Thursday, May 12, 2016

ಸೀರೆ ಉಡಲಾಗದಷ್ಟು ನೋವು

''ಚಿಗವ್ವಾರ, ಭಾಳ ನೋಯ್ಸಾಕತ್ತೈತ್ರೀ. ಸೀರಿ ಉಡಾಕ ಸುದಾ ಆಗವಲ್ಲತ್ರೀ, ಚಿಗವ್ವಾರss. ಯವ್ವಾ ನೋಯ್ಸಾಕತ್ತೈತಿ!' ಅಂತ ಆ ಹುಡುಗಿ ಅಳಾಕತ್ತಿತ್ತು ನೋಡ್ರಿ,' ಅಂದವರು ನಮ್ಮ ಏರಿಯಾದ ಒಬ್ಬರು ಹಿರಿಯ ಆಂಟಿ.

ಹಾಂ!?? ಏನೋ ಖತರ್ನಾಕ್ ಸುದ್ದಿ ಇದ್ದ ಹಾಗಿದೆ ಅಂತ ಕಿವಿ ನಿಮಿರಿಬಿಟ್ಟವು.

ಆ ಆಂಟಿ ಮನೆಗೆ ಬಂದವರು ಅಮ್ಮನ ಜೊತೆ ಹರಟೆ ನಡೆಸಿದ್ದರು. ನಾನೂ ಅಲ್ಲೇ ಪಕ್ಕದ ರೂಮಿನಲ್ಲಿ ಓದುತ್ತಿದ್ದೆನಲ್ಲ. ಹಾಗಾಗಿ ಆಸಕ್ತಿ ಇಲ್ಲದಿದ್ದರೂ ಮಾತು ಕೇಳಿಬರುತ್ತಿತ್ತು. ಅದರಲ್ಲೂ 'ಸೀರೆ ಉಡಲಾಗದಷ್ಟು ನೋವು' ಅಂತ ಕೇಳಿದ ಮೇಲಂತೂ ಆಸಕ್ತಿ ಕೂಡ ಬಂದುಬಿಟ್ಟಿತು. ಅಲ್ಲಿಗೆ ಓದು ಶಿವಾಯ ನಮಃ!

ಸೀರೆ ಉಡಲಾಗದಷ್ಟು ನೋವು ಅಂದ ಮೇಲೆ ಏನೋ ದೊಡ್ಡ ಬೇನೆಯೇ ಇರಬೇಕು. ಹಾಗಂತ ನಮ್ಮ ಊಹೆ. ಆಮೇಲೆ ವಿಷಯ ತಿಳಿದರೆ ಅದೊಂದು ವಿಚಿತ್ರ ದುರಂತ ಕಥೆ.

ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಆಗಿದ್ದು ಇಷ್ಟು. ನಮ್ಮ ಏರಿಯಾದವಳೇ ಆದ ಒಬ್ಬ ಹುಡುಗಿ. ಅಕ್ಕನಂತವಳು. ಈ ಆಂಟಿಯ ಪಕ್ಕದ ಮನೆಯವಳು. ತಿಂಗಳ ಹಿಂದೆ ಮದುವೆಯಾಯಿತು. ಅದರಲ್ಲೇನು ಮಹಾ? ಈ ಪುಣ್ಯಾತ್ಗಿತ್ತಿ ಹುಡುಗಿ ಮದುವೆಗೆ ನಾಲ್ಕೈದು ದಿನವಿರುವಾಗ ಆಮಂತ್ರಣ ಕೊಡಲು ಗೆಳತಿಯೊಬ್ಬಳ ಮನೆಗೆ ಹೋಗಿದ್ದಾಳೆ. ಇವಳ ನಸೀಬಕ್ಕೆ ಆ ಗೆಳತಿಯ ಮನೆಯ ಖರಾಬ್ ನಾಯಿ ಕಾಂಪೌಂಡಿನಲ್ಲಿ ಓಡಾಡಿಕೊಂಡಿದೆ. ಅದೂ ಮನುಷ್ಯರಿಗೆ ಕಚ್ಚುವ ದುರಭ್ಯಾಸವಿದ್ದ ಡೇಂಜರ್ ನಾಯಿ. ಮದುವೆಗೆ ಕರೆಯಲು ಹೋದವಳಿಗೆ ಏನಾಗುತ್ತಿದೆ ಅಂತ ಅರಿವಾಗುವದರಲ್ಲಿ ನಾಯಿ ಕಚ್ಚಿಬಿಟ್ಟಿದೆ. ಪುಣ್ಯಕ್ಕೆ ಗೆಳತಿ ಮತ್ತು ಆಕೆಯ ಮನೆಯವರು ಬಂದು ಪಾರು ಮಾಡಿದ್ದಾರೆ. ಕಚ್ಚಿದ ಗಾಯಕ್ಕೆ ಅರಿಶಿಣ ಪರಿಶಿಣ ಹಚ್ಚಿ, ಮದುವೆ ಇನ್ನೆರೆಡು ದಿವಸಗಳಿದ್ದಾಗ ಹೀಗಾಗಿಹೋಗಿದ್ದಕ್ಕೆ ವಿಷಾದ ವ್ಯಕ್ತಿಪಡಿಸಿ, ಚಹಾ ಪಾನಿ ಮಾಡಿಸಿ ಕಳಿಸಿದ್ದಾರೆ. ಮದುವೆಗೆ ಮೊದಲು ಮಾಡುವ ಹಳದಿ, ಮೆಹಂದಿ ಹಚ್ಚುವ ಶಾಸ್ತ್ರ ಹೀಗೆ ನಾಯಿ ಕಚ್ಚಿದಾಗ ಹಳದಿ ಹಚ್ಚಿಸಿಕೊಳ್ಳುವ ಮೂಲಕ ಆರಂಭವಾಗಿಬಿಟ್ಟಿದೆ. ಈ ರೀತಿಯಲ್ಲಿ ಹಳದಿ ಹಚ್ಚುವ ಶಾಸ್ತ್ರ ಮಾಡಿಸಿಕೊಂಡಾಕೆ ಇವಳೇ ಇರಬೇಕು ಬಿಡಿ. ಸ್ಪೆಷಲ್ ಕೇಸ್!

