Saturday, February 11, 2017

ಗೋಲ್ಡನ್ ಟಚ್ ಪತಿಯನ್ನು ಪತ್ನಿ ಸ್ಕೂಟರಿನಿಂದ ಕೆಡವಿದಳು!

ಗಂಡ ಹೆಂಡತಿ ಜೋಡಿಯೊಂದು ಸ್ಕೂಟರ್ ಮೇಲೆ ಎಲ್ಲಿಯೋ ಹೊರಟಿತ್ತು. ಅಚಾನಕ್ಕಾಗಿ ಬಿದ್ದರು. ಸ್ಕೂಟರ್ ಇತ್ಯಾದಿ ದ್ವಿಚಕ್ರ ವಾಹನಗಳನ್ನು ಸವಾರಿ ಮಾಡುವ ಮಂದಿ ಬೇರೆ ಬೇರೆ ಕಾರಣಗಳಿಗಾಗಿ ಬೀಳುವದು ಸಾಮಾನ್ಯ ಬಿಡಿ. ಇವರೂ ಹಾಗೆಯೇ ಬಿದ್ದಿರಬೇಕು ಅಂದುಕೊಂಡರು ಎಲ್ಲರೂ. ಪುಣ್ಯಕ್ಕೆ ಜಾಸ್ತಿಯೇನೂ ಗಾಯ ನೋವು ಆಗಿರಲಿಲ್ಲ. ಅಲ್ಲಿಲ್ಲಿ ತರಚಿರಬಹುದು ಅಷ್ಟೇ. ಮನೆಗೆ ಬಂದು ಡೆಟಾಲ್ ಹಚ್ಚಿಕೊಂಡರು.

ಇಷ್ಟಕ್ಕೇ ಮುಗಿಯಿತೇ? ಇಲ್ಲ. ಪತಿ ಸುಮ್ಮನಿದ್ದರೂ ಪತ್ನಿ ಸುಮ್ಮನಿರಬೇಕಲ್ಲ. ಅಲ್ಲಿಲ್ಲಿ ಹೇಳಿಕೊಂಡು ತಿರುಗಿದರು. ನೀವಾಗೇ ಸುದ್ದಿ ಹೇಳುತ್ತೀರಿ ಅಂದ ಮೇಲೆ ಕೆದಕಿ ಕೆದಕಿ ಕೇಳುವವರಿಗೇನು ಕಮ್ಮಿಯೇ. ಅವರೂ ಕೇಳಿದರು. ಕೆದಕಿ ಕೆದಕಿ ಕೇಳಿದರು. 'ಸ್ಕೂಟರಿನಿಂದ ಹ್ಯಾಂಗ ಬಿದ್ದಿರಿ? ಏನಾತು? ಆಕ್ಸಿಡೆಂಟ್ ಆತs? ಹಾಂ?' ಹೀಗೆ ತರೇವಾರಿ ತಹಕೀಕಾತು ನಡೆಯಿತು.

ಪತ್ನಿಗೂ ಹೇಳುವ ಅದಕ್ಕಿಂತಲೂ ಹೇಳಿಕೊಳ್ಳುವ, ಕೊಚ್ಚಿಕೊಳ್ಳುವ ಉಮೇದಿ. ಕೇಳಬೇಕೇ? ರಂಗ್ರಂಗಾಗಿ ಸ್ಕೂಟರಿನಿಂದ ಬಿದ್ದ ಸುದ್ದಿ ಹೇಳಿದರು. ಊರೆಲ್ಲ ತಮ್ಮಟೆ ಬಾರಿಸಿಕೊಂಡು ಬಂದರು.

