Friday, March 24, 2017

'ಪಂಚನಾಮೆ' ಪ್ರಹಸನ

೧೯೭೭-೭೮ ರ ಆಸುಪಾಸು ಇರಬೇಕು. ಸಿರ್ಸಿ ಸಮೀಪದ ಅಜ್ಜನಮನೆಗೆ ಹೋಗಿದ್ದೆ. ಅಮ್ಮನ ಜೊತೆ. ಅದು ನವೆಂಬರ್ ತಿಂಗಳ ಸಮಯ. ಆಗ ಯಾವದೇ ರಜೆ ಇರಲಿಲ್ಲ. ಆ ವರ್ಷ ಕಬ್ಬು ಸೊಗಸಾಗಿ ಬೆಳೆದಿತ್ತು. ಹಾಗಾಗಿ ಆಲೆಮನೆ ಹಾಕಿದ್ದರು. ಆಲೆಮನೆ ಅಂದರೆ ಕಬ್ಬನ್ನು ಅರೆದು ಕಬ್ಬಿನರಸ ತೆಗೆಯಲು ನಮ್ಮ ಹಳ್ಳಿ ಕಡೆ ಹಾಕುವ ಕಬ್ಬಿನ ಗಾಣ. ಸೊಪ್ಪಿನ ಬೆಟ್ಟದಲ್ಲಿ ಚಂದದ ಅಂಗಳ ಮಾಡಿ, ಗಾಣ ಹಾಕಿ, ಅದನ್ನು ತಿರುಗಿಸಲು ಸ್ಪೆಷಲ್ ಕೋಣಗಳನ್ನು ತಂದು, ಕಬ್ಬನ್ನು ಅರೆದು, ಕಬ್ಬಿನ ರಸವನ್ನು ತೆಗೆದು, ಅದನ್ನು ಕಾಯಿಸಿ, ಬೆಲ್ಲ ತೆಗೆಯುವದೇ ಆಲೆಮನೆ. ವಾರಗಟ್ಟಲೇ ನಡೆಯುತ್ತದೆ. ಬೇಕಾದಷ್ಟು ಕಬ್ಬಿನಹಾಲು ಕುಡಿಯಬಹುದು. ಫ್ರೆಶ್ ಆಗಿ ತಯಾರಾಗುವ ಬೆಲ್ಲವನ್ನು ಸವಿಯಬಹುದು. ಮೇಲಿಂದ ತರತರಹದ ಇತರೆ ತಿಂಡಿ ತಿನಸುಗಳು ಬೋನಸ್ ಇದ್ದ ಹಾಗೆ.

ಆಲೆಮನೆಗೆ ಮುದ್ದಾಂ ಬಂದು ಹೋಗಿ ಅಂತ ಅಜ್ಜ ಆಹ್ವಾನಿಸಿದ್ದ. ಅದಕ್ಕಿಂತ ಮೊದಲು ನನಗಂತೂ ಆಲೆಮನೆಗೆ ಹೋದ ನೆನಪಿರಲಿಲ್ಲ. ಪ್ರತಿವರ್ಷ ಆಲೆಮನೆ ಹಾಕುತ್ತಲೂ ಇರಲಿಲ್ಲ. ಕಾಡುಹಂದಿಗಳ ಕಾಟದಿಂದ ಹೆಚ್ಚಿನ ಕಬ್ಬು ಕಟಾವಿಗೆ ಬರುತ್ತಿರಲೇ ಇಲ್ಲ. ಕಾಡುಹಂದಿಗಳನ್ನು ಗುಂಡಿಟ್ಟು 'ಢಂ!' ಅನ್ನಿಸೋಣ ಅಂದರೆ ಅರಣ್ಯ ಇಲಾಖೆ ಮಂದಿಯ ರಗಳೆ. ಆಗ ಬೇಟೆ ಎಲ್ಲ ನಿಷೇಧ ಮಾಡಿಯಾಗಿತ್ತಲ್ಲ. ಹೀಗಾಗಿ ಒಳ್ಳೆ ಕಬ್ಬಿನ ಬೆಳೆ ಬಂದ ವರ್ಷ ಮಾತ್ರ ಆಲೆಮನೆ. ಒಟ್ಟಿನಲ್ಲಿ ಅಪರೂಪದ ಆ ವರ್ಷದ ಆಲೆಮನೆಯನ್ನು ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಯಾವದೇ ಕಾರಣವಿಲ್ಲದಾಗೂ ಯಾವಾಗ ಬೇಕಾದರೂ ಅಜ್ಜನ ಮನೆಗೆ ಓಡಲು ರೆಡಿ ನಾವು. ಹಾಗಿದ್ದಾಗ ಈಗ ತಪ್ಪಿಸಿಕೊಳ್ಳಲು ಆಗುತ್ತದೆಯೇ!? ಸಾಧ್ಯವೇ ಇಲ್ಲ. ಒಂದೆರೆಡು ದಿನ ಶಾಲೆಗೆ ಚಕ್ಕರ್. ಹೇಳಿಕೇಳಿ ಆಗ ಇನ್ನೂ ಒಂದನೇ ಕ್ಲಾಸ್. ಶಾಲೆಗೆ ಹೋದರೂ ಅಷ್ಟೇ ಬಿಟ್ಟರೂ ಅಷ್ಟೇ.

ಆಲೆಮನೆಗೆಂದು ಊರಿಗೆ ಹೋದರೆ, ಊರಿನಲ್ಲಿ ಒಂದು ಖತರ್ನಾಕ್ ಘಟನೆಯಾಗಿಬಿಟ್ಟಿತು. ಅಡಿಕೆ ತೋಟದಲ್ಲಿ ಒಬ್ಬನ ಮೇಲೆ ಇನ್ನೊಬ್ಬ ಕತ್ತಿಯಿಂದ (ಕುರ್ಪಿ, sickle) ಹಲ್ಲೆ ಮಾಡಿದ್ದ. ಕೊಲೆ ಯತ್ನ. ಇಬ್ಬರೂ ಒಂದೇ ಊರಿನವರು. ಒಬ್ಬರ ಮನೆ ತೋಟದ ಕೆಳಗಿನ ಕೊಳ್ಳದಲ್ಲಿದ್ದರೆ ಮತ್ತೊಬ್ಬರ ಮನೆ ತೋಟದ ಮೇಲಿನ ದಿಬ್ಬದಲ್ಲಿ. ಹೆಚ್ಚುಕಮ್ಮಿ ಒಂದೇ ವಯಸ್ಸಿನ ಯುವಕರು. ಇಬ್ಬರ ನಡುವೆ ಏನೋ ಮನಸ್ತಾಪ. ಸಣ್ಣಗೆ ದ್ವೇಷ, ಅಸಹನೆ ಬೆಳೆದಿದೆ. ಆ ದಿನ ಅಡಿಕೆ ತೋಟದಲ್ಲಿ ಒಬ್ಬರಿಗೊಬ್ಬರು ಎದುರಾಗಿದ್ದಾರೆ. ಏನು ಮಾತುಕತೆ, ಹಾಥಾಪಾಯಿ ನಡೆಯಿತೋ ಗೊತ್ತಿಲ್ಲ. ತೋಟದಲ್ಲಿ ಓಡಾಡುವರ ಹತ್ತಿರ ಕೃಷಿ ಕತ್ತಿ (ಕುರ್ಪಿ) ಇದ್ದೇ ಇರುತ್ತದೆ. ಒಬ್ಬವ ಅದನ್ನೇ ತೆಗೆದು ಇನ್ನೊಬ್ಬನ ಮೇಲೆ ಹಲ್ಲೆ ಮಾಡಿದ್ದಾನೆ. ಪುಣ್ಯಕ್ಕೆ ಸಾಯುವಂತೆ ಹೊಡೆದಿಲ್ಲ. ಹಾಗಾಗೆಂದೇ ಕತ್ತಿಯಿಂದ ಹಲ್ಲೆ ಮಾಡಿಸಿಕೊಂಡವ ಬಚಾವಾಗಿದ್ದಾನೆ. ಗಾಯಗೊಂಡವನನ್ನು ಅಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. ಒಟ್ಟಿನಲ್ಲಿ ಹಿಂದೆಂದೂ ಕೇಳರಿಯದ ಕೊಲೆಯತ್ನವೊಂದು ನಡೆದುಹೋಗಿದೆ. ಊರಿಗೆ ಊರೇ ಫುಲ್ ಥಂಡಾ ಹೊಡೆದಿದೆ.

