Thursday, March 08, 2018

ವಿಶ್ವ ಮಹಿಳಾ ದಿನವೆಂದಾಗ 'ತೊಂಡೆಕಾಯಿ ಅಮ್ಮ' ನೆನಪಾದಳು

ಶಾಸನ ವಿಧಿಸದ ಎಚ್ಚರಿಕೆ: ಓದಿದ ಮಡಿವಂತರಿಗೆ ಕೊಂಚ ಇರುಸುಮುರುಸಾಗಬಹುದು.

ಮಾರ್ಚ್, ೮. ಇವತ್ತು ವಿಶ್ವ ಮಹಿಳಾ ದಿವಸವಂತೆ. ಯಾಕೋ 'ತೊಂಡೆಕಾಯಿ ಅಮ್ಮ' ನೆನಪಾದರು.

ತೊಂಡೆಕಾಯಿ ಅಮ್ಮ - ೧೯೭೦ ರ ವರೆಗೂ ಇದ್ದ ಒಬ್ಬ ಮಡಿ ಅಮ್ಮ / ಅಜ್ಜಿ. ಅರ್ಥಾತ್ ಶಿರೋಮುಂಡನ ಮಾಡಿಸಿಕೊಂಡಿದ್ದ ಹವ್ಯಕ ಬ್ರಾಹ್ಮಣ ವಿಧವೆ. ಅದೆಲ್ಲೋ ನಮ್ಮ ಸಿರ್ಸಿ / ಉತ್ತರ ಕನ್ನಡದ ಕಡೆ ಇದ್ದರಂತೆ. ಅವರೊಬ್ಬ living legend. ಅವರ ಬಗ್ಗೆ ಕಥೆಗಳು, ದಂತಕಥೆಗಳು ಬಹಳ.

ತೊಂಡೆಕಾಯಿ ಅಮ್ಮನ ವಿಶೇಷ ಅಂದರೆ ಅವರು ಎಂಟ್ರಿ ಕೊಟ್ಟರು ಅಂದರೆ ಅಲ್ಲಿದ್ದ ಮಹಿಳಾಮಣಿಗಳೆಲ್ಲ ಎದ್ದೆವೋ ಬಿದ್ದೆವೋ ಎಂಬಂತೆ ಬಿದ್ದಾಕಿ ಓಡುತ್ತಿದ್ದರಂತೆ. ಒಟ್ಟಿನಲ್ಲಿ bull in a china shop ಮಾದರಿ. ಪಿಂಗಾಣಿ ಅಂಗಡಿಯೊಂದಕ್ಕೆ ಗೂಳಿ ನುಗ್ಗಿದಂತೆ ತೊಂಡೆಕಾಯಿ ಅಮ್ಮನ ಆಗಮನ.

ಯಾರೋ ಒಬ್ಬ ಫಣಿಯಮ್ಮನಂತಹ ಪಾಪದ ಮಡಿಯಮ್ಮ ಮಹಿಳಾಮಂಡಳಿಯೊಳಗೆ ಸೇರಿಕೊಂಡರೆ ಇತರೆ ಮಹಿಳೆಯರೆಲ್ಲ ಯಾಕೆ ಓಡುತ್ತಿದ್ದರು?

ತೊಂಡೆಕಾಯಿ ಅಮ್ಮ ನಿರ್ಗತಿಕ ಬಡ ವಿಧವೆ. ಆಕಾಲದಲ್ಲಿ ಮಹಿಳೆಯರಿಗೆ ವಿದ್ಯೆ ಗಿದ್ಯೆ ನಾಸ್ತಿ. ಏನೋ ನೌಕರಿ ಚಾಕರಿ ಮಾಡಿಕೊಂಡು ಇರುತ್ತಿದ್ದರು. ಹೆಚ್ಚಿನ ವಿಧವೆಯರು ಸೂಲಗಿತ್ತಿ, ಸೂಲಗಿತ್ತಿಯ ಸಹಾಯಕಿ, ಅಡುಗೆಯವರು, ಇತ್ಯಾದಿ ಕೆಲಸ ಮಾಡಿಕೊಂಡಿರುತ್ತಿದ್ದರು. ಬ್ರಾಹ್ಮಣರಾಗಿರುತ್ತಿದ್ದರಿಂದ ಕಸ ಮುಸುರೆ ಕೆಲಸ ಅವರಿಗೆ ಬೇಕೆಂದರೂ ಸಿಗುತ್ತಿರಲಿಲ್ಲ. ಒಟ್ಟಿನಲ್ಲಿ ಏನೋ ಜುಗಾಡ್ ಮಾಡಿಕೊಂಡು ಒಪ್ಪತ್ತಿನ ಕೂಳು, ಮೆಲ್ಲಲೊಂದಿಷ್ಟು ಎಲೆಯಡಿಕೆ ತಂಬಾಕು, ಏರಿಸಲು ಒಂದು ಚಟಾಕು ನಾಶಿಪುಡಿ, ಉಡಲೊಂದು ಜೊತೆ ಕೆಂಪು ಸೀರೆಯ ಬಂದೋಬಸ್ತ್ ಮಾಡಿಕೊಂಡು, ದೇವರನಾಮ ಹೇಳಿಕೊಂಡು ಇರುತ್ತಿದ್ದವು ಆ ಪಾಪದ ಮಡಿ ಜೀವಗಳು.

