Thursday, October 12, 2017

ಭಾವಿಗೆ ಬಿದ್ದ ಚಂದ್ರ

ಮುಲ್ಲಾ ನಸ್ರುದ್ದೀನ್ ಒಮ್ಮೆ ರಾತ್ರಿಯಲ್ಲಿ ನಡೆದು ಬರುತ್ತಿದ್ದ. ರಸ್ತೆ ಪಕ್ಕದಲ್ಲೊಂದು ಭಾವಿಯಿತ್ತು. ಯಾಕೋ ಇಣುಕಿ ನೋಡಿದ. ಭಾವಿಯ ನೀರಿನಲ್ಲಿ ಚಂದ್ರನನ್ನು ಕಂಡ. 

'ಅಯ್ಯೋ! ಚಂದ್ರ ನೀರಿನಲ್ಲಿ ಬಿದ್ದುಬಿಟ್ಟಿದ್ದಾನೆ. ದೊಡ್ಡ ಘಾತವಾಯಿತಲ್ಲ! ಚಂದ್ರನನ್ನು ತಕ್ಷಣ ರಕ್ಷಿಸಬೇಕು!' ಎಂದುಕೊಂಡ ಮುಲ್ಲಾ ನಸ್ರುದ್ದೀನ್. ಅಬ್ಬಾ! ಮುಲ್ಲಾನ ತಲೆಯೇ! ಅದಕ್ಕೊಂದು ದೊಡ್ಡ ಸಲಾಂ.

ಅಲ್ಲೇ ಅಕ್ಕಪಕ್ಕದವರ ಜೊತೆ ಮಾತಾಡಿ ಹೇಗೋ ಒಂದು ಹಗ್ಗ ಮತ್ತು ಅದಕ್ಕೊಂದು ಕೊಕ್ಕೆಯನ್ನು ಸಂಪಾದಿಸಿದ. ಹಗ್ಗದ ತುದಿಗೆ ಕೊಕ್ಕೆಯನ್ನು ಕಟ್ಟಿ ನೀರಿಗೆ ಇಳಿಬಿಟ್ಟ. ಭಾವಿಗೆ ಬಿದ್ದ ಚಂದ್ರನನ್ನು ಕೊಕ್ಕೆಯಿಂದ ಹಿಡಿದು ಮೇಲಕ್ಕೆತ್ತುವ ಪ್ರಯತ್ನ ಶುರುಮಾಡಿದ.

ಚಂದ್ರ ಕೊಕ್ಕೆಗೇನೋ ಸಿಗುತ್ತಿದ್ದ(!?). ಆದರೆ ಹಗ್ಗ ಮೇಲೆಳೆದಾಕ್ಷಣ ಜಾರಿ ಮತ್ತೆ ಭಾವಿಗೆ ಬಿದ್ದುಬಿಡುತ್ತಿದ್ದ. ಆದರೆ ಮುಲ್ಲಾ ನಸ್ರುದ್ದೀನ್ ಜಿದ್ದಿ ಮನುಷ್ಯ. ಅಷ್ಟು ಸುಲಭಕ್ಕೆ ಆಗದು ಎಂದು ಕೆಲಸ ಬಿಡುವವನಲ್ಲ. ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಮತ್ತೆ ಹಗ್ಗ ಇಳಿಬಿಟ್ಟು ಭಾವಿಗೆ ಬಿದ್ದ ಚಂದ್ರನನ್ನು ಮೇಲೆತ್ತಲು ಪ್ರಯತ್ನಿಸಿಯೇ ಪ್ರಯತ್ನಿಸಿದ.

ತುಂಬಾ ಹೊತ್ತಿನ ನಂತರ ಕೊಕ್ಕೆಗೆ ಏನೋ ಬರೋಬ್ಬರಿ ಸಿಕ್ಕಿಕೊಂಡಂತಾಯಿತು. ಸುಲಭವಾಗಿ ಹಗ್ಗವನ್ನು ಮೇಲೆ ಎಳೆಯಲು ಆಗಲಿಲ್ಲ.

'ಏನೋ ಬಹಳ ಭಾರವಾದದ್ದೇ ತಗಲಾಕಿಕೊಂಡಿದೆ. ಇಷ್ಟು ಹೊತ್ತಿನ ವರೆಗೆ ಕೊಕ್ಕೆಗೆ ಸಿಗದೇ ಕಾಡಿದ ಚಂದ್ರ ಈಗ ಸಿಕ್ಕಾಕಿಕೊಂಡಿದ್ದಾನೆ. ಇದೇ ಚಾನ್ಸ್. ಬಿಡಲೇಬಾರದು. ಇದ್ದೆಲ್ಲ ಶಕ್ತಿ ಹಾಕಿ ಎಳೆದೇಬಿಡಬೇಕು,' ಎಂದು ಮುಲ್ಲಾ ಧೃಡ ನಿರ್ಧಾರ ಮಾಡಿದ.

