Monday, September 28, 2015

ಪಾಕಿಸ್ತಾನದ ಅಣುಸ್ಥಾವರವನ್ನು ಧ್ವಂಸ ಮಾಡುವ ಸ್ಕೆಚ್ ಹಾಕಿತ್ತೇ ಇಸ್ರೇಲ್!?

ಇಸವಿ ೧೯೮೪. ಭಾರತದ ಬಾಹ್ಯ ಬೇಹುಗಾರಿಕೆ ಸಂಸ್ಥೆಯಾದ R&AW ದ ಬೇಹುಗಾರರು ಒಂದು ಅತಿ ಮಹತ್ವದ ದಾಖಲೆಯನ್ನು ಸಂಪಾದಿಸಿಬಿಟ್ಟಿದ್ದರು. ಅಮೇರಿಕಾದ ರಾಜತಾಂತ್ರಿಕರು ನವದೆಹಲಿಯಿಂದ  ವಾಷಿಂಗ್ಟನ್ನಿಗೆ ಕಳಿಸಿದ್ದ ಒಂದು ರಹಸ್ಯ ಕಡತವನ್ನು ಅದ್ಯಾವ ಮಾಯೆಯಲ್ಲಿಯೋ ಮಾರ್ಗದಲ್ಲಿಯೇ intercept ಮಾಡಿದ್ದ ಭಾರತದ ಬೇಹುಗಾರರು ಅದರ ಒಂದು ನಕಲು ಪ್ರತಿ ಮಾಡಿಕೊಂಡುಬಿಟ್ಟಿದ್ದರು. ಅದರಲ್ಲಿದ್ದ ಮಾಹಿತಿ ಮಾತ್ರ ಬೆಚ್ಚಿಬೀಳಿಸುವಂತಿತ್ತು.

ಪಾಕಿಸ್ತಾನದಲ್ಲಿ ಆಗುತ್ತಿದ್ದ ಬೆಳವಣಿಗೆಗಳ ಮೇಲೆ ಬರೋಬ್ಬರಿ ಒಂದು ನಜರ್ ಮಡಗಿದ್ದ ಅಮೇರಿಕಾ ಎಲ್ಲವನ್ನೂ ಅದರಲ್ಲಿ ದಾಖಲಿಸಿತ್ತು. ಅದರಲ್ಲಿದ್ದ ಖತರ್ನಾಕ್ ವಿಷಯ - 'ಇನ್ನು ಎರಡು ವರ್ಷಗಳಲ್ಲಿ ಪಾಕಿಸ್ತಾನ ಪರಿಪೂರ್ಣ ಪರಮಾಣು ಶಕ್ತಿಯುಳ್ಳ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಪಾಕಿಸ್ತಾನದ ಕಹುಟಾದಲ್ಲಿರುವ ಅಣುಸ್ಥಾವರದಲ್ಲಿ ಅಣುಬಾಂಬಿನ ತಯಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ!'

ಇನ್ನೆರೆಡು ವರ್ಷಗಳಲ್ಲಿ ಪಾಕಿಸ್ತಾನವೂ ಅಣುಬಾಂಬ್ ಹೊಂದಲಿದೆ ಅನ್ನುವ ವಿಷಯ ದೊಡ್ಡ ಮಟ್ಟಿನ ಸಂಚಲನವನ್ನು ಹುಟ್ಟುಹಾಕಿತು. ಭಾರತದ ಸರ್ಕಾರ, ಸೇನೆ, ರಾಜತಾಂತ್ರಿಕ ವಲಯಗಳಲ್ಲಿ ದೊಡ್ಡ ಮಟ್ಟದ ಗಲಿಬಿಲಿ, ಗಾಬರಿ, ಆತಂಕ! ಪಾಕಿಸ್ತಾನ ಮೊದಲೇ ಎಲ್ಲ ರೀತಿಯಿಂದ ಅಸ್ಥಿರವಾದ ದೇಶ. ಯಾವ ತಲೆಕೆಟ್ಟ ಮನುಷ್ಯ ಯಾವಾಗ ಬಂದು ಅಲ್ಲಿನ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾನೋ ಗೊತ್ತಿಲ್ಲ. ಪರಿಸ್ಥಿತಿ ಮೊದಲೇ ಅಷ್ಟು ನಾಜೂಕಾಗಿರುವಾಗ ಪಾಕಿಗಳ ಕೈಯಲ್ಲಿ ಅಣುಬಾಂಬ್ ಸಹ ಬಂದುಬಿಟ್ಟರೆ ಅಷ್ಟೇ ಮತ್ತೆ. ಅದು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಅಲ್ಲ. ಅದಕ್ಕಿಂತ ನೂರು ಪಟ್ಟು ಡೇಂಜರ್. ಸೀದಾ ಅಂಡರ್ವೇರ್ ಚಡ್ಡಿಯಲ್ಲಿಯೇ ಕೆಂಡ ಬಂದುಬಿದ್ದಂತೆ. 'ಪಾಕಿಸ್ತಾನದ ಅಣುಬಾಂಬ್ ತಯಾರಾಗದಂತೆ ಏನಾದರೂ ಉಪಾಯ ಮಾಡಬೇಕು. ಏನು ಮಾಡಬೇಕು?' ಅಂತ ಆಗಿನ ಪ್ರಧಾನಿ ಇಂದಿರಾ ಗಾಂಧಿಯಿಂದ ಹಿಡಿದು ಸೈನ್ಯದ ಮುಖ್ಯಸ್ಥರು, ಬೇಹುಗಾರಿಕೆ ಸಂಸ್ಥೆಗಳ ಹಿರಿಯರು ಎಲ್ಲ ತಲೆಕೆಡಿಸಿಕೊಂಡರು. ಆವಾಗ ನೆನಪಾಗಿದ್ದೇ ಇಸ್ರೇಲ್ ಎಂಬ ಮಧ್ಯಪ್ರಾಚ್ಯದ ಪುಟ್ಟ ದೇಶ.

ಆಗ ಭಾರತ ಮತ್ತು ಇಸ್ರೇಲ್ ಮಧ್ಯೆ formal ರಾಜತಾಂತ್ರಿಕ ಸಂಬಂಧಗಳು ಇರಲಿಲ್ಲ. ಯಾಕೆಂದರೆ ಭಾರತ official ಆಗಿ ಪ್ಯಾಲೆಸ್ಟೈನ್ ವಿಮೋಚನಾ ಸಂಸ್ಥೆ (PLO) ಮತ್ತು ಅದರ ಮುಖ್ಯಸ್ಥ ಯಾಸೀರ್ ಅರಾಫತ್ ಅವರನ್ನು ಬೆಂಬಲಿಸುತ್ತಿತ್ತು. PLO ಮತ್ತು ಇತರೆ ಸಂಸ್ಥೆಗಳು ಸ್ವತಂತ್ರ ಪ್ಯಾಲೆಸ್ಟೈನ್ ದೇಶಕ್ಕಾಗಿ ಇಸ್ರೇಲ್ ವಿರುದ್ಧ ಹೋರಾಡುತ್ತಿದ್ದವು. ಇಸ್ರೇಲ್ ಜೊತೆ formal ರಾಜತಾಂತ್ರಿಕ ಸಂಬಂಧ ಇಲ್ಲದಿದ್ದರೆ ಏನಾಯಿತು backdoor diplomacy ಅಂತ ಇರುತ್ತದೆ ನೋಡಿ. ಹಾಗಾಗಿ ಕೆಲವು ವಲಯಗಳಲ್ಲಿ ಇಸ್ರೇಲ್ ಜೊತೆ ಒಂದು ರೀತಿಯ informal ಮತ್ತು ರಹಸ್ಯ ಸಂಬಂಧ ಇದ್ದೇ ಇತ್ತು. ಭಾರತದ ಬೇಹುಗಾರಿಕೆ ಸಂಸ್ಥೆ R&AW ಮತ್ತು ಇಸ್ರೇಲಿನ ಮಹಾ ಖತರ್ನಾಕ್ ಬೇಹುಗಾರಿಕೆ ಸಂಸ್ಥೆಯಾದ ಮೊಸ್ಸಾದ್ (Mossad) ಮಧ್ಯೆ ಒಂದು ರೀತಿಯ ಸಂಬಂಧ ಇತ್ತು. ಕೆಲವು ವಿಷಯಗಳಲ್ಲಿ ವಿಚಾರ, ಮಾಹಿತಿ ವಿನಿಮಯ ಆಗುತ್ತಿತ್ತು. ವಿಶೇಷ ಕಾರ್ಯಾಚರಣೆಗಳಲ್ಲಿ ಭಾಗಿಯಾಗುತ್ತಿದ್ದ ಭಾರತ ಸೈನ್ಯದ ಸೈನಿಕರಿಗೆ ಕಮಾಂಡೋ ತರಬೇತಿಯನ್ನು ಇಸ್ರೇಲಿಗಳೇ ಕೊಟ್ಟಿದ್ದರು ಅಂತ ಸುದ್ದಿ ಇತ್ತು. ಆದರೆ ಅವೆಲ್ಲವೂ ಗುಪ್ತ, ಗುಪ್ತ.

ಪಾಕಿಸ್ತಾನ ಅಣುಬಾಂಬ್ ತಯಾರಿಸಲಿದೆ ಮತ್ತು ಇನ್ನು ಕೇವಲ ಎರಡೇ ವರ್ಷದಲ್ಲಿ ಭಾರತದ ಬುಡಕ್ಕೇ ಬೆಂಕಿ ಇಡಲಿದೆ ಅಂತ ಮಾಹಿತಿ ಸಿಕ್ಕ ನಂತರ ಭಾರತಕ್ಕೆ ಇಸ್ರೇಲ್ ನೆನಪಾಗಲು ಕಾರಣವೂ ಇತ್ತು. ಕೇವಲ ಮೂರೇ ವರ್ಷಗಳ ಹಿಂದೆ ಇಸ್ರೇಲ್ ಒಂದು ಮಹಾ ಭಯಂಕರ, ಹಿಂದೆಂದೂ ಯಾರೂ ಮಾಡಿರದ ಒಂದು ಜಾಬಾಜ್ ಕಾರ್ಯಾಚರಣೆ ಮಾಡಿಬಿಟ್ಟಿತ್ತು. ಅದು ಏನು ಗೊತ್ತೇ? ಇಸ್ರೇಲಿನ ಪಕ್ಕದ ಮನೆಯಂತಿದ್ದ ಇರಾಕ್ ದೇಶದಲ್ಲಿ ಹುಚ್ಚ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಇದ್ದ. ಅವನಿಗೂ ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳ ಹುಚ್ಚು. ಅವನೂ ಅಣುಬಾಂಬ್ ತಯಾರು ಮಾಡಲು ಹೊರಟಿದ್ದ. ಅದಕ್ಕೆ ಬೇಕಾದ ವಿಜ್ಞಾನಿಗಳನ್ನು, ತಂತ್ರಜ್ಞರನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದ. ತನ್ನ ಅಕ್ಕಪಕ್ಕದ ರಾಷ್ಟ್ರವೊಂದು, ಅದರಲ್ಲೂ ಹುಚ್ಚ ಸರ್ವಾಧಿಕಾರಿಯೊಬ್ಬ ಆಳುತ್ತಿದ್ದ ಪರಮ ಶತ್ರು ರಾಷ್ಟ್ರವೊಂದು, ಅಣುಬಾಂಬ್ ತಯಾರಿಸುತ್ತಲಿದೆ ಎಂಬುದನ್ನು ಇಸ್ರೇಲ್ ಕಡೆಗಣಿಸಲು ಸಾಧ್ಯವೇ ಇರಲಿಲ್ಲ. ಇಸ್ರೇಲ್ ಪಕ್ಕದಲ್ಲಿರುವವು ಅಷ್ಟೂ ರಾಷ್ಟ್ರಗಳು ಇಸ್ಲಾಮಿಕ್ ರಾಷ್ಟ್ರಗಳು. ಇಸ್ರೇಲ್ ಯಹೂದಿಗಳ ದೇಶ. ಅವರಿಗೆ ಮತ್ತು ಅವರ ಇಸ್ಲಾಮಿಕ್ ನೆರೆಹೊರೆಯವರಿಗೆ ಮೊದಲಿಂದಲೂ ದ್ವೇಷ ಮತ್ತು ಬಡಿದಾಟ. ಇಸ್ರೇಲಿನ ಹುಟ್ಟಡಗಿಸಿಯೇ ತೀರುತ್ತೇವೆ ಅಂತ ಅಕ್ಕಪಕ್ಕದ ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಜ್ಞೆ. ಅದೇ ರೀತಿ ನಡೆದಿತ್ತು ಕೂಡ. ಸಾಕಷ್ಟು ಬಾರಿ ಸಿರಿಯಾ, ಈಜಿಪ್ಟ್, ಜೋರ್ಡಾನ್, ಇರಾಕ್ ಎಲ್ಲ ಇಸ್ರೇಲ್ ಮೇಲೆ ದಾಳಿ ಮಾಡಿದ್ದವು. ೧೯೬೫ ರಲ್ಲಿ ಅಂತೂ ಸಿರಿಯಾ, ಈಜಿಪ್ಟ್, ಜೋರ್ಡಾನ್ ಮೂರೂ ದೇಶಗಳು ಕೂಡಿಯೇ ಇಸ್ರೇಲ್ ಮೇಲೆ synchronized ದಾಳಿ ಮಾಡಿಬಿಟ್ಟಿದ್ದವು. ಅದೇ 'ಆರು ದಿವಸಗಳ ಯುದ್ಧ'. ಇಸ್ರೇಲಿಗೆ ಮುಂಚಿತ ಮಾಹಿತಿ ಕೂಡ ಒಂದಿನಿತೂ ಸಿಕ್ಕಿರಲಿಲ್ಲ. 'ಮಾಡು ಇಲ್ಲವೇ ಮಡಿ!' ಎಂಬ ಕಠಿಣ ಪರಿಸ್ಥಿತಿ ಇಸ್ರೇಲಿಗೆ. ತಮ್ಮ ದೇಶದ, ಯಹೂದಿ ಜನಾಂಗದ ಅಸ್ತಿತ್ವದ ಬುಡಕ್ಕೇ ಬಂದಾಗ ಇಸ್ರೇಲಿಗಳಿಗೆ ಎಲ್ಲೆಲ್ಲಿಂದಲೋ ಇನ್ನಿಲ್ಲದ ಶೌರ್ಯ, ಪರಾಕ್ರಮ, determination ಎಲ್ಲ ಬಂದುಬಿಟ್ಟಿತು. ಅದು ಹೇಗೋ ಮಾಡಿ, ದೊಡ್ಡ ಪ್ರಮಾಣದ ಬಲಿದಾನ ನೀಡಿ, ಇಸ್ರೇಲಿಗಳು ಯುದ್ಧ ಗೆದ್ದುಕೊಂಡಿದ್ದರು. ಯುದ್ಧ ಗೆದ್ದುಕೊಂಡಿದ್ದೊಂದೇ ಅಲ್ಲ,  ಈಜಿಪ್ಟ್, ಸಿರಿಯಾ, ಜೋರ್ಡಾನ್ ದೇಶಗಳಿಗೆ ಬರೋಬ್ಬರಿ ಬಡಿದು, ಪ್ರತಿ ದೇಶದ ದೊಡ್ಡ ಪ್ರಮಾಣದ ಜಾಗಗಳನ್ನೂ ಕೂಡ ಆಕ್ರಮಿಸಿ ಕೂತುಬಿಟ್ಟಿದ್ದರು. ಈಜಿಪ್ಟ್ ಸೈನಾಯ್ ಕಳೆದುಕೊಂಡರೆ ಸಿರಿಯಾ ಗೋಲನ್ ಪ್ರದೇಶವನ್ನೂ ಕಳೆದುಕೊಂಡಿತು. ಜೋರ್ಡಾನ್ ಅಂತೂ ಜೋರ್ಡಾನ್ ನದಿಯ ಪಶ್ಚಿಮ ದಂಡೆಯನ್ನು ಪೂರ್ತಿಯಾಗಿ ಕಳೆದುಕೊಂಡು ಅಮ್ಮಾತಾಯಿಯಾಗಿ ಹೋಯಿತು. ಇಷ್ಟೆಲ್ಲ ಸಾಧಿಸಲು ಸಾವಿರಾರು ಇಸ್ರೇಲಿ ಸೈನಿಕರು ಮತ್ತು ನಾಗರಿಕರು ದೊಡ್ಡ ಪ್ರಮಾಣದ ಪರಮ ಬಲಿದಾನ ನೀಡಿದರು. ವೀರಮರಣ ಹೊಂದಿದರು. ಪುಟ್ಟ ದೇಶವಾದ ಇಸ್ರೇಲಿಗೆ ಆ ಯುದ್ಧ ಮಾತ್ರ ಎಲ್ಲ ರೀತಿಯಲ್ಲಿಯೂ ತುಂಬಾ ದುಬಾರಿಯಾಗಿತ್ತು. ಅಷ್ಟೆಲ್ಲಾ ನಷ್ಟವಾದರೂ ಯುದ್ಧ ಗೆದ್ದಿದ್ದೊಂದೇ ಸಮಾಧಾನ.

ಇದಾದ ನಂತರ ಇಸ್ರೇಲ್ ಸಿಕ್ಕಾಪಟ್ಟೆ ಜಾಗರೂಕವಾಗಿಬಿಟ್ಟಿತು. ತನ್ನ ನೆರೆಯ ದೇಶಗಳು ಮತ್ತು ಅವುಗಳ ಕಾರ್ನಾಮೆಗಳ ಮೇಲೆ ಒಂದು ಕಣ್ಣು ಬರೋಬ್ಬರಿ ಇಟ್ಟಿತ್ತು. ಅಂತಹದೇ ಸಂದರ್ಭದಲ್ಲಿ ಇರಾಕಿನ ಪೊರ್ಕಿ ಸರ್ವಾಧಿಕಾರಿ, ಪರಮ ಕ್ರೂರಿ, ಸದ್ದಾಮ್ ಹುಸೇನ್ ಅಣುಬಾಂಬಿನ ತಯಾರಿಕೆ ಶುರುಮಾಡಿಕೊಂಡಿದ್ದ. ಇಸ್ರೇಲ್ ಅದನ್ನು ಕಡೆಗಣಿಸುವ ಹಾಗೆ ಇರಲೇ ಇಲ್ಲ. ಅಂತರಾಷ್ಟ್ರೀಯ ಸಮುದಾಯದಿಂದ ಇರಾಕಿಗೆ ಬುದ್ಧಿ ಹೇಳಿಸಿದರು. ಆಕಡೆ ಕಿವಿಯಿಂದ ಕೇಳಿ ಈಕಡೆ ಕಿವಿಯಿಂದ ಬಿಟ್ಟವನಂತೆ ಅಸಡ್ಡೆಯಿಂದ ಎದ್ದು ಹೋದ ಸದ್ದಾಮ್. ಇರಾಕ್ ಮೇಲೆ ಏನೇನೋ ಆರ್ಥಿಕ, ಇತರೆ ದಿಗ್ಬಂಧನ ವಿಧಿಸುವ ಹಾಗೆ ಮಾಡಿದರು. ಅದಕ್ಕೆಲ್ಲ ಸದ್ದಾಮ ಕ್ಯಾರೆ ಅನ್ನಲಿಲ್ಲ. ಆಗ ಇಸ್ರೇಲ್ ಮಾಡಿದ್ದು ಅಂದರೆ ಸಾರಾಸಗಟಾಗಿ ಅಣುಸ್ಥಾವರಕ್ಕೆ ಸಂಬಂಧಿಸಿದ ಮಂದಿಯನ್ನು ಕೊಲ್ಲಲು ನಿಂತಿದ್ದು. ರಹಸ್ಯ ಕಾರ್ಯಾಚರಣೆಗಳನ್ನು ಮಾಡಿ ಸದ್ದಾಮನ ಅಣುವಿಜ್ಞಾನಿಗಳನ್ನು ಸಿಕ್ಕಸಿಕ್ಕಲ್ಲಿ ಹಿಡಿದು ಕೊಲ್ಲತೊಡಗಿತು ಇಸ್ರೇಲ್. ಅಂತಹ ರಹಸ್ಯ ಮತ್ತು ನಿಗೂಢ ಹತ್ಯೆಗಳು ಅಣುಬಾಂಬ್ ತಯಾರಿಕೆಗೆ ಒಂದು ರೀತಿಯ ಹಿನ್ನಡೆ ಉಂಟು ಮಾಡಿದವು. ಆದರೆ ಸದ್ದಾಮ್ ಕೆಲವೊಂದು ವಿಷಯಗಳಲ್ಲಿ ಸಿಕ್ಕಾಪಟ್ಟೆ ಹುಂಬ. ಆತನಲ್ಲಿ ಬೇಕಾದಷ್ಟು ಪೆಟ್ರೋಲ್ ರೊಕ್ಕವಿತ್ತು. ತನ್ನ ಅಣುವಿಜ್ಞಾನಿಗಳು ಇಸ್ರೇಲಿ ಹಂತಕರ ಕೈಯಲ್ಲಿ ಚಿತ್ರವಿಚಿತ್ರ ರೀತಿಯಲ್ಲಿ ಸಾಯುತ್ತಿದ್ದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಣುವಿಜ್ಞಾನಿಗಳನ್ನು ಖರೀದಿಸಲು ನಿಂತುಬಿಟ್ಟ ಸದ್ದಾಮ್ ಹುಸೇನ್. ಬೇರೆ ಬೇರೆ ದೇಶಗಳಲ್ಲಿ ಸರ್ಕಾರಿ ಕೆಲಸ ಮಾಡಿಕೊಂಡು ಸಣ್ಣ ಪ್ರಮಾಣದ ಶೇಂಗಾ ಪಗಾರ್ ತೆಗೆದುಕೊಳ್ಳುತ್ತಿದ್ದ ಅಣುವಿಜ್ಞಾನಿಗಳು ದುರಾಸೆಯಿಂದ, ಜೀವದ ಹಂಗು ತೊರೆದು, ಇರಾಕಿಗೆ ಬಂದು ಅಣುಬಾಂಬ್ ತಯಾರಿಕೆಗೆ ಟೊಂಕ ಕಟ್ಟಿ ನಿಂತುಬಿಟ್ಟರು. ಅಂತವರ ಪರಿಶ್ರಮದಿಂದ ಇರಾಕಿನ ಅಣುಸ್ಥಾವರ ಒಂದು ಹಂತಕ್ಕೆ ಬಂದಿತ್ತು. ಇಸ್ರೇಲ್ ಆದರೂ ಎಷ್ಟು ಅಂತ ಅಣುವಿಜ್ಞಾನಿಗಳನ್ನು ಕೊಂದೀತು? ಆಗ ಇಸ್ರೇಲ್ ಒಂದು ಖಡಕ್ ನಿರ್ಧಾರಕ್ಕೆ  ಬಂದೇಬಿಟ್ಟಿತು. ಹಿಂದೆಂದೂ ಯಾರೂ ಮಾಡಿರದ ಕಾರ್ಯಾಚರಣೆಯೊಂದಕ್ಕೆ ಸ್ಕೆಚ್ ಹಾಕಿಬಿಟ್ಟಿತು. ಆ ಕಾರ್ಯಾಚರಣೆ ಏನು ಅಂದರೆ - ಸದ್ದಾಮ ಹುಸೇನನ ಅಣುಸ್ಥಾವರದ ಮೇಲೆ ವೈಮಾನಿಕ ಬಾಂಬ್ ದಾಳಿ ಮಾಡಿ ಇಡೀ nuclear complex ನ್ನೇ ನೆಲಸಮ ಮಾಡಿಬಿಡುವದು.

ಐಡಿಯಾ ಏನೋ ಚನ್ನಾಗಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವದು ಅಷ್ಟು ಸುಲಭವೇ? ಇರಾಕಿನ ಮೇಲೆ ಬಾಂಬ್ ದಾಳಿ ಮಾಡಲು ಇಸ್ರೇಲಿ ವಿಮಾನಗಳು ಶತ್ರು ದೇಶಗಳಾದ ಜೋರ್ಡಾನ್, ಸೌದಿ ಅರೇಬಿಯಾ ದಾಟಿ ಇರಾಕ್ ತಲುಪಬೇಕು. ದಾರಿಯಲ್ಲಿ ಬೇಕಾದಷ್ಟು ಶತ್ರು ರೇಡಾರುಗಳು (radar) ಇವೆ. ಅವುಗಳ ಕಣ್ಣಿಗೆ ಬಿದ್ದರೆ ಯಾವದೇ ಮುಲಾಜಿಲ್ಲದೆ ಇಸ್ರೇಲಿಗಳ ಜೊತೆ ಕಾದಾಟ ಶುರು ಮಾಡೇಬಿಡುತ್ತಾರೆ. ಒಮ್ಮೆ ಜೋರ್ಡಾನ್ ಅಥವಾ ಬೇರೆ ಯಾರ ಜೊತೆಯಾದರೂ ಕಾದಾಟ ಶುರುವಾದರೆ ಇರಾಕಿಗೆ ಸುದ್ದಿ ತಿಳಿದು, ಏನಾದರೂ ಜುಗಾಡ್ ಮಾಡಿಕೊಂಡು, ಸದ್ದಾಮ್ ತನ್ನ ಅಣುಸ್ಥಾವರ ಉಳಿಸಿಕೊಳ್ಳುತ್ತಾನೆ. ಒಟ್ಟಿನಲ್ಲಿ ಶತ್ರು ದೇಶಗಳ ರೇಡಾರುಗಳ ಕಣ್ಣಿಗೆ ಬೀಳದಂತೆ ಇರಾಕ್ ತಲುಪಿಕೊಳ್ಳಬೇಕು. ಅಣುಸ್ಥಾವರದ ಮೇಲೆ ಬಾಂಬ್ ಹಾಕಿ, ನಿರ್ನಾಮ ಮಾಡಿ, ಇರಾಕ್ ಮಾಡುವ ಪ್ರತಿದಾಳಿಯಿಂದ ಬಚಾವಾಗಿ, ಮತ್ತದೇ ವೇಗದಲ್ಲಿ, ಮತ್ತೊಮ್ಮೆ ಯಾವದೇ ರೇಡಾರುಗಳಿಗೆ ಕಾಣದಂತೆ ವಾಪಸ್ ಬಂದು ಇಸ್ರೇಲ್ ತಲುಪಿಕೊಳ್ಳಬೇಕು.

ಇಂತಹದೊಂದು ರಿಸ್ಕಿ ಕಾರ್ಯಾಚರಣೆಗೆ ಇಸ್ರೇಲಿಗಳು ಬರೋಬ್ಬರಿ ಸ್ಕೆಚ್ ಹಾಕಲು ಕುಳಿತರು. ಮೊಸ್ಸಾದಿನ ಬೇಹುಗಾರರು ರಹಸ್ಯವಾಗಿ ಇರಾಕಿಗೆ ಹೋದರು. ಅದು ಹೇಗೆ ಸಾಧಿಸಿದರೋ ಗೊತ್ತಿಲ್ಲ. ಹೇಗೋ ಮಾಡಿ ಅಣುಸ್ಥಾವರದ ಹಲವು ಸುತ್ತಿನ ರಕ್ಷಣೆಯನ್ನು  ಭೇದಿಸಿ, ರಹಸ್ಯವಾಗಿ ಒಳಗೆ ನುಸುಳಿ, ಆಯಕಟ್ಟಿನ ಜಾಗಗಳಲ್ಲಿ beacon ಗಳನ್ನು ಹುದುಗಿಸಿಟ್ಟು ಬಂದರು. ಅವು ರಹಸ್ಯ ರೇಡಿಯೋ ತರಂಗಗಳನ್ನು ಸೂಸುತ್ತಿದ್ದವು. ಆ ರೇಡಿಯೋ ತರಂಗಗಳು ಮುಂದೆ ಮಾಡಬೇಕು ಅಂದುಕೊಂಡಿರುವ ವೈಮಾನಿಕ ಬಾಂಬ್ ದಾಳಿಗೆ ತುಂಬಾ ಸಹಾಯಕಾರಿಯಾಗಲಿದ್ದವು.

ಇಸ್ರೇಲ್ ವಿವರವಾಗಿ ಎಲ್ಲ ಪ್ಲಾನ್ ಮಾಡಿತು. ರೇಡಾರುಗಳಿಂದ ಕಣ್ತಪ್ಪಿಸಿ ಹಾರಲು ವಿಮಾನದ ಪೈಲಟ್ಟುಗಳಿಗೆ ವಿಶೇಷ ತರಬೇತಿಯಾಯಿತು. ಕಾರ್ಯಾಚರಣೆ ವೇಳೆಗೆ ಏನೆಲ್ಲ ತಪ್ಪುಗಳಾಗಬಹುದು, ಅವನ್ನು ಹೇಗೆ ಸರಿಪಡಿಸಿಕೊಳ್ಳಬೇಕು, ಆಕಸ್ಮಾತ ಸರಿಪಡಿಸಿಕೊಳ್ಳಲಾಗದ ತಪ್ಪುಗಳಾದರೆ ಹೇಗೆ ನಷ್ಟವನ್ನು ಕಮ್ಮಿ ಮಾಡಿಕೊಳ್ಳಬೇಕು, ಆಕಸ್ಮಾತ ಯಾವದಾದರೂ ಇಸ್ರೇಲಿ ಯುದ್ಧ ವಿಮಾನವನ್ನು ಶತ್ರುಗಳು ಹೊಡೆದುರುಳಿಸಿದರೆ ಪೈಲಟ್ಟುಗಳು ಏನು ಮಾಡಬೇಕು, ಇತ್ಯಾದಿ, ಇತ್ಯಾದಿ. ಒಂದು ಸಮಗ್ರ ಯೋಜನೆ ತಯಾರಾಯಿತು. ಇಸ್ರೇಲಿನಲ್ಲಿಯೇ ಇರಾಕಿನ ಅಣುಸ್ಥಾವರದ ಮಾಡೆಲ್ ಮಾಡಿಕೊಂಡು ಸಿಕ್ಕಾಪಟ್ಟೆ ಪ್ರಾಕ್ಟೀಸ್ ಮಾಡಿದ ಇಸ್ರೇಲಿಗಳು ಒಂದು ಅಭೂತಪೂರ್ವ ಕಾರ್ಯಾಚರಣೆಗೆ ತಯಾರಾದರು.

ಇಸ್ರೇಲಿಗೆ ಮಾವನಂತಿರುವ ಅಮೇರಿಕಾ ತನ್ನ ಬೇಹುಗಾರಿಕೆ ಉಪಗ್ರಹಗಳು ತೆಗೆದಿದ್ದ ಫೋಟೋ ಇತ್ಯಾದಿ ಮಾಹಿತಿ ಕೊಟ್ಟಿತು. ಸದ್ದಾಮ್ ಹುಸೇನನ ಅಣುಸ್ಥಾವರವನ್ನು ಧ್ವಂಸ ಮಾಡಲು ಮುಹೂರ್ತ ನಿಕ್ಕಿಯಾಯಿತು. ಜೂನ್ ೭, ೧೯೮೧. ಎಲ್ಲ ಸರಿಯಾಗಿದೆ ಅಂತ ಮತ್ತೆ ಮತ್ತೆ ಖಾತ್ರಿ ಮಾಡಿಕೊಂಡ ಅಂದಿನ ಖಡಕ್ ಪ್ರಧಾನಿ ಮೆನಾಕೆಮ್ ಬೆಗಿನ್ ಅಂತಿಮ ಅನುಮತಿ ಕೊಟ್ಟರು. ಇಸ್ರೇಲಿನಿಂದ ನೆಗೆದ ಬಾಂಬರ್ ವಿಮಾನಗಳು, ಫೈಟರ್ ವಿಮಾನಗಳು ಅತಿ ಕಡಿಮೆ ಎತ್ತರದಲ್ಲಿ ಹಾರಿದವು. ರೇಡಾರುಗಳಿಂದ ತಪ್ಪಿಸಿಕೊಳ್ಳಬೇಕು ಅಂದರೆ ಕಮ್ಮಿ ಎತ್ತರದಲ್ಲಿ, ಅತಿ ವೇಗದಲ್ಲಿ ಹಾರಬೇಕು. ಅದು ತುಂಬಾ ರಿಸ್ಕಿ ಕೂಡ. ಆದರೆ ಬೇರೆ ಮಾರ್ಗವಿರಲಿಲ್ಲ. ಅದೇ ರೀತಿ ಹಾರಿದವು. ಜೋರ್ಡಾನ್, ಸೌದಿ ಅರೇಬಿಯಾ ದೇಶಗಳ ರೇಡಾರುಗಳ ಕಣ್ಣಿಗೆ ಬೀಳಲಿಲ್ಲ. ಇರಾಕಿನ ಗಡಿ ಪ್ರವೇಶಿಸಿದ ಇಸ್ರೇಲಿ ವಿಮಾನಗಳು ಅಣುಸ್ಥಾವರವನ್ನು ಸಮೀಪಿಸಿದವು. ಎತ್ತರದಲ್ಲಿ ಹಾರುವ ಹದ್ದು ಬೇಟೆ ಕಂಡ ತಕ್ಷಣ ಒಮ್ಮೆಲೇ ಸಟಾಕ್ ಅಂತ ಕೆಳಗೆ ಡೈವ್ ಮಾಡಿ ಬೇಟೆಯನ್ನು ಒಂದು ಕ್ಷಣದಲ್ಲಿ ಹಿಡಿದು ಮರುಕ್ಷಣದಲ್ಲಿ ಮಿಂಚಿನ ವೇಗದಿಂದ ಎತ್ತರಕ್ಕೆ ಹಾರಿಹೋಗುವ ಮಾದರಿಯಲ್ಲಿ ಒದೊಂದೇ ಇಸ್ರೇಲಿ ವಿಮಾನ ಡೈವ್ ಹೊಡೆದು, ಅಣುಸ್ಥಾವರದ ಮೇಲೆ ಬರೋಬ್ಬರಿ ಬಾಂಬುಗಳ ಮಳೆಗರೆದು, ವೇಗವಾಗಿ ಮೇಲಕ್ಕೇರಿ, ತರಾತುರಿಯಲ್ಲಿ ಇರಾಕಿನ ಗಡಿ ದಾಟಿಕೊಂಡವು. ನೋಡನೋಡುತ್ತಿದಂತೆಯೇ ಸದ್ದಾಮ್ ಹುಸೇನನ ಅಣುಸ್ಥಾವರ ಢಮಾರ್ ಅಂದುಹೋಗಿತ್ತು. ಇರಾಕಿನ anti-aircraft artillery ಸಿದ್ಧವಾಗಿ, ವಾಪಸ್ ಹಾರಿಹೋಗುತ್ತಿದ್ದ ಇಸ್ರೇಲಿ ವಿಮಾನಗಳತ್ತ ಗುಂಡು ಹಾರಿಸುವಷ್ಟರಲ್ಲಿ ತುಂಬ ತಡವಾಗಿಹೋಗಿತ್ತು. ಧೂಳೆದ್ದು ಹೋದ ಅಣುಸ್ಥಾವರದ ಮುಂದೆ ಸದ್ದಾಮ್ ಮತ್ತು ಅವನ ಮಂದಿ ಲಬೋ ಲಬೋ ಅಂತ ಬಾಯಿ ಬಡಿದುಕೊಳ್ಳುತ್ತ ಕೂತರು. ಇತ್ತಕಡೆ ಇಸ್ರೇಲಿಗಳು ಮತ್ತೆ ಅತಿ ಕಮ್ಮಿ ಎತ್ತರದಲ್ಲಿ ಹಾರುತ್ತ, ಸೌದಿ ಅರೇಬಿಯಾ, ಜೋರ್ಡಾನ್ ದೇಶಗಳ ರೇಡಾರುಗಳ ಕಣ್ಣು ತಪ್ಪಿಸಿ, ಮರಳಿ ಇಸ್ರೇಲಿಗೆ ಬಂದು ಸೇರಿಕೊಂಡವು. ಯಾವದೇ ತರಹದ ಕಷ್ಟನಷ್ಟ ಸಂಭವಿಸಿರಲಿಲ್ಲ. ಇಸ್ರೇಲಿಗಳ ಖದರು ಅಂದರೆ ಅದು. dare devil ಮಾದರಿಯ ಕಾರ್ಯಾಚರಣೆ ಮಾಡುವಲ್ಲಿ ಇಸ್ರೇಲಿಗಳದು ಎತ್ತಿದ ಕೈ. ಸಿಂಹದ ಗುಹೆಯೊಳಗೇ ನುಗ್ಗಿ ಸಿಂಹದ ಬೇಟೆಯಾಡಿ ಬಂದಂತೆ. ಹಿಮ್ಮತ್ ಅಂದರೆ ಅದು!

