Tuesday, April 26, 2016

ಅಂದು ಊಟವನ್ನು ತ್ಯಜಿಸಿದವ ನಿನ್ನೆ ಲೋಕವನ್ನೇ ತ್ಯಜಿಸಿದ...

'ಒಂದ ವಾರ ಊಟ ಬಿಟ್ಟಿದ್ದ ಆಂವಾ! ಗೊತ್ತದ ಏನ?' ಅಂದರು ಕಾತ್ರಾಳೆ ಸರ್. ೧೯೮೧ ಜೂನ್. ಆಗ ಮಾತ್ರ ಮೂರನೆಯ ಕ್ಲಾಸ್ ಮುಗಿಸಿ ದೂರ್ವಾಸ ಮುನಿಯ ಪ್ರತಿರೂಪದಂತಿದ್ದ ಕಾತ್ರಾಳೆ ಸರ್ ಅವರ ನಾಲ್ಕನೆಯ ಕ್ಲಾಸಿಗೆ ಎಂಟ್ರಿ ಕೊಟ್ಟಿದ್ದೆವು. ಅವತ್ತೇ ಮೊದಲನೇ ದಿನ. ಬೆಳಗಿಂದ ಒಬ್ಬರ ನಂತರ ಒಬ್ಬರನ್ನು ಬರೋಬ್ಬರಿ ರುಬ್ಬಿದ್ದರು ಸರ್. ಬೈದಿದ್ದರು. ಹೊಡೆದಿದ್ದರು. ಕಪ್ಕಪಾಳಕ್ಕೆ ರಪ್ ರಪ್ ಅಂತ ಬಾರಿಸಿದ್ದರು. ಅವರ ಭರ್ಜರಿ ಹೊಡೆತ ಬಡಿತದ ಕಹಾನಿ ಕೇಳಿದ್ದೆವು. ಈಗ ಖುದ್ ನೋಡುವ 'ಸೌಭಾಗ್ಯ'. ಅದು ಅವರ ಪದ್ಧತಿ. ಸುಖಾಸುಮ್ಮನೆ ಮಾತಾಡಿದ್ದೇ ಇಲ್ಲ. ನಾಲ್ಕು ಕೊಟ್ಟೇ ಮುಂದಿನ ಮಾತು. ಆದರೆ ಅದ್ಭುತ ಶಿಕ್ಷಕರು. ಮತ್ತೆ ಕನ್ನಡ ಸಾಹಿತಿ ಬೇರೆ.

'ಒಂದ ವಾರ ಊಟ ಬಿಟ್ಟಿದ್ದ ಆಂವಾ!' ಅಂತ ಮತ್ತೊಮ್ಮೆ ಹೇಳಿದರು ಸರ್. ನಮಗೇನೂ ಗೊತ್ತಾಗಲಿಲ್ಲ. ಸರ್ ತಮ್ಮ ಹಿಂದಿನ ವರ್ಷದ ನಾಲ್ಕನೆಯ ವರ್ಗದ ಬ್ಯಾಚಿನ ಬಗ್ಗೆ ಹೇಳುತ್ತಿದ್ದರು. ಅಂದರೆ ನಮಗಿಂತ ಒಂದು ವರ್ಷದ ಹಿರಿಯ ವಿದ್ಯಾರ್ಥಿಗಳ ಬಗ್ಗೆ. ನಾವು ನಾಲ್ಕನೆಯ ಕ್ಲಾಸಿಗೆ ಬಂದವರಾಗಿದ್ದರೆ, ಸರ್ ಅವರ ಕೈಯಲ್ಲಿ ಬರೋಬ್ಬರಿ ತಯಾರಾಗಿ ನಾಲ್ಕನೆಯ ಕ್ಲಾಸ್ ಮುಗಿಸಿ ಐದನೆಯ ಕ್ಲಾಸಿಗೆ ಹೋದ ವಿದ್ಯಾರ್ಥಿಗಳ ಬಗ್ಗೆ ಮಾತಾಡುತ್ತಿದ್ದರು.

