Thursday, June 02, 2016

ಎಲ್ಲ MRS ಕೃಪೆ! MRS ಗೆ ದೊಡ್ಡ ನಮಸ್ಕಾರ!

'ನಿಮ್ಮ ಕಾರ್ ಏನೂ ಜಾಸ್ತಿ ಎಣ್ಣೆ (oil) ಕುಡಿಯುತ್ತಿಲ್ಲ. ಏನೂ ರಿಪೇರಿ ಬೇಕಾಗಿಲ್ಲ,' ಅಂದ ಮೆಕಾನಿಕ್.

'ಕಾರಿನ ಮಾಲೀಕರೂ ಅಷ್ಟೇ. ಜಾಸ್ತಿ ಎಣ್ಣೆ ಕುಡಿಯೋದಿಲ್ಲ. ಹಾಗಾಗಿ ಕಾರ್ ಕೂಡ ಜಾಸ್ತಿ ಎಣ್ಣೆ ಕುಡಿಯೋದಿಲ್ಲ. ಹಿತಮಿತವಾಗಿ ಎಣ್ಣೆ ಕುಡಿಯುತ್ತೆ!' ಅಂತ ಬ್ಯಾಗ್ರೌಂಡಿನಲ್ಲಿ ನಟ ಜಗ್ಗೇಶ್ ಅವರ ವಿಶಿಷ್ಟ ಶೈಲಿಯಲ್ಲಿ ಕಿಚಾಯಿಸಿದಂತಾಯಿತು. ನೋಡಿದರೆ ಜಗ್ಗೇಶ್ ಟೈಪಿನ ಜನ ಯಾರೂ ಕಾಣಲಿಲ್ಲ. 'ಎದ್ದೇಳು ಮಂಜುನಾಥ' ಸಿನೆಮಾದಲ್ಲಿ ಜಗ್ಗೇಶರಿಗೆ ಆದಂತಹದ್ದೇ ಭ್ರಮೆ ಅಂತ ಕಾಣಿಸುತ್ತದೆ.

'ಕಾರಿನ ಎಣ್ಣೆ ಸೇವನೆ ಎಲ್ಲಾ ಬರೋಬ್ಬರಿ ಇದೆ. ರಿಪೇರಿ ಗಿಪೇರಿ ಬೇಡ,' ಅಂತ ಕೇಳಿ ನಿರುಮ್ಮಳವಾಯಿತು.

ಎಲ್ಲಾ MRS ಕೃಪೆ ಅಂದುಕೊಂಡು ಅಲ್ಲೇ MRS ಗೆ ಒಂದು ನಮಸ್ಕಾರ ಹಾಕಿದೆ.

ಅದೇನಾಗಿತ್ತು ಅಂದರೆ ಐದಾರು ತಿಂಗಳ ಹಿಂದೆ ಟೊಯೋಟಾ ಕಂಪನಿ ಒಂದು ಪತ್ರ ಹಾಕಿದ್ದರು. 'ಇಂತಹ ವರ್ಷದ, ಇಂತಹ ಮಾಡೆಲ್ಲಿನ ಕೆಲವು ಕಾರುಗಳು ಸಿಕ್ಕಾಪಟ್ಟೆ ಎಣ್ಣೆ ಕುಡಿಯುತ್ತಿವೆ. ಕೆಲವುಗಳ ಇಂಜಿನ್ ಕೂಡ ಶಿವಾಯ ನಮಃ ಆಗಿಹೋಗಿದೆ. ಹತ್ತಿರದ ಟೊಯೋಟಾ ಡೀಲರ್ ಹತ್ತಿರ ಹೋಗಿ ಟೆಸ್ಟ್ ಮಾಡಿಸಿ. ನಿಮ್ಮ ಕಾರ್ ಕೂಡ ಸಿಕ್ಕಾಪಟ್ಟೆ ಎಣ್ಣೆ ಹೊಡೆಯೋ ಅಲ್ಲಲ್ಲ ಕುಡಿಯೋ ಗಿರಾಕಿಯಾಗಿದ್ದರೆ ರಿಪೇರಿ ಮಾಡಿಕೊಡಲಾಗುತ್ತದೆ. ಎಲ್ಲ ಉಚಿತ. ಗ್ರಾಹಕರಿಗಾಗಿ ಟೊಯೋಟಾದ ಕೊಡುಗೆ,' ಅಂತ ಏನೋ ಬಂದಿತ್ತು. ಬರುತ್ತಲೇ ಇರುತ್ತವೆ. ವರ್ಷಕೊಮ್ಮೆ ಆ recall, ಈ recall ಅಂತ ಏನೇನೋ ಪತ್ರ ಬರುತ್ತಿರುತ್ತದೆ. ಎಲ್ಲ ಕಾರ್ ಕಂಪನಿಗಳ ಹಣೆಬರಹವೇ ಅಷ್ಟು. ಕಾರಿನಲ್ಲಿ ಕಂಪ್ಯೂಟರ್ ಜಾಸ್ತಿಯಾಗಿ, ಕಂಪ್ಯೂಟರಿನ ಕ್ರಿಮಿಗಳು ಉರ್ಫ್ bugs ಎಲ್ಲಾ ಕಾರಿನಲ್ಲಿ ಸೇರಿ ರಾಮರಾಡಿ ಎದ್ದಿದೆ ಅಂತ ಕಾಣುತ್ತದೆ. ಎಲ್ಲ ನಮ್ಮಂತಹ ಕಂಪ್ಯೂಟರ್ ಕೂಲಿಗಳ ಕಾಣಿಕೆ.