'ಅದೇನಾಗಿತ್ತು ಅಂದರೆ....ನಮ್ಮನೆಯವರಿಗೆ ಸ್ಕೂಟರ್ ಮೇಲೆ ಹೋಗುವಾಗ ರಸ್ತೆಯಲ್ಲಿ ಯಾರಾದರೂ ಚಂದದ ಹುಡುಗಿ ಕಂಡರೆ ಅಷ್ಟೇ ಮತ್ತೆ. ಕಣ್ಣು ಹಾಯಿಸಿಯೇ ಬಿಡುತ್ತಾರೆ. ಅವತ್ತೂ ಹಾಗೇ ಆಯಿತು. ರಸ್ತೆಯಲ್ಲಿ ಯಾವದೋ ಕಾಲೇಜು ಹುಡುಗಿಯರ ಗುಂಪು ಬಂತು. ನಮ್ಮನೆಯವರು ಕಣ್ಣು ಹಾಕಿಯೇ ಬಿಟ್ಟರು. ನನಗೆ ಗೊತ್ತಿಲ್ಲವೇ? ನಾನು ಹಿಂದೆ ಕೂತವಳು ಸರಕ್ಕಂತ ಅವರ ಕಣ್ಣು ಮುಚ್ಚಿಬಿಟ್ಟೆ. ಬ್ಯಾಲೆನ್ಸ್ ತಪ್ಪಿತು. ಮ್ಯಾನೇಜ್ ಮಾಡೋಕಾಗದೇ ಸ್ಕೂಟರ್ ಬಿತ್ತು. ನಾವೂ ಬಿದ್ದೆವು. ನಮ್ಮನೆವರು ಹಾಗೇ!' ಅಂದುಬಿಟ್ಟರು. ಪತಿಯ ಕಂಡಲ್ಲಿ ಕಣ್ಣು ಹಾಯಿಸುವ ಸ್ವಭಾವದ ಬಗ್ಗೆ ಆತಂಕಕ್ಕಿಂತ ಪತಿಯ ಕೃಷ್ಣಲೀಲೆಗಳ ಬಗ್ಗೆ ಹೆಮ್ಮೆ ಮಾತಿನಲ್ಲಿ ಹೆಚ್ಚಾಗಿ ಕಂಡುಬಂತು ಅಂತ ವಿವರಣೆ ಕೇಳಿದವರ ಅಂಬೋಣ. ಯಾರಿಗೆ ಗೊತ್ತು.

ಒಟ್ಟಿನಲ್ಲಿ ಈ ದಂಪತಿ ಜೋಡಿ ಸ್ಕೂಟರಿನಿಂದ ಹರಕೊಂಡು ಬೀಳಲಿಕ್ಕೆ ಬೇರೆ ಯಾವ ಕಾರಣವೂ ಇಲ್ಲ, ಎಲ್ಲ self-inflicted ಅಂತ ಗೊತ್ತಾಯಿತು. ಬೇರೆ ಬೇರೆ ಮಹಿಳೆಯರು ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಣೆ ಮಾಡಿದರು. ಕೆಲವರು ತಟ್ಟಿಕೊಂಡು ಪೆಕಪೆಕಾ ಅಂತ ನಕ್ಕರು. 'ಏನು ಹುಚ್ಚ ಇದ್ದಾಳ ಇಕಿ. ಪಾಪ ಗಂಡ ಸ್ಕೂಟರ್ ಹೊಡಿಲಿಕತ್ತಾನ ಅಂದ ಮ್ಯಾಲೆ ಸುತ್ತಮುತ್ತ ನೋಡದೇ ಹ್ಯಾಂಗ ಗಾಡಿ ಹೊಡಿಲಿಕ್ಕೆ ಆಗ್ತದ? ಪಾಪ ಯಾವದೋ ಹುಡುಗಿಯರ ಗುಂಪು ಬಂತು ಅಂತ ಸ್ವಲ್ಪ slow ಮಾಡಿ ಹೊಂಟಿರಬೇಕು. ಇಕಿ ಯಬಡಿ. ಎಲ್ಲೆ ತನ್ನ ಗಂಡ ಯಾವದಾರ ಹುಡುಗಿಗೆ ಲೈನ್ ಹೊಡೆದುಬಿಟ್ಟಾನು ಅಂತ ಹುಚ್ಚುಚ್ಚ ವಿಚಾರ ಮಾಡಿ ಗಂಡನ ಕಣ್ಣು ಮುಚ್ಚಲಿಕ್ಕೆ ಹೋಗಿ, ಅವನ ಬ್ಯಾಲೆನ್ಸ್ ತಪ್ಪಿ, ಬಿದ್ದು, ಹಿಂದ ಕೂತ ಇಕಿನೂ ಬಿದ್ದು..... ದೊಡ್ಡ ಹುಚ್ಚ ಮಂದಿ ಇಬ್ಬರೂ' ಅಂದರು ಕೆಲವರು.

'ಹಾಂಗಲ್ಲರೀ....ಗಂಡನ ಮ್ಯಾಲೆ ಒಂದು ಕಣ್ಣು ಇಟ್ಟಿರಬೇಕು. ಇಲ್ಲಂದ್ರ ಈ ಗಂಡಸೂರು ಏನು ಮಾಡ್ತಾರ ಅಂತ ಗೊತ್ತಾಗೋದೇ ಇಲ್ಲ. ಪಾಪ. ಇಕಿಗೆ ಸಂಶಯ. ಆ ಗಂಡ ಹ್ಯಾಂಗಿದ್ದಾನೋ ಏನೋ? ಆದ್ರೂ ನೀವೇಳ್ದಾಂಗ ಸ್ಕೂಟರ್ ಮ್ಯಾಲೆ ಹೊಂಟಾಗ ಕಣ್ಣು ಮುಚ್ಚಿದ್ರ ಹ್ಯಾಂಗ್ರೀ? ಅವಯ್ಯಾ!' ಅಂದರು ಮತ್ತೊಬ್ಬರು.

