Sunday, October 08, 2017

ಸಪ್ತಾಪುರದ ಹನುಮಪ್ಪ

ನಿನ್ನೆ ಶನಿವಾರ. ಹನುಮಪ್ಪ ನೆನಪಾಗಿದ್ದ.

'ಯಾವ ಹನುಮಪ್ಪ?' ಅಂತ ಕೇಳಿದರೆ ಹನುಮಂತ, ಮಾರುತಿ, ದೇವರು. ಹನುಮಾನ್, ವಾಯುಪುತ್ರ, ಆಂಜನೇಯ ಅಂತೆಲ್ಲ ಹೇಳಬೇಕಾಗುತ್ತದೆ.

ನಮ್ಮ ಧಾರವಾಡ ಕಡೆ ದೇವರಾದ ಹನುಮಂತನಿಗೆ ಯಾರೂ ಶುದ್ಧವಾಗಿ ಹನುಮಂತ, ಮಾರುತಿ, ವಾಯುಪುತ್ರ, ಅದು ಇದು ಅಂತೆಲ್ಲ ಶಾಸ್ತ್ರಬದ್ಧವಾಗಿ ಹೇಳುವುದು ಬಹಳ ಕಮ್ಮಿ. ಅವನು ದೇವರಾಗಿದ್ದರೂ ಸರಿ. ಅವನು ಹನುಮಪ್ಪನೇ. ಅವನ ದೇವಸ್ಥಾನ ಶಾರ್ಟ್ & ಸ್ವೀಟಾಗಿ 'ಹನುಮಪ್ಪನ ಗುಡಿ'. ಒಂದಕ್ಕಿಂತ ಹೆಚ್ಚು ಹನುಮಪ್ಪನ ಗುಡಿಗಳಿರುವ ಕಾರಣ 'ನುಗ್ಗಿಕೇರಿ ಹನುಮಪ್ಪ', 'ಸಪ್ತಾಪುರ ಹನುಮಪ್ಪ' ಅಂತ ಗ್ರಾಮ / ಬಡಾವಣೆಗಳ prefix ಬೇಕಾದರೆ ಸೇರಿಸುತ್ತಾರೆ. To differentiate between different Hanumpappas.

ದೇವರಾದ ಹನುಮಂತನಿಗೆ ಹನುಮಪ್ಪ ಎನ್ನುವದರಲ್ಲಿ ಅದೇನೋ ಅಪ್ಯಾಯತೆ, ಆತ್ಮೀಯತೆ ಎಲ್ಲ ಇದೆ ಅಂತ ಅನ್ನಿಸುತ್ತದೆ. ಹನುಮಪ್ಪ ಅಂದುಬಿಟ್ಟರೆ ಚಿಕ್ಕಪ್ಪನೋ, ದೊಡ್ಡಪ್ಪನೋ, ಅಪ್ಪಣ್ಣನೋ, ಅಣ್ಣಪ್ಪನೋ ಅನ್ನುವ ಕ್ಲೋಸ್ ಫೀಲಿಂಗ್ ಬರುತ್ತದೆ. ದೇವರು ದಿಂಡರು ಅನ್ನುವ ಔಪಚಾರಿಕತೆಯೆಲ್ಲ ಮಾಯವಾಗಿ ಹನುಮಪ್ಪ ಕೂಡ ನಮ್ಮವನೇ, ಕುಟುಂಬದವನೇ ಆಗಿಬಿಡುತ್ತಾನೆ. ಒಮ್ಮೆ ಹನುಮಪ್ಪ ಕೂಡ ನಮ್ಮವನೇ ಆಗಿಬಿಟ್ಟರೆ 'ಹೋಳಿಗೆ ತುಪ್ಪ, ಹೊಡಿ ಹನುಮಪ್ಪ!' ಅಂತ ದೇವರಿಗೆ ಹೋಳಿಗೆ ತುಪ್ಪದ ನೈವೇದ್ಯ ಮಾಡಿ ನಾವು ಬರೋಬ್ಬರಿ ಬಾರಿಸಲಿಕ್ಕೆ, ಅಂದರೆ ಹೋಳಿಗೆಯನ್ನು ತುಪ್ಪದ ಜೊತೆ ಬಾರಿಸಲಿಕ್ಕೆ, ಮಜಾ ಬರುತ್ತದೆ.

