Sunday, May 06, 2018

ಕಾನೂನು ಪಂಡಿತ ಸುಬ್ರಮಣಿಯನ್ ಸ್ವಾಮಿ

ಪ್ರತಿಷ್ಠಿತ ಮತ್ತು ಪ್ರಭಾವಿ ವ್ಯಕ್ತಿಗಳ ಮೇಲೆ ಜಡಿದಿರುವ ಮೊಕದ್ದಮೆಗಳಿಂದ ಸುಬ್ರಮಣಿಯನ್ ಸ್ವಾಮಿ ಸುದ್ದಿಯಲ್ಲಿರುತ್ತಾರೆ. ತಮ್ಮ ಮೊಕದ್ದಮೆಗಳನ್ನು ಹೆಚ್ಚಾಗಿ ತಾವೇ ವಾದಿಸುತ್ತಾರಾದ್ದರಿಂದ ಬಹಳ ಜನ ಸ್ವಾಮಿಯವರು ಖುದ್ದು ವಕೀಲರು ಎಂದು ತಿಳಿದಿದ್ದಾರೆ. ಸ್ವಾಮಿ ವಕೀಲರಲ್ಲ. ಆದರೆ ೯೯% ವಕೀಲರಿಗಿಂತ ಹೆಚ್ಚಿನ ಕಾನೂನು ಜ್ಞಾನ ಅವರಿಗಿದೆ. ಹಾಗಾಗಿಯೇ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಾಗ ಅವರ ಕಾನೂನು ಜ್ಞಾನವನ್ನು ಪುರಸ್ಕರಿಸಿ ನ್ಯಾಯಾಧೀಶರು ಸ್ವಾಮಿಯವರಿಗೆ ವಾದ ಮಂಡಿಸಲು ಅನುಮತಿ ಕೊಡುತ್ತಾರೆ. ಹೈಕೋಟ್, ಸುಪ್ರೀಂ ಕೋರ್ಟ್ ಕೂಡ ಅವರ ಕಾನೂನು ಜ್ಞಾನವನ್ನು ಪುರಸ್ಕರಿಸಿ ವಾದ ಮಾಡಲು ಅನುವು ಮಾಡಿಕೊಡುತ್ತದೆ ಅಂದರೆ ಸ್ವಾಮಿಯವರ ಕಾನೂನು ಜ್ಞಾನ ಎಷ್ಟು ಉತ್ಕೃಷ್ಟವಾದದ್ದು ಎಂದು ತಿಳಿಯುತ್ತದೆ.

ಸ್ವಾಮಿಯವರಲ್ಲಿರುವ ಒಂದು ಗಮನಾರ್ಹ ಮತ್ತು ಪ್ರಶಂಸಾರ್ಹ ಗುಣ ಎಂದರೆ ಹೊಸ ವಿಷಯಗಳನ್ನು ತ್ವರಿತವಾಗಿ ಕಲಿಯುವ ಆಸಕ್ತಿ ಮತ್ತು ಹೊಸ ವಿಷಯಗಳ ಮೇಲೆ ದಾಖಲೆ ಸಮಯದಲ್ಲಿ ಪರಿಣಿತಿ ಸಾಧಿಸುವದು. ಸ್ವಾಮಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ PhD ವಿದ್ಯಾರ್ಥಿಯಿದ್ದಾಗ ಚೀನಾ ದೇಶದ ಆರ್ಥಿಕತೆ ಬಗ್ಗೆ ಅಭ್ಯಸಿಸತೊಡಗಿದರು. ಅದಕ್ಕಾಗಿ ಮ್ಯಾಂಡ್ರಿನ್ ಭಾಷೆ ಕಲಿತು ಕೆಲವೇ ತಿಂಗಳುಗಳಲ್ಲಿ ಆ ಭಾಷೆಯಲ್ಲಿ ಪ್ರಬುದ್ಧವಾಗಿ ಓದು ಬರೆದು ಮಾತಾಡಬಲ್ಲವರಾದರು. ಮುಂದೆ ಮುರಾರ್ಜಿ ದೇಸಾಯಿ ಪ್ರಧಾನಿಯಾದಾಗ ಚೀನಾ ದೇಶಕ್ಕೆ ಹೋಗಿ, ಚೀನಿಯರೊಂದಿಗೆ ಅವರದ್ದೇ ಭಾಷೆಯಲ್ಲಿ ಸರಾಗವಾಗಿ ಮಾತಾಡಿ, ಭಾರತದ ಕೆಲಸ ಮಾಡಿಕೊಂಡು ಬಂದರು ಸ್ವಾಮಿ. ಅದನ್ನು ನೋಡಿ ಅಂದಿನ ವಿದೇಶಾಂಗ ಮಂತ್ರಿಯಾಗಿದ್ದ ವಾಜಪೇಯಿಯವರು ಕೊಂಚ ಕಸಿವಿಸಿ ಅನುಭವಿಸಿದರಂತೆ. ತಾವು ವಿದೇಶಾಂಗ ಮಂತ್ರಿಯಾಗಿದ್ದರೂ ಈ ಮಹಾತ್ಮ ಸ್ವಾಮಿ ಹೋಗಿ ತಮ್ಮಿಂದಾಗದ ಕೆಲಸ ಮಾಡಿಕೊಂಡುಬಂದುಬಿಟ್ಟನಲ್ಲ ಎಂಬ ಈರ್ಷ್ಯೆ.

ಅದೆಲ್ಲ ಇರಲಿ. ಸ್ವಾಮಿ ಕಾನೂನು ಪಂಡಿತರಾಗಿದ್ದೇ ದೊಡ್ಡ ಕಥೆ. ಅವರ ಕುಟುಂಬದಲ್ಲಿ ಮೊದಲು ಕಾನೂನು ಕಲಿತವರು ಅವರ ಪತ್ನಿ ರೋಕ್ಸ್ನಾ. ರೋಕ್ಸ್ನಾಕೂಡ ಹಾರ್ವರ್ಡ್ PhD ಪದವೀಧರೆ. ಅವರು ಓದಿದ್ದು ಗಣಿತಶಾಸ್ತ್ರ. ಅಮೇರಿಕಾದಲ್ಲೇ ಇದ್ದರೆ ಅವರ ಗಣಿತದಲ್ಲಿ ಅವರು ಸಾಧಿಸಿದ್ದ ಸ್ಪೆಷಾಲಿಟಿಗೆ ಸ್ಕೋಪ್ ಇತ್ತೋ ಏನೋ. ಆದರೆ ಭಾರತದಲ್ಲಿ ಅವರಿಗೆ ಕಾಲೇಜಿನಲ್ಲಿ ಗಣಿತದ ಮಾಸ್ತರಿಣಿ ಕೆಲಸ ಬಿಟ್ಟರೆ ಬೇರೆ ಕೆಲಸ ಸಿಗುತ್ತಿರಲಿಲ್ಲ. ಮೇಲಿಂದ ಮಕ್ಕಳೂ ಚಿಕ್ಕವರಿದ್ದರು. ಹಾಗಾಗಿ ರೋಕ್ಸ್ನಾಕೆಲಸ ಮಾಡಲು ಹೋಗಲಿಲ್ಲ. ಕಾನೂನು ಕಲಿಯಲೇಬೇಕು ಎಂಬ ಪರಿಸ್ಥಿತಿ ಉದ್ಭವವಾದದ್ದು ತುರ್ತುಪರಿಸ್ಥಿತಿ ಸಮಯದಲ್ಲಿ. ಇಂದಿರಾ ಗಾಂಧಿ ವಿರುದ್ಧ ಹೋರಾಡುತ್ತಿದ್ದ ಸ್ವಾಮಿ ಭೂಗತರಾಗಿದ್ದರು. ಸರ್ಕಾರ ಅವರನ್ನು ಎಲ್ಲ ಕಡೆ ಹುಡುಕುತ್ತಿತ್ತು. ಸಿಕ್ಕಿದ್ದರೆ ಎನ್ಕೌಂಟರ್ ಮಾಡಿ ಒಗೆಯುತ್ತಿತ್ತೇನೋ. ಅಷ್ಟು ಆಕ್ರೋಶವಿತ್ತು ಅವರ ಮೇಲೆ. ತುರ್ತುಪರಿಸ್ಥಿತಿ ಕಾಲದಲ್ಲಿ ತಮ್ಮ ಅಂಕುಶವನ್ನು ಉಪಯೋಗಿಸಿ ಇಂದಿರಾ ಗಾಂಧಿ ಎಂತೆಂತಹ ಮದಗಜಗಳನ್ನೇ ಮೆತ್ತಗೆ ಮಾಡಿದ್ದರು. ಆದರೆ ಸ್ವಾಮಿಯವರನ್ನು ಮಟ್ಟ ಹಾಕಲು ಆಗಿರಲಿಲ್ಲ.

