Monday, March 14, 2016

'ಮದ್ದು ಹಾಕುವದು' ಎಂಬ ವಿಷವಿಕ್ಕುವ ವಿಚಿತ್ರ ಪದ್ಧತಿ'ಮದ್ದು ಹಾಕುವದು' ಎಂಬ ವಿಷವಿಕ್ಕುವ ವಿಚಿತ್ರ ಪದ್ಧತಿ ಹಿಂದಂತೂ ಇತ್ತು. ಹಿಂದೆ ಅಂದರೆ ಬಹಳ ಹಿಂದೆಯೇನೂ ಅಲ್ಲ. ೧೯೯೦ ರ ವರೆಗೂ ಅದರ ಬಗ್ಗೆ ಸುದ್ದಿ ಕೇಳಿದ್ದಿದೆ. ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮ ಹವ್ಯಕ ಸಮುದಾಯದಲ್ಲಿತ್ತು. ಹಾಗಾಗಿ ನಮಗೆ ಗೊತ್ತು. ಬೇರೆ ಸಮುದಾಯಗಳಲ್ಲಿ ಇತ್ತೋ ಇಲ್ಲವೋ, ಈಗ ಇದೆಯೋ ಇಲ್ಲವೋ ಗೊತ್ತಿಲ್ಲ.

ಅದೇನೋ ಒಂದು ತರಹದ ವಿಷವಿರುತ್ತದೆಯಂತೆ. ಅದನ್ನು ಹೇಗಾದರೂ ಮಾಡಿ ವ್ಯಕ್ತಿಯೊಬ್ಬನ ಹೊಟ್ಟೆಗೆ ಸೇರಿಸಿಬಿಟ್ಟರೆ ಮುಗಿಯಿತು. ಅದೇ 'ಮದ್ದು ಹಾಕುವದು'. ಊಟದಲ್ಲಿ, ತಿಂಡಿಯಲ್ಲಿ ಅಥವಾ ಪಾನೀಯದಲ್ಲಿ ಒಂದೆರೆಡು ತೊಟ್ಟು ಹಾಕಿಕೊಟ್ಟುಬಿಟ್ಟರೆ ಸಾಕು.

ಒಮ್ಮೆ ವಿಷ ಒಳಗೆ ಹೋಯಿತು ಅಂದರೆ ನಂತರದ ಪರಿಣಾಮ slow poisoning  ರೂಪದಲ್ಲಿ ಗೋಚರಿಸುತ್ತದೆ. ಒಮ್ಮೆಲೇ ಏನೂ ಆಗುವದಿಲ್ಲ. ನಂತರ ಶುರುವಾಗುತ್ತದೆ. ಉಂಡ ಅನ್ನದ ಒಂದು ಅಗುಳೂ  ಒಳಗೆ ಉಳಿಯುವದಿಲ್ಲ. ಕುಡಿದ ನೀರಿನ ಒಂದು ಹನಿಯೂ ಬರಕತ್ತಾಗುವದಿಲ್ಲ. ಮದ್ದು ಹಾಕಿಸಿಕೊಂಡವ ವಾಂತಿ ಮಾಡಿ ಮಾಡಿಯೇ ಸುಸ್ತಾಗಿ ಹೋಗುತ್ತಾನೆ. ಹಾಗೇ ಬಿಟ್ಟರೆ severe dehydration ಆಗಿ ಏನು ಬೇಕಾದರೂ ಆಗಬಹುದು. ಬಹಳ dangerous ಸ್ಥಿತಿ ತಲುಪಿಬಿಡುತ್ತಾನೆ.

ಮದ್ದು ಹಾಕಿಸಿಕೊಂಡವರು ಸಿಕ್ಕಾಪಟ್ಟೆ ತೊಂದರೆ ಅನುಭವಿಸುವದು ಸತ್ಯ. ಆದರೆ ಸತ್ತು ಹೋದವರು ಬಹಳ ಕಮ್ಮಿ. ನಾನಂತೂ ಕೇಳಿಲ್ಲ. ಯಾಕೆಂದರೆ ಯಾರಿಗಾದರೂ ನಿಲ್ಲದ ವಾಂತಿ ಶುರುವಾಯಿತು ಅಂತಾದರೆ ಮನೆಯ ಹಿರಿಯ ತಲೆಗಳಿಗೆ ಐಡಿಯಾ ಬಂದೇಬಿಡುತ್ತದೆ. 'ಓಹೋ! ಇದು ಮದ್ದು ಹಾಕಿಸಿಕೊಂಡ ಕೇಸೇ ಇರಬೇಕು. ಬೇಗನೇ ಪ್ರತಿಮದ್ದು (antidote) ಮಾಡಿಸಬೇಕು. ಇಲ್ಲವಾದರೆ ದೊಡ್ಡ ಖತರಾ!' ಅಂದವರೇ ಪ್ರತಿಮದ್ದಿಗಾಗಿ ಪ್ಲಾನ್ ಮಾಡುತ್ತಾರೆ.

ಮದ್ದಿಗೆ ಪ್ರತಿಮದ್ದು ಹಾಕುವದೂ ಒಂದು ಆಸಕ್ತಿಕರ ವಿಷಯ. ನನಗೆ ತಿಳಿದ ಮಟ್ಟಿಗೆ ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದರು. ಮದ್ದು ಹಾಕುವವರು, ಹಾಕಿಸಿಕೊಳ್ಳುವವರು ಎಲ್ಲ ಹವ್ಯಕ ಸಮುದಾಯದವರಾದರೆ ಮದ್ದು ತೆಗೆಯುವವರು ಮಾತ್ರ ಬೇರೆ ಸಮುದಾಯದವರು. ಹಾಲಕ್ಕಿ ಗೌಡರೋ ಅಥವಾ ಅದೇ ರೀತಿಯ ಮತ್ಯಾವದೋ ಸಮುದಾದಯದವರು. ಅಂತವರ ಮನೆಗೆ ಒಂದು ನಿರ್ದಿಷ್ಟ ದಿವಸ, ತೆಂಗಿನಕಾಯಿ, ಅಕ್ಕಿ, ಇತರೆ ಬೇಕಾದ ವಸ್ತುಗಳೊಂದಿಗೆ ಹೋಗಬೇಕು. ಮದ್ದು ಹಾಕಿಸಿಕೊಂಡು ತೊಂದರೆ ಪಡುತ್ತಿರುವ ವ್ಯಕ್ತಿಯನ್ನೂ ಕರೆದೊಯ್ಯಬೇಕು.

ಮದ್ದು ತೆಗೆಯುವ ಗೌಡ ಯಾವದೋ ಮರದ ಎಲೆಗಳಿಂದಲೋ ತೊಗಟೆಯಿಂದಲೋ ಏನೋ ಒಂದು ಪುಡಿ ಮಾಡಿ ಇಟ್ಟುಕೊಂಡಿರುತ್ತಾನೆ. ಅದನ್ನು ನೀರಲ್ಲಿ ಕದಡಿ ಒಂದು ಪೇಯ ತಯಾರುಮಾಡುತ್ತಾನೆ. ಅದು ಸಿಕ್ಕಾಪಟ್ಟೆ ಕಹಿಯಾಗಿದ್ದು, ಕಂಡಾಪಟ್ಟೆ ಅಡ್ಡ ವಾಸನೆ ಹೊಡೆಯುತ್ತದೆಯಂತೆ. ಕುಡಿಯಲು ಸಾಧ್ಯವೇ ಇಲ್ಲದಂತಹ ಪೇಯ. ಆದರೆ ಅದನ್ನು ಕುಡಿಯಲೇಬೇಕು. ಹೇಗೋ ಮೂಗು ಮುಚ್ಚಿ ಕುಡಿಯುತ್ತಾರೆ. ಒಮ್ಮೆ ಕುಡಿದರೆ ಮುಗಿಯಿತು. ಹೊಟ್ಟೆ ಸೇರಿದ ಪ್ರತಿಮದ್ದು ಹೊಟ್ಟೆಯನ್ನು ಪೂರ್ತಿ ತಿರುವ್ಯಾಡಿ, ಅಲ್ಲಾಡಿಸಿ ಬಿಡುತ್ತದೆ. ಮದ್ದು ಹಾಕಿಸಿಕೊಂಡವರ ಹೊಟ್ಟೆಯಲ್ಲಿ ಏನೂ ನಿಲ್ಲುವದಿಲ್ಲ. ಅದರಂತೆ ಈ ಪೇಯ ಕೂಡ ಹೊರಬಿದ್ದು ಹೋಗುತ್ತದೆ. ಅಷ್ಟೇ ಹೊರ ಬರುವಾಗ ಹೊಟ್ಟೆಯಲ್ಲಿನ ಮದ್ದೆಲ್ಲವನ್ನೂ ಕೆರೆದು ಕೆರೆದು ತಂದಿರುತ್ತದೆ. ಗೌಡ ಹೋಗಿ ನೋಡುತ್ತಾನೆ. ಅವನ ಪರಿಣಿತರ ಕಣ್ಣಿಗೆ ಎಲ್ಲ ಬರೋಬ್ಬರಿ ಗೊತ್ತಾಗುತ್ತದೆ. ಬಂದು ಹೇಳುತ್ತಾನೆ - 'ಬಿದ್ದ ಮದ್ದು ಹೋಯಿತ್ರಾ. ಇನ್ನು ಎಂತೂ ತೊಂದರೆ ಇರೋದಿಲ್ಲ. ಹೋಗಿ ಬನ್ನಿ.' 'ಕಂಟಕ ಕಳೆಯಿತು,' ಅಂತ ಹೋದವರು ಫುಲ್ relax.  ಅವನಿಗೆ ಕೊಡಬೇಕಾದ ಕಾಣಿಕೆ ಕೊಟ್ಟು ಬರುತ್ತಾರೆ. ದುಡ್ಡು ಕಾಸಿನ ವ್ಯವಹಾರವಿಲ್ಲ. ಏನಿದ್ದರೂ ತೆಂಗು, ಅಡಿಕೆ, ಅಕ್ಕಿ, ಇತ್ಯಾದಿ. ಅದೂ ಪದ್ಧತಿ ಪ್ರಕಾರ.