ಅಲ್ಲಿಗೆ ಎಲ್ಲ ಮುಗಿಯುತೇ? ಇಲ್ಲ. ಇದು ಪೋಲೀಸ್ ಕೇಸ್. ಬಂದರಲ್ಲ ಪೊಲೀಸರು ಸಿರ್ಸಿ ಪಟ್ಟಣದಿಂದ. ಒಂದರ ಮೇಲೊಂದು ಕೌತುಕಮಯ ಘಟನೆಗಳು. ಹಲ್ಲೆಯಾಗಿದ್ದನ್ನು ಪ್ರತ್ಯಕ್ಷವಾಗಿ ನೋಡಲಾಗಿರಲಿಲ್ಲ. ತೋಟದ ಕಡೆ ಹೋಗಿದ್ದ ಮಾವ ಮನೆಗೆ ಬೇಗ ಬಂದಿದ್ದ. ಬೆಳಗಿನ ಉಪಹಾರ ಮುಗಿಸಿ ತೋಟದ ಕಡೆ ಹೋದ ಗಂಡಸರು ತಿರುಗಿ ವಾಪಸ್ ಬರುವದು ಮಧ್ಯಾಹ್ನದ ಊಟದ ಹೊತ್ತಿಗೇ. ಅಂದು ಹೋಗಿ ಒಂದೆರೆಡು ತಾಸಾಗುವ ಮೊದಲೇ ಗಡಿಬಿಡಿಯಲ್ಲಿ ಮನೆಗೆ ವಾಪಸ್ ಬಂದ ಮಾವ ತೋಟದಲ್ಲಾದ ಹಲ್ಲೆ ಬಗ್ಗೆ ಮನೆಯಲ್ಲಿ ಹೇಳಿದ್ದ. ಮನೆಯಲ್ಲಿ ಚಿಕ್ಕವ ಅಂತ ಇದ್ದವ ನಾನೇ. ಹಲ್ಲೆಯ ವಿವರಗಳು ನನಗೆ censored. ಹಾಗಾಗಿ ಹಿರಿಯರು ತಮಗಷ್ಟೇ ತಿಳಿಯುವಂತೆ ಸಣ್ಣ ದನಿಯಲ್ಲಿ ಕೊಚಪಚ ಮಾತಾಡಿಕೊಂಡರು. ನಮಗೋ ಕೆಟ್ಟ ಕುತೂಹಲ. ನಾನು ನಿರಂತರವಾಗಿ ಅಡ್ಡಬಾಯಿ ಹಾಕುತ್ತ ‘ಏನಾತು? ಯಾಕಾತು?’ ಅಂತ ಕೇಳಿಯೇ ಕೇಳಿದೆ. ಬೇರೆ ಯಾರಾದರೂ ಮಾಣಿಯಾಗಿದ್ದರೆ, ‘ಸುಮ್ಮನಿರು ಅಧಿಕಪ್ರಸಂಗಿ!’ ಅಂತ ಬುರುಡೆಗೆ ಎರಡು ತಟ್ಟುತ್ತಿದ್ದರೋ ಏನೋ. ಆದರೆ ನಾನು ಪಟ್ಟಣದಿಂದ ಆಗಮಿಸಿರುವ ಪ್ರೀತಿಯ ಮೊಮ್ಮಗ. ಅದರಲ್ಲೂ ಸಣ್ಣವ. ಮತ್ತೆ ಸಿಕ್ಕಾಪಟ್ಟೆ ರಗಳೆ ಪಾರ್ಟಿ. ಹಾಗಾಗಿ ಬಯ್ಯುವ ಅಥವಾ ಹೊಡೆಯುವ ಮಾತೇ ಇರಲಿಲ್ಲ. ನನಗೂ ಸಂಕ್ಷಿಪ್ತವಾಗಿ ಸುದ್ದಿ ಹೇಳಿ ಮುಗಿಸಿದರು. ಹೀಗೀಗೆ ಆಯಿತಂತೆ.....ಅವರ ಮನೆ ಆ ಮಾಮಾನನ್ನು ಮತ್ತೊಬ್ಬರ ಮನೆಯ ಇನ್ನೊಬ್ಬ ಮಾಮಾ ಹೊಡೆದಿದ್ದಾನೆ. ಕತ್ತಿಯಿಂದ ಹೊಡೆದಿದ್ದಾನೆ. ಗಾಯವಾಗಿದೆ. ಆಸ್ಪತ್ರೆಗೆ ಸೇರಿಸಿದ್ದಾರೆ. ಆರಾಮಾಗುತ್ತಿದ್ದಾನೆ. ಇಷ್ಟೇ ಹೇಳಿ ಮುಗಿಸಿದರು.

ಮಧ್ಯಾಹ್ನದ ಊಟ ಮುಗಿಯುವ ಹೊತ್ತಿಗೆ ನೀಲಿ ಬಣ್ಣದ ಪೋಲೀಸರ ವ್ಯಾನು ತುಂಬಿದ ಬಸುರಿಯಂತೆ ಎರ್ರಾಬಿರ್ರಿ ಓಲಾಡುತ್ತ, ಕೆಟ್ಟ ಕರಿ ಹೊಗೆ ಬಿಡುತ್ತ ಊರಿಗೆ ಬಂತು. ಸೀದಾ ಕೆಳಗಿನ ಕೇರಿಗೇ ಹೋಯಿತು. ತೋಟದಲ್ಲಿ ಬೆಳಿಗ್ಗೆಯಾದ ಹಲ್ಲೆಯನ್ನಂತೂ ನೋಡುವ ನಸೀಬ್ ಇರಲಿಲ್ಲ. ಈಗ ಬಂದಿರುವ ಪೊಲೀಸರು ಮಾಡಲಿರುವ ಕಾರ್ಯಾಚರಣೆಯನ್ನು ಮಿಸ್ ಮಾಡಿಕೊಳ್ಳುವಂತೆಯೇ ಇರಲಿಲ್ಲ. ‘ಏ, ಬಿಸಿಲಲ್ಲಿ ಹೋಗಬೇಡ. ಊಟಾದ ಮೇಲೆ ಮಲಗಿ ಸ್ವಲ್ಪ ನಿದ್ದೆ ಮಾಡು’ ಅಂತ ಹಿರಿಯರು ಬೊಂಬಡಾ ಹೊಡೆಯುತ್ತಿದ್ದರೂ ಕ್ಯಾರೇ ಮಾಡದೇ ಕೆಳಗಿನ ಕೇರಿಗೆ ಓಡಿದ್ದೆ.

ಪೋಲೀಸ್ ವ್ಯಾನ್ ಯಾರ ಮನೆಗೆ ಬಂದಿತ್ತೋ ಅವರ ಮನೆ ಮುಂದೆ ಆಗಲೇ ಸಣ್ಣ ಗುಂಪು ನೆರೆದಿತ್ತು. ಮೂರ್ನಾಲ್ಕು ಜನ ಪೊಲೀಸರು ಬಂದಿದ್ದರು. ಅವರಲ್ಲಿ ಒಬ್ಬವ ಬರೆಯಲು ಉಪಯೋಗಿಸುವ ಕ್ಲಿಪ್ ಬೋರ್ಡನ್ನು (clipboard) ಶಿಸ್ತಾಗಿ ಹಿಡಿದಿದ್ದ. ಅದರ ಮೇಲೆ ಬಿಳಿಯ ಹಾಳೆಗಳನ್ನು ನೀಟಾಗಿ ಪೇರಿಸಿಟ್ಟುಕೊಂಡಿದ್ದ. ಪೆನ್ನು ಹಿಡಿದು (ಹಿರಿದು!) ಬರೆಯಲು ರೆಡಿಯಾಗಿ ನಿಂತಿದ್ದ. ಅದೇಕೋ ಗೊತ್ತಿಲ್ಲ. ಅಷ್ಟು ಜನ ಪೊಲೀಸರಲ್ಲಿ ಅವನೇ ಬಹಳ ಆಕರ್ಷಿಸಿಬಿಟ್ಟ. ಆಗಿಂದಲೂ ನಾವೂ ಬರಹಗಾರರೇ ನೋಡಿ. ಆಗ ಬರೆಯುತ್ತಿರಲಿಲ್ಲ. 'ಜೀರಕ್ಕೆ ಜೀರೋ' ಅಂತ ರಾಗವಾಗಿ ಹಾಡುತ್ತ ಶಿಸ್ತಾಗಿ ಪೇಜುಗಟ್ಟಲೆ ಗೀಚುತ್ತಿದ್ದೆ. ಅದನ್ನೇ ಬರೆಯುವದು ಅಂದುಕೊಂಡಿದ್ದೆ. ಹಾಗಾಗಿ ಈಗ ಕ್ಲಿಪ್ ಬೋರ್ಡ್ ಹಿಡಿದು ಬರೆಯಲು ಅಣಿಯಾಗಿದ್ದ ಪೋಲೀಸ್ ಸಿಕ್ಕಾಪಟ್ಟೆ impress ಮಾಡಿಬಿಟ್ಟ.

ಪೋಲೀಸರು ಅಲ್ಲಿದ್ದವರ ಹತ್ತಿರ ಏನೇನೋ ಪ್ರಶ್ನೆ ಕೇಳುತ್ತಿದ್ದರು. ಅವರು ಉತ್ತರ ಕೊಟ್ಟಂತೆ, ವಿವರಣೆ ಹೇಳಿದಂತೆ ಕ್ಲಿಪ್ ಬೋರ್ಡ್ ಹಿಡಿದಿದ್ದ ಪೋಲೀಸ್ ಬರೆದುಕೊಳ್ಳುತ್ತಿದ್ದ. ‘ಅಬ್ಬಾ! ಇವನ ಕೌಶಲ್ಯವೇ! ಜನ ಎಷ್ಟೊಂದು ವೇಗವಾಗಿ, ಅದೂ ನಮ್ಮ ಹಳ್ಳಿ ಭಾಷೆಯಲ್ಲಿ ಮಾತಾಡುತ್ತಿದ್ದಾರೆ. ಆದರೂ ಈ ಪೋಲೀಸ್ ಎಷ್ಟು ಮಸ್ತಾಗಿ, ವೇಗವಾಗಿ ಬರೆದುಕೊಳ್ಳುತ್ತಿದ್ದಾನೆ. ಬರೆದರೆ ಇವನ ಹಾಗೆ ಬರೆಯಬೇಕು,’ ಅಂದುಕೊಂಡೆ. ಬರವಣಿಗೆಗೆ ಹೊಸ benchmark ಹೊರಹೊಮ್ಮಿತು. ಅದೇ ಆ ಸಿರ್ಸಿ ಪೋಲೀಸನ ಬರವಣಿಗೆಯ ವೇಗ, ಗತಿ, ಸ್ಟೈಲ್.

