Friday, January 20, 2017

ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಾಗ ಕೈಯಲ್ಲಿ ಡಸ್ಟರ್ ಬಂತು!

'ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು,' ಅನ್ನುತ್ತಾರೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಅಂತಹ ಬುದ್ಧಿ ಕೈಗೆ ಮತ್ತೇನನ್ನೋ ಕೊಟ್ಟು ಆಗಬಾರದ್ದು ಆಗಿಹೋದ ಒಂದು ಘಟನೆ ನೆನಪಾಯಿತು.

೧೯೮೧. ಆಗ ನಾವು ನಾಲ್ಕನೆಯ ಕ್ಲಾಸು. ಆಗ ಪಾಠ ಮಾಡಲು ವರ್ಗಶಿಕ್ಷಕರಾಗಿ ಬಂದವರು ಶ್ರೀ ಕಾತ್ರಾಳೆ ಸರ್. ಪೂರ್ತಿ ಹೆಸರು ಕಲ್ಲಿನಾಥ ನೇಮಿನಾಥ ಕಾತ್ರಾಳೆ. ಬೈಲಹೊಂಗಲದ ಕಡೆಯ ಜೈನರು. ಅದಿರಲಿ. ಅವರೋ ದುರ್ವಾಸ ಮುನಿಯ ಅಪರಾವತಾರ. ಸಿಟ್ಟು ಅಂದರೆ ಅಷ್ಟು ಸಿಟ್ಟು. ಆದರೆ ಅದ್ಭುತ ಶಿಕ್ಷಕರು. ಮೇಲಿಂದ ಸಣ್ಣ ಪ್ರಮಾಣದ ಸಾಹಿತಿ, ಕವಿ, ಸಂಶೋಧಕ ಇತ್ಯಾದಿ. ಪಠ್ಯದಲ್ಲಿ ಇರುವದಕ್ಕಿಂತ ಹೆಚ್ಚಿನ ವಿಷಯಗಳನ್ನು ಪಾಠ ಮಾಡುತ್ತೇನೆ. ವಿದ್ಯಾರ್ಥಿಗಳನ್ನು ಹೆಚ್ಚಿಗೆ ಶಾಣ್ಯಾ ಮಾಡುತ್ತೇನೆ ಅನ್ನುವ ಒಂದು ತರದ ಸಾತ್ವಿಕ ಹಮ್ಮು ಜೊತೆಗೆ. ಎಲ್ಲಾ ಒಪ್ಪುವಂತಹ ಸದ್ಗುಣಗಳೇ. ಆದರೆ ಅವರು ಕೊಡುತ್ತಿದ್ದ ಕಡತ (ಹೊಡೆತ)!? ಅದು ಮಾತ್ರ ದೇವರಿಗೇ ಪ್ರಿಯ.

ಕಾತ್ರಾಳೆ ಸರ್ ಯಾರನ್ನೂ ಎಂದೂ ಸೀದಾ ಮಾತಾಡಿಸಿದ್ದೇ ಇಲ್ಲ. ನಮ್ಮಂತಹ ಒಂದೆರೆಡು ಪ್ರೀತಿಯ ಪಟ್ಟಶಿಷ್ಯರು ಹೇಗೋ ಬಚಾವು. ಉಳಿದವರಿಗೆ ಮೊದಲು 'ಪ್ರಸಾದ' ಕೊಟ್ಟೇ ಮುಂದಿನ ಮಾತು. ಅವರು ಕೇಳಿದ ಮಾತಿಗೆ, ಪ್ರಶ್ನೆಗೆ ಫಟ್ ಅಂತ ಉತ್ತರ ಬಂತೋ ಸರಿ. ಇಲ್ಲ ಅಂದರೆ ಫಟ್ ಅಂತ ಕಪಾಳಕ್ಕೆ ನಾಲ್ಕು ಬಿಗಿದೇ ಮುಂದಿನ ಮಾತು.

ಇಂತಹ ದೂರ್ವಾಸ ಸ್ವರೂಪಿ ಮಾಸ್ತರರಿಗೆ ತಕ್ಕ ಶಿಷ್ಯರನ್ನು ದೇವರು ದಯಪಾಲಿಸದೇ ಬಿಟ್ಟಾನೆಯೇ? ಇವರು ಬಡಿದಷ್ಟೂ ಮೈ ಗಟ್ಟುಮುಟ್ಟಾಗುತ್ತಿದ್ದ ಹಟ್ಟಾಕಟ್ಟಾ ಶಿಷ್ಯೋತ್ತಮರು ಕೂಡ ಒಂದಿಷ್ಟು ಜನ ಇದ್ದರು. ಬಿಟ್ಟೂಬಿಡದಂತೆ ಪ್ರತಿದಿನವೂ ಮಾಸ್ತರ್ ಹತ್ತಿರ ಆಪರಿ ಹೊಡೆತ ತಿನ್ನುವದರಲ್ಲಿ ಅದೇನು ಮಜಾ ಬರುತ್ತಿತ್ತೋ ಅವರಿಗೇ ಗೊತ್ತು. 'ದೇವರಿಗೆ ದಿನಾ ಹೂವೇರಿಸುವದನ್ನು ತಪ್ಪಿಸಿದರೂ ಕೆಲವರಿಗೆ ಹೊಡೆತ ಕೊಡುವದನ್ನು ತಪ್ಪಿಸಲಾಗುವದಿಲ್ಲ!' ಎಂದು ಹೇಳುತ್ತಲೇ ಕೆಲವು ಮಂದಿಗೆ ದಿನದ ಡೋಸ್ ಕೊಡುತ್ತಿದ್ದರು ಸರ್. ಕೆಲವರಂತೂ noted characters. ಅವರಿಗೆ ಎಲ್ಲರೂ 'ನಾಲ್ಕು ಹಾಕಿ' ಅಂದು ಹೋಗುತ್ತಿದ್ದರು. ಮನೆ ಜನ ಕೂಡ. ಅಂತವರು ಕಾತ್ರಾಳೆ ಸರ್ ಅವರ ಫೇವರಿಟ್. ತಮ್ಮ ಲೆಕ್ಕ, ಉಳಿದವರ ಲೆಕ್ಕ, ಬಳಿದವರ ಲೆಕ್ಕ, ಮನೆಯಲ್ಲಿ ಕಮ್ಮಿ ಬಡಿದಿದ್ದರೆ ಅದರ ಲೆಕ್ಕ, ಹಿಂದಿನ ವರ್ಷ ಬಡಿದಿದ್ದು ಕಮ್ಮಿಯಾಯಿತು ಅಂತ ಹಿಂದಿನ ವರ್ಷದ ಶಿಕ್ಷಕರು ಹೇಳಿದರೆ ಆ ಲೆಕ್ಕ, ಹೀಗೆ ಎಲ್ಲ ಲೆಕ್ಕ ಬಡ್ಡಿಯೊಂದಿಗೆ ಚುಕ್ತಾ ಮಾಡಿ ಬಡಿಯುತ್ತಿದ್ದರು. ಹಾಗೆ ಬಡಿಸಿಕೊಳ್ಳುತ್ತಿದ್ದ ಹುಡುಗರಿಗೂ ಬಡಿಯುತ್ತಿದ್ದ ಕಾತ್ರಾಳೆ ಸರ್ ಅವರಿಗೂ ಅದೇನೋ ವಿಚಿತ್ರ ಅವಿನಾಭಾವ ಸಂಬಂಧ.

ಸುರೇಶ ಜಾಲಿಗಿಡದ ಎನ್ನುವ ಪುಣ್ಯಾತ್ಮ ಅಂತಹ ವಿದ್ಯಾರ್ಥಿಗಳಲ್ಲಿ ಅಗ್ರಗಣ್ಯ. ನೋಡಲೂ ಸಹ ಕರ್ರಗೆ ಹೊನಗ್ಯಾ ಮಾದರಿಯಲ್ಲಿ ಕಡಿದಿಟ್ಟ ಕಪ್ಪುಕಲ್ಲಿನ ಶಿಲ್ಪದಂತಿದ್ದ. ಅವನಿಗೆ ದಿನಾ ಪೂಜೆ ಪ್ರಸಾದ ಇದ್ದೇ ಇರುತ್ತಿತ್ತು. ಅವನಿಗೆ ಅವೆಲ್ಲ ತಾಗುತ್ತಲೂ ಇರಲಿಲ್ಲ. ಸುಮಾರು ಹತ್ತಿಪ್ಪತ್ತು ನಿಮಿಷ ಯಕ್ಕಾಮಕ್ಕಾ ಬಡಿಸಿಕೊಂಡ ಮೇಲೆ ಏನೋ ನೋವಿನಂತಹದ್ದು ಆಗುತ್ತಿತ್ತು ಅಂತ ಕಾಣುತ್ತಿದೆ. ಅಥವಾ ಮಾಸ್ತರ್ ತ್ರಾಸು ತೆಗೆದುಕೊಂಡಿದ್ದು ಸಾಕು. ಅವರಿಗೊಂದು ರೆಸ್ಟ್ ಕೊಡೋಣ ಅಂತಲೋ ಕೊಂಯ್ ಅನ್ನುತ್ತಿದ್ದ. ಆವಾಗಲೇ ಅವನಿಗೆ ಹೊಡೆತದಿಂದ ಮುಕ್ತಿ. ಸರ್ ಅವರಿಗೂ ಸಾಕಷ್ಟು ಸುಸ್ತಾಗಿರುತ್ತಿತ್ತು. ಪ್ರತಿದಿನ ಒಂದಿಲ್ಲೊಂದು ಲಫಡಾ ಮಾಡದಿದ್ದರೆ ಆ ಸುರೇಶ ಜಾಲಿಗಿಡದನಿಗೂ ಉಂಡಿದ್ದು ಅರಗುತ್ತಿರಲಿಲ್ಲ ಅನ್ನಿಸುತ್ತದೆ. ಎಲ್ಲಿ ಈ ಗಿರಾಕಿ ಬೇಕಂತಲೇ ಸರ್ ಅವರನ್ನು irritate ಮಾಡಲು ಹೀಗೆ ಮಾಡುತ್ತಾನೇನೋ ಅನ್ನಿಸುತ್ತಿತ್ತು. ಆ ಮಾದರಿಯಲ್ಲಿ ಇರುತ್ತಿತ್ತು ಅವನ ಕಾರ್ನಾಮೆ. for example: ಕಾಪಿ ಬರಹ. ಆಗಿನ ಕಾಲದಲ್ಲಿ ಹಸ್ತಾಕ್ಷರ ಸುಂದರವಾಗಲಿ ಅಂತ ಕಾಪಿ ಬರೆಸುತ್ತಿದ್ದರು. ಎರಡು ಅಥವಾ ನಾಲ್ಕು ಗೆರೆಗಳ ಮಧ್ಯೆ ಅಕ್ಷರಗಳನ್ನು ಬರೋಬ್ಬರಿ, in exact proportion, ಬರೆಯಬೇಕಾಗುತ್ತಿತ್ತು. ಮೇಲಿನ ಮತ್ತು ಕೆಳಗಿನ ಗೆರೆಗಳ ಮಧ್ಯೆ ಸರಿಯಾಗಿ ಬರೆದುಕೊಂಡು ಬನ್ನಿ ಅಂತ ಬೊಂಬಡಾ ಹೊಡೆದು, ಸಾವಿರ ಬಾರಿ ಪ್ರಾಕ್ಟೀಸ್ ಮಾಡಿಸಿ ಕಳಿಸಿದ್ದರೂ ಮರುದಿನ ಜಾಲಿಗಿಡದ ಹೇಗೆ ಬರೆದುಕೊಂಡುಬಂದಿರಬೇಕು? ಊಹಿಸಿ. ಎರಡೂ ಗೆರೆಗಳ ಮಟಾಮಧ್ಯೆ ಸೊಟ್ಟಸೊಟ್ಟಾಗಿ ಬರೆದುಕೊಂಡು ಬಂದು ಮಾಸ್ತರ್ ಮುಂದೆ ಗರ್ವದಿಂದ ಹಿಡಿದು, 'ನೋಡ್ರಿ ಸರ್. ಹ್ಯಾಂಗೈತ್ರೀ????' ಅಂದಿದ್ದ ಈ ಭೂಪ ಜಾಲಿಗಿಡದ. ಅದನ್ನು ನೋಡಿ ಕೆಂಡಾಮಂಡಲವಾದ ದೂರ್ವಾಸ ಸರ್ ಇಡೀ ಪಿರಿಯಡ್ ಬಡಿದಿದ್ದರು. ಕೊಠಡಿಯ ತುಂಬಾ ಅಟ್ಟಾಡಿಸಿಕೊಂಡು ಉಳ್ಳಾಡಿಸಿ ಉಳ್ಳಾಡಿಸಿ ಬಡಿದಿದ್ದರು.

ಒಂದು ದಿನ ಶಾಲೆ ನಡೆದಿತ್ತು. ಸರ್ ಯಾವದೋ ಪಾಠವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಅವರು ಅಷ್ಟೊಂದು ಶ್ರದ್ಧೆಯಿಂದ ಪಾಠ ಮಾಡುತ್ತಿರುವಾಗ pin drop silence ಇರಬೇಕಿತ್ತು. ಹಾಗಂತ ತಾಕೀತು ಮಾಡಿರುತ್ತಿದ್ದರು. ಆದರೆ ಕಮಂಗಿಗಳು ತುಂಬಿದ ಆ ಕಿಷ್ಕಿಂಧೆಯಂತಹ ಕ್ಲಾಸಿನಲ್ಲಿ ಅದು ಎಲ್ಲಿ ಸಾಧ್ಯ!? ಅದೂ ಜಾಲಿಗಿಡದ ಮತ್ತು ಅಂತಹ ನಾಲ್ಕಾರು ಮಂಗ್ಯಾ ಹುಡುಗರಿರುವಾಗ.

ದೂರ್ವಾಸ ಮುನಿ ಉರ್ಫ್ ಕಾತ್ರಾಳೆ ಸರ್ ಅವರ ಏಕಾಗ್ರತೆಗೆ, ಪಾಠ ಮಾಡುತ್ತಿದ್ದ ತನ್ಮಯತೆಗೆ ಯಾವದೋ ಕಾರಣಕ್ಕೆ ಭಂಗ ಉಂಟಾಯಿತು. ಕೋಪ ಸರ್ರ್ ಅಂತ ನೆತ್ತಿಗೇರಿತು. ಕೆಂಪು ಬಟ್ಟೆ ನೋಡಿದ ಗೂಳಿಯಂತೆ ಮೂಗಿನ ಹೊಳ್ಳೆಗಳಿಂದ  ದೊಡ್ಡ ಶ್ವಾಸ ಬಿಡುತ್ತ ಪುಸ್ತಕದಿಂದ ತಲೆಯೆತ್ತಿ ಕೆಕ್ಕರಸಿ ನೋಡಿದರು ಸರ್! ಅವರ ರೌದ್ರಾವತಾರ ನೋಡಿದ ಕೂಡಲೇ ಗೊತ್ತಾಯಿತು ಯಾರಿಗೋ ಕಾದಿದೆ ದೊಡ್ಡ ಮಟ್ಟದ ಪೂಜೆ, ಅದೂ ಪ್ರಸಾದದೊಂದಿಗೆ ಎಂದು.

ಜಾಲಿಗಿಡದನ ನಸೀಬ್ ಖರಾಬ್ ಇತ್ತು. ಖಂಡಾಪಟ್ಟೆ ಸಿಟ್ಟಿಗೆದ್ದಿದ್ದ ಸರ್ ಕಣ್ಣಿಗೆ ಅವನೇ ಬಿದ್ದ. ಏನೋ ಲೋಚಾ ಮಾಡುತ್ತ ಪಕ್ಕದ ಹುಡುಗನ ಜೊತೆಗೆ ಏನೋ ಕಿಸಿಪಿಸಿ ಅನ್ನುತ್ತ ಕೂತಿದ್ದ ಅಂತ ಕಾಣುತ್ತದೆ. ಕಾತ್ರಾಳೆ ಸರ್ ಅವನ ಹತ್ತಿರ ಹೋಗಿ ಬಡಿಯಲಿಲ್ಲ. ಸುತ್ತ ಮುತ್ತ ನೋಡಿದರು. ಕರಿಹಲಗೆ ಒರೆಸುವ ಡಸ್ಟರ್ (duster) ಕಂಡುಬಂತು. ಬುದ್ಧಿ ಸಿಟ್ಟಿನ ಕೈಗೆ ಹೋಗಿತ್ತು. ಕೈಯಲ್ಲಿ ಡಸ್ಟರ್ ಬಂತು.