ಹಂ! ನೋಡಿದರೆ ನಮ್ಮ ಹಳೇ ಓಬಿರಾಯನ ಕಾಲದ ಕಾರು ಕೂಡ ಅದೇ ವರ್ಷದ್ದು. ಅದೇ ಮಾಡೆಲ್. ತಪಾಸಣೆ ಉಚಿತ, ಏನಾದರೂ ಪ್ರಾಬ್ಲಮ್ ಇದ್ದರೆ ರಿಪೇರಿ ಉಚಿತ ಅಂತ ಹಾಕಿದ್ದರು ನೋಡಿ. ಉಚಿತ ಉರ್ಫ್ ಬಿಟ್ಟಿ ಅಂದರೆ ನನಗೊಂದು ನಮ್ಮಪ್ಪನಿಗೊಂದು ಅಂತ ಫೀಲಿಂಗ್ ಬರೋದು ಸಹಜ. ಮತ್ತೆ ಎಲ್ಲಿಯಾದರೂ ಎಣ್ಣೆ ಜಾಸ್ತಿ ಕುಡಿದೂ ಕುಡಿದೂ ಇಂಜಿನ್ ಶಿವಾಯ ನಮಃ ಆಗಿಬಿಟ್ಟರೆ ಕಾರನ್ನು ಗುಜರಿಗೆ ಹಾಕಬೇಕಾಗುತ್ತದೆ ಅಷ್ಟೇ. ಯಾಕೆಂದ್ರೆ ಇಂಜಿನ್ ರಿಪೇರಿ ಗಿಪೇರಿ ಅಂತ ಕೂತರೆ ಕಮ್ಮಿ ಕಮ್ಮಿಯೆಂದರೂ ಐದಾರು ಸಾವಿರ ಡಾಲರುಗಳಿಗೆ ಕೆಲಶಿ ರಾಮನ ಬಡ್ಡು ಕೂಪು ಹಚ್ಚಿ ನೀರಿಲ್ಲದೆ ಬೋಳು ಕೆತ್ತಿಸಿಕೊಂಡಂತೆಯೇ. ಯಾರಿಗೆ ಬೇಕು ಆ ರಿಸ್ಕ್? ಹಾಗಂತ ವಿಚಾರ ಮಾಡಿ ನಾಲ್ಕಾರು ತಿಂಗಳ ಹಿಂದೆ ಸರ್ವೀಸಿಗೆ ತೆಗೆದುಕೊಂಡು ಹೋದಾಗ, 'ಅಣ್ಣಾ, ಅದೇನೋ ಕಾರಿನ ಎಣ್ಣೆ ಕುಡಿತದ ಟೆಸ್ಟ್ ಮಾಡ್ತೀರಂತೆ? ನಮ್ಮದಕ್ಕೂ ಸ್ವಲ್ಪ ಮಾಡಿ. ಎಲ್ಲಿ ಮುಂಡೇದು ಜಾಸ್ತಿ ಎಣ್ಣೆ ಕುಡಿಯುತ್ತಿದೆಯೇನೋ? ಗೊತ್ತಾಗಲ್ಲ ಕಣಣ್ಣ,' ಅಂದಿದ್ದೆ. ಅಷ್ಟು ವಿನಯದಿಂದ ಕೇಳಿದ್ದಕ್ಕೆ ಮಾಡಿದ್ದ. ಯಾಕೆಂದರೆ appointment ಕೇವಲ ಸರ್ವೀಸ್ ಮಾಡಲು ಮಾತ್ರ ಇತ್ತು. ಇದಕ್ಕೆ ಅಂತ ಬೇರೆ appointment ಬುಕ್ ಮಾಡಬೇಕಿತ್ತು. ತರಲೆ. ಮಾಡದೇ ಹೋಗಿದ್ದೆ. ಅಲ್ಲಿ ಹೋಗಿ, 'ಸ್ವಲ್ಪ ಅಡ್ಜಸ್ಟ್ ಮಾಡಿ,' ಅಂದಿದ್ದೆ. ಚೊಣ್ಣ ಹಾಕಿಕೊಂಡು, ಫುಲ್ ಬೆಂಡಾಗಿ, ಗೌರವದಿಂದ ಅಣ್ಣಾ, ಪಣ್ಣಾ ಅಂದಿದ್ದಕ್ಕೋ ಏನೋ ಗೊತ್ತಿಲ್ಲ. ಕೇಳಿಕೊಂಡಂತೆ ಸ್ವಲ್ಪ ಅಡ್ಜಸ್ಟ್ ಮಾಡಿದ್ದ.

