Friday, October 09, 2015

ಭೋಗದಿಂದ ಯೋಗದವರೆಗೆ - ಬಾಬ್ ಕ್ರಿಸ್ಟೋ ಜೀವನಕಥನ

ಬಾಬ್ ಕ್ರಿಸ್ಟೋ

ಬಾಬ್ ಕ್ರಿಸ್ಟೋ - ಬಹಳ ಜನ ಈ ಹೆಸರು ಕೇಳಿರಲಿಕ್ಕಿಲ್ಲ. ಆದರೆ ಎಂಬತ್ತು, ತೊಂಬತ್ತರ ದಶಕಗಳಲ್ಲಿ ಬಾಲಿವುಡ್ ಸಿನೆಮಾಗಳನ್ನು ನೋಡಿದವರೆಲ್ಲ ಈತನನ್ನು ನೋಡಿಯೇ ಇರುತ್ತಾರೆ. ಆ ಕಾಲದಲ್ಲಿ ಸುಮಾರು ಎಲ್ಲ ಸಿನೆಮಾಗಳಲ್ಲಿ ಇರುತ್ತಿದ್ದ ನಟ ಬಾಬ್ ಕ್ರಿಸ್ಟೋ. ಖಳನಾಯಕನ ಸಹಾಯಕನ ಪಾತ್ರದಲ್ಲಿ ನಟಿಸಿದ್ದು ಜಾಸ್ತಿ. ಯಾವದಾದರೂ ಸಿನೆಮಾದಲ್ಲಿ ಬಿಳಿ ತೊಗಲಿನ, ವಿಲಾಯಿತಿ ಲುಕ್ಕಿರುವ ಖಳನಟ ಬೇಕು ಅಂದರೆ ಅದಕ್ಕೆ ಬಾಬ್ ಕ್ರಿಸ್ಟೋನಿಗಿಂತ ಒಳ್ಳೆಯ ಆಯ್ಕೆ ಇರಲೇ ಇಲ್ಲ.

ನನಗೂ ಬಹಳ ವರ್ಷಗಳ ವರೆಗೆ ಬಾಬ್ ಕ್ರಿಸ್ಟೋನ ಹೆಸರು, ವಿವರ, ಪ್ರವರ, ಇತ್ಯಾದಿ ಗೊತ್ತೇ ಇರಲಿಲ್ಲ. ಅವನ ಹೆಸರು, ಸಣ್ಣ ಮಟ್ಟದ ಹಿನ್ನೆಲೆ ಗೊತ್ತಾಗಿದ್ದು ೧೯೯೧ ರಲ್ಲಿ. ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ ಚಿತ್ರಮಂದಿರದಲ್ಲಿ ಯಾವದೋ ಸಿನಿಮಾ ನೋಡುತ್ತಾ ಕೂತಿದ್ದೆವು. ಯಾವ ಥೇಟರ್? ಮಲ್ಲಿಕಾರ್ಜುನ? ಸರಿ ನೆನಪಿಲ್ಲ. ಇರಲಿ ಬಿಡಿ. ನೋಡುತ್ತಿದ್ದುದು ಶುದ್ಧಾನುಶುದ್ಧ ತಗಡು ಮೂವಿ. ಎಂಬತ್ತರ, ತೊಂಬತ್ತರ ದಶಕದ ಮಿಥುನ್ ಚಕ್ರವರ್ತಿ ಮೂವಿಗಳನ್ನು ನೆನಸಿಕೊಂಡರೆ ಇವತ್ತಿಗೂ ರಾತ್ರಿಯಲ್ಲಿ ದುಃಸಪ್ನ ಕಂಡು, ಬೆಚ್ಚಿಬಿದ್ದು, ಎದ್ದು ಕೂಡಬೇಕು. ಆ ಲೆವೆಲ್ಲಿನ ಪೂರ್ತಿ ಬುರ್ನಾಸು ಮೂವಿಗಳು. ಆವತ್ತು ಅಂಥದ್ದೊಂದು ಮೂವಿಗೆ ಹೋಗಿ ಕೂತು ಪ್ರಾರಬ್ಧ ಕರ್ಮ ಅನುಭವಿಸುತ್ತಿದ್ದೆವು. ಆ ಸಿನೆಮಾದಲ್ಲೂ ಇದ್ದ ಬಾಬ್ ಕ್ರಿಸ್ಟೋ. ಎಂದಿನಂತೆ ಖಳನಾಯಕನ ಮುಖ್ಯ ಸಹಾಯಕ. ಮಾತಿಗೊಮ್ಮೆ ಜಿಗಿಜಿಗಿದು ಏನೋ ಒಂದು ವಾಕ್ಯವನ್ನು ಪದೇ ಪದೇ ಹೇಳುತ್ತಿದ್ದ. ಅದೇ ಒಂದು ಮಜಾ. ಬಕ್ಕ ತಲೆಯ, ಖತರ್ನಾಕ್ ಲುಕ್ಕಿನ, ಬಿಳಿ ಮನುಷ್ಯನ ಮಂಗ್ಯಾತನ ನೋಡಲಿಕ್ಕೆ ಮಜವಾಗಿತ್ತು.

'ಯಾರಲೇ ಅಂವಾ ಗೋರಾ??' ಅಂತ ಪಕ್ಕದಲ್ಲಿ ಕೂತ ಮಿತ್ರನನ್ನು ಕೇಳಿದೆ.

'ಬಾಬ್ ಕ್ರಿಸ್ಟೋ. ಅಂವಾ ಆಸ್ಟ್ರೇಲಿಯನ್. ಇಂಡಿಯಾ ನೋಡಲಿಕ್ಕೆ ಟೂರಿಸ್ಟ್ ಅಂತ ಬಂದನಂತ. ಸಿನೆಮಾದಾಗ ಚಾನ್ಸ್ ಸಿಕ್ಕಿತಂತ. ಅದಕss  ಇಲ್ಲೇ ಉಳಕೊಂಡಾನ. ಹುಸ್ಸೂಳಿಮಗಾ! ನೋಡ್ ನೋಡ್ ಹ್ಯಾಂಗ ಜಿಗಿತಾನ! ಮಂಗ್ಯಾನಿಕೆ!' ಅಂತ ಪಕ್ಕ ಕೂತಿದ್ದ ಮಿತ್ರ ಹೊಸ ಮಾಹಿತಿಯೊಂದನ್ನು ಹೇಳಿದ್ದ.

'ಹಾಂ!? ಇವನ ಹೆಸರು ಬಾಬ್ ಕ್ರಿಸ್ಟೋನೇ? ಇವನು ಆಸ್ಟ್ರೇಲಿಯನ್ನೇ? ಹಾಂ!?' ಅಂತ ಅಂದುಕೊಳ್ಳುತ್ತಿರುವಾಗ ಬಾಜೂಕಿನ ಮಿತ್ರ, 'ಈ ಸಿನಿಮಾ ಕೆಟ್ಟ ತಲಿನೋವು ಮಾರಾಯಾ. ಎದ್ದು ಹೋಗೋಣ ನಡಿಯೋ!' ಅಂತ ಕಿರಿಕಿರಿ ಮಾಡಿದ. ಅರೇ! ಅದೆಂಗೆ ಎದ್ದು ಹೋಗಲಿಕ್ಕೆ ಆಗುತ್ತದೆ!? ಪೈಸಾ ವಸೂಲಿ ಮಾಡುವದು ಬೇಡವೇ!? ಅದೆಂತಹದೇ ಪ್ರಾರಬ್ಧ ಸಿನೆಮಾ ಇದ್ದರೂ ಪೂರ್ತಿ ನೋಡಲಿಕ್ಕೇ ಬೇಕು. ಅದಕ್ಕೇ ಸುಮ್ಮನೇ ಕೂತೆ. ಪಕ್ಕದಲ್ಲಿ ಮಿಜಿಮಿಜಿ ಮಾಡುತ್ತಿದ್ದ ಗೆಳೆಯರನ್ನೂ ಸಮಾಧಾನ ಮಾಡಿ ಕೂಡಿಸಿದೆ. ಏನೋ ನನ್ನ ಮೇಲಿನ ಪ್ರೀತಿಯಿಂದ ಅವರೂ ಇಲ್ಲದ ಮನಸ್ಸಿನಿಂದ ಪ್ರಾರಬ್ಧ ಅನುಭವಿಸುತ್ತ ಕೂತರು.

ಆವತ್ತೇ ಗೊತ್ತಾಗಿದ್ದು ಆತನ ಹೆಸರು ಬಾಬ್ ಕ್ರಿಸ್ಟೋ ಅಂತ. ನಂತರ ಹಲವಾರು ಸಿನೆಮಾಗಳಲ್ಲಿ ಆತನನ್ನು ನೋಡಿದಾಗ ಆತನ ಹೆಸರು ಮತ್ತು ಆತ ಆಸ್ಟ್ರೇಲಿಯನ್ ಅನ್ನುವದು ನೆನಪಿಗೆ ಬರುತ್ತಿತ್ತು. ಯಾರಾದರೂ ಜೊತೆಗಿದ್ದರೆ ಅವರಿಗೆ ಬಿಟ್ಟಿ 'ಜನರಲ್ ನಾಲೆಜ್' ಮುದ್ದಾಂ ವಿತರಿಸುತ್ತಿದ್ದೆ. ಹಂಚಿಕೊಂಡಷ್ಟೂ ಹೆಚ್ಚಾಗುತ್ತದೆ ಜ್ಞಾನ. ಸಾಮಾನ್ಯ ಜ್ಞಾನವಾದರೂ ಸರಿ ಅಥವಾ ಇಂತಹ ತಗಡು ಜ್ಞಾನವಾದರೂ ಸರಿ.