'ತೊಂಡೆಕಾಯಿ ಅಮ್ಮ' ಹುಡುಕಿಕೊಂಡಿದ್ದ ಕೆಲಸ ಬಾಣಂತಿ ಸೇವೆ. ಅದರಲ್ಲೂ ನವಜಾತ ಶಿಶುಗಳ ಆರೈಕೆಯಲ್ಲಿ ಅಮ್ಮನದು ಎತ್ತಿದ ಕೈ. ಆಗಷ್ಟೇ ಹುಟ್ಟಿದ ಶಿಶುಗಳಿಗೆ ಸ್ನಾನ ಮಾಡಿಸುವದು ಭಯಂಕರ ನಾಜೂಕಿನ ಕೆಲಸವಂತೆ. ಗೋಣು ಇನ್ನೂ ಗಟ್ಟಿಯಾಗಿರುವದಿಲ್ಲ. ಹಸಿ ತಲೆ ಬುರುಡೆ ಮೃದು ಮೃದು. ಹಾಗಾಗಿ ತುಂಬಾ ಜಾಗರೂಕತೆಯಿಂದ ಶಿಶುವಿನ ಸ್ನಾನ ಆಗಬೇಕು. ಇದರಲ್ಲಿ ತೊಂಡೆಕಾಯಿ ಅಮ್ಮನದು ಎತ್ತಿದ ಕೈ. ತೊಂಡೆಕಾಯಿ ಅಮ್ಮನ ನಾಜೂಕಿನ ಕೈಯಲ್ಲಿ ಶಿಶುವಿನ ಗೋಣು ಉಳುಕಿಸಿದ ಅಥವಾ ತಲೆಯನ್ನು ತಟ್ಟಬಾರದ ರೀತಿಯಲ್ಲಿ ತಟ್ಟಿ ಚಪ್ಪಟೆ ತಲೆ ಮಾಡಿಹಾಕಿದ ಉದಾಹರಣೆಗಳೇ ಇಲ್ಲ. ತೊಂಡೆಕಾಯಿ ಅಮ್ಮನ ಕೈಯಲ್ಲಿ ಸ್ನಾನ ಮಾಡಿಸಿಕೊಂಡ ಶಿಶುಗಳು ಸಿಕ್ಕಾಪಟ್ಟೆ ಮಸ್ತಾಗಿ ತಯಾರಾಗುತ್ತಿದ್ದವು. ಅದೇ ಅವರ claim to fame.

ಇಂತಹ ತೊಂಡೆಕಾಯಿ ಅಮ್ಮ ಮಹಿಳಾಮಂಡಲದಲ್ಲಿ ಬಂದು ಶಾಮೀಲಾದರು ಅಂದರೆ ಮುಗಿಯಿತು. ಅಲ್ಲಿದ್ದ ಸುಮಂಗಳೆಯರ ಪೈಕಿ ಹೆಚ್ಚಿನವರ ಗಂಡಂದಿರು ಅಮ್ಮನ ಆರೈಕೆಯಲ್ಲಿ ಬೆಳೆದವರೇ ಆಗಿರುತ್ತಿದ್ದರು. ಅಲ್ಲಿದ್ದ ಮಹಿಳಾಮಣಿಗಳ ಪತಿದೇವರುಗಳು ಶಿಶುವಿದ್ದಾಗ ಹೇಗಿದ್ದರು, ಹೇಗೆ ಅಮ್ಮ ಅವರ ಆರೈಕೆ ಅದರಲ್ಲೂ ಸ್ನಾನ ಮಾಡಿಸಿದ್ದರು, ಇತರೆ ತರೇವಾರಿ ಬಾಲ್ಯದ ಘಟನೆಗಳನ್ನು ರಸವತ್ತಾಗಿ ವಿವರಿಸುವದೆಂದರೆ ತೊಂಡೆಕಾಯಿ ಅಮ್ಮನಿಗೆ ಇನ್ನಿಲ್ಲದ ಹುರುಪು.

ಊಹಿಸಿಕೊಳ್ಳಿ. ಮಲೆನಾಡಿನ ಹವ್ಯಕರ ಮನೆಯೊಂದರಲ್ಲಿ ಏನೋ ಸಮಾರಂಭ. ಭರ್ಜರಿ ಊಟ ಮುಗಿದಿದೆ. ಮಹಿಳೆಯರೆಲ್ಲ ಕೂಡಿ ಕುಳಿತಿದ್ದಾರೆ. ಭರ್ಜರಿ ಎಲೆಯಡಿಕೆ (ಕವಳ) ಮೆಲ್ಲುತ್ತಿದ್ದಾರೆ. ಹಾಳು ಹರಟೆ ಉತ್ತುಂಗದಲ್ಲಿದೆ. ಮಕ್ಕಳು ಬಂದು ಪೀಡಿಸುತ್ತಾರೆ. ಅವರಿಗೆ ಅಮ್ಮನಿಗೆ ಬಂದ ದಕ್ಷಿಣೆ ಕಾಸಿನ ಮೇಲೆ ಕಣ್ಣು. ಅದರಲ್ಲಿ ಪುಗ್ಗಾ ಅದು ಇದು ಕೊಳ್ಳುವ ಉಮೇದಿ. ಹೀಗೆ ಸಂತಸದ ಗೌಜುಗದ್ದಲದ ವಾತಾವರಣ ಇರುವಾಗ ತೊಂಡೆಕಾಯಿ ಅಮ್ಮ ಎಂಟ್ರಿ ಕೊಟ್ಟರು ಅಂದರೆ ಮುಗಿಯಿತು.

