Saturday, March 12, 2016

ಶೆರೆದಂಗಡಿ ಬಾಜೂಕನೇ ಮನಿ ಮಾಡಿದ ದೋಸ್ತನ ಕಥಿ...

ಮೊನ್ನೆ ಇಲ್ಲೇ ಇರುವಂತಹ ದೋಸ್ತ ಒಬ್ಬವಂಗ ಫೋನ್ ಮಾಡಿದ್ದೆ. ರಾತ್ರಿ ಸುಮಾರು ಒಂಬತ್ತರ ಸುಮಾರಿಗೆ. ಅವನೂ ಊಟ ಗೀಟ ಮುಗಿಸಿ ಕೂತಿರಬಹುದು ಅಂದ್ಕೊಂಡೆ. ನಂದೂ ಊಟ ಮುಗಿದಿತ್ತು. ಮಾತಾಡಿ, ಹರಟಿ ಹೊಡದು ನಂತರ ಮಕ್ಕೊಂಡರಾತು ಅಂತ ವಿಚಾರ ಮಾಡಿ ಫೋನ್ ಹಚ್ಚಿದೆ.

ಸುಮಾರು ಹೊತ್ತು ರಿಂಗ್ ಆದ ಮ್ಯಾಲೆ ಫೋನ್ ಎತ್ತಿ, ಗೊಗ್ಗರು ಧ್ವನಿಯಾಗ 'ಹಲೋ' ಅಂದ. ಆ ತೇಲ್ಯಾಡೋ ಧ್ವನಿ ಕೇಳೇ ಗೊತ್ತಾತು ಸಾಹೇಬರು ಫುಲ್ ತೀರ್ಥ ತೊಗೊಂಡು ಕೂತುಬಿಟ್ಟಾರ ಅಂತ. ನಾನು ಹಳೆ ದೋಸ್ತ ಫೋನ್ ಮಾಡೇನಿ  ಅನ್ನುವ ಪ್ರೀತಿಯಿಂದ ನಶಾ ತಲಿಗೇರಿ ಫುಲ್ ಚಿತ್ತ ಆಗಿದ್ದರೂ ಫೋನ್ ಎತ್ತಿ ಹಲೋ ಅಂದಿದ್ದಾ ಅಂತ ಕಾಣಿಸ್ತದ. ಒಳ್ಳೆ ದೋಸ್ತ.

'ಏನಪಾ? weekday ದಿನ ಸಹಿತ ತೀರ್ಥ ತೊಗೊಂಡು ಕೂತಂಗದ?' ಅಂತ ಅಂದೆ.

'ಹೂಂನಪಾ. ಸ್ವಲ್ಪ ತೊಗೊಂಡೆ. ಕೆಟ್ಟ ಹಡಬಿಟ್ಟಿ ಕೆಲಸ ನೋಡು. ಸಾಕಾಗಿ ಹೋಗ್ಯದ,' ಅಂತ ಹುಸ್ ಅಂದ. ನಮ್ಮ ವಯಸ್ಸಿನ ಮಂದಿದು ಇದೇ ಕರ್ಮ. retired ಆಗೋವಷ್ಟು ಭಾಳ tired ಆಗಿಬಿಟ್ಟಿರ್ತದ. ಆದರೆ ರಿಟೈರ್ ಆಗಲಿಕ್ಕೆ ಬೇಕಾಗಿರುವ ದೊಡ್ಡ ಸೈಜಿನ ರೊಕ್ಕದ ಗಂಟು ಕೂಡಿರೋದಿಲ್ಲ. ಹಾಂಗಾಗಿ ಇನ್ನೊಂದು ಇಪ್ಪತ್ತು ವರ್ಷ ಗಧಾ ಮಜದೂರಿ ಮಾಡಲಿಕ್ಕೇಬೇಕು.

'ಹೂಂ. ಮತ್ತೇನು ವಿಶೇಷಾ?' ಅಂದೆ.

'ಮನಿ ಬದಲು ಮಾಡಿದೆ ನೋಡಪಾ. ಬಾ ಅಲ್ಲಾ ಯಾವಾಗರ ಈಕಡೆ. ಹೊಸಾ ಮನಿ ನೋಡಿ ಹೋಗು. ಹಾಂಗ ನೀ ಬಂದಾಗ ಗಿಚ್ಚಾಗಿ ಪಾರ್ಟಿ ಮಾಡೋಣ,' ಅಂದ. ದೊಡ್ಡ ಮನಸ್ಸಿನ ಹಳೆ ಗೆಳೆಯ.

'ಥ್ಯಾಂಕ್ಸ್ ದೋಸ್ತ. ಏನು ವಿಶೇಷ? ಯಾಕ ಮನಿ ಬದಲು ಮಾಡಿದಿ? ಮೊದಲಿಂದು ಮಸ್ತ ಇತ್ತಲಾ? ಯಾಕ ಚೇಂಜ್ ಮಾಡಿದಿ?' ಅಂತ ಕೇಳಿದೆ.

'ಅದು ಏನಾತು ಅಂದ್ರ ಆ ಮನಿಯಿಂದ ಶೆರೆದಂಗಡಿ (liquor shop) ಭಾಳ ದೂರ ಇತ್ತು ನೋಡಪಾ. ಶೆರೆದಂಗಡಿ ಹತ್ತಿರ ಇರೋ ಮನಿ ಬೇಕು ಆನ್ನಿಸ್ತು. ಈ ಮನಿ ಬಾಜೂಕss ಶೆರೆದಂಗಡಿ ಅದ,' ಅಂದುಬಿಟ್ಟ. ಶಿವಾಯ ನಮಃ!