'ಆಂವಾ ಒಂದು ಮಾರ್ಕಿನಿಂದ ಫಸ್ಟ್ ರಾಂಕ್ ತಪ್ಪಿಸಿಕೊಂಡ. ಒಂದೇ ಮಾರ್ಕ್. ಅದಕs ಫುಲ್ ಒಂದು ವಾರ ಊಟ ಬಿಟ್ಟಿದ್ದ. ಅವನೇ ಬಸವರಾಜ! ಗೊತ್ತದ ಏನ?' ಅಂದರು ಸರ್. ಆವಾಗ ಏನೋ ಗೊತ್ತಾಯಿತು. ಬಸವರಾಜ ಅಪರಿಚಿತನೇನೂ ಅಲ್ಲ. ಮುಖ ಪರಿಚಯವಿತ್ತು. ಹಲೋ, ಹಾಯ್, ಬಾಯ್ ಮಟ್ಟದ ದುವಾ ಸಲಾಮಿ ಇತ್ತು. ಒಂದೇ ವರ್ಷಕ್ಕೆ ಹಿರಿಯನಾಗಿದ್ದರಿಂದ ಅಲ್ಲಿಲ್ಲಿ ಕಾಣುತ್ತಿದ್ದ. ಆದರೆ ಬಸವರಾಜ ಒಂದನೇ ರಾಂಕ್, ಅದೂ ಯಕಶ್ಚಿತ ನಾಲ್ಕನೆಯ ಕ್ಲಾಸಿನಲ್ಲಿ, ಒಂದು ಮಾರ್ಕಿನಿಂದ ತಪ್ಪಿಸಿಕೊಂಡಿದ್ದಕ್ಕೆ ಒಂದು ವಾರ ಊಟ ಬಿಟ್ಟಿದ್ದ ಅಂತ ಕೇಳಿ ಒಂದು ತರಹದ ಆಶ್ಚರ್ಯವಾಗಿತ್ತು. ಕಾತ್ರಾಳೆ ಸರ್ ಸ್ವಲ್ಪ ಮಸಾಲೆ ಹಾಕಿ ಹೇಳಿರಬಹುದು ಬಿಡಿ. ಆದರೂ ಆ ವಯಸ್ಸಿನಲ್ಲಿ ಊಟ ಬಿಡೋದು ಅಂದರೆ.....ಗ್ರೇಟ್!