ತೊಂಡೆಕಾಯಿ ಅಮ್ಮ ಶಿಶುಗಳಿಗೆ ಸ್ನಾನ ಮಾಡಿಸುತ್ತಿದ್ದರು ನಿಜ. ಅದೇಕೋ ಏನೋ ಅಮ್ಮನಿಗೆ ಶಿಶುಗಳ 'ತೊಂಡೆಕಾಯಿ' ಬಗ್ಗೆ ವಿವರಣೆ ಕೊಡುವದೆಂದರೆ ಭಯಂಕರ ಆಸಕ್ತಿ. ಈಗ 'ತೊಂಡೆಕಾಯಿ' ಅಂದರೇನು ಅಂತ ನಾನು ನಿಮಗೆ ಹೇಳಬೇಕಾಗುತ್ತದೆ. ತೊಂಡೆಕಾಯಿ ಅಂದರೆ ತರಕಾರಿ ನಿಜ. ಹಾಗೆಯೇ ತೊಂಡೆಕಾಯಿ ಇದು ಬಹುಪಯೋಗಿ ಪದ. ಅನೇಕ ಅರ್ಥಗಳಿವೆ. ಮಾನವ ಶರೀರ ಅಂದಮೇಲೆ ಎಲ್ಲ ಅಂಗಾಂಗಳೂ ಇರುತ್ತವೆ. ಗಂಡಸಿನ ಜನನಾಂಗಕ್ಕೆ ಶಾಸ್ತ್ರಬದ್ಧವಾಗಿ ಶಿಶ್ನ, ಲಿಂಗ ಅನ್ನಬಹುದು. ಸ್ವಲ್ಪ ಕಸಿವಿಸಿಯಾಗುವಂತೆ ಶುದ್ಧ ಕನ್ನಡದಲ್ಲಿ ತು* ಅನ್ನಬಹುದು. ಆದರೆ ಇದ್ಯಾವದೂ ಹವ್ಯಕರಿಗೆ ಒಪ್ಪಿಗೆಯಾದಂತೆ ಕಾಣುವದಿಲ್ಲ. ಅದರಲ್ಲೂ ಚಿಕ್ಕ ಹುಡುಗರ ಚಿಕ್ಕ ಜನನಾಂಗಕ್ಕೆ ಹಾಗೆಲ್ಲ ಅಂದುಬಿಟ್ಟರೆ ಅದು ಹೊಂದಲಿಕ್ಕೂ ಇಲ್ಲ. ಹಾಗಾಗಿ ಹವ್ಯಕ ಭಾಷೆಯಲ್ಲಿ (ಚಿಕ್ಕ) ಹುಡುಗರ ಲಿಂಗಕ್ಕೆ ತೊಂಡೆಕಾಯಿ ಅಂದುಬಿಡುತ್ತಾರೆ. ಸುಮಾರಾಗಿ ಆದ್ರೂ ಸರಿ ಸೈಜಿಗೆ ಗಾತ್ರಕ್ಕೆ ಉದ್ದಗಲಕ್ಕೆ ಸರಿ ಹೊಂದುತ್ತದೆ. ಅರ್ಥ ತಿಳಿಯುತ್ತದೆ. ಪದ ತರಕಾರಿಯ ಹೆಸರು. ಅಸಹ್ಯ ಅನ್ನಿಸುವದಿಲ್ಲ. ಮಿಣ್ಣಿಕಾಯಿ ಕೂಡ ಚಾಲ್ತಿಯಲ್ಲಿರುವ ಪರ್ಯಾಯ ಪದ.

ತೊಂಡೆಕಾಯಿ...ಇದು ತರಕಾರಿ! ;)


ಶಿಶುಗಳಿಗೆ ಸ್ನಾನ ಮಾಡಿಸುತ್ತಿದ್ದ ಅಮ್ಮನ ಕಣ್ಣಿಗೆ ಶಿಶುಗಳ ತೊಂಡೆಕಾಯಿ ಕಂಡೇ ಕಾಣುತ್ತಿತ್ತು. ಕಾಣದೇ ಇರಲು ಶಿಶುಗಳೇನು ಕೌಪೀನ ಧರಿಸಿ ಸ್ನಾನ ಮಾಡುತ್ತವೆಯೇ? ಇಲ್ಲ. ಫುಲ್ ಗೊಮ್ಮಟೇಶ್ವರ ಅವತಾರದಲ್ಲೇ ಸ್ನಾನ. ನಂತರ ಚಡ್ಡಿ ಪಿಡ್ಡಿ ಹಾಕಿದರೆ ಪುಣ್ಯ. ಕೊಂಚ ಗಾಳಿ ಆಡಿಕೊಂಡಿರಲಿ ಅಂತ ಹಾಗೇ ಬಿಟ್ಟರೆ ಜೈ ಗೊಮ್ಮಟೇಶ್ವರ.

ನೆರೆದಿರುವಂತಹ ಮಹಿಳಾಮಂಡಳಿಯಲ್ಲಿ ಅನ್ನಪೂರ್ಣಾ ಅನ್ನುವ ಹೆಸರಿನ ಮುತ್ತೈದೆ ಮೇಲೆ ಅಮ್ಮನ ಕಣ್ಣುಬಿತ್ತು ಅಂದುಕೊಳ್ಳಿ. ತೊಂಡೆಕಾಯಿ ಅಮ್ಮನ ಮಾತಿನ ಲಹರಿ ಹೀಗಿರುತ್ತಿತ್ತು. ಶುದ್ಧ ಹವ್ಯಕ ಭಾಷೆಯಲ್ಲಿ...

