Friday, September 08, 2017

ಪ್ರತಿಯೊಂದರಲ್ಲೂ ಒಂದು ಅಮೂಲ್ಯ ವಜ್ರವಿತ್ತು...ಅನುಭವಾಮೃತ

ರಾಜಾ ವಿಕ್ರಮಾದಿತ್ಯನಿಗೆ ಒಬ್ಬ ಗುರುವಿದ್ದ. ಗುರು ಎಂದರೆ ರಾಜಗುರುವಲ್ಲ. ಒಂದು ತರಹದ ಫಕೀರ. ಸದಾ ಕಾಡುಮೇಡು ಅಲೆದುಕೊಂಡಿರುತ್ತಿದ್ದ. ಆದರೆ ತಪ್ಪದೆ ಪ್ರತಿದಿನವೂ ರಾಜನನ್ನು ಭೇಟಿ ಮಾಡುತ್ತಿದ್ದ. ತಾನು ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಸಂಗ್ರಹಿಸಿದ ಹಣ್ಣೊಂದನ್ನು ರಾಜನಿಗೆ ಪ್ರಸಾದದ ರೂಪದಲ್ಲಿ ಕೊಟ್ಟು ಹೋಗುತ್ತಿದ್ದ. ಗುರುವಿನ ಮೇಲಿನ ಗೌರವದಿಂದ ರಾಜ ಕೂಡ ಗುರು ಕೊಟ್ಟ ಹಣ್ಣನ್ನು ಭಕ್ತಿಯಿಂದ ಸ್ವೀಕರಿಸುತ್ತಿದ್ದ.

ಆ ಹಣ್ಣುಗಳೋ ಕಾಡು ಹಣ್ಣುಗಳು. ನೋಡಲು ವಕ್ರವಕ್ರವಾಗಿ ಇರುತ್ತಿದ್ದವು. ಕೆಲವೊಂದನ್ನು ಹಕ್ಕಿಗಳು ಅರ್ಧಂಬರ್ಧ ತಿಂದಿರುತ್ತಿದ್ದವು. ಕೆಲವು ನೆಲಕ್ಕೆ ಬಿದ್ದು ಘಾಸಿಗೊಂಡಿರುತ್ತಿದ್ದವು. ಯಾವ ರೀತಿಯಿಂದ ನೋಡಿದರೂ ನೋಡಿದಾಕ್ಷಣ, 'ಆಹಾ! ಹಣ್ಣುಗಳು ಎಷ್ಟು ಚೆನ್ನಾಗಿವೆ. ರಸಭರಿತವಾಗಿವೆ!' ಅಂತೇನೂ ಅನ್ನಿಸುತ್ತಿರಲಿಲ್ಲ.

ಮತ್ತೆ ರಾಜಾ ವಿಕ್ರಮಾದಿತ್ಯನಿಗೆ ತಿನ್ನಬೇಕು ಅಂದರೆ ಹಣ್ಣುಗಳ ಕೊರತೆಯೇ!? ಬೇಕಾದ ವಿಧದ ಒಳ್ಳೊಳ್ಳೆ ಹಣ್ಣುಗಳು ಸದಾ ತುಂಬಿರುತ್ತಿದ್ದವು. ಹೀಗಿರುವಾಗ ಫಕೀರನಂತಹ ಗುರು ಎಲ್ಲೋ ಕಾಡಿನಲ್ಲಿ ಸಿಕ್ಕ ಹಣ್ಣು ತಂದುಕೊಟ್ಟರೆ ರಾಜನೇಕೆ ತಿಂದಾನು? ಗುರುವಿಗೆ ಬೇಸರವಾಗದಿರಲಿ ಎಂದು ತೆಗೆದುಕೊಳ್ಳುತ್ತಿದ್ದ. ಗುರು ಆಚೆ ಹೋದಾಕ್ಷಣ ತಿರುಗಿ ಕೂಡ ನೋಡದೆ ಆ ಹಣ್ಣುಗಳನ್ನು ಎಸೆಯುತ್ತಿದ್ದ. ಅವು ಹೋಗಿ ಸಿಂಹಾಸನದ ಪಕ್ಕದಲ್ಲಿದ್ದ ನೆಲಮಾಳಿಗೆಯೊಂದರಲ್ಲಿ ಬೀಳುತ್ತಿದ್ದವು.

