Friday, May 27, 2016

ಕಿತಾಪತಿ ಆಚಾರಿಯನ್ನು ಮಾಳಮಡ್ಡಿ ತುಂಬಾ ಅಟ್ಟಾಡಿಸಿ ಬಡಿದಳು (almost)

ಅಂತಹದೊಂದು ಮಾತನ್ನು ಅವರು ಆಡಬಾರದಿತ್ತು. ಆಡಲೇಬಾರದಿತ್ತು. ಅದರಲ್ಲೂ ಪೂಜ್ಯ ಕುಲಕರ್ಣಿ ಸರ್ ಅವರಂತಹ ತಿಳುವಳಿಕೆ ಇದ್ದ ಹಿರಿಯ ಗುರುಗಳ ಬಾಯಿಂದ ಬರುವಂತಹ ಮಾತೇ ಅಲ್ಲ ಅದು. ಒಂದು ಸಮುದಾಯವನ್ನೇ stereotype ಮಾಡಿಬಿಡುವಂತಹ ಕೆಲವು ಕೆಟ್ಟ ಮಾತುಗಳು ಇರುತ್ತವೆಯಲ್ಲ ಅವು ಮುಖದ ಮೇಲಿನ ಗಾಯ ಮಾದರೂ ಮಾಸದ ಗೆರೆಗಳಂತೆ. ಕಾಡುತ್ತಲೇ ಇರುತ್ತವೆ. ಅಂತಹದೊಂದು ಮಾತನ್ನು ಕುಲಕರ್ಣಿ ಗುರುಗಳು ಹವ್ಯಕರನ್ನು ಉದ್ದೇಶಿಸಿ ಹೇಳಿದ್ದರು.

'ನೀವು ಹವ್ಯಕರು. ಸಿರ್ಸಿ ಮಂದಿ. ರೊಕ್ಕಾ ಹೆಚ್ಚಾಗ್ಯದ ನಿಮಗೆಲ್ಲಾ. ಅಡಿಕೆಗೆ ಮಸ್ತ ರೇಟ್ ಬಂದದ. ಹಾಂಗಾಗಿ ಚೈನಿ ಹೊಡಿಲಿಕ್ಕೆ ಧಾರವಾಡಕ್ಕೆ ಬರ್ತೀರಿ. ವಿದ್ಯಾ ಕಲಿಲಿಕ್ಕಂತೂ ಖರೇ ಅಂದ್ರೂ ನೀವು ಬರೋದಿಲ್ಲಾ. ಅಲ್ಲೇನಪಾ ಹೆಗಡೆ??' ಅಂತ ತಮ್ಮ prejudiced ಮನಸ್ಥಿತಿಯನ್ನು ಕಾರಿಕೊಂಡವರು ಕುಲಕರ್ಣಿ ಸರ್. ೧೯೬೫ ರ ಮಾತಿರಬಹದು.

ಮಳ್ಳು ಮುಖ ಮಾಡಿಕೊಂಡು, ತಲೆ ತಗ್ಗಿಸಿ, ಮಂಗ್ಯಾನ ಹಾಂಗೆ 'ಮಂತ್ರ ಪುಷ್ಪಾರ್ಚನೆ' ಮಾಡಿಸಿಕೊಂಡವನು ಒಬ್ಬ ಸಿರ್ಸಿ ಕಡೆಯ ಹವ್ಯಕ ಮಾಣಿ. ಇನ್ನೂ ಎಂಟನೇ ತರಗತಿ. ಕೆಲವೇ ತಿಂಗಳುಗಳ ಹಿಂದೆ ಹೈಸ್ಕೂಲಿಗೆಂದೇ ಸಿರ್ಸಿ ಸಮೀಪದ ಕುಗ್ರಾಮದಿಂದ ಧಾರವಾಡಕ್ಕೆ ಬಂದಿದ್ದ. ಅಕ್ಕಂದಿರಿಬ್ಬರು ಧಾರವಾಡದಲ್ಲೇ ಹೈಸ್ಕೂಲಿಗೆ, ಕಾಲೇಜಿಗೆ ಹೋಗಿಕೊಂಡಿದ್ದರು. ಈಗ ಜೊತೆಗೆ ಇವನೊಬ್ಬ.

ಬಂದ ಹೊಸತರಲ್ಲಿಯೇ ದೊಡ್ಡ ಶಾಕ್ ಆಗಿಬಿಟ್ಟಿದೆ. 'ಲವ್ ಲೆಟರ್ ಬರೆದುಬಿಟ್ಟಿದ್ದಾನೆ!' ಅಂತ ಈ ಪಾಪದ ಮಾಣಿ ಮೇಲೆ ಆಪಾದನೆ ಬಂದುಬಿಟ್ಟಿದೆ. ಕ್ಲಾಸ್ಮೇಟ್ ಹುಡುಗಿಯೊಬ್ಬಳ ನೋಟ್ ಬುಕ್ಕಿನಲ್ಲಿ ಒಂದು ಲವ್ ಚೀಟಿ. ಅದೂ ಇವನ ಹೆಸರಿನೊಂದಿಗೆ. ಅಲ್ಲಿಗೆ ಮಾಣಿಯ ಎನ್ಕೌಂಟರಿಗೆ ಫುಲ್ ಸೆಟ್ಟಿಂಗ್ ಆಗಿಬಿಟ್ಟಿದೆ. ಲವ್ ಚೀಟಿ ನೋಡಿದ ಹುಡುಗಿ ಎಲ್ಲಿ ಕದ್ದು ಬಸುರಾಗಿಯೇಬಿಟ್ಟಳೋ ಎಂಬಂತೆ ಚಿಟಿಚಿಟಿ ಚೀರುತ್ತ ಹೆಡ್ ಮಾಸ್ಟರ್ ಹತ್ತಿರ ಓಡಿದ್ದಾಳೆ. ಮಾಣಿಯ ಪುಣ್ಯಕ್ಕೆ ಅಂದು ಹೆಡ್ ಮಾಸ್ಟರ್ ಇರಲಿಲ್ಲ. ಅಲ್ಲೇ ಸಿಕ್ಕ ಕುಲಕರ್ಣಿ ಮಾಸ್ತರ್ ಮುಂದೆ ಅಂಬೋ ಅಂದಿದ್ದಾಳೆ.

