Saturday, February 25, 2017

ಡೈರಿ ತಂದಿಟ್ಟ ಫಜೀತಿ

ಕರ್ನಾಟಕದ ತುಂಬಾ ಡೈರಿಗಳದೇ ಸುದ್ದಿ. ತಮ್ಮ ತಮ್ಮ ಪಾರ್ಟಿಗಳ ಮುಖ್ಯಸ್ಥರಿಗೆ ರೊಕ್ಕ ಕೊಟ್ಟಿದ್ದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ರಾಜಕಾರಣಿ ಮಂದಿ ಮಂಗ್ಯಾ ಆಗಿದ್ದಾರೆ. ಒಟ್ಟಿನಲ್ಲಿ ಯಾವದೋ ಕಾಲದಲ್ಲಿ, ಯಾವದೋ ಗುಂಗಿನಲ್ಲಿ ಬರೆದಿಟ್ಟ ಡೈರಿಗಳು ಮುಜುಗರ ತಂದಿಟ್ಟಿವೆ.

ನಾನೂ ಒಮ್ಮೆ ಡೈರಿ ಬರೆದು ಮಂಗ್ಯಾ ಆಗಿದ್ದೆ. ಮಂಗ್ಯಾ ಆಗಿದ್ದೆ ಎನ್ನುವದಕ್ಕಿಂತ ಮಂಗ್ಯಾ ಮಾಡಲ್ಪಟ್ಟಿದ್ದೆ ಅಂದರೆ ಸರಿಯಾದೀತು.

೧೯೮೪. ಏಳನೇ ಕ್ಲಾಸ್. ಡೈರಿ ಅಥವಾ ದಿನಚರಿ ಬರೆಯಬೇಕು ಅಂತ ಅದು ಹೇಗೆ ಐಡಿಯಾ ಬಂತೋ ಗೊತ್ತಿಲ್ಲ. ಮೊದಲೇ ನಮ್ಮ ತಲೆ ವೇಗದ ಮಿತಿ ಮೀರಿ, ವಯಸ್ಸನ್ನು ಮೀರಿ ಓಡುತ್ತಿತ್ತು. ಹತ್ತು ವರ್ಷಕ್ಕೆ ಹಿರಿಯರಾದವರೂ ಯೋಚಿಸಲಾರದ ಐಡಿಯಾಗಳೆಲ್ಲ ತಲೆಗೆ ಬರುತ್ತಿದ್ದವು. ಅಂತಹದ್ದೇ ಐಡಿಯಾ ಇರಬೇಕು ಈ ಡೈರಿ ಬರಿಯಬೇಕು ಎನ್ನುವ ತಲುಬು, ಹುಕಿ.

ತಲೆಗೆ ಬಂದ ಮೇಲೆ ಮುಗಿಯಿತು. ದೂಸರಾ ಮಾತೇ ಇಲ್ಲ. ಹೇಗೂ ಮನೆಯಲ್ಲಿ ಬೇಕಾದಷ್ಟು ಡೈರಿಗಳು ಇರುತ್ತಿದ್ದವು. ಅವರು ಇವರು, ಹೊಸ ವರ್ಷದ ಆರಂಭದಲ್ಲಿ, ಕಾಂಪ್ಲಿಮೆಂಟರಿ ಅಂತ ಕೊಟ್ಟ ಡೈರಿಗಳು. ಅದರಲ್ಲೂ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಚಂದಾದಾರರಿಗೆ ತುಂಬಾ ಕ್ಯೂಟಾದ ಒಂದು ಚಿಕ್ಕ ಡೈರಿ ಕಳಿಸುತ್ತಿತ್ತು. ನಮ್ಮ ಚಿಣ್ಣ ವಯಸ್ಸಿಗೆ ಸಣ್ಣ ಡೈರಿಯೇ ಸಾಕು ಅಂತ ಅದನ್ನೇ ಎತ್ತಿಕೊಂಡೆ. ಪಕ್ಕದಲ್ಲೇ ಜೀವನ ವಿಮಾ ನಿಗಮದ ಹೊನಗ್ಯಾ ಸೈಜಿನ ದೊಡ್ಡ ಡೈರಿಗಳೂ ಕಂಡವು. ಅವೆಲ್ಲ ದೊಡ್ಡವರಾದ ಮೇಲೆ ಅಂತ ಅವುಗಳ ರೆಕ್ಸಿನ್ ಕವರ್ ಮೇಲೆ ಒಮ್ಮೆ ಕೈಯಾಡಿಸಿ, ಧೂಳು ಕೊಡವಿ ವಾಪಸ್ ಇಟ್ಟೆ.

ಡೈರಿ ಏನೋ ಸಿಕ್ಕಿತು. ಡೈರಿಯಲ್ಲಿ ಏನು ಬರೆಯಬೇಕು? ಅದರ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಕೇಳೋಣ ಅಂದರೆ ಮನೆಯಲ್ಲಿ ಎಲ್ಲರೂ ಡೈರಿ ಉಪಯೋಗಿಸುತ್ತಿದ್ದರೇ ವಿನಃ ಬರೆಯುತ್ತಿರಲಿಲ್ಲ. ತಂದೆಯವರು ದಿನದ ಜಮಾ ಖರ್ಚಿನ ಲೆಕ್ಕವನ್ನು ಡೈರಿಯಲ್ಲಿ ಬರೆದಿಡುತ್ತಿದ್ದರು. ಅಮ್ಮ ದಿನಸಿ ಪಟ್ಟಿಯನ್ನು ಡೈರಿಯಲ್ಲಿಯೇ ಮಾಡುತ್ತಿದ್ದಳು. ಆ ಪಟ್ಟಿಯನ್ನು ನೋಡಿಯೇ ದಿನಸಿ ಅಂಗಡಿಯ ತೊರಗಲ್ಲಮಠ ಸಾಮಾನು ಕಟ್ಟುತ್ತಿದ್ದ. ಅಣ್ಣ ಗಣಿತದ ಫಾರ್ಮುಲಾ ಇತ್ಯಾದಿಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದ ಅಂತ ನೆನಪು. ಹೀಗೆ ಡೈರಿಯನ್ನು ದಿನಚರಿ ಬರೆಯುವದೊಂದನ್ನು ಬಿಟ್ಟು ಬೇರೆ ಎಲ್ಲ ಕೆಲಸಗಳಿಗೆ ಉಪಯೋಗಿಸುತ್ತಿದ್ದರು. ಹೀಗಾಗಿ ಡೈರಿಯಲ್ಲಿ ಏನು ಬರೆಯಬೇಕು ಅಂತ ಹೇಳಿಕೊಡಲು ಅಥವಾ ರೋಲ್ ಮಾಡೆಲ್ ಆಗಿರಲು ಯಾರೂ ಇರಲಿಲ್ಲ. ಮತ್ತೆ ನಾವೂ ಅಷ್ಟೇ. ಎಲ್ಲದರಲ್ಲೂ self reliance. ದಾರಿ ಗೊತ್ತಿಲ್ಲದಿದ್ದರೆ ಹೊಸ ದಾರಿ ಮಾಡಿಕೊಂಡರಾಯಿತು ಅನ್ನೋ ಮನೋಭಾವ.