ಮದುವೆಯ ಇನ್ವಿಟೇಶನ್ ಕಾರ್ಡ್ ಕೊಟ್ಟು, ಖಾಲಿಪೀಲಿ ಬಿಟ್ಟಿಯಲ್ಲಿ ನಾಯಿಯಿಂದ ಕಚ್ಚಿಸಿಕೊಂಡು ಮನೆಗೆ ಮರಳಿದ್ದಾಳೆ ಮದುವಣಗಿತ್ತಿ. ಕಚ್ಚಿದ್ದು ನಾಯಿ. ಹುಚ್ಚು ನಾಯಿಯೋ ಪೆಚ್ಚು ನಾಯಿಯೋ ಏನೇ ಇರಲಿ. ನಾಯಿ ಕಚ್ಚಿತು ಅಂದ ಮೇಲೆ ಮುಗಿಯಿತು. ಖತರ್ನಾಕ್ ಚಿಕಿತ್ಸೆ ತೆಗೆದುಕೊಳ್ಳಲೇಬೇಕು. ಅದೇ ಅದೇ ಚಿಕಿತ್ಸೆ. ಹೊಟ್ಟೆ ಮೇಲೆ, ಹೊಕ್ಕುಳಿನ ಸುತ್ತ, ಹತ್ತೋ ಹದಿನಾಲ್ಕೋ ಇಂಜೆಕ್ಷನ್, ದಿನಕ್ಕೆ ಒಂದರಂತೆ. ಯಮಯಾತನೆ ಅಂದರೆ ಅದೇ ಅಂತ ನಾಯಿಯಿಂದ ಕಡಿಸಿಕೊಂಡು ನಂತರ ಆ ಇಂಜೆಕ್ಷನ್ ಯಾತನೆ ಅನುಭವಿಸಿದವರು ಹೇಳಿದ್ದು ಕೇಳಿ ಗೊತ್ತಿತ್ತು. ಆಗ ಸಿಂಗಲ್ ಇಂಜೆಕ್ಷನ್ ಚಿಕಿತ್ಸೆ ಬಂದಿರಲಿಲ್ಲ. ಸರಿ. ಈ ಮದುವೆ ಹುಡುಗಿಗೂ ಕೊಟ್ಟರು, ಅದೇ ಇಂಜೆಕ್ಷನ್, ಹೊಕ್ಕಳಿನ ಸುತ್ತ. ಟೋಟಲ್ ಶಿವಾಯ ನಮಃ!

