Friday, September 04, 2015

ಕ್ಲಾಸ್ ಮುಗಿದ ನಂತರ 'ಎಣ್ಣೆ ಭಾಗ್ಯ' ಕರುಣಿಸಿದ್ದ ವಿಶಿಷ್ಟ ಮೇಡಂ... (ಶಿಕ್ಷಕರ ದಿನಾಚರಣೆಯ ಸ್ಪೆಷಲ್)

ಇವತ್ತು ಸೆಪ್ಟೆಂಬರ್ ಐದು. ಶಿಕ್ಷಕರ ದಿನಾಚರಣೆ. ಬಾಲ್ಯದಲ್ಲಿ 'ಸಿಕ್ಕಸಿಕ್ಕವರ' ದಿನಾಚರಣೆ ಅಂತ ಆಡಿಕೊಂಡು ಜೋಕ್ ಮಾಡುತ್ತಿದ್ದೆವು. ಶಾಂತಂ ಪಾಪಂ! ಬಾಲವಾಡಿಯಿಂದ ಹಿಡಿದು ಇಂದಿನವರೆಗೆ ಕಮ್ಮಿ ಕಮ್ಮಿಯಂದರೂ ಮುನ್ನೂರಕ್ಕೂ ಹೆಚ್ಚು ಜನ ಶಿಕ್ಷಕ, ಶಿಕ್ಷಕಿಯರು ಪಾಠ ಮಾಡಿಬಿಟ್ಟಿದ್ದಾರೆ. ಅವರಲ್ಲಿ ಒಂದಷ್ಟು ಜನ ಬೇರೆ ಬೇರೆ ಕಾರಣಕ್ಕೆ ಸದಾ ನೆನಪಾಗುತ್ತಲೇ ಇರುತ್ತಾರೆ. ಅಂತವರಲ್ಲಿ ಈ ವರ್ಷದ ಶಿಕ್ಷಕರ ದಿನಾಚರಣೆಯಂದು ನೆನಪಾದವರು ಡಾ. ಜೇನ್ ಮಾರ್ಟನ್ (Dr. Jane Morton). ನಾವು ಅಮೇರಿಕಾದ ಬಾಸ್ಟನ್ನಿನ Suffolk University ಯಲ್ಲಿ MBA ಮಾಡುತ್ತಿದ್ದಾಗ ಅಕೌಂಟೆನ್ಸಿ (accountancy) ಪಾಠ ಮಾಡಿದವರು.

ಡಾ. ಜೇನ್ ಮಾರ್ಟನ್ ಯಾಕೆ ನೆನಪಾದರು ಅಂತ ನೋಡಿದರೆ ಅದರ ಹಿಂದೆ ಅಕೌಂಟೆನ್ಸಿ ವಿಷಯದಲ್ಲಿನ ನಮ್ಮ ಇತಿಹಾಸ, ದುಃಸಪ್ನ ಇತ್ಯಾದಿಗಳ ಕಥೆ ಹೇಳಬೇಕಾಗುತ್ತದೆ. ಹೇಳಲು ಕೂತಿದ್ದೇವೆ. ಕೇಳಿ.

ಡಾ. ಜೇನ್ ಮಾರ್ಟನ್ (Dr. Jane Morton)

ಅದು MBA ಡಿಗ್ರಿಯ ಮೂರನೇ ಸೆಮಿಸ್ಟರ್. ಮೊದಲೆರೆಡು ಸೆಮಿಸ್ಟರಿನಲ್ಲಿ ತಳಪಾಯದ (foundation) ತರಹದ ಎಲ್ಲಾ ವಿಷಯಗಳು (courses) ಮುಗಿದಿದ್ದವು. ಮೂರನೇ ಸೆಮಿಸ್ಟರಿನಿಂದ core ವಿಷಯಗಳು. ಮೊದಲನೇ core ವಿಷಯದ ಕೋರ್ಸೇ ಅಕೌಂಟೆನ್ಸಿ.

ಅಕೌಂಟೆನ್ಸಿ ಅಂದರೆ ಮೊದಲಿನಿಂದಲೂ ಒಂದು ತರಹದ ಆಸಕ್ತಿ, ಕುತೂಹಲ ಮತ್ತು ಕೊಂಚ ಮಟ್ಟದ ಆತಂಕ ಕೂಡ. ಮೊದಲಿಂದಲೂ ಲೆಕ್ಕದಲ್ಲಿ ಆಸಕ್ತಿ. ಹಾಗಾಗಿ ಸದಾ ಅಂಕೆ ಸಂಖೆಗಳೊಂದಿಗೆ ಆಟವಾಡುವ ಅಕೌಂಟೆಂಟ್ ಮಂದಿಯ ವಿಷಯವಾದ ಅಕೌಂಟೆನ್ಸಿ ಕಲಿಯಬೇಕು ಅಂತ ಆಸಕ್ತಿ, ಕುತೂಹಲ ಇತ್ತು. ಆತಂಕ ಯಾಕೆಂದರೆ ಮೊದಲೊಂದು ಸಲ ಅಕೌಂಟೆನ್ಸಿ ಕಲಿಯುವ ಸಂದರ್ಭ ಬಂದಾಗ ಅದು ತಲೆಗೆ ಸರಿಯಾಗಿ ಹತ್ತಿರಲೇ ಇಲ್ಲ. ಒಂದು ತರಹದ ಅಳುಕನ್ನು, ನನ್ನ ಬಗ್ಗೆ ನನಗೇ ಒಂದು ತರಹದ ಅಪನಂಬಿಕೆಯನ್ನು ಬಿಟ್ಟುಹೋಗಿತ್ತು. 

ನಮ್ಮ ಜಮಾನದಾಲ್ಲಿ ಅಂದರೆ ೧೯೮೬-೮೭ ರ ಸುಮಾರಿಗೆ ನೀವು ಒಂಬತ್ತನೇ ಕ್ಲಾಸ್ ಓದಿದ್ದರೆ ನಿಮಗೆ ನೆನಪಿರಬಹುದು. ಗಣಿತ ವಿಷಯದಲ್ಲಿ, ಅಂಕಗಣಿತದ (arithmetic) ಭಾಗದಲ್ಲಿ, ಅಕೌಂಟೆನ್ಸಿ ಬಗ್ಗೆ ಒಂದು ಅಧ್ಯಾಯ ತುರುಕಿಬಿಟ್ಟಿದ್ದರು. ಒಂದು ಸಣ್ಣ ಅಧ್ಯಾಯದಲ್ಲಿ asset, liability, debit, credit, shares, shareholders, dividend, debenture etc. ಅಂತ ಏನೇನೋ ಹಾಕಿಬಿಟ್ಟಿದ್ದರು. ಮತ್ತೆ ಆ ಪಾಠ ಬರೆದ ಮಹಾನುಭಾವ ಯಾರಾಗಿದ್ದರೋ! ಮೊದಲೇ ಸರಕಾರಿ ಪಠ್ಯ ಪುಸ್ತಕಗಳ ಗುಣಮಟ್ಟ ಅಷ್ಟಕಷ್ಟೇ. ಅದರಲ್ಲೂ ಈ ಅಕೌಂಟೆನ್ಸಿ ಇದ್ದ ಪಾಠವಂತೂ ಸಿಕ್ಕಾಪಟ್ಟೆ ಖರಾಬಾಗಿತ್ತು. ಓದಿದರೆ ಏನೂ ತಿಳಿಯಲಿಲ್ಲ. ಶಿವನೇ ಶಂಭುಲಿಂಗ!

ಶಾಲೆಯಲ್ಲಿ ಗಣಿತ ಪಾಠ ಮಾಡುತ್ತಿದ್ದ ಅತ್ತೂರ್ ಮೇಡಂ (ದಳವಾಯಿಪಟ್ಟಣ ಮೇಡಂ) ಏನೋ ಒಂದು ರೀತಿಯಲ್ಲಿ ಅಕೌಂಟೆನ್ಸಿ ಪಾಠ ಮಾಡಿದ್ದರು. ಅವರು ಗಣಿತದಲ್ಲಿ BSc ಮಾಡಿದವರು. MSc ಕೂಡ ಮಾಡಿದ್ದರೇ? ನೆನಪಿಲ್ಲ. ಆದರೆ ಅಕೌಂಟೆನ್ಸಿ ತಿಳಿದಿರಲು ಅವರು ಕಾಮರ್ಸ್ ಓದಿದವರಲ್ಲ. ಹಾಗಾಗಿ ಅಕೌಂಟೆನ್ಸಿ ಅವರ ಸ್ಪೆಷಾಲಿಟಿ ಕೂಡ ಆಗಿರಲಿಲ್ಲ. ಅತ್ತೂರ್ ಮೇಡಂ ಡಿಗ್ರಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಅಂತ ಬೇರೆ ಕಥೆಯಿತ್ತು. ಅದು ಸತ್ಯಕಥೆಯೋ ದಂತಕಥೆಯೋ ಗೊತ್ತಿಲ್ಲ. ಯಾಕೆಂದರೆ ನಮ್ಮ ಶಾಲೆಯಲ್ಲಿ ಅನೇಕ ಶಿಕ್ಷಕ ಶಿಕ್ಷಕಿಯರ ಬಗ್ಗೆ ಅಂತಹ ದಂತಕಥೆಗಳು ಸಿಕ್ಕಾಪಟ್ಟೆ ಇದ್ದವು. ಅಂತಹ ಕಥೆಗಳು ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತಲೇ ಇದ್ದವು. ಒಂದೆರೆಡು ಮಜಾ ಕಥೆಗಳನ್ನು ಹೇಳುತ್ತೇನೆ, ಕೇಳಿ. ಒಬ್ಬ ಮಾಸ್ತರರು ನೀಟಾಗಿ ಗಡ್ಡ ಬಿಟ್ಟಿದ್ದರು. ಅದರ ಹಿಂದೆ ಕೂಡ ಒಂದು ಕಥೆಯಿತ್ತು. ಅವರ ಎನ್ಕೌಂಟರ್ ಸ್ಪೆಷಲಿಸ್ಟ್ ವರ್ತನೆಯಿಂದ ಕ್ರುದ್ಧಗೊಂಡಿದ್ದ ಯಾರೋ ರೌಡಿ ಟೈಪಿನ ಮಾಜಿ ವಿದ್ಯಾರ್ಥಿಗಳು ಅವರ ಮುಖಕ್ಕೆ ಕುರುಪು (ರೇಜರ್) ಎಳೆದಿದ್ದರಂತೆ. ಅದರ ಕಲೆ ಕಾಣಬಾರದು ಅಂತ ಗಡ್ಡ ಬಿಟ್ಟಿದ್ದರಂತೆ. ಅಬ್ಬಾ! ಮುಂದೊಮ್ಮೆ ಅವರು ಗಡ್ಡ ಬೋಳಿಸಿಕೊಂಡು ಕ್ಲೀನ್ ಕಿಟ್ಟಪ್ಪನಾದಾಗ ಮುಖದ ಮೇಲೆ ಏನೂ ಕುರುಪು ಮತ್ತೊಂದರ ಕಲೆ ಕಂಡುಬಂದಿರಲಿಲ್ಲ. ಸುಮ್ಮನೇ ಚೌಕ್ ಗುಳಿಗೆ ಉರುಳಿಸಲು ನಮ್ಮ ಶಾಲೆಯ ಕಿತಾಪತಿ ವಿದ್ಯಾರ್ಥಿಗಳದು ಎತ್ತಿದ ಕೈ. ಇನ್ನೊಬ್ಬ ಖತರ್ನಾಕ್ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ತಮ್ಮ ಮೋಟಾರ್ ಬೈಕಿನ ಹಿಂದಿರುವ ಸಾಮಾನಿನ ಬಾಕ್ಸಿನಲ್ಲಿ ಒಂದು ಸೈಕಲ್ ಚೈನ್ ಇಟ್ಟಿರುತ್ತಾರೆಂದೂ ಮತ್ತು ರೌಡಿಗಳು ಬಂದರೆ ಅದರಲ್ಲೇ ಬಾರಿಸಿ, ಓಡಿಸಿ, ತಮ್ಮ ಸ್ವರಕ್ಷಣೆ ಮಾಡಿಕೊಳ್ಳುತ್ತಾರೆಂದೂ ಕೂಡ ಪ್ರತೀತಿ ಇತ್ತು. ಇವೆಲ್ಲ ಸತ್ಯಕಥೆಗಳೋ ಅಥವಾ urban legend ಮಾದರಿಯ ದಂತಕಥೆಗಳೋ ಗೊತ್ತಿಲ್ಲ. ನನ್ನ ಪ್ರಕಾರ ದಂತಕಥೆಗಳು. ಆದರೆ ಸತ್ಯಕಥೆಗಳಲ್ಲ ಅಂತ disprove ಮಾಡಲೂ ಸಾಧ್ಯವಿಲ್ಲ. ಅತ್ತೂರ್ ಟೀಚರ್ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದರ ಕಥೆಯೂ ಹೀಗೇ ಇತ್ತೋ ಏನೋ ಗೊತ್ತಿಲ್ಲ. ಗೋಲ್ಡ್ ಮೆಡಲ್ ಇರಲಿ ಬಿಡಲಿ ಅತ್ತೂರ್ ಟೀಚರ್ ಮಾತ್ರ ಗಣಿತದ ಒಳ್ಳೆ ಶಿಕ್ಷಕಿ.

ಅತ್ತೂರ್ ಮೇಡಂ (೨೦೧೨ ರಲ್ಲಿ) (ಚಿತ್ರ ಕೃಪೆ: ಮಿತ್ರ ಸುನೀಲ ಜೋಶಿ)

ಅದೇನು ನಮ್ಮ ಬಡ್ಡ ತಲೆಯ ಕರ್ಮವೋ ಗೊತ್ತಿಲ್ಲ. ಒಟ್ಟಿನಲ್ಲಿ ಅತ್ತೂರ್ ಟೀಚರ್ ಹೇಗೆ ಪಾಠ ಮಾಡಿದರೂ ಒಂಬತ್ತನೇ ತರಗತಿಯ ಅಕೌಂಟೆನ್ಸಿ ನಮಗೆ ಬರೋಬ್ಬರಿ ಅರ್ಥವಾಗಲೇ ಇಲ್ಲ. ಅದೇನು asset, ಅದೇನು liability, ಎಲ್ಲಿ ಡೆಬಿಟ್ ಮಾಡಬೇಕು, ಎಲ್ಲಿ ಕ್ರೆಡಿಟ್ ಹಾಕಬೇಕು ಅಂತ ಸಿಕ್ಕಾಪಟ್ಟೆ ಗೊಂದಲ. ಮತ್ತೆ ಅದು ಸಿಲೆಬಸ್ಸಿನ ಕೊನೆಯಲ್ಲಿ ಇತ್ತು. ಮೊದಲೇ ಅತ್ತೂರ್ ಟೀಚರ್ portion ಮುಗಿಸುವದು ಭಾಳ ತಡವಾಗಿ. ಎಲ್ಲವನ್ನೂ ಉತ್ತಮವಾಗಿ, ವಿವರವಾಗಿ ಪಾಠ ಮಾಡುತ್ತ ಪರೀಕ್ಷೆಯ ಹಿಂದಿನ ದಿನದ ವರೆಗೂ portion ಎಳೆದುಬಿಡುತ್ತಿದ್ದರು. ಹೀಗಾಗಿ ಅಕೌಂಟೆನ್ಸಿ ಪಾಠವನ್ನು ಗಡಿಬಿಡಿಯಲ್ಲಿ ಸಾರಿಸಿಬಿಟ್ಟಿದ್ದರು. ಹಾಗಂತ ನಮ್ಮ ಭಾವನೆ. ನಮಗೆ ವಿಷಯ ಅರ್ಥವಾಗದಿದ್ದರೆ ಅದನ್ನು ಟೀಚರ್ ಮೇಲೆ ಯಾಕೆ ಹಾಕೋಣ!?