ಡೈರಿ ಅಂದರೆ ದಿನಚರಿ. ದಿನದಲ್ಲಿ ಮಾಡಿದ್ದೇ ದಿನಚರಿ. ರೈಟ್? ಸರಿ, ಅದನ್ನೇ ಬರೆಯೋಣ ಅಂತ ಶುರುವಿಟ್ಟುಕೊಂಡೆ. ಡೈರಿ ಬರೆಯಬೇಕು ಅನ್ನುವ ಐಡಿಯಾ ಬಂದಾಗ ಹೊಸ ವರ್ಷ ಶುರುವಾಗಿ ಸುಮಾರು ಸಮಯವಾಗಿತ್ತು. ಹಾಗಾಗಿ ಮೊದಲಿನ ಒಂದಿಷ್ಟು ಹಾಳೆಗಳಲ್ಲಿ ಶ್ರೀ ಗಣೇಶಾಯ ನಮಃ, ಓಂ ನಮಃ ಶಿವಾಯ, ಓಂ ನಮೋ ನಾರಾಯಣ, ಇತ್ಯಾದಿ ದೇವರ ಸ್ತೋತ್ರಗಳನ್ನು ಬರೆದು ತುಂಬಿಸಿದೆ. ಜಾಗ ಖಾಲಿ ಬಿಡಬಾರದು.

ದಿನಚರಿ ಅಂದರೆ ಇನ್ನೇನು ಇರುತ್ತದೆ? ದೇಹವಿರುವ ಪ್ರಾಣಿಗಳೆಲ್ಲ ರೂಟೀನಾಗಿ ಮಾಡುವ 'ಊಮಹೇ' ಕೆಲಸಗಳನ್ನು ಬರೆದರೆ ಅದು ಹಾಸ್ಯಾಸ್ಪದ. ಹಾಗಾಗಿ ಎಷ್ಟೊತ್ತಿಗೆ ಎದ್ದೆ, ಮಲಗಿದೆ, ಊಟ ಮಾಡಿದೆ ಇತ್ಯಾದಿಗಳ ಬಗ್ಗೆ ಬರೆಯಲಿಲ್ಲ. ಬೇರೆ ಏನು ಬರೆಯೋಣ? ಆಟ ಇತ್ಯಾದಿ ಕೇವಲ ವಾರಾಂತ್ಯದಲ್ಲಿ ಮಾತ್ರ. ಕ್ರಿಕೆಟ್ ಮ್ಯಾಚ್ ಗೀಚ್ ಇರುತ್ತಿತ್ತು. ಬಾಕಿ ದಿನಗಳ ದಿನಚರಿ ಬರೆಯುವದು ಕಷ್ಟವಾಯಿತು. ಆ ಸಣ್ಣ ಡೈರಿಯ ಚಿಕ್ಕ ಪುಟದಲ್ಲಿ ಹೆಚ್ಚೆಂದರೆ ಆರೆಂಟು ಸಾಲುಗಳನ್ನು ಬರೆಯಬಹುದಿತ್ತು ಅಷ್ಟೇ. ಅಷ್ಟು ಬರೆಯಲೂ ತಿಣುಕಾಡಬೇಕಾಯಿತು. ಹೇಗೋ ಮಾಡಿ ತುಂಬಿಸುತ್ತಿದ್ದೆ. ಎರಡು ಸಾಲುಗಳಲ್ಲಿ ವಿಷಯ ಮುಗಿಯುತ್ತಿತ್ತು. ಉಳಿದ ಪುಟ ತುಂಬಿಸಲು ಮತ್ತೆ ದೇವರೇ ಬರಬೇಕಾಗುತ್ತಿತ್ತು. ಮತ್ತೆ ಶ್ರೀ ಗಣೇಶಾಯ ನಮಃ. ದೇವರೂ ಬೇಜಾರಾದ ಅಂದರೆ ಹೂವಿನ ಚಿತ್ರ. ಅದೂ ಬೇಜಾರಾಯಿತು ಅಂದರೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದು ಒಗಾಯಿಸಿಬಿಡುವದು. ಒಟ್ಟಿನಲ್ಲಿ ಅಂದಿನ ಒಂದು ಪೇಜ್ ಡೈರಿ ಬರೆದಿಟ್ಟುಬಿಟ್ಟರೆ ಸಮಾಧಾನ. ನಿರಾಳ.