ಬಸವರಾಜ ಬಾರಿಸುತ್ತಿದ್ದ. ಮಸ್ತಾಗಿ ಬಾರಿಸುತ್ತಿದ್ದ. ಅಂದರೆ ದೈಹಿಕ ಶಿಕ್ಷಣ (physical education) ತರಗತಿಯಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಶಾಲೆಯ ಬ್ಯಾಂಡಿನಲ್ಲಿ ದೊಡ್ಡ ಡ್ರಮ್ ಬಾರಿಸುತ್ತಿದ್ದ. ಒಂದು ವರ್ಷದ ಹಿಂದೆ ನಮ್ಮ ಪ್ರಾಥಮಿಕ ಶಾಲೆ ವ್ಯಾಯಾಮ ಮಾಡುವ ಸ್ಪರ್ಧೆಯಲ್ಲಿ ಮೂರನೆಯ ಸ್ಥಾನ ಪಡೆದಿತ್ತು. ಮೊದಲನೆಯ, ಎರಡೆನೆಯ ಸ್ಥಾನ ತಪ್ಪಿಹೋಗಲು ನಾನು ಮತ್ತು ಈ ಬಸವರಾಜನೇ ಕಾರಣ ಅಂತ ಕಾತ್ರಾಳೆ ಸರ್ ಅಭಿಪ್ರಾಯ. ತಿಂಗಳಾನುಗಟ್ಟಲೆ ಸಿಕ್ಕಾಪಟ್ಟೆ ಪ್ರಾಕ್ಟೀಸ್ ಮಾಡಿದ್ದರೂ, ಅದೇನು ಕಾರಣವೋ, ಬ್ಯಾಂಡ್ ಬಾರಿಸುತ್ತಿದ್ದ ಬಸವರಾಜ ಅಂದು ಮಾತ್ರ ಒಮ್ಮೆ ತಾಳ ತಪ್ಪಿ ಬ್ಯಾಂಡ್ ಬಾರಿಸಿಬಿಟ್ಟಿದ್ದ. ಒಳ್ಳೆ ಸರ್ಕಸ್ ಮಂಗಗಳ ಹಾಗೆ ತರಬೇತಾಗಿ, ಬ್ಯಾಂಡಿನ rhythmic ಢಮ್ ಢಮ್ ಶಬ್ದಕ್ಕೆ ವ್ಯಾಯಾಮ ಮಾಡುತ್ತಿದ್ದ ನಾವೆಲ್ಲ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಸುತ್ತ ಮುತ್ತ ನಿಂತಿದ್ದ ಮಾಸ್ತರು, ಟೀಚರುಗಳನ್ನು ನೋಡಿದ್ದೆವು. ಹಣೆ ಹಣೆ ಚಚ್ಚಿಕೊಂಡಿದ್ದ ಅವರು ಏನೇನೋ ಸನ್ನೆ ಮಾಡಿದ್ದರು. ಹೇಗೋ ಮಾಡಿ ಸುಧಾರಿಸಿಕೊಂಡು ಮೊದಲಿನ rhythm ಗೆ ಬಂದು ವ್ಯಾಯಾಮ ಮುಂದುವರೆಸಿದ್ದೆವು. ಎಲ್ಲೋ ಏನೋ ಪೊರಪಾಟಾಗಿ ಒಮ್ಮೆ ತಾಳ ತಪ್ಪಿ ಬಾರಿಸಿಬಿಟ್ಟಿದ್ದ ಬಸವರಾಜ ಸಹ ಸುಧಾರಿಸಿಕೊಂಡು ಮುಂದೆ ಹುರುಪಿನಿಂದ ಭರ್ಜರಿ ಬಾರಿಸಿದ್ದ. ಢಮ್! ಢಮ್!

