Saturday, October 07, 2017

ಜನಕನ ಸಂದೇಹ

ರಾತ್ರಿ ಮಲಗಿದ್ದಾಗ ಜನಕ ಮಹಾರಾಜನಿಗೆ ಕನಸೊಂದು ಬಿತ್ತು. ಕನಸಿನಲ್ಲಿ ಜನಕ ಮಹಾರಾಜ ಭಿಕ್ಷುಕನಾಗಿಬಿಟ್ಟಿದ್ದ! ಆ ದುಃಸ್ವಪ್ನ ಜನಕ ಮಹಾರಾಜನನ್ನು ನಿದ್ದೆಯಿಂದ ಬಡಿದೆಬ್ಬಿಸಿತು. ಬೆಚ್ಚಿಬಿದ್ದು ಎದ್ದು ನೋಡಿದರೆ ಕೇವಲ ಕನಸು. ಜನಕ ಮಹಾರಾಜ ಎಂದಿನಂತೆ ಮಹಾರಾಜನಾಗಿಯೇ ಇದ್ದ. ಭವ್ಯ ಅರಮನೆಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆಯೇ ಮಲಗಿದ್ದ. ಸೇವಕರು, ಪರಿಚಾರಕರು ಎಲ್ಲ ಇದ್ದರು. ರಾಜೋಪಚಾರವೆಲ್ಲ ಯಥಾವತ್ತಾಗಿ ನಡೆಯುತ್ತಲೇ ಇತ್ತು.

ಯಾರೋ ಬೇರೆಯವರಾಗಿದ್ದರೆ 'ಅಯ್ಯೋ! ಅದೊಂದು ಕನಸು ಅಷ್ಟೇ. ಕನಸಿನಲ್ಲಿ ಭಿಕ್ಷುಕನಾಗಿದ್ದೆ. ವಾಸ್ತವದಲ್ಲಿ ರಾಜನಾಗಿಯೇ ಇದ್ದೇನೆ. ಆಕಸ್ಮಾತ ಬಿದ್ದ ಕನಸಿನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ,' ಎಂದು ಸುಮ್ಮನಾಗುತ್ತಿದ್ದರೋ ಏನೋ.

ಆದರೆ ಅವನು ಜನಕ ಮಹಾರಾಜ. ದೊಡ್ಡ ಜಿಜ್ಞಾಸು. ಸಾಕಷ್ಟು ಅಧ್ಯಾತ್ಮ ಓದಿಕೊಂಡಿದ್ದ. ಸಾಧನೆ ಮಾಡಿದ್ದ. ರಾಜರ್ಷಿ ಅನ್ನಿಸಿಕೊಂಡಿದ್ದ. ಹಾಗಾಗಿ ಜನಕ ವಿಚಾರ ಮಾಡಿದ - 'ನಾನು ಯಾರು? ನಿಜವಾಗಿಯೂ ಮಹಾರಾಜನಾಗಿದ್ದವನು ಭಿಕ್ಷುಕನ ಕನಸನ್ನು ಕಂಡೆನೋ? ಅಥವಾ ನಿಜವಾಗಿಯೂ ಭಿಕ್ಷುಕನಾಗಿದ್ದವನು ಈಗ ಮಹಾರಾಜನ ಕನಸನ್ನು ಕಾಣುತ್ತಿದ್ದೆನೋ?'

ರಾಜನೋ ಅಥವಾ ಭಿಕ್ಷುಕನೋ ಎನ್ನುವ ಸಂದೇಹ ಬಗೆಹರಿಯಲೇ ಇಲ್ಲ. ಆಸ್ಥಾನದ ಪಂಡಿತರನ್ನು ಕೇಳಿದ. ಇತರೆ ಗುರುಹಿರಿಯರನ್ನು ಕೇಳಿದ. ಎಲ್ಲರೂ ಒಂದೇ ಮಾತು ಹೇಳಿದರು - 'ಮಹಾರಾಜಾ, ಸಂಶಯವೇ ಬೇಡ. ನೀವು ನಿಜವಾಗಿಯೂ ಮಹಾರಾಜರೇ. ಎಂದೋ ಬಿದ್ದ ಕನಸಿನಲ್ಲಿ ಭಿಕ್ಷುಕನಾಗಿ ಕಂಡ ಮಾತ್ರಕ್ಕೆ ಇಷ್ಟ್ಯಾಕೆ ಚಿಂತೆ ಮಾಡುತ್ತಿದ್ದೀರಿ ಎಂದು ನಮಗೆ ತಿಳಿಯದಾಗಿದೆ. ನಿಮ್ಮ ರಾಜ್ಯ, ನಿಮ್ಮ ಸಂಪತ್ತು, ನಿಮ್ಮ ವೈಭವ ಎಲ್ಲ ಇದ್ದಹಾಗೇ ಇರುವದು ತಮಗೇ ಕಾಣುತ್ತಿದೆಯಲ್ಲವೇ? ಯಾಕೆ ಚಿಂತೆ ಮಹಾಸ್ವಾಮಿ? ತಾವು ಜನಕ ಮಹಾರಾಜರೇ. ಚಿಂತೆ ಬಿಡಿ. ಮೊದಲಿನಂತೆ ರಾಜಕಾರ್ಯಗಳಲ್ಲಿ ತಲ್ಲೀನರಾಗಿ ರಾಜ್ಯಭಾರ ಮಾಡಿ,' ಎಂದರು.

