Thursday, June 30, 2016

ಹಾದರಗಿತ್ತಿ ಹಜಾಮತಿ

ಮಾಧವ ಅಂದು ಬೆಳಗಿನಿಂದಲೇ ಕುಡಿಯಲು ಆರಂಭಿಸಿದ್ದ. ಕುಡಿಯಲು ಆರಂಭಿಸಿದ್ದ ಅನ್ನಲಿಕ್ಕೆ ಯಾವಾಗ ಕುಡಿಯುವದನ್ನು ನಿಲ್ಲಿಸಿದ್ದ? ಅವನಿಗೇ ಮರೆತುಹೋಗಿದೆ. ಹಿಂದಿನ ರಾತ್ರಿ ಎಂದಿನಂತೆ ಬಾರಿನಲ್ಲಿ ಕಂಠಪೂರ್ತಿ ಕುಡಿದಿದ್ದ. ಅದು ದಿನದ ಅಭ್ಯಾಸ. ಗೆಳೆಯರು ಮನೆ ಮುಟ್ಟಿಸಿ ಹೋಗಿದ್ದರು. ಕುಡುಕ ಗೆಳೆಯರು ಅಷ್ಟಾದರೂ ಮಾಡುತ್ತಾರೆ. ತಾವೇ ನಶೆ ಏರಿ ಜೋಲಿ ಹೊಡೆದು ಗಟಾರಕ್ಕೆ ಬೀಳುವ ಸ್ಥಿತಿಯಲ್ಲಿದ್ದರೂ ಇವನನ್ನು ಮನೆಗೆ ಮುಟ್ಟಿಸದೇ ಹೋಗುವದಿಲ್ಲ. ಇದ್ದವರಲ್ಲಿಯೇ ಸ್ವಲ್ಪ ಮಾಲ್ದಾರ್ ರೊಕ್ಕದ ಆದ್ಮಿ ಇವನು. ಬಾರಿನ ಬಿಲ್ ಕೊಟ್ಟಿರುತ್ತಾನೆ. ಋಣ ಬಿದ್ದಿರುತ್ತದೆ. ಅದಕ್ಕಾಗಿ ಮನೆ ಮುಟ್ಟಿಸಿರುತ್ತಾರೆ. ಕುಡಿದು ಫುಲ್ ಔಟಾದ ಇವನನ್ನು ಮನೆಯ ಮುಂದಿನ ಬಾಗಿಲಿಗೆ ಆನಿಸಿ ಹೋಗಿರುತ್ತಾರೆ. ಬಾಗಿಲಿಗೆ ಅಕ್ಕಿ ಮೂಟೆಯಂತೆ ಆನಿಕೊಂಡಿರುತ್ತದೆ ಇವನ ದೇಹ. ಬಾಗಿಲು ತಟ್ಟಿ, ಮಾಧವನ ಹೆಂಡತಿ ವೀಣಾಳನ್ನು ಎಬ್ಬಿಸಿ, ಈ ಪುಣ್ಯಾತ್ಮನನ್ನು ಮನೆಯೊಳಕ್ಕೆ ತಳ್ಳುವ ಜುರ್ರತ್ ಯಾರೂ ಮಾಡುವದಿಲ್ಲ. ಯಾರಿಗೆ ಬೇಕು ಆ ನಡು ರಾತ್ರಿಯಲ್ಲಿ ಪೂಜ್ಯ ವೈನಿಯಾದ ವೀಣಾ ವೈನಿಯಿಂದ 'ಪೂಜೆ' ಮಾಡಿಸಿಕೊಳ್ಳುವ ಒಳ್ಳೆ ನಸೀಬು!? ಮಾಧವನಿಗಂತೂ ಮೈಮೇಲೆ ಹೋಶ್ ಇರುವದಿಲ್ಲ. ಬಾಗಿಲಿಗೆ ಆನಿಕೊಂಡೇ ನಿದ್ದೆ ಹೋಗಿರುತ್ತಾನೆ ಆ ಕುಡುಕ.

ಹಿಂದಿನ ದಿನವೂ ಹಾಗೆಯೇ ಆಗಿತ್ತು. ಬೆಳಿಗ್ಗೆ ಐದೂವರೆ ಹೊತ್ತಿಗೆ ಹಾಲಿನ ಪ್ಯಾಕೆಟ್ ಎತ್ತಿಕೊಳ್ಳಲು ಮುಂದಿನ ಬಾಗಿಲು ತೆಗೆದಿದ್ದಳು ವೀಣಾ. ಬಾಗಿಲು ತೆರೆದಂತೆ ಬಾಗಿಲಿಗೆ ಆನಿಕೊಂಡಿದ್ದ ಗಂಡ ಪ್ರಾಣಿ ಉಧೋ ಅಂತ ಹೊಸ್ತಿಲ ಮೇಲೆ ಪವಡಿಸಿಬಿಟ್ಟಿತು. 'ಕರ್ಮ! ಕರ್ಮ!' ಅಂತ ಹಣೆ ಹಣೆ ತಟ್ಟಿಕೊಳ್ಳುತ್ತ ಮಾಧವನ ಬಾಡಿಯನ್ನು ಎಳೆದು ಒಳಗೆ ಹಾಕಿದ್ದಳು. ಹಾಲಿನ ಪಾಕೇಟುಗಳನ್ನು ಗಡಿಬಿಡಿಯಲ್ಲಿ ಒಳಗೆ ತಂದುಕೊಂಡು ಬಾಗಿಲು ಮುಚ್ಚಿದ್ದಳು. 'ಓಣಿ ಜನರ ಮುಂದೆ ಮಾನ ಕಳೆಯುತ್ತಾನೆ! ಪ್ರಾರಬ್ಧ!' ಅಂದುಕೊಳ್ಳುತ್ತ ಒಳಗೆ ಹೋದಳು. ಮಾಧವನಿಗೆ ಕೊಂಚ ಎಚ್ಚರವಾಯಿತು. ಬಾಗಿಲಲ್ಲಿ ಕಾಲು ಒರೆಸುವ ಡೋರ್ ಮ್ಯಾಟ್ ಮೇಲೆ ಪವಡಿಸಿದ್ದೇನೆ ಅಂತ ಅರಿವಾಗಿ, ಹೇಗೋ ಮಾಡಿ ಮೇಲೆ ಎದ್ದು, ಹೋಗಿ ಬೆಡ್ರೂಮ್ ಸೇರಿಕೊಂಡು ಶಿವಾಯ ನಮಃ ಅಂತ ನಿದ್ದೆ ಹೋದ.

ಹೀಗೆ ನಿದ್ದೆ ಹೋದವ ಸುಮಾರು ಹನ್ನೊಂದು ಘಂಟೆ ಹೊತ್ತಿಗೆ ಎದ್ದ. ಎದ್ದ ಕೂಡಲೇ ಮತ್ತೆ ನೆನಪಾಯಿತು. ಚಹಾ ಅಲ್ಲ. ಎಣ್ಣೆ. ಹೇಗೂ ಮನೆಯಲ್ಲೂ ಸ್ಟಾಕ್ ಇಟ್ಟಿರುತ್ತಾನಲ್ಲ. ಅಲ್ಲೇ ಬೆಡ್ ರೂಮಿನಲ್ಲಿಯೇ ತೀರ್ಥ ಸೇವನೆ ಶುರು ಹಚ್ಚಿಕೊಂಡ. ಕೈಯಲ್ಲಿ ಟೀವಿ ರಿಮೋಟ್. ಅನ್ಯಮನಸ್ಕನಾಗಿ ಚಾನೆಲ್ ಬದಲಾಯಿಸುತ್ತ ಎಣ್ಣೆ ಗುಟುಕರಿಸುತ್ತ ಕೂತಿದ್ದ. ನಡುವೆ ಹೋಗಿ ಅಡುಗೆಮನೆಯಿಂದ ಮೆಲುಕಾಡಲು ಅಂತ ಒಂದಿಷ್ಟು ಚೂಡಾ ತಂದುಕೊಂಡ. ಮತ್ತೆ ಎಣ್ಣೆ ಸೇವನೆ ಮುಂದುವರೆಸಿದ. ಗಂಡನ ಕುಡಿತದಿಂದ ಇವತ್ತೂ ಕಿರಿಕಿರಿ ಅನುಭವಿಸುತ್ತಿದ್ದ ಪತ್ನಿ ಪಾತ್ರೆಗಳನ್ನು ಡಬಾ ಡಬಾ  ಅಂತ ಡಮರು ಬಾರಿಸುತ್ತ ಅಡಿಗೆಮನೆ ಕಡೆ ಕೆಲಸ ನಡೆಸಿದ್ದಳು. ಅವಳ ಪಾತ್ರೆಗಳ ಡಮರು ಆವಾಜ್ ಕಮ್ಮಿಯಾಗಲಿ ಅಂತ ಇವನು ಟೀವಿ ಆವಾಜನ್ನು ಜಾಸ್ತಿ ಮಾಡಿದ. ಮತ್ತೊಂದು ಪೆಗ್ ಎತ್ತಿದ. ಎಷ್ಟು ಪೆಗ್ಗುಗಳನ್ನು ಹಾಕಿದ್ದಾನೆ ಅಂತ ಅವನಿಗೆ ನೆನಪಿರಲಿಲ್ಲ. ಬೇಕಾಗೂ ಇರಲಿಲ್ಲ. ಘಂಟೆ ಸುಮಾರು ಮಧ್ಯಾಹ್ನ ಎರಡು ಘಂಟೆ. ಮುಖವನ್ನೂ ತೊಳೆಯದೇ ಎದ್ದವನೇ ಕುಡಿಯುತ್ತ ಕುಳಿತಿದ್ದಾನೆ.