ಅಲ್ಲೊಬ್ಬಳು ಮಡಿ ಅಮ್ಮ ಇದ್ದಳು. ಕೇಶಮುಂಡನ ಮಾಡಿಸಿಕೊಂಡಿದ್ದ ವಿಧವೆ ಅಜ್ಜಿ. ಹಲ್ಲೆಯಾಗಿ ಗಾಯಗೊಂಡವನ ಮನೆಯವಳು. ಅವನ ತಾಯಿಯೋ ಅಥವಾ ಅಜ್ಜಿಯೋ ಇರಬೇಕು. ಅವಳ ಹತ್ತಿರವೂ ಹೇಳಿಕೆಯನ್ನು ತೆಗೆದುಕೊಂಡರು. ಪೋಲೀಸರು ಕೇಳಿದ್ದು ಅವಳಿಗೆ ತಿಳಿಯುತ್ತಿರಲಿಲ್ಲವೋ ಅಥವಾ ಪೋಲೀಸರನ್ನು ಕಂಡು ಗಾಬರಿಯಾಗಿ ಎಡಬಿಡಂಗಿಯಂತೆ ಮಾತಾಡುತ್ತಿದ್ದಳೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಮುದುಕಿಯಿಂದ ಹೇಳಿಕೆ ತೆಗೆದುಕೊಂಡು, ಅದನ್ನು ಬರೆದುಕೊಳ್ಳುವಷ್ಟರಲ್ಲಿ ಪೋಲೀಸರ ತಲೆ ಪೂರ್ತಿ ಕೆಟ್ಟು ಹನ್ನೆರಡಾಣೆಯಾಗಿತ್ತು. ಅವರ ತಲೆ ಹನ್ನೆರಡಾಣೆಯಾಗಿದೆ ಅಂತ ಹೇಗೆ ಗೊತ್ತಾಯಿತು ಅಂದರೆ ಅವರು ಮಾತಿಗೊಮ್ಮೆ ಆ ಮುದುಕಿಯನ್ನು ಧ್ವನಿ ಎತ್ತರಿಸಿ ಬೈಯ್ಯುತ್ತಿದ್ದರು. ಅವರು ಬೈದಾಗೊಮ್ಮೆ ಈ ಮುದುಕಿ ಕೂಡ ಕೀರಲು ಧ್ವನಿಯಲ್ಲಿ, ‘ಥೋ! ಆನೂ ಅದನ್ನೇ ಹೇಳಜ್ಞಲ್ಲರಾ!? ತೆಳಜ್ಜಿಲ್ಯ?’ ಅಂತ ಶುದ್ಧ ಹವ್ಯಕ ಭಾಷೆಯಲ್ಲಿ ಅಂಬೋ ಅನ್ನುತ್ತಿತ್ತು. ‘ಅಯ್ಯೋ, ನಾನೂ ಅದನ್ನೇ ಹೇಳಿದೆನಲ್ಲಾ?! ತಿಳಿಯಲಿಲ್ಲವೇ?’ ಅಂತ ಅರ್ಥ. ಜನರಿಗೆ ಒಂದು ತರಹದ ನಗೆ ಉಕ್ಕಿ ಬರುತ್ತಿತ್ತು. ಬೇಗ ಕೆಲಸ ಮುಗಿಸಿ ಊರು ಸೇರಿಕೊಳ್ಳೋಣ ಅಂತ ಅಂದುಕೊಂಡಿದ್ದ ಪೋಲೀಸರಿಗೆ ಸಿಕ್ಕಾಪಟ್ಟೆ irritate ಆಗುತ್ತಿತ್ತು. ಹಾಗಾಗಿ ಆ ಮುದುಕಿಯನ್ನು, ‘ಎಂತಾ ಹೇಳ್ತೇ ಅಮಾ??? ಸರಿಯಾಗಿ ಹೇಳು!’ ಎಂದು ಜಬರಿಸಿ ಜೋರು ಮಾಡುತ್ತಿದ್ದರು. ಮುದುಕಿಯದು ಮತ್ತೆ ಅದೇ ರಾಗ.

ಸುಮಾರು ಹೊತ್ತಿನ ನಂತರ ಎಲ್ಲರ ಹೇಳಿಕೆ ಪಡೆದುಕೊಂಡ ಪೊಲೀಸರು ಹೊರಟು ನಿಂತರು. ಪೋಲೀಸ್ ಕಾರ್ಯಾಚರಣೆ ಇಷ್ಟು ಬೇಗ ಮುಗಿದುಹೋಯಿತೇ? ಅಂತ ಬೇಸರವಾಯಿತು. ಒಂದೆರೆಡು ಘಂಟೆ ಮಜವಾಗಿ ಹೋಗಿದ್ದು ಗೊತ್ತೇಯಾಗಿರಲಿಲ್ಲ. ಅಷ್ಟು ಮಸ್ತಾಗಿತ್ತು.

ಕಾಲೆಳೆಯುತ್ತಾ ಅಜ್ಜನ ಮನೆಗೆ ವಾಪಸ್ ಬರುತ್ತಿರುವಾಗ ತಲೆಯಲ್ಲಿ ಒಂದೇ ಗುಂಗು. ಅದೇನೆಂದರೆ ಆ ಕ್ಲಿಪ್  ಬೋರ್ಡ್ ಹಿಡಿದು, ಹಾಳೆ ಮೇಲೆ ಹಾಳೆಯನ್ನು ಬರೆದು ಬರೆದು ತುಂಬಿಸುತ್ತಿದ್ದ ಆ ಪೋಲಿಸ್. ಬರೆದರೆ ಹಾಗೆ ಬರೆಯಬೇಕು. ಅದೇ ರೀತಿ ಕ್ಲಿಪ್ ಬೋರ್ಡ್ ಮ್ಯಾಲೆ ಹಾಳೆ ಇಟ್ಟುಕೊಂಡು, ಗತ್ತಿನಿಂದ ಬರೆಯಬೇಕು. ಕೇಳಿ ಕೇಳಿ ಬರೆಯಬೇಕು. ನಡುನಡುವೆ ಬೈದು ಬೈದು ಬರೆಯಬೇಕು. ಹೀಗೆಲ್ಲಾ ಅನ್ನಿಸಿತು. ಅನ್ನಿಸಿತು ಖರೆ. ಆದರೆ ಆಗಿನ್ನೂ  ಬರೆಯಲು ಬರುತ್ತಿರಲಿಲ್ಲ. ಎಲ್ಲೋ ಅಆಇಈ ಕಲಿತಿದ್ದೇನೋ ಏನೋ. ಅದು ಬಿಟ್ಟರೆ ಸರಿಯಾಗಿ ಬರೆಯಲು ಬರುತ್ತಿರಲಿಲ್ಲ.

ಮನೆಗೆ ಬಂದರೆ ಮಧ್ಯಾಹ್ನದ ಚಹಾ ಕುಡಿಯುವ ಸಮಯ. ಎಲ್ಲರೂ ಕುಳಿತು ಚಹಾ ಸಮಾರಾಧನೆ ಮಾಡುತ್ತಿದ್ದರು. ನಾನೂ ಸೇರಿಕೊಂಡು ಚಹಾ ಗ್ಲಾಸ್ ಎತ್ತಿದೆ. ಚಿಣ್ಣ ಬಾಲಕನಾದರೂ ಆಗಲೇ ಚಹಾ ದೊರೆಯುತ್ತಿತ್ತು. ಅಡಿಕೆ, ಚಹಾ, ಕಾಫಿ ಮೇಲೆ ಹವ್ಯಕ ಹುಡುಗರಿಗೆ ಅಷ್ಟೆಲ್ಲ ನಿರ್ಬಂಧ ಇರುವದಿಲ್ಲ. ಹಾಗಾಗಿ ಚಹಾ ಕುಡಿದು ಕವಳ (ಎಲೆಯಡಿಕೆ) ಹಾಕುವ ಅಭ್ಯಾಸ ನಮಗೆ ಬೇಗ ಹತ್ತಿಕೊಳ್ಳುತ್ತದೆ. ‘ಪೊಲೀಸರು ಬಂದಿದ್ದನ್ನು ನೋಡಲು ಹೋಗಿದ್ದೆಯೆಲ್ಲ? ಏನಾಯಿತು? ಏನು ನೋಡಿ ಬಂದೆ?’ ಅಂತೆಲ್ಲ ಮನೆ ಮಂದಿ ಕೇಳಿದರು. ನನಗೆ ವಿಷಯ ಹೇಳುವದರಲ್ಲಿ ಜಾಸ್ತಿ ಆಸಕ್ತಿ ಏನೂ ಇರಲಿಲ್ಲ. ಕಾಟಾಚಾರಕ್ಕೆ ಏನೋ ಹೇಳಿ ಮುಗಿಸಿದೆ.

ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದ ವಿಷಯವೇ ಬೇರೆ. ಕ್ಲಿಪ್ ಬೋರ್ಡ್ ಮೇಲೆ ಆ ಪೋಲೀಸ್ ಏನು ಬರೆದುಕೊಳ್ಳುತ್ತಿದ್ದ? ಅದಕ್ಕೆ ಏನೆನ್ನುತ್ತಾರೆ? ಅದನ್ನು ತಿಳಿದುಕೊಳ್ಳಬೇಕಾಗಿತ್ತು. ಹಾಂ! ಹೇಳುವದನ್ನೇ ಮರೆತಿದ್ದೆ. ಆ ಕ್ಲಿಪ್ ಬೋರ್ಡ್ ಮೇಲೆ ಪೋಲೀಸ್ ಬರೆದುಕೊಳ್ಳುತ್ತಿದ್ದಿದ್ದೊಂದೇ ಅಲ್ಲ, ಕಾರ್ಬನ್ ಪ್ರತಿ ಕೂಡ ಮಾಡುತ್ತಿದ್ದ. ಎರಡು ಹಾಳೆ ಮಧ್ಯೆ ಕಾರ್ಬನ್ ಕಾಗದ. ಒಂದು ಹಾಳೆ ಬರೆದು ತುಂಬಿದ ನಂತರ ಕಾರ್ಬನ್ ಕಾಗದ ಮತ್ತೆರೆಡು ಖಾಲಿ ಕಾಗದಗಳ ಮಧ್ಯೆ ಹೋಗುತ್ತಿತ್ತು.

ಪಂಚನಾಮೆ!’ ಅಂದರು ಅಜ್ಜನಮನೆ ಜನ.