ಸ್ವಚ್ಛ ಜವಾರಿ ಭಾಷೆಯಲ್ಲಿ ಏನೋ ಒದರುತ್ತ, ಬೈಯುತ್ತ ಜಾಲಿಗಿಡದನ ಕಡೆ ಡಸ್ಟರ್ ಒಗೆದೇಬಿಟ್ಟರು. ಶಿವಾಯ ನಮಃ! ಹೇಳಿಕೇಳಿ ಹಳ್ಳಿಯಲ್ಲಿ ಬೆಳೆದು ಬಂದವರು ಕಾತ್ರಾಳೆ ಸರ್. ಹಕ್ಕಿ ಓಡಿಸಲು ಕವಣೆಕಲ್ಲು ಬೀಸುವ ವಿದ್ಯೆಯಲ್ಲಿ ಪರಿಣಿತರಾಗಿದ್ದರು ಅಂತ ಕಾಣುತ್ತದೆ. ಬರೋಬ್ಬರಿ ಗುರಿ ಇಟ್ಟಿದ್ದರು. ಬಾಣದಂತೆ ಸುಂಯ್ ಅಂತ ಹೋದ ಡಸ್ಟರ್ ಸೀದಾ ಜಾಲಿಗಿಡದನ ಹಣೆಗೆ ಅಪ್ಪಳಿಸಿತು!

ಒಮ್ಮೊಮ್ಮೆ ಟೈಮಿಂಗ್ ಅಂದರೆ ಹೇಗಿರುತ್ತದೆ ನೋಡಿ. ಅದೇ ವೇಳೆಗೆ ಯಾರು ಕೊಠಡಿಗೆ ಆಗಮಿಸಿರಬಹದು? ಊಹಿಸಿ. ಮೂರೋ ನಾಲ್ಕೋ ತಿಂಗಳಿಗೆ ರೂಟೀನ್ ಆಗಿ ಬರುತ್ತಿದ್ದ ಎಜುಕೇಶನ್ ಇನ್ಸಪೆಕ್ಟರ್! ಕಾತ್ರಾಳೆ ಸರ್ ರೊಚ್ಚಿಗೆದ್ದು ಡಸ್ಟರ್ ಒಗೆಯುವದಕ್ಕೂ, ಅದು ಜಾಲಿಗಿಡದನ ಹಣೆಗೆ ಅಪ್ಪಳಿಸುವದಕ್ಕೂ ಮತ್ತು ಆ ಇನ್ಸಪೆಕ್ಟರ್ ಒಳಗೆ ಬರುವದಕ್ಕೂ ಏಕ್ದಂ ಸರಿಯಾಯಿತು. Exactly timed. Perfectly synchronized!

ಸರ್ ಜಾಲಿಗಿಡದನನ್ನು ಗಮನಿಸುವದನ್ನು ಬಿಟ್ಟು ಬಂದ ಇನ್ಸಪೆಕ್ಟರ್ ಖಾತಿರ್ದಾರಿಯಲ್ಲಿ ತೊಡಗಿದರು. ಅದೇನೋ ಗೊತ್ತಿಲ್ಲ. ಎಲ್ಲ ಶಿಕ್ಷಕರೂ ಆ ಇನ್ಸಪೆಕ್ಟರ್ ಮತ್ತು inspection ಪ್ರಕ್ರಿಯೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಅವರ promotion, increment ಇತ್ಯಾದಿಗಳ ಮೇಲೆ ಬಹಳ ಪ್ರಭಾವ ಬೀರುತ್ತಿತ್ತು ಅಂತ ಕಾಣುತ್ತದೆ.

ಲಫಡಾ ಬೇರೆ ಆಗಿಬಿಟ್ಟಿದೆ. ಒಳಗೆ ಬರುತ್ತಿದ್ದ ಇನ್ಸಪೆಕ್ಟರ್ ಮಾಸ್ತರರು ಡಸ್ಟರನ್ನು ಮಿಸೈಲ್ ಮಾದರಿಯಲ್ಲಿ ಒಗೆಯುವದನ್ನು ನೋಡಿರಬೇಕು. ನೋಡದಿದ್ದರೂ ಒಗೆತದ ಪರಿಣಾಮವನ್ನು ಮಿಸ್ ಮಾಡಿಕೊಳ್ಳುವಂತೆ ಇರಲಿಲ್ಲ. ಮೊದಲೇ ಕಟ್ಟಿಗೆಯ ಬುಡವಿದ್ದ ಘಟ್ಟಿಯಾದ ಡಸ್ಟರ್. ಒಂದು ದೊಡ್ಡ ಕಲ್ಲು ಬಂದು ಬುರುಡೆಗೆ ಬಂದು ಅಪ್ಪಳಿಸಿದ ರೀತಿ. ಹಣೆಗೆ ಬರೋಬ್ಬರಿ ಏಟು ತಿಂದಿದ್ದ ಜಾಲಿಗಿಡದ ಭಯಂಕರವಾಗಿ ಅಳತೊಡಗಿದ್ದ. ಅವನು ದಿನಕ್ಕೊಮ್ಮೆ ಹೊಡೆತ ತಿಂದು ಅಳುವದು ಇದ್ದೇ ಇರುತ್ತಿತ್ತು. ಆದರೆ ಅಂದಿನ ಅಳು ಭೀಕರವಾಗಿತ್ತು. ಎಲ್ಲರೂ ಆಕಡೆ ನೋಡಿದರೆ ಜಾಲಿಗಿಡದನ ಹಣೆಯಿಂದ ರಕ್ತ! ರಾಮಾ ರಕ್ತ! ಬಳಬಳ ಹರಿಯುತ್ತಿದೆ. ಖರಾಬ್ ಸೀನ್! ಅರ್ಧ ಮುಖ ಫುಲ್ ರಕ್ತಮಯ! ಬಿಳಿ ಶರ್ಟ್ ಫುಲ್ ರೆಡ್! ಫುಲ್ ಖೂನ್ ಖರಾಬಾ!

ಒಳಗೆ ಬಂದಿದ್ದ ಇನ್ಸಪೆಕ್ಟರ್ ಸಾಹೇಬರು, 'ಎಂಥಾ ಕೆಲಸ ಮಾಡೀರಿ? ಮೈಮ್ಯಾಲೆ ಖಬರ್ ಅದನೋ ಇಲ್ಲೋ? ಹೀಂಗ ಬಡಿಯೋದ?? ಹಾಂ?' ಅಂತ ಅಬ್ಬರಿಸಿದಾಗಲೇ ಕಾತ್ರಾಳೆ ಸರ್ ತಾವು ಮಾಡುತ್ತಿದ್ದ ದುವಾ ಸಲಾಮಿ ನಿಲ್ಲಿಸಿ ಜಾಲಿಗಿಡದನ ಕಡೆ ನೋಡಿದ್ದಾರೆ. ನೋಡಿ ಫುಲ್ ಥಂಡಾ ಹೊಡೆದಿದ್ದಾರೆ. ಆಪರಿ ಬಡಿಯುತ್ತಿದ್ದರೂ ಈ ನಮೂನಿ ಖೂನ್ ಖರಾಬಾ ಅವರಿಗೂ ದೊಡ್ಡ ಶಾಕ್ ನೀಡಿತ್ತು. ಈ ರಕ್ತಸಿಕ್ತ ಅನುಭವ ಅವರಿಗೂ ಹೊಸದು. ಅದಕ್ಕಿಂತ ದೊಡ್ಡ ಶಾಕ್ ಎಂದರೆ ಇದೆಲ್ಲ ಬರೋಬ್ಬರಿ ಎಜುಕೇಶನ್ ಇನ್ಸಪೆಕ್ಟರ ಅವರ ಎದುರಿಗೇ ನಡೆದುಹೋಗಿದೆ. ಅವರೇ eye witness.

ಸರ್ ಸುಧಾರಿಸಿಕೊಂಡು ಬೆ.. ಬೆ.. ಬ್ಬೆ...  ಅಂತ ಏನೋ ವಿವರಣೆ ಕೊಡಲು ನೋಡಿದರು. ಸಿಕ್ಕಾಪಟ್ಟೆ upset ಆಗಿದ್ದ ಇನ್ಸಪೆಕ್ಟರ್ ಸಾಹೇಬರು ಖಂಡಾಪಟ್ಟೆ irritation ನಿಂದ ಏನೋ ಗೊಣಗುತ್ತ, 'ಹೆಡ್ ಮಾಸ್ತರ್ ಕಡೆ ಹೋಗ್ತೇನಿ. ರಿಪೋರ್ಟ್ ಮಾಡ್ತೇನಿ.....' ಎಂದೆಲ್ಲ ಹೇಳುತ್ತ ಕ್ಲಾಸಿನಿಂದ ಹೊರಗೆ ಹೋದರು. ಅಲ್ಲಿಗೆ ಸರ್ಕಾರಿ ನೌಕರಿಗೆ ಎಳ್ಳುನೀರು ಬಿಟ್ಟ ಲುಕ್ ಸರ್ ಮುಖದ ಮೇಲೆ ಬಂತು. ಇನ್ಸಪೆಕ್ಟರ್ ಹಿಂದೆ ಹೋಗಿ ಪೂಸಿ ಹೊಡೆಯಲೋ ಅಥವಾ ರಕ್ತ ಸುರಿಸುತ್ತ ಹೋ! ಅಂತ ಕೂಗುತ್ತಿರುವ ಶಿಷ್ಯೋತ್ತಮನನ್ನು ವಿಚಾರಿಸಿಕೊಳ್ಳಲೋ ಅಂತ ವಿಚಾರ ಮಾಡುವಷ್ಟರಲ್ಲಿ ಸೀನ್ ಶಿಫ್ಟ್ ಆಗಿತ್ತು.

ಇಷ್ಟಾಗುವಷ್ಟರಲ್ಲಿ ಹೆಡ್ ಮಾಸ್ಟರ್ ಮತ್ತು ಇನ್ಸಪೆಕ್ಟರ್ ಕ್ಲಾಸಿಗೆ ವಾಪಸ್ ಬಂದರು. ಹೆಡ್ ಮಾಸ್ಟರ್ ಮುಂದೆ ಮತ್ತೆ ಸರ್ ಅವರಿಗೆ ಮಂಗಳಾರತಿ ಆಯಿತು. ಆಗ ಹೆಡ್ ಮಾಸ್ಟರ್ ಆಗಿದ್ದವರು ಪೂಜಾರ್ ಸರ್ ಅಂತ ನೆನಪು. ಅಥವಾ ಪತ್ತಾರ್ ಸರ್ ಇದ್ದರೂ ಇರಬಹದು. ಪ್ರಬುದ್ಧತೆ ಇದ್ದ ಕೂಲ್ ಮಾಸ್ತರರು. ಅವರಿಗೆ ಪರಿಸ್ಥಿತಿ ಸಂಬಾಳಿಸುವ tension. ಏನೋ ಹೇಳಿ ಮಾಂಡವಲಿ (ಸಂಧಾನ) ಮಾಡಿಸಿದರು. ಇನ್ಸಪೆಕ್ಟರ್ ಅಂತೂ ಕಳಚಿಕೊಂಡರು. ಸುಮ್ಮನೇ ಕಳಚಿಕೊಳ್ಳಲಿಲ್ಲ. 'ರಿಪೋರ್ಟ್ ಮಾಡ್ತೇನಿ. ನಿಮ್ಮ ನೌಕರಿ ಕಳೀತೀನಿ. ಏನಂತ ತಿಳ್ಕೊಂಡಾರ? ಹೀಂಗ ಬಡಿಯೋದು???' ಅನ್ನುತ್ತ, ಧಮಕಿ ಹಾಕುತ್ತ ಹೋದರು.

ಹೆಡ್ ಮಾಸ್ಟರ್ ಬೇರೆ ಎಲ್ಲ ಶಿಕ್ಷಕ ಶಿಕ್ಷಕಿಯರನ್ನು ಕರೆದರು. ಎಲ್ಲರೂ ವಿಷಯ ಕೇಳಿ, ಕಣ್ಣಾರೆ ನೋಡಿ ಫುಲ್ ಅವಾಕ್ಕಾದರು. ಥಂಡಾ ಹೊಡೆದರು. ಹೆಡ್ ಮಾಸ್ಟರ್ ಒಳ್ಳೆ ನುರಿತ ಪ್ರಾಜೆಕ್ಟ್ ಮ್ಯಾನೇಜರನ ಹಾಗೆ ಬೇರೆ ಬೇರೆ ಮಂದಿಗೆ ಬೇರೆ ಬೇರೆ ಕೆಲಸ ವಹಿಸಿದರು. ಒಬ್ಬರು ಗಾಯಾಳು ಜಾಲಿಗಿಡದನ್ನು ಅಲ್ಲೇ ಮಾಳಮಡ್ಡಿಯಲ್ಲಿದ್ದ ಯಾರೋ ವೈದ್ಯರ ಬಳಿ ಕರೆದೊಯ್ದರು. ದೊಡ್ಡ ಪ್ರಮಾಣದ ಗಾಯಾಳು ಅಂತ ಮಾಸ್ತರ್ ಸೈಕಲ್ ಸವಾರಿಯ ಭಾಗ್ಯ ಅಂದು ಜಾಲಿಗಿಡದನಿಗೆ ಸಿಕ್ಕಿತ್ತು ಅಂತ ನೆನಪು. ಇನ್ನೊಬ್ಬರಾರೋ ಜಾಲಿಗಿಡದನ ತಂದೆಯನ್ನು ಕರೆತರಲು ಅವರು ಕೆಲಸ ಮಾಡುತ್ತಿದ್ದ ಕಡೆ ಓಡಿದರು. ಒಟ್ಟಿನಲ್ಲಿ ದೊಡ್ಡ ಪ್ರಮಾಣದ crisis management ಸಮರೋಪಾದಿಯಲ್ಲಿ ಸಾಗುತ್ತಿತ್ತು. ಮಾಸ್ತರ್ ನೌಕರಿ ಮತ್ತು ಶಾಲೆಯ ಮರ್ಯಾದೆಯ ಪ್ರಶ್ನೆ!

ಈಕಡೆ ಕಾತ್ರಾಳೆ ಸರ್ ಅವರಿಗೆ nervous breakdown ಆಗುತ್ತಿತ್ತು. ಹಾಗಂತ ಈಗ ಗೊತ್ತಾಗುತ್ತದೆ. ಸಿಕ್ಕಾಪಟ್ಟೆ manly ಆಗಿದ್ದ ಪುರಷಸಿಂಹನಂತಹ ಕಾತ್ರಾಳೆ ಸರ್ ಒಳ್ಳೆ ಹೆಣ್ಯಾನಂತೆ ಗೊಳೋ ಅಂತ ಅಳುತ್ತ ಕ್ಲಾಸ್ ಬಿಟ್ಟು ಹೋಗಿಬಿಟ್ಟರು. ಖಾಲಿಯಿದ್ದ ಕೊಠಡಿಯೊಂದರಲ್ಲಿ ಹೊಕ್ಕಿಕೊಂಡರು. ದೊಡ್ಡ ಆಘಾತಕ್ಕೆ ಒಳಗಾಗಿದ್ದ ಅವರು ಏನಾದರೂ ಅನಾಹುತ ಮಾಡಿಕೊಂಡಾರು ಅಂತ ಅವರ ಮೇಲೆ ನಿಗಾ ಇಡಲು ಮತ್ತು ಅವರನ್ನು ಸಮಾಧಾನ ಮಾಡಲು ಒಂದಿಷ್ಟು ಜನ ಶಿಕ್ಷಕ ಶಿಕ್ಷಕಿಯರು ಟೊಂಕಕಟ್ಟಿದರು. ನಿಜವಾಗಿಯೂ ಸೀರೆಯತ್ತಿ ಟೊಂಕಕಟ್ಟಿದರು. ಒಟ್ಟಿನಲ್ಲಿ ಮಧ್ಯಾಹ್ನದ ಅವಧಿಯಲ್ಲಿ ಇಡೀ  ಪ್ರಾಥಮಿಕ ವಿಭಾಗ (3rd and 4th standards) ಜಾಲಿಗಿಡನ ಲಫಡಾವನ್ನು ಸಂಬಾಳಿಸುವಲ್ಲಿ ಫುಲ್ ಬ್ಯುಸಿ. ಯಾವದೇ ಕ್ಲಾಸಿನಲ್ಲಿ ಟೀಚರ್ ಇಲ್ಲ. ಗಲಾಟೆ ಮಾಡದೇ ಸುಮ್ಮನಿರುವಂತೆ ಆಗಾಗ ಮಾಸ್ತರ್, ಮೇಡಂ ಬಂದು ಗದರಿಸಿ ಹೋಗುತ್ತಿದ್ದರು.