'ತಂಗೀ...ಅನ್ನಪೂರ್ಣೆ ಅಲ್ಲದನೇ? ರಾಶಿ ದಿನಾಗಿತ್ತಲೇ ನೋಡದ್ದೆ. ಶಿಶುವಿದ್ದಾಗ ನಿನ್ನ ಗಂಡ ಶ್ರೀಪತಿಯಾ ಆನೇ ಮೀಸ್ತಿದ್ದಿ ಹೇಳಿ. ತೆಳತ್ತಾ? ಶ್ರೀಪತಿ ತೊಂಡೆಕಾಯಿ ಥಂಡಿಯಲ್ಲಿ ಮುರುಟಿ ಮುರುಟಿ ಇಷ್ಟ ಶಣ್ಣ ಆಕ್ಯ ಇರ್ತಿತ್ತು ಬಿಲಾ. ಒಂದ್ಹನೀಯಾ ಬಿಸಿನೀರು ಹನಿಸಿದ ಮ್ಯಾಲೆಯೇ ಅಲ್ಲೊಂದು ತೊಂಡೆಕಾಯಿ ಇದ್ದು ಹೇಳಿ ಕಾಣವು. ಅಲ್ಲಿವರಿಗೆ ತೊಂಡೆಕಾಯಿ ಕೇಳಡಾ ನೀನು.... ' ಹೀಗೆ ಶುದ್ಧ ಹವ್ಯಕ ಭಾಷೆಯಲ್ಲಿ ಅನ್ನಪೂರ್ಣಾ ಅನ್ನುವ ಹೆಸರಿನ ಸುಮಂಗಲೆಯ ಮುಂದೆ ಆಕೆಯ ಪತಿರಾಯನ ಬಾಲ್ಯದ ತೊಂಡೆಕಾಯಿಯ ವರ್ಣನೆ ನಡೆಯುತ್ತಿತ್ತು.

(ನಿಮಗೆ ನಮ್ಮ ಹವ್ಯಕ ಕನ್ನಡ ಅರ್ಥವಾಗದಿದ್ದರೆ: ತಂಗಿ, ನೀನು ಅನ್ನಪೂರ್ಣಾ ಅಲ್ಲವೇನೇ? ಬಹಳ ದಿನಗಳಾಗಿತ್ತು ನಿನ್ನನ್ನು ನೋಡದೆ. ಶಿಶುವಿದ್ದಾಗ ನಿನ್ನ ಗಂಡ ಶ್ರೀಪತಿಯನ್ನು ನಾನೇ ಸ್ನಾನ ಮಾಡಿಸುತ್ತಿದ್ದೆ. ಶ್ರೀಪತಿಯ 'ತೊಂಡೆಕಾಯಿ' ಚಳಿಯಲ್ಲಿ ಮುರುಟಿ ಮುರುಟಿ ಇಷ್ಟು ಸಣ್ಣ ಆಗಿರುತ್ತಿತ್ತು. ಕೊಂಚ ಬಿಸಿನೀರು ಹಾಕಿದ ಮೇಲೆಯೇ ಅಲ್ಲೊಂದು ತೊಂಡೆಕಾಯಿ ಇರುವ ಕುರುಹು ಕಾಣುತ್ತಿತ್ತು. ಅಲ್ಲಿಯವರೆಗೆ ತೊಂಡೆಕಾಯಿ ಬಗ್ಗೆ ನೀ ಕೇಳಬೇಡ!)

ಶಿವಾಯ ನಮಃ! ಅಲ್ಲರೀ... ಆ ಪಾಪದ ಮುತ್ತೈದೆ ಅನ್ನಪೂರ್ಣಾ ಅದೆಷ್ಟು ಸಂಕೋಚ ಅನುಭವಿಸುತ್ತಿರಬೇಕು ಊಹಿಸಿ, ಅದೂ ಬಾಕಿ ಮಹಿಳೆಯರೆಲ್ಲ ತಲೆ ಕೆಳಗೆ ಹಾಕಿ, ಒಬ್ಬರನೊಬ್ಬರು ತಿವಿದುಕೊಳ್ಳುತ್ತ ಮುಸಿಮುಸಿ ನಗುತ್ತಿರುವಾಗ!

'ಥೋ ಅಮ್ಮಾ! ಅದೆಂತದು ಹೇಳಿ ಮಳ್ಳ ಹಲಬ್ತ್ಯೆ. ಯಾವಾಗ ಎಂತಾ ಮಾತಾಡವು ಹೇಳಿ ತೆಳಿತಿಲ್ಲೆ ನಿಂಗೆ. ಇಶೀ ಮಳ್ಳೆಯಾ... ' ಎಂದು ನಾಚಿಕೆಯಿಂದ ಕೆಂಪಕೆಂಪಾಗಿ ಮುದ್ದೆಯಾಗಿರುವ ಅನ್ನಪೂರ್ಣ ತೊಂಡೆಕಾಯಿ ಅಮ್ಮನನ್ನು ಗದರಿಸಿದರೆ ತೊಂಡೆಕಾಯಿ ಅಮ್ಮನದು ಏನೂ ಅರಿಯದ ಶುದ್ಧ ಮುಗ್ಧ ನಗೆ. ಹುಚ್ಚ ಪ್ಯಾಲಿ ನಗೆ.

ಹೀಗೆ ಅನ್ನಪೂರ್ಣಳನ್ನು ಗೋಳೊಯ್ದುಕೊಂಡ ಮೇಲೆ ಕಂಡಾಕೆ ಮತ್ತೊಬ್ಬಳು. ಅವಳ ಹೆಸರು ನಾಗವೇಣಿ ಅಂತಿಟ್ಟುಕೊಳ್ಳಿ. ಅಮ್ಮನ ಕಣ್ಣು ಆಕೆಯ ಮೇಲೆ ಬಿತ್ತು. ಫುಲ್ ಬಾಡಿ ಡೀಪ್ ಸ್ಕ್ಯಾನ್ ಮಾಡಿದ ಅಮ್ಮ ನಾಗವೇಣಿಯ ಗರ್ಭದ ಹೊಸ ಪ್ರೊಡಕ್ಷನ್ ಮಿಸ್ ಮಾಡುವಂತಿರಲಿಲ್ಲ.