ಮದ್ದು ಯಾಕೆ ಹಾಕುತ್ತಾರೆ? ಮತ್ಸರ, ದ್ವೇಷ, ಹೊಟ್ಟೆಕಿಚ್ಚು, ಇನ್ನೊಬ್ಬರ ಸಂತೋಷವನ್ನು ನೋಡಲಾಗದ ವಿಕೃತ ಮನಸ್ಥಿತಿ, ಮತ್ತೊಬ್ಬರು ಪೂರ್ತಿ ಹಾಳಾಗಿ ಹೋಗಲಿ ಅನ್ನುವ ಕೆಟ್ಟ ಮನಸ್ಸು. ಅಂತಹ ನೆಗೆಟಿವ್ ಭಾವನೆಗಳು ತಾರಕಕ್ಕೆ ಹೋಗಿ ತಡೆಯಲಾಗದಂತಾದಾಗ ಮನುಷ್ಯ psychopath ಆಗಿಬಿಡುತ್ತಾನೆ. sociopath ಆಗುತ್ತಾನೆ. ಸಮಾಜವನ್ನು ದ್ವೇಷಿಸತೊಡಗುತ್ತಾನೆ. ಅವನ್ನೆಲ್ಲ ಕಾರಿಕೊಳ್ಳಲು ಒಂದು outlet ಬೇಕಾಗುತ್ತದೆ. ಬಹಿರಂಗವಾಗಿ ಏನಾದರೂ ಮಾಡಲು ಹೋದರೆ ಒದೆ ಬೀಳುತ್ತವೆ. ಅದಕ್ಕೇ ಮದ್ದು ಹಾಕುತ್ತಾರೆ. ಗೊತ್ತೂ ಆಗುವದಿಲ್ಲ. ನಂತರ prove ಮಾಡಲೂ ಆಗುವದಿಲ್ಲ. ಮದ್ದು ಹಾಕಿಸಿಕೊಂಡವರು ಸಂಕಟ ಪಡುತ್ತಿದ್ದರೆ ಮದ್ದು ಹಾಕಿದವರು ವಿಕೃತಾನಂದ ಅನುಭವಿಸುತ್ತಿರುತ್ತಾರೆ. typical behavior of sociopaths and psychopaths.

ಮದ್ದು ಹಾಕುವವರು ಯಾರು? ಮಹಿಳೆಯರು. ಪುರುಷರು ಮದ್ದು ಹಾಕಿದ್ದನ್ನು ಅಥವಾ ಹಾಕುತ್ತಾರೆ ಎಂಬುದನ್ನು ನಾನಂತೂ ಕೇಳಿಲ್ಲ. ಎಂತಹ ಮಹಿಳೆಯರು? ಒಂದಲ್ಲ ಒಂದು ತರಹದಲ್ಲಿ ನೊಂದವರು ಮತ್ತು ಅತೃಪ್ತರು. ಪರಿತ್ಯಕ್ತೆಯರು. ಇನ್ನು ಕೆಲವರು pure sociopaths ಮತ್ತು dangerous psychopaths. ವಿಧವೆಯರ ಮೇಲೆ ಹೆಚ್ಚಿನ ಸಂಶಯ. ಅವರೇ ಹೆಚ್ಚಾಗಿ ಮದ್ದು ಹಾಕುವವರು ಅಂತ ಹೇಳುತ್ತಿದ್ದರು. ಅದೂ ಹಿಂದಿನ ಕಾಲ. ತುಂಬಾ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ, ವಯಸ್ಸಿಗೆ ಬರುವ ಮೊದಲೇ ಪತಿಯನ್ನು ಕಳೆದುಕೊಂಡು, ಕೇಶಮುಂಡನ ಮಾಡಿಸಿಕೊಂಡ ವಿಧವೆಯರ ಬಾಳು ಸಿಕ್ಕಾಪಟ್ಟೆ ನಿಕೃಷ್ಟ. ಅಂತವರಲ್ಲಿ ಕೆಲವರಿಗೆ ಸುಖವಾಗಿರುವ ಸಂಸಾರಸ್ಥರನ್ನು ನೋಡಿದರೆ ಮತ್ಸರ. ಅಂತವರು ಮದ್ದು ಹಾಕುತ್ತಾರೆ ಅಂತ ಹೇಳುತ್ತಿದ್ದರು. ಇನ್ನು ಮಕ್ಕಳಿಲ್ಲದ ಮಹಿಳೆಯರು. ಅವರಿಗೂ ಸಿಕ್ಕಾಪಟ್ಟೆ ಕಷ್ಟ. ಬಂಜೆ ಅನ್ನಿಸಿಕೊಳ್ಳಬೇಕಾದ ಕರ್ಮ. ಅವರಿಗೂ ಒಂದು ತರಹದ ಬಹಿಷ್ಕಾರ ಮತ್ತು ಇತರೆ ಜನರಿಂದ ತಾತ್ಸಾರ. ಅವರೂ ಮದ್ದು ಹಾಕುತ್ತಾರೆ ಅಂತ ಹೇಳುವ ರೂಢಿ ಇತ್ತು. ಇನ್ನು ಬೇರೆಯೇ ತರಹದ ಅತೃಪ್ತ ಮಹಿಳೆಯರು. ಏನೇನೋ ಕಾರಣಗಳಿಗೆ ಅತೃಪ್ತಿ. ಒಬ್ಬಳ ಗಂಡ ರೋಗಿಷ್ಠ. ಬೇಕಾದ ಸುಖ ಕೊಡಲಾರ. ಇವಳಿಗೆ ಚಡ್ತಿ ಜವಾನಿ. ಹಾಗಾಗಿ ಹಟ್ಟಾ ಕಟ್ಟಾ ಸಾಲಿಡ್ ಗಂಡಸರನ್ನು ನೋಡಿದರೆ ಒಂದು ತರಹದ ಆಸೆ. ಆದರೆ ಅದನ್ನು ಪೂರೈಸಿಕೊಳ್ಳುವದು ಕಷ್ಟ. ಅದಕ್ಕೇ ಮದ್ದು ಹಾಕಿಬಿಡುವದು. ಮತ್ತೊಬ್ಬಳ ಗಂಡ ಸ್ತ್ರೀಲೋಲ. ಉಪಪತ್ನಿಯರನ್ನು ಇಟ್ಟುಕೊಂಡಿರುತ್ತಿದ್ದ. ಹಾಗಾಗಿ ಧರ್ಮಪತ್ನಿಯ ತಲೆ ಹನ್ನೆರಾಡಾಣೆ. ಅವಳೂ ಮದ್ದು ಹಾಕಿದರೂ ಹಾಕಿದಳೇ!

ಯಾರಿಗೆ ಮದ್ದು ಹಾಕುತ್ತಿದ್ದರು? Who were the prime targets? ಇಂತವರೇ ಅಂತಿಲ್ಲ. ಯಾರ ಮೇಲೆ ಯಾರಿಗೆ ಯಾವ ತರಹದ ಮತ್ಸರವಿದೆಯೋ, ದ್ವೇಷವಿದೆಯೋ, ಮತ್ಯಾವ ನೆಗೆಟಿವ್ ಫೀಲಿಂಗ್ಸ್ ಇವೆಯೋ ಮತ್ತು ಅವು ಯಾವ ಕಾರಣಕ್ಕೆ ಟ್ರಿಗರ್ ಆಗುತ್ತವೆಯೋ ದೇವರಿಗೇ ಗೊತ್ತು. ಸುಂದರವಾಗಿರುವ ಮಕ್ಕಳು, ಆಗತಾನೇ ಮದುವೆಯಾದ ಯುವ ಜೋಡಿಗಳು, ಸಂಸಾರದಲ್ಲಿ ಸುಖವಾಗಿದ್ದು ಪ್ರಗತಿ ಸಾಧಿಸುತ್ತಿರುವವರು, ಸುಂದರ ಸುಮಂಗಲೆಯರು, ನಾಲ್ಕಾರು ಸುಂದರ ಮಕ್ಕಳ ತಾಯಂದಿರು, ಸುಂದರ ಪುರುಷರು ಇವರೆಲ್ಲ ಪ್ರೈಮ್ ಟಾರ್ಗೆಟ್. ಒಟ್ಟಿನಲ್ಲಿ physically, socially, economically ಮತ್ತೆ ಬೇರೆಲ್ಲ ರೀತಿಯಲ್ಲಿ ಸ್ವಲ್ಪ ಎದ್ದು ಕಾಣುವವರೇ ಪ್ರೈಮ್ ಟಾರ್ಗೆಟ್.

