Friday, May 20, 2016

ಮಂತ್ರ ಕಲಿತು ನೋಡು. ಮಾಟ ಮಾಡಿ ನೋಡು!

ಮಾಟಗಾರ (ಸಾಂದರ್ಭಿಕ ಚಿತ್ರ)

ಮಾಟ, ಮಂತ್ರ, ವಶೀಕರಣ, ಕಾಲಾ ಜಾದೂ, ತಂತ್ರ, ವಾಮಾಚಾರ ಇವೆಲ್ಲ ಸಿಕ್ಕಾಪಟ್ಟೆ ರೋಚಕ ವಿಷಯಗಳು. ಮೊದಲಿಂದಲೂ ಅವುಗಳ ಬಗ್ಗೆ ವಿಪರೀತ ಕುತೂಹಲ. ಮಂತ್ರ ಕಲಿಯದಿದ್ದರೂ ಮಾಟ ಕಲಿತುಬಿಡಬೇಕು ಅಂತ ಆಸೆ. ಜೊತೆಗೆ ಅವುಗಳ ಬಗ್ಗೆ ಸಿಕ್ಕಿದ್ದನ್ನೆಲ್ಲ ಓದಿ, ಅಲ್ಪ ಸ್ವಲ್ಪ ಗೊತ್ತಿದ್ದವರಿಂದ ಕೇಳಿ ಕೇಳಿ, ತಲೆ ತುಂಬಾ ಅವುಗಳದ್ದೇ ಗುಂಗು. ಮತ್ತೆ ಆವಾಗ ನಾವು ಓದುತ್ತಿದ್ದ ಪುಸ್ತಕಗಳಾದರೂ ಯಾವವು? ಅವೇ ಚಂದಮಾಮ, ಇಂದ್ರಜಾಲ ಕಾಮಿಕ್ಸ್, ಪುರಾಣದ ಕಥೆಗಳು. ಎಲ್ಲದರಲ್ಲೂ ಮಾಟ, ಮಂತ್ರ, ತಂತ್ರ, ಅವುಗಳನ್ನು ಮಾಡುತ್ತಿದ್ದ ಚಿತ್ರವಿಚಿತ್ರ ಮಾಂತ್ರಿಕರು ವಿಜೃಂಭಿಸುತ್ತಿದ್ದರು.

೧೯೮೦ ರ ದಶಕದಲ್ಲಿ ಚಂದಮಾಮ ಮಕ್ಕಳ ಮಾಸಪತ್ರಿಕೆಯಲ್ಲಿ ಪ್ರತಿ ತಿಂಗಳೂ ಪ್ರತ್ಯಕ್ಷನಾಗುತ್ತಿದ್ದ ಅದ್ಭುತವಾದ ಮಾಂತ್ರಿಕನೆಂದರೆ ಕರಡಿ ಕೆಂಗಣ್ಣ. ಎಂತಾ ಮಾಂತ್ರಿಕರೀ ಅವನು!? ನೋಡಿದರೇ ಫುಲ್ ಮಟಾಶ್. ಆ ರೀತಿಯಲ್ಲಿ ಖರಾಬಾಗಿದ್ದ. ಕರಡಿ ಚರ್ಮ ಸುತ್ತಿಕೊಂಡು, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು, ಬಣ್ಣಬಣ್ಣದ ಹಕ್ಕಿ ಪುಕ್ಕಗಳ ಟೊಪ್ಪಿಗೆ ಧರಿಸಿ ಪ್ರತಿ ತಿಂಗಳೂ ಪ್ರತ್ಯಕ್ಷನಾಗುತ್ತಿದ್ದ. ತಿಂಗಳಿಂದ ತಿಂಗಳಿಗೆ ಮುಂದುವರೆಯುತ್ತಿದ್ದ ಧಾರಾವಾಹಿ ಕಥೆ ಮತ್ತೊಂದು ರೋಚಕ ಲೋಕಕ್ಕೆ ತೆರೆದುಕೊಳ್ಳುತ್ತಿತ್ತು. ಅದಕ್ಕಿಂತ ಮೊದಲು 'ಧೂಮಕೇತು' ಎಂಬ ಖತರ್ನಾಕ್ ಧಾರಾವಾಹಿ ಕೂಡ ಬಂದಿತ್ತು. ಸುಮಾರು ಹತ್ತು ವರ್ಷಕ್ಕೂ ಹಳೆಯ ಚಂದಮಾಮಗಳೂ ಸಹ ನಮ್ಮ ಮನೆಯಲ್ಲಿದ್ದವು. ಯಾಕೆಂದರೆ ಪುಸ್ತಕಗಳನ್ನು, ಒಳ್ಳೊಳ್ಳೆ ಪತ್ರಿಕೆಗಳನ್ನು ರದ್ದಿ ಪೇಪರಿಗೆ ಹಾಕುವದು ಮಹಾಪರಾಧ ಅನ್ನುವಂತಹವರ 'ವಿಚಿತ್ರ' ಮನೆತನ ನಮ್ಮದು.

ಹೀಗೆ ಮಾಟ ಮಂತ್ರಗಳ ಹುಚ್ಚು ಬರೋಬ್ಬರಿ ತಲೆಗೆ ಏರಿದ್ದಾಗ ೧೯೮೪ ರಲ್ಲಿ ಮಿತ್ರನೊಬ್ಬ ಮಾಟ ಕಲಿಯಲು ದಾರಿಯೊಂದನ್ನು ತೋರಿಸಿಬಿಟ್ಟಿದ್ದ. ಆ ದಾರಿಯನ್ನು ಅರಸಿ ಹೊರಟರೆ ತೆರೆದುಕೊಂಡಿದ್ದು ಒಂದು ವಿಚಿತ್ರ ಅನುಭವ.

'ಮಹೇಶಾ, ಬಾ ಇಲ್ಲಿ. ಒಂದು ಮಾತು ಹೇಳೋದೈತಿ. ಭಾಳ confidential ಮತ್ತs!' ಅಂತ ಏನೋ ಮಹಾ ನಿಗೂಢವಾದದ್ದನ್ನು ಹೇಳುವವನು ಇದ್ದಾನೆ ಅನ್ನುವ ಮಾದರಿಯಲ್ಲಿ ಆವತ್ತು ಕರೆದವನು ಒಬ್ಬ ಖಾಸ್ ದೋಸ್ತ. ಇನ್ನೂ ಏಳನೇ ಕ್ಲಾಸಿನಲ್ಲಿದ್ದೆ ಆವಾಗ. ೧೯೮೪ - ೮೫ ರ ಮಾತು.

ಕೇಳೋಣ ಅಂತ ಹೋದೆ. ಕಿವಿ ಹತ್ತಿರ ತಂದರೂ ಮತ್ತೂ ಹತ್ತಿರಕ್ಕೆ ಕಿವಿ ಎಳೆದುಕೊಂಡು, ಕಿವಿಯಲ್ಲಿ ಗುಸುಪುಸು ಅಂತ ಏನೋ ಹೇಳಿ, 'ಹ್ಯಾಂಗೈತಿ??? ಮಾಡಿ ನೋಡವಾ??' ಅಂತ ಕೇಳಿ ಒಂದು ತರಹವಾಗಿ ನಕ್ಕ.

ನನ್ನದು ಮತ್ತು ಅವನದು ಒಂದು ವಿಚಿತ್ರ ರೀತಿಯ ಮನಸ್ಥಿತಿ. ಇಬ್ಬರ ತಲೆಗಳೂ ವಯಸ್ಸಿಗೆ ಮೀರಿ ಓಡುತ್ತಿದ್ದವು. ಏಳನೇ ಕ್ಲಾಸಿನ ಹುಡುಗರು ಬಿಡಿ ಪಿಯೂಸಿ ಹುಡುಗರೂ ಸಹ ಅವನ್ನೆಲ್ಲ ವಿಚಾರ ಮಾಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ನಾವು ಮಾಡುತ್ತಿದ್ದೆವು. ಪಾಠ, ಪುಸ್ತಕಗಳನ್ನು ಮೀರಿದ ವಿಷಯಗಳ ಬಗ್ಗೆ ಕುತೂಹಲ ಮತ್ತು ಆಸಕ್ತಿ ಸಿಕ್ಕಾಪಟ್ಟೆ ಇತ್ತು. ನಾವಿಬ್ಬರು ತಿಳಿದುಕೊಂಡಿದ್ದ ಕೆಲವು ವಿಷಯಗಳು, ಮಾತಾಡುತ್ತಿದ್ದ ಸುದ್ದಿಗಳ ಬಗ್ಗೆ ನಮ್ಮ ವಯಸ್ಸಿನ ಮಂದಿಗೆ ಗೊತ್ತೂ ಇರುತ್ತಿರಲಿಲ್ಲ. ಆಸಕ್ತಿಯೂ ಇರುತ್ತಿರಲಿಲ್ಲ. ಹಾಗಾಗಿಯೇ ನನ್ನ ಅವನ ದೋಸ್ತಿ ಗಟ್ಟಿಯಾಗುತ್ತ ಬಂದಿತ್ತು.

ಆವತ್ತು ಆ ದೋಸ್ತ ಕಿವಿಯಲ್ಲಿ ಮಾಟ ಅಂದರೆ ವಾಮಾಚಾರದ ಬಗ್ಗೆ ಏನೋ ಹೇಳಿಬಿಟ್ಟಿದ್ದ. ಸ್ವಲ್ಪ ವಿವರಣೆ ಕೊಟ್ಟಿದ್ದ. ಹೆಚ್ಚಿನ ಮಾಹಿತಿಯನ್ನು ಹೇಗೆ ಸಂಪಾದಿಸಬೇಕು ಅನ್ನುವದಕ್ಕೂ ದಾರಿ ತೋರಿಸಿದ್ದ. ಕೆಟ್ಟ ಕುತೂಹಲ ಹುಟ್ಟಿಸಿಬಿಟ್ಟಿದ್ದ. ಎಂತಹ ಕುತೂಹಲ ಎದ್ದುಬಿಟ್ಟಿತು ಅಂದರೆ ಬಿಟ್ಟುಕೊಳ್ಳಬಾರದ ಜಾಗದಲ್ಲಿ ಇರುವೆ ಬಿಟ್ಟುಕೊಂಡು ಪರದಾಡಿದಂತೆಯೇ ಸರಿ.