ಯಾವಾಗ ಭಾರತಕ್ಕೆ ಪಾಕಿಸ್ತಾನ ಕಹುಟಾದಲ್ಲಿ ರಹಸ್ಯವಾಗಿ ಅಣುಸ್ಥಾವರ ಕಟ್ಟುತ್ತಿದೆ ಮತ್ತು ಅದರ ಹಿಂದಿನ ಉದ್ದೇಶ ಅಣುಬಾಂಬ್ ತಯಾರಿಸುವದು ಅಂತ ಖಾತ್ರಿಯಾಯಿತೋ, ಭಾರತ ಹೋಗಿ ನಿಂತಿದ್ದು ಇಸ್ರೇಲ್ ಮುಂದೆ. ರಾಜತಾಂತ್ರಿಕ ಸಂಬಂಧ ಬಹಿರಂಗವಾಗಿ ಇರಲಿಲ್ಲ. ಆದರೆ backdoor diplomacy ಇತ್ತು. ಅದನ್ನೇ ಉಪಯೋಗಿಸಿಕೊಂಡು ಭಾರತದ ಉನ್ನತ ಮಟ್ಟದ ಬೇಹುಗಾರಿಕೆ ಅಧಿಕಾರಿಗಳು ಇಸ್ರೇಲಿಗಳನ್ನು ಭೆಟ್ಟಿಯಾಗಿ ತಾವು ಸಂಗ್ರಹಿಸಿದ್ದ ಮಾಹಿತಿಯನ್ನು ಇಸ್ರೇಲ್ ಮುಂದಿಟ್ಟರು. ಆ ಹೊತ್ತಿಗೆ R&AW ಪ್ರತ್ಯೇಕವಾಗಿ ಒಬ್ಬ ಪಾಕಿಸ್ತಾನಿ ಏಜೆಂಟನನ್ನು ಕೂಡ ತಯಾರು ಮಾಡಿತ್ತು. ಆತ ಕೂಡ ಕಹುಟಾ ಅಣುಸ್ಥಾವರದ ಮಾಹಿತಿಯನ್ನು ಕೊಡತೊಡಗಿದ್ದ. ಒಮ್ಮೆ ಹೀಗಾಯಿತು. ಆತ ಇಡೀ ಅಣುಸ್ಥಾವರದ ಒರಿಜಿನಲ್ blueprint ಸಂಪಾದಿಸಿಬಿಟ್ಟಿದ್ದ. ಅದನ್ನು ಭಾರತಕ್ಕೆ ಹಸ್ತಾಂತರ ಮಾಡಲು ಅವನು ಕೇಳಿದ್ದು ಕೇವಲ ಹತ್ತು ಸಾವಿರ ರೂಪಾಯಿಗಳು. ಯಾಕೋ ಗೊತ್ತಿಲ್ಲ. ಭಾರತ ಸರ್ಕಾರ, ಇಂದಿರಾ ಗಾಂಧಿ ಹತ್ತು ಸಾವಿರ ರೂಪಾಯಿ ಕೊಟ್ಟು ಅಮೂಲ್ಯವಾದ ಮಾಹಿತಿಯನ್ನು ಪಡೆಯಲು ಮನಸ್ಸು ಮಾಡಲೇ ಇಲ್ಲ. ಅದೊಂದು ನಾವು ಮಾಡಿದ ದೊಡ್ಡ ತಪ್ಪು ಅಂತ R&AW ದ ಮಾಜಿ ಅಧಿಕಾರಿ ಆರ್. ಕೆ. ಯಾದವ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಭಾರತ ತೋರಿಸಿದ ಮಾಹಿತಿ ನೋಡಿದ ಇಸ್ರೇಲ್ ಬೆಚ್ಚಿಬಿತ್ತು. ಪಾಕಿಸ್ತಾನ ಮತ್ತು ಇಸ್ರೇಲ್ ಮಧ್ಯೆ ಅಂತಹ ವೈರತ್ವ ಅಂತೇನೂ ಇರಲಿಲ್ಲ. ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನ ಕೂಡ ಇಸ್ರೇಲ್ ಜೊತೆ ಯಾವದೇ ಸಂಬಂಧ ಇಟ್ಟುಕೊಂಡಿರಲಿಲ್ಲ. ಪಾಕ್ ಕೂಡ ಪ್ಯಾಲೆಸ್ಟೈನ್ ಸಂಗ್ರಾಮವನ್ನು ಬೆಂಬಲಿಸುತ್ತಿತ್ತು. ಇಸ್ರೇಲ್ ಯಾಕೆ ಕಳವಳಗೊಂಡಿತು ಅಂದರೆ ಅದಕ್ಕಿದ್ದ ಕಾರಣ ಒಂದೇ. ಒಮ್ಮೆ ಯಾವದಾರೂ ಒಂದು ಇಸ್ಲಾಮಿಕ್ ದೇಶಕ್ಕೆ ಅಣುಬಾಂಬ್ ಸಿಕ್ಕಿತು ಅಂತಾದರೆ ಅಷ್ಟರಮಟ್ಟಿಗೆ ಇಸ್ರೇಲಿಗೆ ಅಭದ್ರತೆ, ರಿಸ್ಕ್ ಜಾಸ್ತಿಯಾಯಿತು ಅಂತಲೇ ಅರ್ಥ. ನಂತರ ಅಣುಬಾಂಬ್ ಮಾಡುವ ಮಾಹಿತಿಯನ್ನು ಪಾಕಿಸ್ತಾನ ಇತರೆ ಇಸ್ಲಾಮಿಕ್ ದೇಶಗಳ ಜೊತೆ ಹಂಚಿಕೊಳ್ಳುವದರಲ್ಲಿ ಸಂದೇಹವೇ ಇಲ್ಲ. ಪಾಕಿಸ್ತಾನ official ಆಗಿ ಆ ಕೆಲಸ ಮಾಡುವದಿಲ್ಲ ಅಂತಿಟ್ಟುಕೊಂಡರೂ ದುರಾಸೆಗೆ ಬಿದ್ದ ಪಾಕಿ ವಿಜ್ಞಾನಿಗಳು ಆ ಕೆಲಸ ಮಾಡುವದರಲ್ಲಿ ಯಾವದೇ ಸಂಶಯವಿರಲಿಲ್ಲ. ಪಾಕಿಸ್ತಾನದ ಅಣುಶಕ್ತಿ ಯೋಜನೆಯ ಪಿತಾಮಹ ಅಬ್ದುಲ್ ಖಾದಿರ್ ಖಾನ್ ಎಲ್ಲ ಮಾಹಿತಿಯನ್ನು ಹಾಲೆಂಡಿನಲ್ಲಿ ನೌಕರಿ ಮಾಡಿಕೊಂಡಿದ್ದಾಗ ಕದ್ದಿದ್ದ. ಕದ್ದು ತಂದ ಮಾಹಿತಿಯಿಂದಲೇ ಪಾಕಿಸ್ತಾನದ ಅಣುಶಕ್ತಿ ಪ್ರೊಗ್ರಾಮ್ ಶುರುಹಚ್ಚಿಕೊಂಡಿದ್ದ. ಅಂತಹ ಕಳ್ಳ ಖಾನ್ ಒಮ್ಮೆ ಅಣುಬಾಂಬ್ ಮಾಡುವದನ್ನು ಕಲಿತುಬಿಟ್ಟ ಅಂದರೆ ಅವನು ನಂತರ ಮಾಡುವ ಪ್ರಮುಖ ಕೆಲಸವೆಂದರೆ ಸರಿಯಾದ ರೊಕ್ಕ ಕೊಟ್ಟ ಮಂದಿಗೆ ಬಾಂಬ್ ಮಾಡುವ ತಂತ್ರಜ್ಞಾನವನ್ನು ಮಾರುವದು. ಬೇಕಾದಷ್ಟು ರೊಕ್ಕ ಕೊಟ್ಟು ಅಣುಬಾಂಬ್ ಮಾಹಿತಿಯನ್ನು ಕೊಂಡುಕೊಳ್ಳಲು ಇಸ್ರೇಲಿನ ಪರಮ ವೈರಿ ದೇಶಗಳಾದ ಲಿಬಿಯಾ, ಇರಾಕ್, ಇರಾನ್, ಸಿರಿಯಾ ಎಲ್ಲ ತುದಿಗಾಲ ಮೇಲೆ ನಿಂತು ರೆಡಿ ಇರುತ್ತವೆ ಅಂತ ತಿಳಿಯಲಾರದಷ್ಟು ಪರಮ ದಡ್ಡ ದೇಶವಲ್ಲ ಇಸ್ರೇಲ್. ಇಸ್ರೇಲಿನ ವಿದೇಶಾಂಗ ನೀತಿ, ರಕ್ಷಣಾ ನೀತಿ ಸ್ಪಷ್ಟ - ಯಾವದೇ ಇಸ್ಲಾಮಿಕ್ ದೇಶ ಅಣುಬಾಂಬ್ ಹೊಂದಕೂಡದು. ಹೊಂದಲೇಕೂಡದು. No chance. ಇಸ್ರೇಲ್ ಜೊತೆ ನೇರವಾಗಿ ವೈರತ್ವ ಇರಲಿ ಬಿಡಲಿ. ಇಸ್ಲಾಮಿಕ್ ದೇಶವೊಂದು ಅಣುಬಾಂಬ್ ತಯಾರು ಮಾಡುತ್ತಿದೆ ಅಂತಾದರೆ ಇಸ್ರೇಲಿಗಳ ಪಾಲಿಸಿ ಇಷ್ಟೇ - ಸದ್ದಾಮ್ ಹುಸೇನನ ಅಣುಸ್ಥಾವರಕ್ಕೆ ಏನು ಮಾಡಿ ಬಂದಿದ್ದರೋ ಅದನ್ನೇ ಮಾಡುವದು. ಚಿಂದಿ ಉಡಾಯಿಸಿಬಿಡುವದು. ಅದೂ ಯಾವ ರೀತಿಯಲ್ಲಿ ಅಂದರೆ ಆ ದೇಶದ ಅಣುಶಕ್ತಿ ಪ್ರೋಗ್ರಾಮ್ ಒಂದು ಹತ್ತು ವರ್ಷ ಹಿಂದಕ್ಕೆ ಹೋಗಿರಬೇಕು. ಮತ್ತೆ ಸುಧಾರಿಸಿಕೊಳ್ಳಲು ಆಗಿರಬಾರದು. ಆ ರೀತಿಯಲ್ಲಿ ಬಾರಿಸಿ ಬಂದುಬಿಡಬೇಕು. ಇಸ್ರೇಲಿಗಳ ರಣನೀತಿ ಸಿಂಪಲ್. ಮಾತುಕತೆ ಗೀತುಕತೆ ಅಂತೆ ಕೂತರೆ ಬುಡಕ್ಕೇ ಬಂದು ಇಸ್ರೇಲಿನ ಅಸ್ತಿತ್ವಕ್ಕೇ ಸಂಚಕಾರ ಬರುತ್ತದೆ. ಹಾಗಾಗಿ ಇಸ್ರೇಲಿಗಳದು ಸದಾ ದಂಡಂ ದಶಗುಣಂ ಅನ್ನುವ policy!

ಭಾರತ ಮತ್ತು ಇಸ್ರೇಲ್ ರಹಸ್ಯ ಮಾತುಕತೆಗೆ ಕೂತವು. ಭಾರತವಂತೂ ನೇರವಾಗಿ ಹೋಗಿ ಪಾಕಿಸ್ತಾನವನ್ನು  ತಡವಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅನೇಕ ಆಂತರಿಕ ತೊಂದರೆಗಳಿದ್ದವು. ಖಲಿಸ್ತಾನ ಉಗ್ರವಾದ, ನಕ್ಸಲರ ಸಮಸ್ಯೆ, ಕಳೆಗುಂದುತ್ತಿದ್ದ ಸೊವಿಯಟ್ ಒಕ್ಕೂಟ, ಇತ್ಯಾದಿ ಹಲವಾರು ಸಮಸ್ಯೆಗಳು. ಮತ್ತೆ ಆ ತರಹದ ಕರಾರುವಕ್ಕಾಗಿ surgical operation ಮಾಡುವ ಕಾಬೀಲಿಯತ್ತು, ಹಿಮ್ಮತ್ತು, ತಾಕತ್ತು, ಜ್ಞಾನ, ಅನುಭವ ಎಲ್ಲ ಇಸ್ರೇಲಿಗೆ ಮಾತ್ರ ಇತ್ತು.

ಇಸ್ರೇಲ್ ಒಂದು ಖತರ್ನಾಕ್ ಪ್ಲಾನ್ ಹಾಕಿತು. ರಹಸ್ಯವಾಗಿ ಇರಾಕಿಗೆ ಹೋಗಿ ಅಣುಸ್ಥಾವರವನ್ನು ಧ್ವಂಸ ಮಾಡಿ ಬಂದಂತಹದ್ದೇ ಪ್ಲಾನ್. ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರು. ಹಿಮಾಲಯದ ಮೂಲೆಯಿಂದ ಪಾಕಿಸ್ತಾನ್ ಪ್ರವೇಶಿಸುವದು. ನಂತರ ವೈಮಾನಿಕ ಬಾಂಬ್ ದಾಳಿ ಮಾಡಿ ಅಣುಸ್ಥಾವರವನ್ನು ಮಟಾಶ್ ಮಾಡುವದು. ವಾಪಸ್ ಹೋಗಲು ಇಂಧನದ ಮರುಭರ್ತಿ ಮಾಡುವ ಜರೂರತ್ತಿತ್ತು. ಇಸ್ರೇಲಿಗಳು ಭಾರತವನ್ನು ಕೇಳಿದ್ದು ಒಂದೇ ಸಹಾಯ - ಭಾರತ ಮತ್ತು ಪಾಕ್ ಗಡಿಗೆ ಸಮೀಪವಿದ್ದ ಗುಜರಾತಿನ ಜಾಮ್ ನಗರ್ ವಾಯುಅಡ್ಡೆಯಲ್ಲಿ ಕಾರ್ಯಾಚರಣೆ ಮುಗಿದ ನಂತರ ಇಸ್ರೇಲಿ ವಿಮಾನಗಳಿಗೆ ಇಳಿಯಲು ಮತ್ತು ಇಂಧನ ತುಂಬಿಸಿಕೊಂಡು ಹಾರಿಹೋಗಲು ಅನುಮತಿ. ಈ ಕೋರಿಕೆ ಭಾರತವನ್ನು ಸ್ವಲ್ಪ ಮಟ್ಟಿನ ಕಷ್ಟಕ್ಕೆ ಈಡುಮಾಡಿತು. ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿ, ಯಾವದೇ ರೀತಿಯ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಭಾರತಕ್ಕೆ ಮನಸ್ಸಿರಲಿಲ್ಲ. ಆದರೆ ಇಸ್ರೇಲ್ ಕೇಳಿದಷ್ಟಾದರೂ ಸಹಾಯ ಮಾಡದ್ದಿದರೆ ಆ ಕಾರ್ಯಾಚರಣೆ ಸಾಧ್ಯವಿರಲಿಲ್ಲ. ಏನೇನೋ ವಿಚಾರ ವಿಮರ್ಶೆ ಎಲ್ಲ ಆದ ಮೇಲೆ ಭಾರತ ಅಷ್ಟು ಮಟ್ಟಿನ ಸಹಾಯ ಮಾಡಲು ಒಪ್ಪಿಕೊಂಡಿತ್ತು. ಅತ್ತಕಡೆ ಇಸ್ರೇಲಿಗಳು ತಮ್ಮ ಪ್ಲಾನಿಂಗ್ ಮುಂದುವರೆಸಿದರು.

ಆದರೆ ಕಾರ್ಯಾಚರಣೆ ಆಗಲೇ ಇಲ್ಲ! ವೈಮಾನಿಕ ದಾಳಿಯಾಗಲೇ ಇಲ್ಲ! ಪಾಕಿಸ್ತಾನದ ಕಹುಟಾ ಅಣುಸ್ಥಾವರ ನಿರ್ನಾಮವಾಗಲೇ ಇಲ್ಲ!

ಯಾಕೆ ಆಗಲಿಲ್ಲ ಅಂತ ಕೇಳಿದರೆ ದೊಡ್ಡಣ್ಣ ಅಮೇರಿಕಾಗೆ ಅದರ ಬೇಹುಗಾರಿಕೆ ಸಂಸ್ಥೆ CIA ಮೂಲಕ ಎಲ್ಲ ವಿಷಯ ಗೊತ್ತಾಗುತ್ತಿತ್ತು. ಮತ್ತೆ ಆವಾಗ ಆಫ್ಘನ್-ಸೊವಿಯಟ್ ಯುದ್ಧ ಜೋರಾಗಿ ನಡೆಯುತ್ತಿತ್ತು. ಅಮೇರಿಕಾ ಆಫ್ಫನ್ ಮುಜಾಹಿದೀನ್ ಬಂಡುಕೋರರಿಗೆ ಎಲ್ಲ ಸಹಾಯ ಒದಗಿಸಿ ರಷ್ಯಾವನ್ನು ಬರೋಬ್ಬರಿ ಬಗ್ಗುಬಡಿಯುತ್ತಿತ್ತು. ಮಧ್ಯೆ ಕೂತ ಪಾಕಿಸ್ತಾನ ಬಹು ಮುಖ್ಯ ದಲ್ಲಾಳಿ, coordinator ಕೆಲಸ ಮಾಡುತ್ತಿತ್ತು. ಹಾಗಾಗಿ ಅಂದು ಅಮೇರಿಕಾಗೆ ಪಾಕಿಸ್ತಾನವನ್ನು ಸುಪ್ರೀತಗೊಳಿಸಿಟ್ಟುಕೊಳ್ಳುವ ದರ್ದು ಇತ್ತು. ಹಾಗಾಗಿ ಅಮೇರಿಕಾ ಇಸ್ರೇಲನ್ನು ಅದೆಷ್ಟೇ ಇಷ್ಟಪಡುತ್ತಿದ್ದರೂ ಪರಮ ಪ್ರೀತಿಯ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಈ ಕಾರ್ಯಾಚರಣೆಗೆ ಅಮೇರಿಕಾ ತನ್ನ ಅನುಮತಿ ಕೊಡಲೇ ಇಲ್ಲ. 'Nothing doing. Absolutely nothing doing,' ಅಂದುಬಿಟ್ಟಿತು.

ಎಲ್ಲ ರೆಡಿಯಾಗಿದ್ದ ಭಾರತ ಇಸ್ರೇಲಿ ಜಂಟಿ ಕಾರ್ಯಾಚರಣೆ ಹೇಗೆ ಭಂಗವಾಯಿತು ಅನ್ನುವದರ ಬಗ್ಗೆ ಬೇರೆ ಬೇರೆ ತರಹದ conflicting theories ಇವೆ. ಒಂದು ಮೂಲದ ಪ್ರಕಾರ ಬಹಳ ಮೊದಲೇ ಅಮೇರಿಕಾ ಇಸ್ರೇಲಿಗೆ ಕಟ್ಟುನಿಟ್ಟಾಗಿ ಹೇಳಿತ್ತು, 'ಈ ಕಾರ್ಯಾಚರಣೆ ಮಾಡಲೇಕೂಡದು. ಪಾಕಿಸ್ತಾನವನ್ನು, ಅದರ ಅಣುಶಕ್ತಿ ಕಾರ್ಯಕ್ರಮವನ್ನು ಸಂಬಾಳಿಸುವ ಜವಾಬ್ದಾರಿ ಅಮೇರಿಕಾದ್ದು. ಇಸ್ರೇಲಿಗೆ ಯಾವದೇ ತೊಂದರೆ ಉಂಟಾಗದಂತೆ ಅಮೇರಿಕಾ ನೋಡಿಕೊಳ್ಳುತ್ತದೆ. ಅದರ ಬಗ್ಗೆ ಭರವಸೆ ಕೂಡ ಕೊಡುತ್ತದೆ. ಆಫ್ಘನ್ - ಸೊವಿಯಟ್ ಸಮರದಲ್ಲಿ ಸೊವಿಯಟ್ ಯೂನಿಯನ್ನನ್ನು ಬಗ್ಗುಬಡಿದು, communism ಗೆ ಒಂದು ಅಂತಿಮ ಇತಿಶ್ರೀ ಹಾಡಲು ಪಾಕಿಸ್ತಾನದ ಪೂರ್ತಿ ಬೆಂಬಲ ಬೇಕು. ಹಾಗಾಗಿ ಸದ್ಯಕ್ಕೆ ಪಾಕಿಸ್ತಾನಕ್ಕೆ ಏನೂ ಮಾಡದೇ ಸುಮ್ಮನಿರಿ.' ದೊಡ್ಡಣ್ಣ ಅಮೇರಿಕಾ ಅಷ್ಟು ಕಟ್ಟುನಿಟ್ಟಾಗಿ ಹೇಳಿದ ಮೇಲೆ ಇಸ್ರೇಲ್ ಸುಮ್ಮನಾಯಿತು. ಇದು ಒಂದು theory.

ಪಾಕಿಗಳನ್ನು ಕೇಳಿದರೆ ಅವರು ಮತ್ತೊಂದು ಕಥೆ ಹೇಳುತ್ತಾರೆ. ಪಾಕಿಗಳ ಪ್ರಕಾರ ಏನಾಗಿತ್ತು ಅಂದರೆ..... 'ಭಾರತ ಮತ್ತು ಇಸ್ರೇಲ್ ನಮ್ಮ ಅಣುಸ್ಥಾವರವನ್ನು ನಾಶಪಡಿಸಬೇಕು ಅಂತ ಪ್ಲಾನ್ ಹಾಕಿಕೊಂಡಿದ್ದವು. ನಮಗೆ ಅದು ಕೊನೆಯ ಕ್ಷಣದಲ್ಲಿ ಗೊತ್ತಾಯಿತು. ಇಸ್ರೇಲಿ ವಿಮಾನಗಳು ನಮ್ಮ ಗಡಿಯೊಳಗೆ ನುಗ್ಗುವ ಮುನ್ನವೇ ನಮ್ಮ ವಾಯುಪಡೆ ಸನ್ನದ್ಧವಾಗಿತ್ತು. ಆಗಲೇ ನಮ್ಮ ಫೈಟರ್ ವಿಮಾನಗಳು ಗಗನಕ್ಕೇರಿ ಪಾಕಿಸ್ತಾನವನ್ನು ಕಾಯುತ್ತಿದ್ದವು. ಇಸ್ರೇಲ್ ಮತ್ತು ಭಾರತಕ್ಕೆ ರಾಜತಾಂತ್ರಿಕ channel ಮೂಲಕ ಖಡಕ್ ಎಚ್ಚರಿಕೆ ಕೊಡಲಾಯಿತು. 'ನಮ್ಮ ಪ್ಲಾನ್ ಪಾಕಿಸ್ತಾನಕ್ಕೆ ತಿಳಿದುಬಿಟ್ಟಿದೆ. ಕಾರ್ಯಾಚರಣೆ ಇನ್ನು ಮುಂದುವರೆಯಿಸುವದು ಮೂರ್ಖತನ,' ಅಂತ ಅರ್ಥಮಾಡಿಕೊಂಡ ಇಸ್ರೇಲಿಗಳು ತಮ್ಮ ವಿಮಾನಗಳನ್ನು ವಾಪಸ್ ಕರೆಯಿಸಿಕೊಂಡರು. ಪಾಕಿಸ್ತಾನದ ಮೇಲೆ ರಹಸ್ಯ ವೈಮಾನಿಕ ದಾಳಿ ಮಾಡುವದು ಅಂದರೆ ಅದೇನು ಹಲ್ವಾ ತಿಂದಂತೆಯೇ? ಪಾಕಿಸ್ತಾನ್ ಇರಾಕ್ ಅಲ್ಲ ಅಂತ ಇಸ್ರೇಲಿಗಳಿಗೆ ಬರೋಬ್ಬರಿ ಗೊತ್ತಾಯಿತು,' ಅಂತ ಹೇಳಿಕೊಂಡು ಪಾಕಿಗಳು ಮೀಸೆ ತಿರುವುತ್ತಾರೆ. ಇದು ಸತ್ಯವೋ ಅಥವಾ ಪಾಕಿಗಳು ತಮ್ಮ ಗರಮ್ ಮಸಾಲಾ ಹಾಕಿ ಪಂಟು ಹೊಡೆದದ್ದೋ ಗೊತ್ತಿಲ್ಲ.

ಈ ರಹಸ್ಯ ಕಾರ್ಯಾಚರಣೆಗೆ ನಿಷ್ಪಾಪಿ ನಾಗರಿಕ ವಿಮಾನವೊಂದು ಹರಕೆಯ ಕುರಿಯ ಮಾದರಿಯಲ್ಲಿ ಬಲಿಯಾಗುವದಿತ್ತೇ ಎಂಬ ಖತರ್ನಾಕ್ ಸುದ್ದಿ ಕೂಡ ಹರಿದಾಡಿತ್ತು. ಅದಕ್ಕೆ ಕಾರಣವೂ ಇತ್ತು. ಇಸ್ರೇಲಿನಿಂದ ಹಾರಿ ಬರಲಿದ್ದ ವಿಮಾನಗಳಿಗೆ ಈ ಸಲ ರೇಡಾರುಗಳನ್ನು ತಪ್ಪಿಸಿಕೊಂಡು ಬರಲಾಗುತ್ತಿರಲಿಲ್ಲ. ಹಿಂದಿನ ಸಲ ಇರಾಕಿಗೆ ಹಾರಬೇಕಾದಾಗ ದೂರ ಭಾಳ ಕಮ್ಮಿ. ಮತ್ತೆ ಮಧ್ಯೆ ಇರುವ ದೇಶಗಳು ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮಾತ್ರ. ಚಿಕ್ಕ ವಾಯು ಪ್ರದೇಶ. ಕಮ್ಮಿ ರೇಡಾರುಗಳು. ಇಸ್ರೇಲಿ ವಿಮಾನಗಳು ಹೇಗೋ ಮಾಡಿ ಕಮ್ಮಿ ಎತ್ತರದಲ್ಲಿ, ಅತಿ ವೇಗದಿಂದ ಹಾರಿ ರೇಡಾರುಗಳಿಂದ ತಪ್ಪಿಸಿಕೊಂಡಿದ್ದವು. ಈಗ ಇಸ್ರೇಲಿನಿಂದ ಹಾರಿ, ಹಿಮಾಲಯ ರೌಂಡ್ ಹಾಕಿ, ಪಾಕಿಸ್ತಾನಕ್ಕೆ ಎಂಟ್ರಿ ಕೊಡಬೇಕು ಅಂದರೆ ಭಾಳ ದೂರ ಕ್ರಮಿಸಬೇಕು. ಅಷ್ಟು ದೂರ ನಿರಂತರವಾಗಿ ಕಮ್ಮಿ ಎತ್ತರದಲ್ಲಿ ಹಾರುವದು ಅಸಾಧ್ಯ. ಹಾಗಾಗಿ ಹಲವಾರು ದೇಶಗಳ ರೇಡಾರುಗಳ ಕಣ್ಣಿಗೆ ಬಿದ್ದೇಬೀಳುತ್ತವೆ. ಒಮ್ಮೆ ರೇಡಾರ್ ಪರೀಧಿಯಲ್ಲಿ ಬಂದವು ಅಂದರೆ ನಂತರ air traffic controller ಜೊತೆ ಮಾತುಕತೆ ಶುರುವಾಗುತ್ತದೆ. ಮಾತುಕತೆಯಲ್ಲಿ air traffic controller ಮಂದಿಯನ್ನು ಮಂಗ್ಯಾ ಮಾಡಬೇಕು ಅಂದರೆ ಅಸಲಿಯಲ್ಲಿ ಯುದ್ಧ ವಿಮಾನಗಳಾದರೂ ಯಾವದೋ ಒಂದು ನಾಗರಿಕ ವಿಮಾನದ ತರಹ ನಾಟಕ ಮಾಡಬೇಕು. ನಾಟಕ ಮಾಡುವದು ಅಷ್ಟು ಸುಲಭವಲ್ಲ. ನಾಗರಿಕ ವಿಮಾನದ call sign ಉಪಯೋಗ ಮಾಡಬೇಕು. ಯಾವ್ಯಾವದೋ call sign ಬೇಕಾಬಿಟ್ಟಿ ಉಪಯೋಗ ಮಾಡಿದರೆ air traffic controller ಮಂದಿಗೆ ಗೊತ್ತಾಗಿಬಿಡುತ್ತದೆ. ಆ ಸಮಯದಲ್ಲಿ, ಅದೇ ದಾರಿಯಲ್ಲಿ ಹೋಗುತ್ತಿರಬಹುದಾದ ನಾಗರಿಕ ವಿಮಾನದ್ದೇ call sign ಉಪಯೋಗಿಸಬೇಕು. ಹಾಗಾಗಬೇಕು ಅಂದರೆ ಆ ನಾಗರಿಕ ವಿಮಾನ ನಾಪತ್ತೆಯಾಗಬೇಕು. ಅಂದರೆ ಅದನ್ನು ಆಕಾಶದಲ್ಲೇ ಹೊಡೆದುರಿಳಿಸಿ, ಸಮುದ್ರಕ್ಕೆ ಬೀಳಿಸಿ, ಸಂಪೂರ್ಣವಾಗಿ ಗಾಯಬ್ ಆಗಿಬಿಡುವಂತೆ ಮಾಡಬೇಕು. ನಂತರ ದಾಳಿಗೆ ಹೊರಟಿದ್ದ ನಾಲ್ಕಾರು ಇಸ್ರೇಲಿ ವಿಮಾನಗಳು close formation ಅಂದರೆ ಅತಿ ಹತ್ತಿರ ಹತ್ತಿರವಾಗಿ ಹಾರಬೇಕು. ರೇಡಾರಿನಲ್ಲಿ ಒಂದೇ ವಿಮಾನದ ಫುಟ್ ಪ್ರಿಂಟ್ ಕಂಡಂಗೆ ಕಂಡುಬರಬೇಕು. ನಾಗರಿಕ ವಿಮಾನದಂತೆ ವರ್ತಿಸಿ ರೇಡಾರುಗಳಿಂದ ಬಚಾವ್ ಆಗಬೇಕು. ಈ ಥಿಯರಿ ತುಂಬಾ impractical, ಕಷ್ಟಸಾಧ್ಯ ಅಂತ ಅನ್ನಿಸಿದರೂ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಗೊತ್ತಿರುವವರಿಗೆ ಪೂರ್ತಿ ಅಸಾಧ್ಯ ಅಂತೇನೂ ಅನ್ನಿಸುವದಿಲ್ಲ. ಅದರಲ್ಲೂ ಇಸ್ರೇಲಿಗಳು ಎಂತೆಂತಹ ಖತರ್ನಾಕ್ ಕಾರ್ಯಾಚರಣೆಗಳನ್ನು ಮಾಡಿದ್ದಾರೆ. ಅವರ ರಹಸ್ಯ ಕಾರ್ಯಾಚರಣೆಗಳು ಮೇಲ್ನೋಟಕ್ಕೆ ಎಲ್ಲವೂ ಇಂಪಾಸಿಬಲ್ ಅನ್ನಿಸಿಬಿಡುತ್ತವೆ. ಅಂದು ಇಸ್ರೇಲಿ ಕಾರ್ಯಾಚರಣೆ ಕಾರ್ಯಗತವಾಗಿದ್ದರೆ ಯಾವದೋ ದೇಶದ ನಾಗರಿಕ ವಿಮಾನವೊಂದು ಕಾರಣವಿಲ್ಲದೇ ಆಕಾಶದಲ್ಲಿ ಢಂ ಅಂದುಹೋಗುತ್ತಿತ್ತು. ನಂತರ ಯಾರೋ ಹೇಗೋ ಪರಿಸ್ಥಿತಿಯನ್ನು ಸಂಬಾಳಿಸುತ್ತಾರೆ. ಮಾಧ್ಯಮಗಳಲ್ಲಿ ತರಹ ತರಹದ ಕಥೆಗಳನ್ನು ಹರಿಬಿಟ್ಟು ಮಂದಿಯನ್ನು ಮಂಗ್ಯಾ ಮಾಡುತ್ತಾರೆ. ಸ್ವಲ್ಪ ದಿವಸಗಳ ನಂತರ ಜನ ಎಲ್ಲಾ ಮರೆಯುತ್ತಾರೆ. ಒಟ್ಟಿನಲ್ಲಿ ಈ ಕಾರ್ಯಾಚರಣೆಯೇ ರದ್ದಾಗಿದ್ದರಿಂದ ಒಂದಿಷ್ಟು ಮಂದಿ ಅಕಾಲ ಮೃತ್ಯುವಿನಿಂದ ಬಚಾವಾದರು. ಅವರ ಅದೃಷ್ಟ. ಇಲ್ಲವಾದರೆ ಇಸ್ರೇಲ್, ಭಾರತ, ಪಾಕಿಸ್ತಾನದ ಮಧ್ಯದ ರಹಸ್ಯ ಕಾರ್ಯಾಚರಣೆಗೆ ಯಾವದೋ ನಿಷ್ಪಾಪಿ ನಾಗರಿಕ ವಿಮಾನದಲ್ಲಿದ್ದ ಪ್ರಯಾಣಿಕರು ಹರಕೆ ಕುರಿಗಳಾಗುತ್ತಿದ್ದವು. They are called collateral damages. Part of and cost of doing this kind of covert operations.

