Thursday, October 15, 2015

ರಿತ್ತಿಯವರಿಗೆ ನಾಡೋಜ ಪ್ರಶಸ್ತಿ

ಡಾ. ಶ್ರೀನಿವಾಸ ರಿತ್ತಿ. ನಮ್ಮ ಧಾರವಾಡದವರು. ಈ ವರ್ಷದ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿ ವಿಜೇತರಲ್ಲಿ ಒಬ್ಬರು. ಧಾರವಾಡದಲ್ಲಿರುವ ನಮ್ಮ ಕುಟುಂಬಕ್ಕೆ ಪರಿಚಿತರು, ಆತ್ಮೀಯರೂ ಆಗಿರುವದು ಇನ್ನೂ ಸಂತಸದ ವಿಷಯ. ಕರ್ನಾಟಕ ವಿಶ್ವವಿದ್ಯಾಲಯದ ಕೆಳಗೆ ತಗ್ಗಿನಲ್ಲಿರುವ ನವೋದಯ ನಗರದ ತಮ್ಮ ಮನೆಯಲ್ಲಿ ಕೂತು ತಣ್ಣಗೆ ಸಂಶೋಧನೆ ಮಾಡಿಕೊಂಡಿದ್ದರು. ಅದಕ್ಕೆ ಮೊದಲು ಕವಿವಿಯ ಇತಿಹಾಸ ವಿಭಾಗದಲ್ಲಿ ಮಾಸ್ತರಿಕೆ ಮಾಡಿಕೊಂಡಿದ್ದರು ಅಂತ ನೆನಪು.

ಆಹಾ! ರಿತ್ತಿಯವರ ಮನೆಯಿದ್ದ ಆ ನವೋದಯ ನಗರದ ಮೂಲೆ ಅಂದರೆ ಏನ್ರೀ ಅದು. ಖತರ್ನಾಕ್! ಅಲ್ಲೇ ಪಕ್ಕದಲ್ಲಿ ಮಹಾ ಇತಿಹಾಸ ವಿದ್ವಾನ ಡಾ. ದೀಕ್ಷಿತ್ ಇದ್ದರು. ಪಕ್ಕದಲ್ಲೇ ತತ್ವಜ್ಞಾನದ ಪ್ರೊಫೆಸರ್ ದಂಪತಿಗಳಾದ ಶಾ ಇದ್ದರು. ನಮ್ಮ ಕುಟುಂಬದ ಡಾಕ್ಟರ್ ಆದ ಡಾ. ಧಡೂತಿ ಕೂಡ ಇದ್ದರು. ಹೆಸರಲ್ಲಿ ಮಾತ್ರ ಧಡೂತಿ. ಉಳಿದೆಲ್ಲದರಲ್ಲಿ ಅವರಷ್ಟು ಮೃದು ವ್ಯಕ್ತಿತ್ವದ ಮತ್ತೊಬ್ಬರನ್ನು ನೋಡಿಲ್ಲ. ಅಲ್ಲೇ ಮಧ್ಯದಲ್ಲಿ ರಿತ್ತಿ ಪ್ರೊಫೆಸರ್ ಸಾಹೇಬರ ಮನೆ. ಪಕ್ಕದಲ್ಲೇ ಆಕಾಲದ ತುಂಬಾ dashing couple / ಸುಂದರ ದಂಪತಿಗಳಾಗಿದ್ದ ಟೆಂಗಿನಕಾಯಿ ಮೇಡಂ & ಪ್ರೊಫೆಸರ್ ಮನೆ ಇತ್ತೇ? ಹೌದು ಅಂತ ನೆನಪು. ಕನ್ನಡದ ಅತಿ ಹಿರಿಯ ವಿಮರ್ಶಕ ಜಿ.ಎಸ್. ಅಮೂರರು ಸಹ ಈಗ ಅಲ್ಲೇ ಇದ್ದಾರೆ. 

ಯಾವಾಗಲೋ ಒಮ್ಮೆ ಸಿರ್ಸಿ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಎಲ್. ಟಿ. ಶರ್ಮಾ ಧಾರವಾಡಕ್ಕೆ ಬಂದಾಗ ಅವರನ್ನು ಭೆಟ್ಟಿಯಾಗಲು ಹೋಗಿದ್ದ ತಂದೆಯವರೊಡನೆ ರಿತ್ತಿಯವರ ಮನೆಗೆ ಹೋಗಿದ್ದು ನೆನಪು. ಕೆಲವೇ ಕ್ಷಣಗಳು ಅಷ್ಟೇ. ೧೯೮೪-೮೫ ಇರಬಹದು. ಶರ್ಮಾ ರಿತ್ತಿಯವರ ಮಿತ್ರರು. ಧಾರವಾಡಕ್ಕೆ ಬಂದಾಗೆಲ್ಲ ಅಲ್ಲೇ ತಂಗುತ್ತಿದ್ದರು. ಅದೇ ಶರ್ಮಾ ಮುಂದೆ ಮಾಜಿ ಮುಖ್ಯಮಂತ್ರಿ ಗುಂಡೂರಾಯರ ಸಹಾಯಕರಾಗಿದ್ದರು.

ಒಟ್ಟಿನಲ್ಲಿ ಆ ನವೋದಯ ನಗರದ ಆ ಮೂಲೆ ಅಷ್ಟು ಆತ್ಮೀಯ ನಮಗೆ.

ಪ್ರಶಸ್ತಿ ಬಂದಿದ್ದು ರಿತ್ತಿಯವರಿಗೆ. ನವೋದಯ ನಗರದ ನೆನಪುಗಳು ತಾಜಾ ಆಗಿದ್ದು ನಮಗೆ.

ಈಗ ಮಾತ್ರ ಸ್ವಲ್ಪ ದಿವಸಗಳ ಹಿಂದೆ ಧಾರವಾಡದಲ್ಲಿರುವ ಅಮ್ಮ ಹೇಳಿದ್ದಳು. 'ಏ, ನಮ್ಮ ರಿತ್ತಿಯವರಿಗೆ ಸಿರ್ಸಿ ಒಳಗ ಒಂದು ಪ್ರಶಸ್ತಿ ಕೊಡೋ ಸಮಾರಂಭ ಇತ್ತು. ಅವರ ಕಾರಿನ್ಯಾಗೇ ಹೋಗಿ ಬಂದೆ ನೋಡು.' ಸರಿ. ರಿತ್ತಿಯವರಿಗೆ ಸಿರ್ಸಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ. ಅದೇ ನೆವದಲ್ಲಿ, ಕಾರಣಕ್ಕೆ ಅಮ್ಮನಿಗೆ ತವರು ಮನೆ ಟ್ರಿಪ್, ಅದೇ ರಿತ್ತಿಯವರ ಕಾರಿನಲ್ಲಿ!

ಮತ್ತೊಮ್ಮೆ ಅಭಿನಂದನೆಗಳು ಸರ್!

2 comments:

sunaath said...

ರಿತ್ತಿಯವರು ಪ್ರಶಸ್ತಿಗೆ ತುಂಬ ಅರ್ಹರು. ಇತರ ಕೆಲವು ‘ಪ್ರಶಸ್ತಿತ’ರ ನಡುವೆ ಇವರನ್ನು ನೋಡಿದಾಗ ‘ಕಾಕಮಂಡಲಿಯೊಳಗೆ ರಾಜಹಂಸನ ತರಹ’ ಎಂದು ಅನಿಸುವುದು.

Mahesh Hegade said...

ಧನ್ಯವಾದ ಸುನಾಥ್ ಸರ್.