ಸ್ವಾಮಿ ಸಿಗದಿದ್ದಾಗ ಇಂದಿರಾ ಗಾಂಧಿಯವರ ಕರಾಳ ವ್ಯವಸ್ಥೆ ಮುರಕೊಂಡು ಬಿದ್ದಿದ್ದು ಸ್ವಾಮಿಯವರ ಪರಿವಾರದ ಮೇಲೆ. ರಾತ್ರೋರಾತ್ರಿ ಅವರ ಮನೆ ಖಾಲಿ ಮಾಡಿಸಲಾಯಿತು. ಇಬ್ಬರು ಚಿಕ್ಕ ಮಕ್ಕಳನ್ನು ಒಬ್ಬಂಟಿಯಾಗಿ ಸಂಬಾಳಿಸಿಕೊಂಡಿದ್ದ ರೋಕ್ಸ್ನಾ ಅರ್ಧರಾತ್ರಿಯಲ್ಲಿ ಬೀದಿಗೆ ತಳ್ಳಲ್ಪಟ್ಟರು. ದೆಹಲಿಯ ಮೈಕೊರೆಯುವ ಚಳಿಯಲ್ಲಿ ಫುಟ್ಪಾತ್ ಮೇಲೆ ಎರಡು ಚಿಕ್ಕಮಕ್ಕಳೊಂದಿಗೆ ನಿರ್ಗತಿಕರಂತೆ ರಾತ್ರಿ ಕಳೆದ ರೋಕ್ಸ್ನಾಕಾನೂನು ಅಭ್ಯಾಸ ಮಾಡುವ ನಿರ್ಧಾರ ಮಾಡಿದ್ದರು. ಮುಂದೆ ಕಾನೂನು ಪದವಿ ಗಳಿಸಿದ ಅವರು ವಕೀಲೆಯಾಗಿ ಆದಾಯ ಗಳಿಸತೊಡಗಿದರು. ಸ್ವಾಮಿಯವರ ನೌಕರಿಯನ್ನು ಸರ್ಕಾರ ಸ್ವಾಹಾ ಮಾಡಿತ್ತು. ಪತ್ನಿ ರೋಕ್ಸ್ನಾಗಳಿಸುತ್ತಿದ್ದ ಆದಾಯದಿಂದ ಸಂಸಾರ ಹೇಗೋ ನಡೆದಿತ್ತು.

ಖುದ್ದು ಸ್ವಾಮಿಯವರು ಕಾನೂನು ಕಲಿಯಬೇಕೆಂದು  ತೀರ್ಮಾನ ಮಾಡುವಂತಹ ಸಂದರ್ಭ ಕೊಂಚ ಸಮಯದ ನಂತರ ಬಂತು. ಸ್ವಾಮಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ. ತಮಗೆ ಸರಿಯೆನ್ನಿಸಿದ್ದನ್ನು ಮಾಡುವವರೇ. ತಮ್ಮ ಖಡಕ್ ನಿರ್ಧಾರಗಳಿಂದ ಅವರ ಪಕ್ಷಕ್ಕೇ ಮುಜುಗರ ಮಾಡಿಬಿಡುತ್ತಿದ್ದರು. ಸತ್ಯದ ಪರವಾಗಿದ್ದಾಗ ಯಾರನ್ನೂ ಕೇರ್ ಮಾಡುವ ಅವಶ್ಯಕತೆಯಿಲ್ಲ ಎಂಬುದು ಅವರ ಖಡಕ್ ನಂಬಿಕೆ.

ಹೀಗೆ ಹಲವರಿಗೆ ಮಗ್ಗುಲಮುಳ್ಳಾಗಿದ್ದ ಸ್ವಾಮಿಯವರನ್ನು ಹಣಿಯಲು ಉಪಯೋಗಿಸಿದ್ದು ಮಾನನಷ್ಟ ಮೊಕದ್ದಮೆ ಎಂಬ ಅಸ್ತ್ರ. ಆದರಲ್ಲೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎಂಬ ಕರಾಳ ಅಸ್ತ್ರ. ಎಷ್ಟೋ ದೇಶಗಳು ಮಹಾ ಅನಿಷ್ಟ ಕಾನೂನಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ತೆಗೆದುಹಾಕಿವೆ. ಭಾರತ ಮಾತ್ರ ಆಂಗ್ಲರ ಆಳ್ವಿಕೆಯ ಪಳೆಯುಳಿಕೆಯಂತಹ ಶಿಲಾಯುಗದ ಜನವಿರೋಧಿ ಕಾನೂನುಗಳನ್ನೇ ಪಾಲಿಸಿಕೊಂಡು ಬರುತ್ತಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅದೇ ಜಾತಿಗೆ ಸೇರಿದ್ದು. ಯಾರ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಬೀಳುತ್ತದೋ ಅವರು ಗಾಣಕ್ಕೆ ಸಿಕ್ಕ ಕಬ್ಬಿನ ಜಲ್ಲೆಯಂತೆ ಪೂರ್ತಿಯಾಗಿ ಹಿಂಡಿಹಿಪ್ಪೆಯಾಗಿಹೋಗುತ್ತಾರೆ.