''ತಂಗೀ  ನಾಗವೇಣಿ. ಮತ್ತೆ ಬಸುರಿದ್ಯನೇ? ಇದು ಮೂರ್ನೇದ್ದು ಅಲ್ಲದನೇ? ಮೂರ್ನೆದ್ದೇ. ಯಂಗೆ ಗೊತ್ತಿಲ್ಯ? ಮೊದಲಿನ ಎರಡೂ ಶಿಶುಗಳನ್ನ ಮೀಸಿಕೊಟ್ಟಿದ್ದು ಆನೇ ಅಲ್ಲದನೇ. ತಂಗೀ ನಿಂಗೆ ಗೊತ್ತಿದ್ದ? ನಿನ್ನ ಗಂಡ ಪದ್ಮನಾಭ ಇದ್ದನಲೇ. ಪದ್ಮನಾಭನ ಅಮ್ಮ, ಅದೇ ಯಂಕಟು ಭಾವನ್ ಮೂರನೇ ಹೆಂಡ್ತಿ, ಸುಶೀಲತ್ತಿಗೆ ಹೇಳಿ ಇದ್ದಿತ್ತು. ಹಳೇ ಹಲ್ಕಟ್ ಮುದುಕಿ ಅದು. ಅದು ಪ್ರತಿ ಬಾರಿ ಯಂಗೆ ಹೇಳ್ತಿತ್ತು. ಶಿಶುವಿನ ಮೀಸಿಯಾದ ಮ್ಯಾಲೆ ತೊಂಡೆಕಾಯಿಯಾ ಮರಿಯದ್ದೇ ತಣ್ಣೀರಿನಿಂದ ತೊಳ್ಸವು ಹೇಳಿ. ಅದು ಯಂಗೆ ಗೊತ್ತಿಲ್ಯನೇ? ಬಿಸಿನೀರಲ್ಲಿ ಮೀಸಿದ ಮ್ಯಾಲೆ ಗಂಡುಡ್ಗ್ರ ತೊಂಡೆಕಾಯಿ ತಣ್ಣೀರಲ್ಲಿ ತೊಳ್ಸದೆಯಾ. ಇಲ್ಲದಿದ್ದರೆ ಕಡಿಗೆ ಗಂಡಸ್ರಿಗೆ ಮುಂದೆ ಮಕ್ಕ ಅಪ್ಪದು ಖಾತ್ರಿಯಿಲ್ಲೆ ನೋಡು. ಬಿಶಿನೀರಿಂದ ವೀರ್ನಾಶಾ (ವೀರ್ಯನಾಶ) ಆಗೋಗ್ತಳಾ. ತೆಳತ್ತಾ? ಈಗ ನೋಡು ನಿನ್ನ ಗಂಡ ಪದ್ಮನಾಭ ಹ್ಯಾಂಗಿದ್ದಾ ಹೇಳಿ. ಎರಡು ಸಲಿ ಆತು ಈಗ ಮೂರನೇ ಸಲಿ ಅಪ್ಪ ಅಪ್ಪಲೆ ಹೊಂಟಿದ್ದ. ಅಡ್ಡಿಲ್ಲೆ ಮಾಣಿ. ಜೋರಿದ್ದ. ತೊಂಡೆಕಾಯಿ ತಣ್ಣೀರಲ್ಲಿ ತೊಳ್ಸಿದ್ದು ಉಪಯೋಗಾತು ಹೇಳ್ಯಾತು. ಅಲ್ಲದನೇ? ನಿಂಗೆ ಡಾಲಿವರಿ ದಿನ ಯಾವಾಗ ಕೊಟ್ಟಿದ್ರು ಡಾಕ್ಟ್ರು? ಎಲ್ಲಿ ಹಡಿಯವು ಮಾಡಿದ್ದೆ? ಮನಿಯಲ್ಲ? ಅಪ್ಪನ ಮನಿಯಲ್ಲ? ಅಥವಾ ಆಸ್ಪತ್ರೆಯಲ್ಲ? ಯನಗೆ ಮೊದಲೇ ತಿಳಿಸಿಬಿಡು. ಅಕಾss??!!"

ಇಷ್ಟು ಕೇಳಿದ ನಾಗವೇಣಿ ಎಂಬ ಎರಡೂವರೆ ಮಕ್ಕಳ ಮಹಾತಾಯಿ ಮೊದಲು ವಿಪರೀತ ನಾಚಿಕೊಂಡು, ನಂತರ ನಾಗಿಣಿಯಂತೆ ಭುಸುಗುಟ್ಟದಿದ್ದರೆ ಅದಕ್ಕಿರುವ ಕಾರಣ ಅಮ್ಮನ ಭೋಳೆತನ, ಒಳ್ಳೆತನ ಮತ್ತು ಮಂಕುತನ.

