Tuesday, March 28, 2017

ಆ್ಯoಟಿ ರೋಮಿಯೋ ಸ್ಕ್ವಾಡ್ (anti romeo squad) ಬರುತ್ತಿದೆ ಎಂದಾಗ ನೆನಪಾಯಿತು...

೧೯೮೪-೮೫ ರ ಹೊತ್ತಿನ ಮಾತು. ಅವರು ನಾಲ್ಕು ಜನ ಒಳ್ಳೆ ಹುಡುಗರು. ಕೂಡಿಯೇ ಬೆಳೆದು ದೊಡ್ಡವರಾದವರು. ನಾಲ್ಕೂ ಜನ ಮೆರಿಟ್ ಮೇಲೆಯೇ ಇಂಜಿನಿಯರಿಂಗ್ ಸೀಟುಗಳನ್ನು ಸಂಪಾದಿಸಿದರು. ರಾಜ್ಯದ, ರಾಷ್ಟ್ರದ ಬೇರೆ ಬೇರೆ ಕಡೆ ಇಂಜಿನಿಯರಿಂಗ್ ಅಧ್ಯಯನ ಮಾಡಿಕೊಂಡಿದ್ದವರು. ಒಳ್ಳೆಯ ಸ್ನೇಹಿತರು. ಒಂದೇ ಓಣಿಯ (ಬೀದಿಯ) ಗೆಳೆಯರು.

ಮೊದಲು ಒಟ್ಟಿಗಿದ್ದವರು ಪಿಯೂಸಿ ಮುಗಿದ ಮೇಲೆ ಬೇರೆಬೇರೆಯಾದರು. ಒಂದು ಸಲ ರಜೆಗೆ ಊರಿಗೆ, ಮನೆಗೆ ವಾಪಸ್ ಬಂದಿದ್ದರು. ಆಗ ಮತ್ತೆ ಸ್ನೇಹಿತರ ಸಮ್ಮಿಲನ. ರಜೆಯಿದ್ದ ಒಂದೆರೆಡು ತಿಂಗಳು ಮೊದಲಿನ ಹಾಗೆಯೇ ಸಂತೋಷದ ಸಮಯ. ರಜೆ ಮುಗಿದು ಮತ್ತೆ ಕಾಲೇಜ್ ತೆರೆಯುವ ದಿನ ಬಂತು. ಆವತ್ತೇ ಕಡೆಯ ದಿನ. ಅಂದು ರಾತ್ರಿಯ ರೈಲಿನಲ್ಲಿ ನಾಲ್ವರಲ್ಲಿ ಇಬ್ಬರು ಬೆಂಗಳೂರು, ಮೈಸೂರು ಕಡೆ ಹೊರಡುವವರಿದ್ದರು. ಆತ್ಮೀಯ ಗೆಳೆಯರ ಗುಂಪಿಗೆ ಮತ್ತೊಮ್ಮೆ ಬೇರೆಬೇರೆಯಾಗುವ ಬೇಸರ.

ಕೊನೆಯದಾಗಿ ಒಂದು ಕೆಲಸ ಮಾಡೋಣ ಅಂದುಕೊಂಡರು. ಏನು? ಗಿಚ್ಚಾಗಿ ಪಾರ್ಟಿ ಮಾಡಿ, ಎಣ್ಣೆ ಹೊಡೆದು, ಗದ್ದಲ ಹಾಕಿ ಬರೋಣ ಅಂತ ಪ್ಲಾನ್ ಮಾಡಿದರೆ? ಅಯ್ಯೋ! ಇಲ್ಲ. ಅವರು ಅಂತಹ ಹುಡುಗರೇ ಅಲ್ಲ. ಪಾರ್ಟಿ ಗೀರ್ಟಿ ದೂರ ಉಳಿಯಿತು. ಅವರೆಲ್ಲ ಚಹಾ, ಕಾಫಿ ಸಹ ಕುಡಿಯದ ಮುಗ್ಧ ಬಾಲಕರು. ಅಂತವರು ವಿಚಾರ ಮಾಡಿದ್ದು ಏನು ಅಂದರೆ, 'ಎಲ್ಲರೂ ಕೂಡಿ ರಾಯರ ಮಠಕ್ಕೆ ಹೋಗಿ, ನಮಸ್ಕಾರ ಮಾಡಿ, ಪ್ರಸಾದ ತೆಗೆದುಕೊಂಡು ಬರೋಣ. ನಾವು ಗೆಳೆಯರ ಮೇಲೆ ರಾಯರ ಆಶೀರ್ವಾದ ಇರಲಿ,' ಎಂದು. ಅಷ್ಟು ಸಾತ್ವಿಕ ಸ್ವಭಾವದ ಮುಗ್ಧ ಹುಡುಗರು. ಮತ್ತೆ ಆ ಓಣಿಯಲ್ಲಿಯೇ ರಾಯರಮಠ ಕೂಡ ಇತ್ತಲ್ಲ. ಮೊದಲೆಲ್ಲ ದಿನಕ್ಕೆ ಒಂದು ಬಾರಿಯಾದರೂ ಅಲ್ಲಿಗೆ ಹೋಗಿಯೇ ಹೋಗುತ್ತಿದ್ದರು. ಆವತ್ತು ಸಹ ಅಷ್ಟೇ. ರಜೆಯ ಕೊನೆಯ ದಿವಸವಾಗಿದ್ದರಿಂದ ಅಂದಿನ ರಾಯರ ಮಠದ ಭೇಟಿಗೆ ವಿಶೇಷ ಮಹತ್ವವಿತ್ತು.

ಸುಮಾರು ಸಂಜೆ ಏಳೂವರೆ ಸಮಯ. ಬೆಂಗಳೂರಿಗೆ ಹೋಗುವ ರೈಲು ಒಂಬತ್ತು ಘಂಟೆ ಸುಮಾರಿಗೆ ಇತ್ತು. ರಾಯರ ಮಠಕ್ಕೆ ಹೋಗಿ, ಪೂಜೆ ಮುಗಿಸಿ, ಮನೆಗೆ ಬಂದು, ಊಟ ಮುಗಿಸಿ ಹೊರಡಬೇಕು. ಅದು ಪ್ಲಾನ್.

ಅರ್ಧ ಫರ್ಲಾಂಗ್ ದೂರವಿದ್ದ ಮಠಕ್ಕೆ ಹೋದರು. ಎಂದಿನಂತೆ ಪೂಜೆ, ಪುನಸ್ಕಾರ, ಪ್ರದಕ್ಷಿಣೆ ಮುಗಿಸಿದರು. ದೂರದೂರಿಗೆ ಹೊರಟಿದ್ದಾರೆ ಅಂತ ಆಚಾರ್ರು ದೊಡ್ಡ ಮಟ್ಟದ ಆಶೀರ್ವಾದ ಮಾಡಿ ಕಳಿಸಿದರು. ಅವರ ಕಣ್ಮುಂದೆಯೇ ಹುಟ್ಟಿ, ಬೆಳೆದು, ದೊಡ್ಡವರಾದ ಹುಡುಗರು ಅವರೆಲ್ಲ.

ರಾಯರ ಮಠದ ಹೊರಗೆ, ಸ್ವಲ್ಪ ದೂರದಲ್ಲಿ, ಪೋಲೀಸ್ ವ್ಯಾನೊಂದು ನಿಂತಿದ್ದನ್ನು ಅವರು ಗಮನಿಸಿರಲಿಲ್ಲ. ಮನೆಗೆ ವಾಪಸ್ ಹೊರಟಿದ್ದರು. ಯಾರೋ ಕರೆದಂತಾಯಿತು. ನೋಡಿದರೆ ವ್ಯಾನಿನ ಪಕ್ಕ ನಿಂತಿದ್ದ ಪೋಲೀಸರಿಬ್ಬರು ಕರೆಯುತ್ತಿದ್ದರು. ಇವರನ್ನೇ ಕರೆಯುತ್ತಿದ್ದರು. ಪೊಲೀಸರು ಅವರನ್ನು ಯಾಕೆ ಕರೆಯುತ್ತಿದ್ದಾರೆ ಎಂದು ಈ ಹುಡುಗರಿಗೆ ಆಶ್ಚರ್ಯ. ಕರೆದವರು ಪೊಲೀಸರು. ಹಾಗಾಗಿ ಹೋಗಲೇಬೇಕು. ಏನು ವಿಷಯ ಎಂದು ಕೇಳೋಣ ಅಂತ ನಾಲ್ವರೂ ಕೂಡಿಯೇ ಪೋಲೀಸರು ನಿಂತಿದ್ದ ಕಡೆ ಹೋದರು.

ಹತ್ತಿರ ಬಂದವರನ್ನು ಒಂದು ಸಾರೆ ಮೇಲಿಂದ ಕೆಳಗಿನ ತನಕ ಒಂದು ಕ್ಷಣ ನೋಡಿದ ಆ ಇಬ್ಬರು ಪೊಲೀಸರು, ಒಮ್ಮೆಲೇ ನಾಲ್ವರ ಕುತ್ತಿಗೆಗೂ ಕೈ ಹಾಕಿ, 'ವ್ಯಾನ್ ಹತ್ತಿ ಕೂಡ್ರಿ. ನಡ್ರಿ, ನಡ್ರಿ,'  ಎಂದು ಹೂಂಕರಿಸಿದವರೇ ನಾಲ್ವರನ್ನೂ ವ್ಯಾನಿನ ಒಳಗೆ ದೂಡಿಯೇಬಿಟ್ಟರು. ದೊಡ್ಡಿಯೊಳಗೆ ದನಗಳನ್ನು ದೂಡಿದ ಹಾಗೆ ದೂಡಿದರು. ಏನಾಯಿತು? ಏಕಾಯಿತು? ಅಂತೆಲ್ಲ ಅರಿವಾಗುವಷ್ಟರಲ್ಲಿ, ಪೊಲೀಸರು ದೂಡಿದ ಅಬ್ಬರಕ್ಕೆ, ನಾಲ್ವರೂ ಮಿತ್ರರು ಪೋಲೀಸ್ ವ್ಯಾನಿನಲ್ಲಿ ಹೋಗಿ ಬಿದ್ದಿದ್ದರು. ಅವರ ಹಿಂದೆಯೇ ಪೊಲೀಸರು ಹತ್ತಿಕೊಂಡರು. 'ನಡೀಪಾ ಡ್ರೈವರ್! ಸ್ಟೇಷನ್ ಕಡೆ ಹೊಂಡು!' ಎಂದು ಅವರು ಅಂದಿದ್ದೇ ತಡ ಪೋಲೀಸ್ ವ್ಯಾನ್ ಹೊರಟೇಬಿಟ್ಟಿತು.

