Friday, July 14, 2017

ಪ್ರಸಾದಬುದ್ಧಿಯಿಂದ ಪ್ರಸನ್ನಭಾವ

ಪ್ರಸಾದಬುದ್ಧಿ. ಇಂತಹ ಶಬ್ದವೊಂದನ್ನು ಮೊದಲು ಕೇಳಿರಲಿಲ್ಲ. ಸುಬುದ್ಧಿ, ದುರ್ಬುದ್ದಿ, ವಿಪರೀತಬುದ್ಧಿಯಂತಹ ಬುದ್ಧಿಗಳನ್ನು ಕೇಳಿದ್ದೆ.

ಪ್ರಸಾದಬುದ್ಧಿ ಅಂದರೆ ದೇವರ ಪ್ರಸಾದ ತೆಗೆದುಕೊಳ್ಳುವಾಗ ಇರುವಂತಹ ಅಥವಾ ಇರಬೇಕಾದಂತಹ ಬುದ್ಧಿ ಅಥವಾ ಮನೋಭಾವ.

ದೇವರ ಪ್ರಸಾದ ಕೊಟ್ಟಾಗ ನಾವು:

೧) ದೂಸರಾ ಮಾತಿಲ್ಲದೆ ತೆಗೆದುಕೊಳ್ಳುತ್ತೇವೆ. ತೆಗೆದುಕೊಳ್ಳಬೇಕು.

೨) ಕೊಟ್ಟಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಜಾಸ್ತಿ ಕೇಳಬಾರದು. ಕೊಟ್ಟದ್ದನ್ನು ವೇಸ್ಟ್ ಮಾಡಬಾರದು.

೩) ಪ್ರಸಾದವು ಅತ್ಯಮೂಲ್ಯವಾದದ್ದು. ಈ ಪವಿತ್ರ ಭಾವನೆಯೊಂದಿಗೆ ತೆಗೆದುಕೊಳ್ಳಬೇಕು.

೪) ಪ್ರಸಾದವನ್ನು ಉತ್ತಮಗೊಳಿಸುವದರ ಬಗ್ಗೆ (improvise ಮಾಡುವದರ) ಬಗ್ಗೆ ಯೋಚಿಸಬಾರದು. ಉದಾ: ಸತ್ಯನಾರಾಯಣ ಪೂಜೆಯ ಪ್ರಸಾದ ಶಿರಾ ತುಂಬಾ ಒಣಒಣ ಆಗಿದೆ. ಜಾಸ್ತಿ ತುಪ್ಪ ಹಾಕಬಹುದಿತ್ತು. ಇಂತಹ ಭಾವನೆಗಳು ಪ್ರಸಾದದ ಬಗ್ಗೆ ಬರಕೂಡದು.

೫) ಪ್ರಸಾದದ ಜೊತೆಗೆ ಮತ್ತೇನನ್ನೂ ಕೇಳಬಾರದು. ಉದಾ: 'ಸತ್ನಾರಣ ಪ್ರಸಾದ ಭಾಳ ಸಿಹಿ ಆತು. ಚಹಾ ಭಾಳ ಸಪ್ಪ ಅನ್ನಸಲಿಕತ್ತದ. ಸ್ವಲ್ಪ ಖಾರದ ಚೂಡಾ ಕೊಡ್ರಿ!' ಎಂದೆಲ್ಲ ಕೇಳಬಾರದು!

ಈ ಐದು ಅಂಶಗಳನ್ನು ಹೊಂದಿದ್ದು ಪ್ರಸಾದಬುದ್ಧಿ. ಈ ಬುದ್ಧಿ induce ಮಾಡುವ ಮನೋಭಾವದಿಂದ ದೇವರ ಪ್ರಸಾದ ತೆಗೆದುಕೊಳ್ಳಬೇಕು.