ಮೊದಲ ಬಾರಿಗೆ ಆ ಶಬ್ದ ಕೇಳಿದ್ದೆ. ಆ ಪೂರ್ತಿ ಪೋಲೀಸ್ ಪ್ರಕ್ರಿಯೆಗೆ ಪಂಚನಾಮೆ ಅನ್ನುತ್ತಾರೋ ಅಥವಾ ಬರೆದು ತಯಾರು ಮಾಡುವ ದಾಖಲೆಗೆ ಪಂಚನಾಮೆ ಅನ್ನುತ್ತಾರೋ ಅಂತ ಗೊತ್ತಾಗಲಿಲ್ಲ. ಅಲ್ಲಿದ್ದವರಿಗೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಪೊಲೀಸರು ಬಂದು, ಹೇಳಿಕೆ ಬರೆದುಕೊಂಡು, ಸಹಿ ಮಾಡಿಸಿಕೊಂಡಿದ್ದಕ್ಕೆ ಪಂಚನಾಮೆ ಅಂದರು.

ಆಗ ಮೂಡ್ ಬಂದುಬಿಟ್ಟಿತು. ಬಾಕಿ ಏನೂ ಬರೆಯುವದರಲ್ಲಿ ಏನೂ ಮಜಾ ಇಲ್ಲ. ಬರೆದರೆ ಆ ಪೋಲೀಸನಂತೆ ಪಂಚನಾಮೆಯನ್ನೇ ಬರೆದುಬಿಡಬೇಕು. ಕಾರ್ಬನ್ ಇಟ್ಟುಕೊಂಡು ಕ್ಲಿಪ್ ಬೋರ್ಡ್ ಮೇಲೆ ಪಂಚನಾಮೆ ಬರೆಯುವದರಲ್ಲಿ ಅದೇನು ಸ್ಟೈಲು! ಅದೇನು ಗತ್ತು! ಅದೇನು ಗಾಂಭೀರ್ಯ! ಅದೇನು ಗೈರತ್ತು! ಅದೇನು ಠೀವಿ! ಮಾನ್ ಗಯೇ ಉಸ್ತಾದ್! – ಅಂದುಕೊಂಡೆ. ತಲೆಯಲ್ಲಿ ಒಂದೇ ಗುಂಗು. ಅದೇನೆಂದರೆ ಅದೇ ರೀತಿ ನಾವೂ ಒಂದು ಪಂಚನಾಮೆ ಬರೆಯಬೇಕು. ಆಗಿಂದಾಗಲೇ ಬರೆಯಬೇಕು. ಬರೆಯಲಿಕ್ಕೆ ಬರದಿದ್ದರೂ ಪಂಚನಾಮೆಯನ್ನು ಗೀಚಬೇಕು.

ಎಲ್ಲಿಂದಲೋ ಒಂದು ಕ್ಲಿಪ್ ಬೋರ್ಡ್ ಹೊಂದಿಸಿಕೊಂಡೆ. ಅಜ್ಜ ಲೆಕ್ಕ ಬರೆಯುತಿದ್ದ ಕ್ಲಿಪ್ ಬೋರ್ಡ್ ಅದು. ಅವನ ಕಾಗದಗಳನ್ನು ಬೇಕಾಬಿಟ್ಟಿ ಬಿಸಾಡಿ ಬೈಸಿಕೊಂಡೆ. ನಮಗೆ ಆಗ ತುರ್ತಾಗಿ ಬೇಕಾಗಿದ್ದು ಕ್ಲಿಪ್ ಬೋರ್ಡ್. ಮೇಲಿದ್ದ ಕಾಗದವಲ್ಲ. ಕ್ಲಿಪ್ ಬೋರ್ಡ್ ಸಿಕ್ಕಿತು. ಒಂದಿಷ್ಟು ಬಿಳೆ ಹಾಳೆಗಳೂ ಸಿಕ್ಕವು. ಪೋಲೀಸಿನವನ ಹತ್ತಿರವಿದ್ದಷ್ಟು ಬಿಳಿಯಾಗಿರಲಿಲ್ಲ. ಚೆನ್ನಾಗಿಯೂ ಇರಲಿಲ್ಲ. ಹೇಳಿಕೇಳಿ ಹಳ್ಳಿಯ ಮನೆಯಲ್ಲಿನ ಹಾಳೆಗಳು. ಕಚ್ಚಾ ಲೆಕ್ಕ ಬರಿಯಲಿಕ್ಕೆ ಲಾಯಕ್ಕು. ಆದರೂ ಅಡ್ಜಸ್ಟ್ ಮಾಡಿಕೊಂಡೆ. ಒಂದು ತಗಡು ಬಾಲ್ ಪಾಯಿಂಟ್ ಪೆನ್ನೂ ಸಿಕ್ಕಿತು. ಸಿಗದೇ ಇದ್ದಿದ್ದು ಅಂದರೆ ಕಾರ್ಬನ್ ಕಾಗದ ಮಾತ್ರ. ಆ ಹಳ್ಳಿಗಾಡಿನಲ್ಲಿ ಕಾರ್ಬನ್ ಕಾಗದ ಸಿಗುವ ಚಾನ್ಸೇ ಇರಲಿಲ್ಲ. ಸಿರ್ಸಿ ಪೇಟೆಗೇ ಹೋಗಬೇಕು. ಅಲ್ಲಾದರೂ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಅಂದಿನ ಸಿರ್ಸಿ ಪಟ್ಟಣವೇ ಒಂದು ದೊಡ್ಡ ಹಳ್ಳಿಯ ಹಾಗಿತ್ತು.

ಬೇರೆ ಸಂದರ್ಭವಾಗಿದ್ದರೆ 'ಹಠಯೋಗಿ' ಆಗಬಹುದಿತ್ತು. ಶರಂಪರ ಹಠ ಮಾಡಬಹುದಿತ್ತು. ನಮ್ಮ legendary ಹಠವನ್ನು ತಡೆದುಕೊಳ್ಳಲಾಗದೇ ಬೇಡಿಕೆಯನ್ನು ಈಡೇರಿಸುತ್ತಿದ್ದರು. ಆದರೆ ಅಂದಿನ ಮಾಹೋಲ್ ಸರಿಯಾಗಿರಲಿಲ್ಲ. ಊರಿನಲ್ಲಿ ಕೊಲೆಯತ್ನದಂತಹ ದುರ್ಘಟನೆ ನಡೆದು ಎಲ್ಲರೂ ಒಂದು ತರಹದ ವಿಷಾದದಲ್ಲಿದ್ದರು. ನಮ್ಮನ್ನು ಅಚ್ಛಾ ಮಾಡುವ, ಮುದ್ದು ಮಾಡುವ, ರಮಿಸುವ ಉಮೇದಿ ಮತ್ತು ಆಸಕ್ತಿ ಯಾರಿಗೂ ಇದ್ದಂತಿರಲಿಲ್ಲ. ಹಾಗಿರುವಾಗ ಇಲ್ಲದ ಹಠ ಮಾಡುವದು ರಿಸ್ಕಿ. ಏನೇ ಹೇಳಿದರೂ ಶಿರಸಾವಹಿಸಿ ಪೂರೈಸುವ ತಂದೆಯವರೂ ಇಲ್ಲ. ಎಂದೂ ಪೆಳ್ಳಪ್ಪನೆ (ಅಚ್ಛಾ) ಮಾಡದ ಅಮ್ಮನ ತಲೆಕೆಟ್ಟು ಎರಡು ಏಟು ಕೊಟ್ಟಳು ಅಂದರೆ ಕಷ್ಟ. ಮತ್ತೆ ಹೇಗೂ ಒಂದೆರೆಡು ದಿವಸಗಳಲ್ಲಿ ಧಾರವಾಡಕ್ಕೆ ವಾಪಸ್ ಹೋಗುವದಿತ್ತು. ಮನೆಯಲ್ಲಿ ಕಾರ್ಬನ್ ಕಾಗದ ಇತ್ತು. ಅಲ್ಲಿ ಹೋದ ಮೇಲೆಯೇ ಪಂಚನಾಮೆ ಬರೆಯೋಣ, ಗೀಚೋಣ ಅಂತ ಸುಮ್ಮನಾದೆ. ಸುತ್ತುಮುತ್ತಲಿನ ಪರಿಸ್ಥಿತಿಯನ್ನು ಗಮನಿಸಿ ಗ್ರಹಚಾರವನ್ನು ಊಹಿಸುವ ಕಲೆ ನಮಗೆ ಅಂದೇ ಬಂದಿತ್ತು ಅಂತ ಕಾಣುತ್ತದೆ. ಈಗ ಕಾರ್ಪೊರೇಟ್ ಜಗತ್ತಿನಲ್ಲಿ ಬಹಳ ಉಪಯೋಗಕ್ಕೆ ಬರುವ ಸ್ಕಿಲ್ ಅದು.

ಕೆದಕಿ ಕೆದಕಿ ಆ ಪಂಚನಾಮೆ ಅನ್ನುವ ವಿಚಿತ್ರ ಹೆಸರಿನ ದಾಖಲೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ. ಯಾವದೇ ತರಹದ ಅಪರಾಧವಾದಾಗ ಪೊಲೀಸರು ಹಾಗೆ ಮಾಡುತ್ತಾರೆ ಅಂತ ತಿಳಿಯಿತು. ಈಗ ಹೊಸ ಕಷ್ಟ ಎದುರಾಯಿತು. ಪಂಚನಾಮೆ ಬರೆಯಬೇಕು ಅಂದರೆ ಏನಾದರೂ ಲಫಡಾ ಆಗಲೇಬೇಕು. ಲಫಡಾ ಆಗದೇ ಪಂಚನಾಮೆ ಬರೆದರೆ ಅದರಲ್ಲೇನೂ ಮಜವಿರುವದಿಲ್ಲ. ಹಾಗಾಗಿ ಒಂದು ಹೆಚ್ಚಿನ ಕಿರಿಕ್ ಆಯಿತು. ಪಂಚನಾಮೆ ಬರೆಯಲಿಕ್ಕೆ ಬೇಕಾದ ಲಫಡಾ, ಅದೂ ಪೊಲೀಸರು ಬರುವಂತಹ ಲಫಡಾ, ಹೇಗೆ ಹೊಂಚೋಣ?