ಅದೇನೋ ಗಾದೆ ಮಾತು ಇದೆಯೆಲ್ಲ. 'ಏನೇ ಆದರೂ ಹನುಮಪ್ಪ ಮಾತ್ರ ಊರ ಹೊರಗೆ...' ಧಾರವಾಡದ ಮಟ್ಟಿಗಂತೂ ಈ ಮಾತು ಸತ್ಯ. ಧಾರವಾಡ ಊರನ್ನು ಯಾವುದೇ ದಿಕ್ಕಿನಿಂದ ಪ್ರವೇಶಿಸಿ, ನಿಮಗೆ ಒಂದು ಹನುಮಪ್ಪನ ಗುಡಿ ಕಾಣುತ್ತದೆ. ಹುಬ್ಬಳ್ಳಿ ಕಡೆಯಿಂದ ಬೈಪಾಸ್ ರಸ್ತೆ ಮೇಲೆ ಬಂದರೆ ವಿಖ್ಯಾತ ನುಗ್ಗಿಕೇರಿ ಹನುಮಪ್ಪನ ಗುಡಿ ಇದೆ. ದೊಡ್ಡ ಕೆರೆಯೊಂದನ್ನು ಹೊಂದಿದ ಅದ್ಭುತ ದೇವಸ್ಥಾನ. ಗೋವಾ, ಹಳಿಯಾಳ ಕಡೆಯಿಂದ ಎಂಟ್ರಿ ಕೊಟ್ಟರೆ ಸಪ್ತಾಪುರ ಹನುಮಪ್ಪ ಕಾವಲಿಗೆ ನಿಂತಿದ್ದಾನೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರವೇಶದ್ವಾರದ ಪಕ್ಕದಲ್ಲೇ ಇದೆ ಸಪ್ತಾಪುರ ಹನುಮಪ್ಪನ ಗುಡಿ. ಬೇರೆ ಬೇರೆ ದಿಕ್ಕಿನಿಂದ ಪ್ರವೇಶ ಮಾಡಿದರೂ ಹನುಮಪ್ಪನ ಗುಡಿ ಇರಲೇಬೇಕು. ಧಾರವಾಡದಲ್ಲಿ ಮಾರಿಗೊಬ್ಬ ಹನುಮಪ್ಪ ಇರುತ್ತಾನೆ. ಖಾಲಿ ಜಾಗಗಳ ಅತಿಕ್ರಮಣ ಮಾಡುವವರಿಗೂ ಹನುಮಪ್ಪ ಆರಾಧ್ಯದೈವ. ಎರಡು ಇಟ್ಟಿಗೆ ಇಟ್ಟು, ಒಳಗೊಂದು ಕಲ್ಲಿಗೆ ಕೆಂಪನೆಯ ಬಣ್ಣ ಬಳಿದು, 'ಇದು ಹನುಮಪ್ಪನ ಗುಡಿ!' ಅಂದುಬಿಟ್ಟರೆ ಮುಗಿಯಿತು. ಆಜನ್ಮ ಬ್ರಹ್ಮಚಾರಿಯಾದ ಹನುಮಪ್ಪ ಹೆಚ್ಚಿನ ಡಿಮ್ಯಾಂಡ್ ಮಾಡುವದಿಲ್ಲ. ಬಂದು ಕೂತುಬಿಡುತ್ತಾನೆ. ಅಲ್ಲಿಗೆ ಗುಡಿ ರೆಡಿ. ಹನುಮಪ್ಪ ಬಂದು ಕೂತ ಅಂದರೆ ಮುಗಿಯಿತು. ಸರ್ಕಾರಿ ಜಾಗ, ಖಾಸಗಿ ಜಾಗದ ಆಸೆ ಕೈಬಿಟ್ಟಂತೆಯೇ. ಹೀಗೆ ಹನುಮಪ್ಪನ ಹೆಸರಿನಲ್ಲಿ ಜಾಗದ ಅತಿಕ್ರಮಣ ಮಾಡಿದವರು ಒಮ್ಮೆ ಆ ಜಾಗದ ಕಬ್ಜಾ ಸಿಕ್ಕ ನಂತರ ಅದನ್ನು ಲೇಔಟ್ ಮಾಡಿ ಪರಭಾರೆ ಮಾಡುವಾಗ ಹನುಮಪ್ಪನಿಗೆ ಹೋಳಿಗೆ ನೈವೇದ್ಯ ಮಾಡಿ ಅವನನ್ನು ಅಲ್ಲಿಂದ ಒಕ್ಕಲೆಬ್ಬಿಸುತ್ತಾರೆ. ಮತ್ತೊಂದು ಜಾಗದ ಅತಿಕ್ರಮಣಕ್ಕೆ ಈ ಹನುಮಪ್ಪನ ವರ್ಗವಾಗುತ್ತದೆ. ಬ್ರಹ್ಮಚಾರಿ ಹನುಮಪ್ಪ ಹೀಗೆ ಸಂಸಾರಿಗಳ ಕಾರಸ್ಥಾನಕ್ಕೆ ಬಲಿಯಾಗುತ್ತಾನೆ.