ಮುಂದೆ ಎಲ್ಲ ಎಣಿಸಿದಂತೆಯೇ ಆಯಿತು. ಪಾಕಿಸ್ತಾನದ ಅಣುಶಕ್ತಿ ಪ್ರೋಗ್ರಾಮಿಗೆ ಯಾವದೇ ಅಡೆತಡೆ ಬರಲಿಲ್ಲ. ಪಾಕಿಸ್ತಾನ ಏನೋ ಒಂದು ತರಹದ ಅಣುಬಾಂಬ್ ತಯಾರು ಮಾಡಿಕೊಂಡಿತು. ಅಥವಾ ತಯಾರಿದೆ ಅಂತ ಸುಮ್ಮನೆ ತಮ್ಮಟೆ ಬಾರಿಸಿತು. ನಿರೀಕ್ಷಿಸಿದಂತೆ ಪಾಕಿಸ್ತಾನದ ಕಳ್ಳ ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ತಂತ್ರಜ್ಞಾನವನ್ನು ಕಾಳಸಂತೆಯಲ್ಲಿ ಮಾರಲು ಹೊರಟ. ಆವಾಗ ಮಾತ್ರ ಅಮೇರಿಕಾಗೆ ಬಿಸಿ ಮುಟ್ಟಿತು. ಅಮೇರಿಕಾ ಸುಮ್ಮನಿರಲಿಲ್ಲ. ಅಂದಿನ ಪಾಕಿಸ್ತಾನದ ಸರ್ವಾಧಿಕಾರಿ ಪರ್ವೇಜ್ ಮುಷರಫನನ್ನು ಹಿಡಿದು ಸಮಾ ಬೆಂಡೆತ್ತಿತು. ಅವನು ಹೋಗಿ ಕಳ್ಳ ವಿಜ್ಞಾನಿ ಖಾನನನ್ನು ಬೆಂಡೆತ್ತಿದ. ಬಂಧಿಸಿ ಮನೆಯಲ್ಲಿ ಕೂಡಿಸಿದ. ಖಾನ್, ಮುಷರಫ್ ಎಲ್ಲರೂ ಕಳ್ಳರೇ! ಹಾಗಾಗಿ ಒಬ್ಬರ ಜುಟ್ಟು ಇನ್ನೊಬ್ಬರ ಕೈಯಲ್ಲಿ. ಅದೇನೋ ಒಂದು ತರಹದ ಮಾಂಡವಲಿ ಮಾಡಿಕೊಂಡರು. ಕಳ್ಳ ವಿಜ್ಞಾನಿಗೆ ಗೃಹ ಬಂಧನ ವಿಧಿಸಿ ಮನೆಯಲ್ಲಿ ಕೂಡಿಹಾಕಿದರು. ಆವಾಗಿಂದ ಕಳ್ಳ ವಿಜ್ಞಾನಿ ಗಪ್ ಚುಪ್. ಮೊನ್ನೆ ನಮ್ಮ ಅಬ್ದುಲ್ ಕಲಾಮ್ ನಿಧನರಾದಾಗ, 'ಅಬ್ದುಲ್ ಕಲಾಮ್ ಒಬ್ಬ ಸಾಧಾರಣ ವಿಜ್ಞಾನಿ,' ಅಂತ ಅಸಹ್ಯವಾಗಿ ಉಲಿದಿದ್ದ. ಈ ಪುಣ್ಯಾತ್ಮನ ಕಳ್ಳತನದ, ಸುಳ್ಳುತನದ ದಿವ್ಯ ಚರಿತೆಯೆಲ್ಲ ಜಗಜ್ಜಾಹೀರಾಗಿದೆ.

ಪಾಕಿಸ್ತಾನವನ್ನು ಸದೆಬಡಿಯಲಾಗದಿದ್ದರೂ ಇಸ್ರೇಲ್ ತನ್ನ ಇತರೆ ನೆರೆಹೊರೆ ರಾಷ್ಟ್ರಗಳನ್ನು ಅಣುಬಾಂಬ್ ತಯಾರಿಸದಂತೆ ಹೇಗೆ ಹದ್ದುಬಸ್ತಿನಲ್ಲಿಟ್ಟುಕೊಂಡಿದೆ ಅಂತ ನೋಡುತ್ತಾ ಹೋದರೆ ಅದೇ ಒಂದು ರೋಚಕ ಕಹಾನಿ.

ಇಸ್ರೇಲಿನಿಂದ ಒಮ್ಮೆ ತಾರಾಮಾರಾ ಬಡಿಸಿಕೊಂಡಿದ್ದ ಸದ್ದಾಮ್ ಹುಸೇನ್ ಮತ್ತೆ ಅಣುಬಾಂಬ್ ಮಾಡಲು ಹೋಗಲಿಲ್ಲ. ಕೆನಡಾದ ಮಹಾ ಪ್ರತಿಭಾವಂತ ರಾಕೆಟ್ ವಿಜ್ಞಾನಿ ಜೆರಾಲ್ಡ್ ಬುಲ್ ಬಂದು, 'ಅಣುಬಾಂಬ್ ವಿಷಯ ಬಿಡಿ. ನಿಮಗೆ ದೊಡ್ಡ ಪ್ರಮಾಣದ ಸಾಂಪ್ರದಾಯಿಕ ಕ್ಷಿಪಣಿಯನ್ನು ತಯಾರಿಸಿಕೊಡುತ್ತೇನೆ. ಅದನ್ನು ಉಪಯೋಗಿಸಿ ನೀವು ಇಸ್ರೇಲನ್ನು ಹಣಿಯಬಹುದು,' ಅಂತ ಪುಂಗಿ ಊದಿದ. ಸಿಕ್ಕಾಪಟ್ಟೆ ಥ್ರಿಲ್ ಆದ ಸದ್ದಾಮ್ ಅವನಿಗೆ ಸುಪಾರಿ ಕೊಟ್ಟುಬಿಟ್ಟ. ಜೆರಾಲ್ಡ್ ಬುಲ್ ಇರಾಕಿಗೆ ಬಂದು ಕ್ಷಿಪಣಿ ಪ್ರೋಗ್ರಾಮ್ ಶುರು ಮಾಡಿದ. ಇಸ್ರೇಲ್ ಮೊದಲು ಏನು ಮಾಡಿತ್ತೋ ಅದನ್ನೇ ಮಾಡಿತು. ಜೆರಾಲ್ಡ್ ಬುಲ್ ಎಂಬ ಯಬಡನಿಗೆ ಗಿಣಿಗೆ ಹೇಳುವಂತೆ ತಿಳಿಸಿ ಹೇಳಿತು. ಆ ಪುಣ್ಯಾತ್ಮ ಕೇಳಲಿಲ್ಲ. ಮೊಸ್ಸಾದಿನ ರಹಸ್ಯ ಹಂತಕರು ಆಸ್ಟ್ರಿಯಾ ದೇಶದ ವಿಯೆನ್ನಾದ ಅವನ ಮನೆಗೇ ಹೋಗಿ ಅವನ ತಲೆಗೆ ಎರಡು ಗುಂಡು ನುಗ್ಗಿಸಿ ಬಂದರು. ಮತ್ತೊಮ್ಮೆ ಸದ್ದಾಮ್ ಹುಸೇನ್ ಲಬೋ ಲಬೋ ಅಂತ ಹೊಯ್ಕೊಂಡ. ಅಡ್ವಾನ್ಸ್ ಅಂತ ರೊಕ್ಕ ಬೇರೆ ಕೊಟ್ಟು ಕುಂತಿದ್ದ. ಮಿಲಿಯನ್ ಡಾಲರುಗಟ್ಟಲೇ ಅಡ್ವಾನ್ಸ್ ತೆಗೆದುಕೊಂಡು, ಕ್ಷಿಪಣಿ ಪ್ರೋಗ್ರಾಮ್ ಅರ್ಧಂಬರ್ಧ ಮಾಡಿದ್ದ ಕೆನಡಾದ ರಾಕೆಟ್ ತಂತ್ರಜ್ಞ ಜೆರಾಲ್ಡ್ ಬುಲ್ ಇಸ್ರೇಲಿಗಳ ಮಾತು ಕೇಳದೇ 'ಶಿವಾಯ ನಮಃ' ಆಗಿಹೋಗಿದ್ದ. ಹೀಗೆ ಇಸ್ರೇಲಿಗಳಿಂದ ಪದೇಪದೇ ತಾರಾಮಾರಾ ಬಡಿಸಿಕೊಂಡ ಸದ್ದಾಮ್ ಹುಸೇನ್ ಸುಮ್ಮನಾದ. ನಂತರ ಅವನೇ ಹರೋಹರ ಆಗಿಹೋದ. ಹಿಂದಿನ ಪ್ರೆಸಿಡೆಂಟ್ ಬುಶ್ ಸಾಹೇಬರು ಮಾಡಿದ ಮಹಾ ದೊಡ್ಡ ಕೆಲಸ ಅದು. ಇಸ್ರೇಲ್ ಪೆಕಪೆಕಾ ಅಂತ ತಟ್ಟಿಕೊಂಡು ನಕ್ಕಿತು. ಅಮೇರಿಕಾದ ರೊಕ್ಕ, ಇಸ್ರೇಲಿಗಳಿಗೆ ಜಾತ್ರೆ.

ನಂತರ ಶುರುವಾದದ್ದು ಸಿರಿಯಾ ದೇಶದವರ ಲೋಚಾ. ೨೦೦೫ - ೨೦೦೬ ಹೊತ್ತಿಗೆ ಸಿರಿಯಾದ ಸರ್ವಾಧಿಕಾರಿ ಅಸ್ಸಾದ್ ಉತ್ತರ ಕೋರಿಯಾದ ಬೆಂಬಲದಿಂದ ಅಣುಸ್ಥಾವರ ಕಟ್ಟಲು ಶುರುಮಾಡಿದ. ಇಸ್ರೇಲ್ ಹೋಗಿ ಬಾಂಬಿನ ಮಳೆಗರೆದು ಅಣುಸ್ಥಾವರವನ್ನೇ ನಿರ್ನಾಮ ಮಾಡಿಬಂತು. ಹಾಗೇ ಬರಲಿಲ್ಲ. ಇಸ್ರೇಲಿಗಳ ಗುಂಡಿಗೆ ನೋಡಿ. ಅಸ್ಸಾದನ ಅರಮನೆ ಮೇಲೆಯೇ ಹಾರಿದ ಯುದ್ಧವಿಮಾನಗಳು buzz ಮಾಡಿದವು. ಫೈಟರ್ ವಿಮಾನ ತಲೆ ಮೇಲೆ ಹಾರಿ buzz ಮಾಡಿತು ಅಂದರೆ ಒಂದು ಖಡಕ್ ವಾರ್ನಿಂಗ್ ಕೊಟ್ಟಂಗೆ. ಅರ್ಥಮಾಡಿಕೊಂಡ ಅಸ್ಸಾದ್ ಮುಚ್ಚಿಕೊಂಡು ಕೂತ. ನಂತರ ಅಸ್ಸಾದನ ಮಿಸೈಲ್ ಪ್ರೋಗ್ರಾಮಿನ ಮುಖ್ಯಸ್ಥ ಸಮುದ್ರ ತೀರದ ತನ್ನ ಐಶಾರಮಿ ವಿಲ್ಲಾದಲ್ಲಿ ಕೂತು ಇಳಿಸಂಜೆಯ ಮಾರ್ಟಿನಿ ಕುಡಿಯುತ್ತಿದ್ದ. ದೂರದ ಸಮುದ್ರದಲ್ಲಿ ಲಂಗರು ಹಾಕಿದ್ದ ಹಡಗಿನಿಂದ ಇಸ್ರೇಲಿ ನುರಿತ ಗುರಿಕಾರರು (snipers) ಸುಮಾರು ಒಂದೂವರೆ ಎರಡು ಕಿಲೋಮೀಟರ್ ದೂರದಿಂದ ಸ್ನೈಪರ್ ಬಂದೂಕಿನಿಂದ ಗುಂಡು ಹಾರಿಸಿ ಕರಾರುವಕ್ಕಾಗಿ ಅವನ ಬುರುಡೆ ಬಿಚ್ಚಿ ಮೇಲೆ ಕಳಿಸಿಬಿಟ್ಟರು. ಅದಾದ ನಂತರ ಸಿರಿಯಾದ ಸರ್ವಾಧಿಕಾರಿ ಅಸ್ಸಾದನ ಮಿಸೈಲ್ ಪ್ರೋಗ್ರಾಮ್, ಅಣುಶಕ್ತಿ ಪ್ರೋಗ್ರಾಮ್ ಎಲ್ಲ ತಬ್ಬಲಿಯಾಗಿಹೋಯಿತು.

ಎಪ್ಪತ್ತರ ದಶಕದಲ್ಲಿ ಇಸ್ರೇಲಿನ ವೈರಿ ಈಜಿಪ್ಟ್ ಸಹಿತ ಸಣ್ಣ ಪ್ರಮಾಣದ ಅಣುಶಕ್ತಿ ಪ್ರೋಗ್ರಾಮ್ ಶುರುಮಾಡಿತ್ತು. ಅದರಲ್ಲಿ ಕೆಲಸ ಮಾಡುತ್ತಿದ್ದ ಒಂದಿಬ್ಬರು ಜರ್ಮನ್ ಇಂಜಿನಿಯರುಗಳು ನಿಗೂಢವಾಗಿ ಸತ್ತುಬಿದ್ದ ನಂತರ ಅವರಿಗೆ ಜನರ ಕೊರತೆಯಾಗಿ ಅವರ ಪ್ರೋಗ್ರಾಮ್ ಮುಂದುವರಿಯೇ ಇಲ್ಲ. ಇಸ್ರೇಲ್ ಹಾಗೆ ಮಾಡಿ ಇಜಿಪ್ಟಿನ ತಲೆನೋವು ನಿವಾರಿಸಿಕೊಂಡಿತ್ತು.

ಈಗಿತ್ತಲಾಗೆ ಇಸ್ರೇಲಿನ ಮಗ್ಗುಲಲ್ಲಿ ಮುಳ್ಳಾಗಿದ್ದು ಇರಾನ್. ಅವರೂ ಅಣುಶಕ್ತಿ, ಅಣುಬಾಂಬ್ ತಯಾರಿಕೆಯಲ್ಲಿ ಮಗ್ನರು. ಇಸ್ರೇಲ್, ಅಮೇರಿಕಾ ಕೂಡಿ ಕಂಪ್ಯೂಟರ್ ವೈರಸ್ಸುಗಳನ್ನು ತಯಾರು ಮಾಡಿ, ಇರಾನಿನ ಕಂಪ್ಯೂಟರ್ ಜಾಲದಲ್ಲಿ ನುಗ್ಗಿಸಿ, ಅವು ಅಣುಸ್ಥಾವರದ ಉಪಕರಣಗಳನ್ನು ಢಂ ಅನ್ನಿಸಿಬಿಟ್ಟವು. ಇರಾನಿನ ಅಣುಶಕ್ತಿ ಪ್ರೋಗ್ರಾಮ್ ಒಂದಿಷ್ಟು ವರ್ಷ ಹಿಂದಕ್ಕೆ ಹೋಯಿತು. ಸುಮಾರು ಜನ ಇರಾನಿ ವಿಜ್ಞಾನಿಗಳ ಹತ್ಯೆ ಕೂಡ ಆಯಿತು. ಅದಕ್ಕೆ ಪ್ರತಿಯಾಗಿ ಇಸ್ರೇಲಿಗಳ ಮೇಲೆ, ಅವರ ಜಾಗತಿಕ interest ಗಳ ಮೇಲೆ ಇರಾನ್ ಕೂಡ covert operations ಮಾಡಲು ನೋಡಿತು. ಅಷ್ಟೇನೂ ಹಾನಿಯಾಗಲಿಲ್ಲ. ವಾಪಸ್ ಚಿಗಿತುಕೊಂಡ ಇರಾನಿಗಳು ಮತ್ತೊಮ್ಮೆ ಅಣುಶಕ್ತಿ ಪ್ರೋಗ್ರಾಮ್ ಶುರು ಮಾಡಿದರು. ಮತ್ತೆ ಬಡಿದು ಬರುತ್ತೇನೆ ಇಸ್ರೇಲ್ ಎದ್ದು ನಿಂತಿತ್ತು. ಬರಾಕ್ ಒಬಾಮಾ ಸಾಹೇಬರು ಇಸ್ರೇಲ್, ಇರಾನ್ ಎರಡೂ ದೇಶಗಳಿಗೆ ಏನೋ ಒಂದು ರೀತಿಯ ಸಮಾಧಾನ ಮಾಡಿದ್ದಾರೆ. ಕೇವಲ ಶಾಂತಿಯುತ ಉಪಯೋಗಕ್ಕೆ ಮಾತ್ರ ಅಣುಶಕ್ತಿ ಬಳಕೆ ಮಾಡುವಂತೆ ಇರಾನ್ ಜೊತೆಗೆ ಏನೋ ಒಪ್ಪಂದ ಮಾಡಿಕೊಂಡಿದ್ದಾರೆ. ಇಸ್ರೇಲಿಗೆ ಪೂರ್ತಿ ಸಮಾಧಾನವಿಲ್ಲ. ಅದರೂ ಸದ್ಯಕ್ಕೆ ಸುಮ್ಮನಿದೆ. ಮುಂದೇನೋ ಗೊತ್ತಿಲ್ಲ.

ಪೂರಕ ಓದಿಗೆ:

Deception: Pakistan, the United States, and the Secret Trade in Nuclear Weapons by Adrian Levy, Catherine Scott-Clark

Raid on the Sun: Inside Israel's Secret Campaign that Denied Saddam the Bomb by Rodger Claire

Mission R&AW by RK Yadav

How PAF Prevented an Israeli Attack on Pakistan's Nuclear Assets


ಇಸ್ರೇಲಿ ಯುದ್ಧವಿಮಾನ (ಸಾಂದರ್ಭಿಕ ಚಿತ್ರ)

Thursday, September 24, 2015

ಎಲ್ಲ ಅಲ್ಲಾಹುವಿನ ಮರ್ಜಿ. ಮಕ್ತೂಬ್!

ಈಗ ಕೆಲವು ತಿಂಗಳ ಹಿಂದೆ ಟರ್ಕಿ ದೇಶಕ್ಕೆ ಪ್ರವಾಸ ಹೋಗಿದ್ದೆವು. ಪ್ರವಾಸ ಮುಗಿಸಿ ಅಮೇರಿಕಾಗೆ ವಾಪಸ್ ಹೊರಟಿದ್ದೆವು. ಅಮೇರಿಕಾಗೆ ನಮ್ಮ ವಾಪಸ್ ಪ್ರಯಾಣ ಟರ್ಕಿಯ ಇಸ್ತಾಂಬುಲ್ ಶಹರದಿಂದ ಡೆನ್ಮಾರ್ಕಿನ ಕೋಪನ್ ಹೇಗನ್ ಮಾರ್ಗವಾಗಿ  ಇತ್ತು. ಇಸ್ತಾಂಬುಲ್ಲಿನಿಂದ ಕೋಪನ್ ಹೇಗನ್ ವರೆಗಿನ ಪ್ರಯಾಣದಲ್ಲಿ ನನ್ನ, ನನ್ನ ಪತ್ನಿಯ ಮತ್ತು ಮಗಳ ಸೀಟುಗಳು ಬೇರೆ ಬೇರೆ ಕಡೆ ಬಂದುಬಿಟ್ಟವು. ಹಾಗಂತ ತೊಂದರೆಯೇನೂ ಇರಲಿಲ್ಲ. ಬೇರೆಬೇರೆಯಾಗಿ ಕೂಡಬೇಕಾಯಿತು ಅಷ್ಟೇ.

ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತವಳು ಒಬ್ಬಳು ಯುವತಿ. ವಯಸ್ಸು ಸುಮಾರು ಇಪ್ಪತ್ತೈದು ವರ್ಷಗಳ ಆಸುಪಾಸು ಇದ್ದೀತು. ಅವಳ ವೇಷಭೂಷಣ ನೋಡಿ ಅರಬ್ ಸಂಸ್ಕೃತಿಯ ಯುವತಿ ಅಂತ ಖಚಿತವಾಯಿತು. ತಲೆಗೆ ಸಾಂಪ್ರದಾಯಿಕ ಹಿಜಾಬ್ ಧರಿಸಿದ್ದಳು.

ವಿಮಾನ ಹಾರಿದ ಮೇಲೆ ಸೀಟ್ ಬೆಲ್ಟ್ ತೆಗೆದಿಡೋಣ ಅಂತ ಆಕಡೆ ಈಕಡೆ ತಿರುಗಿದಾಗ ಒಬ್ಬರನ್ನೊಬ್ಬರು ನೋಡಿದೆವು. ಹಲೋ, ಹಾಯ್ ಅನ್ನುವ ಮಾದರಿಯಲ್ಲಿ ಮುಗುಳ್ನಗೆಗಳ ವಿನಿಮಯವೂ ಆಯಿತು.  ಪ್ರಯಾಣದಲ್ಲಿ ಪಕ್ಕದಲ್ಲಿ ಕೂತವರಿಗೆ ಇಷ್ಟವಿದ್ದರೆ ಒಂದು ನಾಲ್ಕು ಮಾತಾಡಿ ಪರಸ್ಪರ ಪರಿಚಯ ಮಾಡಿಕೊಳ್ಳುವದು ನನ್ನ ಸ್ವಭಾವ. ಆ ದಿನ ಕೂಡ ಹಾಗೇ ಮಾಡಿದೆ. ಸಂಕ್ಷಿಪ್ತವಾಗಿ ನನ್ನ ಪರಿಚಯ ಮಾಡಿಕೊಂಡೆ. ಪ್ರವಾಸದ ಬಗ್ಗೆ ಹೇಳಿದೆ. ಆಕೆಯ ಪರಿಚಯ ತಿಳಿಯುವ ಬಗ್ಗೆ ಆಸಕ್ತಿ ತೋರಿಸಿದೆ.

ಆಕೆಗೋ ಅರೇಬಿಕ್ ಬಿಟ್ಟರೆ ಬೇರೆ ಭಾಷೆ ಬರುವದಿಲ್ಲವಂತೆ. ಇಂಗ್ಲಿಷ್ ತಕ್ಕಮಟ್ಟಿಗೆ ತಿಳಿಯುತ್ತದೆ ಅಂದಳು. ಆದರೆ ಸರಿಯಾಗಿ ಮಾತಾಡಲು ಬರುವದಿಲ್ಲ ಅಂದಳು. 'ಓಕೆ. ತೊಂದರೆಯಿಲ್ಲ. ನಿನಗೆ ತಿಳಿದಂತೆ, ಬಂದಷ್ಟು ಮಾತಾಡು. ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಸರಳ ಅರೇಬಿಕ್ ನನಗೂ ಕೊಂಚ ಮಟ್ಟಿಗೆ ಅರ್ಥವಾಗುತ್ತದೆ,' ಅಂತ ಆತ್ಮೀಯತೆಯಿಂದ ಹೇಳಿದೆ. ಆಕೆಗೂ ಅದು ಇಷ್ಟವಾಗಿರಬೇಕು. ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ಮಾತಾಡತೊಡಗಿದಳು. ಇಂಗ್ಲಿಷ್ ಕೈಕೊಟ್ಟಾಗ ಅರೇಬಿಕ್. ಅರೇಬಿಕ್ ನನಗೆ ತಿಳಿಯಲಿ ಅಂತ ಮಾತಿನ ಜೊತೆಗೆ ಸಿಕ್ಕಾಪಟ್ಟೆ ಹಾವಭಾವ, ಕೈಸನ್ನೆ ಮಾಡುತ್ತ ಮಾತಾಡಿದಳು. ತನ್ನ ಪರಿಚಯ ಮಾಡಿಕೊಂಡಳು.

ಆಕೆ ಸಿರಿಯಾ ದೇಶದವಳಂತೆ. ಹಾಂ, ಅದೇ ಸಿರಿಯಾ ದೇಶ, ಎಲ್ಲಿ ಈಗ ಸುಮಾರು ಮೂರು ವರ್ಷಗಳಿಂದ ಅಂತರ್ಯುದ್ಧದಲ್ಲಿ ರಕ್ತ ನೀರಿನಂತೆ ಹರಿದಿದೆಯೋ ಅದೇ ಸಿರಿಯಾ. ಒಂದು ಕಡೆ ಅಪ್ಪನ ನಿಧನದ ನಂತರ ಸಿಕ್ಕ ಖುರ್ಚಿಯನ್ನು ಬಿಡಲು ಹರ್ಗೀಸ್ ಮನಸ್ಸಿಲ್ಲದ ಸರ್ವಾಧಿಕಾರಿ ಅಸ್ಸಾದ್. ಮತ್ತೊಂದು ಕಡೆ ತಮ್ಮ ಪೈಶಾಚಿಕ ಕೃತ್ಯಗಳ ಮೂಲಕವೇ ಪ್ರಸಿದ್ಧರಾದ ISIS ಮತ್ತು ಇತರೇ ಉಗ್ರರು, ಬಂಡುಕೋರರು. ದೊಡ್ಡ ಪ್ರಮಾಣದ ಅಂತರ್ಯುದ್ಧ. ಅದರಲ್ಲೂ ಆಕೆ ಮೂಲತಃ ಹೋಮ್ಸ್ ಶಹರದವಳು ಅಂತ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದೆ. ಸಿರಿಯಾದ ಹೋಮ್ಸ್ ಪಟ್ಟಣದ ಬಗ್ಗೆ ಕೇಳಿರಬೇಕಲ್ಲವೇ? ಸರ್ವಾಧಿಕಾರಿ ಅಸ್ಸಾದ್ ಆ ಪಟ್ಟಣದ ಮೇಲೆ ಹೀಗೆ ಮುರಕೊಂಡು ಬಿದ್ದ ಅಂದರೆ ಯರ್ರಾಬಿರ್ರಿ ಬಾಂಬಿನ ಮಳೆಗರೆದು, ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿ, ದೊಡ್ಡ ಪ್ರಮಾಣದ ಕಾರ್ಯಾಚರಣೆ ಮಾಡಿ ಪೂರ್ತಿ ನೆಲಸಮ ಮಾಡಿಬಿಟ್ಟ. ದೊಡ್ಡ ಪ್ರಮಾಣದ ಸಾವುನೋವುಗಳಾಗಿ ಎಲ್ಲ ಕಡೆ ಸುದ್ದಿಯಾಗಿತ್ತು. ಇವಳು ಅಂತಹ ಹೋಮ್ಸ್ ಪಟ್ಟಣದವಳು ಅಂತ ಹೇಳುತ್ತಾಳೆ. ಅಲ್ಲಿರುವ ಇವಳ ಕುಟುಂಬ ಹೇಗಿದೆಯೋ ಏನೋ? ಅಸ್ಸಾದ್ ಮಾಡಿದ ದಾಳಿಯಲ್ಲಿ ಇವರ ಕುಟುಂಬಕ್ಕೆ ಏನಾದರೂ ತೊಂದರೆಯಾಯಿಯೋ ಏನೋ? ಅಂತೆಲ್ಲ ಕೇಳಬೇಕು ಅನ್ನಿಸಿತು. ಆದರೆ ಕೇಳಲಿಲ್ಲ. ಊಹೆ ಮಾಡಿಕೊಳ್ಳಲೂ ಆಗದಂತಹ ದುರಂತಗಳು ಹೋಮ್ಸ್ ಪಟ್ಟಣದಲ್ಲಿ ನಡೆದುಹೋಗಿವೆ.

ಒಟ್ಟಿನಲ್ಲಿ ಅವಳು ಮೂಲತಃ ಸಿರಿಯಾದ ಹೋಮ್ಸ್ ಪಟ್ಟಣದವಳು ಅಂತ ತಿಳಿಯಿತು. 'ಮತ್ತೆ ನೀವು ಇಲ್ಲಿ ಟರ್ಕಿಯ ಇಸ್ತಾಂಬುಲ್ಲಿನಲ್ಲಿ ಹೇಗೆ? ಮತ್ತೆ ಡೆನ್ಮಾರ್ಕಿನ ಕೋಪನ್ ಹೇಗನ್ ಕಡೆ ಏನು ಪಯಣ?' ಅಂತ ಸಹಜವಾಗಿ ಕೇಳಿದೆ.

ಮುಂದಿನ ಕಥೆ ಮಜವಾಗಿತ್ತು. ಆಕೆಗೆ ಇಂಗ್ಲಿಷ್ ಮತ್ತು ನನಗೆ ಅರೇಬಿಕ್ ಬರದ ಕಾರಣ ಹೇಳಲು, ಕೇಳಲು, ತಿಳಿಯಲು ಸ್ವಲ್ಪ ಸಮಯ ಹಿಡಿಯಿತು. ಕೆಲವು ಕಡೆ trial & error ಆದರೂ ಒಂದು ಮಟ್ಟಿಗೆ ಅರ್ಥವಾಯಿತು.

ಆಕೆ ಇಜಿಪ್ಟಿನ ರಾಜಧಾನಿ ಕೈರೋದಲ್ಲಿರುವ ಅಮೇರಿಕನ್ ಯೂನಿವರ್ಸಿಟಿಯ ವಿದ್ಯಾರ್ಥಿನಿಯಂತೆ. ಅಲ್ಲಿದ್ದಾಗಲೇ ಯಾರೋ ಒಬ್ಬ ಡೆನ್ಮಾರ್ಕಿನ ವಿದ್ಯಾರ್ಥಿಯ ಪರಿಚಯವಾಗಿದೆ. ಸ್ನೇಹವಾಗಿ ನಂತರ ಪ್ರೇಮಕ್ಕೆ ತಿರುಗಿದೆ. ಈಗ ಅವನೊಂದಿಗೆ ವಿವಾಹ ನಿಕ್ಕಿಯಾಗಿದೆ. ಆತನ ಕುಟುಂಬವನ್ನು ಭೇಟಿಯಾಗಿ, ನಿಶ್ಚಿತಾರ್ಥ (engagement) ಮಾಡಿಕೊಳ್ಳಲು ಡೆನ್ಮಾರ್ಕಿಗೆ ಹೊರಟಿದ್ದಾಳೆ. ಹಾಗಾಗಿ ಕೈರೋನಿಂದ ಇಸ್ತಾಂಬುಲ್, ಇಸ್ತಾಂಬುಲ್ಲಿನಿಂದ ಕೋಪನ್ ಹೇಗನ್ನಿಗೆ ಪಯಣ.

ವಿಷಯ ಕೇಳಿ ಸಂತೋಷವಾಯಿತು. ಆಕೆಗೆ, ಆಕೆಯ ಕೈಹಿಡಿಯಲಿರುವ ಡೆನ್ಮಾರ್ಕಿನ ವರನಿಗೆ ಅಭಿನಂದನೆ ಸಲ್ಲಿಸಿದೆ. ಧನ್ಯವಾದ ಅಂದಳು. 'ನೀವು ಹೇಗೂ ಅಮೇರಿಕಾಗೆ ಡೆನ್ಮಾರ್ಕ್ ಮೂಲಕವೇ ಹೋಗುತ್ತಿದ್ದೀರಿ. ನಮ್ಮ ನಿಶ್ಚಿತಾರ್ಥಕ್ಕೂ ಬಂದು ಹೋಗಿ,' ಅಂತ ಆಮಂತ್ರಣ ಬೇರೆ ಕೊಟ್ಟುಬಿಟ್ಟಳು. ಕೇಳಿ ಹೃದಯ ತುಂಬಿಬಂತು. ಕೆಲವೇ ನಿಮಿಷಗಳ ಹಿಂದೆ ನಾವಿಬ್ಬರೂ ಅಪರಿಚಿತರು. ಮೇಲಿಂದ ಒಬ್ಬರ ಭಾಷೆ ಇನ್ನೊಬ್ಬರಿಗೆ ಸರಿಯಾಗಿ ತಿಳಿಯುತ್ತಲೂ ಇಲ್ಲ. ಆದರೆ ಭಾಷೆಯನ್ನು ಮೀರಿದ ಭಾವನೆಗಳಿಗೆ, ಸ್ನೇಹಕ್ಕೆ ಮಾತ್ರ ಯಾವದೇ ರೀತಿಯ ಅಡೆತಡೆ ಇಲ್ಲ. ಕೆಲವೇ ನಿಮಿಷಗಳ ಹಿಂದೆ ಪರಿಚಯವಾದ ನನ್ನನ್ನು ಬಂಧುವೋ ಮಿತ್ರನೋ ಎಂಬಂತೆ ಖಾಸಗಿ ಸಮಾರಂಭಕ್ಕೆ ಕರೆಯುತ್ತಿದ್ದಾಳೆ. ರಕ್ತ ಸಂಬಂಧಗಳೇ ಜೊಳ್ಳಾಗುತ್ತಿರುವ ಸಮಯದಲ್ಲಿ ಇದೊಂದು refreshing ಬದಲಾವಣೆ ಅಂತ ಅನ್ನಿಸಿತು.