ಅದೇನೋ ಒಂದು ಮಾಟದ ಬಗ್ಗೆ ಹೇಳಿದ್ದ. ಅದೇನೋ ವಾಮಾಚಾರವಂತೆ. ಅದನ್ನು ಪದ್ಧತಿ ಪ್ರಕಾರ ಮಾಡಿ, ಹೇಳಬೇಕಾದ ಮಂತ್ರ ಹೇಳುತ್ತ, ಯಾರಿಗೆ ಅದು ತಾಗಬೇಕೋ ಅವರನ್ನು ನೆನಪಿಸಿಕೊಂಡರೆ ಆಯಿತು. ಮಾಟದ ಪರಿಣಾಮ ಆಗಿಬಿಡುತ್ತದೆ. ಪರಿಣಾಮ ಕಾಣಲಿಕ್ಕಿಲ್ಲ ಆಗುವದು ಮಾತ್ರ ಖಾತ್ರಿ. ಅದು ಯಾವ ಮಾಟ ಅಂದರೆ ಮಹಿಳೆಯ ಸೀರೆ ಎತ್ತಿಸಿಬಿಡುವ ಖತರ್ನಾಕ್ ಪ್ರಕ್ರಿಯೆ!

ಗೆಳಯ ಕೊಟ್ಟ ಸಂಕ್ಷಿಪ್ತ ವಿವರಣೆ ಇಷ್ಟಿತ್ತು. ಎರೆಹುಳ (earthworm) ತೆಗೆದುಕೊಳ್ಳಬೇಕು. ಒಂದು ದೀಪದ ಹಣತೆ ತೆಗೆದುಕೊಳ್ಳಬೇಕು. ಅದರಲ್ಲಿ ಎಣ್ಣೆ ತುಂಬಬೇಕು. ಹತ್ತಿಯ ಬತ್ತಿಯ ಬದಲು ಎರೆಹುಳವನ್ನು ಇಡಬೇಕು. ಆ ಎರೆಹುಳವನ್ನು ಬತ್ತಿಯಂತೆಯೇ ಬೆಂಕಿಯಿಂದ ಹೊತ್ತಿಸಿಬಿಡಬೇಕು. ನಂತರ ಒಂದು ಲೋಹದ ಬಳೆ ತೆಗೆದುಕೊಳ್ಳಬೇಕು. ಅದನ್ನು ಕೈಗೆ ಹಾಕಿಕೊಳ್ಳಬೇಕು. ನಂತರ ಯಾವದೋ ಮಂತ್ರ ಹೇಳುತ್ತ, ನಿಧಾನವಾಗಿ ಲೋಹದ ಬಳೆಯನ್ನು ನಿಮ್ಮ ಕೈ ಮೇಲೆ ಮೇಲೆ ಏರಿಸುತ್ತ ಹೋಗಬೇಕು. ಆ ಬಳೆ ಮುಂಗೈ ಬಿಟ್ಟು ಮೇಲೆ ಮೇಲೆ ಏರಿದಂತೆ ನೀವು ಯಾರಿಗೆ ಮಾಟ ಮಾಡಿರುತ್ತೀರೋ ಅವರ ಸೀರೆ ಕೂಡ ಮೇಲೆ ಮೇಲೆ ಏರುತ್ತ ಹೋಗುತ್ತದೆ. ಹ್ರಾಂ!ಹ್ರೀಂ! ಹ್ರೂಂ!

ಹೀಗೆ ಒಂದು ಖತರ್ನಾಕ್ ಮಾಟದ ವಿವರಣೆಯನ್ನು ಸಂಕ್ಷಿಪ್ತವಾಗಿ ಕೊಟ್ಟಿದ್ದ. ಅವನಿಗೂ ಪೂರ್ತಿ ವಿವರಣೆ ಗೊತ್ತಿರಲಿಲ್ಲ. ಇದರ ಬಗ್ಗೆ ಮಾಹಿತಿ ಎಲ್ಲಿ ಸಿಕ್ಕಿತು ಅಂತ ಕೇಳಿದೆ. ಯಾವದೋ ಒಂದು ಪುಸ್ತಕದಲ್ಲಿ ಸಿಕ್ಕಿತು ಅಂದ. ಪುಸ್ತಕ ಎಲ್ಲಿ ಸಿಕ್ಕಿತು ಅಂತ ಕೇಳಿದೆ. ಜಾಗ ಹೇಳಿದ. ಮುಂದಿನ ವಿವರ ಕೇಳುವ ಜರೂರತ್ತೇ ಇರಲಿಲ್ಲ. ಆ ಪುಸ್ತಕ ಸಿಗುವ ಜಾಗ ನನಗೂ ಗೊತ್ತಿತ್ತು. ಎಷ್ಟೋ ಸಲ ಆ ಪುಸ್ತಕವನ್ನು ನಾನೂ ಸಹ ನೋಡಿದ್ದೆ. ಆದರೆ ಕೊಳ್ಳುವ ಮನಸ್ಸು ಮಾಡಿರಲಿಲ್ಲ.

ನಮ್ಮ ಕಾಲದಲ್ಲಿ ರಸ್ತೆ ಮೇಲೆ ಪುಸ್ತಕ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಪುಸ್ತಕದ ಅಂಗಡಿಗಳಲ್ಲಿ ಸಿಗದ ಪುಸ್ತಕಗಳು ರಸ್ತೆ ಮೇಲೆ ಸಿಗುತ್ತಿದ್ದವು. ಕೆಲವು ಪುಸ್ತಕಗಳು footpath ಗಳ ಮೇಲೆ ರಾಜಾರೋಷವಾಗಿ ಕಂಡರೆ ಕೆಲವು ನಿಷಿದ್ದ ಪುಸ್ತಕಗಳು ಅದೇ footpath ಮೇಲೆ ಹಾಸಿದ್ದ ಜಮಖಾನದ ಕೆಳಗೆ ಇರುತ್ತಿದ್ದವು. ಕೆಲವು ಖಾಸ್ ಗಿರಾಕಿಗಳಿಗೆ ಮಾತ್ರ ಅವು ಸಿಗುತ್ತಿದ್ದವು. ಈ ಮಾಟದ ಪುಸ್ತಕ ನಿಷೇಧಿತ ಪುಸ್ತಕ ಆಗಿರಲಿಲ್ಲ.

ಇನ್ನೂ ನೆನಪಿದೆ. ಅವರ್ಯಾರೋ ಗದಗಿನ ಮಹಾಂತೇಶ ಶಾಸ್ತ್ರಿ ಅಂತ ಇದ್ದರು ಅಂತ ನೆನಪು. ಅವರು ಸುಮಾರು ಇಂತಹ ಪುಸ್ತಕ ಬರೆದಿದ್ದರು. ವಶೀಕರಣ, ಜಾದೂ ತೋನಾ, ಬಂಗಾಲಿ ಕಾಲಾ ಜಾದೂ, ಸಮ್ಮೋಹಿನಿ ವಿದ್ಯೆ ಇತ್ಯಾದಿ, ಇತ್ಯಾದಿ. ಎಲ್ಲದರ ಮೇಲೂ ಪಂಡಿತ ಮಹಾಂತೇಶ ಶಾಸ್ತ್ರಿ, ಗದಗ ಅಂತ ಇರುತ್ತಿತ್ತು. ಜೊತೆಗೆ ಅವರಿಗೆ ಮತ್ತು ಅವರ ಪಾಂಡಿತ್ಯಕ್ಕೆ ಸಂದಿರುವ ಸಮ್ಮಾನಗಳು, ಬಿರುದುಗಳು, ಬಾವಲಿಗಳು, ಕಣ್ಕಪ್ಪಡಿಗಳು. ಅವರ ಫೋಟೋ ಸಹ ಇರುತ್ತಿತ್ತು. ಕೇವಲ ಮುಖ ದರ್ಶನ ಮಾತ್ರ. ಒಳ್ಳೆ ಖಡಕ್ ಕೇಸರಿ ರುಮಾಲು ಸುತ್ತಿದ ಮಹಾಂತೇಶ ಶಾಸ್ತ್ರಿಗಳು ಭರ್ಜರಿ ಕಾಣುತ್ತಿದ್ದರು. ಆಧುನಿಕ ಮಾಂತ್ರಿಕರು ಅವರ ಲುಕ್ ನಕಲು ಮಾಡಬಹುದು. ಅಷ್ಟು ಬೆಸ್ಟ್.

ಮಾಟ, ಮಂತ್ರ, ತಂತ್ರ, ವಾಮಾಚಾರ ಇತ್ಯಾದಿ ವಿಚಿತ್ರಗಳ ಮೇಲೆ ಮೊದಲಿಂದಲೂ ಸಿಕ್ಕಾಪಟ್ಟೆ ಆಸಕ್ತಿ. ಮತ್ತೆ ನಮ್ಮ ಮನೆತನದಲ್ಲೇ ಅಂತಹ ವಿದ್ಯೆಗಳನ್ನು ಶಾಸ್ತ್ರೋಕ್ತವಾಗಿ ಕಲಿತು ಆಚರಿಸಿಕೊಂಡಿದ್ದ ಜನರಿದ್ದರು. ಅದೂ ಒಂದು ಕಾರಣ. ಅಜ್ಜ (ತಂದೆಯವರ ತಂದೆ) ತಕ್ಕಮಟ್ಟಿಗೆ ಮಾಟ, ಮಂತ್ರ ಕಲಿತಿದ್ದರು. ಮಾಡುತ್ತಿರಲಿಲ್ಲ. ಆದರೆ ಮಾಟ ತೆಗೆಯುತ್ತಿದ್ದರು. ಭೂತ ಚೇಷ್ಟೆ, ಪ್ರೇತ ಬಾಧೆಗಳಿಂದ ಅನೇಕ ಜನರನ್ನು ಮುಕ್ತಿಗೊಳಿಸಿದ್ದರು. ವಾಮಾಚಾರದಿಂದ ಕಷ್ಟ ಅನುಭವಿಸುತ್ತಿದ್ದವರಿಗೆ ಪರಿಹಾರ ರೂಪದಲ್ಲಿ ದಿಗ್ಬಂಧನ ಹಾಕಿ, ಪ್ರಸಾದ ಕೊಟ್ಟು ಕಳಿಸುತ್ತಿದ್ದರು. ಹಾಗಂತ ಕೇಳಿದ್ದು. ನಾವು ಹುಟ್ಟುವ ತನಕ ಅವರಿಗೆ ಆಗಲೇ ಎಪ್ಪತ್ತರ ಮೇಲಾಗಿ ಸಾಕಷ್ಟು ಹಣ್ಣಾಗಿಬಿಟ್ಟಿದ್ದರು.