ಸ್ವಾಮಿಯವರನ್ನು ಹಣಿಯಲು ಉಪಯೋಗಿಸಿದ್ದು ಇದನ್ನೇ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಎದುರಿಸಲು ಪ್ರತಿವಾದಿ ಪ್ರತಿಸಲ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ. ಸ್ವಾಮಿಯವರು ಇದ್ದಿದ್ದು ದೆಹಲಿಯಲ್ಲಿ. ಅವರ ಮೇಲೆ ಮೊಕದ್ದಮೆ ದಾಖಲಿಸಿದ್ದು ಮುಂಬೈನಲ್ಲಿ. ತುರ್ತುಪರಿಸ್ಥಿತಿಯಲ್ಲಿ ಆಡಳಿತಶಾಹಿಯ ಕುತಂತ್ರಕ್ಕೆ ನೌಕರಿ ಕಳೆದುಕೊಂಡಿದ್ದ ಸ್ವಾಮಿಯವರ ಆರ್ಥಿಕ ಪರಿಸ್ಥಿತಿನಾಜೂಕಾಗಿತ್ತು. ಮೇಲಿಂದ ಮುಂಬೈನಲ್ಲಿ ವಕೀಲರ ಖರ್ಚು. ತಿಂಗಳಿಗೆ ನಾಲ್ಕಾರು ಬಾರಿ ಮುಂಬೈಗೆ ಬಂದುಹೋಗುವ ಖರ್ಚು. ಮುಂಬೈನಲ್ಲಿ ಉಳಿಯಲು ಮತ್ತು ಓಡಾಡಲು ಮತ್ತೊಂದಿಷ್ಟು ಖರ್ಚು. ಹೀಗೆ ಸ್ವಾಮಿಯವರನ್ನು ಎಲ್ಲ ರೀತಿಯಿಂದ ಹಿಂಡಿ ಹಿಪ್ಪೆ ಮಾಡಿಬಿಡುವಂತಹ ಸ್ಕೀಮ್ ಹಾಕಲಾಗಿತ್ತು. ಈ ಷಡ್ಯಂತ್ರವನ್ನು ಖ್ಯಾತ ವಕೀಲ ರಾಮ್ ಜೇಠಮಲಾನಿ ರೂಪಿಸಿದ್ದರು. ಸೂತ್ರದಾರು ಬೇರೆ ಯಾರೋ ಇದ್ದರು.

ಯಾವಾಗ ತಮ್ಮ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಬಿತ್ತೋ ಮೊದಲಬಾರಿಗೆ ಸ್ವಾಮಿ ಕಾನೂನು ಪುಸ್ತಕ ತೆರೆದು ಕೂತರು. ವಕೀಲೆ ಪತ್ನಿ ರೋಕ್ಸ್ನಾತಕ್ಕಮಟ್ಟಿನ ಸಹಾಯ ಮತ್ತು ಮಾರ್ಗದರ್ಶನ ಮಾಡಿದರು. ಸ್ವಾಮಿಯವರ ಬುದ್ಧಿಮತ್ತೆ ಮತ್ತು ಏಕಾಗ್ರತೆಯ ಬಗ್ಗೆ ದೂಸರಾ ಮಾತೇ ಇಲ್ಲ. ಒಂದು ವಿಷಯವನ್ನು ಎತ್ತಿಕೊಂಡರು ಅಂದರೆ ಅಷ್ಟೇ ಮತ್ತೆ. ಅದರಲ್ಲಿ ಪರಿಣಿತರಾಗಿಯೇ ಬಿಡುತ್ತಿದ್ದರು. ಕಾನೂನಿನ ವಿಷಯದಲ್ಲೂ ಅದೇ ಆಯಿತು.

ಕಾನೂನನ್ನು ಅಧ್ಯಯನ ಮಾಡುತ್ತಿದ್ದಾಗ ಸ್ವಾಮಿ ಒಂದು ವಿಷಯವನ್ನು ಗಮನಿಸಿದರು. ನೋಟ್ ಮಾಡಿಕೊಂಡರು. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದವನ ಜನ್ಮಜಾಲಾಡಿಬಿಡುವ ಅವಕಾಶವನ್ನು ಕಾನೂನು ಪ್ರತಿವಾದಿಗೆ ಕಲ್ಪಿಸುತ್ತದೆ. ಇದನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡು ತಮ್ಮ ಮೇಲೆ ಕೇಸ್ ಹಾಕಿದವನನ್ನು ಹಣಿಯಬೇಕು ಎಂದು ನಿರ್ಧರಿಸಿದರು ಸ್ವಾಮಿ. ತಮ್ಮ ಮೇಲೆ ಬೇರೆ ಯಾರದ್ದೋ ಇಶಾರೆಯಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದವನ ಪೂರ್ವಾಪರ ತೆಗೆದುಕೊಂಡು ಕೂತರು ಸ್ವಾಮಿ.

ಸ್ವಾಮಿಯವರ ಮೇಲೆ ಕೇಸ್ ಹಾಕಿದವನೇನೂ ಸುಬಗನಲ್ಲ. ಶುದ್ಧ ತಲೆಹಿಡುಕ. ಅನೈತಿಕ ವ್ಯವಹಾರಗಳಿಗೆ ಮಹಿಳೆಯರನ್ನು ಸರಬರಾಜು ಮಾಡಿದ ಆರೋಪ ಅವನ ಮೇಲಿತ್ತು. ವೃತ್ತಿಪರ ರಾಜಕಾರಣಿಯಾಗಿದ್ದ ಅವನು ಸ್ವಕಾರ್ಯಸಿದ್ಧಿಗಾಗಿ ಪಿಂಪ್ ಕೆಲಸ ಮಾಡಿ ಸಿಕ್ಕಿಬಿದ್ದಿದ್ದ.

ತೆರೆದ ನ್ಯಾಯಾಲಯದಲ್ಲಿ ಸ್ವಾಮಿ ಖುದ್ದಾಗಿ ಅವನ ಜನ್ಮಜಾಲಾಡತೊಡಗಿದರು. ಆತ ಉದಯೋನ್ಮುಖ ರಾಜಕಾರಣಿ. ಅವನಿಗೆ ಮುಂದೆ ಏನೇನೋ ಸಾಧಿಸಬೇಕಾಗಿತ್ತು. ಹಾಗಿರುವಾಗ ಯಾರದ್ದೋ ಇಶಾರೆ ಮೇಲೆ ಸುಳ್ಳು ಕೇಸು ಹಾಕಿದ್ದ. ಅದಕ್ಕೆ ಅವನಿಗೆ ಕಾಣಿಕೆ ಸಂದಾಯವಾಗಿತ್ತು. ಕೋರ್ಟಿಗೆ ಬಂದು ಸ್ವಾಮಿಯವರಿಗೆ ಕಾಟ ಕೊಟ್ಟರೆ ತನ್ನ ಕೆಲಸ ಮುಗಿಯಿತು ಎಂದುಕೊಂಡಿದ್ದ.