ಮತ್ತೆ ನಾವು ಲಾಸ್ಟ್ ಬೆಂಚಿನ ಉಡಾಳ ಮಂದಿ. ನನ್ನ ದೋಸ್ತರೆಲ್ಲ ಒಬ್ಬರಿಗಿಂತ ಒಬ್ಬರು ಖತರ್ನಾಕ್ ಲಫಂಗರೇ. ಸಿಕ್ಕಾಪಟ್ಟೆ ಮಷ್ಕಿರಿ, ಬದ್ಮಾಶಿ ಮಾಡುವವರೇ. ಆದರೆ ಯಾರೂ ಕೆಟ್ಟವರಲ್ಲ, ದುಷ್ಟರಲ್ಲ. ಬರೀ ಹುಡುಗಾಟ, ಮಂಗ್ಯಾತನ ಅಷ್ಟೇ. ಆ ಒಂಬತ್ತನೇ ಕ್ಲಾಸಿನ ಅಕೌಂಟೆನ್ಸಿ ವಿಷಯ ಪಾಠ ಮಾಡುತ್ತಿರುವಾಗ 'asset' ಅಂತ ಅತ್ತೂರ್ ಟೀಚರ್ ಅದೇನು ಒಂದು ಮಾತು ಅಂದರೋ ಈ ಪುಣ್ಯಾತ್ಮ ನನ್ನ ದೋಸ್ತನೊಬ್ಬ, 'asset!! asset ಅಂದ್ರ ಆಸ್ತಿ. ಆಸ್ತಿ ಯಾರ ಕಡೆ ಭಾಳ ಮಸ್ತ ಐತಿ ಹೇಳು ನೋಡೋಣ ಮಹೇಶಾss??' ಅಂತ ವಿಚಿತ್ರವಾಗಿ ಕೇಳಿ, ಕೆಟ್ಟಾಕೊಳಕ ರೀತಿಯಲ್ಲಿ ಎರಡೂ ಕೈಗಳನ್ನು ಎದೆ ಮುಂದೆ ರೌಂಡ್ ರೌಂಡ್ ತಿರುಗಿಸಿ, 'ಕಲಶಪೂಜೆ' ಅರ್ಥಾತ್ ಕುಚ ಮರ್ದನ ಮಾಡಿದ action ಮಾಡಿ, ಹಾವಭಾವ ತೋರಿಸಿ, ಕಣ್ಣು ಹೊಡೆದುಬಿಟ್ಟ. ಸುಲಭವಾಗಿ ಹಿಂದಿನ ಬೆಂಚಿನ ಯಾರಿಗೂ ಅವನ ಮಾತಿನ 'ಅರ್ಥ' ತಿಳಿಯಲಿಲ್ಲ. ಅವನೇ ಸಿಕ್ಕಾಪಟ್ಟೆ ನಗುತ್ತ ಹೇಳಿದ. 'ಅಕಿನನೋ ಮಾರಾಯಾ! ಬಿ ಕ್ಲಾಸಿನ ಅನಿತಾ ರಾಜ್! ಅಕಿ ಕಡೆ ಹೋಗಿ, 'ಏ, ಅನಿತಾ ರಾಜ್! ನಿನ್ನ twin assets  ಬಗ್ಗೆ combined study ಮಾಡೋಣ ಬಾರವಾ. ಸ್ವಲ್ಪ ಹೆಲ್ಪ್ ಮಾಡು. ಈ ಅಕೌಂಟೆನ್ಸಿ asset ಅಂದ್ರ ಏನು ಅಂತಲೇ ತಿಳಿವಲ್ತು ನೋಡವಾ. asset ಅಂದ್ರೇನು? ಗೊತ್ತೈತಿ?' ಅಂತ ಕೇಳಬೇಕು ನೋಡಪಾ. ಅಕಿಗೆ ಕೆಟ್ಟ ಕಾಡಬೇಕು!' ಅಂತ ಬಿ ಕ್ಲಾಸಿನ ಒಬ್ಬ ಸಭ್ಯ, ಆದರೆ ಖತರ್ನಾಕ್ ಬ್ಯೂಟಿ ಮತ್ತು with well endowed assets ಇದ್ದ ಸುಂದರಿಯ ಬಗ್ಗೆ ಹೇಳಿ ಪೆಕಪೆಕಾ ಅಂತ ನಕ್ಕ. ಜೊತೆಗೆ 'ದದದೈ ದದೈ  ದದೈ ಪ್ಯಾರ್ ಹೋಗಯಾ!' ಅಂತ ಹಾಡು ಬ್ಯಾರೆ ಹಾಡಿಬಿಟ್ಟ. ಶುದ್ಧ ತರಲೆ ಆಸಾಮಿ ಆತ. ದೊಡ್ಡ ಲೆವೆಲ್ಲಿನ ಭಯಂಕರ ಬದ್ಮಾಶ್. ಅವನ ಮಾತು ಕೇಳಿದ, ಅವನ ಚಿತ್ರವಿಚಿತ್ರ ಹಾವಭಾವ ನೋಡಿದ ನಮಗೆಲ್ಲ ಸಿಕ್ಕಾಪಟ್ಟೆ ನಗೆ. ಬಿದ್ದು ಬಿದ್ದು ನಕ್ಕಿದ್ದೆವು. ಅದೇ ವರ್ಷ ಕೆಲ ತಿಂಗಳ ಮೊದಲು 'ಇಲ್ಜಾಂ' ಅಂತ ಒಂದು ಹಿಂದಿ ಸಿನಿಮಾ ಬಂದಿತ್ತು. ಅದರಲ್ಲಿ ಅಂದಿನ ಸಕತ್ ಹಾಟ್ ನಟಿ ಅನಿತಾ ರಾಜಳನ್ನು ನೋಡಿದ್ದೇ ನೋಡಿದ್ದು ಆಕೆ ನಮ್ಮ ಕನಸಿನ ಕನ್ಯೆಯಾಗಿಬಿಟ್ಟಳು. ಬಿ ಕ್ಲಾಸಿನಲ್ಲಿದ್ದ ನಮ್ಮ ಶಾಲೆಯ ಲೋಕಲ್ ಸುಂದರಿ ಜಾಸ್ತಿ ಏನೂ ಅನಿತಾ ರಾಜ್ ಇದ್ದಂಗೆ ಇರಲಿಲ್ಲ. ಆದರೆ ನಮಗೇನು? ಯಾರಿಗಾದರೂ ಏನಾದರೂ ಒಂದು ನಾಮಕರಣ ಮಾಡಿ, ಕಾಡಿಸಿ ಮಷ್ಕಿರಿ ಮಾಡುವದು ನಮ್ಮ ಧರ್ಮ. ಮಾಡಿಸಿಕೊಳ್ಳುವದು ಅವರ ಕರ್ಮ. ಹಾಗಾಗಿ ಇದ್ದ ಬಿದ್ದ ಬಿ ಕ್ಲಾಸಿನ ಸುಂದರಿಗೇ ಅನಿತಾ ರಾಜ್ ಅಂತ ಹೆಸರಿಟ್ಟು, ಆಕೆ ಕಂಡಾಗೊಮ್ಮೆ 'ದದದೈ ದದೈ  ದದೈ ಪ್ಯಾರ್ ಹೋಗಯಾ!' ಅಂತ ನಮ್ಮಲ್ಲೇ ಹಾಡಿಕೊಂಡು ಮಸ್ತಿ, ಮಷ್ಕಿರಿ ಮಾಡುತ್ತಿದ್ದೆವು. ಆಕೆಗೆ ಗೊತ್ತಿರಲಿಕ್ಕಿಲ್ಲ ಬಿಡಿ. ಮತ್ತೆ ಆಕೆ ಸಭ್ಯರ ಮನೆಯ ಒಳ್ಳೆ ಹುಡುಗಿ. ದೇವರು ಖತರ್ನಾಕ ರೂಪ, ಸಿಕ್ಕಾಪಟ್ಟೆ ಒಳ್ಳೆ ಅಂಗಸೌಷ್ಟವ, ತೊನೆಯುತ್ತಿರುವ ದೇಹಸಿರಿ ಕರುಣಿಸಿದ್ದ. ಪಾಪ ಆಕೆಯೇನು ಮಾಡಿಯಾಳು? ನಮ್ಮಂತವರ ಕಣ್ಣು ಕುಕ್ಕುತ್ತಿತ್ತು ಅಷ್ಟೇ! ರಾತ್ರಿಯಲ್ಲೂ ಕೂಲಿಂಗ್ ಗ್ಲಾಸ್ ಹಾಕಿಕೊಂಡು ನೋಡಬೇಕು ಆ ಮಟ್ಟಿಗೆ ಚಮಕಾಯಿಸುತ್ತಿದ್ದಳು ನಮ್ಮ ಬ್ಯಾಚಿನ ಅನಿತಾ ರಾಜ್. ಇಲ್ಜಾಂ ಚಿತ್ರದಲ್ಲಿ ಅನಿತಾ ರಾಜಳನ್ನು ಈ ಕೆಳಗಿನ ಹಾಡಿನಲ್ಲಿ ನೋಡಿ ನಾವೆಲ್ಲಾ ಫುಲ್ ಖುಷ್.



ಅತ್ತೂರ್ ಟೀಚರ್ ಆ ಅಕೌಂಟೆನ್ಸಿ ಕಲಿಸಿದ್ದೇ ಒಂದೋ ಎರಡೋ ಪಿರಿಯಡ್ಡುಗಳಲ್ಲಿ. ಅವುಗಳಲ್ಲೂ ನಾವು ಟೀಚರ್ asset ಅಂದಾಗೊಮ್ಮೆ ಕಿಸಿಕಿಸಿ ನಗುತ್ತ, ಈ ಪುಣ್ಯಾತ್ಮ ದೋಸ್ತ ಕೀರಲು ದನಿಯಲ್ಲಿ, ಸಣ್ಣಗೆ ಗುಣುಗುತ್ತಿದ್ದ 'ದದದೈ ದದೈ ದದೈ ಪ್ಯಾರ್ ಹೋಗಯಾ!' ಹಾಡನ್ನು ಕೇಳಿ, ದೊಡ್ಡದಾಗಿ ಬರುತ್ತಿದ್ದ ನಗುವನ್ನು ಹೇಗೋ ಮಾಡಿ ತಡೆದುಕೊಂಡು, ನಮ್ಮ ಬ್ಯಾಚಿನ ಬಿ ಕ್ಲಾಸಿನ ಅನಿತಾ ರಾಜಳ twin assets  ಬಗ್ಗೆ ತಲೆ ಕೆಡಿಸಿಕೊಂಡು ಹಗಲುಗನಸು ಕಾಣುತ್ತಿದ್ದರೆ ಈ ಕಡೆ ಅತ್ತೂರ್ ಮೇಡಂ ಅಕೌಂಟೆನ್ಸಿ ಕಲಿಸುವದನ್ನು ಗಡಿಬಿಡಿಯಲ್ಲಿ ಮುಗಿಸಿ, ಗುಡಿಸಿ, ಗುಂಡಾಂತರ ಮಾಡಿ, ಸಾರಿಸಿ ಹಾಕಿಬಿಟ್ಟಿದ್ದರು. ತಲೆ ತುಂಬಾ ಬೇರೆ ಯಾವದೋ asset ಗಳ ಖಯಾಲಿಯೇ ತುಂಬಿರುವಾಗ ಅಕೌಂಟೆನ್ಸಿ asset ಇತ್ಯಾದಿ ಎಲ್ಲ ಎಲ್ಲಿ ತಿಳಿಯಬೇಕು!?

ಇನ್ನು ನಮ್ಮ ಮನೆಯಲ್ಲಿ ಎಲ್ಲರೂ ಗಣಿತದಲ್ಲಿ ತಕ್ಕ ಮಟ್ಟಿನ ಬುದ್ಧಿವಂತರೇ. ಆದರೆ ಎಲ್ಲರೂ ಸೈನ್ಸ್, ಆರ್ಟ್ಸ್, ಇಂಜಿನಿಯರಿಂಗ್ ಪದವೀಧರರು. ಯಾರಿಗೂ ಕಾಮರ್ಸ್ ಗೊತ್ತಿಲ್ಲ. ಹಾಗಾಗಿ ಅಕೌಂಟೆನ್ಸಿ ಕಲಿಯಲು ಮತ್ಯಾರನ್ನಾದರೂ ಹಿಡಿಯೋಣ ಅಂದರೆ ಅದೂ ವರ್ಕ್ ಔಟ್ ಆಗಲಿಲ್ಲ. ಏನೋ ಎಂತೋ! ಒಟ್ಟಿನಲ್ಲಿ ಒಂದು ತರಹದಲ್ಲಿ ಓದಿಕೊಂಡು, ವಾರ್ಷಿಕ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದೆ. ಚಿಕ್ಕ ಪಾಠವಾದ್ದರಿಂದ ಬಹಳವೆಂದರೆ ಒಂದೆರೆಡು ಅಂಕಗಳ ಪ್ರಶ್ನೆ ಅಕೌಂಟೆನ್ಸಿ ಬಗ್ಗೆ ಬರಬಹುದು ಅಂತ ನಮ್ಮ ವಿಚಾರ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿದರೆ ಕೆಲವು ವರ್ಷ ಅಕೌಂಟೆನ್ಸಿ ಬಗ್ಗೆ ಯಾವದೇ ಪ್ರಶ್ನೆ ಬಂದಿರಲೂ ಇಲ್ಲ. ನಮ್ಮ ವಾರ್ಷಿಕ ಪರೀಕ್ಷೆಯಲ್ಲೂ ಹಾಗಾಗಿಬಿಟ್ಟರೆ ಸಾಕು ಅಂದುಕೊಂಡಿದ್ದೆ.

೧೯೮೭ ರ ಮಾರ್ಚಿನಲ್ಲಿ ವಾರ್ಷಿಕ ಪರೀಕ್ಷೆ ಶುರುವಾಯಿತು. ಗಣಿತದ ಪೇಪರ್ ಕೂಡ ಬಂತು. ಪ್ರಶ್ನೆ ಪತ್ರಿಕೆ ಕೈಗೆ ಬಂದ ತಕ್ಷಣ ನೋಡಿದ್ದು ಅಕೌಂಟೆನ್ಸಿ ಬಗ್ಗೆ ಪ್ರಶ್ನೆ ಇದೆಯೇ ಅಂತ. ಥತ್ ಇದರ! ಎರಡು ಮಾರ್ಕಿನ ಒಂದು ಪ್ರಶ್ನೆ ಕೇಳಿಯೇಬಿಟ್ಟಿದ್ದರು. ಏನೋ ಒಂದು scenario ಕೊಟ್ಟು ಡೆಬಿಟ್, ಕ್ರೆಡಿಟ್ ಮಾಡಿ ತೋರಿಸಿ ಅಂತ ಕೇಳಿದ್ದರು ಅಂತ ನೆನಪು. ನಮಗೆ ಮೊದಲೇ ಆ ಡೆಬಿಟ್ ಕ್ರೆಡಿಟ್ ಅಂದರೆ ಸಿಕ್ಕಾಪಟ್ಟೆ confusion. ಇರಲಿ ಅಂತ ಅದನ್ನು ಬಿಟ್ಟು ಬೇರೆ ಎಲ್ಲ ಪ್ರಶ್ನೆ ಬಿಡಿಸುತ್ತಾ ಬಂದೆ. ಕೊನೆಯಲ್ಲಿ ಅಕೌಂಟೆನ್ಸಿ ಪ್ರಶ್ನೆ ಕೂಡ ಬಿಡಿಸಿದೆ. ಸರಿಯಾಗಿ ಬಿಡಿಸಿದೆನೋ ಇಲ್ಲವೋ ಅಂತ ಅನುಮಾನ ಬಂದುಬಿಟ್ಟಿತು. ಅನುಮಾನಂ ಪೆದ್ದ ರೋಗಂ! ಎಲ್ಲ ಪ್ರಶ್ನೆಗಳನ್ನು ಬಿಡಿಸಿಯಾದ ಮೇಲೆ ಮತ್ತೂ ಸಾಕಷ್ಟು ಸಮಯ ಉಳಿದಿತ್ತು. ಅಕೌಂಟೆನ್ಸಿ ಪ್ರಶ್ನೆ ತಲೆ ತಿನ್ನುತ್ತಿತ್ತು. ಮೊದಲು ಬಿಡಿಸಿದ್ದನ್ನು ಕಾಟು ಹಾಕಿ, ಮತ್ತೆ ಹೊಸದಾಗಿ ಬಿಡಿಸಿದೆ. ಏನೋ ಸ್ವಲ್ಪ ಬದಲಾಯಿಸಿದ್ದೆ. ಮತ್ತೂ ಬೇಕಾದಷ್ಟು ಟೈಮ್ ಉಳಿದಿತ್ತು. ಆದರೆ ಆ ಪೀಡೆಯ ಅಕೌಂಟೆನ್ಸಿ ಸಮಸ್ಯೆಯನ್ನು ಸರಿಯಾಗಿ ಬಿಡಿಸಿದ್ದೇನೋ ಇಲ್ಲವೋ ಅಂತ ಖಾತ್ರಿಯಾಗುತ್ತಿರಲಿಲ್ಲ. ಸರಿಯಾಗಿ ವಿಷಯ ತಿಳಿದಿದ್ದರೆ ತಾನೇ ಗೊತ್ತಾಗುವದು? ಏನೇ ಇರಲಿ, ಶಿವಾಯ ನಮಃ ಅಂತ ಹೇಳಿ ಎರಡನೇ ಸಲ ಬಿಡಿಸಿದ್ದನ್ನೂ ಕೂಡ ಮತ್ತೆ ಕಾಟು ಹಾಕಿ ಮತ್ತೊಮ್ಮೆ ಬಿಡಿಸಿದೆ. ಹಾಗೆಲ್ಲ ಮಾಡಿದ್ದು ಭಾಳ ಅಪರೂಪ. ಒಮ್ಮೆ ಉತ್ತರ ಬರೆದೆರೆ, ಲೆಕ್ಕ ಬಿಡಿಸಿದರೆ ಅದೇ ಕೊನೆಯ ಬಾರಿ ಅನ್ನುವ ಮಾದರಿಯಲ್ಲಿ ನಮ್ಮ ಪರೀಕ್ಷೆ ತಯಾರಿ ಇರುತ್ತಿತ್ತು. ಅಷ್ಟರಲ್ಲಿ ಬಾರಿಸಿದರು. ಪರೀಕ್ಷೆಯ ಅವಧಿ ಮುಗಿಯಿತು ಅಂತ ಶಾಲೆ ಮಂದಿ ಢಣ ಢಣ ಘಂಟೆ ಬಾರಿಸಿದರು ಅಂತ. ಪೇಪರ್ ಕೊಟ್ಟು ಎದ್ದು ಬಂದೆ. ಮಧ್ಯಾನ ಗಣಿತ - ೨ (ಜಾಮಿಟ್ರಿ) ಪೇಪರ್ ಇರುತ್ತಿತ್ತು. ತಿಂಡಿ, ತೀರ್ಥ ಸೇವನೆ ಮಾಡುತ್ತ ಆ ಪರೀಕ್ಷೆಗೆ ಕೊನೆ ಘಳಿಗೆ ತಯಾರಿ ಮಾಡುತ್ತ ಉಳಿದೆ.