ಈ ಎಣ್ಣೆ ಕುಡಿಯೋ ತಪಾಸಣೆ ಒಂದು ಪಟ್ಟಿಗೆ ಆಗುವಂತದ್ದಲ್ಲ ಅಂತ ಆವಾಗಲೇ ಗೊತ್ತಾಗಿದ್ದು. ಅದಾದ ನಂತರ ೧೧೦೦ ಮತ್ತು ೧೩೦೦ ಮೈಲುಗಳ ಅಂತರದಲ್ಲಿ ಮತ್ತೊಮ್ಮೆ ತರಲು ಹೇಳಿದ. ಕೆಟ್ಟ ಬೋರಿಂಗ್. ವರ್ಷಕ್ಕೆ ಒಂದು ಸಲ ಸರ್ವೀಸಿಂಗಿಗೆ ತೆಗೆದುಕೊಂಡು ಹೋಗಲೇ ನಮಗೆ ಕೆಟ್ಟ ಬೋರ್. ಈಗ ಈ ಎಣ್ಣೆ ಗಿರಾಕಿಗಾಗಿ ಮತ್ತೊಮ್ಮೆ ಹೋಗಬೇಕೇ??

ಸರಿ ಅಂತ ಹೇಳಿ ಬಂದಿದ್ದೆ. ಬಾನೆಟ್ ತೆಗೆದು ನೋಡಿದರೆ oil chamber, oil dipstick ಎಲ್ಲ ಸೀಲ್ ಮಾಡಿದ್ದರು. 'ಸೀಲ್ ಒಡೆದರೆ ಟೆಸ್ಟ್ void!' ಅಂತ ಎಚ್ಚರಿಕೆ ಬೇರೆ ಅದರ ಮೇಲೆ. 'ಹೌದಪ್ಪಾ, ಸೀಲ್ ಬಹಳ ಇಂಪಾರ್ಟೆಂಟ್. ಸೀಲ್ ಒಡೆದ ಮೇಲೆ ಎಲ್ಲವೂ void ಅಣ್ಣಾ! ಹಾಗಾಗಿ ಎಲ್ಲರೂ ಎಲ್ಲ ಸೀಲ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು!' ಅಂತ ಅಂದುಕೊಂಡೆ.

