Saturday, April 30, 2016

ಕಾಲಗರ್ಭ ಸೇರಿದ ಎಚ್‌ಎಂಟಿ

ಕಾಲಗರ್ಭ ಸೇರಿದ ಎಚ್‌ಎಂಟಿ ಎಂಬ ಪತ್ರಿಕಾ ವರದಿ ಓದಿದಾಗ ನೆನಪಾಗಿದ್ದು.

hmt ಫಿನಿಶ್! hmt ವಾಚುಗಳು ಇನ್ನು ಇತಿಹಾಸ ಮಾತ್ರ.

hmt ಅಂದ್ರೆ ಹಿಂದೆ ಮುಂದೆ ಟೈಮ್, ಹೆಗಲ ಮೇಲೆ ಟವೆಲ್ ಅಂತೆಲ್ಲ ಏನೇ ಗೇಲಿ ಮಾಡಿದರೂ ನಮ್ಮ ಕಾಲದ ಮಂದಿ ವಾಚ್ ಕಟ್ಟಲು ಕಲಿತಾಗ ಸಿಕ್ಕಿದ್ದು, ಮನೆ ಮಂದಿ ಕೊಡಿಸಿದ್ದು ಇವೇ hmt ವಾಚುಗಳು.

ನನ್ನ ಮೊದಲ hmt ವಾಚ್ ಕೊಹಿನೂರ್. ಅದು actually ಅಣ್ಣನಿಗೆ ಏಳನೇ ಕ್ಲಾಸಿನ ಮುಲ್ಕಿ ಪರೀಕ್ಷೆಯಲ್ಲಿ ಇಡೀ ಧಾರವಾಡ ಜಿಲ್ಲೆಗೆ ಮೊದಲ ಸ್ಥಾನ ಪಡೆದಾಗ hmt ಬೆಂಗಳೂರಿನಲ್ಲಿ ಕೆಲಸ ಮಾಡುವ ಯಾರನ್ನೋ ಖುದ್ದಾಗಿ ಹಿಡಿದು, ಡಿಸ್ಕೌಂಟ್ ನಲ್ಲಿ ಖರೀದಿ ಮಾಡಿ ಕೊಡಿಸಿದ್ದರು. ಆ ಪುಣ್ಯಾತ್ಮ ಪ್ರತಿ ಪರೀಕ್ಷೆಯಲ್ಲಿ ಮೊದಲ ರಾಂಕ್ ಬಂದು ಪಿಯುಸಿ ಮುಗಿಯುವವರೆಗೆ ಅರ್ಧ ಡಜನ್ ವಾಚುಗಳ ಸರ್ದಾರನಾಗಿಬಿಟ್ಟ. ಹೆಚ್ಚಿನವು ಕೊಹಿನೂರ್ ಅಥವಾ ಸೋನಾ ಮಾಡೆಲ್ hmt ವಾಚುಗಳು. ಜನತಾ ಮಾಡೆಲ್ಲಿನ hmt ವಾಚ್ ಅವನು ಕಟ್ಟುತ್ತಿದ್ದ. ಹೀಗಾಗಿ ಮೊತ್ತ ಮೊದಲ ವಾಚ್ ಕೊಹಿನೂರ್ ವಾಚ್ ನನಗೆ ಕೊಟ್ಟರು. ಅದೂ ವಿಶೇಷ ಸಮಾರಂಭಗಳಲ್ಲಿ ಧರಿಸಲು ಮಾತ್ರ. ಬಾಕಿ ದಿನ ಅಲ್ಲಿ ಇಲ್ಲಿ ಕಟ್ಟಿಕೊಳ್ಳಲು ಬೇಕೆಂದರೆ ಇದ್ದವಲ್ಲ, ಅವೇ, ಬಿಂಗಲಾಟಿ ಐವತ್ತು, ನೂರು ರೂಪಾಯಿಯ ಇಲೆಕ್ಟ್ರಾನಿಕ್ ವಾಚುಗಳು. :)