ಅವರನ್ನು ಯಾಕೆ ಪೊಲೀಸರು ಕರೆದರು, ಯಾಕೆ ಒಳಗೆ ತಳ್ಳಿದರು, ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ, ಒಂದೂ ಗೊತ್ತಾಗಲಿಲ್ಲ. ಆದ ಆಘಾತದಿಂದ ಚೇತರಿಸಿಕೊಳ್ಳಲಿಕ್ಕೇ ಸುಮಾರು ಸಮಯ ಬೇಕಾಯಿತು. ವ್ಯಾನಿನಲ್ಲಿ ಅವರನ್ನು ಬಿಟ್ಟು ಇನ್ನೂ ನಾಲ್ಕಾರು ಹುಡುಗರಿದ್ದರು. ಎಲ್ಲ ಅದೇ ಏರಿಯಾದವರೇ. ಇವರಿಗೆ ಅಲ್ಪ ಸ್ವಲ್ಪ ಪರಿಚಿತರೇ. ಇವರು ನಾಲ್ಕು ಜನರಂತೂ ಮೊದಲೇ ಸಿಕ್ಕಾಪಟ್ಟೆ ಸಂಭಾವಿತ ಹುಡುಗರು. ಸಭ್ಯರು. ಮಧ್ಯಮವರ್ಗ, ಕೆಳಮಧ್ಯಮವರ್ಗದವರು. ನಾಲ್ವರಲ್ಲಿ ಒಬ್ಬವ ಇದ್ದುದರಲ್ಲಿಯೇ ಸ್ವಲ್ಪ ದೊಡ್ಡ ಮನುಷ್ಯರಾದ ದೇಸಾಯಿ ಅವರ ಮಗ.

ನಾಲ್ವರಲ್ಲಿ ಒಬ್ಬ ಸ್ವಲ್ಪ ಧೈರ್ಯಮಾಡಿ, ಅವರನ್ನು ಯಾಕೆ ಪೊಲೀಸರು ಕರೆದೊಯ್ಯುತ್ತಿದ್ದಾರೆ ಅಂತ ಕೇಳಿದರೆ ಏನೂ ಉತ್ತರ ಬರಲಿಲ್ಲ. ಕೆಕ್ಕರಿಸಿ ನೋಡಿದ ಪೋಲೀಸ್ ಪೇದೆ, 'ಸುಮ್ಮನೆ ಕೂತರೆ ಒಳ್ಳೆಯದು! ಇಲ್ಲವಾದರೆ ಅಷ್ಟೇ ಮತ್ತೆ!' ಅನ್ನುವ ಖತರ್ನಾಕ್ ಲುಕ್ ಕೊಟ್ಟ. ಮೊದಲೇ ಹೆದರಿದ್ದ ಸಭ್ಯ ಹುಡುಗರು. ಪೊಲೀಸರು ಅಂದರೆ ಏನು, ಎತ್ತ, ಹೆಂಗೆ ಅನ್ನುವದೆಲ್ಲ ಗೊತ್ತಿರಲಿಕ್ಕೆ ಅವರೇನು ರೌಡಿಗಳೇ? ಗೂಂಡಾಗಳೇ? ಅಲ್ಲ.

ವ್ಯಾನ್ ಪೋಲೀಸ್ ಸ್ಟೇಷನ್ನಿಗೆ ಬಂದು ಮುಟ್ಟಿತು. ಎಲ್ಲರನ್ನೂ ಇಳಿಸಿ, ಒಳಗೆ ಕರೆದುಕೊಂಡು ಹೋಗಿ, ಒಂದು ಕಡೆ ಕೂಡಿಸಲಾಯಿತು. ಪೊಲೀಸರು ತಮ್ಮ ಕೆಲಸ ಮುಂದುವರೆಸಿದರು.

ಈ ನಾಲ್ವರನ್ನು ಪೊಲೀಸರು ವ್ಯಾನಿನಲ್ಲಿ ತುಂಬಿಕೊಂಡು ಹೋಗಿದ್ದನ್ನು ಯಾರೋ ನೋಡಿದ್ದರು. ನೋಡಿದವರು ಮನೆಗೆ ಬಂದು ಸುದ್ದಿ ಮುಟ್ಟಿಸಿದರು. ಮೊದಲೇ ಹೇಳಿದಂತೆ ನಾಲ್ವರಲ್ಲಿ ಒಬ್ಬವ ದೇಸಾಯಿಯವರ ಮಗ. ಇದ್ದವರಲ್ಲಿ ಅವರೇ ಕೊಂಚ ಸ್ಥಿತಿವಂತರು. ಸ್ವಲ್ಪ ಪ್ರಭಾವ, ಸಂಪರ್ಕಗಳು, ದೊಡ್ಡ ಮಂದಿಯ ವಶೀಲಿ, ಎಲ್ಲ ಇದ್ದವರು. ಉಳಿದ ಮೂವರು ಪಕ್ಕಾ ಬಡ ಬ್ರಾಹ್ಮಣರ ಕುಟುಂಬಗಳಿಗೆ ಸೇರಿದವರು. ಟಿಪಿಕಲ್ ಮಧ್ಯಮ ಅಥವಾ ಕೆಳಮಧ್ಯಮವರ್ಗ ಅನ್ನುವಂತಹ ಫ್ಯಾಮಿಲಿಗಳಿಗೆ ಸೇರಿದವರು. ಒಬ್ಬ ಹುಡುಗನಂತೂ ಅನಾಥ. ಹುಟ್ಟುತ್ತಲೇ ತಂದೆ ತಾಯಿ ಕಳೆದುಕೊಂಡವ. ಸಂಬಂಧಿಕರಾರೋ ಬೆಳೆಸಿದ್ದರು. ಬಡತನದಲ್ಲಿಯೇ ಬೆಳೆದು, ಓದಿ, ಈಗ ಇಂಜಿನಿಯರಿಂಗ್ ಮಾಡುತ್ತಿದ್ದ.

ಸುದ್ದಿ ತಿಳಿದು ಥಂಡಾ ಹೊಡೆದ ಮೂರೂ ಹುಡುಗರ ಪಾಲಕರು ಬಂದು ದೇಸಾಯಿಯವರನ್ನು ಕಂಡರು. ಮನೆಯ ಮಕ್ಕಳನ್ನು ಪೊಲೀಸರು ಎತ್ತಾಕಿಕೊಂಡು ಹೋಗಿದ್ದಾರೆ. ಏನು ಮಾಡಬೇಕು ಎಂದು ಆತಂಕದಿಂದ ಕೇಳಿದರು. ಆಗ ಟೈಮ್ ನೋಡಿದರೆ ಸುಮಾರು ರಾತ್ರಿ ಎಂಟೂವರೆ. ಇನ್ನೊಂದು ಘಂಟೆಯಲ್ಲಿ ಇಬ್ಬರು ಟ್ರೈನ್ ಹತ್ತಬೇಕು. ನೋಡಿದರೆ ನಾಲ್ವರೂ ನಾಪತ್ತೆ. ಪೊಲೀಸರು ಕರೆದುಕೊಂಡು ಹೋದರು ಎಂದು ಯಾರೋ ಹೇಳಿದ್ದಾರೆ ಅನ್ನುವದನ್ನು ಬಿಟ್ಟರೆ ಬೇರೆ ಏನೂ ಮಾಹಿತಿಯಿಲ್ಲ.

ದೇಸಾಯಿ ಅಪ್ರತಿಭರಾದರು. ಉಳಿದ ಮೂವರು ಹುಡುಗರ ಮನೆಯ ಒಂದಿಬ್ಬರು ಗಂಡಸರನ್ನು (ಪಾಲಕರನ್ನು) ಕರೆದುಕೊಂಡು ತಮ್ಮ ಕಾರಿನಲ್ಲಿಯೇ ಪೋಲೀಸ್ ಠಾಣೆಯತ್ತ ಧಾವಿಸಿದರು. ಗಡಬಡಾಯಿಸಿ ಒಳಗೆ ಹೋಗಿ ನೋಡಿದರೆ ನಾಲ್ವರೂ ಹುಡುಗರು ಸಾಮಾನ್ಯ ಅಪರಾಧಿಗಳಂತೆ ಪೋಲೀಸ್ ಸ್ಟೇಷನ್ ಒಳಗೆ ಕೂತಿದ್ದರು. ಬಟ್ಟೆ ಬಿಚ್ಚಿಸಿ ಲಾಕಪ್ ಒಳಗೆ ತಳ್ಳಿರಲಿಲ್ಲ. ಅದೇ ದೊಡ್ಡ ಮಾತು. (ಲಾಕಪ್ಪಿಗೆ ತಳ್ಳುವ ಮುಂಚೆ ಬಟ್ಟೆ ಬಿಚ್ಚಿಸುವದರ ಹಿಂದೆ ಇರುವ ಕಾರಣವೆಂದರೆ ಆರೋಪಿಗಳು ಮೈಮೇಲಿನ ಬಟ್ಟೆ ತೆಗೆದು ನೇಣು ಹಾಕಿಕೊಂಡು ಸತ್ತುಹೋಗದಿರಲಿ ಅನ್ನುವ ದೂ(ದು)ರಾಲೋಚನೆ!)

