Sunday, January 28, 2018

ಅಪಕ್ವ ಸಾತ್ವಿಕತೆಯ ಅಡ್ಡ ಪರಿಣಾಮಗಳು

'ಎಂಥ ಜನರು ಇವರೆಲ್ಲಾ!? ಹಗಲು ರಾತ್ರಿಯೆನ್ನದೆ ಕುಡಿಯುತ್ತಾರೆ! Disgusting!'

'ಹಾಗಾದ್ರೆ ನೀವು ಕುಡಿಯೋದಿಲ್ಲವೇ?'

'ಹಾಗಲ್ಲ. ಆದರೆ....'

'ಏನು ಆದರೆ???'

'ರಾತ್ರಿ ಮಾತ್ರ ಕುಡಿಯುತ್ತೇನೆ.'

ಇವರ ಉತ್ತರ ಕೇಳಿದವ ಹೊಡೆದ ಶಾಕ್ ನಿಂದ ಸುಧಾರಿಸಿಕೊಳ್ಳುತ್ತಿದ್ದರೆ, ಇವರ ಮಾತು ಮತ್ತೆ ಅದೇ....'ಎಂಥ ಜನರು ಇವರೆಲ್ಲಾ!? ಹಗಲು ರಾತ್ರಿಯೆನ್ನದೆ ಕುಡಿಯುತ್ತಾರೆ! Disgusting!'

ಮತ್ತೊಂದು ಉದಾಹರಣೆ.

'ಎಂಥ ಜನರು ಇವರೆಲ್ಲಾ!? ದಿನಾ ಮಾಂಸ ಸೇವಿಸುತ್ತಾರೆ! Disgusting!'

'ನೀವು ಮಾಂಸ ಸೇವಿಸುವದಿಲ್ಲವೇ?'

'ಹಾಗಲ್ಲ. ಆದರೆ....'

'ಏನು ಆದರೆ???'

'ದಿನ ಬಿಟ್ಟು ದಿನ ಮಾತ್ರ ಮಾಂಸ ಸೇವಿಸುತ್ತೇನೆ!'

ಇವರ ಉತ್ತರ ಕೇಳಿದವ ಹೊಡೆದ ಶಾಕಿನಿಂದ ಸುಧಾರಿಸಿಕೊಳ್ಳುತ್ತಿದ್ದರೆ, ಇವರ ಮಾತು ಮತ್ತೆ ಅದೇ....'ಎಂಥ ಜನರು ಇವರೆಲ್ಲಾ!? ದಿನಾ ಮಾಂಸ ಸೇವಿಸುತ್ತಾರೆ! Disgusting!'

ಈ ಉದಾಹರಣೆಗಳನ್ನು ಸ್ವಾಮಿ ಅನುಭವಾನಂದಜೀ ಆಗಾಗ ಕೊಡುತ್ತಿರುತ್ತಾರೆ. ಹೊಸದಾಗಿ ಅಧ್ಯಾತ್ಮದೆಡೆಗೆ ಸೆಳೆಯಲ್ಪಟ್ಟು, ಸ್ವಲ್ಪ ಸಾಧನೆ ಮಾಡಿ, ಸಾತ್ವಿಕತೆ ಸ್ವಲ್ಪ ಜಾಸ್ತಿಯಾದ ಜನ ಇವರು. ಇವರ ಸಾತ್ವಿಕತೆ ಒಂದು ಅರ್ಧ ಡಿಗ್ರಿ ಏರಿತೋ ಇಲ್ಲವೋ ಶುರು ಇವರ ಉದ್ರಿ ಉಪದೇಶ ಮತ್ತು ಬೇರೆಯವರ ಬಗ್ಗೆ ಟೀಕೆ ಟಿಪ್ಪಣಿ.

ಬೇಕೇ ಇಂತಹ ಕಿರಿಕಿರಿ ವರ್ತನೆ? ತೆಪ್ಪಗೆ ಮುಚ್ಚಿಕೊಂಡು ನಿಮ್ಮ ಸಾಧನೆ ನೀವು ಮಾಡಿಕೊಂಡು ಹೋಗೋಕೆ ಏನು ಧಾಡಿ? ನಿಮಗೆ ಒಗ್ಗಿದ ಪಥ್ಯ ಎಲ್ಲರಿಗೂ ಒಗ್ಗಬೇಕು ಅಂತೇನೂ ಇಲ್ಲವಲ್ಲ?