ಒಂದು ವರ್ಷದ ಹಿಂದೆ ದಿವಂಗತರಾದ ಪೂಜ್ಯ ಕಡಕೋಳದವರ ಸರ್ ಏಳನೇ ಕ್ಲಾಸಿನಲ್ಲಿ ಕ್ರಾಫ್ಟ್ ಪಾಠ ಮಾಡುತ್ತಿದ್ದರು. ಸಮಾಜ ಶಾಸ್ತ್ರ ಸಹ ಪಾಠ ಮಾಡುತ್ತಿದ್ದರು. ಕ್ರಾಫ್ಟ್ ಮಾಡಿಸಲು ರಟ್ಟು ಬೇಕಾಯಿತು. 'ರೊಕ್ಕ ತಂದು ಕೊಡಿ. ಬೇಕಾಗುವಷ್ಟು ರಟ್ಟು ಮತ್ತಿತರ ಸಾಮಗ್ರಿಗಳನ್ನು ಎಲ್ಲರಿಗೂ ಆಗುವಷ್ಟು ಕೂಡಿಸಿ ತರಿಸಿಬಿಡೋಣ,' ಅಂದರು ಸರ್. ಆ ಪ್ರಾಜೆಕ್ಟಿಗೆ ನಾನೇ ಪ್ರಾಜೆಕ್ಟ್ ಮ್ಯಾನೇಜರ್. ನನಗೆ ಸಹಾಯ ಮಾಡಲು ನನ್ನ ಪರಮಾಪ್ತ ಮಿತ್ರರಿದ್ದರು. ಅಂತವರಲ್ಲಿ ಆರೆಂಟು ಜನರನ್ನು ಒಟ್ಟು ಮಾಡಿದೆ. ಕ್ರಾಫ್ಟ್ ಮಾಡಲು ಬೇಕಾದ ರಟ್ಟಿಗಾಗಿ ರೊಕ್ಕ ಸಂಗ್ರಹಿಸುವ ಕೆಲಸ ಶುರುಮಾಡಿದೆ. ಸರ್ ಆಗಲೇ ಲೆಕ್ಕ ಹಾಕಿ ಪ್ರತಿಯೊಬ್ಬರೂ ಒಂದೋ ಎರಡೋ ರೂಪಾಯಿಗಳನ್ನು ಕೊಡಬೇಕು ಅಂತ ಹೇಳಿದ್ದರು. ಹಾಗೆಯೇ ಎಲ್ಲರೂ ರೊಕ್ಕ ಕೊಟ್ಟರು. ರೊಕ್ಕ ಇಸಿದುಕೊಂಡು ಅವರ ಹೆಸರು ಬರೆದಿಟ್ಟುಕೊಂಡೆ. ಎಲ್ಲರಿಂದ ರೊಕ್ಕ ಸಂಗ್ರಹವಾಯಿತು.

ಧಾರವಾಡದ ಪೇಟೆಯಲ್ಲಿರುವ ಕಬೀರ್ ಏಜನ್ಸಿಗೆ ಹೋಗಿ, ರೊಕ್ಕ ಕೊಟ್ಟು, ಎಲ್ಲವನ್ನೂ ಖರೀದಿಸಿ ತರುವಂತೆ ಸರ್ ಹೇಳಿದರು. ನಮಗೆ ಅಂದು ಪೂರ್ತಿ ದಿನ ಅದೇ ಕೆಲಸ. ಶಾಲೆಯಿದ್ದಿದ್ದು ಮಾಳಮಡ್ಡಿ ಬಡಾವಣೆಯಲ್ಲಿ. ಅಲ್ಲಿಂದ ಸಿಟಿ ಬಸ್ ಹಿಡಿದು ಪೇಟೆಗೆ ಹೋಗಬೇಕು. ಸಿಟಿ ಬಸ್ ಸ್ಟ್ಯಾಂಡಿನಲ್ಲಿ ಇಳಿದು, ಸುಭಾಷ್ ರಸ್ತೆ ಗುಂಟ ಉಧೋ ಅಂತ ಒಂದು ಮೈಲಿ ನಡೆದುಹೋಗಿ ಕಬೀರ್ ಏಜನ್ಸಿ ಮುಟ್ಟಿಕೊಳ್ಳಬೇಕು. ಸ್ಮೂತಾಗಿ ಮಾತಾಡುತ್ತಲೇ ಒಂದಕ್ಕೆರೆಡು ರೇಟ್ ಹಾಕಿ ಟೋಪಿ ಹಾಕಿ ಕಳಿಸುತ್ತಿದ್ದ ಕಬೀರ್ ಏಜನ್ಸಿ ಯಜಮಾನನೊಂದಿಗೆ ಚೌಕಾಸಿ ಮಾಡಿ, ವ್ಯಾಪಾರ ಮುಗಿಸಿ, ಮಣಗಟ್ಟಲೆ ಭಾರದ ರಟ್ಟುಗಳನ್ನು ಹೊತ್ತುಕೊಂಡು ಮತ್ತೆ ಬಸ್ ಹಿಡಿದು ವಾಪಸ್ ಶಾಲೆಗೆ ಬಂದು ಮುಟ್ಟಬೇಕು. ಮತ್ತೆ ನೂರೈವತ್ತು ರೂಪಾಯಿಗೂ ಮಿಕ್ಕಿದ ರೊಕ್ಕವನ್ನು ಸಂಬಾಳಿಸಬೇಕು. ಅಂದಿನ ಕಾಲಕ್ಕೆ ಅದು ದೊಡ್ಡ ಮೊತ್ತ.

ಅದೇ ಆರೆಂಟು ಜನ ದೋಸ್ತರನ್ನು ಕಟ್ಟಿಕೊಂಡು ಪೇಟೆಗೆ ಹೊರಟೆ. ಉಳಿದವರು ಕ್ಲಾಸಿನಲ್ಲಿ ಕೂತು ಬೆಂಚುಗಳನ್ನು ಗರಂ ಮಾಡಿದರು. ಪೇಟೆ ಸುತ್ತುವ ಭಾಗ್ಯ ಅವರಿಗಿಲ್ಲ.

ಅದ್ಯಾಕೋ ಗೊತ್ತಿಲ್ಲ ಆದರೆ ಅಂದು ಮನೆಯಲ್ಲಿ ದಿನಚರಿ ಬರೆಯುವ ಡೈರಿಯನ್ನು ಕಿಸೆಯಲ್ಲಿಟ್ಟುಕೊಂಡು ಶಾಲೆಗೆ ತಂದಿದ್ದೆ. ಈ ಕ್ರಾಫ್ಟ್ ಸಲುವಾಗಿ ರಟ್ಟು ತರುವ ವ್ಯವಹಾರದ ಲೆಕ್ಕ ಬರೆಯಲು ಅನುಕೂಲವಾದೀತು ಎಂಬ ಕಾರಣಕ್ಕೆ ಇರಬೇಕು. ದೊಡ್ಡ ನೋಟಬುಕ್ ಹಿಡಿದುಕೊಂಡು ಪೇಟೆಗೆ ಹೋಗುವದು ಕಷ್ಟ. ಡೈರಿ ಆದರೆ ಅಂಗಿಯದೋ ಚೊಣ್ಣದ್ದೋ ಕಿಸೆಯಲ್ಲಿಟ್ಟುಕೊಂಡು ಹೋಗಬಹದು. ಎಷ್ಟು ಖರ್ಚಾಯಿತು ಅಂತ ಬರೋಬ್ಬರಿ ಲೆಕ್ಕ ಬರೆದು ಉಳಿದ ರೊಕ್ಕ ಸರ್ ಅವರಿಗೆ ಕೊಡಬೇಕಲ್ಲ. ಬಸ್ಸಿನ ಖರ್ಚಿನ ಬಾಬತ್ತು, ರಟ್ಟಿನ ಬಾಬತ್ತು ಎಲ್ಲ ಸರಿ ಮಾಡಿ ಬರೆಯಬೇಕು. ಇದೆಲ್ಲ ವಿಚಾರ ಮಾಡಿ ಡೈರಿ ತಂದಿದ್ದೆ.