ಸುಮಾರು ಹೊತ್ತಿನ ಮೇಲೆ ಜಾಲಿಗಿಡದ ವಾಪಸ್ ಬಂದ. ಹಣೆಗೆ ನಾಲ್ಕಾರು ಹೊಲಿಗೆ ಹಾಕಿ, ಟ್ರೀಟ್ಮೆಂಟ್ ಕೊಟ್ಟು ಕಳಿಸಿದ್ದರು. ಸಾಧಾರಣ ಹೊಡೆತಗಳಿಂದ ಫಟಾಫಟ್ ಚೇತರಿಸಿಕೊಳ್ಳುತ್ತಿದ್ದ ಅವನೂ ಅಂದಿನ ದೊಡ್ಡ ಪ್ರಮಾಣದ ಮಿಸೈಲ್ ದಾಳಿಗೆ ಬಲಿಯಾಗಿ ಮಂಕಾಗಿದ್ದ. ಅವನಿಗೆ ಅಂದು ರಾಜೋಪಚಾರ. ಐದು ನಿಮಿಷಕ್ಕೊಮ್ಮೆ ಯಾರಾದರೂ ಬಂದು ಅವನ ಹಾಲತ್ ವಿಚಾರಿಸಿಕೊಳ್ಳುತ್ತಿದ್ದರು. ತಿಂಡಿ ಗಿಂಡಿ ಕೂಡ ಕೊಡಿಸಿದ್ದರು. ಪ್ರತಿ ದಿನ ಬೇರೆಯೇ ರೀತಿಯಲ್ಲಿ ಉಪಚಾರ ಅನುಭವಿಸುತ್ತಿದ್ದವನ ನಸೀಬ್ ಅಂದು ಖುಲಾಯಿಸಿತ್ತು. ಅಂದು ಜಾಲಿಗಿಡದನಿಗೆ ರಾಜೋಪಚಾರ!

ಇಷ್ಟೆಲ್ಲ ಆಗುವ ಹೊತ್ತಿಗೆ ಮಧ್ಯಾನ್ಹದ ವಿರಾಮದ ಸಮಯ. ಕಾತ್ರಾಳೆ ಸರ್ ಇನ್ನೂ nervous breakdown ನಿಂದ ಚೇತರಿಸಿಕೊಂಡಿರಲಿಲ್ಲ. ಅವರು ಎಲ್ಲರನ್ನೂ ಆಪರಿ ಬಾರಿಸುತ್ತಿದ್ದರೂ ಅವರ ಮೇಲೆ ಎಲ್ಲರಿಗೂ ಏನೋ ಒಂದು ರೀತಿಯ ಪ್ರೀತಿ, ಮಮತೆ, ಆತ್ಮೀಯತೆ. ಅವರೂ ಅಷ್ಟೇ ಮಕ್ಕಳನ್ನು ತುಂಬಾ ಹಚ್ಚಿಕೊಳ್ಳುತ್ತಿದ್ದರು. ಆ ವಯಸ್ಸೇ ಹಾಗಿರುತ್ತದೆ ನೋಡಿ. ಪಾಲಕರು, ಶಿಕ್ಷಕರು ಅಂದರೆ ಮಕ್ಕಳಿಗೆ ಹೀರೋಗಳು. ಅದರಲ್ಲೂ ಉಳಿದೆಲ್ಲ ಶಿಕ್ಷಕರಿಗಿಂತ ಅನೇಕ ರೀತಿಯಲ್ಲಿ ಭಿನ್ನರಾಗಿದ್ದ ಮತ್ತು multifaceted ವ್ಯಕ್ತಿತ್ವ ಉಳ್ಳವರಾಗಿದ್ದ ಕಾತ್ರಾಳೆ ಸರ್ ಅಂದರೆ ಎಲ್ಲರಿಗೂ ಪಂಚಪ್ರಾಣ. ಕೆಲವರಂತೂ, ಹೆಚ್ಚಾಗಿ ಹುಡುಗಿಯರು, ಅವರ ಮೇಲೆ ಒಂದು ತರಹದಲ್ಲಿ emotionally dependent. ಅಂದಿನ ಕಾಲದ ದೊಡ್ಡ ಕುಟುಂಬಗಳಲ್ಲಿ, ಅದರಲ್ಲೂ ಮಧ್ಯಮವರ್ಗ, ಕೆಳಮಧ್ಯಮವರ್ಗಗಳ ಕುಟುಂಬಗಳಲ್ಲಿ, ಮಕ್ಕಳನ್ನು ಯಾರೂ ಇವತ್ತಿನ ಪಾಲಕರಂತೆ ಲಲ್ಲೆಗರಿಯುತ್ತ ಮುದ್ದು ಮಾಡುತ್ತ ಕೂಡುತ್ತಿರಲಿಲ್ಲ. ಅದಕ್ಕೆಲ್ಲ ವೇಳೆ, ಸಹನೆ, ಶಕ್ತಿ, ಸಂಪನ್ಮೂಲ ಪಾಲಕರಲ್ಲಿ ಇರಲಿಲ್ಲ. ಹೊಟ್ಟೆಗೆ ಮತ್ತು ಬಟ್ಟೆಗೆ ಒಂದು ಮಟ್ಟಕ್ಕೆ ಪೂರೈಸಿ ಶಾಲೆಗೆ ಅಟ್ಟಿದರೆ ಅವರ ಜವಾಬ್ದಾರಿ ಮುಗಿಯಿತು ಎಂದು ಪಾಲಕರು ಭಾವಿಸುತ್ತಿದ್ದ ಕಾಲ. ಅಂತಹ ಅನೇಕ ಮನೆಗಳಿಂದ ಬರುತ್ತಿದ್ದ ಹುಡುಗ ಹುಡುಗಿಯರು ಮನೆಯಲ್ಲಿ ಸಿಗದ ಒಂದು ಹಿಡಿ ಪ್ರೀತಿ, attention, ಇತ್ಯಾದಿಗಳನ್ನು ಮಾಸ್ತರ್ ಮಾಸ್ತರಣಿಗಳ ಮೂಲಕ ಪಡೆಯುತ್ತಿದ್ದರು. ಹಾಗಾಗಿ ಕೆಲವರಿಗೆ ಮಾಸ್ತರ್ ಎಂದರೆ ಏನೋ ಒಂದು ತರಹದ emotional attachment.

ಹುಡುಗಿಯರೇ  ಹೆಚ್ಚು emotional. ಗಂಡುಗಲಿ ಕಾತ್ರಾಳೆ ಸರ್ ಅವರ ಖರಾಬ್ ಹಾಲತ್ ನೋಡಿ ಅವರಲ್ಲಿ ಕೆಲವರಿಗೆ ತಡೆಯಲಾಗಲಿಲ್ಲ. ಬೇರೆಯವರ ಕಣ್ಣೀರು ಹಾಕಿಸುತ್ತಿದ್ದರೇ ವಿನಃ ಕಾತ್ರಾಳೆ ಸರ್ ಕಣ್ಣೀರು ಹಾಕುವದಿರಲಿ ಅದನ್ನು ಊಹೆ ಮಾಡಿಕೊಳ್ಳಲೂ ಸಾಧ್ಯವಿರಲಿಲ್ಲ. ಹಾಗಿದ್ದಾಗ ಕಾತ್ರಾಳೆ ಸರ್ ಫುಲ್ ಡೌನಾಗಿ, ಜಾಲಿಗಿಡದನಿಗೆ ರಾಕ್ಷಸನಂತೆ ಬಡಿದ ಬಗ್ಗೆ ಪಾಪಪ್ರಜ್ಞೆ, ನೌಕರಿ ಗೋವಿಂದಾ ಗೋವಿಂದಾ ಆದೀತೆಂಬ ಭಯ, ಎಲ್ಲರ ಮುಂದೆ ಆಗಿಹೋದ ದೊಡ್ಡ ಲಫಡಾದಿಂದಾದ ಒಂದು ತರಹದ ಅವಮಾನ, ಇದೆಲ್ಲದರಿಂದ ಪೂರ್ತಿ ಕುಗ್ಗಿ ಹೋಗಿ ಕಂಗಾಲಾಗಿ ಕಣ್ಣೀರು ಹಾಕುತ್ತ ಬೇರೆ ರೂಮ್ ಸೇರಿದ್ದನ್ನು ನಮ್ಮ ಕ್ಲಾಸಿನ collective ಹೆಂಗರುಳು ಅದೇಗೆ ಸಹಿಸಿಕೊಂಡೀತು? ಒಂದಿಷ್ಟು ಚಿಣ್ಣ ಹುಡುಗಿಯರು ಕಾತ್ರಾಳೆ ಸರ್ ಇದ್ದ ರೂಮಿಗೆ ದಾಂಗುಡಿ ಇಟ್ಟೇಬಿಟ್ಟರು. ಹೋಗಿ ಸರ್ ಅವರನ್ನು ಕೆಲವರು ಅಪ್ಪಿಕೊಂಡರೆ ಕೆಲವರು ಕೈ ಹಿಡಿದರು. ಸರ್ ಬಾಡಿ ಸಿಗದವರು ಸರ್ ಯಾರಿಗೆ ಸಿಕ್ಕಿದ್ದರೋ ಅವರನ್ನು ಹಿಡಿದರು. ಗೊಳೋ ಅಂದು ರಾಗ ತೆಗೆದು ಅತ್ತರು. ಸಾಮೂಹಿಕ ರೋಧನ. ಪಾಪ ಸಣ್ಣ ಹುಡುಗಿಯರು. ಹಿರಿಯರು ತೊಂದರೆಯಲ್ಲಿ ಸಿಲುಕಿದಾಗ ಚಿಕ್ಕವರಿಗೆ ವಿಷಯ ತಿಳಿಯುವದಿಲ್ಲ. ಒಂದು ತರಹದ ಅಭದ್ರತೆ ಕಾಡುತ್ತದೆ. ದುಃಖಿತರಾಗಿದ್ದ ಕಾತ್ರಾಳೆ ಸರ್ ಈಗ ಹುಡುಗಿಯರನ್ನು, ಅದರಲ್ಲೂ ತಮ್ಮ ಪಟ್ಟದ ಶಿಷ್ಯೆಯರನ್ನು, ಸಮಾಧಾನ ಮಾಡಬೇಕಾಯಿತು. 'ಏನೂ ಆಗಿಲ್ಲವಾ. ಚಿಂತಿ ಮಾಡಬ್ಯಾಡ್ರೀ.... ' ಎಂದು ಎಣ್ಣೆ ಪಳಚಿ, ಮಲ್ಲಿಗೆ ಮುಡಿದಿದ್ದ ಹುಡುಗಿಯರ ತಲೆ ಸವರಿ ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಇದೊಂದು ತರಹದ ಸಾಮೂಹಿಕ ಸನ್ನಿ (mass hysteria) ಆಗಿಬಿಟ್ಟಿತು. ಅವರು ಹೋಗಿ ಸರ್ ಅಪ್ಪಿಕೊಂಡು ಅತ್ತು ಬಂದರು. ನಾವು ಹೋಗದಿದ್ದರೆ ಹೇಗೆ ಅಂತ peer pressure ಬಂದು ಎಲ್ಲರೂ ಹೋದರು. ಹೆಂಗರುಳಿದ್ದ ಕೆಲವು ಗಂಡುಹುಡುಗರೂ ಹೋಗಿ ಗೊಳೋ ಅಂದರು. ಅವರು ಹೋಗಿ ಬಂದರು ಅಂದ ಮೇಲೆ ನಾವು ಹೋಗಲಿಲ್ಲ ಅಂದರೆ ಹೇಗೆ ಅಂತ ನಮ್ಮನ್ನೂ ಹಿಡಿದು ಎಲ್ಲರೂ ರುಡಾಲಿಯರ (ಸತ್ತಾಗ ಬರುವ ವೃತ್ತಿಪರ ಅಳುವವವರು) ಹಾಗೆ ಅತ್ತು, ಕೆಲವರು ಅಳುವ ಶಾಸ್ತ್ರ ಮುಗಿಸಿ ಬಂದೆವು. ನಮಗೆ ಕಾತ್ರಾಳೆ ಸರ್ ಅಂದರೆ ಸಿಕ್ಕಾಪಟ್ಟೆ ಇಷ್ಟ ಆದರೆ ಅಳುವಷ್ಟಲ್ಲ. ಆದರೂ ಅಂದಿನ ಸಮೂಹ ಸನ್ನಿ ಹಾಗಿತ್ತು. nervous breakdown ಆಗಿದ್ದ ಕಾತ್ರಾಳೆ ಸರ್ ಅವರನ್ನು ಸಂಬಾಳಿಸುವದೇ ಉಳಿದ ಶಿಕ್ಷಕ ಮಂದಿಗೆ ಸಾಕೋಬೇಕಾಗಿತ್ತು. ಮೇಲಿಂದ ಚಿಣ್ಣರ ತಾಪತ್ರಯ ಬೇರೆ. ಹಾಕ್ಕೊಂಡು ನಾಲ್ಕು ಬಾರಿಸೋಣ ಅಂದರೆ ಮೊದಲಾಗಿದ್ದ ಲಫಡಾದ ಆಘಾತದಿಂದ ಯಾರೂ ಚೇತರಿಸಿಕೊಂಡಿರಲಿಲ್ಲ. ಆದಿನದ ಮಟ್ಟಿಗೆ ಕಾತ್ರಾಳೆ ಸರ್ ಡಸ್ಟರ್ ಒಗೆದಿದ್ದೇ ಆಖ್ರೀ ಹೊಡೆತ, ಬಡಿತ ಆಗಿರಬೇಕು. ಅಷ್ಟರಮಟ್ಟಿಗೆ ಎಲ್ಲರೂ ಬಚಾವ್.

ಸುಮಾರು ನಾಲ್ಕು ಘಂಟೆ ಹೊತ್ತಿಗೆ ಜಾಲಿಗಿಡದನ ಅಪ್ಪ ಸ್ಕೂಲಿನ ಅಂಗಳದಲ್ಲಿ ಪ್ರತ್ಯಕ್ಷರಾದರು. ಎತ್ತರಕ್ಕೆ ಕರ್ರಗಿದ್ದ ಆಜಾನುಬಾಹು ವ್ಯಕ್ತಿ. ಪಕ್ಕಾ ಜವಾರಿ ಬ್ರಾಂಡ್. ಬಿಳಿ ಜುಬ್ಬಾ ಹಾಕಿ, ಬಿಳಿ ಧೋತ್ರ ಉಟ್ಟು, HMT (ಹೆಗಲ ಮೇಲೆ ಟವೆಲ್) ಭೂಷಿತರಾಗಿ ಬಂದಿದ್ದರು.