ಕಾಲಿಂಗ್ ಬೆಲ್ ಸದ್ದಾಯಿತು. ಹೆಂಡತಿ ಹೋಗಿ ಬಾಗಿಲು ತೆಗೆಯುತ್ತಾಳೋ ಅಂತ ನೋಡಿದ. ಅವಳು ಅಡುಗೆಮನೆಯಿಂದ ಕದಲುವ ಲಕ್ಷಣ ಕಾಣಲಿಲ್ಲ. ಹೊರಗಿಂದ ಮತ್ತೆ ಮತ್ತೆ ಕಾಲಿಂಗ್ ಬೆಲ್ ಬಾರಿಸಿದರು. ಕಾಲಿಂಗ್ ಬೆಲ್ಲಿನ ಕರ್ಕಶ ಮೊರೆತ ಕೇಳಲಾಗದೇ ಕುಡುಕ ಕಾಳಿಂಗ ಎದ್ದ. ಅರೆಬರೆ ಬಿಚ್ಚಿದ್ದ ಲುಂಗಿಯನ್ನು ಗುಡಾಣ ಮಾದರಿಯ ಹೊಟ್ಟೆ ಮೇಲೆ ಕಟ್ಟಿದ. ಮೇಲೇನೂ ಬಟ್ಟೆ ಹಾಕಿರಲಿಲ್ಲ. ಅಲ್ಲೇ ಇದ್ದ ಸಣ್ಣ ಟಾವೆಲ್ ತರಹದ್ದನ್ನು ಹೊದ್ದುಕೊಂಡು, ವಿಕಾರವಾಗಿ ಆಕಳಿಸುತ್ತ ಬಾಗಿಲು ತೆಗೆಯಲು ಹೋದ.

ಬಾಗಿಲು ತೆಗೆದರೆ ಕಂಡವರು ಮಾಮಿ. ಒಂದು ತರಹದ embarrassment ಫೀಲ್ ಆಯಿತು. ಸರಿಯಾಗಿ ಬಾಯಿಬಿಟ್ಟು, 'ಬರ್ರಿ, ಒಳಗ ಬರ್ರಿ, ಮಾಮಿ,' ಅನ್ನಲೂ ಸಂಕೋಚ. ಬಾಯಿ ಬಿಟ್ಟರೆ ಅವನ ಗಬ್ಬು ನಾತ ಅವನಿಗೇ ಹೊಡೆಯುತ್ತಿದೆ. ಕುಡುಕರ ದೊಡ್ಡ ಪ್ರಾಬ್ಲೆಮ್ ಅದು. ರಾತ್ರಿ ಕುಡಿಯುವಾಗ ಜೊತೆಗೆ ಚಾಕಣಾ ಪಾಕಣಾ ಅಂತ ಏನೇನು ತಿಂದಿರುತ್ತಾರೋ ಏನೋ. ಎಲ್ಲದರ ಜೊತೆ ಭರ್ಜರಿ ಉಳ್ಳಾಗಡ್ಡೆ, ಬಳ್ಳೊಳ್ಳಿ ಮೆದ್ದಿರುತ್ತಾರೆ. ಹೆಂಡದ ಜೊತೆ ಸಿಕ್ಕಾಪಟ್ಟೆ ರುಚಿಯಾಗಿರುತ್ತದೆ. ಅಡ್ಡಾದಿಡ್ಡಿ ಕುಡಿದಿರುತ್ತಾರೆ. ಆ ಮದ್ಯ ಇನ್ನೂ ಹೊಟ್ಟೆಯಲ್ಲಿಯೇ ಕುಲುಕಾಡುತ್ತಿರುತ್ತದೆ. ರಾತ್ರಿ ಹಲ್ಲು ಗಿಲ್ಲು ತಿಕ್ಕಿ ಮಲಗುವ ಅಭ್ಯಾಸ ಕುಡುಕರಿಗೆ ಇರುವದಿಲ್ಲ. ಯಾವಾಗ ನಿದ್ದೆಗೆ ಬಿದ್ದಿರುತ್ತಾರೆ ಅಂತಲೇ ಗೊತ್ತಿರುವದಿಲ್ಲ. ಹಾಗಿರುವಾಗ ನೆನಪಿಟ್ಟುಕೊಂಡು ಹಲ್ಲು ಗಿಲ್ಲು ತಿಕ್ಕಿ ಮಲಗೋದು ಸಾಧ್ಯವೇ? ಬಾರಿನಿಂದ ಹೊರ ಬೀಳುವಾಗ ಉಳ್ಳಾಗಡ್ಡೆ, ಬಳ್ಳೊಳ್ಳಿ, ಹೆಂಡದ ದುರ್ವಾಸನೆಯೆಲ್ಲ ಹೋಗಲಿ ಅಂತ ಗುಟ್ಕಾವನ್ನೋ, ಜರ್ದಾ ಪಾನನ್ನೋ ಹಾಕಿಕೊಂಡು ಬಂದಿರುತ್ತಾರೆ. ಅದರದ್ದು ಮತ್ತೊಂದು ತರಹದ ದುರ್ವಾಸನೆ. ಹೀಗೆ ಎಲ್ಲ ಕೂಡಿ ಕುಡುಕರಿಗೆ ಬೆಳಿಗ್ಗೆ ಎದ್ದಾಗ ಅವರ ದುರ್ವಾಸನೆ ಅವರಿಗೇ ಅಸಹನೀಯವಾಗಿರುತ್ತದೆ. ಬೇರೆ ಯಾರಾದರೂ ಆ ದುರ್ವಾಸನೆ ಭರಿಸಿದರೆ ಎಚ್ಚರ ತಪ್ಪಿ ಬೀಳಬೇಕು. ಆ ಮಾದರಿಯ ಪರಿಸರ ಮಾಲಿನ್ಯ.

ಮಾಧವ ಅದೇನೇ ಸಣ್ಣ ಧ್ವನಿಯಲ್ಲಿ, ಮುಖಕ್ಕೆ ಟಾವೆಲ್ ಮುಚ್ಚಿಕೊಂಡು ಮಾಮಿಯನ್ನು ಸ್ವಾಗತಿಸಿದರೂ ಕುಡುಕರ ಕೆಟ್ಟ ದುರ್ವಾಸನೆ ಮಾಮಿಯ ಮೂಗಿಗೂ ಅಡರಿತು. ಮೂಗು ಸಿಂಡರಿಸಿ ಒಂದು ತರಹದ ಲುಕ್ ಕೊಟ್ಟರು. ತನ್ನ ಕಣ್ಣಲ್ಲೇ ಮಾಧವ ಮತ್ತೂ ಸಣ್ಣವನಾಗಿಹೋದ. ಅವನ ಅಮ್ಮನ ಖಾಸ್ ಗೆಳತಿ ಮಾಮಿ. ಸಣ್ಣವನಿದ್ದಾಗಿನಿಂದ ಅವರ ಮುಂದೆಯೇ ಬೆಳೆದವನು ಇವನು. ಅಂತಹ ಮಾಮಿಯ ಮುಂದೆ ತಿರುಪೆ ಎತ್ತುವವನ ಅವತಾರದಲ್ಲಿ ನಿಂತಿದ್ದಾನೆ. ಅಪರೂಪಕ್ಕೆ ತನ್ನ ಮೇಲೆಯೇ ತನಗೆ ಅಸಹ್ಯ ಮೂಡಿತು.

ದೂರ ಸರಿದು ಒಳಗೆ ನಡೆದ. ದೂರದಿಂದಲೇ, 'ಬರ್ರಿ, ಬರ್ರಿ. ಒಳಗ ಬರ್ರಿ. ಕೂಡ್ರಿ. ಒಂದೇ ಮಿನಿಟ್. ಸ್ನಾನ ಮುಗಿಸಿ ಬಂದೇಬಿಡ್ತೇನಿ,' ಅಂದವನೇ ಬಚ್ಚಲಿನತ್ತ ಓಡಿದ. ಮಾಮಿ ಬಂದಿದ್ದಕ್ಕೆ ಸ್ನಾನದ ಯೋಗ ಬಂದಿತ್ತು. ಇಲ್ಲವಾದರೆ ಕುಡಿದು ಕುಡಿದು ಚಿತ್ತಾಗಿ ಮತ್ತೆ ಅಲ್ಲೇ ನಿದ್ದೆ ಹೋಗಿಬಿಡುತ್ತಿದ್ದ. ಸಂಜೆ ಏಳೋ ಎಂಟೋ ಘಂಟೆಗೆ ಎಚ್ಚರವಾಗುತ್ತಿತ್ತು. ಮತ್ತೆ ಸಂಜೆಯ ತೀರ್ಥಯಾತ್ರೆಗೆ ಸಜ್ಜಾಗುತ್ತಿದ್ದ.

ಸ್ನಾನಕ್ಕೆ ಹೋಗುವ ಮುನ್ನ, 'ಏ, ವೀಣಾ. ಮಾಮಿ ಬಂದಾರ ನೋಡು. ನಾ ಬರ್ತೇನಿ ಸ್ನಾನ ಮಾಡಿ,' ಅಂತ ಹೇಳಿ ಹೋದ.