ಈಗ ಗೇರ್ ಬದಲಾಯಿಸಿ. Change the perspective. ದೇವರು ಕೊಟ್ಟ ನಮ್ಮ ಈ ಜೀವನವೇ ಅತಿ ದೊಡ್ಡ ಪ್ರಸಾದ. ಜೀವನವೆಂಬ ಮಹಾಪ್ರಸಾದವನ್ನು ನಾವು ಪ್ರಸಾದಬುದ್ಧಿಯಿಂದ ಸ್ವೀಕರಿಸಿದರೆ ಪ್ರಸನ್ನಭಾವ ಗ್ಯಾರಂಟಿ. ಅದು ಬಿಟ್ಟು ಜೀವನವನ್ನು ದುರ್ದಾನ ತೆಗೆದುಕೊಂಡಂತೆ ತೆಗೆದುಕೊಂಡರೆ ಅಷ್ಟೇ ಮತ್ತೆ!

ಯೋಚಿಸಬೇಕಾದ ಸಂಗತಿ. ಅಲ್ಲವೇ?


***

ಒಬ್ಬ ಹುಡುಗಿ ಸ್ಟೇಜ್ ಮೇಲೆ ಬಹಳ ಡೌಲು ಬಡಿಯುತ್ತ ಓಡಾಡಿಕೊಂಡಿದ್ದಳು. ನಮ್ಮ ಧಾರವಾಡ ಕಡೆ ಡೌಲು ಬಡಿಯೋದು ಅಂದರೆ ಎಲ್ಲ ತಮ್ಮಿಂದಲೇ ಆಗುತ್ತಿದೆ ಅನ್ನುವ ಮನೋಭಾವದೊಂದಿಗೆ ವರ್ತಿಸಿ ಸ್ಕೋಪ್ ತೆಗೆದುಕೊಳ್ಳುವದು. ಅವಳನ್ನು ಕರೆದು ಕೇಳಿದೆ. 

'ನಿನ್ನ ಹೆಸರು ಏನವಾ?' ಎಂದು ಕೇಳಿದೆ.

'ಭಾವನಾ,' ಎಂದು ನುಲಿದಳು.

'ನಿನ್ನ ಹೆಸರಿನ ಅರ್ಥ ಗೊತ್ತದೇನು??'

'ಗೊತ್ತಿಲ್ಲ. ನೀವೇ ಹೇಳ್ರೀ.'

'ಭಾವ ಅಂದ್ರ ಬೆಲೆ. ನಾ ಅಂದ್ರ ಇಲ್ಲ.'

ಇದನ್ನು ಕೇಳಿದ ಮೇಲೆ 'ಭಾವ ನಾ' ಸ್ಟೇಜ್ ಮೇಲೆಲ್ಲೂ ಕಾಣಲಿಲ್ಲ.

***

ಮಾಸ್ತರ್: ಸತ್ಯವಾನ-ಸಾವಿತ್ರಿ ಕಥೆಯ ನೀತಿ ಏನು?

ತುಂಟ: ಯಮನಿಂದಾದರೂ ಬಚಾವಾಗಬಹದು. ಆದರೆ ಹೆಂಡತಿಯಿಂದ ಬಚಾವಾಗುವದು ಮಾತ್ರ ಅಸಾಧ್ಯ!

ಪತಿವ್ರತೆ ಪತ್ನಿ ಯಮನನ್ನೂ ಗೆಲ್ಲಬಲ್ಲಳು ಎನ್ನುವ ಉತ್ತರ ನಿರೀಕ್ಷಿಸಿದ್ದ ಮಾಸ್ತರ್ರು ಢಮಾರ್!

***

ಸ್ವಾಮಿ ಅನುಭವಾನಂದರ ಮಜೇದಾರ್ ಉಪದೇಶಗಳಿಂದ ಎತ್ತಿದ್ದು.

***

ಇಷ್ಟೆಲ್ಲಾ ತಿಳಿದ ಮೇಲೂ ಜೀವನವನ್ನು ಪ್ರಸಾದಬುದ್ಧಿಯಿಂದ ಸ್ವೀಕರಿಸಿಯೇನೇ ಹೊರತು ಪ್ರಸಾದವನ್ನಲ್ಲ.