ಹೊಕ್ಕುಳಿನ ಸುತ್ತ ಕೊಟ್ಟ ಇಂಜೆಕ್ಷನ್ ತಂದಿಟ್ಟ ತೊಂದರೆ ಅಂದರೆ ಸೀರೆ ಉಡಲು ಕಷ್ಟ. ವಿಪರೀತ ನೋವಾಗುತ್ತದೆ. ಸೀರೆ ಉಡದೇ ಮದುವೆಯಾಗುವದಿಲ್ಲ. ಬರ್ಮುಡಾ ಚಡ್ಡಿ ಹಾಕಿಕೊಂಡು, ಬಗಲಿಲ್ಲದ ಲಂಡ ಬನಿಯನ್ ಮಾದರಿಯ ಟೀ-ಶರ್ಟ್ ಹಾಕಿಕೊಂಡು ಯಾರೂ, ಅದರಲ್ಲೂ ಹುಡುಗಿಯರು, ಮದುವೆಯಾಗುವದಿಲ್ಲ. ನಮ್ಮ ಕಾಲದಲ್ಲಿ ಇರಲಿಲ್ಲ. ಈಗ ಇದ್ದರೂ ಇರಬಹುದು. ನಟಿ ಮನೀಷಾ ಕೋಯಿರಾಲಾ ಅಂತೂ ಆಕೆಯ ಎಷ್ಟನೇಯದೋ ಮದುವೆಯಲ್ಲಿ ತಲಬು ತಡೆಯಲಾಗದೇ ಲಗ್ನಮಂಟಪದಲ್ಲೇ ಸಿಗರೇಟ್ ಸೇದಿಬಿಟ್ಟಿದ್ದಳು. ಆ ಚಿತ್ರ ಕೂಡ ಬಂದಿತ್ತು ಪತ್ರಿಕೆಗಳಲ್ಲಿ. ಆದರೆ ಇದು ಧಾರವಾಡ ಹುಡುಗಿಯ ಮದುವೆ. ಅದೂ ಮೂವತ್ತು ವರ್ಷಗಳ ಹಿಂದೆ. ಸೀರೆ ಉಡಬೇಕು ಆದರೆ ಉಡಲಾಗುತ್ತಿಲ್ಲ. ಸಿಕ್ಕಾಪಟ್ಟೆ ನೋವು.

ಮದುವೆ ದಿನ ಬಂದಿದೆ. ಈ ಆಂಟಿ ಹೇಳಿಕೇಳಿ ಆ ಹುಡುಗಿಯ ಪಕ್ಕದ ಮನೆಯವರು. ಓಡಾಡಿಕೊಂಡಿದ್ದಾರೆ. ಕೆಲಸ ಕಾರ್ಯ ಸಂಬಾಳಿಸುತ್ತಿದ್ದಾರೆ. ಆಗ ಹುಡುಗಿ ಕರೆದಿದ್ದಾಳೆ. ಮೇಲಿನ ಡೈಲಾಗ್ ಹೊಡೆದಿದ್ದಾಳೆ, 'ಚಿಗವ್ವಾರ, ಭಾಳ ನೋಯ್ಸಾಕತ್ತೈತ್ರೀ. ಸೀರಿ ಉಡಾಕ ಸುದಾ ಆಗವಲ್ಲತ್ರೀ. ಚಿಗವ್ವಾರss.'

'ನಾನss ಖುದ್ ನಿಂತು ಸೀರಿ ಉಡಿಸಿದೆ. ಹೂನ್ರೀ. ಅಕಿ ಕಡೆ ಆಕಿದ್ದಿಲ್ಲ ಬಿಡ್ರಿ. ಭಾಳ ಅಳಾಕತ್ತಿತ್ತು ಆ ಹುಡುಗಿ. ಹೆಂಗೋ ಮಾಡಿ ಢೀಲಾ ಢೀಲಾ (ಸಡಿಲವಾಗಿ) ಸೀರಿ ಉಡಿಸಿಬಂದೆ ನೋಡ್ರಿ!' ಅಂತ ಹೆಮ್ಮೆಯಿಂದ ಹೇಳುತ್ತಿದ್ದರು ಆಂಟಿ. ಅದು ಅವರ ಜೀವನದ ದೊಡ್ಡ ಸಾಧನೆ ಬಿಡಿ. ನಿಜವಾಗಿಯೂ.

ಅಂದು ಈ ಕಥೆ ಕೇಳಿದಾಗ ಏನನ್ನಿಸಿತ್ತು ಅಂತ ನೆನಪಿಲ್ಲ. ಈಗ ನೆನಪಾದಾಗ ಅನ್ನಿಸಿದ್ದು, 'ಶಿವನೇ, ಎಂತೆಂತಾ ಡಿಸೈನರ್ ಡಿಸೈನರ್ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತೀಯಾ ಮಾರಾಯಾ!? ನಿನ್ನ ಮಹಿಮೆ ಅಪಾರ!'

2 comments:

R.K. Undenam said...


A similar incident happened when a non-native had to wear a "panche" during a traditional ceremony in our village!

sunaath said...

ಕೆಟ್ಟನಸತೈತಿ.