ಗಣಿತ ಪೇಪರ್ ಮುಗಿಸಿ ಮನೆಗೆ ಬಂದು ನೋಡಿದೆ. ಅದೇ ಮಾದರಿಯ ಅಕೌಂಟೆನ್ಸಿ ಸಮಸ್ಯೆಯನ್ನು ನೋಟ್ ಬುಕ್ಕಿನಲ್ಲಿ ಬಿಡಿಸಿದ್ದು ನೆನಪಿತ್ತು. ತೆಗೆದು ನೋಡಿದೆ. ಹಾಯ್! ಮೊದಲನೇ ಸಲ ಮಾಡಿದ್ದು ಬರೋಬ್ಬರಿ ಇತ್ತು. ನಂತರ ಎರಡು ಸಲ ತಿದ್ದಿದ್ದು ತಪ್ಪಿತ್ತು. ಒಟ್ಟಿನಲ್ಲಿ ಅಕೌಂಟೆನ್ಸಿ ಪ್ರಶ್ನೆ ಬಿಡಿಸಿದ್ದು ಶಿವಾಯ ನಮಃ ಆಗಿಹೋಗಿದೆ ಅಂತ ಖಾತ್ರಿಯಾಯಿತು. ಶಿವನೇ ಶಂಭುಲಿಂಗ! ಈ ವರ್ಷ ಗಣಿತದಲ್ಲಿ ನೂರಕ್ಕೆ ನೂರು ಗಳಿಸುವದು ದೂರದ ಮಾತು ಅಂತ ಖಾತ್ರಿಯಾಯಿತು. ಹಾಳಾಗಿ ಹೋಗಲಿ. ಹೋದರೆ ಹೋಗುವದು ಎರಡು ಮಾರ್ಕು. ನೂರಕ್ಕೆ ತೊಂಬತ್ತೆಂಟು ಬರುತ್ತದೆ. ಅದರ ಕೆಳಗೆ ಗಣಿತದಲ್ಲಿ ಮಾರ್ಕು ತೆಗೆದಿದ್ದೇ ಇಲ್ಲ. ಹಾಗಂತ ಗಣಿತದಲ್ಲಿ ದೊಡ್ಡ ಮೇಧಾವಿ ಗೀಧಾವಿ ಏನೂ ಅಲ್ಲ. ಆಸಕ್ತಿ ಇತ್ತು. ಶ್ರಮ ಇರುತ್ತಿತ್ತು. ಮನೆಯಲ್ಲಿ ಹಿರಿಯರಿಗೆ ಗಣಿತ ಬರುತ್ತಿತ್ತು. ಬೇಕಾದರೆ ಮಾರ್ಗದರ್ಶನ ಸಿಗುತ್ತಿತ್ತು. ಕೇವಲ ಶಾಲೆಯ ಪಠ್ಯವೊಂದೇ ಅಲ್ಲ ಅಠವಲೇ ಬೀಜಗಣಿತ ಪುಸ್ತಕ, ಬಾಗಿ ಜಾಮಿಟ್ರಿ ಪುಸ್ತಕ ಅಂತ ಗಣಿತದ ಇತರೆ ಪುಸ್ತಕಗಳನ್ನು ರೆಫರ್ ಮಾಡಿ ಹೆಚ್ಚಿನ ಸಮಸ್ಯೆಗಳನ್ನು ಬಿಡಿಸಿರುತ್ತಿದ್ದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ ಮಸ್ತಾಗಿತ್ತು. ಪರೀಕ್ಷೆಗೆ ಬರೋಬ್ಬರಿ ತಯಾರಿ ಇರುತ್ತಿತ್ತು. ಹಾಗಾಗಿ ಸುಮಾರಾಗಿ ಎಂತಹ ಗಣಿತದ ಸಮಸ್ಯೆ ಪರೀಕ್ಷೆಯಲ್ಲಿ ಬಂದರೂ ಅದು ಹೊಸದು ಅಂತ ಅನ್ನಿಸುತ್ತಿರಲಿಲ್ಲ. ಹಾಗಾಗಿ ಒಳ್ಳೆ ಮಾರ್ಕು ಬರುತ್ತಿತ್ತು. ಹೀಗಿರುವಾಗ ಸರಿಯಾಗಿ ಅರ್ಥವಾಗದ ಅಕೌಂಟೆನ್ಸಿ ಈ ವರ್ಷ ಕೈಕೊಟ್ಟುಬಿಡಬೇಕೇ!? ಛೇ!

ಸರಿ. ಏಪ್ರಿಲ್ ಹತ್ತಕ್ಕೆ ಫಲಿತಾಂಶ. ಅಂಚೆಯಲ್ಲಿ ಬಂತು. ಮಾರ್ಕ್ಸ್ ಕಾರ್ಡ್ ತೆಗೆದು ನೋಡಿದರೆ ಗಣಿತದಲ್ಲಿ ನೂರಕ್ಕೆ ತೊಂಬತ್ತೈದು! ಹಾಂ!?? ತೊಂಬತ್ತೆಂಟು ಬರಬೇಕಾಗಿತ್ತು ಅಂದುಕೊಂಡರೆ ಮತ್ತೂ ಮೂರು ಅಂಕ ಕಮ್ಮಿ. 'ಮತ್ತೂ ಮೂರು ಹೆಚ್ಚಿನ ಅಂಕ ಎಲ್ಲಿ ಕಟ್ ಮಾಡಿ ಒಗೆದರು ಅತ್ತೂರ್ ಮೇಡಂ?' ಅಂತ ತಿಳಿಯಲಿಲ್ಲ. ಅದನ್ನೂ ಮುಂದೆ ಕೇಳೋಣ ಅಂದುಕೊಂಡಿದ್ದೆ. ಮುಂದೆ ಸ್ವಲ್ಪೇ ದಿವಸದಲ್ಲಿ ಅತ್ತೂರ್ ಟೀಚರ್ ತಂಗಿಯ ಮದುವೆ ಇತ್ತು. ಅವರ ಗಂಡನ ತಮ್ಮನ ಜೊತೆಯೇ. ಅಕ್ಕ ತಂಗಿ ಅಣ್ಣ ತಮ್ಮನ ಹೆಂಡತಿಯರು. ಅವರೆಲ್ಲ ನಮ್ಮ ಕುಟುಂಬದ ಆತ್ಮೀಯರೇ. ಹಾಗಾಗಿ ನಮಗೂ ಆಹ್ವಾನವಿತ್ತು. ನಾನು ಹೋಗಿದ್ದೆ  ಅಮ್ಮನ ಜೊತೆ. ಮದುವೆ ಮುಂಜಿಗೆ ಹೋಗುತ್ತಲೇ ಇರಲಿಲ್ಲ. ಆದರೂ ಹೋಗಿದ್ದೆ. ಮದುವೆಗೆ ಹೋಗಿ ಊಟ ಮಾಡಿಬರಬೇಕು ಅಂತ ಏನೂ ಇರಲಿಲ್ಲ. ಅತ್ತೂರ್ ಟೀಚರ್ ಹತ್ತಿರ ಕೇಳಬೇಕಾಗಿತ್ತು. 'ಎರಡು ಮಾರ್ಕಿನ ಅಕೌಂಟೆನ್ಸಿ ಪ್ರಶ್ನೆ ಬಿಡಿಸುವಲ್ಲಿ ತಪ್ಪಿದ್ದೆ ಅಂತ ನನಗೆ ಗೊತ್ತಿದೆ. ಬಾಕಿ ಮೂರು ಮಾರ್ಕ್ಸ್ ಎಲ್ಲಿ ಕಟ್ ಮಾಡಿದಿರಿ ಟೀಚರ್!!??' ಅಂತ. ಅಲ್ಲಿ ಮದುವೆ ಗದ್ದಲ. ಟೀಚರ್ ಸಿಕ್ಕಾಪಟ್ಟೆ ಗಡಿಬಿಡಿಯಲ್ಲಿದ್ದರು. ಮತ್ತೆ ನಾವು ಆ ಕಾಲದಲ್ಲಿ ಸಂಕೋಚದ ಮುದ್ದೆ. ಟೀಚರ್ ಒಬ್ಬರೇ ಸಿಕ್ಕಿದ್ದರೂ ಇಂತದ್ದನ್ನೆಲ್ಲ ಕೇಳಲಿಕ್ಕೆ ಒಂದು ತರಹದ ಮುಜುಗರ. ಮತ್ತೆ, 'marks must be commanded, never demanded' ಅಂತ ಬೇರೆ ಮೊಳೆ ಹೊಡೆದು ಇಟ್ಟಿರುತ್ತಿದ್ದರಲ್ಲ. ಹೀಗೆಲ್ಲ ಆಗಿ ಅತ್ತೂರ್ ಟೀಚರ್ ಮದುವೆ ಮನೆಯಲ್ಲಿ ಕಂಡರೂ ಅವರಿಗೆ ಒಂದು ನಮಸ್ಕಾರ ಹಾಕಿ, ರಿಸೆಪ್ಶನ್ ನಲ್ಲಿ ಏನೋ ಒಂದು ತರಹದ ನಾಷ್ಟಾ ಒಣ ಒಣ ಮಾಡಿ, ಕೈ ಕೈ ತಿಕ್ಕಿಕೊಳ್ಳುತ್ತ ವಾಪಸ್ ಬಂದೆ. ಗಣಿತದಲ್ಲಿ ಅಂಕಗಳು ಹೇರಾಪೇರಿ ಆಗಿದ್ದರ ಬಗ್ಗೆ ಕೇಳಲೇ ಇಲ್ಲ. ಕೇಳಿದ್ದರೆ, 'ಕ್ಲಾಸಿನಾಗ ನಾ ಅಕೌಂಟೆನ್ಸಿ ಕಲಿಸುವಾಗ ನೀವೆಲ್ಲಾ ಬಿ ಕ್ಲಾಸಿನ ಆ ಅನಿತಾ ರಾಜ್ ಅಂಬೋ 'ಹೆಣ್ಣು ಹುಡುಗಿಯ' assets ಬಗ್ಗೆ ಮಾತಾಡಿಕೋತ್ತ, ಹುಚ್ಚರ ಗತೆ ನಕ್ಕೋತ್ತ ಕೂತಿದ್ದಿರಿ. ಅದಕ್ಕೇ ಇನ್ನೂ ಮೂರು ಮಾರ್ಕ್ಸ್ ಕಟ್ ಮಾಡೇನಿ!' ಅಂತ ಮೂಹ್ ತೋಡ್ ಜವಾಬ್ ಕೊಟ್ಟು ಕಳಿಸುತ್ತಿದ್ದರೇನೋ ಅತ್ತೂರ್ ಟೀಚರ್. ಅತ್ತೂರ್ ಟೀಚರ್ ಅವರ ಇನ್ನೊಂದು ಸ್ಪೆಷಾಲಿಟಿ ಅಂದರೆ 'ಹೆಣ್ಣು ಹುಡುಗಿ' ಅಂತ ಒತ್ತಿ ಒತ್ತಿ ಹೇಳುತ್ತಿದ್ದರು. ಕೇಳಿದವರಿಗೆ ಅನ್ನಿಸಬೇಕು, 'ಹೀಗೆ ಹೆಣ್ಣು ಹುಡುಗಿ, ಹೆಣ್ಣು ಹುಡುಗಿ ಅಂತ ಒತ್ತಿ ಒತ್ತಿ ಬೊಂಬಡಾ ಹೊಡೆಯಲಿಕ್ಕೆ ಇವರು ಗಂಡು ಹುಡುಗಿಯನ್ನು ಎಲ್ಲಿ ನೋಡಿ ಬಂದಿದ್ದಾರೆ??!!' ಅಂತ. ಸುಮ್ಮನೆ ಅಂದಿನ ಮಷ್ಕಿರಿ ನೆನಪು ಮಾಡಿಕೊಂಡೆ. ಅತ್ತೂರ್ ಟೀಚರ್ ಓದಿದರೂ ಕ್ಷಮಿಸುತ್ತಾರೆ ಬಿಡಿ. ನಮ್ಮ ಶಾಲೆಯ ಮಾಸ್ತರ್, ಟೀಚರ್ ಮಂದಿ ನಮ್ಮ ಎಂತೆಂಥಾ ದೊಡ್ಡ ದೊಡ್ಡ ತಪ್ಪು ಗಳನ್ನೇ ಕ್ಷಮಿಸಿ, ಭರಪೂರ್ ಆಶೀರ್ವಾದ ಮಾಡಿ ಕಳಿಸಿದ್ದಾರೆ. ಅವುಗಳ ಮುಂದೆ ಹಿಂದಿನ ಮಷ್ಕಿರಿ ನೆನಪು ಮಾಡಿಕೊಂಡು ಸ್ವಲ್ಪ ಮಜಾ ತೆಗೆದುಕೊಳ್ಳುವದು ಯಾವ ದೊಡ್ಡ ತಪ್ಪು??!!