ಇನ್ನು ತಂದೆಯವರ ಚಿಕ್ಕಪ್ಪ (ಅಜ್ಜನ ತಮ್ಮ) ಓದಿ, ಡಬಲ್ ಗ್ರ್ಯಾಜುಯೆಟ್ ಆದರೂ ಸ್ವಂತ ಆಸಕ್ತಿಯಿಂದ ಸಮ್ಮೋಹಿನಿ ವಿದ್ಯೆ (Hypnotism) ಕಲಿತಿದ್ದರು. ಮೊದಲು ಹವ್ಯಾಸ ಅಂತಲೇ ಕಲಿತರು. ನಂತರ ಅನೇಕ ಜನರಿಗೆ ಅದರಿಂದ ಒಳ್ಳೆಯದನ್ನೂ ಮಾಡಿದರು. Obsessive compulsive disorder - OCD - ಅನ್ನುವದು ಒಂದು ತರಹದ ಮಾನಸಿಕ ಕಾಯಿಲೆ. ಉದಾಹರಣೆಗೆ  ಕೆಲವು ಜನ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾರೆ. ಕೆಲವರಿಗೆ ಎಷ್ಟು ಸಲ ಕೈ ತೊಳೆದುಕೊಂಡರೂ ಸಮಾಧಾನವಿರುವದಿಲ್ಲ. ಕೆಲವರಿಗೆ ಒಮ್ಮೆ ಬೀಗ ಹಾಕಿದ ಮೇಲೆ ಎಷ್ಟು ಸಲ ಜಗ್ಗಿ ನೋಡಿದರೂ ಸಮಾಧಾನವಿರುವದಿಲ್ಲ. ಹೀಗೆ ಬೇರೆ ಬೇರೆ ರೀತಿ. ಇಂತಹ ಮಾನಸಿಕ ವಿಕೋಪಗಳಿಗೆ ಸಮ್ಮೋಹಿನಿ ಹೇಳಿ ಮಾಡಿಸಿದ್ದು. ನಮ್ಮ ಚಿಕ್ಕಜ್ಜ ತಮ್ಮ ಸಮ್ಮೋಹಿನಿ ವಿದ್ಯೆ ಉಪಯೋಗಿಸಿ ಅನೇಕರ OCD ದೂರ ಮಾಡಿದ್ದರು. ಇದನ್ನೂ ಕೇಳಿದ್ದೇ. ನೋಡಿರಲಿಲ್ಲ. ಅವರಿಗೂ ಸುಮಾರು ವಯಸ್ಸಾಗಿ ಹೋಗಿತ್ತು.

ಅಜ್ಜನ ಮತ್ತೊಬ್ಬ ತಮ್ಮ ಅಚಾನಕ್ ಆಗಿ ರಕ್ತ ಕಾರಿಕೊಂಡು ಸತ್ತುಹೋಗಿದ್ದನಂತೆ. ಯಾರೋ ಮಾಟ ಮಾಡಿದ್ದರೋ ಅಥವಾ ಅವನೇ ಏನೋ ಮಾಡಲು ಹೋಗಿ, ಲಫಡಾ ಮಾಡಿಕೊಂಡು, ಮಾಟ ಉಲ್ಟಾ ಹೊಡೆದು ಶಿವಾಯ ನಮಃ ಆಗಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಮನೆ ಜನ ಹಾಗೆ ಮಾತಾಡಿದ್ದನ್ನು ಕೇಳಿದ್ದೆ.

ನಮ್ಮ ತಂದೆಯವರೂ ತಕ್ಕಮಟ್ಟಿಗೆ ಮಾಟ, ಮಂತ್ರ, ತಂತ್ರ ಓದಿಕೊಂಡಿದ್ದರು. ಅಷ್ಟೇ ಆಚರಣೆ ಮಾಡಲು ಅವರಿಗೆ ಅನುಮತಿ ಅವರ ತಂದೆಯವರು ಕೊಡಲಿಲ್ಲ. 'ನಿನ್ನ ದೇಹ ಪ್ರಕೃತಿ ಬಹಳ ನಾಜೂಕಾಗಿದೆ. ಹಾಗಾಗಿ ನೀನು ಈ ಮಂತ್ರ, ತಂತ್ರ ಬಿಟ್ಟು ವೇದ, ಉಪನಿಷತ್ತು, ವೇದಾಂಗವಾದ ಜ್ಯೋತಿಷ್ಯ ಇತ್ಯಾದಿ ಸಾಧು ವಿಷಯಗಳ ಅಧ್ಯಯನದ ಬಗ್ಗೆ ಗಮನ ಕೊಡು,' ಅಂತ ನಮ್ಮ ಅಜ್ಜ ತಂದೆಯವರಿಗೆ ಆಜ್ಞೆ ಮಾಡಿದ್ದರ ಪ್ರಕಾರ ನಮ್ಮ ತಂದೆಯವರು ಅದನ್ನು ಪ್ರಾಕ್ಟೀಸ್ ಮಾಡಲಿಲ್ಲ. ಆದರೆ ಅವರೊಂದಿಗೆ ಮಾತಾಡುವಾಗ ಎಷ್ಟೆಷ್ಟೋ ಹೊಸ ಹೊಸ ವಿಷಯಗಳು ತಿಳಿದು ಈ esoteric ಅನ್ನಿಸುವ ಮಾಟ ಮಂತ್ರದ ಫೀಲ್ಡ್ ಬಗ್ಗೆ ಆಸಕ್ತಿ, ಕುತೂಹಲ ಹೆಚ್ಚುತ್ತಲೇ ಹೋಗುತ್ತಿತ್ತು. ಮೈಮೇಲೆ ದೆವ್ವ ಬಂದ ಯುವತಿಯೊಬ್ಬಳಿಗೆ ತಂದೆಯವರು ದಿಗ್ಬಂಧನ ಹಾಕಿ ಶಾಂತಗೊಳಿಸಿದ್ದನ್ನು ನಾನೇ ಖುದ್ ನೋಡಿದ್ದೇನೆ. ಅದೊಂದು ಮರೆಯಲಾಗದ ಅನುಭವ. ಹಿಂದೊಮ್ಮೆ ಅದರ ಬಗ್ಗೆ ಬರೆದಿದ್ದೆ ಕೂಡ. ಇಲ್ಲಿದೆ ನೋಡಿ - ಭೂತ, ಪಿಶಾಚಿ, ಪ್ರೇತಾತ್ಮ, ಕ್ಷುದ್ರಶಕ್ತಿಗಳು.

ಮನೆತನದಲ್ಲೇ ಹೀಗೆಲ್ಲ background, buildup ಇದ್ದಾಗ ಮಾಟದ ಬಗ್ಗೆ, ಅದರ ವಿವರಗಳಿರುವ ಪುಸ್ತಕವೊಂದರ ಬಗ್ಗೆ ಈ ದೋಸ್ತ ಹೇಳಿಬಿಟ್ಟಿದ್ದ. ಅದರಲ್ಲೂ ಸೀರೆ ಎತ್ತಿಸುವಂತಹ ಮಾಟದ ಬಗ್ಗೆ ಹೇಳಿಬಿಟ್ಟಿದ್ದ. ಅದೇನೂ ಅಷ್ಟು ಖಾಸ್ ಅನ್ನಿಸಿರಲಿಲ್ಲ. ಯಾರದ್ದೇ ಸೀರೆ ಎತ್ತಿಸುವಂತಹ ಕೆಟ್ಟ ಬುದ್ಧಿ, ಕೆಟ್ಟ ಸಂಸ್ಕಾರ ಇರಲಿಲ್ಲ. ಆಸಕ್ತಿಯೂ ಇರಲಿಲ್ಲ. ಯಾಕೆಂದರೆ ಆವಾಗ ನಾವು ಇನ್ನೂ ಚಿಣ್ಣ ಹುಡುಗರು. ಅದರೂ ಕೆಟ್ಟ ಕುತೂಹಲ ಅಷ್ಟೇ.

ಇಷ್ಟೆಲ್ಲ ತಿಳಿದ ಮೇಲೆ ಪುಸ್ತಕ ತರಲು ತಡವೇಕೆ? ಅದು ನಮಗೆ ಗೊತ್ತಿದ್ದ ಜಾಗವೇ. ಧಾರವಾಡ ಪೇಟೆಯಲ್ಲಿ ಅನೇಕ ಕಡೆ footpath ಮೇಲೆ ಪುಸ್ತಕಗಳನ್ನು ಹರವಿಕೊಂಡು ಮಾರಾಟ ಮಾಡುತ್ತಿದ್ದರು. ನಾನು ಸದಾ ಹೋಗುತ್ತಿದ್ದುದು ಆಝಾದ್ ಪಾರ್ಕ್ ಎದುರುಗಡೆ, ಸಂಜೆ ಹೊತ್ತಿನಲ್ಲಿ ಮಾತ್ರ ಇರುತ್ತಿದ್ದ ವ್ಯಾಪಾರಿಯ ಬಳಿ. ಅಲ್ಲಿಯೇ ಯಾಕೆ ಹೋಗುತ್ತಿದ್ದೆ ಅಂದರೆ ಅದಕ್ಕೊಂದು ಹಿನ್ನೆಲೆಯೂ ಇತ್ತು. ಅದೇ ಅಝಾದ್ ಪಾರ್ಕ್ ರಸ್ತೆಯಲ್ಲಿಯೇ, ಕೊಂಚ ಕೆಳಗೆ ನಮ್ಮ ಶೆಟ್ಟರ ಕೆನರಾ ಬಟ್ಟೆ ಅಂಗಡಿ ಇತ್ತು. ಈಗಲೂ ಇದೆ. ಶೆಟ್ಟರ ಕೆನರಾ ಬಟ್ಟೆ ಅಂಗಡಿ ನಮ್ಮ ಖಾಯಂ ಬಟ್ಟೆ ಅಂಗಡಿ. ನಮ್ಮ ತಂದೆ, ತಾಯಿ ೧೯೫೦ ರ ದಶಕದಲ್ಲಿ ಧಾರವಾಡಕ್ಕೆ ಬಂದಾಗಿನಿಂದ ಅಲ್ಲಿನ ಖಾಯಂ ಗಿರಾಕಿಗಳು. ಪಾಲಕರ ಜೊತೆ ಬಟ್ಟೆ ಅಂಗಡಿಗೆ ಹೋದಾಗ, ಪಾಲಕರು ಅಲ್ಲಿ ತಾಸುಗಟ್ಟಲೇ ಕೂತು, ಬಟ್ಟೆ ಖರೀದಿ ಮಾಡಿ, ಅದಕ್ಕಿಂತ ಹೆಚ್ಚಾಗಿ ಶೆಟ್ಟರ ಜೊತೆ ಮಾತಾಡುತ್ತ ಕೂಡುತ್ತಿದ್ದರು. ಅಣ್ಣ ಅಲ್ಲೇ ಮೇಲಿದ್ದ ಹಳೆ ಪುಸ್ತಕದ ಅಂಗಡಿಗೆ ಕಡೆ ಹೋಗುತ್ತಿದ್ದ. ಅವನ ಹಿಂದೆ ನಾನು. ಅದೇ ರೂಢಿಯಾಗಿತ್ತು. ಹಾಗಾಗಿ ನಂತರವೂ ಅಲ್ಲೇ ಹೋಗುತ್ತಿದ್ದೆ. ನಾನು ಮೊದಲೇ ದೊಡ್ಡ ಪುಸ್ತಕ ಪ್ರೇಮಿ. ಓದಲಿ ಬಿಡಲಿ ಆದರೆ ಕಂಡ ಪುಸ್ತಕಗಳನ್ನೆಲ್ಲ ಕೊಳ್ಳಬೇಕು. ಸಾಧ್ಯವಾಗದಿದ್ದರೆ at least ತೆಗೆದುನೋಡಿ, ಹೊಸ ಪುಸ್ತಕದ ಗಂಧವನ್ನು ಆಘ್ರಾಣಿಸಿ, ಅಷ್ಟಿಷ್ಟು ಓದಿ, ಮನಸ್ಸಿಲ್ಲದ ಮನಸ್ಸಿನಿಂದ ವಾಪಸ್ ಇಟ್ಟು ಬರಬೇಕು. ಅದು ಪದ್ಧತಿ.