ಬಸೂ ಮಾಡಿದ ಲಫಡಾ ಅದಾದರೆ ಮೊದಲ ಸ್ಥಾನ ತಪ್ಪಿ, ಎರಡನೆಯ ಸ್ಥಾನ ಕೂಡ ತಪ್ಪಿಹೋಗುವಂತಹ ಲಫಡಾ ನಾನೇನು ಮಾಡಿದ್ದೆ? ಜಾಸ್ತಿ ಏನಿಲ್ಲ. ನಿಂತು ಮಾಡುವ ವ್ಯಾಯಾಮಗಳು ಮುಗಿದು ಕುಳಿತು ಮಾಡುವ ವ್ಯಾಯಾಮ ಶುರುವಾಗಲಿತ್ತು. ಚಕ್ಕನೆ ನೆಲಕ್ಕೆ ಕುಳಿತು ತಕ್ಷಣ ಶುರುಮಾಡಬೇಕಿತ್ತು. ಬಿಳಿ ಚೊಣ್ಣ (nicker, shorts) ಹಾಕಿದ್ದೆವು. ಆವತ್ತು ನಮ್ಮ ತಲೆಗೆ ಏನೆನ್ನಿಸಿತೋ ಏನೋ. ಮಣ್ಣಿನ ನೆಲದ ಮೇಲೆ ಕೂಡುವ ಮೊದಲು ಚೊಣ್ಣ ಮಣ್ಣಾಗದಿರಲಿ ಅಂತ ಉಧೋ ಅಂತ ಕರ್ಚೀಪ್ ಹಾಸಲು ಮುಂದಾಗಿಬಿಟ್ಟೆ. ಬಾಕಿ ಎಲ್ಲರೂ ಕೂತು, ಬಸವರಾಜನ ಬ್ಯಾಂಡಿನ ತಾಳಕ್ಕೆ ಏಕ್, ದೋ, ತೀನ್, ಚಾರ್ ಅಂತ ವ್ಯಾಯಾಮ ಶುರು ಮಾಡಿದ್ದರು. ನಾನು ಮಾತ್ರ ಪಾಂಗಿತವಾಗಿ ಕರ್ಚೀಪ್ ಹಾಸಿಕೊಳ್ಳುತ್ತಿದ್ದೆ. ನಮ್ಮ ಕ್ಲಾಸ್ ಟೀಚರ್ ಆಗಿದ್ದ ಗ್ರಾಮಪುರೋಹಿತ ಸರ್, 'ಎಲ್ಲಾ ಕೆಲಸ ಕೆಡಿಸಿಬಿಟ್ಟಿಯಲ್ಲೋ ಪುಣ್ಯಾತ್ಮ! ರಾಡಿ ಎಬ್ಬಿಸಿಬಿಟ್ಟಿಯಲ್ಲೋ!' ಅನ್ನುವ ಮಾದರಿಯಲ್ಲಿ, ಒಂದು ತರಹದ ಅವಮಾನದಿಂದ ಮುಖದ ಮೇಲೆ ಕರ್ಚೀಪ್ ಮುಚ್ಚಿಕೊಳ್ಳುತ್ತಿದ್ದರೆ (ಅಲ್ಲಿ ತುರ್ತಾಗಿ ಟಾವೆಲ್ ಇರಲಿಲ್ಲ ಅವರ ಹತ್ತಿರ), ನನ್ನ ಉಪದ್ವ್ಯಾಪಿತನದಿಂದ ಉರಿದುಹೋಗಿದ್ದ ಕಾತ್ರಾಳೆ ಸರ್ ಹಲ್ಲು ಕಡಿಯುತ್ತ, ಚಿತ್ರ ವಿಚಿತ್ರ ಹಾವಭಾವ ತೋರಿಸುತ್ತ, 'ಮುಗಿಸಿ ಬಾ! ನಿನಗ ಐತಿ! ಮಾಡ್ತೇನಿ!' ಅನ್ನುವ ಖತರ್ನಾಕ್ ಲುಕ್ ಕೊಟ್ಟಿದ್ದರು.

ಹೀಗೆ ಬಸವರಾಜ ಒಮ್ಮೆ ತಾಳ ತಪ್ಪಿ ಬಾರಿಸಿದ್ದಕ್ಕೆ ಮತ್ತು ನಾನು ದೊಡ್ಡ ಮನುಷ್ಯನ ಹಾಗೆ ಕರ್ಚೀಪ್ ಹಾಕಿಕೊಂಡು ಕೂಡಲು ಹೋಗಿದ್ದಕ್ಕೆ ತೀರ್ಪುಗಾರರು ಒಂದೆರೆಡು ಅಂಕ ಕಟ್ ಮಾಡಿ ನಮ್ಮ ಶಾಲೆಗೆ ಮೂರನೆಯ ಸ್ಥಾನ ಬಂದಿತ್ತು. ಹಾಗಂತ ಶಿಕ್ಷಕರೆಲ್ಲರ ಅಭಿಪ್ರಾಯ.

ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿ ವಾಪಸ್ ಬಂದೆವು. ಕಾತ್ರಾಳೆ ಸರ್ ತಮ್ಮ ಪ್ರಿಯ ಶಿಷ್ಯ ಬಸವರಾಜನ ತಲೆ ಸವರುತ್ತ, 'ಏನಪಾ ಬಸೂ, ತಪ್ಪು ಮಾಡಿಬಿಟ್ಟಿಯಲ್ಲೋ!? ಎಷ್ಟು ಪ್ರಾಕ್ಟೀಸ್ ಮಾಡಿಸಿದ್ದಿವಿ. ಯಾವಾಗಲೂ ಅಷ್ಟು ಮಸ್ತ ಬಾರಿಸವ ಇವತ್ಯಾಕ ತಪ್ಪು ಮಾಡಿದೆಯೋ!? ಅದೂ ಇವತ್ತು ಫೈನಲ್ ಇತ್ತು. ಛೇ!' ಅಂದು, ಮೊದಲ ಪ್ರೈಜ್ ತಪ್ಪಿಹೋಗಿದ್ದಕ್ಕೆ ಹುಳಿಹುಳಿ ಫೀಲಿಂಗ್ ಮಾಡಿಕೊಂಡರು. ಸರಿಯಾಗಿ ಬೈದು, ತಪ್ಪಾಗಿ ಬ್ಯಾಂಡ್ ಬಾರಿಸಿದವನಿಗೆ ತಮ್ಮ ಶೈಲಿಯಲ್ಲಿ ರಪಾರಪಾ ಬ್ಯಾಂಡ್ ಬಾರಿಸಿಬಿಡೋಣ ಅಂದುಕೊಂಡರೆ ಬಸೂ ಅವರ ಪ್ರೀತಿಯ ಶಿಷ್ಯ. ಹೇಗೆ ಬಾರಿಸಿಯಾರು??

ಆಗ ನಾನು ಎಂಟ್ರಿ ಕೊಟ್ಟೆ. ನನ್ನ ನೋಡಿದವರೇ ಕಾತ್ರಾಳೆ ಸರ್ ರೌದ್ರಾವತಾರ ತಾಳಿ, 'ಏ, ಬೇವಕೂಫ್! ನೀ ಏನು ದೊಡ್ಡ ಗವರ್ನರ್ ಏನಲೇ? ದೊಡ್ಡ ಕರ್ಚೀಪ್ ಹಾಸಿಗೋತ್ತ ಟೈಮ್ ಖೋಟಿ ಮಾಡಿದಿ. ಸುಮ್ಮ ನೆಲದ ಮೇಲೆ ಕೂಡಲಿಕ್ಕೆ ಏನು ಧಾಡಿಯಾಗಿತ್ತು ನಿನಗ? ಎಲ್ಲಾ ನಿನ್ನಿಂದಲೇ ಹಾಳಾತು. ನೋಡು ಫಸ್ಟ್ ಬರಬೇಕಾಗಿದ್ದವರು ಥರ್ಡ್ ಬಂದೇವಿ. ಗವರ್ನರ್ ಗವರ್ನರ್ ಆಗ್ಯಾನ ಮಂಗ್ಯಾನಿಕೆ. ಡೌಲ್! ಡೌಲ್ ನೋಡು!' ಅನ್ನುತ್ತ ನನ್ನ ಕಡೆ ಧಾವಿಸಿ ಬಂದರು. ಅವರಿಗೆ ಬಂದ ಕೋಪಕ್ಕೆ ನನಗೆ ಬಾರಿಸಿಯೇ ಬಿಡುತ್ತಿದ್ದರೇನೋ. ಆದರೆ ನಾನು ನಮ್ಮ ಶಿಕ್ಷಕರಾಗಿದ್ದ ಗ್ರಾಮಪುರೋಹಿತ ಸರ್ ಪಕ್ಕ ಹೊಕ್ಕೊಂಡು ನಿಂತಿದ್ದೆ. ಹಿರಣ್ಯಕಶಿಪುವನ್ನು ನೋಡಿ, ಹೆದರಿ ನರಸಿಂಹನ ಪಕ್ಕ ನಿಂತ ಪ್ರಹಲ್ಲಾದನ ಮಾದರಿಯಲ್ಲಿ. ಮತ್ತೆ ನಾನು ಗ್ರಾಮಪುರೋಹಿತ ಸರ್ ಅವರ ಪಟ್ಟದ ಶಿಷ್ಯ. ಗ್ರಾಮಪುರೋಹಿತ ಸರ್ ಮತ್ತು ಕಾತ್ರಾಳೆ ಸರ್ ಬಹಳ ಕ್ಲೋಸ್ ಫ್ರೆಂಡ್ಸ್. ತಮ್ಮ ಮಿತ್ರ ಗ್ರಾಮಪುರೋಹಿತ ಸರ್ ಮುಖ ನೋಡಿ ಬಿಟ್ಟರೋ ಅಥವಾ ತಮ್ಮ ಥರ್ಡ್ ಡಿಗ್ರಿ ಶಿಕ್ಷೆ ಕೊಟ್ಟರೆ ಆವಾಗ ಡೆಲಿಕೇಟ್ ಡಾರ್ಲಿಂಗ್ ಮಾದರಿಯಲ್ಲಿದ್ದ ನಾನು ತಡೆದುಕೊಳ್ಳಲಾಗದೆ ಸತ್ತು ಗಿತ್ತು ಹೋದರೆ ಕಷ್ಟ ಅಂತ ಬಿಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ನನಗೆ ಕೇವಲ ಬೈದು, ಹಲ್ಲು ಕಡಿದು ಅಷ್ಟಕ್ಕೇ ಬಿಟ್ಟರು. ನಮ್ಮ ಪುಣ್ಯ. ಕಾತ್ರಾಳೆ ಸರ್ ಅವರ ಹೊಡೆತ ತಡೆದುಕೊಳ್ಳುವ ದೈಹಿಕ ಶಕ್ತಿ, ಅವಮಾನವನ್ನು ಭರಿಸಲು ಬೇಕಾಗುವ ಮಾನಸಿಕ toughness ಅಂದು ಇರಲ್ಲಿಲ್ಲ. ಇವತ್ತು ಬಿಡಿ. ಫುಲ್ ಕೋಣದ ದಪ್ಪ ಚರ್ಮ ಬೆಳೆಸಿಕೊಂಡು ಆರಾಮಿದ್ದೇವೆ. ಯಾರೇ ಕೂಗಾಡಲಿ, ಯಾರೇ ಹಾರಾಡಲಿ ನಮಗೆ ಏನೂ ಫರಕ್ ಇಲ್ಲ. ಆವತ್ತಿನ ಮಾತು ಬೇರೆ.