ಆಲೆಮನೆಯನ್ನು ಬರೋಬ್ಬರಿ ಮುಗಿಸಿ, ಮಜಾ ಮಾಡಿ, ಒಂದೆರೆಡು ದಿನಗಳ ಬಳಿಕ ಧಾರವಾಡಕ್ಕೆ ಮರಳಿದ್ದಾಯಿತು. ಪಂಚನಾಮೆ ಬರೆಯುವದು ಮರೆತುಹೋಗಿತ್ತು. ತಾತ್ಕಾಲಿಕವಾಗಿ.

ಅದೊಂದಿನ ‘ಆನಂದಾಶ್ರಮ'ಕ್ಕೆ ಹೋದವ ವಾಪಸ್ ಮನೆಗೆ ಮರಳುತ್ತಿದ್ದೆ. ಧಾರವಾಡದ ಮಾಳಮಡ್ಡಿಯ ರಾಯರ ಮಠದ ಕೆಳಗೆ ಮಾಸೂರ್ ನಾಯಕ್ ಡಾಕ್ಟರರ ಕ್ಲಿನಿಕ್ ಮುಂದಿದ್ದ ಎರಡಂತಸ್ತಿನ ದೊಡ್ಡ ಭೂತಬಂಗಲೆಯೇ ‘ಆನಂದಾಶ್ರಮ.’ ಅದಕ್ಕೆ ಮಾವಿನಕುರ್ವೆ ಕಾಂಪೌಂಡ್ ಅಂತ ಕೂಡ ಹೇಳುತ್ತಿದ್ದರು. ಅದು ಹವ್ಯಕ ಮಾಣಿಗಳ ಒಂದು ತರಹದ ಅನಧಿಕೃತ ಹಾಸ್ಟೆಲ್ ಆಗಿತ್ತು. ಅಲ್ಲಿನ ಹತ್ತು ಹದಿನೈದು ರೂಮುಗಳಲ್ಲಿ ಇದ್ದವರೆಲ್ಲ ಧಾರವಾಡದಲ್ಲಿ ಬೇರೆ ಬೇರೆ ಕಡೆ ಓದಿಕೊಂಡಿದ್ದ ಹವ್ಯಕ ಮಾಣಿಗಳೇ. ಹೆಚ್ಚಿನವರು ಸಿರ್ಸಿ ಕಡೆಯವರು. ಅದಕ್ಕೆ ಒಂದೇ exception ಅಂದರೆ ನಮ್ಮ ಪೈ ಮಾಸ್ತರರು. ಬಾಸೆಲ್ ಮಿಷನ್ ಗರ್ಲ್ಸ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದ ಆಜನ್ಮ ಬ್ರಹ್ಮಚಾರಿ ಪೈ ಮಾಸ್ತರ್ ಬಗ್ಗೆ ಬರೆಯಲಿಕ್ಕೆ ಕೂತರೆ ಬರೆಯಲಿಕ್ಕೆ ಬಹಳವಿದೆ. ಮತ್ತೊಮ್ಮೆ ಬರೆಯೋಣ. ಧಾರವಾಡ ಮಟ್ಟಿಗೆ ಪ್ರೈವೇಟ್ ಟ್ಯೂಶನ್ ಪ್ರಪಂಚದ ಪಿತಾಮಹ ಅವರು.

‘ಆನಂದಾಶ್ರಮ’ ಬಂಗಲೆ ಅಂದರೆ ನಮಗೆ ಏನೋ ಒಂದು ತರಹದ ಆತ್ಮೀಯತೆ. ಸಿರ್ಸಿ ಸಮೀಪದ ಅಜ್ಜನಮನೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆ. ಆಗಾಗ ಈ ಆನಂದಾಶ್ರಮಕ್ಕೆ ಹೋಗಿ, ಅಲ್ಲಿನ ಮಾಣಿಗಳೊಂದಿಗೆ ಮನಸ್ಸು ಬಿಚ್ಚಿ ಹರಟೆ ಹೊಡೆದು, ಒಂದಿಷ್ಟು ಗದ್ದಲ ಹಾಕಿ ಬಂದರೆ ಹಾಯ್ ಅನ್ನಿಸುತ್ತಿತ್ತು. ಆಗಾಗ ಸಿರ್ಸಿ ಕಡೆ ಹೋಗಿ ಬಂದು ಮಾಡುತ್ತಿದ್ದ ಅವರುಗಳ ರೂಮಿನಲ್ಲಿ ಸ್ಪೆಷಾಲಿಟಿ ತಿಂಡಿ ಅದು ಇದು ಸಿಗುತ್ತಿತ್ತು. ಫ್ರೆಶ್ ಆದ ಎಲೆ ಅಡಿಕೆ ಕೂಡ ಇರುತ್ತಿತ್ತು. ಕೆಲವರಂತೂ ಜರ್ದಾ ತಂಬಾಕಿನ ದೊಡ್ಡ ಡಬ್ಬಿಯನ್ನೇ ಇಟ್ಟುಕೊಂಡಿರುತ್ತಿದ್ದರು. ಆಗ ಜರ್ದಾ ಕವಳದ ಹುಚ್ಚು ಇನ್ನೂ ಹತ್ತಿರಲಿಲ್ಲ. ಆನಂದಾಶ್ರಮದ ಒಂದು ರೌಂಡ್ ಹೊಡೆದು, ಒಂದಿಷ್ಟು ಪೊಕಳೆ (ಹರಟೆ) ಹೊಡೆದು ಬಂದರೆ ಒಂದು ಸಾರಿ ಸಿರ್ಸಿಗೆ ಹೋಗಿ ಬಂದಂತೆಯೇ. ಅಷ್ಟು ಮಸ್ತಾಗಿರುತ್ತಿತ್ತು.

ಆನಂದಾಶ್ರಮಕ್ಕೆ ಹೋಗುವಾಗ ರಾಯರ ಮಠದ ಪಕ್ಕದ ರಸ್ತೆ ಗುಂಟ ಹೋಗಿ, ವಾಪಸ್ ಬರುವಾಗ ಆಕಡೆಯಿಂದ ಹಿಟ್ಟಿನ ಗಿರಣಿಯಿದ್ದ ಗುಡ್ಡ ಇಳಿದು ಬರುವದು ರೂಢಿ. ಅಂದೂ ಅದೇ ರೀತಿ ಬರುತ್ತಿದ್ದೆ. ಗಿರಣಿ ಗುಡ್ಡ ಇಳಿಯಲು ರೆಡಿ ಆಗುತ್ತಿದ್ದೆ. ಯಾಕೋ ಬಲಗಡೆ ತಿರುಗಿ ನೋಡಿದೆ. ಅಲ್ಲಿ ನೋಡಿದರೆ…..ಆಕಡೆ ಕೆಸಿಡಿಯಲ್ಲಿ ಬಾಟನಿ ಪ್ರೊಫೆಸರ್ ಆಗಿದ್ದ ಪ್ರೊ. ಆರ್. ಎಮ್. ಪಾಟೀಲರ ಮನೆ ಮುಂದೆ, ಮಾಸೂರ್ ನಾಯಕ್ ಚಾಳಿನ ಎದುರು ಕಿಕ್ಕಿರಿದ ಜನಜಂಗುಳಿ. ಪೋಲೀಸ್ ವ್ಯಾನ್ ಬೇರೆ ಬಂದಿತ್ತು. ‘ಅರೇ ಇಸ್ಕಿ! ಏನೋ ಲಫಡಾ ಆಗಿದೆ,’ ಅಂತ ಗೊತ್ತಾಯಿತು. ಆಕಡೆ ಹೆಜ್ಜೆ ಹಾಕಿದೆ. ಕುತೂಹಲ. ಕೆಟ್ಟ ಕುತೂಹಲ.

ಗುಂಪು ಸೇರಿದ್ದ ದೊಡ್ಡವರ ಮಧ್ಯೆ ನಮ್ಮ ಚಿಣ್ಣ ದೇಹವನ್ನು ತೂರಿಸಿಕೊಂಡು ಹೋದರೆ ಅಲ್ಲೊಬ್ಬ ಅಂಗಾತ ಬಿದ್ದಿದ್ದ. ಫುಲ್ ಫ್ಲಾಟ್. ಕುಡಿದು ಬಿದ್ದ ಪುಣ್ಯಾತ್ಮನಂತೆ. ಕುಡಿದು ಬಿದ್ದಿದ್ದೊಂದೇ ಅಲ್ಲ ಸತ್ತೇಹೋಗಿದ್ದಾನೆ. ಹಾಗಂತ ಅಲ್ಲಿ ನೆರೆದವರು ಹೇಳಿದರು. ಬೀಳುವಂತಹದ್ದನ್ನು ಅದೇನು ಕುಡಿದ? ಬಿದ್ದವನ್ಯಾಕೆ ಸತ್ತ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಆಗಿನ್ನೂ ಕುಡಿತದ ಬಗೆ, ಹೆಂಡದ ಬಗ್ಗೆ ಸಾಮಾನ್ಯಜ್ಞಾನ ಬಂದಿರಲಿಲ್ಲ.

ಬಂದಿದ್ದ ನಾಲ್ಕಾರು ಜನ ಪೊಲೀಸರಲ್ಲಿ ಅಲ್ಲೂ ಒಬ್ಬವ ಪಂಚನಾಮೆ ಬರೆದುಕೊಳ್ಳುತ್ತಿದ್ದ. ಮತ್ತೆ ಅದೇ ಕ್ಲಿಪ್ ಬೋರ್ಡ್, ಬಿಳೆ ಹಾಳೆಗಳು, ಕಾರ್ಬನ್ ಕಾಗದ. ನಾನು ಮರೆತುಬಿಟ್ಟಿದ್ದೆ. ಈಗ ಮತ್ತೆ ನೆನಪಾಯಿತು. ಪಂಚನಾಮೆ ಬರೆದೇಬಿಡಬೇಕೆಂಬ ಆಸೆ ಮತ್ತೆ ಉತ್ಕಟವಾಯಿತು.