ಭಾವಿ ಕಟ್ಟೆಗೆ ಕಾಲು ಕೊಟ್ಟು, ಅಷ್ಟೂ ಶಕ್ತಿ ಹಾಕಿ, ಹಗ್ಗವನ್ನು ಎಳೆದ. ಕೊಕ್ಕೆ ಸಿಕ್ಕಾಕಿಕೊಂಡಿತ್ತು. ಮತ್ತೂ ಜೋರಾಗಿ ಎಳೆದ. ಎಳೆದ ಅಬ್ಬರಕ್ಕೆ ಹಗ್ಗ ಹರಿದುಕೊಂಡು ಮೇಲೆ ಬಂತು. ಹಗ್ಗ ಹರಿದು ಮೇಲೆ ಬಂದ ಅಬ್ಬರಕ್ಕೆ ಮುಲ್ಲಾ ನಸ್ರುದ್ದೀನ್ ಹಿಂದೆ ಸರಿದುಹೋಗಿ ಕುಸಿದು ಬಿದ್ದ.

ಬೆನ್ನು ನೆಲಕ್ಕೆ ಊರಿತ್ತು. ತಲೆ ನೆಲಕ್ಕೆ ಬಡಿದಿತ್ತು. ಒಂದು ಕ್ಷಣ ಕಣ್ಣಿಗೆ ಕತ್ತಲೆ ಬಂದಂತಾಯಿತು. ನಂತರ ಪ್ರಜ್ಞೆ ವಾಪಸ್ ಬಂತು. ನೆಲದ ಮೇಲೆ ಬಿದ್ದವ ಸಹಜವಾಗಿ ಕಣ್ತೆರೆದು ಮೇಲೆ ನೋಡಿದ. ಬಾನಿನಲ್ಲಿ ಚಂದ್ರ ನಗುತ್ತಿದ್ದ. ಅದನ್ನು ನೋಡಿದ ಮುಲ್ಲಾ ಸಂತುಷ್ಟನಾದ.

'ಭಾವಿಯಲ್ಲಿ ಬಿದ್ದಿದ್ದ ಚಂದ್ರನನ್ನು ರಕ್ಷಿಸಿಬಿಟ್ಟೆ. ನಾ ಎಳೆದ ಅಬ್ಬರಕ್ಕೆ ಭಾವಿಯಿಂದ ಮೇಲೆ ಬಂದ ಚಂದ್ರ ಮತ್ತೆ ಆಕಾಶಕ್ಕೆ ಹೋಗಿ ಅಲ್ಲಿ ಸ್ಥಾಪಿತನಾಗಿದ್ದಾನೆ. ನನ್ನ ಉಪಕಾರಕ್ಕೆ ಧನ್ಯವಾದ ಹೇಳುವವನಂತೆ ಮುಗುಳ್ನಗುತ್ತಿದ್ದಾನೆ'' ಎಂದುಕೊಂಡು ಮೈಕೈ ಕೊಡವಿಕೊಂಡು ತನ್ನ ದಾರಿ ಹಿಡಿದು ಹೋದ.

ಅಸಲಿಗೆ ಏನಾಗಿತ್ತು? ಕೊಕ್ಕೆ ಭಾವಿಯಲ್ಲಿನ ಕಲ್ಲಿಗೆ ಸಿಕ್ಕಾಕಿಕೊಂಡಿತ್ತು. ಜೋರಾಗಿ ಎಳೆದಾಗ ಹಗ್ಗ ತುಂಡಾಯಿತು. ಮುಲ್ಲಾ ನೆಲಕ್ಕುರುಳಿದ್ದ. ಕಣ್ಬಿಟ್ಟಾಗ ಮೇಲೆ ಮೇಲೆ ಚಂದ್ರ ಕಂಡಿದ್ದ.

ಈ ಕಥೆ ತುಂಬಾ ಸಿಲ್ಲಿ ಎನ್ನಿಸಬಹುದು. ಇಷ್ಟು ಬಾಲಿಶವಾದ ಮೌಢ್ಯ ಕಂಡು ಮುಲ್ಲಾ ನಸ್ರುದ್ದೀನನನ್ನು ಗೇಲಿ ಮಾಡಿ ನಗಬಹದು. ಆದರೆ ನಮ್ಮ ಮೌಢ್ಯವೇನೂ ಕಮ್ಮಿಯಿಲ್ಲ.