ಮೂಹ್ ತೋಡ್ ಜವಾಬ್ ಕೊಡುವದರಲ್ಲಿ ಅತ್ತೂರ್ ಟೀಚರ್ ಪ್ರವೀಣೆ. ಪ್ರತಿ ಪರೀಕ್ಷೆ ನಂತರ ತಿದ್ದಿದ ಉತ್ತರ ಪತ್ರಿಕೆಗಳನ್ನು ವಾಪಾಸ್ ಕೊಡುವಾಗ ಗಳಿಸಿದ ಮಾರ್ಕುಗಳನ್ನು ಮುದ್ದಾಂ ಹೇಳಿಯೇ ಕೊಡುತ್ತಿದ್ದರು. ಅದೂ ಜಾಗಟೆ ಹೊಡೆದ ರೀತಿಯಲ್ಲಿ. ಗಣಿತದಲ್ಲಿ ಸಿಂಗಲ್ ಡಿಜಿಟ್ ನಲ್ಲಿ ಮಾರ್ಕ್ ಗಳಿಸುತ್ತಿದ್ದ ಮಂದಿಗೆ ಅದು ಭಾಳ ಮುಜುಗುರ ಉಂಟುಮಾಡುತ್ತಿತ್ತು. ಆದರೆ ಅತ್ತೂರ್ ಟೀಚರ್ ಕೇರ್ ಮಾಡುತ್ತಿರಲಿಲ್ಲ. ಗಳಿಸಿದ ಅಂಕ ಘೋಷಣೆ ಮಾಡಿ ಜೊತೆಗೆ ಒಂದು ಬರೋಬ್ಬರಿ ಮಾತಿನ ಏಟನ್ನೂ ಕೊಡುತ್ತಿದ್ದರು. ಎಂದೋ ಮಾಡಿದ ಗಲಾಟೆ, ತಪ್ಪಿಸಿದ ಕ್ಲಾಸ್ ನೆನಪಿಟ್ಟು, ಅದನ್ನೇ ಚುಚ್ಚಿ ಹೇಳಿ, ಹಾಗೆ ಮಾಡದೇ ಇದ್ದಿದ್ದರೆ ಇನ್ನೂ ಜಾಸ್ತಿ ಮಾರ್ಕ್ಸ್ ಬರುತ್ತಿದ್ದವೇನೋ ಅಂತ ಹೇಳಿ ಪೇಪರ್ ಕೊಡುತ್ತಿದ್ದರು. ನಮ್ಮ ಒಳ್ಳೆಯದಕ್ಕೇ ಹೇಳುತ್ತಿದ್ದರು ಬಿಡಿ. ಇನ್ನು ನಮ್ಮಂತಹ ಯಬಡೇಶಿಗಳಿಗೂ ಬರೋಬ್ಬರಿ ಟಾಂಟ್ ಒಗೆಯುತ್ತಿದ್ದರು. ನಮಗೆ ಯಾವಾಗಲೂ ೧೦೦ ತಪ್ಪಿದರೆ ೯೯, ೯೮ ಬಿದ್ದೇ ಬೀಳುತ್ತಿತ್ತು. 'ಹೆಗಡೆ, ನಾಲ್ಕು ಪಿರಿಯಡ್ ಆದ ಮ್ಯಾಲೆ ಮನಿಗೆ ಓಡಿ ಹೋಗೋದನ್ನ ಬಿಟ್ಟು ಕ್ಲಾಸಿನಾಗ ಕೂತು ಕೇಳು. ಈಗ ಆಗಾಗ ಏನು ಒಂದು, ಎರಡು ಮಾರ್ಕ್ಸ್ ಕಳಕೋತ್ತಿ ನೋಡು ಅವೂ ಸಿಕ್ಕು ಫುಲ್ ಸೆಂಟ್ ಪರ್ಸೆಂಟ್ ಮಾರ್ಕ್ಸ್ ತೊಗೋತ್ತಿ ನೋಡು. ಪ್ರತಿ ದಿನ ನಾಲ್ಕು ಪಿರಿಯಡ್ ಆದ ಮ್ಯಾಲೆ ಮನಿಗೆ ಓಡ್ತಿಯಲ್ಲಪಾ?? ಹಾಂ??? ಯಾಕ? ಏನಿಟ್ಟು ಬಂದಿ ಮನಿಯಾಗ???' ಅಂತ ಕೇಳಿ ನಮಗೂ ಇಡುತ್ತಿದ್ದರು. ನಮಗೆ ಆವಾಗ ಶಾಲೆ ಅಂದರೇ ಅಲರ್ಜಿ. ಗತಿಯಿಲ್ಲ ಹೋಗಲೇಬೇಕು. ಮತ್ತೆ ಪಾಠ ಕಲಿಯಲು ಹೋಗದಿದ್ದರೂ ದೋಸ್ತರೊಂದಿಗೆ ಮಸ್ತಿ ಮಾಡಲಾದರೂ ಹೋಗಲೇಬೇಕು. ಆದರೆ ಮಧ್ಯಾನ ಎರಡು ಘಂಟೆ ನಂತರ, ನಾಲ್ಕು ಪಿರಿಯಡ್ ಆದ ನಂತರವೂ ಶಾಲೆಯಲ್ಲಿ ಇರಬೇಕು ಅಂದರೆ ನಮಗೆ ಅದು ದೊಡ್ಡ ಚಿತ್ರಹಿಂಸೆ. ಹಾಗಾಗಿ ಸಾಮಾನ್ಯವಾಗಿ ಮನೆಗೆ ಓಡಿ ಬಂದುಬಿಡುತ್ತಿದ್ದೆ. ಮರುದಿವಸದ್ದನ್ನು ನೋಡಿಕೊಂಡರಾಯಿತು. ಒಂದಿಷ್ಟು ಬಯ್ಯುತ್ತಿದ್ದರು, ಮನೆಗೆ ಕಂಪ್ಲೇಂಟ್ ಕಳಿಸುತ್ತಿದ್ದರು, ಇತ್ಯಾದಿ. ಅದನ್ನೆಲ್ಲ ನಿಭಾಯಿಸಿಯಾಗಿತ್ತು. ನಾಲ್ಕು ಪಿರಿಯಡ್ ನಂತರ ಓಡಲೇಬೇಕು. ಅದಕ್ಕೆ ಈಗ ಅತ್ತೂರ್ ಟೀಚರ್ ಬಯ್ಯುತ್ತಿದ್ದರು. ಹೀಗೆ ಎಷ್ಟೇ ಮಾರ್ಕ್ಸ್ ತೆಗೆದುಕೊಂಡರೂ ಅತ್ತೂರ್ ಟೀಚರ್ ಅವರ ಒಂದು ಗರಂ ಕಾಮೆಂಟ್ ಇದ್ದೇ ಇರುತ್ತಿತ್ತು. ಪೇಪರ್ ಕೊಡುವಾಗ ಕೇವಲ ಮಾರ್ಕ್ಸ್ ಹೇಳಿ ಏನೂ ಟಾಂಟ್ ಹೊಡೆಯಲಿಲ್ಲ ಅಂದರೆ ಆ ವಿದ್ಯಾರ್ಥಿ, ವಿದ್ಯಾರ್ಥಿನಿ ಬಹಳ ಸಭ್ಯರು ಅಂತ ಅರ್ಥ. ಏನೂ ಕಿತಾಪತಿ ಮಾಡದವರಿಗೆ ಸುಮ್ಮನೆ ಮಾರ್ಕ್ಸ್ ಹೇಳಿ, ಪೇಪರ್ ಕೊಟ್ಟು ಕಳಿಸುತ್ತಿದ್ದರು.

ಒಟ್ಟಿನಲ್ಲಿ ಒಂಬತ್ತನೇ ಕ್ಲಾಸಿನ ಗಣಿತ ಪರೀಕ್ಷೆಯಲ್ಲಿ ಕಳೆದುಹೋದ ಮೂರು ಅಂಕಗಳ ರಹಸ್ಯ ಬಗೆಹರಿಯಲೇ ಇಲ್ಲ. ರಿಸಲ್ಟ್ ಜೊತೆಗೆ ನಮ್ಮ ಉತ್ತರ ಪತ್ರಿಕೆಗಳ ಪ್ರತಿಯನ್ನು ಸಹಿತ ಕಳಿಸಿಬಿಟ್ಟಿದ್ದರೆ ಒಳ್ಳೆಯದಿತ್ತು. ನಮ್ಮ ದೇಶದ ಶಿಕ್ಷಣ ಪದ್ಧತಿಯೇ ವಿಚಿತ್ರ. ಪರೀಕ್ಷೆ ಮಾಡುವದರ ಉದ್ದೇಶ ಏನು? ವಿದ್ಯಾರ್ಥಿಗಳಿಗೆ ವಿಷಯ ಎಷ್ಟು ಅರ್ಥವಾಗಿದೆ ಅಂತ ನೋಡುವದು. ಅದು ತಿಳಿಯಬೇಕಾಗಿದ್ದು ಯಾರಿಗೆ? ಮೂರು ಜನರಿಗೆ ಮುದ್ದಾಂ ತಿಳಿಯಬೇಕು. ಮೊತ್ತ ಮೊದಲನೇಯದಾಗಿ ವಿದ್ಯಾರ್ಥಿಗಳಿಗೆ ತಿಳಿಯಬೇಕು. ತಮ್ಮ ತಪ್ಪು ಒಪ್ಪುಗಳು ವಿದ್ಯಾರ್ಥಿಗಳಿಗೆ ತಿಳಿದರೆ ಮುಂದೆ ತಿದ್ದಿಕೊಳ್ಳಲು, ಉತ್ತಮಗೊಳಿಸಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಂತೆ. ಪಾಲಕರಿಗೆ ಆಸಕ್ತಿಯಿದ್ದರೆ ತಿಳಿಯಬೇಕು. ಶಿಕ್ಷಕರಿಗೂ ತಿಳಿಯಬೇಕು. ತಿಳಿದರೆ ಶಿಕ್ಷಕರು ಬೇರೆ ಬೇರೆ ವಿದ್ಯಾರ್ಥಿಗಳ strengths, weaknesses ನೋಡಿಕೊಂಡು ಅವರ ಬಗ್ಗೆ ಸ್ವಲ್ಪ ಬೇರೆ ತರಹದ ಗಮನ ಕೊಡಬಹುದು. ನಮ್ಮ ಶೈಕ್ಷಣಿಕ ಪದ್ಧತಿಯಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಪಾರದರ್ಶಕತೆಯೇ (transparency) ಇಲ್ಲ. ಒಂದು ವಿಷಯ ಅಧ್ಯಯನ ಮಾಡುವಾಗ ಎಲ್ಲಿ ಗೆದ್ದೆ, ಎಲ್ಲಿ ಸೋತೆ, ಎಲ್ಲಿ ಎಡವಿದೆ ಅಂತ ತಿಳಿಯುವದೇ ಇಲ್ಲ. ಇದಕ್ಕೆ ಪರಿಹಾರ ಸಿಕ್ಕಿದ್ದು BITS, Pilani ಯಲ್ಲಿ ಇಂಜಿನಿಯರಿಂಗ್ ಓದಲು ಶುರು ಮಾಡಿದಾಗ. ಪ್ರತಿ ವಿಷಯಕ್ಕೆ ನಾಲ್ಕು ಟೆಸ್ಟ್ ಮತ್ತು ಸೆಮಿಸ್ಟರ್ ಕೊನೆಗೆ ಒಂದು ಪರೀಕ್ಷೆ. ಪ್ರತಿ ಟೆಸ್ಟಿನ, ಪ್ರತಿ quiz ನ, ಪ್ರತಿ ಪರೀಕ್ಷೆಯ ಮೌಲ್ಯಮಾಪನ ಮಾಡಿದ ಉತ್ತರಪತ್ರಿಕೆಯನ್ನು  ನಮ್ಮ ಕೈಯಲ್ಲಿ ಕೊಟ್ಟೇಬಿಡುತ್ತಿದ್ದರು. ಮಾಸ್ತರರು ಮೌಲ್ಯಮಾಪನ ಮಾಡಿದ್ದು ಸರಿಯಾಗಿಲ್ಲ ಅಂತ ಅನ್ನಿಸಿದರೆ ಮಾಸ್ತರ್ ಜೊತೆ ಗುದ್ದಾಡಲು ಮುಕ್ತ ಅವಕಾಶ. ಆದರೆ ಒಂದೇ ಕರಾರು. ಪುನರ್ಮೌಲ್ಯಮಾಪನದಲ್ಲಿ ಹೆಚ್ಚಿನ ತಪ್ಪುಗಳು ಕಂಡು ಬಂದರೆ ಮೊದಲಿನಿಗಿಂತ ಕಮ್ಮಿ ಮಾರ್ಕ್ಸ್ ಹಾಕಿದರೂ ಒಪ್ಪಿಕೊಳ್ಳಬೇಕು. ಅಂತಹ ಪಾರದರ್ಶಕತೆಯನ್ನು, ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ನೋಡಿದ್ದು ನಮ್ಮ ಹೆಮ್ಮೆಯ BITS, Pilani ಯಲ್ಲಿ ಮಾತ್ರ. ನಂತರ ನೋಡಿದ್ದು ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ. ಅಂಥದ್ದೊಂದು ಪಾರದರ್ಶಕತೆ ಇದ್ದರೆ ಮಾತ್ರ ಪರೀಕ್ಷೆ ಮಾಡಿದ್ದಕ್ಕೊಂದು ಅರ್ಥವಿರುತ್ತದೆ. ೯೮ ಮಾರ್ಕ್ಸ್ ಬರಬೇಕಾದಲ್ಲಿ ಅತ್ತೂರ್ ಟೀಚರ್ ೯೫ ಮಾರ್ಕ್ಸ್ ಹಾಕಿದರೆ ಹಾಕಿಸಿಕೊಂಡು ಕೂಡಲು ನಾವೇನು ಹಲ್ವಾನೇ? ಆಗ ಹಲ್ವಾನೇ ಮಾಡಿಬಿಟ್ಟರು ಬಿಡಿ. ಆ ಮಾತು ಬೇರೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಸಹಿತ ಹಾಗೇ ಆಗಿತ್ತು. ಐವತ್ತಕ್ಕೆ ನಲವತ್ತಾರು ಹಾಕಿಬಿಟ್ಟಿದ್ದರು. ಒಂದು ಸಮಸ್ಯೆಯನ್ನು ಸರಿಯಾಗಿಯೇ ಬಿಡಿಸಿದ್ದೆ. ತಿದ್ದುವಾಗ ಏನೋ ತಪ್ಪು ತಿಳಿದುಕೊಂಡು ಅದನ್ನು ತಪ್ಪು ಅಂತ ತಿದ್ದಿ, ನಾಲ್ಕು ಮಾರ್ಕ್ಸ್ ಕಟ್ ಮಾಡಿಬಿಟ್ಟಿದ್ದರು. ಪುಣ್ಯಕ್ಕೆ ಪೇಪರ್ ಕೈಗೆ ಬಂದಿತ್ತು. ನೋಡಿದಾಕ್ಷಣ ಓಡಿದ್ದೆ ಟೀಚರ್ ಬಳಿ. ಟೀಚರ್ ಮತ್ತೆ ನೋಡಿ, ನನ್ನ ಪೇಪರ್ ತಿದ್ದುವಾಗ ತಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಐವತ್ತಕ್ಕೆ ನಲವತ್ತೊಂಬತ್ತು ಅಂಡ್ ಹಾಪ್ ಹಾಕಿ ಕಳಿಸಿದ್ದರು. ೪೯. ೫ / ೫೦. ಪ್ರೋಗ್ರೆಸ್ ಕಾರ್ಡಿನಲ್ಲಿ ೫೦ /೫೦ ಅಂತಲೇ ಬಂದಿತ್ತು ಬಿಡಿ. ಹಾಗಾಗಿ ವಾರ್ಷಿಕ ಪರೀಕ್ಷೆಯಲ್ಲಿ ಸಹಿತ ಅಂತಹದೇ ಲಫಡಾ ಯಾಕಾಗಿರಬಾರದು??!!

ಇರಲಿ. ಹೀಗೆ ಒಂಬತ್ತನೇ ಕ್ಲಾಸಿನಲ್ಲಿ ಮೊದಲ ಸಲ ಅಕೌಂಟೆನ್ಸಿ ಕಲಿಯವ ನಮ್ಮ ಅನುಭವ ಹೇಗಿತ್ತು ಅಂದರೆ ತೆನಾಲಿ ರಾಮನ ಬೆಕ್ಕು ಬಿಸಿ ಹಾಲು ಕುಡಿದು, ಬಾಯಿ ಸುಟ್ಟುಕೊಂಡು, ಹಾಲಿನ ಬಗ್ಗೆ ಒಂದು ತರಹದ ಹೆದರಿಕೆ, ಹೇವರಿಕೆ ಬೆಳೆಯಿಸಿಕೊಂಡ ಹಾಗಿತ್ತು. ಆದರೂ ಅಕೌಂಟೆನ್ಸಿ ಕಲಿಯಬೇಕು. ಕಂಪನಿಗಳ ಬ್ಯಾಲೆನ್ಸ್ ಶೀಟ್, ಇನ್ಕಮ್ ಸ್ಟೇಟ್ಮೆಂಟ್, ಕ್ಯಾಶ್ ಫ್ಲೋ ಸ್ಟೇಟ್ಮೆಂಟ್ ಎಲ್ಲ ವಿಶ್ಲೇಷಿಸಲು ಕಲಿಯಬೇಕು ಅಂತೆಲ್ಲ ತುಂಬಾ ಆಸಕ್ತಿಯಿತ್ತು. ಅದನ್ನೆಲ್ಲ ಮಾಡಲು ಬೇಕು ಅಕೌಂಟೆನ್ಸಿ ವಿಷಯದಲ್ಲಿ ಒಳ್ಳೆಯ ಕಲಿಕೆ ಮತ್ತು ಅಭ್ಯಾಸ.