ಸರಿ. ಮನೆಗೆ ಬಂದೆ. ಕ್ಲಿಪ್ ಬೋರ್ಡ್ ಅಂತೂ ಇತ್ತು. ನನ್ನದೇ ಕ್ಲಿಪ್ ಬೋರ್ಡ್ ಇತ್ತು. ಕಾಡಿ ಕೊಡಿಸಿಕೊಂಡಿದ್ದೆ. ಬೇಕಾದಷ್ಟು ಹಾಳೆ, ಕಾರ್ಬನ್ ಪೇಪರ್, ಪೆನ್ನು ಎಲ್ಲ ಇತ್ತು. ಸಾಧಾರಣವಾಗಿ ಇಂಕ್ ಪೆನ್ನಲ್ಲಿ ಬರೆಯುತ್ತಿದ್ದೆ. ಅಥವಾ ಗೀಚುತ್ತಿದ್ದೆ. ಕಾರ್ಬನ್ ಕಾಪಿ ತೆಗೆಯಬೇಕು ಅನ್ನುವ exceptional ಪರಿಸ್ಥಿತಿ ಬಂದಿದ್ದರಿಂದ ಬಾಲ್ ಪಾಯಿಂಟ್ ಪೆನ್ ತೆಗೆದುಕೊಂಡೆ. ಬಾಲ್ ಪಾಯಿಂಟ್ ಪೆನ್ನಿನಲ್ಲಿ ಬರೆದರೆ ಹಸ್ತಾಕ್ಷರ ಹಾಳಾಗುತ್ತದೆ. ಮತ್ತೆ ಜಾಸ್ತಿ ವೇಗವಾಗಿ ಬರೆಯಲು ಆಗುವದಿಲ್ಲ ಅಂತೆಲ್ಲ ಹೇಳುತ್ತಿದ್ದರು. ಆದರೆ ಈಗ ಪಂಚನಾಮೆ ಬರೆಯಬೇಕಾಗಿದೆ. ಕಾರ್ಬನ್ ಪ್ರತಿ ತೆಗೆಯಬೇಕಾಗಿದೆ ಅಂತ ಬಾಲ್ ಪಾಯಿಂಟ್ ಪೆನ್ ಓಕೆ.

ಪಂಚನಾಮೆ ರಿಪೋರ್ಟ್ ಬರೆಯಲು ಎಲ್ಲ ರೆಡಿ ಮಾಡಿಕೊಂಡೆ. ಆದರೆ ಒಂದು ತೊಂದರೆ ಬಂತು. ಬರೆಯಲು ಬರುತ್ತಿರಲಿಲ್ಲ. ಆಗ ಇನ್ನೂ ಒಂದನೇ ಕ್ಲಾಸ್. ಇದು ಕನಕನ ಅಂಗಿ. ಅದು ಕಮಲಳ ಲಂಗ. ಕನಕನ ಅಂಗಿ ಫಳಫಳ. ಕಮಲಳ ಲಂಗ ಝಳಝಳ. ಇಂತಹ ಸರಳ ವಾಕ್ಯಗಳನ್ನು ಮಾತ್ರ ಬರೆಯಲು ಬರುತ್ತಿತ್ತು. ಪೋಲೀಸ್ ಪಂಚನಾಮೆ ಬರೆಯುವದು ಹೇಗೆ? ಈಗ ಒಬ್ಬ ಭಾಡಿಗೆ ರೈಟರ್ ಬೇಕಾಯಿತು. ಮತ್ಯಾರು? ಅಮ್ಮ.

ಅಂತೂ ಅಮ್ಮನನ್ನು ಪಂಚನಾಮೆ ಬರೆಯುವ ರೈಟರ್ ಅಂತ ನೇಮಕ ಮಾಡಿದೆ. ಅದೇನೋ ಗೊತ್ತಿಲ್ಲ. ಬರವಣಿಗೆ ಇತ್ಯಾದಿ ಮಂಗ್ಯಾತನಗಳಿಗೆ ಅಂದಿನ ಕಾಲದಲ್ಲಿ ಅಮ್ಮನೇ ಬೇಕಾಗುತ್ತಿತ್ತು. ಮನೆಯಲ್ಲಿ ನನ್ನ ಬಿಟ್ಟರೆ ಬರವಣಿಗೆಯಲ್ಲಿ ಏನಾದರೂ ಆಸಕ್ತಿ, ಕೌಶಲ್ಯ, skill ಇದೆ ಅಂತಾದರೆ ಅದು ಅಮ್ಮನಿಗೇ ಇರಬೇಕು. ಮುಂದೆ ಬಹಳ ವರ್ಷಗಳ ನಂತರ ಅಲ್ಲಿಲ್ಲಿ ದೇಶ ವಿದೇಶ ತಿರುಗಾಡಿ ಬಂದ ಅಮ್ಮ ಪ್ರವಾಸ ಸಾಹಿತ್ಯ, ಅದು ಇದು, ಅಂತ ಬರೆದಿದ್ದರು. ನಾನು ಡ್ರಾಫ್ಟ್ ಓದಿ, ‘ಇದೇನು ಯಬಡರ ಗತೆ ಬರದಿ? ಇದನ್ನ ಓದಿದ್ರ ಎಲ್ಲಾರೂ ನಗ್ತಾರ!’ ಅಂತ ಅಣಗಿಸಿ ಅಣಗಿಸಿ ಅವರು ಪಾಪ ತಮ್ಮ ಬರವಣಿಗೆಯನ್ನು ಅಷ್ಟಕ್ಕೇ ಬಿಟ್ಟಿದ್ದರು. ಮತ್ತೆ ಮನೆಕೆಲಸದ ಮಧ್ಯೆ ಜಾಸ್ತಿ ಸಮಯವೂ ಇರಲಿಲ್ಲ. ಭಿಡೆಗೆ ಬಿದ್ದು ಬಸುರಾದ ಪರಿಚಿತರೊಬ್ಬರು, ‘ಏ, ಭಾಳ ಛಂದ ಬರದೀರಿ. ನನಗ ಕೊಡ್ರಿ. ನನಗ ಸಂಯುಕ್ತ ಕರ್ನಾಟಕ ಪೇಪರಿನ್ಯಾಗ ಮಂದಿ ಗೊತ್ತಿದ್ದಾರ. ಅವರಿಗೆ ಹೇಳಿ ಪ್ರಿಂಟ್ ಮಾಡಸ್ತೇನಿ,’ ಅಂತ ತೆಗೆದುಕೊಂಡು ಹೋಗಿದ್ದರು. ಪ್ರಿಂಟಂತೂ ಆಗಿರಲಿಲ್ಲ. ‘ನೀ ಹಾಂಗ ಹಾಪರ ಗತೆ ಬರೆದರ ಅಷ್ಟೇ ಮತ್ತ. ಯಾರು ಪ್ರಿಂಟ್ ಮಾಡ್ತಾರ? ಯಾರು ಓದ್ತಾರ?’ ಅಂತ ನಮ್ಮ ಮೂದಲಿಸುವಿಕೆ ಬೇರೆ. ಇದೆಲ್ಲಾ ಮುಂದೆ ಬಹಳ ವರ್ಷಗಳ ನಂತರ ಆಗಿದ್ದು. ಅಂದು ಅಮ್ಮನನ್ನು ಪಂಚನಾಮೆ ಬರೆಯುವ ಭಾಡಿಗೆ ರೈಟರ್ ಅಂತ ನೇಮಕ ಮಾಡಿದೆ ಅಂತ ಈಗ ಹೇಳಿದಾಗ ಇದೆಲ್ಲ ನೆನಪಾಯಿತು.

ಮಧ್ಯಾಹ್ನ ಊಟದ ನಂತರ ಅಮ್ಮ ಕಾರ್ಡ್ ಬೋರ್ಡ್ ಹಿಡಿದು ಕೂತರು. ಹಾಳೆಗಳ ಮಧ್ಯೆ ಕಾರ್ಬನ್ ಕಾಗದ ಬರೋಬ್ಬರಿ ಹಾಕಿಯೇ ಕೊಟ್ಟಿದ್ದೆ. ಖಾಕಿ ಸೀರೆಯೊಂದನ್ನು ಉಟ್ಟಿದ್ದರೆ ಅಮ್ಮ ಥೇಟ್ ಮಹಿಳಾ ಪೋಲೀಸರೇ ಆಗುತ್ತಿದ್ದರೇನೋ. ಅದೊಂದು ಕಮ್ಮಿ!

ನನ್ನ ಅಂದಿನ ಉತ್ಕಟ ಹುಚ್ಚನ್ನು ಶಮನಗೊಳಿಸಲಿಕ್ಕಾಗಿ ಅವರೇನೋ ಪಂಚನಾಮೆ ಬರೆಯಲಿಕ್ಕೆ ರೆಡಿ. ಆದರೆ ಪಂಚನಾಮೆಯಲ್ಲಿ ಏನು ಬರೆಯುತ್ತಾರೆ? ಅದೇ ಗೊತ್ತಿಲ್ಲ. ಅಮ್ಮನಿಗೂ ಸರಿಯಾಗಿ ಗೊತ್ತಿಲ್ಲ. ಅದರೂ ಏನೋ ಹೇಳಿದರು. ಒಟ್ಟಿನಲ್ಲಿ ಘಟನೆಯ ಬಗ್ಗೆ, ವಸ್ತುಸ್ಥಿತಿಯ ಬಗ್ಗೆ, ಜನರಿಂದ ಸಂಗ್ರಹಿಸಿದ ಮಾಹಿತಿಯ ಬಗ್ಗೆ ಪೊಲೀಸರು ಎಲ್ಲ ವಿವರಗಳನ್ನು ಬರೆಯುತ್ತಾರೆ ಅಂತ ಹೇಳಿದರು. ಹೀಗೆ ಪಂಚನಾಮೆ ಎಂಬ ದಾಖಲೆಗೆ ಏನೋ ಒಂದು ತರಹದ ರೂಪರೇಷೆ ಬಂತು. ವಿವರ ತುಂಬುವದಷ್ಟೇ ಬಾಕಿ ಉಳಿದಿದ್ದು.