ಮುಕ್ತಿಗಾಗಿ (enlightenment) ಸಾಧನೆ ಮಾಡುವದೆಂದರೆ ಭಾವಿಗೆ ಬಿದ್ದ ಚಂದ್ರನನ್ನು ಮೇಲೆ ಎತ್ತಿದಂತೆ. How absurd!

ಚಂದ್ರ ಆಕಾಶದಲ್ಲೇ ಇದ್ದಾನೆ, ಭಾವಿಯಲ್ಲಿ ಕಾಣುವದು ಕೇವಲ ಪ್ರತಿಬಿಂಬ ಎಂದು ಮೊದಲೇ ಅರಿವಾಗಿಬಿಟ್ಟರೆ ಹಗ್ಗ ತಂದು, ಕೊಕ್ಕೆ ಹಾಕಿ, ಇದ್ದಬಿದ್ದ ಶಕ್ತಿಯನ್ನೆಲ್ಲ ಬಸಿದು ಚಂದ್ರನನ್ನು ಮೇಲೆ ತೆಗೆಯುವ ಕೆಲಸಕ್ಕೆ ಯಾರೂ ಇಳಿಯುವದಿಲ್ಲ. ಪರಮಾತ್ಮನೇ ಆದ ಜೀವಾತ್ಮ ನಾವು. ಪರಮಾತ್ಮನ ಪ್ರತಿಬಿಂಬ ಅಜ್ಞಾನವೆಂಬ ಭಾವಿಯಲ್ಲಿ ಜೀವಾತ್ಮ ರೂಪದಲ್ಲಿ ಕಾಣುತ್ತದೆ ಅಷ್ಟೇ ಎಂದು ಖಡಕ್ಕಾಗಿ ತಿಳಿದುಬಿಟ್ಟರೆ ಸಾಧನೆಯ ಅವಶ್ಯಕತೆಯೇ ಇರುವದಿಲ್ಲ. paradoxically ನಾವು ನಿತ್ಯಮುಕ್ತರು, ಬಂಧಿತರಲ್ಲ ಎಂದು ನಮಗೆ ಅರಿವಾಗುವದಿಲ್ಲ. ಅದೇ ಅಜ್ಞಾನ. so called ಸಾಧನೆ ಕೂಡ ಅದೇ ಅಜ್ಞಾನದ / ಮಾಯೆಯ ಪರಿಧಿಯಲ್ಲೇ ಬರುತ್ತದೆ.

ಹಾಗಾದರೆ ಅಧ್ಯಾತ್ಮ ಸಾಧನೆ ಮಾಡಬೇಕೋ ಬೇಡವೋ ಅಂತ ಪ್ರಶ್ನೆ ಬಂದರೆ ಉತ್ತರಿಸಲು ಮತ್ತೊಂದು ಕಥೆ ಕೇಳಿ.

ಒಮ್ಮೆ ಶಿಷ್ಯನೊಬ್ಬ ಗುರುಗಳ ಹತ್ತಿರ ಕೇಳಿದ, 'ಜ್ಞಾನೋದಯವಾಗಲು (ಮುಕ್ತಿ ಸಿಗಲು) ಏನು ಮಾಡಬೇಕು?'

'ಸೂರ್ಯೋದಯವಾಗಲು ಏನು ಮಾಡಬೇಕೋ ಅಷ್ಟು ಮಾಡು ಸಾಕು,' ಅಂದರು ಗುರುಗಳು.

'ಸೂರ್ಯೋದಯವಾಗಲು ನಾನು ಏನೂ ಮಾಡಬೇಕಿಲ್ಲ. ಅದು ತಾನಾಗೇ ಆಗುತ್ತದೆ!' ಅಂದ ಶಿಷ್ಯ.

'ಜ್ಞಾನೋದಯವೂ ಅಷ್ಟೇ. ಅದಾಗೇ ಆಗುತ್ತದೆ. ಬಿಡು,' ಅಂದು ಎದ್ದರು ಗುರುಗಳು.

'ಹಾಗಾದರೆ ಈ ಧ್ಯಾನ, ಜಪ, ಪೂಜೆ, ಪುನಸ್ಕಾರ ಇತ್ಯಾದಿ ಯಾಕೆ?' ಎಂದು ಕೇಳಿದ ಶಿಷ್ಯ.