'ವಿವಾಹದ ನಿಶ್ಚಿತಾರ್ಥ ನಡೆಯುತ್ತಿರುವದು ಸಂತಸದ ಸಂಗತಿ. ನೀನು ಒಬ್ಬಳೇ ಪ್ರಯಾಣ ಮಾಡುತ್ತಿರುವ ಹಾಗೆ ಕಾಣುತ್ತದೆ. ನಿನ್ನ ಕುಟುಂಬದವರು ಎಲ್ಲಿ? ಆಗಲೇ ಡೆನ್ಮಾರ್ಕಿಗೆ ಹೋಗಿ ತಲುಪಿದ್ದಾರೋ ಅಥವಾ ನಂತರ ಬರಲಿದ್ದಾರೋ?' ಅಂತ ಕೇಳಿದೆ.

'ನನ್ನ ಕುಟುಂಬದಲ್ಲಿ ಯಾರೂ ಇಲ್ಲ!' ಅಂದುಬಿಟ್ಟಳು.

ನನಗೆ ಒಂದು ಕ್ಷಣ ಏನು ಅಂತ ತಿಳಿಯಲಿಲ್ಲ. ಕುಟುಂಬದಲ್ಲಿ ಯಾರೂ ಇಲ್ಲ ಅಂದರೆ ಏನು ಅರ್ಥ? ಕೇಳಬೇಕು. ಏನಂತ ಕೇಳಲಿ? ಅಥವಾ ಅವಳು ಹೇಳಿದ್ದು ನನಗೆ ಸರಿಯಾಗಿ ತಿಳಿದಿಲ್ಲವೋ? ಗೊಂದಲವಾಯಿತು.

ಆಕೆಗೆ ನನ್ನ ಗೊಂದಲ ಅರ್ಥವಾಯಿತು ಅಂತ ಕಾಣುತ್ತದೆ.

'ಬಂಬಾ!' ಅಂದಳು. ಎರಡೂ ಕೈ ಮೇಲೆ ಎತ್ತಿ ಹಿಡಿದು ಏನೋ ಹಾವಭಾವ ಮಾಡಿದಳು.

ಹ್ಯಾಂ? ಏನು ಬಂಬಾ? ಓಹೋ! ಬಾಂಬೇ? ಬಾಂಬುಗಳೇ?? ಹೋಮ್ಸ್ ಪಟ್ಟಣದವಳು ಅಂತ ಮೊದಲೇ ಹೇಳಿದ್ದಾಳೆ. ಹಾಗಿದ್ದರೆ ಅದರ ಮೇಲಾದ ಬಾಂಬ್ ದಾಳಿಯ ಬಗ್ಗೆ ಏನೋ ಹೇಳುತ್ತಿರಬೇಕು ಅಂತ ನನ್ನ ಊಹೆ.

'ಬಂಬಾ ಅಂದರೆ?? ಬಾಂಬೇ?? ಅದೇ ಯುದ್ಧದಲ್ಲಿ ಹಾಕುತ್ತಾರಲ್ಲಾ ಆ ಬಾಂಬೇ? ಢಂ! ಅಂತ ಶಬ್ದ ಮಾಡುತ್ತದಲ್ಲಾ ಆ ಬಾಂಬೇ?' ಅಂತ ಸನ್ನೆ ಮಾಡಿ, ಢಂ ಅಂತ ಶಬ್ದ ಮಾಡಿ ಕೇಳಿದೆ.

ಹೌದು ಅಂದಳು.

'ಮುಂದೆ?' ಅನ್ನುವ ಲುಕ್ ಕೊಟ್ಟೆ.

'ಬಂಬಾ. ಬಹಳ ಬಹಳ ಬಂಬಾ. ಮೇಲಿಂದ ಬಿತ್ತು. ಒಂದರಮೇಲೊಂದು ನಿರಂತರವಾಗಿ ಬಿತ್ತು. ಅಪ್ಪ, ಅಮ್ಮ, ಅಣ್ಣ, ತಮ್ಮ ಎಲ್ಲ ಖಲಾಸ್!' ಅಂದಳು. ಬಾಂಬ್ ದಾಳಿಯಲ್ಲಿ ಇಡೀ ಕುಟುಂಬವೇ ಸರ್ವನಾಶವಾಗಿ ಹೋಗಿದೆ, ಎಲ್ಲರೂ ಸತ್ತು ಹೋಗಿದ್ದಾರೆ ಅನ್ನುವ ರೀತಿಯಲ್ಲಿ ಕೈಗಳನ್ನು ನಮಸ್ಕಾರ ಮಾಡುವ ರೀತಿಯಲ್ಲಿ ಜೋಡಿಸಿ, ಕಿವಿಗಳ ಪಕ್ಕ ತಂದು, ಸೀಟಿನ ಮಧ್ಯೆ ಇರುವ ವಿಭಜಕದ ಮೇಲೆ ತಲೆಯಿಟ್ಟು ಮಲಗಿ ತೋರಿಸಿದಳು. ಸತ್ತವರು ಮಲಗಿರುತ್ತಾರೆ ನೋಡಿ. ನನಗೆಲ್ಲಿ ಅರ್ಥವಾಯಿತೋ ಇಲ್ಲವೋ ಅಂತ ಆಕೆಗೆ ಸಂಶಯ ಬಂದಿರಬೇಕು. ಅದಕ್ಕೇ ಸತ್ತವರು ಮಲಗಿದ ನಟನೆ ಬೇರೆ ಮಾಡಿತೋರಿಸಿಬಿಟ್ಟಳು.

ನನ್ನ ಹೃದಯ ಕಿತ್ತಿ ಬಂತು. ದುಃಖ ಉಕ್ಕಿ ಬಂತು. ಸಿರಿಯಾದ ಹೋಮ್ಸ್ ಪಟ್ಟಣದಲ್ಲಿದ್ದ ಈಕೆಯ ಕುಟುಂಬದಲ್ಲಿ ಯಾರೂ ಬದುಕುಳಿದಿಲ್ಲ. ಸರ್ವಾಧಿಕಾರಿ ಅಸ್ಸಾದ್ ಮತ್ತು ಬಂಡುಕೋರರ ಮಧ್ಯೆ ನಡೆದ ಯುದ್ಧದಲ್ಲಿ ಎಲ್ಲರೂ ಖಲಾಸ್. ದೂರದ ಇಜಿಪ್ಟ್ ದೇಶದಲ್ಲಿ ಓದುತ್ತಿದ್ದ ಈಕೆ ಬಚಾವಾಗಿದ್ದಾಳೆ. ಹಾಗಾಗಿ ಈಕೆಯ ನಿಶ್ಚಿತಾರ್ಥದಲ್ಲಿ, ಮದುವೆಯಲ್ಲಿ ಮತ್ತೆ ಯಾವದೇ ಸಂಭ್ರಮಗಳಲ್ಲಿ ಪಾಲ್ಗೊಳ್ಳಲು ಈಕೆಯ ಕಡೆಯವರೂ ಯಾರೂ ಇಲ್ಲ.

ನನಗೆ ಬಹಳ ದುಃಖವಾಯಿತು. ಕೆಲವೇ ಕ್ಷಣಗಳ ಹಿಂದೆ ಆಕೆಯ ಪರಿಚವಾಗಿದ್ದು ಅದೆಷ್ಟು ಖುಷಿಯಾಗಿತ್ತು. ಒಬ್ಬರ ಭಾಷೆ ಒಬ್ಬರಿಗೆ ಬರುತ್ತಿರಲಿಲ್ಲ. ಒಬ್ಬರು ಮಾತಾಡುವಾಗ ಇನ್ನೊಬ್ಬರಿಗೆ ತುಂಬಾ ತಮಾಷೆಯನ್ನಿಸುತ್ತಿತ್ತು. ನಾಚುತ್ತಲೇ, ಒಂದು ತರಹ ಮುಜುಗರ ಪಡುತ್ತಲೇ ಮಾತಾಡಿ, ಪರಿಚಯ ಮಾಡಿಕೊಂಡು ಆತ್ಮೀಯರಾಗಿಬಿಟ್ಟಿದ್ದೆವು. ಅದೆಲ್ಲ ಸಂತೋಷ ಈಗ ಇಲ್ಲ. ಈಗ ವಿಪರೀತ ದುಃಖ, ಸುಡುವ ಹಾಳು ಸಂಕಟ.

ಆಕೆಗೆ ಏನೋ ಒಂದು ರೀತಿಯ ಸಮಾಧಾನ ಹೇಳಿದೆ. ಆಕೆ ಮಾತ್ರ ಸ್ಥಿತಪ್ರಜ್ಞಳಂತೆ ಕೇಳಿಸಿಕೊಂಡಳು. ನಾನು ಸಂತಾಪ ವ್ಯಕ್ತಪಡಿಸಿದ್ದು ಜಾಸ್ತಿ ತಿಳಿದ ಹಾಗೆ ಕಾಣಲಿಲ್ಲ. ನಾನು ಮತ್ತೆ ಮತ್ತೆ ಹೇಳುತ್ತಲೇ ಇದ್ದೆ. 'I am so sorry to hear all this. This is so terrible. I just can't believe such a thing can happen to anybody. I am so sorry, dear!'

ನನ್ನ ಮಾತುಗಳು ಖಾಲಿಯಾದಾಗ ಆಕೆ ಒಂದೇ ಮಾತು ಹೇಳಿದಳು. ಅದನ್ನು ಕೇಳಿದ ನಾನು ಮಾತ್ರ ದಂಗಾಗಿಹೋದೆ.

'ಎಲ್ಲ ಅಲ್ಲಾಹುವಿನ ಮರ್ಜಿ. ಮಕ್ತೂಬ್! ಅಲ್ಲಾಹುವಿಗೆ ಏನು ಸರಿಯನ್ನಿಸುತ್ತದೆಯೋ ಅದೇ ಆಗುತ್ತದೆ. ಅದನ್ನು ಎಲ್ಲರೂ ಒಪ್ಪಲೇಬೇಕು. ಎಲ್ಲ ಅಲ್ಲಾಹುವಿನ ಮರ್ಜಿ. ಮಕ್ತೂಬ್! ಎಲ್ಲ ವಿಧಿ!' ಅಂದಳು. ತನ್ನ ಸಹಜ ಮುಗಳ್ನಗೆ ಕೂಡ ಬೀರಿದಳು. ಅವುಗಳ ಹಿಂದೆ ಅದೆಷ್ಟು ದುಃಖವಿತ್ತೋ!?

ಈ ಕಥೆ ಹೇಳಿದವ ಜಾನ್. ನನ್ನ ಹಿರಿಯ ಮಿತ್ರ. ಕೊಲೊರಾಡೊದ ಡೆನ್ವರ್ ಶಹರದಲ್ಲಿ ವೈದ್ಯ. ಈಗ ಕೆಲವು ತಿಂಗಳ ಹಿಂದೆ ಟರ್ಕಿ ದೇಶಕ್ಕೆ ಪ್ರವಾಸ ಹೋಗಿಬಂದನಂತೆ. ಆಗ ಆದ ಕಥೆ. ಜಾನ್ ನನಗೆ ಕಥೆ ಹೇಳುತ್ತಿದ್ದಾಗ ಆತನ ಪತ್ನಿ ಆನ್ನಿ (Annie) ಅವನ ಪಕ್ಕದಲ್ಲಿ ಕೂತಿದ್ದಳು. ಆಕೆ ದುಃಖದಿಂದ ಬಿಕ್ಕಿದಳು. ಸಂತೈಸುವವರ ಹಾಗೆ ಜಾನ್ ಆಕೆಯ ಮುಂಗೈ ಒತ್ತಿದ. ಆಕೆ ಅವನ ಎದೆಯಲ್ಲಿ ಮುಖ ಹುಗಿಸಿ ಮತ್ತೆ ಬಿಕ್ಕಿದಳು. ನಾನು ನೋಡುತ್ತಲೇ ಉಳಿದೆ.

ನನಗೆ ಅನ್ನಿಸಿದ್ದು ಇಷ್ಟು. 'ಆ ಸಿರಿಯಾದ ಯುವತಿಯಂತೆ ಎಲ್ಲವೂ ದೇವರ ಇಚ್ಛೆ ಅಂತ ಹೇಳುವ ವಿವೇಕ ನಮಗೆ ಯಾವಾಗ ಬರುತ್ತದೆ? ದೇವರು ಅಂತಾದರೂ ಅನ್ನಿ ಅಥವಾ ಯಾವದೋ ಒಂದು ಅಗೋಚರ ಶಕ್ತಿ ಅನ್ನಿ ಅಥವಾ ವಿಧಿ ಅಂತಲೇ ಅಂದುಬಿಡಿ. ಓಕೆ. ಆದರೆ ಅಂತಹ ಅಚಲ (unshakable) ಶ್ರದ್ಧೆ ಬರಲು ಸಾಧ್ಯವೇ? ಅಂತಹ ಶ್ರದ್ಧೆಯೇ ತಾನೇ ಎಷ್ಟೋ ಜನರನ್ನು ಇಂದೂ ಜೀವಂತವಾಗಿ ಇಟ್ಟಿರುವದು? ಅದಿಲ್ಲದಿದ್ದರೆ ಅಷ್ಟೇ ಮತ್ತೆ!'

ಅಂತಹ ಶ್ರದ್ಧೆಯುಳ್ಳವರು ಬಹಳ ಕಡಿಮೆ. ಎಂತಹ ಭಕ್ತರೂ ಸಹ ತಮಗೆ ಸಹ್ಯವಾಗದ್ದು ಆಗಿಹೋದಾಗ ದೇವರಿಗೇ ಶಾಪ ಹಾಕೇಬಿಡುತ್ತಾರೆ. 'ದೇವರಾಟ ತಪ್ಪು. ನಂಬಿದ ದೇವರು ದ್ರೋಹ ಮಾಡಿದ,' ಅಂದುಬಿಡುತ್ತಾರೆ. ಅದು ಒಂದು ರೀತಿಯ ignorance as well as arrogance.

ಜಾನ್ ಈ ಕಥೆ ಹೇಳುವ ದಿನಗಳಲ್ಲೇ ಒಂದು ಪುಸ್ತಕ ಓದುತ್ತಿದ್ದೆ. ಆ ಪುಸ್ತಕ - Revealing Maya. ಅದ್ವೈತ ವೇದಾಂತದ ತಿರುಳನ್ನು ಕಥೆಯ ಮೂಲಕ ಹೇಳುವ ಒಂದು ಒಳ್ಳೆಯ ಪ್ರಯತ್ನ. ಆ ಪುಸ್ತಕ ಓದುತ್ತಿರುವಾಗ ಕೆಳಗಿನ ವಾಕ್ಯಗಳನ್ನು highlight ಮಾಡಿಕೊಂಡಿದ್ದೆ. ಸಿರಿಯನ್ ಯುವತಿಯ ಕಥೆ ಕೇಳಿದಾಗ ಅವೇ ಮತ್ತೆ ನೆನಪಿಗೆ ಬಂದವು. ಮಕ್ತೂಬ್! ಮಕ್ತೂಬ್ ಅಂದರೆ ವಿಧಿ, ವಿಧಿಲಿಖಿತ ಅಂತ ಅರ್ಥ.

“Okay, let’s get to the arrogance part. I don’t see where arrogance fits in at all.” He nodded several times. “All right, you and all those who purport to believe in God claim that all is God’s will. I take this to mean that whatever happens is due to God’s will. ‘Thy will be done Lord.’ Don’t you agree?” I thought that I could see where he was going with this. I said, “Sure, Thy will be done.” “So why is it that whenever something you consider bad or not to your liking occurs, you question God’s will? Is it not arrogance on your part to question God’s will? I see it as arrogance any time that you presume to know better than God how things should be.”

ಅಂತರ್ಯುದ್ಧದಲ್ಲಿ ಸರ್ವನಾಶವಾದ ಹೋಮ್ಸ್ ಪಟ್ಟಣದ ಒಂದು ಮನಕಲಕುವ ದೃಶ್ಯ

Friday, September 04, 2015

ಕ್ಲಾಸ್ ಮುಗಿದ ನಂತರ 'ಎಣ್ಣೆ ಭಾಗ್ಯ' ಕರುಣಿಸಿದ್ದ ವಿಶಿಷ್ಟ ಮೇಡಂ... (ಶಿಕ್ಷಕರ ದಿನಾಚರಣೆಯ ಸ್ಪೆಷಲ್)

ಇವತ್ತು ಸೆಪ್ಟೆಂಬರ್ ಐದು. ಶಿಕ್ಷಕರ ದಿನಾಚರಣೆ. ಬಾಲ್ಯದಲ್ಲಿ 'ಸಿಕ್ಕಸಿಕ್ಕವರ' ದಿನಾಚರಣೆ ಅಂತ ಆಡಿಕೊಂಡು ಜೋಕ್ ಮಾಡುತ್ತಿದ್ದೆವು. ಶಾಂತಂ ಪಾಪಂ! ಬಾಲವಾಡಿಯಿಂದ ಹಿಡಿದು ಇಂದಿನವರೆಗೆ ಕಮ್ಮಿ ಕಮ್ಮಿಯಂದರೂ ಮುನ್ನೂರಕ್ಕೂ ಹೆಚ್ಚು ಜನ ಶಿಕ್ಷಕ, ಶಿಕ್ಷಕಿಯರು ಪಾಠ ಮಾಡಿಬಿಟ್ಟಿದ್ದಾರೆ. ಅವರಲ್ಲಿ ಒಂದಷ್ಟು ಜನ ಬೇರೆ ಬೇರೆ ಕಾರಣಕ್ಕೆ ಸದಾ ನೆನಪಾಗುತ್ತಲೇ ಇರುತ್ತಾರೆ. ಅಂತವರಲ್ಲಿ ಈ ವರ್ಷದ ಶಿಕ್ಷಕರ ದಿನಾಚರಣೆಯಂದು ನೆನಪಾದವರು ಡಾ. ಜೇನ್ ಮಾರ್ಟನ್ (Dr. Jane Morton). ನಾವು ಅಮೇರಿಕಾದ ಬಾಸ್ಟನ್ನಿನ Suffolk University ಯಲ್ಲಿ MBA ಮಾಡುತ್ತಿದ್ದಾಗ ಅಕೌಂಟೆನ್ಸಿ (accountancy) ಪಾಠ ಮಾಡಿದವರು.

ಡಾ. ಜೇನ್ ಮಾರ್ಟನ್ ಯಾಕೆ ನೆನಪಾದರು ಅಂತ ನೋಡಿದರೆ ಅದರ ಹಿಂದೆ ಅಕೌಂಟೆನ್ಸಿ ವಿಷಯದಲ್ಲಿನ ನಮ್ಮ ಇತಿಹಾಸ, ದುಃಸಪ್ನ ಇತ್ಯಾದಿಗಳ ಕಥೆ ಹೇಳಬೇಕಾಗುತ್ತದೆ. ಹೇಳಲು ಕೂತಿದ್ದೇವೆ. ಕೇಳಿ.

ಡಾ. ಜೇನ್ ಮಾರ್ಟನ್ (Dr. Jane Morton)

ಅದು MBA ಡಿಗ್ರಿಯ ಮೂರನೇ ಸೆಮಿಸ್ಟರ್. ಮೊದಲೆರೆಡು ಸೆಮಿಸ್ಟರಿನಲ್ಲಿ ತಳಪಾಯದ (foundation) ತರಹದ ಎಲ್ಲಾ ವಿಷಯಗಳು (courses) ಮುಗಿದಿದ್ದವು. ಮೂರನೇ ಸೆಮಿಸ್ಟರಿನಿಂದ core ವಿಷಯಗಳು. ಮೊದಲನೇ core ವಿಷಯದ ಕೋರ್ಸೇ ಅಕೌಂಟೆನ್ಸಿ.

ಅಕೌಂಟೆನ್ಸಿ ಅಂದರೆ ಮೊದಲಿನಿಂದಲೂ ಒಂದು ತರಹದ ಆಸಕ್ತಿ, ಕುತೂಹಲ ಮತ್ತು ಕೊಂಚ ಮಟ್ಟದ ಆತಂಕ ಕೂಡ. ಮೊದಲಿಂದಲೂ ಲೆಕ್ಕದಲ್ಲಿ ಆಸಕ್ತಿ. ಹಾಗಾಗಿ ಸದಾ ಅಂಕೆ ಸಂಖೆಗಳೊಂದಿಗೆ ಆಟವಾಡುವ ಅಕೌಂಟೆಂಟ್ ಮಂದಿಯ ವಿಷಯವಾದ ಅಕೌಂಟೆನ್ಸಿ ಕಲಿಯಬೇಕು ಅಂತ ಆಸಕ್ತಿ, ಕುತೂಹಲ ಇತ್ತು. ಆತಂಕ ಯಾಕೆಂದರೆ ಮೊದಲೊಂದು ಸಲ ಅಕೌಂಟೆನ್ಸಿ ಕಲಿಯುವ ಸಂದರ್ಭ ಬಂದಾಗ ಅದು ತಲೆಗೆ ಸರಿಯಾಗಿ ಹತ್ತಿರಲೇ ಇಲ್ಲ. ಒಂದು ತರಹದ ಅಳುಕನ್ನು, ನನ್ನ ಬಗ್ಗೆ ನನಗೇ ಒಂದು ತರಹದ ಅಪನಂಬಿಕೆಯನ್ನು ಬಿಟ್ಟುಹೋಗಿತ್ತು. 

ನಮ್ಮ ಜಮಾನದಾಲ್ಲಿ ಅಂದರೆ ೧೯೮೬-೮೭ ರ ಸುಮಾರಿಗೆ ನೀವು ಒಂಬತ್ತನೇ ಕ್ಲಾಸ್ ಓದಿದ್ದರೆ ನಿಮಗೆ ನೆನಪಿರಬಹುದು. ಗಣಿತ ವಿಷಯದಲ್ಲಿ, ಅಂಕಗಣಿತದ (arithmetic) ಭಾಗದಲ್ಲಿ, ಅಕೌಂಟೆನ್ಸಿ ಬಗ್ಗೆ ಒಂದು ಅಧ್ಯಾಯ ತುರುಕಿಬಿಟ್ಟಿದ್ದರು. ಒಂದು ಸಣ್ಣ ಅಧ್ಯಾಯದಲ್ಲಿ asset, liability, debit, credit, shares, shareholders, dividend, debenture etc. ಅಂತ ಏನೇನೋ ಹಾಕಿಬಿಟ್ಟಿದ್ದರು. ಮತ್ತೆ ಆ ಪಾಠ ಬರೆದ ಮಹಾನುಭಾವ ಯಾರಾಗಿದ್ದರೋ! ಮೊದಲೇ ಸರಕಾರಿ ಪಠ್ಯ ಪುಸ್ತಕಗಳ ಗುಣಮಟ್ಟ ಅಷ್ಟಕಷ್ಟೇ. ಅದರಲ್ಲೂ ಈ ಅಕೌಂಟೆನ್ಸಿ ಇದ್ದ ಪಾಠವಂತೂ ಸಿಕ್ಕಾಪಟ್ಟೆ ಖರಾಬಾಗಿತ್ತು. ಓದಿದರೆ ಏನೂ ತಿಳಿಯಲಿಲ್ಲ. ಶಿವನೇ ಶಂಭುಲಿಂಗ!

ಶಾಲೆಯಲ್ಲಿ ಗಣಿತ ಪಾಠ ಮಾಡುತ್ತಿದ್ದ ಅತ್ತೂರ್ ಮೇಡಂ (ದಳವಾಯಿಪಟ್ಟಣ ಮೇಡಂ) ಏನೋ ಒಂದು ರೀತಿಯಲ್ಲಿ ಅಕೌಂಟೆನ್ಸಿ ಪಾಠ ಮಾಡಿದ್ದರು. ಅವರು ಗಣಿತದಲ್ಲಿ BSc ಮಾಡಿದವರು. MSc ಕೂಡ ಮಾಡಿದ್ದರೇ? ನೆನಪಿಲ್ಲ. ಆದರೆ ಅಕೌಂಟೆನ್ಸಿ ತಿಳಿದಿರಲು ಅವರು ಕಾಮರ್ಸ್ ಓದಿದವರಲ್ಲ. ಹಾಗಾಗಿ ಅಕೌಂಟೆನ್ಸಿ ಅವರ ಸ್ಪೆಷಾಲಿಟಿ ಕೂಡ ಆಗಿರಲಿಲ್ಲ. ಅತ್ತೂರ್ ಮೇಡಂ ಡಿಗ್ರಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಅಂತ ಬೇರೆ ಕಥೆಯಿತ್ತು. ಅದು ಸತ್ಯಕಥೆಯೋ ದಂತಕಥೆಯೋ ಗೊತ್ತಿಲ್ಲ. ಯಾಕೆಂದರೆ ನಮ್ಮ ಶಾಲೆಯಲ್ಲಿ ಅನೇಕ ಶಿಕ್ಷಕ ಶಿಕ್ಷಕಿಯರ ಬಗ್ಗೆ ಅಂತಹ ದಂತಕಥೆಗಳು ಸಿಕ್ಕಾಪಟ್ಟೆ ಇದ್ದವು. ಅಂತಹ ಕಥೆಗಳು ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತಲೇ ಇದ್ದವು. ಒಂದೆರೆಡು ಮಜಾ ಕಥೆಗಳನ್ನು ಹೇಳುತ್ತೇನೆ, ಕೇಳಿ. ಒಬ್ಬ ಮಾಸ್ತರರು ನೀಟಾಗಿ ಗಡ್ಡ ಬಿಟ್ಟಿದ್ದರು. ಅದರ ಹಿಂದೆ ಕೂಡ ಒಂದು ಕಥೆಯಿತ್ತು. ಅವರ ಎನ್ಕೌಂಟರ್ ಸ್ಪೆಷಲಿಸ್ಟ್ ವರ್ತನೆಯಿಂದ ಕ್ರುದ್ಧಗೊಂಡಿದ್ದ ಯಾರೋ ರೌಡಿ ಟೈಪಿನ ಮಾಜಿ ವಿದ್ಯಾರ್ಥಿಗಳು ಅವರ ಮುಖಕ್ಕೆ ಕುರುಪು (ರೇಜರ್) ಎಳೆದಿದ್ದರಂತೆ. ಅದರ ಕಲೆ ಕಾಣಬಾರದು ಅಂತ ಗಡ್ಡ ಬಿಟ್ಟಿದ್ದರಂತೆ. ಅಬ್ಬಾ! ಮುಂದೊಮ್ಮೆ ಅವರು ಗಡ್ಡ ಬೋಳಿಸಿಕೊಂಡು ಕ್ಲೀನ್ ಕಿಟ್ಟಪ್ಪನಾದಾಗ ಮುಖದ ಮೇಲೆ ಏನೂ ಕುರುಪು ಮತ್ತೊಂದರ ಕಲೆ ಕಂಡುಬಂದಿರಲಿಲ್ಲ. ಸುಮ್ಮನೇ ಚೌಕ್ ಗುಳಿಗೆ ಉರುಳಿಸಲು ನಮ್ಮ ಶಾಲೆಯ ಕಿತಾಪತಿ ವಿದ್ಯಾರ್ಥಿಗಳದು ಎತ್ತಿದ ಕೈ. ಇನ್ನೊಬ್ಬ ಖತರ್ನಾಕ್ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ತಮ್ಮ ಮೋಟಾರ್ ಬೈಕಿನ ಹಿಂದಿರುವ ಸಾಮಾನಿನ ಬಾಕ್ಸಿನಲ್ಲಿ ಒಂದು ಸೈಕಲ್ ಚೈನ್ ಇಟ್ಟಿರುತ್ತಾರೆಂದೂ ಮತ್ತು ರೌಡಿಗಳು ಬಂದರೆ ಅದರಲ್ಲೇ ಬಾರಿಸಿ, ಓಡಿಸಿ, ತಮ್ಮ ಸ್ವರಕ್ಷಣೆ ಮಾಡಿಕೊಳ್ಳುತ್ತಾರೆಂದೂ ಕೂಡ ಪ್ರತೀತಿ ಇತ್ತು. ಇವೆಲ್ಲ ಸತ್ಯಕಥೆಗಳೋ ಅಥವಾ urban legend ಮಾದರಿಯ ದಂತಕಥೆಗಳೋ ಗೊತ್ತಿಲ್ಲ. ನನ್ನ ಪ್ರಕಾರ ದಂತಕಥೆಗಳು. ಆದರೆ ಸತ್ಯಕಥೆಗಳಲ್ಲ ಅಂತ disprove ಮಾಡಲೂ ಸಾಧ್ಯವಿಲ್ಲ. ಅತ್ತೂರ್ ಟೀಚರ್ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದರ ಕಥೆಯೂ ಹೀಗೇ ಇತ್ತೋ ಏನೋ ಗೊತ್ತಿಲ್ಲ. ಗೋಲ್ಡ್ ಮೆಡಲ್ ಇರಲಿ ಬಿಡಲಿ ಅತ್ತೂರ್ ಟೀಚರ್ ಮಾತ್ರ ಗಣಿತದ ಒಳ್ಳೆ ಶಿಕ್ಷಕಿ.

ಅತ್ತೂರ್ ಮೇಡಂ (೨೦೧೨ ರಲ್ಲಿ) (ಚಿತ್ರ ಕೃಪೆ: ಮಿತ್ರ ಸುನೀಲ ಜೋಶಿ)

ಅದೇನು ನಮ್ಮ ಬಡ್ಡ ತಲೆಯ ಕರ್ಮವೋ ಗೊತ್ತಿಲ್ಲ. ಒಟ್ಟಿನಲ್ಲಿ ಅತ್ತೂರ್ ಟೀಚರ್ ಹೇಗೆ ಪಾಠ ಮಾಡಿದರೂ ಒಂಬತ್ತನೇ ತರಗತಿಯ ಅಕೌಂಟೆನ್ಸಿ ನಮಗೆ ಬರೋಬ್ಬರಿ ಅರ್ಥವಾಗಲೇ ಇಲ್ಲ. ಅದೇನು asset, ಅದೇನು liability, ಎಲ್ಲಿ ಡೆಬಿಟ್ ಮಾಡಬೇಕು, ಎಲ್ಲಿ ಕ್ರೆಡಿಟ್ ಹಾಕಬೇಕು ಅಂತ ಸಿಕ್ಕಾಪಟ್ಟೆ ಗೊಂದಲ. ಮತ್ತೆ ಅದು ಸಿಲೆಬಸ್ಸಿನ ಕೊನೆಯಲ್ಲಿ ಇತ್ತು. ಮೊದಲೇ ಅತ್ತೂರ್ ಟೀಚರ್ portion ಮುಗಿಸುವದು ಭಾಳ ತಡವಾಗಿ. ಎಲ್ಲವನ್ನೂ ಉತ್ತಮವಾಗಿ, ವಿವರವಾಗಿ ಪಾಠ ಮಾಡುತ್ತ ಪರೀಕ್ಷೆಯ ಹಿಂದಿನ ದಿನದ ವರೆಗೂ portion ಎಳೆದುಬಿಡುತ್ತಿದ್ದರು. ಹೀಗಾಗಿ ಅಕೌಂಟೆನ್ಸಿ ಪಾಠವನ್ನು ಗಡಿಬಿಡಿಯಲ್ಲಿ ಸಾರಿಸಿಬಿಟ್ಟಿದ್ದರು. ಹಾಗಂತ ನಮ್ಮ ಭಾವನೆ. ನಮಗೆ ವಿಷಯ ಅರ್ಥವಾಗದಿದ್ದರೆ ಅದನ್ನು ಟೀಚರ್ ಮೇಲೆ ಯಾಕೆ ಹಾಕೋಣ!?