ಈ ಸಪ್ತಾಪುರ ಹನುಮಪ್ಪ ನಮಗೆ ತುಂಬಾ ಹತ್ತಿರದವನು. ಮನೆ ಹತ್ತಿರಕ್ಕೇ ಇರುವ ಕಾರಣಕ್ಕೆ ಹತ್ತಿರದವನು. ಮನೆ ಹತ್ತಿರವೇ ಇರುವ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ನಾವು ಓಡಾಡಿಕೊಂಡಿರುವದರಿಂದ ಸದಾ ಕಣ್ಣಿಗೆ ಬೀಳುತ್ತಾನೆ. ದೂರದಿಂದಲೇ ನಮಸ್ಕಾರ ಹಾಕುತ್ತೇವೆ. ಹನುಮಪ್ಪ ತುಂಬಾ informal ದೇವರು. ದೂರದಿಂದಲೇ casual ನಮಸ್ಕಾರ ಹಾಕಿದರೂ ಅನುಗ್ರಹಿಸುತ್ತಲೇ ಇರುತ್ತಾನೆ. ಒಳಗೆ ಹೋಗಿ ಬರೋಣ ಅಂದರೆ ಮುಂಜಾನೆ ವಾಕಿಂಗಿಗೆ ಹೋದಾಗಲೇ ಹನುಮಪ್ಪನ ದರ್ಶನವಾಗುವದು ಹೆಚ್ಚು. ಆಗ ಇನ್ನು ಸ್ನಾನ ಇತ್ಯಾದಿ ಆಗಿರುವದಿಲ್ಲ. ಮತ್ತೆ ಬೂಟು ಕಳಚಿಟ್ಟು ಒಳಗೆ ಹೋದರೆ ಬಂದಾಗ ಅವು ಅಲ್ಲೇ ಇರುತ್ತವೆಯೇ? ಖಾತ್ರಿಯಿಲ್ಲ. ಹೀಗಾಗಿ ಸಪ್ತಾಪುರದ ಹನುಮಪ್ಪನ ಗುಡಿಯ ಮುಂದೆ ದಿನಾ ಬೆಳಿಗ್ಗೆ ವಾಕಿಂಗ್ ಮಾಡಿದರೂ ಒಳಗೆ ಹೋಗಿದ್ದು ಯಾವ ಕಾಲದಲ್ಲೋ. ತುಂಬಾ ವರ್ಷಗಳಾಗಿಹೋಗಿವೆ.

ಸಪ್ತಾಪುರದ ಹನುಮಪ್ಪ ಎಂಬ ದೇವರ ಗುಡಿಯ ಹೆಸರು ಮನಸಲ್ಲಿ ನಿಂತ ಘಳಿಗೆ ಬರೋಬ್ಬರಿ ನೆನಪಿದೆ. ಸರಿಸುಮಾರು ನಲವತ್ತೂ ಚಿಲ್ಲರೆ ವರ್ಷಗಳ ಹಿಂದೆ. ಆಗಿನ್ನೂ ನಾಲ್ಕೈದು ವರ್ಷದ ಚಿಣ್ಣ ಬಾಲಕ ನಾನು. ಮನೆಯಿದ್ದದ್ದು ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ. ರಾಯರ ಮಠದ ಸಮೀಪ. ಯಾವದೋ ಕಾರಣಕ್ಕೆ ಆವತ್ತು ಅಮ್ಮನ ಜೊತೆ ರೈಲ್ವೆ ಸ್ಟೇಷನ್ ಆಕಡೆಯಿರುವ ಕಲ್ಯಾಣ ನಗರ ಬಡಾವಣೆಗೆ ಹೋಗಿದ್ದೆ. ಅಮ್ಮನ ಕೆಲವು ಆತ್ಮೀಯರು ಆರನೇ ಕ್ರಾಸಿನ ಆಸುಪಾಸಿನಲ್ಲಿ ಇದ್ದರಲ್ಲ. ಹಾಗಾಗಿ ಆಗಾಗ ಅಮ್ಮನ ಸವಾರಿ ಆಕಡೆ ಹೋಗುತ್ತಿತ್ತು. ಜೊತೆಗೆ ನಾನೂ ಹೋಗುತ್ತಿದ್ದೆ.

ಅಂದೂ ಹಾಗೇ ಆಯಿತು. ಅಮ್ಮನ ಗೆಳತಿಯರ ಮನೆಯಲ್ಲಿ ಹರಟೆ ಪರಟೆ ಮುಗಿಸಿ, ಚಹಾ ಪಹಾ ಕುಡಿದು, ಮನೆ ಕಡೆ ಹೊರಟೆವು. ಸಂಜೆ ಸುಮಾರು ಏಳು ಏಳೂವರೆ ಸಮಯ. ಆಗಲೇ ಕತ್ತಲಾವರಿಸತೊಡಗಿತ್ತು. ಆಗ ಕಲ್ಯಾಣ ನಗರ ಎಂಬ ಬಡಾವಣೆಯಲ್ಲಿ ಜನವಸತಿ ತುಂಬಾ ವಿರಳ. ಬಡಾವಣೆ ಕಮ್ಮಿ ಮಾವಿನತೋಪು ಜಾಸ್ತಿಯಾಗಿತ್ತು ಅಂದರೆ ಬರೋಬ್ಬರಿಯಾದೀತು. ಕತ್ತಲಾಯಿತೆಂದರೆ ಒಂದು ತರಹದ ರಾವ್ ರಾವ್ ಫೀಲಿಂಗ್. ಮತ್ತೆ ಪಕ್ಕದಲ್ಲೇ ಹರಿದು ಹೋಗಿದ್ದ ರೈಲ್ವೆ ಹಳಿಗಳ ಮೇಲೆ ಆಗಾಗ ಹೆಣಗಳು ಬೀಳುತ್ತಿದ್ದವು. ಆತ್ಮಹತ್ಯೆ ಕೇಸುಗಳು. ಕೊಲೆ ಮಾಡಿ ಎಸೆದು ಹೋದ ಕೇಸುಗಳೂ ಸಹ ಇರುತ್ತಿದ್ದವು ಅಂತ ಜನ ಮಾತಾಡಿಕೊಳ್ಳುತ್ತಿದ್ದರು.