ನನಗೆ ತಿನ್ನಲು ಕೊಡುವ ದೇವರ ಪ್ರಸಾದಗಳಲ್ಲಿ ಡ್ರೈಫ್ರೂಟ್ಸ್ ಒಂದು ಬಿಟ್ಟರೆ ಬಾಕಿ ಯಾವದೂ ಸೇರುವದಿಲ್ಲ. ಪಂಚಾಮೃತ, ಸತ್ಯನಾರಾಯಣ ಪ್ರಸಾದಗಳ ಬಗ್ಗೆಯಂತೂ ಹೇಳಲೇಬೇಡಿ. ಕೊಡಲಿಕ್ಕಂತೂ ಬರಲೇಬೇಡಿ. U-turn ನಾಮದವರ ದೇವಸ್ಥಾನಗಳಲ್ಲಿ ಕೊಡುವ ಪುಳಿಯೋಗರೆ, ಮೊಸರನ್ನವಂತೂ ವರ್ಜ್ಯ!

ಹೀಗಾಗಿ ನಾವು ಕಿವಿ ಮೇಲೆ ಇಟ್ಟುಕೊಳ್ಳಬಹುದಾದಂತಹ ಹೂವು ಮತ್ತು ಹಚ್ಚಿಕೊಳ್ಳಬಹುದಾದಂತಹ (ಹಣೆಗೆ ಮಾತ್ರ) ಪ್ರಸಾದಗಳಾದ ಕುಂಕುಮ, ವಿಭೂತಿ, ಅಂಗಾರ, ಭಂಡಾರಗಳನ್ನು ಮಾತ್ರ ಸ್ವೀಕರಿಸುತ್ತೇವೆ. ಪೂರ್ತಿ ಪ್ರಸಾದಬುದ್ಧಿಯಿಂದಲೇ ಸ್ವೀಕರಿಸುತ್ತೇವೆ. ಹೀಗಾಗಿ ಗುಡಿಯಿಂದ ಹೊರಬಂದಾಗ ನಾವು KMF (ಕಿವಿ ಮೇಲೆ ಫ್ಲವರ್). ದೊಡ್ಡ ದೇವಸ್ಥಾನದಿಂದ ದೊಡ್ಡ ಪ್ರಸಾದ ತೆಗೆದುಕೊಂಡು ಬರುವಾಗ ಕಿವಿ ಮೇಲೆ ಫುಲ್ ಲಾಲಬಾಗ್ ಗಾರ್ಡನ್ ಇರುತ್ತದೆ! :)

2 comments:

sunaath said...

ಮಹೇಶರೆ,
ಹದಿನೈದು ದಿನ ಊರಲ್ಲಿ ಇರಲಿಲ್ಲ. ಬಂದ ಮೇಲೆ, ನನ್ನ ಗಣಕಯಂತ್ರ ಕೆಟ್ಟುಗೊಂಡು ಕೂತಿತು. ಪ್ರಸಾದ ಸ್ವೀಕರಣೆಗೆ ಎಷ್ಟು ತಡವಾಯಿತು ನೋಡಿರಿ! ಗಣಕಯಂತ್ರವನ್ನು ತೆಗೆಯುವ ಮೊದಲು, ಗಣಪತಿಯ ಪೂಜೆಯನ್ನು ಮಾಡಬೇಕಾಗಿತ್ತೇನೊ? ಇರಲಿ, ಪ್ರಸಾದ ಬಗೆಗೆ ತಕರಾರು ಮಾಡಬಾರದು ಎನ್ನುವುದು ತಿಳಿಯಿತು. ನಾವು ಮಾಡುವ ನೈವೇದ್ಯವೇ, ಪ್ರಸಾದವಾಗಿ ಮರಳಿ ಬರುತಿರುವಾಗ, ತಕರಾರು ಹೇಗೆ ಸಾಧ್ಯ, ಸದ್ಗುರುವೆ?

Mahesh Hegade said...

ಬರೋಬ್ಬರಿ ಹೇಳಿದ್ದೀರಿ ಸುನಾಥ್ ಸರ್!