ಮತ್ತೆ ನಾವು ಲಾಸ್ಟ್ ಬೆಂಚಿನ ಉಡಾಳ ಮಂದಿ. ನನ್ನ ದೋಸ್ತರೆಲ್ಲ ಒಬ್ಬರಿಗಿಂತ ಒಬ್ಬರು ಖತರ್ನಾಕ್ ಲಫಂಗರೇ. ಸಿಕ್ಕಾಪಟ್ಟೆ ಮಷ್ಕಿರಿ, ಬದ್ಮಾಶಿ ಮಾಡುವವರೇ. ಆದರೆ ಯಾರೂ ಕೆಟ್ಟವರಲ್ಲ, ದುಷ್ಟರಲ್ಲ. ಬರೀ ಹುಡುಗಾಟ, ಮಂಗ್ಯಾತನ ಅಷ್ಟೇ. ಆ ಒಂಬತ್ತನೇ ಕ್ಲಾಸಿನ ಅಕೌಂಟೆನ್ಸಿ ವಿಷಯ ಪಾಠ ಮಾಡುತ್ತಿರುವಾಗ 'asset' ಅಂತ ಅತ್ತೂರ್ ಟೀಚರ್ ಅದೇನು ಒಂದು ಮಾತು ಅಂದರೋ ಈ ಪುಣ್ಯಾತ್ಮ ನನ್ನ ದೋಸ್ತನೊಬ್ಬ, 'asset!! asset ಅಂದ್ರ ಆಸ್ತಿ. ಆಸ್ತಿ ಯಾರ ಕಡೆ ಭಾಳ ಮಸ್ತ ಐತಿ ಹೇಳು ನೋಡೋಣ ಮಹೇಶಾss??' ಅಂತ ವಿಚಿತ್ರವಾಗಿ ಕೇಳಿ, ಕೆಟ್ಟಾಕೊಳಕ ರೀತಿಯಲ್ಲಿ ಎರಡೂ ಕೈಗಳನ್ನು ಎದೆ ಮುಂದೆ ರೌಂಡ್ ರೌಂಡ್ ತಿರುಗಿಸಿ, 'ಕಲಶಪೂಜೆ' ಅರ್ಥಾತ್ ಕುಚ ಮರ್ದನ ಮಾಡಿದ action ಮಾಡಿ, ಹಾವಭಾವ ತೋರಿಸಿ, ಕಣ್ಣು ಹೊಡೆದುಬಿಟ್ಟ. ಸುಲಭವಾಗಿ ಹಿಂದಿನ ಬೆಂಚಿನ ಯಾರಿಗೂ ಅವನ ಮಾತಿನ 'ಅರ್ಥ' ತಿಳಿಯಲಿಲ್ಲ. ಅವನೇ ಸಿಕ್ಕಾಪಟ್ಟೆ ನಗುತ್ತ ಹೇಳಿದ. 'ಅಕಿನನೋ ಮಾರಾಯಾ! ಬಿ ಕ್ಲಾಸಿನ ಅನಿತಾ ರಾಜ್! ಅಕಿ ಕಡೆ ಹೋಗಿ, 'ಏ, ಅನಿತಾ ರಾಜ್! ನಿನ್ನ twin assets  ಬಗ್ಗೆ combined study ಮಾಡೋಣ ಬಾರವಾ. ಸ್ವಲ್ಪ ಹೆಲ್ಪ್ ಮಾಡು. ಈ ಅಕೌಂಟೆನ್ಸಿ asset ಅಂದ್ರ ಏನು ಅಂತಲೇ ತಿಳಿವಲ್ತು ನೋಡವಾ. asset ಅಂದ್ರೇನು? ಗೊತ್ತೈತಿ?' ಅಂತ ಕೇಳಬೇಕು ನೋಡಪಾ. ಅಕಿಗೆ ಕೆಟ್ಟ ಕಾಡಬೇಕು!' ಅಂತ ಬಿ ಕ್ಲಾಸಿನ ಒಬ್ಬ ಸಭ್ಯ, ಆದರೆ ಖತರ್ನಾಕ್ ಬ್ಯೂಟಿ ಮತ್ತು with well endowed assets ಇದ್ದ ಸುಂದರಿಯ ಬಗ್ಗೆ ಹೇಳಿ ಪೆಕಪೆಕಾ ಅಂತ ನಕ್ಕ. ಜೊತೆಗೆ 'ದದದೈ ದದೈ  ದದೈ ಪ್ಯಾರ್ ಹೋಗಯಾ!' ಅಂತ ಹಾಡು ಬ್ಯಾರೆ ಹಾಡಿಬಿಟ್ಟ. ಶುದ್ಧ ತರಲೆ ಆಸಾಮಿ ಆತ. ದೊಡ್ಡ ಲೆವೆಲ್ಲಿನ ಭಯಂಕರ ಬದ್ಮಾಶ್. ಅವನ ಮಾತು ಕೇಳಿದ, ಅವನ ಚಿತ್ರವಿಚಿತ್ರ ಹಾವಭಾವ ನೋಡಿದ ನಮಗೆಲ್ಲ ಸಿಕ್ಕಾಪಟ್ಟೆ ನಗೆ. ಬಿದ್ದು ಬಿದ್ದು ನಕ್ಕಿದ್ದೆವು. ಅದೇ ವರ್ಷ ಕೆಲ ತಿಂಗಳ ಮೊದಲು 'ಇಲ್ಜಾಂ' ಅಂತ ಒಂದು ಹಿಂದಿ ಸಿನಿಮಾ ಬಂದಿತ್ತು. ಅದರಲ್ಲಿ ಅಂದಿನ ಸಕತ್ ಹಾಟ್ ನಟಿ ಅನಿತಾ ರಾಜಳನ್ನು ನೋಡಿದ್ದೇ ನೋಡಿದ್ದು ಆಕೆ ನಮ್ಮ ಕನಸಿನ ಕನ್ಯೆಯಾಗಿಬಿಟ್ಟಳು. ಬಿ ಕ್ಲಾಸಿನಲ್ಲಿದ್ದ ನಮ್ಮ ಶಾಲೆಯ ಲೋಕಲ್ ಸುಂದರಿ ಜಾಸ್ತಿ ಏನೂ ಅನಿತಾ ರಾಜ್ ಇದ್ದಂಗೆ ಇರಲಿಲ್ಲ. ಆದರೆ ನಮಗೇನು? ಯಾರಿಗಾದರೂ ಏನಾದರೂ ಒಂದು ನಾಮಕರಣ ಮಾಡಿ, ಕಾಡಿಸಿ ಮಷ್ಕಿರಿ ಮಾಡುವದು ನಮ್ಮ ಧರ್ಮ. ಮಾಡಿಸಿಕೊಳ್ಳುವದು ಅವರ ಕರ್ಮ. ಹಾಗಾಗಿ ಇದ್ದ ಬಿದ್ದ ಬಿ ಕ್ಲಾಸಿನ ಸುಂದರಿಗೇ ಅನಿತಾ ರಾಜ್ ಅಂತ ಹೆಸರಿಟ್ಟು, ಆಕೆ ಕಂಡಾಗೊಮ್ಮೆ 'ದದದೈ ದದೈ  ದದೈ ಪ್ಯಾರ್ ಹೋಗಯಾ!' ಅಂತ ನಮ್ಮಲ್ಲೇ ಹಾಡಿಕೊಂಡು ಮಸ್ತಿ, ಮಷ್ಕಿರಿ ಮಾಡುತ್ತಿದ್ದೆವು. ಆಕೆಗೆ ಗೊತ್ತಿರಲಿಕ್ಕಿಲ್ಲ ಬಿಡಿ. ಮತ್ತೆ ಆಕೆ ಸಭ್ಯರ ಮನೆಯ ಒಳ್ಳೆ ಹುಡುಗಿ. ದೇವರು ಖತರ್ನಾಕ ರೂಪ, ಸಿಕ್ಕಾಪಟ್ಟೆ ಒಳ್ಳೆ ಅಂಗಸೌಷ್ಟವ, ತೊನೆಯುತ್ತಿರುವ ದೇಹಸಿರಿ ಕರುಣಿಸಿದ್ದ. ಪಾಪ ಆಕೆಯೇನು ಮಾಡಿಯಾಳು? ನಮ್ಮಂತವರ ಕಣ್ಣು ಕುಕ್ಕುತ್ತಿತ್ತು ಅಷ್ಟೇ! ರಾತ್ರಿಯಲ್ಲೂ ಕೂಲಿಂಗ್ ಗ್ಲಾಸ್ ಹಾಕಿಕೊಂಡು ನೋಡಬೇಕು ಆ ಮಟ್ಟಿಗೆ ಚಮಕಾಯಿಸುತ್ತಿದ್ದಳು ನಮ್ಮ ಬ್ಯಾಚಿನ ಅನಿತಾ ರಾಜ್. ಇಲ್ಜಾಂ ಚಿತ್ರದಲ್ಲಿ ಅನಿತಾ ರಾಜಳನ್ನು ಈ ಕೆಳಗಿನ ಹಾಡಿನಲ್ಲಿ ನೋಡಿ ನಾವೆಲ್ಲಾ ಫುಲ್ ಖುಷ್.



ಅತ್ತೂರ್ ಟೀಚರ್ ಆ ಅಕೌಂಟೆನ್ಸಿ ಕಲಿಸಿದ್ದೇ ಒಂದೋ ಎರಡೋ ಪಿರಿಯಡ್ಡುಗಳಲ್ಲಿ. ಅವುಗಳಲ್ಲೂ ನಾವು ಟೀಚರ್ asset ಅಂದಾಗೊಮ್ಮೆ ಕಿಸಿಕಿಸಿ ನಗುತ್ತ, ಈ ಪುಣ್ಯಾತ್ಮ ದೋಸ್ತ ಕೀರಲು ದನಿಯಲ್ಲಿ, ಸಣ್ಣಗೆ ಗುಣುಗುತ್ತಿದ್ದ 'ದದದೈ ದದೈ ದದೈ ಪ್ಯಾರ್ ಹೋಗಯಾ!' ಹಾಡನ್ನು ಕೇಳಿ, ದೊಡ್ಡದಾಗಿ ಬರುತ್ತಿದ್ದ ನಗುವನ್ನು ಹೇಗೋ ಮಾಡಿ ತಡೆದುಕೊಂಡು, ನಮ್ಮ ಬ್ಯಾಚಿನ ಬಿ ಕ್ಲಾಸಿನ ಅನಿತಾ ರಾಜಳ twin assets  ಬಗ್ಗೆ ತಲೆ ಕೆಡಿಸಿಕೊಂಡು ಹಗಲುಗನಸು ಕಾಣುತ್ತಿದ್ದರೆ ಈ ಕಡೆ ಅತ್ತೂರ್ ಮೇಡಂ ಅಕೌಂಟೆನ್ಸಿ ಕಲಿಸುವದನ್ನು ಗಡಿಬಿಡಿಯಲ್ಲಿ ಮುಗಿಸಿ, ಗುಡಿಸಿ, ಗುಂಡಾಂತರ ಮಾಡಿ, ಸಾರಿಸಿ ಹಾಕಿಬಿಟ್ಟಿದ್ದರು. ತಲೆ ತುಂಬಾ ಬೇರೆ ಯಾವದೋ asset ಗಳ ಖಯಾಲಿಯೇ ತುಂಬಿರುವಾಗ ಅಕೌಂಟೆನ್ಸಿ asset ಇತ್ಯಾದಿ ಎಲ್ಲ ಎಲ್ಲಿ ತಿಳಿಯಬೇಕು!?

ಇನ್ನು ನಮ್ಮ ಮನೆಯಲ್ಲಿ ಎಲ್ಲರೂ ಗಣಿತದಲ್ಲಿ ತಕ್ಕ ಮಟ್ಟಿನ ಬುದ್ಧಿವಂತರೇ. ಆದರೆ ಎಲ್ಲರೂ ಸೈನ್ಸ್, ಆರ್ಟ್ಸ್, ಇಂಜಿನಿಯರಿಂಗ್ ಪದವೀಧರರು. ಯಾರಿಗೂ ಕಾಮರ್ಸ್ ಗೊತ್ತಿಲ್ಲ. ಹಾಗಾಗಿ ಅಕೌಂಟೆನ್ಸಿ ಕಲಿಯಲು ಮತ್ಯಾರನ್ನಾದರೂ ಹಿಡಿಯೋಣ ಅಂದರೆ ಅದೂ ವರ್ಕ್ ಔಟ್ ಆಗಲಿಲ್ಲ. ಏನೋ ಎಂತೋ! ಒಟ್ಟಿನಲ್ಲಿ ಒಂದು ತರಹದಲ್ಲಿ ಓದಿಕೊಂಡು, ವಾರ್ಷಿಕ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದೆ. ಚಿಕ್ಕ ಪಾಠವಾದ್ದರಿಂದ ಬಹಳವೆಂದರೆ ಒಂದೆರೆಡು ಅಂಕಗಳ ಪ್ರಶ್ನೆ ಅಕೌಂಟೆನ್ಸಿ ಬಗ್ಗೆ ಬರಬಹುದು ಅಂತ ನಮ್ಮ ವಿಚಾರ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿದರೆ ಕೆಲವು ವರ್ಷ ಅಕೌಂಟೆನ್ಸಿ ಬಗ್ಗೆ ಯಾವದೇ ಪ್ರಶ್ನೆ ಬಂದಿರಲೂ ಇಲ್ಲ. ನಮ್ಮ ವಾರ್ಷಿಕ ಪರೀಕ್ಷೆಯಲ್ಲೂ ಹಾಗಾಗಿಬಿಟ್ಟರೆ ಸಾಕು ಅಂದುಕೊಂಡಿದ್ದೆ.

೧೯೮೭ ರ ಮಾರ್ಚಿನಲ್ಲಿ ವಾರ್ಷಿಕ ಪರೀಕ್ಷೆ ಶುರುವಾಯಿತು. ಗಣಿತದ ಪೇಪರ್ ಕೂಡ ಬಂತು. ಪ್ರಶ್ನೆ ಪತ್ರಿಕೆ ಕೈಗೆ ಬಂದ ತಕ್ಷಣ ನೋಡಿದ್ದು ಅಕೌಂಟೆನ್ಸಿ ಬಗ್ಗೆ ಪ್ರಶ್ನೆ ಇದೆಯೇ ಅಂತ. ಥತ್ ಇದರ! ಎರಡು ಮಾರ್ಕಿನ ಒಂದು ಪ್ರಶ್ನೆ ಕೇಳಿಯೇಬಿಟ್ಟಿದ್ದರು. ಏನೋ ಒಂದು scenario ಕೊಟ್ಟು ಡೆಬಿಟ್, ಕ್ರೆಡಿಟ್ ಮಾಡಿ ತೋರಿಸಿ ಅಂತ ಕೇಳಿದ್ದರು ಅಂತ ನೆನಪು. ನಮಗೆ ಮೊದಲೇ ಆ ಡೆಬಿಟ್ ಕ್ರೆಡಿಟ್ ಅಂದರೆ ಸಿಕ್ಕಾಪಟ್ಟೆ confusion. ಇರಲಿ ಅಂತ ಅದನ್ನು ಬಿಟ್ಟು ಬೇರೆ ಎಲ್ಲ ಪ್ರಶ್ನೆ ಬಿಡಿಸುತ್ತಾ ಬಂದೆ. ಕೊನೆಯಲ್ಲಿ ಅಕೌಂಟೆನ್ಸಿ ಪ್ರಶ್ನೆ ಕೂಡ ಬಿಡಿಸಿದೆ. ಸರಿಯಾಗಿ ಬಿಡಿಸಿದೆನೋ ಇಲ್ಲವೋ ಅಂತ ಅನುಮಾನ ಬಂದುಬಿಟ್ಟಿತು. ಅನುಮಾನಂ ಪೆದ್ದ ರೋಗಂ! ಎಲ್ಲ ಪ್ರಶ್ನೆಗಳನ್ನು ಬಿಡಿಸಿಯಾದ ಮೇಲೆ ಮತ್ತೂ ಸಾಕಷ್ಟು ಸಮಯ ಉಳಿದಿತ್ತು. ಅಕೌಂಟೆನ್ಸಿ ಪ್ರಶ್ನೆ ತಲೆ ತಿನ್ನುತ್ತಿತ್ತು. ಮೊದಲು ಬಿಡಿಸಿದ್ದನ್ನು ಕಾಟು ಹಾಕಿ, ಮತ್ತೆ ಹೊಸದಾಗಿ ಬಿಡಿಸಿದೆ. ಏನೋ ಸ್ವಲ್ಪ ಬದಲಾಯಿಸಿದ್ದೆ. ಮತ್ತೂ ಬೇಕಾದಷ್ಟು ಟೈಮ್ ಉಳಿದಿತ್ತು. ಆದರೆ ಆ ಪೀಡೆಯ ಅಕೌಂಟೆನ್ಸಿ ಸಮಸ್ಯೆಯನ್ನು ಸರಿಯಾಗಿ ಬಿಡಿಸಿದ್ದೇನೋ ಇಲ್ಲವೋ ಅಂತ ಖಾತ್ರಿಯಾಗುತ್ತಿರಲಿಲ್ಲ. ಸರಿಯಾಗಿ ವಿಷಯ ತಿಳಿದಿದ್ದರೆ ತಾನೇ ಗೊತ್ತಾಗುವದು? ಏನೇ ಇರಲಿ, ಶಿವಾಯ ನಮಃ ಅಂತ ಹೇಳಿ ಎರಡನೇ ಸಲ ಬಿಡಿಸಿದ್ದನ್ನೂ ಕೂಡ ಮತ್ತೆ ಕಾಟು ಹಾಕಿ ಮತ್ತೊಮ್ಮೆ ಬಿಡಿಸಿದೆ. ಹಾಗೆಲ್ಲ ಮಾಡಿದ್ದು ಭಾಳ ಅಪರೂಪ. ಒಮ್ಮೆ ಉತ್ತರ ಬರೆದೆರೆ, ಲೆಕ್ಕ ಬಿಡಿಸಿದರೆ ಅದೇ ಕೊನೆಯ ಬಾರಿ ಅನ್ನುವ ಮಾದರಿಯಲ್ಲಿ ನಮ್ಮ ಪರೀಕ್ಷೆ ತಯಾರಿ ಇರುತ್ತಿತ್ತು. ಅಷ್ಟರಲ್ಲಿ ಬಾರಿಸಿದರು. ಪರೀಕ್ಷೆಯ ಅವಧಿ ಮುಗಿಯಿತು ಅಂತ ಶಾಲೆ ಮಂದಿ ಢಣ ಢಣ ಘಂಟೆ ಬಾರಿಸಿದರು ಅಂತ. ಪೇಪರ್ ಕೊಟ್ಟು ಎದ್ದು ಬಂದೆ. ಮಧ್ಯಾನ ಗಣಿತ - ೨ (ಜಾಮಿಟ್ರಿ) ಪೇಪರ್ ಇರುತ್ತಿತ್ತು. ತಿಂಡಿ, ತೀರ್ಥ ಸೇವನೆ ಮಾಡುತ್ತ ಆ ಪರೀಕ್ಷೆಗೆ ಕೊನೆ ಘಳಿಗೆ ತಯಾರಿ ಮಾಡುತ್ತ ಉಳಿದೆ.

ಗಣಿತ ಪೇಪರ್ ಮುಗಿಸಿ ಮನೆಗೆ ಬಂದು ನೋಡಿದೆ. ಅದೇ ಮಾದರಿಯ ಅಕೌಂಟೆನ್ಸಿ ಸಮಸ್ಯೆಯನ್ನು ನೋಟ್ ಬುಕ್ಕಿನಲ್ಲಿ ಬಿಡಿಸಿದ್ದು ನೆನಪಿತ್ತು. ತೆಗೆದು ನೋಡಿದೆ. ಹಾಯ್! ಮೊದಲನೇ ಸಲ ಮಾಡಿದ್ದು ಬರೋಬ್ಬರಿ ಇತ್ತು. ನಂತರ ಎರಡು ಸಲ ತಿದ್ದಿದ್ದು ತಪ್ಪಿತ್ತು. ಒಟ್ಟಿನಲ್ಲಿ ಅಕೌಂಟೆನ್ಸಿ ಪ್ರಶ್ನೆ ಬಿಡಿಸಿದ್ದು ಶಿವಾಯ ನಮಃ ಆಗಿಹೋಗಿದೆ ಅಂತ ಖಾತ್ರಿಯಾಯಿತು. ಶಿವನೇ ಶಂಭುಲಿಂಗ! ಈ ವರ್ಷ ಗಣಿತದಲ್ಲಿ ನೂರಕ್ಕೆ ನೂರು ಗಳಿಸುವದು ದೂರದ ಮಾತು ಅಂತ ಖಾತ್ರಿಯಾಯಿತು. ಹಾಳಾಗಿ ಹೋಗಲಿ. ಹೋದರೆ ಹೋಗುವದು ಎರಡು ಮಾರ್ಕು. ನೂರಕ್ಕೆ ತೊಂಬತ್ತೆಂಟು ಬರುತ್ತದೆ. ಅದರ ಕೆಳಗೆ ಗಣಿತದಲ್ಲಿ ಮಾರ್ಕು ತೆಗೆದಿದ್ದೇ ಇಲ್ಲ. ಹಾಗಂತ ಗಣಿತದಲ್ಲಿ ದೊಡ್ಡ ಮೇಧಾವಿ ಗೀಧಾವಿ ಏನೂ ಅಲ್ಲ. ಆಸಕ್ತಿ ಇತ್ತು. ಶ್ರಮ ಇರುತ್ತಿತ್ತು. ಮನೆಯಲ್ಲಿ ಹಿರಿಯರಿಗೆ ಗಣಿತ ಬರುತ್ತಿತ್ತು. ಬೇಕಾದರೆ ಮಾರ್ಗದರ್ಶನ ಸಿಗುತ್ತಿತ್ತು. ಕೇವಲ ಶಾಲೆಯ ಪಠ್ಯವೊಂದೇ ಅಲ್ಲ ಅಠವಲೇ ಬೀಜಗಣಿತ ಪುಸ್ತಕ, ಬಾಗಿ ಜಾಮಿಟ್ರಿ ಪುಸ್ತಕ ಅಂತ ಗಣಿತದ ಇತರೆ ಪುಸ್ತಕಗಳನ್ನು ರೆಫರ್ ಮಾಡಿ ಹೆಚ್ಚಿನ ಸಮಸ್ಯೆಗಳನ್ನು ಬಿಡಿಸಿರುತ್ತಿದ್ದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ ಮಸ್ತಾಗಿತ್ತು. ಪರೀಕ್ಷೆಗೆ ಬರೋಬ್ಬರಿ ತಯಾರಿ ಇರುತ್ತಿತ್ತು. ಹಾಗಾಗಿ ಸುಮಾರಾಗಿ ಎಂತಹ ಗಣಿತದ ಸಮಸ್ಯೆ ಪರೀಕ್ಷೆಯಲ್ಲಿ ಬಂದರೂ ಅದು ಹೊಸದು ಅಂತ ಅನ್ನಿಸುತ್ತಿರಲಿಲ್ಲ. ಹಾಗಾಗಿ ಒಳ್ಳೆ ಮಾರ್ಕು ಬರುತ್ತಿತ್ತು. ಹೀಗಿರುವಾಗ ಸರಿಯಾಗಿ ಅರ್ಥವಾಗದ ಅಕೌಂಟೆನ್ಸಿ ಈ ವರ್ಷ ಕೈಕೊಟ್ಟುಬಿಡಬೇಕೇ!? ಛೇ!

ಸರಿ. ಏಪ್ರಿಲ್ ಹತ್ತಕ್ಕೆ ಫಲಿತಾಂಶ. ಅಂಚೆಯಲ್ಲಿ ಬಂತು. ಮಾರ್ಕ್ಸ್ ಕಾರ್ಡ್ ತೆಗೆದು ನೋಡಿದರೆ ಗಣಿತದಲ್ಲಿ ನೂರಕ್ಕೆ ತೊಂಬತ್ತೈದು! ಹಾಂ!?? ತೊಂಬತ್ತೆಂಟು ಬರಬೇಕಾಗಿತ್ತು ಅಂದುಕೊಂಡರೆ ಮತ್ತೂ ಮೂರು ಅಂಕ ಕಮ್ಮಿ. 'ಮತ್ತೂ ಮೂರು ಹೆಚ್ಚಿನ ಅಂಕ ಎಲ್ಲಿ ಕಟ್ ಮಾಡಿ ಒಗೆದರು ಅತ್ತೂರ್ ಮೇಡಂ?' ಅಂತ ತಿಳಿಯಲಿಲ್ಲ. ಅದನ್ನೂ ಮುಂದೆ ಕೇಳೋಣ ಅಂದುಕೊಂಡಿದ್ದೆ. ಮುಂದೆ ಸ್ವಲ್ಪೇ ದಿವಸದಲ್ಲಿ ಅತ್ತೂರ್ ಟೀಚರ್ ತಂಗಿಯ ಮದುವೆ ಇತ್ತು. ಅವರ ಗಂಡನ ತಮ್ಮನ ಜೊತೆಯೇ. ಅಕ್ಕ ತಂಗಿ ಅಣ್ಣ ತಮ್ಮನ ಹೆಂಡತಿಯರು. ಅವರೆಲ್ಲ ನಮ್ಮ ಕುಟುಂಬದ ಆತ್ಮೀಯರೇ. ಹಾಗಾಗಿ ನಮಗೂ ಆಹ್ವಾನವಿತ್ತು. ನಾನು ಹೋಗಿದ್ದೆ  ಅಮ್ಮನ ಜೊತೆ. ಮದುವೆ ಮುಂಜಿಗೆ ಹೋಗುತ್ತಲೇ ಇರಲಿಲ್ಲ. ಆದರೂ ಹೋಗಿದ್ದೆ. ಮದುವೆಗೆ ಹೋಗಿ ಊಟ ಮಾಡಿಬರಬೇಕು ಅಂತ ಏನೂ ಇರಲಿಲ್ಲ. ಅತ್ತೂರ್ ಟೀಚರ್ ಹತ್ತಿರ ಕೇಳಬೇಕಾಗಿತ್ತು. 'ಎರಡು ಮಾರ್ಕಿನ ಅಕೌಂಟೆನ್ಸಿ ಪ್ರಶ್ನೆ ಬಿಡಿಸುವಲ್ಲಿ ತಪ್ಪಿದ್ದೆ ಅಂತ ನನಗೆ ಗೊತ್ತಿದೆ. ಬಾಕಿ ಮೂರು ಮಾರ್ಕ್ಸ್ ಎಲ್ಲಿ ಕಟ್ ಮಾಡಿದಿರಿ ಟೀಚರ್!!??' ಅಂತ. ಅಲ್ಲಿ ಮದುವೆ ಗದ್ದಲ. ಟೀಚರ್ ಸಿಕ್ಕಾಪಟ್ಟೆ ಗಡಿಬಿಡಿಯಲ್ಲಿದ್ದರು. ಮತ್ತೆ ನಾವು ಆ ಕಾಲದಲ್ಲಿ ಸಂಕೋಚದ ಮುದ್ದೆ. ಟೀಚರ್ ಒಬ್ಬರೇ ಸಿಕ್ಕಿದ್ದರೂ ಇಂತದ್ದನ್ನೆಲ್ಲ ಕೇಳಲಿಕ್ಕೆ ಒಂದು ತರಹದ ಮುಜುಗರ. ಮತ್ತೆ, 'marks must be commanded, never demanded' ಅಂತ ಬೇರೆ ಮೊಳೆ ಹೊಡೆದು ಇಟ್ಟಿರುತ್ತಿದ್ದರಲ್ಲ. ಹೀಗೆಲ್ಲ ಆಗಿ ಅತ್ತೂರ್ ಟೀಚರ್ ಮದುವೆ ಮನೆಯಲ್ಲಿ ಕಂಡರೂ ಅವರಿಗೆ ಒಂದು ನಮಸ್ಕಾರ ಹಾಕಿ, ರಿಸೆಪ್ಶನ್ ನಲ್ಲಿ ಏನೋ ಒಂದು ತರಹದ ನಾಷ್ಟಾ ಒಣ ಒಣ ಮಾಡಿ, ಕೈ ಕೈ ತಿಕ್ಕಿಕೊಳ್ಳುತ್ತ ವಾಪಸ್ ಬಂದೆ. ಗಣಿತದಲ್ಲಿ ಅಂಕಗಳು ಹೇರಾಪೇರಿ ಆಗಿದ್ದರ ಬಗ್ಗೆ ಕೇಳಲೇ ಇಲ್ಲ. ಕೇಳಿದ್ದರೆ, 'ಕ್ಲಾಸಿನಾಗ ನಾ ಅಕೌಂಟೆನ್ಸಿ ಕಲಿಸುವಾಗ ನೀವೆಲ್ಲಾ ಬಿ ಕ್ಲಾಸಿನ ಆ ಅನಿತಾ ರಾಜ್ ಅಂಬೋ 'ಹೆಣ್ಣು ಹುಡುಗಿಯ' assets ಬಗ್ಗೆ ಮಾತಾಡಿಕೋತ್ತ, ಹುಚ್ಚರ ಗತೆ ನಕ್ಕೋತ್ತ ಕೂತಿದ್ದಿರಿ. ಅದಕ್ಕೇ ಇನ್ನೂ ಮೂರು ಮಾರ್ಕ್ಸ್ ಕಟ್ ಮಾಡೇನಿ!' ಅಂತ ಮೂಹ್ ತೋಡ್ ಜವಾಬ್ ಕೊಟ್ಟು ಕಳಿಸುತ್ತಿದ್ದರೇನೋ ಅತ್ತೂರ್ ಟೀಚರ್. ಅತ್ತೂರ್ ಟೀಚರ್ ಅವರ ಇನ್ನೊಂದು ಸ್ಪೆಷಾಲಿಟಿ ಅಂದರೆ 'ಹೆಣ್ಣು ಹುಡುಗಿ' ಅಂತ ಒತ್ತಿ ಒತ್ತಿ ಹೇಳುತ್ತಿದ್ದರು. ಕೇಳಿದವರಿಗೆ ಅನ್ನಿಸಬೇಕು, 'ಹೀಗೆ ಹೆಣ್ಣು ಹುಡುಗಿ, ಹೆಣ್ಣು ಹುಡುಗಿ ಅಂತ ಒತ್ತಿ ಒತ್ತಿ ಬೊಂಬಡಾ ಹೊಡೆಯಲಿಕ್ಕೆ ಇವರು ಗಂಡು ಹುಡುಗಿಯನ್ನು ಎಲ್ಲಿ ನೋಡಿ ಬಂದಿದ್ದಾರೆ??!!' ಅಂತ. ಸುಮ್ಮನೆ ಅಂದಿನ ಮಷ್ಕಿರಿ ನೆನಪು ಮಾಡಿಕೊಂಡೆ. ಅತ್ತೂರ್ ಟೀಚರ್ ಓದಿದರೂ ಕ್ಷಮಿಸುತ್ತಾರೆ ಬಿಡಿ. ನಮ್ಮ ಶಾಲೆಯ ಮಾಸ್ತರ್, ಟೀಚರ್ ಮಂದಿ ನಮ್ಮ ಎಂತೆಂಥಾ ದೊಡ್ಡ ದೊಡ್ಡ ತಪ್ಪು ಗಳನ್ನೇ ಕ್ಷಮಿಸಿ, ಭರಪೂರ್ ಆಶೀರ್ವಾದ ಮಾಡಿ ಕಳಿಸಿದ್ದಾರೆ. ಅವುಗಳ ಮುಂದೆ ಹಿಂದಿನ ಮಷ್ಕಿರಿ ನೆನಪು ಮಾಡಿಕೊಂಡು ಸ್ವಲ್ಪ ಮಜಾ ತೆಗೆದುಕೊಳ್ಳುವದು ಯಾವ ದೊಡ್ಡ ತಪ್ಪು??!!

ಮೂಹ್ ತೋಡ್ ಜವಾಬ್ ಕೊಡುವದರಲ್ಲಿ ಅತ್ತೂರ್ ಟೀಚರ್ ಪ್ರವೀಣೆ. ಪ್ರತಿ ಪರೀಕ್ಷೆ ನಂತರ ತಿದ್ದಿದ ಉತ್ತರ ಪತ್ರಿಕೆಗಳನ್ನು ವಾಪಾಸ್ ಕೊಡುವಾಗ ಗಳಿಸಿದ ಮಾರ್ಕುಗಳನ್ನು ಮುದ್ದಾಂ ಹೇಳಿಯೇ ಕೊಡುತ್ತಿದ್ದರು. ಅದೂ ಜಾಗಟೆ ಹೊಡೆದ ರೀತಿಯಲ್ಲಿ. ಗಣಿತದಲ್ಲಿ ಸಿಂಗಲ್ ಡಿಜಿಟ್ ನಲ್ಲಿ ಮಾರ್ಕ್ ಗಳಿಸುತ್ತಿದ್ದ ಮಂದಿಗೆ ಅದು ಭಾಳ ಮುಜುಗುರ ಉಂಟುಮಾಡುತ್ತಿತ್ತು. ಆದರೆ ಅತ್ತೂರ್ ಟೀಚರ್ ಕೇರ್ ಮಾಡುತ್ತಿರಲಿಲ್ಲ. ಗಳಿಸಿದ ಅಂಕ ಘೋಷಣೆ ಮಾಡಿ ಜೊತೆಗೆ ಒಂದು ಬರೋಬ್ಬರಿ ಮಾತಿನ ಏಟನ್ನೂ ಕೊಡುತ್ತಿದ್ದರು. ಎಂದೋ ಮಾಡಿದ ಗಲಾಟೆ, ತಪ್ಪಿಸಿದ ಕ್ಲಾಸ್ ನೆನಪಿಟ್ಟು, ಅದನ್ನೇ ಚುಚ್ಚಿ ಹೇಳಿ, ಹಾಗೆ ಮಾಡದೇ ಇದ್ದಿದ್ದರೆ ಇನ್ನೂ ಜಾಸ್ತಿ ಮಾರ್ಕ್ಸ್ ಬರುತ್ತಿದ್ದವೇನೋ ಅಂತ ಹೇಳಿ ಪೇಪರ್ ಕೊಡುತ್ತಿದ್ದರು. ನಮ್ಮ ಒಳ್ಳೆಯದಕ್ಕೇ ಹೇಳುತ್ತಿದ್ದರು ಬಿಡಿ. ಇನ್ನು ನಮ್ಮಂತಹ ಯಬಡೇಶಿಗಳಿಗೂ ಬರೋಬ್ಬರಿ ಟಾಂಟ್ ಒಗೆಯುತ್ತಿದ್ದರು. ನಮಗೆ ಯಾವಾಗಲೂ ೧೦೦ ತಪ್ಪಿದರೆ ೯೯, ೯೮ ಬಿದ್ದೇ ಬೀಳುತ್ತಿತ್ತು. 'ಹೆಗಡೆ, ನಾಲ್ಕು ಪಿರಿಯಡ್ ಆದ ಮ್ಯಾಲೆ ಮನಿಗೆ ಓಡಿ ಹೋಗೋದನ್ನ ಬಿಟ್ಟು ಕ್ಲಾಸಿನಾಗ ಕೂತು ಕೇಳು. ಈಗ ಆಗಾಗ ಏನು ಒಂದು, ಎರಡು ಮಾರ್ಕ್ಸ್ ಕಳಕೋತ್ತಿ ನೋಡು ಅವೂ ಸಿಕ್ಕು ಫುಲ್ ಸೆಂಟ್ ಪರ್ಸೆಂಟ್ ಮಾರ್ಕ್ಸ್ ತೊಗೋತ್ತಿ ನೋಡು. ಪ್ರತಿ ದಿನ ನಾಲ್ಕು ಪಿರಿಯಡ್ ಆದ ಮ್ಯಾಲೆ ಮನಿಗೆ ಓಡ್ತಿಯಲ್ಲಪಾ?? ಹಾಂ??? ಯಾಕ? ಏನಿಟ್ಟು ಬಂದಿ ಮನಿಯಾಗ???' ಅಂತ ಕೇಳಿ ನಮಗೂ ಇಡುತ್ತಿದ್ದರು. ನಮಗೆ ಆವಾಗ ಶಾಲೆ ಅಂದರೇ ಅಲರ್ಜಿ. ಗತಿಯಿಲ್ಲ ಹೋಗಲೇಬೇಕು. ಮತ್ತೆ ಪಾಠ ಕಲಿಯಲು ಹೋಗದಿದ್ದರೂ ದೋಸ್ತರೊಂದಿಗೆ ಮಸ್ತಿ ಮಾಡಲಾದರೂ ಹೋಗಲೇಬೇಕು. ಆದರೆ ಮಧ್ಯಾನ ಎರಡು ಘಂಟೆ ನಂತರ, ನಾಲ್ಕು ಪಿರಿಯಡ್ ಆದ ನಂತರವೂ ಶಾಲೆಯಲ್ಲಿ ಇರಬೇಕು ಅಂದರೆ ನಮಗೆ ಅದು ದೊಡ್ಡ ಚಿತ್ರಹಿಂಸೆ. ಹಾಗಾಗಿ ಸಾಮಾನ್ಯವಾಗಿ ಮನೆಗೆ ಓಡಿ ಬಂದುಬಿಡುತ್ತಿದ್ದೆ. ಮರುದಿವಸದ್ದನ್ನು ನೋಡಿಕೊಂಡರಾಯಿತು. ಒಂದಿಷ್ಟು ಬಯ್ಯುತ್ತಿದ್ದರು, ಮನೆಗೆ ಕಂಪ್ಲೇಂಟ್ ಕಳಿಸುತ್ತಿದ್ದರು, ಇತ್ಯಾದಿ. ಅದನ್ನೆಲ್ಲ ನಿಭಾಯಿಸಿಯಾಗಿತ್ತು. ನಾಲ್ಕು ಪಿರಿಯಡ್ ನಂತರ ಓಡಲೇಬೇಕು. ಅದಕ್ಕೆ ಈಗ ಅತ್ತೂರ್ ಟೀಚರ್ ಬಯ್ಯುತ್ತಿದ್ದರು. ಹೀಗೆ ಎಷ್ಟೇ ಮಾರ್ಕ್ಸ್ ತೆಗೆದುಕೊಂಡರೂ ಅತ್ತೂರ್ ಟೀಚರ್ ಅವರ ಒಂದು ಗರಂ ಕಾಮೆಂಟ್ ಇದ್ದೇ ಇರುತ್ತಿತ್ತು. ಪೇಪರ್ ಕೊಡುವಾಗ ಕೇವಲ ಮಾರ್ಕ್ಸ್ ಹೇಳಿ ಏನೂ ಟಾಂಟ್ ಹೊಡೆಯಲಿಲ್ಲ ಅಂದರೆ ಆ ವಿದ್ಯಾರ್ಥಿ, ವಿದ್ಯಾರ್ಥಿನಿ ಬಹಳ ಸಭ್ಯರು ಅಂತ ಅರ್ಥ. ಏನೂ ಕಿತಾಪತಿ ಮಾಡದವರಿಗೆ ಸುಮ್ಮನೆ ಮಾರ್ಕ್ಸ್ ಹೇಳಿ, ಪೇಪರ್ ಕೊಟ್ಟು ಕಳಿಸುತ್ತಿದ್ದರು.