(ನಿಮಗೆ ನಮ್ಮ ಹವ್ಯಕ ಕನ್ನಡ ಅರ್ಥವಾಗದಿದ್ದರೆ: ತಂಗಿ ನಾಗವೇಣಿ. ಮತ್ತೆ ಬಸುರಿದ್ದಿಯೇನು? ಇದು ಮೂರನೇಯದ್ದು ಅಲ್ಲವೇ? ಮೂರನೆಯದ್ದೇ. ನನಗೆ ಗೊತ್ತಿಲ್ಲವೇ? ಮೊದಲಿನ ಎರಡೂ ಶಿಶುಗಳ ಸ್ನಾನ ಮಾಡಿಸಿಕೊಟ್ಟಿದ್ದು ನಾನೇ ತಾನೇ? ತಂಗಿ ನಿನಗೆ ಗೊತ್ತಿದೆಯೇ? ನಿನ್ನ ಗಂಡ ಪದ್ಮನಾಭ ಇದ್ದಾನಲ್ಲ? ಪದ್ಮನಾಭನ ಅಜ್ಜಿ, ವೆಂಕಟ ಭಾವನ ಮೂರನೇ ಹೆಂಡತಿ, ಸುಶೀಲತ್ತಿಗೆ ಅಂತಿದ್ದರು. ಹಳೇ ಹಲ್ಕಟ್ ಮುದುಕಿ ಅವರು. ಅವರು ನನಗೆ ಪ್ರತಿಬಾರಿ ಹೇಳುತ್ತಿದ್ದರು. ಗಂಡು ಶಿಶುವಿನ ಸ್ನಾನ ಮಾಡಿಸಿದ ಮೇಲೆ ಜನನಾಂಗವನ್ನು ಮರೆಯದೇ ತಣ್ಣೀರಿನಿಂದ ತೊಳೆಯಬೇಕು ಎಂದು. ಅದು ನನಗೆ ಗೊತ್ತಿಲ್ಲವೇ? ಬಿಸಿನೀರಲ್ಲಿ ಸ್ನಾನ ಮಾಡಿಸಿದ ಮೇಲೆ ತೊಂಡೆಕಾಯಿಯನ್ನು ತಣ್ಣೀರಿನಲ್ಲಿ ತೊಳೆಸುವುದೇ. ಇಲ್ಲದಿದ್ದರೆ ಮುಂದೆ ಗಂಡಸರಿಗೆ ಮಕ್ಕಳಾಗುವದು ಖಾತ್ರಿ ಇಲ್ಲ. ಬಿಸಿನೀರಿನಿಂದ ವೀರ್ಯನಾಶವಾಗಿಹೋಗುತ್ತದಂತೆ. ಈಗ ನಿನ್ನ ಗಂಡ ಪದ್ಮನಾಭನನ್ನೇ ನೋಡು ಹೇಗಿದ್ದಾನೆ. ಎರಡು ಬಾರಿ ಆಯಿತು. ಈಗ ಮೂರನೇ ಬಾರಿ ತಂದೆಯಾಗಲು ಹೊರಟಿದ್ದಾನೆ. ಮಾಣಿ ಅಡ್ಡಿಯಿಲ್ಲ. ಜೋರಾಗಿದ್ದಾನೆ. ತೊಂಡೆಕಾಯಿಯನ್ನು ತಣ್ಣೀರಿನಲ್ಲಿ ತೊಳೆಸಿದ್ದು ಉಪಯೋಗವಾಯಿತು ಅಂದಂತಾಯಿತು. ಅಲ್ಲವೇ? ನಿನಗೆ ಡೆಲಿವರಿ ಡೇಟ್ ಎಂದು ಕೊಟ್ಟಿದ್ದಾರೆ ಡಾಕ್ಟರ್? ಎಲ್ಲಿ ಹಡೆಯುವಾಕೆ ನೀನು? ಗಂಡನ ಮನೆಯಲ್ಲೋ? ತವರುಮನೆಯಲ್ಲೋ? ಅಥವಾ ಆಸ್ಪತ್ರೆಯಲ್ಲೋ? ನನಗೆ ಮೊದಲೇ ತಿಳಿಸಿಬಿಡು. ಸರಿನೇ?)

ಹೀಗೆ ಇಬ್ಬರು ಮುತ್ತೈದೆಯರ ಪತಿಪರಮೇಶ್ವರರ ಬಾಲ್ಯದ ತೊಂಡೆಕಾಯಿ ಪುರಾಣದ ಕೇವಲ ಸ್ಯಾಂಪಲ್ ಹೇಳುವಷ್ಟರಲ್ಲಿ ಸಂಕೋಚ, ನಾಚಿಗೆ, ಕಿರಿಕಿರಿ ತಡೆಯಲಾಗದ ಮಹಿಳಾಮಂಡಲ ಅಲ್ಲಿಂದ ಗಾಯಬ್ ಆಗಿ ಬೇರೆ ಎಲ್ಲೋ ಜಮಾಯಿಸುತ್ತಿತ್ತು. 'ಆ ಮಳ್ಳ ತೊಂಡೆಕಾಯಿ ಅಮ್ಮ ಇಲ್ಲೊಂದು ಬರ್ದಿದ್ರೆ ಸಾಕು. ಮತ್ತ ಗಂಡಂದಿಕ್ಕಳ ತೊಂಡೆಕಾಯಿ ಬಗ್ಗೆ ಮಳ್ಳ ಹಲಬಲ್ಲೆ ಶುರು ಮಾಡ್ಚು ಅಂದರೆ ಮುಗತ್ತು. ಭಗವಂತಾ ಇಷ್ಟು ವರ್ಷಾತು. ಜನಕ್ಕೆ ಲೈಕ್ ಆಗ್ತಿಲ್ಲೆ ಹೇಳಿ ಅದ್ಕೆ ಗೊತ್ತಾಗ್ತಿಲ್ಯಾ? ಅದೆಂತಕ್ಕೆ ಹಾಂಗ ಮಳ್ಳ ಹರಿತನಪಾ? ಹಾಂಗೆ ಹೇಳಿ ಗನಾ ಅಮ್ಮ ಮತ್ತೆ... ' ಎಂದು ಮಹಿಳಾಮಂಡಳಿ ಬೇರೊಂದು ಜಾಗದಲ್ಲಿ ಎರಡನೇ ಹರಟೆ ಸೆಷನ್ನಿಗೆ ತೆರೆದುಕೊಳ್ಳುತ್ತಿತ್ತು.