ಜಾಲಿಗಿಡದನ ಅಪ್ಪ ಬರುವದಕ್ಕೂ ಕಾತ್ರಾಳೆ ಸರ್ ಸೀನಿಗೆ ಎಂಟ್ರಿ ಕೊಡುವದಕ್ಕೂ ಸರಿಯಾಯಿತು. 'ಸರ್ರಾ, ತಪ್ಪಾತ್ರೀ. ನಾ ಬೇಕಂತ ಮಾಡಿಲ್ಲರೀ. ಸುರೇಶ ಗದ್ದಲ ಹಾಕಾಕತ್ತಿದ್ನರೀ..... ' ಅನ್ನುವ ಧಾಟಿಯಲ್ಲಿ ಏನೋ ಹೇಳುತ್ತ, ತಪ್ಪೊಪ್ಪಿಗೆ ಕಮ್ ಪ್ರಾಯಶ್ಚಿತ ಕಮ್ ಕ್ಷಮಾಪಣೆ ಕೇಳುವ ಮಾದರಿಯಲ್ಲಿ ದೂರದಿಂದಲೇ ದೊಡ್ಡ ಪ್ರಮಾಣದಲ್ಲಿ ಕೈಯೆತ್ತಿ ಮುಗಿಯುತ್ತ, ಜೋಲಿ ಹೊಡೆಯುತ್ತ ಕಾತ್ರಾಳೆ ಸರ್ ಬಂದರು. ತಗ್ಗಿ ಬಗ್ಗಿ ನಮಸ್ಕಾರ ಮಾಡುತ್ತ ಬಂದವರು ಜಾಲಿಗಿಡದನ ಅಪ್ಪನ ಕಾಲಿಗೆ ಡೈವ್ ಹೊಡೆದೇಬಿಡುತ್ತಿದ್ದರೋ ಏನೋ. ಆದರೆ ಅಷ್ಟರಲ್ಲಿ ಹೆಡ್ ಮಾಸ್ಟರ್ ಬಂದರು. ಎಲ್ಲರನ್ನೂ ಕರೆದುಕೊಂಡು ತಮ್ಮ ಕೋಣೆಗೆ ಹೋದರು. ಚಿಕಿತ್ಸೆ ಪಡೆದು ಬಂದಿದ್ದ ಜಾಲಿಗಿಡದದನ್ನು ಕಳಿಸುವಂತೆ ಆಜ್ಞಾಪಿಸಿದರು. ಯಾರೋ ಅಬ್ಬೇಪಾರಿ ಬಂದು, 'ಲೇ ಜಾಲ್ಯಾ, ನಿಮ್ಮ ಅಪ್ಪಾರು ಬಂದಾರ. ಹೆಡ್ ಮಾಸ್ಟರ್ ಕರಿಯಾಕತ್ತಾರ. ನೀ ಹೋಗಬೇಕಂತ. ಹೋಗಿಬಾರಲೇ,' ಅಂತ ಹೇಳಿದ. ಮಾಸ್ತರ್ ಎಸೆದ ಡಸ್ಟರ್ ಹೇಗೆ ಬ್ರಹ್ಮಾಸ್ತ್ರದ ಹಾಗೆ ಬಂದು ಅಪ್ಪಳಿಸಿತು. ಯಾವ ರೀತಿ ನೋವಾಯಿತು. ಡಾಕ್ಟರ್ ಹೇಗೆ ಹೊಲಿಗೆ ಹಾಕಿದರು. ತಾನು ಹೇಗೆ ಮಹಾ ವೀರನಂತೆ, ಧೀರನಂತೆ ಅವಡುಕಚ್ಚಿ ನೋವು ತಡೆದುಕೊಂಡು, ಒಂಚೂರೂ ಅಳದೆ, ಟಾಕಿ (ಹೊಲಿಗೆ) ಹಾಕಿಸಿಕೊಂಡೆ....ಅಂತೆಲ್ಲ ತನ್ನ ಸಹಪಾಠಿಗಳಿಗೆ ರಂಗುರಂಗಾಗಿ ಪುಂಗುತ್ತಿದ್ದ ಜಾಲ್ಯಾ ಉರ್ಫ್ ಜಾಲಿಗಿಡದ ಎದ್ದು, ಕೆಳಗಿಳಿಯುತ್ತಿದ್ದ ತನ್ನ ಖಾಕಿ ಚೊಣ್ಣವನ್ನು ಮೇಲಕ್ಕೆತ್ತಿಕೊಳ್ಳುತ್ತ ಹೆಡ್ ಮಾಸ್ಟರ್ ಕೋಣೆಯತ್ತ ಹೋದ.

ಮುಂದೆ ಎಲ್ಲಾ ವರ್ಕೌಟ್ ಆಯಿತು. ಆಗಿನ ಕಾಲದಲ್ಲಿ ಪಾಲಕರು ಶಿಕ್ಷಕರನ್ನು ಸಿಕ್ಕಾಪಟ್ಟೆ ಗೌರವಿಸುತ್ತಿದ್ದರು. ಶಿಕ್ಷಕರು ಏನು ಮಾಡಿದರೂ ತಮ್ಮ ಮಕ್ಕಳ ಒಳ್ಳೆಯದಕ್ಕೇ ಮಾಡುತ್ತಾರೆ ಅಂತ ಅಚಲವಾಗಿ ನಂಬಿರುತ್ತಿದ್ದರು. ಎಲ್ಲಿಯವರೆಗೆ ಅಂದರೆ ಮನೆಯಲ್ಲಿ ಮಕ್ಕಳನ್ನು ಬರೋಬ್ಬರಿ ಬಡಿದು, ಶಾಲೆಗೆ ಎಳೆತಂದು ಶಿಕ್ಷಕರ ಕಾಲಲ್ಲಿ ತಳ್ಳಿ, ಅವರೆದುರೇ ಮತ್ತೆ ನಾಲ್ಕು ಬಾರಿಸಿ, 'ಸರ್ರಾ, ನೀವೂ ಬರೋಬ್ಬರಿ ಹಾಕ್ರಿ. ಸೀದಾ ಮಾತಿಗೆ ಬಗ್ಗುವ ಪೈಕಿ ಅಲ್ಲರೀ. ಹಾಕ್ರಿ. ಬಿಂದಾಸ್ ಹಾಕ್ರಿ. ನಮ್ಮದೂ ಕೂಡಿಸಿಯೇ ಹಾಕ್ರಿ,' ಅಂತ ಸುಪಾರಿ ಕೊಡುತ್ತಿದ್ದರು. ಅದರಲ್ಲೂ ಕೆಳಮಧ್ಯಮವರ್ಗದ ಅಥವಾ ಬಡವರ ಪಾಲಕರಿದ್ದರಂತೂ ಮುಗಿದೇ ಹೋಯಿತು. ಜಾಲಿಗಿಡದನ ತಂದೆ ಅದೇ ವರ್ಗಕ್ಕೆ ಸೇರಿದವರು. ಮತ್ತೆ ಮೊದಲೇ ಹೇಳಿದಂತೆ ಜಾಲಿಗಿಡದ ಮಹಾ ಚಿದುಗ. ಪೋಕ್ರಿ. ತುಂಟ. ಕೇಳಬೇಕೇ?

ಒಟ್ಟಿನಲ್ಲಿ ಹೆಡ್ ಮಾಸ್ಟರ್ ಕೂಡಿಸಿಕೊಂಡು ಮಾಡಿದ ಮಾಂಡವಲಿ ವರ್ಕೌಟ್ ಆಯಿತು. ಅರ್ಧಗಂಟೆ ನಂತರ ಎಲ್ಲರಿಗೂ ನಮಸ್ಕಾರ ಮಾಡುತ್ತ, ಧೋತ್ರದ ಚುಂಗನ್ನು ಎತ್ತಿಕೊಂಡು, ಮಗನಿಗೆ ಏನೋ ಹೂಂಕರಿಸುತ್ತ, ವಾರ್ನಿಂಗ್ ಕೊಡುತ್ತ ಹಿರಿಯ ಜಾಲಿಗಿಡದರು ಹೊರಟುಹೋದರು.

ಇಷ್ಟೆಲ್ಲಾ ಆಗುವಷ್ಟರಲ್ಲಿ ಶಾಲೆ ಮುಗಿಯಲು ಬಂದಿತ್ತು. ಆ ಒಂದಿನ ಫುಲ್ excitement. ಪಾಠ, homework ಏನೂ ಇಲ್ಲ. ಮಜಾ ಮಾಡಿ.

ದೂರ್ವಾಸ ಮುನಿಯ ಹಾಗಿದ್ದ ಕಾತ್ರಾಳೆ ಸರ್ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಏನಾಗುತ್ತದೆ ಎನ್ನುವ ಪಾಠವನ್ನು ಬರೋಬ್ಬರಿ ಕಲಿತಿದ್ದರು. ಅವರ ನಸೀಬ್ ಛಲೋ ಇತ್ತು ಅಂತ ಬಚಾವ್. ಇಲ್ಲವಾದರೆ ಎಜುಕೇಶನ್ ಇನಸ್ಪೆಕ್ಟರ್ ಬಂದಾಗ ಇಂತಹ ಘಟನೆಯಾಗಿತ್ತು. ಪರಿಣಾಮವಾಗಿ ನೌಕರಿ ಹೋಗಬಹುದಿತ್ತು. ಜಾಲಿಗಿಡದನ ಅಪ್ಪನದು ದೊಡ್ಡ ಗುಣ. ಮಾಸ್ತರ್ ಬಗ್ಗೆ, ಶಾಲೆ ಬಗ್ಗೆ, ಶಿಕ್ಷಕರ ಬಗ್ಗೆ ಇದ್ದ ಗೌರವದಿಂದ ಏನೂ ಕೇಸ್ ಗೀಸ್ ಮಾಡಲಿಲ್ಲ. ಕೇಸ್ ಮಾಡುವದು ಹೋಗಲಿ ಏನಾದರೂ ತೊಂದರೆಯಾದರೆ ತಾವು ಮಾಸ್ತರರ ಬೆಂಬಲಕ್ಕೆ ನಿಲ್ಲುವದಾಗಿ ಹೇಳಿ ಹೋಗಿದ್ದಿರಬೇಕು. ಬೇರೆ ಯಾರ ಮಕ್ಕಳಿಗಾದರೂ ಹೀಗಾಗಿದ್ದರೆ ಇಷ್ಟು ಸುಲಭದಲ್ಲಿ ಮಾಸ್ತರರಿಗೆ ಮುಕ್ತಿ ಸಿಗುತ್ತಿದ್ದಿಲ್ಲ. ಕೆಳಮಧ್ಯಮವರ್ಗದವರನ್ನು ಬಿಟ್ಟು ಸಮಾಜದ ಬೇರೆ ವರ್ಗದ ಜನ ಒಂದು ಹಂತದವರೆಗೆ ಮಾಸ್ತರ್ ಮಾಡಿದ್ದೆಲ್ಲ ಸರಿ ಅಂದಾರು. ಆದರೆ ಕೋಪ ಬಂದಾಗ ಹೋಶ್ ಕಳೆದುಕೊಂಡು ವಿಪರೀತ ಜೋಷ್ ನಲ್ಲಿ ಕೈಗೆ ಸಿಕ್ಕಿದ್ದನ್ನು ಮುಖ ಮೂತಿ ನೋಡದೆ ಎಸೆಯುತ್ತೇನೆ ಅಂತೆಲ್ಲ ಮಂಗನಾಟ ಮಾಡಿದರೆ ಕೆಲವು ಪಾಲಕರು ಗ್ರಹಚಾರ ಬಿಡಿಸುತ್ತಿದ್ದರು ಅಂತ ನಮ್ಮ ಅನಿಸಿಕೆ.

ಮುಂದೆ ಎಂದೂ ಕಾತ್ರಾಳೆ ಸರ್ ಕೈಗೆ ಸಿಕ್ಕಿದ್ದನ್ನು ಯಾರ ಕಡೆಯೂ ಮಿಸೈಲ್ ಮಾದರಿಯಲ್ಲಿ ಉಡಾಯಿಸಲಿಲ್ಲ. ತಾವೇ ಮಿಸೈಲ್ ವೇಗದಲ್ಲಿ ದಾಪುಗಾಲಿಡುತ್ತ ಬಂದು ಬಗ್ಗಿಸಿ ಬಗ್ಗಿಸಿ ಬಾರಿಸುವದನ್ನು ಮಾತ್ರ ಮುಂದುವರಿಸಿದರು. ಅವರಿಂದ ಸಮಾ ಬಾರಿಸಿಕೊಂಡವರು ಏಕ್ದಂ ಗಟ್ಟಿಮುಟ್ಟಾಗಿ ಫೈಲ್ವಾನ್ ರೀತಿಯಲ್ಲಿ ತಯಾರಾದರು. ನಾನು ಅವರ ಪಟ್ಟದ ಶಿಷ್ಯನಾದ ಕಾರಣಕ್ಕೆ, ಫ್ಯಾಮಿಲಿ ಕನೆಕ್ಷನ್ ಇದ್ದಿದ್ದರಿಂದ ಮತ್ತು ಹೊಡೆಯುವದು ಹೋಗಲಿ ಘಟ್ಟಿಯಾಗಿ ಬೈದರೂ ತಡೆದುಕೊಳ್ಳಲಾಗದ ಡೆಲಿಕೇಟ್ ಡಾರ್ಲಿಂಗ್ ನಾನು ಅಂತ ಕಾತ್ರಾಳೆ ಸರ್ ಅವರಿಗೆ ಗೊತ್ತಿದ್ದ ಕಾರಣ ನಾನು ಬಚಾವಾದೆ. ಇಲ್ಲವಾದರೆ ಅವರ ಒಂದೇ ಏಟಿಗೆ ನಾನು ಅಂದೇ ಶಿವಾಯ ನಮಃ ಆಗುತ್ತಿದ್ದೆ. ಅವರು ಬಡಿಯುತ್ತಿದ್ದ ರೀತಿಯನ್ನು ನೆನಪಿಸಿಕೊಂಡರೆ ಇಂದಿಗೂ ಮೈ ಜುಮ್ ಅನ್ನುತ್ತದೆ. ದೇವರು ದೊಡ್ಡವನು! ನಮ್ಮನ್ನು ಬಚಾವ್ ಮಾಡಿದ.

ವಿಪರೀತ ಹೊಡೆಯುತ್ತಿದ್ದರು ಅನ್ನುವದನ್ನು ಬಿಟ್ಟರೆ ಉಳಿದೆಲ್ಲ ದೃಷ್ಟಿಯಿಂದ ಕಾತ್ರಾಳೆ ಸರ್ ಮಾದರಿ ಶಿಕ್ಷಕರು. ಸದಾ ಏನಾದರೂ ಓದುತ್ತ ಅಥವಾ ಬರೆಯುತ್ತ ಕೂತಿರುತ್ತಿದ್ದರು. ಸಣ್ಣ ಪ್ರಮಾಣದ ಸಾಹಿತಿ ಬೇರೆ. ಯಾವ್ಯಾವದೋ ಲೈಬ್ರರಿಗಳಿಗೆ ಹೋಗಿ ಏನೇನೋ ಓದಿ ಬರುತ್ತಿದ್ದರು. ಏನೇನೋ ಬರೆದು ಪತ್ರಿಕೆಗಳಿಗೆ ಕಳಿಸುತ್ತಿದ್ದರು. ಅದು ಇದು ಅಂತ ಏನೇನೋ ಮಾಡುತ್ತಿರುತ್ತಿದ್ದರು. ಆಗಿನ ಪ್ರಾಥಮಿಕ ಶಾಲೆಯ ಶಿಕ್ಷಕರು SSLC ಮುಗಿಸಿದ ನಂತರ TCH ಅಂತ ಏನೋ ತರಬೇತಿಯ ನಂತರ ನೌಕರಿಗೆ ಬರುತ್ತಿದ್ದರು. ನೌಕರಿ ಸೇರಿದಾಗ ಕಾತ್ರಾಳೆ ಸರ್ ಕೂಡ ಅಷ್ಟೇ. ಆದರೆ ಕಾತ್ರಾಳೆ ಸರ್ ಮುಂದೆ ಮಾಡಿದ ಸಾಧನೆಗಳು ಮಾತ್ರ really impressive. ೨೦೦೫-೬ ರ ಸುಮಾರಿಗೆ ಯಾಕೋ ಒಮ್ಮೆ ಸರ್ ನೆನಪಾದಾಗ ಇಂಟರ್ನೆಟ್ ನಲ್ಲಿ ಸುಮ್ಮನೆ ಹುಡುಕಿದ್ದೆ. ಅವರು ನಮಗೆ ಪಾಠ ಮಾಡಿದ್ದು ೧೯೮೧-೮೨ ರ ಸಮಯದಲ್ಲಿ. ಇಪ್ಪತ್ತು ವರ್ಷಗಳಲ್ಲಿ ಸರ್ ಬ್ಯಾಚುಲರ್ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ PhD ಕೂಡ ಮಾಡಿಮುಗಿಸಿದ್ದರು. ಇಷ್ಟೆಲ್ಲಾ ಸಾಧನೆಗಳನ್ನು ನೌಕರಿ ಮಾಡುತ್ತಲೇ ಮಾಡಿಕೊಂಡರು. ಇಷ್ಟೇ ಅಲ್ಲ. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದರು. ಪುಸ್ತಕ ಬರೆದರು. syllabus ತಯಾರುಮಾಡುವ ಸರ್ಕಾರಿ ಕಮಿಟಿಗೆ ಛೇರ್ಮನ್ ಆಗಿದ್ದರು. ಒಟ್ಟಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದರು. ಪತ್ರಿಕೆಗಳಲ್ಲಿ ಅಲ್ಲಿಲ್ಲಿ ಹೆಸರು ಬರುತ್ತಿತ್ತು. ಕೇವಲ SSLC ಮುಗಿಸಿಬಂದ ವ್ಯಕ್ತಿ ನೌಕರಿ ಮಾಡುತ್ತ, ಸಂಸಾರದ ರಥ ಎಳೆಯುತ್ತ, ಯಾವದೇ ವಿಶೇಷ ಸವಲತ್ತಿಲ್ಲದೆ ಇಷ್ಟೆಲ್ಲ ಸಾಧನೆ ಮಾಡಿದ್ದು ಸಣ್ಣ ಮಾತಲ್ಲ. Hats off, Sir!