ಪೋಲೀಸರ ಹತ್ತಿರ ವಿವರಣೆ ಕೇಳಿದಾಗ ಸಿಕ್ಕ ಉತ್ತರದಿಂದ ಹುಡುಗರ ಪಾಲಕರು ಫುಲ್ ಥಂಡಾ ಹೊಡೆದರು. 'ಯಾಕೆ ಅರೆಸ್ಟ್ ಮಾಡಿ ಕರೆದುಕೊಂಡು ಬಂದಿದ್ದೀರಿ??' ಎಂದು ಕೇಳಿದರೆ ಬಂದ ಉತ್ತರ ದಂಗು ಹೊಡೆಸುವಂತಿತ್ತು. ಆ ಹುಡುಗರು ಹುಡುಗಿಯರನ್ನು / ಮಹಿಳೆಯರನ್ನು ಛೇಡಿಸುತ್ತಿದ್ದರು! eve teasing ಆರೋಪದಡಿಯಲ್ಲಿ ಎಳೆದುಕೊಂಡು ಬಂದಿದ್ದೇವೆ! ಇಷ್ಟು ಹೇಳಿದ್ದಷ್ಟೇ ಅಲ್ಲ, ಅಲ್ಲೇ ಕೂಡಿಸಿದ್ದ ಮತ್ತೊಂದು ಹದಿನೈದು ಇಪ್ಪತ್ತು ಮಂದಿ ಹುಡುಗರನ್ನೂ ತೋರಿಸಿದರು. ಎಲ್ಲರೂ ಅದೇ ಆರೋಪದಡಿಯಲ್ಲಿ ಠಾಣೆ ಸೇರಿದವರೇ.

ತಮ್ಮ ಮಗ ಮತ್ತು ಅವನ ಸ್ನೇಹಿತರನ್ನು ಮಹಿಳೆಯರನ್ನು ಛೇಡಿಸಿದ ಆರೋಪದಡಿಯಲ್ಲಿ ಬಂಧಿಸಿ ತಂದಿದ್ದಾರೆ ಎಂದು ಕೇಳಿದ ದೇಸಾಯಿ ಸಿಕ್ಕಾಪಟ್ಟೆ ಆಕ್ರೋಶಗೊಂಡರು. ಆ ನಾಲ್ಕು ಗಂಡುಮಕ್ಕಳ ಸಚ್ಚಾರಿತ್ರ್ಯ ಎಲ್ಲರಿಗೂ ಗೊತ್ತಿತ್ತು. ಎಷ್ಟು ಸಭ್ಯರು, ಎಷ್ಟು ಸಂಭಾವಿತರು, ಎಷ್ಟು ಒಳ್ಳೆ ಹುಡುಗರು ಎಂದು ಎಲ್ಲರೂ ಹೇಳುತ್ತಿದ್ದರು. ಶಾಲೆ, ಕಾಲೇಜ್, ಬೇರೆ ಜನರಿಂದ ಒಂದೇ ಒಂದು ಮಾತು, ತಕರಾರು, ಆಕ್ಷೇಪಣೆ ಆ ಹುಡುಗರ ಬಗ್ಗೆ ಕೇಳಿಬಂದಿರಲಿಲ್ಲ. ಆ ನಾಲ್ವರ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ನಾಲ್ಕು ಒಳ್ಳೆಯ ಮಾತುಗಳೇ. ಆ ಹುಡುಗರ ಪ್ರತಿಭೆ ಬಗ್ಗೆ, ಕಷ್ಟ ಪಟ್ಟು ಓದುತ್ತಿದ್ದ ಬಗ್ಗೆ ಅಭಿಮಾನದ ಮಾತುಗಳೇ. ಹೀಗಿರುವಾಗ ಅಂತವರನ್ನು ಪೊಲೀಸರು ಏಕಾಏಕಿ ಮಹಿಳೆಯರನ್ನು ಛೇಡಿಸಿದ ಆರೋಪದ ಮೇಲೆ ಒಳಗೆ ಹಾಕಿದ್ದೇವೆ ಅಂದರೆ ನಂಬುವ ಮಾತೇ?

ಬಾಕಿ ಮೂವರ ಪಾಲಕರು ಫುಲ್ ನರ್ವಸ್. ಯಾಕೆಂದರೆ ಅವರು ಪಾಪ ಕೆಳಮಧ್ಯಮವರ್ಗದ ಬಡ ಬ್ರಾಹ್ಮಣ ಮಂದಿ. ಜೀವನದಲ್ಲೇ ಪೋಲೀಸ್ ಠಾಣೆಯ ಮೆಟ್ಟಿಲು ಹತ್ತಿದವರಲ್ಲ. ಹತ್ತುವ ಯಾವ ಇರಾದೆಯೂ ಇರಲಿಲ್ಲ. ಒಟ್ಟಿನಲ್ಲಿ ಮಕ್ಕಳನ್ನು ಬಿಡಿಸಿಕೊಂಡು ಹೋದರೆ ಸಾಕು. ಕೈ ಕೈ ತಿಕ್ಕುತ್ತ ದೇಸಾಯಿ ಅವರ ಕಡೆ ನೋಡುತ್ತಾ ನಿಂತಿದ್ದರು.

ದೇಸಾಯಿ ಅವರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ತಪ್ಪೇ ಮಾಡದಿದ್ದಾಗ ಯಾರಾದರೂ ತಪ್ಪು ಮಾಡಿದ್ದಿ ಅಂತ ಸುಳ್ಳು ಆಪಾದನೆ ಮಾಡಿದಾಗ ಬರುವಂತಹ ಸಾತ್ವಿಕ ಕೋಪ. ಸಿಕ್ಕಾಪಟ್ಟೆ ಶಕ್ತಿಶಾಲಿ ಅದು. ಅಲ್ಲಿಯೇ ರೇಗಾಡಿಬಿಟ್ಟರು. ಆಗ ಪೊಲೀಸರು ಸ್ವಲ್ಪ ಥಂಡಾ ಹೊಡೆದರು. ಹೀಗೆ ಠಾಣೆಗೆ ಬಂದು ಪೊಲೀಸರಿಗೇ ರೇಗಾಡುವಷ್ಟು ಮೀಟರ್ ಇಟ್ಟಿದ್ದಾನೆ ಅಂದರೆ ಯಾರೋ influential ಪಾರ್ಟಿನೇ ಇರಬೇಕು ಅಂದುಕೊಂಡು ಸ್ವಲ್ಪ ವಿಚಾರಿಸಿಕೊಳ್ಳಲು ಮುಂದಾದರು. ರೋಪ್ ಹಾಕುತ್ತ, ಮೀಸೆ ತಿರುವುತ್ತ ಪೋಲೀಸ್ ಸಾಹೇಬನೇ ಬಂದು ಗತ್ತಿನಿಂದ, 'ಏನು ಮ್ಯಾಟರ್? ಯಾಕೆ? ಏನು?' ಎಂದು ವಿಚಾರಿಸಿದ.

ದೇಸಾಯಿ ಸಿಟ್ಟಿನಲ್ಲೇ ಅವನಿಗೂ ವಿಷಯ ಹೇಳಿದರು. ತಮ್ಮ ಮಗನ ಬಗ್ಗೆ ಮತ್ತೆ ಅವನ ಸ್ನೇಹಿತರ ಬಗ್ಗೆ ತಿಳಿಸಿ ಹೇಳಿದರು. ಅವರ ಒಳ್ಳೆ ಚಾರಿತ್ರ್ಯದ ಬಗ್ಗೆ ವಿವರಣೆ ಕೊಟ್ಟರು. ಆ ನಾಲ್ಕು ಹುಡುಗರು ಮಹಿಳೆಯರನ್ನು ಛೇಡಿಸುವದು ಸಾಧ್ಯವೇ ಇಲ್ಲ. ಪೋಲೀಸರ ಹತ್ತಿರ ಏನು ಸಾಕ್ಷಿಯಿದೆ? ಬೇಕಾದರೆ ಇಡೀ ಬಡಾವಣೆಯ ಜನರನ್ನು ಈಗಲೇ ಠಾಣೆಗೆ ಕರೆಯಿಸಿ ಆ ಹುಡುಗರ ಚಾರಿತ್ರ್ಯದ ಬಗ್ಗೆ ಸಾಕ್ಷಿ ಹೇಳಿಸಲು ತಯಾರಿದ್ದೇನೆ. ಬೇಕಾದರೆ ಹಿರಿಯ ಅಧಿಕಾರಿಗಳ ಜೊತೆಗೂ ಮಾತಾಡುತ್ತೇನೆ. ಯಾರ್ಯಾರನ್ನೋ ಸುಖಾ ಸುಮ್ಮನೆ ತಂದು ಅಂದರ್ ಮಾಡಲಿಕ್ಕೆ ಪೊಲೀಸರು ಏನು ಆಟ ಅಂದುಕೊಂಡಿದ್ದಾರೇನು? ಅಂತೆಲ್ಲ ರೇಗಾಡಿಬಿಟ್ಟರು.