ಒಟ್ಟಿನಲ್ಲಿ ಸುದ್ದಿ ಕೇಳಿದ ನೆರೆಹೊರೆ ಮಹಿಳೆಯರು ತಲೆಗೊಂದರಂತೆ ಮಾತಾಡಿ, 'ತಡವಾಯಿತು. ಕೆಲಸವಿದೆ,' ಅನ್ನುವ ಸ್ಟ್ಯಾಂಡರ್ಡ್ ಡೈಲಾಗ್ ಹೊಡೆಯುತ್ತ ಕಳಚಿಕೊಂಡರು. ಹೀಗೆ ಹಾಳುಹರಟೆ ಹೊಡೆಯುತ್ತ ನಿಂತಿದ್ದಕ್ಕೇ ಅಲ್ಲವೇ ಕೆಲಸ ಉಳಿದು ತಡವಾಗಿದ್ದು!?

ಈ ಸುದ್ದಿ ಕೇಳಿ ಎಲ್ಲ ಮಾಹಿತಿ ಪಡೆದುಕೊಂಡಿದ್ದ ಮಹಿಳೆಯೊಬ್ಬಳು ಅದನ್ನು ಮರುಪ್ರಸಾರ ಮಾಡಿದ್ದಾಳೆ. ಮಾಡಲಿಲ್ಲ ಅಂದರೆ ಸುದ್ದಿ ಹರಡುವದು ಹೇಗೆ? ಅವಳ ಮನೆಗೆ ಯಾರೋ ಯುವತಿ ಬಂದಿದ್ದಾಳೆ. ಬಂದವಳ ಹತ್ತಿರ ಹೇಳಿದ್ದಾಳೆ.

ಸುದ್ದಿ ಕೇಳಿದ ಮನೆಗೆ ಬಂದ ಆ ಹುಡುಗಿ ಏನೆನ್ನಬೇಕು?

'ಏ ಅಕಿ ಗಂಡ ಹಾಂಗೆಲ್ಲಾ ಹುಡುಗಿಯರನ್ನು ಕದ್ದು ನೋಡುವದಿಲ್ಲ....' ಅಂದಿದ್ದಾಳೆ. ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾಳೆ.
'ನೋಡುದಿಲ್ಲಾ? ಪಾಪ. ಇಕಿನೇ ದೊಡ್ಡ ಸಂಶಯ ಪಿಶಾಚಿ. ಅವನ ಕಣ್ಣು ಮುಚ್ಚಿ ಸ್ಕೂಟರಿನಿಂದ ಕೆಡವಿದಳು. ಬರೇ ಹುಚ್ಚಾಟ....' ಅಂದು ಗಂಡ ಪ್ರಾಣಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾಳೆ. ಮಂದಿಯ ಗಂಡನ ಬಗ್ಗೆ ಸಂತಾಪ. ತನ್ನ ಗಂಡನ ಬಗ್ಗೆ some ತಾಪ....ಹೆಚ್ಚಿನವರ ಕೇಸ್ ಇದೇ.
'ಏ! ನಾ ಹೇಳೋದನ್ನ ಪೂರ್ತಿ ಕೇಳಿಸಿಕೊಳ್ಳರೀ. ನಾ ಏನಂದೆ? ಅಕಿ ಗಂಡ ಹುಡುಗಿಯರನ್ನ ನೋಡೋದಿಲ್ಲ ಅಂದೆ. ನೋಡೋದಿಲ್ಲ ಖರೆ. ಆದ್ರ ಲಬಕ್ಕಂತ ಕೈ ಹಿಡಿತಾನ. ಒಮ್ಮೆ ಹಿಡಿದ ಅಂದ್ರ ಮುಗೀತು. ಬಿಡಂಗೇ ಇಲ್ಲ. ಗೋಲ್ಡನ್ ಟಚ್. ಮಗಂದು ಗೋಲ್ಡನ್ ಟಚ್!' ಅಂದುಬಿಟ್ಟಿದ್ದಾಳೆ.