ಮೊನ್ನೆ ಪುಸ್ತಕಗಳ ಸಂತೆಯಲ್ಲಿ ಕಂತೆ ಎಣಿಸುತ್ತಿದ್ದಾಗ ಒಂದು ಪುಸ್ತಕ ಕಣ್ಣಿಗೆ ಬಿತ್ತು.  ವಾರಕ್ಕೊಮ್ಮೆ amazon.com ವೆಬ್ಸೈಟಿಗೆ ಹೋಗಿ ನಾಲ್ಕಾರು e-books ಕೊಂಡುಕೊಳ್ಳುವದು ರೂಢಿ. ಆಗ ಕಣ್ಣಿಗೆ ಬಿದ್ದಿದ್ದು ಈ ಬಾಬ್ ಕ್ರಿಸ್ಟೋ ಅನ್ನುವ ನಟನೇ ಬರೆದುಕೊಂಡಿರುವಂತಹ ಆತನ ಆತ್ಮಚರಿತ್ರೆ. ಇಂಟೆರೆಸ್ಟಿಂಗ್! ಅನ್ನಿಸಿತು. ಕೊಂಡುಕೊಂಡೆ. ಓದಲು ಕುಳಿತರೆ ಕೆಳಗಿಡಲಾಗಲಿಲ್ಲ. ಅಷ್ಟು ಇಂಟೆರೆಸ್ಟಿಂಗ್ ಆಗಿತ್ತು.



ಬಾಬ್ ಕ್ರಿಸ್ಟೋ - ಆಸ್ಟ್ರೇಲಿಯಾ ದೇಶದವನು. ಬರೋಬ್ಬರಿ ಓದಿಕೊಂಡು ಸಿವಿಲ್ ಇಂಜಿನಿಯರ್ ಆಗಿದ್ದ. ಮದುವೆಯಾಗಿ ಮಕ್ಕಳಿದ್ದವು. ಪತ್ನಿ ಯಾವದೋ ಒಂದು ರಸ್ತೆ ಅಪಘಾತದಲ್ಲಿ ತೀರಿಹೋದಳು. ಖಿನ್ನತೆಗೆ ಒಳಗಾಗದ ಬಾಬ್ ಹೊಸದೊಂದು ಬದುಕಿಗಾಗಿ ನೋಡುತ್ತಿದ್ದ. ಆ ಅವಕಾಶ ವಿಯೆಟ್ನಾಂ ಯುದ್ಧದ ರೂಪದಲ್ಲಿ ಬಂತು. ಆಸ್ಟ್ರೇಲಿಯಾ ಸಹ ಅಮೇರಿಕಾಗೆ ವಿಯೆಟ್ನಾಂ ಯುದ್ಧದಲ್ಲಿ ಸಹಾಯ ಮಾಡುತ್ತಿತ್ತು. ಬಾಬ್ ಕ್ರಿಸ್ಟೋ ಸೀದಾ ಸೈನ್ಯ ಸೇರಿ ಯುದ್ಧಕ್ಕೆ ಹೋಗಿಬಿಟ್ಟ. ಮಕ್ಕಳನ್ನು ದೋಸ್ತರು ಯಾರೋ ಬೆಳೆಸಿದರು.

ವಿಯೆಟ್ನಾಂ ಯುದ್ಧದಲ್ಲೂ ಸಿವಿಲ್ ಇಂಜಿನಿಯರ್ ಅಂತಲೇ ಕೆಲಸ ಮಾಡಿದ. ಆದರೆ ಪೂರ್ತಿ ಸೈನಿಕ ತರಬೇತಿ ಪಡೆದುಕೊಂಡ. ವಿಯೆಟ್ನಾಂ ಯುದ್ಧ ಮುಗಿಯುತ್ತಿದ್ದಂತೆ ಮತ್ತೆ ಅದೇ ಹಳೆಯ ಪ್ರಶ್ನೆ. 'ಮುಂದೇನು ಮಾಡಲಿ?' ವಾಪಸ್ ಆಸ್ಟ್ರೇಲಿಯಾಗೆ ಹೋಗುವ ಮನಸ್ಸು ಬರಲಿಲ್ಲ. ಅದಕ್ಕೇ ಸೀದಾ ಹಾಂಗ್ ಕಾಂಗಿಗೆ (Hong Kong) ಹೋಗಿಬಿಟ್ಟ. ಶುದ್ಧ ಬಿಸಿನೆಸ್ ಮ್ಯಾನ್ ಆಗಿಬಿಟ್ಟ. ಮಾಡದ ದಂಧೆಯಿರಲಿಲ್ಲ. ಹಳೆ ಕಾರುಗಳನ್ನು ರಿಪೇರ್ ಮಾಡಿ, ಮಾರುವ ದಂಧೆಯಲ್ಲಿ ಸಿಕ್ಕಾಪಟ್ಟೆ ಕಾಸು ಮಾಡಿಕೊಂಡ. ಫಿಲಿಪೈನ್ಸ್ ದ್ವೀಪಗಳಿಗೆ ಹೋಗಿ ಕಾರು ಖರೀದಿಸುತ್ತಿದ್ದ. ಅಲ್ಲೇ ರಿಪೇರ್ ಮಾಡಿಸಿ, ಪೇಯಿಂಟ್ ಹೊಡೆಸಿಕೊಂಡು ಹಡಗಿಗೆ ಹಾಕಿಸುತ್ತಿದ್ದ. ಹಾಂಗ್ ಕಾಂಗ್ ದೇಶದಲ್ಲಿ ಅಂತಹ reconditioned ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಹಾಗಾಗಿ ಬಾಬ್ ಕ್ರಿಸ್ಟೋ ಸಾಕಷ್ಟು ರೊಕ್ಕ ಮಾಡಿಕೊಂಡ.

ರೊಕ್ಕ ಸಿಕ್ಕವ ಬರೋಬ್ಬರಿ ಭೋಗಿಯಾದ. ಮೊದಲೇ ತುಂಬಾ handsome ಮನುಷ್ಯ, ಈಗ ಕೈತುಂಬಾ ರೊಕ್ಕ. ಮೇಲಿಂದ ಅದು ೧೯೭೦ ರ ದಶಕ. ಜಗತ್ತಿನ ಎಲ್ಲ ಕಡೆ ಸ್ವೇಚ್ಛಾಚಾರ ಉತ್ತುಂಗದಲ್ಲಿತ್ತು. ತಿಂದುಂಡು ಚಿಂದಿ ಉಡಾಯಿಸಲು ಹಾಂಗ್ ಕಾಂಗ್ ಹೇಳಿ ಮಾಡಿಸಿದ ಶಹರ. ಬಾಬ್ ಕ್ರಿಸ್ಟೋನಿಗೆ ಮರುಳಾದ ಹಲವು ಸುಂದರಿಯರು ಮುರಕೊಂಡು ಮೈಮೇಲೆ ಬಿದ್ದರು. ಅವರನ್ನೆಲ್ಲ ಸಂಬಾಳಿಸಿ ಸಂಬಾಳಿಸಿ ಸುಸ್ತಾಗಿಹೋದ. ಮನೆ ಒಳಗೆ ನಾಕು, ಹೊರಗೆ ಎಂಟು, ವಿದೇಶಗಳಲ್ಲಿ ಮತ್ತೊಂದು ಡಜನ್ ಅಂತ ಸಿಕ್ಕಾಪಟ್ಟೆ ಪ್ರೇಯಸಿಯರು ಮನ್ಮಥ ರೂಪದ ಬಾಬ್ ಕ್ರಿಸ್ಟೋನನ್ನು ಅಮರಿಕೊಂಡಿದ್ದರು.

ಸಿವಿಲ್ ಇಂಜಿನಿಯರ್ ಆಗಿ ಮೊದಲೆಲ್ಲ ಸೇತುವೆ, ಸೇನಾ ಶಿಬಿರ ಇತ್ಯಾದಿ ಕಟ್ಟಿದವ ಈಗ ಸಿನೆಮಾಗಳಿಗೆ ಸೆಟ್ ಹಾಕತೊಡಗಿದ. ಖತರ್ನಾಕ್ ಸೆಟ್ಟುಗಳನ್ನು ಹಾಕಿ ಭಾಳ ಫೇಮಸ್ ಆಗಿಹೋದ. ಆಕಾಲದ ಮಹಾನ್ ಹೀರೋ ಮಾರ್ಲೋನ್ ಬ್ರಾಂಡೊ ಅಭಿನಯಿಸಿದ್ದ, ವಿಯೆಟ್ನಾಂ ಯುದ್ಧದ ಕುರಿತಾದ ''Apocalypse Now" ಎಂಬ ಚಿತ್ರಕ್ಕೂ ಸೆಟ್ ಹಾಕಿಕೊಟ್ಟ. ಜೊತೆಗೆ ಕೆಲವೊಂದು ಅಪಾಯಕಾರಿ ಸ್ಟಂಟ್ ದೃಶ್ಯಗಳಲ್ಲಿ ಕೂಡ ಅಭಿನಯಿಸಿ ಭೇಷ್ ಅನಿಸಿಕೊಂಡ. Apocalypse Now ಚಿತ್ರದಲ್ಲಿ ಹೆಲಿಕಾಪ್ಟರಿನಿಂದ ನೀರಿಗೆ ಹಾರುವ ದೃಶ್ಯದಲ್ಲಿ ಡ್ಯೂಪ್ ಅಂತ ಅಭಿನಯಿಸಿದವನು ಇದೇ ಬಾಬ್ ಕ್ರಿಸ್ಟೋ. Apocalypse Now ಅನ್ನುವ ಸಿನೆಮಾ ವಿಯೆಟ್ನಾಂ ಯುದ್ಧದ ಕುರಿತಾಗಿ ಬಂದುಹೋದ ಅನೇಕ ಸಿನೆಮಾಗಳಲ್ಲಿ ಅತ್ಯುತ್ತಮವಾದದ್ದು  ಅನ್ನಿಸಿಕೊಂಡಿದೆ .

ಒಂದು ಕಡೆ ಕಾರುಗಳ ವ್ಯಾಪಾರ, ಮತ್ತೊಂದು ಕಡೆ ಸಿನಿಮಾ ಅಂತ ಒಂದು ರೀತಿಯಲ್ಲಿ ಸುಖವಾಗಿಯೇ ಇದ್ದ ಬಾಬ್ ಕ್ರಿಸ್ಟೋ. ಪ್ರೇಯಸಿಯರಿಗಂತೂ ಕೊರತೆಯೇ ಇರಲಿಲ್ಲ. ತಾವೇ ರೊಕ್ಕ ಕೊಟ್ಟು ಮೈಮೇಲೆ ಬೀಳಲು ಬರುತ್ತಿದ್ದರು. ಸಮೋಆ ದ್ವೀಪ ಸಮೂಹದ ಒಬ್ಬ ಕನ್ಯೆ ಅದ್ಯಾವ ರೀತಿಯಲ್ಲಿ ಇವನ ಬೆನ್ನುಬಿದ್ದಿದ್ದಳು ಅಂದರೆ ಅವಳ ಕಾಟ ತಡಿಯಲಾಗದೇ ಹಾಂಗ್ ಕಾಂಗ್ ಬಿಟ್ಟು ಪರಾರಿಯಾಗುವ ಸ್ಕೆಚ್ ಹಾಕಿದ ಬಾಬ್ ಕ್ರಿಸ್ಟೋ. ಅದೇ ಸಮಯದಲ್ಲಿ ಬಂತು ಒಂದು ರೋಚಕ ಸುದ್ದಿ.

ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಗೆ ಸೇರಿದ ಹಡಗೊಂದು ಆಫ್ರಿಕಾ ತೀರದ ಸಮುದ್ರದಲ್ಲಿ ಮುಳುಗಿದೆ ಅಂತ ಒಂದು ಗುಸುಗುಸು ಸುದ್ದಿ ಹರಡಿತು. ಅದು ಹೇಗೋ ಬಾಬ್ ಕ್ರಿಸ್ಟೋ ಕಿವಿಗೂ ಬಿತ್ತು. ಬಾಬ್ ಉತ್ಸುಕನಾಗಿಬಿಟ್ಟ. ಸಮುದ್ರದಲ್ಲಿ ಡೈವ್ ಹೊಡೆದು, ಮುಳುಗಿದ ಆ ಹಡಗನ್ನು ಶೋಧಿಸಿಯೇ ಬಿಡಬೇಕು ಅಂತ ತಲೆಗೆ ಬಂದುಬಿಟ್ಟಿತು. ಡೈವ್ ಹೊಡೆದಾಗ ಅದೃಷ್ಟ ಖುಲಾಯಿಸಿ ಹಡಗು ಸಿಕ್ಕಿತು ಅಂದರೆ ಅಷ್ಟೇ ಮತ್ತೆ. ಅಂತಹ ಖತರ್ನಾಕ್ ಬೇಹುಗಾರಿಕೆ ಹಡಗಿನಲ್ಲಿ ಏನೇನಿವೆಯೋ ಏನೋ! ಎತ್ತಾಕಿಕೊಂಡು ಬಂದು ಮಾರಲು ಕೂತರೆ ಅಂತರಾಷ್ಟ್ರೀಯ ಕಾಳಸಂತೆಯಲ್ಲಿ ಲಾಭವೋ ಲಾಭ.

ಹೇಗೂ ಹಾಂಗ್ ಕಾಂಗ್ ಬೋರಾಗಿತ್ತು. ಮೊದಲೆಲ್ಲ ಥ್ರಿಲ್ ಕೊಟ್ಟಿದ್ದ ಛೋಖರೀ, ಹುಡುಗಿ ಮಂದಿ ಈಗ ಸಿಕ್ಕಾಪಟ್ಟೆ ತಲೆತಿನ್ನತೊಡಗಿದ್ದರು. ಅವರಿಂದಲೂ ಎಸ್ಕೇಪ್ ಆಗಬೇಕಿತ್ತು. ಅವರಿಗೆಲ್ಲ ಚಂದಾಗಿ, ಲಾಂಗಾಗಿ 'ನಾಮ ಹಾಕಿದ' ಕ್ರಿಸ್ಟೋ ಸಾಹೇಬ ಒಂದು ಶುಭದಿನ ಹಾಂಗ್ ಕಾಂಗ್ ಬಿಟ್ಟು ಓಡಿಬಿಟ್ಟ. ಅವನ ಮುಂದಿನ ಗುರಿ ಆಫ್ರಿಕಾ. ಈಕಡೆ ಅವನ ಅಸಂಖ್ಯಾತ ಗರ್ಲ್ ಫ್ರೆಂಡುಗಳು ಬಾಯಿಬಾಯಿ ಬಡಕೊಂಡು ಶಾಪ ಹಾಕಿದರು. ಬಾಬ್ ಹಾಕಿಹೋಗಿದ್ದ 'ನಾಮ' ಸವರಿಕೊಳ್ಳುತ್ತ ಕೂತರು. ಏನು ಮಾಡಲಿಕ್ಕೆ ಬರುತ್ತದೆ?

ಆಫ್ರಿಕಾದ ತೀರದಲ್ಲಿ ಮುಳುಗಿದ ಹಡಗನ್ನು ಡೈವ್ ಹೊಡೆದು ಶೋಧಿಸುವದು ಅಂದರೆ ಹಲ್ವಾನೇ? ಅದಕ್ಕೆ ಸಾಕಷ್ಟು ರೊಕ್ಕ ಬೇಕು. ಜೊತೆಗಾರರು ಬೇಕು. ಹಾಗಾಗಿ ಬಾಬ್ ಕ್ರಿಸ್ಟೋ ಮೊದಲು ಹೊರಟಿದ್ದು ರೋಡೇಶಿಯಾಕ್ಕೆ (ಈಗಿನ ಜಿಂಬಾಬ್ವೆ). ಅಲ್ಲಿ ಕೊನೆಯ ಬಿಳಿಯ ಪ್ರಧಾನಿ ಇಯಾನ್ ಸ್ಮಿತ್ ಹೇಗೋ ಮಾಡಿ ಅಧಿಕಾರ ಹಿಡಿದುಕೊಂಡಿದ್ದ. ಅವರದ್ದೂ ವರ್ಣಭೇದ ನೀತಿ. ಇಂದಿನ ಅಧ್ಯಕ್ಷ ರಾಬರ್ಟ್ ಮುಗಾಬೆ ಆಗಿನ ಬಂಡುಕೋರ ಕರಿಯರ ನಾಯಕ. ಗೆರಿಲ್ಲಾ ಯುದ್ಧ ಜೋರಾಗಿ ನಡೆಯುತ್ತಿತ್ತು. ಇಯಾನ್ ಸ್ಮಿತ್ ಗೆ ಬಿಳಿಯರ ಪರವಾಗಿ ಹೋರಾಡಲು mercenary ಅಂದರೆ ಬಾಡಿಗೆ ಸೈನಿಕರ ಸಕತ್ ಜರೂರತ್ತಿತ್ತು. ಅಂತಹ ಬಾಡಿಗೆ ಸೈನಿಕನಾಗಿ, ಒಂದಷ್ಟು ಕಾಸು ಮಾಡಿಕೊಂಡು, ಒಂದಷ್ಟು ಸಹಾಯಕಾರಿ ಸಂಪರ್ಕಗಳನ್ನೂ ಕುದುರಿಸಿಕೊಂಡು, ಮುಳುಗಿದ್ದ ಹಡಗಿನ ಶೋಧನೆಯಲ್ಲಿ ತೊಡಗಿಸಿಕೊಂಡರಾಯಿತು ಅಂತ ಬಾಬ್ ಕ್ರಿಸ್ಟೋನ ಮಾಸ್ಟರ್ ಪ್ಲಾನ್.

ಹಾಂಗ್ ಕಾಂಗ್ ಬಿಟ್ಟು ಆಫ್ರಿಕಾಗೆ ಹೊರಟ. ಮಧ್ಯದಲ್ಲಿ ಸೀಷೆಲ್ಸ್ ದ್ವೀಪ ಸಮೂಹದ ರಾಜಧಾನಿ ಮಾಹೆಯಲ್ಲಿ (ವಿಕ್ಟೋರಿಯಾ) ತುಂಬಾ ಹೊತ್ತಿನ layover ಇತ್ತು. ಅಲ್ಲೇ ಇರುವ ಹೋಟೆಲ್ಲಿನಲ್ಲಿ ರೂಂ ಮಾಡಿದ. ಕೆಳಗೆ ಬಂದು ಒಂದು ಡ್ರಿಂಕ್ ಕುಡಿಯೋಣ ಅಂತ ಲಾಂಜಿನಲ್ಲಿ ಕೂತರೆ ಹತ್ತಿರದಲ್ಲೇ ಒಂದು ನಾಲ್ಕು ಜನ ಗುಪ್ಪೆ ಹಾಕಿಕೊಂಡು ಏನೋ ಗುಸುಪುಸು ಅಂತ ರಹಸ್ಯವಾಗಿ ಮಾತಾಡುತ್ತಿದ್ದರು. ಬಾಬ್ ಕ್ರಿಸ್ಟೋ ಸ್ವಲ್ಪ ಕಿವಿಯರಳಿಸಿ ಕೂತು ಕೇಳಿಸಿಕೊಂಡ. ಆ ನಾಲ್ಕಾರು ಜನ ಏನು ಗುಸುಪುಸು ಮಾತಾಡುತ್ತಿದ್ದರು ಗೊತ್ತೇ? ಅಂದಿನ ಸೀಷೆಲ್ಸ್ ಸರ್ಕಾರವನ್ನು ಒಂದು ಕ್ಷಿಪ್ರಕ್ರಾಂತಿ (coup d'é·tat) ಮಾಡಿ ಹೇಗೆ ಉರುಳಿಸುವದು ಅಂತ ಖತರ್ನಾಕ್ ವಿಚಾರ ಮಾಡುತ್ತಿದ್ದರು. ಸುದ್ದಿ ಕೇಳಿದ ಬಾಬ್ ಕ್ರಿಸ್ಟೋಗೆ ಸುಮ್ಮನಿರಲಾಗಲಿಲ್ಲ. ಎದ್ದು ಹೋದ. ಅವರಿಗೆ ಹಲೋ ಅಂದ. 'ಅಯ್ಯೋ, ಪೆಕರು ಮುಂಡೇವೇ! ಕ್ಷಿಪ್ರಕ್ರಾಂತಿ ಮಾಡುವದು ಅಂದರೆ ಮಠದಲ್ಲಿ ಆರಾಧನೆ ಮಾಡಿದಂತಲ್ಲ. ಅದನ್ನು ಹೀಗಲ್ಲ ಮಾಡೋದು. ಹೀಗೆ ಮಾಡಿದರೆ ಖಾತ್ರಿಯಾಗಿ ವಿಫಲವಾಗುತ್ತದೆ. ಕ್ಷಿಪ್ರಕ್ರಾಂತಿ ಮಾಡುವದೇ ಆದರೆ ಹೀಗೆ ಮಾಡಿ,' ಅಂತ ಅಲ್ಲೇ ಒಂದು ಸರಳ ಪ್ಲಾನ್ ಹಾಕಿಕೊಟ್ಟ. ಉದ್ರಿ ಉಪದೇಶ ಪಡೆದುಕೊಂಡ ಆ ಜನರು ಫುಲ್ ಖುಷ್.