ಆಗ already ಏಳನೇ ಕ್ಲಾಸ್. ಎಲ್ಲ ಕಡೆ ಒಬ್ಬನೇ ತಿರುಗಲಿಕ್ಕೆ ಅನುಮತಿಯೂ ಇತ್ತು ಮತ್ತು ತಿರುಗಲು ಹುಮ್ಮಸ್ಸೂ ಇತ್ತು. ವಾರಕ್ಕೆ ಒಮ್ಮೆಯಾದರೂ ಧಾರವಾಡ ಪೇಟೆ ಸುತ್ತಿ ಬರಲಿಕ್ಕೇಬೇಕು. ಖರೀದಿ ಮಾಡುವದೂ ಏನೂ ಇರುತ್ತಿರಲಿಲ್ಲ. ಮತ್ತೆ ಖರೀದಿ ಮಾಡಿಸಲು ಅಮ್ಮ, ಅಪ್ಪ ಯಾರಾದರೂ ಜೊತೆಗೆ ಬೇಕಾಗುತ್ತಿತ್ತು. ಯಾಕೆಂದರೆ ಬರೋಬ್ಬರಿ ಚೌಕಾಶಿ ಮಾಡಬೇಕಲ್ಲ. ನಮ್ಮದೇನಿದ್ದರೂ ಸುಮ್ಮನೆ ಪೇಟೆ ತಿರುಗಿ, ಅಲ್ಲಿಲ್ಲಿ ಪುಸ್ತಕ ನೋಡಿ, window shopping ಮಾಡಿ, ಏನೇನು ಕೊಳ್ಳಲು ಇಂಡೆಂಟ್ ಹಾಕಬೇಕು, ಮನೆಗೆ ಹೋಗಿ ಹಟ ಮಾಡಲು ಶುರುಮಾಡಬೇಕು ಅಂತ ಸ್ಕೆಚ್ ಹಾಕಲು ಪೇಟೆಗೆ ಹೋಗುತ್ತಿದ್ದುದು. ರೊಕ್ಕವೂ ಜಾಸ್ತಿ ಇರುತ್ತಿರಲಿಲ್ಲ. ಬಸ್ ಚಾರ್ಜ್ ಜೊತೆಗೆ ಎಲ್ಲೋ ಒಂದಿಷ್ಟು ಸಣ್ಣ ನಾಷ್ಟಾ ಮಾಡಿ ಒಂದು ಗ್ಲಾಸ್ ಕಬ್ಬಿನಹಾಲು ಕುಡಿಯಲು ಜುಗಾಡ್ ಆಗುವಷ್ಟು ರೊಕ್ಕ. ಪುಸ್ತಕ ಖರೀದಿಗೆ ಅಂತ ಮೊದಲೇ ಹೇಳಿಬಿಟ್ಟರೆ ಜಾಸ್ತಿ ರೊಕ್ಕ. ಅದೊಂದು ವಿಷಯದಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಫುಲ್ ಕರ್ಣನ ವಂಶದವರೇ. ಬಾಕಿ ಯಾವದಕ್ಕೆ ರೊಕ್ಕ ಖರ್ಚು ಮಾಡದಿದ್ದರೂ ಪುಸ್ತಕಗಳು, ಅದೂ ಮಕ್ಕಳಿಗೆ ಅಂದರೆ ಜೈ. ಯಾವ ಪುಸ್ತಕ ಅಂತಲೂ ಕೇಳುತ್ತಿರಲಿಲ್ಲ. ಅಷ್ಟು ನಂಬಿಕೆ ಮತ್ತು ಓದುತ್ತಾರೆ, ಓದಲಿ, ಮತ್ತೂ ಹೆಚ್ಚು ಓದಲಿ ಅಂತ ಆಶಯ ಮತ್ತು ಸಂತೋಷ. ನಾವೂ ಅಷ್ಟೇ. ಎಂದೂ ಅಸಭ್ಯ ಪೋಲಿ ಪುಸ್ತಕಗಳನ್ನು ಮನೆ ಮಂದಿಯ ರೊಕ್ಕದಲ್ಲಿ ಕೊಳ್ಳಲಿಲ್ಲ. ವಿಚಿತ್ರ ಅನ್ನಿಸುವಂತಹ ಪುಸ್ತಕಗಳನ್ನು, ಓದದೇ ಮೂಲೆಗೆಸೆದು ದುಂದುವೆಚ್ಚ ಮಾಡಿದ ಪುಸ್ತಕಗಳನ್ನು ಕೊಂಡಿರಬಹುದು. ಆದರೆ ಅಸಭ್ಯ, ನಿಷಿದ್ಧ ಪುಸ್ತಕಗಳು? no chance.

ಒಂದಿಷ್ಟು ರೊಕ್ಕ ಹೊಂದಿಸಿಕೊಂಡು ಒಂದು ಸಂಜೆ ಧಾರವಾಡ ಪೇಟೆಗೆ ಹೋದೆ. ಸಂಜೆಯೇ ಹೋಗಬೇಕು ಯಾಕೆಂದರೆ ಅಝಾದ್ ಪಾರ್ಕ್ ಮುಂದೆ ಪುಸ್ತಕ ಹರಡಿಕೊಂಡು ಕೂಡುವ ವ್ಯಾಪಾರಿ ಸಂಜೆ ಮಾತ್ರ ಬರುತ್ತಾನೆ. ಹೆಚ್ಚಾಗಿ ೧೯೮೪ ರ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿರಬೇಕು.

ಅಲ್ಲೇ ಅಝಾದ ಪಾರ್ಕ್ ಗೇಟಿನ ಪಕ್ಕದಲ್ಲಿ ತನ್ನ ಎಂದಿನ ಜಾಗದಲ್ಲಿ ಕೂತಿದ್ದ ಪುಸ್ತಕ ವ್ಯಾಪಾರಿ. ಅದೆಷ್ಟು ಬಾರಿ ಅಲ್ಲಿ ಹೋಗಿ, ಅವನ ಮುಂದೆ ಹರಡಿದ್ದ ಪುಸ್ತಕಗಳನ್ನು ಎತ್ತೆತ್ತಿ ನೋಡಿ, ಕೊಳ್ಳದೇ, ವಾಪಸ್ ಇಟ್ಟು ಬಂದಿದ್ದೆನೋ. ಅವನಿಗೇನೂ ನೆನಪಿರಲಿಕ್ಕಿಲ್ಲ. ನಮ್ಮಂತವರು ಅದೆಷ್ಟು ಸಾವಿರ ಜನ ಬಂದು, ಅದನ್ನೇ ಮಾಡಿ, ಬೋಣಿ ಕೂಡ ಮಾಡದೇ ಎದ್ದು ಹೋಗುತ್ತಾರೋ. ಆದರೆ ನಾನು, ಅಣ್ಣ ಕೂಡಿ ಕಮ್ಮಿಯೆಂದರೂ ಒಂದು ನಾಲ್ಕು ಬಾರಿ ಅಲ್ಲಿ ಹತ್ತಾರು ಪುಸ್ತಕಗಳ ವ್ಯಾಪಾರ ಮಾಡಿದ್ದು ನೆನಪಿತ್ತು ಬಿಡಿ.

ಅವನ ಪುಸ್ತಕದ ಕಂತೆ ಮುಂದೆ ತುದಿಗಾಲಲ್ಲಿ ಕೂತು ಕಣ್ಣಾಡಿಸತೊಡಗಿದೆ. ಅವನು ಒಂದು ಕಣ್ಣಿಟ್ಟ. ಇಡಲೇಬೇಕು. ಇಲ್ಲವಾದರೆ ಪುಸ್ತಕ ಕಳ್ಳರ ಸಂಖೆ ಬಹಳ. ಮೊದಲೇ ರಸ್ತೆ ಬದಿಯ ಬಡ ಪುಸ್ತಕ ವ್ಯಾಪಾರಿ. ಕಳ್ಳತನ ತಡೆಗಟ್ಟಲಿಲ್ಲ ಅಂದರೆ ಅಷ್ಟೇ ಮತ್ತೆ. ಶಿವಾಯ ನಮಃ! ಮತ್ತೆ ಕಳ್ಳರು ಸಣ್ಣ  ಮಕ್ಕಳನ್ನು ಬಿಟ್ಟು ಕಳ್ಳತನ ಮಾಡಿಸುವದೂ ವಾಡಿಕೆ ನೋಡಿ. ಹಾಗಾಗಿ ನನ್ನ ಮೇಲೆ ಒಂದು ಕಣ್ಣು ಜಾಸ್ತಿಯೇ ಮಡಗಿರಬೇಕು. ಹಾಗಂತ ನಮ್ಮ ವಿಚಿತ್ರ ಆಲೋಚನೆ.

