Sunday, November 22, 2015

ಆಸ್ತಿಕತೆ, ನಾಸ್ತಿಕತೆ...

ಅದೊಂದು ದಿನ ಹೇರ್ ಕಟಿಂಗ್ ಮಾಡಿಸಲು ಹೋಗಿದ್ದೆ. ಕತ್ತರಿಯಾಡಿಸಲು ಶುರುಮಾಡಿದ ಕ್ಷೌರಿಕ ಜೊತೆಗೆ ಮಾತು ಶುರುಹಚ್ಚಿಕೊಂಡ. ನಾನು ಜಾಸ್ತಿ ಮಾತಾಡಲಿಲ್ಲ. ಮೊದಲೇ ಆದಿಮಾನವನ ಲುಕ್ ಇದೆ. ಜಾಸ್ತಿ ಮಾತಾಡುತ್ತ ಮಾತಾಡುತ್ತ ಎಲ್ಲಿಯಾದರೂ ಈ ಪುಣ್ಯಾತ್ಮ ಮಂಗ್ಯಾ ಕಂಡಂಗೆ ಕಾಣುವ ಹಾಗೆ ಕಟಿಂಗ್ ಮಾಡಿಬಿಟ್ಟಾನು ಅಂತ ಆತಂಕ. ಅದಕ್ಕೇ ಸುಮ್ಮನೆ ಅವನ ಮಾತುಗಳನ್ನು ಕೇಳುತ್ತ ತಲೆ ತಗ್ಗಿಸಿ ಕೂತಿದ್ದೆ. ಯಾವದೇ ಭೇದವಿಲ್ಲದೆ ಎಲ್ಲರೂ ತಲೆ ತಗ್ಗಿಸುವದು ಕ್ಷೌರಿಕನ ಮುಂದೆಯೇ ತಾನೇ?

ಕ್ಷೌರಿಕನ ಮಾತು ದೇವರು ದಿಂಡರ ಬಗ್ಗೆ ಹೊರಳಿತು. 'ದೇವರೂ ಇಲ್ಲ. ದಿಂಡರೂ ಇಲ್ಲ. ಎಲ್ಲ ಬೊಗಳೆ!' ಅಂದುಬಿಟ್ಟ. ನಾನೇನಾದರೂ ಹೇಳಬಹುದೇನೋ ಅಂತ ನೋಡಿದ. ಹೇಳಲಿಕ್ಕೆ ಬಹಳವಿತ್ತು. ಆದರೆ ಈ ಪುಣ್ಯಾತ್ಮ ಮೊದಲು ಕೆಲಸ ಮುಗಿಸಲಿ ಅಂತ ಸುಮ್ಮನೆ ಕೂತೆ. ಅವನಿಗೆ ಸ್ವಲ್ಪ ನಿರಾಶೆಯಾಗಿರಬೇಕು. ಅದರೂ ತನ್ನ ನಾಸ್ತಿಕವಾದದ ಇನ್ನಿತರ ವಿಷಯಗಳ ಬಗ್ಗೆ ಕೊರೆಯುತ್ತಲೇ ಇದ್ದ.

ಕಟಿಂಗ್ ಮುಗಿಯಿತು. ಎದ್ದು, ರೊಕ್ಕ ಕೊಟ್ಟು ಹೊರಗೆ ಬಂದೆ. ರಸ್ತೆಗೆ ಬಂದು ನಿಂತೆ. ಆಚೀಚೆ ನೋಡಿದೆ. ಏನೋ ಹೊಳೆಯಿತು. ಮತ್ತೆ ಕ್ಷೌರಿಕನ ಅಂಗಡಿ ಹೊಕ್ಕಿಬಿಟ್ಟೆ.

'ಏನು ಸಾರ್? ವಾಪಸ್ ಬಂದ್ರೀ?' ಅಂದ ಕ್ಷೌರಿಕ.

'ನಿನ್ನ ಅಂಗಡಿಯಲ್ಲಿ ಕ್ಷೌರಿಕರೇ ಇಲ್ಲ! ನಿನ್ನ ಅಂಗಡಿ ಒಂದೇ ಏನು, ಇಡೀ ಜಗತ್ತಿನಲ್ಲೇ ಕ್ಷೌರಿಕರು ಇಲ್ಲವೇ ಇಲ್ಲ!' ಅಂದುಬಿಟ್ಟೆ.

'ಏನಂತ ಮಾತಾಡ್ತೀರಿ? ಈಗ ತಾನೇ ನಿಮಗೇ ಕಟಿಂಗ್ ಮಾಡಿದ್ದೇನಲ್ಲ ಸ್ವಾಮೀ!? ನಾನು ಕ್ಷೌರಿಕನಲ್ಲವೇ?' ಅಂತ ಆಕ್ಷೇಪಿಸಿದ.