ದಿನದ ಮೊದಲಾರ್ಧದಲ್ಲೇ ಕೆಲಸ ಮುಗಿಯಿತು. ರಟ್ಟುಗಳನ್ನು ತಂದು ಸರ್ ರೂಮಿನಲ್ಲಿ ಇಟ್ಟಾಯಿತು. ಮುಂದಿನ ಸಲದ ಕ್ರಾಫ್ಟ್ ಪಿರಿಯಡ್ಡಿನಲ್ಲಿ ಅವುಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡಿ ಕ್ರಾಫ್ಟ್ ಮಾಡುವ ಸಂಭ್ರಮ.

ಚೊಣ್ಣದ ಕಿಸೆಯಲ್ಲಿರುವ ಡೈರಿ ಬಗ್ಗೆ ಮರೆತುಬಿಟ್ಟಿದ್ದೆ. ಮಧ್ಯಾನ್ಹ ಸಹಜವಾಗಿ ಕಿಸೆಯಲ್ಲಿ ಕೈಬಿಟ್ಟರೆ ಡೈರಿ ಇಲ್ಲ. ಶಿವಾಯ ನಮಃ! ಎಲ್ಲೋ ಗಾಯಬ್ ಆಗಿಬಿಟ್ಟಿದೆ. ಅರೇ ಇಸ್ಕಿ! ಎಲ್ಲಿ ಹೋಯಿತು? ಪೇಟೆಗೆ ಹೋಗುವಾಗ ಇತ್ತು. ಬರುವಾಗ ಇತ್ತು. ನಡುನಡುವೆ ಲೆಕ್ಕ ಬರೆದಿದ್ದೆ. ತಾಳೆ ಹಾಕಿದ್ದೆ. ರಟ್ಟಿನ ಪ್ರಾಜೆಕ್ಟಿನ ಪೂರ್ತಿ ಖಾತೇಕಿರ್ದಿ ಅಕೌಂಟ್ಸ್ ಅದರಲ್ಲೇ ಬರೆದಿದ್ದೆ. ಅದನ್ನೇ ಸರ್ ಅವರಿಗೆ ತೋರಿಸಿದ್ದೆ. ಎಲ್ಲ ಮುಗಿದ ಮೇಲೆ ಈಗ ನೋಡಿದರೆ ಡೈರಿಯೇ ಇಲ್ಲ. ಕೆಲಸವೆಲ್ಲ ಮುಗಿದ ಮೇಲೆ ಗಾಯಬ್ ಆಗಿದೆ. ಹಾಗಾಗಿ ಎಷ್ಟೋ ವಾಸಿ. ಇಲ್ಲವಾದರೆ ಲೆಕ್ಕ ತಪ್ಪಿಹೋಗುತ್ತಿತ್ತು. ಆದರೂ ಅದು ನನ್ನ ಡೈರಿ. ಖಾಸ್ ಡೈರಿ. ಹೀಗೆ ಕಳೆದುಹೋದರೆ ಹೇಗೆ? ಮತ್ತೆ ನಾನು ಭಯಂಕರ ಹುಷಾರ್ ಮನುಷ್ಯ. ಅಥವಾ ಹಾಗಂತ ನಮ್ಮ ಭಾವನೆ. ವಸ್ತುಗಳನ್ನು ಎಲ್ಲೆಲ್ಲೋ ಇಟ್ಟು, ನಂತರ ಬೇಕಾದಾಗ ಅವು ಸಿಗದೇ, ಮಂಗ್ಯಾ ಆಗಿ ಪೇಚಾಡುವ ಪೈಕಿ ನಾನು ಅಲ್ಲವೇ ಅಲ್ಲ. ಹಾಗಿದ್ದಾಗ ಈ ಡೈರಿ ಎಲ್ಲಿ ಮಂಗಮಾಯವಾಯಿತು ಅಂತ ತಿಳಿಯದ ಮಾಯೆಯಿಂದ ನಾನು ಮಂಗ್ಯಾ ಆದೆ.

ನಾನು ಮಂಗ್ಯಾ ಆಗಿ ಕಳವಳದಿಂದ ಡೈರಿ ಹುಡುಕುತ್ತಿದ್ದರೆ ಮುಂದಿನ ಬೆಂಚಿನಲ್ಲಿ ಕುಳಿತಿದ್ದ ದೋಸ್ತನೊಬ್ಬ ಕಿಸಿಕಿಸಿ ನಗುತ್ತಿದ್ದ. ನನ್ನ ಖಾಸಮ್ ಖಾಸ್ ದೋಸ್ತ್ ಅವನು. ಅವನ ಕಿತಾಪತಿ ನಗೆಯಿಂದಲೇ ಗೊತ್ತಾಯಿತು ಏನೋ ಮಷ್ಕಿರಿ ಮಾಡುತ್ತಿದ್ದಾನೆ ಎಂದು. ಡೈರಿ ಕಳೆದಿದೆ. ಅವನಿಗೆಲ್ಲಾದರೂ ನನ್ನ ಡೈರಿ ಸಿಕ್ಕಿದೆಯೇನು ಅಂತ ಕೇಳಿದೆ. ಮತ್ತೂ ಕಿಸಿಕಿಸಿ ನಕ್ಕ. ಗಹಗಹಿಸಿ ನಕ್ಕ. ನನ್ನನ್ನು ಸ್ವಲ್ಪ ಕಾಡಿಸಿದ ನಂತರ ಅವನ ಚೊಣ್ಣದ ಕಿಸೆಯಲ್ಲಿ ಡೀಪಾಗಿ ಕೈ ಬಿಟ್ಟು, ನನ್ನ ಡೈರಿ ತೆಗೆದು, ಎತ್ತರಕ್ಕೆ ಹಿಡಿದು, ಬಾವುಟದಂತೆ ಅಲ್ಲಾಡಿಸಿದ.

