Friday, July 07, 2017

ಮಣ್ಣು ತಿನ್ನುವವ ಸಕ್ಕರೆ ಕೊಳ್ಳಲು ಹೋದಾಗ...

ಮಣ್ಣು ತಿನ್ನುವ ಚಟ (ಕಾಯಿಲೆ) ಇದ್ದವನೊಬ್ಬ ಸಕ್ಕರೆಯನ್ನು ಕೊಳ್ಳಲು ಅಂಗಡಿಗೆ ಹೋದ.

'ಒಂದು ಸೇರು ಸಕ್ಕರೆ ಕೊಡಿ,' ಎಂದ.

'ತೂಕ ಮಾಡಲು ಒಂದು ಸೇರಿನ ತೂಕದಕಲ್ಲು ಇಲ್ಲ. ಆದರೆ ಒಂದು ಸೇರಿಗೆ ತೂಗುವ ಮಣ್ಣಿನ ಚಿಕ್ಕ ರಾಶಿಯಿದೆ. ತೂಕದಕಲ್ಲಿನ ಬದಲು ಆ ಒಂದು ಸೇರಿನ ಮಣ್ಣಿನ ರಾಶಿಯಿಂದ ಸಕ್ಕರೆಯನ್ನು ತೂಕ ಮಾಡಲೇ?' ಎಂದು ಕೇಳಿದ ಅಂಗಡಿಯವ.

'ಸರಿ. ಹಾಗೇ ಮಾಡಿ. ಒಟ್ಟಿನಲ್ಲಿ ಒಂದು ಸೇರು ಸಕ್ಕರೆ ಬೇಕು,' ಎಂದ ಗ್ರಾಹಕ.

ತಕ್ಕಡಿಯ ಒಂದು ಕಡೆ ಒಂದು ಸೇರು ತೂಗುತ್ತಿದ್ದ ಮಣ್ಣನ್ನು ಇಟ್ಟ ಅಂಗಡಿಯವ ಮತ್ತೊಂದು ಕಡೆ ಸಕ್ಕರೆಯನ್ನು ಇಟ್ಟು ತೂಕ ಮಾಡಲಾರಂಭಿಸಿದ.

ಗ್ರಾಹಕನಿಗೆ ಮೊದಲೇ ಮಣ್ಣು ತಿನ್ನುವ ಚಟ (ಕಾಯಿಲೆ). ಎದುರಿಗೇ ಇದೆ ಅಷ್ಟು ದೊಡ್ಡ ಸೊಗಸಾದ ಮಣ್ಣಿನ ರಾಶಿ. ಚಪಲ ತಡೆದುಕೊಳ್ಳಲಾದೀತೇ? ಆಗಲಿಲ್ಲ.

ಅಂಗಡಿಯವನ ಕಣ್ಣು ತಪ್ಪಿಸಿ ತಕ್ಕಡಿಯಿಂದ ಇಷ್ಟಿಷ್ಟೇ ಮಣ್ಣನ್ನು ತೆಗೆದು ತಿನ್ನತೊಡಗಿದ.

ಸಕ್ಕರೆ ತೂಕ ಮಾಡುತ್ತಿದ್ದ ಅಂಗಡಿಯವ ಗ್ರಾಹಕನ ಕಿತಾಪತಿಯನ್ನು ಗಮನಿಸಿದ.

ಅಂಗಡಿಯವ ಮನಸ್ಸಿನಲ್ಲೇ ಅಂದುಕೊಂಡ, 'ತಿನ್ನು ತಿನ್ನು. ಕದ್ದು ಮಣ್ಣು ತಿನ್ನು. ಎಷ್ಟು ಮಣ್ಣು ತಿನ್ನುತ್ತೀಯೋ ಅಷ್ಟೇ ತೂಕದ ಸಕ್ಕರೆ ಕಮ್ಮಿ ಪಡೆಯುತ್ತೀಯೆ!'

-- ಜಲಾಲುದ್ದೀನ್ ರೂಮಿ.

ನೀತಿ: ಒಂದೇ ನೀತಿ ಅಂತಿಲ್ಲ. ಸೂಫಿ ಕವಿ ಜಲಾಲುದ್ದೀನ್ ರೂಮಿಯ ವಿವೇಕಭರಿತ, ಜ್ಞಾನ ತುಂಬಿದ  ಇಂತಹ ಪದ್ಯಗಳನ್ನು ಒಂದೇ ರೀತಿಯಿಂದ ವಿಶ್ಲೇಷಿಸಿ, ಸತ್ವವನ್ನು (gist) ತೆಗೆಯಲು ಹೋದರೆ ಅದು ಬಾಲಿಶ ಮತ್ತು ನಮಗೇ ನಷ್ಟ. ಹಾಗಾಗಿ ಸದ್ಯಕ್ಕೆ ನನ್ನ ಕಾಮೆಂಟರಿ ಬರೆಯುವದಿಲ್ಲ. ನಿಮ್ಮ ವಿಶ್ಲೇಷಣೆಯನ್ನು ಕಾಮೆಂಟಿನಲ್ಲಿ ಹಾಕಲು ಯಾವದೇ ತಕರಾರಿಲ್ಲ.

ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಭಾವ ಬೀರಿದ ರೂಮಿ ಕವಿತೆ ಇದು. ಐದು ವರ್ಷ ಹಿಂದೆ ಓದಿದ್ದ ಪುಸ್ತಕ - The Soul of Rumi by Coleman Barks - ಮತ್ತೆ ಓದುತ್ತಿದ್ದಾಗ ಕಂಡಿತು. ಕ್ಯಾಶುಯಲ್ ಆಗಿ ಓದುತ್ತಿದ್ದಾಗ ಗಕ್ಕೆಂದು ನಿಲ್ಲಿಸಿ ಯೋಚಿಸಲು ಹಚ್ಚಿದ ಪದ್ಯ!

ಮನುಷ್ಯರು ಮಣ್ಣು ತಿನ್ನುತ್ತಾರೆಯೇ? ಯಾಕೆ? ಅಂತ ತಲೆಯಲ್ಲಿ ಬಂದರೆ ಅದಕ್ಕಾಗಿ ಈ ವಿವರಣೆ. ಕೆಲವೊಂದು ಪೋಷ್ಟಿಕಾಂಶ ಕೊರತೆಯಾದವರು ಮಣ್ಣು ತಿನ್ನುತ್ತಾರೆ. ಇದು ಪ್ರಾಣಿಗಳಲ್ಲಿ ಮತ್ತು ಮನುಷ್ಯರರಲ್ಲಿ ಇಬ್ಬರಲ್ಲೂ ಕಂಡುಬರುತ್ತದೆ.  ಬಸುರಿಯರು, ಬಾಣಂತಿಯರು, ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

4 comments:

Parameshi Panjarpolappanavar said...


Very thought provoking!

It's similar to RK eating ompudi thinking it to be kurkure!

Anonymous said...

Rumi - Night's beauty

When someone mentions the gracefulness
Of the night sky, climb up on the roof
And dance and say,

Like this!

(Rumi was a great Persian poet during 13th Century).

ನನ್ನ ಭಾವಾನುವಾದ

ರೂಮಿ - ನಿಶೆಯ ಸೊಬಗು
_______________

- ಮೈನಾಶ್ರೀ 03-ಮಾರ್ಚಿ-2017

ನಿಶೆಯ ಸೊಬಗ ಬಣ್ಣಿಸಲ್ಕೆ
ಆಶೆ ಹೊತ್ತು ಹೊರಟ ನಾನು
ಭಾಷೆ ಬರದೆ ಪರದಾಡಿದೆ.

ಕ್ಲೇಶ ಕಳೆದು ಮಾಡನೇರಿ
ವೇಶ ತೆಗೆದು ಬಣ್ಣ ಕಳಚೆ
ದೃಷ್ಟಿಯ ಪೊರೆ ಪೂರ್ಣ ಸರಿಸೆ

ಶಶಿಯ ಹೊತ್ತ ಶಿವನ ತೆರದಿ
ಈಶ ನೃತ್ಯ ತಾಂಡವವನು
ಶೇಷ ಶಯನ ಮುಗುಳ್ನಗೆಯ
ಹೊಸೆತು ಹೊಸದು ಜೀವಸೂತ್ರ
ವಿಶ್ವಜನಕ ಶಾಂತ ಮೊಗವ
ಶಿಶಿರ ಕಳೆದ ಸಸ್ಯದಂತೆ

ತೋರಿ ತಾರೆಯಗಣಿತ ಗಣ
ಸಾರಿ ಸಾರಿ ಹೇಳಿದೆ
ರಾಗ ಹಾಡಿ ನಾಟ್ಯವಾಡಿ
ಕೂಗಿ ಲಯವ ತೋರಿದೆ

ಇದಿಗೊ ಇದುವೆ ಜೀವದೃಷ್ಟಿ
ಇದಿಗೊ ಇಲ್ಲಿ 'ಅವನ' ವ್ಯಷ್ಟಿ

--------

#ರೂಮಿಜಲಾಲ
#ರೂಮಿ

Shreenatha.Narayana at gmail dot com
Bangalore

sunaath said...

ಮಣ್ಣು ತಿನ್ನೋಣ ಎಂದೇ ಓದಹೊರಟಿದ್ದೆ; ಸಿಕ್ಕಿದ್ದು ಸಕ್ಕರೆಪಾಕ!
ಜೊತೆಗೆ ಮೈನಾಶ್ರೀಯವರ ಕವನಾನುವಾದವನ್ನು ಓದಿ ಖುಶಿ ಇಮ್ಮಡಿಯಾಯಿತು.
ನಿಮಗೆ ಹಾಗು ಅವರಿಗೆ ಇಬ್ಬರಿಗೂ ಧನ್ಯವಾದಗಳು.
(ರೂಮಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದುಕೊಂಡಿದ್ದೇನೆ.)

Mahesh Hegade said...

@Shreenatha.Narayana, ಸುನಾಥ್ ಸರ್ - ಧನ್ಯವಾದಗಳು.