ಮದ್ದು ಅಂದರೇನು? ಅದೆಂತಹ ವಿಷ? ಒಂದು ತರಹದ ಹಲ್ಲಿ ಜಾತಿಗೆ ಸೇರಿದ ಪ್ರಾಣಿಯಿರುತ್ತದೆಯಂತೆ. ಅದು ತುಂಬಾ ವಿರಳ. ಮತ್ತೆ ಕಣ್ಣಿಗೆ ಕಾಣಿಸುವದು ಕಮ್ಮಿ. ಅದನ್ನು ಹಿಡಿಯುತ್ತಾರೆ. ಜಜ್ಜಿ ಕೊಂದುಬಿಡುತ್ತಾರೆ. ನಂತರ ಆ ಸತ್ತ ಹಲ್ಲಿ ಜಾತಿಯ ಪ್ರಾಣಿಯ ದೇಹಕ್ಕೆ ದಾರ ಕಟ್ಟಿ ಮೇಲಿಂದ ನೇತಾಕುತ್ತಾರೆ. ಆ ದೇಹ ಕೊಳೆಯುತ್ತ ಹೋದಂತೆ ಅದರಿಂದ ಒಂದು ತರಹದ ದ್ರವ ಸ್ರವಿಸತೊಡಗುತ್ತದೆ. ಸ್ರವಿಸಿ ಸ್ರವಿಸಿ ಒಂದೊಂದೇ ಹನಿಯಾಗಿ ತೊಟ್ಟಿಕ್ಕಲಾರಂಭಿಸುತ್ತದೆ. ಕೆಳಗೊಂದು ಪಾತ್ರೆಯನ್ನಿಟ್ಟು ಅದನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಅದೇ ವಿಷ. ಅದೇ ಮದ್ದು. ಒಂದೇ ಹನಿ ಸಾಕು. ಹಾಗಾಗಿ ಮದ್ದು ಹಾಕುವವರೆಲ್ಲ ಮದ್ದು ತಯಾರಿಸಲೇಬೇಕು ಅಂತಿರಲಿಲ್ಲ. ಎಷ್ಟೋ ಕಡೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಎಂದೋ ತಯಾರು ಮಾಡಿಟ್ಟ ಮದ್ದು ಒಬ್ಬರಿಂದ ಇನ್ನೊಬ್ಬರಿಗೆ ಬಳುವಳಿಯಂತೆ ಹೋಗಿದ್ದೂ ಇದೆಯಂತೆ.

ಮದ್ದು ಹಾಕಿಸಿಕೊಂಡವರ ಗತಿ? ಮೊದಲೇ ಹೇಳಿದಂತೆ ಒಮ್ಮೆ ಮದ್ದು ಹೊಟ್ಟೆಗೆ ಹೋಗಿ ತನ್ನ ಕೆಲಸ ಶುರು ಮಾಡಿತು ಅಂದರೆ ಮನುಷ್ಯ ಫುಲ್ ಔಟ್. ಊಟ, ತಿಂಡಿ ಮಾತು ಬಿಡಿ ಒಂದು ಹನಿ ನೀರು ಸಹ ಹೊಟ್ಟೆಯಲ್ಲಿ ನಿಲ್ಲುವದಿಲ್ಲ. ವಾರದಲ್ಲಿ ಕೇಜಿಗಟ್ಟಲೆ ತೂಕ ಕಳೆದುಕೊಂಡುಬಿಡುತ್ತಾನೆ. ಫುಲ್ weakness. ಬೇಗನೆ ಪ್ರತಿಮದ್ದು ಹಾಕಿಸಿಕೊಂಡರೆ ಬಚಾವ್! ಇಲ್ಲವಾದರೆ ಶಿವಾಯ ನಮಃ! ಅದರಲ್ಲೂ ಹೊಟ್ಟೆಗೆ ಸೇರಿದ ಮದ್ದು ಬೇಗನೆ ಹೊರಬೀಳಲಿಲ್ಲ ಅಂದರೆ ನಂತರ antidote ಸಹ ಕೆಲಸ ಮಾಡುವದಿಲ್ಲ. ಹಾಗಂತ ಹೇಳುತ್ತಾರೆ. ಒಂದು ಹಂತ ಮೀರಿತು ಅಂದರೆ ಹೊಟ್ಟೆಯಲ್ಲಿ ಮತ್ತೊಂದು ಹಲ್ಲಿಯ ಜಾತಿಯ ಅದೇ ಪ್ರಾಣಿಯೇ ಉದ್ಭವವಾಗಿ ಮನುಷ್ಯನನ್ನು ಸಾವಿನತ್ತ ದೂಡುತ್ತದೆ. ಹೊಟ್ಟೆಯಲ್ಲಿ ಮತ್ತೊಂದು ಹಲ್ಲಿ ಹುಟ್ಟುವದು??? ಅದೊಂದು ತರಹದ urban legend ಅಥವಾ ದಂತಕಥೆ ಅಂತ ಅಂದುಕೊಂಡರೂ multiple organ failure ಆಗಿ ಸಾಯುತ್ತಾರೆ.

ಮೊದಲೇ ಹೇಳಿದಂತೆ ಮದ್ದು ಹಾಕಿಸಿಕೊಂಡವರು ಸತ್ತು ಹೋಗಿದ್ದು ಬಹಳ ಕಮ್ಮಿ. ಚಿಕ್ಕಮಕ್ಕಳು ಸತ್ತು ಹೋಗಿರಬಹುದು ಬಿಟ್ಟರೆ ವಯಸ್ಕರು ತೀರಿಹೋಗಿದ್ದು ಕೇಳಿಲ್ಲ. ಯಾಕೆಂದರೆ ಮದ್ದು ಹಾಕಲಾಗಿದೆ ಅಂತ ಸಂಶಯ ಬಂದರೂ ಸಾಕು ಗೌಡನ ಹತ್ತಿರ ಹೋಗಿ ಪ್ರತಿಮದ್ದು ಕೊಡಿಸಿಕೊಂಡು ಬಂದುಬಿಡುತ್ತಾರೆ. ಒಮ್ಮೊಮ್ಮೆ ಮದ್ದು ಹಾಕಿರುವದಿಲ್ಲ. ಆಹಾರದಲ್ಲಿ ಏನೋ ವ್ಯತ್ಯಾಸವಾಗಿ ವಾಂತಿಯಾಗಿರುತ್ತದೆ. ಆದರೆ ಮನೆಯ ಹಿರಿಯರಿಗೆ ಬರೋಬ್ಬರಿ ಗೊತ್ತಾಗುತ್ತದೆ. ಯಾವದಕ್ಕೂ ಇರಲಿ ಅಂತ ಮದ್ದು ತೆಗೆಯುವ ಗೌಡನ ಕಡೆ ಹೋಗುತ್ತಾರೆ. ಗೌಡ ಕಹಿ ಕಷಾಯ ಕುಡಿಸಿ, ವಾಂತಿ ಮಾಡಿಸಿ, ನೋಡಿ ಖಚಿತ ಪಡಿಸುತ್ತಾನೆ. ಒಟ್ಟಿನಲ್ಲಿ ಗೌಡನ ಮಾತು ಕೇಳಿದ ನಂತರವೇ ಒಂದು ತರಹದ ಸಮಾಧಾನ.

ಮದ್ದು ಹಾಕುವದರಿಂದ ಆಗುವ ಮತ್ತೊಂದು ಲಫಡಾ ಅಂದರೆ ಕೆಲವು ಮನೆತನಗಳಿಗೆ, ಕುಟುಂಬಗಳಿಗೆ 'ಮದ್ದು ಹಾಕುವವರು' ಅನ್ನುವ ಲೇಬಲ್ ಬಂದುಬಿಡುತ್ತದೆ. ಅವರು ಒಂದು ತರಹದಲ್ಲಿ ಸಮಾಜದಿಂದ ಬಹಿಷ್ಕಾರ ಹಾಕಿಸಿಕೊಂಡವರು. ಅವರ ಜೊತೆ ಬಾಕಿ ಜನರ ಸಂಪರ್ಕ ಅಷ್ಟಕಷ್ಟೇ. ಅವರ ಮನೆಗೆ ಹೋದರೂ ಯಾರೂ ಏನೂ ತಿಂದು, ಕುಡಿದು ಮಾಡುವದಿಲ್ಲ. ಅವರಿಗೂ ಅದು ರೂಢಿಯಾಗಿರುತ್ತದೆ. ಮುಜುಗರವಾದರೂ ವಿಧಿಯಿಲ್ಲ. ಯಾಕೆಂದರೆ ಅವರು ಮದ್ದು ಹಾಕುವವರು. ಹಾಗಂತ ತಲೆತಲಾಂತರಗಳಿಂದ ಲೇಬಲ್ ಹಚ್ಚಿಬಿಡಲಾಗಿದೆ. ಆ ಮನೆತನದವರ ಜೊತೆ ವಿವಾಹ ಸಂಬಂಧಗಳೂ ನಿಷಿದ್ಧ. ಅಂತವರ ಮನೆಗಳಿಗೆ ಯಾರಾದರೂ ಹೆಣ್ಣು ಕೊಡಬೇಕು ಅಂದರೆ ಆಕೆ ಮತ್ತೊಂದು 'ಮದ್ದು ಹಾಕುವ' ಮನೆತನದಿಂದಲೇ ಬಂದಿರಬೇಕು. ಇಲ್ಲಾ ಎಲ್ಲೋ ದೂರದ ಸೀಮೆಯಿಂದ ಸಾವಿರ ಸುಳ್ಳು ಹೇಳಿ ಹೆಣ್ಣು ತರಬೇಕು.