ಕತ್ತಲಾಗುತ್ತಿದೆ ಬೇಗ ಮನೆ ಸೇರಿಕೊಳ್ಳೋಣ ಅಂತ ಮನೆ ಕಡೆ ಹೊರಟರೆ ಕಲ್ಯಾಣ ನಗರದ ಐದನೇಯ ಅಥವಾ ನಾಲ್ಕನೇಯ ಕ್ರಾಸಿನಲ್ಲಿ ಅಮ್ಮನನ್ನು ಯಾರೋ ಒಬ್ಬರು ಅಟಕಾಯಿಸಿಕೊಂಡರು. ನೋಡಲು ಸ್ವಲ್ಪ ಅಜ್ಜಿಯ ಹಾಗಿದ್ದರು. ಮೊದಲೆಲ್ಲೂ ನೋಡಿದ ನೆನಪಿರಲಿಲ್ಲ.

ಸ್ವಲ್ಪ ದೂರದಲ್ಲಿದ್ದರೂ, ಅಮ್ಮನನ್ನು ನೋಡಿದವರೇ, 'ಏ, ಲಲಿತಾ.......!!' ಎಂದು ವಿಚಿತ್ರವಾಗಿ ಕೂಗುತ್ತ ಓಡಿ ಬಂದು ಅಮ್ಮನ ಕೈಹಿಡಿದುಕೊಂಡರು. ನಾನು ಥಂಡಾ ಹೊಡೆದೆ ಒಂದು ಕ್ಷಣ. ಅಷ್ಟು ವಿಚಿತ್ರವಾಗಿತ್ತು ಆಕೆ ಕೂಗುತ್ತ ಓಡಿ ಬಂದಿದ್ದು.

'ನಿನ್ನ ಗೆಳತಿ ಹೋದಳಲ್ಲವಾ. ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ಟಳಲ್ಲವಾ..... ' ಎಂದವರೇ ಭೋರಿಟ್ಟು ಅಳಲು ಆರಂಭಿಸಿಬಿಟ್ಟರು. ಆ ಮಾತು ಕೇಳಿ ಈಗ ಅಮ್ಮ ಕೂಡಾ ಥಂಡಾ ಹೊಡೆದರು.

'ಏನಾತ್ರೀ? ಏನು ಹೇಳಲಿಕತ್ತೀರಿ? ಯಾರಿಗೆ ಏನಾತು?' ಎಂದು ಅಮ್ಮ ಆ ಅಜ್ಜಿಯಂತವರನ್ನು ಕೇಳಿದಳು.

'ನಿನ್ನ ಗೆಳತಿ ಜೀವಾ ತೆಕ್ಕೊಂಡಳು! ವಾರದ ಹಿಂದೆ ಸಪ್ತಾಪುರ ಹನುಮಪ್ಪನ ಗುಡಿ ಭಾವಿಯಾಗ ಜಿಗಿದು ಸತ್ತಳು!' ಅಂದವರೇ, 'ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ಟಳು. ನೋಡ. ಹೀಂಗ ಮಾಡೋದು!? ಅನ್ಯಾಯ. ನೋಡss....' ಅನ್ನುತ್ತ ಮತ್ತೂ ಭೋರಿಟ್ಟು ಅಳತೊಡಗಿದರು.

ಮುಸ್ಸಂಜೆ ಸಮಯ. ನಿರ್ಜನ ಬಡಾವಣೆ. ದೀಪವಿಲ್ಲದ ರಸ್ತೆಗಳು. ಮಾಹೋಲ್ ಖರಾಬಾಗಿದೆ. ಹಾಗಿರುವಾಗ ಬಿಳಿ ಮಂಡೆಯ ವೃದ್ಧೆಯೊಬ್ಬರು ಒಮ್ಮೆಲೇ ಪ್ರತ್ಯಕ್ಷರಾಗಿ ಅವರ ಮಗಳು, ಅಮ್ಮನ ಗೆಳತಿ, ವಾರದ ಹಿಂದೆಯಷ್ಟೇ ಸಪ್ತಾಪುರದ ಹನುಮಪ್ಪನ ಗುಡಿಯೊಳಗಿನ ಭಾವಿಯೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು ಅನ್ನುವ ಭಯಾನಕ ಸುದ್ದಿ ಹೇಳಿ ನಮ್ಮನ್ನು ಫುಲ್ ಥಂಡಾ ಹೊಡೆಸಿಬಿಟ್ಟಿದ್ದಾರೆ!

