Saturday, April 29, 2017

ಶೀರ್ಷಾಸನದ ಆವಿಷ್ಕಾರ

ಯೋಗಾಸನಗಳಲ್ಲೇ ರಾಜ ಅನ್ನಿಸಿಕೊಂಡಿರುವದು ಶೀರ್ಷಾಸನ. ಅದೆಷ್ಟೇ ಬ್ಯುಸಿಯಾಗಿದ್ದರೂ ಮಾಜಿ ಪ್ರಧಾನಿ ನೆಹರು ಅವರು ದಿನವೂ ಏನು ತಪ್ಪಿಸಿದರೂ ಕೆಲ ನಿಮಿಷಗಳ ಕಾಲ ಶೀರ್ಷಾಸನ ಹಾಕುವದನ್ನು ಮಾತ್ರ ಎಂದೂ ಮರೆಯುತ್ತಿರಲಿಲ್ಲವಂತೆ.

ಈ ಶೀರ್ಷಾಸನವನ್ನು ಯಾರು ಕಂಡುಹಿಡಿದರು? ಯೋಗರಾಜ ಆ ಪರಶಿವನೇ ಶೀರ್ಷಾಸನವನ್ನು ಕಂಡುಹಿಡಿದನಂತೆ. ಕಾರಣ? Necessity is the mother of all inventions. ಶಿವನಿಗೂ ಶೀರ್ಷಾಸನವನ್ನು ಕಂಡುಹಿಡಿಯುವ ಜರೂರತ್ತು ಬಂತು.

ಶಿವ ಭಸ್ಮಾಸುರನಿಗೆ ವರ ಕೊಟ್ಟಿದ್ದ. ಆ ವರದ ಪ್ರಕಾರ ಭಸ್ಮಾಸುರನನ್ನು ಯಾರೂ ಕೊಲ್ಲುವಂತೆ ಇರಲಿಲ್ಲ. ಈಕಡೆ ಯಬಡ ಭಸ್ಮಾಸುರನಂತೂ ಕಂಡಕಂಡವರ ತಲೆ ಮೇಲೆ ಕೈಯಿಡತೊಡಗಿದ್ದ. ಆತ ಒಮ್ಮೆ ತಲೆ ಮೇಲೆ ಕೈಯಿಟ್ಟ ಅಂದರೆ ಮುಗಿಯುತು. ಭಸ್ಮ! ಫುಲ್ ಭಸ್ಮ! ರಾಖಂ ರಾಖ್!

ಹೀಗೆ ಕಂಡಕಂಡವರ ತಲೆ ಮೇಲೆ ಕೈಯಿಟ್ಟು ಭಸ್ಮ ಮಾಡಿ ಒಗೆದ ಭಸ್ಮಾಸುರ ತನ್ನ ಶಕ್ತಿಯಿಂದ, ಅದರಿಂದ ಮಾಡುತ್ತಿರುವ ಹಾವಳಿಯಿಂದ ಫುಲ್ ಥ್ರಿಲ್ಲೋ ಥ್ರಿಲ್ಲು. ಕೊನೆಕೊನೆಗೆ ಭಸ್ಮಾಸುರನ ಹೆಸರು ಕೇಳಿದರೂ ಸಾಕು ಜನ ಬಿದ್ದೆದ್ದು ಓಡುತ್ತಿದ್ದರು. ಭಸ್ಮಾಸುರನಿಗೆ ಬೇಜಾರಾಗತೊಡಗಿತು. ಜನ ಸಿಗಲಿಲ್ಲ ಎಂದು ದನಗಳ ತಲೆ ಮೇಲೆ ಕೈಯಿಟ್ಟ. ಅವೂ ಭಸ್ಮವಾಗಿಬಿಟ್ಟವು. ಏನೂ ಮಜಾ ಬರಲಿಲ್ಲ.