'ಮೊದಲೇ ಇವನದು ಈ ಅವತಾರ. ಅದೇ ಅವತಾರದಲ್ಲಿ ಹೋಗಿ ಮನೆಗೆ ಬಂದ ಅತಿಥಿಗಳ ಕಣ್ಣಿಗೆ ಬಿದ್ದಿದ್ದಾನೆ. ಈಗ ನಾನು ಹೋಗಿ ಅವರ ಮುಂದೆ ಕೂತು ಮಾತಾಡಬೇಕು. ನನಗೂ ಕೆಟ್ಟ ಅವಮಾನ. ಎಲ್ಲ ಇವನ ಕಾಲದಲ್ಲಿ. ಇವನ ಕುಡಿತದ ಕಾಲದಲ್ಲಿ. ಅಯ್ಯೋ ನನ್ನ ಕರ್ಮವೇ!' ಅಂತ ಮನದಲ್ಲೇ ಅಂದುಕೊಳ್ಳುತ್ತ ವೀಣಾ ಅಡುಗೆಮನೆಯಿಂದ ಹೊರಗೆ ಬಂದಳು. ಮಾಮಿಯ ಜೊತೆ ಮಾತುಕತೆಗೆ ಕೂತಳು. ಹಾಗೆ ಸುಮ್ಮನೆ ಟೈಂಪಾಸ್ ಮಾತುಕತೆ ಗಂಡ ಸ್ನಾನ ಮುಗಿಸಿ ಬರುವತನಕ.

ಬಂದು ಕೂತ ವೀಣಾ ಮಾಮಿಯ ಜೊತೆ ಅದು ಇದು ಮಾತಾಡಿದಳು. ತಲೆ ಮೇಲೆ ಸೆರಗು ಮುಚ್ಚಿಗೊಂಡು ಕೂತಿದ್ದಳು. ಇನ್ನೂ ಮೂವತ್ತರ ಹರೆಯದ ಯುವತಿ ಅದು ಏಕೆ ಹಾಗೆ ತಲೆ ಮೇಲೆ ಸೆರಗು ಮುಚ್ಚಿಕೊಂಡು ಕೂತಿದ್ದಾಳೆ ಅಂತ ಮಾಮಿಗೆ ಅಚ್ಚರಿಯಾಯಿತು. ವೀಣಾಳಲ್ಲಿ ಏನೋ ಬದಲಾವಣೆ ಆದಂತೆ ಕಂಡುಬಂತು. ಇನ್ನೇನು ಕೇಳಬೇಕು ಅನ್ನುವಷ್ಟರಲ್ಲಿ ಸ್ನಾನ ಮುಗಿಸಿದ ಮಾಧವ ಶುದ್ಧ ಬಟ್ಟೆ ಧರಿಸಿ, ಇನ್ನೂ ಒದ್ದೆಯಾಗಿದ್ದ ತಲೆಯನ್ನು ಒರೆಸಿಕೊಳ್ಳುತ್ತ ಮತ್ತೆ ಎಂಟ್ರಿ ಕೊಟ್ಟ.

'ಏನು ಮಾಮಿ? ಭಾಳ ಅಪರೂಪ. ಮಾಮಾ ಆರಾಮರೀ? ಮತ್ತರೀ??' ಅಂತ ಕೇಳಿದ. ಹಾಗೆ ಕೇಳುವದರಲ್ಲಿಯೇ ಮಾಮಿ ಬಂದ ಕೆಲಸದ ಬಗ್ಗೆಯೂ ವಿಚಾರಿಸಿಕೊಂಡಿದ್ದ.

ಸ್ನಾನ ಮಾಡಿ ಬಂದರೂ ಗಬ್ಬು ವಾಸನೆ ಹೋಗಿರಲಿಲ್ಲ. ಕುಡಿದ, ತಿಂದ ವಾಸನೆ ಏನು ಕೇವಲ ಬಾಯಿಗೆ ಮಾತ್ರ ಅಂಟಿಕೊಂಡಿರುತ್ತದೆಯೇ? ಅದು ಸೀದಾ ರಕ್ತ ಸೇರಿರುತ್ತದೆ. ಹಾಗಾಗಿಯೇ ಉಸಿರಾಡಿದಾಗೊಮ್ಮೆ ಗಬ್ಬು ನಾತ. ಅದು ದೇಹದಿಂದ ಪೂರ್ತಿ ನಿಕಾಲಿಯಾಗುವರೆಗೂ ವಾಯು ಮಾಲಿನ್ಯ. ಹಾಗಾಗಿಯೇ ಉಳ್ಳಾಗಡ್ಡೆ, ಬಳ್ಳೊಳ್ಳಿ ತಿಂದ ಮೇಲೆ ಮತ್ತು ಹೆಂಡ ಕುಡಿದ ಮೇಲೆ ಅದೇನೇ ಗಜಂ ನಿಂತರೂ, ಅದೆಷ್ಟೇ ಹಲ್ಲುಜ್ಜಿದರೂ, ಅದೆಷ್ಟೇ ಮಾಣಿಕ್ಚಂದ ಗುಟ್ಕಾ ಹಾಕಿಕೊಂಡರೂ ಗಬ್ಬು ವಾಸನೆ ಹೋಗುವದಿಲ್ಲ. ಮಾಧವನ ಕೇಸಿನಲ್ಲೂ ಅದೇ ಆಗಿತ್ತು.

'ಎಲ್ಲಾ ಆರಾಮ್ ಮಾಧವಾ. ಒಂದು ಒಳ್ಳೆ ಕೆಲಸಕ್ಕೆ ಚಂದಾ ಕೂಡಿಸಲಿಕತ್ತೇನಿ. ನಿನ್ನ ಕಡೆನೂ ಕೇಳೋಣ ಅಂತ ಬಂದೆ. ಕೈಲಾದಷ್ಟು ಕೊಟ್ಟು ಸಹಾಯ ಮಾಡಪಾ. ಒಳ್ಳೆ ಕೆಲಸ. ಅಷ್ಟು ಇಷ್ಟು ಅಂತಿಲ್ಲ. ಎಷ್ಟು ಮನಸ್ಸಿಗೆ ಬರ್ತದ ಅಷ್ಟು,' ಅಂದು ಫಿಟ್ಟಿಂಗ್ ಇಟ್ಟರು. ಮಾಮಿಯ ಸಮಾಜ ಸೇವೆಯ ಬಗ್ಗೆ ಎಲ್ಲರಿಗೂ ಗೊತ್ತು. ಒಂದಾದಮೇಲೊಂದು ಒಳ್ಳೆ ಕೆಲಸಗಳಿಗೆ ಆದಷ್ಟು ರೊಕ್ಕ ಸಂಗ್ರಹಿಸಿ ಕೊಡುತ್ತಿರುತ್ತಾರೆ. ತಾವೂ ಕೊಡುತ್ತಾರೆ. ಮತ್ತೆ ಮಂದಿಯ ಜೊತೆ ಒಳ್ಳೆ ಸಂಪರ್ಕ ಮಡಗಿದ್ದಾರೆ. ಊರ ಮಂದಿಯ ಜೊತೆ ಒಳ್ಳೆ ಬಾಂಧವ್ಯ ಇದೆ. ಮತ್ತೆ ಹಿರಿಯರು. ಹಾಗಾಗಿ ಮಾಧವನಿಗೆ ಕೊಡದೇ ಇರಲು ಕಾರಣವಿಲ್ಲ. ಮತ್ತೆ ಅವರದ್ದೂ ದೊಡ್ಡ ಮನೆತನವೇ. ಒಳ್ಳೆ ಕೆಲಸಗಳಿಗೆ ದಾನ ಧರ್ಮ ಮಾಡಿದವರೇ. ಹಾಗಾಗಿ ಮಾಮಿಗೆ ಒಂದಿಷ್ಟು ರೊಕ್ಕ ತಂದುಕೊಡಲು ಮಾಧವ ಒಳಗೆ ಹೋದ. ಒಂದಿಷ್ಟು ನೋಟು ಹಿಡಿದುಕೊಂಡು ಬಂದು ಮಾಮಿಗೆ ಕೊಟ್ಟು ಕೈಮುಗಿದ. ಮಾಮಿ ರಸೀದಿ ಬರೆದು ಕೊಟ್ಟರು. ಭರ್ಜರಿ ಥಾಂಕ್ಸ್ ಹೇಳಿದರು.

ರೊಕ್ಕ ಸಿಕ್ಕಿತು ಅಂತ ಹಾಗೇ ಸೀದಾ ಎದ್ದು ಹೋಗಲಿಕ್ಕೆ ಆಗುತ್ತದೆಯೇ? ಹಾಗೆ ಮಾಡಿದರೆ ಸ್ನೇಹಕ್ಕೆ, ಬಾಂಧವ್ಯಕ್ಕೆ ಕೊಡಲಿಯೇಟು ಬಿದ್ದಂತೆಯೇ. ಮುಂದಿನ ಸಲ ಚಂದಾ ಕೇಳಲು ಬಂದಾಗ, 'ಮುಂದ ಹೋಗ್ರೀ!' ಅಂತ ಹೇಳಿ ಗೇಟು ಬಾಗಿಲನ್ನು ಮುಚ್ಚುತ್ತಾರೆ. ಹಾಗಾಗಿ ಸುಮ್ಮನೆ ಒಂದಿಷ್ಟು ಮಾತಾಡುತ್ತ ಕೂತರು.