'ಮದ್ದು ಹಾಕುವವರು' ಅನ್ನುವ ಲೇಬಲ್ ಇದು self fulfilling prophecy ಆಗಿಬಿಡುವ ಆಪಾಯ ಬಹಳ. ಒಂದು ಮನೆತನದವರು ನಿಜವಾಗಿಯೂ ಮದ್ದು ಹಾಕುತ್ತಾರೋ ಬಿಡುತ್ತಾರೋ ಆದರೆ ಒಮ್ಮೆ ಆ ಲೇಬಲ್ ಬಂತು ಮತ್ತು ಅದರಿಂದಾಗಿ ಒಂದು ತರಹದ ಬಹಿಷ್ಕಾರ ಬಿತ್ತು ಅಂತಾದರೆ ಅವರದ್ದೂ ತಲೆಕೆಟ್ಟು ಅವರೂ ಕ್ರುದ್ಧರಾಗುವದು ಸಹಜ. ಮತ್ತೆ ಮನೆಯಲ್ಲಿ ಮದುವೆಯಾಗದ ಗಂಡುಮಕ್ಕಳು ಹೆಣ್ಣುಮಕ್ಕಳು ಉಳಿದುಬಿಡುತ್ತಾರೆ. ಹಾಗಾಗಿ ಅವರಿಗೆ ಉಳಿದವರ ಮೇಲೆ ಭಯಂಕರ ಮತ್ಸರ ಪಡಲು, ದ್ವೇಷ ಸಾಧಿಸಲು ಸಿಕ್ಕಾಪಟ್ಟೆ ಸ್ಟ್ರಾಂಗ್ ಕಾರಣಗಳು ಸಿಕ್ಕಿಬಿಡುತ್ತವೆ. ಮೊದಲು ಮದ್ದು ಹಾಕದಿದ್ದವರೂ ಈಗ ಹಾಕಲು ಶುರುಮಾಡಿದರೆ ಏನೂ ಆಶ್ಚರ್ಯವಿಲ್ಲ. ಮದ್ದು ಹಾಕುವದು ಎಂಬ ಪದ್ಧತಿ ಶುರುವಾಗಿದ್ದೇ ಹೀಗೋ ಅನ್ನುವ ಸಂಶಯ ನನಗೆ. ಯಾವದೋ ಕಾಲದಲ್ಲಿ ಯಾರದ್ದೋ ಮೇಲೆ ಇಂತಹ ಅಪವಾದವೊಂದನ್ನು ಹೊರೆಸಿದ ಕಾರಣಕ್ಕೇ ಅವರು ಮದ್ದು ಹಾಕಲು ಆರಂಭಿಸಿದರೇ?

1976-77 ಇರಬಹುದು. ಆಗ ನನಗೆ ಇನ್ನೂ ನಾಲ್ಕೈದು ವರ್ಷ. ರಜೆ ಬಂತು ಅಂದರೆ ಸಿರ್ಸಿ ಹತ್ತಿರದ ಅಜ್ಜನಮನೆಗೆ ಓಟ. ಅಮ್ಮನ ತವರೂರು ಅದು. ಮೂರೂ ಹೊತ್ತೂ ಕಾಡು, ಮೇಡು, ತೋಟ, ಗದ್ದೆ, ನದಿ ಅಂತ ತಿರುಗುತ್ತಲೇ ಇರುತ್ತಿದ್ದೆ. ಪಟ್ಟಣದ ಮಂದಿ ನಾವು. ಹಾಗಾಗಿ ಹಳ್ಳಿಯ ಪರಿಸರ ಬಹಳ ಹಿಡಿಸುತ್ತಿತ್ತು. ಮತ್ತೆ ಅಜ್ಜನಮನೆಯಲ್ಲಿ ಅಜ್ಜ, ಅಜ್ಜಿ, ಚಿಕ್ಕಮ್ಮ, ಇಬ್ಬರು ಸೋದರಮಾವಂದಿರು, ಊರ ಜನ ಎಲ್ಲ ಬೇಕಾದಷ್ಟು ಮುದ್ದು ಮಾಡಿ, ಅಚ್ಛಾ ಅಚ್ಛಾ ಮಾಡಿ ನಮ್ಮದು ರಜೆ ಪೂರ್ತಿ ಫುಲ್ ಐಶ್ ಜಿಂದಗಿ.

ಹಾಗೆಯೇ ಒಮ್ಮೆ  ಅಜ್ಜನಮನೆಗೆ ಹೋದಾಗ ಒಂದು ದಿನ ಮಧ್ಯಾನ ತೋಟದ ಕಡೆಯಿಂದ ಮನೆಗೆ ಬರುತ್ತಿದ್ದೆ. ಜೊತೆಗೆ ಸೋದರಮಾವ ಇದ್ದ. ಇನ್ನೇನು ಮನೆ ಕಾಂಪೌಂಡ್ ಎಂಟ್ರಿ ಮಾಡುವ ಮೊದಲಿಗೆ ಸಿಗುತ್ತಿದ್ದ ದರೆ (ಸಣ್ಣ ದಿಬ್ಬ) ಹತ್ತಬೇಕು ಅನ್ನುವಷ್ಟರಲ್ಲಿ ಮಾವ ಕೈ ಜಗ್ಗಿ ನಿಲ್ಲಿಸಿದ. 'ಏನು?' ಅಂತ ಲುಕ್ ಕೊಟ್ಟೆ. 'ಶ್!ಸೈಲೆನ್ಸ್!' ಅಂತ ಬಾಯಿ ಮೇಲೆ ಕೈಯಿಟ್ಟು ಸನ್ನೆ ಮಾಡಿದ. ನಂತರ ಆಗಿದ್ದು ಮಾತ್ರ ವಿಚಿತ್ರ ಘಟನೆ.

ಮಾವ ಬಗ್ಗಿ ಒಂದು ಕಲ್ಲು ಎತ್ತಿಕೊಂಡವನೇ ಗುರಿಯಿಟ್ಟು ಕಲ್ಲು ಬೀಸಿದ. ಅಡಿಕೆ ಮರದ ಕಟ್ಟಿಗೆಯಿಂದ ಮಾಡಿದ ಬೇಲಿ ಕಲ್ಲಿನೇಟಿನ ಹೊಡೆತಕ್ಕೆ ಅದುರಾಡಿತು. ಬೇಲಿಯಿಂದ ಏನೋ ಕೆಳಗೆ ಬಿತ್ತು. ಏನೂಂತ ಗೊತ್ತಾಗಲಿಲ್ಲ. ಮಾವ ಮತ್ತು ನಾನು ಇಬ್ಬರೂ ಹತ್ತಿರ ಹೋಗಿ ನೋಡಿದರೆ ಒಂದು ದೊಡ್ಡ ಹಲ್ಲಿ ಸೈಜಿನ ಪ್ರಾಣಿ ಕಲ್ಲಿನೇಟಿನಿಂದ ಶಿವಾಯ ನಮಃ ಆಗಿತ್ತು. ಖಡಕ್ ಗುರಿಯೆಂದರೆ ಅದು. ಸುಮಾರು ಇಪ್ಪತ್ತಡಿ ದೂರದಿಂದ ಗುರಿಯಿಟ್ಟು ಎಸೆದ ಕಲ್ಲು ಆ ಪ್ರಾಣಿಯನ್ನು ಮಟಾಶ್ ಮಾಡಿತ್ತು. ದೊಡ್ಡ ಸೈಜಿನ ಹಲ್ಲಿ ತುಂಬಾ colorful ಆಗಿತ್ತು. ರಂಗೀನ್ ಹಲ್ಲಿ.

ಸಾಧಾರಣವಾಗಿ ಹೀಗೆಲ್ಲ ಪ್ರಾಣಿಹಿಂಸೆ ಮಾಡದ ಮಾವ ಯಾಕೆ ಹೀಗೆ ಮಾಡಿದ ಅಂತ ಗೊತ್ತಾಗಲಿಲ್ಲ. ಮಾವನೇ ಹೇಳಿದ, 'ಅದು ಮದ್ದು ಹಾಕುವವರು ಮದ್ದು ತಯಾರುಮಾಡುವ ಪ್ರಾಣಿ. ಗೊತ್ತಾತೇನು?' ನಮಗೆ ಏನು ಗೊತ್ತಾಗಬೇಕು? ಮದ್ದು ಹಾಕುವದು ಅನ್ನುವದನ್ನು ಕೇಳಿ ಗೊತ್ತಿತ್ತು. 'ಹೇಳದೇ ಕೇಳದೇ ಯಾರ್ಯಾರದ್ದೋ ಮನೆಗೆ ಹೋಗಬೇಡ. ಎಲ್ಲಾದರೂ ಮದ್ದು ಗಿದ್ದು ಹಾಕಿಬಿಟ್ಟಾರು,' ಅಂತ ಹಿರಿಯರ ಎಚ್ಚರಿಕೆಯ ಮಾತೊಂದೇ ಕೇಳಿದ್ದು. ಅದು ಬಿಟ್ಟರೆ ಮದ್ದು ಹಾಕುವದರ ಬಗ್ಗೆ ಅಂದು ಏನೂ ಗೊತ್ತಿರಲಿಲ್ಲ. ಇಲ್ಲಿ ನೋಡಿದರೆ ಈ ಮಾವ ಹಲ್ಲಿ ಜಾತಿಯ ಪ್ರಾಣಿಯೊಂದನ್ನು ಕೊಂದು ಅದೇ ಮದ್ದಿನ ವಿಷ ತಯಾರು ಮಾಡುವ ಪ್ರಾಣಿ ಅನ್ನುತ್ತಿದ್ದಾನೆ.