ಆದರೂ ಜನಕನಿಗೆ ಸಮಾಧಾನವಾಗಲಿಲ್ಲ. ತುಂಬಾ ಓದಿಕೊಂಡ ಜ್ಞಾನಿಯಾಗಿದ್ದ ನೋಡಿ. ಸದಾ ಕೊರೆಯುತ್ತಿದ್ದುದು ಒಂದೇ ಪ್ರಶ್ನೆ. 'ನಾನು ಯಾರು? ರಾಜನೋ ಅಥವಾ ಭಿಕ್ಷುಕನೋ? ರಾಜನಾಗಿದ್ದುಕೊಂಡು ಭಿಕ್ಷುಕನ ಕನಸನನ್ನು ಕಂಡೆನೋ? ಅಥವಾ ನಿಜವಾಗಿ ಭಿಕ್ಷುಕನಾಗಿದ್ದುಕೊಂಡು ರಾಜನ ಕನಸನ್ನು ಕಾಣುತ್ತಿರುವೆನೋ? ನಾನು ಅಸಲಿನಲ್ಲಿ ಯಾರು??'

ಜನಕನ ಸಂದೇಹವನ್ನು ತುಂಬಾ ದಿನಗಳ ಬಳಿಕ ಅಷ್ಟಾವಕ್ರನೆಂಬ ಮಹಾಜ್ಞಾನಿಯೊಬ್ಬ ಪರಿಹರಿಸಿದ. ಅಷ್ಟಾವಕ್ರ ಕೊಟ್ಟ ಉತ್ತರ ಗುರಿಯನ್ನು ಸರಿಯಾಗಿ ಮುಟ್ಟಿದ ಬಾಣದಂತಿತ್ತು. ಜನಕನ ಸಂದೇಹದ ಮೂಲವನ್ನೇ ಕಿತ್ತೆಸೆಯಿತು. ಜನಕನಿಗೆ ತಾನು ಯಾರೆಂದು ತಿಳಿಯಿತು. ಸಂಶಯ ಶಾಶ್ವತವಾಗಿ ಪರಿಹಾರವಾಯಿತು.

ಅಷ್ಟಾವಕ್ರ ಜನಕನಿಗೆ ಹೇಳಿದ್ದು - 'ನೀನು ರಾಜನೂ ಅಲ್ಲ. ಭಿಕ್ಷುಕನೂ ಅಲ್ಲ. ನೀನು ಪರಮಾತ್ಮನೇ ಆದ ಜೀವಾತ್ಮ. ಇದರ ಬಗ್ಗೆ ಸಂದೇಹ ಬೇಡ!'