'ಸೂರ್ಯೋದಯವು ತಂತಾನೇ ಆದರೂ ಅದನ್ನು ನೋಡಬೇಕು ಅಂದರೆ ಅಷ್ಟೊತ್ತಿಗೆ ನಿದ್ದೆಯಿಂದ ಎದ್ದಿರಬೇಕಾಗಿರುತ್ತದೆ. ಅದಕ್ಕಾಗಿ ಗಡಿಯಾರ ಉಪಯೋಗಿಸಬಹುದು. ಹೇಗೆ ಗಡಿಯಾರವು ನಿನ್ನನ್ನು ಸೂರ್ಯೋದಯದ ಸಮಯಕ್ಕೆ ಎಬ್ಬಿಸಿ ಸೂರ್ಯೋದಯವನ್ನು ನೋಡುವಂತೆ ಮಾಡುತ್ತದೆಯೋ ಹಾಗೇ ಅಧ್ಯಾತ್ಮ ಸಾಧನೆಗಳು (ಧ್ಯಾನ, ಜಪ ಇತ್ಯಾದಿ) ನಿನಗೆ ಜ್ಞಾನೋದಯವಾದಾಗ ಅದನ್ನು ತಿಳಿಯಲು ಸಹಾಯಕಾರಿ. ಅಷ್ಟು ಬಿಟ್ಟರೆ ಜಾಸ್ತಿ ಉಪಯೋಗವಿಲ್ಲ. ಜ್ಞಾನೋದಯ ಅದರ ಪಾಡಿಗೆ ಅದಾಗುತ್ತಿರುತ್ತದೆ,' ಎಂದರು ಗುರುಗಳು.

ಮುಲ್ಲಾ ನಸ್ರುದ್ದೀನನ ಕಥೆಯನ್ನು ಉಪಯೋಗಿಸಿ ಅದ್ವೈತದ ಪ್ರಕಾರ ಮುಕ್ತಿಯ (enlightenment) ಸಾರವನ್ನು ಹೇಳಿದವರು ಸ್ವಾಮಿ ಪರಮಾರ್ಥಾನಂದರು. ಅವರಿಗೊಂದು ಹಾಟ್ಸ್ ಆಫ್. Ultimate interpretation! Gist is - there is nothing to do. YOU are already free. But, till you know that you are free, you need to do rituals and practices! That's the paradox and the riddle.

ಬಂಧಿತರಾಗಿಯೇ ಇಲ್ಲವೆಂದ ಮೇಲೆ ಮುಕ್ತಿಯ ಪ್ರಶ್ನೆಯೇ ಬರುವದಿಲ್ಲ. ಬಂಧಿತರಾಗಿದ್ದೇವೆ ಎಂಬ ತಪ್ಪು ತಿಳುವಳಿಕೆಗೆ ಕಾರಣ ಅಜ್ಞಾನ. ಚಂದ್ರ ಭಾವಿಯಲ್ಲಿ ಬಿದ್ದಿದ್ದಾನೆ ಎಂದುಕೊಂಡಂತೆ.

ಇಂತಹ ದೃಷ್ಟಾಂತಗಳನ್ನು (metaphor) ತುಂಬಾ literally ಆಗಿ ತೆಗೆದುಕೊಳ್ಳಬೇಡಿ. ಅವುಗಳ ಉದ್ದೇಶ ಅದಲ್ಲ. ಅವು ಅಂತಿಮ ಜ್ಞಾನದೆಡೆಗಿನ ಮಾರ್ಗಸೂಚಿಗಳು ಅಷ್ಟೇ. ಓದಿದಾಗ 'ಆಹಾ!' ಅನ್ನುವಂತಹ epiphany ತರಹದ್ದು ಆದರೆ ಅವುಗಳ ಉದ್ದೇಶ ಸಾರ್ಥಕ. ಆಗಲಿಲ್ಲ ಅಂದರೆ ನಾವಿನ್ನೂ ಆ ಮಟ್ಟಕ್ಕೆ ಹೋಗಿಲ್ಲ, ಬೌದ್ಧಿಕವಾಗಿ ತಯಾರಾಗಿಲ್ಲ ಎಂದರ್ಥ. ಪ್ರಯತ್ನ ಮುಂದುವರೆಯಲಿ. ಮುಂದೊಮ್ಮೆ ಸರಿಯಾದ ಸಮಯದಲ್ಲಿ ಬರೋಬ್ಬರಿ ಅರ್ಥವಾಗುತ್ತದೆ.

ಮಾಹಿತಿ ಆಧಾರ: The book of ONE by Dennis Waite

**

ಒಮ್ಮೊಮ್ಮೆ ಈ coincidences ಎಷ್ಟು ಮಜವಾಗಿರುತ್ತವೆ ಅಂದರೆ....ಬಿಂಬ ಪ್ರತಿಬಿಂಬಗಳ ಬಗ್ಗೆ ಬರೆದು YouTube ಮೇಲೆ ಕಣ್ಣಾಯಿಸಲು ಹೋದರೆ ಮತ್ತೊಂದು ಅದ್ವೈತದ ದೃಷ್ಟಾಂತ ಅಚಾನಕ್ಕಾಗಿ ಕಣ್ಣಿಗೆ ಬೀಳಬೇಕೇ!?