'ಮಂಗ್ಯಾನಮಗನs, ನನ್ನ ಡೈರಿ ಯಾಕಲೇ ಹಾರಿಸಿದಿ? ಪಾಕೆಟ್ ಮಾರ್! ಪಿಕ್ ಪಾಕೆಟ್ ಕಳ್ಳ! ನನಗ ಎಷ್ಟು ಕಾಳಜಿ ಆಗಿತ್ತು ಗೊತ್ತದೇನು? ಏನಲೇ ನೀನು!? ಕೊಡು. ಕೊಡು. ತಾ ಇಲ್ಲೇ ನನ್ನ ಡೈರಿ!' ಅಂತ ರೋಪ್ ಹಾಕಿದೆ. ಡೈರಿ ಕಳೆದಿಲ್ಲ ಅಂತ ನಿರಾಳವಾದರೂ ಅದು ವಾಪಸ್ ಕೈಗೆ ಬರುವ ತನಕ ಸಮಾಧಾನವಿಲ್ಲ.

ಆ ಕಿರಾತಕ ಮಿತ್ರ ಮತ್ತೂ ಕಿಸಿಕಿಸಿ ನಕ್ಕ. 'ನಿನ್ನ ಡೈರಿ ನಿನಗೇ ವಾಪಸ್ ಕೊಡ್ತೇನಿ ತಡೀಪಾ. ಗಡಿಬಿಡಿ ಮಾಡಬ್ಯಾಡ. ಭಾರಿ ಮಸ್ತ ಡೈರಿ ಬರಿಯಾಕತ್ತಿ. ಕೆಲವೊಂದು ವಿಷಯಗಳ ಬಗ್ಗೆ ನಿನ್ನ ಕಡೆ ಕೇಳಿ ತಿಳ್ಕೋಳೋದು ಐತಿ. ಸ್ವಲ್ಪ ತಡೀಪಾ,' ಅಂತ ಥಾಂಬಾ ಥಾಂಬಾ (ನಿಲ್ಲು, ನಿಲ್ಲು) ಅಂದ.

ಕೆಟ್ಟ ಪೋರ. ನನ್ನ ಚೊಣ್ಣದ ಕಿಸೆಯಲ್ಲಿದ್ದ ಡೈರಿಯನ್ನು ಎಗರಿಸಿದ್ದೊಂದೇ ಅಲ್ಲ ಓದಿಯೂ ಬಿಟ್ಟಿದ್ದಾನೆ. ಓದದೇ ಮತ್ತೇನು? ಅಷ್ಟು ಸುಂದರವಾದ(!) ಸ್ಪಷ್ಟ ಅಕ್ಷರಗಳಲ್ಲಿ ತಪ್ಪಿಲ್ಲದಂತೆ ಬರೆಯುತ್ತಿದ್ದೆನಲ್ಲ. ಕಣ್ಣು ಬಿದ್ದರೂ ಸಾಕು. ಓದಿಸಿಕೊಂಡು ಹೋಗುವಹಾಗಿರುತ್ತಿತ್ತು ಅಂದಿನ ಸರಳ ಬರವಣಿಗೆ. ಇಂದು ಹೇಗೋ ಗೊತ್ತಿಲ್ಲ. ಓದಿದವರು ತಿಳಿಸಿ.

'ಸರಿ, ಮಾರಾಯ. ಕೇಳು,' ಅಂದೆ. ಮತ್ತೇನು ಮಾಡಲಿ? ಹೇಳಿ ಕೇಳಿ ಖಾಸಮ್ ಖಾಸ್ ಗೆಳೆಯ. ಜಗಳ ಗಿಗಳ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ಏನೇ ಕಿತಾಪತಿ ಮಾಡಿದರೂ ನನ್ನ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ, ವಿಶ್ವಾಸ, ನಿಷ್ಠೆ ಇಟ್ಟುಕೊಂಡ ಮನುಷ್ಯ. ಕೊಂಚ ಯಡವಟ್ಟ. ನನ್ನ ಹಾಗೆ. ಹಾಗಾಗಿ ನಮ್ಮದು ಯಿನ್-ಯಾಂಗ್ ಮಾದರಿಯ ದೋಸ್ತಿ.

'ಇಕಿ ಯಾರು? ಶಾಲ್ಮಲಾ? ಅಕಿ ಜೋಡಿ ಏನು ವ್ಯಾಯಾಮ ಮಾಡಿದ್ದಿ?' ಅಂತ ಕೇಳಿದವನೇ ವಿಕಟ್ಟಹಾಸ ಮಾಡಿ ನಕ್ಕ. ನಕ್ಕು ನಕ್ಕು ಅವನ ಕಣ್ಣಲ್ಲಿ ನೀರು.

ಶಾಲ್ಮಲಾ!? ವ್ಯಾಯಾಮ!? ಏನು ಕೇಳುತ್ತಿದ್ದಾನೆ ಅಂತ ನನಗೆ ತಿಳಿಯಲೇ ಇಲ್ಲ. ಅವನ ನಗುವಂತೂ ನಿಲ್ಲಲಿಲ್ಲ. ಡೈರಿ ಬೇರೆ ಅವನ ಕೈಯಲ್ಲೇ ಇದೆ.

'ಲೇ, ಹುಚ್ಚ ಮಂಗ್ಯಾನಿಕೆ. ಏನಂತ ಕೇಳ್ತೀಲೇ? ಸರಿಯಾಗಿ ಕೇಳು. ಏನೇನೋ ಹೇಳಿಕೋತ್ತ. ಹುಚ್ಚಾ!' ಅಂತ ಬೈದೆ.

ಡೈರಿಯ ಪುಟ ತಿರುವಿ ಯಾವದೋ ಪುಟ ತೆಗೆದ. ಮುಖದ ಮುಂದೆ ಹಿಡಿದ. ಅಂದಿನ ದಿನಚರಿ ದಾಖಲಿಸಿದ್ದೆ. 'ಶಾಲ್ಮಲಾ ಮನೆಗೆ ಬಂದಿದ್ದು. ವ್ಯಾಯಾಮ ಮಾಡಿದ್ದು,' ಅಂತ ಎರಡು ಲೈನ್ ಇತ್ತು. ನಂತರ ಅಲ್ಲಿ ಶ್ರೀ ಗಣೇಶಾಯ ನಮಃ ಅಂತಿತ್ತು. ಆದರೆ ಅವೆರೆಡು ವಾಕ್ಯಗಳ ಕಾರಣದಿಂದ ನನ್ನ ಪರಿಸ್ಥಿತಿ ಈಗ ಶಿವಾಯ ನಮಃ. ಟೋಟಲ್ ಶಿವಾಯ ನಮಃ!