ಸ್ವಾಮಿ ಅವನನ್ನು ಕಟಕಟೆಗೆ ಕರೆಯಲು ನ್ಯಾಯಾಲಯದ ಅನುಮತಿ ಕೋರಿದರು. ಕೋರಿಕೆ ನ್ಯಾಯಸಮ್ಮತವಾಗಿದ್ದರಿಂದ ನ್ಯಾಯಾಲಯ ಅನುಮತಿ ಕೊಟ್ಟಿತು. ಕೇಸ್ ಜಡಿದವ ಕಟಕಟೆಗೆ ಬಂದು ನಿಂತ ನೋಡಿ. ಮುಂದೆ ಅಷ್ಟೇ ಮತ್ತೆ. ಅವನನ್ನು ಪೂರ್ತಿಯಾಗಿ ತೊಳೆದುಬಿಟ್ಟರು ಸ್ವಾಮಿ. ಅವನ ತಲೆಹಿಡುಕತನ, ಮಹಿಳೆಯರನ್ನು ಸರಬರಾಜು ಮಾಡಿದ ಕಾರ್ನಾಮೆಗಳನ್ನು ಎಳೆಎಳೆಯಾಗಿ, ರಂಗುರಂಗೀನಾಗಿ ಬಿಚ್ಚಿಡತೊಡಗಿದರು. ಮೊದಮೊದಲು ಮುಜುಗರದಿಂದ ನಸುಗುನ್ನಿಯಂತೆ ಒಳೊಳಗೇ ಮಿಸುಕಾಡಿದ ಆ ಕೊರಮ ಪೂರ್ತಿ ಬತ್ತಲೆಯಾಗುವ ಮೊದಲೇ ಎರಡೂ ಕೈಯೆತ್ತಿ ಅಂಬೋ ಅಂದುಬಿಟ್ಟ. ಸ್ವಾಮಿಯವರ ಮೇಲೆ ನಡೆದ ಕಾರಸ್ಥಾನವನ್ನು ಎಲ್ಲ ವಿವರಗಳೊಂದಿಗೆ ಹೇಳಿಬಿಟ್ಟ.

'ನ್ಯಾಯಾಧೀಶರೇ, ಈ ಸುಬ್ರಮಣಿಯನ್ ಸ್ವಾಮಿ ಯಾರು ಅಂತಲೇ ನನಗೆ ಗೊತ್ತಿರಲಿಲ್ಲ. ಯಾರ್ಯಾರೋ ಏನೇನೋ ಪಂಪ್ ಹೊಡೆದು ನನ್ನಿಂದ ಇವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿಸಿದರು. ನನಗೆ ಏನೂ ಬೇಕಿಲ್ಲ. ಪರಿಹಾರ ಗಿರಿಹಾರ ಏನೂ ಬೇಡ ಸರ್. ಈ ಮೊಕದ್ದಮೆಯನ್ನು ಹಿಂದೆ ತೆಗೆದುಕೊಳ್ಳಲು ಅನುಮತಿ ಕೊಡಿ. ಮುಕ್ತಿ ಕೊಡಿ ಸ್ವಾಮಿ!' ಎಂದೋ ಕೋರ್ಟಿನಲ್ಲೇ ಕಣ್ಣೀರು ಸುರಿಸುತ್ತ ಅಡ್ಡಡ್ಡ ನಮಸ್ಕಾರ ಹಾಕಿಬಿಟ್ಟ.

ಅಲ್ಲಿಗೆ ಎಲ್ಲ ದೂದ್ ಕಾ ದೂದ್ ಪಾನಿ ಕಾ ಪಾನಿ ಆಗಿಹೋಯಿತಲ್ಲ!? ಮೊಕದ್ದಮೆ ವಜಾ ಆಗಿಹೋಯಿತು. ಸುಳ್ಳು ಕೇಸ್ ಹಾಕಿದ್ದಕ್ಕೆ ನ್ಯಾಯಾಲಯ stricture ಪಾಸ್ ಮಾಡಿ ಸ್ವಾಮಿಯವರನ್ನು ದೋಷಮುಕ್ತ ಮಾಡಿತು.

ಅತ್ಯಂತ ಶ್ರೇಷ್ಠ ವಕೀಲ ರಾಮ್ ಜೇಠಮಲಾನಿಗೇ ನೀರು ಕುಡಿಸಿದ್ದರು ಸ್ವಾಮಿ. ಸ್ವಾಮಿಯ ಖದರ್ ಅಂದರೆ ಅದು. ಅದೇ ಕೊನೆ. ನಂತರ ರಾಮ್ ಜೇಠಮಲಾನಿ ಆದಿಯಾಗಿ ಎಲ್ಲ ವಕೀಲರು ತಮ್ಮ ಕಕ್ಷಿದಾರಿಗೆ ಹೇಳುತ್ತಿದ್ದುದು ಒಂದೇ ಮಾತು - ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವ ಮೊದಲು ಜೋಕೆ. ನೀವೇ ಬೆತ್ತಲೆಯಾಗಿ ಹೋದೀರಿ. ಸುಬ್ರಮಣಿಯನ್ ಸ್ವಾಮಿಯ ವಿರುದ್ಧ ಮಾತ್ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲೇಬೇಡಿ. ಕೇವಲ ಸಿವಿಲ್ ಮಾನನಷ್ಟ ಮೊಕದ್ದಮೆ ಮಾತ್ರ ಹೂಡಿ. ಸುಬ್ರಮಣ್ಯ ಸ್ವಾಮಿ ಎಲ್ಲಿ ಹೇಗೆ ಬತ್ತಿ ಇಟ್ಟು ಬ್ಲಾಸ್ಟ್ ಮಾಡುತ್ತಾನೆ ಎಂದು ಹೇಳಲಾಗುವದಿಲ್ಲ!!

ಹೀಗೆ ಘಟಾನುಘಟಿ ವಕೀಲರಿಗೆ ಅವರದ್ದೇ ಆಟದಲ್ಲಿ ಅವರಿಗೇ ನೀರು ಕುಡಿಸಿದ್ದ ಭೂಪ ಸುಬ್ರಮಣಿಯನ್ ಸ್ವಾಮಿ.

ಮುಂದೆ ಸ್ವಾಮಿಯವರನ್ನು ಕೋರ್ಟಿನಲ್ಲಿ ತಡವಿಕೊಳ್ಳಲು ಹೋಗಿ  ತಾರಾಮಾರಾ ಬಾರಿಸಿಕೊಂಡವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.

೧೯೮೩ ರಲ್ಲಿ ತುಂಬಾ ಅನಿರೀಕ್ಷಿತವಾಗಿ ಹೆಗಡೆ ಕರ್ನಾಟಕದ ಮುಖ್ಯಮಂತ್ರಿಯಾದರು. ದೇವೇಗೌಡರೋ, ಬಂಗಾರಪ್ಪನವರೋ ಅಥವಾ ಬೊಮ್ಮಾಯಿಯವರೋ ಆಗಬಹುದು ಎಂದುಕೊಂಡಿದ್ದರೆ ರಾಜ್ಯಸಭಾ ಸದಸ್ಯರಾಗಿದ್ದ ಹೆಗಡೆ ತಮ್ಮ ಚಾಣಾಕ್ಷ ದಾಳ ಉರುಳಿಸಿ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು.

ಮುಖ್ಯಮಂತ್ರಿಯಾದ ಮೇಲೆ ಜನತಾ ಪರಿವಾರದ ಮೇಲೆ ರಾಷ್ಟ್ರಮಟ್ಟದಲ್ಲಿ ಕೂಡ ಸಂಪೂರ್ಣ ಹಿಡಿತ ಸಾಧಿಸಲು ಯತ್ನಿಸಿದರು ಹೆಗಡೆ. ಆದರೆ ಜನತಾ ಪರಿವಾರದ ಮತ್ತೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ ಚಂದ್ರಶೇಖರ್ ಅದಕ್ಕೆ ಪರೋಕ್ಷವಾಗಿ ಅಡ್ಡಗಾಲು ಹಾಕಿದರು. ಹೊರಗಿಂದ ಹೆಗಡೆ ಜೊತೆ ಭಾಯಿ ಭಾಯಿ ವರ್ತನೆ ತೋರಿದರೂ ಹೆಗಡೆಯವರನ್ನು ಮಟ್ಟಹಾಕುವ ಸುಪಾರಿಯನ್ನು ಸುಬ್ರಮಣ್ಯ ಸ್ವಾಮಿಗೆ ಕೊಟ್ಟರು. ವೃತ್ತಿಪರ ಭಾಡಿಗೆ ಸೈನಿಕನಂತೆ (mercenary) ಸುಪಾರಿ ತೆಗೆದುಕೊಂಡ ಸ್ವಾಮಿ ಹೆಗಡೆಗೆ ಸ್ಕೆಚ್ ಹಾಕಲು ಕುಳಿತರು.