'ನಿನ್ನ ಪಾಟಿಚೀಲದಾಗ ಲವ್ ಲೆಟರ್ ಬಂತss?? ಹ್ಯಾಂ?? ಕೊಡು ಇಲ್ಲೆ,' ಅಂತ ಕುಲಕರ್ಣಿ ಸರ್ ಚೀಟಿ ಇಸಿದುಕೊಂಡು ನೋಡಿದ್ದಾರೆ. ಚೀಟಿಯ ಕೊನೆಯಲ್ಲಿ ಕೆಳಗೆ ನೀಟಾಗಿ ಸೂರ್ಯ ಹೆಗಡೆ ಅಂತ ಬರೆದಿದೆ. ಇಂತಹ ಕಾರ್ನಾಮೆ ಮಾಡಿದ(!) ಸೂರ್ಯ ಹೆಗಡೆಗೆ ಬುಲಾವಾ ಹೋಗಿದೆ. ಏನು ಎತ್ತ ಅಂತ ತಿಳಿಯದೇ ಬಂದು ನಿಂತ ಮಾಣಿಗೆ ಬರೋಬ್ಬರಿ ಪೂಜೆಯಾಗಿದೆ. ಪುಣ್ಯಕ್ಕೆ ಅವರು ಕುಲಕರ್ಣಿ ಸರ್. ಕೇವಲ ಬೈದಿದ್ದಾರೆ. ಅವರು ಹೊಡೆದು ಬಡಿದು ಮಾಡಿದವರೇ ಅಲ್ಲ. ಹೆಗಡೆ ಮಾಣಿಯ ನಸೀಬ್ ಚೆನ್ನಾಗಿತ್ತು. ಹೆಡ್ ಮಾಸ್ಟರ್ ಆಗಿದ್ದ ನಾಡ್ಗೀರ್ ಸರ್ ಇರಲಿಲ್ಲ. ಅವರೋ ಹಿಟ್ಲರ್ ಮಾದರಿಯ ಶಿಕ್ಷಕರು. ಅದು ಯಾವ ನಮ್ನಿ ಜಪ್ಪುತ್ತಿದ್ದರು ಅಂದರೆ ಮುಖ ತಿಕ ಎಲ್ಲಾ ಒಂದೇ ಶೇಪಿಗೆ ಬಂದುಬಿಡುತ್ತಿತ್ತು. ಒಳ್ಳೆ ಶಿಕ್ಷಕರು. ಅದರಲ್ಲಿ ದೂಸರಾ ಮಾತೇ ಇಲ್ಲ. ಆದರೆ ಹಾಕ್ಕೊಂಡು  ರುಬ್ಬುವದು ಮಾತ್ರ ವಿಪರೀತ. ಪೊಲೀಸರು ಸಹ ಆ ರೀತಿಯಲ್ಲಿ ರುಬ್ಬುತ್ತಿರಲಿಲ್ಲ.

ಸೂರ್ಯ ಹೆಗಡೆ ಮಾಣಿಗೆ ಅಸಲಿಗೆ ಏನಾಗಿದೆ ಅಂತ ಕೊನೆಗೂ ತಿಳಿದಿಲ್ಲ. ತನ್ನ ಹೆಸರಿನಲ್ಲಿ ಒಂದು ಲವ್ ಲೆಟರ್ ಹುಡುಗಿಯೂಬ್ಬಳ ಬ್ಯಾಗ್ ಸೇರಿ ನೋಟ್ ಪುಸ್ತಕವೊಂದರಲ್ಲಿ ಕಂಡುಬಂದಿದೆ ಅಂತ ಮಾತ್ರ ತಿಳಿದಿದೆ. ಥಂಡಾ ಹೊಡೆದಿದ್ದಾನೆ. ಧಾರವಾಡಕ್ಕೆ ಬಂದು ಒಂದೆರೆಡು ತಿಂಗಳಾಗಿರಬಹುದು ಅಷ್ಟೇ. ಇನ್ನೂ ಅಲ್ಲಿನ ಭಾಷೆ ಕೂಡ ಸರಿಯಾಗಿ ಬರುತ್ತಿದ್ದಿಲ್ಲ. ಆದರೂ ಧೈರ್ಯಮಾಡಿ ಹುಡುಗಿ ಹತ್ತಿರ ಹೋಗಿ, 'ಆನು ನಿಂಗೆ ಲವ್ ಚೀಟಿ ಬರದ್ನಿಲ್ಲೆ. ತೆಳತ್ತಾ? ಆತಾ?' ಅಂತ ಶುದ್ಧ ಹವ್ಯಕ ಭಾಷೆಯಲ್ಲಿಯೇ ಬ್ಲೇಡ್ ಹಾಕಿದ್ದಾನೆ. ಏನೋ ಒಂದು ರೀತಿಯ ಮಾಂಡವಲಿ ಮಾಡಲು ನೋಡಿದ್ದಾನೆ. ಅವಳೋ ಮಾಳಮಡ್ಡಿಯ ಶುದ್ಧ ಆಚಾರರ ಮಗಳು. ಅವಳ ಚಿಂತೆ ಅವಳಿಗೆ. ಲವ್ ಚೀಟಿ ಬಂದಾಗಿನಿಂದ ಫುಲ್ ಹಾಪ್ ಆಗಿಬಿಟ್ಟಿದ್ದಾಳೆ. ಸಿಕ್ಕಾಪಟ್ಟೆ tension. ಅದೂ ೧೯೬೦ ರ ದಶಕ. ಹುಡುಗಿಯರನ್ನು ಶಾಲೆಗೇ ಕಳಿಸುತ್ತಿದ್ದಿಲ್ಲ. ಇನ್ನು ಲವ್ ಚೀಟಿ ಇತ್ಯಾದಿ ಬರುತ್ತವೆ ಅಂತಾದರೆ ಶಾಲೆ ಬಿಡಿಸಿ ಮನೆಯಲ್ಲಿ ಕೂಡಿಸಿ, ಲಗೂನೆ ಒಂದು ಗಂಡುಪ್ರಾಣಿಯನ್ನು ನೋಡಿ, ಮದುವೆ ಮಾಡಿ, ಓಡಿಸಿಬಿಡುತ್ತಾರೆ. ತಪ್ಪು ಯಾರದೇ ಆದರೂ ತೊಂದರೆ ಅನುಭವಿಸುವವರು ಮಾತ್ರ ಅವರೇ. ಹೀಗೆ ಅವಳ ಚಿಂತೆ. ಈ ಸಿರ್ಸಿ ಮಾಣಿ ಹೋಗಿ ಏನೇ ವಿವರಣೆ ಕೊಟ್ಟರೂ ಆಕೆಗೆ ಅದರ ಬಗ್ಗೆ ಖಬರಿಲ್ಲ. ಅವಶ್ಯಕತೆಯೂ ಇಲ್ಲ. ಆದರೂ ಮಾಣಿ ತನ್ನ ಕರ್ತವ್ಯ ಮಾಡಿ ಬಂದಿದ್ದಾನೆ.