ಸರಿ ಹೇಗೂ ೧೧೦೦ ರಿಂದ ೧೩೦೦ ಮೈಲುಗಳ ಮಧ್ಯೆ ವಾಪಸ್ ತೆಗೆದುಕೊಂಡುಹೋಗಬೇಕು ತಾನೇ? ಹೋದರಾಯಿತು ಅಂದುಕೊಂಡೆ. ಮರೆತುಬಿಟ್ಟಿದ್ದೆ. ಮನ್ನಿತ್ತಲಾಗೆ ನೆನಪಾಗಿತ್ತು. ಅಲ್ಲೇ ಬಾಯಿ ಲೆಕ್ಕ ಮಾಡಿದೆ. ಹೇಗೂ ಇನ್ನೂ ಒಂದು ನೂರು ನೂರವೈತ್ತು ಮೈಲು ಮಾರ್ಜಿನ್ ಇದೆ. ಹೋಗಿಬಂದರಾಯಿತು ಅಂದುಕೊಂಡೆ. ಕಳೆದ ವಾರಾಂತ್ಯ ಮೂರು ದಿನ ರಜೆ ಬಂದು, U Turn ಸಿನೆಮಾ ನೋಡಲು ಅಲ್ಲಿಲ್ಲಿ ಹೋಗಿ ಬಂದು ಮಾಡಿದ್ದಕ್ಕೆ ಸುಮಾರು ಪ್ರಯಾಣವಾಗಿತ್ತು. ಹಾಗಾಗಿ ಇನ್ನೂ ತಡಮಾಡಿದರೆ ೧೩೦೦ ಮೈಲು ದಾಟಿಬಿಟ್ಟರೆ ಟೆಸ್ಟ್ void ಆಗಿಬಿಡುತ್ತದೆ. ಮತ್ತೊಮ್ಮೆ ಮಾಡಿಸಬೇಕು ಅಂದರೆ ದೊಡ್ಡ ತಲೆನೋವು. ಹಾಗಾಗಿ ಇವತ್ತೇ ಹೋಗಬೇಕು ಅಂತ ಹೋದೆ.

ಹೋಗಿ ನೋಡಿದರೆ!

೧೨೯೭ ಮೈಲುಗಳು. ಇನ್ನು ಮೂರು ಮೈಲು ಜಾಸ್ತಿಯಾಗಿಬಿಟ್ಟಿದ್ದರೆ ೧೩೦೦+ ಆಗಿಬಿಡುತ್ತಿತ್ತು. ಟೆಸ್ಟ್ void. ಸೀಲ್ ಒಡೆಯದಿದ್ದರೂ ಒಮ್ಮೊಮ್ಮೆ ಬೇರೆ ಕಾರಣಕ್ಕೆ void ಆಗಿಬಿಡುವ ರಿಸ್ಕ್ ಇರುತ್ತದೆ. ಅಂತೂ ಇಂತೂ ಮೂರು ಮೈಲಿನಲ್ಲಿ ಬಚಾವ್!

ಮತ್ತೊಮ್ಮೆ MRS ಕೃಪೆ. ಮೂರು ಮೈಲಿನಿಂದ ಬಚಾವ್ ಮಾಡಿಬಿಟ್ಟ.

ಎಣ್ಣೆ ತಪಾಸಣೆ ಎಲ್ಲ ಮುಗಿಯಿತು. ಏನೂ ತೊಂದರೆ ಇಲ್ಲ ಅಂದರು.

ಮತ್ತೊಮ್ಮೆ MRS ಗೆ ನಮಸ್ಕಾರ ಹೇಳಿದೆ.

ಇವತ್ತು ಗುರುವಾರ. ಅಪರೂಪಕ್ಕೆ ಬೆಳಿಗ್ಗೆ ಬೆಳಿಗ್ಗೆಯೇ MRS ನೆನಪಾಗಿದ್ದರು. ಸಂಕಟ ಬಂದಾಗ ವೆಂಕಟರಮಣ ಅನ್ನುವ ರೀತಿಯಲ್ಲಿ MRS ನೆನಪಾಗಿದ್ದರು.