'ಏನಂತ ಮಾತಲೇ ನಿಂದು? ಶೆರೆದಂಗಡಿ ಬಾಜೂಕಿನ ಮನೀನಾ? ಯಾಕ? ಅಂತಾದ್ದೇ ಮನಿ ಯಾಕ ಬೇಕಾಗಿತ್ತು?' ಅಂತ ಕೇಳಿದೆ.

'ಈ ಶೆರೆ (ಮದ್ಯ) ಕುಡಿಯೋದು ಕಮ್ಮಿ ಮಾಡಬೇಕಾಗ್ಯದೋ ಮಾರಾಯಾ. ಅದಕ್ಕೇ ಶೆರೆದಂಗಡಿ ಬಾಜೂಕ ಮನಿ ಮಾಡಿದೆ ನೋಡಪಾ,' ಅಂದ. ಸೊರ್ರ ಅಂತ ಏನೋ ಸಿಪ್ ತೊಗೊಂಡ ಸಣ್ಣ ಸೌಂಡ್ ಬಂತು. ಇಷ್ಟೊತ್ತು ಮಾತಾಡಿ ಗಂಟಲು ಆರಿರಬೇಕು. ತೀರ್ಥ ತೊಗೊಂಡ.

ಇವಂದೇನೋ ವಿಚಿತ್ರ ಕೇಸ್ ಇದ್ದಂಗ ಕಾಣಿಸ್ತದ. ಅಲ್ಲಾ, ಶೆರೆ ಕುಡಿಯೋದನ್ನ ಕಮ್ಮಿ ಮಾಡಬೇಕು ಅಂತನೂ ಹೇಳ್ತಾನ. ಅದಕ್ಕಾಗಿಯೇ ಶೆರೆದಂಗಡಿ ಬಾಜೂಕೇ ಮನಿ ಮಾಡಿದೆ ಅಂತಾನ. ಅಲ್ಲಾ, ಕುಡಿಯೋದನ್ನ ಕಮ್ಮಿ ಮಾಡಬೇಕು ಅನ್ನವರು ಶೆರೆದಂಗಡಿಯಿಂದ ದೂರ ಇದ್ದಷ್ಟು ಒಳ್ಳೆಯದು. ಅಲ್ಲೇನ್ರೀ?

'ಏನಲೇ ಇದು ವಿಚಿತ್ರಾ? ತಿಳಿವಲ್ತು. ನಿನಗ ಭಾಳ ನಶಾ ಏರಿದ್ರ ನಾ ಮತ್ತ ಯಾವಗರೆ ಫೋನ್ ಮಾಡ್ತೇನಿ. ಈಗ ಫೋನ್ ಇಡ್ಲೇನು?' ಅಂತ ಕೇಳಿದೆ. ಚಿತ್ತಾದ ಕುಡಕ ದೋಸ್ತ ಏನು ಹೇಳಲಿಕತ್ತದೋ ಏನೋ. ಒಟ್ಟ ತಿಳಿವಲ್ತು.

'ಏ, ಹಾಂಗೇನ ಇಲ್ಲಾ. ಮಾತಾಡು,' ಅಂದ. ಧ್ವನಿ ಮಾತ್ರ ಮತ್ತೂ ಜೋಲಿ ಹೊಡಿಲಿಕತ್ತಿತ್ತು.

'ವಿವರಿಸಿ ಹೇಳಪಾ. ಶೆರೆ ಕುಡಿಯೋದನ್ನ ಕಮ್ಮಿ ಮಾಡಬೇಕು ಅನ್ನವಾ ಶೆರೆದಂಗಡಿ ಬಾಜೂಕೇ ಯಾಕ ಮನಿ ಮಾಡಿದಿ?' ಅಂತ clarification ಕೇಳಿದೆ.

'ಶೆರೆ ಕಮ್ಮಿ ಮಾಡಬೇಕು ಅಂತ ವಿಚಾರ ಮಾಡಿದೆ. ಶೆರೆ ಕಮ್ಮಿ ಮಾಡಬೇಕು ಅಂದ್ರ ಮನಿಯೊಳಗ ಜಾಸ್ತಿ ಶೆರೆ ಇಟ್ಟುಕೋಬಾರದು. ಹೌದಿಲ್ಲೋ?' ಅಂತ ಪೀಠಿಕೆ ಇಟ್ಟ.

'ಬರೋಬ್ಬರಿ ಅದ. ಸ್ವಲ್ಪೇ ಶೆರೆ ತಂದಿಟ್ಟುಕೊಂಡು, ಅದನ್ನಷ್ಟೇ ಕುಡಿದು, ಲಗೂನೇ ಊಟ ಮಾಡಿ, ಮಕ್ಕೊಂಡುಬಿಡಬೇಕು. ಅದು ಬರೋಬ್ಬರಿ ಅದ. ಮುಂದ?' ಅಂತ ಕೇಳಿದೆ.