ಇಂಟರ್ನೆಟ್ ನಲ್ಲಿ ಹುಡುಕಿದಾಗ ಕಾತ್ರಾಳೆ ಸರ್ ಅವರ ಸಾಧನೆ ಬಗ್ಗೆ ಓದಿ ತುಂಬಾ ಖುಷಿಯಾಗಿತ್ತು. ಮುಂದೊಮ್ಮೆ ಅವರನ್ನು ಜರೂರ್ ಭೆಟ್ಟಿಯಾಗಿ ಅವರನ್ನು ಅಭಿನಂದಿಸಿ ಆಶೀರ್ವಾದ ಪಡೆಯೇಬೇಕೆಂದಿದ್ದೆ. ಅದು ಹಾಗೇ ಮುಂದೂಡಿಕೊಂಡು ಹೋಗಿ ಆಗಿರಲಿಲ್ಲ. ೨೦೧೨ ನಮ್ಮ SSLC ಬ್ಯಾಚಿನ ೨೫ ವರ್ಷಗಳ ರಜತಮಹೋತ್ಸವ. ಆ ಸಮಾರಂಭಕ್ಕೆ ಎಲ್ಲ ಗುರುವರ್ಗವನ್ನು ಆಹ್ವಾನಿಸಬೇಕು ಅಂತ ಒಂದು ಲಿಸ್ಟ್ ಮಾಡಿ, ಹಳೆಯ ಶಿಕ್ಷಕರನ್ನು ಹುಡುಕಲಾರಂಭಿಸಿದಾಗ ದೊಡ್ಡ ಆಘಾತ ಕಾದಿತ್ತು. ಧಾರವಾಡದ ಸ್ನೇಹಿತರು ಹೇಳಿದರು, 'ಕಾತ್ರಾಳೆ ಸರ್ ದಿವಂಗತರಾಗಿ ಸುಮಾರು ವರ್ಷಗಳಾದವು!' ಅದು ದೊಡ್ಡ ಶಾಕ್. ೨೦೦೫ ಮತ್ತು ೨೦೧೨ ಮಧ್ಯೆ ಯಾವಾಗಲೋ ಸರ್ ನಿಧನರಾಗಿದ್ದರು. ಹೆಚ್ಚೆಂದರೆ ೫೦-೫೫ ವರ್ಷಗಳಾಗಿರಬೇಕು. ಅದಕ್ಕಿಂತ ಜಾಸ್ತಿಯಿಲ್ಲ. ಪಾಪ! ಅಂತವರು ಇನ್ನೊಂದಿಷ್ಟು ವರ್ಷ ಮುದ್ದಾಂ ಇರಬೇಕಿತ್ತು. ಇನ್ನೂ ಏನೇನು ಸಾಧನೆ ಮಾಡಿ ಮಾಡಿ ಇಡುತ್ತಿದ್ದರೋ. ಕಿಡ್ನಿ ತೊಂದರೆಯಿಂದ ತೀರಿಕೊಂಡಿದ್ದರು ಅಂತ ಅವರ ಮನೆ ಹತ್ತಿರಕ್ಕಿದ್ದ ಸ್ನೇಹಿತೆ ಹೇಳಿದ್ದಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಅದೇ ಸಮಾರಂಭಕ್ಕೆ ಎಂದು ಹಳೆಯ ದೋಸ್ತರನ್ನು ಹುಡುಕುತ್ತ ಹೋದರೆ ಮತ್ತೊಂದು ಶಾಕ್. ಸುರೇಶ ಜಾಲಿಗಿಡದ ಸಹ ಶಿವನ ಪಾದ ಸೇರಿಕೊಂಡಿದ್ದ. ಯಾವಾಗ ಗೊತ್ತಿಲ್ಲ. ಏಳನೇ ಕ್ಲಾಸಿನವರೆಗೆ ನಮ್ಮ ಜೊತೆಗೇ ಇದ್ದ. ನಂತರ ಕನ್ನಡ ಮೀಡಿಯಂ ಸೇರಿದ್ದ. ಜಾಸ್ತಿ ಟಚ್ ಇರಲಿಲ್ಲ. ಆದರೂ ಶಾಲೆಯಲ್ಲಿ ಕಾಣುತ್ತಿದ್ದ. ಶಾಲೆ ಬಿಟ್ಟ ಮೇಲೆ ಗೊತ್ತಿರಲಿಲ್ಲ. ಇಪ್ಪತ್ತೈದು ವರ್ಷಗಳ ನಂತರ ಹುಡುಕಿದರೆ ಜಾಲ್ಯಾ ಈಗ ಬರೇ ನೆನಪು ಅಂತ ಗೊತ್ತಾಯಿತು. ಬೇಸರವಾಯಿತು.

ಜಾಲ್ಯಾನ ಬಗ್ಗೆ ಫೇಸ್ಬುಕ್ ಮೇಲೆ ಇತರೆ ದೋಸ್ತರೊಂದಿಗೆ ಮಾತಾಡುತ್ತಿದ್ದಾಗ ಪರಮಮಿತ್ರ ಅರವಿಂದ ಪಾಟೀಲ ಜಾಲ್ಯಾನ ಮತ್ತೊಂದು ಖತರ್ನಾಕ್ ಕಾರ್ನಾಮೆಯನ್ನು ನೆನಪು ಮಾಡಿದ್ದ. ಐದನೇ ತರಗತಿಯಲ್ಲಿದ್ದಾಗ ಆಗಿದ್ದು. ನನಗೆ ಅಷ್ಟು ಸರಿಯಾಗಿ ನೆನಪಿಲ್ಲ. ಆಗಿದ್ದಿಷ್ಟು. ಒಂದು ದಿನ ಜಾಲ್ಯಾನ ತಂದೆ ಮತ್ತೆ ತರಗತಿಗೆ ಭೇಟಿ ಕೊಟ್ಟಿದ್ದರು. ಯಾರೂ ಅವರನ್ನು ಕರೆದು ಬಂದಿರಲಿಲ್ಲ. ತಾವೇ ಬಂದಿದ್ದರು. ಬಂದವರೇ ಸೀದಾ ಜಾಲ್ಯಾ ಕೂತಿದ್ದ ಜಾಗಕ್ಕೆ ಹೋದವರೇ ಅವನನ್ನು ಎಳೆದುಕೊಂಡು ಬಂದು ಕ್ಲಾಸಿನಲ್ಲಿದ್ದ ಟೀಚರ್ ಮುಂದೆಯೇ ದನ ಬಡಿದಂತೆ ಬಡಿದು ಬಡಿದು ಹಾಕಿದ್ದರು. ಅದ್ಯಾಕೆ ಜಾಲಿಗಿಡದನ ಅಪ್ಪ ಆ ನಮೂನಿ ಉಗ್ರಸ್ವರೂಪಿಯಾಗಿ ಸ್ವಂತ ಮಗನ ಮೇಲೆಯೇ ತಾಂಡವನೃತ್ಯ ಮಾಡಿದರು ಅಂತ ನೋಡಿದರೆ ಜಾಲ್ಯಾ ದೊಡ್ಡ ಲಫಡಾ ಮಾಡಿಕೊಂಡಿದ್ದ. ಹಜಾಮತಿಗೆ (ಕ್ಷೌರ) ಅಂತ ಕೊಟ್ಟ ರೊಕ್ಕವನ್ನು ತಿಂದು ನುಂಗಿ ನೀರು ಕುಡಿದುಬಿಟ್ಟಿದ್ದ! ಆ ದಿನದ ಮಕ್ಕಳ ಕೈಯಲ್ಲಿ ಹಾರ್ಡ್ ಕ್ಯಾಶ್ ಅಂತ ಏನಾದರೂ ಬಂದರೆ ಅದು ಹಜಾಮತಿ ರೊಕ್ಕ ಮಾತ್ರ ಆಗಿರುತ್ತಿತ್ತು. 'ಹೊಟ್ಟಿಗೆ ಹಾಕ್ತೇವಿ. ಬಟ್ಟಿ ಕೊಡಸ್ತೇವಿ. ಇಷ್ಟಾದ ಮೇಲೆ ಮತ್ಯಾಕಲೇ ರೊಕ್ಕಾ??' ಅಂತ pocket money ಕೇಳಿದ ಮಕ್ಕಳನ್ನು ಜಬರಿಸುವ ಪಾಲಕರೇ ಜಾಸ್ತಿ ಇದ್ದರು. ಏನೋ ತಲೆ ಮೇಲಿನ ಕಳೆ ತೆಗೆಸಲಿ ಅಂತ ತಿಂಗಳಿಗೆ ಒಂದು ಬಾರಿ ಹಜಾಮತಿ ಭತ್ಯೆ ಕೊಡುತ್ತಿದ್ದರು. ಆಗ ಎರಡು ರೂಪಾಯಿಗೆ ಬಾಲಕರ ಮುಂಡನ, ಮೂರು ರೂಪಾಯಿಗೆ ದೊಡ್ಡವರ ಮುಂಡನ ಆಗುತ್ತಿತ್ತು. ಮೇಲಿಂದ ಮಾಡುವ ಮಸಾಜ್ ಫ್ರೀ. ನಾಲ್ಕಾಣೆ ಕಾಣದ ಮಕ್ಕಳ ಕೈಯಲ್ಲಿ ಒಮ್ಮೆಲೇ ಎರಡು ರೂಪಾಯಿ ಬಂದರೆ!!?? ಅಷ್ಟೇ ಮತ್ತೆ. ದೊಡ್ಡ ನಿಧಿ ಸಿಕ್ಕಂತೆ. ಜಾಲಿಗಿಡದನಂತೂ ಬಿಡಿ. ಬಾಲವಿಲ್ಲದ ಮಂಗ. ಅದೇನು ಸ್ಕೀಮ್ ಹಾಕಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಹಜಾಮತಿ ಭತ್ಯೆಯನ್ನು ಬೇರೆ ಯಾವದಕ್ಕೋ ಉಡಾಯಿಸಿದ್ದಾನೆ. ಅದು ಅಪ್ಪನಿಗೆ ಗೊತ್ತಾಗಿದೆ. ತಪ್ಪು ಮಾಡಿದ ಕೂಡಲೇ ಪಾಠ ಕಲಿಸಬೇಕು. ತಡ ಮಾಡಿದರೆ ಪಾಠದ ಮಹತ್ವ ಗೊತ್ತಾಗಲಿಕ್ಕಿಲ್ಲ ಅಂದುಕೊಂಡವರೇ ಸೀದಾ ಶಾಲೆಗೇ ಬಂದು ಕ್ಲಾಸಿನಲ್ಲಿ ಶಿಕ್ಷಕರ ಮುಂದೆಯೇ ಬರೋಬ್ಬರಿ ನಾದಿದ್ದಾರೆ. ಈ ಪುಣ್ಯಾತ್ಮ ಹಜಾಮತಿ ಭತ್ಯೆಯನ್ನೇನೋ ಉಡಾಯಿಸಿದ್ದ. ನಂತರ ಹಜಾಮತಿ ಮಾಡಿಸಿದ ಶಾಸ್ತ್ರವೂ ಇರಲಿ ಅಂತ self service ಹಜಾಮತಿ ಮಾಡಿಕೊಂಡು, ಒಳ್ಳೆ 'ಇಲಿ ತಿಂದ ತಲೆ' ಸಹಿತ ಮಾಡಿಕೊಂಡು, ದಕ್ಷಿಣ ಆಫ್ರಿಕಾದಲ್ಲಿ ಬಿಳಿ ನಾಪಿತ ಹಜಾಮತಿ ಮಾಡಲಿಲ್ಲ ಅಂತ ತಾವೇ ಹಜಾಮತಿ ಮಾಡಿಕೊಂಡಿದ್ದ ಗಾಂಧೀಜಿ ಅವತಾರದಲ್ಲಿ ಬಂದಿದ್ದ ಅಂತ ನೆನಪು. ಇವೆಲ್ಲ ಸೇರಿ ಅವರಪ್ಪನನ್ನು ಕೆರಳಿಸಿ ಅವನಿಗೆ ಭರ್ಜರಿ ಮೇಜವಾನಿ ಅವತ್ತು.

ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು ಅಂತ ಉಪದೇಶ ಕೇಳಿದ್ದೆವು. ಆದರೆ ಕಾತ್ರಾಳೆ ಸರ್ ಘಟನೆಯಿಂದ ಅದರ ಪ್ರಾತ್ಯಕ್ಷಿಕೆ ಸಹಿತ ಲೈವ್ ನೋಡಿ ಬರೋಬ್ಬರಿ ಪಾಠ ಕಲಿತದ್ದಾಯಿತು. ಕಾತ್ರಾಳೆ ಸರ್ ಕಲಿಸಿದ ಬೇರೆ ಎಲ್ಲ ಪಾಠಗಳಿಗಿಂತ ಅದೇ ಮುಖ್ಯ ಪಾಠ ಅಂತ ನಂಬಿಕೆ. ಹಾಗಾಗಿ ಆ ಅಮೂಲ್ಯ ಪಾಠಕ್ಕೆ ಮತ್ತು ಅದನ್ನು ತಮ್ಮ ಖರ್ಚಿನಲ್ಲಿ ಕಲಿಸಿದ ಸರ್ ಅವರಿಗೊಂದು ದೊಡ್ಡ ನಮಸ್ಕಾರ.

ಕಾತ್ರಾಳೆ ಸರ್ ಅವರ ಶಿಷ್ಯನಾಗುವ ಮೊದಲು ಯಾವದೇ ಸಾಹಿತಿಗಳ, ಬರಹಗಾರರ ಸಾನಿಧ್ಯ ಸಿಕ್ಕಿರಲಿಲ್ಲ. ಇವತ್ತೇನಾದರೂ ನನಗೆ ಓದುವ ಮತ್ತು ಬರೆಯುವ ಹುಚ್ಚುಗಳನ್ನು ಹಚ್ಚಿದ್ದರೆ ಅದಕ್ಕೆ ಕಾತ್ರಾಳೆ ಸರ್ ಅವರ ಪ್ರಭಾವವೇ ಕಾರಣ. ಎರಡು ಭಯಂಕರ ಒಳ್ಳೆ ಹುಚ್ಚುಗಳು. 'ಅಯ್ಯೋ ಬೋರಿಂಗ್. ಟೈಮ್ ಪಾಸ್ ಮಾಡೋದು ಹೇಗೆ ಅಂತ ಗೊತ್ತಾಗಲ್ಲ. feeling lonely,' ಅಂತೆಲ್ಲ ಜನ ಅಲವತ್ತುಕೊಳ್ಳುವಾಗ ನಮಗೆ ಅವೆಲ್ಲ ಏನೂಂತಲೇ ಅರ್ಥವಾಗುವದಿಲ್ಲ. ಯಾಕೆಂದರೆ ನಮಗೆ ಅವುಗಳ ಅನುಭವವೇ ಇಲ್ಲ. ಮಾಡುವಷ್ಟು ಕೆಲಸ ಮಾಡಿದ. ಉಳಿದ ಸಮಯದಲ್ಲಿ ಪುಸ್ತಕ ತೆಗೆದು ಕೂತ. ಮೂಡ್ ಬಂದರೆ ಏನೋ ಬ್ಲಾಗ್ ಗೀಚಿದ. ಎಲ್ಲಿಯ ಬೋರು? ಎಲ್ಲಿಯ ಬೇಜಾರು?