ಸಂಜೆಯ ಹೊತ್ತಿಗೆ ಮಾಮಲಾ ಎಲ್ಲಾ ಕ್ಲಿಯರ್ ಆಗಿದೆ. ಲವ್ ಚೀಟಿ ಬರೆದು, ಈ ಹೆಗಡೆಯ ಹೆಸರು ಹಾಕಿ, ಹುಡುಗಿಯ ನೋಟ್ ಪುಸ್ತಕದಲ್ಲಿ ತುರುಕಿದವನು ಬೇರೆಯವನು. ಅದೇ ಕ್ಲಾಸಿನ ಮತ್ತೊಬ್ಬ ಆಚಾರಿ. ಮಹಾ ಕಿಡಿಗೇಡಿ. ಅದಕ್ಕಾಗಿಯೇ ಅವನು ಫೇಮಸ್. ಕಿತಾಪತಿ ಮಾಡುವದು ಅವನ ಸ್ಪೆಷಾಲಿಟಿ. ಹಳ್ಳಿಯಿಂದ ಪಾಪದ ಹವ್ಯಕ ಮಾಣಿ ಬಂದಿದ್ದಾನೆ. ಏನೂ ತಿಳಿಯದವ. ಕಿತಾಪತಿ ಮಾಡಿ ಕಾಡಲು ಅಂತವರಿಗಿಂತ ಇನ್ನೂ ಒಳ್ಳೆಯ ಬಕರಾ ಎಲ್ಲಿ ಸಿಗಬೇಕು? ಹಾಗೆ ವಿಚಾರ ಮಾಡಿ ಕೆತ್ತೆಬಜೆ ಕಾರ್ಬಾರ್ ಮಾಡಿದ್ದಾನೆ. ಆ ಹುಡುಗಿಯ ಮೇಲೆ ಅವನಿಗೆ ಮನಸ್ಸಿತ್ತೋ ಏನೋ. ಯಾರಿಗೆ ಗೊತ್ತು. ಒಟ್ಟಿನಲ್ಲಿ ಒಂದು ಯಬಡ ಲವ್ ಚೀಟಿ ತಯಾರ್ ಮಾಡಿದ್ದಾನೆ. ಕೆಳಗೆ ಪಾಪದ ಹವ್ಯಕ ಮಾಣಿಯ ಹೆಸರು ಹಾಕಿದ್ದಾನೆ. ಯಾವಾಗಲೋ ಸಮಯ ನೋಡಿ ಹುಡುಗಿಯ ನೋಟ್ ಪುಸ್ತಕದಲ್ಲಿ ಸೇರಿಸಿದ್ದಾನೆ. ನಂತರ ಮಜಾ ತೆಗೆದುಕೊಳ್ಳುತ್ತಿದ್ದಾನೆ. ಆಗಿದ್ದು ಇಷ್ಟು.

ಸರಿ. ಮಾಣಿಯ ಅಕ್ಕ ಕೂಡ ಅದೇ ಶಾಲೆಯಲ್ಲಿ ಇದ್ದಳಲ್ಲ. ಮಾಣಿ ಎಂಟನೆಯ ಕ್ಲಾಸಾದರೆ ಮಾಣಿಯ ಅಕ್ಕ ಹತ್ತನೇ ಕ್ಲಾಸ್. ಅವಳಕ್ಕ ಉರ್ಫ್ ಎಲ್ಲರಿಗಿಂತ ಹಿರಿಯವಳು ಗೃಹಿಣಿ ಕಮ್ ಕಾಲೇಜ್ ಸ್ಟೂಡೆಂಟ್. ಎಲ್ಲಾ ಒಂದೇ ಮನೆಯಲ್ಲೇ ಇದ್ದವರು.

ಶಾಲೆಯಲ್ಲಿದ್ದ ಅಕ್ಕನಿಗೂ ಸುದ್ದಿ ಗೊತ್ತಾಗಿದೆ. ಶಾಲೆಯಲ್ಲಿಯೇ ತಮ್ಮನನ್ನು ವಿಚಾರಿಸಿಕೊಂಡಿದ್ದಾಳೆ. 'ನಾನು ಬರೆದಿಲ್ಲ. ಬೇರೆ ಯಾರೋ ಬರೆದು ಇಟ್ಟಿದ್ದಾರೆ. ಸುಖಾಸುಮ್ಮನೆ ನನಗೆ ಬೈದರು,' ಅಂತ ತಮ್ಮ ಗೊಳೋ ಅಂದಿದ್ದಾನೆ. ಮೇಲೆ ಹೇಳಿದಂತೆ ಸಂಜೆಯವರೆಗೆ ಎಲ್ಲ ವಿಷಯ ಎಲ್ಲರಿಗೂ ಗೊತ್ತಾಗಿದೆ. ಕಿಡಿಗೇಡಿ ಆಚಾರಿ foreground ಗೆ ಬಂದಿದ್ದಾನೆ. ಭಯಂಕರ ಗ್ರಹಚಾರ ಕಾದಿದೆ ಅಂತ ಅವನಿಗೆ ಗೊತ್ತಿಲ್ಲ.