ಮಾಧವನ ಪತ್ನಿ ವೀಣಾ ಏನೋ ಒಂದು ತರಹದಲ್ಲಿ ಬದಲಾಗಿದ್ದು ನೆನಪಾಯಿತು. ಕೇಳಬೇಕೆನ್ನಿಸಿತು.

'ಏನು ವೀಣಾ? ಏನೋ ಬದಲಾದಂಗ ಅದಲ್ಲಾ? ಏನು? ತಿಳಿವಲ್ತು? ತಲಿ ಮ್ಯಾಲ ಸೆರಗು ಯಾಕ?' ಅಂತ ಮಾಮಿ ಸಹಜವಾಗಿ ಕೇಳಿದರು.

ವೀಣಾ ಒಂದು ಕ್ಷಣ confuse ಆದ ಲುಕ್ ಕೊಟ್ಟಳು. ಹೇಳಲೋ ಬೇಡವೋ ಅನ್ನುವ ವಿಚಾರ ಮಾಡಿದಳು. ಆಕೆ ಹೇಳುವ ಜರೂರತ್ತೇ ಬರಲಿಲ್ಲ. ಮಾಮಿಯ innocent ಪ್ರಶ್ನೆ ಕೇಳಿದ ಮಾಧವ ಸ್ಪೋಟಗೊಂಡಿದ್ದ. ಮೊದಲೇ ಸಿಕ್ಕಾಪಟ್ಟೆ ಕುಡಿದು ಕೂತಿದ್ದ. ಅದೆಲ್ಲಿತ್ತೋ ಹೆಂಡತಿ ಮೇಲಿನ ಸಿಟ್ಟು. ಸ್ಫೋಟ. ದೊಡ್ಡ ಸ್ಫೋಟ. ಅದೇ ಆಯಿತು.

'ನೋಡ್ರಿ! ನೋಡ್ರಿ! ಮಾಮಿ. ಇಕಿ ಏನು ಮಾಡಿಕೊಂಡು ಕೂತಾಳ ಅಂತ. ನೀವೇ ನೋಡ್ರಿ!' ಅಂತ ವಿಕಾರವಾಗಿ ಒದರಿದವನೇ ಹೆಂಡತಿಯ ಬುರುಡೆ ಮೇಲಿದ್ದ ಸೆರಗು ಕಿತ್ತುಬಿಟ್ಟ. ತಲೆ ಮೇಲಿನ ಸೆರಗು ಸರಿದದ್ದೇ ಸರಿದದ್ದು ವೀಣಾಳ ಹೊಸ ರೂಪದ ವಿಶ್ವದರ್ಶನವಾಯಿತು.

ಸದಾ ಉದ್ದ ಕೂದಲಿನಿಂದ ನಾಗವೇಣಿಯಂತೆ ಸುಶೋಭಿಸುತ್ತಿದ್ದ ವೀಣಾ ಬಾಬ್ ಕಟ್ ಮಾಡಿಸಿದ್ದಳು. ಹಾಗಾಗಿ ಹೊಸ ಲುಕ್.

ಸಾಂದರ್ಭಿಕ ಚಿತ್ರ

'ಹೊಸಾ ಹೇರ್ ಸ್ಟೈಲ್ ಏನವಾ? ಛಂದ ಕಾಣಸ್ತಿ ತೊಗೋ. ಛಂದ ಇದ್ದಿ. ಹಾಂಗಾಗಿ ಏನು ಮಾಡಿದರೂ ಎಲ್ಲಾ ಒಪ್ತದ,' ಅಂತ ತಮಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳಿಬಿಟ್ಟರು ಮಾಮಿ.

ಅದನ್ನು ಕೇಳಿದ ಮಾಧವ ಮತ್ತೂ ಉರಿದುಕೊಂಡ. ಹೆಂಡತಿ ಬಾಬ್ ಕಟ್ ಮಾಡಿಸಿಬಿಟ್ಟಿದ್ದಾಳೆ ಅಂತ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ತನ್ನನ್ನು ಒಂದು ಮಾತೂ ಕೇಳದೇ ಮಾಡಿಸಿದ್ದು ಕೆಟ್ಟ ಕೋಪ ತರಿಸಿತ್ತು. ಕೇಳಿದ್ದರೆ ಇವನು ಬೇಡ ಅನ್ನುತ್ತಿದ್ದ ಅನ್ನುವದರಲ್ಲಿ ಸಂಶಯವಿಲ್ಲ ಬಿಡಿ.

'ಇನ್ನು ಮುಗೀತು ಬಿಡ್ರಿ ಮಾಮಿ. ನೀವು ಬ್ಯಾರೆ ಒಪ್ಪಿಗೆ ಕೊಟ್ಟುಬಿಟ್ಟಿರಿ. ಇನ್ನು ಇಕಿನ್ನ ಹಿಡಿಲಿಕ್ಕೆ ಸಾಧ್ಯ ಇಲ್ಲ ಬಿಡ್ರೀ. ನೀವು ಹಿರಿಯರು, ಇಕಿ 'ಹಾದರಗಿತ್ತಿ ಹಜಾಮತಿ' ನೋಡಿ ಸ್ವಲ್ಪ ಬುದ್ಧಿ ಹೇಳ್ತೀರೋ ಅಂತ ನಾ ವಿಚಾರ ಮಾಡಿದ್ರ ನೀವೂ ಸಹ ಅಕಿನ್ನ ವಹಿಸಿಕೊಂಡು ಹೋಗೋದ? ಹಾಂ? ಏನು ಮಾಮಿ ನೀವು?' ಅಂತ ಮಾಮಿಯ ಮೇಲೂ ಆಕ್ಷೇಪಣೆ ತೋರಿಸಿದ.

'ಏ, ಸುಮ್ಮನಿರೋ ಸಾಕು. ಏನಾತೀಗ? ಇನ್ನೂ ಸಣ್ಣಾಕಿದ್ದಾಳ ಅಕಿ. ನಡಿತದ. ನಮ್ಮ ವಯಸ್ಸಿನ ಮುದುಕಿಯರೇ ಏನೇನೋ ಹೊಸಾ ಹೊಸಾ ಫ್ಯಾಷನ್ ಮಾಡ್ತಾವ ಈಗ. ನಿನ್ನ ಹೆಂಡ್ತಿ ಮಾಡಿದರೇನಾತು? ಛಂದ ಕಾಣಿಸ್ತಾಳ ತೊಗೋ!' ಅಂತ ಹೇಳಿದ ಮಾಮಿಯ ಮಾತು ಮಾಧವನಿಗೆ ಗಾಯದ ಮೇಲೆ ಬರೋಬ್ಬರಿ ಉಪ್ಪು ಸವರಿದಂತಾಯಿತು.

'ಏ, ಏನು ಹಚ್ಚೀರಿ ಮಾಮಿ? ನಮ್ಮ ಮನಿತನದಾಗ ಹೆಂಗಸೂರು ಕೂದಲಕ್ಕ ಕತ್ತರಿ ಮುಟ್ಟಿಸೋದು ಯಾವಾಗ ಹೇಳ್ರೀ?' ಅಂತ ಕೇಳಿದ. ಮುಂದುವರೆದು ಅವನೇ ಹೇಳಿದ, 'ಗಂಡ ಸತ್ತಾಗ ತಲಿ ಬೋಳಿಸಿಕೊಳ್ಳತಾರ ನೋಡ್ರಿ. ಆವಾಗ. ಇಕಿನ್ನ ನೋಡ್ರಿ. ನಾ ಜೀವಂತ ಇದ್ದಾಗ ಹೋಗಿ ತಲಿ ಬೋಳಿಸಿಕೊಂಡು ಬಂದಾಳ. ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬಂದಾಳ,' ಅನ್ನುವಷ್ಟರಲ್ಲಿ ಸಿಕ್ಕಾಪಟ್ಟೆ ಸಿಟ್ಟು ಬಂದು ತಡೆದುಕೊಳ್ಳಲು ಆಗಲೇ ಇಲ್ಲ.

'ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬರ್ತೀ? ಹಾಂ? ಮತ್ತೊಮ್ಮೆ ಮಾಡಿಸಿಕೊಂಡು ಬರ್ತೀ? ಬರ್ತೀ?' ಅಂತ ವಿಕಾರವಾಗಿ ಚೀರುತ್ತ ಹೆಂಡತಿಯ ಬುರುಡೆಗೆ ಎರಡು ಫಟ್ ಫಟ್ ಅಂತ ಕೊಟ್ಟೇಬಿಟ್ಟ. ಅಲ್ಲಿಗೆ ಗಂಡ ಹೆಂಡತಿಯ ಜಗಳ ತಾರಕಕ್ಕೆ ಮುಟ್ಟಿತ್ತು.

ಬುರುಡೆಗೆ ಏಟು ತಿಂದ ವೀಣಾ ಕೊಂಯ್ ಅಂತ ಅಳುವ ರಾಗ ಶುರು ಮಾಡಿದಳು. ಇವರಿಬ್ಬರ ಜಗಳವನ್ನು ಪರಿಹರಿಸಿ ಸಮಾಧಾನ ಮಾಡುವ ಕೆಲಸ ಮಾಮಿಗೆ. ಚಂದಾ ವಸೂಲಿ ಮಾಡಿ ಹೋಗೋಣ ಅಂತ ಬಂದರೆ ಇಲ್ಲದ ತಲೆಬಿಸಿ.