ಈಗ ಹುಕಿಗೆ ಬಿದ್ದ ಭಸ್ಮಾಸುರ ದೇವತೆಗಳ ತಲೆ ಮೇಲೆ ಕೈಯಿಡಲು ಶುರು ಮಾಡಿದ. ದೇವತೆಗಳು ದಿಕ್ಕಾಪಾಲಾಗಿ ಓಡಿದರು. ಅವರನ್ನು ಎಷ್ಟಂತ ಅಟ್ಟಿಸಿಕೊಂಡು ಓಡಿಯಾನು? ತಲೆ ಮೇಲೆ ಕೈಯಿಡಲು ಸರಿಯಾಗಿ ಜನ ಸಿಗದೇ ಭಸ್ಮಾಸುರ frustrate ಆದ. ತನಗೆ ವರ ಕೊಟ್ಟ ಶಿವನ ಹತ್ತಿರವೇ ಹೋದ. ಯಾರೂ ಸಿಗಲಿಲ್ಲ ಅಂದರೆ ಶಿವನ ತಲೆ ಮೇಲೆಯೇ ಕೈಯಿಟ್ಟುಬಿಡೋಣ ಅಂತ ಖತರ್ನಾಕ್ ಐಡಿಯಾ ಹಾಕಿದ್ದ.

ದಾಪುಗಾಲಿಡುತ್ತ ಧಾವಿಸಿ ಬರುತ್ತಿರುವ ಭಸ್ಮಾಸುರನನ್ನು ನೋಡಿದ ಕೂಡಲೇ ಶಿವನಿಗೆ ತಿಳಿದೇಹೋಯಿತು, ಮಾಮ್ಲಾ ಏನು ಎಂದು. 'ಈ ಯಬಡ ಭಸ್ಮಾಸುರನ ಕೈಯಲ್ಲಿ ಸಿಕ್ಕೆ ಅಂದರೆ ನಾ ಕೆಟ್ಟೆ!' ಅಂದವನೇ ಎದ್ದುಬಿದ್ದು ಓಡತೊಡಗಿದ. ಓಡುತ್ತಿರುವ ಶಿವ. ಹಿಂದೆಯೇ ಅಟ್ಟಿಸಿಕೊಂಡು ಬರುತ್ತಿರುವ ಭಸ್ಮಾಸುರ. ಸಿಕ್ಕಾಪಟ್ಟೆ ಸೀನ್!

ಇಬ್ಬರೂ ಓಡಿದರು. ಓಡಿಯೇ ಓಡಿದರು. ಭಸ್ಮಾಸುರ ಇನ್ನೇನು ಶಿವನ ತಲೆಯ ಮೇಲೆ ಕೈಯಿಟ್ಟೇಬಿಟ್ಟ ಅನ್ನುವಷ್ಟರಲ್ಲಿ, do or die ಮಾದರಿಯಲ್ಲಿ, ಶಿವ ತಲೆಯನ್ನು ಭೂಮಿ ಮೇಲಿಟ್ಟು ಕಾಲು ಮೇಲೆತ್ತಿಬಿಟ್ಟ. ಶಿವಾಯ ನಮಃ!

'ತಲೆ ಕೆಳಗೆ ಕಾಲು ಮೇಲೆ' ಎನ್ನುವ ಶಿವನ ಹೊಸ ಅವತಾರ ನೋಡಿ ಹಿಂದೆಯೇ ಬಂದ ಭಸ್ಮಾಸುರ ಫುಲ್ ಮಂಗ್ಯಾ ಆದ. ತಲೆಯಿರುವ ಜಾಗದಲ್ಲಿ ಶಿವನ ಪಾದ ಬಂದುಬಿಟ್ಟಿದೆ. ಪಾದದ ಮೇಲೆ ಕೈಯಿಟ್ಟರೆ ಏನೂ ಉಪಯೋಗವಿಲ್ಲ. ತಲೆ ಮೇಲೆ ಕೈಯಿಟ್ಟರೆ ಮಾತ್ರ ಭಸ್ಮ ಮಾಡಿಬಿಡುವ ಶಕ್ತಿಯಿದೆ.

