Wednesday, September 28, 2016

ಕುಲಗೆಟ್ಟುಹೋಗುತ್ತಿರುವದು ಅಂದರೆ ಇದೇನಾ?

ನಮ್ಮ ಜನ ಕುಲಗೆಟ್ಟುಹೋಗುತ್ತಿರುವದು ಅಂದರೆ ಇದೇನಾ? ಎಂದು ಅನ್ನಿಸಿದ್ದು ಮೊನ್ನೆ ಈ ಘಟನೆ ಕೇಳಿದ ನಂತರ.

ಆಗಿದ್ದಿಷ್ಟು. ಸಿರ್ಸಿ ಹತ್ತಿರದ ಹಳ್ಳಿ. ಯಾವದೋ ಒಂದು ದನ ಒಬ್ಬರ ಮನೆಯ ತೋಟಕ್ಕೋ ಗದ್ದೆಗೋ ನುಗ್ಗಿದೆ. ಪಾಪ ದನ. ಅದಕ್ಕೇನು ಗೊತ್ತು ಯಾವದು ಗದ್ದೆ, ಯಾವದು ತೋಟ ಅಂತೆಲ್ಲ? ಒಟ್ಟಿನಲ್ಲಿ ಹಸಿವಾಗಿದೆ. ಹೊಟ್ಟೆಗೊಂದಿಷ್ಟು ಹಸಿರನ್ನು ತುಂಬಿಸಿಕೊಳ್ಳೋಣ ಅಂತ ಹೊಕ್ಕಿದೆ. ಜನರ ದೃಷ್ಟಿಯಲ್ಲಿ ಅದು ಕಳ್ಳದನ.

ಕಳ್ಳದನ ನುಗ್ಗಿದೆ ಅಂದ ಮೇಲೆ ಸುಮ್ಮನೇ ಬಿಟ್ಟಾರೆಯೇ ಆ ತೋಟದ ಒಡೆಯರು? ಹಲಲಾಹಲಲಾ! ಅಂತ ಅಬ್ಬರಿಸುತ್ತ ಆ ತೋಟದ ಒಡೆಯ ಎಂಟ್ರಿ ಕೊಟ್ಟಿದ್ದಾನೆ. ಶೌರ್ಯ ಪರಾಕ್ರಮ ಉಪಯೋಗಿಸಿ ಆ ಪಾಪದ ದನವನ್ನು ಹಿಡಿದಿದ್ದಾನೆ. ಕಟ್ಟಿಹಾಕಿದ್ದಾನೆ.

ತನ್ನ ತೋಟಕ್ಕೆ ನುಗ್ಗಿದ ಕಳ್ಳ ದನವನ್ನು ಹಿಡಿದ, ಕಟ್ಟಿಹಾಕಿದ. ಎಲ್ಲ ಸರಿ. ಮುಂದೆ? ಮುಂದೆ ಏನು ಮಾಡುತ್ತಾರೆ ಅಂತ ನಮಗೆ ಗೊತ್ತೂ ಇರಲಿಲ್ಲ. ನಂತರ ಯಾರೋ ಹೇಳಿದರು ಅಂತಹ ದನಗಳನ್ನು ಅದೇನೋ ಪಾಂಜರಪೋಳಿಗೋ ಎಲ್ಲೋ ಬಿಟ್ಟುಬರುತ್ತಾರಂತೆ. ಪಾಂಜರಪೋಳ - ಹೆಸರೇ ವಿಚಿತ್ರವಾಗಿದೆ. ದನಗಳ ಒಂದು ತರಹದ ಅನಾಥಾಶ್ರಮ ಅಂದುಕೊಳ್ಳಿ. ಬೇವರ್ಸಿ ದನಗಳನ್ನು ಅಲ್ಲಿ ಕೂಡಿಡುತ್ತಾರೆ. ದನದ ಮಾಲೀಕರು ನಂತರ ಬೇಕಾದರೆ ಅಲ್ಲಿ ಹೋಗಿ, ದಂಡ ಪಿಂಡ ಕಟ್ಟಿ, ತಮ್ಮ ದನವನ್ನು ಬಿಡಿಸಿಕೊಂಡು ಬರಬಹುದು. ಬೇವರ್ಸಿ ದನಗಳ ಜೊತೆ ಡೀಲಿಂಗ್ ಮಾಡುವ ಪದ್ಧತಿಯಂತೆ ಅದು.