ಹೆಗಡೆಯವರ ಬಗ್ಗೆ ಆಗ ಒಂದು ಗುಸುಗುಸು ಚಾಲ್ತಿಯಲ್ಲಿತ್ತು. ಅದೇನೆಂದರೆ ಹೆಗಡೆ ಸರ್ಕಾರ ವಿರೋಧಪಕ್ಷಗಳ ನಾಯಕರುಗಳ ಫೋನಿಗೆ ಕಳ್ಳಗಿವಿ ಹಚ್ಚಿ ಕೂತಿದೆ. ಫೋನ್ ಟ್ಯಾಪಿಂಗ್ ಮಾಡುತ್ತಿದೆ. ಸಂಭಾಷಣೆಗಳನ್ನು ಕದ್ದಾಲಿಸುತ್ತದೆ. ಸ್ವಾಮಿ ಇದನ್ನೇ ದೊಡ್ಡ ಇಶ್ಯೂ ಮಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ಸಿನ ರಾಜೀವ್ ಗಾಂಧಿ ಸರ್ಕಾರವಿತ್ತು. ಅವರಿಗೂ ಹೆಗಡೆಯವರನ್ನು ಹಣಿಯಬೇಕಾಗಿತ್ತು. ಮತ್ತೆ ರಾಜೀವ್ ಗಾಂಧಿ ಸ್ವಾಮಿಯವರಿಗೆ ತುಂಬಾ ಆಪ್ತಮಿತ್ರರೂ ಕೂಡ. ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳು ಸ್ವಾಮಿಯವರ ತೋಪನ್ನು ಹೆಗಡೆ ವಿರುದ್ಧ ಸಂಗ್ರಹಿಸಿದ್ದ ಮಾಹಿತಿಯೆಂಬ ಮದ್ದಿನಿಂದ ತುಂಬಿದರು. ಹೀಗೆ ತುಪಾಕಿ ತುಂಬಿಕೊಂಡ ಸ್ವಾಮಿ ಹೆಗಡೆ ವಿರುದ್ಧ ಒಂದಾದಮೇಲೊಂದು ಗುಂಡು ಹಾರಿಸತೊಡಗಿದರು. ಪ್ರಹಾರ ಮಾಡತೊಡಗಿದರು. ಮಾಸ್ಟರ್ ಸ್ಟ್ರೋಕ್ ಎಂಬಂತೆ ಯಾರ್ಯಾರ ಫೋನುಗಳನ್ನು ಕದ್ದಾಲಿಸಲಾಗುತ್ತಿದೆ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಿಬಿಟ್ಟರು ಸ್ವಾಮಿ. ಅಲ್ಲಿಗೆ ದೊಡ್ಡ ಹಗರಣವಾಯಿತು. ಅದೇ ಟೆಲಿಫೋನ್ ಕದ್ದಾಲಿಕೆ ಪ್ರಕರಣ.

ಹೆಗಡೆ ತಪ್ಪೊಪ್ಪಿಕೊಳ್ಳಲಿಲ್ಲ. ಆದರೂ ತಮ್ಮ ಇಮೇಜನ್ನು ರಕ್ಷಿಕೊಳ್ಳಲು ಮತ್ತು ಮೌಲ್ಯಾಧಾರಿತ ರಾಜಕಾರಣಿ ಎಂದು ಬಿಂಬಿಸಿಕೊಳ್ಳಲು ತಾವು ತಪ್ಪು ಮಾಡಿಲ್ಲ ಆದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಪುಂಗಿದವರೇ ರಾಜೀನಾಮೆ ಎಸೆದು ಕೂತರು. ಆ ಹಿಂದೆ ಕೂಡ ಎರಡೋ ಮೂರೋ ಬಾರಿಯೋ ಬಾಟ್ಲಿಂಗ್ ಹಗರಣ ಇತ್ಯಾದಿ ಆದಾಗಲೂ ಹೀಗೇ ರಾಜೀನಾಮೆ ಕೊಟ್ಟಿದ್ದರು. ಅವರನ್ನು ಆರಾಧಿಸುತ್ತಿದ್ದ ಶಾಸಕರು ಅವರ ಮನವೊಲಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದರು. ಹೆಗಡೆಯವರಿಗೂ ಅದೇ ಬೇಕಾಗಿತ್ತು. ಆದರೆ ಈ ಬಾರಿ ಮಾತ್ರ ವಾಪಸ್ ಬನ್ನಿ ಎಂದು ಯಾರೂ ಹೆಗಡೆಯವರನ್ನು ಕರೆಯಲೇ ಇಲ್ಲ. ಬೊಮ್ಮಾಯಿ ಮುಖ್ಯಮಂತ್ರಿಯಾದರು. ಹೆಗಡೆ ನೇಪಥ್ಯಕ್ಕೆ ಸರಿದರು. ತಮಗೆ ಗಾದಿ ತಪ್ಪಿದ್ದಕ್ಕೆ ಸಿಟ್ಟಿಗೆದ್ದ ದೇವೇಗೌಡ ಭಿನ್ನಮತ ಶುರುವಿಟ್ಟುಕೊಂಡರು. ಒಟ್ಟಿನಲ್ಲಿ ಹೆಗಡೆಯವರ ಬುಡಕ್ಕೆ ಬರೋಬ್ಬರಿ ಬಿಸಿನೀರು ಕಾಸಿದ್ದರು ಸ್ವಾಮಿ.

ಸ್ವಾಮಿ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿದ್ದ ಫೋನ್ ಕದ್ದಾಲಿಸಲ್ಪಟ್ಟ ಮಂದಿಯ ಪೈಕಿಯಲ್ಲಿ ಕೇವಲ ರಾಜಕಾರಣಿಗಳು ಮಾತ್ರ ಇರಲಿಲ್ಲ. ಸುಮಾರು ಜನ ಹೈಫೈ ಮಹಿಳಾಮಣಿಗಳೂ ಇದ್ದರು. ಹೆಗಡೆಯವರ ರಸಿಕತೆ ಬಗ್ಗೆ, ಶೃಂಗಾರಲೀಲೆಗಳ ಅಲ್ಲಲ್ಲಿ ಗುಸುಗುಸು ಇತ್ತು. ಈಗ ಅದೆಲ್ಲ ಬಹಿರಂಗವಾಗಿ ಹೆಗಡೆಯವರಿಗೆ ಮತ್ತು expose ಆದ ಮಹಿಳಾಮಣಿಗಳಿಗೆ ದೊಡ್ಡ ಮಟ್ಟದ ಮುಜುಗರ. ಯಾವುದೋ ಹುತ್ತದ ಮುಂದೆ ಕುಂತು ಪುಂಗಿಯೂದಿದರೆ ಹಾವೊಂದೇ ಅಲ್ಲ ಹಾವುರಾಣಿಯರು ಸಹ ಪ್ರತ್ಯಕ್ಷವಾಗಿ ಭುಸ್ ಅನ್ನಬೇಕೇ!?