ತುಂಬಾ ದಿನ ಹೀಗೆಯೇ ನಡೆದಿತ್ತು. ಒಂದು ದಿನ ಎಂದಿನಂತೆ ರಾಜ ಗುರು ಕೊಟ್ಟ ಹಣ್ಣನ್ನು ಎಸೆಯುವದರಲ್ಲಿದ್ದ. ಆಗ ಅಲ್ಲಿಯೇ ಇದ್ದ ರಾಜ ಸಾಕಿದ್ದ ಮಂಗವೊಂದು ಹಣ್ಣನ್ನು ಬೇಡಿತು. ಸಾಕುಪ್ರಾಣಿಯ ಮೇಲಿನ ಪ್ರೀತಿಯಿಂದ ರಾಜ ಆ ಹಣ್ಣನ್ನು ಎಸೆಯುವದರ ಬದಲಾಗಿ ಮಂಗನಿಗೆ ಕೊಟ್ಟ.

ತಿನ್ನಲೆಂದು ಆ ಮಂಗ ಹಣ್ಣನ್ನು ಒಡೆಯಿತು. ಒಳಗೆ ನೋಡಿದರೆ ಒಂದು ವಜ್ರ! ಅಮೂಲ್ಯ ವಜ್ರ! ಫಳ ಫಳ ಹೊಳೆಯುತ್ತಿದೆ. ಆ ವಜ್ರದ ಪ್ರಕಾಶ ರಾಜನ ಅರಮನೆಯಲ್ಲವನ್ನೂ ಬೆಳಗಿತು.

ರಾಜನಿಗೆ ಏನೋ ಹೊಳೆಯಿತು. ಗಡಬಡಾಯಿಸಿ ನೆಲಮಾಳಿಗೆಯತ್ತ ಧಾವಿಸಿದ. ಅಲ್ಲಿ ಹಿಂದೆ ಎಸೆದಿದ್ದ ಗುರು ಪ್ರಸಾದ ರೂಪದಲ್ಲಿ ಕೊಟ್ಟಂತಹ ಹಣ್ಣುಗಳು ಬಿದ್ದಿದ್ದವು. ಒಂದನ್ನು ಎತ್ತಿಕೊಂಡ. ಒಡೆದು ನೋಡಿದ. ಅದರಲ್ಲೂ ಒಂದು ಅಮೂಲ್ಯ ವಜ್ರವಿತ್ತು. ಮತ್ತೊಂದು ಹಣ್ಣನ್ನು ಒಡೆದು ನೋಡಿದ. ಅದರಲ್ಲೂ ಒಂದು ವಜ್ರ. ಚೆನ್ನಾಗಿಲ್ಲ ಎಂದು ಎಸೆದಿದ್ದ ಪ್ರತಿಯೊಂದು ಕಾಡಿನ ಹಣ್ಣಿನಲ್ಲೂ ಒಂದೊಂದು ಅಮೂಲ್ಯ ವಜ್ರವಿತ್ತು.

ರಾಜಾ ವಿಕ್ರಮಾದಿತ್ಯನಿಗೆ ತನ್ನ ಮೇಲೆ ತನಗೇ ಬೇಸರವಾಯಿತು. ನಾಚಿಗೆಯಾಯಿತು. ಗುರುವು ಪ್ರತಿದಿನ ಅಷ್ಟೊಂದು ಪ್ರೀತಿಯಂದ ತಂದುಕೊಡುತ್ತಿದ್ದ ಹಣ್ಣುಗಳನ್ನು ಅವು ಕಾಡಿನ ಹಣ್ಣುಗಳು, ಏನೂ ಚೆನ್ನಾಗಿಲ್ಲ ಎಂದು ಭಾವಿಸಿ ಎಸೆದಿದ್ದರ ಬಗ್ಗೆ ಪಶ್ಚಾತ್ತಾಪವಾಯಿತು. ಗುರುವನ್ನು ಕಂಡು, ವಿಷಯವನ್ನು ನಿವೇದಿಸಿಕೊಂಡು, ಕ್ಷಮೆ ಕೇಳಿ ಬರೋಣ ಎಂದು ಕುದುರೆಯನ್ನೇರಿ ಕಾಡಿನತ್ತ ತೆರಳಿದ.

ಕಾಡಿನಲ್ಲಿ ಗುರುವನ್ನು ಭೇಟಿಯಾದ. ವಿಷಯವನ್ನು ಹೇಳಿದ. ತನ್ನ ವರ್ತನೆಗಾಗಿ ಕ್ಷಮೆ ಕೇಳಿದ.