'ನಾನೂ ಹಾಂಗೇ ವಿಚಾರ ಮಾಡಿಯೇ, ಸ್ವಲ್ಪ ಸ್ವಲ್ಪ ಶೆರೆ ತೊಗೊಂಡು ಬಂದು ಕುಡಿಲಿಕ್ಕೆ ಕೂಡ್ತೇನಿ ನೋಡಪಾ. ಆದ್ರ ನಂತರ ಲಫಡಾ ಆಗಿಬಿಡ್ತದ,' ಅಂದ.

'ಏನು ಲಫಡಾ ಆಗ್ತದಪಾ?' ಅಂತ ಕೇಳಿದೆ. ಕುಡಿದ ಮ್ಯಾಲೆ ಆಗೋದೆಲ್ಲ ಲಫಡಾಗಳೇ. ಆದರೂ ಆ ಲಫಡಾಗಳಲ್ಲೇ ಯಾವ ಲಫಡಾ ಅಂತ ಕೆಟ್ಟ ಕುತೂಹಲ.

'ಏನು ಲಫಡಾ ಆಗ್ತದ ಅಂದ್ರ ತಂದ ಸ್ವಲ್ಪೇ ಶೆರೆ ಗಂಟಲದಾಗ ಬಿಟ್ಟುಕೊಳ್ಳೋ ತನಕಾ ಸ್ವಲ್ಪ ನಶಾ ಏರಿ ಇನ್ನೂ ಶೆರೆ ಬೇಕು ಅನ್ನಸ್ತದನೋ. ಬೇಕೇಬೇಕು ಅನ್ನಿಸ್ತದ. ಸ್ವಲ್ಪೇ ಶೆರೆ ಕುಡಿದು ಮಲಗೋಣ ಅಂತ ಮೊದಲು ಡಿಸೈಡ್ ಮಾಡಿದ್ದು ಎಲ್ಲಾ ಗಾಳಿಗೆ ಹಾರಿಹೋಗ್ತದ. ಮರ್ತೇಹೋಗ್ತದ. ಆವಾಗ ಮನಸ್ಸಿನ್ಯಾಗ ಇರೋದು ಅಂದ್ರ ಇನ್ನೂ ಶೆರೆ ಬೇಕು. ಭಾಳ ಬೇಕು. ಈಗೇ ಬೇಕು. ಶೆರೆ ಶೆರೆ. ಬೇಕೇಬೇಕು. ಇದೇ ಒಂದು ತಲಿಯಾಗ ಬರ್ತದ ನೋಡಪಾ,' ಅಂತ ಹೇಳಿ ಸಿಪ್ ತೆಗೆದುಕೊಳ್ಳಲು ಮಾತು ನಿಲ್ಲಿಸಿದ. 

ವಿಚಿತ್ರ ಕೇಸು. ಶೆರೆ ಬಿಡಬೇಕು ಅಂತ ಹೇಳಿ ಸ್ವಲ್ಪೇ ಶೆರೆ ತರ್ತಾನಂತ. ಆದ್ರ ಅಷ್ಟು ಕುಡಿದ ಮ್ಯಾಲೆ ಮತ್ತೂ ಶೆರೆ ಬೇಕೇಬೇಕು ಅಂತ ಭಾಳ ಅನ್ನಿಸ್ತದ ಅಂತ. ವಿಚಿತ್ರ ದೋಸ್ತ.

'ಸರಿ. ತಂದ ಸ್ವಲ್ಪೇ ಸ್ವಲ್ಪ ಶೆರೆ ಕುಡಿದಾದ ಮೇಲೆ ಮತ್ತೂ ಬೇಕು ಅಂತ ಅನ್ನಿಸ್ತದ. ಮುಂದ? ಏನು ಮಾಡ್ತೀ ಆವಾಗ?' ಅಂತ ಕೇಳಿದೆ.

'ಮೊದಲಿನ ಮನ್ಯಾಗ ಇದ್ದಾಗ ಶೆರೆದಂಗಡಿ ಸ್ವಲ್ಪ ದೂರ ಇತ್ತು. ಎಂತಾ ನಶಾ ಇದ್ದರೂ ಅದೇ ನಶಾದಾಗ ಡ್ರೈವ್ ಮಾಡಿಕೊಂಡು ಹೋಗಿ ಶೆರೆ ತೊಗೊಂಡು ಬರ್ತಿದ್ದೆ. ನಮ್ಮ ಕ್ಯಾಲಿಫೋರ್ನಿಯಾ ರಾಜ್ಯ ಅಂದ್ರ ಮಸ್ತ ನೋಡು. ರಾತ್ರಿ ಎರಡರಿಂದ ಮುಂಜಾನೆ ಆರರ ತನಕ, ಒಂದು ನಾಲ್ಕು ತಾಸು ಶೆರೆ ಮಾರಂಗಿಲ್ಲ. ದಿನದಾಗ ಬಾಕಿ ಇಪ್ಪತ್ತೂ ತಾಸೂ ಶೆರೆ ಸಿಗ್ತಾವ ನೋಡಪಾ. ಬೆಸ್ಟ್. ರಾತ್ರಿ ಎರಡು ಹೊಡೆಯೋಕಿಂತ ಮೊದಲು ಹೋಗಿ ತಂದುಬಿಟ್ಟರಾತು. ನಂತರ ಮತ್ತ ಮುಂಜಾನೆ ಆರರಿಂದ ಸಿಗ್ತದ. ನಡು ನಾಲ್ಕು ತಾಸು ಇಲ್ಲ ಅಷ್ಟೇ,' ಅಂದ.