ಖುರ್ಚಿ ಕಳೆದುಕೊಂಡು ಖಾಲಿ ಕುಳಿತಿದ್ದ ಹೆಗಡೆ ಸ್ವಾಮಿಯವರನ್ನು ತಡವಿಕೊಳ್ಳುವ ವಿಚಾರ ಮಾಡಿದರು. ಮತ್ತೆ ರಾಮ ಜೇಠಮಲಾನಿ ಸಲಹೆ ಕೊಟ್ಟರು. ಮತ್ತೊಬ್ಬ ರಾಮ ಅದೇ ರಾಮನಾಥ ಗೋಯೆಂಕಾ ತಮ್ಮ ಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಅದರ ಖಡಕ್ ಸಂಪಾದಕ ಅರುಣ್ ಶೌರಿ ಮೂಲಕ ಹೆಗಡೆಯವರಿಗೆ ಎಲ್ಲ ಬೆಂಬಲ ಕೊಡುವದಾಗಿ ಆಶ್ವಾಸನೆ ಕೊಟ್ಟರು. ಅಂದು ರಾಮಕೃಷ್ಣ ಹೆಗಡೆ, ರಾಮ್ ಜೇಠಮಲಾನಿ ಮತ್ತು ರಾಮನಾಥ ಗೋಯೆಂಕಾ 'ರಾಮತ್ರಯ'ರೆಂದೇ ಖ್ಯಾತರಾಗಿದ್ದರು.

ಹಿಂದೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದಾಗ ಆದ ಲಫಡಾದಿಂದ ಪಾಠ ಕಲಿತಿದ್ದ ರಾಮ್ ಜೇಠಮಲಾನಿ ಮುಂಬೈನಲ್ಲಿ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವಂತೆ ಸಲಹೆ ಕೊಟ್ಟರು. ಅದರಂತೆ ಮುಂಬೈ ಕೋರ್ಟಿನಲ್ಲಿ ಸ್ವಾಮಿ ವಿರುದ್ಧ ಮೊಕದ್ದಮೆ ಹಾಕಿದರು ಹೆಗಡೆ.

ಸ್ವಾಮಿ ಮತ್ತೊಮ್ಮೆ ವಕೀಲರ ಅವತಾರ ಎತ್ತಿದರು. ಅಷ್ಟೊತ್ತಿಗಾಗಲೇ ಅನೇಕ ಕೇಸುಗಳನ್ನು ಸ್ವಂತ ಬಡಿದಾಡಿ ಸಾಕಷ್ಟು ನೈಜ ಅನುಭವ ಮತ್ತು ಪಾಂಡಿತ್ಯ ಗಳಿಸಿದ್ದರು.

ಸ್ವಾಮಿ ಕೊಟ್ಟ ಮೊದಲನೇ ಏಟಿಗೇ ರಾಮಕೃಷ್ಣ ಹೆಗಡೆ ಮತ್ತು ಅವರ ವಕೀಲ ರಾಮ್ ಜೇಠಮಲಾನಿ ರಾಮಾ! ಕೃಷ್ಣಾ! ಮುರಾರಿ! ಕಾಪಾಡೋ! ಎನ್ನುತ್ತ ಮಕಾಡೆ ಮಲಗಿಬಿಟ್ಟರು. ಅಂತಹ ಮಾಸ್ಟರ್ ಸ್ಟ್ರೋಕ್ ಬಾರಿಸಿದ್ದರು ಸುಬ್ರಮಣ್ಯ ಸ್ವಾಮಿ.

ಮುಂಬೈ ಕೋರ್ಟಿನ ಮುಂದೆ ಒಂದೇ ಒಂದು ಸಿಂಪಲ್ ಮನವಿ ಮಾಡಿಕೊಂಡರು ಸ್ವಾಮಿ - 'ಈ ಮನುಷ್ಯ ಹೆಗಡೆ ಕಾನೂನುಬದ್ಧವಾಗಿ ಅವರ ವಾಸಸ್ಥಾನವಾದ ಬೆಂಗಳೂರಿನಲ್ಲಿ ಮೊಕದ್ದಮೆ ಹೂಡಬೇಕು. ಕಾನೂನಿನಲ್ಲಿರುವ ಒಂದು ಸಣ್ಣ ದೋಷವನ್ನು (loophole) ದುರುದ್ದೇಶಪೂರ್ವಕವಾಗಿ ಬಳಸಿಕೊಳ್ಳಲು ಮುಂಬೈನಲ್ಲಿ ದಾವೆ ಹೂಡಿದ್ದಾರೆ. ಈ ದಾವೆಯನ್ನು ತಿರಸ್ಕರಿಬೇಕು ಮತ್ತು ದಾವೆ ಹೂಡುವದಾದರೆ ಬೆಂಗಳೂರಿನಲ್ಲಿ ಹೂಡಲು ಆಜ್ಞೆ ಮಾಡಬೇಕು.'

ಹೆಗಡೆ ಉಪಯೋಗಿಸಲು ನೋಡಿದ್ದ ಕಾನೂನಿನ loophole ಯಾವುದಾಗಿತ್ತು ಅಂದರೆ.....ಮಾನನಷ್ಟ ಮೊಕದ್ದಮೆ ಹೂಡುವಾಗ ನಿರೀಕ್ಷಿತ ಪರಿಹಾರದ ಮೊತ್ತವನ್ನು ನಮೂದಿಸಬೇಕಾಗುತ್ತದೆ. ಅದರ ಒಂದು ಶೇಕಡಾ ಮೊತ್ತವನ್ನು ಠೇವಣಿ ಅಂತ ಇಡಬೇಕಾಗುತ್ತದೆ. ೧೦ ರಿಂದ ೨೦% ಠೇವಣಿ ಇಡಬೇಕಾಗುತ್ತದೆ. ಉದಾಹರಣೆಗೆ ನೀವು ಒಬ್ಬರ ಮೇಲೆ ಎರಡು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹಾಕಿದರೆ ಅದರ ೧೦% ಅಂದರೆ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಠೇವಣಿ ಇಡಬೇಕಾಗುತ್ತದೆ. ಸುಖಾಸುಮ್ಮನೆ ಇನ್ನೊಬ್ಬರಿಗೆ ವಿನಾಕಾರಣ ತೊಂದರೆ ಕೊಡಲು frivolous ಸುಳ್ಳು ಮೊಕದ್ದಮೆಗಳನ್ನು ಹೂಡದೇ ಇರಲಿ ಎನ್ನುವ ಸದುದ್ದೇಶದಿಂದ ಠೇವಣಿಯನ್ನು ನಿರ್ಧರಿಸಿರುತ್ತಾರೆ. ಆದರೆ ಮುಂಬೈನಲ್ಲಿ ಒಂದು advantage ಇತ್ತು. ನೀವು ಎಷ್ಟೇ ದೊಡ್ಡ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿ. ಠೇವಣಿ ಮಾತ್ರ ಕೇವಲ ಹತ್ತೇ ಸಾವಿರ ರೂಪಾಯಿ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ. ದುರುಪಯೋಗ ಮಾಡಲು ಹೇಳಿಮಾಡಿಸಿಟ್ಟಂತಹ loophole ಇದಾಗಿತ್ತು. ಹಾಗಾಗಿಯೇ ರಾ. ಕೃ. ಹೆಗಡೆ ಮುಂಬೈನಲ್ಲಿ ಕೇಸ್ ಹಾಕುವ ಸ್ಕೀಮ್ ಹಾಕಿದ್ದರು. ಆದರೆ ಉದ್ದಾಮ ಪಂಡಿತ ಸುಬ್ರಮಣಿಯನ್ ಸ್ವಾಮಿ ಅದಕ್ಕೆ ತಣ್ಣೀರೆರೆಚಿದ್ದರು.

