದೆಯವರ ಚಿಕ್ಕಪ್ಪ education inspector ಆಗಿದ್ದರು. ಅವರ ಮನೆಯಲ್ಲಿದ್ದು ತಮ್ಮ ವಿದ್ಯಾಭ್ಯಾಸ ಮಾಡಿದವರು ನಮ್ಮ ತಂದೆ. ತಂದೆಯವರ ಚಿಕ್ಕಪ್ಪನವರಿಗೆ ಎಲ್ಲೆಲ್ಲಿ ವರ್ಗವಾಗುತ್ತಿತ್ತೋ ಅಲ್ಲಿಗೆ ಹೋಗಿ ಓದಿಕೊಂಡಿರುತ್ತಿದ್ದರು ನಮ್ಮ ತಂದೆ. ಒಟ್ಟಿನಲ್ಲಿ ಸ್ವಲ್ಪ ತಡವಾದರೂ ಒಳ್ಳೆ ಮಾರ್ಕ್ಸಿನಲ್ಲೇ ಮೆಟ್ರಿಕ್ ಮುಗಿಸಿದ್ದರು.

ಸರಿ, ಮುಂದೆ ಆಗಿನ ಇಂಟರ್ (ಪಿಯೂಸಿ) ಮಾಡಲು ಕಾಲೇಜಿಗೆ ಅಡ್ಮಿಶನ್ ತೆಗೆದುಕೊಳ್ಳೋಣ ಅಂತ ಧಾರವಾಡಕ್ಕೆ ಬಂದರು. ಆಗಿನ ಕಾಲದಲ್ಲಿ ದೂರದ ಹೊನ್ನಾವರದಿಂದ ಧಾರವಾಡಕ್ಕೆ ಬರಲಿಕ್ಕೆ ಪೂರ್ತಿ ದಿವಸ ಬೇಕಾಗುತ್ತಿತ್ತು. ಡೈರೆಕ್ಟ್ ಬಸ್ಸೂ ಇರಲಿಲ್ಲ. ಹುಬ್ಬಳ್ಳಿಗೆ ಬಂದು ನಂತರ ಜುಗಾಡ್ ಮಾಡಬೇಕಾಗುತ್ತಿತ್ತು.

ಅಷ್ಟೆಲ್ಲಾ ಮಾಡಿಕೊಂಡು ಇಲ್ಲಿ ಧಾರವಾಡಕ್ಕೆ ಬಂದು ನೋಡಿದರೆ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಅಡ್ಮಿಶನ್ ಮುಗಿದುಬಿಟ್ಟಿದೆ. ಒಂದೋ ಎರಡೋ ದಿವಸದ ಹಿಂದೆ ಅಷ್ಟೇ. ಜಸ್ಟ್ ಮಿಸ್!

ನಮ್ಮ ತಂದೆಯವರೋ ಏಕ್ದಂ ದಮ್ ಇರುವವರು. ಸಿಂಹ ರಾಶಿಯವರು. ತಾರುಣ್ಯದ ಫುಲ್ ಮೀಟರ್ ಬೇರೆ. ಅಡ್ಮಿಶನ್ ವಿಭಾಗದ ಕಾರ್ಕೂನನಿಗೆ ಮೊದಲು ಆವಾಜ್ ಹಾಕಿದ್ದಾರೆ. ಜಗಳವಾಡಿದ್ದಾರೆ. ಏನೂ ಉಪಯೋಗವಾಗಿಲ್ಲ. ರೈಸ್ ಆಗಿದ್ದಾರೆ. ಸೀದಾ ಅಂದಿನ ಕರ್ನಾಟಕ ಕಾಲೇಜಿನ ಪ್ರಿನ್ಸಿಪಾಲ್ ವೀಕೆ ಗೋಕಾಕರ ಚೇಂಬರಿಗೆ ನುಗ್ಗಿಬಿಟ್ಟಿದ್ದಾರೆ. ಒಂದೇ ಮಾತು ಖಡಕ್ಕಾಗಿ ಹೇಳಿದ್ದಾರೆ. 'ಮಾಸ್ತರರೇ, ನಿಮ್ಮನ್ನು ಮತ್ತೆ ನಿಮ್ಮ ಕಾಲೇಜನ್ನು ನಂಬಿಕೊಂಡು ಧಾರವಾಡಕ್ಕೆ ಬಂದೆ. ಅಡ್ಮಿಶನ್ ಕೊಟ್ಟಿದ್ದರೆ ಇಲ್ಲೇ ಇದ್ದು ಓದುತ್ತಿದ್ದೆ. ಸೀಟ್ ಇಲ್ಲಾ ಅಂತಿದ್ದಾರೆ. ನೀವು ಸೀಟ್ ಕೊಡಲಿಲ್ಲ ಅಂದರೆ ನಾ ಮುಂಬೈಗೆ ಹೊಂಟೆ. ಅಲ್ಲಿ ಸೀಟ್ ಪಡೆದುಕೊಳ್ಳಲು ಬೇಕಾದಷ್ಟು ಮಾರ್ಕ್ಸ್ ಇದೆ ನನ್ನ ಹತ್ತಿರ. ಅಲ್ಲಿದ್ದು ಕಲಿಯಲಿಕ್ಕೆ ಬೇಕಾಗುವಷ್ಟು ರೊಕ್ಕ ನಮ್ಮಪ್ಪ ಹ್ಯಾಂಗೋ ಕಷ್ಟಪಟ್ಟು ಜೋಡಿಸಿಕೊಟ್ಟಿದ್ದಾನೆ. ಏನಂತೀರಿ?? ಸೀಟು ಕೊಡ್ತೀರಿ ಏನು? ಹಳ್ಳಿಯ ಕಡೆಯ ಬಡ ಹುಡುಗ ನಾನು. ಬರೋದು ಸ್ವಲ್ಪ ತಡವಾಗಿದೆ ನಿಜ. ಆದರೆ ಮಾಹಿತಿಯೇ ಸಿಗಲಿಲ್ಲ. ಏನು ಮಾಡೋದು??? ಪ್ಲೀಸ್ ಒಂದು ಸೀಟ್ ಕೊಡ್ರೀ ಸರ್!'