ಮನೆಗೆ ಬಂದ ಶಾಲ್ಮಲಾ ಎನ್ನುವ ಹುಡುಗಿಯೊಂದಿಗೆ ನಾನು ಏನು 'ವ್ಯಾಯಾಮ' ಮಾಡಿದೆ ಅನ್ನುವದು ಆ ಗೆಳೆಯನ ಜಿಜ್ಞಾಸೆ. ಅವನ ತಲೆಯಲ್ಲಿ ಏನಿತ್ತು ಅನ್ನುವದು ನನಗೆ ಗೊತ್ತಾಯಿತು ಬಿಡಿ. ಅದು ಅಂತಹ 'ವ್ಯಾಯಾಮ' ಮಾಡುವ ವಯಸ್ಸಲ್ಲ. ಆದರೆ ಮನುಷ್ಯರು ಅಂತಹ 'ವ್ಯಾಯಾಮ' ಮಾಡುತ್ತಾರೆ ಅಂತ ಗೊತ್ತಾಗಿತ್ತು. ಬೇರೆಬೇರೆಯವರ ಬಗ್ಗೆ ನಾವೇ ಅಂತಹ ಮಾತುಗಳನ್ನಾಡಿಕೊಂಡು, ಕ್ಲಾಸಿನ ಬೇರೆ ಬೇರೆ ಹುಡುಗ ಹುಡುಗಿಯರ ಮಧ್ಯೆ ಇಲ್ಲ ಸಲ್ಲದ ಸಂಬಂಧಗಳನ್ನು ಹರಿಯಬಿಟ್ಟು, ಏನೇನೋ ಕಿತಬಿ ಮಾತಾಡಿಕೊಂಡು ನಗೆಯಾಡುತ್ತಿದ್ದೆವು. ಈಗ ನನ್ನ ಬುಡಕ್ಕೇ ಬಂದಿದೆ.

'ಥೋ! ಥೋ! ಏನಂತ ಮಾತಾಡ್ತಿಲೇ? ಶಾಲ್ಮಲಾ ಅಂದ್ರ ನಮ್ಮ ಹಳೆ ಮನಿ ಇತ್ತಲ್ಲಾ? ಮಾಳಮಡ್ಡಿಯೊಳಗ? ಆ ಮನಿ ಮಾಲೀಕರ ಮಗಳು. ಅಕಿ ಸಹಜ ಬಂದಿದ್ದಳು. ಅವರ ಅವ್ವನ ಜೋಡಿ. ಅದನ್ನು ಬರೆದಿದ್ದೆ ಮಾರಾಯಾ. ಮತ್ತೇನೂ ಇಲ್ಲ,' ಅಂತ ವಿವರಣೆ ಕೊಡುವಷ್ಟರಲ್ಲಿ ಸಾಕಾಗಿತ್ತು. ಅಷ್ಟು ರೇಗಿಸಿದ್ದ. ಕಾಡಿಸಿದ್ದ. ಮತ್ತೆ 'ವ್ಯಾಯಾಮ' ಅಂದರೆ ಅವನ hidden meaning ಅರ್ಥ ಮಾಡಿಕೊಂಡಿದ್ದ ನಾನು ಪಡಬಾರದ ನಾಚಿಗೆ ಪಟ್ಟು ಇನ್ನಿಲ್ಲದ ಮುಜುಗರ ಅನುಭವಿಸುತ್ತಿದ್ದೆ.

ಅವನೋ ಮತ್ತೂ ಕಾಡುವ ಮೂಡಿನಲ್ಲಿದ್ದ. ಎಲ್ಲರನ್ನೂ ಕಾಡುತ್ತಿದ್ದವ ನಾನು. ನನ್ನನ್ನೇ ಕಾಡುವ ಅವಕಾಶವನ್ನು ನಾನೇ ಕೊಟ್ಟಿದ್ದೇನೆ. ಈಗ ಬಿಟ್ಟಾರೆಯೇ? ನೋ ಚಾನ್ಸ್.

'ಅಣ್ಣಾ, ಕುಟ್ಟಬ್ಯಾಡ. ಅಕಿ ಜೋಡಿ ಏನು ವ್ಯಾಯಾಮ ಮಾಡಿದಿ ಹೇಳು. ಹೇಳಪಾ. ನಾವೂ ಕಲಿಯೋಣ. ಕಲಿಸಪಾ,' ಅಂದ. ಮತ್ತೆ ವಿಕಟ್ಟಹಾಸ. ನನ್ನ ಪರಿಸ್ಥಿತಿ ದೇವರಿಗೇ ಪ್ರೀತಿ.

ಮತ್ತೆ ಮತ್ತೆ ಅದೇ ವಿವರಣೆ ಕೊಟ್ಟೆ. ಶಾಲ್ಮಲಾ ನಮ್ಮ ಹಳೆ ಭಾಡಿಗೆ ಮನೆಯ ಮಾಲೀಕರ ಮಗಳೆಂದೂ, ಅಂದು ಮನೆಗೆ ಅವರ ತಾಯಿಯ ಜೊತೆ ಸಹಜವಾಗಿ ಬಂದಿದ್ದಳೆಂದೂ, ಆಕೆ ನನ್ನ ಅಣ್ಣನಿಗಿಂತಲೂ ಹಿರಿಯಳು, ಹಾಗಾಗಿ ಎಂಟು ವರ್ಷ ದೊಡ್ಡವಳು ಎಂದೆಲ್ಲ ಹೇಳಿದೆ. ವ್ಯಾಯಾಮ ಮಾಡಿದ್ದು ಹೌದಾದರೂ ಅದು ಒಬ್ಬನೇ ಮಾಡಿದ್ದು. ದಿನದಂತೆ. ಅದೂ ಶಾಲ್ಮಲಾ ಹೋದ ಮೇಲೆ ಮಾಡಿದ್ದು. ಶಾಲ್ಮಲಾ ಬಂದಿದ್ದು ಮತ್ತು ವ್ಯಾಯಾಮ ಮಾಡಿದ್ದು ಎರಡು ಬೇರೆ ಬೇರೆ ವಿಷಯಗಳು. ಎರಡನ್ನೂ ಕೂಡಿಸಿ, ಏನೇನೋ ಊಹಿಸಿ, ಮಂಗ್ಯಾನಂತೆ ವಿಚಾರ ಮಾಡಬಾರದು ಅಂತೆಲ್ಲ ಹೇಳಿದೆ.