ಓಹೋ! ಇದು ಯಾವದೋ ಜೋರ್ ಪಾರ್ಟಿ. ಪೊಲೀಸರಿಗೆ ಹೆದರುವ ಆಸಾಮಿಯಲ್ಲ. ಇವರನ್ನು ತಡವಿಕೊಂಡರೆ ಮುಂದೆ ಹಿರಿಯ ಅಧಿಕಾರಿಗಳು, ಮಾಧ್ಯಮ, ಪಬ್ಲಿಕ್ ಎಲ್ಲವನ್ನೂ ಎಳೆದು ತರಲು ಸಿದ್ಧವಿರುವ ಗಟ್ಟಿಗ ಆಸಾಮಿ ಇವರು. ಹಾಗಾಗಿ ಇವರ ಮಕ್ಕಳನ್ನು ಬಿಟ್ಟು ಕಳಿಸುವದೇ ಒಳ್ಳೆಯದು ಎಂದು ವಿಚಾರ ಮಾಡಿದ ಪೊಲೀಸರು ಆ ನಾಲ್ವರು ಹುಡುಗರನ್ನು ಯಾವದೇ ಕೇಸ್ ಹಾಕದೇ ಬಿಟ್ಟುಕಳಿಸಿದರು.

ದೇಸಾಯಿ ಇನ್ನೂ ಕೊತಕೊತ ಕುದಿಯುತ್ತಿದ್ದರು. ಯಾವ ಆಧಾರದ ಮೇಲೆ ಆ ನಾಲ್ಕು ಜನ ಸಭ್ಯ ಹುಡುಗರನ್ನು ಪರಮ ಅಸಹ್ಯ ಮಹಿಳಾ ಪೀಡನೆ ಅಪರಾಧದ ಮೇಲೆ ಅರೆಸ್ಟ್ ಮಾಡಿಕೊಂಡು ಬಂದರು ಅನ್ನುವ ಪ್ರಶ್ನೆಗೆ ಸಮಂಜಸ ಉತ್ತರ ಸಿಕ್ಕಿರಲಿಲ್ಲ. ನಂತರ ದೊರೆಯಿತು. ಅವರದ್ದೇ ರೀತಿಯಲ್ಲಿ ವಿಚಾರಣೆ ಮಾಡಿದಾಗ ವಿಷಯ ತಿಳಿದುಬಂತು. ಯಾರೋ ಒಬ್ಬ ಪೋಲೀಸ್ ಒಳಗಿನ ಖಾಸ್ ವಿಚಾರವನ್ನು ಹೇಳಿದ್ದ. ಆಗ eve teasing ಸಿಕ್ಕಾಪಟ್ಟೆ ಹೆಚ್ಚಾಗಿತ್ತಂತೆ. ದಿನಕ್ಕೆ ಇಷ್ಟು ಜನರು ಅಂತ ಹಿಡಿದು, ಒಳಗೆ ತಳ್ಳಿ, ಕೇಸ್ ಬುಕ್ ಮಾಡಿದ ಲೆಕ್ಕ ತೋರಿಸಲೇಬೇಕಾಗಿತ್ತಂತೆ. ಯಾರನ್ನು ಹಿಡಿದು ಒಳಗೆ ತಳ್ಳಿ, ಲೆಕ್ಕ ತೋರಿಸಿದರೂ ಅಡ್ಡಿಯಿಲ್ಲ. ಒಟ್ಟಿನಲ್ಲಿ ದಿನದ quota ಮುಟ್ಟಬೇಕು. ಅಷ್ಟೇ. ಅದೇ ಕೋಟಾ ತಲುಪಲು ಆವತ್ತು ಮಿಕಗಳ ಸಂಖ್ಯೆ ಕಮ್ಮಿ ಬಿದ್ದಿತ್ತು. ವೇಳೆ ಬೇರೆ ಆಗಿತ್ತು. ಅಂತಹ ಸಂದರ್ಭದಲ್ಲಿ ರಾಯರ ಮಠದಿಂದ ಬರುತ್ತಿದ್ದ ಈ ನಾಲ್ವರು ಕಂಡಿದ್ದಾರೆ. ಹಿಡಿದುಕೊಂಡು ಹೋಗಿಬಿಟ್ಟಿದ್ದಾರೆ. ಅಂದಿನ ಕೋಟಾ ಪೂರಾ ಮಾಡಿಕೊಂಡಿದ್ದಾರೆ.

ಆಗೊಂದಿಷ್ಟು ದಿನ ಇದೆಲ್ಲ ನಡೆದಿತ್ತು ಬಿಡಿ. ದಿನವೂ ಒಂದಿಷ್ಟು ಜನ ಯುವಕರನ್ನು ಎತ್ತಾಕಿಕೊಳ್ಳುವದು, ಅವರನ್ನು ಮಹಿಳಾ ಪೀಡಕರು ಅಂತ ತೋರಿಸುವದು ಮತ್ತು ಅದರ ಬಗ್ಗೆ ಪತ್ರಿಕೆಗಳಲ್ಲಿ ಹಾಕಿಸಿಕೊಂಡು ಸಂಭ್ರಮಿಸುವದು. ಹಾಗೆ ಮಾಡಿದ್ದರಿಂದ ನಿಜವಾದ ಮಹಿಳಾ ಪೀಡಕರು ಕೊಂಚ ಹೆದರಿ ಮಹಿಳಾ ಪೀಡನೆ ಕಮ್ಮಿಯಾಗಿರಬಹುದು. ಆದರೆ on the flip side ಇಂತಹ ಅದೆಷ್ಟು ಬಡಪಾಯಿಗಳು ವಿನಾಕಾರಣ ಸಿಕ್ಕಾಕಿಕೊಂಡು ಫಜೀತಿ ಅನುಭವಿಸಿದರೋ ಏನೋ.

ಕೆಲವೊಂದು ಕಡೆ ಪೊಲೀಸರು ಇನ್ನೂ ಮುಂದೆ ಹೋಗಿ ತಾವೇ ಶಿಕ್ಷೆ ವಿಧಿಸುವ ನ್ಯಾಯಾಧೀಶರೂ ಆಗಿಬಿಡುತ್ತಿದ್ದರು. ಭಯಂಕರ ಅವಮಾನಕ್ಕೀಡುಮಾಡುವ ಶಿಕ್ಷೆ. ಮಹಿಳಾ ಪೀಡಕರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿಸಿ, ಊರು ತುಂಬಾ ಮೆರವಣಿಗೆ ಮಾಡುವದು. ಸೂಕ್ಷ್ಮ ಮನಸ್ಸಿನ ನಿರಪರಾಧಿ ಹುಡುಗರಿಗೆ ಅಂತಹ ಶಿಕ್ಷೆ ಕೊಟ್ಟರೆ ಏನಾಗಬಹುದು ಊಹಿಸಿ. ವಿನಾಕಾರಣ ಆದ ಅವಮಾನ ಭರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡರೂ ಆಶ್ಚರ್ಯವಿಲ್ಲ. ಧಾರವಾಡದಲ್ಲಿ ಪರಿಸ್ಥಿತಿ ಆ ಮಟ್ಟಕ್ಕೆ ಹೋಗಿದ್ದು ನನಗೇನೂ ನೆನಪಿಲ್ಲ. ಎಷ್ಟೆಂದರೂ ಪೇಡಾ ನಗರಿಯ ಪೊಲೀಸರೂ ಸಹ comparatively ಸಭ್ಯರು. ಸುಸಂಸ್ಕೃತಿಯ ಪ್ರಭಾವ ಕೊಂಚವಾದರೂ ಆಗದೇ ಹೋದರೆ ಹೇಗೆ.

ಪೋಲೀಸರು ತ್ವರಿತವಾಗಿ ನ್ಯಾಯ(!) ಒದಗಿಸಿದಾಗ ಹೊಗಳುವವರೇ ಹೆಚ್ಚು. ಆದರೆ ಹೀಗೆಲ್ಲ ನ್ಯಾಯ ಒದಗಿಸುವದು ಸಂವಿಧಾನ ಸಮ್ಮತವಲ್ಲ. ಪೊಲೀಸರು ಮಹಿಳಾ ಪೀಡಕರು ಎಂಬ ಸಂಶಯದ ಮೇಲೆ ಬಂಧಿಸಿದ ಜನರ ತಲೆ ಬೋಳಿಸಿ ಮೆರವಣಿಗೆ ಮಾಡಿದರೆ ಉಘೇ ಉಘೇ ಅನ್ನುತ್ತೇವೆ. so called ರೌಡಿಯೊಬ್ಬನನ್ನು ನಕಲಿ ಎನ್ಕೌಂಟರಿನಲ್ಲಿ cold blood ನಲ್ಲಿ ಕೊಂದು ಒಗೆದರೆ ಸಮಾಜದ ಕೊಳೆ ಸ್ವಚ್ಛವಾಯಿತು ಅನ್ನುತ್ತೇವೆ. ತುಂಬಿದ ಬಜಾರಿನಲ್ಲಿ ವೇಶ್ಯಾವೃತ್ತಿ ಮಾಡುತ್ತ ಸಭ್ಯರಿಗೆ ಕಿರಿಕಿರಿ ಮಾಡುವ ಮಹಿಳೆಯರನ್ನು ಬಂಧಿಸಿ ಕಾನೂನುಬದ್ಧ ಪ್ರಕ್ರಿಯೆ ಕೈಗೊಳ್ಳದೇ ಆ ಬಲಹೀನ ಶೋಷಿತೆಯರನ್ನು ರಸ್ತೆಯಲ್ಲಿ ಅಟ್ಟಾಡಿಸಿ ಬಡಿದು ಓಡಿಸುವ ಪೊಲೀಸ್ ಕ್ರಮವನ್ನೂ ಶ್ಲಾಘಿಸುತ್ತೇವೆ. ಹಾಗೆಲ್ಲ ಮಾಡುವದು ಕಾನೂನುಬಾಹಿರ, ತಪ್ಪು ಅನ್ನುವ ಯೋಚನೆ ನಮ್ಮಲ್ಲಿ ಹೆಚ್ಚಿನವರಿಗೆ ಬರುವದಿಲ್ಲ. ಸದ್ಯದ ತೊಂದರೆ ತಾಪತ್ರಯ ನಿವಾರಣೆಯಾಯಿತಲ್ಲ. ಅಷ್ಟು ಸಾಕು. ಬಾಕಿ ಏನಾದರೂ ಆಗಲಿ. ಅದರ ತಲೆಬಿಸಿ ನಮಗೇಕೆ? ಅದೂ ಈಗೇಕೆ? ಅನ್ನುವ ಮನೋಭಾವದವರೇ ಹೆಚ್ಚು.