ಶಾಲೆಯಲ್ಲಿ ಓದುತ್ತಿದ್ದ ಅಕ್ಕ, ತಮ್ಮ ಎಲ್ಲ ಕೂಡಿ ಸಂಜೆ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಮತ್ತೊಮ್ಮೆ ಚರ್ಚೆಯಾಗಿದೆ. ಎಲ್ಲ ವಿವರ ಗೊತ್ತಾಗಿದೆ. ಹೇಗೂ ಮಾಣಿಯ ಮೇಲೆ ಶಾಲೆ ಅಥವಾ ಶಿಕ್ಷಕರು ಯಾವದೇ ಕ್ರಮ ಕೈಗೊಂಡಿಲ್ಲ ಅಂತಾದ ಮೇಲೆ ಆ ವಿಷಯವನ್ನು ಅಷ್ಟಕ್ಕೇ ಬಿಟ್ಟರಾಯಿತು ಅಂತ ಹಿರಿಯಕ್ಕ ಮತ್ತು ಉಳಿದ ಹಿರಿಯರು ವಿಚಾರ ಮಾಡಿದ್ದಾರೆ. ಹೇಳಿ ಕೇಳಿ ಹೊರಗಿನವರು. ಸಿರ್ಸಿಯಿಂದ ಬಂದು ಇನ್ನೂ ಧಾರವಾಡದಲ್ಲಿ ಬಾಳು ಕಟ್ಟಿಕೊಳ್ಳುತ್ತಿರುವ ಪರದೇಶಿ ದರವೇಶಿಗಳು. ಕಿತಾಪತಿ ಮಾಡಿದವನು ಯಾರು ಅಂತ ಗೊತ್ತಾದರೂ ಯಾಕೆ ಸುಮ್ಮನೆ ಲಫಡಾ? ಸುಮ್ಮನಿದ್ದುಬಿಡೋಣ ಅನ್ನುವ ಮೃದು ಮನೋಭಾವ.

ಆದರೆ ಅವಳಿದ್ದಳಲ್ಲ? ಇನ್ನೊಬ್ಬಳು. ಮಾಣಿಯ ಅಕ್ಕ. ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದವಳು. ಅವಳೋ ಕಿತ್ತೂರ್ ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಇಂಡಿಯಾ ರಾಣಿ ಇಂದಿರಾ ಗಾಂಧಿ ಹೀಗೆ ಎಲ್ಲ ಗಟ್ಟಿಗಿತ್ತಿ ಮಹಿಳೆಯರ ಮಿಶ್ರಣದಂತಿದ್ದವಳು. dare devil ಮಾದರಿಯ ಹೆಣ್ಣುಮಗಳು. ಅಂತವಳು ಅದು ಹೇಗೆ ತಮ್ಮನ ಮೇಲೆ ಬಂದ ಇಂತಹ ಸುಳ್ಳು ಆರೋಪವನ್ನು ಸಹಿಸಿಯಾಳು? ಯಾರೋ ಏನೋ ಕಿತಬಿ ಮಾಡಿದರು ಅಂತ ಸುಮ್ಮನೆ ಕೂತು ಅನುಭವಿಸುವದು ಯಾವ ಜನ್ಮದ ಕರ್ಮ? ಹೀಗಂತ ಅಂದುಕೊಂಡವಳೇ ತಾನೇ ಮ್ಯಾಟರ್ ಕೈಗೆ ತೆಗೆದುಕೊಂಡಿದ್ದಾಳೆ. ಸೀದಾ ಮನೆ ಬಿಟ್ಟು ಹೊರಗೆ ಬಂದಿದ್ದಾಳೆ.

ಆಕೆ ಹೋಗಿ ನಿಂತಿದ್ದು ಆ ಕಿಡಿಗೇಡಿ ಆಚಾರಿಯ ಮನೆ ಮುಂದೆ. ಆಗಿನ ಕಾಲದ ಮಾಳಮಡ್ಡಿ ಬಡಾವಣೆ. ನಾಲ್ಕು ಹೆಜ್ಜೆ ಹಾಕಿದರೆ ಸಿಕ್ಕಿದೆ ಆಚಾರಿಯ ಮನೆ. ಇವಳು ಭುಸುಗುಡುತ್ತ ಹೋಗಿ ಬಾಗಿಲು ತಟ್ಟಿದ್ದಾಳೆ. ಯಾರೋ ಮಹಿಳೆ ಬಾಗಿಲು ತೆಗೆದಿದ್ದಾರೆ. ಏನು ಅಂತ ವಿಚಾರಿಸಿದ್ದಾರೆ. ಇವಳು ವಿಷಯ ಹೇಳಿದ್ದಾಳೆ. 'ನಿಮ್ಮ ಹುಡುಗನನ್ನು ಸ್ವಲ್ಪ ಹೊರಗೆ ಕಳಿಸಿ. ಮಾತಾಡುವದಿದೆ,' ಅಂದಿದ್ದಾಳೆ. ಬಾಗಿಲು ತೆಗೆದ ಮಹಿಳೆಗೆ ವಿಚಿತ್ರ ಅನ್ನಿಸಿದೆ. ೧೯೬೫ ರ ಸಮಯದಲ್ಲಿ ಕರ್ಮಠ ಬ್ರಾಹ್ಮಣರ ಅಗ್ರಹಾರದಂತಿದ್ದ ಧಾರವಾಡದ ಮಾಳಮಡ್ಡಿಯಲ್ಲಿ, ಪ್ರಾಯದ ಹುಡುಗಿಯೊಬ್ಬಳು, ಯಾರದ್ದೋ ಮನೆಗೆ ಹೋಗಿ ಆ ಮನೆಯ ಸುಮಾರು ಅದೇ ವಯಸ್ಸಿನ ಹುಡುಗನನ್ನು ಹೊರಗೆ ಕಳಿಸಿ, ಮಾತಾಡುವದಿದೆ  ಅನ್ನುತ್ತಾಳೆ ಅಂದರೆ ಅದು ಮಹಾ ದೊಡ್ಡ ವಿಚಿತ್ರ.