ಆದರೆ ಈ ಕಳ್ಳದನವನ್ನು ಹಿಡಿದವ ಹಾಗೆ ಮಾಡಿಲ್ಲ. ದುರ್ಬುದ್ಧಿ ಅದೂ ಪಾಕಡಾ ದುರ್ಬುದ್ಧಿ ತೋರಿಸಿದ್ದಾನೆ. ಖತರ್ನಾಕ್ ಕೆಲಸವೊಂದನ್ನು ಮಾಡಿಬಿಟ್ಟಿದ್ದಾನೆ.

ದನವನ್ನು ಸೀದಾ ಸಿರ್ಸಿ ಪೇಟೆಗೆ ಸಾಗಿಸಿದ್ದಾನೆ. ಅಲ್ಲಿ ಮಾರಿಬಿಟ್ಟಿದ್ದಾನೆ! ಶಿವಾಯ ನಮಃ! ಅದೂ ಯಾರಿಗೆ ಮಾರಿದ್ದಾನೆ???  ದನ ಸಾಗಾಣಿಕೆ ಮಾಡುವ ವೃತ್ತಿಪರರಿಗೆ. ಅವರು ಕೇರಳಕ್ಕೋ ಇನ್ನೆಲ್ಲೋ ದನ ಸಾಗಣೆ ಮಾಡುವವರು. ಯಾತಕ್ಕೆ ಅಂತ ಪ್ರತ್ಯೇಕವಾಗಿ ಹೇಳುವ ಜರೂರತ್ತಿಲ್ಲ ತಾನೇ? ಮತ್ಯಾಕೆ? ಕಡಿದು, ಮಾಂಸ ಮಾರಲಿಕ್ಕೆ. ಅಷ್ಟೇ. ಅಂತಹ ಜನರಿಗೆ ಮಾರಿ, ಬಂದಷ್ಟು ಕಾಸನ್ನು ಝಣಝಣ ಎಣಿಸುತ್ತ ಬಂದಿದ್ದಾನೆ. ತನ್ನ ಭಯಂಕರ ತಲೆಗೆ ತಾನೇ ಶಭಾಷಿ ಕೊಟ್ಟುಕೊಂಡಿದ್ದಾನೆ. ಮುಂದೆ ಆಗಲಿರುವ ಲಫಡಾದ ಬಗ್ಗೆ ಕನಸಿನಲ್ಲೂ ಎಣಿಸಿಲ್ಲ.

ನೋಡಿದರೆ ಆ ದನ ಒಬ್ಬ ಪರಿಶಿಷ್ಟ ವರ್ಗದ ಮನುಷ್ಯನದು. ದಲಿತನ ದನ. ಆತ ತನ್ನ ಕಳೆದುಹೋಗಿರುವ ದನದ ಬಗ್ಗೆ ವಿಚಾರಿಸಿದ್ದಾನೆ. ಯಾರಿಂದಲೋ ಮಾಹಿತಿ ಸಿಕ್ಕಿದೆ. 'ಹೀಗೀಗೆ ಆಗಿದೆ. ಇಂತವರ ಮನೆಯ ತೋಟಕ್ಕೆ ನಿನ್ನ ದನ ನುಗ್ಗಿತ್ತು. ಅವರು ಹಿಡಿದು ಅದನ್ನು ಪೇಟೆಯಲ್ಲಿ ಮಾರಿ ಬಂದಿದ್ದಾರೆ. ಇಷ್ಟೊತ್ತಿಗೆ ಆ ದನ ಆಗಲೇ 'ವಾತಾಪಿ ಜೀರ್ಣೋಭವ' ಆಗಿರಬಹುದು. ಆದರೂ ಹೋಗಿ ನೋಡಿ,' ಅಂತ ಹೇಳಿದ್ದಾರೆ.