'ಶಿವ ಶಿವಾ! ಏನಲೇ ಇದು? ನಶಾದಾಗ ಗಾಡಿ ಹೊಡಕೊಂಡು ಹೋಗಿ ಶೆರೆ ತರೋದರ ಬದಲಿ ಸ್ವಲ್ಪ ಹೆಚ್ಚೇ ಶೆರೆ ತಂದು ಇಟ್ಟುಕೊಳ್ಳಲಿಕ್ಕೆ ಏನು ಧಾಡಿಲೇ ನಿನಗ?' ಅಂತ ಕೇಳಿದೆ.

'ಹೇಳಿದನಲ್ಲೋ! ಶೆರೆ ಕಮ್ಮಿ ಮಾಡಬೇಕು ಅಂತ ವಿಚಾರ ಮಾಡೇನಿ ಅಂತ. ಹಾಂಗಿದ್ದಾಗ ತರೋವಾಗೇ ಸ್ವಲ್ಪ ಹೆಚ್ಚಿಗೆ ತೊಗೊಂಡು ಬಾ ಅಂತೀಯಲ್ಲಾ? ಹಾಂ?' ಅಂದ.

'ಮತ್ತೇನಲೇ? ಶೆರೆ ಕಮ್ಮಿ ಮಾಡಬೇಕು ಅಂತ ವಿಚಾರ ಮಾಡಿ ಕಮ್ಮಿ ತರ್ತಿ. ಅಷ್ಟು ಕುಡಿದ ಮ್ಯಾಲೆ ಮತ್ತೂ ಬೇಕು ಅನ್ನಿಸ್ತದ. ಆವಾಗ ಡ್ರೈವ್ ಮಾಡಿಕೊಂಡು ಹೋಗಿ ಮತ್ತ ತರ್ತಿ ಅಂತಿ. ಏನಲೇ?' ಅಂತ ಝಾಡಿಸಿದೆ.

'ಹಾಂ! ಅದಕ್ಕೇ ನೋಡು ಶೆರೆದಂಗಡಿ ಬಾಜೂಕನೇ ಮನಿ ಮಾಡಿದೆ! ಡ್ರೈವ್ ಮಾಡಿಕೊಂಡು ಹೋಗೋ ಪ್ರಾಬ್ಲಮ್ ಇಲ್ಲ ನೋಡು. ಅವನೌನ್, ಲುಂಗಿ ಎತ್ತಿ ಕಟ್ಟಿಕೊಂಡು, ಮನಿ ಬಿಟ್ಟು, ಕಾಂಪೌಂಡ್ ಹೊರಗ ಬಂದು ನಾಲ್ಕು ಹೆಜ್ಜೆ ಹಾಕಿಬಿಟ್ಟರ ಆತು. ಬಂತು ಶೆರೆದಂಗಡಿ. ಅಷ್ಟೇ ರಾತ್ರಿ ಎರಡು ಹೊಡೆಯೋದ್ರೊಳಗೇ ಹೋಗಬೇಕು. ಹೋದಾ, ತಂದಾ, ಮತ್ತ ಗಿಚ್ಚಾಗಿ ಕುಡದು ಮಕ್ಕೊಂಡಾ ನೋಡಪಾ. ಹ್ಯಾಂಗದ ಐಡಿಯಾ? ಕುಡಿದ ನಶಾದಾಗ ಕಾರ್ ಡ್ರೈವ್ ಮಾಡೋ ಕೆಲಸಿಲ್ಲ,' ಅಂದ.

ಹೇಳಿದ್ದು ಬರೋಬ್ಬರಿನೇ ಅದ. ಕ್ಯಾಲಿಫೋರ್ನಿಯಾ ಕುಡುಕರಿಗೆ ಸ್ವರ್ಗ ಇರಬಹದು. ವರ್ಷದ ಅಷ್ಟೂ ದಿವಸವೂ ದಿನದ ಇಪ್ಪತ್ನಾಲ್ಕು ತಾಸಿನಲ್ಲಿ ಇಪ್ಪತ್ತು ತಾಸು ಎಲ್ಲಾ ತರಹದ ಶೆರೆ ಫುಲ್ ಸಿಗ್ತಾವ. ಸಣ್ಣ ಸಣ್ಣ ಅಂಗಡಿಗಳಲ್ಲೂ ಲಭ್ಯ. ಪೆಟ್ರೋಲ್ ಬಂಕ್, ಔಷಧಿ ಅಂಗಡಿ, ಸೂಪರ್ ಮಾರ್ಕೆಟ್ ಹೀಗೆ ಎಲ್ಲ ಕಡೆ ಶೆರೆ ಲಭ್ಯ. ಕುಡಿದು ಮಜಾ ಮಾಡಿ. ಅಷ್ಟೇ ಕುಡಿದು ಡ್ರೈವ್ ಮಾಡುವವರಿಗೆ ಮಾತ್ರ ನರಕ. ಸಿಕ್ಕಿಬಿದ್ದರೆ ಬಾಕಿ ರಾಜ್ಯಗಳಿಗಿಂತ ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಶಿಕ್ಷೆಯೂ ಜಾಸ್ತಿ. ಲೈಸೆನ್ಸ್ ರದ್ದು ಮಾಡಿಯೇಬಿಡುತ್ತಾರೆ.