MRS ನೆನಪಾಗಲು ಕಾರಣವೂ ಇತ್ತು. ಸುಮಾರು ಒಂದು ವಾರದ ಮೇಲೆ ಆಫೀಸಿನ ನೆನಪಾಗಿತ್ತು. ಹೋಗಬೇಕಾಗಿತ್ತು. ಕಳೆದ ವಾರಾಂತ್ಯ ಲಾಂಗ್ ವಾರಾಂತ್ಯ. ಮೆಮೋರಿಯಲ್ ಡೇ ಅಂತ ಸೋಮವಾರ ಕೂಡ ರಜೆ. ಲಾಂಗ್ ವಾರಾಂತ್ಯ ಅಂತ ಕಳೆದ ಶುಕ್ರವಾರ ಅರ್ಧ ದಿನಕ್ಕೇ ಅಂಗಡಿ ಬಂದ್ ಮಾಡಿದ್ದೆ. ಅದು ರೂಢಿ. ಮೂರು ಪ್ಲಸ್ ದಿನಗಳ ವಾರಾಂತ್ಯ ಮುಗಿದ ಮರುದಿನ ಅಂದರೆ ಮಂಗಳವಾರ ಎಲ್ಲೋ ಹೊರಗೆ ಟ್ರೇನಿಂಗ ಅಂತ ಹೋಗಿಬಿಟ್ಟೆ. ಬುಧವಾರವೂ ಟ್ರೇನಿಂಗ. ಹಾಗೆಲ್ಲ ಹೊರಗೆ 'ಕೆಲಸದ' (!) ಮೇಲಿದ್ದಾಗ ನಾವು ಆಫೀಸಿನ ಕೆಲಸ ಮಾಡುವದಿಲ್ಲ. ಇಮೇಲ್ ಕೂಡ ನೋಡುವದಿಲ್ಲ. ಇವತ್ತು ಬೆಳಿಗ್ಗೆ ಎದ್ದು ಸುಮ್ಮನೇ ಇಮೇಲ್ ಕೌಂಟ್ ನೋಡಿದರೆ ಐದುನೂರು ಓದದ ಈಮೇಲುಗಳು. ರಜೆ ಹಾಕಿ ಮಲಗಿಬಿಡೋಣ ಅನ್ನಿಸಿತ್ತು. ಹೇಗೂ ಇವತ್ತು ಗುರುವಾರ ರಜೆ ಹಾಕಿ, ಬೆಚ್ಚಗೆ ಹೊದ್ದುಕೊಂಡು ತಾಚಿ ತಾಚಿ ಮಾಡಿಬಿಟ್ಟರೆ ನಾಳೆ ಶುಕ್ರವಾರ. working from home. ಟೀಮಿನ ಮಹಾಲಕ್ಷ್ಮಿಯರಿಗೆ ಬಾಗೀನ ಕೊಟ್ಟು, ವೆಂಕಪ್ಪಗಳಿಗೆ ನಾಮ ಎಳೆದುಬಿಟ್ಟರೆ ಶುಕ್ರವಾರ ಮುಗಿಯುತ್ತದೆ. ಮತ್ತೆ ವಾರಾಂತ್ಯ. ಹೀಗೆ ವಿಚಾರ ಮಾಡಿ ತಾಚಿ ಮಾಡೋಣ ಅಂತ ಮುಸುಕೆಳೆಯಲು ರೆಡಿ ಆದಾಗ ಇದು ನೆನಪಾಯಿತು. ಕಾರ್ ಎಣ್ಣೆ ಸೇವನೆ ತಪಾಸಣೆ. ಅಷ್ಟರಲ್ಲಿ ಬಾಸ್ ಕೂಡ SMS ಮಾಡಿದ. 'ಏನೋ ರಾಡಿ ಎದ್ದಿದೆ. ಸಾಫ್ ಮಾಡಲು ಸಹಾಯದ ಅಗತ್ಯವಿದೆ,' ಅಂದ. 'ಓಹೋ! ಇವತ್ತು ಸಫಾಯಿ ಕರ್ಮಚಾರಿ ಕೆಲಸ. ಹೋಗಲಿಕ್ಕೇಬೇಕು. ಇಲ್ಲವಾದರೆ ನಾಳೆ, ಅದೂ ಶುಕ್ರವಾರ, ತಲೆ ಕೆಟ್ಟು ನಪರೆದ್ದು ಹನ್ನೆರಡಾಣೆ ಆಗಿಹೋಗುವಷ್ಟು ಕೆಲಸ ಬಂದುಬಿಡುತ್ತದೆ,' ಅಂತ ಹೆದರಿಕೆ ಉಂಟಾಗಿ ಎದ್ದೆ. ಪುಣ್ಯಕ್ಕೆ ಕಾರ್ ಎಣ್ಣೆ ತಪಾಸಣೆಯ appointment ಇತ್ತು.