'ಇರಬಹುದು. ಆದರೂ ಯಾಕೋ ಸಂಶಯ,' ಅಂದೆ.

'ಹ್ಯಾಂ!?' ಅನ್ನುವಂತೆ ನೋಡಿದ ಕ್ಷೌರಿಕ. ಫುಲ್ ಪ್ರಶ್ನಾರ್ಥಕ ಚಿನ್ಹೆ.

'ಸ್ವಲ್ಪ ಹೊರಗೆ ಬನ್ನಿ. ಒಂದು ನಿಮಿಷ,' ಅಂದೆ.

ಕೆತ್ತುತ್ತಿದ್ದ ಬೋಳನ್ನು ಅರ್ಧಕ್ಕೇ ಬಿಟ್ಟು ಬಂದ. ಬರುತ್ತಿರಲಿಲ್ಲವೇನೋ ಆದರೆ ನಾನು ಚಾಲೆಂಜ್ ಹಾಕಿಬಿಟ್ಟಿದ್ದೇನಲ್ಲ. ಇಡೀ ಜಗತ್ತಿನಲ್ಲಿ ಕ್ಷೌರಿಕರೇ ಇಲ್ಲ ಅಂತ. ಹಾಗಾಗಿ ಗಿರಾಕಿಯನ್ನು ಬಿಟ್ಟು, ಎರಡು ಹೆಜ್ಜೆ ಹಾಕಿ, ಹೊರಗೆ ಬಂದ.

'ಅಲ್ಲಿ ನೋಡು. ಓ, ಇಲ್ಲಿಯೂ ನೋಡು. ಎಲ್ಲಿ ನೋಡಿದರೂ ಉದ್ದುದ್ದವಾಗಿ, ಅಸಡಾ ಬಸಡಾ ಕೂದಲು ಬಿಟ್ಟುಕೊಂಡು ಓಡಾಡುತ್ತಿರುವ ಹಿಪ್ಪಿ ತರಹದ ಜನರೇ ಎಲ್ಲ ಕಡೆ ಕಾಣುತ್ತಿದ್ದಾರೆ. ಯಾರಿಗೂ ಕಳೆದ ಕೆಲವು ತಿಂಗಳಲ್ಲಿ ಕ್ಷೌರವಾದ ಲಕ್ಷಣಗಳಿಲ್ಲ. ನಿಮ್ಮ ಕ್ಷೌರದ ಅಂಗಡಿಯಿರುವ ಬೀದಿಯಲ್ಲಿಯೇ ಇಷ್ಟೊಂದು ಕ್ಷೌರವಿಲ್ಲದ ಜನ ಓಡಾಡಿಕೊಂಡಿದ್ದಾರೆ ಅಂದ ಮೇಲೆ ನಿಮ್ಮ ಅಂಗಡಿಯಲ್ಲಿ ಕ್ಷೌರಿಕ ಇಲ್ಲ ಅಂತಲೇ ಅರ್ಥ. ಅಲ್ಲವೇ?' ಅಂತ ಕೇಳಿದೆ.

ಹಿಪ್ಪಿ (ಸಾಂದರ್ಭಿಕ ಚಿತ್ರ)

ಕ್ಷೌರಿಕ ನನ್ನನ್ನು ಮೇಲಿಂದ ಕೆಳವರೆಗೆ ನೋಡಿದ. ಯಾರೋ ಅಂಡೆ ಪಿರ್ಕಿ ಪಾರ್ಟಿ ಅಂದುಕೊಂಡಿರಬೇಕು. ಆ ಲುಕ್ ಕೊಟ್ಟ.

'ರೀ, ಸ್ವಾಮೀ! ನಮ್ಮ ಅಂಗಡಿಯೊಳಗೆ ಬಂದು, ನನ್ನ ಮುಂದೆ ತಲೆ ತಗ್ಗಿಸಿ ಕೂತರೆ, ಕ್ಷೌರ ಮಾಡಬಲ್ಲೆ. ಅದು ಬಿಟ್ಟು ನಮ್ಮ ಅಂಗಡಿ ಒಳಗೆ ಬರದೇ ರಸ್ತೆಯಲ್ಲಿ ಓಡಾಡಿಕೊಂಡಿದ್ದರೆ ನಾವೇನು ಮಾಡೋಣ? ಹಾಗಂತ ಕ್ಷೌರಿಕರೇ ಇಲ್ಲ ಅಂತ ಅರ್ಥವೇ?' ಅಂತ ಸಣ್ಣಗೆ ಅಬ್ಬರಿಸಿದ.