ಪ್ರೀತಿಯಿಂದ ಆಶೀರ್ವದಿಸಿದ ಗುರು ಮುಗುಳ್ನಗುತ್ತ ಕೇಳಿದ, 'ಈ ಘಟನೆಯಿಂದ ಏನು ಪಾಠ ಕಲಿತೆ ರಾಜ?'

'ಕೇವಲ ಮೇಲ್ನೋಟಕ್ಕೆ ಚೆನ್ನಾಗಿಲ್ಲ. ನೋಡಲು ಆಕರ್ಷಕವಾಗಿಲ್ಲ ಎಂದು ಯಾವುದನ್ನೂ ತಿರಸ್ಕರಿಸಬಾರದು. ಈ ಪಾಠ ಕಲಿತೆ ಗುರುವರ್ಯ,' ಎಂದ ರಾಜ.

'ಅಷ್ಟೇನಾ? ಮತ್ತೇನನ್ನೂ ಕಲಿಯಲಿಲ್ಲವೇ?' ಎಂದು ಕೇಳಿದ ಗುರು.

ರಾಜನಿಗೆ ಮತ್ತೇನೂ ಹೊಳೆಯಲಿಲ್ಲ.

ಗುರುವೇ ಹೇಳಿದ. 'ಜೀವನದ ಅನೇಕ ಅನುಭವಗಳೂ ಹೀಗೇ ಇರುತ್ತವೆ. ಈ ಕಾಡಿನ ಹಣ್ಣುಗಳಂತೆ. ಹೊರಗಿನಿಂದ ನೋಡಲು ಚೆನ್ನಾಗಿರುವದಿಲ್ಲ. ಹಾಗಾಗಿ ಒಮ್ಮೆಲೇ ಇಷ್ಟವಾಗುವದಿಲ್ಲ. ಆದರೆ ತಾಳ್ಮೆಯಿಂದ, ವ್ಯವಧಾನದಿಂದ ಪರೀಕ್ಷಿಸಿ ನೋಡಿದರೆ ಪ್ರತಿಯೊಂದು ಅನುಭವದಲ್ಲೂ ಒಂದೊಂದು ಅಮೂಲ್ಯ ವಜ್ರವಿರುತ್ತದೆ. ಎಲ್ಲರಿಗೂ ಹಲವಾರು ಅನುಭವಗಳಾಗುತ್ತವೆ. ಅನೇಕ ಅನುಭವಗಳು ಇಷ್ಟವಾಗುವದಿಲ್ಲ. ಕೆಲವೊಂದರಿಂದ ತುಂಬಾ ದುಃಖವೂ ಆಗಬಹುದು. ನಾವು ಅನುಭವಗಳಲ್ಲಿ ಅಡಗಿರುವ ಅಮೂಲ್ಯ ವಜ್ರಗಳಂತಹ ಪಾಠವನ್ನು ಕಲಿಯಲು ಹೋಗುವದೇ ಇಲ್ಲ. ನೀನು ಕಾಡಿನ ಹಣ್ಣು ಎಂದು ನಿರ್ಲಕ್ಷಿಸಿ ಉಪೇಕ್ಷೆಯಿಂದ ಎಸೆದಂತೆ ನಾವು ಅನುಭವಗಳನ್ನೂ ಎಸೆದುಬಿಡುತ್ತೇವೆ. ಮುಂದೆ ಅವು ದುಃಖಗಳಾಗಿ ಕಾಡಬಹುದೇ ಹೊರತೂ ಮತ್ತೇನನ್ನೂ ಮಾಡುವದಿಲ್ಲ. ಬುದ್ಧಿವಂತನಾದವನು ಯಾವದೇ ಅನುಭವವನ್ನೂ ನಿರ್ಲಕ್ಷಿಸದೇ, ಸಮಚಿತ್ತದಿಂದ ಅವುಗಳ ಬಗ್ಗೆ ವಿಚಾರ ಮಾಡಿ, ಅವುಗಳನ್ನು ಕಲಿಯಬಹುದಾದ ಪಾಠಗಳನ್ನು ಕಲಿತು, ಸಾರವನ್ನು ಹೀರಿ ಮತ್ತೂ ಪ್ರಬುದ್ಧನಾಗುತ್ತಾನೆ. ಹಾಗಾಗಿಯೇ ಅನುಭವಾಮೃತ ಅನ್ನುವದು. ಕಲಿಯಬೇಕಾದ ಪಾಠ ಕಲಿತರೆ ಪತ್ರಿಯೊಂದು ಅನುಭವವೂ ಅಮೃತ ಸಮಾನ.'