ನಮಗೆ ತಲೆಬಿಸಿ ಏಕಾಗಬೇಕು ಅಂದರೆ ಮೇಲೆ ನಾನು ಹೇಳಿದಂತಹ ಆಘಾತಕಾರಿ ಘಟನೆಗಳು ನಡೆದುಹೋಗುತ್ತವೆ. ಅಮಾಯಕರು ಬಲಿಯಾಗುತ್ತಾರೆ. ನಮ್ಮ, ನಿಮ್ಮ ಆಪ್ತರಿಗೇ ಆಗಿಹೋಗುತ್ತವೆ. ಆಗ ನಮಗೆ ಎಚ್ಚರವಾಗುತ್ತದೆ. ನಮ್ಮನೆ ನಿಮ್ಮನೆಯ ಸಭ್ಯ ಹುಡುಗರನ್ನು ಎತ್ತಾಕಿಕೊಂಡು ಹೋಗಿ, ಮಹಿಳಾ ಪೀಡಕರು ಅಂತ ಬುಕ್ ಮಾಡಿ, ಬರೀ ಚಡ್ಡಿಯಲ್ಲಿ ಲಾಕಪ್ಪಿನಲ್ಲಿ ಕೂಡಿಹಾಕಿ, ಮರುದಿನ ತಲೆ ಬೋಳಿಸಿ ಮೆರವಣಿಗೆ ಮಾಡಿದಾಗ ನಮ್ಮ ಬುಡಕ್ಕೆ ಬಂದಿರುತ್ತದೆ. ಯಾವದೋ ಪೊರಪಾಟಿನಲ್ಲಿ, in a case of mistaken identity, ನಮ್ಮನೆ ನಿಮ್ಮನೆಯ ಹುಡುಗನೊಬ್ಬನನ್ನು ಪೊಲೀಸರು ನಕಲಿ ಎನ್ಕೌಂಟರಿನಲ್ಲಿ ಕೊಂದಾಗ ಎದೆ ಬಡಿದುಕೊಂಡು ಅಳುತ್ತೇವೆ. ಆರೋಪಿಯಾಗಿದ್ದರೆ ಕಾನೂನಿನಂತೆ ಕ್ರಮ ಕೈಗೊಳ್ಳಬೇಕಿತ್ತು. ಎನ್ಕೌಂಟರ್ ಮಾಡುವ ಹಕ್ಕು ಯಾರು ಕೊಟ್ಟರು ಎಂದು ಆಕ್ರೋಶದಿಂದ ಕೇಳುತ್ತೇವೆ. ಯಾಕೆಂದರೆ ಈಗ ಬಲಿಯಾದವ ನಮ್ಮವ. 'ಯಾರೋ' ಅಲ್ಲ.

ಬಂಧಿಸಿ ಜೈಲಿಗಟ್ಟಿದರೆ ರೊಕ್ಕ, ಪ್ರಭಾವ ಬಳಸಿಕೊಂಡು ಹೊರಗೆ ಬರುತ್ತಾರೆ. ಅದಕ್ಕೇ ಎನ್ಕೌಂಟರಿನಲ್ಲಿ ಮುಗಿಸುತ್ತೇವೆ ಎಂದು ಪೊಲೀಸರು ಖಾಸಗಿಯಾಗಿ ಸಮರ್ಥಿಸಿಕೊಳ್ಳುತ್ತಾರೆ. ನಾವು ಒಪ್ಪಿಕೊಳ್ಳುತ್ತೇವೆ. ಅದು ತಪ್ಪು ಅಂತ ಪ್ರತಿಭಟಿಸುವದಿಲ್ಲ ಅಂದ ಮೇಲೆ ಒಪ್ಪಿಕೊಂಡಂತೆಯೇ.

ಹಿಂದೊಮ್ಮೆ ಧಾರವಾಡದ ಈ ನಾಲ್ಕು ಬಡಪಾಯಿ ಹುಡುಗರು ಮಹಿಳಾ ಪೀಡಕರು ಅಂತ ಸುಖಾಸುಮ್ಮನೆ ಬುಕ್ಕಾಗಿ, ಬಂಧಿತರಾಗಿ, ಪೋಲೀಸ್ ಠಾಣೆಗೆ ಹೋಗಿಬಂದಿದ್ದರ ಬಗ್ಗೆ ಯಾಕೆ ಬರೆದೆ ಅಂದರೆ ನಮ್ಮಲ್ಲಿ ಬಹಳ ಜನ ಪೋಲೀಸರ ಕಾನೂನುಬಾಹಿರ extra-judicial ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತೇವೆ. ನಿಮಗೇ ಅಂತಹ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ? ಆವಾಗ ಪೊಲೀಸರು ಕಾನೂನುಬದ್ಧವಾಗಿ ನಡೆದುಕೊಳ್ಳಬೇಕೋ ಅಥವಾ ಬೇರೆಯವರಿಗೆ ಮಾಡಿದಂತೆ ತಾವೇ ಶಿಕ್ಷೆ ವಿಧಿಸಿಬೇಕೋ? ಎಂದು ಕೇಳಿದರೆ 'ಛೇ! ಛೇ! ಅದೆಲ್ಲ ಹೇಗೆ ಸಾಧ್ಯ? ತಪ್ಪು ಮಾಡಿಲ್ಲ ಅಂದರೆ ಪೊಲೀಸರು ಯಾಕೆ ಹಿಡಿಯುತ್ತಾರೆ? ಆಕಸ್ಮಾತ್ by mistake ಹಿಡಿದರೂ ತಪ್ಪಿತಸ್ಥರಲ್ಲ ಅಂದ ಮೇಲೆ ಬಿಟ್ಟುಕಳಿಸುತ್ತಾರೆ,' ಎಂದು ಅವಗಣಿಸುತ್ತೇವೆ. ಅಂತವರಿಗೆ ಅಂತ ಈ ಕಥೆ ಹೇಳಬೇಕಾಯಿತು.

ನೀವು ನಿಮಗೆ ಕಾನೂನಬದ್ಧ ಪ್ರಕ್ರಿಯೆಯನ್ನೇ ನಿರೀಕ್ಷಿಸುತ್ತೀರಿ ಅಂದ ಮೇಲೆ ಅದೇ ಹಕ್ಕನ್ನು ಇತರರಿಗೂ ಅಪೇಕ್ಷಿಸಬೇಕು. ಪೊಲೀಸರ ಕೆಲಸವೇನಿದ್ದರೂ ತನಿಖೆ ಮಾಡಿ, ಆರೋಪಿಯನ್ನು ಅವಶ್ಯಕತೆ ಇದ್ದರೆ ಮಾತ್ರ ಬಂಧಿಸಿ, ಆರೋಪಪಟ್ಟಿ ಸಲ್ಲಿಸುವದು. ಅಪರಾಧಿಯೋ ನಿರಪರಾಧಿಯೋ ಎಂದು ನಿರ್ಧರಿಸುವದು ನ್ಯಾಯಾಲಯ. ಮತ್ತೆ ಅಪರಾಧಿ ಎಂದು ಸಾಬೀತಾಗುವವರೆಗೆ ಎಲ್ಲ ಆರೋಪಿಗಳು ನಿರಪರಾಧಿಗಳೇ. ಮತ್ತೆ ಒಮ್ಮೆ ನ್ಯಾಯಾಲಯ ನಿರಪರಾಧಿ ಎಂದು ತೀರ್ಮಾನಿಸಿದರೆ ಅದನ್ನು ಸಮಾಜ ಒಪ್ಪಬೇಕು. ನಿಮ್ಮ ಕಣ್ಣೆದುರಿನಲ್ಲೇ ಒಂದು ಅಪರಾಧ ನಡೆದಿರಬಹುದು. ಆದರೆ ಅದು ನ್ಯಾಯಾಧೀಶರ ಎದುರಲ್ಲಿ ನಡೆದಿರುವದಿಲ್ಲ. ನ್ಯಾಯಾಲಯದಲ್ಲಿ ಸಾಬೀತು ಮಾಡಬೇಕು ಅಂದರೆ ಬರೋಬ್ಬರಿ ಸಾಕ್ಷ್ಯಗಳು ಬೇಕು. ಅದಿಲ್ಲವಾದರೆ ಕೇವಲ ನಿಮ್ಮ ಸಾಕ್ಷಿಯನ್ನು ನಂಬಿ ಒಬ್ಬನನ್ನು ಅಪರಾಧಿ ಅಂತ ತೀರ್ಮಾನಿಸಲು ಬರುವದಿಲ್ಲ.

