Sunday, May 13, 2018

ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ.

ಅವನು ಡಾನ್ ಛೋಟಾ ಶಕೀಲ್. ಪರಮಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ. ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ಅಲ್ಲಿಂದಲೇ ಭೂಗತಲೋಕದ ವ್ಯವಹಾರ ಸಂಬಾಳಿಸುತ್ತಾನೆ. ಸೇಠುಗಳಿಗೆ ಧಮ್ಕಿ ಹಾಕಿ, ಅವರಿಂದ ಝಣಝಣ ರೊಕ್ಕ ಉದುರಿಸಲು ಆಗಾಗ ಫೋನ್ ಮಾಡುತ್ತಿರುತ್ತಾನೆ. ಅದು ಆತನ ವೃತ್ತಿ. ಆದರೆ ಡಾನ್ ಛೋಟಾ ಶಕೀಲನಿಗೆ ಒಮ್ಮೊಮ್ಮೆ ಪತ್ರಕರ್ತರೊಂದಿಗೆ ಹರಟೆ ಹೊಡೆಯಬೇಕು ಎನ್ನಿಸಿಬಿಡುತ್ತದೆ. ಆಗ ಒಂದು ನಂಬರಿಗೆ ಡಯಲ್ ಮಾಡುತ್ತಾನೆ. ಭಾರತದಲ್ಲಿರುವ ಒಬ್ಬ ಮಹಿಳಾ ಪತ್ರಕರ್ತೆ ಫೋನೆತ್ತಿ, 'ಹೇಳಿ ಶಕೀಲ್ ಭಾಯ್,' ಎಂದು ಪಕ್ಕಾ ವೃತ್ತಿಪರ ಪತ್ರಕರ್ತೆಯೊಬ್ಬಳ ನಿರ್ಭಾವುಕ ದನಿಯಲ್ಲಿ ತಮ್ಮ ಎಲ್ಲ ಮಾಹಿತಿದಾರರೊಂದಿಗೆ ಮಾತಾಡಿದಂತೆ ನಿರುದ್ವೇಗದಿಂದ ಮಾತಾಡುತ್ತಾರೆ.  ಆಕಡೆಯಿಂದ ಛೋಟಾ ಶಕೀಲ್, 'ಶೀಲಾಜೀ, ಹೇಗಿದ್ದೀರಿ ನೀವು?' ಎಂದು ಕುಶಲ ವಿಚಾರಿಸುತ್ತಾನೆ. ಮುಂದೆ ಘಂಟೆಗಟ್ಟಲೆ ಹರಟೆ ಹೊಡೆಯುತ್ತಾನೆ. ನಡುನಡುವೆ ಭೂಗತಲೋಕಕ್ಕೆ ಸಂಬಂಧಪಟ್ಟ ಬ್ರೇಕಿಂಗ್ ನ್ಯೂಸ್ ಅನ್ನಿಸುವಂತಹ ಮಾಹಿತಿಗಳನ್ನು ಹರಿಬಿಡುತ್ತಾನೆ. ಆಗ ಆ ಮಹಿಳಾ ಪತ್ರಕರ್ತೆ ಮೈಯೆಲ್ಲಾ ಕಿವಿಯಾಗಿ ಬರೋಬ್ಬರಿ ನೋಟ್ ಮಾಡಿಕೊಳ್ಳುತ್ತಾರೆ. ಶಕೀಲ್ ಮಾತುಕತೆ ಮುಗಿಸಿದಾಗ ಮಾಧ್ಯಮ ಲೋಕ ಮತ್ತೊಂದು ಬಿಗ್ ಬ್ರೇಕಿಂಗ್ ಸುದ್ದಿಗೆ ಅಣಿಯಾಗಿರುತ್ತದೆ. ಶೀಲಾ ರಾವಲ್ ಎಂಬ ದಿಟ್ಟ ಕ್ರೈಂ ಪತ್ರಕರ್ತೆ ತುಂಬಾ ರೋಚಕ ಅನ್ನಿಸುವಂತಹ ಮತ್ತೊಂದು ಸುದ್ದಿಯನ್ನು ಬ್ರೇಕ್ ಮಾಡಿರುತ್ತಾರೆ. ಕ್ರೈಂ ಮಾಧ್ಯಮಲೋಕದ ಅನಭಿಷಿಕ್ತ ಮಹಾರಾಣಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿರುತ್ತದೆ.