ಕಿಡಿಗೇಡಿ ಆಚಾರಿ ಒಳಗೆ ಸಂಧ್ಯಾವಂದನೆ ಮಾಡುತ್ತ ಮೂಗು ಹಿಡಿದು ಕುಳಿತಿದ್ದ. 'ನಿನ್ನ ಹುಡುಕಿಕೊಂಡು ಯಾರೋ ಒಬ್ಬಾಕಿ ಬಂದಾಳ ನೋಡು,' ಅಂತ ಮನೆ ಮಂದಿ ಹೇಳಿದ್ದಾರೆ. ಥಂಡಾ ಹೊಡೆಯುವ ಬಾರಿ ಈಗ ಅವನದು. ಗಡಿಬಿಡಿಯಲ್ಲಿ ಸಂಧ್ಯಾವಂದನೆ ಮುಗಿಸಿ, ನಾಮಗಳನ್ನು ಎತ್ತರ ಪತ್ತರ ಬಳಿದುಕೊಂಡು ಹೊರಗೆ ಬಂದರೆ ಈ ಮಹಾಕಾಳಿಯ ದರ್ಶನವಾಗಿಬಿಟ್ಟಿದೆ.

ಅವಳ ಆ ಸಿಟ್ಟು, ಆ ಆಕ್ರೋಶ, ಆ ದುಃಖ ಅದೆಲ್ಲಿ ತುಂಬಿಕೊಂಡಿತ್ತೋ ಏನೋ. ಲವ್ ಚೀಟಿ ಅವನು ಬರೆದು ಇವಳ ತಮ್ಮನನ್ನು ಸಿಕ್ಕಿಹಾಕಿಸಿದ ಕಿರಾತಕ ಆಚಾರಿಯನ್ನು ನೋಡಿದ್ದೇ ಜ್ವಾಲಾಮುಖಿ ಸ್ಪೋಟವಾಗಿಬಿಟ್ಟಿದೆ. ಮನದಲ್ಲೇ, 'ನಿನ್ನಜ್ಜಿ, ಯಾಂದಳ್ಳಿ!' ಅಂತ ಹಲ್ಲು ಮಸೆದವಳೇ ಆಚಾರಿಯ ಸಹಸ್ರನಾಮಾರ್ಚನೆ ಶುರುಮಾಡಿಬಿಟ್ಟಿದ್ದಾಳೆ. ಆಗ ಮಾತ್ರ ಸಂಧ್ಯಾವಂದನೆ ಮುಗಿಸಿ ನಾಮಧಾರಿಯಾಗಿ ಬಂದ ಆಚಾರಿಗೆ ಸಹಸ್ರನಾಮಾರ್ಚನೆಯ ಬೋನಸ್. ಅದೂ choicest expletives! ಕಿವಿಯಲ್ಲಿ ಕಾದ ಸೀಸ ಹೊಯ್ದಂತೆ. ಆ ರೀತಿಯಲ್ಲಿ ಬರೋಬ್ಬರಿ ಹಚ್ಚಿ ಕೈತೆಗೆದುಕೊಂಡಿದ್ದಾಳೆ. ಆಚಾರಿ ಮತ್ತು ಅವನ ಮನೆತನದ ಮಾನ ಫುಲ್ ಬೀದಿಪಾಲಾಗಿದೆ. ಶಿವಾಯ ನಮಃ!

ಮಹಾಕಾಳಿಯನ್ನು ಎದುರಿಸಲು ಆಗದ ಆಚಾರಿ ಫುಲ್ ಒಳಗೆ ಸೇರಿಕೊಂಡಿದ್ದಾನೆ. ಅವನು ಕಣ್ಮರೆಯಾದ ಅಂತ ಇವಳ ಸಿಟ್ಟು ಜಾಸ್ತಿಯಾಗಿ ಒದರುವ ವಾಲ್ಯೂಮ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಅವನ ಮನೆಯೊಳಗೇ ನುಗ್ಗುತ್ತಿದ್ದಳೋ ಏನೋ. ಬೇಡ ಅಂತ ಬಿಟ್ಟಿದ್ದಾಳೆ. ಹೊರಗೆ ನಿಂತೇ ಆಚಾರಿಯ ವಂಶ ಜಾಲಾಡುತ್ತಿದ್ದಾಳೆ. ಒಳಗೆ ಆಚಾರಿ ಪತರುಗುಟ್ಟುತ್ತ ಕೂತಿದ್ದಾನೆ. ಮನೆಯವರು ಯಾರೋ ಬಂದು ಹೊರಗೆ ನಿಂತು ಬೈಯ್ಯುತ್ತಿದ್ದ ಇವಳಿಗೆ ಏನೋ ಹೇಳಿದರೆ ಅವರಿಗೂ ದಬಾಯಸಿ ಕಳಿಸಿದ್ದಾಳೆ. ಸಾತ್ವಿಕ ಸಿಟ್ಟಿನ ಖದರ್ ಅಂದರೆ ಅದು. ತಪ್ಪೇ ಮಾಡಿಲ್ಲ ಅಂದ ಮೇಲೆ ಹೆದರಿಕೆ ಏಕೆ?

ಫುಲ್ ದೊಡ್ಡ ಸೀನ್ ಆಗಿಬಿಟ್ಟಿದೆ. ಹೊರಗೆ ಬಂದರೆ ಚಪ್ಪಲಿಯಲ್ಲಿಯೇ ಏಟು ಬೀಳುತ್ತವೆ ಅಂತ ಖಾತ್ರಿಯಾದ ಆಚಾರಿ ಒಳಗೇ ಕೂತಿದ್ದಾನೆ. ಅಕ್ಕಪಕ್ಕದವರು ಸಹ ಸೇರಿದ್ದಾರೆ. ವಿಷಯ ತಿಳಿದು ಅವರೂ ಒಂದಿಷ್ಟು ಒಗ್ಗರಣೆ ಹಾಕಿದ್ದಾರೆ. ಮಹಾಕಾಳಿಗೆ ಮತ್ತೂ ಹುರುಪು ಬಂದಿದೆ. ಒಂದು notch ಏರಿಸಿದ್ದಾಳೆ. Upped the ante.