ಗಂಡ ಅದೇನೋ ಮಾಸ್ತರಿಕೆ ಮಾಡುತ್ತಿದ್ದನಂತೆ. ಆ ಪುಣ್ಯಾತ್ಮ ಪಾಠ ಮಾಡುತ್ತಿದ್ದ ವಿಷಯದಲ್ಲಿ ಕೆಲವು practicals ಗಳನ್ನು ಡಾರ್ಕ್ ರೂಮ್ ಅಂದರೆ ಕತ್ತಲೆಕೋಣೆಯಲ್ಲಿ ಮಾಡಬೇಕಾಗುತ್ತಿತ್ತಂತೆ. ಕತ್ತಲಕೋಣೆಯಲ್ಲಿ ಹುಡುಗಿಯರು ಪ್ರಾಕ್ಟಿಕಲ್ಸ್ ಮಾಡುತ್ತಿದ್ದರೆ ಈ ಪುಣ್ಯಾತ್ಮ ಅವಕಾಶ ಸಿಕ್ಕಾಗ ಕೈ ಹಿಡಿದು ಗೋಲ್ಡನ್ ಟಚ್ ಭಾಗ್ಯ ಕರುಣಿಸುತ್ತಿದ್ದನಂತೆ. ಗೋಲ್ದನ್ ಟಚ್ ಗೋಲ್ಮಾಲ್.

'ಹೀಂಗಾ?????' ಅಂತ ದೊಡ್ಡ ಓಂಕಾರದಲ್ಲಿ ಬಾಯಿ ಬಿಟ್ಟವಳು, 'ಹುಡುಗಿಯರನ್ನು ನೋಡ್ತಾನ ಅಂತ ಸಂಶಯ ಮಾಡಿ ಕಣ್ಣು ಮುಚ್ಚಿದಳು. ಇನ್ನು ಕತ್ತಲೆಕೋಣೆಯಾಗ ಕೈನೇ ಮುಟ್ಟತಾನ. ಗೋಲ್ಡೆನ್ ಟಚ್ ಮತ್ತೊಂದು ಕೊಡ್ತಾನ ಅಂತ ಏನರೆ ಅವನ ಹೆಂಡತಿಗೆ ಗೊತ್ತಾತು ಅಂದ್ರ ಮುಗೀತು ಕಥಿ. ಅವನ ಕೈ ಮುರಿದರೂ ಆಶ್ಚರ್ಯ ಇಲ್ಲ,' ಅಂತ ಅಂದಳು.

ಗೋಲ್ಡನ್ ಟಚ್ ವಿಷಯ ಹೆಂಡತಿಗೆ ಗೊತ್ತಾಯಿತೋ ಇಲ್ಲವೋ ತಿಳಿದಿಲ್ಲ. ಮುಂದೆಂದೂ ಗಂಡನ ಕೈಯಂತೂ ಮುರಿದಿದ್ದು ಗೊತ್ತಿಲ್ಲ. ಹಾಗಾಗಿ ಅಷ್ಟರಮಟ್ಟಿಗೆ ಗಂಡ ಸೇಫ್.

ಬಂಗಾರದ ಬೆಲೆ ಕಮ್ಮಿಯಾಗಿಬಿಟ್ಟಿದೆ ಅಂತ ಯಾರೋ ಹೇಳಿದರು. ಆವಾಗ ಈ ಘಟನೆ ನೆನಪಾಯಿತು. ಬಂಗಾರದ ಬೆಲೆ ಕಮ್ಮಿಯಾದರೇನಾಯಿತು ಬಂಗಾರದ ಸ್ಪರ್ಶಕ್ಕೇನೂ ತೊಂದರೆಯಿಲ್ಲ ಅನ್ನುತ್ತಿದ್ದರೇನೋ ಗೋಲ್ಡನ್ ಟಚ್ ಮಹಾನುಭಾವರು.

2 comments:

sunaath said...

ಅಲ್ರೀ, ಕಣ್ಣಿಗೆ ಪಟ್ಟಿ ಕಟ್ಟಿದರ ಮಾತ್ರ, ಕುದರಿ ನೆಟ್ಟಗ ಓಡತದ; ಇಲ್ಲಾ ಅಂದರ ಅಡ್ಡ ಹಾದಿ ಹಿಡೀತದ. ಅದಕ್ಕs ಆ ಹೆಣ್ಣಮಗಳು, ಪಾಪ, ತನ್ನ ಗಂಡನ ಕಣ್ಣ ಮುಚ್ಚಿ ಓಡಸ್ಯಾಳ. ಮುಂದ ಏನ ಆಗತದ ಅನ್ನೋದು ದೇವರ ಇಚ್ಛಾರಪಾ.

Mahesh Hegade said...

ಸುನಾಥ್ ಸರ್, ಕುದರಿಗೆ ಕಟ್ಟಿದರೆ ನಡಿತದ. ಯಾಕಂದ್ರ ಗಾಡಿ ಹೊಡೆಯುವವ ಬ್ಯಾರೆ ಇರ್ತಾನ. ಇಲ್ಲೆ ಗಾಡಿ ಹೊಡಿಯವಂಗs ಕಣ್ಣು ಮುಚ್ಚಿಬಿಟ್ಟಿದ್ದರು! :)

ಕಾಮೆಂಟಿಗೆ ಧನ್ಯವಾದ!