ದನ ಕಳೆದುಕೊಂಡವ ಸಿಟ್ಟಿಗೆದ್ದು ಜಗಳಾಡಿದ್ದಾನೆ. ಸೀದಾ ಹೋಗಿ ಯಾವದೋ ಒಂದು ಭಯಂಕರ ಹಿಂದೂ ಸಂಘಟನೆಗೆ ದೂರು ನೀಡಿದ್ದಾನೆ. ಜೊತೆಗೆ ಪೊಲೀಸರಿಗೂ ದೂರು ಕೊಟ್ಟಿದ್ದಾನೆ. ಅಲ್ಲಿಗೆ ದನ ಹಿಡಿದು ನಂತರ ಪೇಟೆಯಲ್ಲಿ ಮಾರಿ ಬಂದವನ ಕುಂಡಲಿಯಲ್ಲಿ ಎರಡೆರೆಡು ಶನಿಗಳು ಒಮ್ಮೆಲೇ ವಕ್ಕರಿಸಿಕೊಂಡಿವೆ. ಒಂದು ಕಡೆ ಹಿಂದೂ ಸಂಘಟನೆಯ ಬಿಸಿ ರಕ್ತದ ಯುವಕರು, 'ದನವನ್ನು ಕಡಿದು ತಿನ್ನುವವರಿಗೆ ಮಾರಿದ ಅವನನ್ನು ನಾವು ಸುಮ್ಮನೆ ಬಿಡುವದಿಲ್ಲ. ಬಡಿದೇ ತೀರುತ್ತೇವೆ,' ಅಂತ ಪ್ರತಿಜ್ಞೆ ಮಾಡಿ, ಕೈಯಲ್ಲಿ ಬಡಿಗೆ ಹಿಡಿದುಕೊಂಡು, ಅವನನ್ನು ಹುಡುಕಲು ರೌಂಡಿಂಗ್ ಶುರು ಮಾಡಿದ್ದಾರೆ. ಇನ್ನೊಂದು ಕಡೆ ಪೊಲೀಸರು ದಲಿತನ ದನ, ದಲಿತರ ಮೇಲಾದ ದೌರ್ಜನ್ಯ ಅಂತ ಅವರೂ ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲಿಗೆ ದನ ಮಾರಿ ಬಂದವನ  ಗತಿ ಶಿವಾಯ ನಮಃ!

ಒಟ್ಟಿನಲ್ಲಿ ಏನೋ ಮಾಂಡವಳಿ ಸಂಧಾನ ಆಗಿದೆ. ಪುಣ್ಯಕ್ಕೆ ದನ ಕೂಡ ವಾಪಸ್ ಸಿಕ್ಕಿದೆ. ಅದರ ನಸೀಬ್ ಛಲೋ ಇತ್ತು ಅಂತ ಕಾಣುತ್ತದೆ. ಕೊಂಡವರು ಇನ್ನೂ ಸಾಗಿಸಿರಲಿಲ್ಲ. ರೊಕ್ಕ ಹಿಂತಿರುಗಿಸಿದ್ದಕ್ಕೆ ದನ ವಾಪಸ್ ಕೊಟ್ಟಿದ್ದಾರೆ. ಕೊಡದಿದ್ದರೆ ಅವರಿಗೂ ಧಮಕಿ ಬಿದ್ದಿತ್ತಲ್ಲ. ಕೊಡದೇ ಏನು ಮಾಡಿಯಾರು?