ಓದುವದನ್ನು ಬಿಡಿ. ಮನೆಯಲ್ಲಿ ಎಲ್ಲರೂ ಬಿಡುವಿನ ವೇಳೆಯಲ್ಲಿ ಪುಸ್ತಕ ಹಿಡಿದು ಕೂತಿರುತ್ತಿದ್ದರು. ನಾನೂ ಅದನ್ನೇ ಮಾಡಿದೆ. ಓದುವದರಲ್ಲಿ ಸಿಕ್ಕ ಮಜಾಕ್ಕೆ addict ಆದೆ. ಆದರೆ ಬರೆಯುವ ಹವ್ಯಾಸ ಮನೆಯಲ್ಲಿ ಯಾರಿಗೂ ಇರಲಿಲ್ಲ. ನನಗೆ ಗೀಚುವದರಲ್ಲಿ ಆಸಕ್ತಿ ಇತ್ತು. ಸುಖಾಸುಮ್ಮನೆ ಗೀಚುವದನ್ನು ಬರವಣಿಗೆಯನ್ನಾಗಿ ಮಾರ್ಪಡಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಕಾತ್ರಾಳೆ ಸರ್ ಅವರ ಪ್ರಭಾವ.

ನಾಲ್ಕನೇ ಕ್ಲಾಸಿಗೆ ಬಂದಿದ್ದೇ ಬಂದಿದ್ದು ಕಾತ್ರಾಳೆ ಸರ್ ಅವರ ಬಹುಮುಖ ಪ್ರತಿಭೆಯ ಪ್ರಭೆಯಲ್ಲಿ ಮಿಂದೆ. ಅದರಲ್ಲೇ ಕಳೆದೂಹೋದೆ. ಕಾತ್ರಾಳೆ ಸರ್ ಅವರ ಕೈಬರಹ ಬಲು ಸುಂದರ. ಮೊದಲು ಇಂಪ್ರೆಸ್ ಮಾಡಿದ್ದು ಅದೇ. ಅದೇ ರೀತಿಯಲ್ಲಿ ಕಾಪಿ ಮಾಡಿದೆ. ಎಲ್ಲಿಯವರೆಗೆ ಅಂದರೆ... ಒಮ್ಮೆ ಸರ್ ನಾಲ್ಕು ದಿನದ ರಜೆ ಮೇಲೆ ಹೋಗಿದ್ದರು. ತಾತ್ಕಾಲಿಕವಾಗಿ ಉಸ್ತುವಾರಿ ವಹಿಸಿಕೊಂಡಿದ್ದ ಕಲಾದಗಿ ಟೀಚರ್, ಜೇವೂರ ಟೀಚರ್ ಇತ್ಯಾದಿಗಳು ನಮ್ಮ ಕ್ಲಾಸಿನ ಎಲ್ಲರ ಹೆಸರುಗಳನ್ನು ಪಟ್ಟಿ ಮಾಡಿಕೊಡುವಂತೆ ನನಗೆ ಹೇಳಿದ್ದರು. ಕ್ಲಾಸಿನ ಮಾನಿಟರ್ ನಾನೇ ನೋಡಿ. ಹಾಗಾಗಿ ಕಾರಕೂನನ ಕೆಲಸ. ನೀಟಾಗಿ ಸುಮಾರು ಅರವತ್ತು ಜನರ ಹೆಸರು ಬರೆದುಕೊಟ್ಟೆ. 'ನೀನೇ ಬರೆದೆಯೋ ಅಥವಾ ನಿಮ್ಮ ಸರ್ ರಜಾ ಮೇಲೆ ಹೋಗೋ ಮೊದಲು ಬರೆದುಕೊಟ್ಟು ಹೋಗ್ಯಾರೋ!!??' ಅಂತ ಕೇಳಿದರು ಮೇಡಮ್ಮುಗಳು. 'ಇಲ್ರೀ ಟೀಚರ್. ನಾನೇ ಸ್ವಂತ ಬರದೇನ್ರಿ...' ಅಂದೆ. 'ಎಷ್ಟ ಛಂದ, ನಿಮ್ಮ ಸರ್ ಬರದಂಗss, ಬರದಿಯಲ್ಲೋ! ವ್ಯತ್ಯಾಸ ಹೇಳಲಿಕ್ಕೆ ಸಾಧ್ಯ ಇಲ್ಲ ನೋಡು. ಶಭಾಷ್!' ಅಂತ ನನ್ನ ಕೈಬರಹದ ಬಗ್ಗೆ ಶಭಾಷಿ ಕೊಟ್ಟಿದ್ದರು. ಕಾತ್ರಾಳೆ ಸರ್ ರಜೆ ಮುಗಿಸಿ ಬಂದ ನಂತರ ಇದು ಅವರ ಕಿವಿಗೂ ಬಿದ್ದು ಅವರೂ ಡುಬ್ಬ ಚಪ್ಪರಿಸಿದ್ದರು. ನೊಬೆಲ್ ಪ್ರೈಜ್ ಬಂದಷ್ಟು ಖುಷಿ.

ಮನೆಯಲ್ಲಿ ಏನೋ ಚಿತ್ರ ಗಿತ್ರ ಗೀಚಿಕೊಂಡಿದ್ದೆ. ಕಾತ್ರಾಳೆ ಸರ್ ತರಗತಿಯಲ್ಲಿ ತಮ್ಮ ಕವಿತೆಗಳನ್ನು ಓದುತ್ತಿದ್ದರು. ನಮಗೂ ಕವಿತೆ ಬರೆಯುವಂತೆ ಹುರಿದುಂಬಿಸುತ್ತಿದ್ದರು. ಅದರಿಂದ ಪ್ರಭಾವಿತರಾಗಿ ಎಲ್ಲರೂ ಕವಿತೆ ಬರೆದಿದ್ದೇ ಬರೆದಿದ್ದು. ನನ್ನ ಮೊದಲ ಕವಿತೆ ನಮ್ಮ native ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆ ಬಗ್ಗೆ ಇತ್ತು. ಪ್ರಾಸ ಹೊಂದಿಸಲು ಅಣ್ಣ ಸ್ವಲ್ಪ ಸಹಾಯ ಮಾಡಿದ್ದ. ಕವಿತೆ ಅಂದ ಮೇಲೆ ಪ್ರಾಸಬದ್ಧವಾಗಿರಲೇಬೇಕು ಎಂಬುದು ಅಂದಿನ ನಂಬಿಕೆ. ಉತ್ತರ ಕನ್ನಡದ ಪ್ರಕೃತಿ ಸೌಂದರ್ಯ, ಕಲೆ ಇತ್ಯಾದಿಗಳ ಮೇಲೆ ಬರೆದಿದ್ದ ನಾಲ್ಕು ಚರಣಗಳ ಸಣ್ಣ ಕವಿತೆ. ಎರಡು ವರ್ಷಗಳ ನಂತರ ಆರನೇ ತರಗತಿಯಲ್ಲಿದ್ದಾಗ ಅದನ್ನು ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ 'ಎಳೆಯರ ಬಳಗ' ಅನ್ನುವ ಮಕ್ಕಳ ರೇಡಿಯೋ ಕಾರ್ಯಕ್ರಮದಲ್ಲಿ ಓದಿದ್ದೂ ಆಯಿತು. ಆಗ ಆಕಾಶವಾಣಿಯ ಡೈರೆಕ್ಟರ್ ಆಗಿದ್ದ ಶ್ರೀಮತಿ ನಾಯಕ್ (ಉರ್ಫ್ ಅಕ್ಕಮ್ಮ) ನಮಗೆ ಆಪ್ತರು. ಹಾಗಾಗಿ ಒಂದೆರೆಡು ಬಾರಿ ಅವಕಾಶ ಕೊಟ್ಟಿದ್ದರು.

ಪಠ್ಯದಲ್ಲಿದ್ದ ಎರಡು ಪಾಠಗಳನ್ನು ರೂಪಾಂತರಿಸಿ ನಾಟಕ ಬರೆದು, ನಿರ್ದೇಶಿಸಿ, ಆಡುವಂತೆ ಹೇಳಿದರು ಕಾತ್ರಾಳೆ ಸರ್. ಅದರಂತೆ ಸುಭಾಶ್ಚಂದ್ರ ಬೋಸ್ ಮಾತ್ತು ಮಹಾಭಾರತದ ಉತ್ತರ ಕುಮಾರ - ಎರಡು ನಾಟಕಗಳನ್ನು ಬರೆದೆ. ಸರ್ ತಿದ್ದಿದರು. ನಂತರ ಆ ನಾಟಕಗಳನ್ನು ಕ್ಲಾಸಿನಲ್ಲಿ ಆಡಿದ್ದೂ ಆಯಿತು. ನಾಟಕದ ಹೀರೋ ಯಾರಾಗಿದ್ದರು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ? :)

ಹೀಗೆ ನಿರಂತರ ಓದಿಗೆ, ಬಹಳ ಇಷ್ಟವಾದ ಬರವಣಿಗೆಗೆ ಬರೋಬ್ಬರಿ ಬೇಸ್ ಹಾಕಿದವರು ಕಾತ್ರಾಳೆ ಸರ್. ಮುಂದೆ ಅನೇಕಾನೇಕ ಒಳ್ಳೊಳ್ಳೆ ಗುರುಗಳು ಸಿಕ್ಕರು. ಈ ಆಸಕ್ತಿಗಳು ಅಭಿವೃದ್ಧಿ ಆಗುತ್ತ ಹೋದವು. ಆದರೆ ಆ impressionable ಸಣ್ಣ ವಯಸ್ಸಿನಲ್ಲಿ ಕಾತ್ರಾಳೆ ಸರ್ ಅವರಂತಹ ಬಹುಮುಖ ವ್ಯಕ್ತಿತ್ವದ ಗುರುಗಳು ಸಿಗದೇಹೋಗಿದ್ದರೆ ಇವೆಲ್ಲ ಆಗುವದು doubtful.

ಕೊನೇ ಬಾರಿ ಮುಖತಃ ಕಾತ್ರಾಳೆ ಸರ್ ಅವರನ್ನು ನೋಡಿದ್ದು ೧೯೯೦ ಡಿಸೆಂಬರ್ ನಲ್ಲಿ. ಆಗ ಇಂಜಿನಿಯರಿಂಗ್ ಮೊದಲನೇ ಸೆಮಿಸ್ಟರ್ ಮುಗಿಸಿ ಬಂದಿದ್ದೆ. ಮಾಳಮಡ್ಡಿಯಲ್ಲಿ ಪಡ್ಡೆ ತಿರುಗುತ್ತಿರುವಾಗ ಸಿಕ್ಕಿದ್ದರು. ಸಂಕೋಚದಿಂದಲೇ ನಮಸ್ಕಾರ ಹೇಳಿದ್ದೆ. ಸಂಕೋಚ ಯಾಕೆಂದರೆ ಅಂದಿನ ಕೇಶವಿನ್ಯಾಸ ಖರಾಬಾಗಿತ್ತು. ಅದು ಸಂಜಯ್ ದತ್ತನ 'ಸಾಜನ್' ಫಿಲಂ ಜಮಾನಾ. ಅವನ ಭುಜದ ತನಕ ಬರುವ ಘೋಡಾ hairstyle ಸಿಕ್ಕಾಪಟ್ಟೆ ಪಾಪ್ಯುಲರ್. ನಮ್ಮದೂ ಸುಮಾರು ಅದೇ ಸ್ಟೈಲ್ ಇತ್ತು. ಅಂತಹ ಖರಾಬ್ hairstyle ಇಟ್ಟುಕೊಂಡು ಕಾತ್ರಾಳೆ ಸರ್ ಮುಂದೆ ಬರುವದು ದೊಡ್ಡ ಡೇಂಜರ್. ಮಾಳಮಡ್ಡಿಯಲ್ಲಿ ಪಡ್ಡೆ ಹುಡುಗನಂತೆ ತಿರುಗಾಡುತ್ತಿದ್ದೆ ಅಂದ ಮೇಲೆ ದವಡೆಯಲ್ಲಿ ಜರ್ದಾ ತಾಂಬೂಲ ಸಹ ಇದ್ದಿರಲೇಬೇಕು. ದೂರದ ಕಲ್ಯಾಣನಗರದಿಂದ ಮಾಳಮಡ್ಡಿಗೆ ಬರುತ್ತಿದ್ದುದೇ ಗೆಳೆಯ ಭೀಮ್ಯಾನ ಚುಟ್ಟಾ ಅಂಗಡಿಯಲ್ಲಿ ಪಾಂಗಿತವಾಗಿ ಒಂದು ಜರ್ದಾ ಪಾನ್ ಮಾಡಿಸಿಕೊಂಡು, ಅದನ್ನು ದವಡೆಯಲ್ಲಿಟ್ಟುಕೊಂಡು, ಘಂಟೆಗಟ್ಟಲೆ ರಸ ಹೀರಿ, ಭರ್ಜರಿ ಪಿಚಕಾರಿ ಹಾರಿಸಿ.... ಒಟ್ಟಿನಲ್ಲಿ ಸಂಜೆಯ ಮಜಾ ತೆಗೆದುಕೊಳ್ಳಲು. ಒಟ್ಟಿನಲ್ಲಿ ಟೋಟಲ್ ಪೊರ್ಕಿ ಉಡಾಳನ ಅವತಾರದಲ್ಲಿ ಕಾತ್ರಾಳೆ ಸರ್ ಎದುರಿಗೆ ಅದೆಷ್ಟೋ ವರ್ಷಗಳ ನಂತರ ಸಿಕ್ಕಿಬಿದ್ದಿದ್ದೇನೆ. ಏನು ಗ್ರಹಚಾರ ಕಾದಿದೆಯೋ ಅಂತ ಚಿಂತೆಯಾಯಿತು.