ತಮ್ಮ ಚೇಂಬರಿಗೇ ನುಗ್ಗಿ ಹೀಗೆ ಸಾತ್ವಿಕ ಆವಾಜ್ ಹಾಕಿದ, ಖಾಕಿ ಹಾಫ್ ಪ್ಯಾಂಟ್ ಬಿಳೆ ಶರ್ಟ್ ಹಾಕಿ ಬ್ರಹ್ಮಕ್ಷಾತ್ರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಹವ್ಯಕ ಮಾಣಿಯೊಬ್ಬನನ್ನು ನೋಡಿದ ಪರಮ ಪೂಜ್ಯ ಗೋಕಾಕರು ಫುಲ್ ಇಂಪ್ರೆಸ್ ಆಗಿಬಿಟ್ಟಿದ್ದಾರೆ. ಸ್ಪೆಷಲ್ ಕೇಸ್ ಅಂತ ಪರಿಗಣಿಸಿ ಒಂದು ಸೀಟು ಕೊಟ್ಟು, 'ಒಳ್ಳೆ ರೀತಿಯಿಂದ ಅಭ್ಯಾಸ ಮಾಡಿ, ಮುಂದ ಛಲೋ ಮಾಡಿಕೋ ಮೈ ಬಾಯ್!' ಅಂತ ಆಶೀರ್ವದಿಸಿ ಕಳಿಸಿದ್ದಾರೆ. Rest is history!

ಅಂದು ಗೋಕಾಕರಿಗೇ ಸಾತ್ವಿಕ ಆವಾಜ್ ಹಾಕಿ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದ ಪ್ರೀತಿಯ ತಂದೆಯವರಿಗೆ ನಿನ್ನೆಗೆ ಬರೋಬ್ಬರಿ ಎಂಬತ್ತೊಂದು ವರ್ಷ! God bless him! ಆರಾಮ್ ಇದ್ದಾರೆ! ಹಾಗೇ ಇರಲಿ!

ಇವತ್ತು ಗೋಕಾಕರ ಜನ್ಮದಿನ ಅಂತ ಫೇಸ್ಬುಕ್ ಮೇಲೆ ಕಂಡ ಅವರ ಪರಿಚಯ ಮಾಡಿಕೊಡುವ ಈ ಲೇಖನವನ್ನು ಓದಿದ ನಂತರ ನೆನಪಾಗಿ ಬರೆದಿದ್ದು ಇದು.

ತಂದೆಯವರು ಮತ್ತು ನಾನು. ಮಾರ್ಚ್ ೨೦೧೨. ಧಾರವಾಡ.

7 comments:

Shailesh Hegde said...


Great article about a great person!

Happy Birthday!

Mahesh Hegade said...

Thanks Shailesh. Glad to know that the birthdays of two greats are a day apart!

sunaath said...

ಈ ಘಟನೆಯನ್ನು ಓದಿ ಮನಸ್ಸು ತುಂಬಿ ಬಂದಿತು. ನಿಮ್ಮ ತಂದೆಯವರಿಗೆ ಜನ್ಮದಿನದ ಶುಭಾಶಯಗಳು.

Mahesh Hegade said...

Thank you very much, Sunaath Sir.

ವಿ.ರಾ.ಹೆ. said...

Well written.

Happy birthday to beloved Doddappa.

Unknown said...

Belated wishes ....
The story is best example for :"Manassiddare maarga"
Nice article Sir.

Mahesh Hegade said...

Thank you, Mamata Hegde.