ಮುಂಬೈ ಕೋರ್ಟ್ ಅವರ ಕೇಸನ್ನು ಹೊರಗೆಸೆದಾಗ ಹೆಗಡೆ ಮುಖಭಂಗ ಅನುಭವಿಸಿದರೇನೋ ನಿಜ. ಜಟ್ಟಿ ಮಕಾಡೆ ಬಿದ್ದರೂ ಮೀಸೆ ಮಣ್ಣಾಗಬಾರದು ನೋಡಿ. ಹಾಗಾಗಿ ಏನೇನೋ ತಿಪ್ಪರಲಾಗ ಹಾಕಿ ಬೆಂಗಳೂರಿನಲ್ಲೇ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ದೊಡ್ಡ ಪ್ರಮಾಣದ ಠೇವಣಿಯನ್ನು ಎಲ್ಲಿಂದಲೋ ಜುಗಾಡ್ ಮಾಡಿ ತಂದರು. ಹೆಗಡೆಯವರು ರೊಕ್ಕ ಮಾಡಿಕೊಂಡಿರಲಿಲ್ಲ. ಹಾಗಾಗಿ ಅಷ್ಟು ದೊಡ್ಡ ಪ್ರಮಾಣದ ಠೇವಣಿ ಹೊಂದಿಸಲು ಸಾಕಷ್ಟು ಪರಿಶ್ರಮ ಪಟ್ಟಿರಬೇಕು.

ಹೆಗಡೆಯವರಿಗೆ ಮತ್ತು ಜನತಾ ಪರಿವಾರದ ಅನೇಕರಿಗೆ ತುರ್ತುಪರಿಸ್ಥಿತಿ ಕಾಲದಿಂದ ಆಪ್ತರಾಗಿದ್ದ ದೊಡ್ಡ ವಕೀಲ ಸಂತೋಷ್ ಹೆಗಡೆ ರಾಮಕೃಷ್ಣ ಹೆಗಡೆಯವರ ಪರವಾಗಿ ಕೇಸ್ ನಡೆಸಿದರು. ಸಿವಿಲ್ ಕೇಸ್. ವರ್ಷಾನುಗಟ್ಟಲೆ ನಡೆದರೂ ತೀರ್ಮಾನ ಬರಲಿಲ್ಲ. ಮತ್ತೆ ಸಿವಿಲ್ ಕೇಸ್ ಆದ ಕಾರಣ ಸ್ವಾಮಿಯವರಿಗೆ ಖುದ್ದಾಗಿ ಹಾಜರಾಗಿ ಕೇಸ್ ನಡೆಸುವ ಜರೂರತ್ತೂ ಇರಲಿಲ್ಲ. ಒಟ್ಟಿನಲ್ಲಿ ಇಸವಿ ೨೦೦೪ ರ ಹೊತ್ತಿಗೂ ಕೇಸ್ ಖುಲಾಸೆಯಾಗಿರಲಿಲ್ಲ. ಅಷ್ಟೊತ್ತಿಗೆ ಹೆಗಡೆ ಅವರ ರಾಜಕೀಯ ಜೀವನ ಒಂದು ದೊಡ್ಡ ಸರ್ಕಲ್ ರೌಂಡ್ ಹಾಕಿ ಮುಗಿದಿತ್ತು. ಆರೋಗ್ಯ ಬಹಳ ಕೆಟ್ಟಿತ್ತು. ಹೆಗಡೆ ಮರಣಶಯ್ಯೆಯಲ್ಲಿದ್ದರು. ಕೇಸ್ ನಡೆಸುವ ಉಮೇದಿ, ತಾಕತ್ತು ಅವರಲ್ಲಿ ಇರಲಿಲ್ಲ. ಹೆಚ್ಚಿನ ಸದ್ದು ಮಾಡದೆ ಸೈಲೆಂಟಾಗಿ ಅವರ ವಕೀಲರು ಸ್ವಾಮಿಯವರ ವಿರುದ್ಧ ಹಾಕಿದ್ದ ಮೊಕದ್ದಮೆಯನ್ನು ವಾಪಸ್ ತೆಗೆದುಕೊಂಡಿದ್ದು ಜಗತ್ತಿಗೆ ಗೊತ್ತಾಗದಿದ್ದರೂ ಸ್ವಾಮಿಯವರಿಗೆ ಮಾತ್ರ ಜರೂರ್ ಗೊತ್ತಾಯಿತು. ನಕ್ಕರು ಸ್ವಾಮಿ.

ಮರಣಶಯ್ಯೆಯಲ್ಲಿದ್ದ ಹೆಗಡೆ ಸುಬ್ರಮಣಿಯನ್ ಸ್ವಾಮಿಗಳನ್ನು ತುಂಬಾ ನೆನಪಿಸಿಕೊಂಡರಂತೆ. ಇಬ್ಬರಿಗೂ ಆಪ್ತರಾಗಿದ್ದ ವಿಜಯ ಮಲ್ಯರನ್ನು ಕರೆಸಿಕೊಂಡ ಹೆಗಡೆ, 'ಒಮ್ಮೆ ಸ್ವಾಮಿಯನ್ನು ಭೇಟಿ ಮಾಡಿಸಯ್ಯಾ. ಸಾಯೋ ಮುಂಚೆ ಅವರನ್ನು ಭೇಟಿಯಾಗಬೇಕು ಎಂದು ತುಂಬಾ ಅನ್ನಿಸುತ್ತಿದೆ,' ಎಂದು ಗೋಗರಿದರಂತೆ.

ಸ್ವಾಮಿಯವರನ್ನು ಭೇಟಿಯಾದ ಮಲ್ಯ ಹೆಗಡೆಯವರ ಕೋರಿಕೆಯನ್ನು ಸ್ವಾಮಿಯವರಿಗೆ ತಿಳಿಸಿದರಂತೆ. ಒಂದು ಕಾಲದಲ್ಲಿ ಬದ್ಧವೈರಿಯಾದರೇನಾಯಿತು? ಮನುಷ್ಯತ್ವಕ್ಕೆ, ಒಂದು ಕಾಲದ ಪರಿಚಯಕ್ಕೆ ಮಹತ್ವ ಕೊಟ್ಟ ಸ್ವಾಮಿ ಬೆಂಗಳೂರಿಗೆ ತೆರಳಿ ಹೆಗಡೆಯವರನ್ನು ಅವರ ಮನೆಯಲ್ಲಿ ಭೇಟಿಯಾದರು.