ಒಟ್ಟಿನಲ್ಲಿ ಒಂಬತ್ತನೇ ಕ್ಲಾಸಿನ ಗಣಿತ ಪರೀಕ್ಷೆಯಲ್ಲಿ ಕಳೆದುಹೋದ ಮೂರು ಅಂಕಗಳ ರಹಸ್ಯ ಬಗೆಹರಿಯಲೇ ಇಲ್ಲ. ರಿಸಲ್ಟ್ ಜೊತೆಗೆ ನಮ್ಮ ಉತ್ತರ ಪತ್ರಿಕೆಗಳ ಪ್ರತಿಯನ್ನು ಸಹಿತ ಕಳಿಸಿಬಿಟ್ಟಿದ್ದರೆ ಒಳ್ಳೆಯದಿತ್ತು. ನಮ್ಮ ದೇಶದ ಶಿಕ್ಷಣ ಪದ್ಧತಿಯೇ ವಿಚಿತ್ರ. ಪರೀಕ್ಷೆ ಮಾಡುವದರ ಉದ್ದೇಶ ಏನು? ವಿದ್ಯಾರ್ಥಿಗಳಿಗೆ ವಿಷಯ ಎಷ್ಟು ಅರ್ಥವಾಗಿದೆ ಅಂತ ನೋಡುವದು. ಅದು ತಿಳಿಯಬೇಕಾಗಿದ್ದು ಯಾರಿಗೆ? ಮೂರು ಜನರಿಗೆ ಮುದ್ದಾಂ ತಿಳಿಯಬೇಕು. ಮೊತ್ತ ಮೊದಲನೇಯದಾಗಿ ವಿದ್ಯಾರ್ಥಿಗಳಿಗೆ ತಿಳಿಯಬೇಕು. ತಮ್ಮ ತಪ್ಪು ಒಪ್ಪುಗಳು ವಿದ್ಯಾರ್ಥಿಗಳಿಗೆ ತಿಳಿದರೆ ಮುಂದೆ ತಿದ್ದಿಕೊಳ್ಳಲು, ಉತ್ತಮಗೊಳಿಸಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಂತೆ. ಪಾಲಕರಿಗೆ ಆಸಕ್ತಿಯಿದ್ದರೆ ತಿಳಿಯಬೇಕು. ಶಿಕ್ಷಕರಿಗೂ ತಿಳಿಯಬೇಕು. ತಿಳಿದರೆ ಶಿಕ್ಷಕರು ಬೇರೆ ಬೇರೆ ವಿದ್ಯಾರ್ಥಿಗಳ strengths, weaknesses ನೋಡಿಕೊಂಡು ಅವರ ಬಗ್ಗೆ ಸ್ವಲ್ಪ ಬೇರೆ ತರಹದ ಗಮನ ಕೊಡಬಹುದು. ನಮ್ಮ ಶೈಕ್ಷಣಿಕ ಪದ್ಧತಿಯಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಪಾರದರ್ಶಕತೆಯೇ (transparency) ಇಲ್ಲ. ಒಂದು ವಿಷಯ ಅಧ್ಯಯನ ಮಾಡುವಾಗ ಎಲ್ಲಿ ಗೆದ್ದೆ, ಎಲ್ಲಿ ಸೋತೆ, ಎಲ್ಲಿ ಎಡವಿದೆ ಅಂತ ತಿಳಿಯುವದೇ ಇಲ್ಲ. ಇದಕ್ಕೆ ಪರಿಹಾರ ಸಿಕ್ಕಿದ್ದು BITS, Pilani ಯಲ್ಲಿ ಇಂಜಿನಿಯರಿಂಗ್ ಓದಲು ಶುರು ಮಾಡಿದಾಗ. ಪ್ರತಿ ವಿಷಯಕ್ಕೆ ನಾಲ್ಕು ಟೆಸ್ಟ್ ಮತ್ತು ಸೆಮಿಸ್ಟರ್ ಕೊನೆಗೆ ಒಂದು ಪರೀಕ್ಷೆ. ಪ್ರತಿ ಟೆಸ್ಟಿನ, ಪ್ರತಿ quiz ನ, ಪ್ರತಿ ಪರೀಕ್ಷೆಯ ಮೌಲ್ಯಮಾಪನ ಮಾಡಿದ ಉತ್ತರಪತ್ರಿಕೆಯನ್ನು  ನಮ್ಮ ಕೈಯಲ್ಲಿ ಕೊಟ್ಟೇಬಿಡುತ್ತಿದ್ದರು. ಮಾಸ್ತರರು ಮೌಲ್ಯಮಾಪನ ಮಾಡಿದ್ದು ಸರಿಯಾಗಿಲ್ಲ ಅಂತ ಅನ್ನಿಸಿದರೆ ಮಾಸ್ತರ್ ಜೊತೆ ಗುದ್ದಾಡಲು ಮುಕ್ತ ಅವಕಾಶ. ಆದರೆ ಒಂದೇ ಕರಾರು. ಪುನರ್ಮೌಲ್ಯಮಾಪನದಲ್ಲಿ ಹೆಚ್ಚಿನ ತಪ್ಪುಗಳು ಕಂಡು ಬಂದರೆ ಮೊದಲಿನಿಗಿಂತ ಕಮ್ಮಿ ಮಾರ್ಕ್ಸ್ ಹಾಕಿದರೂ ಒಪ್ಪಿಕೊಳ್ಳಬೇಕು. ಅಂತಹ ಪಾರದರ್ಶಕತೆಯನ್ನು, ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ನೋಡಿದ್ದು ನಮ್ಮ ಹೆಮ್ಮೆಯ BITS, Pilani ಯಲ್ಲಿ ಮಾತ್ರ. ನಂತರ ನೋಡಿದ್ದು ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ. ಅಂಥದ್ದೊಂದು ಪಾರದರ್ಶಕತೆ ಇದ್ದರೆ ಮಾತ್ರ ಪರೀಕ್ಷೆ ಮಾಡಿದ್ದಕ್ಕೊಂದು ಅರ್ಥವಿರುತ್ತದೆ. ೯೮ ಮಾರ್ಕ್ಸ್ ಬರಬೇಕಾದಲ್ಲಿ ಅತ್ತೂರ್ ಟೀಚರ್ ೯೫ ಮಾರ್ಕ್ಸ್ ಹಾಕಿದರೆ ಹಾಕಿಸಿಕೊಂಡು ಕೂಡಲು ನಾವೇನು ಹಲ್ವಾನೇ? ಆಗ ಹಲ್ವಾನೇ ಮಾಡಿಬಿಟ್ಟರು ಬಿಡಿ. ಆ ಮಾತು ಬೇರೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಸಹಿತ ಹಾಗೇ ಆಗಿತ್ತು. ಐವತ್ತಕ್ಕೆ ನಲವತ್ತಾರು ಹಾಕಿಬಿಟ್ಟಿದ್ದರು. ಒಂದು ಸಮಸ್ಯೆಯನ್ನು ಸರಿಯಾಗಿಯೇ ಬಿಡಿಸಿದ್ದೆ. ತಿದ್ದುವಾಗ ಏನೋ ತಪ್ಪು ತಿಳಿದುಕೊಂಡು ಅದನ್ನು ತಪ್ಪು ಅಂತ ತಿದ್ದಿ, ನಾಲ್ಕು ಮಾರ್ಕ್ಸ್ ಕಟ್ ಮಾಡಿಬಿಟ್ಟಿದ್ದರು. ಪುಣ್ಯಕ್ಕೆ ಪೇಪರ್ ಕೈಗೆ ಬಂದಿತ್ತು. ನೋಡಿದಾಕ್ಷಣ ಓಡಿದ್ದೆ ಟೀಚರ್ ಬಳಿ. ಟೀಚರ್ ಮತ್ತೆ ನೋಡಿ, ನನ್ನ ಪೇಪರ್ ತಿದ್ದುವಾಗ ತಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಐವತ್ತಕ್ಕೆ ನಲವತ್ತೊಂಬತ್ತು ಅಂಡ್ ಹಾಪ್ ಹಾಕಿ ಕಳಿಸಿದ್ದರು. ೪೯. ೫ / ೫೦. ಪ್ರೋಗ್ರೆಸ್ ಕಾರ್ಡಿನಲ್ಲಿ ೫೦ /೫೦ ಅಂತಲೇ ಬಂದಿತ್ತು ಬಿಡಿ. ಹಾಗಾಗಿ ವಾರ್ಷಿಕ ಪರೀಕ್ಷೆಯಲ್ಲಿ ಸಹಿತ ಅಂತಹದೇ ಲಫಡಾ ಯಾಕಾಗಿರಬಾರದು??!!

ಇರಲಿ. ಹೀಗೆ ಒಂಬತ್ತನೇ ಕ್ಲಾಸಿನಲ್ಲಿ ಮೊದಲ ಸಲ ಅಕೌಂಟೆನ್ಸಿ ಕಲಿಯವ ನಮ್ಮ ಅನುಭವ ಹೇಗಿತ್ತು ಅಂದರೆ ತೆನಾಲಿ ರಾಮನ ಬೆಕ್ಕು ಬಿಸಿ ಹಾಲು ಕುಡಿದು, ಬಾಯಿ ಸುಟ್ಟುಕೊಂಡು, ಹಾಲಿನ ಬಗ್ಗೆ ಒಂದು ತರಹದ ಹೆದರಿಕೆ, ಹೇವರಿಕೆ ಬೆಳೆಯಿಸಿಕೊಂಡ ಹಾಗಿತ್ತು. ಆದರೂ ಅಕೌಂಟೆನ್ಸಿ ಕಲಿಯಬೇಕು. ಕಂಪನಿಗಳ ಬ್ಯಾಲೆನ್ಸ್ ಶೀಟ್, ಇನ್ಕಮ್ ಸ್ಟೇಟ್ಮೆಂಟ್, ಕ್ಯಾಶ್ ಫ್ಲೋ ಸ್ಟೇಟ್ಮೆಂಟ್ ಎಲ್ಲ ವಿಶ್ಲೇಷಿಸಲು ಕಲಿಯಬೇಕು ಅಂತೆಲ್ಲ ತುಂಬಾ ಆಸಕ್ತಿಯಿತ್ತು. ಅದನ್ನೆಲ್ಲ ಮಾಡಲು ಬೇಕು ಅಕೌಂಟೆನ್ಸಿ ವಿಷಯದಲ್ಲಿ ಒಳ್ಳೆಯ ಕಲಿಕೆ ಮತ್ತು ಅಭ್ಯಾಸ.

MBA ಡಿಗ್ರಿಯ ಅಕೌಂಟೆನ್ಸಿ ವಿಷಯದ ಮೊದಲ ಕ್ಲಾಸಿಗೆ ಹೋಗಿ ಕೂತಾಗ ಇದೆಲ್ಲ flashback ಮಾದರಿಯಲ್ಲಿ ನೆನಪಿಗೆ ಬಂತು. ಮೊದಲನೇ ಕ್ಲಾಸಿಗೆ ಅಂತ ಬರೋಬ್ಬರಿ ತಯಾರಿ ಮಾಡಿಕೊಂಡೇ ಹೋಗಿದ್ದೆ. ಹೊಸ ನೋಟ್ ಬುಕ್, ಮಣ ಭಾರದ ಪಠ್ಯ ಪುಸ್ತಕ, ರೆಫರೆನ್ಸ್ ಪುಸ್ತಕ ಎಲ್ಲ ಹೊತ್ತುಗೊಂಡು ಹೋಗಿದ್ದೆ. ೨೦೦೧ ರ Fall ಸೆಮಿಸ್ಟರ್. ಸುಮಾರು ಇದೇ ಸಮಯದಲ್ಲಿ ಶುರುವಾಗಿತ್ತು. ಸೆಪ್ಟೆಂಬರ್ ಮೊದಲನೇ ವಾರ. ಸಂಜೆ ಆರರಿಂದ ಒಂಬತ್ತರ ವರೆಗೆ ಕ್ಲಾಸ್. ವೃತ್ತಿಪರರಿಗೆ ಅನುಕೂಲವಾಗಲಿ ಅಂತ ಸಂಜೆಯೂ ಕ್ಲಾಸ್ ಇಡುತ್ತಿದ್ದರು. ಬಾಸ್ಟನ್ ಸಮೀಪದ Andover ಶಹರದ Merrimack College ನಲ್ಲಿ ನಮ್ಮ ಕ್ಲಾಸ್. ಅದು Suffolk University ಯ satellite ಕ್ಯಾಂಪಸ್ ಆಗಿತ್ತು. ನನಗೆ ಅಲ್ಲೇ ಹತ್ತಿರವಾಗಿದ್ದರಿಂದ ಬಾಸ್ಟನ್ ಶಹರದ ಮೇನ್ ಕ್ಯಾಂಪಸ್ ಬಿಟ್ಟು ಇಲ್ಲೇ ನೋಂದಾಯಿಸಿಕೊಂಡಿದ್ದೆ.

ಅಂದಿನ  ಪಠ್ಯ ಪುಸ್ತಕ. ಟೆಕ್ಸ್ಟ್ ಬುಕ್. ಈಗಲೂ ಇದೆ. ಪ್ರೀತಿಯ ಅಕೌಂಟಿಂಗ್ ಪುಸ್ತಕ ಮಾರಲಿಕ್ಕೆ ಸಾಧ್ಯವೇ!? :)


ನಮಗೆ ಅಕೌಂಟೆನ್ಸಿ ಪಾಠ ಮಾಡಲಿರುವ ಮೇಡಂ ಹೆಸರು, ಸಿಲೆಬಸ್ ಎಲ್ಲ ಮೊದಲೇ ಇಮೇಲ್ ಮೂಲಕ ಕಳಿಸಿದ್ದರು. ಮೇಡಂ ಅವರನ್ನು ನೋಡಿರಲಿಲ್ಲ ಅಷ್ಟೇ.

ಬರೋಬ್ಬರಿ ಸಂಜೆ ಆರು ಘಂಟೆಗೆ ಮೇಡಂ ಕ್ಲಾಸ್ ಒಳಗೆ ಎಂಟ್ರಿ ಕೊಟ್ಟರು. ಇಷ್ಟು ದೊಡ್ಡ ನಗೆ ಗಲಗಲ ಅಂತ ನಗುತ್ತ ಒಳಗೆ ಬಂದರು. 'ಓಹೋ! ಇವರೇ ಡಾ. ಜೇನ್ ಮಾರ್ಟನ್. ನಮ್ಮ ಅಕೌಂಟೆನ್ಸಿ ಮೇಡಂ!' ಅಂತ ಗೊತ್ತಾಯಿತು. ದೊಡ್ಡ ದೈಹಿಕ ಪರ್ಸನಾಲಿಟಿಯ, ಭೂಮಿ ತೂಕದ ಮೇಡಂ. ಸುಮಾರು ಆರಡಿ ಎತ್ತರ. ಹೊನಗ್ಯಾ ಮಾದರಿಯ ದೊಡ್ಡ ಶರೀರ. ಒಂದು ನಿಲುವಂಗಿಯಂತಹ, overall ಮಾದರಿಯ, ಮೇಲಿಂದ ಕೆಳಗಿನ ವರೆಗೆ ಒಂದೇ ಬಟ್ಟೆ ತರಹ ಕಾಣುವ ಡ್ರೆಸ್ ಹಾಕಿದ್ದರು. very casual. ಮಾಸ್ತರ್, ಮೇಡಂ ಮಂದಿ ಸ್ವಲ್ಪ formal ಆಗಿ ಡ್ರೆಸ್ ಮಾಡಿಕೊಳ್ಳುತ್ತಿದ್ದರು. ಇವರು ಮಾತ್ರ ಆರಾಮಾಗಿ ಬಂದಿದ್ದಾರೆ. ಒಂದು ತರಹ ಮಸ್ತ ಮಸ್ತ ಅನ್ನಿಸುವ ಹಾಗೆ ಇದ್ದಾರೆ. ವಯಸ್ಸು ಐವತ್ತರ ಮೇಲಿರಬಹುದು. ಒಂದು ಭರ್ಜರಿ ರೇಷ್ಮೆ ಸೀರೆ ಉಟ್ಟು, ಹಣೆ ಮೇಲೆ ಕಾಸಿನಗಲದ ದೊಡ್ಡ ಕುಂಕುಮ ಇಟ್ಟುಕೊಂಡರೆ ನಮ್ಮ ನಿಮ್ಮ ಮನೆಯ ಯಾರೋ ದೊಡ್ಡಮ್ಮನೋ, ಅತ್ತೆಯೋ, ಅಜ್ಜಿಯೋ ಅಂತ ಕಾಣಬೇಕು. ಹಾಗಿದ್ದರು. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಎಲ್ಲ ಕೆಲಸಗಳನ್ನು ಸಂಬಾಳಿಸುತ್ತ, ಓಡಾಡಿಕೊಂಡಿರುವ ಹಿರಿಯ ಮುತ್ತೈದೆಯರ ಮಾದರಿಯಲ್ಲಿ ಇದ್ದರು ನಮ್ಮ ಮೇಡಂ. ನಮಗಂತೂ ಹಾಗೆ ಕಂಡರು. ನಾವು ಹೇಳಿ ಕೇಳಿ ದೇಸಿ ಮಂದಿ. ನಮಗೆ ಮಹಿಳೆಯರು ಒಂದೋ ಹಿರಿಯ ಮುತ್ತೈದೆಯರ ತರಹ ಕಾಣುತ್ತಾರೆ. ಇಲ್ಲ ಮಾದಕ ಮುತ್ತೈದೆಯರ ತರಹ ಕಾಣುತ್ತಾರೆ.

ದೊಡ್ಡ ದನಿಯಲ್ಲಿ ಮಾತಾಡುತ್ತ, ನಡುನಡುವೆ ಕೇಕೆ ಹಾಕುವ ನಮೂನಿಯಲ್ಲಿ ಗಲಗಲ ನಗುತ್ತ, ಎಲ್ಲರ ಪರಿಚಯ ಮಾಡಿಕೊಂಡರು. ಕೆಲವೇ ನಿಮಿಷಗಳಲ್ಲಿ ಕ್ಲಾಸಿನಲ್ಲಿನ ಮುಗುಂ ವಾತಾವರಣವನ್ನೇ ಬದಲಾಯಿಸಿಬಿಟ್ಟರು. ನಾವು ಸ್ಟೂಡೆಂಟ್ಸ್ ಒಂದು ಹತ್ತು ಜನ ಅಷ್ಟೇ. ಅಂತದ್ದರಲ್ಲಿ ಇಂತಹ ತುಂಬಾ ಫ್ರೀ ಅನ್ನಿಸುವ ಮೇಡಂ. ಏಕ್ದಂ ವಾತಾವರಣ ತಿಳಿಯಾಗಿ, ನಿರಾಳವಾಗಿ ಹಾಯೆನ್ನಿಸಿತು. ಈ ಸಲ ಅಕೌಂಟೆನ್ಸಿ ವಿಷಯ ತಲೆಗೆ ಹೋಗಬಹುದು ಅಂತ ಒಂದು ತರಹದ ಧೈರ್ಯ, ಆಸೆ ಬಂತು. ಅದು ಒಂದು ಶುಭ ಸೂಚನೆ.

ಆತ್ಮೀಯತೆಯಿಂದ ಎಲ್ಲರ ಪರಿಚಯ ಮಾಡಿಕೊಂಡ ಡಾ. ಜೇನ್ ಮಾರ್ಟನ್ ಪಾಠ ಆರಂಭಿಸಿದರು. ಹೆಚ್ಚಿನ ಮಾಸ್ತರ್ ಮಂದಿಯಂತೆ ಇವರೂ ಪ್ರೊಜೆಕ್ಟರ್ ತೆಗೆದು, PowerPoint PPT ಹಾಕಿಕೊಂಡು ಪಾಠ ಮಾಡುತ್ತಾರೇನೋ ಅಂತ ನೋಡಿದರೆ ಇಲ್ಲ. ಇವರು ಹಳೆ ಮಾಡೆಲ್ ಮಂದಿ. ಕರಿಹಲಗೆಯನ್ನು ಬರೋಬ್ಬರಿ ಸಾಫ್ ಮಾಡಿಕೊಂಡವರೇ ಚಾಕ್ ಪೀಸ್ ಹಿಡಿದು ಅಕೌಂಟೆನ್ಸಿ ಪಾಠ ಆರಂಭ ಮಾಡಿದರು ನೋಡಿ! ಬೇರೆಯೇ ಲೋಕಕ್ಕೆ ಹೋದ ಅನುಭವ. ಅಷ್ಟು ಮಸ್ತಾಗಿ ಪಾಠ ಮಾಡಿಬಿಟ್ಟರು. ಮೊದಲ ಕ್ಲಾಸಿನಲ್ಲೇ ಫುಲ್ ಫಿದಾ. ಆರು ಘಂಟೆಗೆ ಶುರುವಾದ ಪಾಠ. ಪೇಜ್ ಮೇಲೆ ಪೇಜ್ ನೋಟ್ಸ್ ಬರೆದುಕೊಂಡಿದ್ದೇ ಬರೆದುಕೊಂಡಿದ್ದು. ಸಂಜೆ ೭.೩೦ ಆಗಿದ್ದೇ ಗೊತ್ತಾಗಲಿಲ್ಲ. ಆಗ ಮಧ್ಯಂತರ. ಒಂದು ಸಣ್ಣ ಬ್ರೇಕ್. ಹದಿನೈದು ನಿಮಿಷ. ನಂತರ ಮತ್ತೆ ಒಂಬತ್ತರ ವರೆಗೆ ಪಾಠ.

ಸರಿ. ಬ್ರೇಕ್ ಮುಗಿಸಿ ೭.೪೫ ರ ಹೊತ್ತಿಗೆ ವಾಪಸ್ ಕ್ಲಾಸಿಗೆ ಬಂದು ಕೂತೆವು. ಕೆಲವು ವಿದ್ಯಾರ್ಥಿಗಳ ತಿನ್ನುವದು, ಕುಡಿಯುವದು (ಸಾಫ್ಟ್ ಡ್ರಿಂಕ್ ಮಾತ್ರ) ಇನ್ನೂ ನಡೆದಿತ್ತು. ಏನೋಪಾ! ಈ ಅಮೇರಿಕನ್ ಯೂನಿವರ್ಸಿಟಿ ಕ್ಲಾಸುಗಳಲ್ಲಿ ಎಲ್ಲವೂ ಓಕೆ. ತಿಂಡಿ, ಪಂಡಿ, ಸಾಫ್ಟ್ ಡ್ರಿಂಕ್ ಕುಡಿತ, ಚೂಯಿಂಗ್ ಗಮ್ ಜಗಿತ ಎಲ್ಲ ಓಕೆ. ನಮ್ಮ ಧಾರವಾಡದ ಶಾಲೆಯಲ್ಲಿ ಏನಾದರೂ ಹಾಗೆಲ್ಲ ಮಾಡಿದ್ದರೆ ರಪ್ರಪಾ ಅಂತ ಕಪಾಳಕ್ಕೆ ಬಾರಿಸಿ, ಬಾಯಾಡಿಸುತ್ತಿರುವದನ್ನು ಹೊರಗೆ ಹೋಗಿ ಉಗಿದು, ಕಪ್ಪೆ, ಹಾವು, ಹಾವರಾಣಿ ಇತ್ಯಾದಿ ಬಿದ್ದ ನೀರಿನ ಟಂಕಿಯ ನೀರಿನಲ್ಲಿ ಬಾಯಿ ತೊಳೆದುಕೊಂಡು ಬಂದು ಕೂಡಲು ಹೇಳುತ್ತಿದ್ದರು. ವಾಪಸ್ ಬಂದು ಕೂಡುವಾಗ ಮತ್ತೆ ಒಂದಿಷ್ಟು ಬಡಿತ. ಈ ಅಮೇರಿಕನ್ ಕ್ಲಾಸು ರೂಮುಗಳಲ್ಲಿ ವಿದ್ಯಾರ್ಥಿಗಳು ಸ್ನಾನ, ಸಂಡಾಸ್, ಪಂಡಾಸ್, ಮತ್ತೊಂದು ಮಾಡದಿದ್ದರೆ ಅದೇ ದೊಡ್ಡ ಮಾತು. ಬಾಕಿಯೆಲ್ಲ ಕಾರ್ನಾಮೆ ನಡೆಯುತ್ತಲೇ ಇರುತ್ತದೆ. ಎಷ್ಟೋ ಸಲ ಮಾಸ್ತರ್ ಮಂದಿಯೇ ಇಡೀ ಕ್ಲಾಸಿಗೆ ಕಾಫಿ, ಡೋನಟ್ಸ್, ಬೇಗಲ್ಸ್ ತೆಗೆದುಕೊಂಡು ಬಂದಿರುತ್ತಾರೆ. ಐಶ್ ಮಾಡಿ! ತಿನ್ನುತ್ತ, ಕುಡಿಯುತ್ತಲೇ ಪಾಠ ಅವರು ಮಾಡುತ್ತಾರೆ. ನಾವೂ ಅದನ್ನೇ ಮಾಡುತ್ತ ಪಾಠ ಕೇಳಿದರಾಯಿತು.

ಮಧ್ಯಂತರದ ಬ್ರೇಕ್ ನಂತರ ಮೇಡಂ ತಮ್ಮ ಅಮೋಘ ಪಾಠ ಮುಂದುವರೆಸುತ್ತಾರೆ ಅಂದುಕೊಂಡರೆ ಜೇನ್ ಮಾರ್ಟನ್ ಮೇಡಂ ಗಲಗಲ ಅಂತ ಮತ್ತೆ ನಕ್ಕರು. ತಮ್ಮ ಇಡೀ ದೇಹವನ್ನು ಕುಲುಕಿಸಿ ನಕ್ಕರು. ಭೂಮಿ ತೂಕದ ಹೆಣ್ಣುಮಗಳು ಆಕೆ. ಭೂಮಿ ಕಂಪಿಸಿತು. 'ಇವತ್ತು ಇದು ಮೊದಲನೇ ಕ್ಲಾಸ್. ಇವತ್ತಿಗೆ ಇಷ್ಟು ಸಾಕು. ಮುಂದಿನ ಪಿರಿಯಡ್ಡಿನಿಂದ ಪೂರ್ತಿ ಒಂಬತ್ತರವರೆಗೆ ಕ್ಲಾಸ್ ತೆಗೆದುಕೊಳ್ಳುತ್ತೇನೆ. ಎಕ್ಸಟ್ರಾ ಕ್ಲಾಸ್ ವಾರಾಂತ್ಯದಲ್ಲಿ ಇಟ್ಟರೂ ಇಟ್ಟೆ. ಅದಕ್ಕೇ ಇವತ್ತಿಗೆ ಇಷ್ಟು ಸಾಕು,' ಅಂದರು ಮೇಡಂ. ಸರಿ ಅಂತ ನಾವು ನಮ್ಮ ಚೀಲ ಕಟ್ಟಲು ಶುರು ಮಾಡಿದರೆ ಮೇಡಂ ಇನ್ನೂ ಮಾತು ಮುಗಿಸಿರಲಿಲ್ಲ. ಒಂದು ದೊಡ್ಡ ಬಾಂಬ್ ಹಾಕಿಬಿಟ್ಟರು. 'ಎಲ್ಲರೂ ಬನ್ನಿ, ಹೋಗೋಣ. ಇಲ್ಲೇ ಪಕ್ಕದಲ್ಲಿ ಒಂದು ಒಳ್ಳೆ ಪಬ್ಬಿದೆ (pub). ಡ್ರಿಂಕ್ಸ್ ಹಾಕೋಣ. ಮೊದಲನೇ ರೌಂಡ್ ನಾನು ಎಲ್ಲರಿಗೂ ಟ್ರೀಟ್ ಕೊಡುತ್ತೇನೆ. ನನ್ನ ಮೊದಲ ಡ್ರಿಂಕ್ ಮುಗಿಸಿ ನಾನು ಹೊರಡುತ್ತೇನೆ. ನಂತರ ನೀವು ಮನೆಗೆ ಹೋಗುತ್ತೀರೋ, ಮಠಕ್ಕೆ ಹೋಗುತ್ತೀರೋ ಅದು ನಿಮಗೆ ಬಿಟ್ಟಿದ್ದು. ಬನ್ನಿ! ಬನ್ನಿ! ಇಲ್ಲಿಂದ ಪಬ್ಬಿಗೆ ಹೋಗಲು  ಐದು ನಿಮಿಷ ಸಾಕು. See you there in five minutes. Come on everybody!' ಅಂತ ಚಪ್ಪಾಳೆ ತಟ್ಟಿ, ದೊಡ್ಡ ದನಿಯಲ್ಲಿ ಕರೆ ಕೊಟ್ಟರು. ಹಾಗೆ ಕರೆ ಕೊಟ್ಟವರು ತಮ್ಮ ಚೀಲ ಎತ್ತಿಕೊಂಡು ಗಲಗಲ ನಗುತ್ತ, ತಮ್ಮ ದೊಡ್ಡ ದೇಹವನ್ನು ಕುಲುಕಿಸುತ್ತ, ಕಾರಿಡಾರಿನಲ್ಲಿ ಕಂಡವರಿಗೆ Hi! Bye! ಹೇಳುತ್ತ, ಮಜಾಕಿನಲ್ಲಿ ಅವರ ಕಾಲೆಳೆಯುತ್ತ, ಪಬ್ ಕಡೆ ಹೋಗೇಬಿಟ್ಟರು.