ಕಾತ್ರಾಳೆ ಸರ್ ಒಂದು ಮಾತು ಹೇಳಿಯೇ ನಾಲ್ಕನೆ ತರಗತಿಯಿಂದ ಬೀಳ್ಕೊಟ್ಟಿದ್ದರು. 'ನೀವು ಎಷ್ಟೇ ದೊಡ್ಡವರಾಗ್ರಿ. ಎಷ್ಟೇ ದೊಡ್ಡ ನೌಕರಿ ಒಳಗ ಇರ್ರಿ. ಗವರ್ನರ್ ಬೇಕಾದ್ರೂ ಆಗ್ರಿ. ನೀವು ಯಾವಾಗಲೂ ನನ್ನ ವಿದ್ಯಾರ್ಥಿಗಳೇ. ಯಾವಾಗ ಸಿಕ್ಕರೂ ಅಷ್ಟೇ. ನೀವು ಸಿಕ್ಕ ಪರಿಸ್ಥಿತಿ, ನಿಮ್ಮ ಅವತಾರ ಸರಿ ಇರಲಿಲ್ಲ ಅಂದ್ರ ನಿಮ್ಮನ್ನು ಅಲ್ಲೇ ಹಾಕ್ಕೊಂಡು ಬಡಿತೇನಿ. ಅದರ ಬಗ್ಗೆ ಯಾವದೇ ಸಂಶಯ ಬ್ಯಾಡ. ಜ್ವಾಕಿ. ನನ್ನ ಮಾತು ಮರಿಬ್ಯಾಡ್ರಿ. ಮರೆತು ಮಂಗ್ಯಾ ಆಗಿ, ದೊಡ್ಡವರಾದರೂ ಹಳೆ ಮಾಸ್ತರ್ ಕಡೆ ಹೆಂಡ್ತಿ ಮಕ್ಕಳ ಮುಂದ ಕಡತಾ ತಿನ್ನಬ್ಯಾಡ್ರಿ. ಓಕೆ??' ಅಂತ ವಾರ್ನಿಂಗ್ ಕೊಟ್ಟಿದ್ದರು. ಅದು ಪೊಳ್ಳು ಬೆದರಿಕೆಯಲ್ಲ ಅಂತ ಗೊತ್ತಿತ್ತು. ಯಾಕೆಂದರೆ ಮಾಜಿ ವಿದ್ಯಾರ್ಥಿಗಳಿಗೆ ಸರ್ ಬಾರಿಸಿದ್ದರ ಬಗ್ಗೆ, ಬೆಂಡೆತ್ತಿದ್ದರ ಬಗ್ಗೆ ನಮಗೇ ಗೊತ್ತಿತ್ತು. ಇದೆಲ್ಲ ನೆನಪಾಗಿ ಎಂಟು ವರ್ಷಗಳ ಬಳಿಕ ಈಗ ನನಗ್ಯಾವ 'ಚಿಕಿತ್ಸೆ' ಕಾದಿದೆಯೋ ಅಂತ ಮಂಗ್ಯಾ ಆಗಿದ್ದೆ. ಸ್ಕೂಟರ್ ಮೇಲೂ ಇರಲಿಲ್ಲ. ಒಂದು ಸೆಮಿಸ್ಟರ್ ನಂತರ ವಾಪಸ್ ಬಂದಿದ್ದಕ್ಕೆ ಹಳೆಯ ಅಡ್ಡಾಗಳನ್ನೆಲ್ಲ ಪಾದಯಾತ್ರೆ ಮೂಲಕ ತಿರುಗಾಡಿಬರೋಣ ಅಂತ ನಟರಾಜಾ ಸರ್ವೀಸ್ ಮಾದರಿಯಲ್ಲಿ ಸ್ವಂತ ಕಾಲಿನ ಮೇಲೆ ಓಡಾಡುತ್ತಿದ್ದವನನ್ನು ಅಟಕಾಯಿಸಿಕೊಂಡಿದ್ದ ಕಾತ್ರಾಳೆ ಸರ್ ಸ್ವಂತ ಕಾಲಿನ ಮೇಲೆ, ತುದಿಗಾಲಿನ ಮೇಲೆ, ನಿಲ್ಲಿಸಿದ್ದರು.

ಆದರೆ ಸರ್ ಅವರದ್ದು ದೊಡ್ಡ ಮನಸ್ಸು. ಮಮತೆ ತುಂಬಿದ ಆರ್ದ್ರ ಹೃದಯ. ಭುಜದವರೆಗೆ ಇಳಿಬಿದ್ದಿದ್ದ ಕೂದಲಿನ ಕಡೆ ಅವರ ಗಮನ ಹೋಗಲಿಲ್ಲ. ಬಾಯಲ್ಲಿದ್ದ ಜರ್ದಾ ಪಾನಿನ ಕಡೆಯೂ ಹೋಗಲಿಲ್ಲ. 'our pride! our pride!' ಎಂದು ಮನದುಂಬಿ ಹೇಳುತ್ತ ಪ್ರೀತಿಯಿಂದ ಬೆನ್ನು ತಟ್ಟಿದರು. ಆರು ತಿಂಗಳ ಹಿಂದೆ ಪಿಯೂಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕೆ ಅಭಿನಂದಿಸಿದರು. ಖುಷಿಯಾಯಿತು. ಕಾತ್ರಾಳೆ ಸರ್ ಅಚಾನಕ್ಕಾಗಿ ಎದುರಿಗೆ ಬಂದಾಗ ಯಬಡ ಮನಸ್ಸು ಏನೇನೋ ವಿಚಾರ ಮಾಡಿ ಥಂಡಾ ಹೊಡೆದಿತ್ತು. ಮಾಸ್ತರ್ ಹೊಗಳಿಕೆ ಕೇಳಿ ನರ್ಮಿಯಿಂದ ಗರ್ಮಿ ಆಯಿತು. ಕಾತ್ರಾಳೆ ಸರ್ ಜೊತೆಗಿದ್ದ ವಯೋವೃದ್ಧರು ಅದೇ ಶಾಲೆಯ ತುಂಬಾ ಹಳೆಯ ಶಿಕ್ಷಕರಾಗಿದ್ದ ಎಲ್. ಬಿ. ಕುಲಕರ್ಣಿ ಸರ್ ಅಂತ ಪರಿಚಯ ತಿಳಿಯಿತು. ಅವರು ನಮ್ಮ ಅಮ್ಮ, ಮಾಮಾ ಜಮಾನಾದ ಮಂದಿಗೆ ಪಾಠ ಮಾಡಿದವರು. 'ನಮ್ಮ ಶಿಷ್ಯಾ! our pride! our pride!' ಅಂತ ಕಾತ್ರಾಳೆ ಸರ್ ಎಲ್. ಬಿ. ಕುಲಕರ್ಣಿ ಅವರಿಗೆ ನನ್ನ ಬಗ್ಗೆ ಹೇಳಲು ಹೋದರು. ಅನಾದಿ ಕಾಲದಿಂದಲೂ ನಮ್ಮ ಕುಟುಂಬದ ಹಿತಚಿಂತಕರಾಗಿದ್ದ ಎಲ್. ಬಿ. ಕುಲಕರ್ಣಿ ಅವರಿಗೆ ಎಲ್ಲ ಗೊತ್ತಿದ್ದದ್ದೇ. ಅವರು 'ಎಲ್ಲ ಗೊತ್ತಿದೆ' ಮಾದರಿಯಲ್ಲಿ ತಲೆಯಾಡಿಸಿದರು. ಅದರಲ್ಲೇ ಅವರ ಅಭಿನಂದನೆ, ಆಶೀರ್ವಾದ ಎಲ್ಲ ಇರುತ್ತದೆ ಅಂತ ಗೊತ್ತಿತ್ತು ಬಿಡಿ.

ಈ ಕಾತ್ರಾಳೆ ಮಾಸ್ತರ್ 'our pride!' ಅಂತ ಯಾಕೆ ಹೇಳಿದರು ಅನ್ನುವದು ಫ್ಲಾಶ್ ಆಯಿತು. ಅದಕ್ಕೆ ಕಾರಣ ಮತ್ತೊಬ್ಬ ಮಾಸ್ತರರು. ಅವರು ಯಾರು ಅಂದರೆ 'ಗಣಿತಲೋಕ' ಎನ್ನುವ ವಿಶಿಷ್ಟ ಹೆಸರಿದ್ದ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದ ಶ್ರೀನಿವಾಸ ದೇಶಪಾಂಡೆ ಸರ್. ಅವರೂ ಇಂದಿಲ್ಲ. ಪಿಯೂಸಿ ಎರಡು ವರ್ಷ ಏನಾದರೂ ಕಲಿತದ್ದು ಇದ್ದರೆ ಅದೆಲ್ಲ ದೇಶಪಾಂಡೆ ಸರ್ ಕೃಪೆ. ಭಯಂಕರ ಪ್ರತಿಭಾನ್ವಿತರು. ಮೇಲಿಂದ ಸಿಕ್ಕಾಪಟ್ಟೆ idealist. ಅದ್ಭುತ ಶಿಕ್ಷಕರು. ಅವರಿಗೂ ಆಗ ಮೂವತ್ತೂ ಚಿಲ್ಲರೆ ವಯಸ್ಸು ಅಷ್ಟೇ. ಸ್ನೇಹಜೀವಿ. ಮನೆಯಲ್ಲಿ ದೊಡ್ಡ ಲೈಬ್ರರಿ ಇತ್ತು. ಅದೇ ನನಗೆ ದೊಡ್ಡ ಆಕರ್ಷಣೆ. ಅವರೂ ನಮ್ಮ ಕುಟುಂಬಕ್ಕೆ ಸಿಕ್ಕಾಪಟ್ಟೆ ಆಪ್ತರು. ಮೇಲಿಂದ ತಂದೆಯವರ ವಿದ್ಯಾರ್ಥಿ ಬೇರೆ. ಹಾಗಾಗಿ ದೇಶಪಾಂಡೆ ಸರ್ ಮತ್ತು ನಮ್ಮ ನಡುವೆ ಅತ್ಯುತ್ತಮ ಗುರು-ಶಿಷ್ಯ ಸಂಬಂಧ.

ನಮ್ಮ ೧೯೯೦ ರ ಪಿಯೂಸಿ ಬ್ಯಾಚ್ ಅಂದರೆ ದೇಶಪಾಂಡೆ ಸರ್ ಅವರಿಗೆ ಗೋಲ್ದನ್ ಬ್ಯಾಚ್. ಸುಮಾರು ಇಪ್ಪತ್ತು ಮೂವತ್ತು ಜನ ವಿದ್ಯಾರ್ಥಿಗಳು ಒಳ್ಳೆ ಸಾಧನೆ ಮಾಡಿದ್ದರು. ರಾಜ್ಯಕ್ಕೆ ರಾಂಕ್ ಬಂದವರಿದ್ದರು. IIT ಪರೀಕ್ಷೆ ಪಾಸ್ ಮಾಡಿದವರಿದ್ದರು. ಮೆರಿಟ್ ಮೇಲೆ ಒಳ್ಳೊಳ್ಳೆ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳನ್ನು ಗಿಟ್ಟಿಸಿದವರಿದ್ದರು. ಹೀಗಾಗಿ ದೇಶಪಾಂಡೆ ಸರ್ ಬಹಳ ಸಂತಸದಲ್ಲಿದ್ದರು. ಟಾಪ್ ಮೂರು ವಿದ್ಯಾರ್ಥಿಗಳ ಫೋಟೋ ಹಾಕಿಸಿ ಒಂದು pamphlet ಮಾಡಿದ್ದರು. ಆ ಮೂವರಲ್ಲಿ ನಾನೊಬ್ಬವ. ಉಳಿದ ಸಾಧಕರ ಹೆಸರುಗಳಿದ್ದವು. ಆ pamphlet ನ್ನು ದಿನಪತ್ರಿಕೆಗಳಲ್ಲಿ circulate ಆಗುವ ಹಾಗೆ ಮಾಡಿದ್ದರು. ಅದು ಅವರ advertising strategy. ನಮ್ಮ ಕಾಲದಲ್ಲಿ ದೇಶಪಾಂಡೆ ಸರ್ ಮತ್ತು ಗಣಿತಲೋಕ ಟುಟೋರಿಯಲ್ ಅದೆಷ್ಟು ಪ್ರಸಿದ್ಧವಾಗಿತ್ತು ಅಂದರೆ ನಮ್ಮಂತವರ ಸಣ್ಣಪುಟ್ಟ ಸಾಧನೆಯನ್ನು ಡಂಗುರ ಬಾರಿಸಿ ಏನೂ advertise ಮಾಡಿಕೊಳ್ಳಬೇಕಿರಲಿಲ್ಲ. ಆದರೂ ದೇಶಪಾಂಡೆ ಸರ್ ಅವರ ದೊಡ್ಡ ಮನಸ್ಸು, ಪ್ರೀತಿ, ಅಭಿಮಾನ. ಅದಕ್ಕಾಗಿ ಮಾಡಿದ್ದರು. ಪತ್ರಿಕೆಗಳಲ್ಲಿ ಹಾಕಿದ್ದರು. ಆ pamphlet ಗೆ 'Our Pride' ಅಂತ ಶೀರ್ಷಿಕೆ ಕೊಟ್ಟಿದ್ದರು. ಕಾತ್ರಾಳೆ ಸರ್ ಹೆಚ್ಚಾಗಿ ಅದನ್ನು ನೋಡಿರಬೇಕು. ಹಾಗಾಗಿಯೇ ಪದೇಪದೇ 'Our Pride! Our Pride!' ಎಂದು ಹೇಳಿ ಅಭಿನಂದಿಸಿದ್ದರು.

೧೯೯೦ ರ ಡಿಸೆಂಬರಿನಲ್ಲಿ ಕಾತ್ರಾಳೆ ಸರ್ ಅವರನ್ನು ಭೇಟಿಯಾಗಿದ್ದೇ ಕೊನೆ. ಮತ್ತೆ ಭೇಟಿಯಾಗಲಿಕ್ಕೆ ಈಗ ಅವರೇ ಇಲ್ಲ. ಅದೊಂದು ವಿಷಾದ ಸದಾ ಇರುತ್ತದೆ.

ಕಾತ್ರಾಳೆ ಸರ್ ಫೋಟೋ ಇಲ್ಲ. ಅವರು ನೋಡಲಿಕ್ಕೆ ಹೇಗಿದ್ದರು ಅಂದರೆ ಫಿಲ್ ಎಡ್ಮಂಡ್ಸ್ ಇದ್ದ ಹಾಗೆ ಇದ್ದರು ಅಂದರೆ ಉಳಿದವರಿಗೆ confusion ಆದರೂ ನಮ್ಮ ಜಮಾನಾದ ಮಂದಿಗೆ ಹೊಟ್ಟೆ ಹುಣ್ಣಾಗುವಂತೆ ನಗು ಬರುತ್ತದೆ. ೧೯೮೦-೯೦ ರ ದಶಕದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಫಿಲ್ ಎಡ್ಮಂಡ್ಸ್ ಎಂಬ ಆಟಗಾರ ಇದ್ದ. ಎಡಗೈ ಸ್ಪಿನ್ನರ್. ಎತ್ತರಕ್ಕೆ ಇದ್ದ. ತಲೆ ಮೇಲೆ ಅರ್ಧಚಂದ್ರಾಕೃತಿಯಲ್ಲಿ ಬಾಲ್ಡಿ ಪ್ಯಾಚ್. ಕಾತ್ರಾಳೆ ಸರ್ ಕೊಂಚ ಹಾಗಿದ್ದರು ಅಂತ ಕಿಡಿಗೇಡಿಗಳ ಅಭಿಪ್ರಾಯ. ತೆಳ್ಳಗೆ, ಎತ್ತರಿಕ್ಕಿದ್ದರು. ಎತ್ತರವಾಗಿದ್ದರಿಂದ ಕೊಂಚ ಗೂನು. ನಾವು ನಾಲ್ಕನೇ ತರಗತಿಯಲ್ಲಿದ್ದಾಗಲೇ ವಿರಳವಾಗುತ್ತಿದ್ದ ತಲೆ ಮೇಲಿನ ಹುಲ್ಲುಗಾವಲು ನಾವು ಪಿಯೂಸಿಗೆ ಬರುವ ಹೊತ್ತಿಗೆ ಅರ್ಧಚಂದ್ರಾಕೃತಿಯ ಬಾಲ್ಡಿ ತಲೆಯಾಗಿತ್ತು. ಕೊಂಚ ಹೋಲಿಕೆಯಿದ್ದರೂ ಸಾಕು ಏನೋ ಒಂದು ಹೆಸರಿಟ್ಟುಬಿಡುವದು ನಮ್ಮ ಶಾಲೆ ಮಂದಿಯ ಸ್ಪೆಷಾಲಿಟಿ. ಹಾಗಾಗಿ ಕಾತ್ರಾಳೆ ಸರ್ ಅವರಿಗೆ ಫಿಲ್ ಎಡ್ಮಂಡ್ಸ್ ಅಂತ nickname.