'ಹೂಂ! ಕುಡಿದು ಡ್ರೈವ್ ಮಾಡಿ ಸಿಕ್ಕೊಂಡುಬಿದ್ದು ಮಂಗ್ಯಾ ಆಗೋದು ಬ್ಯಾಡಾ ಅಂತ ವಿಚಾರ ಮಾಡಿ ಸರಳ ನಡಕೊಂಡು ಹೋಗಿ ತರಬಹುದಾದಷ್ಟು ದೂರ ಇರುವ ಹಾಂಗ ಮನಿ ಮಾಡಿದಿ ಅಂತಾತು. ಈ ಸಿಸ್ಟಮ್ ಹ್ಯಾಂಗ ನಡದದ?' ಅಂತ ಕೇಳಿದೆ.

'ಇದು ಛಲೋನೇ ನಡದದ. ಏನು ತೊಂದ್ರಿ ಇಲ್ಲ. ಆದ್ರ ಒಂದು ಸಣ್ಣ ಪ್ರಾಬ್ಲಮ್ ನೋಡಪಾ,' ಅಂದ.

'ಏನಲೇ ಪ್ರಾಬ್ಲಮ್? ನೀ ರಾತ್ರಿ ಎರಡಾದ ಮೇಲೂ ಹೋಗಿ ಶೆರೆ ಕೊಡ್ರಿ ಅಂತ ಕೇಳಿದರ ಯಾರೂ ನಿನಗ ಶೆರೆ ಕೊಡಂಗಿಲ್ಲ. ಅವರ ಅಂಗಡಿ ಲೈಸೆನ್ಸ್ ಹೋಗ್ತದ ಹಾಂಗೇನರ ಮಾಡಿದ್ರ,' ಅಂತ ಹೇಳಿದೆ.

'ಅದಲ್ಲಪಾ ಪ್ರಾಬ್ಲಮ್. ಪ್ರಾಬ್ಲಮ್ ಏನಂದ್ರ ಈ ಹೊಸಾ ಮನಿ ಸುತ್ತ್ಮುತ್ತ ಭಾಳ ಮಂದಿ ಕುಡುಕರು ಭೆಟ್ಟಿ ಆಗ್ತಾರ ನೋಡಪಾ. ಅದೇ ದೊಡ್ಡ ಪ್ರಾಬ್ಲಮ್' ಅಂದುಬಿಟ್ಟ.

ಇವನೇ ದೊಡ್ಡ ಬೆವಡಾ ಆದ್ಮಿ. ಬ್ಯಾರೆ ಮಂದಿಗೆ ಕುಡುಕರು ಅನಕೋತ್ತ!

'ಅಲ್ಲಲೇ, 'ಶೆರೆದಂಗಡಿ ಬಾಜೂಕೆ ಮನೆಯ ಮಾಡಿ ಕುಡುಕರಿಗೆ ಅಂಜಿದೊಡೆ ಎಂತಯ್ಯಾ?' ಅಂತ ಹೇಳಿಕೋಬೇಕು. ಹೊಯ್ಕೋಬೇಕು. ಅಂದ್ರ ಕುಡುಕರ ಬಗ್ಗೆ ಅಷ್ಟು ಲಕ್ಷ್ಯ ಹೋಗೋದಿಲ್ಲ. ನಿನ್ನ ಮನಿನೇ ಶೆರೆದಂಗಡಿ ಬಾಜೂ. ಹಾಂಗಿದ್ದಾಗ ಅಲ್ಲೆ ಮತ್ತ ಕುಡುಕರು ಸಿಗದೇ ಇನ್ನೇನು ಸ್ನಾನ ಮಾಡಿ ಗುಡಿಗೆ ಹೋಗೋ ಭಕ್ತರ ಟೈಪಿನ ಮಂದಿ ಸಿಗ್ತಾರೇನು? ಇಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿ,' ಅಂದೆ.

'ನೀ ಹೇಳೋದೂ ಬರೋಬ್ಬರಿ ಅದ ಬಿಡು. ಕುಡುಕರು ಸಿಕ್ಕರೂ, ಕುಡುಕರು ಕಂಡರೂ ಯಾರೂ ಏನೂ ಮಾಡೋದಿಲ್ಲ. ಅವರೂ ಸಹ ಅಷ್ಟು ಕುಡಿದಿದ್ದರೂ, 'Hi, How you doing?' ಅಂತ ಪ್ರೀತಿಯಿಂದನೇ ಮಾತಾಡಸ್ತಾವ ನೋಡಪಾ ಇಲ್ಲಿ ಮಂದಿ. ವಿಚಿತ್ರ ತಲಿ,' ಅಂದ. ನಂತರ ಕೆಲವು ಕ್ಷಣ ಮಾತುಕತೆ ಇರಲಿಲ್ಲ. ಖಾಲಿಯಾದ ತೀರ್ಥದ ಬಟ್ಟಲನ್ನು ತುಂಬಿಸಿಕೊಂಡು ಬರಲು ಹೋಗಿರಬೇಕು.

'ಅಲ್ಲಲೇ, ಒಂದು ಮಾತು ಹೇಳು. ಸ್ವಲ್ಪೇ ಕುಡಿದಾದ ಮ್ಯಾಲೆ ಮತ್ತೂ ಶೆರೆ ಬೇಕು ಅಂತ ಯಾಕ ಅನ್ನಿಸ್ತದ? ಅಷ್ಟೇ ಕುಡಿದದ್ದು ಸಾಕು, ಎದ್ದು ಹೋಗಿ ಊಟ ಮಾಡಿ ಮಲಗಿಬಿಡೋಣ ಅಂತ ಯಾಕ ಅನ್ನಿಸಂಗಿಲ್ಲ?' ಅಂತ ಕೇಳಿಬಿಟ್ಟೆ. ಕೇಳಿ ದೊಡ್ಡ ತಪ್ಪು ಮಾಡಿಬಿಟ್ಟೆ.