'ಒಳಗ ಮನಿಯಾಗ ಏನು ಹೊಕ್ಕೊಂಡು ಕೂತೀಲೇ? ಹೆಣ್ಯಾ ಹೆದರುಪುಕ್ಕ! ದಮ್ ಇದ್ದರ ಹೊರಗ ಬಾರಲೇ!' ಅಂತ ಇವಳು ಚಾಲೆಂಜ್ ಒಗೆದರೂ ಆಚಾರಿ ಹೊರಗೆ ಬರಲೊಲ್ಲ.

'ಏ, ಹೋಗಿ, ಏನಂತ ಕೇಳಿ, ಆ ಹುಡುಗಿ ಕಳಿಸಿಬಾರೋ ಪುಣ್ಯಾತ್ಮಾ. ಮನಿ ಮುಂದ ನಿಂತು ಅಕಿ ಆಪರಿ ಒದರ್ಲಿಕತ್ತಾಳ. ಮನಿ ಮರ್ಯಾದಿ ಹೋಗ್ಲಿಕತ್ತದ. ಹೋಗಿ ಏನು ಅಂತ ಕೇಳಿ ಮುಗಿಸಿಬಾರೋ!' ಅಂತ ಮನೆ ಮಂದಿ ಕೂಡ ಅವನಿಗೆ ಹೇಳಿದ್ದಾರೆ. ಮರ್ಯಾದೆ ಕಳೆಯುವ ಕೆಲಸ ಮಾಡಿದವನು ಅವರ ಮನೆ ಮಗ. ಅವನು ಮನೆಯಲ್ಲೇ ಕೂತಿದ್ದಾನೆ. ಮಾಡಿದ ತಪ್ಪನ್ನು ತೋರಿಸಿ, ತಪ್ಪನ್ನು ಇನ್ನೊಬ್ಬರ ಮೇಲೆ ಏಕೆ ಹಾಕಿದೆ ಅಂತ ಘಟ್ಟಿಯಾಗಿ ಕೇಳುತ್ತಿರುವರು ಮರ್ಯಾದೆ ಕಳೆಯುತ್ತಿದ್ದಾರೆ! ಅಂತ ಅವರು ತಿಳಿದಿದ್ದಾರೆ. ಎಂತಹ ವಿಪರ್ಯಾಸ!

ಸುಮಾರು ಹೊತ್ತು ಈ ಮಹಾಕಾಳಿ ಮೇಡಂ ಆವಾಜ್ ಹಾಕಿದರೂ ಆಚಾರಿ ಹೊರಗೆ ಬಿದ್ದಿಲ್ಲ. ಇವಳೂ ಎಷ್ಟಂತ ಮನೆ ಮುಂದೆ ನಿಂತು ಕೂಗಿಯಾಳು? ಕೂಗಿ ಕೂಗಿ ಸಾಕಾಗಿ ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾಳೆ. ಆಗ ಲಫಡಾ ಆಗಿದೆ.

'ಆಪರಿ ಕೂಗುಮಾರಿಯಂತೆ ಕೂಗುತ್ತಿದ್ದವಳು ಈಗ ಕೂಗುತ್ತಿಲ್ಲ. ಅಂದ ಮೇಲೆ ಹೊರಟುಹೋಗಿರಬೇಕು. ಈಗ ಎಲ್ಲಾ ಸೇಫ್,' ಅಂದುಕೊಂಡಿದ್ದಾನೆ ಆಚಾರಿ. ಆಗ ಇನ್ನೂ ಮುಸ್ಸಂಜೆ ಹೊತ್ತು. ಅವನಾದರೂ ಎಷ್ಟಂತ ಮನೆಯಲ್ಲೇ ಕೂತಾನು? ಅವನಿಗೂ ಒಂದಿಷ್ಟು ಹೊತ್ತು ಹೊರಗೆ ಹೋಗಿ, ಸುತ್ತಾಡಿ ಬರಬೇಕು ಅನ್ನಿಸುವದಿಲ್ಲವೇ? ಹಾಗೇ ಅನ್ನಿಸಿದೆ. ಕಳ್ಳಬೆಕ್ಕಿನಂತೆ ಹೊರಗೆ ಕಾಲಿಟ್ಟಿದ್ದಾನೆ.

ಮಹಾಕಾಳಿ ಮನೆ ಕಡೆ ಹೊರಟಿದ್ದಳು. ಸುಮ್ಮನೆ ತಿರುಗಿ ನೋಡಿದ್ದಾಳೆ. ಕಳ್ಳಬೆಕ್ಕಿನಂತೆ ಎಸ್ಕೇಪ್ ಆಗುತ್ತಿರುವ ಆಚಾರಿ ಕಂಡಿದ್ದಾನೆ. ಒಂದು ತಾಸು ಮನೆ ಮುಂದೆ ನಿಂತು ಆವಾಜ್ ಹಾಕಿ, ಸಹಸ್ರನಾಮಾರ್ಚನೆ ಮಾಡಿದರೂ ಹೊರಗೆ ಬರದಿದ್ದವ ಈಗ ಬಂದಿದ್ದಾನೆ. ನೋಡಿ ರೋಷ ಉಕ್ಕಿ ಬಂದಿದೆ. ಉಟ್ಟಿದ್ದ ಪ್ಯಾರಾಚೂಟಿನಂತಹ ಪರಕಾರವನ್ನು ಎತ್ತಿ ಸೊಂಟಕ್ಕೆ ಸಿಗಿಸಿಕೊಂಡವಳೇ, 'ಏ, ಆಚಾರಿ! ನಿಂದ್ರಲೇ! ಏ!' ಅಂತ ರಣಕೇಕೆ ಹಾಕಿದ್ದಾಳೆ. ರಣಭೇರಿ ಬಾರಿಸಿಬಿಟ್ಟಿದ್ದಾಳೆ. ಆಚಾರಿ ಫುಲ್ ಗಡಗಡ.

'ಏ, ಆಚಾರಿ! ಭೋಕುಡ್ ಛಾಪ್! ನಿಂದ್ರಲೇ ಹೆಣ್ಯಾ!' ಅಂತ ಕಿತ್ತೂರ್ ಚೆನ್ನಮ್ಮನಂತೆ ಕೂಗಿದವಳೇ ಅಟ್ಟಿಸಿಕೊಂಡು ಬಂದಿದ್ದಾಳೆ.