of course ಅವನಿಗೂ ಅದೆಲ್ಲ ಗೊತ್ತಿತ್ತು ಬಿಡಿ. ಆದರೂ ನನ್ನ ಕಾಲೆಳೆಯುವ ಅವಕಾಶವನ್ನು ಅದೇಗೆ ಬಿಟ್ಟಾನು? ಡೈರಿ ವಾಪಸ್ ಕೊಟ್ಟರೂ ಶಾಲೆ ಮುಗಿಯುವವರೆಗೆ ಅದೆಷ್ಟು ಕಾಲೆಳೆದ ಅಂದರೆ ನನ್ನ ಮುಖ ಕೆಂಪಾಗಿ, ಕೆಂಪ ಮಂಗ್ಯಾನ ಲುಕ್ ಬಂದು, ಅಳು ಬರುವದೊಂದು ಬಾಕಿ. ಶಾಲೆಯಲ್ಲಿ ಮಿತ್ರನೊಬ್ಬನ ಕೈಯಲ್ಲಿ ಮ್ಯಾಕ್ಸಿಮಮ್ ರೇಗಿಸಿಕೊಂಡಿದ್ದು ಆವಾಗಲೇ ಇರಬೇಕು. ಅದೂ ಹೋಗಿ ಹೋಗಿ ಹುಡುಗಿಯೊಂದಿಗೆ 'ವ್ಯಾಯಾಮ' ಮಾಡಿಬಿಟ್ಟ ಅಂತ ರೇಗಿಸಿಕೊಂಡಿದ್ದಕ್ಕೆ ವಿಪರೀತ ನಾಚಿಗೆಯಾಗಿ ಒಂದು ತರಹದ ಅವಮಾನದಿಂದ ಹಿಡಿಹಿಡಿಯಾಗಿದ್ದೆ.

ಇಷ್ಟೆಲ್ಲಾ ವಿವರಣೆ ಕೊಟ್ಟರೂ ಅವನು convince ಆದನೋ ಇಲ್ಲವೋ ಎನ್ನುವದರ ಬಗ್ಗೆ ಖಾತ್ರಿ ಇರಲಿಲ್ಲ. ಹಾಗಾಗಿ ಮತ್ತೆ ಮತ್ತೆ ಅದನ್ನೇ ಹೇಳುತ್ತಿದ್ದೆ. ಅವನು ನಂಬಿದನೋ ಇಲ್ಲವೋ ಅಂತ ಕೇಳುತ್ತಿದ್ದೆ. ಅವನು ಬೇಕಂತಲೇ ಮತ್ತೆ ಮತ್ತೆ ವ್ಯಾಯಾಮ, ಹಾಕಿರಬಹುದಾದ ವಿವಿಧ ಆಸನಗಳ ಬಗ್ಗೆ ತರಲೆ ಮಾಡಿ ನನ್ನನ್ನು ಮತ್ತೂ ಕೆಂಪಾಗಿಸುತ್ತಿದ್ದ. ಶಾಲೆ ಮುಗಿಯುವವರೆಗೆ ಅದೇ ಗೋಳು.

ಇನ್ನೂ ಕಾಡಿದರೆ ನಾ ಮಂಗ್ಯಾ ಆಗಿದ್ದೊಂದೇ ಅಲ್ಲ ಮಾನಸಿಕ ರೋಗಿಯಾದರೆ ಕಷ್ಟ ಅಂತ ಕರುಣೆ ತೋರಿ ಶಾಲೆ ಮುಗಿಯುವ ಹೊತ್ತಿಗೆ ನಾನು ಕೊಟ್ಟ ವಿವರಣೆ ನಂಬಿದೆ ಅಂತ ಹೇಳಿದ. ನಾನು ಹುಸ್! ಅಂತ ನಿಟ್ಟುಸಿರು ಬಿಟ್ಟೆ. ಮತ್ತೆ ಯಾವಾಗಲೂ ಆ ವಿಷಯ ಎತ್ತಿ ರೇಗಿಸಬಾರದು ಅಂತ ಕೇಳಿಕೊಂಡಿದ್ದೊಂದೇ ಅಲ್ಲ ಭಾಷೆ ಬೇರೆ ತೆಗೆದುಕೊಂಡೆ. ಮೊದಲೇ ದೊಡ್ಡ ಬಾಯಿಯ ಈ ಪುಣ್ಯಾತ್ಮ ಮಸಾಲೆ ಹಾಕಿ ಊರೆಲ್ಲ ಟಾಮ್ ಟಾಮ್ ಹೊಡೆದುಕೊಂಡು ಬಂದ ಅಂದರೆ ನಮ್ಮ ಹಾಲತ್ ಯಾರಿಗೂ ಬೇಡ. ಹೇಳಿಕೇಳಿ ಖಾಸ್ ಮಿತ್ರ. ಏನೋ ಅವತ್ತು ಮೂಡಿಗೆ ಬಂದಿದ್ದ. ನನ್ನ ಡೈರಿ ಸಿಕ್ಕಿತ್ತು. ಅದರಲ್ಲಿ ಎರಡು innocuous ಸಾಲುಗಳನ್ನು ಓದಿ, ಅವನದೇ ರೀತಿಯಲ್ಲಿ ಅರ್ಥ (ಅನರ್ಥ) ಮಾಡಿಕೊಂಡು, ಸಿಕ್ಕಾಪಟ್ಟೆ ಕಾಡಿದ್ದ. ಪ್ರೀತಿಯಿಂದಲೇ ಕಾಡಿದ್ದ. ಹಾಗಾಗಿ ಭಾಷೆ ಕೊಟ್ಟ. ಉಳಿಸಿಕೊಂಡ ಕೂಡ. ಬೇರೆ ಯಾರಿಗೂ ಹೇಳಿ ಮತ್ತೂ ಹೆಚ್ಚಿನ ಮುಜುಗರಕ್ಕೆ ಈಡುಮಾಡಲಿಲ್ಲ. ಅದೇ ಪುಣ್ಯ.