ಮುಂದೆ ಐದು ನಿಮಿಷ ಆಂವಾ ಮಾತಾಡಲಿಲ್ಲ. ಗೊಳೋ ಅಂತ ಅತ್ತ. ಅಳುವ ಮಂದಿನ ಅಳಲಿಕ್ಕೆ ಬಿಡಬೇಕು. ಡಿಸ್ಟರ್ಬ್ ಮಾಡಬಾರದು.

ಅತ್ತು ಮುಗೀತು. ಮೂಗಿನ್ಯಾಗ ಗೊಸ್ ಗೊಸ್ ಮಾಡಿಕೋತ್ತನೇ ಮಾತಾಡ್ಲಿಕತ್ತಿತು ನಮ್ಮ ದೋಸ್ತ, 'ಮಕ್ಕಳು ಭಾಳ ನೆನಪಾಗ್ತಾರೋ. ಮಕ್ಕಳು..... ಮಕ್ಕಳು..... ನನ್ನ ಮಕ್ಕಳು. ಸಣ್ಣದಂತೂ ಇನ್ನೂ ಕೂಸೋ...... ಅಯ್ಯೋ! ನನ್ನ ಮಕ್ಕಳು. I miss them a lot!' ಅಂತ ಅಂದವನೇ ಮತ್ತ ಸ್ವಲ್ಪ ಅತ್ತ.

ಪಾಪ! ಡೈವೋರ್ಸ್ ಗಿರಾಕಿ. ಅದೂ ಕ್ಯಾಲಿಫೋರ್ನಿಯಾದ ಡೈವೋರ್ಸ್ ಕಾನೂನು ಅಂದರೆ ಗಂಡಸು ಫುಲ್ ಬೋಳಿಸಿಕೊಂಡು ಶಿವಾಯ ನಮಃ. ಮಕ್ಕಳಿದ್ದರಂತೂ ಮುಗಿದೇ ಹೋಯಿತು. ಮೈಮೇಲಿನ ಲಂಗೋಟಿಯೊಂದು ಉಳಿದರೆ ಅದೇ ದೊಡ್ಡ ಮಾತು. ಬಾಕಿ ಅಷ್ಟೂ ಆಸ್ತಿಯನ್ನು ಕಿತ್ತಿಕೊಂಡು ಹೆಂಡತಿ ಮಕ್ಕಳಿಗೆ ಕೊಟ್ಟುಬಿಡುತ್ತದೆ ಕೋರ್ಟ್. ಮಹಿಳಾಪರ, ಮಕ್ಕಳಪರ ಕಾನೂನು. ಹಾಗಾಗಿ ಈ ಪುಣ್ಯಾತ್ಮ ಡೈವೋರ್ಸ್ ಆಗಿ, ಫುಲ್ ಬೋಳಿಸಿಕೊಂಡ ಕ್ಲೀನ್ ಕಿಟ್ಟಪ್ಪನಾಗಿ, ಮನೆ ಮಠ ಎಲ್ಲ ಹೆಂಡತಿಗೆ ಒಪ್ಪಿಸಿ, ಬೇರೆ ಒಂದು ಅಪಾರ್ಟ್ಮೆಂಟ್ ಮಾಡಿಕೊಂಡು ಇದ್ದಾನೆ.

'ಏನು ಮಾಡಲಿಕ್ಕೆ ಬರ್ತದಪಾ? ಆಗಿದ್ದು ಆಗಿಹೋತು. ವಾರಕ್ಕೋ ಹದಿನೈದು ದಿವಸಕ್ಕೋ ಮಕ್ಕಳನ್ನು ಭೆಟ್ಟಿ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಾರಲ್ಲಾ ಅದೇ ದೊಡ್ಡ ನಸೀಬಾ ಅಂತ ತಿಳ್ಕೋ ಮಾರಾಯಾ. 'ಅದನ್ನೂ ಸಹ ಕೊಡಬಾರದು. ನನ್ನ ಗಂಡ ಭಾಳ ಲಪುಟ ಇದ್ದಾನ. ಆಂವಾ ಪದೇ ಪದೇ ಮಕ್ಕಳನ್ನು ಭೆಟ್ಟಿಯಾದ ಅಂದ್ರ ಮಕ್ಕಳ ಮ್ಯಾಲೆ ಕೆಟ್ಟ ಪರಿಣಾಮ ಬೀರ್ತದ,' ಅಂತ ನಿನ್ನ ಮಾಜಿ ಹೆಂಡತಿ ಕೊರ್ಟಿನ್ಯಾಗ ಹೊಯ್ಕೊಂಡಿದ್ದಳು. ನಿನ್ನ ಸ್ವಚ್ಛ ಆಗಿ ಬೋಳಿಸಿ judgement ಕೊಟ್ಟರೂ judge ಸಾಹೇಬರು ದೊಡ್ಡ ಮನಸ್ಸು ಮಾಡಿ ಮಕ್ಕಳನ್ನ ನೋಡೋ ಅವಕಾಶ ಮಾಡಿಕೊಟ್ಟರು. ಅದನ್ನೇ ಉಪಯೋಗ ಮಾಡಿಕೋಪಾ,' ಅಂತ ಏನೋ ಸ್ವಾಂತನ ಹೇಳಿದೆ.