ಗುರುವಿನ ಮಾತು ಕೇಳಿದ ರಾಜಾ ವಿಕ್ರಮಾದಿತ್ಯ ತಲೆದೂಗಿದ. ಆಗುವ ಅನುಭಗಳನ್ನು ನಿರ್ಲಕ್ಷಿಸದೇ ಸಮಚಿತ್ತದಿಂದ ಅವುಗಳನ್ನು ವಿಶ್ಲೇಷಿಸಿ ಅವುಗಳಲ್ಲಿ ಅಡಗಿರುವ ಅಮೂಲ್ಯ ಪಾಠಗಳನ್ನು ಕಲಿಯುವದಾಗಿ ಹೇಳಿ, ಗುರುವಿಗೆ ವಂದನೆಗಳನ್ನು ಅರ್ಪಿಸಿ ಮರಳಿದ.

ಸ್ವಾಮಿ ಸುಖಬೋಧಾನಂದರ Personal Excellence Through The Bhagavadgita ಅನ್ನುವ ಪುಸ್ತಕದಲ್ಲಿ ಓದಿದ ಕಥೆ ಇದು.

ಅನುಭವಗಳು ಒಳ್ಳೆಯವವೋ ಕೆಟ್ಟವೋ, ಇಷ್ಟವಾದವೋ ಕಷ್ಟವಾದವೋ....ಹೇಗೇ ಇರಲಿ, ಅವುಗಳಿಂದ ಪಾಠ ಕಲಿಯಬೇಕು. Every cloud has a silver lining ಅನ್ನುವ ಹಾಗೆ ಅದೆಂತಹ horrible ಅನುಭವವಾದರೂ ಅದರಲ್ಲೂ ಕೂಡ ಒಂದು ಅಮೂಲ್ಯ ವಜ್ರ, ಅನುಭವಾನುಮೃತ ಇದ್ದೇ ಇರುತ್ತದೆ. ಇದು ದೊಡ್ಡವರು ಹೇಳುವ ಮಾತು.

ಇದೆಲ್ಲ ಹೇಳಲು ಕೇಳಲು ಮಾತ್ರ ಚೆನ್ನಾಗಿರುತ್ತದೆ. ಆದರೆ ಪಾಲಿಸುವದು ಕಷ್ಟ ಎಂದು ಅನ್ನಿಸಿದರೆ ತಪ್ಪೇನಿಲ್ಲ. ಮತ್ತೆ ಕೆಲವು ಆಘಾತಕಾರಿ ಅನುಭವಗಳಿಂದ ಅದೆಂತಹ ನೀತಿ ಪಾಠ ಕಲಿಯಲು ಸಾಧ್ಯ? ಅವುಗಳನ್ನು ಮರೆತರೆ ಸಾಕಾಗಿರುತ್ತದೆ.

ಹೀಗೆ ಯೋಚಿಸುತ್ತ ಕುಳಿತಾಗ ಎಲ್ಲೋ ಓದಿದ ಒಂದು ಘಟನೆ ನೆನಪಾಯಿತು. ಅದರ ಸಾರಾಂಶ ಇಷ್ಟು.

ಅವರೊಬ್ಬ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್. ಇಸ್ಲಾಮ್ ಧರ್ಮದವರು. ಅವರಿಗೊಬ್ಬ ಏಳೆಂಟು ವರ್ಷದ ಮಗ. ಏನೋ ಅನಾರೋಗ್ಯವಾಗಿ ಒಮ್ಮೆಲೇ ಸತ್ತುಹೋದ. ಎಲ್ಲರಿಗೂ ತುಂಬಾ ದುಃಖವಾಯಿತು. ಅವರ ಆಪ್ತರು ಮನೆಗೆ ಹೋಗಿ ಸಂತಾಪ ಸೂಚಿಸಿದರೆ ಪ್ರೊಫೆಸರ್ ಹೇಳಿದ ಮಾತು -  'ನಾನು ನಂಬಿದ್ದ ಅಲ್ಲಾಹುವೇ ಮಗನ ರೂಪದಲ್ಲಿ ಬಂದಿದ್ದ. ಎಂಟು ವರ್ಷ ಇದ್ದ. ಅಲ್ಲಾಹು ನನ್ನ ಮಗನಾಗಿ ಎಂಟು ವರ್ಷ ನಮ್ಮೆಲ್ಲರ ಜೊತೆ ಇದ್ದ ಬಗ್ಗೆ ತುಂಬಾ ಸಂತಸವಿದೆ. ದೇವರು ಅಂದ ಮೇಲೆ ಒಂದೇ ಕಡೆ ಇರಲು ಸಾಧ್ಯವೇ? ಅದೆಷ್ಟು ಮಂದಿ ಭಕ್ತರ ಕೋರಿಕೆ ಇದೆಯೋ? ಅವನ್ನು ತೀರಿಸಲು ಮತ್ತೊಂದು ಮನೆಗೆ ಹೋದ ಅಂದುಕೊಂಡೆ ಅಷ್ಟೇ. ನಮಗೆ ಸಿಕ್ಕ ಸುಖ ಸಂತೋಷ ಅವರಿಗೂ ಸಿಗಲಿ!' ಎಂದು ಹೇಳಿ ಕಣ್ಣು ಒರೆಸಿಕೊಂಡರು.