(ಆ ಹುಚ್ಚ ತೊಂಡೆಕಾಯಿ ಅಮ್ಮ ಇಲ್ಲೂ ಕೂಡ ಬರದಿದ್ದರೆ ಸಾಕು. ಮತ್ತೆ ಗಂಡಂದಿರ ತೊಂಡೆಕಾಯಿ ಬಗ್ಗೆ ಹುಚ್ಚುಚ್ಚಾಗಿ ಮಾತಾಡುತ್ತಾರೆ. ಭಗವಂತಾ! ಇಷ್ಟು ವರ್ಷವಾಯಿತು. ಜನರಿಗೆ ಇಷ್ಟವಾಗುವದಿಲ್ಲ ಅಂತ ಅವರಿಗೆ ಅರ್ಥವಾಗುವದಿಲ್ಲವೇ? ಯಾಕೆ ಮಳ್ಳುಮಳ್ಳಾಗಿ ಆಡುತ್ತಾರೋ? ಆದರೆ ಏನೇ ಹೇಳಿ ಅಮ್ಮ ತುಂಬಾ ಒಳ್ಳೆಯವರು.)

ಅಲ್ಲಿಗೂ ಅಮ್ಮನ ಪ್ರವೇಶವಾದರೆ ಆಶ್ಚರ್ಯವಿಲ್ಲ. ಅಮ್ಮನೂ ಎಲೆಯಡಿಕೆ ಅಗಿಯುತ್ತ, ಸೊಂಟಕ್ಕೆ ಕಟ್ಟಿಕೊಂಡಿದ್ದ ಕವಳದ ಸಂಚಿಯನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತ ಎಂಟ್ರಿ ಕೊಡುತ್ತಿದ್ದರು. 'ಅಯ್ಯೋ, ನಿಂಗ ಎಲ್ಲಾ ಇಲ್ಲಿ ಬಂದು ಸೇರಿಗಿದ್ರ? ಅಲ್ಲಿಂದ ಎಂತಕ್ಕೆ ಓಡ್ಬಂದಿ?' ಎಂದು ಅಮ್ಮ ಮುಗ್ಧ ಪ್ರಶ್ನೆ. ತಮ್ಮ ತೊಂಡೆಕಾಯಿ ಪುರಾಣವೇ ಮಹಿಳಾಮಂಡಲದ ಸ್ಥಾನಪಲ್ಲಟಕ್ಕೆ ಕಾರಣ ಅಂತ ಅವರಿಗೆ ಬಿಲ್ಕುಲ್ ತಿಳಿಯುತ್ತಿರಲಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಅನ್ನುವಂತಿದ್ದರು ಅಮ್ಮ. Innocently stupid or stupidly innocent.

ತೊಂಡೆಕಾಯಿ ಅಮ್ಮನನ್ನು ನಾವಂತೂ ನೋಡಿಲ್ಲ. ಆದರೆ ಹೆಂಗಳೆಯರ ಮಾತಿನ ಮಧ್ಯೆ ತೊಂಡೆಕಾಯಿ ಅಮ್ಮ ಬಂದುಹೋಗಿದ್ದನ್ನು ಕೇಳಿದ್ದೇನೆ. ಮಹಿಳೆಯರು ತಮ್ಮತಮ್ಮಲ್ಲೇ ಪೋಲಿ ಮಾತಾಡಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಇಂತಹ ಕಥೆಗಳು ಹೊರಬರುತ್ತವೆ. ನಮ್ಮಂತಹ ಚಿಕ್ಕ ಹುಡುಗರಿಗೆ ಏನೂ ಗೊತ್ತಾಗುವದಿಲ್ಲ ಅಂದುಕೊಂಡಿರುತ್ತಾರೆ. ಎಂದೋ ಕೇಳಿದ್ದು ಮಂಡೆಯಲ್ಲಿ ಎಲ್ಲೋ ಶೇಖರವಾಗಿರುತ್ತದೆ. ಇವತ್ತಿನಂತೆ ಎಂದೋ ಹೀಗೆ ನೆನಪಿಗೆ ಬರುತ್ತವೆ.

ತೊಂಡೆಕಾಯಿ ಅಮ್ಮನ ತರಹದ್ದೇ ಜಾತಿಯ ಮತ್ತೊಬ್ಬ ಕರುಣಾಮಯಿ ತಾಯಿ / ಅಜ್ಜಿ  ಅಂದರೆ 'ಒದ್ದೆ ಚಡ್ಡಿ ಅಮ್ಮ'. ಅವರಿಗೆ ಮಕ್ಕಳು ಎಲ್ಲಿ ಒದ್ದೆಯಾದ ಚಡ್ಡಿ ಹಾಕಿಕೊಂಡುಬಿಟ್ಟಿದ್ದಾರೋ ಅನ್ನುವ ಚಿಂತೆ. ಹಾಗಾಗಿ ಕಂಡಕಂಡ ಹುಡುಗರ ಚಡ್ಡಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಸರಕ್ ಅಂತ ಕೈಹಾಕಿಬಿಡುತ್ತಿದ್ದರು. ಮಕ್ಕಳು ಶಾಕ್ ಹೊಡೆಸಿಕೊಂಡವರಂತೆ ಜಿಗಿದರೆ ಅಮ್ಮನದು  ಒಂದೇ ವಾರಾತ, 'ಥೋ, ಕೆಟ್ಟ ಪೋರಾ! ನೀನು ಎಲ್ಲಿ ಒದ್ದೆ ಚಡ್ಡಿ ಹಾಕಿಕೊಂಡಿಯೋ ಅಂತ ನೋಡಿದೆ ಅಷ್ಟೇ. ಒದ್ದೆ ಚಡ್ಡಿ ಹಾಕಿಕೊಂಡರೆ ಜ್ವರ ಬಂದೀತು. ಹುಷಾರ್!'