ಕಾರ್ ಸರ್ವೀಸಿಗೆ ಬಿಟ್ಟು ಅವರದ್ದೇ ಕಾರಿನಲ್ಲಿ ಲಿಫ್ಟ್ ತೆಗೆದುಕೊಂಡು ಆಫೀಸಿಗೆ ಬಂದರೆ ಎದಿದ್ದ ಎಲ್ಲ ರಾಡಿ ತಂತಾನೇ ಸ್ವಚ್ಛವಾಗಿಬಿಟ್ಟಿದೆ! ಸ್ವಚ್ಛ ಮಾಡಿ, ನಮ್ಮನ್ನು ಆ ರಾಡಿಯಿಂದ ಕಾಪಾಡಿದ ತಮ್ಮನಂತಹ ಹುಡುಗರ, ತಂಗಿಯರಂತಹ ಹುಡುಗಿಯರ ಬೆನ್ನು ತಟ್ಟುವ ಮೊದಲು (ಬೆನ್ನು ಸವರುವ ಮೊದಲು ಅಲ್ಲ ಮತ್ತೆ) ನೆನಪಾಗಿದ್ದು ಇದೇ MRS. 'ನಿನ್ನ ಕೃಪೆ ಅಪಾರ MRS. ಎಂದೂ ನೆನೆಯದವ ಇಂದು ನೆನೆದೆ. ಎಲ್ಲ ಕಷ್ಟಗಳನ್ನೂ ಹೂವು ಎತ್ತಿದಷ್ಟು ಸರಾಗವಾಗಿ ಪರಿಹರಿಸುತ್ತಿರುವೆಯೆಲ್ಲ ತಂದೇ!? ನಿನಗೆ ದೊಡ್ಡ ನಮಸ್ಕಾರ MRS!' ಅಂತ MRS ಗೆ ಮತ್ತೆ ನಮಿಸಿದೆ.

ಜಮಾ ಆಗಿದ್ದ ಐದುನೂರು ಈಮೇಲುಗಳನ್ನು ಓದಲಿಲ್ಲ. ಓದುವ ಇರಾದೆಯೂ ಇಲ್ಲ. ಇಂಪಾರ್ಟೆಂಟ್ ಇದ್ದರೆ ಮತ್ತೆ ಮೇಲ್ ಮಾಡುತ್ತಾರೆ. ಇನ್ನೂ ಇಂಪಾರ್ಟೆಂಟ್ ಇದ್ದರೆ ಫೋನ್ ಮಾಡುತ್ತಾರೆ. ಬಂದ ಇಮೇಲ್ ಎಲ್ಲ ಓದುತ್ತ ಕೂತರೆ ಇದ್ದ ಆಯುಷ್ಯ ಸಾಕಾಗುವದಿಲ್ಲ. ಏನೋ ತಲೆಗೆ ಬಂತು ಆ ಕ್ಷಣದಲ್ಲಿ ಒಂದು ಇಮೇಲ್ ಒಗಾಯಿಸಿರುತ್ತಾರೆ. ಅದನ್ನು ನೀವು ಮೂರು ದಿವಸಗಳ ನಂತರ ಓದಿ, ತಲೆ ಖರ್ಚು ಮಾಡಿ, ಅದಕ್ಕೊಂದು ವಿವರವಾದ ಉತ್ತರ ರೆಡಿ ಮಾಡಿ ಕಳಿಸಿದರೆ ಅವರಿಗೆ ಅಸಲಿ ವಿಷಯವೇ ಮರೆತುಹೋಗಿರುತ್ತದೆ. ಮೇಲಿನ, ಫೀಮೇಲಿನ ಆಯುಷ್ಯ ಎಷ್ಟೇ ಅದರೂ ಈಮೇಲಿನ ಆಯುಷ್ಯ ಹೆಚ್ಚೆಂದರೆ ನಾಲ್ಕು ಘಂಟೆ. ಅದರ ಮೇಲೆ ಅದರ ಬಗ್ಗೆ ಅದನ್ನು ಕಳಿಸಿದವರಿಗೇ ನೆನಪಿರುವದಿಲ್ಲ. ಅರ್ಥ ಆಯ್ತಾ? ಇಮೇಲ್ ಎಲ್ಲಾ ಬಂದಾಗ್ಬೇಕ್! ನನ್ಮಗಂದ್! :)