ಸೀಷೆಲ್ಸ್ ದ್ವೀಪ ದೇಶ ಬಹಳ ಹಿಡಿಸಿಬಿಟ್ಟಿತು ಅಂತ ಪ್ರಯಾಣ ನಾಲ್ಕಾರು ದಿನಕ್ಕೆ ಮುಂದೆ ಹಾಕಿದ. ಅಲ್ಲೂ ಒಬ್ಬಳು ಸುಂದರಿ ತಗಲಾಕಿಕೊಂಡಳು. ಅವಳ ಜೊತೆಗೂ ಜಮ್ಮ ಚಕ್ಕ. ಅವಳು ನೋಡಿದರೆ ದ್ವೀಪದ ಒಬ್ಬ ಮಹಾ ದೊಡ್ಡ ಖತರ್ನಾಕ್ ಸುಂದರಿ. ಆಕೆಗೆ ದ್ವೀಪದ ಅಧ್ಯಕ್ಷನವರೆಗೂ ಪಹೂಂಚ್ ಇತ್ತು. ಒಂದು ಸಂಜೆ ಸೀದಾ ಅಧ್ಯಕ್ಷನ ಅರಮನೆಗೇ ಕರೆದುಕೊಂಡು ಹೋಗಿಬಿಟ್ಟಳು. ಅಲ್ಲೊಂದು ಪಾರ್ಟಿ ಇತ್ತು. ಕೆಲವೊಂದು ದೇಶಗಳಲ್ಲಿ ಎಲ್ಲ ಎಷ್ಟು ಸಿಂಪಲ್, ಎಷ್ಟೊಂದು ಅನೌಪಚಾರಿಕ ನೋಡಿ. ದೇಶದ ಅಧ್ಯಕ್ಷನೇ ಆರಾಮಾಗಿ ಎಲ್ಲರ ಜೊತೆ ಬೆರೆತು, ಮಾತಾಡುತ್ತ, ಡ್ರಿಂಕ್ ಮಾಡುತ್ತ, ಮಜಾ ಮಾಡುತ್ತಲಿದ್ದ. ಕ್ಷಿಪ್ರಕ್ರಾಂತಿಗೆ ಸ್ಕೆಚ್ ಹಾಕುತ್ತಿದ್ದ ಜನರೂ ಅಲ್ಲಿದ್ದರು. ಹಿತಶತ್ರುಗಳು. ಕೆಲವೇ ಘಂಟೆಗಳ ಹಿಂದೆ ಬಾಬ್ ಕ್ರಿಸ್ಟೋ ಅವರನ್ನು ಹೋಟೆಲ್ಲಿನಲ್ಲಿ ನೋಡಿದ್ದ. ಕೆಲವೊಂದು ಐಡಿಯಾಗಳನ್ನು ಕೊಟ್ಟಿದ್ದ. ಅವನನ್ನು ಅಧ್ಯಕ್ಷನ ಪಾರ್ಟಿಯಲ್ಲಿ ನೋಡಿದ ಆ ಮಂದಿ ಥಂಡಾ ಹೊಡೆದರೇ? ಬೆಚ್ಚಿಬಿದ್ದರೇ? ಅದರ ಬಗ್ಗೆ ಕ್ರಿಸ್ಟೋ ಏನೂ ಬರೆದುಕೊಂಡಿಲ್ಲ. ಸೀಷೆಲ್ಸ್ ನಲ್ಲಿ ಸಿಕ್ಕ ಅಪೂರ್ವ ಸುಂದರಿಯ ಧ್ಯಾನದಲ್ಲೇ ಮಗ್ನ ಅವನು.

(ಮುಂದೆ ಕೆಲವು ತಿಂಗಳಲ್ಲಿ ಸೀಷೆಲ್ಸ್ ದೇಶದಲ್ಲಿ ಕ್ಷಿಪ್ರಕ್ರಾಂತಿಯಾಯಿತು. ಬಾಬ್ ಕ್ರಿಸ್ಟೋ ಹಾಕಿಕೊಟ್ಟ ಪ್ಲಾನಿನಂತೆಯೇ ಮಾಡಿಮುಗಿಸಿದ್ದರು. ಒಂದು ಹನಿಯೂ ರಕ್ತ ಹರಿಯಲಿಲ್ಲ. bloodless coup. ಪದಚ್ಯುತ ಅಧ್ಯಕ್ಷ ಜೀವ ಬಚಾವ್ ಮಾಡಿಕೊಂಡು ಯುರೋಪಿಗೆ ಓಡಿದ. ಈ ಸುದ್ದಿಯನ್ನೆಲ್ಲ ಆಫ್ರಿಕಾದಲ್ಲಿ ಕುಳಿತ ಬಾಬ್ ಓದಿ ನಕ್ಕ. ಮುಂದೆ ಕೆಲವು ವರ್ಷಗಳ ನಂತರ ಮತ್ತೊಂದು ಕ್ಷಿಪ್ರಕ್ರಾಂತಿಯಾಗಲಿತ್ತು. ಆಗ ಪೊರಪಾಟಿನಲ್ಲಿ ಮಾಹೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಇಂಡಿಯಾ ವಿಮಾನ ಎಲ್ಲಾ ಪ್ಲಾನನ್ನು ಉಲ್ಟಾ ಪುಲ್ಟಾ ಮಾಡಿಬಿಟ್ಟಿತ್ತು. ಕ್ಷಿಪ್ರಕ್ರಾಂತಿ ಮಾಡಲು ಬಂದಿದ್ದ ಬಾಡಿಗೆ ಸೈನಿಕರು ಏರ್ ಇಂಡಿಯಾ ವಿಮಾನನವನ್ನೇ ಅಪಹರಿಸಿ ಪರಾರಿಯಾಗಿದ್ದರು. ಅದೊಂದು ವಿಚಿತ್ರ ಘಟನೆ. ಅದರ ಬಗ್ಗೆ ಬರೆದಿದ್ದ ಒಂದು ಹಳೆಯ ಬ್ಲಾಗ್ ಪೋಸ್ಟ್ ಇಲ್ಲಿದೆ. ತುಂಬಾ ಹಿಂದೆ ಬರೆದಿದ್ದು. ಈಗ ಮತ್ತೆ ಓದಿ ತಿದ್ದಲಿಲ್ಲ. ತಪ್ಪಿದ್ದರೆ ತಿದ್ದಿಕೊಂಡು ಓದಿ.)

ಬಾಬ್ ಕ್ರಿಸ್ಟೋ ಸೀಷೆಲ್ಸ್ ದೇಶದಿಂದ ಹಾರಿ ರೋಡೇಸಿಯಾ  ತಲುಪಿಕೊಂಡ. ಏನೋ ಯುದ್ಧ ಮಾಡಲು ನೋಡಿದ. ಏನೂ ಗಿಟ್ಟುವ ಹಾಗೆ ಕಾಣಲಿಲ್ಲ. ಸರಿ ಅಂತ ಅಲ್ಲೇ ಪಕ್ಕದ ದಕ್ಷಿಣ ಆಫ್ರಿಕಾಗೆ ಹೊರಟ ಬಾಬ್ ಕ್ರಿಸ್ಟೋ. ದಾರಿಯಲ್ಲಿ ಯಾವದೋ ಒಂದು ಹೋಟೆಲ್ಲಿನಲ್ಲಿ ತಂಗಿದ್ದ. ಆ ತಿಂಗಳ 'ಟೈಮ್' ಪತ್ರಿಕೆ ಕಣ್ಣಿಗೆ ಬಿತ್ತು. ಅದರ ಮುಖಪುಟದ ಮೇಲೆ ರಾರಾಜಿಸಿದಾಕೆ ಒಬ್ಬ ಅಪ್ರತಿಮ ಸುಂದರಿ. ನೋಡಿ ಸಿಕ್ಕಾಪಟ್ಟೆ ಇಂಪ್ರೆಸ್ ಆದ ಬಾಬ್ ಕ್ರಿಸ್ಟೋ, 'ಯಾರಿವಳು ಈ ಸುಂದರಿಯು???' ಅಂತ ಗುಣುಗುತ್ತ ಪುಟ ತಿರುಗಿಸಿ ನೋಡಿದ. ಆವಾಗ ತಿಳಿಯಿತು ಆಕೆ ಅಂದಿನ ಬಾಲಿವುಡ್ಡಿನ ರಾಣಿ ಪರ್ವೀನ್ ಬಾಬಿ ಅಂತ. ಅಂದೇ ಬಾಬ್ ಕ್ರಿಸ್ಟೋ ಒಂದು ನಿರ್ಧಾರ ಮಾಡಿದ. 'ಜೀವನದಲ್ಲಿ ಒಮ್ಮೆಯಾದರೂ ಈಕೆಯನ್ನು ಭೆಟ್ಟಿ ಮಾಡಲೇಬೇಕು. ಅದ್ಭುತ ಸುಂದರಿ! ಪ್ರಭಾವಿ ವ್ಯಕ್ತಿತ್ವ!' ಅಂದು ಮಾಡಿಕೊಂಡಿದ್ದ ಆ ನಿರ್ಧಾರ ಚಿತ್ರವಿಚಿತ್ರ ರೀತಿಯಲ್ಲಿ ಸಾಕಾರಗೊಳ್ಳಲಿದೆ ಮತ್ತು ಬಾಬ್ ಕ್ರಿಸ್ಟೋ ಕೂಡ ಬಾಲಿವುಡ್ಡಿನಲ್ಲಿ, ಭಾರತದಲ್ಲೇ ಸೆಟಲ್ ಆಗಲಿದ್ದಾನೆ ಅಂತ ಆತ ಕನಸಲ್ಲೂ ಎಣಿಸಿರಲಿಕ್ಕಿಲ್ಲ.