ಇದೇನೋ ಸಣ್ಣ ಪ್ರಕರಣವಾಯಿತು. ನಮ್ಮ ದೋಸ್ತನೊಬ್ಬ ಮಂಡಲ್ ವರದಿಯನ್ನು ವಿರೋಧಿಸುವ ಸಂದರ್ಭದಲ್ಲೋ ಅಥವಾ ಅಂತಹದೇ ಮತ್ಯಾವದೋ ಸಂದರ್ಭದಲ್ಲಾದ ಗಲಭೆಯಲ್ಲಿ, ಗುಂಪಿನಲ್ಲಿ ಗೋವಿಂದ, ಎಂಬಂತೆ ಬಂಧಿತನಾಗಿದ್ದ. ಒಂದು ಕೇಸ್ ಬಿತ್ತು. Wrong place, wrong time ಅನ್ನುತ್ತಾರಲ್ಲ. ಹಾಗೆ. ಗಲಾಟೆ ಗಲಭೆಗಳ ಸನಿಹಕ್ಕೂ ಹೋಗದವ ಅಂದು ಯಾವದೋ ಪೊರಪಾಟಿನಲ್ಲಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾನೆ. ಸಿಕ್ಕವರೆಲ್ಲರನ್ನೂ ಒಳಗಾಕಿದ್ದಾರೆ. ಗುಂಪಿನಲ್ಲಿ ಗೋವಿಂದ ಎಂಬಂತೆ ಇವನೂ ಒಂದೆರೆಡು ದಿನ ಜೇಲಿನಲ್ಲಿ ಸಮಯ ಕಳೆದಿದ್ದಾನೆ. ನಂತರ ಜಾಮೀನ್ ಮೇಲೆ ಹೊರಗೆ ಬಂದಿದ್ದಾನೆ. ಆದರೆ ಹಲವಾರು ವರ್ಷಗಳ ಕಾಲ ತೀರ್ಮಾನವಾಗದೇ ಉಳಿದ ಪ್ರಕರಣ ಅವನನ್ನು ಅದೆಷ್ಟು ಕಾಡಿತು ಅಂದರೆ ಅದರಿಂದ ಪಾರಾಗಿ ಬರುವಷ್ಟರಲ್ಲಿ ಅವನು ಮತ್ತು ಅವನ ಮನೆಯವರು ಸೋತು ಸುಣ್ಣವಾದರು. ಡಿಗ್ರಿ ಮುಗಿಸಿ ಜಾಬ್ ಹುಡುಕಬೇಕು ಅಂದರೆ ಅದೊಂದು ತೊಡಕು. passport ಮಾಡಿಸೋಣ ಅಂದರೆ, 'ನಿಮ್ಮ ಮ್ಯಾಲೆ ಕೇಸ್ ಐತಲ್ಲರೀ?? ಪೊಲೀಸ್ ಸರ್ಟಿಫಿಕೇಟ್ ಹ್ಯಾಂಗ ಕೊಡೋಣ??' ಎಂದು ರೋಪ್ ಹಾಕಿ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್. ಕಡೆಗೆ ಹೇಗೋ ಮಾಡಿ ಎಲ್ಲ ಸಾಫ್ ಮಾಡಿಸಿಕೊಂಡ.

ಸ್ವಲ್ಪ ದಿವಸಗಳ ಹಿಂದೆ YouTube ಮೇಲೆ ಯಾವದೋ ವಿಡಿಯೋ ನೋಡುತ್ತಿದ್ದೆ. ಕಾಲೇಜೊಂದರ ಮೇಲೆ ದಾಳಿ ಮಾಡಿದ್ದ ಪೊಲೀಸರು ಒಂದಿಷ್ಟು ಹುಡುಗರನ್ನು ರೌಂಡಪ್ ಮಾಡಿದ್ದರು. ಕೆಲವರಿಗೆ ಬರೋಬ್ಬರಿ ಏಟುಗಳು ಬೀಳುತ್ತಿದ್ದವು. ಕೆಲವರಿಗೆ ಬಸ್ಕಿ ತೆಗೆಯಲು ಹಚ್ಚಿದ್ದರು. ಎಲ್ಲರ ಮೇಲೆ ಹುಡುಗಿಯರನ್ನು ಚುಡಾಯಿಸಿದ ಆರೋಪ. ರೌಂಡಪ್ ಆಗಿದ್ದ ಆ ಹುಡುಗರು, ಎಲ್ಲರೂ, ತಪ್ಪು ಮಾಡಿದ್ದರು ಅಂತೇ ಇಟ್ಟುಕೊಳ್ಳೋಣ. ಅವರನ್ನು ಬಂಧಿಸಿ, ಕೇಸ್ ಹಾಕಿ, ಮುಂದಿನ ಪ್ರಕ್ರಿಯೆಯನ್ನು ನ್ಯಾಯಾಲಯಕ್ಕೆ ಬಿಡುವದು ಸರಿಯಾದ ಮಾರ್ಗ. ಆದರೆ ಅದನ್ನೆಲ್ಲ ಮಾಡುತ್ತಾ ಕೂಡಲು ಟೈಮ್ ಎಲ್ಲಿ? ಹಾಗೇ ಮಾಡಿದರು ಅಂತಿಟ್ಟುಕೊಳ್ಳೋಣ. ಸರಿಯಾದ ಸಾಕ್ಷ್ಯ ಸಿಗದಿದ್ದರೆ ಬಚಾವಾಗಿ ಬರುತ್ತಾರೆ. ಅದೆಲ್ಲ ತಲೆಬಿಸಿಗಿಂತ ಸಿಕ್ಕಸಿಕ್ಕವರಿಗೆಲ್ಲ ನಾಲ್ಕು ಏಟು  ಕೊಟ್ಟು, ಬುರುಡೆ ತಟ್ಟಿ ಕಳಿಸಿದರಾಯಿತು. ಬಡಿಸಿಕೊಂಡ ಹುಡುಗರು ಅಪರಾಧಿಗಳೋ ನಿರಪರಾಧಿಗಳೋ. Who cares! ಅವರು ಬಡಿಸಿಕೊಂಡಿದ್ದನ್ನು ನೋಡಿದ ಇತರರು ಮಹಿಳಾ ಪೀಡನೆ ಕಮ್ಮಿ ಮಾಡುತ್ತಾರೆ. ಒಟ್ಟಿನಲ್ಲಿ ಪರಿಸ್ಥಿತಿ ಹತೋಟಿಗೆ ಬರುತ್ತದೆ ಅಥವಾ ಬಂದಂತೆ ಕಾಣುತ್ತದೆ. Public memory is very short.

ಎಲ್ಲೋ ಓದಿದ ನೆನಪು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನವೇ ಕಳೆದರೂ ನಮ್ಮ ಕ್ರಿಮಿನಲ್ ಕಾನೂನುಗಳು (CrPC) ಎಲ್ಲಾ ಇನ್ನೂ ಬ್ರಿಟಿಷರ ಕಾಲದವು. ಪೋಲೀಸರನ್ನು ತಯಾರು ಮಾಡುವ ಪದ್ಧತಿ, ಅವರಿಗೆ ಕೊಡುವ ತರಬೇತಿ ಎಲ್ಲ ಆ ಕಾಲದ್ದೇ. ಬ್ರಿಟಿಷರ ಕಾಲದಲ್ಲಿ ಜನರಿಗಾಗಿ, ಅವರ ಸೇವೆಗಾಗಿ ಸರ್ಕಾರವಿರಲಿಲ್ಲ. ಬ್ರಿಟಿಷರ ಜಾಗತಿಕ ಆಸಕ್ತಿಗಳನ್ನು ಕಾಯಲು ಸರ್ಕಾರವಿತ್ತು. ಕಾನೂನುಗಳು, ಕಾನೂನು ಪ್ರಕ್ರಿಯೆಗಳು ಎಲ್ಲಾ ಮೂಲನಿವಾಸಿಗಳನ್ನು ಮತ್ತು ಅವರ ಮೂಲಭೂತ ಹಕ್ಕುಗಳನ್ನು ಮಟ್ಟ ಹಾಕಲೆಂದೇ ಮಾಡಿದಂತಿದ್ದವು. ಅವೇ ಜನವಿರೋಧಿ ಕಾನೂನುಗಳು ಮತ್ತು ಜನವಿರೋಧಿ ಧೋರಣೆಗಳು ಈಗಲೂ ಮುಂದುವರಿದಿವೆ.

ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿ ಆದ ಕೂಡಲೇ ಆ್ಯoಟಿ ರೋಮಿಯೋ ಸ್ಕ್ವಾಡ್ (anti romeo squad) ಎನ್ನುವ ಪೋಲಿಸ್ ತಂಡವನ್ನು ಹುಟ್ಟುಹಾಕಿದ್ದಾರಂತೆ. ಮಹಿಳಾ ಪೀಡಕರನ್ನು ಹಿಡಿದು ಮಟ್ಟ ಹಾಕುವದೇ ಈ ತಂಡದ ಕೆಲಸ. ಉದ್ದೇಶ ಒಳ್ಳೆಯದೇ. ಆದರೆ ಆಗಬಹುದಾದ ಅತಿರೇಕಗಳ ಬಗ್ಗೆ ಎಚ್ಚರಿಕೆ ಇರಬೇಕು. ಪ್ರಜ್ಞಾವಂತರು ಅಂತಹ feedback ನ್ನು ಸರ್ಕಾರಕ್ಕೆ ಕೊಡಬೇಕು. ಮಹಿಳೆಯರಿಗೇ ಆಗಲಿ, ಪುರುಷರಿಗೇ ಆಗಲಿ, ತೃತೀಯಲಿಂಗಿಗಳಿಗೇ ಆಗಲಿ ಅಥವಾ ಪ್ರಾಣಿಗಳಿಗೇ ಆಗಲಿ, ಯಾರಿಗೂ ಪೀಡನೆ ಸಲ್ಲ. ಪೀಡಿಸುವವರ ವಿರುದ್ಧ ಪೊಲೀಸರು ಜರೂರ್ ಕ್ರಮ ಕೈಗೊಳ್ಳಲಿ. ಅಷ್ಟೇ ತಾವೇ ನ್ಯಾಯಾಧೀಶರೂ ಆಗಿ instant ನ್ಯಾಯ ಕೊಡುವ ದಾರ್ಷ್ಟ್ಯ ತೋರದೆ ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯದ  ಮುಂದೆ ಹಾಜರುಪಡಿಸಲಿ. ಅಲ್ಲಿ ತೀರ್ಮಾನವಾಗಿ ಅಪರಾಧಿಯೆಂದು ಸಾಬೀತಾದರೆ ಶಿಕ್ಷೆಯಾಗಲಿ. ಅಪರಾಧಿಯೆಂದು ಸಾಬೀತಾಗದಿದ್ದರೆ ಸರ್ಕಾರದ ಹಿರಿತಲೆಗಳು, 'ಅಪರಾಧ ಯಾಕೆ ಸಾಬೀತಾಗಲಿಲ್ಲ? ಸಾಕ್ಷ್ಯದ ಕೊರತೆಯೇ? ಮತ್ತೇನಾದರೂ ಕೊರತೆಯೇ?' ಎಂದು ಆತ್ಮವಿಚಾರ ಮಾಡಿಕೊಳ್ಳಲಿ. conviction rate ತುಂಬಾ ಕಮ್ಮಿಯಾಗಿರಲು ಕಾರಣ ಯಾರ್ಯಾರನ್ನೋ ಸುಖಾಸುಮ್ಮನೆ ಕೇಸಿನಲ್ಲಿ 'ಫಿಟ್' ಮಾಡುವದು, ಕಾಟಾಚಾರಕ್ಕೆ ತನಿಖೆ ಮಾಡುವದು, ಸಾಕ್ಷ್ಯಗಳನ್ನು ಸರಿಯಾಗಿ ಸಂಗ್ರಹಿಸದೇ ಇರುವದು, ಇತ್ಯಾದಿ. ಪೊಲೀಸರ ಮೇಲೆ ಅದೆಷ್ಟು ಕೆಲಸದ ಒತ್ತಡವಿರುತ್ತದೆ ಅಂದರೆ ತನಿಖೆಯ ಇದ್ಯಾವ ಪ್ರಕ್ರಿಯೆಯೂ ಸರಿಯಾಗಿ ಆಗುವದಿಲ್ಲ. ಪೊಲೀಸರಿಗೆ ಸರಿಯಾಗಿ ಕೆಲಸ ಮಾಡಲು ಹೆಚ್ಚಿನ ಸವಲತ್ತುಗಳು ದೊರೆಯಲಿ.