ನನಗೆ ಆಗ ಪೂರ್ತಿಯಾಗಿ ಅರ್ಥವೂ ಆಗಿರಲಿಲ್ಲ. ಆ ವೃದ್ಧೆಯ ಹರಕತ್ತನ್ನು ನೋಡಿ ಥಂಡಾ ಹೊಡೆದು ಅಮ್ಮನ ಹಿಂದೆ ಬಚ್ಚಿಟ್ಟುಕೊಂಡೆ. ಮೊದಲೇ ಸಂಕೋಚದ ಮುದ್ದೆ ನಾನು. ಪ್ರೀತಿಯಿಂದ ಮಾತಾಡಿಸಿದರೂ ಮುದುಡಿ ಹೋಗುತ್ತಿದ್ದೆ. ಇನ್ನು ರೋನಾ ಧೋನಾ ಮಾಡುತ್ತಿರುವ ಆ ಮುದುಕಿ ಬಂದು ನನಗೂ ಗುದುಮುರುಗಿ ಹಾಕಿದರೆ ಕಷ್ಟ. ಅಷ್ಟೇ ಮತ್ತೆ ಅಂತ ಅಮ್ಮನ ಹಿಂದೆ ಸೇರಿಕೊಂಡೆ.

'ಅಯ್ಯೋ! ಇದೇನಾತ್ರಿ? ಏನಾಗಿತ್ತು ಅಕಿಗೆ? ಅದೂ ಭಾವಿಯಾಗ ಜಿಗಿದು ಸಾಯೋವಂತಹದ್ದು?' ಎಂದು ಅಮ್ಮ ತನ್ನ ಗೆಳತಿಯ ಅಚಾನಕ್ ಸಾವಿನ ಸುದ್ದಿಯಿಂದಾದ ಆಘಾತದಿಂದ ಕೊಂಚ ಚೇತರಿಸಿಕೊಂಡು ಕೇಳಿದಳು.

ಅಮ್ಮ ಮತ್ತು ಆ ವೃದ್ಧೆ ಏನೇನೋ ಗುಸುಗುಸು ಮಾತಾಡಿಕೊಂಡರು. ಆಗ ಏನು ಅಂತ ತಿಳಿಯಲಿಲ್ಲ. ಎಷ್ಟೋ ವರ್ಷಗಳ ನಂತರ ಒಂದಕ್ಕೊಂದು ಮಾಹಿತಿ ಸೇರಿಸಿಕೊಂಡು, ಸ್ವಲ್ಪ ಮಟ್ಟಿಗೆ ಬೆಳೆದ ಬುದ್ಧಿಯನ್ನು ಉಪಯೋಗಿಸಿದಾಗ ತಿಳಿದ ವಿಷಯ ಇಷ್ಟು. ಆಕೆ ಅಮ್ಮನ  ಗೆಳತಿ. ಆಗ ಸುಮಾರು ಮೂವತ್ತು-ಮೂವತ್ತೆರೆಡು ವರ್ಷದ ಅವಿವಾಹಿತೆ. ಲವ್ ಕೇಸು. ಮೊದಲು ಲವ್ವಾಗಿದ್ದು ನಂತರ ಲವ್ ಫೇಲ್ಯೂರ್ ಆಗಿದೆ. ಸೀದಾ ಹೋಗಿ ಸಪ್ತಾಪುರದ ಹನುಮಪ್ಪನ ಗುಡಿಯ ಆವರಣದೊಳಗಿರುವ ಭಾವಿಯೊಳಗೆ ಡೈವ್ ಹೊಡೆದಿದ್ದಾಳೆ. ಶಿವಾಯ ನಮಃ!

ಪುತ್ರ / ಪುತ್ರಿ ಶೋಕಂ ನಿರಂತರಂ. ಮಗಳನ್ನು ಕಳೆದುಕೊಂಡು ಸಂಕಟ ಪಡುತ್ತಿದ್ದ ಆ ವೃದ್ಧ ತಾಯಿಗೆ ಏನೋ ಒಂದು ತರಹದ ಸಮಾಧಾನವನ್ನು ಅಮ್ಮ ಹೇಳಿದಳು. ಸ್ವಂತ ಮಗಳೇನೋ ಎಂಬಂತೆ ಅವರ ಮೈ ಕೈ ಒತ್ತಿ, ಆತ್ಮೀಯತೆ ಮತ್ತು ಪ್ರೀತಿ ತೋರಿದಳು. ಆ ವೃದ್ಧೆ ಅದೆಷ್ಟೋ ನಿರಾಳರಾದಂತೆ ಕಂಡುಬಂತು. ಅವರನ್ನು ಬೀಳ್ಕೊಟ್ಟು ಮನೆ ಕಡೆ ಹೊರಟೆವು. ಆಗ ಆ ತಾಯಿ ಹೇಳಿದ ಒಂದು ಮಾತೇ ಕಾರಣ ಇವತ್ತಿಗೂ ಸಪ್ತಾಪುರದ ಹನುಮಪ್ಪ, ಅವನ ಗುಡಿ, ಅಲ್ಲಿರಬಹುದಾದ ಭಾವಿ ಎಲ್ಲ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ.