ಜುಲೈ, ೧೯೭೬ ರ ಟೈಮ್ ಮ್ಯಾಗಜಿನ್ ಮುಖಪುಟದ ಮೇಲೆ ಪರ್ವೀನ್ ಬಾಬಿ

ರೋಡೆಸಿಯಾ, ದಕ್ಷಿಣ ಆಫ್ರಿಕಾ ಟ್ರಿಪ್ ಮುಗಿಸಿ ಮುಂದೇನು ಅಂತ ಕೂತಾಗ ಯಾರೋ ಹೇಳಿದರು, 'ಒಮಾನ್ ದೇಶ ಟ್ರೈ ಮಾಡು. ಅಲ್ಲಿ ಸಿಕ್ಕಾಪಟ್ಟೆ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿದೆ. ಸಿವಿಲ್ ಇಂಜಿನಿಯರ್ ಮಂದಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.' ಅಷ್ಟು ಕೇಳಿದ ಬಾಬ್ ಕ್ರಿಸ್ಟೋ 'ಪುರ್ರ್!' ಅಂತ ಒಮಾನ್ ದೇಶಕ್ಕೆ ಹಾರಿಬಿಟ್ಟ. ಅಲ್ಲಿ ಕೆಲಸವೇನೋ ಸಿಕ್ಕಿತು. ಆದರೆ ಕೆಲಸದ ಅನುಮತಿ ಪತ್ರ ಬರಲಿಕ್ಕೆ ಸ್ವಲ್ಪ ವೇಳೆ ಹಿಡಿಯಲಿಕ್ಕಿತ್ತು. ಅಲ್ಲಿಯವರೆಗೆ ಏನು ಮಾಡೋಣ ಅಂತ ವಿಚಾರ ಮಾಡಿದ. 'ಕೆಲವೇ ಘಂಟೆಗಳ ದೂರದಲ್ಲಿ ಬಾಂಬೆ ಇದೆ. ಹೋಗಿ ಮಜಾ ಮಾಡಿ ಬನ್ನಿ!' ಅಂತ ಯಾರೋ ಸಲಹೆ ಕೊಟ್ಟರು. ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ತಿರುಗುವ ಪೈಕಿ ಮನುಷ್ಯ ಈ ಬಾಬ್ ಕ್ರಿಸ್ಟೋ. ಸರಿ ಅಂತ ನಿರ್ಧಾರ ಮಾಡಿ, ವಿಮಾನದ ಟಿಕೆಟ್ ಖರೀದಿ ಮಾಡಿದವನೇ ಬಾಂಬೆಗೆ ಹಾರಿಬಿಟ್ಟ.

ವಿಧಿ, ದೈವ ಎಲ್ಲ ಹೇಗೆ ಪರ್ಫೆಕ್ಟ್ ಆಗಿ ಕೆಲಸ ಮಾಡಿಡುತ್ತದೆ ನೋಡಿ. ಅದೇ ವೇಳೆಯಲ್ಲಿ ಖ್ಯಾತ ನಟ, ನಿರ್ಮಾಪಕ ಸಂಜಯ್ ಖಾನ್ ಒಂದು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದ. ಅದೇ 'ಅಬ್ದುಲ್ಲಾ' ಅನ್ನುವ ಬಾಲಿವುಡ್ ಸಿನಿಮಾ. ಅದು ಯಾವದೋ ಖ್ಯಾತ ಹಾಲಿವುಡ್ ಸಿನೆಮಾದ ರಿಮೇಕ್ / ರೂಪಾಂತರವಂತೆ. ಹಾಲಿವುಡ್ಡಿನ ನಿರ್ಮಾಪಕ ಒಂದು ಖಡಕ್ ಕರಾರು ಹಾಕಿಯೇ ಅನುಮತಿ ಕೊಟ್ಟಿದ್ದ. 'ನೀವು ಬಾಲಿವುಡ್ ಜನ ಏನೇನೋ ಮಸಾಲೆ ಹಾಕಿ ಮೂಲ ಸಿನೆಮಾವನ್ನು, ಅದರ ಉದ್ದೇಶವನ್ನು ಹಾಳುಗೆಡವಿ ಬಿಡುತ್ತೀರಿ. ಹಾಗಾಗಬಾರದು. ಆಗಲೇಬಾರದು. ಮೂಲ ಸಿನೆಮಾಕ್ಕೆ ಚ್ಯುತಿ ಬರದಂತೆ ಮಾಡುತ್ತೀರಿ ಅಂತಾದರೆ ಮಾತ್ರ ಮಾಡಿ!' ಅಂತ ಹೇಳಿದ್ದ. 'ಓಕೆ ಸರ್,' ಅಂತ ಹೇಳಿದ ಸಂಜಯ್ ಖಾನ್ ಅನುಮತಿ ಪಡೆದುಕೊಂಡು ಬಂದು, 'ಅಬ್ದುಲ್ಲಾ' ಸಿನಿಮಾ ಶುರು ಮಾಡಿಕೊಂಡಿದ್ದ. ಆ ಹಾಲಿವುಡ್ ಮನುಷ್ಯನಿಗೆ ಆದರೂ ಸಂಶಯ. ತನ್ನದೇ ಒಬ್ಬ ಮನುಷ್ಯನನ್ನು ಬಾಂಬೆಯಲ್ಲಿ ನೇಮಿಸಿದ್ದ. ಅವನ ಕೆಲಸವೇನೆಂದರೆ ಸಂಜಯ್ ಖಾನನ 'ಅಬ್ದುಲ್ಲಾ' ಸಿನೆಮಾದ ಶೂಟಿಂಗ್ ಮೇಲೆ ಒಂದು ಖಡಕ್ ಕಣ್ಣಿಡುವದು. ನಂತರ ಹಾಲಿವುಡ್ ಮನುಷ್ಯನಿಗೆ ನಿಯಮಿತವಾಗಿ ರಿಪೋರ್ಟ್ ಕಳಿಸುವದು.

ಬಾಬ್ ಕ್ರಿಸ್ಟೋ ತಾತ್ಕಾಲಿಕ ರಜೆಗೆ ಅಂತ ಬಾಂಬೆಗೆ ಬಂದ. ಮುಂದೆ ಒಮಾನಿಗೆ ವಾಪಸ್ ಹೋಗಲೇ ಇಲ್ಲ. ಬಾಲಿವುಡ್, ಬಾಂಬೆ, ಭಾರತ, ಭಾರತೀಯರು ಆಪರಿ ಸೆಳೆದು ಹಿಡಿದುಕೊಂಡುಬಿಟ್ಟರು. ಆ ವಿಧಿಯ ಸುಳಿಯಲ್ಲಿ ಬಾಬ್ ಕ್ರಿಸ್ಟೋ ಕಳೆದುಹೋದ.

ಆ ಸಮಯದಲ್ಲಿ ಹಾಲಿವುಡ್ಡಿನ ನಿರ್ಮಾಪಕ ಕೂಡ ಬಾಂಬೆಗೆ ಬಂದಿದ್ದ. ಅವನಿಗೆ ಸಂಜಯ್ ಖಾನನ ಮೇಲೆ ಕಣ್ಣಿಡಲಿಕ್ಕೆ ಬೇರೊಬ್ಬನ ಜರೂರತ್ತಿತ್ತು. ಆಗ ಕಂಡವ ಬಾಬ್ ಕ್ರಿಸ್ಟೋ. ಅದೇನೋ ಗೋರಾ ಗೋರಾ ಕನೆಕ್ಷನ್ ಬಿಳಿಯರ ಮಧ್ಯೆ ಆಗಿರಬೇಕು. ಬಾಬ್ ಕ್ರಿಸ್ಟೋಗೆ ಆ ಕೆಲಸ ಕೊಟ್ಟುಬಿಟ್ಟ. ಅದ್ಯಾವದೋ ಪೊರಪಾಟಿನಲ್ಲಿ ಬಾಬ್ ಕೂಡ ಆ ಕೆಲಸ ಒಪ್ಪಿಕೊಂಡ. ಸಂಜಯ್ ಖಾನನ 'ಅಬ್ದುಲ್ಲಾ' ಸಿನೆಮಾದ ಶೂಟಿಂಗ್ ಜಾಗದಲ್ಲಿ ಚೇರ್ ಹಾಕಿಕೊಂಡು ಕೂತ. ನಿಯಮಿತವಾಗಿ ವರದಿ ಕಳಿಸತೊಡಗಿದ. ಆಕಡೆ ಆ ಹಾಲಿವುಡ್ ಮನುಷ್ಯ ಖುಷ್. ಈಕಡೆ ಸಂಜಯ ಖಾನ್ ಮತ್ತು ಸೆಟ್ಟಿಗೆ ಬಂದು ಕೂಡುತ್ತಿದ್ದ ಬಾಬ್ ಕ್ರಿಸ್ಟೋ ಮಧ್ಯೆ ಒಂದು ರೀತಿಯ ಹಲೋ, ಹಾಯ್ ನಿಂದ ಶುರುವಾದ ಸ್ನೇಹ ಅಬ್ದುಲ್ಲಾ ಸಿನೆಮಾ ಮುಗಿಯುವ ಹೊತ್ತಿಗೆ ಸಿಕ್ಕಾಪಟ್ಟೆ ಗಾಢ ದೋಸ್ತಿಯಾಗಿಬಿಟ್ಟಿತ್ತು. ಸಂಜಯ್ ಖಾನ್ ಅಬ್ದುಲ್ಲಾ ಚಿತ್ರದಲ್ಲಿ ಬಾಬ್ ಕ್ರಿಸ್ಟೋಗೆ ಒಂದು ಚಿಕ್ಕ, ಆದರೆ ಮುಖ್ಯವಾದ, ಪಾತ್ರವನ್ನೂ ಕೂಡ ಕೊಟ್ಟಿದ್ದ. ಮೊದಲೆಲ್ಲ ಕೇವಲ ಸ್ಟಂಟ್ ಆಕ್ಟಿಂಗ್ ಮಾಡಿಕೊಂಡು, ಹೀರೋಗಳಿಗೆ ಅಪಾಯಕಾರಿ ಸೀನುಗಳಲ್ಲಿ ಡ್ಯೂಪ್ ನಟನೆ ಮಾಡಿದ್ದ ಬಾಬ್ ಕ್ರಿಸ್ಟೋ ಈಗ ನಿಜವಾದ ಪಾತ್ರ ಮಾಡಲಿಕ್ಕೆ ಬಣ್ಣ ಹಚ್ಚಿದ್ದ. ಈ ರೀತಿಯಲ್ಲಿ ಬಾಲಿವುಡ್ ರಂಗಪ್ರವೇಶ ಮಾಡಿದ್ದ. ನಂತರ ಎರಡು ದಶಕಗಳ ಕಾಲ ನಿರಂತರವಾಗಿ ಬಾಲಿವುಡ್ಡಿನಲ್ಲಿ ಬಾಬ್ ಕ್ರಿಸ್ಟೋ ನಟಿಸಿದ. ಬೇರೆ ಬೇರೆ ಭಾಷೆಗಳ ಸಿನೆಮಾಗಳಲ್ಲೂ ನಟಿಸಿದ. ಯಾವದೇ ಸಿನೆಮಾಕ್ಕೆ ಗೋರಾ, ಪಾಶ್ಚಾತ್ಯ ಲುಕ್ಕಿರುವ ಖಳನಾಯಕ, ಖಳನಾಯಕನ ಜೋಡಿದಾರ ಬೇಕು ಅಂದರೆ ಬಾಬ್ ಕ್ರಿಸ್ಟೋನೇ ಬೆಸ್ಟ್ ಅನ್ನುವಷ್ಟರ ಮಟ್ಟಿಗೆ ಆಗಿಹೋಯಿತು.