ಪುಸ್ತಕದ ರಾಶಿಯಲ್ಲಿ ಜಾಸ್ತಿ ಹುಡುಕಾಡುವ, ಕಿತ್ತಾಡುವ ಜರೂರತ್ತೇ ಬರಲಿಲ್ಲ. ಸಿಕ್ಕಿತಲ್ಲ. ಎದುರಿಗೇ ಇತ್ತು ನನಗೆ ಬೇಕಾಗಿದ್ದ ಮಾಟದ ಪುಸ್ತಕ. ಪುಸ್ತಕದ ಟೈಟಲ್ ಏನಿತ್ತು? ಅದೇ ನೆನಪಿಲ್ಲ ನೋಡಿ. ವಶೀಕರಣ ಅಂತಿತ್ತೇ? ನೆನಪಿಲ್ಲ. ಬಂಗಾಲಿ ಕಾಲಾ ಜಾದೂ ಅಂತ ಮಾತ್ರ ಇರಲಿಲ್ಲ. ಯಾಕೆಂದರೆ ಆ ಪುಸ್ತಕ ಬರೋಬ್ಬರಿ ನೆನಪಿದೆ. ಆ ಪುಸ್ತಕ ಹಳದಿ ಬಣ್ಣದ ಚಕಮಕ ಕಾಗದದ ಕವರಿನಲ್ಲಿ ಇರುತ್ತಿತ್ತು. ಅದನ್ನು ಓದುವಂತೆ ಇರಲಿಲ್ಲ. ಬೇಕಾದರೆ ಮನೆಗೆ ತೆಗೆದುಕೊಂಡು ಹೋಗಿ ಓದಬೇಕು. ಅಷ್ಟು ರಹಸ್ಯ. ನಮಗೆ ಬೇಕಾಗಿದ್ದ ಮಾಟದ ಪುಸ್ತಕ ಸೀದಾ ಸಾದಾ ಇತ್ತು.

ಪುಸ್ತಕ ಸಿಕ್ಕಿತು. ಅದೇ ಹೌದು ಅಂತ ಖಾತ್ರಿ ಮಾಡಿಕೊಂಡೆ. ನಮ್ಮ ದೋಸ್ತ ಹೇಳಿದ 'ಸೀರೆ ಎತ್ತಿಸಿಬಿಡುವ' ಮಾಟದ ನೆನಪಿತ್ತು. ಆದರೆ ಅದು ಯಾವ ಪುಟದಲ್ಲಿದೆ ಅಂತ ಗೊತ್ತಿರಲಿಲ್ಲ. random ಆಗಿ ಪುಟ ತಿರುವಿದೆ. ಆದರೆ ಆ particular ಮಾಟ ಕಂಡುಬರಲಿಲ್ಲ. ಟೈಟಲ್ ಸರಿಯಿದೆ. ಬರೆದ ಲೇಖಕರ ಹೆಸರು ಸರಿಯಿದೆ. ಹಾಗಾಗಿ ಇದೇ ಪುಸ್ತಕ ಇರಬೇಕು. ರೊಕ್ಕ ಕೊಟ್ಟು ತೆಗೆದುಕೊಳ್ಳಲಿಕ್ಕೆ ಓಕೆ. ಮನೆಗೆ ಹೋಗಿ ಸಾದ್ಯಂತ ಓದಿದರೆ ತಿಳಿಯುತ್ತದೆ ಅಂತ ವಿಚಾರ ಮಾಡಿದೆ. ಪುಸ್ತಕ ಖರೀದಿ ಮಾಡಲು ಮುಂದಾದೆ.

ಧಾರವಾಡದಲ್ಲಿ ನೀವು ಏನೇ ಖರೀದಿ ಮಾಡಿದರೂ ಚೌಕಾಶಿ ಮಾಡಲೇಬೇಕು. ಇಲ್ಲವಾದರೆ ಫುಲ್ ಬೋಳಿಸಿಕೊಂಡು ಬರಬೇಕಾಗುತ್ತದೆ. ವ್ಯಾಪಾರಿಗಳಿಗೂ ಅದು ಗೊತ್ತಿರುತ್ತದೆ. ಹಾಗಾಗಿ ಅವರೂ ಯದ್ವಾತದ್ವಾ ಬೆಲೆ ಹೇಳುತ್ತಾರೆ. ಅಂತಹ ವ್ಯಾಪಾರಿಗಳು. ಇಂತಹ ಗಿರಾಕಿಗಳು. ಎಂತಹ ಡೆಡ್ಲಿ ಕಾಂಬಿನೇಶನ್ ತಂದೆ ಭೋಲೆ ಶಂಕರ!

ಬೆಲೆ ಕೇಳಿದರೆ 'ಮೂರು ರುಪಾಯಿ!' ಅಂದ ರಸ್ತೆ ಬದಿ ವ್ಯಾಪಾರಿ ಒಂದು ತರಹ ಅಸಡ್ಡೆಯಿಂದ ನೋಡಿದ. ಅಪರೂಪಕ್ಕೆ ಪೇಟೆಗೆ ಬರಲಿಕ್ಕೆಂದೇ ಪ್ಯಾಂಟ್ ಹಾಕಿದಂತಿರುವ ಚೋಟು ಹುಡುಗ ಉರ್ಫ್ ನಾನು ಪುಸ್ತಕದ ಬೆಲೆ ಕೇಳಿದರೆ ಸಿಕ್ಕ ಪ್ರತ್ಯುತ್ತರ ಅದು. ನಾನು ಎಲ್ಲೋ ಟೈಮ್ ವೇಸ್ಟ್ ಪಾರ್ಟಿ ಅಂತ ತಿಳಿದಿರಬೇಕು. ಅಂತವರನ್ನೇ ನೋಡಿ ನೋಡಿ ಅವನು ಹಾಗೆಂದುಕೊಂಡರೆ ತಪ್ಪು ಅವನದಲ್ಲ ಬಿಡಿ.

ತಡಿ ಇವನಿಗೆ ಮಾಡೋಣ ಅಂತ ಕಿಸೆಯೊಳಗೆ ಆಳಕ್ಕೆ ಕೈಬಿಟ್ಟು ಒಂದು ಐದು ರೂಪಾಯಿ ನೋಟು ತೆಗೆದೆ. ಇದ್ದಿದ್ದೇ ಅಷ್ಟು. ಅದರಲ್ಲಿ ಪುಸ್ತಕ, ನಂತರ ಒಂದು ಪಫ್ (ಬೇಕರಿ ಐಟಂ) ಪ್ಲಸ್ ರಿಟರ್ನ್ ಬಸ್ ಚಾರ್ಜ್ ಹೊಂದಬೇಕು. ಪಫ್ ಮತ್ತು ಬಸ್ ಚಾರ್ಜಿಗೆ ಎರಡು ರೂಪಾಯಿ ಸಾಕು. ಹಾಗಂತ ಆ ರಸ್ತೆ ವ್ಯಾಪಾರಿ ಕೇಳಿದ ಅಂತ ಉಳಿದ ಮೂರು ರೂಪಾಯಿ ಕೊಟ್ಟು ಮೂರು ನಾಮ ಹಾಕಿಸಿಕೊಳ್ಳಬೇಕೆ? ನೋ ಚಾನ್ಸ್. ಚೌಕಾಶಿ ಶುರು.

'ಒಂದೂವರಿ ರೂಪಾಯಿಗೆ ಕೊಡ್ರೀ,' ಅಂತ ಫಸ್ಟ್ ಆಫರ್ ಮಾಡಿದೆ. ಶೇಕಡಾ ಐವತ್ತು ಅಥವಾ ಅದಕ್ಕಿಂತ ಕಮ್ಮಿ ಬೆಲೆಗೆ ಕೇಳಬೇಕು. ಅದು ಪದ್ಧತಿ.

'ಏ, ಒಂದೂವರಿ ರೂಪೇಕ್ಕ ಬುಕ್ಕಿನ ಕವರ್ ಸುದಾ ಬರೋದಿಲ್ಲ. ಏನಂತ ಕೇಳ್ತೀರಿ!?' ಅಂತ ಡೈಲಾಗ್ ಬಾಜಿ ಹೊಡೆದ. ಅದೆಲ್ಲ ಸ್ಟ್ಯಾಂಡರ್ಡ್. ಗೊತ್ತಿದ್ದದ್ದೇ. ನನ್ನಂತಹ ಚಿಣ್ಣ ಮಾಣಿಗೆ 'ರೀ' ಅಂದು ಗೌರವ ಕೊಟ್ಟಿದ್ದೇ ಜಾಸ್ತಿ.

'ನಿಮಗೂ ನುಕ್ಸಾನ್ ಆಗೋದು ಬ್ಯಾಡ. ನಮಗೂ ತುಟ್ಟಿಯಾಗೋದು ಬ್ಯಾಡ. ಎರಡು ರುಪಾಯಿಗೆ ಕೊಡ್ರೀ' ಅಂದು ಕೌಂಟರ್ ಆಫರ್ ಮಾಡಿದೆ. ನುಕ್ಸಾನ್, ತುಟ್ಟಿ ಅಂತೆಲ್ಲ heavy duty ಶಬ್ದ ಉಪಯೋಗಿಸಿ ದೊಡ್ಡವರು ಹೇಗೆ ಚೌಕಾಶಿ ಮಾಡುತ್ತಿದ್ದರೋ ಅದೇ ರೀತಿ ಮಾಡಿದೆ.

'ಜಾಬಾದ್ (ಶಾಣ್ಯಾ) ಅದೀ ತಮ್ಮಾ!' ಅನ್ನುವ ಅಚ್ಚರಿಯ ಲುಕ್ ಕೊಟ್ಟ ವ್ಯಾಪಾರಿ ಮುಂದಿನ ಮಾತಾಡಲಿಲ್ಲ. ಮಾತಿಲ್ಲದೆ ಹಳೆಯ ರದ್ದಿ ಪೇಪರಿನಲ್ಲಿ ನನಗೆ ಬೇಕಾಗಿದ್ದ ಪುಸ್ತಕ ಸುತ್ತಿ ಪ್ಯಾಕ್ ಮಾಡತೊಡಗಿದೆ. ಗೊತ್ತಾಯಿತು ಸೌದಾ ಆಗಿದೆ ಅಂತ. ಸೌದಾ ಪಟಾಯಿಸಿ ಸೌದಾಗರ್ ಆದ ಖುಷಿಯಲ್ಲಿ ಮುಖವರಳಿತು. ಐದು ರುಪಾಯಿ ಕೊಟ್ಟೆ. ಚಿಲ್ಲರೆ ಮೂರು ರೂಪಾಯಿ ಮತ್ತು ಪುಸ್ತಕ ಕೈಯಲ್ಲಿಟ್ಟು, ಧಾರವಾಡ ಮಂದಿಯ ಟಿಪಿಕಲ್ ಹಾಪ್ ನಮಸ್ಕಾರ ಹೊಡೆದು, ಹೋಗಿ ಮತ್ತೆ ಬನ್ನಿ ಅನ್ನುವ ರೀತಿಯ ಲುಕ್ ಕೊಟ್ಟ.