ಕೈಯಲ್ಲಿದ್ದ ಕೃಷಿ ಕತ್ತಿಯಿಂದ ಅಲ್ಲೇ ಒಂದು ಸಣ್ಣ ಗುಂಡಿ ತೋಡಿದ ಮಾವ ಆ ಸತ್ತ ಹಲ್ಲಿಯನ್ನು ಅದರಲ್ಲಿ ನೂಕಿ ಮೇಲಿಂದ ಮಣ್ಣು ಮುಚ್ಚಿದ. 'ಅದನ್ನು ಕೊಂದರಷ್ಟೇ ಸಾಲದು. ಸತ್ತ ಹಲ್ಲಿ ಸಿಕ್ಕರೂ ಅವರಿಗೆ ಓಕೆ. ಯಾಕೆಂದರೆ ವಿಷ ಮಾಡಲು ಹಲ್ಲಿಯನ್ನು ಕೊಲ್ಲಲೇಬೇಕು. ಹಾಗಾಗಿ ಅಕಸ್ಮಾತ ಅಂತಹ ಹಲ್ಲಿ ಕಂಡು ಅದನ್ನು ಕೊಂದರೆ ಹಾಗೆಯೇ ಬಿಟ್ಟು ಬರಬಾರದು. ಗುಂಡಿ ತೋಡಿ ಮುಚ್ಚಿಯೇ ಬರಬೇಕು. ಗೊತ್ತಾತೇನು?' ಅಂದ ಮಾವ. ತಲೆಯಾಡಿಸಿದೆ.

ಒಟ್ಟಿನಲ್ಲಿ ಆ ಹಲ್ಲಿ ಜಾತಿಯ ಪ್ರಾಣಿಯ ನಸೀಬ್ ಸರಿಯಿಲ್ಲ. ಮದ್ದು ಹಾಕುವವರಿಗೆ ಸಿಕ್ಕರೂ ಸಾವು. ಅವರು ಅದನ್ನು ಕೊಂದು, ನೇತಾಕಿ ಮದ್ದೆಂಬ ವಿಷ ತಯಾರಿಸುತ್ತಾರೆ. ಇತರೆ ಜನರ ಕೈಗೆ ಸಿಕ್ಕರೂ ಸಾವು. ಅವರು ಕೊಂದು, ಗುಂಡಿ ತೋಡಿ, ಸಮಾಧಿ ಮಾಡಿ ಹೋಗುತ್ತಾರೆ. ಆ ಹಲ್ಲಿ ಜಾತಿಯ ಪ್ರಾಣಿ ಇನ್ನೂ ಇದೆಯೋ ಅಥವಾ ಈ ಪರಿ ಹೊಡೆಯಿಸಿಕೊಂಡು ಪೂರ್ತಿ ವಿನಾಶವಾಗಿ extinct ಆಗಿಹೋಗಿದೆಯೋ ಗೊತ್ತಿಲ್ಲ.

ಆ ಹಲ್ಲಿ ರಂಗೀನ್ (colorful) ಆಗಿದ್ದು ನೋಡಿದರೆ ಅದು ಯಾವದೋ ಜಾತಿಯ ಊಸರವಳ್ಳಿ (chameleon) ಏನೋ ಅಂತ ಈಗ ವಿಚಾರ.

ಸಿರ್ಸಿ ಸೀಮೆಯಲ್ಲಿ ಮದ್ದು ಹಾಕುವದರ ಆರ್ಭಟ ಅಷ್ಟಿರಲಿಲ್ಲ. ನಮ್ಮ ಅಜ್ಜನಮನೆ ಊರು, ಸುತ್ತಮುತ್ತಲಿನ ಊರುಗಳಲ್ಲಿ ಅದರ ಸದ್ದಿರಲಿಲ್ಲ. ಹಾಗಾಗಿ ಆ ಕಡೆ ಹೋದಾಗ ಅಜ್ಜನಮನೆ ಮಂದಿ ಏನೂ ಎಚ್ಚರಿಕೆ ಕೊಡುತ್ತಿರಲಿಲ್ಲ. ಎಲ್ಲರ ಮನೆಗೆ ಹೋಗಿ ಆರಾಮಾಗಿ ಊಟ ತಿಂಡಿ ಮೆದ್ದು ಬರುತ್ತಿದ್ದೆವು.

ಆದರೆ ತಂದೆಯವರ ಊರಾದ ಕುಮಟಾ - ಹೊನ್ನಾವರ ಸೀಮೆಯ ವಿಷಯವೇ ಬೇರೆ. ಆ ಕಡೆ ಮದ್ದು ಹಾಕುವದು ಜಾಸ್ತಿ ಚಾಲ್ತಿಯಲ್ಲಿದ್ದಂತೆ ಕಾಣಿಸುತ್ತಿತ್ತು. ಅಜ್ಜ, ತಂದೆಯವರ ತಂದೆ, ಆಗಲೇ ಎಂಬತ್ತು ದಾಟಿದ ವೃದ್ಧ. ಆದರೆ ಪಟ್ಟಣದಿಂದ ಬಂದ ಮಗ, ಸೊಸೆ, ಮಮ್ಮಕ್ಕಳ ಬಗ್ಗೆ ವಿಪರೀತ ಕಾಳಜಿ. ಯಾರದ್ದಾದರು ಮನೆಗೆ, ಅಲ್ಲೇ ಸುತ್ತಮುತ್ತಲಿನ ಊರಿನ ನೆಂಟರ ಮನೆಗಳಿಗೆ, ಹೋಗಬೇಕು ಅಂತಾದರೆ ಅಜ್ಜ ಎಲ್ಲ ಕೇಳಿ, ತನ್ನ ತಲೆಯಲ್ಲಿರುವ ದೊಡ್ಡ ಮಾಹಿತಿ ಭಂಡಾರ ಅಗೆದು, ನಾವು ಯಾವದೇ ಮದ್ದು ಹಾಕುವವರ ಮನೆಗೆ ಹೋಗುತ್ತಿಲ್ಲ ಅಂತ ಖಾತ್ರಿ ಮಾಡಿಕೊಂಡೇ ಕಳಿಸಿಕೊಡುತ್ತಿದ್ದ. 'ಇಂತಾ ಊರಿನ, ಇಂತವರ ಮನೆಗೆ ಹೋಗಬೇಡಿ. ಹೋದರೂ ಏನೂ ತಿಂಡಿ ತೀರ್ಥ ಮಾಡಬೇಡಿ,' ಅಂತ ಅವನ ಕಟ್ಟೆಚ್ಚರಿಕೆ. ಅವರೆಲ್ಲ ಮದ್ದು ಹಾಕುವ ಮನೆತನದವರಂತೆ. ನಮ್ಮ ಬಳಗದಲ್ಲಿ ಅಂತವರು ಯಾರೂ ಇರಲಿಲ್ಲ. ಆದರೆ ನಮ್ಮ ಬಳಗದವರಿದ್ದ ಹಳ್ಳಿಗಳಲ್ಲಿ ಇದ್ದರು. ಒಮೊಮ್ಮೆ ಅಚಾನಕ್ ಆಗಿ ಅಂತವರ ಮನೆಗೆ ಹೋಗುವ ಪರಿಸ್ಥಿತಿ ಬಂದರೂ ಬರಬಹುದು. ಹಾಗೇನಾದರು ಆದರೆ ಲಕ್ಷ್ಯದಲ್ಲಿರಲಿ ಅಂತ ಅಜ್ಜನ ಕಳಕಳಿ. ಸಂಜೆ ಮನೆಗೆ ಬಂದ ಮೇಲೆ ಆವತ್ತು ಎಲ್ಲೆಲ್ಲಿಗೆ ಹೋಗಿ ಬಂದಿರಿ ಅಂತ ಕೇಳಿ, ಎಲ್ಲ ಡೀಟೇಲ್ಸ್ ತೆಗದುಕೊಂಡು ನಾವು ಎಲ್ಲೂ ಅಂತಹ ಮದ್ದು ಹಾಕುವವರ ಮನೆಗೆ even by mistake ಸಹಿತ ಹೋಗಿಬಂದಿಲ್ಲ ಅಂತ ಖಾತ್ರಿ ಮಾಡಿಕೊಂಡಾಗಲೇ ನೆಮ್ಮದಿ ಅವನಿಗೆ.