'ಏ, ಮಾಧವಾ! ಏನೋ ಇದು? ಹೀಂಗ ಮಾಡ್ತಾರೇನು ಯಾರಾದರೂ? ಇದು ಸರಿ ಅಲ್ಲ ನೋಡು. ಅಕಿ ಬಾಬ್ ಕಟ್ ಮಾಡಿಸಿಕೊಂಡು ಬಂದಿದ್ದು ನಿನಗ ಸೇರಿಲ್ಲ. ಆತು. ತಿಳಿಸಿ ಹೇಳೋದು ಬಿಟ್ಟು  ಅಕಿಗೆ ಹೀಂಗ ಹೊಲಸ್ ಹೊಲಸ್ ಬೈಕೋತ್ತ ಹೆಂಡತಿಗೆ ಹೊಡಿತಿಯಲ್ಲೋ? ಇದು ಸರಿಯೇನೋ?' ಅಂತ ಜಬರಿಸಿ ಕೇಳಿದರು ಮಾಮಿ. ಕೇಳಲು ಅವರಿಗೆ ಹಕ್ಕಿದೆ. ಮಾತೃಸಮಾನರು.

'ಮತ್ತೇನ್ರೀ ಮಾಮಿ? ನಮ್ಮ ಮನಿತನದ ಬಗ್ಗೆ ನಿಮಗ ಗೊತ್ತದನೋ ಇಲ್ಲೋ? ನಮ್ಮ ಮನಿಯಾಗ ಎಷ್ಟು ಮಡಿ, ಮೈಲಿಗಿ, ಆಚಾರ, ಪದ್ಧತಿ, ಸಂಪ್ರದಾಯ ಎಲ್ಲ ಅವ ಅಂತ ಗೊತ್ತದನೋ ಇಲ್ಲೋ? ಹಾಂಗಿದ್ದಾಗ ಇಕಿ ಹೀಂಗ ಹೋಗಿ ತಲಿ ಬೋಳಿಸಿಕೊಂಡು ಬರೋದು ಸರಿ ಏನ್ರೀ?' ಅಂತ ಮಾಮಿಗೆ ರಿವರ್ಸ್ ಬಾರಿಸಿದ.

ಸಣ್ಣ ಬ್ರೇಕ್ ತೆಗೆದುಕೊಂಡು ಮುಂದುವರೆಸಿದ. 'ನಿಮ್ಮ ಗೆಳತಿ ಅಂದ್ರ ನಮ್ಮವ್ವಾ ಈಗ ಇದ್ದಿದ್ದರ ಇಕಿ ಈ ಹಾದರಗಿತ್ತಿ ಹಜಾಮತಿ ಅವತಾರ ನೋಡಿ ಎದಿ ಒಡದು ಸಾಯ್ತಿದ್ದಳು. ಪುಣ್ಯಾ ಮಾಡಿದ್ದಳು. ಇಕಿ ಹಾದರಗಿತ್ತಿ ಹಜಾಮತಿ ಅವತಾರ ನೋಡೋಕಿಂತ ಮೊದಲೇ ಕಣ್ಣು ಮುಚ್ಚಿದಳು. ನನ್ನ ಕರ್ಮ. ಈಗ ನಾ ನೋಡ್ಕೋತ್ತ ಕೂಡಬೇಕಾಗ್ಯದ. ಏನು ಕರ್ಮ ರೀ? ಇಕಿಗೆ ಬೈಬ್ಯಾಡ, ಹೊಡಿಬ್ಯಾಡ ಅಂತೀರಿ. ಮತ್ತೇನು ಇಕಿನ್ನ ಪೂಜಾ ಮಾಡ್ಲ್ಯಾ? ಮಹಾಲಕ್ಷ್ಮಿ ಕಳೆಯಿರುವ ಹೆಣ್ಣುಮಕ್ಕಳು ಇರುವ ಮನಿತನ ನಮ್ಮದು. ಅಂತಾದ್ರಾಗ ಇಕಿ ನೋಡ್ರಿ ಹೀಂಗ ಅವತಾರ ಮಾಡಿಕೊಂಡು ಕೂತಾಳ!' ಅಂತ ಫುಲ್ ಆವಾಜ್ ಹಾಕಿದ.

'ಅಲ್ಲಪಾ ಮಾಧವಾ. ನಿನ್ನ ಕಡೆ ಈ ಮಾತು ಕೇಳಬಾರದು ಅಂದುಕೊಂಡಿದ್ದೆ. ಆದ್ರ ಈಗ ಕೇಳಲೇಬೇಕಾಗ್ಯದ. ಒಂದು ಮಾತು ಕೇಳಲೇನು?' ಅಂತ ಸಣ್ಣ ಪೀಠಿಕೆ ಇಟ್ಟರು ಮಾಮಿ.

'ಏ, ಮುದ್ದಾಂ ಕೇಳ್ರಿ ಮಾಮಿ. ನಮ್ಮ ಅವ್ವಾ ಹೋದಾಗಿನಿಂದ ನೀವೇ ನಮಗ ಮಾಮಿ, ಅವ್ವಾ ಎಲ್ಲಾ,' ಅಂತ ಮಾಧವನೂ ಸ್ವಲ್ಪ ಸೆಂಟಿ ಆದ. ಹಿರಿಯರಾದ ಮಾಮಿಗೆ ದಬಾಯಿಸಿದ್ದನಲ್ಲ? ಅವನಿಗೇ ಬೇಜಾರಿಯಿತೇನೋ? ಅದಕ್ಕೇ ಸ್ವಲ್ಪ ಸಾಫ್ಟ್ ಟಚ್ ಬಂತು ಮಾತಿನಲ್ಲಿ.

'ಅಲ್ಲಾ, ನಿಮ್ಮದು ಅಂತಾ ಮನೆತನ ಇಂತಾ ಮನೆತನ ಅಂತ ದೊಡ್ಡ ಭಾಷಣ ಮಾಡಿದಿ. ಎಲ್ಲಾ ಒಪ್ಕೋತ್ತೇನಿ. ಅದರ ಬಗ್ಗೆ ದೂಸರಾ ಮಾತೇ ಇಲ್ಲ. ನಿಮ್ಮದು ಖರೇನೇ ದೊಡ್ಡ ಮನೆತನ. ಮಡಿ, ಮೈಲಿಗಿ, ಆಚಾರ, ವಿಚಾರ, ಸಂಪ್ರದಾಯ, ಪದ್ಧತಿ ಎಲ್ಲಾ ಭಾಳ ಜಾಸ್ತಿ. ಎಲ್ಲಾ ಖರೆ. ಭಾಳ ಗೌರವ ಇತ್ತು. ಈಗೂ ಆದ...... ' ಅಂತ ಸಣ್ಣ ಬ್ರೇಕ್ ತೆಗೆದುಕೊಂಡರು ಮಾಮಿ.

ಎಲ್ಲ ಕಿವಿಯಾಗಿದ್ದ ಮಾಧವ, 'ಮುಂದ ಹೇಳ್ರೀ,' ಅನ್ನುವ ಲುಕ್ ಕೊಟ್ಟ.

'ಅಂಥಾ ದೊಡ್ಡ ಮನಿತನದ ಹಿರಿಯ ಮಗಾ ನೀನು. ಹೌದಿಲ್ಲೋ? ಅಂಥಾ ದೊಡ್ಡ ಮನಿತನದ ಹಿರಿಯ ಮಗ. ಅಷ್ಟು ದೊಡ್ಡ ಮಂದಿ ಮಗಾ. ನೀನು ನಾ ಬಂದಾಗ ಇದ್ದ ಅವತಾರ ಸರಿ ಇತ್ತೇನಪಾ? ಯಾವ ಅವತಾರದಾಗಿದ್ದಿ? ಸ್ವಲ್ಪ ನೆನಪು ಮಾಡ್ಕೋ. ಹಗಲು ಹೊತ್ತಿನಾಗೇ ಕಂಠಮಟ ಕುಡಿದು ಕೂತಿದ್ದಿ? ಅದು ಸರಿನ? ನಿನ್ನ ಹೀಂಗ ಕೇಳಿ ನಿನ್ನ ಮನಸ್ಸಿಗೆ ಬ್ಯಾಸರಾ ಮಾಡ್ಬೇಕು ಅಂತಲ್ಲ. ಸಂಕಟ ಆತೋ. ಗೆಳತಿ ಮಗನ್ನ ಆ ಅವತಾರದಾಗ ನೋಡಿ ಸಂಕಟ ಆತೋ. ಅದಕ್ಕೇ ಕೇಳಿದೆ. ಏನಪಾ? ನೀ ಮಾಡಿದ್ದು ಸರಿಯೇನೋ? ಆ ಕುಡಿತಕ್ಕ, ಮೋಜಿಗೆ, ಮಸ್ತಿಗೆ ಒಂದು ಲಿಮಿಟ್ ಇಲ್ಲೇನಪಾ? ಹಾಂ? ಹೀಂಗ ಮಾಡಿದ್ರ ಹ್ಯಾಂಗ???' ಅಂತ ಫುಲ್ ಇಟ್ಟರು. ಬರೋಬ್ಬರಿ ಗಜ್ಜು ಕೊಟ್ಟರು.