ಅದರಿಂದ ಪಾಠ ಕಲಿತೆ. ಆದರೂ ಡೈರಿಯಲ್ಲಿ ಬರೆಯುವಾಗ ಮಾತ್ರ ಮನಸ್ಸಿಗೆ ಬಂದಿದ್ದು ಬರೆದು ಒಗೆದೆ. ಆಮೇಲೆ ಡೈರಿ ಬೇರೆ ಯಾರಿಗೂ ಸಿಗಲಿಲ್ಲ. ಹಾಗಾಗಿ ಬಚಾವು. ಹಳೆ ಡೈರಿಗಳು ಧಾರವಾಡದಲ್ಲಿ ಎಲ್ಲೋ ಇವೆ. ಮುಂದೆ ಹುಡುಕಿದಾಗ, ಸಿಕ್ಕಾಗ ಓದಿ ನೋಡಬೇಕು. ಇನ್ನೇನೇನು ವ್ಯಾಯಾಮ, ಯೋಗಾಸನದ ವಿವರಗಳಿವೆಯೋ. ಅವನ್ನೆಲ್ಲ ಅಳಿಸಿಹಾಕಬೇಕು. redact ಮಾಡಬೇಕು.

ಎಲ್ಲ ಹುಚ್ಚುಗಳಂತೆ ಡೈರಿ ಬರೆಯುವ ಹುಚ್ಚು ಸಹ ಬಿಟ್ಟಿತು. ಎಲ್ಲ ತಾತ್ಕಾಲಿಕ.

ಕರ್ನಾಟಕದ ರಾಜಕಾರಣಿಗಳು ಡೈರಿ ಬರೆದಿಟ್ಟುಕೊಂಡು ಮಂಗ್ಯಾ ಆಗುತ್ತಿರುವ ವಿಷಯಗಳನ್ನು ನೋಡಿದಾಗ ಡೈರಿ ಬರೆದಿಟ್ಟು ನಾವು ಮಾಡಿಕೊಂಡ ಈ ಫಜೀತಿ ನೆನಪಾಯಿತು. ನಗು ಬಂತು. ರೇಗಿಸಿ, ನಾಚಿಕೆಯಿಂದ ಫುಲ್ ಕೆಂಪು ಕೆಂಪು ಮಾಡಿಸಿ ಒಗೆದಿದ್ದ ದೋಸ್ತ ನೆನಪಾದ.

ಎಂಟು ವರ್ಷಕ್ಕೂ ಹಿರಿಯಳಾದ ಹಿರಿಯಕ್ಕನಂತಹ ಶಾಲ್ಮಲಾ ಧಾರವಾಡದಲ್ಲೇ ಇದ್ದಾಳೆ ಅಂತ ನೆನಪು.

* ಶಾಲ್ಮಲಾ  - ನಿಜವಾದ ಹೆಸರಲ್ಲ.

8 comments:

ವಿ.ರಾ.ಹೆ. said...

next time ಧಾರವಾಡಕ್ಕೆ ಹೋದಾಗ ಹಳೆಯ ಡೈರಿಗಳನ್ನು ಹುಡುಕಿ ಬಹಿರಂಗಗೊಳಿಸಿದರೆ ಅಮೇರಿಕಾದಿಂದ ಎತ್ತಾಕಿಕೊಂಡು ಬರಲು ಇಂಟರ್ಪೋಲ್ ಸಂಪರ್ಕಿಸಬೇಕಾಗಬಹುದು. LOL.. ಅಂದಹಾಗೆ, ಅಮೇರಿಕಾದಲ್ಲಿ ಮಾಡಿದ 'ವ್ಯಾಯಾಮ'ಗಳನ್ನು ಯಾವುದಾದರೂ ಡೈರಿಯಲ್ಲಿ ದಾಖಲಿಸಿಟ್ಟಿದ್ದಿದೆಯಾ? :)

sunaath said...

ಸಹಜ, ಸಹಜ.
ಆ ಹಳೆಯ ಡೈರಿ ಅಂದರೆ U-Certificate ವ್ಯಾಯಾಮದ ಡೈರಿ.
ಈಗಿನ ಡೈರಿಯಿದ್ದರೆ, A-Certificate ವ್ಯಾಯಾಮದ ಡೈರಿ ಆಗಿರುತ್ತದೆ.

Mahesh Hegade said...

@ವಿಕಾಸ್, ಹಾ...ಹಾ...ಹಾ..ಅಮೇರಿಕಾದಲ್ಲಿ ಏನಿದ್ದರೂ ಬೇರೆಯೇ ತರಹದ ವ್ಯಾಯಾಮ. ಮನಸ್ಸಿನ ವ್ಯಾಯಾಮ ಅಂದರೆ ಧ್ಯಾನ, ಜಪ, ತಪ, ಇತ್ಯಾದಿ.

ಮತ್ತೆ ಡೈರಿ ಬರಿಯದನ್ನು ಕಂಟಿನ್ಯೂ ಮಾಡಿದ್ನೇ ಇಲ್ಲೆ. ಸುಮ್ಮನೇ ರಿಸ್ಕು. ಧಾರವಾಡದಲ್ಲಿ ಇರುವ / ಇರಬಹುದಾದ ಡೈರಿಗಳಲ್ಲೂ ಸ್ಪೋಟಕ ಮಾಹಿತಿ ಇಲ್ಲ. :) :)

Mahesh Hegade said...

@ಸುನಾಥ್ ಸರ್ - ಡೈರಿಗಳಿಗೂ ಸರ್ಟಿಫಿಕೇಟ್! ಶಿವಾಯ ನಮಃ ಅಂತ ಹೇಳೋದೇ!

ಕಾಮೆಂಟಿಗೆ ಧನ್ಯವಾದ! :)

Steve Bhavangoudar said...


Hilarious!

Remember the scene from "Shivamogga Psychos?" Psycho secretly reads room-mates' dairies/account books and then discusses those during dinner before hatching more 'khatarnaak' plans for his brother-in-laws!!

Anonymous said...

Hi,
Getting this error for Agni. Thoughts?

http://www.agniweekly.com/issues.html

Not Found

The requested URL /issues.html was not found on this server.

Additionally, a 404 Not Found error was encountered while trying to use an ErrorDocument to handle the request.

Mahesh Hegade said...

Just use - http://www.agniweekly.com/. It should work.

Anonymous said...

It worked... thanks