ನಮ್ಮ ಅಕ್ಕ (ಕಸಿನ್) ಒಬ್ಬಳ ಗಂಡನಮನೆ ಊರು ಮದ್ದು ಹಾಕುವವರ ಫೇಮಸ್ ಊರಂತೆ. ಆ ಊರಿನ ಒಂದೆರೆಡು ಕೇರಿಗಳು (ಓಣಿಗಳು) ಮದ್ದು ಹಾಕುವ ಕೇರಿಗಳು ಅಂತಲೇ ಕುಪ್ರಸಿದ್ಧ. ಆ ಒಂದೆರೆಡು ಓಣಿಯ ಮಂದಿ ಊರಿನ ಇತರೇ ಜನರಿಂದ ಒಂದು ತರಹ ostracized. ಬಹಿಷ್ಕೃತರು. ಪಾಪ. ನಾವು ಆ ಊರಿಗೆ ಒಂದರೆಡು ಬಾರಿ ಹೋದರೂ ಆ ಡೇಂಜರಸ್ ಓಣಿಗಳಿಗೆ ಹೋಗುವ ಜುರ್ರತ್ ಮಾಡಲಿಲ್ಲ. ಹೋಗುವ ಕಾರಣವೂ ಇರಲಿಲ್ಲ. ಆದರೆ ಆ ಊರಿನ ಆ ಖತರ್ನಾಕ್ ಓಣಿಗಳ ಬಗ್ಗೆ ಕೆಟ್ಟ ಕುತೂಹಲ ಮಾತ್ರ ಇರುತ್ತಿತ್ತು.

ಇದು ಒಂದು ಊರಿನ ಒಂದೆರೆಡು ಓಣಿಗಳ ಮಾತಾಯಿತು. ಇಡೀ ಒಂದು ಹಳ್ಳಿಗೆ ಹಳ್ಳಿಯೇ ಮದ್ದು ಹಾಕುವವರ ಹಳ್ಳಿ ಅಂತಲೇ ಕುಖ್ಯಾತವಾಗಿದ್ದು ಸಹ ಇದೆ. ಊರಿನ ಹೆಸರು ಬೇಡ ಬಿಡಿ. ಅಲ್ಲೂ ನಮಗೆ ಪರಿಚಯದವರು ಇದ್ದಾರೆ.

ಒಮ್ಮೆ ಹೀಗಾಗಿತ್ತು. ೧೯೮೮ ಜುಲೈ ತಿಂಗಳು. ಚೆನ್ನೈಗೆ ಅಂದರೆ  ಅಂದಿನ ಮದ್ರಾಸಿಗೆ ಹೋಗಿದ್ದೆ. ನ್ಯಾಷನಲ್ ಲೆವೆಲ್ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು. ತಂದೆಯವರೂ ಜೊತೆಗೆ ಬಂದಿದ್ದರು. ಅಲ್ಲಿ ಹೋದಾಗ ಬೇರೆಬೇರೆ ಕಡೆಯಿಂದ ಬಂದಿದ್ದ ಇತರೇ ವಿದ್ಯಾರ್ಥಿಗಳೂ ಭೆಟ್ಟಿಯಾದರು. ಒಬ್ಬನ ಜೊತೆ ಮಾತಾಡುತ್ತಿದ್ದೆ. ಅವನೂ ಹವ್ಯಕನೇ. ಅಷ್ಟರಲ್ಲಿ ತಂದೆಯವರೂ ಅಲ್ಲಿಗೆ ಬಂದರು. ಸಹಜವಾಗಿ ಅವನ ಹತ್ತಿರ 'ನಿಂದು ಯಾವೂರಪ್ಪ?' ಅಂತ ಕೇಳಿದರು. ಹವ್ಯಕರು ಭೆಟ್ಟಿಯಾದಾಗ ಮೂಲ ಊರಿನ ಬಗ್ಗೆ ಕೇಳುವದು ವಾಡಿಕೆ. ಆ ಇನ್ನೊಬ್ಬ ಮಾಣಿ ಹೇಳಿದ ಊರಿನ ಹೆಸರು ಕೇಳಿ ಬೆಚ್ಚಿಬಿದ್ದವ ಮಾತ್ರ ನಾನು. ಮೇಲೆ ಹೇಳಿದ ಹಳ್ಳಿಯೇ ಅವನ ಮೂಲ. ಇಡೀ ಹಳ್ಳಿಯೇ ಮದ್ದು ಹಾಕುವವರ ಹಳ್ಳಿ ಅಂತ ಫೇಮಸ್ ಆಗಿತ್ತಲ್ಲ ಅದೇ ಅವನ ಮೂಲ ಊರು. ನಾನು ಅವನು ಏನೂ ತಿಂಡಿ ತೀರ್ಥ exchange ಮಾಡಿಕೊಳ್ಳುವ ಸಂದರ್ಭ ಬರಲಿಲ್ಲ ಬಿಡಿ. ಬಂದಿದ್ದರೆ ಅವನ ಮದ್ದು ಹಾಕುವ ಊರಿನ background ನನ್ನ ಮನಸ್ಸಿನ ಯಾವದೋ ಒಂದು ಮೂಲೆಯಲ್ಲಿ ಸಂಶಯದ ಸುಳಿಯೊಂದನ್ನು ಎಬ್ಬಿಸುತ್ತಿತ್ತೇನೋ? ಗೊತ್ತಿಲ್ಲ.

ನಂತರ ತಂದೆಯವರಿಗೆ ಅವನ ಊರಿನ ಬಗ್ಗೆ, ಆ ಊರಿನ 'ಮದ್ದು ಹಾಕುವವರ ಊರು' ಅನ್ನುವ ಕುಖ್ಯಾತಿಯ ಬಗ್ಗೆ ಹೇಳಿದೆ. ಅವರಿಗೆ ಗೊತ್ತೂ ಇರಲಿಲ್ಲ. ಯಾಕೆಂದರೆ ಅದು ಹೊನ್ನಾವರ ಸೀಮೆಯ ಊರಾಗಿರಲಿಲ್ಲ. ಮತ್ತೆ ನಮ್ಮ ತಂದೆಯವರೋ ದೊಡ್ಡ absentminded  professor. ಕೆಲಸಕ್ಕೆ ಬಾರದ ಯಾವ ವಿಷಯವೂ ಅವರ ತಲೆಯಲ್ಲಿ ಉಳಿಯುವದಿಲ್ಲ. ಅಂತದ್ದೆಲ್ಲ ಉಪಯೋಗಿಲ್ಲದ ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ ಎಲ್ಲ ನಮ್ಮದೇ ಕೆತ್ತೆಬಜೆ ಕಾರ್ಬಾರ್. ಅದಕ್ಕೇ ತಾನೇ ಇಂತಹ ಬ್ಲಾಗ್ ಬರೆಯುತ್ತಿದ್ದೇವೆ? :)

ಈ ಮದ್ದು ಹಾಕುವದರ ಬಗ್ಗೆ ಯಾವದೇ ತರಹದ scientific investigation ಆಗಿಲ್ಲ ಅಂತ ಭಾವನೆ. ಯಾಕೆಂದರೆ ಯಾರೂ ಡಾಕ್ಟರ್  ಹತ್ತಿರ 'ನನಗೆ ಮದ್ದು ಹಾಕಿದ್ದಾರೆ. ಔಷಧಿ ಕೊಡಿ,' ಅಂತ ಹೋದ ಬಗ್ಗೆ ಮಾಹಿತಿಯಿಲ್ಲ. ಮದ್ದು ತೆಗೆಸಲು ಹೋಗುವದು traditional ಗೌಡನ ಹತ್ತಿರವೇ. ಹಾಗಾಗಿ ಮಾಡ್ರನ್ ವೈದ್ಯರಿಗೆ ಇದರ ಬಗ್ಗೆ ಗೊತ್ತೇ ಇಲ್ಲ. ಆದರೂ ಒಂದೆರೆಡು ಪರಿಚಿತ ಡಾಕ್ಟರ್ ಹತ್ತಿರ ಇದರ ಬಗ್ಗೆ ಕೇಳಿದ್ದೇನೆ. 'ಆ ಮದ್ದು ಅನ್ನುವ ವಿಷದಿಂದ ಏನೋ bacterial infection ಆಗಿ digestive system ಅನ್ನು ಖರಾಬ್ ಮಾಡುತ್ತದೆ ಅಂತ ನಮ್ಮ ಭಾವನೆ. wide spectrum antibiotics ಕೊಟ್ಟರೆ ಎಲ್ಲ ಸರಿಹೋಗಬಹುದು. ಜೊತೆಗೆ saline, drips ಕೊಟ್ಟು hydrate ಮಾಡಬೇಕು. ಅಷ್ಟು ಮಾಡಿದರೆ ಆರಾಮ್ ಆಗುತ್ತಾರೆ ಅಂತ ನಮ್ಮ ಭಾವನೆ,' ಅಂದರು ಡಾಕ್ಟರ್. ಆದರೆ ಯಾರೂ ಆ ರಿಸ್ಕ್ ತೆಗೆದುಕೊಳ್ಳುವದಿಲ್ಲ. ಈ ಮಾಡ್ರನ್ ಡಾಕ್ಟರ 'ನಮ್ಮ ಭಾವನೆ, ನಮ್ಮ ಭಾವನೆ' ಅನ್ನುವ ಮಾತು ಕೇಳುತ್ತ ಕೂತರೆ ಮದ್ದು ಹಾಕಿಸಿಕೊಂಡ ಹವ್ಯಕ ಭಾವಯ್ಯ ಶಿವಾಯ ನಮಃ ಆಗಿಹೋದರೇ? ಅದೆಲ್ಲ ಬೇಡ ಅಂತ ಮದ್ದು ತೆಗೆಯುವ ಗೌಡನ ಮನೆಗೆ ಓಡುತ್ತಾರೆ. ಒಟ್ಟಿನಲ್ಲಿ ಈ ಮದ್ದು ಹಾಕುವದರ ಬಗ್ಗೆ ಒಂದು scientific ಅಧ್ಯಯನ ಆಗೇ ಇಲ್ಲ. ಅದರಲ್ಲೂ ಮದ್ದು ಹಾಕಿಸಿಕೊಂಡವನ ಹೊಟ್ಟೆಯಲ್ಲಿ ಮತ್ತೊಂದು ಹಲ್ಲಿ ಹುಟ್ಟಿ, ಅದೇ ಅವನ ಸಾವಿಗೆ ಕಾರಣವಾಗುವ ಬಗ್ಗೆಯಾದರೂ ಒಂದು ಅಧ್ಯಯನವಾಗಬೇಕಿತ್ತು. ಒಳ್ಳೆ horror ಸಿನೆಮಾದ ಕಥೆಯಂತಿದೆ ಆ ಕಲ್ಪನೆ - ಹೊಟ್ಟೆಯಲ್ಲಿ ಜೀವಂತ ಹಲ್ಲಿ!