ಕ್ರಿಕೆಟಿಗ ಫಿಲ್ ಎಡ್ಮಂಡ್ಸ್

ಪಿಯೂಸಿಯಲ್ಲಿದ್ದಾಗ ಆದ ಘಟನೆ. ನಮ್ಮ ಫ್ರೆಂಡ್ಸ್ ಒಂದಿಷ್ಟು ಜನ JSS ಕಾಲೇಜಿಗೆ ಸೇರಿದ್ದರು. ಅವರ ಒಂದು ಗುಂಪು ಒಂದು ದಿನ ಕಾಲೇಜ್ ಮುಗಿಸಿಕೊಂಡು ಮನೆ ಕಡೆ ಬರುತ್ತಿತ್ತು. ಅವರಿಗೆ ಮಾಳಮಡ್ಡಿ ಎಮ್ಮೆಕೆರೆ ಪಕ್ಕದ ಮಹಿಷಿ ರೋಡಿನಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ಕಾತ್ರಾಳೆ ಸರ್ ಕಂಡಿದ್ದಾರೆ. ಅವರನ್ನು ನೋಡಿದ ಕಿಡಿಗೇಡಿಯೊಬ್ಬ, 'ಏ, ಅಲ್ಲಿ ನೋಡಲೇ. ಫಿಲ್ ಎಡ್ಮಂಡ್ಸ್ ಹೊಂಟಾನ,' ಅಂತ ನಗೆಚಟಾಕಿ ಸಿಡಿಸಿದ್ದಾನೆ. ಅದೇ ಗುಂಪಿನಲ್ಲಿದ್ದವನು ಮನೋಜ ಕರ್ಜಗಿ ಎಂಬ ಮಹಾ ಖತರ್ನಾಕ್ ಕಿಡಿಗೇಡಿ, ನಮ್ಮ ಆತ್ಮೀಯ ಸ್ನೇಹಿತ, ಪರಮ ಕಿತಾಪತಿ, ಹಾಸ್ಯ ಕೋವಿದ. 'ಲೇ, ಈಗ ನೋಡ್ರಿಲೇ. ಕಾತ್ರಾಳೆ ಮುಂದ ಹೋಗಿ ಫಿಲ್ ಎಡ್ಮಂಡ್ಸ್ ಗತೆ ಬೌಲಿಂಗ್ ಹಾಕಿ ಬರ್ತೇನಿ. ನೋಡ್ರಿಲೇ. ಚಾಲೆಂಜ್!' ಅಂತ ಪಂಟು ಹೊಡೆದಿದ್ದಾನೆ. ಎಲ್ಲೋ ದೂರ ನಿಂತು ಕಾತ್ರಾಳೆ ಸರ್ ಅವರಿಗಾಗಲಿ ಅಥವಾ ಬೇರೆ ಯಾರಿಗೋ ಆಗಲಿ ಫಿಲ್ ಎಡ್ಮಂಡ್ಸ್, ಅದು ಇದು ಅಂತ ಹೆಸರಿಟ್ಟು ಲೇವಡಿ ಮಾಡುವದು ದೊಡ್ಡ ಮಾತಲ್ಲ. ಅವರ ಮುಂದೆಯೇ ಹೋಗಿ ಫಿಲ್ ಎಡ್ಮಂಡ್ಸ್ ಅಂತ ಹೇಳುವದೊಂದೇ ಅಲ್ಲ, ಜೊತೆಗೆ ಫಿಲ್ ಎಡ್ಮಮಂಡ್ಸ್ ಬೌಲಿಂಗ್ ಮಾಡುವ ಮಾದರಿಯಲ್ಲಿ ಅಣಕ ಮಾಡಿಬರುವದು ಅಂದರೆ ಸಣ್ಣ ಮಾತಲ್ಲ. ಆದರೆ ಕಿತಾಪತಿ ಆಚಾರಿಯಂದೇ ಖ್ಯಾತನಾಗಿದ್ದ ನಮ್ಮ ದೋಸ್ತ ಕರ್ಜಗಿ ಅಂತಹ ಕೆಲಸಗಳಿಗೆ ಫೇಮಸ್.

ಇಂತಹ ಕರ್ಜಗಿ ಅಡ್ಡಾದಿಡ್ಡಿ ದೇಹ ಅಲ್ಲಾಡಿಸುತ್ತ ಕಾತ್ರಾಳೆ ಸರ್ ಮುಂದೆ ಹೋಗಿದ್ದಾನೆ. ನಮಸ್ಕಾರ ಮಾಡುವ ನೆಪದಲ್ಲಿ ಫಿಲ್ ಎಡ್ಮಂಡ್ಸ್ ಮಾದರಿಯಲ್ಲಿ ಬೌಲಿಂಗ್ ಮಾಡಿದ್ದಾನೆ. ಇದೆಂತಹ ವಿಚಿತ್ರ ನಮಸ್ಕಾರ ಅಂತ ಕೊಂಚ ಇರುಸುಮುರುಸಾದರೂ ಹಳೆ ವಿದ್ಯಾರ್ಥಿ ಅಂತ ಕಾತ್ರಾಳೆ ಸರ್ ಪ್ರತಿ ನಮಸ್ಕಾರ ಮಾಡಿ, 'ಆರಾಮ್ ಏನಪಾ?' ಅಂತ ಕೇಳಿ ಮುಂದೆ ಹೋಗಿದ್ದಾರೆ. ಈ ಕರ್ಜಗಿ ವಾಪಸ್ ಹೋಗಿ ಹಿಂದೆ ಜೋರಾಗಿ ನಗುತ್ತ ಬರುತ್ತಿದ್ದ ದೋಸ್ತರ ಗುಂಪನ್ನು ಮತ್ತೆ ಸೇರಿಕೊಂಡಿದ್ದಾನೆ. ಸರ್ ಮುಂದೆಯೇ ಫಿಲ್ ಎಡ್ಮಂಡ್ಸ್ ಮಾದರಿಯಲ್ಲಿ ಬೌಲಿಂಗ್ ನಮಸ್ಕಾರ ಮಾಡಿದ ಪ್ರತಾಪ ಹೇಳಿಕೊಳ್ಳುತ್ತ ನಡೆಯುತ್ತ ಮುಂದೆ ಬಂದಿದ್ದಾನೆ. ಆಗ ಕಾತ್ರಾಳೆ ಸರ್ ಮತ್ತೆ ಎದುರಿಗೆ ಬಂದಿದ್ದಾರೆ. ಆಗ ಅವರ ಕಿವಿಗೂ ಬೀಳುವಂತೆ, 'ಇಂವಾ ಕಾತ್ರಾಳೆ. ನಮ್ಮ ಮಾಸ್ತರ್. ಫಿಲ್ ಎಡ್ಮಂಡ್ಸ್ ಇದ್ದಂಗ ಇದ್ದಾನ,' ಅದು ಇದು ಮಾತು ಕೇಳಿದೆ. ಜೊತೆಗೆ ಹುಚ್ಚು ನಗೆ ಬೇರೆ. ಅಷ್ಟೂ ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ಸರ್. ಅವರಿಗೆ ಫಿಲ್ ಎಡ್ಮಂಡ್ಸ್ ಇತ್ಯಾದಿಗಳ exact detail ಗೊತ್ತಾಗಿರಲಿಕ್ಕಿಲ್ಲ. ಆದರೆ ತಮ್ಮ ಮಾಜಿ ವಿದ್ಯಾರ್ಥಿಗಳು ತಮ್ಮ ಕುರಿತು ಏನೋ ನಗೆಚಾಟಿಕೆ ಮಾಡಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಅದರ ಸೂತ್ರಧಾರ ಮನೋಜ ಕರ್ಜಗಿಯೇ ಅಂತ ಖಾತ್ರಿಯಾಗಿದೆ.

ಗಕ್ಕನೆ ಬ್ರೇಕ್ ಹಾಕಿದ ಸರ್ ನಿಂತಿದ್ದಾರೆ. 'ಏ, ಕರ್ಜಗಿ. ಬಾ ಇಲ್ಲೆ,' ಅಂತ ಸಹಜವಾಗಿಯೇ ಕರೆದಿದ್ದಾರೆ. ಮಾಸ್ತರ್ ಕರೆದ ಮೇಲೆ ಮುಗಿಯಿತು. ಹೋಗಲೇಬೇಕು. ಕರ್ಜಗಿ ಹೋಗಿದ್ದಾನೆ. ಹತ್ತಿರ ಹೋದವನನ್ನು ಕೈಹಿಡಿದು ಕರೆದು, ಪ್ರೀತಿಯಿಂದಲೇ ಕೈತಿರುವಿ, ಬೆನ್ನ ಹಿಂದೆ ತಂದು, ಬಗ್ಗಿಸಿ, 'ಎಷ್ಟು ದೊಡ್ಡವರಾಗೀರಿಪಾ. ಹಾಂ? ನನ್ನ ಮ್ಯಾಲೇ ಜೋಕ್ ಮಾಡುವಷ್ಟು ದೊಡ್ಡವರಾಗಿಬಿಟ್ಟಿರೀ? ಹಾಂ!' ಅಂತ ವಾತ್ಸಲ್ಯದಿಂದಲೇ ಆವಾಜ್ ಹಾಕುತ್ತ ಮನೋಜನ ಬೆನ್ನ ಮೇಲೆ ಸಣ್ಣದಾಗಿ ಎರಡು ಗುದ್ದಿ ಕಳಿಸಿದ್ದಾರೆ. ಜಸ್ಟ್ ಸ್ಯಾಂಪಲ್. ಮಾಸ್ತರ್ ದೃಷ್ಟಿಯಲ್ಲಿ ಅವನು ಮಾಡಿದ್ದೇನಿದ್ದರೂ ಸಣ್ಣ ಪೋಕ್ರಿತನ ಅಷ್ಟೇ. ಶಿಷ್ಯರು ಏನೇ ಮಾಡಿದರೂ ಅದಕ್ಕೊಂದು ಕ್ಷಮೆ ಮಾಸ್ತರ್ ಬಳಿ ಇದ್ದೇ ಇರುತ್ತದೆ.

ಹೀಗೆ ಪಿಯೂಸಿಯಲ್ಲಿದ್ದಾಗ ಬರೋಬ್ಬರಿ ಆರೇಳು ವರ್ಷಗಳ ಬಳಿಕ ಮತ್ತೆ ಕಾತ್ರಾಳೆ ಮಾಸ್ತರ್ ಬಳಿ ಏಟು ತಿಂದ ಭೂಪ ನಮ್ಮ ಕರ್ಜಗಿ ಮನ್ಯಾ! ಈ ಘಟನೆ ಆದ ಮರುದಿನ 'ಗಣಿತಲೋಕ' ಟ್ಯೂಷನ್ ಕ್ಲಾಸಿನಲ್ಲಿ ಸಿಕ್ಕಿದ ಕರ್ಜಗಿ, 'ನಿನ್ನೆ ಫಿಲ್ ಎಡ್ಮಂಡ್ಸ್ ಹಾಕ್ಕೊಂಡು ಕಟಿದುಬಿಟ್ಟ!' ಎಂದು ಹೇಳಿದಾಗ ನಮಗೆಲ್ಲ ಅರ್ಥವೇ ಆಗಿರಲಿಲ್ಲ. ವಿವರಿಸಿ ಹೇಳಿದಾಗ ಅಷ್ಟೇ ಮತ್ತೆ. ಅಂದು ಆರಂಭವಾದ ನಗು ಇನ್ನೂ ನಿಂತಿಲ್ಲ. ನಮ್ಮ ಪ್ರೀತಿಯ ಮನ್ಯಾ ಫಿಲ್ ಎಡ್ಮಮಂಡ್ಸ್ ಮಾಸ್ತರ್ ಬಳಿ ಬೆನ್ನ ಮೇಲೆ ಗಜ್ಜು ತಿಂದು ಬಂದ ಘಟನೆ ನೆನಪಾದರೆ ಎಲ್ಲಿದ್ದರೂ ಸಿಕ್ಕಾಪಟ್ಟೆ ನಗು ಬರುತ್ತದೆ. ೨೦೧೨ ರಲ್ಲಿ ಮನ್ಯಾ ಇಪ್ಪತ್ತೈದು ವರ್ಷಗಳ ನಂತರ ಸಿಕ್ಕಾಗಲೂ ಇದೇ ಘಟನೆಯನ್ನು ನೆನಪಿಸಿಕೊಂಡು ನಕ್ಕಿದ್ದೆವು. ಕೀಟಲೆ ಪ್ರವೀಣನನಾದ ಮನ್ಯಾನ ಲೈಫಿನಲ್ಲಿ ಇಂತಹ ಘಟನೆಗಳು ಅವೆಷ್ಟು ನಡೆದುಹೋಗಿವೆಯೋ. ಅವನಿಗೆ ನೆನಪಿರದಿದ್ದರೂ, 'ನೀ ಹೇಳಿದಿ ಅಂದ ಮ್ಯಾಲೆ ಆತು ಬಿಡು. ಎಂಜಾಯ್!' ಅಂದಿದ್ದ ಭೂಪ ಮನ್ಯಾ.


(ಫಿಲ್ ಎಡ್ಮಂಡ್ಸ್ ಬೌಲಿಂಗ್ ಮಾಡುತ್ತಿದ್ದ ಪರಿ. ಮನೋಜ ಕರ್ಜಗಿ ಕಾತ್ರಾಳೆ ಸರ್ ಅವರ ಶೈಲಿಯನ್ನು ನಕಲು ಮಾಡುತ್ತ ಇದೇ ರೀತಿ ಬೌಲಿಂಗ್ ಮಾಡುವ ಮಂಗ್ಯಾತನ ಮಾಡುತ್ತಿದ್ದ. Hilarious!)

ಸಾಹಿತಿಯಾಗಿದ್ದ ಕಾತ್ರಾಳೆ ಸರ್ 'ಕೆನ್ಕೆ' (KNK =  ಕಲ್ಲಿನಾಥ ನೇಮಿನಾಥ ಕಾತ್ರಾಳೆ) ಎನ್ನುವ ಕಾವ್ಯನಾಮ ಉಪಯೋಗಿಸುತ್ತಿದ್ದರು. 'ಧಾರವಾಡದಾಗ ಎನ್ಕೆ ಅಂತ ದೊಡ್ಡ ಸಾಹಿತಿ ಎನ್. ಕೆ. ಕುಲಕರ್ಣಿ ಇದ್ದಾರ. ನಾ ಸಣ್ಣ ಸಾಹಿತಿ. ಹಾಂಗಾಗಿ ನಾ ಕೆನ್ಕೆ,' ಅನ್ನುತ್ತಿದ್ದರು ಸರ್. ಅದು ಇಂದು ನೆನಪಾಯಿತು. ಅವರು ಇವತ್ತಿಲ್ಲದಿದ್ದರೂ ಸರಿ. ಆದರೆ ಕೆನ್ಕೆ ಉರ್ಫ್ ಕಾತ್ರಾಳೆ ಸರ್ ಮತ್ತು ಅವರ ಸಾಧನೆಗಳು ಮಾತ್ರ ತುಂಬಾ ದೊಡ್ಡವು. ಅವು ಅಮರ. He was truly an inspiration and still continues to be.

6 comments:

sunaath said...

ಮಹೇಶ, ನಿಮ್ಮ ಲೇಖನಗಳು ಯಾವಾಗಲೂ ಸ್ವಾರಸ್ಯಕರವಾಗಿ ಇರುತ್ತವೆ, ವಿನೋದಿಯಾಗಿ ಇರುತ್ತವೆ. ಮತ್ತು ಭಾಷಾ ಅಂತೂ, ನಮ್ಮ ಪ್ರೀತಿಯ ಧಾರವಾಡ ಭಾಷಾ! ಎಷ್ಟರ ನಿಮಗ ಧನ್ಯವಾದಗಳನ್ನು ಹೇಳ್ಳಿ?

Mahesh Hegade said...

ದೊಡ್ಡ ಮಾತು ಸುನಾಥ್ ಸರ್. ಪ್ರತಿಯೊಂದು ಲೇಖನವನ್ನೂ ಓದಿ, ಪ್ರೀತಿಯಿಂದ ಕಾಮೆಂಟ್ ಹಾಕುವದೇ ದೊಡ್ಡ ಧನ್ಯವಾದ, ಆಶೀರ್ವಾದ ಎಲ್ಲ. ಹಾಗೇ ಇರಲಿ. ಧನ್ಯವಾದ.

Anonymous said...

ಮಹೇಶಾ ಇವತ್ತು ಹುಡಿಕ್ಯಾಡಿ ಓದಿದೆ. ತುಂಬಾ ಚೆನ್ನಾಗಿದೆ.

Mahesh Hegade said...


@Anonymus - Thank you. ಹೆಸರು ಹಾಕಪ್ಪ/ಹಾಕವ್ವ ಮಿತ್ರ/ಮಿತ್ರೆ! :)

Kushi said...

Ili thinda thale...ishta aythu...chennagide sir.

Mahesh Hegade said...

Thanks Kushi :)