'ಮಕ್ಕಳು ನೆನಪಾಗ್ತಾವ ಅಂತೀ. ಹೆಂಡ್ತಿ ನೆನಪಾಗಂಗಿಲ್ಲಾ?' ಅಂತ ಸಣ್ಣ ಫಿಟ್ಟಿಂಗ್ ಇಟ್ಟೆ.

'ಅಕಿನೌನ್! ಅಕಿನ್ನ ಹ್ಯಾಂಗ ಮರೀಲೋ. ಡ್ರಾಕುಲಾ ಅದು. ನನ್ನ ರಕ್ತ ಹೀರಿದ ಡ್ರಾಕುಲಾ. ದೆವ್ವ, ಡಾಕಿಣಿ, ಶಾಕಿಣಿ, ಪಿಶಾಚಿ ಅಕಿ. ನನ್ನ ಮಕ್ಕಳು ನನಗ ಪಿತಾಜಿ ಅಂತಾವ. ಸಣ್ಣ ಕೂಸಿಗೆ ಇನ್ನೂ ಸರಿ ಮಾತು ಬರೋದಿಲ್ಲ. ಅದು ಪಿತಾಜಿ ಅನ್ನಲಿಕ್ಕೆ ಹೋಗಿ ಪಿಶಾಚಿ ಅಂತದ. ನಾ ಹೇಳಿಕೊಟ್ಟೆ, 'ನನ್ನ ಮುದ್ದು ಕೂಸ, ನಾ ಪಿತಾಜಿ ನಿಮ್ಮವ್ವಾ ಪಿಶಾಚಿ' ಅಂತ. ಅದು ಬೊಚ್ಚು ಬಾಯಿ ತೆಗೆದು ನಕ್ಕಿತು. ಕೇಳಿ ಅವರ ಅವ್ವಾ ಪಿಶಾಚಿ ಹೀಂಗ ಉರಕೊಂಡಳು ಅಂದ್ರ. ಮಸ್ತ ಇತ್ತು ಸೀನು,' ಅಂದ.

'ಅಲ್ಲಲೇ, ನಿಮ್ಮದು ಲವ್ ಮ್ಯಾರೇಜ್ ಬ್ಯಾರೆ. ಅದೂ love at first sight ಅಂತ ಬ್ಯಾರೆ ಹೇಳ್ತಿದ್ದಿ. ಅಂದೆಂಗ ಅಂತಾ ಲವ್ ಇಷ್ಟು ಲಗೂ ಖಲಾಸ್ ಆಗಿಬಿಡ್ತು?' ಅಂತ ಕೇಳಿದೆ. ಕ್ಲೋಸ್ ದೋಸ್ತ. ನನ್ನ ಜೋಡಿ ಫ್ರೀ ಇದ್ದಾನ.

'ನೋಡಪಾ ದೋಸ್ತ ನಿನಗ ಒಂದು ಮಾತು ಹೇಳತೇನಿ..... ಅದು ಅದು..... ' ಅಂತ ತೊದಲಿದ. ಮಸ್ತ ನಶಾ ಏರಿರಬೇಕು.

'love at first sight ಇಲ್ಲಾ. ಏನ್ ಸುಡುಗಾಡೂ ಇಲ್ಲ. love at first sight ಅಂತ. love at first sight. My foot. ಈ love at first sight ಎಲ್ಲಾ ಫುಲ್ ಬೋಗಸ್ ನೋಡಪಾ. ಅವನೌನ್! love at first sight ಹಾಳಾಗಿ ಹೋಗಲಿ love at first night ಸುದಾ ಆಗೋದಿಲ್ಲ ನೋಡಪಾ. ಎಲ್ಲಾ ಬೇಕಾರ್ ಬೋಗಸ್!' ಅಂದು ಮತ್ತೊಮ್ಮೆ ಸೊರ್ರ್ ಅಂತ ದೀರ್ಘವಾಗಿ ತೀರ್ಥದ ಸಿಪ್ ತೊಗೊಂಡ. ತೀರ್ಥ ಮುಗಿದಿತ್ತು ಅಂತ ಕಾಣಿಸ್ತದ. ಐಸ್ ಕ್ಯೂಬುಗಳು ಗ್ಲಾಸಿನಲ್ಲಿ ಕಿಣಿಕಿಣಿ ಆವಾಜ್ ಮಾಡಿದವು.

'ಹಾಂಗಂತೀಯಾ?' ಅಂದೆ.

'ಅನ್ನೋದೇನು ಬಂತೋ? ಬರೆದು ಕೊಡಲೇನು? ನನಗೇನೂ ಹೆದರಿಕೆ ಇಲ್ಲ. love at first sight is full bullshit ಅಂತ ಬರೆದುಕೊಡಲಿಕ್ಕೆ ನಾಯೇನೂ ಅಂಜಂಗಿಲ್ಲ. ತಿಳೀತಾ?' ಅಂತ ಹೇಳಿ ಸ್ವಲ್ಪ ರೌದ್ರ ಸೌಂಡ್ ಕೊಟ್ಟ.