ವಿದೇಶ ಬಿಟ್ಟು ಭಾರತಕ್ಕೆ ಬಂದು ನೆಲೆಸಿದ್ದರೂ ಭೋಗಕ್ಕೆ ಏನೂ ಕಮ್ಮಿಯಿರಲಿಲ್ಲ. ಬಾಲಿವುಡ್ಡಿನ ಹೈಫೈ ಸಮಾಜದಲ್ಲಿ ಗುಂಡು, ತುಂಡು, ಹಂಚಿ ತಿನ್ನುವದು, ಸಂಗಾತಿಗಳ ಬದಲಾವಣೆ ಎಲ್ಲ ರಾಜಾರೋಷವಾಗಿ ನಡೆಯುತ್ತಿದ್ದವು. ಥೇಟ್ ಎಲ್ಲ ವಿದೇಶಗಳಂತೆಯೇ. ಹಾಗಾಗಿ ಬಾಬ್ ಕ್ರಿಸ್ಟೋ ಸಹ ಭಾರತದಲ್ಲೂ ಆರಾಮಾಗೇ ಇದ್ದ. ಖಾನ್ ಸಹೋದರರ ಮನೆಯವನೇ ಆಗಿಹೋದ. ಫಿರೋಜ್, ಸಂಜಯ್, ಅಕ್ಬರ್ ಅಂತ ಮೂವರು ಖಾನ್ ಸೋದರರು ಬಾಲಿವುಡ್ಡಿನಲ್ಲಿ ತೊಡಗಿಸಿಕೊಂಡಿದ್ದರು. ಅವರ ಜೊತೆಗೆ ಬಾಬ್ ಕ್ರಿಸ್ಟೋ ಕೂಡ. ಖಾನುಗಳ ಸಿನೆಮಾ ಅಂದರೆ ಅದರಲ್ಲಿ ಬಾಬ್ ಕ್ರಿಸ್ಟೋ ಒಂದು ಪಾತ್ರ ಖಾಯಂ ಮಾಡಲಿಕ್ಕೇಬೇಕು.

ಟೈಮ್ ಪತ್ರಿಕೆಯ ಮುಖಪುಟದ ಮೇಲೆ ನೋಡಿದ್ದ ಪರ್ವೀನ್ ಬಾಬಿ ಇನ್ನೂ ನೆನಪಿದ್ದಳು. ಅಂತೂ ಇಂತೂ ಒಮ್ಮೆ ಯಾರೋ ಪರ್ವೀನ್ ಬಾಬಿಯನ್ನು ಬಾಬ್ ಕ್ರಿಸ್ಟೋಗೆ ಪರಿಚಯ ಮಾಡಿಕೊಟ್ಟರು. 'ಜನ್ಮ ಸಾರ್ಥಕವಾಯಿತು!' ಎಂದುಕೊಂಡ ಬಾಬ್ ಕ್ರಿಸ್ಟೋ. ಪತ್ರಿಕೆಯ ಮುಖಪುಟದ ಮೇಲೆ ಆಕೆಯನ್ನು ನೋಡಿ, ಅಷ್ಟೊಂದು ಪ್ರಭಾವಿತನಾಗಿ, ಜೀವನದಲ್ಲಿ ಒಮ್ಮೆಯಾದರೂ ಆಕೆಯನ್ನು ಭೆಟ್ಟಿ ಮಾಡಲೇಬೇಕು ಅಂತ ನಿರ್ಧಾರ ಮಾಡಿದ್ದ ಬಾಬ್ ಕ್ರಿಸ್ಟೋ ಕೂಡ ಪರ್ವೀನ್ ಬಾಬಿಯನ್ನು ಅಷ್ಟೇ ಇಂಪ್ರೆಸ್ ಮಾಡಿದ್ದ. 'ವಿವರವಾಗಿ ಮಾತಾಡೋಣ. ಮನೆಗೆ ಬನ್ನಿ,' ಅಂತ ಖಾಸಗಿ ಅಪಾಯಿಂಟ್ಮೆಂಟ್ ಬೇರೆ ಕೊಟ್ಟುಬಿಟ್ಟಿದ್ದಳಂತೆ ಅಂದಿನ ಟಾಪ್ ಹೀರೋಯಿನ್ ಪರ್ವೀನ್ ಬಾಬಿ. ಅಲ್ಲಿಗೆ ಆ ಸಂಬಂಧದ ಬಗ್ಗೆ ಮುಗುಮ್ಮಾಗಿ ಮಾತು ನಿಲ್ಲಿಸುತ್ತಾನೆ ಬಾಬ್ ಕ್ರಿಸ್ಟೋ. ಮತ್ತೆ ಹುಚ್ಚು ಉಲ್ಬಣಗೊಂಡ ಪರ್ವೀನ್ ಬಾಬಿ ೨೦೦೫ ರಲ್ಲೇ ಸತ್ತು ಬೇರೆ ಹೋದಳು. ಅಂತವಳ ಬಗ್ಗೆ ಜಾಸ್ತಿ ಬರೆದುಕೊಂಡು ಏನು ಉಪಯೋಗ ಅಂದುಕೊಂಡು ಅಷ್ಟಕ್ಕೇ ಬಿಟ್ಟಿರಬೇಕು.

ಸಂಜಯ್ ಖಾನ್ ಕುಟುಂಬದ ಒಬ್ಬ ಸದಸ್ಯನೇ ಆಗಿಹೋದ ಮೇಲೆ ನಡೆದ ಒಂದು ತಮಾಷೆಯ  ಘಟನೆಯನ್ನು ಬಾಬ್ ಕ್ರಿಸ್ಟೋ ಬರೆದುಕೊಂಡಿದ್ದಾನೆ. ಆಗಿದ್ದು ಇಷ್ಟು. ಖಾನನ ಯಾವದೋ ಸಿನೆಮಾದ ಚಿತ್ರೀಕರಣ ಸುಂದರ ದ್ವೀಪ ರಾಷ್ಟ್ರವಾದ ಮಾರಿಷಿಯಸ್ ನಲ್ಲಿ ನಡೆಯುತ್ತಿತ್ತು. ಅದಕ್ಕೆ ಸಂಜಯ್ ಖಾನ್ ಸಕುಟುಂಬ ಸಮೇತನಾಗಿ ಹೋಗಿದ್ದ. ಜೊತೆಗೆ ಬಾಬ್ ಕ್ರಿಸ್ಟೋ ಕೂಡ ಹೋಗಿದ್ದ.

ಒಂದು ದಿನ ಸಂಜಯ್ ಖಾನ್ ಮತ್ತು ಬಾಬ್ ಕ್ರಿಸ್ಟೋ ಬೀಚ್ ಸುತ್ತಾಡಿಕೊಂಡು ಬರೋಣ ಅಂತ ಹೊರಟರು. ಸಂಜಯ್ ಖಾನನ ಮಗ ಝಾಯೇದ್ ಖಾನ್ ಆಗಿನ್ನೂ ಎರಡು ಮೂರು ವರ್ಷದ ಸಣ್ಣ ಬಾಲಕ. ಈಗ ಸಿನೆಮಾ ಹೀರೋ ಆಗಿದ್ದಾನೆ ಬಿಡಿ. ಬಾಲಕ ಝಾಯೇದ್ ತಾನೂ ಕೂಡ ಬೀಚಿಗೆ ಬರುತ್ತೇನೆ ಅಂತ ಹಟ ಹಿಡಿದ. ಸರಿ ಅಂತ ಅವನನ್ನೂ ಕರೆದುಕೊಂಡೇ ಹೋದರು. ಹೋಗಿದ್ದು ಬೀಚಿಗೆ. ನೋಡಿದರೆ ಅದು ನಗ್ನ ಬೀಚಾಗಿರಬೇಕೇ! (nude beach)

'ಹೇಗೂ ಬೀಚಿಗೆ ಬಂದಾಗಿಬಿಟ್ಟಿದೆ. ಒಂದು ರೌಂಡ್ ಹಾಕಿಯೇ ಹೋಗೋಣ,' ಅಂತ ಬಾಬ್ ಕ್ರಿಸ್ಟೋ ಮತ್ತು ಸಂಜಯ್ ಖಾನ್ ಬೀಚಿನ ಗುಂಟ ನಡೆಯತೊಡಗಿದರು. ಜೊತೆಗೆ ಪುಟ್ಟಪುಟ್ಟ ಹೆಜ್ಜೆ ಹಾಕುತ್ತ ಸಣ್ಣ ಹುಡುಗ ಝಾಯೇದ್ ಖಾನ್ ಕೂಡ. ಮೈಲುಗಟ್ಟಲೆ ಉದ್ದಕ್ಕೆ ಪೂರ್ತಿ ನಗ್ನ ದೇಹಗಳು ಹೇಗೆ ಬೇಕೋ ಹಾಗೆ ಅಸಡಾ ಬಸಡಾ ಬಿದ್ದುಕೊಂಡು ಸೂರ್ಯ ಸ್ನಾನ ಮಾಡುತ್ತಿದ್ದವು. ಅವಕ್ಕೆ ಈಕಡೆಯ ಖಬರೇ ಇಲ್ಲ. ಆಗ ಒಂದು ಲಫಡಾ ಆಯಿತು.