ನಂತರ ಪೊಲೀಸರು. ಅವರ ಜೊತೆಗೂ ಪಂಚಾಯಿತಿ ಮಾಡಿ ದಾಖಲಿಸಿದ್ದ ಕೇಸಿಗೆ ಒಂದು ಗತಿ ಕಾಣಿಸಲಾಗಿದೆ. ದನ ಕಳೆದುಕೊಂಡಿದ್ದ ದಲಿತನಿಗೂ ಒಂದಿಷ್ಟು ರೊಕ್ಕ ಕೊಟ್ಟು ಸುಮ್ಮನಿರಿಸಿದ್ದಾರೆ. ಅವನಿಗೆ ದನವೂ ಸಿಕ್ಕಿತು. ಮೇಲಿಂದ ಒಂದಿಷ್ಟು ರೊಕ್ಕ ಬೇರೆ - like compensation. 

ದನ ಹಿಡಿದು, ಮಾರಿ, ರೊಕ್ಕ ಎಣಿಸಿ, ತಾನೇ ದೊಡ್ಡ ಶಾಣ್ಯಾ ಅಂದುಕೊಂಡಿದ್ದವ ಮಂಗ್ಯಾ ಆಗಿದ್ದಾನೆ. ಒಂದಕ್ಕೆ ಎರಡು ಪಟ್ಟು ರೊಕ್ಕ ಖರ್ಚು ಮಾಡಿ ಬಚಾವಾಗಿದ್ದಾನೆ. ಮಾನ (ಇದ್ದರೆ) ಮೂರಾಬಟ್ಟೆಯಾಗಿದೆ. ಊರ ಜನರ ಹತ್ತಿರ ಸಾಲ ಎತ್ತಬೇಕಾದ ಪರಿಸ್ಥಿತಿ ಬಂದಿದೆ. ಊರ ಮಾನದ ಪ್ರಶ್ನೆ ಅಂತ ಅಂದುಕೊಂಡು ಜನ ರೊಕ್ಕ ಕೊಟ್ಟಿದ್ದಾರೆ. ಇನ್ನು ಅವರ ಸಾಲ ವಾಪಸ್ ಬಂದಂತೆಯೇ. ಅದಕ್ಕೆ ಮೂರು ನಾಮ ಬೀಳುವದರ ಬಗ್ಗೆ ಯಾವದೇ ಸಂಶಯವಿಲ್ಲ.

ಪಾಪದ ದನ ತೋಟಕ್ಕೆ ಬಂದರೆ ಓಡಿಸಬಹುದಿತ್ತು. ಬರದ ಹಾಗೆ ಬರೋಬ್ಬರಿ ಬೇಲಿ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ಅದೆಲ್ಲ ಹೋಗಲಿ. ಅಷ್ಟೆಲ್ಲ ಶೌರ್ಯ ಪರಾಕ್ರಮ ಉಪಯೋಗಿಸಿ ಬಡಪಾಯಿ ದನವನ್ನು ಹಿಡಿದ ನಂತರ ಪಾಂಜರಪೋಳಿಗೆ ಬಿಟ್ಟುಬರಬಹುದಿತ್ತು. ಊಹೂಂ! ಅದೆಲ್ಲ ಹೇಗೆ ಮಾಡಿಯಾರು ತಲೆಯಲ್ಲಿ ದುರ್ಬುದ್ಧಿ ಮತ್ತು ದುರಾಸೆ ತುಂಬಿಕೊಂಡಾಗ? ಅದಕ್ಕೆ ತಕ್ಕ ಫಲ ಸಿಕ್ಕಿದೆ.

ದನವನ್ನು ಗೋಮಾತೆ, ನಂದಿ ಅಂತೆಲ್ಲ ಪೂಜಿಸುವ ಸಂಸ್ಕಾರವಿರುವ ಜನ ಮಾಡುವ ಕೆಲಸವೇ ಇದು? ಅದಕ್ಕೆ ಕೇಳಿದ್ದು ನಮ್ಮ ಜನ ಕುಲಗೆಟ್ಟುಹೋಗುತ್ತಿರುವದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ ಎಂದು.