ಈಗ ಮಾತ್ರ ಆಚಾರಿ ಫುಲ್ ಮಟಾಶ್. ಮನೆಯ ಕಾಂಪೌಂಡಿನಿಂದ ಹೊರಗೆ ಬಂದುಬಿಟ್ಟಿದ್ದಾನೆ. ಒಳಗೆ ಹೋಗುವ ಹಾಗಿಲ್ಲ. ಉಳಿದಿದ್ದು ಒಂದೇ ಮಾರ್ಗ. ಓಡಬೇಕು. ಮಾಳಮಡ್ಡಿಯ ಗಲ್ಲಿ ಬೀದಿಗಳಲ್ಲಿ ಬಿದ್ದಾಕಿ ಓಡಬೇಕು. ಇಲ್ಲವಾದರೆ ಚಪ್ಪಲಿಯಲ್ಲಿ ಅದೂ ಸಿರ್ಸಿಯ ಸ್ಪೆಷಾಲಿಟಿ ಆದ ಮಳೆಗಾಲದ ರಬ್ಬರ್ ಚಪ್ಪಲಿಯಲ್ಲಿ ಬಾರಿಸುತ್ತಾಳೆ. ಡೌಟೇ ಬೇಡ. ಅವಳ ಪ್ರೀತಿಯ ತಮ್ಮನ ಹೆಸರು ಹಾಕಿ ಲವ್ ಚೀಟಿ ಇಟ್ಟಿದ್ದು ಆಕೆಯನ್ನು ಸಿಕ್ಕಾಪಟ್ಟೆ ಕೆರಳಿಸಿಬಿಟ್ಟಿದೆ ಅಂತ ಅವನಿಗೆ ಗೊತ್ತಾಗಿದೆ. ಓಡಲು ಆರಂಭಿಸಿದ್ದಾನೆ.

ಅಂತಹದೊಂದು ಸೀನ್ ಮಾಳಮಡ್ಡಿ ಎಂದೂ ನೋಡಿರಲಿಕ್ಕಿಲ್ಲ ಬಿಡಿ. ಸತ್ತೆನೋ ಬಿದ್ದೆನೋ ಎಂಬಂತೆ ಓಡುತ್ತಿರುವ ಒಬ್ಬ ಹುಡುಗ. ಹಿಂದೆ ಅವನನ್ನು ಅಟ್ಟಿಸಿಕೊಂಡು ಬರುತ್ತಿರುವ ಒಬ್ಬಳು ಹುಡುಗಿ. What a scene it must have been!

ಅವನ ನಸೀಬ್ ಒಳ್ಳೆಯದಿತ್ತು ಅಂತ ಕಾಣುತ್ತದೆ. ಅದು ಹೇಗೋ ಬಚಾವ್ ಆಗಿದ್ದಾನೆ. ಅಂಗಿ ಚೊಣ್ಣ ತೊಟ್ಟಿದ್ದು ಒಳ್ಳೆಯದೇ ಆಗಿದೆ. ಓಡಲು ಅನುಕೂಲ. ಹಾಗಾಗಿ ಪರಕಾರದ ಪಾರ್ಟಿ ಹುಡುಗಿಯಿಂದ ಬಚಾವ್. ಯಾವದೋ ಪತಲಿ ಗಲಿಯಿಂದ ಓಡಿ ಎಸ್ಕೇಪ್ ಆಗಿದ್ದಾನೆ. ಇವಳು ಚಪ್ಪಲಿ ಕೈಯಲ್ಲಿ ಹಿಡಿದು ಅಲ್ಲಿ ಇಲ್ಲಿ ಹುಡುಕಿದರೆ ಸಿಕ್ಕಿಲ್ಲ. ಮಿಕ ತಪ್ಪಿಸಿಕೊಂಡಿತು ಅಂತ ದುಮುದುಮುಗುಟ್ಟುತ್ತ ಹುಡುಗಿ ವಾಪಸ್ ಬಂದಿದ್ದಾಳೆ. ಕತ್ತಲು ಬೇರೆ ಆಗುತ್ತಿತ್ತಲ್ಲ. ಅವಳಿಗೂ ಮನೆ ಸೇರಿಕೊಳ್ಳಬೇಕು.

ಮುಂದೆ ಸ್ವಲ್ಪ ದಿವಸ ಆಚಾರಿ ಫುಲ್ ಸಿಂಕಾಗಿದ್ದಾನೆ. ಎಲ್ಲಿ ಹೋಗಿದ್ದನೋ ಗೊತ್ತಿಲ್ಲ. ಶಾಲೆಯಲ್ಲಿಯೂ ಕಂಡಿಲ್ಲ. ಮಾಳಮಡ್ಡಿಯಲ್ಲೂ ಕಂಡಿಲ್ಲ.

ಹವಾ ಎಲ್ಲಾ ಫುಲ್ ತಣ್ಣಗಾದ ಮೇಲೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ಚಪ್ಪಲಿ ಹಿಡಿದು ಅಟ್ಟಿಸಿಕೊಂಡು ಬಂದಿದ್ದ ಹುಡುಗಿ ಕಂಡರೆ ಮಾತ್ರ ಫುಲ್ ಎಸ್ಕೇಪ್. ಶಾಲೆಯಲ್ಲಿ ಫುಲ್ ಸೇಫ್. ಹೊರಗೆ ಬಿದ್ದರೆ ಎಲ್ಲಿ ಚಪ್ಪಲಿ ಸೇವೆಯಾಗುತ್ತದೋ ಅಂತ ಭಯ.