ಮಲಗಿದ್ದಲ್ಲಿಂದಲೇ ಸ್ವಾಮಿಯವರ ಎರಡೂ ಕೈಗಳನ್ನು ತಮ್ಮ ಕೈಯಲ್ಲಿ ತೆಗೆದುಕೊಂಡ ಹೆಗಡೆ, 'ಸ್ವಾಮೀ, ನಾವಿಬ್ಬರೂ ಸ್ನೇಹಿತರಾಗಿರಬೇಕಿತ್ತು ಕಣೋ. ಜಗಳವಾಡಿ ತಪ್ಪು ಮಾಡಿದೆವು,' ಎಂದು ಗೊಳೋ ಎಂದು ರೋಧಿಸಿದರಂತೆ. ಪಾಪ! ಗತಕಾಲದ ಏನೇನು ನೆನಪಾಗಿತ್ತೋ ಹೆಗಡೆಯವರಿಗೆ. ಮುಂದೆ ಕೆಲವೇ ದಿವಸಗಳಲ್ಲಿ ಹೆಗಡೆ ನಿಧನರಾದರು.

ಕರಿಷ್ಮಾ ಇದ್ದ ಚಾಣಾಕ್ಷ ರಾಜಕಾರಣಿ ಹೆಗಡೆ ಮತ್ತು ಅಸಾಧಾರಣ ಬುದ್ಧಿಮತ್ತೆಯ ಸ್ವಾಮಿ ಇಬ್ಬರೂ ಒಂದಾಗಿ ರಾಜಕಾರಣ ಮಾಡಿದ್ದರೆ ಏನೇನಾಗುತ್ತಿತ್ತೋ ಗೊತ್ತಿಲ್ಲ. ರಾಜಕಾರಣ ತುಂಬಾ ರಂಗೀನ್ ಆಗಿ ರೋಚಕವಾಗಿರುತ್ತಿತ್ತು. ಅದು ಮಾತ್ರ ಖಾತ್ರಿ. ೧೯೯೯ ರಲ್ಲಿ ಪ್ರಧಾನಿ ವಾಜಪೇಯಿ ಅವರ ಮುಂದೆಯೇ ಹೆಗಡೆ ಮತ್ತು ಸ್ವಾಮಿ ಮಧ್ಯೆ ಕಿಡಿಗಳು ಹಾರಿ ಜ್ವಾಲೆಯೆದ್ದಿತ್ತು. ಹೆಗಡೆಗೆ ಮಂತ್ರಿಗಿರಿ ಕೊಡಬಾರದು ಎಂದು ಹಠ ಹಿಡಿದು ಕೂತಿದ್ದರು ಜಯಲಲಿತಾ. ಆಕೆಯ ಹೆಗಲಿನ ಮೇಲೆ ಬಂದೂಕಿಟ್ಟು ಗುಂಡು ಹಾರಿಸುತ್ತಿದ್ದವರು ಇದೇ ಸ್ವಾಮಿ. ಅಂದು ಆಪ್ತೆಯಾಗಿದ್ದ ಆಕೆಯ ವಿರುದ್ಧ ಮುಂದಿನ ವರ್ಷಗಳಲ್ಲಿ ಸ್ವಾಮಿ ಅದ್ಯಾವ ರೀತಿಯಲ್ಲಿ ತಿರುಗಿಬಿದ್ದರು ಎಂದರೆ ಗಾಯಗೊಂಡ ಸಿಂಹಿಣಿಯಾದಂತಾದ ಜಯಲಲಿತಾ ಕೂಡ ಹೇಗೆ ಸ್ವಾಮಿಯವರ ಮೇಲೆ ದ್ವೇಷ ಸಾಧಿಸಿದರು ಅಂದರೆ ಒಮ್ಮೆಯಂತೂ ಸ್ವಾಮಿಯನ್ನು ಜಯಲಲಿತಾ ಬೆಂಬಲಿಗರ ಗುಂಪು ಬಡಿದು ಕೊಂದೇಬಿಟ್ಟಿತ್ತು. ಆಯ್ತ ವೇಳೆಗೆ ನ್ಯಾಯಾಧೀಶರ ಚೇಂಬರ್ ಒಳಗೆ ನುಗ್ಗಿದ ಸ್ವಾಮಿ ಬಚಾವಾಗಿದ್ದರು. ಮುಂದೆ ನಕ್ಷತ್ರಿಕನಂತೆ ಹಿಂದೆ ಬಿದ್ದ ಸ್ವಾಮಿ ಜಯಲಲಿತಾಳನ್ನು ಸೆರೆಮನೆಗೆ ಅಟ್ಟಿದರು. ಸೆರೆಮನೆಗೆ ಹೋಗುವ ಮೊದಲೇ ಆ ಪುಣ್ಯಾತ್ಗಿತ್ತಿ ಸ್ವರ್ಗ ಸೇರಿಕೊಂಡಳು. ಆಕೆಯ ಆಪ್ತೆ ಶಶಿಕಲಾ ಸ್ವಾಮಿಗಳಿಗೆ ಶಾಪ ಹಾಕುತ್ತಾ ಜೈಲಿನಲ್ಲಿ ರಾಗಿ ಬೀಸುತ್ತಿದ್ದಾಳೆ.

ಸ್ವಾಮಿಯವರ ಕಾನೂನಿನ ಕುಣಿಕೆ ಮುಂದೆ ಯಾರ್ಯಾರ ಕೊರಳಿಗೆ ಪಾಶದಂತೆ ಬೀಳಲಿದೆಯೋ!? ಭಗವಂತನೇ ಬಲ್ಲ.

ಮಾಹಿತಿ ಆಧಾರ: ಸುಬ್ರಮಣಿಯನ್ ಸ್ವಾಮಿಯವರ ಪತ್ನಿ ರೋಕ್ಸ್ನಾಸ್ವಾಮಿಯವರು ಬರೆದ ಪುಸ್ತಕ - Evolving with Subramanian Swamy: A Roller Coaster Ride.
2 comments:

sunaath said...

ಸುಬ್ರಮಣಿಯನ್ ಸ್ವಾಮಿಯವರ ತೀವ್ರ ಬುದ್ಧಿಮತ್ತೆಗೆ, ಚಾಣಾಕ್ಷತನಕ್ಕೆ ಮತ್ತೊಮ್ಮೆ ಬೆರಗಾದೆ. ಈ ರಾಮ ಜೇಠ್ಮಲಾನಿಯವರು Devil's Advocate ಎಂದೇ ಖ್ಯಾತರಾಗಿದ್ದಾರೆ!
ರೋಕ್ಸ್ನಾ ಅವರ ಮೂಲಕೃತಿಯನ್ನು ಓದಲು ಸಾಧ್ಯವಾಗದ ನಮಗೆ, ನಿಮ್ಮ ಲೇಖನಗಳಿಂದಲೇ ಸ್ವಾರಸ್ಯಕರ ಮಾಹಿತಿ ದೊರೆಯಬೇಕು. ಎರಡನೆಯದಾಗಿ ನಿಮ್ಮ ರೋಚಕ ಶೈಲಿಯಿಂದಾಗಿ, ನಮ್ಮ ಓದುವ ಸಂತೋಷ ಅಧಿಕವಾಗುತ್ತದೆ.ಆದುದರಿಂದ ಈ series ಅನ್ನು ದಯವಿಟ್ಟು ಮೂಂದುವರೆಸಿ.

Mahesh Hegade said...

ಧನ್ಯವಾದಗಳು ಸುನಾಥ್ ಸರ್.