ಪುಸ್ತಕ ಕೈಗೆ ಬಂದಿದ್ದೇ ಬಂದಿದ್ದು ಫುಲ್ ಥ್ರಿಲ್. ಅಲ್ಲೇ ಕುಳಿತು ಫುಲ್ ಓದಿಬಿಡಲೇ ಅನ್ನಿಸಿತ್ತು. ಆದರೆ ಆಗಲೇ ಎಂಟು ಘಂಟೆ ಸಮಯ. ಒಂಬತ್ತರೊಳಗೆ ಮನೆ ಮುಟ್ಟಿಕೊಳ್ಳಬೇಕು. ಅಂದರೆ ಎಂಟೂವರೆ ನವೋದಯನಗರ ಸಿಟಿ ಬಸ್ ಮಿಸ್ ಮಾಡಿಕೊಳ್ಳಬಾರದು. ಅಷ್ಟರಲ್ಲಿ ಒಂದು ಪಫ್ ತಿಂದು, ಮರುಧರ ಪ್ಯಾವೂನಲ್ಲಿ ನೀರು ಕುಡಿದು, ಅಷ್ಟಿಷ್ಟು ಪೇಟೆ ಸುತ್ತಾಡಿ, ಸಿಟಿ ಬಸ್ ಸ್ಟಾಂಡ್ ಮುಟ್ಟಿಕೊಳ್ಳಬೇಕು.

ಅವೆಲ್ಲವನ್ನೂ ಮಾಡಿ ಮುಗಿಸಿ ಅಂತೂ ಮನೆ ಮುಟ್ಟಿಕೊಂಡೆ. 'ಏನು ಮಾಡಿ ಬಂದಿ ಪ್ಯಾಟ್ಯಾಗ?' ಅಂತ ಅಮ್ಮನ ಪ್ರಶ್ನೆ. ಎಲ್ಲಿ ಹೋಗಿಬಂದರೂ ಅಡ್ಡಿಯಿಲ್ಲ. ಆದರೆ ಎಲ್ಲ ವರದಿ ಒಪ್ಪಿಸಬೇಕು ಅಷ್ಟೇ. ಅದು ಮನೆ ಪದ್ಧತಿ. ಮಾತಾಡಲಿಲ್ಲ. ಕೈಯಲ್ಲಿದ್ದ ರದ್ದಿ ಪೇಪರಿನಲ್ಲಿ ಸುತ್ತಿದ್ದ ಸಾಮಾನು ತೋರಿಸಿದೆ. ಅದೊಂದು ಪುಸ್ತಕ ಅಂತ ಗೊತ್ತಾಗಲು ಅಮ್ಮನಿಗೆ ಜಾಸ್ತಿ ಹೊತ್ತು ಬೇಕಾಗಲಿಲ್ಲ. ಎಲ್ಲರೂ ಪುಸ್ತಕ ಪ್ರೇಮಿಗಳೇ ಮನೆಯಲ್ಲಿ. 'ಯಾವ ಸೆಕೆಂಡ್ ಹ್ಯಾಂಡ್ ಪುಸ್ತಕ ತಂದುಕೊಂಡಿ?' ಅಂತ ಮುಂದಿನ ಪ್ರಶ್ನೆ. 'ಎಲ್ಲಿ ಸೆಕೆಂಡ್ ಹ್ಯಾಂಡ್? ಹೊಸಾದೇ. ವಶೀಕರಣ, ಜಾದೂ, ಮಂತ್ರ, ತಂತ್ರದ ಬಗೆಗಿನ ಪುಸ್ತಕ,' ಅಂದೆ. 'ನೀನೋ, ನಿನ್ನ ಹುಚ್ಚೋ! ಆ ಪತ್ತೇದಾರಿ ಕಾದಂಬರಿ ಓದೋ ಹುಚ್ಚು ಬಿಡ್ತು ಅನ್ನೋದ್ರಾಗ ಇದು ಮತ್ತೇನೋ ಹೊಸಾ ಹುಚ್ಚು ಶುರು ಆಗ್ಯದಲ್ಲೋ! ಹಾಂ!?' ಅಂತ ಸಣ್ಣಗೆ ಜಬರಿಸಿದ ಅಮ್ಮ, ಬಟ್ಟೆ ಚೇಂಜ್ ಮಾಡಿ, ಕೈಕಾಲ್ಮುಖ ತೊಳೆದು ಊಟಕ್ಕೆ ಬರಲು ಹೇಳಿದಳು. ಆಗೇ ನೆನಪಾಗಿದ್ದು - 'ಹೌದಲ್ಲ! ಪತ್ತೇದಾರಿ ಕಾದಂಬರಿ ಓದದೇ ಜಮಾನಾ ಆಗಿಹೋಗಿದೆ' ಅಂತ. ಅಷ್ಟೂ ಲೈಬ್ರರಿಗಳಲ್ಲಿದ್ದ ಅಷ್ಟೂ ಪತ್ತೇದಾರಿ ಕಾದಂಬರಿಗಳನ್ನು ಸ್ವಾಹಾ ಮಾಡಿಯಾಗಿತ್ತು. ಮತ್ತೆಲ್ಲಿಂದ ತರೋಣ? ಮತ್ತೆ ಕಾದಂಬರಿ ಇತ್ಯಾದಿಗಳನ್ನು ಬಿಟ್ಟಿ ಓದಿಯೇ ರೂಢಿ. ರೊಕ್ಕ ಕೊಟ್ಟು ತರುವದೇನಿದ್ದರೂ ಬೇರೆ ತರಹದ ಪುಸ್ತಕಗಳೇ. ಮಧ್ಯಮ ವರ್ಗದ ಮಂದಿಯಾದ ನಾವು ಎಲ್ಲಿಯಾದರೂ ಒಂದು ಕಡೆ ಗೆರೆ ಎಳೆಯಲೇಬೇಕು ನೋಡಿ. ಪುಸ್ತಕ ಪ್ರೇಮದಂತಹ discretionary ವೆಚ್ಚಗಳಿದ್ದರಂತೂ ಅಷ್ಟೇ ಮತ್ತೆ.

ಅಂದು ಊಟ ಸಿಕ್ಕಾಪಟ್ಟೆ ಗಡಿಬಿಡಿಯಲ್ಲಿ. ಯಾವಾಗ ನನ್ನ ಕೋಣೆ ಸೇರಿ ಪುಸ್ತಕ ತೆಗೆದೇನೋ ಅಂತ ಕಾತುರ. ಆ ಘಳಿಗೆ ಅಂತೂ ಬಂತು. ವಶೀಕರಣದ ಪುಸ್ತಕ ತೆಗೆದು ಕೂತೆ ನೋಡಿ. ಅಷ್ಟೇ. ಬೇರೆಯೇ ಲೋಕಕ್ಕೆ ಹೋಗಿಬಿಟ್ಟೆ.

ಅಬಬಬಬಾ.... ಏನು ಅಂತೀರಿ. ಎಂತೆಂತಹ ಜಾದು ತೋನಾಗಳ ಬಗ್ಗೆ ಬರೆದುಬಿಟ್ಟಿದ್ದಾರೆ ಗದಗಿನ ಮಹಾಂತೇಶ ಶಾಸ್ತ್ರಿಗಳು. ಮೊದಲು ಶುರುವಾಗಿದ್ದೇ, 'ಮಹಿಳೆಯನ್ನು ವಶಪಡಿಸಿಕೊಳ್ಳುವದು ಹೇಗೆ?' ಶಿವನೇ ಶಂಭುಲಿಂಗ! ನಾವಿನ್ನೂ ಅಗ ಏಳನೇ ಕ್ಲಾಸ್. ಆ ತರಹದ ವಿಚಾರ ಇನ್ನೂ ಬಂದಿರಲಿಲ್ಲ. ಹಾಗಾಗಿ ಪುಟ ತಿರುಗಿಸಿದೆ. ಮುಂದಿನದು, 'ಪುರುಷನನ್ನು ಹೇಗೆ ನಿಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುವದು?' ಅದಕ್ಕೂ ಒಂದು ಮಾಟ ಮಂತ್ರದ ಸಲಹೆ. ಬರೀ ಇದೇ ಆಯಿತು. ನಮಗೆ ಬೇಕಾಗಿದ್ದ ಮಾಟ ಮಂತ್ರ ಎಲ್ಲಿದೆಯೋ? ಸರ ಸರ ಅಂತ ಪುಟ ತಿರುಗಿಸುತ್ತ ಹೋದೆ. ಆಗ ಬಂತು ನೋಡಿ.

ಅಂತೂ ಸುಮಾರು ಹೊತ್ತು ಪುಟ ತಿರುವಿ ಹಾಕಿದ ನಂತರ ನಮಗೆ ಬೇಕಾಗಿದ್ದ ಮಾಟದ ವಿವರಣೆ ಬಂತು. ಅದಕ್ಕೊಂದು ಭಯಂಕರ ಫ್ಯಾನ್ಸಿ ಟೈಟಲ್ ಇತ್ತು ಮಾರಾಯರೇ. ಅದೇ ಮರೆತು ಹೋಗಿದೆ. ಪರಿಣಾಮ ಸೀರೆ ಮೇಲೆದ್ದು ಹಾರುವದೇ  ಆದರೂ ಅದಕ್ಕೊಂದು ಬರೋಬ್ಬರಿ ಟೈಟಲ್ ಬೇಕಲ್ಲ? ಸ್ತ್ರೀ ವಸ್ತ್ರಾರೋಹಣ? ಏನೋ ಒಂದು.

ಮಹಾಂತೇಶ ಶಾಸ್ತ್ರಿಗಳು ಭಾಳ ಶಿಸ್ತುಬದ್ಧವಾಗಿ ಬರೆದಿದ್ದರು. ಮೊದಲು ಆ ಮಾಟದ ಕ್ರಮದ ಬಗ್ಗೆ, ಅದರಿಂದಾಗುವ ಪರಿಣಾಮದ ಬಗ್ಗೆ ಒಂದು ಚಿಕ್ಕ ವಿವರಣೆ. ನಂತರ ಅದಕ್ಕೆ ಬೇಕಾಗುವ ಸಾಮಾನು, ಸಲಕರಣೆಗಳ ಪಟ್ಟಿ. ಬೇಕಾದರೆ ಹೆಚ್ಚಿನ ವಿವರಣೆ. ನಂತರ ಮಾಡುವ ಕ್ರಮ. ಅದೂ step by step. ಕೊನೆಯಲ್ಲಿ ವಿಶೇಷ ಸೂಚನೆ. ಮಾಡುತ್ತಿರುವದು ಖತರ್ನಾಕ ಮಾಟ ಮಂತ್ರವಾದ್ದರಿಂದ ಪ್ರತಿಯೊಂದಕ್ಕೂ ವಿಶೇಷ ಸೂಚನೆ ಇದ್ದೇ ಇರುತ್ತಿತ್ತು. ಒಂದು ವಿಶೇಷ ಅಂದರೆ ಅದು ಹೇಗೆ ಪತ್ರಿಯೊಂದನ್ನೂ ಒಂದೇ ಒಂದು ಪೇಜಿಗೆ ಸೀಮಿತಗೊಳಿಸಿದ್ದರು ಅಂತ. ಪ್ರಕಾಶಕರ ನಿರ್ದೇಶನ ಇರಬೇಕು. 'ಶಾಸ್ತ್ರಿಗಳೇ, ಒಂದು ಮಾಟದ ವಿವರಣೆ ಒಂದು ಪೇಜಿನ್ಯಾಗ ಫಿಟ್ ಆಗಬೇಕು ನೋಡ್ರಿ. ಪ್ರತಿ ಪೇಜಿಗೆ ಬ್ಯಾರೆ ಬ್ಯಾರೆ ಬರಬೇಕು. ಹಾಂಗ ಬರೆದುಕೊಡ್ರಿ!' ಅದರ ಪ್ರಕಾರ edit ಮಾಡಿ ಬರೆದಿದ್ದರೋ ಏನೋ.