ನಂತರ ಬಸವರಾಜ ಸಿಕ್ಕ. ಅವನ ಮುಖವೂ ಮಳ್ಳ ಮುಖವಾಗಿತ್ತು. ಯಾರು ಬೈಯ್ಯದಿದ್ದರೂ ಬ್ಯಾಂಡ್ ಬಾರಿಸುವಾಗ ತಪ್ಪು ಮಾಡಿದ್ದು ಅವನಿಗೇ ಗೊತ್ತಿತ್ತು. ನಾನಂತೂ ಬಿಡಿ. ದೊಡ್ಡ ಲಫಡಾ ಮಾಡಿಕೊಂಡು, ಕಾತ್ರಾಳೆ ಸರ್ ಹತ್ತಿರ ರಪಾರಪಾ ಬೈಸಿಕೊಂಡು, ದೊಡ್ಡ ಕೆಂಪ ಮಂಗ್ಯಾನ ಮುಖ ಮಾಡಿಕೊಂಡು ನಿಂತಿದ್ದೆ. ನಾನೇ ಬಸವರಾಜನ ಹತ್ತಿರ ಹೋಗಿ, 'ಬಸೂ, ನೀನೂ ತಪ್ಪು ಮಾಡಿದಿ. ನಾನೂ ತಪ್ಪು ಮಾಡಿದೆ. ನಾವಿಬ್ಬರು ತಪ್ಪು ಮಾಡದೇ ಇದ್ದಿದ್ದರೆ ನಾವೇ ಫಸ್ಟ್ ಬರಿತ್ತಿದ್ದಿವಿ ನೋಡಪಾ,' ಅಂದೆ. ಸಣ್ಣ ಪ್ರಮಾಣದ ಸ್ವಾಂತನ ಹೇಳಿದೆ. ಬಸೂ ಹೂಂ ಹೂಂ ಅಂತ ಹೂಂಕರಿಸಿದ್ದ ಅಂತ ನೆನಪು.