MBA ಡಿಗ್ರಿಯ ಅಕೌಂಟೆನ್ಸಿ ವಿಷಯದ ಮೊದಲ ಕ್ಲಾಸಿಗೆ ಹೋಗಿ ಕೂತಾಗ ಇದೆಲ್ಲ flashback ಮಾದರಿಯಲ್ಲಿ ನೆನಪಿಗೆ ಬಂತು. ಮೊದಲನೇ ಕ್ಲಾಸಿಗೆ ಅಂತ ಬರೋಬ್ಬರಿ ತಯಾರಿ ಮಾಡಿಕೊಂಡೇ ಹೋಗಿದ್ದೆ. ಹೊಸ ನೋಟ್ ಬುಕ್, ಮಣ ಭಾರದ ಪಠ್ಯ ಪುಸ್ತಕ, ರೆಫರೆನ್ಸ್ ಪುಸ್ತಕ ಎಲ್ಲ ಹೊತ್ತುಗೊಂಡು ಹೋಗಿದ್ದೆ. ೨೦೦೧ ರ Fall ಸೆಮಿಸ್ಟರ್. ಸುಮಾರು ಇದೇ ಸಮಯದಲ್ಲಿ ಶುರುವಾಗಿತ್ತು. ಸೆಪ್ಟೆಂಬರ್ ಮೊದಲನೇ ವಾರ. ಸಂಜೆ ಆರರಿಂದ ಒಂಬತ್ತರ ವರೆಗೆ ಕ್ಲಾಸ್. ವೃತ್ತಿಪರರಿಗೆ ಅನುಕೂಲವಾಗಲಿ ಅಂತ ಸಂಜೆಯೂ ಕ್ಲಾಸ್ ಇಡುತ್ತಿದ್ದರು. ಬಾಸ್ಟನ್ ಸಮೀಪದ Andover ಶಹರದ Merrimack College ನಲ್ಲಿ ನಮ್ಮ ಕ್ಲಾಸ್. ಅದು Suffolk University ಯ satellite ಕ್ಯಾಂಪಸ್ ಆಗಿತ್ತು. ನನಗೆ ಅಲ್ಲೇ ಹತ್ತಿರವಾಗಿದ್ದರಿಂದ ಬಾಸ್ಟನ್ ಶಹರದ ಮೇನ್ ಕ್ಯಾಂಪಸ್ ಬಿಟ್ಟು ಇಲ್ಲೇ ನೋಂದಾಯಿಸಿಕೊಂಡಿದ್ದೆ.

ಅಂದಿನ  ಪಠ್ಯ ಪುಸ್ತಕ. ಟೆಕ್ಸ್ಟ್ ಬುಕ್. ಈಗಲೂ ಇದೆ. ಪ್ರೀತಿಯ ಅಕೌಂಟಿಂಗ್ ಪುಸ್ತಕ ಮಾರಲಿಕ್ಕೆ ಸಾಧ್ಯವೇ!? :)


ನಮಗೆ ಅಕೌಂಟೆನ್ಸಿ ಪಾಠ ಮಾಡಲಿರುವ ಮೇಡಂ ಹೆಸರು, ಸಿಲೆಬಸ್ ಎಲ್ಲ ಮೊದಲೇ ಇಮೇಲ್ ಮೂಲಕ ಕಳಿಸಿದ್ದರು. ಮೇಡಂ ಅವರನ್ನು ನೋಡಿರಲಿಲ್ಲ ಅಷ್ಟೇ.

ಬರೋಬ್ಬರಿ ಸಂಜೆ ಆರು ಘಂಟೆಗೆ ಮೇಡಂ ಕ್ಲಾಸ್ ಒಳಗೆ ಎಂಟ್ರಿ ಕೊಟ್ಟರು. ಇಷ್ಟು ದೊಡ್ಡ ನಗೆ ಗಲಗಲ ಅಂತ ನಗುತ್ತ ಒಳಗೆ ಬಂದರು. 'ಓಹೋ! ಇವರೇ ಡಾ. ಜೇನ್ ಮಾರ್ಟನ್. ನಮ್ಮ ಅಕೌಂಟೆನ್ಸಿ ಮೇಡಂ!' ಅಂತ ಗೊತ್ತಾಯಿತು. ದೊಡ್ಡ ದೈಹಿಕ ಪರ್ಸನಾಲಿಟಿಯ, ಭೂಮಿ ತೂಕದ ಮೇಡಂ. ಸುಮಾರು ಆರಡಿ ಎತ್ತರ. ಹೊನಗ್ಯಾ ಮಾದರಿಯ ದೊಡ್ಡ ಶರೀರ. ಒಂದು ನಿಲುವಂಗಿಯಂತಹ, overall ಮಾದರಿಯ, ಮೇಲಿಂದ ಕೆಳಗಿನ ವರೆಗೆ ಒಂದೇ ಬಟ್ಟೆ ತರಹ ಕಾಣುವ ಡ್ರೆಸ್ ಹಾಕಿದ್ದರು. very casual. ಮಾಸ್ತರ್, ಮೇಡಂ ಮಂದಿ ಸ್ವಲ್ಪ formal ಆಗಿ ಡ್ರೆಸ್ ಮಾಡಿಕೊಳ್ಳುತ್ತಿದ್ದರು. ಇವರು ಮಾತ್ರ ಆರಾಮಾಗಿ ಬಂದಿದ್ದಾರೆ. ಒಂದು ತರಹ ಮಸ್ತ ಮಸ್ತ ಅನ್ನಿಸುವ ಹಾಗೆ ಇದ್ದಾರೆ. ವಯಸ್ಸು ಐವತ್ತರ ಮೇಲಿರಬಹುದು. ಒಂದು ಭರ್ಜರಿ ರೇಷ್ಮೆ ಸೀರೆ ಉಟ್ಟು, ಹಣೆ ಮೇಲೆ ಕಾಸಿನಗಲದ ದೊಡ್ಡ ಕುಂಕುಮ ಇಟ್ಟುಕೊಂಡರೆ ನಮ್ಮ ನಿಮ್ಮ ಮನೆಯ ಯಾರೋ ದೊಡ್ಡಮ್ಮನೋ, ಅತ್ತೆಯೋ, ಅಜ್ಜಿಯೋ ಅಂತ ಕಾಣಬೇಕು. ಹಾಗಿದ್ದರು. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಎಲ್ಲ ಕೆಲಸಗಳನ್ನು ಸಂಬಾಳಿಸುತ್ತ, ಓಡಾಡಿಕೊಂಡಿರುವ ಹಿರಿಯ ಮುತ್ತೈದೆಯರ ಮಾದರಿಯಲ್ಲಿ ಇದ್ದರು ನಮ್ಮ ಮೇಡಂ. ನಮಗಂತೂ ಹಾಗೆ ಕಂಡರು. ನಾವು ಹೇಳಿ ಕೇಳಿ ದೇಸಿ ಮಂದಿ. ನಮಗೆ ಮಹಿಳೆಯರು ಒಂದೋ ಹಿರಿಯ ಮುತ್ತೈದೆಯರ ತರಹ ಕಾಣುತ್ತಾರೆ. ಇಲ್ಲ ಮಾದಕ ಮುತ್ತೈದೆಯರ ತರಹ ಕಾಣುತ್ತಾರೆ.

ದೊಡ್ಡ ದನಿಯಲ್ಲಿ ಮಾತಾಡುತ್ತ, ನಡುನಡುವೆ ಕೇಕೆ ಹಾಕುವ ನಮೂನಿಯಲ್ಲಿ ಗಲಗಲ ನಗುತ್ತ, ಎಲ್ಲರ ಪರಿಚಯ ಮಾಡಿಕೊಂಡರು. ಕೆಲವೇ ನಿಮಿಷಗಳಲ್ಲಿ ಕ್ಲಾಸಿನಲ್ಲಿನ ಮುಗುಂ ವಾತಾವರಣವನ್ನೇ ಬದಲಾಯಿಸಿಬಿಟ್ಟರು. ನಾವು ಸ್ಟೂಡೆಂಟ್ಸ್ ಒಂದು ಹತ್ತು ಜನ ಅಷ್ಟೇ. ಅಂತದ್ದರಲ್ಲಿ ಇಂತಹ ತುಂಬಾ ಫ್ರೀ ಅನ್ನಿಸುವ ಮೇಡಂ. ಏಕ್ದಂ ವಾತಾವರಣ ತಿಳಿಯಾಗಿ, ನಿರಾಳವಾಗಿ ಹಾಯೆನ್ನಿಸಿತು. ಈ ಸಲ ಅಕೌಂಟೆನ್ಸಿ ವಿಷಯ ತಲೆಗೆ ಹೋಗಬಹುದು ಅಂತ ಒಂದು ತರಹದ ಧೈರ್ಯ, ಆಸೆ ಬಂತು. ಅದು ಒಂದು ಶುಭ ಸೂಚನೆ.

ಆತ್ಮೀಯತೆಯಿಂದ ಎಲ್ಲರ ಪರಿಚಯ ಮಾಡಿಕೊಂಡ ಡಾ. ಜೇನ್ ಮಾರ್ಟನ್ ಪಾಠ ಆರಂಭಿಸಿದರು. ಹೆಚ್ಚಿನ ಮಾಸ್ತರ್ ಮಂದಿಯಂತೆ ಇವರೂ ಪ್ರೊಜೆಕ್ಟರ್ ತೆಗೆದು, PowerPoint PPT ಹಾಕಿಕೊಂಡು ಪಾಠ ಮಾಡುತ್ತಾರೇನೋ ಅಂತ ನೋಡಿದರೆ ಇಲ್ಲ. ಇವರು ಹಳೆ ಮಾಡೆಲ್ ಮಂದಿ. ಕರಿಹಲಗೆಯನ್ನು ಬರೋಬ್ಬರಿ ಸಾಫ್ ಮಾಡಿಕೊಂಡವರೇ ಚಾಕ್ ಪೀಸ್ ಹಿಡಿದು ಅಕೌಂಟೆನ್ಸಿ ಪಾಠ ಆರಂಭ ಮಾಡಿದರು ನೋಡಿ! ಬೇರೆಯೇ ಲೋಕಕ್ಕೆ ಹೋದ ಅನುಭವ. ಅಷ್ಟು ಮಸ್ತಾಗಿ ಪಾಠ ಮಾಡಿಬಿಟ್ಟರು. ಮೊದಲ ಕ್ಲಾಸಿನಲ್ಲೇ ಫುಲ್ ಫಿದಾ. ಆರು ಘಂಟೆಗೆ ಶುರುವಾದ ಪಾಠ. ಪೇಜ್ ಮೇಲೆ ಪೇಜ್ ನೋಟ್ಸ್ ಬರೆದುಕೊಂಡಿದ್ದೇ ಬರೆದುಕೊಂಡಿದ್ದು. ಸಂಜೆ ೭.೩೦ ಆಗಿದ್ದೇ ಗೊತ್ತಾಗಲಿಲ್ಲ. ಆಗ ಮಧ್ಯಂತರ. ಒಂದು ಸಣ್ಣ ಬ್ರೇಕ್. ಹದಿನೈದು ನಿಮಿಷ. ನಂತರ ಮತ್ತೆ ಒಂಬತ್ತರ ವರೆಗೆ ಪಾಠ.

ಸರಿ. ಬ್ರೇಕ್ ಮುಗಿಸಿ ೭.೪೫ ರ ಹೊತ್ತಿಗೆ ವಾಪಸ್ ಕ್ಲಾಸಿಗೆ ಬಂದು ಕೂತೆವು. ಕೆಲವು ವಿದ್ಯಾರ್ಥಿಗಳ ತಿನ್ನುವದು, ಕುಡಿಯುವದು (ಸಾಫ್ಟ್ ಡ್ರಿಂಕ್ ಮಾತ್ರ) ಇನ್ನೂ ನಡೆದಿತ್ತು. ಏನೋಪಾ! ಈ ಅಮೇರಿಕನ್ ಯೂನಿವರ್ಸಿಟಿ ಕ್ಲಾಸುಗಳಲ್ಲಿ ಎಲ್ಲವೂ ಓಕೆ. ತಿಂಡಿ, ಪಂಡಿ, ಸಾಫ್ಟ್ ಡ್ರಿಂಕ್ ಕುಡಿತ, ಚೂಯಿಂಗ್ ಗಮ್ ಜಗಿತ ಎಲ್ಲ ಓಕೆ. ನಮ್ಮ ಧಾರವಾಡದ ಶಾಲೆಯಲ್ಲಿ ಏನಾದರೂ ಹಾಗೆಲ್ಲ ಮಾಡಿದ್ದರೆ ರಪ್ರಪಾ ಅಂತ ಕಪಾಳಕ್ಕೆ ಬಾರಿಸಿ, ಬಾಯಾಡಿಸುತ್ತಿರುವದನ್ನು ಹೊರಗೆ ಹೋಗಿ ಉಗಿದು, ಕಪ್ಪೆ, ಹಾವು, ಹಾವರಾಣಿ ಇತ್ಯಾದಿ ಬಿದ್ದ ನೀರಿನ ಟಂಕಿಯ ನೀರಿನಲ್ಲಿ ಬಾಯಿ ತೊಳೆದುಕೊಂಡು ಬಂದು ಕೂಡಲು ಹೇಳುತ್ತಿದ್ದರು. ವಾಪಸ್ ಬಂದು ಕೂಡುವಾಗ ಮತ್ತೆ ಒಂದಿಷ್ಟು ಬಡಿತ. ಈ ಅಮೇರಿಕನ್ ಕ್ಲಾಸು ರೂಮುಗಳಲ್ಲಿ ವಿದ್ಯಾರ್ಥಿಗಳು ಸ್ನಾನ, ಸಂಡಾಸ್, ಪಂಡಾಸ್, ಮತ್ತೊಂದು ಮಾಡದಿದ್ದರೆ ಅದೇ ದೊಡ್ಡ ಮಾತು. ಬಾಕಿಯೆಲ್ಲ ಕಾರ್ನಾಮೆ ನಡೆಯುತ್ತಲೇ ಇರುತ್ತದೆ. ಎಷ್ಟೋ ಸಲ ಮಾಸ್ತರ್ ಮಂದಿಯೇ ಇಡೀ ಕ್ಲಾಸಿಗೆ ಕಾಫಿ, ಡೋನಟ್ಸ್, ಬೇಗಲ್ಸ್ ತೆಗೆದುಕೊಂಡು ಬಂದಿರುತ್ತಾರೆ. ಐಶ್ ಮಾಡಿ! ತಿನ್ನುತ್ತ, ಕುಡಿಯುತ್ತಲೇ ಪಾಠ ಅವರು ಮಾಡುತ್ತಾರೆ. ನಾವೂ ಅದನ್ನೇ ಮಾಡುತ್ತ ಪಾಠ ಕೇಳಿದರಾಯಿತು.