ಅಷ್ಟಾವಕ್ರಗೀತಾ ಎಂಬ ಆಧ್ಯಾತ್ಮಿಕ ಗ್ರಂಥದಲ್ಲಿ ಬರುವ ಕಥೆಯಿದು. ಅಷ್ಟಾವಕ್ರ ಎಂಬ ತರುಣ ಸನ್ಯಾಸಿ ಜನಕನ ಆಸ್ಥಾನಕ್ಕೆ ಬರುತ್ತಾನೆ. ದೇಹದ ಎಂಟು ಭಾಗಗಳಲ್ಲಿ ಸಿಕ್ಕಾಪಟ್ಟೆ ಯದ್ವಾತದ್ವಾ ವಕ್ರವಕ್ರವಾಗಿರುತ್ತಾನೆ. ವಾಕಡಾ ನಡೆಯುತ್ತಾ ಆಸ್ಥಾನ ಪ್ರವೇಶಿಸುವ ಅಷ್ಟಾವಕ್ರನನ್ನು ನೋಡಿ ಎಲ್ಲರಿಗೂ ನಗೆ ಬರುತ್ತದೆ. ಅಪಹಾಸ್ಯ ಮಾಡುತ್ತಾರೆ. ಅವರ ಅಪಹಾಸ್ಯಕ್ಕೆ ಒಂದು ಖಡಕ್ ಉತ್ತರ ಕೊಡುವದರೊಂದಿಗೆ ಅಷ್ಟಾವಕ್ರಗೀತಾ ಆರಂಭವಾಗುತ್ತದೆ. ಸ್ವತಃ ದೊಡ್ಡ ಜ್ಞಾನಿಯಾಗಿದ್ದ ಜನಕ ಮಹಾರಾಜ ಅಷ್ಟಾವಕ್ರನ ಪಾಂಡಿತ್ಯವನ್ನು ಬಹುಬೇಗ ಗ್ರಹಿಸುತ್ತಾನೆ. ತನ್ನ ಸಂದೇಹಗಳನ್ನು ಒಂದಾದಮೇಲೊಂದರಂತೆ ಬಗೆಹರಿಸಿಕೊಳ್ಳತೊಡಗುತ್ತಾನೆ.

ಅದ್ವೈತ ವೇದಾಂತದ ತತ್ವಗಳನ್ನು ಪ್ರಖರವಾಗಿ ಪ್ರತಿಪಾದಿಸುವ ಮಹಾನ್ ಗ್ರಂಥಗಳಲ್ಲಿ ಅಷ್ಟಾವಕ್ರಗೀತಾಕ್ಕೆ ದೊಡ್ಡ ಸ್ಥಾನವಿದೆ.

ಸ್ವಾಮಿ ಚಿನ್ಮಯಾನಂದರು, ಶ್ರೀ ಶ್ರೀ ರವಿ ಶಂಕರರು ಮತ್ತೂ ಅನೇಕರು ಈ ಅದ್ಭುತ ಗ್ರಂಥವನ್ನು ಇಂಗ್ಲೀಷು  ಮತ್ತಿತರ ಭಾಷೆಗಳಿಗೆ ತಂದಿದ್ದಾರೆ.

**

ರಾತ್ರಿ ಕಣ್ಣು ಮುಚ್ಚಿಕೊಂಡಾಗ ನೋಡುವದು ಕನಸು. ಹಗಲಿನಲ್ಲಿ ಕಣ್ಣು ಬಿಟ್ಟುಕೊಂಡು ನೋಡುವದು ಕೂಡ ಕನಸೇ. ಅಷ್ಟೇ ಅದಕ್ಕೆ ಜೀವನ, ಜಗತ್ತು ಅಂತೆಲ್ಲ ಲೇಬಲ್ ಅಂಟಿಸಿ ಇಲ್ಲದ ಮಹತ್ವ ಕೊಟ್ಟಿದ್ದೇವೆ. ವಿಶ್ಲೇಷಿಸಿ ನೋಡಿದರೆ ಸ್ವಪ್ನಾವಸ್ಥೆಗೂ, ಜಾಗ್ರತಾವಸ್ಥೆಗೂ ವ್ಯತ್ಯಾಸವಿಲ್ಲ. ರಾತ್ರಿಯ ಕನಸು ವೈಯಕ್ತಿಕ. ಹಗಲಿನ ಕನಸು ಸಾರ್ವತ್ರಿಕ ಅಷ್ಟೇ. ರಾತ್ರಿಯ ಕನಸು ನಮ್ಮ ಮನಸ್ಸಿನ ಸೃಷ್ಟಿ. ಜೀವನವೆಂಬ ಕನಸು ಕೂಡ ನಮ್ಮ ಸೃಷ್ಟಿಯೇ. ಈಶ್ವರ ಸೃಷ್ಟಿ. #ಮಾಯಾ

**

2 comments:

sunaath said...

ಅದ್ಭುತ ತತ್ವ! ‘ತಿರುಕನೋರ್ವನೂರ ಮುಂದೆ, ಮುರುಕು ಧರ್ಮಶಾಲೆಯಲ್ಲಿ...’ ಎನ್ನುವ ಗೀತೆ ನೆನಪಾಗುತ್ತದೆ.

Mahesh Hegade said...

Thanks Sunaath Sir.