ಇನ್ನು ನಮ್ಮ ಮನೆತನದಲ್ಲಿ ಅಜ್ಜ (ತಾಯಿಯ ತಂದೆ) ಒಬ್ಬರಿಗೇ ಮದ್ದು ಬಿದ್ದಿದ್ದು. ಅದೂ ಯಾವದೋ ಕಾಲದಲ್ಲಂತೆ. ಆಗ ನಾವಿನ್ನೂ ಹುಟ್ಟಿರಲಿಲ್ಲ. ಅಜ್ಜಿ (ತಾಯಿಯ ತಾಯಿ) ಮಾತ್ರ ಅದರ ಬಗ್ಗೆ ಒಂದೆರೆಡು ಬಾರಿ ಮಾತಾಡಿ, ಮದ್ದು ಹಾಕಿದ(!) ಮತ್ತೊಬ್ಬ ಮಹಿಳೆಗೆ ಮಾತಿನಲ್ಲೇ ಹಿಡಿಶಾಪ ಹಾಕಿದ್ದು ಬರೋಬ್ಬರಿ ನೆನಪಿದೆ. ಅದು ಯಾವಾಗಲೋ ಅಜ್ಜ, ಅಜ್ಜಿಯ ಮದುವೆಯಾದ ಹೊಸದರಲ್ಲಂತೆ. ಅಲ್ಲೇ ಸ್ವಲ್ಪ ದೂರದ ಊರಿನ ದೊಡ್ಡ ಮನೆತನದ ಮಹಿಳೆಯೊಬ್ಬಳು ಅಜ್ಜನಿಗೆ ಮದ್ದು ಹಾಕಿದ್ದಳು ಅಂತ ಅಜ್ಜಿಯ ಖಡಕ್ ನಂಬಿಕೆ. ಈಗ ಕೇಳೋಣ ಅಂದರೆ ಅಜ್ಜಿ ತನ್ನ ಅರವತ್ತೂ ಚಿಲ್ಲರೆ ವಯಸ್ಸಿನಲ್ಲಿ ಈಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಶಿವಾಯ ನಮಃ ಆಗಿಹೋದಳು. ಆಗ ಅಜ್ಜಿಯನ್ನು ಗೋಳಾಡಿಸುವದು ಮಾತ್ರ ಗೊತ್ತಿತ್ತೇ ವಿನಃ ಇಂತದ್ದರ ಬಗ್ಗೆ ಮಾಹಿತಿ ತೆಗೆಯುವ ಬುದ್ಧಿ ಬಂದಿರಲಿಲ್ಲ. ಈಗ ಬಂದಿದೆ. ಅಜ್ಜಿಯೂ ಇಲ್ಲ. ಅಜ್ಜನೂ ಇಲ್ಲ. ತಾರುಣ್ಯದಲ್ಲಿ ಮದ್ದು ಹಾಕಿಸಿಕೊಂಡು ಆರೋಗ್ಯ ಕೊಂಚ ಮಟ್ಟಿಗೆ ಬರ್ಬಾದ್ ಆಗಿದ್ದರೂ ತನ್ನ ೯೫ ನೇ ವಯಸ್ಸಿನಲ್ಲಿ ಈಗ ಎರಡ್ಮೂರು ವರ್ಷದ ಹಿಂದೆ ಶಿವಾಯ ನಮಃ ಆದ ಅಜ್ಜ. ಮದ್ದು ಹಾಕಿಸಿಕೊಳ್ಳುವ ಮೊದಲು ಸಿಕ್ಕಾಪಟ್ಟೆ ಸ್ಪುರದ್ರೂಪಿಯಾಗಿದ್ದನಂತೆ ಅಜ್ಜ. ಒಮ್ಮೆ ಮದ್ದು ಹಾಕಿಸಿಕೊಂಡ ಮೇಲೆ ಮೊದಲಿನ ರೂಪ ಬರಲೇ ಇಲ್ಲ ಅಂತ ಅಜ್ಜಿ ಹೇಳುತ್ತಿದ್ದಳು. ಅಷ್ಟು handsome ಇದ್ದಿದ್ದಕ್ಕೆಯೇ ಹತ್ತಿರದ ಊರಿನ ಯಾವದೋ ಅತೃಪ್ತ ಆಂಟಿ ಅಜ್ಜನಿಗೆ ಮದ್ದು ಹಾಕಿದ್ದಳೇ? ಇದ್ದರೂ ಇರಬಹದು.

ಯಂಡಮೂರಿ ವೀರೇಂದ್ರನಾಥ ಅವರ ಕಾದಂಬರಿಯೊಂದರಲ್ಲಿ ಮದ್ದು ಹಾಕುವದರ ಬಗ್ಗೆ ಓದಿದ ನೆನಪು. ಅಲ್ಲೂ ಹೆಚ್ಚಿನ ಮಾಹಿತಿ ಏನೂ ಇದ್ದ ನೆನಪಿಲ್ಲ. ಹಲ್ಲಿಯನ್ನು ನೇತಾಕಿ ಮದ್ದಿನ ವಿಷ ತೆಗೆಯುವ ವಿಧಾನ ಬರೆದಿದ್ದರು. ಅಷ್ಟೇ. ಅದೂ ಅವರ ಕಥೆಗೆ ಪೂರಕವಾಗಿ. ತೆಲಗು ಮೂಲದ ಕಾದಂಬರಿ. ಕನ್ನಡಕ್ಕೆ ಅನುವಾದವಾಗಿತ್ತು. ಹೆಸರು ನೆನಪಿಲ್ಲ.

೧೯೯೦ ರ ನಂತರ ಮದ್ದು ಹಾಕುವದರ ಬಗ್ಗೆ ಜಾಸ್ತಿ ಕೇಳಿಲ್ಲ. ಮತ್ತೆ ನಮಗೆ ಆಕಡೆಯ ಸಂಪರ್ಕವೂ ಕಮ್ಮಿಯಾಗಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಆ ಪದ್ಧತಿ ಇನ್ನೂ ಜೀವಂತವಾಗಿದೆಯೋ ಅಥವಾ ನಶಿಸಿಹೋಗಿದೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ. ಮಾನವ ಸಹಜ ತಮೋ ಗುಣಗಳಾದ ಮತ್ಸರ, ದ್ವೇಷ, ಹೊಟ್ಟೆಕಿಚ್ಚು ಹೋಗಿರುವದಿಲ್ಲ. ಮದ್ದು ಹಾಕುವದು ಎಂಬ ಪದ್ಧತಿ ಹೋಗಿದ್ದರೂ ಅದರ ಸಾವಿರಪಟ್ಟು ವಿಷಪೂರಿತವಾದ ಮತ್ತೊಂದು ಏನಾದರೂ ಹುಟ್ಟಿಕೊಂಡಿರುತ್ತದೆ. ಈಗ ಹೊಟ್ಟೆಗೆ ಮದ್ದು ಹಾಕುವ ಜರೂರತ್ತಿಲ್ಲ. ತಲೆಗೇ ಮದ್ದು ಹಾಕಿಬಿಡುತ್ತಾರೆ. ಅಂದರೆ ತಲೆ ಕೆಡಿಸಿಬಿಡುತ್ತಾರೆ. ಹೊಟ್ಟೆಗೆ ಮದ್ದು ಹಾಕಿಸಿಕೊಂಡರೆ ಗೌಡ ಕೊಡುವ ಪ್ರತಿಮದ್ದಾದರೂ ಇತ್ತು. ತಲೆಗೆ ಮದ್ದು ಹಾಕಿಸಿಕೊಂಡರೆ ಅಷ್ಟೇ ಮತ್ತೆ! ಅದಕ್ಕೆ ಪ್ರತಿಮದ್ದಿಲ್ಲ. ನಂತರ ಹೊಗೆ ಹಾಕಿಸಿಕೊಳ್ಳುವದೇ. 