ಮಧ್ಯಂತರದ ಬ್ರೇಕ್ ನಂತರ ಮೇಡಂ ತಮ್ಮ ಅಮೋಘ ಪಾಠ ಮುಂದುವರೆಸುತ್ತಾರೆ ಅಂದುಕೊಂಡರೆ ಜೇನ್ ಮಾರ್ಟನ್ ಮೇಡಂ ಗಲಗಲ ಅಂತ ಮತ್ತೆ ನಕ್ಕರು. ತಮ್ಮ ಇಡೀ ದೇಹವನ್ನು ಕುಲುಕಿಸಿ ನಕ್ಕರು. ಭೂಮಿ ತೂಕದ ಹೆಣ್ಣುಮಗಳು ಆಕೆ. ಭೂಮಿ ಕಂಪಿಸಿತು. 'ಇವತ್ತು ಇದು ಮೊದಲನೇ ಕ್ಲಾಸ್. ಇವತ್ತಿಗೆ ಇಷ್ಟು ಸಾಕು. ಮುಂದಿನ ಪಿರಿಯಡ್ಡಿನಿಂದ ಪೂರ್ತಿ ಒಂಬತ್ತರವರೆಗೆ ಕ್ಲಾಸ್ ತೆಗೆದುಕೊಳ್ಳುತ್ತೇನೆ. ಎಕ್ಸಟ್ರಾ ಕ್ಲಾಸ್ ವಾರಾಂತ್ಯದಲ್ಲಿ ಇಟ್ಟರೂ ಇಟ್ಟೆ. ಅದಕ್ಕೇ ಇವತ್ತಿಗೆ ಇಷ್ಟು ಸಾಕು,' ಅಂದರು ಮೇಡಂ. ಸರಿ ಅಂತ ನಾವು ನಮ್ಮ ಚೀಲ ಕಟ್ಟಲು ಶುರು ಮಾಡಿದರೆ ಮೇಡಂ ಇನ್ನೂ ಮಾತು ಮುಗಿಸಿರಲಿಲ್ಲ. ಒಂದು ದೊಡ್ಡ ಬಾಂಬ್ ಹಾಕಿಬಿಟ್ಟರು. 'ಎಲ್ಲರೂ ಬನ್ನಿ, ಹೋಗೋಣ. ಇಲ್ಲೇ ಪಕ್ಕದಲ್ಲಿ ಒಂದು ಒಳ್ಳೆ ಪಬ್ಬಿದೆ (pub). ಡ್ರಿಂಕ್ಸ್ ಹಾಕೋಣ. ಮೊದಲನೇ ರೌಂಡ್ ನಾನು ಎಲ್ಲರಿಗೂ ಟ್ರೀಟ್ ಕೊಡುತ್ತೇನೆ. ನನ್ನ ಮೊದಲ ಡ್ರಿಂಕ್ ಮುಗಿಸಿ ನಾನು ಹೊರಡುತ್ತೇನೆ. ನಂತರ ನೀವು ಮನೆಗೆ ಹೋಗುತ್ತೀರೋ, ಮಠಕ್ಕೆ ಹೋಗುತ್ತೀರೋ ಅದು ನಿಮಗೆ ಬಿಟ್ಟಿದ್ದು. ಬನ್ನಿ! ಬನ್ನಿ! ಇಲ್ಲಿಂದ ಪಬ್ಬಿಗೆ ಹೋಗಲು  ಐದು ನಿಮಿಷ ಸಾಕು. See you there in five minutes. Come on everybody!' ಅಂತ ಚಪ್ಪಾಳೆ ತಟ್ಟಿ, ದೊಡ್ಡ ದನಿಯಲ್ಲಿ ಕರೆ ಕೊಟ್ಟರು. ಹಾಗೆ ಕರೆ ಕೊಟ್ಟವರು ತಮ್ಮ ಚೀಲ ಎತ್ತಿಕೊಂಡು ಗಲಗಲ ನಗುತ್ತ, ತಮ್ಮ ದೊಡ್ಡ ದೇಹವನ್ನು ಕುಲುಕಿಸುತ್ತ, ಕಾರಿಡಾರಿನಲ್ಲಿ ಕಂಡವರಿಗೆ Hi! Bye! ಹೇಳುತ್ತ, ಮಜಾಕಿನಲ್ಲಿ ಅವರ ಕಾಲೆಳೆಯುತ್ತ, ಪಬ್ ಕಡೆ ಹೋಗೇಬಿಟ್ಟರು.

ನಮಗೋ ಆಶ್ಚರ್ಯ! ನಾವೆಲ್ಲಾ ಸಣ್ಣ ಊರಿನ ಮಂದಿ. ಅದೂ ದೇಸಿ ಮಂದಿ. ಭಾರತದವರು. ಮಾಸ್ತರ್, ಟೀಚರ್ ಮುಂದೆ ನಮಗೆ ಕೂತೂ ಗೊತ್ತಿಲ್ಲ. ನಿಂತೇ ಮಾತು ಕಥೆ. ಅದೆಲ್ಲ ಶಿಕ್ಷಕರಿಗೆ ತೋರುವ ಗೌರವದ ಸಂಕೇತ. ಇನ್ನು ಮಾಸ್ತರ್, ಟೀಚರ್ ಜೊತೆ ಕೂತು ಊಟ, ತಿಂಡಿ ಮಾಡೋದನ್ನೆಲ್ಲ ಊಹೆ ಮಾಡಿಕೊಳ್ಳಲೂ ಕಷ್ಟ. ಹತ್ತನೆ ತರಗತಿಯಲ್ಲಿದ್ದಾಗ ರೇವಣಕರ್ ಸರ್ ಒಂದು ರವಿವಾರ ಶಾಲೆಗೆ ಬರಹೇಳಿದ್ದರು. ವಿಜ್ಞಾನ ಪ್ರದರ್ಶನವೊಂದಕ್ಕೆ ತಯಾರಿ ಮಾಡಬೇಕಿತ್ತು. ನಮ್ಮ ಕೆಲಸ ಮುಗಿದಾಗ ಮಧ್ಯಾನ ಮೂರು ಘಂಟೆಯ ಮೇಲಾಗಿತ್ತು. ಊಟ ಹರೋಹರ ಅಂದುಹೋಗಿತ್ತು. ಅಲ್ಲೇ ಮಾಳಮಡ್ಡಿಯ ಬೃಂದಾವನ ಹೋಟೆಲ್ಲಿಗೆ ಬಂದುಬಿಡಿ ಅಂದಿದ್ದರು ರೇವಣಕರ್ ಸರ್. ನಾನು ನನ್ನ ಸಹಪಾಠಿ ಹೋಗಿದ್ದೆವು. ಅಲ್ಲಿ ಸರ್ ಒಂದು ಪ್ಲೇಟ್ ಉಪ್ಪಿಟ್ಟು, ಚಹಾ ಕೊಡಿಸಿದ್ದರು. ಅದನ್ನು ಸರ್ ಮುಂದೆಯೇ ಕೂತು, ತಿಂದು, ಕುಡಿದು ಬರಬೇಕಾದರೆ ಸಾಕೋಬೇಕಾಗಿ ಹೋಗಿತ್ತು. ಆ ಮಟ್ಟದ ಮುಜುಗರ ಮತ್ತು ಒಂದು ಟೈಪಿನ ನಾಚಿಕೆ. ಆರಡಿಯ ದೊಡ್ಡ ಬಾಡಿಯನ್ನು ಮೂರಡಿ ಮಾಡಿಕೊಂಡು, ಮುದುಡಿ ಕೂತು, ಉಪ್ಪಿಟ್ಟು ಮುಕ್ಕಿ, ಚಹಾ ನೆಕ್ಕಿ, ಅಂದರೆ ಕಪ್ಪಿನಿಂದ ಬಸಿಗೆ ಹಾಕಿಕೊಂಡು ಧಾರವಾಡ ಮಂದಿ ಹಾಂಗೆ ಸೊರ್ರsss ಅಂತ ನೆಕ್ಕಿ ಕುಡಿದು, ಓಡುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಅದೆಲ್ಲ ಆಗಿನ ಪದ್ಧತಿ. ಇವತ್ತಿಗೂ ಅಷ್ಟೇ. ನಾವು ಸರ್, ಟೀಚರ್ ಮುಂದೆ ಸ್ನಾನ, ಊಟ, ಇತ್ಯಾದಿ ಮಾಡುವದಿಲ್ಲ. ಭಾಳ ಕಮ್ಮಿ. ಮೊದಲು ನಮಗೆ ಪಾನಪಟ್ಟಿಯ ಹುಚ್ಚಿತ್ತು. ಅದರಲ್ಲೂ ೪೨೦ ಜರ್ದಾ ಪಾನ್. ಧಾರವಾಡದಲ್ಲಿ ಸುತ್ತಮುತ್ತ ನೋಡಿಕೊಂಡು ಬಾಯಿಯೊಳಗೆ ಎಲೆಅಡಿಕೆ ಏರಿಸಬೇಕಾಗುತ್ತಿತ್ತು. ಎಲ್ಲಾದರೂ ಮಾಸ್ತರ್, ಟೀಚರ್ ಮಂದಿ ಕಂಡರೆ ಅಷ್ಟೇ ಮತ್ತೆ. ಅವರು ಏನೆಂದುಕೊಳ್ಳುತ್ತಾರೋ ಅದು ಏನೇ ಇರಲಿ. ನಮಗೇ ಕೆಟ್ಟ ಅಪಮಾನ, ಅಸಹ್ಯ ಎಲ್ಲ ಅನಿಸಿಬಿಡುತ್ತಿತ್ತು. 'ಛೇ! ಜರ್ದಾ ಪಾನ್ ಹಾಕಿಕೊಂಡು ಸರ್ ಎದುರಿಗೆ ಬಂದೆನಲ್ಲ!?' ಅಂತ ಕೆಟ್ಟ ಫೀಲಿಂಗ್ ಬಂದು, ಪರಮ ತುಟ್ಟಿಯ ಜರ್ದಾ ಪಾನನ್ನು ಹಾಕಿದ ಮರುಕ್ಷಣವೇ ಉಗಿದು, ಎದುರಿಗೆ ಕಂಡ ಮಾಸ್ತರರಿಗೆ ಭಕ್ತ ಪ್ರಹಲ್ಲಾದನ ಹಾಗೆ ಅಬ್ಬೇಪಾರಿಯ ರೀತಿಯಲ್ಲಿ ಕೈಮುಗಿದು, ದೈನೇಸಿ ರೀತಿಯಲ್ಲಿ ಹಲ್ಲು ಕಿಸಿದು ನಿಂತಿದ್ದೂ ಇದೆ ಬಿಡಿ. ಅಂದು ಜರ್ದಾ ಪಾನಿಗೆ ಆಹುತಿ ಕೊಟ್ಟಿದ್ದ ಎರಡು ಮೂರು ರೂಪಾಯಿ ಮಟಾಶ್! ಹರೋಹರ!

ಈ ಮಾದರಿಯ ಸಂಪ್ರದಾಯಸ್ತ ಓಲ್ಡ್ ಮಾಡೆಲ್ ಮಂದಿ ನಾವು. ಹೀಗಿದ್ದಾಗ ಈ ಅಮೇರಿಕನ್ ಮೇಡಂ, 'ಬನ್ನಿ. ಎಣ್ಣೆ ಹಾಕೋಣ. ಮೊದಲಿನ ರೌಂಡ್ ನಾನೇ ಹಾಕಿಸುತ್ತೇನೆ,' ಅನ್ನುತ್ತಿದ್ದಾರೆ. ಹೋಗದಿದ್ದರೆ ಸರಿಯಾಗುವದಿಲ್ಲ. ಇದ್ದವರೇ ನಾವು ಒಂದು ಹತ್ತು ಹನ್ನೆರೆಡು ಜನ. ಮೇಡಂ ಅದೆಷ್ಟು ಪ್ರೀತಿಯಿಂದ, ಆತ್ಮೀಯತೆಯಿಂದ ಈಗಷ್ಟೇ ಗುರುತು ಪರಿಚಯ ಮಾಡಿಕೊಂಡಿದ್ದಾರೆ. ಅದಕ್ಕಾದರೂ ಹೋಗಲೇಬೇಕು. ಹೋದ ನಂತರ ಎಣ್ಣೆ ಹಾಕುವದೋ ಬಿಡುವದೋ ಅದು ಬೇರೆ ವಿಷಯ. ಮುಖವಾದರೂ ತೋರಿಸಿ ಬರಲಿಕ್ಕೇಬೇಕು ಅಂತ ಅಂದುಕೊಂಡೆ. ಸರಿ ಅಂತ ಕೆಳಗೆ ಬಂದು ಕಾರು ತೆಗೆದು ಅಲ್ಲೇ ಒಂದು ಮೈಲಿ ದೂರವಿದ್ದ ಪಬ್ ತಲುಪಿಕೊಂಡೆ.

ಒಳಗೆ ಹೋಗಿ ನೋಡಿದರೆ ಆಗಲೇ ಎಲ್ಲರೂ ಬಾರ್ ಕೌಂಟರ್ ಮುಂದೆ ಸೆಟಲ್ ಆಗಿಬಿಟ್ಟಿದ್ದರು. ಕೆಲವರ ಡ್ರಿಂಕುಗಳು ಬಂದಿದ್ದವು. ಉಳಿದವರಿಗೆ ಏನು ಬೇಕು ಅಂತ ಕೇಳಿ ಕೇಳಿ ಜೇನ್ ಮಾರ್ಟನ್ ಮೇಡಂ ಕೊಡಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಎಣ್ಣೆ  ಹಾಕಿಸುವದೆಂದರೆ ಭಯಂಕರ ಉತ್ಸಾಹ ಅವರಿಗೆ. ನಡುನಡುವೆ ತಮ್ಮ ರಂಗುರಂಗಾದ ಡ್ರಿಂಕ್ ಎತ್ತಿಕೊಂಡು ಹೀರುತ್ತಿದ್ದರು. ಏಕ್ದಂ ದಿಲ್ದಾರ್ ಮೇಡಂ. 'Work hard. Play harder,' ಮಾದರಿಯ ಮಹಿಳೆ.

ಮೇಡಂ ಆಹ್ವಾನ ಕೊಟ್ಟರು ಅಂತ ಪಬ್ಬಿಗೆ ಬಂದಾಗಿಬಿಟ್ಟಿದೆ. ಮುಂದೆ? ಮೇಡಂ ಬೇರೆ ಎಲ್ಲರ ಹತ್ತಿರ ಕೇಳಿ ಕೇಳಿ ಮೊದಲ ರೌಂಡಿನ ಡ್ರಿಂಕುಗಳನ್ನು ಆರ್ಡರ್ ಮಾಡುತ್ತಿದ್ದಾರೆ. ಏನು ಡ್ರಿಂಕ್ ಬೇಕು ಅಂತ ಹೇಳಲೂ ಸರಿಯಾಗಿ ನಮಗೆ ಗೊತ್ತಿಲ್ಲ. ಏಕೆಂದರೆ ನಮಗೆ ಬಿಯರ್ ಬಿಟ್ಟರೆ ಏನೂ ಕುಡಿದು ಗೊತ್ತಿಲ್ಲ. ಅದೂ ಸಂಬಳ ಬಂದ ಆಸುಪಾಸಿನ ವಾರಾಂತ್ಯದಲ್ಲಿ ಒಂದು ಒಳ್ಳೆ ಊಟದ ಜೊತೆ ಒಂದೆರೆಡು ಬಿಯರ್ ಹೊಡೆದರೆ ಅದೇ ದೊಡ್ಡ ಮಾತು. ಅದೂ ಮನೆಯಲ್ಲಿ. ಯಾಕೆಂದರೆ ಕುಡಿದ ನಂತರ ನಾವು ಸಾಮಾನ್ಯವಾಗಿ ಗಾಡಿ ಹೊಡೆಯುವದಿಲ್ಲ. ಒಂದೇ ಬಿಯರ್ ಇರಲಿ ಎಷ್ಟೇ ಇರಲಿ. ಪೋಲೀಸ್ ಮಾಮಾ ತಡೆದು ನಿಲ್ಲಿಸಿದರೆ ಯಾವನಿಗೆ ಬೇಕು ಅಮೇರಿಕನ್ ಪೋಲೀಸರ ಜೊತೆ ಝಟಾಪಟಿ, ಫಜೀತಿ? ನಂತರ ಎಣ್ಣೆ ಲೆವೆಲ್ ಜಾಸ್ತಿಯಾಗಿದೆ ಅಂತ ಲೈಸೆನ್ಸ್ ರದ್ದು ಮಾಡಿ ಒದ್ದು ಓಡಿಸಿದರೆ ಮನೆಯಲ್ಲೇ ಕೂಡಬೇಕು. ಓಡಾಡಲು ಕಾರಿಲ್ಲ, ಕಾರಿದ್ದರೂ ಲೈಸೆನ್ಸ್ ಇಲ್ಲ ಅಂದರೆ ಇಲ್ಲಿ ಅಮೇರಿಕಾದಲ್ಲಿ ಕಾಲೇ ಇಲ್ಲ. ಹೀಗೆ ಅನೇಕ ರೀತಿಯ ಚಿಂತೆ, tension ನಮಗೆ. ಹಾಗಾಗಿ ಅಂದು ಏನು ಹೇಳಿದೆ, ಯಾವ ಡ್ರಿಂಕ್ ತರಿಸಲು ಮೇಡಂ ಹತ್ತಿರ ಕೇಳಿದೆ, ಏನು ಕುಡಿದೆ ಅಂತ ಮರೆತೇಹೋಗಿದೆ. ಹೆಚ್ಚಾಗಿ non-alcoholic ಬಿಯರ್, ಅಥವಾ ಫ್ರೂಟ್ ಕಾಕ್ಟೇಲ್, ಸಾಫ್ಟ್ ಡ್ರಿಂಕ್ ಏನಾದರೂ ಕುಡಿದು ಎದ್ದುಬಂದಿರಬೇಕು ಬಿಡಿ. ಬಾಕಿ ಮಂದಿಯೆಲ್ಲ ನಮ್ಮನ್ನು ಒಂದು ವಿಚಿತ್ರ ರೀತಿಯಲ್ಲಿ ನೋಡಿರಬಹುದು. ಅದು ಮೊದಲನೇ ಕ್ಲಾಸ್. ಯಾರದ್ದೂ ಸರಿಯಾಗಿ ಪರಿಚಯವಾಗಿರಲೇ ಇಲ್ಲ. ಸರಿ, ಮೇಡಂ ಅವರಿಗೆ ನಾನು ಏನೋ ಹೇಳಿ, ಅವರು ಅದನ್ನು ಬಾರ್ ಟೆಂಡರ್ ಮನುಷ್ಯನಿಗೆ ಹೇಳಿ, ಅವನು ಆ ಡ್ರಿಂಕ್ ಕೊಟ್ಟು, ಏನೋ ಒಂದು ಡ್ರಿಂಕ್ ಕುಡಿದ ಶಾಸ್ತ್ರ ಮಾಡಿದ್ದಾಯಿತು.