ನಮಗೋ ಆಶ್ಚರ್ಯ! ನಾವೆಲ್ಲಾ ಸಣ್ಣ ಊರಿನ ಮಂದಿ. ಅದೂ ದೇಸಿ ಮಂದಿ. ಭಾರತದವರು. ಮಾಸ್ತರ್, ಟೀಚರ್ ಮುಂದೆ ನಮಗೆ ಕೂತೂ ಗೊತ್ತಿಲ್ಲ. ನಿಂತೇ ಮಾತು ಕಥೆ. ಅದೆಲ್ಲ ಶಿಕ್ಷಕರಿಗೆ ತೋರುವ ಗೌರವದ ಸಂಕೇತ. ಇನ್ನು ಮಾಸ್ತರ್, ಟೀಚರ್ ಜೊತೆ ಕೂತು ಊಟ, ತಿಂಡಿ ಮಾಡೋದನ್ನೆಲ್ಲ ಊಹೆ ಮಾಡಿಕೊಳ್ಳಲೂ ಕಷ್ಟ. ಹತ್ತನೆ ತರಗತಿಯಲ್ಲಿದ್ದಾಗ ರೇವಣಕರ್ ಸರ್ ಒಂದು ರವಿವಾರ ಶಾಲೆಗೆ ಬರಹೇಳಿದ್ದರು. ವಿಜ್ಞಾನ ಪ್ರದರ್ಶನವೊಂದಕ್ಕೆ ತಯಾರಿ ಮಾಡಬೇಕಿತ್ತು. ನಮ್ಮ ಕೆಲಸ ಮುಗಿದಾಗ ಮಧ್ಯಾನ ಮೂರು ಘಂಟೆಯ ಮೇಲಾಗಿತ್ತು. ಊಟ ಹರೋಹರ ಅಂದುಹೋಗಿತ್ತು. ಅಲ್ಲೇ ಮಾಳಮಡ್ಡಿಯ ಬೃಂದಾವನ ಹೋಟೆಲ್ಲಿಗೆ ಬಂದುಬಿಡಿ ಅಂದಿದ್ದರು ರೇವಣಕರ್ ಸರ್. ನಾನು ನನ್ನ ಸಹಪಾಠಿ ಹೋಗಿದ್ದೆವು. ಅಲ್ಲಿ ಸರ್ ಒಂದು ಪ್ಲೇಟ್ ಉಪ್ಪಿಟ್ಟು, ಚಹಾ ಕೊಡಿಸಿದ್ದರು. ಅದನ್ನು ಸರ್ ಮುಂದೆಯೇ ಕೂತು, ತಿಂದು, ಕುಡಿದು ಬರಬೇಕಾದರೆ ಸಾಕೋಬೇಕಾಗಿ ಹೋಗಿತ್ತು. ಆ ಮಟ್ಟದ ಮುಜುಗರ ಮತ್ತು ಒಂದು ಟೈಪಿನ ನಾಚಿಕೆ. ಆರಡಿಯ ದೊಡ್ಡ ಬಾಡಿಯನ್ನು ಮೂರಡಿ ಮಾಡಿಕೊಂಡು, ಮುದುಡಿ ಕೂತು, ಉಪ್ಪಿಟ್ಟು ಮುಕ್ಕಿ, ಚಹಾ ನೆಕ್ಕಿ, ಅಂದರೆ ಕಪ್ಪಿನಿಂದ ಬಸಿಗೆ ಹಾಕಿಕೊಂಡು ಧಾರವಾಡ ಮಂದಿ ಹಾಂಗೆ ಸೊರ್ರsss ಅಂತ ನೆಕ್ಕಿ ಕುಡಿದು, ಓಡುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಅದೆಲ್ಲ ಆಗಿನ ಪದ್ಧತಿ. ಇವತ್ತಿಗೂ ಅಷ್ಟೇ. ನಾವು ಸರ್, ಟೀಚರ್ ಮುಂದೆ ಸ್ನಾನ, ಊಟ, ಇತ್ಯಾದಿ ಮಾಡುವದಿಲ್ಲ. ಭಾಳ ಕಮ್ಮಿ. ಮೊದಲು ನಮಗೆ ಪಾನಪಟ್ಟಿಯ ಹುಚ್ಚಿತ್ತು. ಅದರಲ್ಲೂ ೪೨೦ ಜರ್ದಾ ಪಾನ್. ಧಾರವಾಡದಲ್ಲಿ ಸುತ್ತಮುತ್ತ ನೋಡಿಕೊಂಡು ಬಾಯಿಯೊಳಗೆ ಎಲೆಅಡಿಕೆ ಏರಿಸಬೇಕಾಗುತ್ತಿತ್ತು. ಎಲ್ಲಾದರೂ ಮಾಸ್ತರ್, ಟೀಚರ್ ಮಂದಿ ಕಂಡರೆ ಅಷ್ಟೇ ಮತ್ತೆ. ಅವರು ಏನೆಂದುಕೊಳ್ಳುತ್ತಾರೋ ಅದು ಏನೇ ಇರಲಿ. ನಮಗೇ ಕೆಟ್ಟ ಅಪಮಾನ, ಅಸಹ್ಯ ಎಲ್ಲ ಅನಿಸಿಬಿಡುತ್ತಿತ್ತು. 'ಛೇ! ಜರ್ದಾ ಪಾನ್ ಹಾಕಿಕೊಂಡು ಸರ್ ಎದುರಿಗೆ ಬಂದೆನಲ್ಲ!?' ಅಂತ ಕೆಟ್ಟ ಫೀಲಿಂಗ್ ಬಂದು, ಪರಮ ತುಟ್ಟಿಯ ಜರ್ದಾ ಪಾನನ್ನು ಹಾಕಿದ ಮರುಕ್ಷಣವೇ ಉಗಿದು, ಎದುರಿಗೆ ಕಂಡ ಮಾಸ್ತರರಿಗೆ ಭಕ್ತ ಪ್ರಹಲ್ಲಾದನ ಹಾಗೆ ಅಬ್ಬೇಪಾರಿಯ ರೀತಿಯಲ್ಲಿ ಕೈಮುಗಿದು, ದೈನೇಸಿ ರೀತಿಯಲ್ಲಿ ಹಲ್ಲು ಕಿಸಿದು ನಿಂತಿದ್ದೂ ಇದೆ ಬಿಡಿ. ಅಂದು ಜರ್ದಾ ಪಾನಿಗೆ ಆಹುತಿ ಕೊಟ್ಟಿದ್ದ ಎರಡು ಮೂರು ರೂಪಾಯಿ ಮಟಾಶ್! ಹರೋಹರ!

ಈ ಮಾದರಿಯ ಸಂಪ್ರದಾಯಸ್ತ ಓಲ್ಡ್ ಮಾಡೆಲ್ ಮಂದಿ ನಾವು. ಹೀಗಿದ್ದಾಗ ಈ ಅಮೇರಿಕನ್ ಮೇಡಂ, 'ಬನ್ನಿ. ಎಣ್ಣೆ ಹಾಕೋಣ. ಮೊದಲಿನ ರೌಂಡ್ ನಾನೇ ಹಾಕಿಸುತ್ತೇನೆ,' ಅನ್ನುತ್ತಿದ್ದಾರೆ. ಹೋಗದಿದ್ದರೆ ಸರಿಯಾಗುವದಿಲ್ಲ. ಇದ್ದವರೇ ನಾವು ಒಂದು ಹತ್ತು ಹನ್ನೆರೆಡು ಜನ. ಮೇಡಂ ಅದೆಷ್ಟು ಪ್ರೀತಿಯಿಂದ, ಆತ್ಮೀಯತೆಯಿಂದ ಈಗಷ್ಟೇ ಗುರುತು ಪರಿಚಯ ಮಾಡಿಕೊಂಡಿದ್ದಾರೆ. ಅದಕ್ಕಾದರೂ ಹೋಗಲೇಬೇಕು. ಹೋದ ನಂತರ ಎಣ್ಣೆ ಹಾಕುವದೋ ಬಿಡುವದೋ ಅದು ಬೇರೆ ವಿಷಯ. ಮುಖವಾದರೂ ತೋರಿಸಿ ಬರಲಿಕ್ಕೇಬೇಕು ಅಂತ ಅಂದುಕೊಂಡೆ. ಸರಿ ಅಂತ ಕೆಳಗೆ ಬಂದು ಕಾರು ತೆಗೆದು ಅಲ್ಲೇ ಒಂದು ಮೈಲಿ ದೂರವಿದ್ದ ಪಬ್ ತಲುಪಿಕೊಂಡೆ.

ಒಳಗೆ ಹೋಗಿ ನೋಡಿದರೆ ಆಗಲೇ ಎಲ್ಲರೂ ಬಾರ್ ಕೌಂಟರ್ ಮುಂದೆ ಸೆಟಲ್ ಆಗಿಬಿಟ್ಟಿದ್ದರು. ಕೆಲವರ ಡ್ರಿಂಕುಗಳು ಬಂದಿದ್ದವು. ಉಳಿದವರಿಗೆ ಏನು ಬೇಕು ಅಂತ ಕೇಳಿ ಕೇಳಿ ಜೇನ್ ಮಾರ್ಟನ್ ಮೇಡಂ ಕೊಡಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಎಣ್ಣೆ  ಹಾಕಿಸುವದೆಂದರೆ ಭಯಂಕರ ಉತ್ಸಾಹ ಅವರಿಗೆ. ನಡುನಡುವೆ ತಮ್ಮ ರಂಗುರಂಗಾದ ಡ್ರಿಂಕ್ ಎತ್ತಿಕೊಂಡು ಹೀರುತ್ತಿದ್ದರು. ಏಕ್ದಂ ದಿಲ್ದಾರ್ ಮೇಡಂ. 'Work hard. Play harder,' ಮಾದರಿಯ ಮಹಿಳೆ.

ಮೇಡಂ ಆಹ್ವಾನ ಕೊಟ್ಟರು ಅಂತ ಪಬ್ಬಿಗೆ ಬಂದಾಗಿಬಿಟ್ಟಿದೆ. ಮುಂದೆ? ಮೇಡಂ ಬೇರೆ ಎಲ್ಲರ ಹತ್ತಿರ ಕೇಳಿ ಕೇಳಿ ಮೊದಲ ರೌಂಡಿನ ಡ್ರಿಂಕುಗಳನ್ನು ಆರ್ಡರ್ ಮಾಡುತ್ತಿದ್ದಾರೆ. ಏನು ಡ್ರಿಂಕ್ ಬೇಕು ಅಂತ ಹೇಳಲೂ ಸರಿಯಾಗಿ ನಮಗೆ ಗೊತ್ತಿಲ್ಲ. ಏಕೆಂದರೆ ನಮಗೆ ಬಿಯರ್ ಬಿಟ್ಟರೆ ಏನೂ ಕುಡಿದು ಗೊತ್ತಿಲ್ಲ. ಅದೂ ಸಂಬಳ ಬಂದ ಆಸುಪಾಸಿನ ವಾರಾಂತ್ಯದಲ್ಲಿ ಒಂದು ಒಳ್ಳೆ ಊಟದ ಜೊತೆ ಒಂದೆರೆಡು ಬಿಯರ್ ಹೊಡೆದರೆ ಅದೇ ದೊಡ್ಡ ಮಾತು. ಅದೂ ಮನೆಯಲ್ಲಿ. ಯಾಕೆಂದರೆ ಕುಡಿದ ನಂತರ ನಾವು ಸಾಮಾನ್ಯವಾಗಿ ಗಾಡಿ ಹೊಡೆಯುವದಿಲ್ಲ. ಒಂದೇ ಬಿಯರ್ ಇರಲಿ ಎಷ್ಟೇ ಇರಲಿ. ಪೋಲೀಸ್ ಮಾಮಾ ತಡೆದು ನಿಲ್ಲಿಸಿದರೆ ಯಾವನಿಗೆ ಬೇಕು ಅಮೇರಿಕನ್ ಪೋಲೀಸರ ಜೊತೆ ಝಟಾಪಟಿ, ಫಜೀತಿ? ನಂತರ ಎಣ್ಣೆ ಲೆವೆಲ್ ಜಾಸ್ತಿಯಾಗಿದೆ ಅಂತ ಲೈಸೆನ್ಸ್ ರದ್ದು ಮಾಡಿ ಒದ್ದು ಓಡಿಸಿದರೆ ಮನೆಯಲ್ಲೇ ಕೂಡಬೇಕು. ಓಡಾಡಲು ಕಾರಿಲ್ಲ, ಕಾರಿದ್ದರೂ ಲೈಸೆನ್ಸ್ ಇಲ್ಲ ಅಂದರೆ ಇಲ್ಲಿ ಅಮೇರಿಕಾದಲ್ಲಿ ಕಾಲೇ ಇಲ್ಲ. ಹೀಗೆ ಅನೇಕ ರೀತಿಯ ಚಿಂತೆ, tension ನಮಗೆ. ಹಾಗಾಗಿ ಅಂದು ಏನು ಹೇಳಿದೆ, ಯಾವ ಡ್ರಿಂಕ್ ತರಿಸಲು ಮೇಡಂ ಹತ್ತಿರ ಕೇಳಿದೆ, ಏನು ಕುಡಿದೆ ಅಂತ ಮರೆತೇಹೋಗಿದೆ. ಹೆಚ್ಚಾಗಿ non-alcoholic ಬಿಯರ್, ಅಥವಾ ಫ್ರೂಟ್ ಕಾಕ್ಟೇಲ್, ಸಾಫ್ಟ್ ಡ್ರಿಂಕ್ ಏನಾದರೂ ಕುಡಿದು ಎದ್ದುಬಂದಿರಬೇಕು ಬಿಡಿ. ಬಾಕಿ ಮಂದಿಯೆಲ್ಲ ನಮ್ಮನ್ನು ಒಂದು ವಿಚಿತ್ರ ರೀತಿಯಲ್ಲಿ ನೋಡಿರಬಹುದು. ಅದು ಮೊದಲನೇ ಕ್ಲಾಸ್. ಯಾರದ್ದೂ ಸರಿಯಾಗಿ ಪರಿಚಯವಾಗಿರಲೇ ಇಲ್ಲ. ಸರಿ, ಮೇಡಂ ಅವರಿಗೆ ನಾನು ಏನೋ ಹೇಳಿ, ಅವರು ಅದನ್ನು ಬಾರ್ ಟೆಂಡರ್ ಮನುಷ್ಯನಿಗೆ ಹೇಳಿ, ಅವನು ಆ ಡ್ರಿಂಕ್ ಕೊಟ್ಟು, ಏನೋ ಒಂದು ಡ್ರಿಂಕ್ ಕುಡಿದ ಶಾಸ್ತ್ರ ಮಾಡಿದ್ದಾಯಿತು.

ತಮ್ಮ ಮೊದಲ ಡ್ರಿಂಕ್ ಮುಗಿಸಿದ ಮೇಡಂ ಎದ್ದರು. ಎಲ್ಲರಿಗೂ ಶುಭರಾತ್ರಿ ಹೇಳಿ ಕಳಚಿಕೊಂಡರು. ನಾನೂ ಎದ್ದು ಬಂದೆ. ಇಪ್ಪತ್ತೈದು ಮೈಲಿ ಡ್ರೈವ್ ಮಾಡಿಕೊಂಡು ಬಂದು ಮನೆ ಸೇರಿಕೊಂಡೆ. ಆವತ್ತು ಮಾತ್ರ ಜೇನ್ ಮಾರ್ಟನ್ ಮೇಡಂ ಫುಲ್ ಆವರಿಸಿಕೊಂಡುಬಿಟ್ಟಿದ್ದರು. ಅದೆಷ್ಟೋ ಮಂದಿ ಒಳ್ಳೆಯ, ಒಳ್ಳೆಯ ಮನಸ್ಸಿನ, ತುಂಬಾ ಪ್ರೀತಿ, ಆತ್ಮೀಯತೆ ತೋರಿಸಿದ್ದ ಮಾಸ್ತರರು ಮಾಸ್ತರಣಿಯರು ನಮ್ಮ ಜೀವನದಲ್ಲಿ ಬಂದು ಹೋಗಿದ್ದರು. ಆದರೆ ಅವರೆಲ್ಲರ ತೂಕವೇ ಒಂದು ಕಡೆಯಾದರೆ ಮೊದಲ ಕ್ಲಾಸಿನಲ್ಲೇ ಆ ಪರಿ ಇಂಪ್ರೆಸ್ ಮಾಡಿದ್ದ ಜೇನ್ ಮಾರ್ಟನ್ ಮೇಡಂ ತೂಕವೇ ಒಂದು ಕಡೆ. ಎಲ್ಲ ರೀತಿಯಲ್ಲೂ ತೂಕದ ಮಹಿಳೆ ನಮ್ಮ ಅಕೌಂಟೆನ್ಸಿ ಮೇಡಂ.

ಮುಂದೆ ಕ್ಲಾಸುಗಳು ನಡೆದವು. ಪ್ರತಿ ಕ್ಲಾಸಿನ ನಂತರವೂ, 'ಪಬ್ಬಿಗೆ ಬನ್ನಿ. ಹೋಗಿ ಒಂದು ರೌಂಡ್ ಡ್ರಿಂಕ್ ಹಾಕೋಣ,' ಅಂತ ಮೇಡಂ ಕರೆಯುತ್ತಿದ್ದರು. 'ಮೊದಲ ರೌಂಡ್ ನನ್ನ ಲೆಕ್ಕದಲ್ಲಿ,' ಅನ್ನುವ 'ಎಣ್ಣೆ ಭಾಗ್ಯ' ಯೋಜನೆ ಮಾತ್ರ ಮೊದಲಿನ ದಿನದ ಕ್ಲಾಸಿಗೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ ಅವರು ಕರೆದರೂ ಎಲ್ಲರೂ ಹೋಗುತ್ತಿರಲಿಲ್ಲ. ಮತ್ತೆ ರಾತ್ರಿ ಕ್ಲಾಸ್ ಮುಗಿಯುವ ಹೊತ್ತಿಗೆ ಒಂಬತ್ತರ ಮೇಲಾಗಿ ಹೋಗಿರುತ್ತಿತ್ತು. ಹಾಗಾಗಿ ಎಲ್ಲರಿಗೂ ಗೂಡು ಸೇರಿ, ಊಟ ಮಾಡಿ, ತಾಚಿ ತಾಚಿ ಅಂತ ನಿದ್ದೆ ಮಾಡಬೇಕು. ಜೇನ್ ಮಾರ್ಟನ್ ಮೇಡಂ ಮಾತ್ರ ಪಾಂಗಿತವಾಗಿ ಒಂದು ರೌಂಡ್ ಡ್ರಿಂಕ್ ಹಾಕಿಯೇ ಮನೆ ಕಡೆ ಹೋಗುತ್ತಿದ್ದರು. ಏಕ್ದಂ Happy go lucky ಮಾದರಿಯ ಬಿಂದಾಸ್ ಮೇಡಂ ಅವರು.

ಸಕತ್ತಾಗಿ ಅಕೌಂಟೆನ್ಸಿ ಪಾಠ ಮಾಡಿದರು. ಅವರು ಅದೆಷ್ಟು ವರ್ಷಗಳಿಂದ ಅದೆಷ್ಟು ವಿದ್ಯಾರ್ಥಿಗಳಿಗೆ ಅದನ್ನೇ ಪಾಠ ಮಾಡಿದ್ದರೋ. ಅವರಿಗೆ ಅಕೌಂಟೆನ್ಸಿ ವಿಷಯವನ್ನು effective ಆಗಿ ಪಾಠ ಮಾಡುವ ಬರೋಬ್ಬರಿ ಟೆಕ್ನಿಕ್ ಗೊತ್ತಿತ್ತು. ವಿದ್ಯಾರ್ಥಿಗಳಿಗೆ ಎಲ್ಲೆಲ್ಲಿ ಗೊಂದಲವಾಗುತ್ತದೆ, ಏನೇನು ಸಮಸ್ಯೆಗಳು ಬರುತ್ತವೆ, ಏನೇನು ಡೌಟ್ಸ್ ಬರುತ್ತವೆ ಅಂತ ಎಲ್ಲ ಬರೋಬ್ಬರಿ ಗೊತ್ತಿತ್ತು. ನಾವು ಡೌಟ್ ಕೇಳುವ ಮೊದಲೇ ಅವರಿಗೆ ಅದನ್ನು ಆಗಲೇ ಗ್ರಹಿಸಿ, ಬಗೆಹರಿಸಿಬಿಟ್ಟಾಗಿರುತ್ತಿತ್ತು. ಅಷ್ಟು ನುರಿತ ಅಧ್ಯಾಪಕಿ ಅವರು. ಹಾಗಾಗಿ ನಮಗೆ ಎರಡನೇ ಪ್ರಯತ್ನದಲ್ಲಿ ಅಕೌಂಟೆನ್ಸಿ ಬರೋಬ್ಬರಿ ಅರ್ಥವಾಗಿ, ಫೌಂಡೇಶನ್ ಕರೆಕ್ಟಾಗಿ ಬಿತ್ತು. ಈಗ ಹದಿನೈದು ವರ್ಷಗಳ ನಂತರ ಸ್ವಲ್ಪ ಮರೆತಿರಬಹದು. ಆದರೆ ಜತನವಾಗಿ ಕಾದಿಟ್ಟುಕೊಂಡಿರುವ ಮೇಡಂ ಅಂದು ಕೊಟ್ಟಿದ್ದ ನೋಟ್ಸ್ ರೆಫರ್ ಮಾಡಿಕೊಂಡರೆ ಎಲ್ಲ ರಿಫ್ರೆಶ್ ಆಗಿಬಿಡುತ್ತದೆ. ಅಷ್ಟು ಮಸ್ತಾಗಿ ಪಾಠ ಮಾಡಿದ್ದರು. ಮುಂದೆ ಎಂದಾದರೂ MBA ಕಾಲೇಜಿನಲ್ಲಿ ಮಾಸ್ತರಿಕೆ ಅಂತ ಉದ್ಯೋಗ ಮಾಡಿದರೆ ಉಪಯೋಗಕ್ಕೆ ಬರಬಹುದಾದ ಜೇನ್ ಮಾರ್ಟನ್ ಮೇಡಂ ಮತ್ತು ಇತರೆ ಮಾಸ್ತರುಗಳು ಕೊಟ್ಟ ನೋಟ್ಸ್ ನನ್ನ ಹತ್ತಿರ ಇನ್ನೂ ಇವೆ.

ಆಗ ಮಾಡಿಕೊಂಡಿದ್ದ ನೋಟ್ಸ್ . ಇನ್ನೂ ಇವೆ.
ಪ್ರತಿ ವಾರ ಹೋಂವರ್ಕ್ ಅಂತ ನಾಲ್ಕಾರು ಲೆಕ್ಕ ಕೊಡುತ್ತಿದ್ದರು. ತಾವೇ ಮುತುವರ್ಜಿ ವಹಿಸಿ ತಿದ್ದಿ ವಾಪಸ್ ತಂದುಕೊಡುತ್ತಿದ್ದರು. ಎಷ್ಟೋ ಜನ ಮಾಸ್ತರ್ ಮಂದಿ ಹೋಂ ವರ್ಕ್ ಚೆಕ್ ಮಾಡುವ ಕೆಲಸಗಳನ್ನು ತಮ್ಮ ಟೀಚಿಂಗ್ ಅಸಿಸ್ಟೆಂಟ್ ಜನರಿಗೆ ಕೊಟ್ಟುಬಿಡುತ್ತಾರೆ. ಜೇನ್ ಮಾರ್ಟನ್ ಮೇಡಂ ಮಾತ್ರ ತಾವೇ ಖುದ್ದಾಗಿ ಚೆಕ್ ಮಾಡಿ ತಂದುಕೊಡುತ್ತಿದ್ದರು. ವಯಕ್ತಿಕವಾಗಿ feedback ಸಹ ಕೊಡುತ್ತಿದ್ದರು. ತಪ್ಪಿದ್ದನ್ನು ಬರೋಬ್ಬರಿ ತಿದ್ದಿ, ತಿಳಿಸಿ ಹೇಳುತ್ತಿದ್ದರು. ಆ ಮಟ್ಟದಲ್ಲಿ ವಯಕ್ತಿಕವಾಗಿ ಕಾಳಜಿ ವಹಿಸಿ ಪಾಠ ಮಾಡಿದ ಶಿಕ್ಷಕ ಶಿಕ್ಷಕಿಯರು ಭಾಳ ಕಮ್ಮಿ.

ಮಿಡ್ ಟರ್ಮ್ ಪರೀಕ್ಷೆಯ ಉತ್ತರ ಪತ್ರಿಕೆ.

ಒಂದು ಕಾಲದಲ್ಲಿ ತಲೆಗೇ ಹತ್ತದಿದ್ದ ಅಕೌಂಟೆನ್ಸಿ ವಿಷಯದಲ್ಲಿ ಬರೋಬ್ಬರಿ ಫೌಂಡೇಶನ್ ಬಿದ್ದಿದ್ದೇ ಬಿದ್ದಿದ್ದು ಅದರಲ್ಲೇ ಕಳೆದುಹೋದೆ. ಅಷ್ಟು ಹಿಡಿಸಿಬಿಟ್ಟಿತ್ತು ಆ ವಿಷಯ. ನಂತರ ಪಬ್ಲಿಕ್ ಕಂಪನಿಗಳ ಫೈನಾನ್ಸಿಯಲ್ ಸ್ಟೇಟ್ಮೆಂಟ್ ತೆಗೆತೆಗೆದು ವಿಶ್ಲೇಷಣೆ ಮಾಡಿದ್ದೇ ಮಾಡಿದ್ದು. ಅಕೌಂಟೆನ್ಸಿ ಎಷ್ಟು ಹಿಡಿಸಿಬಿಟ್ಟಿತ್ತು ಅಂದರೆ MBA ನಲ್ಲಿ specialization ಅಕೌಂಟೆನ್ಸಿ ವಿಷಯದಲ್ಲೇ ಮಾಡಿಬಿಡಲೇ ಅನ್ನಿಸಿತ್ತು. ಆದರೆ ಫೈನಾನ್ಸ್ ವಿಷಯ ಅಕೌಂಟೆನ್ಸಿ ವಿಷಯಕ್ಕಿಂತ ಮತ್ತೂ ಜಾಸ್ತಿ ಹಿಡಿಸಿತ್ತು. ಅಕೌಂಟೆನ್ಸಿ ಒಂದು ತರದ pure ವಿಷಯವಾದರೆ ಫೈನಾನ್ಸ್ applied ವಿಷಯ. ಫೈನಾನ್ಸ್ ಓದಬೇಕು ಅಂದರೆ ಅಕೌಂಟೆನ್ಸಿ ಬರೋಬ್ಬರಿ ಬರಬೇಕು. IT ಅಥವಾ Marketing ನಲ್ಲಿ specialization ಮಾಡಲು ಕೆಲವರು ಸಲಹೆ ಕೊಟ್ಟರೂ ನಂತರ ಮಾಡಿದ್ದು ಫೈನಾನ್ಸ್ ನಲ್ಲೇ. ಅದರಲ್ಲೂ investment finance, portfolio management, modern portfolio theory, capital management, corporate finance ಎಲ್ಲ ತುಂಬಾ ಆಸಕ್ತಿದಾಯಕವಾಗಿದ್ದವು. ಅವುಗಳನ್ನೆಲ್ಲ ಸರಿಯಾಗಿ ತಿಳಿಯಲು, ಎಲ್ಲದರಲ್ಲೂ ಟಾಪ್ ಮಾರ್ಕ್ಸ್ ಗಳಿಸಲು ಮುಖ್ಯವಾಗಿದ್ದ ಅಕೌಂಟೆನ್ಸಿ ವಿಷಯಕ್ಕೆ ಬರೋಬ್ಬರಿ ಬೇಸ್ ಹಾಕಿದವರು ಮಾತ್ರ ನಮ್ಮ 'ಎಣ್ಣೆ ಮೇಡಂ' ಅವರೇ. ಅವರಿಗೊಂದು ದೊಡ್ಡ ಸಲಾಮ್! ಫೈನಾನ್ಸ್ ವಿಷಯಕ್ಕೆ ಅದೇ ರೀತಿ ಬರೋಬ್ಬರಿ ಬೇಸ್ ಹಾಕಿದ್ದವರು ಪ್ರೊಫೆಸರ್ ಟಾಮ್ ಓಹಾರಾ ಸರ್ ಅವರು. ಅವರಿಗೂ ದೊಡ್ಡ ನಮಸ್ಕಾರ. ಅವರಿಗೆ ಈಗ ಸುಮಾರು ತೊಂಬತ್ತು ವರ್ಷವಿರಬೇಕು. ಹೇಗಿದ್ದಾರೋ ಏನೋ!?

ಸೆಪ್ಟೆಂಬರ್ ತಿಂಗಳಲ್ಲಿ ಶುರುವಾಗಿದ್ದ ಅಕೌಂಟೆನ್ಸಿ ಕೋರ್ಸ್ ಡಿಸೆಂಬರ್ ಎರಡನೇ ವಾರದ ಹೊತ್ತಿಗೆ ಮುಗಿಯಿತು. ಫೈನಲ್ ಪ್ರಾಜೆಕ್ಟ್ ಅಂತ ಎರಡು ಪ್ರತಿಸ್ಪರ್ಧಿ ಪಬ್ಲಿಕ್ ಕಂಪನಿಗಳ ಫೈನಾನ್ಸಿಯಲ್ ಸ್ಟೇಟ್ಮೆಂಟ್ ವಿಶ್ಲೇಷಣೆ ಮಾಡಿ ಒಂದು ರಿಪೋರ್ಟ್ ತಯಾರು ಮಾಡಬೇಕಿತ್ತು. ನಾನು ನಮ್ಮ ಕಂಪನಿ (Brooks Automation) ಮತ್ತು ಅಂದು ನಮ್ಮ ಪ್ರತಿಸ್ಪರ್ಧಿಯಾಗಿದ್ದ PRI Automation ಅನ್ನುವ ಮತ್ತೊಂದು ಕಂಪನಿಯನ್ನು ಅಭ್ಯಾಸ ಮಾಡಿ, ಅವುಗಳ ಹಣಕಾಸಿನ ಸ್ಥಿತಿಗತಿಗಳನ್ನು ವಿಶ್ಲೇಷಿಸಿ, ಒಂದು ರಿಪೋರ್ಟ್ ರೆಡಿ ಮಾಡಿದ್ದೆ. ದೊಡ್ಡ ಮಟ್ಟದ ಫುಲ್ ಫೈನಾನ್ಸಿಯಲ್ ಅನಾಲಿಸಿಸ್ ಮಾಡಿದ್ದೆ. ಮೇಡಂ expect ಮಾಡಿದ್ದರಕಿಂತ ನಾಲ್ಕು ಪಟ್ಟು ಹೆಚ್ಚಿನ ಮಾಹಿತಿ, ಹೆಚ್ಚಿನ ಶ್ರಮ ಎಲ್ಲ ಇತ್ತು ಅದರಲ್ಲಿ. ಎರ್ರಾಬಿರ್ರಿ ಖುಷಿಯಾಗಿಬಿಟ್ಟ ಮೇಡಂ A+ ಗ್ರೇಡ್ ಕೊಟ್ಟಿದ್ದೊಂದೇ ಅಲ್ಲ ಸಿಕ್ಕಾಪಟ್ಟೆ ಹೊಗಳಿಬಿಟ್ಟಿದ್ದರು. ಅದು ಅವರ ದೊಡ್ಡ ಗುಣ ಬಿಡಿ. ಆದರೆ ಮೇಡಂ ಒಂದು ಮಾತು ಹೇಳಿ, ಆಖ್ರೀ ಬಾರಿಗೆ ಬೆನ್ನು ತಟ್ಟಿ, ತಮ್ಮ ಕಾರ್ ಹತ್ತಿ ಮರೆಯಾಗಿದ್ದರು. ಅವರು ಅಂದ ಕೊನೆಯ ಮಾತಿನ ಬಗ್ಗೆ ಅಂದು ಜಾಸ್ತಿಯೇನೂ ಲಕ್ಷ, ಮಹತ್ವ ಕೊಟ್ಟಿರಲಿಲ್ಲ. ಆದರೆ ಒಂದೆರೆಡು ವಾರಗಳ ನಂತರ ಬಂದ ಸುದ್ದಿ ಬೆಚ್ಚಿಬೀಳಿಸಿತ್ತು. ಮೇಡಂ ಅವರ ಭವಿಷ್ಯವಾಣಿ ಸತ್ಯವಾಗಿತ್ತು.

financial analysis ಪ್ರಾಜೆಕ್ಟ್ ರಿಪೋರ್ಟ್

'ನೀನು ತಯಾರು ಮಾಡಿದ financial analysis ರಿಪೋರ್ಟ್ ತುಂಬಾ ಚೆನ್ನಾಗಿದೆ. ನನಗೆ ಅನ್ನಿಸಿದ್ದು, ನಿಮ್ಮ ಕಂಪನಿ ಆ ಮತ್ತೊಂದು ಕಂಪನಿಯನ್ನು ಖರೀದಿ ಮಾಡಿಬಿಡಬೇಕು. ಕಡಿಮೆ ಬೆಲೆಯಲ್ಲಿ ಸಿಕ್ಕರೂ ಸಿಕ್ಕೀತು!' ಅಂತ ಹೇಳಿ ಕಣ್ಣು ಮಿಟುಕಿಸಿದ್ದರು ಮೇಡಂ. ಹಾಗೇ ಆಗಿಬಿಡಬೇಕೇ?! Brooks Automation ಅನ್ನುವ ನಮ್ಮ ಕಂಪನಿ PRI Automation ಪ್ರತಿಸ್ಪರ್ಧಿ ಕಂಪನಿಯನ್ನು ಖರೀದಿ ಮಾಡಿತು. ಮೇಡಂ ಅವರಿಗೆ ಆ ವಿಷಯ ಗೊತ್ತಿತ್ತು ಅಂತಲ್ಲ. ಸುಮ್ಮನೇ ಮಾತಿಗೆ ಹೇಳಿದ್ದರು. ಅವರ ನುರಿತ ಅಕೌಂಟೆಂಟ್ ಕಣ್ಣಿಗೆ ನನ್ನ ವರದಿಯಲ್ಲಿದ್ದ ಅಂಕಿಅಂಶಗಳು ಹಾಗೆ ಕಂಡುಬಂದಿದ್ದವೋ ಏನೋ. ಆದರೆ ಅಂದು ಅವರಾಡಿದ್ದ ಮಾತು ಮಾತ್ರ ನಿಜವಾಗಿಹೋಗಿತ್ತು.

ಸೆಮಿಸ್ಟರ್ ಮುಗಿದ ಮೇಲೆ A ಗ್ರೇಡ್ ಬಂದಿದ್ದರಲ್ಲಿ ಆಶ್ಚರ್ಯವೇನೂ ಇರಲ್ಲಿಲ್ಲ. ಅದಕ್ಕಿಂತ ಮುಖ್ಯವಾಗಿ ಒಂದು ಕಾಲದಲ್ಲಿ ಅರ್ಥವಾಗಲು ಸಾಧ್ಯವೇ ಇಲ್ಲ ಅಂತ ಅನ್ನಿಸಿದ್ದ ಅಕೌಂಟೆನ್ಸಿ ಮೇಲೆ ಒಳ್ಳೆ ಹಿಡಿತ ಬಂದಿತ್ತು. ಅಕೌಂಟೆನ್ಸಿ ಒಂದೇ ಅಲ್ಲ ಎಲ್ಲ ಫೈನಾನ್ಸ್ ವಿಷಯಗಳಲ್ಲೂ A ಗ್ರೇಡೇ. ಆಸಕ್ತಿ ಅಷ್ಟಿತ್ತು. ಅಷ್ಟು ಆಸಕ್ತಿಯಿಂದ, ಒಂದು ವಿಷಯದ ಮೇಲಿರುವ ನಿಜವಾದ ಇಂಟರೆಸ್ಟ್ ನಿಂದ ಅಧ್ಯಯನ ಮಾಡಿದ್ದು MBA ಅಕೌಂಟಿಂಗ್ ಮತ್ತು ಫೈನಾನ್ಸ್ ವಿಷಯಗಳನ್ನೇ ಇರಬೇಕು. ಬೇರೆಲ್ಲ ಏನೇ ಇಂಜಿನಿಯರಿಂಗ್ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿಕೊಂಡಿದ್ದರೂ ಅವೆಲ್ಲ ಗುಂಪಿನಲ್ಲಿ ಗೋವಿಂದನಂತೆ ಓದಿ, ಎಮ್ಮೆ ಮುಳುಗಿ ಎದ್ದು ಬಂದಂತೆ ಎದ್ದು ಬಂದಿದ್ದೇ ಜಾಸ್ತಿ.