ಮದ್ದು ಹಾಕುವದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಹಂಚಿಕೊಳ್ಳಿ.

7 comments:

Steve B said...


Similar stories abound in Tasmania.

sunaath said...

ಕುಮಟಾ, ಹೊನ್ನಾವರ ಮೊದಲಾದ ಊರುಗಳಲ್ಲಿ ‘ಮದ್ದು ಹಾಕುತ್ತಾರೆ’ ಎನ್ನುವ ಕತೆಯು ನಮ್ಮ ಬಯಲುಸೀಮೆಯ ಊರಾದ ನವಿಲುಗುಂದದಲ್ಲಿಯೂ ಪ್ರಚಲಿತವಿತ್ತು ಎಂದರೆ, ಈ operationದ ಪ್ರಖ್ಯಾತಿ ಎಷ್ಟಿತ್ತು ನೋಡಿರಿ. ಇಂತಹ ಮತ್ತೊಂದು ವದಂತಿ ಎಂದರೆ, ಗೋಕರ್ಣಕ್ಕೆ ಅಪರಕ್ರಿಯೆಗೆ ಹೋದಾಗ, ಅಲ್ಲಿಯ ಭಟ್ಟರು, ಗ್ರಾಹಕರ ಬಂಗಾರವನ್ನು ದೋಚಿ, ಅವರನ್ನು ಸುಣ್ಣದ ಹಗೆಗಳಲ್ಲಿ ನುಗಿಸಿಬಿಡುತ್ತಾರೆ ಎನ್ನುವುದು. ನೋಡಿ, ಎರಡೆರಡು ಅಪರಕ್ರಿಯೆಗಳು ಒಂದೇ ಏಟಿನಲ್ಲಿ! ನಮ್ಮ ಕಡೆ ‘ಕೇರು ಹಾಕುವುದು’ ಚಾಲ್ತಿಯಲ್ಲಿತ್ತು. ಮಕ್ಕಳಿಲ್ಲದ ಹೆಂಗಸರು, ಚಿಕ್ಕಮಕ್ಕಳು ಸಿಕ್ಕಿದಾಗ, ಅವರ ಬೆನ್ನುಹುರಿಯ ಮೇಲೆ ಕೇರಡಿಕೆಯನ್ನು ಒತ್ತಿ ಬಿಡುತ್ತಿದ್ದರು. ಇದರಿಂದಾಗಿ ಇಂತಹ ಮಕ್ಕಳು, ಸೊರಗಲು ಪ್ರಾರಂಭಿಸುತ್ತಿದ್ದವು. ಈ ಕಾರ್ಯಕ್ಕೆ ಪ್ರತಿಕಾರ್ಯವೂ ಇರಲಿಲ್ಲ. ಏನೆ ಆದರೂ ಈ ಮಕ್ಕಳು ಸಾವನ್ನೇನು ಅಪ್ಪುತ್ತಿರಲಿಲ್ಲ. ಇಂತಹ native wonders ಈಗ ಮಾಯವಾಗಿ ಬಿಟ್ಟಿವೆ. ಪುಟ್ಟ ಹುಡುಗರ ತಲೆ ಕೆಡಿಸಲು ಏನನ್ನು ಹೇಳಬೇಕೊ ತಿಳಿಯದಾಗಿದೆ. ಆದುದರಿಂದ ನಿಮ್ಮ ಲೇಖನವನ್ನು ಓದಿ, ಚಿಕ್ಕ ಹುಡುಗನಂತೆ ರೋಮಾಂಚನವನ್ನು ಅನುಭವಿಸಿದೆ! ಧನ್ಯವಾದಗಳು.

ವಿ.ರಾ.ಹೆ. said...

Interesting....

Mahesh Hegade said...

ಥ್ಯಾಂಕ್ಸ್ ಸುನಾಥ್ ಸರ್. ಕೆಲವು additional ಸಂಗತಿಗಳನ್ನೂ ತಿಳಿಸಿದ್ದೀರಿ. ಧನ್ಯವಾದ.

Mahesh Hegade said...

Thanks Vikas.

Shivanandana said...

ಒಳ್ಳೆಯ ಲೇಖನ...

ನನ್ನ ತಂದೆಯ ಊರು ಸಹ ಕುಮಟ.. ನೀವು ಹೇಳಿದ (ಕು)ಪ್ರಸ್ಸಿದ ಜಾಗಗಳ ಹೆಸರು ನನಗೆ ಗೊತ್ತಿದೆ.. :-)
ಈ 'ಮದ್ದಿನ' ಬಗ್ಗೆ ನಾನು ತುಂಬಾ ಅನ್ವೇಷಣೆ ಮಾಡಿದ್ದೆ (ಒಂದು ಕಾಲದಲ್ಲಿ). ಇದು ಒಂದು ರೀತಿ ಮಾಟ-ಮಂತ್ರದ ಹಾಗೆ..
ಹಾಗೆಯೇ, ಆ ಕಡೆ ಜನಕ್ಕೆ... ಸುಮ್ನೆ .. ' ಯಂತಕ್ ಜೀರ್ ಆಗೂಯಿದ್ಯ? ನಿಂಗ್ ಯಾರೋ ಮದ್ ಹಾಕಿದ್ವಕ'.... ಅಂತ ಹೇಳಿದ್ರೆ ಸಾಕು, ಮಾನಸಿಕವಾಗಿ ಕುಗ್ಗಿ, ಮತ್ತೂ ರೋಗಿಗಳಾಗುತಿದ್ದರು..

ನೀವು ಹೇಳಿದಂತೆ, ವಿಕೃತ ಮನಸ್ಸಿನವರು ಮಾಡುವ ಪ್ರಯತ್ನ. ಆದರೆ ಇದು ಯಶಸ್ವಿ - ಆಗಲು ಬಹುದು ಆಗದೆಯೂ ಇರಬಹುದು... ಹಳೆಯ ಕಾಲದಲ್ಲಿ ಇದನ್ನು ಕೆಲವು ಗಿಡದ ಬೀಜದಿಂದ ತಯಾರಿಸುತ್ತಿದ್ದರಂತೆ.. ಆಮೇಲೆ, ಅರಣ್ಯ ಕಡಿಮೆ ಆಗಿ, ಆ ಜಾತಿಯ ಗಿಡವೇ ಇಲ್ಲವಾಯಿತು.. ನಂತರ ಹಲ್ಲಿ ಮತ್ತು ಇತರೆ ವಿಷ ಜಂತುವಿನಿಂದ ತಯಾರಿಸ ತೊಡಗಿದರು...

ಪಾಪ... ಆ ಒತಿಕ್ಯಾತಗಳು (ಕಲರ್ ಹಲ್ಲಿ) ಗಳು ಈಗ ಸಂಪೂರ್ಣ ನಶಿಷಿ ಹೋಗಿವೆ.. :-(

ಇನ್ನೊಂದು ಮಾತಿದೆ... ಒಂದು ಸಲ ಮದ್ದು ಹಾಕಲು ಶುರು ಮಾಡಿದವರು.. ಮತ್ತೆ ಮತ್ತೆ ಮದ್ದು ಹಾಕಲೇ ಬೇಕಂತೆ... ಯಾರೂ ಸಿಗದೇ ಹೋದರೆ..ಕೊನೆಗೆ ತಮ್ಮೆ ಸ್ವಂತ ಮಕ್ಕಳಿಗೇ ಹಾಕುತ್ತಾರಂತೆ!! ಹೀಗೂ ಉಂಟು..

ಮತ್ತೊಂದು ವಿಷಯ .. ನಾವು ಚಿಕ್ಕವರಿದ್ದಾಗ.. "ಮಾಣಿ, ನಿಂಗೆ ಇಲ್ಲಿ ಬಾಳೆ ಎಲೆ ಹಾಕಿದ್ನೋ" ಹೇಳಿ ಯಾರದು ಹೇಳಿದ್ರೆ, ಅಲ್ಲಿ ಕೂರಬಾರದು... 'ಮದ್ದು ಹಾಕಿರ್ತಾರೆ' ಅಂತ ಹೆದರಿಸ್ತ ಇದ್ರು..

ಅಂದ ಹಾಗೆ, ನಾನು 'ಕನ್ನಡ ಪುಸ್ತಕಗಳನ್ನ' ( PDF ) ಹುಡುಕಿಕೊಂಡು ಇಲ್ಲಿ ಬಂದೆ.. ಹಾಗೆ ನಿಮ್ಮ ಬರಹಗಳನ್ನು ಓದಲು ಶುರು ಮಾಡಿದೆ... ತುಂಬಾ ಚೆನ್ನಾಗಿದೆ.. KEEP IT UP !

- ಶಿವನಂದನ ಹೆಗಡೆ

Mahesh Hegade said...

ಧನ್ಯವಾದಗಳು ಶಿವಾನಂದನ. ನನಗೆ ಮರೆತುಹೋಗಿದ್ದ, ಗೊತ್ತಿರದಿದ್ದ ಕೆಲವು ಉತ್ತಮ ವಿಷಯಗಳನ್ನು ಪ್ರಸ್ತಾಪಿಸಿದ್ದೀರಿ. ಥ್ಯಾಂಕ್ಸ್.