So ಅಂದು, ಬರೋಬ್ಬರಿ ಮೂವತ್ತನಾಲ್ಕು ವರ್ಷಗಳ ಹಿಂದೆ, ನಾಲ್ಕನೆಯ ತರಗತಿಗೆ ಬಂದಾಗ ಕಾತ್ರಾಳೆ ಸರ್ ಅವರ ಪೆಟ್ ಶಿಷ್ಯ ಬಸವರಾಜನ ಬಗ್ಗೆ ಹೇಳುತ್ತ, 'ಒಂದು ವಾರ ಊಟ ಬಿಟ್ಟಿದ್ದ,' ಅಂದಾಗ ಒಂದು ವರ್ಷದ ಹಿಂದೆ ಆಗಿದ್ದ ಇದೆಲ್ಲ ನೆನಪಾಯಿತು.

ಇಂತಹ ಬಸವರಾಜನಿಗೆ ಬಸೂ ಅಥವಾ ರಾಜಾ ಅಥವಾ ರಾಜ್ಯಾ ಅಂದರೆ ಓಕೆ. ಎಲ್ಲಾದರೂ ಬಸ್ಯಾ ಅಂದಿರೋ, ಅದೂ ಕುಹಕವಾಡಿದಂತೆ ಬಸ್ಯಾ ಅಂದಿರೋ ಎಲ್ಲಿಲ್ಲದ ಕೋಪ ಬಂದುಬಿಡುತ್ತಿತ್ತು. ನಾನು ಹಾಗೆಂದೂ ಅನ್ನಲಿಲ್ಲ ಬಿಡಿ. ಆದರೆ ಯಾವಾಗಲೋ ಒಮ್ಮೆ ಅವರ ಏರಿಯಾದೊಂದಿಗೆ ಕ್ರಿಕೆಟ್ ಮ್ಯಾಚ್ ಇತ್ತು. ನಮ್ಮ ತಂಡ ಸೋಲುತ್ತಿದ್ದಾಗ, ನಮ್ಮ ಕಡೆಯವರ್ಯಾರೋ ಆಗಾಗ, 'ಏ, ಬಸ್ಯಾ! ಏ, ಬಸ್ಯಾ!' ಅಂತ ಕೂಗಿ ಅವನನ್ನು irritate ಮಾಡುತ್ತಿದ್ದುದು ನೆನಪಿದೆ. ಅದೂ ಈ ಬಸವರಾಜನೆಂಬ ಪುಣ್ಯಾತ್ಮ ಬಾಲಿಂಗ್ ಮಾಡಲೆಂದು ಓಡಲು ಶುರುಮಾಡಬೇಕು. ಆಗಲೇ ನಮ್ಮ ಕಡೆಯ ಯಾರೋ ಕಿತಾಪತಿ, 'ಏ, ಬಸ್ಯಾ!' ಅಂತ ಕೂಗಬೇಕು. 'ಯಾಕ್ರಿಲೇ ನಿಮ್ಮೌರಾ! ಮೈಯಾಗಿನ ಸೊಕ್ಕೇನು?' ಅಂತ ತೋಳು ಏರಿಸುತ್ತ, ಮಾಡುತ್ತಿದ್ದ ಬಾಲಿಂಗ್ ಬಿಟ್ಟು ನಮ್ಮ ಕಡೆಯವರನ್ನು ವಿಚಾರಿಸಿಕೊಳ್ಳಲು ಬಂದರೆ ನಮ್ಮ ಕಡೆಯವರು ಫುಲ್ ಗಪ್ ಚುಪ್! ಯಾರಿಗೆ ಅಂತ ರೋಪ್ ಹಾಕುತ್ತಾನೆ? ಏನೋ ಬೈದು ಮತ್ತೆ ಬಾಲಿಂಗ್ ಮಾಡಲು ಹೋದರೆ ಮತ್ತೆ ಬಸ್ಯಾ, ಬಸ್ಯಾ ಅಂತ ರಗಳೆ. ಒಂದೊಂದು ಓವರ್ ಮುಗಿಯಲು ಒಂದು ತಾಸು. ಅಂತೂ ಕೊನೆಗೊಮ್ಮೆ ಮ್ಯಾಚ್ ಮುಗಿದು, ನಾವು ಸೋತು, ತಲೆಗೆ ಎಂಟಾಣೆ ಅಂತ ಇಟ್ಟಿದ್ದ ಶೀಲ್ಡ್ ರೊಕ್ಕ ಅವರಿಗೆ ಕೊಟ್ಟು ಬರುವಷ್ಟರಲ್ಲಿ ನಮ್ಮ ತಲೆ ಹನ್ನೆರಡಾಣೆ ಆಗಿತ್ತು.