ಈ ವರ್ಷದ ಶಿಕ್ಷಕ ದಿನಾಚರಣೆಯಂದು ಡಾ. ಜೇನ್ ಮಾರ್ಟನ್ ಮೇಡಂ ಬಗ್ಗೆ ಬರೆಯಬೇಕು ಅಂದುಕೊಂಡಾಗ ಇದೆಲ್ಲ ನೆನಪಾಯಿತು. ನಿಜ ಹೇಳಬೇಕು ಅಂದರೆ ನನಗೆ ಅವರ surname ಮಾರ್ಟನ್ ಅಂತ ಮರೆತೇಹೋಗಿತ್ತು. ಜೇನ್ ಅಂತ ಹೆಸರು ನೆನಪಿತ್ತು. ಗೂಗಲ್ ಇದ್ದಾಗ ಚಿಂತೆಯಾಕೆ? Jane accounting Suffolk - ಅಂತ ಸರ್ಚ್ ಕೊಟ್ಟೆ ನೋಡಿ. ಜೇನ್ ಮಾರ್ಟನ್ ಮೇಡಂ ಕಂಡೇಬಿಟ್ಟರು. ಈಗ ಅವರು ನಮ್ಮ Suffolk University ಯಲ್ಲಿ ಇಲ್ಲವಂತೆ. ಕಳೆದ ಹದಿನೈದು ವರ್ಷದಲ್ಲಿ ನಾಲ್ಕಾರು ಕಡೆ ನೌಕರಿ ಮಾಡಿ ತಮ್ಮ ಮೂಲ ರಾಜ್ಯವಾದ ಕೊಲೊರಾಡೊ ರಾಜ್ಯದ ಡೆನ್ವರ್ ಯೂನಿವರ್ಸಿಟಿ ಸೇರಿಕೊಂಡಿದ್ದಾರಂತೆ.

ನಮ್ಮ ಪ್ರೀತಿಯ ಜೇನ್ ಮಾರ್ಟನ್ ಮೇಡಂ ಎಲ್ಲೇ ಇರಲಿ ಫುಲ್ ಆರಾಮ್ ಇರಲಿ. ಅವರಿಗೆ ಎಲ್ಲ ಸುಖ, ಸಂತೋಷ, ನೆಮ್ಮದಿ ಸಿಗಲಿ. ಅವರು ಮತ್ತೂ ಸಾವಿರ ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಬರೋಬ್ಬರಿ ಅಕೌಂಟೆನ್ಸಿ ಪಾಠ ಮಾಡಲಿ. ಎಲ್ಲರಿಗೂ ಬರೋಬ್ಬರಿ ಎಣ್ಣೆ ಹೊಡಿಸಲಿ. ಹೊತ್ತೊತ್ತಿಗೆ ಎಣ್ಣೆ ಇಲ್ಲದಿದ್ದರೆ ಲೆಕ್ಕ ಮಾಡಿ ಮಾಡಿ ತಲೆಯ ಇಂಜಿನ್ ಸೀಜ್ ಆಗಿಬಿಡುತ್ತದೆ. ಅದು ಗೊತ್ತಿದ್ದೇ ಜೇನ್ ಮಾರ್ಟನ್ ಮೇಡಂ ಪ್ರಥಮ ಕ್ಲಾಸಿನ ನಂತರ ವಿದ್ಯಾರ್ಥಿಗಳ ತಲೆ ಗರಂ ಆಗಿರುತ್ತದೆ ಮತ್ತು ತಮ್ಮ ತಲೆಯೂ ಹಾಟ್ ಆಗಿರುತ್ತದೆ ಅಂತ ಎಣ್ಣೆ ಹೊಡೆಸುತ್ತಿದ್ದರೋ ಏನೋ.

ಮುಂದಿನ ವರ್ಷದ ಶಿಕ್ಷಕ ದಿನಾಚರಣೆಗೆ ಮತ್ತೊಬ್ಬ ಖತರ್ನಾಕ್ ಶಿಕ್ಷಕರು ಮತ್ತು ಅವರ ಬಗ್ಗೆ ದಿಲ್ದಾರ್ ನೆನಪುಗಳು ಬಂದರೆ ಮತ್ತೆ ಬರೆಯೋಣ.

ಎಲ್ಲ ಶಿಕ್ಷಕ ಶಿಕ್ಷಕಿಯರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು. ನೀವು ಕಲಿಸಿದ ವಿದ್ಯೆ, ತಿನ್ನಿಸಿದ ಉಪ್ಪಿಟ್ಟು, ಕುಡಿಸಿದ ಚಹಾ, ಹಾಕಿಸಿದ ಎಣ್ಣೆ ಎಲ್ಲವಕ್ಕೂ ಅನಂತ ಕೃತಜ್ಞತೆಗಳು. ತಮ್ಮೆಲ್ಲರ ಆಶೀರ್ವಾದ, ಶುಭ ಹಾರೈಕೆಗಳು ಸದಾ ಇರಲಿ.

* ಮೇಲೆ ಹಾಕಿದ ಡಾ. ಜೇನ್ ಮಾರ್ಟನ್ ಅವರ ಭಾವಚಿತ್ರವನ್ನು ಡೆನ್ವರ್ ಯೂನಿವರ್ಸಿಟಿಯ ವೆಬ್ ಪೇಜಿನಿಂದ ಎತ್ತಿದ್ದು. ಎಲ್ಲ ಕಾಪಿ ರೈಟ್ಸ್ ಅವರವು.

Wednesday, September 02, 2015

ಕೋತಿ ವಿದ್ಯೆ, ಬ್ರಹ್ಮ ವಿದ್ಯೆ, ಶಿಕ್ಷಕ, ಗುರು......

ಕನ್ನಡದಲ್ಲಾದರೆ ಶಿಕ್ಷಕ, ಗುರು ಅನ್ನುವ ಎರಡು ಬೇರೆ ಬೇರೆ ಪದಗಳಿವೆ. ಇಂಗ್ಲೀಷಿನಲ್ಲಿ ಎರಡಕ್ಕೂ ಟೀಚರ್ ಅಂದುಬಿಡುತ್ತಾರೆ. master ಅನ್ನುವ ಪದವನ್ನು ಗುರು ಎಂಬ ಅರ್ಥದಲ್ಲಿ ಬಳಸುತ್ತಾರಾದರೂ, ಬಹಳ ಕಮ್ಮಿ. ಮಾಸ್ಟರ್ ಪದ ರಿಂಗ್ ಮಾಸ್ಟರ್, ಸ್ಟೇಷನ್ ಮಾಸ್ಟರ್, ಪೋಸ್ಟ್ ಮಾಸ್ಟರ್, ಹೆಡ್ ಮಾಸ್ಟರ್ ಅನ್ನುವ ಶಬ್ದಗಳಲ್ಲಿ ಬಳಕೆಯಾಗುವದೇ ಹೆಚ್ಚು.

ಶಿಕ್ಷಕ ಮತ್ತು ಗುರು - ಇವೆರೆಡರ ನಡುವೆ ವ್ಯತ್ಯಾಸ ಇದೆಯೇ?

ಮೊನ್ನೆ ಗುರು ಪೂರ್ಣಿಮೆಯಂದು ಜಗದ್ಗುರು ಶ್ರೀಕೃಷ್ಣ ಪರಮಾತ್ಮನಿಂದ ಹಿಡಿದು, ನಮ್ಮ ಆದಿ ಗುರು ಶಂಕರರನ್ನೂ ಸೇರಿಸಿಕೊಂಡು ಎಲ್ಲರಿಗೂ ನಮನ ಸಲ್ಲಿಸುವಾಗ ಒಂದು ಮಾತು ನೆನಪಿಗೆ ಬಂದಿತ್ತು. ಶಿಕ್ಷಕ ಮತ್ತು ಗುರುವಿನ ನಡುವಿನ ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ತಿಳಿಸಿದ ಒಂದು ಮಾತು.

'ಶಿಕ್ಷಕ ಬದುಕುವದನ್ನು ಕಲಿಸಿದರೆ, ಗುರು ಬದುಕನ್ನೇ ಬದಲಾಯಿಸಿಬಿಡುತ್ತಾನೆ.'

ಓಶೋ ಉರ್ಫ್ ಭಗವಾನ ರಜನೀಶ್ ಒಂದು ಕಡೆ ಹೇಳುತ್ತಾರೆ, 'ತಾನು ಕಲಿತಿದ್ದನ್ನು ಇನ್ನೊಬ್ಬರಿಗೆ ಕಲಿಸುವವ ಶಿಕ್ಷಕ. ತಾನು ತಿಳಿದಿದ್ದನ್ನು ಇನ್ನೊಬ್ಬರಿಗೆ ತಿಳಿಯುವಂತೆ ಕಲಿಸುವವ ಗುರು,' ಅಂತ.

The master has known, and imparts what he has known. The teacher has received from one who has known, and delivers it intact to the world, but he himself has not known.

(From the book - Autobiography of a Spiritually Incorrect Mystic by Osho)

ಕಲಿತಿದ್ದು vs. ತಿಳಿದಿದ್ದು. ನೀವೇ ವಿಚಾರ ಮಾಡಿ. ಎಷ್ಟೋ ವಿಷಯಗಳನ್ನು ಕಲಿತಿರುತ್ತೇವೆ ಆದರೆ ಪೂರ್ತಿ ತಿಳಿದಿರುವದಿಲ್ಲ. ಅರಿತಿರುವದಿಲ್ಲ. ಎಷ್ಟೋ ಸಮಸ್ಯೆಗಳನ್ನು ಫಾರ್ಮುಲಾ ಹಚ್ಚಿ ಚಕಾಚಕ್ ಅಂತ ಬಿಡಿಸಿಬಿಡುತ್ತೇವೆ. ಆದರೆ ಉಪಯೋಗಿಸಿದ ಫಾರ್ಮುಲಾ ಹಿಂದಿನ ಒರಿಜಿನಲ್ concept ಎಲ್ಲ ಸಮಯದಲ್ಲೂ ಗೊತ್ತಿರುವದಿಲ್ಲ. ಗೊತ್ತಿರಲೇಬೇಕು ಅಂತೇನೂ ಇಲ್ಲ. ಕಲಿತ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲೂಬೇಕು ಅಂದರೆ ಈ ಜನ್ಮ ಸಾಕಾಗಲಿಕ್ಕಿಲ್ಲ. ಕಾರ್ ಚಲಾಯಿಸುವದನ್ನು ಕಲಿಯುತ್ತೇವೆ. ಹಾಗಂತ ಕಾರ್ ಹೇಗೆ ಕೆಲಸ ಮಾಡುತ್ತದೆ ಅನ್ನುವದನ್ನು ತಿಳಿಯುತ್ತ ಕೂಡಲಿಕ್ಕೆ ಆಗುತ್ತದೆಯೇ? ಅದನ್ನು ಕಲಿತು, ತಿಳಿಯಬೇಕಾದ ಅವಶ್ಯಕತೆ ಇರುವದು ಆಟೋಮೊಬೈಲ್ ಇಂಜಿನಿಯರ್, ಮೆಕ್ಯಾನಿಕ್ ಮಂದಿಗೆ ಮಾತ್ರ.

'ಶಿಕ್ಷಕ ಬದುಕುವದನ್ನು ಕಲಿಸಿದರೆ, ಗುರು ಬದುಕನ್ನೇ ಬದಲಾಯಿಸಿಬಿಡುತ್ತಾನೆ,' ಅಂದ ಮಾತ್ರಕ್ಕೆ ಶಿಕ್ಷಕ ಕಲಿಸಿದ ಬದುಕಲು ಬೇಕಾಗುವ ವಿದ್ಯೆ ಕಮ್ಮಿ ಕಿಮ್ಮತ್ತಿನದು ಅಥವಾ ಗುರು ಕಲಿಸುವ ಬ್ರಹ್ಮವಿದ್ಯೆ, ಆತ್ಮವಿದ್ಯೆ ಹೆಚ್ಚಿನದು ಅಂತ ಲೆಕ್ಕವಲ್ಲ. ಅವೆರೆಡೂ ಒಂದಕ್ಕೊಂದು ಪೂರಕ. ಶಿಕ್ಷಕ ಕಲಿಸಿದ ವಿದ್ಯೆಗಳಿಂದ ಒಂದು ತಕ್ಕ ಮಟ್ಟಿನ ಬದುಕು ಕಟ್ಟಿಗೊಂಡಿದ್ದರೆ ಮಾತ್ರ ಗುರು ಯಾವಾಗಲೋ ಬಂದು ಅದನ್ನು ಬದಲಾಯಿಸಿಯಾನು. ಬದುಕೇ ಇಲ್ಲದಿದ್ದರೆ ಬದಲಾಯಿಸಲಿಕ್ಕೆ ಏನಿದೆ?

ಬಂಗಾರದಂತಹ ಬದುಕು, ಬಂಗಾರದಂತಹ ಬದುಕು ಕಟ್ಟಿಗೊಂಡನು / ಕಟ್ಟಿಗೊಂಡಳು ಅಂತ ಕೇಳುತ್ತಿರುತ್ತೇವೆ. ಇಲ್ಲಿ ಬಂಗಾರ ಎಲ್ಲಿಂದ ಬಂತು? ಅಲ್ಲೇ ಒಳ್ಳೆಯ ಶಿಕ್ಷಕರ ಮಹತ್ವ ತಿಳಿಯೋದು. ನಮಗೇ ಗೊತ್ತಿರೋದಿಲ್ಲ ನಾವೆಲ್ಲರೂ ಒಂದು ಬಂಗಾರದ ಗಣಿಯ ಮೇಲೆಯೇ ಕೂತಿದ್ದೇವೆ ಅಂತ. ನಾವು ಮಣ್ಣಿನ ದಿಬ್ಬದ ಮೇಲೆ ಕೂತಿದ್ದೇವೆ ಅಂತ ತಿಳಿದಿರುತ್ತೇವೆ. ಆದರೆ ಒಳ್ಳೆ, ನುರಿತ ಶಿಕ್ಷಕನಿಗೆ ಮಾತ್ರ ನೀವು ಕುಳಿತಿದ್ದು ಬರೋಬ್ಬರಿ ಬಂಗಾರದ ಗಣಿ ಮಾದರಿಯ ದಿಬ್ಬದ ಮೇಲೆಯೇ ಅಂತ ಗೊತ್ತಾಗಿಬಿಡುತ್ತದೆ. ನಿಮ್ಮಲ್ಲೇ ಹುದುಗಿರುವ ಬಂಗಾರದ ಅದಿರು ಅಂದರೆ ಅದೇ ನಿಮ್ಮ hidden potential. ನಿಮ್ಮ ಬಲಗಳು (strengths) ಯಾವವು, ಬಲಹೀನತೆಗಳು (weaknesses) ಯಾವವು ಎಲ್ಲ ಬರೋಬ್ಬರಿ ಗೊತ್ತಾಗುವದು ಒಳ್ಳೆಯ ಶಿಕ್ಷಕರಿಗೆ ಮಾತ್ರ. ನಿಮ್ಮ hidden potential ಅನ್ನು ನಿಮಗೇ ತೋರಿಸಿ, ಅದನ್ನು ಹೇಗೆ ಸತ್ವಶಾಲಿಯಾಗಿ (effective) ಬಳಸಿಕೊಂಡು, ಹೇಗೆ ಒಳ್ಳೆಯ ಬಾಳು ರೂಪಿಸಿಕೊಳ್ಳಬೇಕು ಅಂತ ತೋರಿಸಿಕೊಡುತ್ತಾರೆ ಶಿಕ್ಷಕರು. ಶಿಕ್ಷಣ ವ್ಯವಸ್ಥೆ ಅದಕ್ಕೆ ಪೂರಕವಾಗಿ ಇರಬೇಕಷ್ಟೇ. ಮತ್ತೆ ಶಿಕ್ಷಕ ತೋರಿಸಬಹುದಾದ, ನಮ್ಮಲ್ಲೇ ಇರುವ hidden potential ನಮಗೇ ಇಷ್ಟವಾಗಬೇಕು. ಒಳ್ಳೆ ಬರಹಗಾರನ hidden potential ಇಟ್ಟುಕೊಂಡು ಡಾಕ್ಟರ ಆಗುತ್ತೇನೆ ಅಂತ ಹೇಳಿ ಹೊರಟರೆ ಬಂಗಾರದ ಗಣಿ ಬಿಟ್ಟು ಮಣ್ಣಿನ ದಿಬ್ಬ ಅಗೆದಂತೆಯೇ.

ಹೀಗೆ ನಮ್ಮಲ್ಲೇ ಇರುವ hidden potential ಎಂಬ ಬಂಗಾರದ ಗಣಿಯನ್ನು ಹೇಗೆ ಅಗೆಯಬೇಕು, ಅದಿರನ್ನು ಹೇಗೆ ಹೊರತೆಗೆಯಬೇಕು, ಹೇಗೆ ಸಂಸ್ಕರಿಸಬೇಕು, ಇತ್ಯಾದಿ ಹೇಳಿಕೊಡುತ್ತಾರೆ ಒಳ್ಳೆ ಶಿಕ್ಷಕರು. ಬಂಗಾರ ಉಪಯೋಗಕ್ಕೆ ಬರಬೇಕು ಅಂದರೆ ಅದಕ್ಕೊಂದಿಷ್ಟು ತಾಮ್ರ ಇತ್ಯಾದಿ ಸೇರಿಸಬೇಕು. ಅಂದರೆ ಕೇವಲ ಪುಸ್ತಕ ವಿದ್ಯೆ ಅಷ್ಟೇ ಅಲ್ಲ ಜೊತೆಗೆ ವ್ಯಾವಹಾರಿಕ ಜ್ಞಾನವೂ ಬೇಕು ಅಂದರೆ academic knowledge ಜೊತೆಗೆ ಒಂದಿಷ್ಟು street smartness ಸಹ ಬೇಕು ಅಂತ ಅರ್ಥ. ಇದೆಲ್ಲ ಇದ್ದರೆ ಬರೋಬ್ಬರಿ ಬಂಗಾರದ ಗಣಿಗಾರಿಕೆ ಮಾಡಿ, ಬಂಗಾರ ತೆಗೆದು, ಏನು ಬೇಕೋ ಎಲ್ಲ ಆಭರಣ ಮಾಡಿಕೊಂಡು, 'ಬಂಗಾರದಂತಹ ಬದುಕು' ಕಟ್ಟಿಕೊಳ್ಳಬಹುದು. ಅದಕ್ಕೆ ಒಳ್ಳೆಯ ಶಿಕ್ಷಕರು ತುಂಬಾ ಸಹಕಾರಿ. ಬೇಕೇಬೇಕು. ಒಳ್ಳೆಯ ಶಿಕ್ಷಕರ ಸಹಾಯ, ಮಾರ್ಗದರ್ಶನ ಇದ್ದರೆ ಹತ್ತು ನಿಮಿಷದಲ್ಲಿ ಕಲಿಯಬಹುದಾದ್ದನ್ನು ಸ್ವಂತ ಕಲಿಯಲು ಹತ್ತು ದಿನ ಬೇಕಾಗುತ್ತದೆ. ಅಷ್ಟು ಟೈಮ್ ಯಾರ ಹತ್ತಿರವೂ ಇಲ್ಲ. ಹಾಗಾಗಿ self study ಎಷ್ಟೇ ಸಮಾಧಾನ, ಸಂತೃಪ್ತಿ ತಂದುಕೊಟ್ಟರೂ ಅದು ತುಂಬಾ ನಿಧಾನ.

ಹೀಗೆ ಒಳ್ಳೆಯ ಶಿಕ್ಷಕ ಬಂಗಾರದಂತಹ ಬಾಳು ಕಟ್ಟಿಕೊಳ್ಳಲು ಸಹಾಯಮಾಡಿ ಹೋಗಿರುತ್ತಾನೆ. ಹಾಗೆಯೇ ಬಾಳು ಕೂಡ ಕಟ್ಟಿಗೊಂಡಿರುತ್ತೇವೆ. ನಂತರ ಯಾವಾಗಲೋ ನಮ್ಮ ಪರಿಸ್ಥಿತಿ ಅನುಕೂಲವಾದಾಗ, ವ್ಯಕ್ತಿತ್ವ ಪಕ್ವವಾದಾಗ, ಮುಹೂರ್ತ ಕೂಡಿಬಂದಾಗ ಅದೆಲ್ಲಿಂದಲೋ ಒಬ್ಬವ ಬಂದು ನಿಲ್ಲುತ್ತಾನೆ. ಅವನೇ ಗುರು! ಗುರು ಅಂತ ಅವನೇನೂ ಬೋರ್ಡ್ ಹಾಕಿಕೊಂಡು ಬಂದು ನಿಂತಿರುವದಿಲ್ಲ. ನಮ್ಮಲ್ಲೇ ಹುದುಗಿರುವ ಪರಮಗುರು, ನಮ್ಮ ಆತ್ಮಗುರು ಮಾನವಾಕೃತಿಯ ಆ ಗುರುವಿನಲ್ಲಿ ತನ್ನನ್ನೇ ತಾನು ಕಂಡುಕೊಂಡು ಆ ಆಕೃತಿಯನ್ನು ಗುರು ಅಂತ ಸ್ವೀಕರಿಸಿಬಿಡುತ್ತಾನೆ. ಅದು ಜೀವಂತ ಆಕೃತಿಯೇ ಆಗಿರಬಹುದು ಅಥವಾ ಎಂದೋ ಅಳಿದು ಹೋದ ಆಕೃತಿಯ ಉಪದೇಶವೇ  ಇರಬಹುದು. ಕೃಷ್ಣ, ಬುದ್ಧ, ಕ್ರಿಸ್ತ, ಆದಿ ಶಂಕರರು ಇವತ್ತು ಇಲ್ಲ. ಆದರೂ ಅನೇಕರಿಗೆ ಅವರುಗಳೇ ಗುರುಗಳು, ಅವರ ಉಪದೇಶಗಳ ಮೂಲಕ.

ಗುರು ಬದುಕು ಬದಲಾಯಿಸುವದು ಅಂದರೆ ನಿಮ್ಮ ಬದುಕು ಬಂಗಾರದ್ದೇ ಆಗಿದ್ದರೂ ಅದೆಲ್ಲ ಕವಡೆ ಕಿಮ್ಮತ್ತಿಲ್ಲದ ಕಾಗೆ ಬಂಗಾರ ಅಂದುಬಿಡುತ್ತಾನೆ. ನೀವು, ನಿಮ್ಮ ಬಾಡಿ, ನಿಮ್ಮ ಗಾಡಿ, ಲೇಡಿ, ಬೀಡಿ ಎಲ್ಲ ಬಂಗಾರದ್ದೇ ಇರಬಹುದು. ಆದರೆ ಆತ್ಮಜ್ಞಾನ, ಬ್ರಹ್ಮಜ್ಞಾನ ಮತ್ತು ಅದು ತಂದುಕೊಡುವ ಸಮೃದ್ಧಿ, ಸಮಾಧಾನ, ಸಂತೃಪ್ತಿ ಮುಂದೆ ಇವೆಲ್ಲ ಕಾಗೆ ಬಂಗಾರಕ್ಕೆ ಸಮಾನ ಅಂತ ಕಲಿಸಿಕೊಡುತ್ತಾನೆ. ತಿಳಿಸಿಕೊಡುತ್ತಾನೆ. ಅರಿವನ್ನು ಮೂಡಿಸಿಕೊಡುತ್ತಾನೆ. ಮೊದಲು ಬಂಗಾರದಂತಹ ಬದುಕು ಕಟ್ಟಿಕೊಂಡು, ಬಂಗಾರದ ಮೇಲಿನ ಮೋಹ ತಕ್ಕ ಮಟ್ಟಿಗೆ ಕಡಿಮೆಯಾದ ಮನುಷ್ಯ ಮಾತ್ರ ಇಂತಹ ಖಡಕ್ ಉಪದೇಶಗಳಿಗೆ ತನ್ನನ್ನು ತಾನು ತೆರೆದುಕೊಳ್ಳಬಲ್ಲ. ಅಲ್ಲಿಯ ತನಕ ನಿಜವಾದ ಗುರು ನಿಮಗೆ ಸಿಗುವದೂ ಇಲ್ಲ ಬಿಡಿ. ಅದು ಒಂದು ಮಾತೇ ಇದೆಯಲ್ಲ. When the student is ready, the master shows up. ಹಾಗೆ.

ನಿಮಗೆ ಶಿಕ್ಷಕರಲ್ಲೇ ಗುರುಗಳೂ ಸಿಕ್ಕಿಬಿಟ್ಟಿದ್ದಾರೆಯೇ? ಒಳ್ಳೆಯದು. ಮೊದಲೆಲ್ಲ ಹಾಗೇ ಇರುತ್ತಿತ್ತು. ಆಗೆಲ್ಲ ಶಿಕ್ಷಣ ಬ್ರಹ್ಮವಿದ್ಯೆಯಿಂದ ಶುರುವಾಗುತ್ತಿತ್ತು. ವೇದ, ಉಪನಿಷತ್ತು, ವೇದಾಂಗ ಇತ್ಯಾದಿ. ಬ್ರಹ್ಮವಿದ್ಯೆ ಬದುಕು ಬದಲಾಯಿಸುವ ವಿದ್ಯೆ. ಆ ವಿದ್ಯೆ ಕಲಿಯುವಾಗ ವೇದಾಧಾರಿತ ವೇದಾಂಗಗಳಾದ ಆಯುರ್ವೇದ, ಜ್ಯೋತಿಷ್ಯ, ವ್ಯಾಕರಣ, ನ್ಯಾಯ ಮುಂತಾದ ವಿಷಯಗಳ ಅಧ್ಯಯನ ಅವರವರ hidden potential ಗೆ ಅನುಗುಣವಾಗಿ ಆಗುತ್ತಿತ್ತು. ಡಿಗ್ರಿ ಮಾಡಿದವರು ಮುಂದೆ ಮಾಸ್ಟರ್ ಡಿಗ್ರಿ ಮಾಡಿದಂತೆ. ಮೊದಲು ಬ್ರಹ್ಮವಿದ್ಯೆ ಎಲ್ಲರೂ ಕಲಿಯುತ್ತಿದ್ದರು. ಬದುಕಲು ಬೇಕಾದ ವಿದ್ಯೆಗಳು ವೇದಾಂಗಗಳ ಅಧ್ಯಯನದ ಮೂಲಕ ಕಲಿತು ಆಗಿನ ಕಾಲದಲ್ಲೂ ವೈದ್ಯರು, ವಕೀಲರು, ವ್ಯಾಕರಣ ಪಂಡಿತರು ಎಲ್ಲರೂ ತಯಾರಾಗುತ್ತಿದ್ದರು. ಆದರೆ ಭದ್ರ ಬುನಾದಿಯಾಗಿ ಬ್ರಹ್ಮವಿದ್ಯೆ ಇರುತ್ತಿತ್ತು. ಅದೇ ದೊಡ್ಡ ಆಸ್ತಿ. ಮಿಕ್ಕಿದ್ದೆಲ್ಲ ಜಾಸ್ತಿ.

ಕೋತಿ ವಿದ್ಯೆ, ಬ್ರಹ್ಮ ವಿದ್ಯೆ ಅಂತ ಇದೆ. 'ಕಲಿಯುವ ಮೊದಲು ಎಲ್ಲವೂ ಬ್ರಹ್ಮ ವಿದ್ಯೆ. ಕಲಿತಾದ ನಂತರ ಕೋತಿ ವಿದ್ಯೆ,' ಅಂತ ಗಾದೆ ಮಾತಿದೆ. ಬದುಕಲು ಬೇಕಾಗಿದ್ದು ಕೋತಿ ವಿದ್ಯೆ. ಬದುಕು ಬದಲಾಯಿಸಿಕೊಳ್ಳಲು ಬೇಕಾಗಿದ್ದು ಬ್ರಹ್ಮ ವಿದ್ಯೆ. ಮೊದಲು ಎರಡೂ ಒಂದೇ ಸಲ ಕಲಿಸುತ್ತಿದ್ದರು. ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕೋತಿ ವಿದ್ಯೆಗಳನ್ನು ಮಾತ್ರ ಕಲಿಯುತ್ತೇವೆ. ಅದು ಬೇಕು ಬಿಡಿ. ಹೇಳಿಕೇಳಿ ಮಂಗನಿಂದ ಮಾನವರಾದವರು, ಆಗುತ್ತಿರುವವರು ನಾವು. ರೂಪದಲ್ಲಿ ಏನೋ ಒಂದು ತರಹ ಮಾನವರಂತೆ ಕಂಡರೂ ನಮ್ಮ ಬುದ್ಧಿ ಮಂಗನದೇ ಇರುತ್ತದೆ. ಅದಕ್ಕೇ ತಾನೇ ಮಾನವ ಮನಸ್ಸನ್ನು ಮಂಗನಿಗೆ ಹೋಲಿಸುವದು. ಕೇವಲ ಸಾದಾ ಮಂಗವಲ್ಲ ನಮ್ಮ ಮನಸ್ಸು. ಬರೋಬ್ಬರಿ ಹೆಂಡ ಕುಡಿದು, ಮೈಮೇಲೆ ಭೂತ ಬಂದಂತಹ ಮಂಗಕ್ಕೆ  ಮೇಲಿಂದ ಚೇಳೊಂದು ಕಡಿದುಬಿಟ್ಟರೆ ಹೇಗೆ ಅಂತ ಊಹಿಸಿ. ಎಗ್ಗಾದಿಗ್ಗಿ ಎಗರಾಡುತ್ತಿರುತ್ತದೆ. ಹಾಗೆ ನಮ್ಮ ಮನಸ್ಸು. ಅಷ್ಟು ಚಂಚಲ.

[There was a monkey, restless by his own nature, as all monkeys are. As if that were not enough someone made him drink freely of wine, so that he became still more restless. Then a scorpion stung him. When a man is stung by a scorpion, he jumps about for a whole day; so the poor monkey found his condition worse than ever. To complete his misery a demon entered into him. What language can describe the uncontrollable restlessness of that monkey? The human mind is like that monkey.

Swami Vivekananda, Raja-Yoga]

ಅಂತಹ ಮನಸ್ಸು ಕಲಿಯಬಹುದಾದದ್ದು ಕೋತಿ ವಿದ್ಯೆ. ಹಾಗಾಗಿ ಕೋತಿ ವಿದ್ಯೆ ಬೇಕು. ಆದರೆ ಅದೇ ಪರಮ ವಿದ್ಯೆ ಅಂತ ತಿಳಿದುಕೊಂಡು ಅಷ್ಟಕ್ಕೇ ನಿಲ್ಲಿಸಿದರೆ ನಾವು ಮಂಗನಿಂದ ಮಾನವನಾಗುವದಿಲ್ಲ. ಮಂಗಗಳಾಗಿಯೇ ಉಳಿದುಬಿಡುತ್ತೇವೆ. ಅದಕ್ಕೇ ಇರಬೇಕು, 'Spirituality is like taking our evolution into our own hands,' ಅಂತ ಹೇಳುವದು. ಅಂದರೆ ಅಧ್ಯಾತ್ಮ, ಬ್ರಹ್ಮವಿದ್ಯೆ ಕಲಿಯುವದು, ಆಚರಿಸುವದು ಅಂದರೆ ನಮ್ಮ ವಿಕಸನವನ್ನು ನಾವೇ ಮುಂದುವರೆಸುವದು ಅಂತ ಅರ್ಥ. ನಮ್ಮ ವಿಕಸನದ ಜವಾಬ್ದಾರಿ ನಾವೇ ವಹಿಸಿಕೊಳ್ಳುವದು. ನಮ್ಮ ವಿಕಸನವನ್ನು ನಾವೇ ತ್ವರಿತಗೊಳಿಸುವದು. ಎಷ್ಟೋ ಜನ್ಮಗಳ ನಂತರ ಎಲ್ಲರಿಗೂ ಬ್ರಹ್ಮ ಜ್ಞಾನ ಸಿಕ್ಕೇಸಿಗುತ್ತದಂತೆ. ಹಾಗಂತ ಎಲ್ಲ ಮಹನೀಯರೂ, ಭಗವಾನ ಶ್ರೀಕೃಷ್ಣ ಎಲ್ಲರೂ ಹೇಳಿದ್ದಾರೆ. ಅದರೂ ಕೆಲವರಿಗೆ ಅದನ್ನು ತ್ವರಿತಗೊಳಿಸಿಕೊಳ್ಳುವ ಭಗವಂತನ grace ನ ಕೃಪೆಯಾಗುತ್ತದೆ. ಆಗ ಅವರಿಗೆ ತಕ್ಕ ಗುರುವೂ ಸಿಗುತ್ತಾನೆ. ಬಡಿದಾಡಿ ಕಟ್ಟಿಗೊಂಡ ಬಂಗಾರದ ಬದುಕು ಕೇವಲ ಕಾಗೆ ಬಂಗಾರದ್ದು ಅಂತ ಗೊತ್ತಾಗಿಬಿಡುತ್ತದೆ. ಅಂದಿನಿಂದ ಅವರ ವಿಕಸನ ಶುರು. ಅಲ್ಲಿಯವರೆಗೆ ಕೋಟಿ ಕೋಟಿ ಕೋತಿ ವಿದ್ಯೆ ಕಲಿತವ ಬ್ರಹ್ಮ ವಿದ್ಯೆಯ ಜಿಜ್ಞಾಸುವಾಗುತ್ತಾನೆ. ಬದುಕನ್ನು ಕಟ್ಟಿಕೊಂಡವ ಬದುಕನ್ನು ಬದಲಾಯಿಸಿಕೊಳ್ಳುವತ್ತ ಗಮನಹರಿಸುತ್ತಾನೆ. ಮುಂದೆ ಅವರವರ ಕರ್ಮಾನುಸಾರ ವಿಕಸನ ಆಗುತ್ತದೆ. ಇದೇ ಜನ್ಮದಲ್ಲಾಗಬಹುದು. ಇನ್ನೂ ಸಾವಿರ ಜನ್ಮಗಳು ಬೇಕಾಗಲೂಬಹುದು. ಆದರೂ ಶುಭಾರಂಭ. ಮಂಗನಿಂದ ಮಾನವನಾಗುವ ದಿಸೆಯಲ್ಲಿ all the best!

ಇನ್ನು ಮೂರು ದಿವಸಗಳ ನಂತರ ಸೆಪ್ಟೆಂಬರ್ ಐದು, ಶಿಕ್ಷಕರ ದಿನಾಚರಣೆ. ಅದರ ಬಗ್ಗೆ ಬರೆಯಲು ಶುರು ಮಾಡಿದ ಪೋಸ್ಟ ಎಲ್ಲೋ ಹೋಯಿತು. ಶಿಕ್ಷಕ ದಿನಾಚರಣೆ ದಿನ ಮತ್ತೊಂದು ಪೋಸ್ಟ್ ಹಾಕೋಣ. ಸದ್ಯಕ್ಕೆ ಇದು.