ಶೀಲಾ ರಾವಲ್ ಮತ್ತು ಅವರು ಬರೆದಿರುವ ಪುಸ್ತಕ 

ಅವರು ಶೀಲಾ ರಾವಲ್. ಮೊದಲು ಶೀಲಾ ಭಟ್ ಆಗಿದ್ದರು. ವಿವಾಹದ ನಂತರ ಶೀಲಾ ರಾವಲ್ ಎಂದು ಚಾಲ್ತಿಯಲ್ಲಿದ್ದಾರೆ. ನಿಜವಾದ ಕ್ರೈಂ ಪತ್ರಕರ್ತರೇ ಕಮ್ಮಿ. ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾಹೇಳಿಕೆಗಳಿಗೇ ಮಸಾಲೆ ಹಾಕಿ, ಅದನ್ನೇ ಹಿಂದೆ ಮುಂದೆ ಮಾಡಿ ಬರೆದು ಕ್ರೈಂ ಪತ್ರಕರ್ತ ಎಂದು ಸ್ಕೋಪ್ ತೆಗೆದುಕೊಳ್ಳುವವರೇ ಜಾಸ್ತಿ. ಅದರಲ್ಲೂ ಕ್ರೈಂ ವರದಿ ಮಾಡುವ ಪತ್ರಕರ್ತರಲ್ಲಿ ಹೆಚ್ಚಿನವರು ಗಂಡಸರು. ಆ ಫೀಲ್ಡ್ ಮಹಿಳೆಯರಿಗೆ ಸರಿಯಾದದ್ದಲ್ಲ ಎಂದು ಮಹಿಳಾ ಪತ್ರಕರ್ತೆಯರು ಹೆಚ್ಚಾಗಿ ಕ್ರೈಂ ರಿಪೋರ್ಟಿಂಗ್ ಮಾಡಲು ಹೋಗುವದಿಲ್ಲ. ಅಂತಹ ಪುರುಷಪ್ರಧಾನ ಲೋಕದ ಗಾಜಿನ ಛಾವಣಿಯನ್ನು (glass ceiling) ಛಿದ್ರಮಾಡಿ ಯಶಸ್ವಿಯಾದವರು ಶೀಲಾ ರಾವಲ್.

ಸಾಂಪ್ರದಾಯಿಕ ಗುಜರಾತಿ ಬ್ರಾಹ್ಮಣ ಸಮಾಜದಲ್ಲಿ ಹುಡುಗಿಯರು ನೌಕರಿ ಚಾಕರಿಗೆ ಬರುವದೇ ಕಮ್ಮಿ. ಅದರಲ್ಲೂ ಪತ್ರಿಕೋದ್ಯಮಕ್ಕೆ ಅದರಲ್ಲೂ ಕ್ರೈಂ ಪತ್ರಿಕೋದ್ಯಮಕ್ಕೆ ಬರುವದು ದೂರದ ಮಾತು. ಇಂತಹ ಲೋಕಕ್ಕೆ ಶೀಲಾ ರಾವಲ್ ಎಂಬ ಗುಜರಾತಿ ಬ್ರಾಹ್ಮಣ ಹುಡುಗಿ ಎಂಟ್ರಿ ಕೊಟ್ಟಿದ್ದೊಂದೇ ಅಲ್ಲ, ದೊಡ್ಡ ಮಟ್ಟದ ಎಲ್ಲ ಭೂಗತ ಪಾತಕಿಗಳನ್ನು ಮುಖತಃ ಭೆಟ್ಟಿಯಾದ ಹೆಗ್ಗಳಿಕೆ ಯಾರಿಗಾದರೂ ಇದ್ದರೆ ಅದು ಶೀಲಾ ರಾವಲ್ ಅವರಿಗೆ ಮಾತ್ರ. ಮಹಿಳಾ ಪತ್ರಕರ್ತೆಯರು ಹೋಗಲಿ ಘಟಾನುಘಟಿ ಪುರುಷ ಪತ್ರಕರ್ತರೇ ಇವರು ಭೇಟಿಯಾದಷ್ಟು ಭೂಗತ ಪಾತಕಿಗಳನ್ನು ಖುದ್ದಾಗಿ ಭೇಟಿಯಾಗಿಲ್ಲ.

ಮೊದಲು ಶೀಲಾ ಭಟ್ ರಾವಲ್ ಹೆಚ್ಚಾಗಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಈಗಿತ್ತಲಾಗೆ ಅವರೂ ದೃಶ್ಯಮಾಧ್ಯಮಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲೂ ಭೂಗತಲೋಕದ ಬಗ್ಗೆ ಲೇಟೆಸ್ಟ್ ಸುದ್ದಿಗಳನ್ನು ಬ್ರೇಕ್ ಮಾಡುತ್ತಲೇ ಇರುತ್ತಾರೆ.