ಕೆಳಗೆ ಹಾಕಿದ ವಿಡಿಯೋದಲ್ಲಿ ಹಕ್ಕಿಯೊಂದು ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ಕಂಡು ಹೇಗೆ ವರ್ತಿಸುತ್ತಿದೆ ನೋಡಿ.

ಅದು ತನ್ನದೇ ಪ್ರತಿಬಿಂಬ ಎಂದು ತಿಳಿಯುವಷ್ಟು ಬುದ್ಧಿ ಆ ಹಕ್ಕಿಗೆ ಇಲ್ಲ ಅನ್ನುವ ನಮಗೆಷ್ಟು ಬುದ್ಧಿಯಿದೆ? ಜಗತ್ತೆಂಬುದು ಮಾಯೆ ಎಂಬ ಕನ್ನಡಿಯಲ್ಲಿ ಕಾಣುವ ಭಗವಂತನ ಪ್ರತಿಬಿಂಬ ಅಷ್ಟೇ ಎನ್ನುವ ವಿವೇಕ ನಮಗೂ ಮೂಡುವದೇ ಇಲ್ಲ. ನಾವೂ ಸಹ ಆ ಹಕ್ಕಿಯಂತೆ ಪ್ರತಿಬಿಂಬದೊಂದಿಗೆ (ಜಗತ್ತೆಂಬ ಮಿಥ್ಯೆಯೊಂದಿಗೆ) ಗುದ್ದಾಡುತ್ತಲೇ ಇರುತ್ತೇವೆ. ವ್ಯಾವಹಾರಿಕ ನೆಲೆಗಟ್ಟಿನಲ್ಲಿ ಗುದ್ದಾಟ ಅವಶ್ಯಕವಿರಬಹದು. ಆದರೆ ಜಗತ್ತು, ಅದರೊಂದಿಗಿನ ಗುದ್ದಾಟವೆಲ್ಲ ಪರಮಸತ್ಯ ಎಂದು ತಿಳಿದು ಗುದ್ದಾಡುತ್ತೇವಲ್ಲ ಅದು ಅಜ್ಞಾನ.

ಇದ್ಯಾಕೋ 'ಕರ್ಮಣ್ಯೇ ವಾಧಿಕಾರಸ್ತೇ' ಕಡೆ ಹೊರಟಿತು.... :) ಸಾಕು. ಬೇರೊಂದು ಬ್ಲಾಗ್ ಪೋಸ್ಟಿಗೆ ವಸ್ತು ಬೇಕಲ್ಲ!? :)

ಹಕ್ಕಿಯ ಈ ದೃಷ್ಟಾಂತವನ್ನು ಸ್ವಾಮಿ ಅನುಭವಾನಂದಜೀ ಸದಾ ಹೇಳುತ್ತಿರುತ್ತಾರೆ. ಈ ಹಕ್ಕಿಗೊಂದು ಥ್ಯಾಂಕ್ಸ್! :)

 

2 comments:

sunaath said...

ಮಹೇಶರೆ, ಜ್ಞಾನಿಗಳ ಬೆಳಕು ನಿಮ್ಮ ಕನ್ನಡಿಯಲ್ಲಿ ಪ್ರತಿಫಲಿಸಿ, ನಮ್ಮೆಡೆಗೆ ಬರುತ್ತಿರುವುದು ಸಂತಸದ ಸಂಗತಿ. ನನ್ನ ಮನದ ಕತ್ತಲೆಯು ಅಷ್ಟಿಷ್ಟಾದರೂ ಕಳೆಯಲಿ. ಧನ್ಯವಾದಗಳು.

Mahesh Hegade said...

ಧನ್ಯವಾದಗಳು ಸರ್. ದೊಡ್ಡ ಮಾತು.

ನಮ್ಮ ಕನ್ನಡಿಯ ಮೇಲಿನ ಧೂಳು ಮಹಾತ್ಮರ ಕೃಪೆಯಿಂದಾಗಿ ಎಷ್ಟೋ ಕಮ್ಮಿಯಾಗಿ ಪ್ರತಿಫಲನ ಜಾಸ್ತಿಯಾಗಲಿ ಅಂತ ನಮ್ಮ ಪ್ರಾರ್ಥನೆ! :)