ಇಂತವರು ನೆನಪಿಡಬೇಕಾದ ವಿಷಯ ಅಂದರೆ, ನೀವು ಈಗಷ್ಟೇ ಸ್ವಲ್ಪ ಸಾತ್ವಿಕರಾಗಿದ್ದೀರಿ. ಎಷ್ಟೋ ಜನ ಎಂದಿನಿಂದಲೋ ನಿಮಗಿಂತ ಜಾಸ್ತಿ ಸಾತ್ವಿಕರಾಗಿಯೇ ಇದ್ದಾರೆ. ನಿಮ್ಮ ಬದಲಾವಣೆಗಳು ಸ್ವಾಗತಾರ್ಹ. ಆದರೆ ಇಷ್ಟಕ್ಕೇ ಬೇರೆಯವರನ್ನು ಟೀಕಿಸಲು ಹೋಗಬೇಡಿ. ಸಾಧನೆಯ ಹಾದಿಯಲ್ಲಿ ಕ್ರಮಿಸಬೇಕಾದ ದಾರಿ ಇನ್ನೂ ಸಾಕಷ್ಟಿದೆ.

ಇನ್ನೂ ಕೆಲವರ ಬಾಹ್ಯದ ಆಡಂಬರ ನೋಡಲು ಅಸಹನೀಯ. ಸೀದಾ ಸಾದಾ ಇದ್ದವರು ತಲೆ ಬೋಳಿಸಿ, ಜುಟ್ಟು ಬಿಟ್ಟುಕೊಂಡು ಆಫೀಸಿಗೆ ಬಂದುಬಿಡುತ್ತಾರೆ. ಅದು ತಪ್ಪಲ್ಲ. ಆದರೆ ವಿರೋಧಾಭಾಸ. ನೀವು ಅಧ್ಯಾತ್ಮದ ಹಾದಿಯಲ್ಲಿ ನಡೆದಿರುವ ಸಂಗತಿ ಇನ್ನೊಬ್ಬರಿಗೆ ಅಷ್ಟು ಢಾಳಾಗಿ ಗೊತ್ತಾಗಬೇಕು ಅಂತೇನಿದೆ? ಇದೊಳ್ಳೆ ಹೊಸ ಐಫೋನ್ ತೆಗೆದುಕೊಂಡವ ಎಲ್ಲರಿಗೂ ತೆಗೆದು ತೆಗೆದು ತೋರಿಸಿದ ಹಾಗಾಗಿಯಿತು. ಜನ್ಮದಲ್ಲೇ ನಾಮ, ವಿಭೂತಿ ಧರಿಸದವರು ಸಿಕ್ಕಾಪಟ್ಟೆ ಲಾಂಗಾಗಿ ಮೇಕ್ಅಪ್ ಮಾಡಿಕೊಂಡಂತೆ ನಾಮ, ಭಸ್ಮ ಧರಿಸಿ ಓಡಾಡುತ್ತಾರೆ. ಇನ್ನು ರುದ್ರಾಕ್ಷಿ ಮಾಲೆ, ಇತರೆ ಮಾಲೆಗಳ ಮಾತು ಬೇರೆ ಬಿಡಿ.

ಇವನ್ನೆಲ್ಲ ಮೀರಿದ್ದು ತಮ್ಮ ನಾಲ್ಕಾಣೆ ಸಾತ್ವಿಕತೆಯನ್ನು ಮಾನದಂಡವನ್ನಾಗಿ ಉಪಯೋಗಿಸಿ ಇನ್ನೊಬ್ಬರನ್ನು judge ಮಾಡುವದು.

ಇವೆಲ್ಲ ಅಪಕ್ವ ಸಾತ್ವಿಕತೆಯ ಅಡ್ಡ ಪರಿಣಾಮಗಳು ಎಂದೆನಿಸಿತು.

ಸ್ವಾಮಿ ಅನುಭವಾನಂದಜೀ ಅವರಿಗೆ ನಮೋ ನಮಃ!


2 comments:

sunaath said...

ಅಹಾ, ಇದು ನನಗೂ ಒಂದು ಒಳ್ಳೆಯ ಪಾಠ!

Mahesh Hegade said...

ಧನ್ಯವಾದಗಳು ಸುನಾಥ್ ಸರ್. ಹೌದು, ಎಲ್ಲರೂ ಆಗಾಗ ಓದಿಕೊಳ್ಳಬೇಕಾದ ಪಾಠ ಅನ್ನಿ.