SSLC, PUC ಟೈಮಿನಲ್ಲಿ ಕೊಹಿನೂರ್ ವಾಚ್ ಕಟ್ಟಿಕೊಂಡು ಸ್ಟೈಲ್ ಹೊಡೆಯೋಣ ಅಂದರೆ ಕಿಡಿಗೇಡಿ ಉಡಾಳ ಗೆಳೆಯರೆಲ್ಲ ಪೆಕಪೆಕಾ ಅಂತ ಕಿರುಚಾಡಿ, ಉಳ್ಳಾಡಿ ಉಳ್ಳಾಡಿ ನಕ್ಕರು. ರೇಗಿಸಿದರು. 'ಯಾಕ್ರಿಲೇ, ಏನಾತು? ನನ್ನ ವಾಚ್ ಮಸ್ತಿಲ್ಲಾ? ಯಾಕ ನಗ್ತೀರಿ?' ಅಂತ ಕೇಳಿದರೆ, 'ಮಹೇಶಾ, ಕೊಹಿನೂರ್ ಗಲತ್ ಜಾಗಾದಾಗ ಹಾಕ್ಕೊಂಡಿಯಲ್ಲೋ! ಹೋಗ್ಗೋ!' ಅಂತ ಹೇಳಿ ಕೆಟ್ಟಾ ಕೊಳಕಾಗಿ ಅಂಡು ತಟ್ಟಿಕೊಂಡು ನಕ್ಕವ ಒಬ್ಬ ಕ್ಲೋಸ್ ದೋಸ್ತ. ಏನು ಅಂತ ನನಗೆ ಏಕ್ದಂ ಹೊಳೆಯಲೇ ಇಲ್ಲ. ಮುಂದುವರೆದು ಅವನೇ ಹೇಳಿದ, 'ಮಹೇಶಾ, ಕೊಹಿನೂರ್ ಅಂದ್ರ ಇಂಪೋರ್ಟೆಡ್ ನಿರೋಧ ಮಾರಾಯಾ. ಆ ಹೆಸರಿನ ವಾಚ್ ಕಟ್ಟಿಯಲ್ಲೋ! ಹೋಗ್ಗೋ!' ಅಂದವನೇ ಬಿದ್ದು ಬಿದ್ದು ನಕ್ಕ. ತಿಪ್ಪೆಯಲ್ಲಿ ನೋಡಿದ್ದ ಉಪಯೋಗಿಸಿ ಬಿಸಾಡಿದ್ದ ಕಾಂಡೊಮ್ ಕೈಗೆ ಬಂದಂತಾಗಿ, ಹೇಸಿಗೆ ಫೀಲಿಂಗ್ ಬಂದು ಆವತ್ತಿನಿಂದ ಆ ಕೊಹಿನೂರ್ ಕಟ್ಟಲಿಲ್ಲ. ಮುಂದೆ ಯಾರೋ ದುಬೈನಿಂದ ದುಬಾರಿ ವಾಚ್ ತಂದು ಅಪ್ಪನಿಗೆ ಉಡುಗೊರೆ ಕೊಟ್ಟರು. 'ಯಪ್ಪಾ, ನೀ ಬೇಕಾದರೆ ಈ ಕೊಹಿನೂರ್ ಇಟ್ಟುಕೋ. ನಮಗೆ ದುಬೈ ವಾಚ್ ಕೊಡು!' ಅಂತ ಹೇಳಿ ಅದನ್ನು ಲಪಟಾಯಿಸಿಬಿಟ್ಟೆ. ಕೊಹಿನೂರ್ ಎಂಬ ನಿರೋಧ ಬ್ರಾಂಡಿನ ವಾಚಿನಿಂದ ಹೀಗೆ ಬಿಡುಗಡೆ ಪಡೆದೆ.

ಮತ್ತೊಂದು hmt ವಾಚಿನ ಮಾಡೆಲ್ ಅಂದರೆ ಸೋನಾ. ನಮ್ಮ ಧಾರವಾಡದ ಮಾಳಮಡ್ಡಿ ಏರಿಯಾದಲ್ಲಿ ಸೋನಾ ಉರ್ಫ್ ಹುಚ್ಚ ಸೋನ್ಯಾ ಅಂದರೆ ಹುಚ್ಚು ಜೋಗತಿ ಸೋನಾ. ಸವದತ್ತಿ ಎಲ್ಲಮ್ಮನಿಗೆ ಅರ್ಪಿಸಲ್ಪಟ್ಟಿದ್ದ ದೇವದಾಸಿ. ಅವಳ ತಲೆ ಸ್ವಲ್ಪ ಕೆಟ್ಟಿತ್ತು. ಹೀಗಿರುವಾಗ ಸೋನಾ ಎಂಬ ಹೆಸರಿನ hmt ವಾಚ್ ಕಟ್ಟಿಕೊಂಡರೆ ಅಷ್ಟೇ ಮತ್ತೆ ಅಂತ ವಿಚಾರ ಮಾಡಿ ಸೋನಾ ಎಂಬ ವಾಚ್ ಇದ್ದರೂ ಅದರ ಸುದ್ದಿಗೆ ಹೋಗಲಿಲ್ಲ. ಕೊಹಿನೂರ್ ಕಟ್ಟಿಕೊಂಡಾಗ, 'ಬ್ಯಾರೆ ಎಲ್ಲೋ ಹಾಕಿಕೊಳ್ಳಬೇಕಾಗಿದ್ದ ಕೊಹಿನೂರ್ ಕೈಯಾಗ ಬಂದೈತಲ್ಲೋ!' ಅಂತ ರೇಗಿಸಿ ಕಾಡಿದ್ದರು. ಇನ್ನು ಹುಚ್ಚು ಜೋಗವ್ವನ ಹೆಸರಿನ ಸೋನಾ ವಾಚ್ ಕಟ್ಟಿಕೊಂಡರೆ 'ಆ ಹುಚ್ಚಿ ನಿನ್ನ ಗರ್ಲ್ ಫ್ರೆಂಡ್ ಏನಪಾ ದೋಸ್ತ?' ಅಂತ ಕಾಡಿಸಿ ಕಾಡಿಸಿ ಜೀವಾನೇ ತಿಂದುಬಿಡುತ್ತಿದ್ದರು. ಹಾಗಾಗಿ hmt ಸೋನಾ ಸಹಿತ ಕಟ್ಟಲಿಲ್ಲ.

hmt ಬಂದಾಯಿತು ಅಂದಾಗ ಇದೆಲ್ಲ ನೆನಪಾಯಿತು.

6 comments:

sunaath said...

ಇದೀಗ, ಮೋದಿಯವರು ಕೊಹಿನೂರನ್ನು ರಾಣಿ ಎಲಿಜಾಬೆಥ್ ಕಡಿಂದ ಇಸಕೋಬೇಕು ಅಂತ ಅನೇಕರು ಗಲಾಟೆ ಮಾಡ್ತಾ ಇದ್ದಾರಪಾ!

Gebarappa P.H. said...


They had a good export market too, and were valued items in southern countries.

Anonymous said...

HMT - Hennu Makkala Tande

Mahesh Hegade said...

Thanks Sunaath Sir.

@Anonymous - a good one :)

ವಿ.ರಾ.ಹೆ. said...

My first and last HMT watch - HMT Swarna.... still using ;) It has Indian flag on its dial as it was released on 50th anniversary of Indian independence.

Mahesh Hegade said...

@Vikas - Enjoy your watch. They, especially the mechanical ones, last for a long time.