ಮಾಧವ ಏನು ಹೇಳಿಯಾನು? ತಪ್ಪು ಮಾಡಿಕೊಂಡು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಮೇಲಿಂದ ಹೆಂಡತಿಯ ತಪ್ಪು ಎತ್ತಿ ತೋರಿಸಲು ಹೋಗಿ ತಾನೇ ವಾಪಸ್ ಗಜ್ಜು ತಿಂದಿದ್ದಾನೆ. ಬೇರೆಯವರು ಅವನ ಕುಡಿತದ ಬಗ್ಗೆ ಮಾತಾಡಿಬಿಟ್ಟಿದ್ದಾರೆ. ಅದೂ ಅವನ ಮನೆಗೇ ಬಂದು. ಅದೂ ಚಂದಾ ವಸೂಲಿ ಮಾಡಿದ ಮೇಲೆ. ಬಿಟ್ಟಿಯಲ್ಲಿ ಗಜ್ಜು. ಶಿವಾಯ ನಮಃ!

ಕೂತಲ್ಲೇ ಮಾಧವ ಮಿಸುಗಿದ. ಆಕಡೆ ಈಕಡೆ ನೋಡಿದ. ಏನು ಹೇಳಲಿ ಅಂತ ತಿಳಿಯಲಿಲ್ಲ. ಏನೋ ಒಂದು ಹೇಳಲು ಹೋದ. 'ಮಾಮಿ, ಅದು ಏನಂದ್ರ, ಏನಂದ್ರ,' ಅಂತ ಏನೋ ವಿವರಣೆ ಕೊಡಲು ಹೋದ. ಮಾಮಿ ಮಾತಾಡಲಿಲ್ಲ. ಸುಮ್ಮನೆ ಕೈಯೆತ್ತಿ, 'ಸಾಕು, ಏನೂ ಹೇಳುವ ಜರೂರತ್ತಿಲ್ಲ. ಏನೇ ಸಬೂಬು ಕೊಟ್ಟರೂ ನಂಬಲು ಯಾರೂ ಕಿವಿ ಮೇಲೆ ಹೂವು ಇಟ್ಟುಕೊಂಡಿಲ್ಲ,' ಅನ್ನುವ ಲುಕ್ ಕೊಟ್ಟರು. ಅದೇನೂ ಜಾಸ್ತಿ ಚುಚ್ಚಲಿಲ್ಲ ಅವನಿಗೆ. ಆದರೆ ಹೆಂಡತಿಯ ಲುಕ್ ಮತ್ತೆ ವಿಪರೀತವಾಗಿ ಚುಚ್ಚಿತು. ಮಾಮಿ ಇವನನ್ನು ಪಾಂಗಿತವಾಗಿ ವಿಚಾರಿಸಿಕೊಳ್ಳುತ್ತಿದ್ದಾಗ, 'ಹೌದು. ಹೌದು. ಬರೋಬ್ಬರಿ. ಇನ್ನೂ ಹೇಳ್ರೀ. ಇನ್ನೊಂದಿಷ್ಟು ಬಯ್ಯಿರಿ,' ಅನ್ನುವ ರೀತಿಯಲ್ಲಿ ಹೆಂಡತಿ ತಲೆ ಕುಣಿಸುತ್ತ ಕೂತಿದ್ದು ವಿಪರೀತವಾಗಿ ಕೆರಳಿಸಿತ್ತು. ಮತ್ತೊಮ್ಮೆ ಹೆಂಡತಿ ಕಡೆ ನೋಡಿದ. ಆಕೆಯ ಮುಖದಲ್ಲಿ ಕುಹಕ. ಇತ್ತೋ ಇಲ್ಲವೋ ಗೊತ್ತಿಲ್ಲ. ಇವನಿಗಂತೂ ಕಂಡಿತು. ಕೆಟ್ಟ ಕೋಪ ಕಿಬ್ಬೊಟ್ಟೆಯಾಳದಿಂದ ಸೀದಾ ತೋಳಿಗೇ ಬಂತು.

'ಮಾಮಿ ನನಗ ಬೈದು ಬುದ್ಧಿ ಹೇಳಲಿಕತ್ತರ ಕೂತು ನನ್ನ ಅಣಗಸ್ತೀ? ನನ್ನ ಟಿಂಗಲ್ ಮಾಡ್ತೀ? ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬಂದ ಮ್ಯಾಲೆ ಸೊಕ್ಕು ಹೆಚ್ಚಾಗ್ಯದ ನಿನಗ? ನನ್ನ ಅಣಗಸ್ತೀ? ಗಂಡ ನಾನು ಜೀವಂತ ಇದ್ದಾಗೇ ತಲಿ ಬೋಳಿಸಿಕೊಂಡು ಬಂದಿದ್ದು ಒಂದೇ ಅಲ್ಲ ಮ್ಯಾಲಿಂದ ಗಂಡಗೇ ಅಣಗಸ್ತೀ?' ಅಂತ ವಿಚಿತ್ರವಾಗಿ ಹೂಂಕರಿಸುತ್ತ ಹೋದವನೇ ಹೆಂಡತಿಯನ್ನು ಎಬ್ಬಿಸಿ, ರಫ್ ಆಗಿ ಎಳೆದು, ಬಗ್ಗಿಸಿ, ಬೆನ್ನ ಮೇಲೆ ರಪಾ ರಪಾ ಅಂತ ನಾಲ್ಕು ಹಾಕೇಬಿಟ್ಟ. ಸಿಟ್ಟು ಇಳಿದಿರಲಿಲ್ಲ. 'ತಲಿ ಬೋಳಿಸಿಕೊಳ್ಳಲಿಕ್ಕೆ ಹೋದಾಕಿ ಪೂರ್ತಿ ತಲಿ ಬೋಳಿಸಿಕೊಂಡು ಬರಬೇಕಾಗಿತ್ತು? ಯಾರರೆ ಕೇಳಿದ್ರ, 'ನನ್ನ ಗಂಡ ಸತ್ತಾನ. ಅದಕ್ಕೇ ತಲಿ ಬೋಳಿಸಿಕೊಂಡೇನಿ' ಅಂತ ಹೇಳಬಹುದಿತ್ತಲ್ಲ? ನಾ ಹ್ಯಾಂಗೂ ನಿನ್ನ ಪಾಲಿಗೆ ಸತ್ತೇಹೋಗೇನಿ? ಅಲ್ಲಾ? ಅಲ್ಲಾ? ಹಾದರಗಿತ್ತಿ,' ಅಂತ ಕೆಟ್ಟದಾಗಿ ಬೈಯುತ್ತ ಮತ್ತೂ ನಾಲ್ಕು ಬಿಟ್ಟ.

'ನಾ ಸಾಯ್ತೇನ್ರೀ. ಖರೆ ಅಂದ್ರೂ ಸಾಯ್ತೇನ್ರೀ,' ಅಂತ ಚೀರುತ್ತ ವೀಣಾ ಒಳಗೆ ಅಡುಗೆಮನೆ ಕಡೆ ಓಡಿದಳು.

'ಸಾಯಿ. ಸತ್ತು ಹೋಗು. ಪೀಡಾ ಕಳೀತು ಅಂತ ತಿಳಿತೇನಿ. ರಂಡಿ ತಂದು. ಸೂಡ್ಲಿ,' ಅಂತ ಕೆಟ್ಟದಾಗಿ ಬೈಯುತ್ತ ಮಾಧವ ಖುರ್ಚಿ ಮೇಲೆ ಕುಸಿದ. ಮೊದಲೇ ದೊಡ್ಡ ದೇಹ. ಅದಕ್ಕೆ ವ್ಯಾಯಾಮ ಇಲ್ಲ. ಹಲವಾರು ಬೇನೆಗಳ ಬೀಡು ಅದು. ಅಂತಹ ಬರ್ಬಾದ್ ದೇಹವನ್ನು ಹೆಂಡತಿ ಮೇಲೆ ಕೂಗಾಡಿ, ಆಕೆಯನ್ನು ಬಡಿದು ವಿಪರೀತವಾಗಿ ದಣಿಸಿಬಿಟ್ಟಿದ್ದ. ಸುಸ್ತಾಗಿತ್ತು. 'ಭುಸ್! ಭುಸ್!' ಅಂತ ಶ್ವಾಸ ಬಿಡುತ್ತ ಕುಸಿದು ಕುಳಿತ.

ಒಳಗೆ ಹೋಗಿದ್ದ ವೀಣಾ ಮತ್ತೆ ವಾಪಸ್ ಪ್ರತ್ಯಕ್ಷಳಾಗಿದ್ದಳು. ಖರಾಬ್ ಸೀನ್. ಕೈಯಲ್ಲಿ ಒಂದು ಚಾಕು. ತರಕಾರಿ ಹೆಚ್ಚುವ ಚಾಕು. ಏನೋ ಹಡಾಗತಿ ಮಾಡಿಕೊಳ್ಳಲು ಹೊರಟಿದ್ದಾಳೆ ಅನ್ನುವ ಖಡಕ್ ನಿರ್ಧಾರದ ಭಾವನೆ ಮುಖದ ಮೇಲೆ. ನೋಡಿದ ಮಾಮಿ ದಂಗು ಹೊಡೆದರು.

'ಏನ ವೀಣಾ ಇದು? ಏನಿದು ಕೈಯಾಗ? ಯಾಕ?' ಅಂತ ಏನೋ ಅಂದರು. ಗಾಬರಿಯಾಗಿ ಮಾತೇ ಸರಿಯಾಗಿ ಹೊರಡಲಿಲ್ಲ.