ಕಲ್ಯಾಣ ನಗರದ ಐದು ಅಥವಾ ನಾಲ್ಕನೇ ಕ್ರಾಸಿನಲ್ಲಿ ನಿಂತಿದ್ದ ಆ ವೃದ್ಧ ತಾಯಿ, ತಮ್ಮ ಬಲಗೈನ್ನು ಎತ್ತಿ ತೋರಿಸಿ ಒಂದು ಮಾತು ಹೇಳಿದರು. 'ಆ ದಿಕ್ಕಿನ್ಯಾಗ, ಸಪ್ತಾಪುರದ ಹನುಮಪ್ಪನ ಗುಡಿ ದಿಕ್ಕಿನ್ಯಾಗ ನೋಡಲಿಕ್ಕೆ ಆಗೋದಿಲ್ಲ ನೋಡವಾ. ಆ ದಿಕ್ಕಿನ್ಯಾಗ ತಲಿ ಎತ್ತಿದರೂ ನಿನ್ನ ಗೆಳತಿಯದೇ ನೆನಪಾಗಿ ಹೊಟ್ಯಾಗ ಇಂತಾ ಸಂಕಟಾ ಅಂದ್ರ ಅಂತಾ ಸಂಕಟ! ಯಾರಿಗೂ ಬ್ಯಾಡವಾ ಈ ಸಂಕಟ! ಯಾರಿಗೂ ಬ್ಯಾಡವಾ! ನಾ ನಂಬಿದ ದೇವರು ಹನುಮಪ್ಪ ಕೂಡ ಅಕಿನ್ನ ಬಚಾವ್ ಮಾಡಲಿಲ್ಲ. ಇಕಿನೂ ಅಷ್ಟೇ. ಹೋಗಿ ಹೋಗಿ ಹನುಮಪ್ಪನ ಗುಡಿ ಭಾವಿಯಾಗss ಜಿಗಿದು ಸಾಯಬೇಕಾ?..... ' ಅನ್ನುತ್ತ ಅಳುತ್ತಲೇ ಹೋಗಿಬಿಟ್ಟರು.

ಬಾಲ್ಯದಲ್ಲಾದ ಈ intense encounter ರೇ ಕಾರಣ ಸಪ್ತಾಪುರದ ಹನುಮಪ್ಪ ಮನಸ್ಸಿನಲ್ಲಿ ಉಳಿಯಲಿಕ್ಕೆ.

ನೋಡಿದರೆ ಹನುಮಪ್ಪ ಬ್ರಹ್ಮಚಾರಿ ದೇವರು. ಈ ಲವ್ ಫೇಲ್ಯೂರ್ ಗಿರಾಕಿಗಳು ಹೋಗಿ ಅವನ ಭಾವಿಗೆ ಬೀಳುವದ್ಯಾಕೆ? ಗೊತ್ತಿಲ್ಲ.

ಆಗಿನ ಕಾಲದಲ್ಲಿ ಧಾರವಾಡದಲ್ಲಿ ಭಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವದು ಸಾಮಾನ್ಯವಾಗಿತ್ತು. ಪ್ರತಿಯೊಂದು ಕಂಪೌಂಡಿನಲ್ಲೂ ದೊಡ್ಡ ದೊಡ್ಡ ಭಾವಿಗಳಿರುತ್ತಿದ್ದವು. ಅವುಗಳಲ್ಲಿ ಜಿಗಿದು ಸೀದಾ ಮೇಲೆ ಹೋದ ಮಂದಿಯ precedence ಇರುತ್ತಿತ್ತು. ಹಾಗಾಗಿ ಕೊಂಚ ಹೆಚ್ಚು ಕಮ್ಮಿಯಾಗಿ ತಲೆ ಕೆಟ್ಟರೆ ಮುಗಿಯಿತು. ಹಿಂದೆ ಮುಂದೆ ವಿಚಾರ ಮಾಡದೇ ಹೋಗಿ ಜಿಗಿದೇ ಬಿಡುತ್ತಿದ್ದರು. ಮತ್ತೊಂದು ಆತ್ಮಹತ್ಯೆ ಕೇಸ್ ರಿಜಿಸ್ಟರ್ ಆಗುತ್ತಿತ್ತು. ಆ ಭಾವಿಯ ಬಗ್ಗೆ ಒಂದು ತರಹದ ಹೆದರಿಕೆ, ನಿಗೂಢತೆ ಮೂಡುತ್ತಿತ್ತು. ಏನೇನೋ ದಂತಕಥೆಗಳು ಬೆಳೆಯುತ್ತಿದ್ದವು.