7 comments:

Anonymous said...

Good to see you back! Quiet a long time.

Anonymous said...

Good to see you back! Quite a long time.

Mahesh Hegade said...

Thank you very much!

sunaath said...

ದನಕ್ಕಿರುವಷ್ಟು ಬುದ್ಧಿಯೂ ಸಹ ನಮ್ಮ ಜನಕ್ಕಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಬಹಳ ದಿನಗಳ ಬಳಿಕ ಮರಳಿದ ನಿಮಗೆ ಸುಸ್ವಾಗತ. ನೀವೂ ಸಹ ಎಲ್ಲಿ ಪಾಂಜರಪೋಳಿಗೆ ಹೋಗಿದ್ದೀರೋ ಎನ್ನುವ ಹೆದರಿಕೆ ನಮಗೆ ಬರುವುದು ಸ್ವಾಭಾವಿಕ. ಮೇಲಿಂದ ಮೇಲೆ ಬರುತ್ತಿರಿ. ನಮಗೆ ಉತ್ತಮ ಮಾಹಿತಿಯನ್ನು ನೀಡುತ್ತಿರಿ. ನಮ್ಮನ್ನು (ಹೊಟ್ಟೆ ಹುಣ್ಣಾಗುವಂತೆ) ನಗಿಸುತ್ತಿರಿ!

Mahesh Hegade said...

ಧನ್ಯವಾದಗಳು,ಸುನಾಥ್ ಸರ್!

Manjumaya - manasha204@gmail.com said...

ಸರ್, ಎಲ್ಲಿ ಹೋಗಿದ್ರಿ ಇಷ್ಟು ದಿನ??? ತುಂಬಾ ಒಳ್ಳೆ ಲೇಖನ ಬರೆದಿದ್ದೀರ. ಧನ್ಯವಾದಗಳು. ಅಂದ ಹಾಗೆ ನಮ್ಮ ವೀರ ಯೋಧರ ಬಗ್ಗೆ ಒಂದು ಒಳ್ಳೆ ಕಥೆ ಬರೀರಿ ಸರ್. ನಮಗೋಸ್ಕರ ಗಡಿಯಲ್ಲಿ ಪ್ರಾಣ ತ್ಯಾಗ ಮಾಡುವ ಅವರ ಬಗ್ಗೆ ನಿಮ್ಮ ಮುಖಾಂತರ ಒಂದು ಒಳ್ಳೆ ಸಂದೇಶ ಸಿಗಲಿ ನಮ್ಮ ಜನತೆಗೆ.

Mahesh Hegade said...

ಧನ್ಯವಾದಗಳು, ಮಂಜುಮಾಯಾ.

ಖ್ಯಾತ ಲೇಖಕ ಗುಲ್ಜಾರ್ ಅವರು ಸೈನಿಕರ ಬಗ್ಗೆ ಒಂದು ಒಳ್ಳೆ ಸತ್ಯಕಥೆ ಬರೆದಿದ್ದರು. ಹಿಂದೊಮ್ಮೆ ಅದನ್ನು ಅನುವಾದಿಸಿದ್ದೆ. ಅದು ಇಲ್ಲಿದೆ - http://maheshuh.blogspot.com/2014/05/loc.html. ತಾವು ಓದಿ. ಹೇಗಿದೆ ತಿಳಿಸಿ.

ಸೈನಿಕರ ಬಗ್ಗೆ ಜರೂರ್ ಬರೆಯೋಣ ಸರ್. ಅವರಿರೋದಕ್ಕೆ ನಾವುಗಳು ಆರಾಮ್ ಇರೋದು. ಅಲ್ಲವೇ?

ಮತ್ತೊಮ್ಮೆ ಥ್ಯಾಂಕ್ಸ್ ನಿಮಗೆ.