'ಸಾಯ್ತೇನ್ರೀ. ನಾ ಸತ್ತು ಹೋಗ್ತೇನಿ. ಸಾಕಾಗಿ ಹೋಗ್ಯದ ನನಗೂ. ಇವರ ಕುಡಿತ, ಚಟ, ಬೈಯ್ಯೋದು, ಹೊಡೆಯೋದು, ಎಲ್ಲಾ ಸಹಿಸ್ಕೊಂಡು ಸಾಕಾಗಿ ಹೋಗ್ಯದ. ಈಗ ಸತ್ತೇಹೋಗ್ತೇನಿ. ನಿಮ್ಮ ಮುಂದs ಚಾಕು ಹಾಕಿಕೊಂಡು ಸತ್ತೇಹೋಗ್ತೇನಿ,' ಅಂತ ಅಬ್ಬರಿಸಿದಳು ವೀಣಾ.

'ಅಯ್ಯೋ! ಮಾಧವಾ! ಅಕಿಗೊಂದು ಮಾತು ಹೇಳೋ. ಸಿಟ್ಟಿನ ಕೈಯಾಗ ಬುದ್ಧಿ ಕೊಟ್ಟು ಏನರೆ ಮಾಡಿಕೊಂಡಾಳು ಅಕಿ. ಒಂದು ಮಾತು ಹೇಳೋ. ನಿನ್ನ ಕಟ್ಟಿಗೊಂಡ ಹೆಂಡ್ತಿ ಅಕಿ. ಸಾಯೋತನಕಾ ಬೇಕು. ಹೇಳೋ. ಹೇಳೋ,' ಅಂತ ಮಾಮಿ ಶಂಖ ಹೊಡೆದರು.

ಮಾಧವನಿಗೆ ಉಢಾಫೆ.

'ಏ, ನೀವು ಸುಮ್ಮ ಕೂಡ್ರೀ ಮಾಮಿ. ಇಕಿ ನೌಟಂಕಿ ಯಾವಾಗೂ ಇರೋದೇ. ಇದೇನೂ ಮೊದಲನೇ ಸಲ ಅಲ್ಲ. ನಾ ಏನರೆ ಹೇಳಿದ ಕೂಡಲೇ ಅಕಿ ಬಾಯಿಂದ ಬರೋ ಮಾತು ಅಂದ್ರ ಇದೇ. ಸತ್ತು ಹೋಗ್ತೇನಿ. ಸಾಕಾಗಿಬಿಟ್ಟದ. ಬರೇ ಡ್ರಾಮಾ ಬಾಜಿ. ಅಷ್ಟೇ. ಬರೇ ಡ್ರಾಮಾ. ನಾ ಎಲ್ಲಾ ಬೇಕಾದಷ್ಟು ಸಲೆ ನೋಡಿಬಿಟ್ಟೇನಿ,' ಅಂತ ಲೈಟಾಗಿ ಮಾತಾಡಿದ ಮಾಧವ. ಹೆಂಡತಿ ಕಡೆ ಒಂದು ಖರಾಬ್ ಲುಕ್ ಕೊಟ್ಟು, 'ನಾಟಕ ಸಾಕು. ಚಾಕು ಒಳಗಿಟ್ಟು ಬಾ. ನಿನ್ನ ಆಮೇಲೆ ನೋಡಿಕೊಳ್ಳುತ್ತೇನೆ,' ಅನ್ನುವ brush off ಮಾಡಿದ ಲುಕ್ ಕೊಟ್ಟ. ಅಷ್ಟೇ ಸಾಕಾಯಿತು ವೀಣಾಳಿಗೆ.

'ಈ ಸಲ ಖರೇನೇ ಸಾಯಕಿ ನಾ. ಖರೇನೇ ಸಾಯಾಕಿ. ಸತ್ತುಹೋಗಾಕಿ!' ಅಂತ ಹುಚ್ಚಿಯಂತೆ ಅಬ್ಬರಿಸುತ್ತ, ಮೈಮೇಲೆ ದೆವ್ವ ಬಂದಂತಾಡಿದ ವೀಣಾ ಚಾಕುವಿನಿಂದ ಚುಚ್ಚಿಕೊಂಡೇಬಿಟ್ಟಳು. ಮಟಾಷ್! ರಕ್ತ ಬಳಬಳ ಅಂತ ಹರಿಯತೊಡಗಿತು.

ಮಾಧವ ಮಾತ್ರ ಫುಲ್  ಕೂಲಾಗಿ ಕೂತಿದ್ದ.

'ಏ! ಡಾಕ್ಟರಿಗೆ ಫೋನ್ ಮಾಡೋ! ಆಂಬುಲೆನ್ಸಿಗೆ ಫೋನ್ ಮಾಡೋ! ಉಳಿಸಿಕೊಳ್ಳೋಣ. ಚಾಕು ಹಾಕಿಕೊಂಡಳು. ಲಗೂ ಫೋನ್ ಮಾಡೋ,' ಅಂತ ಮಾಮಿ ಬೊಬ್ಬೆ ಹೊಡೆದರು. ಚಾಕು ಹೆಟ್ಟಿಕೊಂಡು ನೆಲದ ಮೇಲೆ ಬಿದ್ದಿದ್ದ ವೀಣಾಳ ತಲೆಯನ್ನು ತಮ್ಮ ತೊಡೆ ಮೇಲೆ ಇಟ್ಟುಕೊಂಡು ವಾತ್ಸಲ್ಯದಿಂದ ನೇವರಿಸುತ್ತ, 'ಎಂತಾ ಕೆಲಸ ಮಾಡಿಕೊಂಡಿ ವೀಣಾ? ಹ್ಯಾಂಗದ ಈಗ? ಈಗ ಆಂಬುಲೆನ್ಸ್ ಬರ್ತದ. ಹಾಸ್ಪಿಟಲ್ಲಿಗೆ ಹೋಗೋಣಂತ. ಅಲ್ಲಿ ತನಕಾ ಜೀವಾ ಹಿಡ್ಕೋ ಮಾರಾಳ,' ಅಂತ ಏನೇನೋ ಸಮಾಧಾನ ಮಾಡುತ್ತ, 'ಏ, ಮಾಧವಾ! ಫೋನ್ ಮಾಡಿದಿ ಏನೋ? ಲಗೂ ಮಾಡೋ! ಇಕಿ ಜೀವಾ ಉಳಿಸಿಕೊಳ್ಳೋ. ನಿನಗ ಕೈ ಮುಗಿದು ಕೇಳಿಕೊಳ್ಳತೇನಿ. ಲಗೂ ಫೋನ್ ಮಾಡೋ,' ಅಂತ ಮಾಧವನನ್ನು ಅವಸರಿಸಿದರು.

ಮಾಧವ ಯಾರಿಗೋ ಫೋನ್ ಮಾಡಿದ. 'ನಿನ್ನ ಗೆಳತಿ ಮತ್ತ ಚಾಕು ಹೆಟ್ಟಿಕೊಂಡು ಕೂತಾಳ. ಬಂದು ನೋಡಿ ಹೋಗು. ಎಂಥಾ ಡಾಕ್ಟರ್ ನೀ? ಅಕಿಗೆ ಈ ಸಲ ಬಂದಾಕಿ ಸರಿ ಮಾಡಿ ಹೇಳಿ ಹೋಗು. ಎಲ್ಲಿ ಚುಚ್ಚಿಕೊಂಡ್ರ ಪ್ರಾಣ ಹೋಗ್ತದ ಅಂತ. ಪ್ರತಿ ಸಲೆ ಬರೇ ನಾಟಕ ನಡದದ. ಒಮ್ಮೆ ಕೈಗೆ ಚುಚ್ಚಿಕೊಂಡೆ. ಮತ್ತೊಮ್ಮೆ ಕಾಲಿಗೆ ಚುಚ್ಚಿಕೊಂಡೆ. ಇವತ್ತು ಹೋಗಿ ಹೋಗಿ ತೊಡಿಗೆ ಚುಚ್ಚಿಕೊಂಡು ಚೀರಾಡ್ಲಿಕತ್ತಾಳ. ಹ್ಯಾಂಗ ಸಾಯ್ಬೇಕು ಅನ್ನೋದನ್ನ ಹೇಳಿಹೋಗು ನಿಮ್ಮ ಗೆಳತಿಗೆ. ಬಾ ಲಗೂ. ರಕ್ತಾ ಸೋರಿಸಿಕೋತ್ತ ಕೂತಾಳ ಹೇಶಿ,' ಅಂತ ಹೇಳಿ ಫೋನಿಟ್ಟ. ಡಾಕ್ಟರಿಗೆ ಫೋನ್ ಮಾಡಿ ವಿನಂತಿ ಮಾಡಿಕೊಂಡನೋ ಅಥವಾ ಆವಾಜ್ ಹಾಕಿದನೋ ಅಂದುಕೊಂಡರು ಮಾಮಿ.