'ಅಯ್ಯೋ, ಹೋಗ್ಲಿ ಬಿಡ್ರೀ. ಯಾರದ್ದು ತಪ್ಪೋ, ಯಾರದ್ದು ಸರಿಯೋ. ಯಾವುದೋ ಹುಡುಗ ತನ್ನ ತಪ್ಪಿಲ್ಲದಿದ್ದರೂ ಪೊಲೀಸರ ಕೈಯಲ್ಲಿ ತಾರಾಮಾರಾ ಏಟು ತಿಂದ ಎಂದ ಮಾತ್ರಕ್ಕೆ ಇಷ್ಟೆಲ್ಲಾ ತಲೆಕೆಡಿಸಿಕೊಳ್ಳಬೇಕೇ?' ಎನ್ನುವ ಉಡಾಫೆ ಮಾಡಿದರೆ ನಾಳೆ ಇದು ನಿಮ್ಮ ಬುಡಕ್ಕೇ ಬಂದೀತು. ಗ್ರಹಚಾರ ಕೆಟ್ಟರೆ ನಿಮ್ಮ ಮನೆಯ ಸಭ್ಯ ಹುಡುಗನೇ ಮಹಿಳಾ ಪೀಡಕ ಅಂತ ಬ್ರಾಂಡ್ ಆದಾನು. ನಿಮ್ಮ ಮನೆಯ ಸಂಸ್ಕಾರವಂತ ಹುಡುಗಿಯೇ ವೇಶ್ಯೆ ಅಂತ ಲೇಬಲ್ ಆದಾಳು. ನಿಮ್ಮ ಮನೆಯ ಜನಪರ ಹೋರಾಟಗಾರನೇ ರೌಡಿಯೆಂದು ನಕಲಿ ಎನ್ಕೌಂಟರಿನಲ್ಲಿ 'ಢಂ!' ಅಂದುಹೋದಾನು. ಆಗ, 'ಅಯ್ಯೋ! ಕಾನೂನಿನ ಪರಿಪಾಲನೆಯಾಗಲಿಲ್ಲ. ಅನ್ಯಾಯವಾಯಿತು,' ಎಂದು ರೋಧಿಸಿದರೆ ಉಪಯೋಗವಿಲ್ಲ. ಹಾಗಾಗಬಾರದು ಅಂದರೆ grassroots ಹಂತದಿಂದ ಕ್ರಿಮಿನಲ್ ಕಾನೂನಿನಲ್ಲಿ ಮತ್ತು ಕಾನೂನನ್ನು ಪಾಲಿಸುವ ಧೋರಣೆಯಲ್ಲಿ ಸಮಗ್ರ ಬದಲಾವಣೆಗಳು ಬರಬೇಕು. ಜನಸ್ನೇಹಿ ಕಾನೂನುಗಳು ಮತ್ತು ಜನಪರ ಪೋಲೀಸ್ ವ್ಯವಸ್ಥೆ ಬರಬೇಕು. ಆ ದಿಕ್ಕಿನಲ್ಲಿ ಜನರು ಮತ್ತು ಅವರ ಪ್ರತಿನಿಧಿಗಳು ಆಸ್ಥೆ ವಹಿಸಲಿ. in the mean time, ಸಾರ್ವಜನಿಕರು ಒಂದು ಕೆಲಸ ಮಾಡಲಿ. ಪೊಲೀಸರು ಬಂಧಿಸಿದಾಕ್ಷಣ ಅಥವಾ ಕೇಸ್ ಬುಕ್ ಆಯಿತು ಅಂದಾಕ್ಷಣ ಅಪರಾಧಿ ಎಂದು ತೀರ್ಮಾನಿಸುವದು ಬೇಡ. ಮಾಧ್ಯಮಗಳೂ ಅಷ್ಟೇ. ವರ್ಣರಂಜಿತವಾಗಿ ವರದಿ ಮಾಡುವ ಅಬ್ಬರದಲ್ಲಿ ಆರೋಪಿಯನ್ನು ಅಪರಾಧಿ ಎಂದು ಬಿಂಬಿಸದಿರಲಿ. ಎಷ್ಟೋ ವರ್ಷಗಳ ನಂತರ ಆತ ನಿರಪರಾಧಿ ಎಂದು ಹೊರಬಂದಾಗ ಅದು ಯಾರಿಗೂ ತಿಳಿಯುವದೇ ಇಲ್ಲ.

ಎಲ್ಲೋ ದೂರದ ಅಮೇರಿಕಾದಲ್ಲಿ ಕುಳಿತು ಉದ್ರಿ ಉಪದೇಶ ಮಾಡುತ್ತಿದ್ದೇನೆ ಅಂತ ಭಾವಿಸಬೇಡಿ. ಇದು ನನಗೆ ತುಂಬಾ ಆಪ್ತವಾದ ವಿಷಯ. ಇದರ ಬಗ್ಗೆ ತುಂಬಾ passionate ನಾನು. ಇಲ್ಲಿಗೆ ಬರುವ ಮೊದಲು ನಾನೂ ಸಹ, 'ಎಲ್ಲರನ್ನೂ ಎನ್ಕೌಂಟರ್ ಮಾಡಿ ಕೊಂದು ಎಸೆಯಬೇಕು! ಅದೇ ಸರಿಯಾದ ಮಾರ್ಗ!' ಎಂದು ಹೇಳಿದವನೇ. ಪೊಲೀಸರು extra judicial ಕ್ರಮ ಕೈಗೊಂಡಾಗ ಸಮರ್ಥಿಸಿಕೊಂಡವನೇ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಮನೋಭಾವ ಬದಲಾಗಿದೆ. extra judicial ಕ್ರಮಗಳು ತಾತ್ಕಾಲಿಕವಾಗಿ ಪರಿಹಾರವನ್ನು ತಂದುಕೊಟ್ಟರೂ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತವೆ ಅಂತ ಈಗ ಪೂರ್ತಿಯಾಗಿ convince ಆಗಿದೆ. ಒಂದು ಕಾಲದಲ್ಲಿ ನಾನೂ ಸಹ ಮಾನವಹಕ್ಕುಗಳ ಹೋರಾಟಗಾರರು (human rights activists) ಎಂದರೆ useless evils ಎಂದು ಸಿಕ್ಕಾಪಟ್ಟೆ ಸಿಡಿಮಿಡಿಗೊಂಡವನೇ. ಆದರೆ ಈಗ ಆ ಧೋರಣೆ ಇಲ್ಲ. 

ಇಲ್ಲೂ ಆಗಾಗ ಪೊಲೀಸ್ ಅತಿರೇಕಗಳು ಆಗುತ್ತವೆ. ಆದರೆ ಅದಕ್ಕೆ ಸರ್ಕಾರ ಜವಾಬ್ದಾರಿಯಾಗುತ್ತದೆ. ಸಂತ್ರಸ್ತನಿಗೆ ತಕ್ಕ ಪರಿಹಾರ ಸಿಗುತ್ತದೆ. ಸರ್ಕಾರದ ವರಿಷ್ಠರು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಮುಂದೆ ಅಂತಹ ಅತಿರೇಕಗಳಾಗುವದನ್ನು ತಡೆಯಲು ಮುಂಜಾಗ್ರತೆಯ ಕ್ರಮಗಳನ್ನು ರೂಪಿಸಲಾಗುತ್ತದೆ. ಇದೆಲ್ಲ ಸಾಮಾಜಿಕ ಪರಿವರ್ತನೆ ಒಂದು ದಿನದಲ್ಲಾಗಿದ್ದಲ್ಲ. ಇಲ್ಲೂ ಆಳಿಹೋದವರು ಬ್ರಿಟಿಷರೇ. ಅಮೇರಿಕವೂ ಸಹ ಅವರ ವಸಾಹತೇ ಆಗಿದ್ದರಿಂದ ಇಲ್ಲಿದ್ದವೂ ಜನವಿರೋಧಿ ಕಾನೂನುಗಳೇ. ಆದರೆ ಬ್ರಿಟಿಷರನ್ನು ಓಡಿಸಿದ ಜನ ಎಚ್ಚೆತ್ತುಕೊಂಡರು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಷ್ಟೋ ವರ್ಷಗಳ ಪರಿಶ್ರಮದ ನಂತರ ಜಾರಿಗೆ ಬಂತು. All good things take time and persistent effort.