ವಾಮಾಚಾರ ಪಂಡಿತ ಮಹಾಂತೇಶ ಶಾಸ್ತ್ರಿಗಳು ಬರೋಬ್ಬರಿ ವಿವರಣೆ ಕೊಟ್ಟಿದ್ದರು. ಒಂದು ಸಾರೆ quick scanning ಮಾಡಿದೆ. ವಿವರಣೆ ಎಲ್ಲ ಸುಮಾರು ನಮ್ಮ ದೋಸ್ತ ಹೇಳಿದ ಪ್ರಕಾರವೇ ಇತ್ತು. ಒಂದು ಲೋಹದ ಬಳೆ, ಅದನ್ನು ಕೈಗೆ ಹಾಕಿಕೊಂಡು ಕೈ ಮೇಲೆ ಏರಿಸುತ್ತ ಹೋಗಬೇಕು, ಅದು ಇದು. ಮಾಟ ಮಾಡಲು ಬೇಕಾದ ವಸ್ತುಗಳ ಪಟ್ಟಿ ನೋಡಿದೆ. ಅವಾಗ ಮಾತ್ರ ಶಾಕ್ ಆಯಿತು. ದೊಡ್ಡ ಪ್ರಮಾಣದ ಝಟಕಾ!

ಎಲ್ಲಿಂದ ತರೋಣ ಆ ಮಾಟದ ಪ್ರಕ್ರಿಯೆಗೆ ಬೇಕಾಗಿದ್ದ ವಸ್ತುಗಳನ್ನು? ಎರೆಹುಳವನ್ನು ಬತ್ತಿಯಾಗಿ ಎಣ್ಣೆಯಲ್ಲಿಟ್ಟು..... ಅಂದಾಗಲೇ ಅನ್ನಿಸಿತ್ತು ಏನೋ ವಿಚಿತ್ರ ಅಂತ. ಈಗ ನೋಡಿದರೆ ಅದು ಒಂದೇ ಅಲ್ಲ, ಮತ್ತೆ ಏನೇನೋ ಬೇಕು. ಬಾವಲಿಯ ತೊಗಲು, ಮತ್ಯಾವದೋ ಪ್ರಾಣಿಯ ರಕ್ತ, ಎಕ್ಕೆ ಹೂವು, ಯಾವದೋ ಲೋಹದ ಬಳೆ, ಯಾವದೋ ಪ್ರಾಣಿಯ ನೆಣದ ಕೊಬ್ಬಿನಿಂದ ತೆಗೆದ ಎಣ್ಣೆ, ಇತ್ಯಾದಿ ಇತ್ಯಾದಿ exotic ವಸ್ತುಗಳು ಬೇಕು. ನಂತರ ಅದ್ಯಾವದೋ ತಿಥಿ, ವಾರ, ಮುಹೂರ್ತ ನೋಡಿ, ಸ್ಮಶಾನದಲ್ಲಿ ಯಾವದೋ ದಿಕ್ಕಿನ ಮೂಲೆಯಲ್ಲಿ ಕುಳಿತು ಮಾಡಬೇಕಂತೆ. ಶಿವಾಯ ನಮಃ! ಆಗೋ ಹೋಗೋ ಮಾತೇ? ಏನೋ ಮನೆಯಲ್ಲೇ ಮಾಡಬಹುದು ಅಂತಿದ್ದರೆ, ಅದೂ ಮನೆಯಲ್ಲೇ ಸಿಗಬಹುದಾದ ಸಾಮಗ್ರಿಗಳನ್ನು ಉಪಯೋಗಿಸಿ ಮಾಡಬಹುದಾಗಿದ್ದರೆ ಅದೊಂದು ಮಾತು. ಈ ಚಿತ್ರವಿಚಿತ್ರ ಸಾಮಾನುಗಳೆಲ್ಲ ಎಲ್ಲಿ ಸಿಗುತ್ತವೋ ಏನೋ!? ಅವನ್ನೆಲ್ಲ ಸಂಪಾದಿಸಲಿಕ್ಕೆ ಸಾಧ್ಯವೇ ಇರಲಿಲ್ಲ. ನಂತರ ಸ್ಮಶಾನದಲ್ಲಿ ಕೂತು ಮಾಡಬೇಕು. ಅದೂ ರಾತ್ರಿ. ಈಗ ನಗು ಬರುತ್ತದೆ. ಆಗ ನಗು ಬಂದಿರಲಿಲ್ಲ. ಒಂದು ತರಹದ ಅಸಹಾಯಕತೆ. 'ಛೇ! ಇನ್ನೂ ಕೇವಲ ಹನ್ನೆರೆಡೇ ವರ್ಷ ನನಗೆ. ನಮಗೂ ಒಂದು ಇಪ್ಪತ್ತೈದು ವರ್ಷವಾಗಿ, ಫುಲ್ ಇಂಡಿಪೆಂಡೆಂಟ್ ಆಗಿ, ಯಾರ ಹಂಗೂ ಇರದೇ ಇದ್ದರೆ ಎಷ್ಟು ಬೆಸ್ಟ್ ಆಗುತ್ತಿತ್ತು ಶಿವಾ!? ಸೀದಾ ಸ್ಮಶಾನಕ್ಕೆ ಹೋಗಿ ಪದ್ಮಾಸನ ಹಾಕಿ ಕುಳಿತೇಬಿಡಬಹುದಿತ್ತು. ಈ ಮಾಟವನ್ನು ಮಾಡಿ ಒಂದು ಕೈ ನೋಡಬಹುದಿತ್ತು! ಈಗ ಅದು ಸಾಧ್ಯವಿಲ್ಲವಲ್ಲ!' ಅನ್ನುವ ಹತಾಶೆಯ ಫೀಲಿಂಗ್. ಏನು ಮಾಡಲಿಕ್ಕೆ ಬರುತ್ತದೆ? ಅಲ್ಲಿಗೆ ಆ ಐಡಿಯಾಕ್ಕೆ ಒಂದು ದೊಡ್ಡ ನಮಸ್ಕಾರ ಹೊಡೆದಿದ್ದಾಯಿತು.

ಇಂತಹ ಹುಚ್ಚು ವಿಚಾರಗಳು ತಲೆಯಲ್ಲಿ ಬಂದರೂ ಏನು ಮಾಡಬೇಕು, ಏನು ಮಾಡಬಾರದು ಅಂತ ಪರಾಮರ್ಶಿಸುವ ಸಣ್ಣ ಪ್ರಮಾಣದ ವಿವೇಕ ಇತ್ತು. ಹಾಗಾಗಿ ಈ ಮಾಟಕ್ಕೆ ನಮ್ಮದೇ ಆದ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ವಿಚಾರವಿತ್ತು. ಮೊದಲೇ ಹೇಳಿದಂತೆ ಸ್ತ್ರೀಯರ ಸೀರೆ ಎತ್ತಿಸಿಬಿಡುವ ಮಾಟ ಅಂತ ಕೇಳಿದಾಗಲೇ ಒಂದು ತರಹದ ಅಸಹ್ಯ ಬಂದಿತ್ತು. ಆ ಚಿಣ್ಣ ವಯಸ್ಸಿನಲ್ಲಿ ಅಂತಹದೊಂದನ್ನು ಮಾಡುವ ಸಾಧ್ಯತೆಯನ್ನು ಕೂಡ ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. Impossible! 'ಮಹಿಳೆಯರ ಸೀರೆ ಬೇಡ. ಹಾಗೆಲ್ಲಾ ಮಾಡಬಾರದು. ಅದು ತಪ್ಪು. ಆದರೆ ಯಾರದ್ದಾದರೂ ಲುಂಗಿ ಎತ್ತಿಸಿಬಿಟ್ಟರೆ? ಗಂಡಸರು ತಾನೇ? ಗಂಡಸರ ಲುಂಗಿ ಹೇಗೂ ಸ್ಥಾನಪಲ್ಲಟ ಆಗುತ್ತಲೇ ಇರುತ್ತದೆ. ನಾವು ಮಾಟ, ಮಂತ್ರ ಮಾಡಿದರೆ ಏನು ದೊಡ್ಡ ಮಾತು? ಗಂಡಸರಿಗೆ ಗೊತ್ತೂ ಆಗಲಿಕ್ಕಿಲ್ಲ,' ಅಂತ ಸೀರೆ ಧಾರಿ ಮಹಿಳೆಯರನ್ನು ಬಿಟ್ಟು ಯಾವದಾದರೂ ಲುಂಗಿ ಧಾರಿ ಗಂಡಸರ ಮೇಲೆ ಪ್ರಯೋಗ ಮಾಡೋಣ ಅಂತ ಒಂದು ಸಣ್ಣ ದುರಾಲೋಚನೆ ಬಂದಿತ್ತು. ಯಾರದಾದರೂ 'ಕೆಟ್ಟ' ಗಂಡಸರ ಮೇಲೆ ಪ್ರಯೋಗ ಮಾಡಿನೋಡೋಣ ಅಂತ ನಿರ್ಧಾರ ಮಾಡಿಯಾಗಿತ್ತು. ಸುಲಭವಾಗಿ ಸಿಗದ ಸಾಮಾನುಗಳ ಕಾರಣದಿಂದ ಮಾಡಲಾಗಲೇ ಇಲ್ಲ. 'ಕೆಟ್ಟ' ಗಂಡಸರ ನಸೀಬ್ ಬರೋಬ್ಬರಿ ಇತ್ತು. ಬಚಾವ್ ಆದರು. ಇಲ್ಲವಾದರೆ ಅಷ್ಟೇ ಮತ್ತೆ!