ಅಲ್ಲಿ ಮಾಸೂರ ನಾಯಕ ಚಾಳ್ ಎದುರಲ್ಲಿ ಕುಡಿದು ಸತ್ತವನ್ಯಾರೋ? ಎಲ್ಲಿಯವನೋ? ಯಾವ ವಯಸ್ಸಿನವನೋ? ಒಂದೂ ಗೊತ್ತಿಲ್ಲ. ಮುಖ ಕೆಳಗೆ ಮಾಡಿ, ಕುಂಡೆ ಮೇಲೆ ಮಾಡಿಕೊಂಡು ನೆಗೆದು ಬಿದ್ದಿದ್ದ. ಅವನ ವಿವರ ಯಾರಿಗೆ ಗೊತ್ತು? ಆದರೂ ಪಂಚನಾಮೆ ಬರೆಯಬೇಕು. ವಿವರ ಗೊತ್ತಿಲ್ಲದಿದ್ದರೆ ಅದನ್ನು ಉತ್ಪಾದಿಸಬೇಕು. ಪಂಚನಾಮೆಯಲ್ಲಿ ದಾಖಲಿಸಬೇಕು.

ಸರಿ. ಸ್ವಲ್ಪ ಚರ್ಚಿಸಿದ ನಂತರ ಕುಡಿದು ಮೇಲೆ ದೇವರ ಹತ್ತಿರ ಹೋಗಿದ್ದ ಆ ಮಹಾನುಭಾವನಿಗೆ ಹನುಮಂತಪ್ಪನೋ, ನಿಜಲಿಂಗಪ್ಪನೋ ಅಂತ ನಾಮಕರಣ ಮಾಡಿದ್ದಾಯಿತು. ಮುಕ್ಕಾಂ - ಗೌಳಿಗರ ದಡ್ಡಿ. ರಾಯರ ಮಠದ ಸಮೀಪ ಕುಡಿದು ನೆಗೆದು ಬಿದ್ದಿದ್ದ ಅಂದ ಮೇಲೆ ಪಕ್ಕದ ಗೌಳಿಗರ ದಡ್ಡಿಯವನೇ ಇರಬೇಕು. ಮಾಳಮಡ್ಡಿಯ ಜನ ಕುಡಿಯುತ್ತಿರಲಿಲ್ಲ. ಅಲ್ಲಿ ಇದ್ದವರೆಲ್ಲ ಗರೀಬ್ ಬ್ರಾಹ್ಮಣರು. ಅವರೆಲ್ಲಿ ಕುಡಿದಾರು? ಕುಡಿದರೂ ತೀರ್ಥದಂತೆ ಒಂದಿಷ್ಟೇ ಇಷ್ಟು ಕುಡಿದು ತಲೆ ಮೇಲೆ ಪ್ರೋಕ್ಷಣೆ ಮಾಡಿಕೊಂಡು ಬರುತ್ತಿದ್ದರೆ ವಿನಃ ಜಾಸ್ತಿ ಇಲ್ಲ. ಕುಡಿದು ನೆಗೆದು ಬೀಳುವಷ್ಟು ರೊಕ್ಕ ಅವರ ಕಡೆ ಇರುತ್ತಿರಲಿಲ್ಲ. ಮತ್ತೆ ಅಷ್ಟೆಲ್ಲ ರೊಕ್ಕ ಇದ್ದ ಒಂದೆರೆಡು ಚಟಭಯಂಕರ ಬ್ರಾಹ್ಮಣರು ಬೇರೆ ಊರಿಗೆ ಹೋಗಿ, ಹೋಟೆಲ್ಲಿನಲ್ಲಿ ರೂಮ್ ಮಾಡಿ, ಗಿಚ್ಚಾಗಿ ಕುಡಿದು, ಹುಚ್ಚಾಗಿ ಕುಣಿದು, ಮಜಾ ಮಾಡಿ, ನಶೆ ಇಳಿದ ಮೇಲೆ ವಾಪಸ್ ಬರುತ್ತಾರೆ ಅಂತ ಪಿಸುಮಾತಿತ್ತು. ಹೀಗೆಲ್ಲ ಇರುವಾಗ ರಾಯರ ಮಠದ ಹತ್ತಿರ ಹಾಗೆ ಅಡ್ಡಾದಿಡ್ಡಿ ಕುಡಿದು ನೆಗೆದವ ಯಾರೋ ಗೌಳ್ಯಾನೇ ಇರಬೇಕು. ಸಾಂದರ್ಭಿಕ ಸಾಕ್ಷ್ಯ ಅದನ್ನೇ ಹೇಳುತ್ತಿತ್ತು. ಅಮ್ಮ ಮತ್ತು ನನ್ನ ಜಾಯಿಂಟ್ ತನಿಖೆ. ಅಥವಾ ಜಂಟಿ ಊಹೆ.

ಒಟ್ಟಿನಲ್ಲಿ ಒಂದು ಪೇಜಿನ ಪಂಚನಾಮೆ ವರದಿಯನ್ನು ಬರೆದಿದ್ದಾಯಿತು. ಬರೆದವರು ಅಮ್ಮ ಆದರೆ ಕೊನೆಗೆ ಸಹಿ ಹಾಕಿದ್ದು ಮಾತ್ರ ನಾನು. ಆಗಿನ ಕಾಲದಲ್ಲಿ ಸಹಿ ಹಾಕುವದರ ಬಗ್ಗೆ ಇದ್ದ ನಂಬಿಕೆಗಳನ್ನು ನೆನಪಿಸಿಕೊಂಡರೆ ಈಗ ಸಿಕ್ಕಾಪಟ್ಟೆ ನಗು ಬರುತ್ತದೆ. ಹಾಕಿದ ಸಹಿಯನ್ನು ಯಾರಿಗೂ ಓದಲು ಮತ್ತು ನಕಲು ಮಾಡಲು ಬರಬಾರದು. ಇದು ಸಹಿ ಹಾಕುವದರ ಬಗ್ಗೆ ಇದ್ದ ಮೊದಲ ನಿಯಮ. ಅದರಂತೆ ತಿರುವ್ಯಾಡಿ, ಕೈಕಾಲೆತ್ತಿ, ಮುಖವನ್ನು ಚಿತ್ರವಿಚಿತ್ರ ಮಾಡಿ, ಅದಕ್ಕಿಂತ ಜಾಸ್ತಿ ಚಿತ್ರವಿಚಿತ್ರವಾಗಿ ಗೀಚಿದೆ. ಅದೇ ಸಹಿಯೆಂದೆ.

ಜತನದಿಂದ ಎತ್ತಿದೆ. ಭಕ್ತಿಯಿಂದ ನೋಡಿದೆ. ಕ್ಲಿಪ್ ಬೋರ್ಡ್ ಮೇಲಿದ್ದ ಹಾಳೆ ಎತ್ತಿ ನೋಡಿದೆ ಅಂತ. ಕಾರ್ಬನ್ ಕಾಪಿ ಬರೋಬ್ಬರಿ ಮೂಡಿ ಬಂದಿತ್ತು. ಗುಡ್! ಇಲ್ಲವಾದರೆ ಮೊದಲ ಸಲ ಬರೆದಿದ್ದರೆ ಮೇಲೆಯೇ ಮತ್ತೆ ಒತ್ತಿ, ತೀಡಿ ಬರೆದು ಕಾರ್ಬನ್ ಪ್ರತಿ ಸರಿಯಾಗಿ ಬರುವಂತೆ ಮಾಡಬೇಕಾಗುತ್ತಿತ್ತು. ಅದರ ಅಗತ್ಯವಿರಲಿಲ್ಲ.

ಪಂಚನಾಮೆ ಕಾಪಿಯನ್ನು ಪೋಲೀಸರು ಊರಲ್ಲಿ ಜನರಿಗೆ ಕೊಟ್ಟು ಹೋಗಿದ್ದನ್ನು ನೋಡಿದ್ದೆ. ಈಗ ಯಾರಿಗೆ ಕೊಡೋಣ? ಅಮ್ಮನಿಗೆ ಕೊಡೋಣ ಅಂದರೆ ಪಂಚನಾಮೆ ಬರೆದ ಮಹಿಳಾ ಪೊಲೀಸರೇ ಅವರು. ಪೋಲೀಸರ ಬಳಿ ಒರಿಜಿನಲ್ ಇರುತ್ತದೆ. ಸರಿ role play ಮಾಡಿದರಾಯಿತು. ನಾನೇ ಜನ ಆದೆ. ದನ, ಜನ ಎಲ್ಲಾ ನಾವೇ. ಕಾಪಿ, ಒರಿಜಿನಲ್ ಎಲ್ಲ ನಾನೇ ಇಟ್ಟುಕೊಂಡೆ.