6 comments:

sunaath said...

ಪೋಲೀಸರೇ ಆಗಲಿ ಅಥವಾ ಬೇರೆ ಯಾವುದೇ ಸರಕಾರಿ ನೌಕರನೇ ಆಗಲಿ, extra judicial ಕೆಲಸಗಳನ್ನು ಮಾಡುವುದು ತಮ್ಮ survival ಸಲುವಾಗಿ. ಈ extra judicial ಕೆಲಸವು illegal ಇರಬೇಕೆಂದಿಲ್ಲ. ನೀವು ಪೋಲೀಸ ಕನಿಷ್ಠಬಿಲ್ಲೆಯ ಮನೆಯನ್ನು ನೋಡಿದ್ದೀರಾ, ಮಹೇಶ? ಅದೊಂದು ಕೊಳಕು ಗೂಡು. ಅವನಿಗೆ ಬರುವ ವೇತನ ಎಷ್ಟು? ಅವನ ಮೇಲಿರುವ ಒತ್ತಡ ಎಷ್ಟು? ಧಾರವಾಡದಲ್ಲಿಯೇ ಒಬ್ಬ ಬೈಕ್ ಸವಾರನು, ಪೋಲೀಸನ ಮೇಲೆಯೇ ಬೈಕ್ ಹಾಯಿಸಿ, ಓಡಿ ಹೋದದ್ದನ್ನು ನಾನು ನೋಡಿದ್ದೇನೆ. ಹೆಲ್ಮೆಟ್ ಇಲ್ಲದ ಸವಾರನನ್ನು ಹಿಡಿದಾಗ, ಸವಾರನು ತನ್ನ ಮೋಬೈಲ್ ಹೊರ ತೆಗೆದು, MLAಗೆ ಫೋನ್ ಮಾಡುತ್ತಾನೆ. ಹೀಗಿದ್ದಾಗ, ‘ಅಜಾಪುತ್ರಂ ಬಲಿಂ ದದ್ಯಾತ್’ ಎನ್ನುವುದು ಬದುಕುವ ಮಂತ್ರವಾಗುತ್ತದೆ. ಸುಮಾರು ೨೦ ಕಿಮಿ ವ್ಯಾಸದ ವ್ಯಾಪ್ತಿಯುಳ್ಳ ಪೋಲೀಸ ಠಾಣೆಯಲ್ಲಿ ಸುಮಾರಾಗಿ ಹತ್ತು ಜನ ಪೋಲೀಸರು ಇದ್ದಿದ್ದಾರು. ಅಪರಾಧಿಯನ್ನು ಹಿಡಿಯಲು ಪೋಲೀಸರ ಹತ್ತಿರ ವೈಜ್ಞಾನಿಕ ಸಲಕರಣೆಗಳು ಉಂಟಾ? ಇಷ್ಟಾದರೂ ಸಹ ಇಪ್ಪತ್ತು ವರ್ಷಗಳ ನಂತರವೂ ಸಹ, ಪೋಲೀಸರು ಅಪರಾಧಿಗಳನ್ನು ಹಿಡಿದುದ್ದುಂಟು. ಆದರೆ ಸೂಕ್ತ ಸಾಕ್ಷಾಧಾರಗಳು ಇಲ್ಲದಿದ್ದರೆ, ನ್ಯಾಯಾಲಯದಲ್ಲಿ ಕೇಸುಗಳು ನಿಲ್ಲುವುದಿಲ್ಲ. ಈಗ ತಾನೇ ನೌಕರಿಗೆ ಸೇರಿದ, ೧,೩೫,೦೦೦/- ವೇತನ ಹಾಗು ಪುಕ್ಕಟೆ ಪರ್ಕುಗಳನ್ನು ತೆಗೆದುಕೊಳ್ಳುವ ಸಿವಿಲ್ ನ್ಯಾಯಾಧೀಶನು, ೧೧,೬೦೦/- ವೇತನ ತೆಗೆದುಕೊಳ್ಳುವ ಪೋಲೀಸ ಕನಿಷ್ಠಬಿಲ್ಲೆಯನ್ನು ಹೀಯಾಳಿಸಿ, ನ್ಯಾಯನಿರ್ಣಯ ಬರೆಯುತ್ತಾನೆ.
Extra judicial ಕಾರ್ಯದ ಇನ್ನೊಂದು ಉದಾಹರಣೆಯನ್ನು ನಿಮಗೆ ಕೊಡುತ್ತೇನೆ. ನನ್ನ ಪರಿಚಯದ ಒಬ್ಬರು Assistant Executive Engineerರು ನೀರಾವರಿ ಇಲಾಖೆಯಲ್ಲಿದ್ದರು. ನೀರಾವರಿಯ ಒಂದು ಮುಖ್ಯ ಕಾಲುವೆಯ ನಿರ್ವಹಣೆ ಅವರದಾಗಿತ್ತು. ಆ ಕಾಲುವೆಯಲ್ಲಿ ಒಮ್ಮೆ ಒಂದು ಬಿರುಕು ಕಾಣಿಸಿಕೊಂಡಿತು. ಈ ಪುಣ್ಯಾತ್ಮನು ಮುಸಲ್ಮಾನ ಧರ್ಮಕ್ಕೆ ಸೇರಿದವನು. ಅದು ರಮಜಾನ ಹಬ್ಬದ ಸಮಯ. ಆದರೆ ಈತ ಹಗಲೂ, ರಾತ್ರಿ ಅಲ್ಲಿಯೇ ನಿಂತುಕೊಂಡು ಗ್ರಾಮದ ಜನರನ್ನೆಲ್ಲ ಒಟ್ಟುಗೂಡಿಸಿ, ಆ ಕಾಲುವೆಯ ದುರಸ್ತಿ ಮಾಡಿಸಿದ. ಇನ್ನು ತಮ್ಮ ವಾಹನಗಳನ್ನು ನೀಡಿದ, ಹಾಗು ಕೂಲಿ ಕೆಲಸ ಮಾಡಿದ ಆಳುಗಳಿಗೆ ದುಡ್ಡು ಕೊಡುವ ಸಮಯ ಬಂತಲ್ಲ. ಇವನ ಮೇಲಧಿಕಾರಿಗಳ್ಯಾರೂ ಈತನಿಗೆ ಪಾವತಿಯ ಆಧಾರದ ಮೇಲೆ ಬಟವಡೆ ಮಾಡಲು ಅನುಮತಿ ನೀಡಲಿಲ್ಲ. ಯಾಕೆಂದರೆ ಸರಕಾರದ Auditor General ತಮ್ಮ ಮೇಲೆ ಆಕ್ಷೇಪಣೆಗಳನ್ನು ತೆಗೆಯುತ್ತಾರೆಂದು. ಸರಿ, ಈತನಿಗೆ ಉಳಿದ ಮಾರ್ಗ ಯಾವುದು? ಒಂದೋ ತನ್ನ ಕೈಯಿಂದ ದುಡ್ಡು ಹಾಕಿ, ‘ಗೋವಿಂದಾ’ ಎಂದು ಅನ್ನುವುದು ಅಥವಾ ಕೆಲಸ ಮಾಡಿದವರಿಗೆ ಕಳ್ಳಮಾರ್ಗಗಳಿಂದ ದುಡ್ಡು ಕೊಟ್ಟು ಮುಗಿಸುವುದು!ಅವರು ಏನು ಮಾಡಿದರು ಎಂದು ನಾನು ಹೇಳಬಯಸುವದಿಲ್ಲ. ಆದರೆ it was extra judicial.

Mahesh Hegade said...

ಬೇರೆ ಬೇರೆ ದೃಷ್ಟಿಕೋನಗಳಿಂದ ವಿಚಾರ ಮಾಡಲು ಹಚ್ಚುವಂತಹ ಸಂಗತಿಗಳನ್ನು ಬರೆದಿದ್ದೀರಿ ಸರ್. ಧನ್ಯವಾದಗಳು.

ವಿ.ರಾ.ಹೆ. said...

ಇಲ್ಲಿ ಜನ ಎಚ್ಚೆತ್ತುಕೊಂಡಿಲ್ಲ. ರಾಜಕಾರಣಿಗಳು ಬೇಕಾದಂಗೆ ಬಳಸಿಕೊಂಡರು. ಬ್ರಿಟಿಶ್ ಪಳಿಯುಳಕೆಯಾಗಿ ಮುಂದುವರೆದಿದೆ. ಹಾಗಾಗಿ ಪೋಲೀಸು ವ್ಯವಸ್ಥೆ ಇರುವುದು ಬಹುತೇಕ ಸಂದರ್ಭಗಳಲ್ಲಿ ಜನರನ್ನು ಹತ್ತಿಕ್ಕಲು ಎಂಬಂತೆಯೇ ನಡೆಯುತ್ತಿದೆ.

Mahesh Hegade said...

ರೈಟ್ ವಿಕಾಸ್!

kushi N said...

Nice one sir. Right now...hubby Keerthi is in the same point of view..."ellarannu encounter Madi eseyabeku ". I am just a listener.

Mahesh Hegade said...

ಕಾಮೆಂಟಿಗೆ ಧನ್ಯವಾದಗಳು, ಖುಷಿ. ಹೀಗೇ ಅಭಿಪ್ರಾಯ ತಿಳಿಸುತ್ತಾ ಇರಿ.