ನಿರಾಶನಾದ ಭಸ್ಮಾಸುರ ಶಿವನನ್ನು ಬೈದುಕೊಳ್ಳುತ್ತ ಅಲ್ಲಿಂದ ಜಾಗ ಖಾಲಿ ಮಾಡಿದ. ಅವನು ದೂರ ಹೋದ ಅಂತ ಖಾತ್ರಿಯಾದ ಮೇಲೆಯೇ ಶಿವ ಭೂಮಿ ಮೇಲೆ ಕಾಲೂರಿದ. ಅಲ್ಲಿ ತನಕ ತಲೆಯನ್ನು ಭೂಮಿ ಮೇಲೆಯೇ ಊರಿಟ್ಟುಕೊಂಡಿದ್ದ.

ಅಂತೂ ಇಂತೂ ಭಸ್ಮಾಸುರನ ಕಾಟದಿಂದ ತಪ್ಪಿಸಿಕೊಂಡಿದ್ದಾಗಿತ್ತು. ಆದರೆ unintended consequence ಅನ್ನುವಂತೆ ಹೊಸ ಆಸನವೊಂದರ ಅವಿಷ್ಕಾರವಾಗಿತ್ತು. ಅದೇ ಶೀರ್ಷಾಸನ.

ಒಂದಿಷ್ಟು ಹೊತ್ತು ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಂತಿದ್ದು ತುಂಬಾ ಹಿತಕಾರಿ ಅನ್ನಿಸಿತು ಶಿವನಿಗೆ. ತಲೆಗೆ ಸಾಕಷ್ಟು ರಕ್ತ ಸಂಚಾರವಾಗಿ ಸಿಕ್ಕಾಪಟ್ಟೆ ಮಸ್ತ ಅನ್ನಿಸಿತು. ತಲೆ ಜೋರಾಗಿ ಓಡಲು ಆರಂಭಿಸಿತು. relax ಆಯಿತು.

ತದನಂತರ ಭಸ್ಮಾಸುರನ ನೆನಪಾಗಿ ಬೆಚ್ಚಿಬಿದ್ದಾಗೊಮ್ಮೆ ಮತ್ತೆ ಮತ್ತೆ ಅದೇ ಆಸನ ಹಾಕಿ ಹಾಕಿ ಶಿವ ಅದನ್ನು perfect ಮಾಡಿದ. ಹಠಯೋಗಕ್ಕೆ ಹೊಸ ಆಸನ, ಅದರಲ್ಲೂ ಕಿಂಗ್ ಅನಿಸಿಕೊಳ್ಳುವ ಆಸನವೊಂದರ ಸೇರ್ಪಡೆಯಾಗಿತ್ತು.

ಇದು ಶೀರ್ಷಾಸನದ ಹಿಂದಿರುವ ಕಥೆ. ಕಥೆ ಹೇಳಿದವರು ಅಭಿನವ ಬೀಚಿ ಎಂತಲೇ ಖ್ಯಾತರಾಗಿರುವ ಗಂಗಾವತಿ ಪ್ರಾಣೇಶ್. ಅಂದಮೇಲೆ ನಿಮಗೆ ಗೊತ್ತಾಗಿರಬಹುದು ಇದೊಂದು ಜೋಕ್ ಎಂದು! :)

2 comments:

sunaath said...

ಪ್ರಾಣೇಶರ ಆವಿಷ್ಕಾರ ಚೆನ್ನಾಗಿದೆ. ನನಗೆ ಸಾಲ ಕೊಟ್ಟ ದಡ್ಡನೊಬ್ಬ ಮಾರ್ಕೆಟ್ಟಿನಲ್ಲಿ ನನ್ನ ಬೆನ್ನು ಹತ್ತಿದ್ದ. ನಾನು ಅವನ ಕಣ್ಣು ತಪ್ಪಿಸಿ, ಥಟ್ಟನೆ ಗಜಮು ನಿಂತೆ. ಆತನಿಗೆ ನನ್ನ ಮುಖ ಕಾಣಲಿಲ್ಲ. ಶಿವನನ್ನು ಹುಡುಕಿದ ಭಸ್ಮಾಸುರನಂತೆ ಎಲ್ಲಿಯೋ ಹೋಗಿ ಬಿಟ್ಟ. ಶೀರ್ಷಾಸನ ಕೀ ಜೈ!

Mahesh Hegade said...

Funny indeed. Thanks Sunaath Sir.