ಝಾಯೇದ್ ಖಾನ್ ಇನ್ನೂ ತಾಯಿಯ ಕಂಕುಳ ಕೂಸು. ಸುತ್ತಮುತ್ತ ಸಂಪೂರ್ಣ ನಗ್ನರಾಗಿ ಮಲಗಿರುವ ಅನೇಕಾನೇಕ ಮಹಿಳೆಯರು. ಏನು ನೆನಪಾಯಿತೋ ಏನೋ ಸಣ್ಣ ಹುಡುಗನಿಗೆ. ಬಾಲ ಹೆಜ್ಜೆ ಹಾಕುತ್ತ ಆಕಡೆ ನಡದೇಬಿಟ್ಟ. ಇತ್ತ ಬೀಚನ್ನು ಜೊತೆಗೆ ಮತ್ತೂ ಏನೇನನ್ನೋ ಆಸ್ವಾದಿಸುತ್ತಿದ್ದ ಸಂಜಯ್ ಖಾನ್ ಮತ್ತು ಬಾಬ್ ಕ್ರಿಸ್ಟೋ ಪುಟ್ಟ ಝಾಯೇದ್ ಖಾನ್ ಎಸ್ಕೇಪ್ ಆಗಿದ್ದನ್ನು ಗಮನಿಸಲಿಲ್ಲ. ನಂತರ ಕೇಳಿಬಂದಿದ್ದು ಮಹಿಳೆಯೊಬ್ಬಳ ಭೀಕರ ಚೀತ್ಕಾರ. ಅದರ ಹಿಂದೆಯೇ ಘೊಳ್ಳ ಅನ್ನುವ ದೊಡ್ಡ ನಗೆ. ವಿಚಿತ್ರ. ಮೊದಲು ಚೀತ್ಕಾರ ನಂತರ ನಗೆ. ಏನಾಗಿತ್ತು?!

ಪುಟ್ಟ ಝಾಯೇದ್ ಖಾನ್ ಹೋಗಿ ನಿಂತಿದ್ದು ನಗ್ನ ಮಹಿಳೆಯರ ಮಧ್ಯೆ. ಅಷ್ಟೊಂದು ಜನ ನಗ್ನ ಮಹಿಳೆಯರು. ಅಷ್ಟೊಂದು ತೆರೆದೆದೆಯ ಮಹಿಳೆಯರನ್ನು ನೋಡಿದ ಚಿಕ್ಕ ಬಾಲಕನಿಗೆ ಏನು ಮೂಡು ಬಂತೋ ಏನೋ. ಎಲ್ಲಿ ಅಮ್ಮನ ಸ್ತನ ನೆನಪಾಗಿಬಿಟ್ಟಿತೋ ಏನೋ. ಹಸಿವಾಗಿಬಿಟ್ಟಿತೋ ಏನೋ. ಅಮ್ಮನ ಹಾಲು ಇನ್ನೂ ಬಿಟ್ಟಿರಲಿಲ್ಲವೋ ಏನೋ. ಒಟ್ಟಿನಲ್ಲಿ ಒಬ್ಬ ಮಹಿಳೆಯ ಸ್ತನಕ್ಕೆ ಕೈಹಾಕಿಯೇ ಬಿಟ್ಟಿದ್ದಾನೆ ಬಾಲಕ. ಮುಂದೇನು ಮಾಡುವನಿದ್ದನೋ ಗೊತ್ತಿಲ್ಲ. ಅಷ್ಟರಲ್ಲಿ ಆ ಮಹಿಳೆ ಶಾಕ್ ಹೊಡೆಸಿಕೊಂಡವರಂತೆ ಚೀಟಾರನೇ ಚೀರಿ ಎದ್ದುಕುಳಿತಿದ್ದಾಳೆ. ಎಲ್ಲ ಸೇಫ್ ಇದೆ ಅಂದುಕೊಂಡ ನಗ್ನ ಬೀಚಿನಲ್ಲಿ ಯಾರಾದರೂ ಮೈಮೇಲೆ ಕೈ ಮತ್ತೊಂದು ಹಾಕುವದು ಅಂದರೆ ಅದು ಸಣ್ಣ ಮಾತೇ? ಹಾಗೆಲ್ಲ ಹರ್ಗೀಸ್ ಆಗುವದಿಲ್ಲ ಅನ್ನುವ ಖಾತ್ರಿಯಲ್ಲಿಯೇ ಮಂದಿ ಅಲ್ಲಿಗೆ ಬಂದು 'ಭಂ ಭಂ ಭೋಲೆನಾಥ್' ಅಂತ ಬೆತ್ತಲಾಗಿ ಬೋರಲು ಬಿದ್ದಿರುತ್ತಾರೆ. ಹಾಗಿರುವಾಗ ಯಾರೋ ಹೋಗಿಹೋಗಿ ಮೊಲೆಗೇ ಕೈಹಾಕಿದರು ಅಂದ್ರೆ ಏನ್ರೀ!?

ಚೀಟಾರನೇ ಕಿರುಚಿದ ನಂತರ ಮಹಿಳೆ ಕಣ್ಣು ಬಿಟ್ಟು ನೋಡಿದರೆ ಮುಂದೆ ನಿಂತಿದೆ ಸುಂದರ ಬಾಲಕ. ಅದೆಷ್ಟು ಮುದ್ದುಮುದ್ದಾಗಿತ್ತೋ ಪುಟ್ಟ ಝಾಯೇದ್ ಖಾನ್. ಅದನ್ನು ನೋಡಿದ ಮಹಿಳೆಗೆ ಪ್ರೀತಿ ಉಕ್ಕಿ ಬಂದಿದೆ. ಮಗುವನ್ನು ಹತ್ತಿರ ಬರಸೆಳೆದುಕೊಂಡು, ಕೆನ್ನೆ ತಟ್ಟಿ, ಮುದ್ದು ಮಾಡಿ, 'ಏ! ಇಲ್ಲಿ ನೋಡಿ. ಇಲ್ಲೊಂದು ಮಂಗಣ್ಣ ಬಂದಿದೆ. ಬಂದು ತುಂಟ ಚೇಷ್ಟೆ ಮಾಡುತ್ತಿದೆ,' ಅಂತ ಡಂಗುರ ಹೊಡೆದಿದ್ದಾಳೆ. 'ಏನು ಬೇಕಾಗಿತ್ತು ಮೈ ಡಿಯರ್ ಮಂಗಣ್ಣ?!' ಅಂತ ಬೇರೆ ಕೇಳಿ ಮುದ್ದು ಮಾಡಿಬಿಟ್ಟಿದ್ದಾಳೆ. ಆಗ ಝಾಯೇದ್ ಖಾನನ ಹಾಲತ್ತೇನಾಗಿತ್ತೋ!? ಅದರ ಬಗ್ಗೆ ಬಾಬ್ ಕ್ರಿಸ್ಟೋ ಜಾಸ್ತಿ ಬರೆದಿಲ್ಲ. ಅಷ್ಟು ಸಣ್ಣ ಹುಡುಗ ಒಮ್ಮೆಲೇ ಅಷ್ಟೊಂದು ನಗ್ನ ಮಹಿಳೆಯರ ಮಧ್ಯೆ. ಅದು height of confusion ಬಿಡಿ.

ಇಷ್ಟೆಲ್ಲ ಗದ್ದಲವಾಗುವ ಹೊತ್ತಿಗೆ ಖಾನ್, ಕ್ರಿಸ್ಟೋ ಮಗುವನ್ನು ಹುಡುಕುತ್ತ ಬಂದಿದ್ದಾರೆ. ಅಲ್ಲೇ ಸಿಕ್ಕದ್ದಾನೆ ಮಗ. ಆದ ಅಚಾತುರ್ಯಕ್ಕೆ ಫಾರ್ಮಾಲಿಟಿಗೆ ಅಂತ ಕ್ಷಮೆ ಕೇಳಿದ್ದಾರೆ. ಮುದ್ದು ಮಂಗಣ್ಣನ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಬಂದಿದ್ದ ನಗ್ನ ಮಹಿಳೆಯರು ಮಾತ್ರ ಅದೆಲ್ಲ ಕ್ಯಾರೆ ಮಾಡಿಲ್ಲ. ಪುಟ್ಟ ಹುಡುಗನ ಕೆನ್ನೆ ಗಿಂಡಿ, ಅಪ್ಪಿ ಮುದ್ದಾಡಿ ಪೋಷಕರ ಜೊತೆ ಕಳಿಸಿಕೊಟ್ಟಿದ್ದಾರೆ. ಮೂವತ್ತರ ಹರೆಯದ ಝಾಯೇದ್ ಖಾನನಿಗೆ ಈಗ ಇದೆಲ್ಲ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವನ ಪ್ರೀತಿಯ ಬಾಬ್ ಅಂಕಲ್ ಮಾತ್ರ ತಮ್ಮ ಜೀವನಚರಿತ್ರೆಯಲ್ಲಿ ಬಾಲವಿಲ್ಲದ ಬಾಲನ ಬಾಲಲೀಲೆಗಳನ್ನು ದಾಖಲಿಸಿದ್ದಾರೆ.

ಝಾಯೇದ್ ಖಾನ್

ಹೀಗೆ ಬಾಲಿವುಡ್ಡಿನಲ್ಲಿ ವಿಶಿಷ್ಟ ಖಳನಾಯಕ ಅಂತ ಸೆಟಲ್ ಆದ ಬಾಬ್ ಕ್ರಿಸ್ಟೋ ಯೋಗದಿಂದ ಭಾಳ ಪ್ರಭಾವಿತನಾದ. ಯೋಗ ಕಲಿಯಲಾರಂಭಿಸಿದ. ಜೀವನಶೈಲಿ ತಂತಾನೇ ಬದಲಾಯಿತು. ಮಾಂಸಾಹಾರ ಬಿಟ್ಟುಹೋಯಿತು. ಎಣ್ಣೆ ಬಿಟ್ಟ. ಹಾಂಗ್ ಕಾಂಗಿನಲ್ಲಿದ್ದಾಗ ನೀರೇ ಕುಡಿಯುತ್ತಿರಲಿಲ್ಲವಂತೆ. ಸದಾ ಬಿಯರ್ ಕುಡಿಯುವ ಬೀರಬಲ್. ಈಗ ಎಲ್ಲ ಬಿಟ್ಟು, ಪೂರ್ತಿ ಸೀದಾಸಾದಾ ಜೀವನಶೈಲಿ. ಎಲ್ಲ ಯೋಗಕ್ಕಾಗಿ. ಯೋಗದಲ್ಲಿ ಪ್ರಾವಿಣ್ಯತೆ ಕೂಡ ಸಾಧಿಸಿದ.