ತಮ್ಮ ಮೊದಲ ಡ್ರಿಂಕ್ ಮುಗಿಸಿದ ಮೇಡಂ ಎದ್ದರು. ಎಲ್ಲರಿಗೂ ಶುಭರಾತ್ರಿ ಹೇಳಿ ಕಳಚಿಕೊಂಡರು. ನಾನೂ ಎದ್ದು ಬಂದೆ. ಇಪ್ಪತ್ತೈದು ಮೈಲಿ ಡ್ರೈವ್ ಮಾಡಿಕೊಂಡು ಬಂದು ಮನೆ ಸೇರಿಕೊಂಡೆ. ಆವತ್ತು ಮಾತ್ರ ಜೇನ್ ಮಾರ್ಟನ್ ಮೇಡಂ ಫುಲ್ ಆವರಿಸಿಕೊಂಡುಬಿಟ್ಟಿದ್ದರು. ಅದೆಷ್ಟೋ ಮಂದಿ ಒಳ್ಳೆಯ, ಒಳ್ಳೆಯ ಮನಸ್ಸಿನ, ತುಂಬಾ ಪ್ರೀತಿ, ಆತ್ಮೀಯತೆ ತೋರಿಸಿದ್ದ ಮಾಸ್ತರರು ಮಾಸ್ತರಣಿಯರು ನಮ್ಮ ಜೀವನದಲ್ಲಿ ಬಂದು ಹೋಗಿದ್ದರು. ಆದರೆ ಅವರೆಲ್ಲರ ತೂಕವೇ ಒಂದು ಕಡೆಯಾದರೆ ಮೊದಲ ಕ್ಲಾಸಿನಲ್ಲೇ ಆ ಪರಿ ಇಂಪ್ರೆಸ್ ಮಾಡಿದ್ದ ಜೇನ್ ಮಾರ್ಟನ್ ಮೇಡಂ ತೂಕವೇ ಒಂದು ಕಡೆ. ಎಲ್ಲ ರೀತಿಯಲ್ಲೂ ತೂಕದ ಮಹಿಳೆ ನಮ್ಮ ಅಕೌಂಟೆನ್ಸಿ ಮೇಡಂ.

ಮುಂದೆ ಕ್ಲಾಸುಗಳು ನಡೆದವು. ಪ್ರತಿ ಕ್ಲಾಸಿನ ನಂತರವೂ, 'ಪಬ್ಬಿಗೆ ಬನ್ನಿ. ಹೋಗಿ ಒಂದು ರೌಂಡ್ ಡ್ರಿಂಕ್ ಹಾಕೋಣ,' ಅಂತ ಮೇಡಂ ಕರೆಯುತ್ತಿದ್ದರು. 'ಮೊದಲ ರೌಂಡ್ ನನ್ನ ಲೆಕ್ಕದಲ್ಲಿ,' ಅನ್ನುವ 'ಎಣ್ಣೆ ಭಾಗ್ಯ' ಯೋಜನೆ ಮಾತ್ರ ಮೊದಲಿನ ದಿನದ ಕ್ಲಾಸಿಗೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ ಅವರು ಕರೆದರೂ ಎಲ್ಲರೂ ಹೋಗುತ್ತಿರಲಿಲ್ಲ. ಮತ್ತೆ ರಾತ್ರಿ ಕ್ಲಾಸ್ ಮುಗಿಯುವ ಹೊತ್ತಿಗೆ ಒಂಬತ್ತರ ಮೇಲಾಗಿ ಹೋಗಿರುತ್ತಿತ್ತು. ಹಾಗಾಗಿ ಎಲ್ಲರಿಗೂ ಗೂಡು ಸೇರಿ, ಊಟ ಮಾಡಿ, ತಾಚಿ ತಾಚಿ ಅಂತ ನಿದ್ದೆ ಮಾಡಬೇಕು. ಜೇನ್ ಮಾರ್ಟನ್ ಮೇಡಂ ಮಾತ್ರ ಪಾಂಗಿತವಾಗಿ ಒಂದು ರೌಂಡ್ ಡ್ರಿಂಕ್ ಹಾಕಿಯೇ ಮನೆ ಕಡೆ ಹೋಗುತ್ತಿದ್ದರು. ಏಕ್ದಂ Happy go lucky ಮಾದರಿಯ ಬಿಂದಾಸ್ ಮೇಡಂ ಅವರು.

ಸಕತ್ತಾಗಿ ಅಕೌಂಟೆನ್ಸಿ ಪಾಠ ಮಾಡಿದರು. ಅವರು ಅದೆಷ್ಟು ವರ್ಷಗಳಿಂದ ಅದೆಷ್ಟು ವಿದ್ಯಾರ್ಥಿಗಳಿಗೆ ಅದನ್ನೇ ಪಾಠ ಮಾಡಿದ್ದರೋ. ಅವರಿಗೆ ಅಕೌಂಟೆನ್ಸಿ ವಿಷಯವನ್ನು effective ಆಗಿ ಪಾಠ ಮಾಡುವ ಬರೋಬ್ಬರಿ ಟೆಕ್ನಿಕ್ ಗೊತ್ತಿತ್ತು. ವಿದ್ಯಾರ್ಥಿಗಳಿಗೆ ಎಲ್ಲೆಲ್ಲಿ ಗೊಂದಲವಾಗುತ್ತದೆ, ಏನೇನು ಸಮಸ್ಯೆಗಳು ಬರುತ್ತವೆ, ಏನೇನು ಡೌಟ್ಸ್ ಬರುತ್ತವೆ ಅಂತ ಎಲ್ಲ ಬರೋಬ್ಬರಿ ಗೊತ್ತಿತ್ತು. ನಾವು ಡೌಟ್ ಕೇಳುವ ಮೊದಲೇ ಅವರಿಗೆ ಅದನ್ನು ಆಗಲೇ ಗ್ರಹಿಸಿ, ಬಗೆಹರಿಸಿಬಿಟ್ಟಾಗಿರುತ್ತಿತ್ತು. ಅಷ್ಟು ನುರಿತ ಅಧ್ಯಾಪಕಿ ಅವರು. ಹಾಗಾಗಿ ನಮಗೆ ಎರಡನೇ ಪ್ರಯತ್ನದಲ್ಲಿ ಅಕೌಂಟೆನ್ಸಿ ಬರೋಬ್ಬರಿ ಅರ್ಥವಾಗಿ, ಫೌಂಡೇಶನ್ ಕರೆಕ್ಟಾಗಿ ಬಿತ್ತು. ಈಗ ಹದಿನೈದು ವರ್ಷಗಳ ನಂತರ ಸ್ವಲ್ಪ ಮರೆತಿರಬಹದು. ಆದರೆ ಜತನವಾಗಿ ಕಾದಿಟ್ಟುಕೊಂಡಿರುವ ಮೇಡಂ ಅಂದು ಕೊಟ್ಟಿದ್ದ ನೋಟ್ಸ್ ರೆಫರ್ ಮಾಡಿಕೊಂಡರೆ ಎಲ್ಲ ರಿಫ್ರೆಶ್ ಆಗಿಬಿಡುತ್ತದೆ. ಅಷ್ಟು ಮಸ್ತಾಗಿ ಪಾಠ ಮಾಡಿದ್ದರು. ಮುಂದೆ ಎಂದಾದರೂ MBA ಕಾಲೇಜಿನಲ್ಲಿ ಮಾಸ್ತರಿಕೆ ಅಂತ ಉದ್ಯೋಗ ಮಾಡಿದರೆ ಉಪಯೋಗಕ್ಕೆ ಬರಬಹುದಾದ ಜೇನ್ ಮಾರ್ಟನ್ ಮೇಡಂ ಮತ್ತು ಇತರೆ ಮಾಸ್ತರುಗಳು ಕೊಟ್ಟ ನೋಟ್ಸ್ ನನ್ನ ಹತ್ತಿರ ಇನ್ನೂ ಇವೆ.

ಆಗ ಮಾಡಿಕೊಂಡಿದ್ದ ನೋಟ್ಸ್ . ಇನ್ನೂ ಇವೆ.
ಪ್ರತಿ ವಾರ ಹೋಂವರ್ಕ್ ಅಂತ ನಾಲ್ಕಾರು ಲೆಕ್ಕ ಕೊಡುತ್ತಿದ್ದರು. ತಾವೇ ಮುತುವರ್ಜಿ ವಹಿಸಿ ತಿದ್ದಿ ವಾಪಸ್ ತಂದುಕೊಡುತ್ತಿದ್ದರು. ಎಷ್ಟೋ ಜನ ಮಾಸ್ತರ್ ಮಂದಿ ಹೋಂ ವರ್ಕ್ ಚೆಕ್ ಮಾಡುವ ಕೆಲಸಗಳನ್ನು ತಮ್ಮ ಟೀಚಿಂಗ್ ಅಸಿಸ್ಟೆಂಟ್ ಜನರಿಗೆ ಕೊಟ್ಟುಬಿಡುತ್ತಾರೆ. ಜೇನ್ ಮಾರ್ಟನ್ ಮೇಡಂ ಮಾತ್ರ ತಾವೇ ಖುದ್ದಾಗಿ ಚೆಕ್ ಮಾಡಿ ತಂದುಕೊಡುತ್ತಿದ್ದರು. ವಯಕ್ತಿಕವಾಗಿ feedback ಸಹ ಕೊಡುತ್ತಿದ್ದರು. ತಪ್ಪಿದ್ದನ್ನು ಬರೋಬ್ಬರಿ ತಿದ್ದಿ, ತಿಳಿಸಿ ಹೇಳುತ್ತಿದ್ದರು. ಆ ಮಟ್ಟದಲ್ಲಿ ವಯಕ್ತಿಕವಾಗಿ ಕಾಳಜಿ ವಹಿಸಿ ಪಾಠ ಮಾಡಿದ ಶಿಕ್ಷಕ ಶಿಕ್ಷಕಿಯರು ಭಾಳ ಕಮ್ಮಿ.

ಮಿಡ್ ಟರ್ಮ್ ಪರೀಕ್ಷೆಯ ಉತ್ತರ ಪತ್ರಿಕೆ.

ಒಂದು ಕಾಲದಲ್ಲಿ ತಲೆಗೇ ಹತ್ತದಿದ್ದ ಅಕೌಂಟೆನ್ಸಿ ವಿಷಯದಲ್ಲಿ ಬರೋಬ್ಬರಿ ಫೌಂಡೇಶನ್ ಬಿದ್ದಿದ್ದೇ ಬಿದ್ದಿದ್ದು ಅದರಲ್ಲೇ ಕಳೆದುಹೋದೆ. ಅಷ್ಟು ಹಿಡಿಸಿಬಿಟ್ಟಿತ್ತು ಆ ವಿಷಯ. ನಂತರ ಪಬ್ಲಿಕ್ ಕಂಪನಿಗಳ ಫೈನಾನ್ಸಿಯಲ್ ಸ್ಟೇಟ್ಮೆಂಟ್ ತೆಗೆತೆಗೆದು ವಿಶ್ಲೇಷಣೆ ಮಾಡಿದ್ದೇ ಮಾಡಿದ್ದು. ಅಕೌಂಟೆನ್ಸಿ ಎಷ್ಟು ಹಿಡಿಸಿಬಿಟ್ಟಿತ್ತು ಅಂದರೆ MBA ನಲ್ಲಿ specialization ಅಕೌಂಟೆನ್ಸಿ ವಿಷಯದಲ್ಲೇ ಮಾಡಿಬಿಡಲೇ ಅನ್ನಿಸಿತ್ತು. ಆದರೆ ಫೈನಾನ್ಸ್ ವಿಷಯ ಅಕೌಂಟೆನ್ಸಿ ವಿಷಯಕ್ಕಿಂತ ಮತ್ತೂ ಜಾಸ್ತಿ ಹಿಡಿಸಿತ್ತು. ಅಕೌಂಟೆನ್ಸಿ ಒಂದು ತರದ pure ವಿಷಯವಾದರೆ ಫೈನಾನ್ಸ್ applied ವಿಷಯ. ಫೈನಾನ್ಸ್ ಓದಬೇಕು ಅಂದರೆ ಅಕೌಂಟೆನ್ಸಿ ಬರೋಬ್ಬರಿ ಬರಬೇಕು. IT ಅಥವಾ Marketing ನಲ್ಲಿ specialization ಮಾಡಲು ಕೆಲವರು ಸಲಹೆ ಕೊಟ್ಟರೂ ನಂತರ ಮಾಡಿದ್ದು ಫೈನಾನ್ಸ್ ನಲ್ಲೇ. ಅದರಲ್ಲೂ investment finance, portfolio management, modern portfolio theory, capital management, corporate finance ಎಲ್ಲ ತುಂಬಾ ಆಸಕ್ತಿದಾಯಕವಾಗಿದ್ದವು. ಅವುಗಳನ್ನೆಲ್ಲ ಸರಿಯಾಗಿ ತಿಳಿಯಲು, ಎಲ್ಲದರಲ್ಲೂ ಟಾಪ್ ಮಾರ್ಕ್ಸ್ ಗಳಿಸಲು ಮುಖ್ಯವಾಗಿದ್ದ ಅಕೌಂಟೆನ್ಸಿ ವಿಷಯಕ್ಕೆ ಬರೋಬ್ಬರಿ ಬೇಸ್ ಹಾಕಿದವರು ಮಾತ್ರ ನಮ್ಮ 'ಎಣ್ಣೆ ಮೇಡಂ' ಅವರೇ. ಅವರಿಗೊಂದು ದೊಡ್ಡ ಸಲಾಮ್! ಫೈನಾನ್ಸ್ ವಿಷಯಕ್ಕೆ ಅದೇ ರೀತಿ ಬರೋಬ್ಬರಿ ಬೇಸ್ ಹಾಕಿದ್ದವರು ಪ್ರೊಫೆಸರ್ ಟಾಮ್ ಓಹಾರಾ ಸರ್ ಅವರು. ಅವರಿಗೂ ದೊಡ್ಡ ನಮಸ್ಕಾರ. ಅವರಿಗೆ ಈಗ ಸುಮಾರು ತೊಂಬತ್ತು ವರ್ಷವಿರಬೇಕು. ಹೇಗಿದ್ದಾರೋ ಏನೋ!?