'ದೇವರು ಇಲ್ಲ ಅಂದೆ ನೋಡು ಅದಕ್ಕೆ ಹೇಳಿದೆ. ದೇವರೂ ಹಾಗೆಯೇ. ಆತನಲ್ಲಿ ಹೋಗಿ, ತಲೆ ಬಗ್ಗಿಸಿ, ಪ್ರಾರ್ಥಿಸಿದರೆ ಮಾತ್ರ ಕೃಪೆ ತೋರಬಲ್ಲ. ಹಾಗೆ ಮಾಡುವದರ ಬದಲಾಗಿ ಹೊರಗೆ ಓಡಾಡಿಕೊಂಡಿದ್ದರೆ ದೇವರಾದರೂ ಏನು ಮಾಡಿಯಾನು? ಅಷ್ಟೇ ವಿನಹ ದೇವರು ಇಲ್ಲ ಎಂದಲ್ಲ,' ಅಂದೆ. ಆತನ ಮರುಮಾತಿಗೆ ಕಾಯಲಿಲ್ಲ. ಹೊರಟುಬಂದೆ.

ತಿರುಗಿ ಮುಖ ನೋಡಿದೆ. ಗರಬಡಿದವನಂತೆ ನಿಂತಿದ್ದ. ದೇವರ ದರ್ಶನವಾಯಿತೋ ದೆವ್ವದ ದರ್ಶನವಾಯಿತೋ ಗೊತ್ತಿಲ್ಲ. ಆತನಿಗೆ ತನ್ನ ನಾಸ್ತಿಕವಾದದ ಬಗ್ಗೆ ಒಂದು ತರಹದ ಸಂಶಯ ಮೂಡಿದ್ದು ಮಾತ್ರ ನಿಜ.

***

Personal Excellence Through The Bhagavad Gita by Swami Sukhabodhananda - ಪುಸ್ತಕದಲ್ಲಿ ಸಿಕ್ಕಿದ್ದು.

of course, ಈ ಕಥೆ ತುಂಬಾ ಬಾಲಿಶ (childish) ಅನ್ನಿಸಬಹುದು ಬಿಡಿ. ಆದರೂ ಇಷ್ಟವಾಯಿತು. ಒಂದು ಕಾಲದಲ್ಲಿ ನಾವೂ ಹೀಗೆಯೇ ಯಬಡರ ಹಾಗೆ (ವಿ)ವಾದ ಮಾಡುತ್ತಿದ್ದೆವು ನೋಡಿ. ಆ ಕಾರಣಕ್ಕೆ ಇಷ್ಟವಾಗಿರಬಹುದು.

ತಲೆ ತಗ್ಗಿಸಿ ಮುಂದೆ ಕೂತು ಪ್ರಾರ್ಥಿಸಿದವರನ್ನು ಮಾತ್ರ ಆ ಭಗವಂತ ಸಲಹುತ್ತಾನೆ. ಇದನ್ನು ನಂಬಲೇಬೇಕು ಅಂತೇನೂ ಇಲ್ಲ. ಆದರೆ ಹಾಗೆ ಪ್ರಾರ್ಥಿಸುವಾಗ ನಂಬಿಕೆ, ಶ್ರದ್ಧೆ ಅನ್ನುವ ಎರಡು elements ಬಹಳ ಮುಖ್ಯ. ಅವುಗಳ ಶಕ್ತಿ ಅದೆಷ್ಟಿರುತ್ತದೆ ಅಂದರೆ ಆಶಿಸಿದ್ದು, ಕೇಳಿದ್ದು ಸಿಕ್ಕೇ ಸಿಗುತ್ತದೆ. ಅದನ್ನು ದೇವರ ಅನುಗ್ರಹ ಅಂತ ನೀವು ಭಾವಿಸುತ್ತೀರಿ. ನಿಮ್ಮದೇ ಶ್ರದ್ಧೆ, ನಿಮ್ಮದೇ ನಂಬಿಕೆ ನಿಮ್ಮಲ್ಲಿ ಚೈತನ್ಯವನ್ನು ಉಕ್ಕಿಸಿ ಸಾಧನೆಯಾಗಿರುತ್ತದೆ. ಅಥವಾ ಕಷ್ಟ ಪರಿಹಾರವಾಗಿರುತ್ತದೆ. underlying principle ಅಂದರೆ ಅದೇ ಶ್ರದ್ಧೆ. ಅಂತಹದೊಂದು ಅಚಲ ಶ್ರದ್ಧೆ (unshakable faith) ಯಾವದರಲ್ಲಿ ಇದ್ದರೂ ಸರಿ. ಕೆಲವರಿಗೆ ದೇವರ ಮೇಲೆ ನಂಬಿಕೆ, ಶ್ರದ್ಧೆ ಇರಲಿಕ್ಕಿಲ್ಲ. ಅಂದರೆ ದೇವರು ಎಂಬ concept ಮೇಲೆ ನಂಬಿಕೆ ಇರಲಿಕ್ಕಿಲ್ಲ. ಆದರೆ ತಮ್ಮ ಮೇಲೆಯೇ ಫುಲ್ ವಿಶ್ವಾಸ, ಶ್ರದ್ಧೆ, ನಂಬಿಕೆ ಎಲ್ಲ ಇರುತ್ತದೆ. ಅವರೂ ಸಾಕಷ್ಟು ಸಾಧನೆ ಮಾಡುತ್ತಾರೆ. ಕರ್ಮಾನುಸಾರ. ಇನ್ನು ಕೆಲವರು ರಾಜಕೀಯ ನಾಯಕರನ್ನು ದೇವರು ಅಂತ ನಂಬುತ್ತಾರೆ. ದೇವರಿಗಿಂತ ಹೆಚ್ಚಾಗಿ ಆರಾಧಿಸುತ್ತಾರೆ. ಆ ನಂಬಿಕೆ, ಶ್ರದ್ಧೆಗಳೂ ಫಲ ಕೊಡುತ್ತವೆ.