'ಮಾಮಿ, ನೀವು ಎದ್ದು ಬರ್ರಿ ಈಕಡೆ. ಅಕಿಗೆ ಏನೂ ಆಗಿಲ್ಲ. ಸುಮ್ಮನೇ ಸಾಯೋ ನಾಟಕ. ಇದು ಮೊದಲನೇ ಸಲ ಅಲ್ಲ. ಮಾತಿಗೊಮ್ಮೆ ಅಕಿ ಕೈಯಾಗ ಚಾಕು ಬರ್ತದ. ಕಾಯಿಪಲ್ಲೆ ಕಮ್ಮಿ ಹೆಚ್ಚತಾಳ. ಜಾಸ್ತಿ ತನ್ನ ತಾನೇ ಹೆಚ್ಚಿಕೊಳ್ಳತಾಳ. ಬರೇ ಡ್ರಾಮಾ ಬಾಜಿ. ಸಾಯ್ತೇನಿ, ಸಾಯ್ತೇನಿ ಅಂತ ರಂಪಾಟ. ಸಾಯೋದಿಲ್ಲ ಬಿಡೋದಿಲ್ಲ. ಇವತ್ತು ನೀವು ಬಂದೀರಿ ಅಂತ ಸ್ಪೆಷಲ್ ಎಫ್ಫೆಕ್ಟ್. ಹೋಗಿ ಹೋಗಿ ತೊಡಿಗೆ ಚಾಕು ಚುಚ್ಚಿಕೊಂಡು ಕೂತದ ಹುಚ್ಚು ಖೋಡಿ. ಅಕಿನ್ನ ಅಲ್ಲೇ ಬಿಟ್ಟು ಎದ್ದು ಬರ್ರಿ ನೀವು ಈಕಡೆ. ಈಗ ಬರ್ತಾಳ ಅಕಿ ಗೆಳತಿ. ಡಾಕ್ಟರಿಣಿಬಾಯಿ. ಬಂದು ಬ್ಯಾಂಡೇಜ್ ಮಾಡ್ತಾಳ. ಇಬ್ಬರೂ ಕೂಡಿ ನನಗೇ ಶಾಪಾ ಹಾಕ್ತಾರ. ಅಕಿ ಬಂದ ಕೂಡಲೇ ನಾನೂ ಹೊಂಟೆ. ನನಗೂ ಸಾಕಾಗಿ ಬಿಟ್ಟದ ಇಕಿ ಕಾಲದಾಗ,' ಅಂದ ಮಾಧವ. ಎಲ್ಲಿಗೆ ಹೋಗುತ್ತಾನೆ ಅಂತ ಕೇಳುವ ಜರೂರತ್ತಿರಲಿಲ್ಲ. ಮತ್ತೆಲ್ಲಿಗೆ? ಮನೆಯಲ್ಲಿ ಆದ ಲಫಡಾದಿಂದ ತಲೆ ಕೆಟ್ಟಿದೆ. ಬಾರಿಗೆ ಸ್ವಲ್ಪ ಬೇಗನೆ ಹೋಗುವ ವಿಚಾರದಲ್ಲಿದ್ದಾನೆ.

'ಮಾಮಿ, ನೀವೂ ಹೊಂಡ್ರಿ. ನಮ್ಮ ದರಿದ್ರ ಸಂಸಾರದಾಗ ಇದೆಲ್ಲಾ ಇದ್ದಿದ್ದೆ. ಅಲ್ಲಿ ಮನಿಯಾಗ ಮಾಮಾ ಒಬ್ಬರೇ ಇರಬೇಕು. ಮಧ್ಯಾಹ್ನ ಚಹಾದ ಹೊತ್ತಾತು. ಮನಿಗೆ ಹೋಗಿ ಮಾಮಾಗ ಚಹಾ ಮಾಡಿ ಕೊಡ್ರಿ. ನಮಸ್ಕಾರ ಹೇಳ್ರಿ. ಬಂದು ಭೆಟ್ಟಿಯಾಗತೇನಿ ನಾನು. ಏ! ಅಕಿನ್ನ ಅಲ್ಲೇ ಒಗೆದು ಎದ್ದು ಬರ್ರಿ. ಏನು ಜುಲ್ಮಿ ಮಾಡಿಕೋತ್ತ  ಕೂತೀರಿ ಅಕಿನ್ನ? ಡ್ರಾಮಾ ಕ್ವೀನ್ ಅಕಿ!' ಅಂದ ಮಾಧವ.

ಅಷ್ಟರಲ್ಲಿ ಯಾರೋ ಕಾಲಿಂಗ್ ಬೆಲ್ ಒತ್ತಿದರು. ಮಾಧವನೇ ಹೋಗಿ ಬಾಗಿಲು ತೆಗೆದ. ಡಾಕ್ಟರಿಣಿಬಾಯಿ ನಿಂತಿದ್ದಳು. ಮಾಧವನನ್ನು ಕಡೆಗಣಿಸಿ ಒಂದು ಲುಕ್ ಕೊಟ್ಟು, 'ಇದು ಸರಿಯಲ್ಲ' ಅನ್ನುವಂತೆ ತಲೆಯಾಡಿಸಿದಳು.

ಮಾಮಿ ಕಂಡಳು. ಎಲ್ಲ ಪರಿಚಿತರೇ. 'ನಮಸ್ಕಾರ್ರಿ, ಮಾಮಿ. ಆರಾಮರೀ?' ಅಂತ ಮಾಮಿಯನ್ನು ಕೂಡ ವಿಚಾರಿಕೊಂಡಳು ಡಾಕ್ಟರಿಣಿಬಾಯಿ. ಮಾಮಿ ದಂಗಾಗಿ ನಿಂತಿದ್ದರು.

'ಏನಲೇ ವೀಣಿ? ಏನಿದು ಅವತಾರ? ಈ ಸಲೆ ಎಲ್ಲೆ ಹೊಲಿಗೆ ಹಾಕೋದು ಅದ? ಏನಲೇ ಇದು? ಮಾತಿಗೊಮ್ಮೆ ಚಾಕು ಚುಚ್ಚಿಕೊಳ್ಳತಿಯಲ್ಲಲೇ??? ಹಾಂ?' ಅನ್ನುತ್ತ ಗೆಳತಿಯ ಶುಶ್ರೂಷೆಗೆ ನಿಂತಳು.

ಮಾಮಿ ಎದ್ದು ಹೊರಟರು. ಆಗ ತಾನೇ ಎಂಟ್ರಿ ಕೊಟ್ಟಿದ್ದ ಡಾಕ್ಟರಿಣಿಬಾಯಿಯ ಹತ್ತಿರವೂ ಚಂದಾ ವಸೂಲಿ ಮಾಡಲೇ ಅಂತ ವಿಚಾರ ಮಾಡಿದರು. ಬೇಡ ಅಂತ ಬಿಟ್ಟರು. ಎದ್ದು ತಮ್ಮ ಸಾಮಾನು ಸರಂಜಾಮು ಹೊಂದಿಸಿಕೊಂಡು ಎಲ್ಲರಿಗೂ ಹೇಳಿ ಹೊರಟರು.

ಮಾಧವ ವೀಣಾರ ಮನೆ ಬಿಟ್ಟು ಹೊರಗೆ ಬಿದ್ದಿದ್ದರೋ ಇಲ್ಲವೋ ಎದುರಿಗೇ ಕಂಡಿತು - 'ಅಪ್ಸರಾ ಬ್ಯೂಟಿ ಪಾರ್ಲರ್'.

ವೀಣಾ ತನ್ನ 'ಹಾದರಗಿತ್ತಿ ಹಜಾಮತಿ'.... ಛೀ.... ಛೀ... ಅಲ್ಲಲ್ಲ.... ಬಾಬ್ ಕಟ್ ಅಲ್ಲಿಯೇ ಮಾಡಿಸಿದ್ದಳೇ? ಅನ್ನುವ ವಿಚಾರ ಮಾಮಿಯ ಮನದಲ್ಲಿ ಮೂಡಿತೇ?

ಗೊತ್ತಿಲ್ಲ. ಕೇಳಬೇಕು.

4 comments:

sunaath said...

ಇದನ್ನು ಮೊದಲೊಮ್ಮೆ ನಿಮ್ಮ blogನಲ್ಲಿ ಓದಿದ್ದೆನೆ? ಪರವಾ ಇಲ್ಲ, ಎಷ್ಟು ಸಲ ಓದಿದರೂ ರಂಜಿಸುವ ಕಥಾನಕವಿದು.

Mahesh Hegade said...

ಇರಲಿಕ್ಕಿಲ್ಲ ಸುನಾಥ್ ಸರ್. ಇಂತಹ ಯಾವದೇ ಲೇಖನ ಬರೆದ ನೆನಪಿಲ್ಲ.

ಥ್ಯಾಂಕ್ಸ್ ಸರ್.

Kushi said...

Sir....thumba chennagide... bhasheinda...kathege mattashtu kick sikkide (nim dharwada da bhashe...:-))

Mahesh Hegade said...

ತುಂಬಾ ಧನ್ಯವಾದ ಖುಷಿ. ಧಾರವಾಡ ಭಾಷೆ ಇಷ್ಟವಾಗಿದ್ದು ಸಂತೋಷ. ಒಮ್ಮೊಮ್ಮೆ ಅನಿಸುತ್ತಿರುತ್ತದೆ - ಧಾರವಾಡ ಭಾಷೆ ಜಾಸ್ತಿ ಬಳಸಿಬಿಟ್ಟರೆ ಉಳಿದ ಕನ್ನಡಿಗರಿಗೆ ಅರ್ಥವಾಗುತ್ತದೋ ಇಲ್ಲವೋ ಅಂತ. ನಿಮ್ಮಂತವರು ತಿಳಿಸಿದಾಗ ಅಂತಹ ಆತಂಕ ದೂರವಾಗುತ್ತದೆ.