ಸೆಪ್ಟೆಂಬರ್ ತಿಂಗಳಲ್ಲಿ ಶುರುವಾಗಿದ್ದ ಅಕೌಂಟೆನ್ಸಿ ಕೋರ್ಸ್ ಡಿಸೆಂಬರ್ ಎರಡನೇ ವಾರದ ಹೊತ್ತಿಗೆ ಮುಗಿಯಿತು. ಫೈನಲ್ ಪ್ರಾಜೆಕ್ಟ್ ಅಂತ ಎರಡು ಪ್ರತಿಸ್ಪರ್ಧಿ ಪಬ್ಲಿಕ್ ಕಂಪನಿಗಳ ಫೈನಾನ್ಸಿಯಲ್ ಸ್ಟೇಟ್ಮೆಂಟ್ ವಿಶ್ಲೇಷಣೆ ಮಾಡಿ ಒಂದು ರಿಪೋರ್ಟ್ ತಯಾರು ಮಾಡಬೇಕಿತ್ತು. ನಾನು ನಮ್ಮ ಕಂಪನಿ (Brooks Automation) ಮತ್ತು ಅಂದು ನಮ್ಮ ಪ್ರತಿಸ್ಪರ್ಧಿಯಾಗಿದ್ದ PRI Automation ಅನ್ನುವ ಮತ್ತೊಂದು ಕಂಪನಿಯನ್ನು ಅಭ್ಯಾಸ ಮಾಡಿ, ಅವುಗಳ ಹಣಕಾಸಿನ ಸ್ಥಿತಿಗತಿಗಳನ್ನು ವಿಶ್ಲೇಷಿಸಿ, ಒಂದು ರಿಪೋರ್ಟ್ ರೆಡಿ ಮಾಡಿದ್ದೆ. ದೊಡ್ಡ ಮಟ್ಟದ ಫುಲ್ ಫೈನಾನ್ಸಿಯಲ್ ಅನಾಲಿಸಿಸ್ ಮಾಡಿದ್ದೆ. ಮೇಡಂ expect ಮಾಡಿದ್ದರಕಿಂತ ನಾಲ್ಕು ಪಟ್ಟು ಹೆಚ್ಚಿನ ಮಾಹಿತಿ, ಹೆಚ್ಚಿನ ಶ್ರಮ ಎಲ್ಲ ಇತ್ತು ಅದರಲ್ಲಿ. ಎರ್ರಾಬಿರ್ರಿ ಖುಷಿಯಾಗಿಬಿಟ್ಟ ಮೇಡಂ A+ ಗ್ರೇಡ್ ಕೊಟ್ಟಿದ್ದೊಂದೇ ಅಲ್ಲ ಸಿಕ್ಕಾಪಟ್ಟೆ ಹೊಗಳಿಬಿಟ್ಟಿದ್ದರು. ಅದು ಅವರ ದೊಡ್ಡ ಗುಣ ಬಿಡಿ. ಆದರೆ ಮೇಡಂ ಒಂದು ಮಾತು ಹೇಳಿ, ಆಖ್ರೀ ಬಾರಿಗೆ ಬೆನ್ನು ತಟ್ಟಿ, ತಮ್ಮ ಕಾರ್ ಹತ್ತಿ ಮರೆಯಾಗಿದ್ದರು. ಅವರು ಅಂದ ಕೊನೆಯ ಮಾತಿನ ಬಗ್ಗೆ ಅಂದು ಜಾಸ್ತಿಯೇನೂ ಲಕ್ಷ, ಮಹತ್ವ ಕೊಟ್ಟಿರಲಿಲ್ಲ. ಆದರೆ ಒಂದೆರೆಡು ವಾರಗಳ ನಂತರ ಬಂದ ಸುದ್ದಿ ಬೆಚ್ಚಿಬೀಳಿಸಿತ್ತು. ಮೇಡಂ ಅವರ ಭವಿಷ್ಯವಾಣಿ ಸತ್ಯವಾಗಿತ್ತು.

financial analysis ಪ್ರಾಜೆಕ್ಟ್ ರಿಪೋರ್ಟ್

'ನೀನು ತಯಾರು ಮಾಡಿದ financial analysis ರಿಪೋರ್ಟ್ ತುಂಬಾ ಚೆನ್ನಾಗಿದೆ. ನನಗೆ ಅನ್ನಿಸಿದ್ದು, ನಿಮ್ಮ ಕಂಪನಿ ಆ ಮತ್ತೊಂದು ಕಂಪನಿಯನ್ನು ಖರೀದಿ ಮಾಡಿಬಿಡಬೇಕು. ಕಡಿಮೆ ಬೆಲೆಯಲ್ಲಿ ಸಿಕ್ಕರೂ ಸಿಕ್ಕೀತು!' ಅಂತ ಹೇಳಿ ಕಣ್ಣು ಮಿಟುಕಿಸಿದ್ದರು ಮೇಡಂ. ಹಾಗೇ ಆಗಿಬಿಡಬೇಕೇ?! Brooks Automation ಅನ್ನುವ ನಮ್ಮ ಕಂಪನಿ PRI Automation ಪ್ರತಿಸ್ಪರ್ಧಿ ಕಂಪನಿಯನ್ನು ಖರೀದಿ ಮಾಡಿತು. ಮೇಡಂ ಅವರಿಗೆ ಆ ವಿಷಯ ಗೊತ್ತಿತ್ತು ಅಂತಲ್ಲ. ಸುಮ್ಮನೇ ಮಾತಿಗೆ ಹೇಳಿದ್ದರು. ಅವರ ನುರಿತ ಅಕೌಂಟೆಂಟ್ ಕಣ್ಣಿಗೆ ನನ್ನ ವರದಿಯಲ್ಲಿದ್ದ ಅಂಕಿಅಂಶಗಳು ಹಾಗೆ ಕಂಡುಬಂದಿದ್ದವೋ ಏನೋ. ಆದರೆ ಅಂದು ಅವರಾಡಿದ್ದ ಮಾತು ಮಾತ್ರ ನಿಜವಾಗಿಹೋಗಿತ್ತು.

ಸೆಮಿಸ್ಟರ್ ಮುಗಿದ ಮೇಲೆ A ಗ್ರೇಡ್ ಬಂದಿದ್ದರಲ್ಲಿ ಆಶ್ಚರ್ಯವೇನೂ ಇರಲ್ಲಿಲ್ಲ. ಅದಕ್ಕಿಂತ ಮುಖ್ಯವಾಗಿ ಒಂದು ಕಾಲದಲ್ಲಿ ಅರ್ಥವಾಗಲು ಸಾಧ್ಯವೇ ಇಲ್ಲ ಅಂತ ಅನ್ನಿಸಿದ್ದ ಅಕೌಂಟೆನ್ಸಿ ಮೇಲೆ ಒಳ್ಳೆ ಹಿಡಿತ ಬಂದಿತ್ತು. ಅಕೌಂಟೆನ್ಸಿ ಒಂದೇ ಅಲ್ಲ ಎಲ್ಲ ಫೈನಾನ್ಸ್ ವಿಷಯಗಳಲ್ಲೂ A ಗ್ರೇಡೇ. ಆಸಕ್ತಿ ಅಷ್ಟಿತ್ತು. ಅಷ್ಟು ಆಸಕ್ತಿಯಿಂದ, ಒಂದು ವಿಷಯದ ಮೇಲಿರುವ ನಿಜವಾದ ಇಂಟರೆಸ್ಟ್ ನಿಂದ ಅಧ್ಯಯನ ಮಾಡಿದ್ದು MBA ಅಕೌಂಟಿಂಗ್ ಮತ್ತು ಫೈನಾನ್ಸ್ ವಿಷಯಗಳನ್ನೇ ಇರಬೇಕು. ಬೇರೆಲ್ಲ ಏನೇ ಇಂಜಿನಿಯರಿಂಗ್ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿಕೊಂಡಿದ್ದರೂ ಅವೆಲ್ಲ ಗುಂಪಿನಲ್ಲಿ ಗೋವಿಂದನಂತೆ ಓದಿ, ಎಮ್ಮೆ ಮುಳುಗಿ ಎದ್ದು ಬಂದಂತೆ ಎದ್ದು ಬಂದಿದ್ದೇ ಜಾಸ್ತಿ.

ಈ ವರ್ಷದ ಶಿಕ್ಷಕ ದಿನಾಚರಣೆಯಂದು ಡಾ. ಜೇನ್ ಮಾರ್ಟನ್ ಮೇಡಂ ಬಗ್ಗೆ ಬರೆಯಬೇಕು ಅಂದುಕೊಂಡಾಗ ಇದೆಲ್ಲ ನೆನಪಾಯಿತು. ನಿಜ ಹೇಳಬೇಕು ಅಂದರೆ ನನಗೆ ಅವರ surname ಮಾರ್ಟನ್ ಅಂತ ಮರೆತೇಹೋಗಿತ್ತು. ಜೇನ್ ಅಂತ ಹೆಸರು ನೆನಪಿತ್ತು. ಗೂಗಲ್ ಇದ್ದಾಗ ಚಿಂತೆಯಾಕೆ? Jane accounting Suffolk - ಅಂತ ಸರ್ಚ್ ಕೊಟ್ಟೆ ನೋಡಿ. ಜೇನ್ ಮಾರ್ಟನ್ ಮೇಡಂ ಕಂಡೇಬಿಟ್ಟರು. ಈಗ ಅವರು ನಮ್ಮ Suffolk University ಯಲ್ಲಿ ಇಲ್ಲವಂತೆ. ಕಳೆದ ಹದಿನೈದು ವರ್ಷದಲ್ಲಿ ನಾಲ್ಕಾರು ಕಡೆ ನೌಕರಿ ಮಾಡಿ ತಮ್ಮ ಮೂಲ ರಾಜ್ಯವಾದ ಕೊಲೊರಾಡೊ ರಾಜ್ಯದ ಡೆನ್ವರ್ ಯೂನಿವರ್ಸಿಟಿ ಸೇರಿಕೊಂಡಿದ್ದಾರಂತೆ.

ನಮ್ಮ ಪ್ರೀತಿಯ ಜೇನ್ ಮಾರ್ಟನ್ ಮೇಡಂ ಎಲ್ಲೇ ಇರಲಿ ಫುಲ್ ಆರಾಮ್ ಇರಲಿ. ಅವರಿಗೆ ಎಲ್ಲ ಸುಖ, ಸಂತೋಷ, ನೆಮ್ಮದಿ ಸಿಗಲಿ. ಅವರು ಮತ್ತೂ ಸಾವಿರ ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಬರೋಬ್ಬರಿ ಅಕೌಂಟೆನ್ಸಿ ಪಾಠ ಮಾಡಲಿ. ಎಲ್ಲರಿಗೂ ಬರೋಬ್ಬರಿ ಎಣ್ಣೆ ಹೊಡಿಸಲಿ. ಹೊತ್ತೊತ್ತಿಗೆ ಎಣ್ಣೆ ಇಲ್ಲದಿದ್ದರೆ ಲೆಕ್ಕ ಮಾಡಿ ಮಾಡಿ ತಲೆಯ ಇಂಜಿನ್ ಸೀಜ್ ಆಗಿಬಿಡುತ್ತದೆ. ಅದು ಗೊತ್ತಿದ್ದೇ ಜೇನ್ ಮಾರ್ಟನ್ ಮೇಡಂ ಪ್ರಥಮ ಕ್ಲಾಸಿನ ನಂತರ ವಿದ್ಯಾರ್ಥಿಗಳ ತಲೆ ಗರಂ ಆಗಿರುತ್ತದೆ ಮತ್ತು ತಮ್ಮ ತಲೆಯೂ ಹಾಟ್ ಆಗಿರುತ್ತದೆ ಅಂತ ಎಣ್ಣೆ ಹೊಡೆಸುತ್ತಿದ್ದರೋ ಏನೋ.

ಮುಂದಿನ ವರ್ಷದ ಶಿಕ್ಷಕ ದಿನಾಚರಣೆಗೆ ಮತ್ತೊಬ್ಬ ಖತರ್ನಾಕ್ ಶಿಕ್ಷಕರು ಮತ್ತು ಅವರ ಬಗ್ಗೆ ದಿಲ್ದಾರ್ ನೆನಪುಗಳು ಬಂದರೆ ಮತ್ತೆ ಬರೆಯೋಣ.

ಎಲ್ಲ ಶಿಕ್ಷಕ ಶಿಕ್ಷಕಿಯರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು. ನೀವು ಕಲಿಸಿದ ವಿದ್ಯೆ, ತಿನ್ನಿಸಿದ ಉಪ್ಪಿಟ್ಟು, ಕುಡಿಸಿದ ಚಹಾ, ಹಾಕಿಸಿದ ಎಣ್ಣೆ ಎಲ್ಲವಕ್ಕೂ ಅನಂತ ಕೃತಜ್ಞತೆಗಳು. ತಮ್ಮೆಲ್ಲರ ಆಶೀರ್ವಾದ, ಶುಭ ಹಾರೈಕೆಗಳು ಸದಾ ಇರಲಿ.

* ಮೇಲೆ ಹಾಕಿದ ಡಾ. ಜೇನ್ ಮಾರ್ಟನ್ ಅವರ ಭಾವಚಿತ್ರವನ್ನು ಡೆನ್ವರ್ ಯೂನಿವರ್ಸಿಟಿಯ ವೆಬ್ ಪೇಜಿನಿಂದ ಎತ್ತಿದ್ದು. ಎಲ್ಲ ಕಾಪಿ ರೈಟ್ಸ್ ಅವರವು.

4 comments:

sunaath said...

ಜೇನ್ ಮಾರ್ಟನ್ ತರಹ ಎಣ್ಣೆ ಕುಡಿಸುವ ಗುರುಗಳು ಇರುವುದನ್ನು ಓದಿ ಆಶ್ಚರ್ಯ ಹಾಗು ಸಂತೋಷ ಆದವು. ನೀವೂ ಸಹ ಅವರ ಪದ್ಧತಿಯನ್ನೇ ಅನುಸರಿಸಿಕೊಂಡು ಹೋಗಿ, ವಿದ್ಯಾರ್ಥಿಗಳಿಗೆ xxx ಇತ್ಯಾದಿ ದಾನ ಮಾಡುವುದು ಆರೋಗ್ಯಕರವಾದ ರೂಢಿಯಾಗಿದೆ!

Mahesh Hegade said...

ಥ್ಯಾಂಕ್ಸ್ ಸುನಾಥ್ ಸರ್! ಮುಂದೊಮ್ಮೆ ಮಾಸ್ತರಿಕೆ ಮಾಡುವ ಅದೃಷ ಒಲಿದು ಬಂದರೆ ವಿದ್ಯಾರ್ಥಿಗಳಿಗೆ ಎಣ್ಣೆ ಹಾಕಿಸುತ್ತೇನೆ. ಜೇನ್ ಮಾರ್ಟನ್ ಮೇಡಂ ಒಂದೇ ರೌಂಡ್ ಹಾಕಿಸುತ್ತಿದ್ದರೆ ನಾವು ಎರಡು ರೌಂಡ್ ಹಾಕಿಸೋಣ. ಒಂದು ನಮ್ಮ ಹೆಸರಲ್ಲಿ. ಮತ್ತೊಂದು ತಮ್ಮನ್ನು ನೆನೆದು. :)

ವಿ.ರಾ.ಹೆ. said...

ಇದನ್ನ ಓದಿ ನಂಗೂ ಅಕೌಂಟೆನ್ಸಿ ಬಗ್ಗೆ ಸ್ವಲ್ಪ ಗೊತ್ತಾತು. ಈಗ ಮಹೇಶ್ ಗುರುಗಳು, ಜೇನ್ ಮಾರ್ಟನ್ ಗುರುಗಳು ಇಬ್ಬರಿಗೂ ಧನ್ಯವಾದಗಳು. :) ಈಸಲ ಬಂದಾಗ ಮೊದಲ ರೌಂಡ್ ಇಂದ ಕೊನೇ ರೌಂಡ್ ವರಿಗೂ ಎಣ್ಣೆ ಹಾಕ್ಸಿಕ್ ಹೋಗು :)

Mahesh Hegade said...

Thanks Vikas. ಎಣ್ಣೆ? sure! :)