ಶ್ರದ್ಧೆ ಇಲ್ಲವಾದರೆ ಏನೂ ಕೈಹಿಡಿಯುವದಿಲ್ಲ. ಅದು ಮಾತ್ರ ನಿಜ. ಆಸಕ್ತಿಯಿಲ್ಲದ ವಿಷಯಗಳಲ್ಲಿ ಶ್ರದ್ಧೆ ಮೂಡಿಸಿಕೊಳ್ಳುವದೂ ಕಷ್ಟ. ಒಂದೋ ಗುರುಹಿರಿಯರು ಹೇಳಿದ್ದನ್ನು ಕೇಳಿ, ನಂಬಿ, ಶ್ರದ್ಧೆಯನ್ನು ಮೈಗೂಡಿಸಿಕೊಳ್ಳುವದು. ಅದು ಬಿಟ್ಟರೆ ಯಾವದರಲ್ಲಿ ಆಸಕ್ತಿಯಿರುತ್ತದೋ ಅದನ್ನೇ ಶ್ರದ್ಧೆಯಿಂದ ಮಾಡುವದು. ಮೊದಲನೇಯದು ಸುರಕ್ಷಿತ. ಯಾಕೆಂದರೆ ಗುರುಹಿರಿಯರು ಹೇಳಿದ್ದು ಒಮ್ಮೆಲೇ ಪಥ್ಯವಾಗದಿದ್ದರೂ ಅವುಗಳ ಮಹತ್ವ ನಂತರ ತಿಳಿಯುತ್ತದೆ. ಯಾಕೆಂದರೆ ಅವರು ತಮಗೆ ಹೊಳೆದಿದ್ದನ್ನು ಹೇಳಿರುವದಿಲ್ಲ. ಅದಕ್ಕೊಂದು ಧರ್ಮದ ತಳಹದಿ ಇರುತ್ತದೆ. ಆಸಕ್ತಿಯಿರುವದನ್ನೇ ಶ್ರದ್ಧೆಯಿಂದ ಮಾಡುತ್ತೇವೆ ಅಂದರೆ careful ಆಗಿರಿ ಅಂತ ಹೇಳಬೇಕಾಗುತ್ತದೆ. ಆಸಕ್ತಿಯಿರುವದೆಲ್ಲ ಒಳ್ಳೆಯದೇ ಆಗಿರಬೇಕೆಂದೇನೂ ಇಲ್ಲವಲ್ಲ. ಹಾಗಾಗಿ ಶ್ರದ್ಧೆಯನ್ನು ಎಲ್ಲಿಡುತ್ತೀರಿ ಅನ್ನುವದರ ಬಗ್ಗೆ ಸ್ವಲ್ಪ ಖಬರು ಇರಲಿ.

ಏನೇ ಇರಲಿ. ಏನೇ ಮಾಡಲಿ. ಶ್ರದ್ಧೆ ಮಾತ್ರ ಕುಂದದಿರಲಿ.

4 comments:

sunaath said...

‘ನಂಬರು, ನೆಚ್ಚರು, ಬರಿದೇ ಕರೆವರು; ನಂಬಿ ಕರೆದರೆ ಓ ಎನ್ನನೇ ಶಿವನು?’
--ಬಸವಣ್ಣ

Mahesh Hegade said...

ಧನ್ಯವಾದ ಸುನಾಥ್ ಸರ್. ಅದ್ಭುತ ವಚನ. ಒಂದು ಸಾಲಿನಲ್ಲಿ ಇಡೀ ಲೇಖನದ ತಾತ್ಪರ್ಯ ಅಡಗಿದೆ.

kushi N said...

Mahesh sir, missing ur writings..begane post madi.

Mahesh Hegade said...

Thank you very much, Khushi. Will try. Been busy with work. Also may be writer's block :) Best regards!