ಇದೆಲ್ಲ ಇವತ್ತು ಯಾಕೆ ನೆನಪಾಯಿತು ಅಂದರೆ ಇಂತಹ ಬಸವರಾಜ ನಿನ್ನೆ ತೀರಿಹೋದನಂತೆ. ಪಾಪ. ನಮಗೆ ಒಂದು ವರ್ಷಕ್ಕೆ ಹಿರಿಯ ಅಂದರೆ ಇನ್ನೂ ನಲವತ್ತೈದು ವರ್ಷ ಅಷ್ಟೇ. ಧಾರವಾಡದಲ್ಲಿ ಆರಾಮಿದ್ದ. ಅವನ ತಮ್ಮ ನಮ್ಮ ಕ್ಲಾಸ್ಮೇಟ್. ಅಣ್ಣ, ತಮ್ಮ ಎಲ್ಲಾ ಒಳ್ಳೆ ರೀತಿಯಿಂದ ಸೆಟಲ್ ಆಗಿದ್ದರು. ಆದರೆ ಅನಾರೋಗ್ಯದಿಂದ ಬಸವರಾಜ ಹೋಗಿಬಿಟ್ಟ ಅಂತ ದೋಸ್ತರು ಸುದ್ದಿ ಹೇಳಿದರು. ಕೇಳಿ ಬೇಸರವಾಯಿತು.

'ಸರ್ರಾ, ಆವಾಗ ಊಟ ಬಿಟ್ಟಿದ್ದ ಬಸೂ ಈಗ ಲೋಕವನ್ನೇ ಬಿಟ್ಟುಹೋದ ನೋಡ್ರಿ ಸರ್,' ಅಂತ ಕಾತ್ರಾಳೆ ಸರ್ ಅವರಿಗೆ ಹೇಳೋಣ ಅಂದರೆ ಅವರೇ ದಿವಂಗತರಾಗಿ ಎಂಟು ಹತ್ತು ವರ್ಷಗಳ ಮೇಲಾಗಿಹೋಯಿತು.

ಬಸವರಾಜನ ಆತ್ಮಕ್ಕೆ ಆ ಭಗವಂತ ಶಾಂತಿ ಕರುಣಿಸಲಿ. ಅವನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ. ಬಸವರಾಜನ ತಂದೆ ೧೯೫೦-೬೦ ರ ದಶಕದಲ್ಲಿ ನಮ್ಮ ತಂದೆಯವರ ಸಮಕಾಲೀನರು. ಕೆಲಕಾಲ ಒಂದೇ ಹಾಸ್ಟೆಲ್ಲಿನಲ್ಲಿ ಇದ್ದವರು ಅಂತೆ ಕೇಳಿದ್ದೆ. ಅವರಿಗೆಲ್ಲ ಪುತ್ರಶೋಕ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕೊಡಲಿ.

2 comments:

sunaath said...

ಆತ್ಮೀಯರು ಹೋದಾಗ ಆಗುವ ಹಳಹಳಿ ದೊಡ್ಡದು. ನಿಮ್ಮ ಲೇಖನವನ್ನು ಓದುತ್ತಿದ್ದಂತೆ ಬಸವರಾಜನು ನನಗೂ ಆತ್ಮೀಯನೆನಸಿದ. ನಿಮ್ಮ ದುಃಖದಲ್ಲಿ ನಾನೂ ಸಹಭಾಗಿ.

Mahesh Hegade said...

Thanks Sunaath, Sir.