ಅಮ್ಮನ ಗೆಳತಿಯ ಆತ್ಮಹತ್ಯೆಯ ಹಿಂದಿನ ಪೂರ್ತಿ ಕಹಾನಿ ಗೊತ್ತಾಗಲಿಲ್ಲ. ಲವ್ ಫೇಲ್ಯೂರ್ ಕೇಸ್ ಅಂತ ಅಷ್ಟೇ ಗೊತ್ತಾಗಿದ್ದು. ಎಲ್ಲಿ ಆ ಪುಣ್ಯಾತ್ಗಿತ್ತಿ ಬಸುರಾಗಿಬಿಟ್ಟಿದ್ದಳೇ? ಆಗಿನ ಕಾಲದಲ್ಲಿ ಪ್ರೇಮಿಗಳಿಗೆ ಕಳ್ಳ ಬಸುರೇ ದೊಡ್ಡ ಪ್ರಾಬ್ಲಮ್. ಲವ್ ಹೇಗೋ ಆಗಿಬಿಡುತ್ತಿತ್ತು. ಎಲ್ಲೋ ಕತ್ತಲ ಜಾಗ ಹುಡುಕಿಕೊಂಡು ಮಿಲನಮಹೋತ್ಸವ ಕೂಡ ಆಚರಿಸಿಕೊಂಡು ಜಿಸ್ಮಿನ ಗರ್ಮಿ ಕೂಡ ಕಮ್ಮಿ ಮಾಡಿಕೊಳ್ಳುತ್ತಿದ್ದರು. ಆದರೆ ಆಗ ಈಗಿನಂತೆ ನಾಲ್ಕಾಣೆಗೆ ಮೂರು ನಿರೋಧ ಸಿಗುತ್ತಿರಲಿಲ್ಲ. ಮಾಲಾ-ಡಿ ಅಂದರೆ ಏನೂಂತ ಗೊತ್ತಿರಲಿಲ್ಲ. morning after pill ಮಾತ್ರೆಯ ಆವಿಷ್ಕಾರ ಕೂಡ ಆಗಿರಲಿಲ್ಲ. ಹಾಗಾಗಿ ಕಾಮದ ಕಾರ್ನಾಮೆಯ ನಂತರ ಸಹಜವಾಗಿ ಬಸಿರು ಕಟ್ಟುತ್ತಿತ್ತು. ಗಟ್ಟಿಗಿತ್ತಿಯರು ಏನೋ ಜುಗಾಡ್ ಮಾಡುತ್ತಿದ್ದರು. ಹೊಟ್ಟೆ ಮುಂದೆ ಬರಲು ಕಾರಣನಾದ ಭಾಡ್ಕೋ ಗಂಡಿನ ಜುಟ್ಟು ಹಿಡಿದು ಎಳೆದುಕೊಂಡು ಬಂದು ತಾಳಿ ಕಟ್ಟಿಸಿಕೊಳ್ಳುತ್ತಿದರು. ಮದುವೆಯಾದ ಆರೇಳು ತಿಂಗಳಲ್ಲೇ 'ಏಳರಾಗ ಹುಟ್ಟಿದ' ಸ್ಪೆಷಲ್ ಕೂಸುಗಳನ್ನು ಹಡೆದು ನಿಟ್ಟುಸಿರು ಬಿಡುತ್ತಿದ್ದರು. ಇಷ್ಟು ಮಾಡುವ ತಾಕತ್ತು, ಕಾಬೀಲೀಯತ್ತು ಇಲ್ಲದವರು ಕೆರೆ ಭಾವಿ ನೋಡಿಕೊಳ್ಳುತ್ತಿದ್ದರು. ಆದರೆ ಹೋಗಿ ಹೋಗಿ, ಸಂಸಾರಕ್ಕೆ ಸಂಬಂಧವೇ ಇಲ್ಲದ ಬ್ರಹ್ಮಚಾರಿ ಹನುಮಂತ ದೇವರ ಗುಡಿಯ ಭಾವಿಗೆ ಡೈವ್ ಹೊಡೆದ ಮೊದಲ ಗಿರಾಕಿ ಅಮ್ಮನ ಗೆಳತಿಯೇ ಇರಬೇಕು. ತಾನು ಬ್ರಹ್ಮಚಾರಿಯಾದರೂ ಸಂಸಾರಿಗಳ ಕಾಟ ತಪ್ಪದು ನೋಡಿ ಹನುಮಪ್ಪನಿಗೆ!