ಅದೇ ಹೊತ್ತಿಗೆ ಅವನ ನಸೀಬದಲ್ಲಿ ಜೀವನಸಂಗಾತಿ ಯೋಗ ಮತ್ತೊಮ್ಮೆ ಇತ್ತೇನೋ. ಮುಂಬೈ ಬೀಚ್ ಮೇಲೆ ಮುಂಜಾನೆ ವಾಕಿಗೆ ಹೋದಾಗ ಒಬ್ಬ ಡೈವೋರ್ಸಿ ಮಹಿಳೆ ಅಚಾನಕ್ ಆಗಿ ಸಿಕ್ಕಳು. ಅದೇ ಸ್ನೇಹವಾಗಿ ಹಾಗೆಯೇ ಮುಂದುವರೆದು ಬಾಬ್ ಆಕೆಯನ್ನು ವಿವಾಹವಾಗಿ ಒಂದೋ ಎರಡೋ ಮಕ್ಕಳನ್ನು ಕೂಡ ಮಾಡಿಕೊಂಡರು. ಎಷ್ಟೋ ವರ್ಷಗಳ ಹಿಂದೆ ತೀರಿಹೋಗಿದ್ದ ಆಸ್ಟ್ರೇಲಿಯನ್ ಮೊದಲ ಪತ್ನಿಯ ಮಕ್ಕಳಿಗೇ ಮಕ್ಕಳಾಗಿದ್ದವು. ಅಪ್ಪ, ಅಜ್ಜ ಎಲ್ಲ ಒಮ್ಮೆಲೇ ಆಗುವ ಯೋಗ ಬಾಬ್ ಕ್ರಿಸ್ಟೋಗೆ!

ಬಾಲಿವುಡ್ ಸಹವಾಸ ಕಮ್ಮಿಯಾದ ಮೇಲೆ ಮೂಲತಃ ಬೆಂಗಳೂರಿನವರಾದ ಸಂಜಯ್ ಖಾನ್  ಮೇಲೆ ಬೆಂಗಳೂರಿಗೆ ಬಂದು ಒಂದು ದೊಡ್ಡ ರೆಸಾರ್ಟ್ ಮಾಡಿದರು. ಖಾನ್ ಅವರನ್ನು ಹಿಂಬಾಲಿಸಿ ಬಾಬ್ ಕ್ರಿಸ್ಟೋ ಕೂಡ ಬಂದ. ಖಾನರ ರೆಸಾರ್ಟಿನಲ್ಲಿ ಯೋಗ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದ. ಬಾಲಿವುಡ್ಡಿನ ನಂಟು ಮುಗಿದಿತ್ತು.

ಸಾಕಷ್ಟು ವಯಸ್ಸೂ ಆಗಿತ್ತು. ಎಲ್ಲೋ ಗಾಯ ಕೂಡ ಆಯಿತು. ಹಾಗಾಗಿ ರೆಸಾರ್ಟಿನಲ್ಲಿ ಯೋಗ ಶಿಕ್ಷಕ ಅಂತ ಕೆಲಸ ಮುಂದುವರಿಸಲಾಗಲಿಲ್ಲ. ಅದೇನು ಕರ್ಮವೋ ಗೊತ್ತಿಲ್ಲ. ಸರಿಸುಮಾರು ಮೂವತ್ತು ವರ್ಷಗಳಿಂದ ಜೀವದ ಗೆಳೆಯರಾಗಿದ್ದ ಬಾಬ್ ಕ್ರಿಸ್ಟೋ ಮತ್ತೆ ಸಂಜಯ್ ಖಾನ್ ನಡುವೆ ಏನೋ ಸಣ್ಣ ಪ್ರಮಾಣದ ಮನಸ್ತಾಪ ಬೇರೆ ಆಯಿತು. ಅದರ ಬಗ್ಗೆ ಬಾಬ್ ಜಾಸ್ತಿ ಬರೆದುಕೊಂಡಿಲ್ಲ. ಗೆಳೆಯ ಸಂಜಯ್ ಖಾನ್ ಬಗ್ಗೆ ವಿಷ ಕಾರಿಲ್ಲ. ತೀವ್ರ ವಿಷಾದ ಮಾತ್ರ ಇದೆ. ಮೂವತ್ತು ವರ್ಷ ಜತನದಿಂದ ಕಾಪಾಡಿಕೊಂಡುಬಂದಿದ್ದ ಗೆಳೆತನ ಹಾಳಾಗಿಹೋಗಿದ್ದರ ಬಗ್ಗೆ ಸಾಂದ್ರ ವಿಷಾದ.

ಗೆಳೆಯನ ರೆಸಾರ್ಟ್ ಬಿಟ್ಟ ಬಾಬ್ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇದ್ದ. ನೋವುಗಳಿಗೆ ಚಿಕಿತ್ಸೆ ನಡೆಯುತ್ತಿತ್ತು. ಪತ್ನಿ, ಮಕ್ಕಳು ಮುಂಬೈನಲ್ಲೇ ಇದ್ದರು. ಆಗಾಗ ಬಂದು ಹೋಗುತ್ತಿದ್ದರು. ೨೦೧೧ ರಲ್ಲಿ ತಮ್ಮ ಎಪ್ಪತ್ನಾಲ್ಕನೆಯ ವಯಸ್ಸಿನಲ್ಲಿ ಬಾಬ್ ಕ್ರಿಸ್ಟೋ ತೀರಿಕೊಂಡ.

ಸಾಯುವ ಮೊದಲೇ ಜೀವನ ಚರಿತ್ರೆ ಬರೆದಿಟ್ಟಿದ್ದನಂತೆ. ಬಾಲಿವುಡ್ಡಿನ ಮತ್ತೊಬ್ಬ ಗೋರಾ ನಟ ಟಾಮ್ ಆಲ್ಟರ್ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಬೇರೆ ಗೆಳೆಯರಾರೋ ಪ್ರಕಟಿಸಿದ್ದಾರೆ. ಪುಸ್ತಕದ ಹೆಸರು - Flashback: My Life and Times in Bollywood and Beyond.

ಮುನ್ನುಡಿ ಬರೆದ ಟಾಮ್ ಆಲ್ಟರ್ ಮುನ್ನುಡಿಯ ಕೊನೆಯಲ್ಲಿ ಬರೆದ ಮಾತುಗಳು ಮನಮುಟ್ಟುವಂತಿವೆ.

Bob Christo’s book is as amazing as the man—as complex, as straightforward, as true—and when you read it, you can remember him from one of his wonderful roles, or you can discover him as the mystery he was …

Roberto, I tip my hat and my heart to you … You always used to growl, ‘Tom, why don’t they give me romantic roles?’ The truth is, my friend, your own life was the most romantic role of all.

Tom Alter
2011 

'ಯಾರ ಬಾಳೂ ನಿಕೃಷ್ಟವಲ್ಲ. ಬದುಕಲಾರದಷ್ಟು ಕಷ್ಟವೂ ಅಲ್ಲ.' ಕನ್ನಡದ ಖ್ಯಾತ ಬರಹಗಾರ ಬೀಚಿ ತಮ್ಮ ಆತ್ಮಚರಿತೆ 'ಭಯಾಗ್ರಫಿ'ಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ ಅಂತ ಯಾರೋ ಉಲ್ಲೇಖಿಸಿದ ನೆನಪು. ಬೀಚಿಯವರ ಈ ಮಾತುಗಳು ಅದ್ಭುತ. ಬಾಬ್ ಕ್ರಿಸ್ಟೋ ಕಥನ ಓದಿದಾಗ ಅವೇ ಮಾತುಗಳು ನೆನಪಿಗೆ ಬಂದವು. ಈ ಚಿಕ್ಕ ಲೇಖನ ಆತನ ಆತ್ಮಕಥೆಗೆ ನ್ಯಾಯ ದೊರಕಿಸಲು ಸಾಧ್ಯವಿಲ್ಲ ಬಿಡಿ. ಅದಕ್ಕಾಗಿ ನೀವು ಆ ಪುಸ್ತಕವನ್ನೇ ಓದಬೇಕು.

ಆತ್ಮಚರಿತೆ ಬರೆದುಕೊಂಡವರು ಎಷ್ಟು ನಿಜ, ಎಷ್ಟು ಸುಳ್ಳು ಬರೆದುಕೊಂಡಿರುತ್ತಾರೋ ಅನ್ನುವ ಸಿನಿಕತೆ ಬೇಡ. ಹೇಗೇ ಬರೆದುಕೊಂಡಿದ್ದರೂ ಎಲ್ಲರ ಬಾಳಿನಿಂದ, ಎಲ್ಲರ ಜೀವನಾನುಭವಗಳಿಂದ ಏನನ್ನಾದರೂ ಕಲಿಯಬಹುದು. ಅದು ಅವರ ಆತ್ಮಚರಿತೆ ಓದುತ್ತಿರುವಾಗ ತಿಳಿಯಲಿಕ್ಕಿಲ್ಲ. ಆದರೆ ಎಂದೋ ಒಂದು ದಿನ ಏನೋ ಕ್ಲಿಕ್ ಆದಾಗ ಒಂದು 'ಆಹಾ!' ಮೊಮೆಂಟ್ (epiphany) ಬರಬಹುದು. ಅದೇ ಜೀವನದ ಮತ್ತು ಜೀವನಚರಿತೆಗಳ ಸ್ಪೆಷಾಲಿಟಿ.

6 comments:

Nagendra Beladakere said...

Excellent rendition of a flamboyant personality!I knew Bob Christo as actor and all that, but certainly not his life; or his death. Vietnam war did change many personalities in the countries that got dragged into this war. One of my best mates here is a Vietnam war veteran who used to be at the front ( as he shorter, he was always sent in the front of the pack in the trenches) and get to hear many stories of him and his mates. Someone like you would have weaved many stories! Thanks for the interesting biography.

Mahesh Hegade said...

Thank you very much, Nagendra.

sunaath said...

ಬಾಳನ್ನೇ ಒಂದು ಸಿನಿಮಾದಂತೆ ಬದುಕಿದ ಬಾ^ಬ್ ಕ್ರಿಸ್ತೋನ ಬಗೆಗೆ ಹೃದಯಂಗಮ ಲೇಖನ ಬರೆದಿದ್ದೀರಿ. ಧನ್ಯವಾದಗಳು.

Mahesh Hegade said...

Thank you very much, Sunaath Sir.

Kushi said...

Nice write up Mahesh sir....thank you.

Mahesh Hegade said...

Thank you very much, Kushi N.