ತೊಂಡೆಕಾಯಿ ಅಮ್ಮನಂತಹ ಮಹಿಳೆಯರು ತುಂಬಾ ಅಮಾಯಕರಾಗಿರುತ್ತಿದ್ದರು. ಎಷ್ಟೋ ಜನ ಬಾಲವಿಧವೆಯರು. ವಯಸ್ಸಿಗೆ ಬರುವ ಮುನ್ನವೇ ಬಾಲ್ಯವಿವಾಹವಾಗಿರುತ್ತಿತ್ತು. ಇವರು ಋತುಮತಿಯರಾಗಿ ಪಟ್ಟಕ್ಕೆ ಬರುವ ಹೊತ್ತಿಗೆ ಗಂಡ ಚಟ್ಟಕ್ಕೆ ಏರಿರುತ್ತಿದ್ದ ಅರ್ಥಾತ್ ಕೈಲಾಸ ಸೇರಿರುತ್ತಿದ್ದ. ಹಾಗಾಗಿ ಅವರಿಗೆ ಸಂಸಾರ, ಸಂಸಾರದ 'ಸುಖ' ಗೊತ್ತಿಲ್ಲ. ಹಾಗಾಗಿ ಸಣ್ಣ ಹುಡುಗರ ತೊಂಡೆಕಾಯಿ ಬಗ್ಗೆ 'ಸಹಜವಾಗಿ' ಮಾತಾಡಿದರೆ ವಿವಾಹಿತ ಮಹಿಳೆಯರು ಯಾಕೆ ಆಪರಿ ಸಂಕೋಚ ನಾಚಿಗೆ ಪಟ್ಟುಕೊಳ್ಳುತ್ತಾರೆ ಅನ್ನುವದು ತೊಂಡೆಕಾಯಿ ಅಮ್ಮನ ಪೈಕಿಯವರಿಗೆ ಚಿದಂಬರ ರಹಸ್ಯ.

ತೊಂಡೆಕಾಯಿ ಅಮ್ಮ ಈಗಿಲ್ಲ. ಅಂತಹ ಅಮ್ಮಂದಿರ ಜಮಾನಾ ಎಂದೋ ಮುಗಿದಿದೆ. ಬೇಜಾರಿನ ಸಂಗತಿ ಎಂದರೆ ಜನರಲ್ಲಿ ಅಂತಹ trademark ಅಮಾಯಕತೆ, ಮುಗ್ಧತೆ, ಸೇವಾಮನೋಭಾವ, ನಿಷ್ಕಲ್ಮಶ ಪ್ರೀತಿ ಕೂಡ ಮಾಯವಾಗಿದೆ. ಈಗ ಎಲ್ಲರೂ ಲೆಕ್ಕಾಚಾರದವರೇ. ಎಲ್ಲ ತಾಳೆ ಹಾಕಿಯೇ ಮಾತುಕತೆ. ಶುದ್ಧ ಬೆರಕೆ ಬುದ್ಧಿ.

ತೊಂಡೆಕಾಯಿಗೆ ಇಂಗ್ಲೀಷಿನಲ್ಲಿ ಏನೆನ್ನುತ್ತಾರೆ ಎಂದು ಗೊತ್ತಿರಲಿಲ್ಲ. Gentleman's Toe ಅನ್ನುವದು ತೊಂಡೆಕಾಯಿಗೆ ಇರುವ ಒಂದು ಇಂಗ್ಲೀಷ್ ಪದ. ತಿಳಿದು ತುಂಬಾ ನಗು ಬಂತು. ಬೆಂಡೆಕಾಯಿಗೆ lady's finger ಅಂತೆ. ತೊಂಡೆಕಾಯಿಗೆ Gentleman's Toe ಅಂತೆ. ಶಿವಾಯ ನಮಃ!

5 comments:

sunaath said...

ತೊಂಡೆಕಾಯಿ ಪುರಾಣ ಓದಿ, ಬಿದ್ದು ಬಿದ್ದು ನಕ್ಕೆ. ನನ್ನ ಅಜ್ಜಿಯೂ ಸಹ ನನಗೆ ಹೇಳುತ್ತಿತ್ತು: ‘ಏ ಮಾಣಿ, ಬಿಸಿನೀರಲ್ಲಿ ಮಿಂದಾದ ಬಳಿಕ, ತಣ್ಣೀರಲ್ಲಿ ತೊಳಕೊ.’ ಅದೆಂತಕ್ಕೆ ಅನ್ನೋದು ಈಗ ಗೊತ್ತಾಯ್ತು!

Mahesh Hegade said...

ನಿಮ್ಮ ಹಾಸ್ಯಪ್ರಜ್ಞೆಗೆ ಮತ್ತು ಕಾಮೆಂಟಿಗೆ ಧನ್ಯವಾದಗಳು, ಸುನಾಥ್ ಸರ್!

Tanmay Tondehalli said...


Very nice - compassionate and funny writeup!

ವಿ.ರಾ.ಹೆ. said...

ROFL, ಆ ಒಂದು ತಾಟ್ ತುಂಬಾ ತೊಂಡೆಕಾಯಿ ಚಿತ್ರ ಎಂತಕ್ ಬೇಕಿತ್ತೆನ!! :)

Mahesh Hegade said...

@ವಿಕಾಸ್, ಥ್ಯಾಂಕ್ಸ್.

ಚಿತ್ರವೊಂದು ಸಾವಿರ ತೊಂಡೆಕಾಯಿಗಳಿಗೆ...ಛೀ...ಅಲ್ಲಲ್ಲ...ಪದಗಳಿಗೆ ಸಮ ಹೇಳಿ ಇಲ್ಲ್ಯನಾ? ಜನಕ್ಕೆ ಗೊತ್ತಾಗದಿದ್ದರೆ ಗೊತ್ತಾಗಲಿ ಹೇಳಿ ಹಾಕ್ಜಿ ಬಿಲಾ. :) ROFL