'ಆ ದಿಕ್ಕಿನ ಕಡೆ ನೋಡಲಿಕ್ಕೆ ಆಗೋದಿಲ್ಲ ನೋಡವಾ. ನೋಡಿದರೆ ಸಪ್ತಾಪುರದ ಹನುಮಪ್ಪನ ಗುಡಿಯ ಗೋಪುರ ಕಾಣಿಸ್ತದ. ಅದೇ ಗುಡಿಯ ಭಾವಿಯಾಗ ಜಿಗಿದು ನಿನ್ನ ಗೆಳತಿ ಸತ್ತಳು ನೋಡವಾ.....' ಅನ್ನುವ ಆ ಮಾತೆಯ ಪುತ್ರಿಶೋಕದ ಸಂಕಟದ ವೇದನೆ ಕಿವಿಯಲ್ಲಿ ಗುಂಯ್ಗುಡುತ್ತದೆ. ಹೀಗಾಗಿ ಸಪ್ತಾಪುರದ ಹನುಮಪ್ಪ ನೆನಪಾಗುತ್ತಲೇ ಇರುತ್ತಾನೆ. ನೆನಪಾದಾಗೊಮ್ಮೆ ಮನದಲ್ಲೇ ನೆನೆಯುತ್ತೇನೆ. ಇಲ್ಲಿಯವರೆಗೆ ಹನುಮಪ್ಪನ ಆಶೀರ್ವಾದ, ಕಾರುಣ್ಯ ಸಾಕಷ್ಟಿದೆ. ಮುಂದೂ ಇರಲಿ. ಎಲ್ಲರಿಗೂ ಸಪ್ತಾಪುರದ ಹನುಮಪ್ಪ ಒಳ್ಳೆಯದನ್ನೇ ಮಾಡಲಿ.

4 comments:

sunaath said...

‘ಸಪ್ತಾಪುರ ಹನುಮಪ್ಪನ ಪುರಾಣ, ಅಲ್ಲ, ಅಲ್ಲಿಯ ಭಾವಿಯ ಪುರಾಣ’ ಕೇಳಿ ಖೇದವಾಯಿತು. ಆದರೆ, ಹನುಮಪ್ಪ ನಂಬಿದವರ ಕೈ ಬಿಟ್ಟಿಲ್ಲ. ನಮ್ಮ ಅಪ್ಪನ ಕಾಕಾನ ಮಗ ನನ್ನ ಅಪ್ಪನ ಎದುರಿಗೆ ಹೇಳುತ್ತಿದ್ದರು: ‘ನುಗ್ಗಿಕೇರಿ ಹಣಮಪ್ಪನ್ನ ನಾ ಹಿಡಕೊಂಡೇನಿ; ಅವನೂ ನನ್ನ ಕೈ ಬಿಟ್ಟಿಲ್ಲ’. ‘ಯದ್ ಭಾವಂ ತದ್ ಭವತಿ!’ ಈ ಮನೆತನದವರ ಮಕ್ಕಳ ಪೈಕಿ ಒಬ್ಬನರ ಹಣಮಪ್ಪ ಇರತಿದ್ದ: ಹಣಮ್ಯಾ, ಹಂಪಾ, ಹನುಮ ಇತ್ಯಾದಿ!

Mahesh Hegade said...

ಹಂಪಾ/ಹಂಪ ಕೂಡ ಹನುಮಂತನಿಗೆ ಸಂಬಂಧಿಸಿದ್ದು ಅಂತ ಹೊಸದಾಗಿ ತಿಳಿಯಿತು. ಗೊತ್ತಿರಲಿಲ್ಲ.

So, ಹಂಪನಗೌಡ, ಹಂಪಣ್ಣವರ, ಹಂಪನಕಟ್ಟಾ ಇತ್ಯಾದಿ ಹೆಸರು, ಅಡ್ಡಹೆಸರು, ಏರಿಯಾ ಹೆಸರುಗಳು ಹನುಮಂತನಿಗೆ ಸಂಬಂಧಪಟ್ಟವು ಇರಬಹುದೇನೋ!

ಥ್ಯಾಂಕ್ಸ್ ಸುನಾಥ್ ಸರ್!

sunaath said...

ಎಚ್ಚರಿಕೆ ಮಹೇಶರೆ! ಈ ಹಂಪ ಎನ್ನುವ ವೈಯಕ್ತಿಕ ಹೆಸರೇನೋ ‘ಹಣಮಪ್ಪ’ನ ಸಂಕ್ಷಿಪ್ತೀಕರಣವಾಗಿತ್ತು. ಆದರೆ, ಹಂಪನಗೌಡ, ಹಂಪಣ್ಣವರ, ಹಂಪನಕಟ್ಟೆ ಎನ್ನುವ ಪದಗಳಲ್ಲಿ ಇರುವ ‘ಹಂಪ’ವು ‘ಪಂಪ’ನಿಗೆ ಸಂಬಂಧಿಸಿದ್ದೂ ಆಗಿರಬಹುದು! ಆದುದರಿಗೆ ಈ ವಿಷಯದ ಬಗೆಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ!

Mahesh Hegade said...

ಇರಬಹುದು ಸುನಾಥ್ ಸರ್! ಪಂಪ ಆದಿಕವಿ. ಹಾಗಾಗಿ ಅವನಿಗೆ ಸಂಬಂಧಿಸಿದ್ದು ಇದ್ದರೂ ಇರಬಹುದು. ಪಿಎಚ್ಡಿಗೆ ಒಳ್ಳೆ ವಿಷಯ! :) ಥ್ಯಾಂಕ್ಸ್.