'ಪುತ್ರಶೋಕಂ ನಿರಂತರಂ' ಅಂತ ಮಾತಿದೆ. ಯಾವುದೇ ಪಾಲಕರಿಗೆ ಮಕ್ಕಳನ್ನು ಕಳೆದುಕೊಳ್ಳುವದು most traumatic ಅನುಭವ. ಅಂತಹ ಅತ್ಯಂತ ಕೆಟ್ಟ ಅನುಭವದಲ್ಲೂ ಸಾರ್ಥಕತೆಯನ್ನು ಕಂಡುಕೊಳ್ಳುವದು ಹೇಗೆ ಅನ್ನುವದನ್ನು ಪ್ರೊಫೆಸರ್ ಸಾಹೇಬರು ತೋರಿಸಿಕೊಟ್ಟಿದ್ದರು.

ಮತ್ತೆ ಮತ್ತೊಂದು ಮಾತು. ಹಲವಾರು ಘಟನೆಗಳು ಆಗುತ್ತಿರುತ್ತವೆ. ಅವುಗಳನ್ನು ನಾವು 'ನಮ್ಮದು' ಅಂತ ಮಾಡಿಕೊಂಡಾಗ ಮಾತ್ರ ಅವು ನಮ್ಮ ಅನುಭವಗಳಾಗುತ್ತವೆ. ಅಲ್ಲಿ ಮತ್ತೆ 'ನಾನು, ನನ್ನದು, ನನ್ನಿಂದ' ಅನ್ನುವ ಅಹಂಕಾರ ಬರುತ್ತದೆ. ಹಾಗೆ ನಮ್ಮ ಅಹಂಕಾರದೊಂದಿಗೆ associate ಮಾಡದೇ ಇದ್ದರೆ ಅದೊಂದು ಘಟನೆ ಅಷ್ಟೇ. ಹಾಗಾಗಿ ಅನುಭವಗಳಿಂದ ಪಾಠ ಕಲಿಯುವದು ಉತ್ತಮ. ಅದಕ್ಕಿಂತ ಉತ್ತಮವಾದದ್ದು ಹಿಂದಾಗ ಮತ್ತು ಮುಂದಾಗಲಿರುವ ಘಟನೆಗಳನ್ನು ಘಟನೆಗಳನ್ನಾಗಿಯೇ ಬಿಟ್ಟುಬಿಡುವದು. ನಾನು, ನನ್ನದು, ನನ್ನಿಂದ ಅನ್ನುವ label ಹಚ್ಚಿ ನಮ್ಮ ಅನುಭವಗಳನ್ನಾಗಿ ಮಾಡಿಕೊಳ್ಳಲೇಬಾರದು. Every experiment has an outcome. But, we label the outcome either as success or failure. Similarly incidents happen. When we associate incidents with ourselves they become 'our' experiences.

ಅನುಭವಾಮೃತ ಮಾತ್ರ ಮಿಸ್ ಮಾಡಿಕೊಳ್ಳಬೇಡಿ.

2 comments:

sunaath said...

‘ಅನುಭವವಿದ್ದಲ್ಲಿ ಅಮೃತತ್ವವಿದೆ’.... ಇದು ಪಾಟೀಲ ಪುಟ್ಟಪ್ಪನವರ ವಾರಪತ್ರಿಕೆ ‘ಪ್ರಪಂಚ’ದಲ್ಲಿಯ ಒಂದು ನಿಯತ ಶೀರ್ಷಿಕೆಯಾಗಿತ್ತು.

Mahesh Hegade said...

thanks Sunaath Sir.