ಅಷ್ಟರಲ್ಲಿ ಹತ್ತನೇ ತರಗತಿಯ ಪರೀಕ್ಷೆ ಕೂಡ ಮುಗಿಯಿತು. ಹುಡುಗಿ ಶಾಲೆ ಬಿಟ್ಟು ಕಾಲೇಜ್ ಸೇರಿಕೊಂಡಳು. ಆಚಾರಿ ಹುಸ್ ಅಂತ ನಿಟ್ಟುಸಿರು ಬಿಟ್ಟ. ಆದರೂ ಮಾಳಮಡ್ಡಿಯಲ್ಲಿ ಎಲ್ಲೇ ಕಂಡರೂ ಫುಲ್ ಸಿಂಕಾಗಿಬಿಡುತ್ತಿದ್ದ. ಕಂಡಲ್ಲಿ ಸಿಂಕಾಗುತ್ತಿದ್ದ ಈ ಅಚಾರಿಯೆಂದರೆ ಹುಡುಗಿ ಮತ್ತು ಆಕೆಯ ಗೆಳತಿಯರಿಗೆ ಗೇಲಿಯ ಸರಕು.

ಹಾಂ! ಹೇಳೋದೇ ಮರೆತುಬಿಟ್ಟೆ. ಧಾರವಾಡದ ಮಾಳಮಡ್ಡಿ ತುಂಬಾ ಆ ಆಚಾರಿಯನ್ನು ಚೇಸ್ ಮಾಡಿದ ಮಹಾಕಾಳಿ ನಮ್ಮ ಚಿಕ್ಕಮ್ಮ. ಅಮ್ಮನ ತಂಗಿ. ಲವ್ ಚೀಟಿ ಬರೆದ ಅಪವಾದ ಹೊತ್ತವನು ನಮ್ಮ ಮಾಮಾ. ಅಮ್ಮನ ಕಿರೀ ತಮ್ಮ.

ವಿಪರ್ಯಾಸ ನೋಡಿ. ಕಿತಾಪತಿ ಆಚಾರಿ ನಂತರ ಅದೇ ಶಾಲೆಯಲ್ಲಿಯೇ ಮಾಸ್ತರಿಕೆ ಮಾಡಿಕೊಂಡಿದ್ದರು. ಎಲ್ಲಿಯೂ ಸಲ್ಲದವರು ಅಲ್ಲಿ ಸಲ್ಲಿಬಿಟ್ಟರು. ನಮಗೆ ಅವರು ಪಾಠ ಮಾಡಲಿಲ್ಲ. ಶಾಲೆಯ ಬೇರೆ ಬ್ರಾಂಚಿನಲ್ಲಿ ಇದ್ದರು. ಅವರನ್ನು ನೋಡಿದಾಗ ಸಿಕ್ಕಾಪಟ್ಟೆ ನಗು ಬರುತ್ತಿತ್ತು. ನಮ್ಮ ಚಿಕ್ಕಮ್ಮನಿಗೆ ಹೆದರಿ ಮಾಳಮಡ್ಡಿ ತುಂಬಾ ಓಡಿದ್ದನ್ನು ಊಹಿಸಿಕೊಂಡರೂ ಸಿಕ್ಕಾಪಟ್ಟೆ ನಗು. ಅವರೂ ಈಗ ಒಂದೆರೆಡು ವರ್ಷದ ಹಿಂದೆ ತೀರಿಹೋದರು. ನಮ್ಮ ಮಾಮಾ, ಚಿಕ್ಕಮ್ಮ ಎಲ್ಲ ಆರಾಮ್ ಇದ್ದಾರೆ. ಹಳೆಯ ಸುದ್ದಿಯ ಹರಟೆ ಶುರುವಾದಾಗ ಈ ಸುದ್ದಿ ಬಂದೇಬರುತ್ತದೆ. ಎಲ್ಲರೂ ಕೂಡಿ ಚಿಕ್ಕಮ್ಮನ ಕಾಲೆಳೆಯುತ್ತೇವೆ. ಮಜಾಕ್ ಮಾಡುತ್ತೇವೆ. ಅವಳಿಗೆ ಇವತ್ತಿಗೂ ಕೂಡ ಒಂದೇ ಬೇಜಾರು. ಆವತ್ತು ಮಾಳಮಡ್ಡಿ ತುಂಬಾ ಅಟ್ಟಾಡಿಸಿಕೊಂಡು ಓಡಿದರೂ ಆಚಾರಿ ಕೈಗೆ ಸಿಗಲಿಲ್ಲ. ಸಿಕ್ಕಿದವ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದ. 'ಸಿಕ್ಕಿದ್ದರೆ ಚಪ್ಪಲಿಯಲ್ಲಿ ನಿಜವಾಗಿಯೂ ನಾಲ್ಕು ಹಾಕುತ್ತಿದ್ದೆ. ಬಿಡ್ತಿರಲಿಲ್ಲ,' ಅನ್ನುತ್ತಾಳೆ ಚಿಕ್ಕಮ್ಮ. 'ಇರ್ಲಿ ಬಿಡು ಮಾರಾಯ್ತಿ. ಈಗ ಆ ಆಚಾರರೇ ಮೇಲೆ ಸ್ವರ್ಗಕ್ಕೆ ಹೋಗಿಬಿಟ್ಟಿದ್ದಾರೆ,' ಅಂದರೆ, 'ಅದೆಂಗ ಸತ್ತಾ ಅಂವಾ? ಅದೂ ನನ್ನ ಕಡೆ ಹೊಡೆತ ತಿನ್ನದೇ ಅದೆಂಗ ಸತ್ತಾ?? ಅವಂಗ ಮುಕ್ತಿ ಸಿಗೋದಿಲ್ಲ ತಗೋ' ಅಂದು ಪೆಕಪೆಕಾ ನಗುತ್ತಾಳೆ. ಕೆಲವರು ಹಾಗೆಯೇ. ಅದಕ್ಕೇ ಅವರಿಗೆ women of substance ಅನ್ನುವದು. ಅಲ್ಲವೇ?

4 comments:

sunaath said...

ಮಹೇಶ, ಮನಸ್ಸು ತುಂಬಿ ಬಂದಿತು. ನಿಮ್ಮ ಚಿಕ್ಕಮ್ಮನಿಗೆ ನನ್ನ ಸಾವಿರ ಸಲಾಮುಗಳು. She is really a woman of substance.

Mahesh Hegade said...

Thanks Sunaath Sir.

Shailesh Hegde said...


Very nice write-up!

My aunt was, and still is, a very determined person.

Mahesh Hegade said...

Yes Shailesh. 100% true.