ಹೀಗೆ ಪಂಚನಾಮೆ ಬರೆದು ಅದೊಂದು ಮಂಗ್ಯಾ ಇಚ್ಛೆಯನ್ನು ತೀರಿಸಿಕೊಂಡಿದ್ದೆ. ಇಂತಹ ವಿಚಿತ್ರ ವಿಲಕ್ಷಣ ಕಾರ್ನಾಮೆಗಳಿಂದಲೇ ಕುಟುಂಬವಲಯದಲ್ಲಿ ಫೇಮಸ್ ಆಗಿಹೋದೆ. ಐದಾರು ವರ್ಷದ ಬಾಲಕರಾರೂ, ಎಲ್ಲಾ ಬಿಟ್ಟು, ಹೋಗಿ ಹೋಗಿ,  ಪಂಚನಾಮೆ ಪ್ರಕ್ರಿಯೆಯಿಂದ ಅಷ್ಟು ಪ್ರಭಾವಿತರಾಗಿ, ಪಂಚನಾಮೆ ಬರೆಯುವ ಜುರ್ರತ್ ಮಾಡಿರಲಿಕ್ಕಿಲ್ಲ. ನೆಂಟರಿಷ್ಟರಿಗೆ ನೆಗೆಯಾಡಲು ಬೆಸ್ಟ್ ಆಯಿತು. ನಮಗೇನೂ ಫರಕ್ ಆಗಲಿಲ್ಲ. ಮನಸ್ಸಿಗೆ ಬಂದಿದ್ದನ್ನು ಮಾಡುತ್ತ ಹೋಗುವದೇ ನಮ್ಮ ಕೆಲಸ. ನಮಗೆ ಬರುತ್ತಿದ್ದ ಇಂತಹ ಗ್ರೇಟ್ (ವಿಚಿತ್ರ!) ಆಲೋಚನೆಗಳು ಬೇರೆಯವರಿಗೆ ಯಾಕೆ ಬರುವದಿಲ್ಲ ಅಂತ ತಿಳಿಯುತ್ತಿರಲಿಲ್ಲ. ಈಗ ಅದೇ ನಮ್ಮ ಸ್ಪೆಷಾಲಿಟಿ ಅಂತ ಗೊತ್ತಾಗಿದೆ.

ಆಮೇಲೂ ಬಸ್ ಕಂಡಕ್ಟರನಂತೆ ಕ್ಲಿಪ್ ಬೋರ್ಡ್ ಹಿಡಿದು, ಏನೇನೋ ಗೀಚುತ್ತ ಓಡಾಡಿಕೊಂಡಿರುತ್ತಿದ್ದೆ. ಮತ್ತೆ ಪಂಚನಾಮೆ ಬರೆಯುವ ಸಂದರ್ಭ ಬರಲಿಲ್ಲ. ಯಾಕೆಂದರೆ ಮತ್ತೆ ಪೋಲೀಸರು ಬರುವಂತಹ ಲಫಡಾ ಸುತ್ತಮುತ್ತಲೆಲ್ಲೂ ಆಗಲೇ ಇಲ್ಲ. ಅಂತಹ ಲಫಡಾ ಆದಾಗ ಮಾತ್ರ ಪಂಚನಾಮೆ ಬರೆಯಬಹುದು.

ಒಮ್ಮೆ ಸಾಂಬ್ರಾಣಿ ಸಾವಕಾರರು ಮನೆಗೆ ಬಂದಿದ್ದರು. ಅವರದ್ದು ಲೈನ್ ಬಜಾರಿನಲ್ಲಿ ಸನ್ಮೇಕಾ ಅಂಗಡಿಯಿತ್ತು ಅಂತ ನೆನಪು. ದುಬಾರಿ ಸನ್ಮೇಕಾ ಹಾಕಿ ತಯಾರಿಸಿದ್ದ ಕ್ಲಿಪ್ ಬೋರ್ಡ್ ಸ್ಪೆಷಲ್ ಆಗಿ ನನಗೆ ಅಂತ ಮಾಡಿ ಪ್ರೀತಿಯಿಂದ ತಂದುಕೊಟ್ಟಿದ್ದರು. ನನಗೆ ಅಂತ ಕೊಟ್ಟಿದ್ದರೋ ಅಥವಾ ತಂದೆಯವರಿಗೋ, ಅಣ್ಣನಿಗೋ ಕೊಟ್ಟಿದ್ದರೋ ಗೊತ್ತಿಲ್ಲ. ಆದರೆ ಅದನ್ನು ವಶಪಡಿಸಿಕೊಂಡಿದ್ದು ಮಾತ್ರ ನಾನು. ವಸ್ತುವೊಂದರ ಮೇಲೆ ಕಣ್ಣು ಬಿತ್ತೆಂದರೆ ಮುಗಿಯಿತು. ಬೇಕೇಬೇಕು.

ವಿಪರ್ಯಾಸ ನೋಡಿ. ದುಬಾರಿ ಸನ್ಮೇಕಾ ಹಾಕಿದ ಕ್ಲಿಪ್ ಬೋರ್ಡ್ ಏನೋ ಕೈಗೆ ಬಂತು ಆದರೆ ಪಂಚನಾಮೆ ಬರೆಯುವ ಹುಚ್ಚು ಬಿಟ್ಟುಹೋಯಿತು. ಬಾಲ್ಯದ ಹುಚ್ಚುಗಳೇ ಹಾಗೆ. ಬೇಗ ಕಳಚಿಕೊಳ್ಳುತ್ತವೆ.

ಆದರೂ ಸಾಂಬ್ರಾಣಿ ಸಾವಕಾರರು ಕೊಟ್ಟ ಕ್ಲಿಪ್ ಬೋರ್ಡ್ ಮಾತ್ರ ಮಸ್ತಾಗಿ ಉಪಯೋಗಿಸಲ್ಪಟ್ಟಿತು. ಪಿಯೂಸಿ ಮುಗಿಯುವವರೆಗೆ ಎಲ್ಲ ಪರೀಕ್ಷೆಗಳನ್ನು ಅದೇ ಕ್ಲಿಪ್ ಬೋರ್ಡ್ ಉಪಯೋಗಿಸಿ ಬರೆದಿದ್ದು. ಒಂದು ತರಹದ ಅದೃಷ್ಟಶಾಲಿ ಲಕ್ಕಿ ಕ್ಲಿಪ್ ಬೋರ್ಡ್ ಅದಾಗಿತ್ತು. ಅಂತಹ ಕ್ಲಿಪ್ ಬೋರ್ಡ್ ಕೊಟ್ಟಿದ್ದ ಸಾಂಬ್ರಾಣಿ ಸಾವಕಾರರಿಗೊಂದು ದೊಡ್ಡ ಧನ್ಯವಾದ.

ನಮ್ಮ ಬಾಲ್ಯದ ಇಂತಹ ಮಂಗ್ಯಾನಾಟಗಳು ನಮಗೇ ಮರೆತುಹೋದರೂ ಇಳಿವಯಸ್ಸಿನ ನೆಂಟರಿಷ್ಟರಿಗೆ ಈಗಲೂ ನೆನಪಿರುತ್ತವೆ. ನಮಗೆ ಮುಜುಗರವಾಗುತ್ತದೆ ಅಂತ ಗೊತ್ತಿದ್ದರೂ ಇಂತಹ ಘಟನೆಗಳನ್ನು ನೆನಪಿಸಿ ಅವರು ಮಜಾ ತೆಗೆದುಕೊಳ್ಳುತ್ತಾರೆ. ಕಾಲೆಳೆಯುತ್ತಾರೆ. ಇಂದಿನ ತಲೆಮಾರಿನ ಚಿಣ್ಣರಿಗೆ ನಮ್ಮ ಜಮಾನಾದಲ್ಲಿ ನಾವು ಹೇಗಿದ್ದೆವು ಎಂಬುದನ್ನು ಭಾಳ ರಸವತ್ತಾಗಿ ವರ್ಣಿಸುತ್ತಾರೆ. ಇಂದಿನ smartphone ಯುಗದ ಚಿಣ್ಣರಿಗೆ ಅದನ್ನೆಲ್ಲ ಊಹಿಸಲೂ ಸಾಧ್ಯವಿಲ್ಲ. 'ಹ್ಯಾಂ!?' ಅಂತ ಅವು ಪೆಕರು ಮುಖ ಮಾಡುತ್ತವೆ. ನಮಗೆ ನಮ್ಮ ಹಳೆಯ ನೆನಪುಗಳು ತಾಜಾ ಆಗುತ್ತವೆ. ಹಾಗಾದಾಗ ಪಂಚನಾಮೆಯಂತಹ ಖತರ್ನಾಕ್ ಬಾಲಲೀಲೆಗಳು ನೆನಪಾಗುತ್ತವೆ. ನಮ್ಮ ಬಾಲಲೀಲೆಗಳನ್ನು ಸಹಿಸಿಕೊಂಡು ಸಹಕರಿಸಿದವರಿಗೆಲ್ಲ ಅನಂತಾನಂತ ವಂದನೆಗಳು. ನಮ್ಮ ಕುಟುಂಬದ ಹಿರಿಯರೆಲ್ಲ ನಮ್ಮ ಚಿತ್ರವಿಚಿತ್ರ ಬಾಲಲೀಲೆಗಳನ್ನು ಸಹಿಸಿಕೊಂಡಿದ್ದೇ ದೊಡ್ಡ ಮಾತು. ಬೇರೆ ಹಿರಿಯರಾಗಿದ್ದರೆ ಬಾಲ ಕಟ್ ಮಾಡಿರುತ್ತಿದ್ದರೇನೋ! ಅಷ್ಟರಮಟ್ಟಿಗೆ ಧನ್ಯೋಸ್ಮಿ.

4 comments:

sunaath said...

ಪಂಚನಾಮೆಯನ್ನು ಬರೆಯುವ ಹುಚ್ಚು ನಿಮಗೆ ಇನ್ನೂ ಬಿಟ್ಟಿಲ್ಲ; ನಿಮ್ಮ ಪಂಚನಾಮೆಗಳನ್ನು ಓದುವ ಹುಚ್ಚು ನಮಗೆ ಹೆಚ್ಚಾಗುತ್ತಲೇ ಇದೆ!

Mahesh Hegade said...

Thanks Sunaath Sir.

ವಿ.ರಾ.ಹೆ. said...

ಜೀವನದ ಈ ರಸವತ್ತಾದ ಪಂಚನಾಮೆಗಳ ಮುಂದೆ ಪೋಲೀಸರ ಪಂಚನಾಮೆ ಸಪ್ಪೆಯಾದೀತು. ನಕ್ಕೂ ನಕ್ಕೂ ಸಾಕಾತು, especially ದೊಡ್ಡಮ್ಮನ್ನ ಕೂರ್ಸ್ಕಂಡು ರೈಟರ್ ಮಾಡಿ ಪಂಚನಾಮೆ ಮಾಡಿದ್ದು.. ಹ್ಹ ಹ್ಹ.. :)

Mahesh Hegade said...

Thanks, Vikas. :)