'ಮತ್ತ? ಊಟ ಆತ?' ಅಂತ ಕೇಳಿದೆ.

'ಇಲ್ಲೋ. ಇನ್ನೂ ಕುಡಿದೇ ಮುಗಿದಿಲ್ಲ. ಎಲ್ಲಿ ಊಟ? ಇನ್ನೂ ಭಾಳ ಕುಡಿಯೋದು ಅದ. ನಂತರ ಹೋಶ್ ಇದ್ದರ ಊಟ. ಒಮ್ಮೊಮ್ಮೆ ಕುಡಕೋತ್ತ ಕುಡಕೋತ್ತ, ನಶಾ ಹತ್ತಿ, ಹಾಂಗೆ ಮಕ್ಕೊಂಡು ಬಿಟ್ಟಿರತೇನಿ ನೋಡಪಾ,' ಅಂದುಬಿಟ್ಟ. ಕೇಳಿ ಪಾಪ ಅನ್ನಿಸ್ತು.

'ಅಲ್ಲಾ, ಬಾಜೂಕಿನ ಶೆರೆದಂಗಡಿಗೆ ಹೋಗಿ ಬರುವ ಇವತ್ತಿನ ಕಾರ್ಯಕ್ರಮ ಮುಗಿತೋ ಅಥವಾ ಇನ್ನು ಮ್ಯಾಲೆ ಲುಂಗಿ ಎತ್ತಿ ಕಟ್ಟಿಕೊಂಡು, ಲುಂಗಿ ಡಾನ್ಸ್ ಮಾಡಿಕೋತ್ತ ಶೆರೆ ತರಲಿಕ್ಕೆ ಹೋಗಬೇಕೋ? ಏನದ ಪ್ಲಾನ್?' ಅಂತ ಕೇಳಿದೆ.

'ಶೆರೆ ಕಮ್ಮಿ ಮಾಡೇಬಿಡಬೇಕು ಅಂತ ಭಾಳ ಕಮ್ಮಿ ತಂದಿದ್ದೆ ಇವತ್ತು. ಹಾಂಗಾಗಿ ಬಾಜೂಕಿನ ಶೆರೆ ಅಂಗಡಿಗೆ ಭಾಳ ಲಗೂನೆ ಹೋಗಿ ಬರಬೇಕಾತು. ಮತ್ತ ಮತ್ತ ಎಲ್ಲಿ ಹೋಗಿ ಬಂದು ಮಾಡಿಕೋತ್ತ ಇರೋದು ಅಂತ ಹೇಳಿ ಹೋದವ ಜಗ್ಗೆ ಶೆರೆ ತಂದುಕೊಂಡುಬಿಟ್ಟೆ. ಹಾಂಗಾಗಿ ಮತ್ತ ಹೋಗೋ ಜರೂರತ್ತು ಬರಲಿಕ್ಕಿಲ್ಲ. ಬಂದ್ರ ಹೋಗಿ ತರ್ತೇನಿ ತೊಗೋ. ಎಷ್ಟು ದೂರ ಅದ? ಕುಡಿದು ಜೋಲಿ ಹೊಡೆಯೋದಂತೂ ಇದ್ದೇ ಅದ. ಹಾಂಗ ಜೋಲಿ ಹೊಡೆದು ಬಿದ್ದರ ಶೆರೆದಂಗಡಿ ಬಾಗಿಲದಾಗ ಬಿದ್ದಿರಬೇಕು. ಅಷ್ಟು ಹತ್ತಿರದ. No worries!' ಅಂದುಬಿಟ್ಟ.

'ಹೂಂ. ಹೊತ್ತು ಭಾಳಾತು. ನಾ ಫೋನ್ ಇಡ್ತೇನಿ. ಮತ್ತ ಸಿಗೋಣ. ಮತ್ತ ಮಾತಾಡೋಣ. ಓಕೆ?' ಅಂತ ಕೇಳಿ ಫೋನ್ ಇಡಲಿಕ್ಕೆ ರೆಡಿ ಆದೆ.

'sure, sure. ಮನಿಗೆ ಬಂದರೇ ಬಾರಪಾ. ಹಗಲು ಹೊತ್ತಿನ್ಯಾಗೇ ಪಾರ್ಟಿ ಮಾಡಿಬಿಡೋಣ. ಗಿಚ್ಚಾಗಿ ಪಾರ್ಟಿ ಮಾಡೋಣ,' ಅಂದುಬಿಟ್ಟ.

ಇದು ಸುಧಾರಿಸುವ ಕೇಸಲ್ಲ ಅಂತ ಹೇಳಿ ಫೋನಿಟ್ಟೆ.

ಯಾಕೋ ಮನಸ್ಸಿಗೆ ಭಾಳ ಕೆಟ್ಟ ಅನ್ನಿಸ್ತು.

ವಿ. ಸೂ: ಇದೊಂದು ಕಾಲ್ಪನಿಕ ಕಥೆ.

4 comments:

sunaath said...

ಗಿಚ್ಚಾಗಿ ಬರದೀರಿ. ಕುಡೀದನs ನಶೆ ಏರ್ತ್ಯು!

Mahesh Hegade said...

Thank you Sunaath Sir.

Unknown said...

Nimma baravanige namage bhaal cholo anastada nodri. Shudh Dharwad kannada daga baritiri..

Mahesh Hegade said...

Thank you, Radha madam.