ಸರಿ, ಹೀಗೆ MRS ಕೃಪೆಯಿಂದ ಎಲ್ಲ ಸಾಂಗೋಪಸಾಂಗವಾಗಿ ಸಾಗಿತು. ಬಗೆಹರಿಯಿತು. ಗುರುವಾರದಂದೇ ಶನಿ ಬಂದು ವಕ್ಕರಿಸುವ ಎಲ್ಲ ಸಾಧ್ಯತೆಗಳಿದ್ದವು. ಅದೇನೋ ಬೆಳಿಗ್ಗೆ ಎದ್ದೇಳುತ್ತಿದ್ದಂತೆಯೇ MRS ನೆನಪು. ನೆನಪಾದ ತಕ್ಷಣ ಭಕ್ತಿ. ಭಕ್ತಿ ಬಂದ ಕೂಡಲೇ ಸ್ತೋತ್ರ. ಸ್ತೋತ್ರ ಹೇಳುತ್ತ ಹೇಳುತ್ತ ಭಕ್ತಿಯಲ್ಲಿಯೇ ಫುಲ್ ಸಿಂಕು.

ಅಂದ ಹಾಗೆ ಇವತ್ತು ಇಷ್ಟೆಲ್ಲಾ ಕೃಪೆ ತೋರಿಸಿ, ಆಶೀರ್ವದಿಸಿ, ಸಲುಹಿ, ಎಲ್ಲ ಕಷ್ಟ ನಿವಾರಣೆ ಮಾಡಿದ MRS ಯಾರು ಅಂದುಕೊಂಡ್ರಾ? ಅವರೇ MRS. ಅವರೇ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು! MRS ಅಂದ್ರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಅಂತ. DMS ಅಂದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಅಂತ. TVS ಅಂದ್ರೆ? ಮೊಪೆಡ್ ಅಲ್ಲರೀ. ತಿರುಪತಿ ವೆಂಕಪ್ಪ ಸ್ವಾಮಿ ಅಂತ. ಎಲ್ಲರ ಕರುಣೆ, ಆಶೀರ್ವಾದ ಇರಲಿ. ನಾಳೆ ಶುಕ್ರವಾರ. 'ಶನಿವಾರದ ಶನಿ ಸ್ವಾಮೀ, ನಾಳೇನೇ ಬಂದು ಅಟಕಾಯಿಸಿಕೊಂಡುಬಿಡಬೇಡ ತಂದೆ. ಕೆಲಸ ಮಾಡಿ, ಮಾಡಿ ಸುಸ್ತಾಗಿ ಬಿಟ್ಟಿದೆ. ಬೇಗನೆ ಕೆಲಸ ಮುಗಿಸಿ, ವೀಕೆಂಡ್ ಶುರುಮಾಡಲು ಅನುವು ಮಾಡಿಕೊಡು ತಂದೇ!! :)

4 comments:

sunaath said...

ಇಷ್ಟೆಲ್ಲಾ ದೇವರುಗಳು ನಿಮ್ಮ ಕಿಸೆಯಲ್ಲಿ ಇದ್ದಾರಂದರ, ನಿಮ್ಮ ಕೆಲಸ ಸುಸೂತ್ರ ಆಗಲೇಬೇಕು. ಆದರೂ ಇನ್ನಿಬ್ಬರು ದೇವರುಗಳನ್ನು ಬಿಟ್ಟೀರಿ. ಅವರಿಗೂ ಅಷ್ಟು ನಮಸ್ಕಾರ ಹಾಕರಿ:SSE ಮತ್ತು SKM (ಶ್ರೀ ಸವದತ್ತಿ ಎಲ್ಲಮ್ಮ & ಶ್ರೀ ಕೊಲ್ಲೂರು ಮೂಕಾಂಬಿಕಾ).
ದೇವರು ನಿಮಗೆ ಒಳ್ಳೇದು ಮಾಡಲಿ.

Mahesh Hegade said...

SSE, SKM ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ. ಹಾಕೇ ಬಿಡೋದು....ನಮಸ್ಕಾರ.

Anonymous said...

Just a small correction. Bestwara is thursday.

Mahesh Hegade said...

Corrected. Thank you for the correction!