ಏನೇ ಇರಲಿ. ಪುಸ್ತಕ ಬರೆದಿದ್ದ ಪಂಡಿತ ಮಹಾಂತೇಶ ಶಾಸ್ತ್ರಿಗಳು ಮಾತ್ರ ಫುಲ್ impress ಮಾಡಿಬಿಟ್ಟಿದ್ದರು. ಅವರು ಬರೆದ ಇತರೆ ಪುಸ್ತಕಗಳನ್ನೂ ಸಹ ಕೊಂಡು ಓದಬೇಕು ಅಂತ ಅನ್ನಿಸಿಬಿಟ್ಟಿತು. 'ಮಾಟ ಮಂತ್ರವಂತೂ ಸಾಧ್ಯವಾಗಲಿಲ್ಲ. ಸಮ್ಮೋಹಿನಿ (hypnotism) ಕಲಿಯೋಣ,' ಅಂತ ತಲೆಗೆ ಬಂದುಬಿಟ್ಟಿತು. ಅದರ ಬಗ್ಗೆಯೂ ಒಂದು ಪುಸ್ತಕ ಬರೆದಿದ್ದರಲ್ಲ ಮಹಾಂತೇಶ ಶಾಸ್ತ್ರಿಗಳು. ಸರಿ ಮತ್ತೇನು. ಮತ್ತೊಂದು ಎರಡೋ ಮೂರೋ ರೂಪಾಯಿ ತೆತ್ತು ಮೊದಲು ತಂದಂತಹದ್ದೇ ಇನ್ನೊಂದು ಪುಸ್ತಕ ತಂದೆ. ಓದಲು ಕುಳಿತೆ. ಪುಸ್ತಕ ಓದಿ ಸಮ್ಮೋಹಿನಿ ವಿದ್ಯೆಯನ್ನು ಕಲಿತೇಬಿಡಬೇಕು. ನಂತರ ಸಮ್ಮೋಹಿನಿ ಮಾಡುತ್ತ ಮಜಾ ಮಾಡಿದರಾಯಿತು. ಸಮ್ಮೋಹಿನಿಗೆ ಒಳಗಾದವರಿಂದ ಏನು ಬೇಕಾದರೂ ಮಾಡಿಸಬಹುದಂತೆ! ನೋಡಬೇಕು!

'ಒಂದು ಬಿಳೆ ಹಾಳೆಯನ್ನು ತೆಗೆದುಕೊಳ್ಳಿ. ಅದರ ಮಧ್ಯೆ ಕಪ್ಪು ಶಾಯಿಯಿಂದ ಒಂದು ಬಿಂದುವನ್ನಿಡಿ. ಹಾಳೆಯನ್ನು ಗೋಡೆಗೆ ತೂಗುಹಾಕಿ ಅಥವಾ ಅಂಟಿಸಿ. ಹಾಳೆಗೆ ಎದುರಾಗಿ ಹತ್ತಡಿ ದೂರದಲ್ಲಿ ಕುಳಿತುಕೊಳ್ಳಿ. ಪದ್ಮಾಸನದಲ್ಲಿ ಕೂಡಬೇಕು. ಈಗ ಹಾಳೆಯ ಮಧ್ಯದಲ್ಲಿರುವ ಕಪ್ಪು ಬಿಂದುವನ್ನು ದಿಟ್ಟಿಸಿ ನೋಡಿ. ನೋಡುತ್ತಲೇ ಇರಿ. ಕಣ್ಣು ಪಿಳುಕಿಸಬಾರದು. ಹೀಗೆ ಮಾಡುವದರಿಂದ ಕಣ್ಣಿನ ಶಕ್ತಿ ಜಾಸ್ತಿಯಾಗುತ್ತದೆ. ಶಕ್ತಿಶಾಲಿಯಾದ ದೃಷ್ಟಿ ಸಮ್ಮೋಹಿನಿಗೆ ಬಹಳ ಮುಖ್ಯ,' ಅಂತ ಆರಂಭದಲ್ಲಿ ಬರೆದಿದ್ದರು. ಅದನ್ನು ಕೂಡ ಮಾಡಿದೆ. ಕಣ್ಣು ಉರಿದು ನೀರು ಬಂತು. ಹಾಗೆಯೇ ಆಗುತ್ತದೆ ಆದರೆ ಅಭ್ಯಾಸ ಮುಂದುವರೆಸಿ ಅಂತ ಕೂಡ ಹೇಳಿದ್ದರು. ಒಂದು ನಾಲ್ಕು ದಿನ ಮಾಡಿದ ಮೇಲೆ ಅದೂ ಬೋರಾಯಿತು. ಅಲ್ಲಿಗೆ ಸಮ್ಮೋಹಿನಿ ವಿದ್ಯೆ ಕಲಿಯುವ ಹುಚ್ಚಾಟ ಮುಗಿಯಿತು. ಮುಂದೆ ಕೆಲವೇ ತಿಂಗಳಲ್ಲಿ ಕನ್ನಡಕ ಬಂತು. ಅದೂ ದೊಡ್ಡ ನಂಬರಿನ ಸೋಡಾ ಗ್ಲಾಸ್. ಅದೂ ನಮ್ಮ ಕಾಲದ ಸೋಡಾ ಗ್ಲಾಸ್ ಅದೆಷ್ಟು ದಪ್ಪಗಿರುತ್ತಿತ್ತು ಮಾರಾಯರೇ. ಮೇಲಿಂದ ಅಸಡಾ ಬಸಡಾ ಪ್ಲಾಸ್ಟಿಕ್ ಫ್ರೇಮ್. ಅಂತಹ ಸೋಡಾ ಗ್ಲಾಸ್ ಹಾಕಿದ ನನ್ನ ಕಣ್ಣುಗಳನ್ನು ನೋಡಿದರೆ ಒಂದು ತರಹದ ಸಮ್ಮೋಹಿನಿ ಆಗುತ್ತಿದ್ದುದು ಮಾತ್ರ ನಿಜ. ಆ ತರಹದ ಸೋಡಾ ಗ್ಲಾಸ್ ಮಂದಿಯನ್ನು ನೋಡಿ ಬೇಕಾದರೆ. concentric circles ಅಂದರೆ ಒಂದರಲ್ಲಿ ಒಂದಿರುವ ಹಲವಾರು ವೃತ್ತಗಳು ಗೋಲ್ಗೋಲಾಗಿ ಕಂಡು ನಿಮಗೆ ತಲೆನೋವು ಬರದಿದ್ದರೆ ಹೇಳಿ! ಅದೂ ಒಂದು ತರಹದ ಸಮ್ಮೋಹಿನಿಯೇ!

ಈಗಲೂ ಅವೆಲ್ಲ ಪುಸ್ತಕಗಳು ಧಾರವಾಡದಲ್ಲಿ ಇವೆ. ಮನೆಯ ಯಾವ ಮೂಲೆಯಲ್ಲಿವೆಯೋ. ಎರಡು ಮೂರು ರೂಮುಗಳಲ್ಲಿ ಪುಸ್ತಕಗಳೇ ತುಂಬಿವೆ. ಹೋದಾಗ ಯಾವಾಗಲಾದರೂ ಹುಡುಕಿ ಮತ್ತೆ ಓದಬೇಕು. ಯಂತ್ರ, ತಂತ್ರ, ಯಕ್ಷಿಣಿ, ಪಕ್ಷಿಣಿ, ಸಮ್ಮೋಹಿನಿ, ಇತ್ಯಾದಿಗಳನ್ನು ಕಲಿಯಲು ಅಲ್ಲ. ಸುಮ್ಮನೆ ಓದಿ ಮಜಾ ಮಾಡಲು!

11 comments:

Basatteppa Banavi said...


Intresting!

sunaath said...

ಆಲಲಲಾ! ಮಹಾಂತೇಶ ಶಾಸ್ತ್ರಿಗಳ ಪುಸ್ತಕವನ್ನ ಇವತ್ತು ಹುಡುಕಲೇ ಬೇಕು! Thanx for info.

Mahesh Hegade said...

ಹಾ...ಹಾ...ಸುನಾಥ್ ಸರ್! ಮುದ್ದಾಂ. ಸಿಗಲಿ ನಿಮಗೆ ಶಾಸ್ತ್ರಿಗಳ ಪುಸ್ತಕ(ಗಳು) :)

ವಿ.ರಾ.ಹೆ. said...

ಹ್ಹ ಹ್ಹ.. ನಮ್ದೂ ಇದೇ ಕತಿ. ಮಾಟಮಂತ್ರ ಕಲೀಬೇಕು ಅಂತ ಯಾವುದ್ಯಾವುದೋ ಪುಸ್ತಕ ಹುಡುಕಿ ಓದಿ ಕೊನೆಗೆ ಇದೆಲ್ಲಾ ಆಗುವಂತದ್ದಲ್ಲ ಅಂತ ಕೈಬಿಟ್ಟಿದ್ದು. ಬಾಲ್ಯದ ಇಂತಹ ಕುತೂಹಲಗಳಿಗೆ ಸಾಟಿ ಇಲ್ಲ. :) ಅಂದಹಾಗೆ, ಧಾರವಾಡದಿಂದ ತಂದಿಟ್ಟುಕೊಂಡಿದ್ದ 'ಚಂದಮಾಮಾ' ಸಂಗ್ರಹ ಒಂದಿಷ್ಟು ನನ್ನಲ್ಲಿ ಇದೆ.. ಅರವತ್ತು ಎಪ್ಪತ್ತರ ದಶಕದ್ದಿರಬೇಕು :)

Mahesh Hegade said...

@Vikas -- ha...ha....Thanks for the comment. Enjoy ChandaMama!

Dr. D. Satpamar said...


Riding maanis on ghendamrugas in Dhoomaketu were cool!
They were shown in langotis and had lady assistants!!

Kushi said...

Kutuhalakari yagittu I was waiting to read.. nijjvagiyu neevu earthworm Na deep hachche bidthireno antha...Mahesh sirr

Kushi said...

Kutuhalakari yagittu I was waiting to read.. nijjvagiyu neevu earthworm Na deep hachche bidthireno antha...Mahesh sirr

Mahesh Hegade said...

Thanks Khushi. ನಮ್ಮದು ಥಿಯರಿನೇ ಜಾಸ್ತಿ. ಪ್ರಾಕ್ಟಿಕಲ್ ಕಮ್ಮಿ! :)

Anonymous said...

ತುಂಬಾ ಕುತೂಹಲ ಕೆರಳಿಸಿತು ಮಾರ್ರರೇ...

Mahesh Hegade said...

ಧನ್ಯವಾದಗಳು, Parasu Shegunasi.