ನೆನಪಿರಲಿ. ಈ ಖಡಕ್ ಕ್ರೈಂ ರಿಪೋರ್ಟಿಂಗ್ ಎಂಬುದು ಕತ್ತಿಯ ಅಲುಗಿನ ಮೇಲೆ ಸರ್ಕಸ್ ಮಾಡಿದ ಹಾಗೆ. ಅಷ್ಟು ಅಪಾಯಕಾರಿ. ಭೂಗತಲೋಕದ ಸಂಕೀರ್ಣ ಸಮೀಕರಣಗಳನ್ನು ಸರಿಯಾಗಿ  ಅರ್ಥಮಾಡಿಕೊಳ್ಳದ ಪತ್ರಕರ್ತರು ಚಿತ್ರವಿಚಿತ್ರವಾಗಿ ಸತ್ತುಹೋಗಿದ್ದಾರೆ. ೩೦೧೧ ರಲ್ಲಿ ಜ್ಯೋತಿರ್ಮಯ್ ಡೇ ಎಂಬ ಮುಂಬೈನ ಖ್ಯಾತ  ಕ್ರೈಂ ಪತ್ರಕರ್ತರು ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ನಡುವಿನ ವೈರತ್ವಕ್ಕೆ ಮತ್ತು ಮತ್ತೊಬ್ಬ ಪತ್ರಕರ್ತೆಯ ಕಾರಸ್ಥಾನಕ್ಕೆ ಜೀವವನ್ನೇ ಕಳೆದುಕೊಂಡರು. ಹಂತಕರ ಗುಂಡಿಗೆ ದಾರುಣವಾಗಿ ಬಲಿಯಾದರು. ೧೯೮೦ ರ ದಶಕದಲ್ಲಿ ಅಯ್ಯರ್ ಎಂಬ ಪತ್ರಕರ್ತರೂ ಹೀಗೇ ಭೂಗತಲೋಕದ ಗುಂಡಿಗೆ ಬಲಿಯಾಗಿದ್ದರು. ದೇಶಿ ಡಾನ್  ಅರುಣ್ ಗೌಳಿಯನ್ನು ಸರಿಯಾಗಿ ಇಂಟರ್ವ್ಯೂ ಮಾಡಲಿಲ್ಲ ಎಂದು ಗೌಳಿಯ ಬಂಟರು ಮತ್ತೊಬ್ಬ ಪತ್ರಕರ್ತೆ ಮೇಲೆ ಹಲ್ಲೆ ಮಾಡಿದ್ದರು. ಭೂಗತಲೋಕದ ನೈಜವಾದ ರಿಯಲ್ ರಿಪೋರ್ಟಿಂಗ್ ಮಾಡುವದು ಅಂದರೆ ಸುಲಭದ ಮಾತಲ್ಲ. ಭೂಗತ ಲೋಕದ ಮಂದಿಯ ಬಗ್ಗೆ ತಮಗೆ ಸರಿಯೆನ್ನಿಸಿದ್ದನ್ನು ಬರೆದು ಅರಗಿಸಿಕೊಳ್ಳುವದು ಸುಲಭವೂ ಅಲ್ಲ. ಆದರೆ ಅದನ್ನೆಲ್ಲ ಸಾಧಿಸಿ ತೋರಿಸಿದ್ದಷ್ಟೇ ಅಲ್ಲ ಭೂಗತಲೋಕವೇ ಎದ್ದು ನಿಂತು ಇವರ ನಿಯತ್ತನ್ನು, ವೃತ್ತಿಪರತೆಯನ್ನು ಗೌರವಿಸಬೇಕು ಎನ್ನುವಂತಹ ವ್ಯಕ್ತಿತ್ವವನ್ನು ಸದಾ ಕಾಪಾಡಿಕೊಂಡು ಬಂದವರು ಶೀಲಾ ರಾವಲ್.

ಅದು ಇಸ್ವಿ ೨೦೦೫. ದಾವೂದ್ ಇಬ್ರಾಹಿಂ ತುಂಬಾ ಖುಷಿಯಾಗಿದ್ದ. ಪಾಕಿಸ್ತಾನದ ಖ್ಯಾತ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಜೊತೆ ಸಂಬಂಧ ಬೆಳೆಸಿದ್ದ. ಅವರಿಬ್ಬರ ಕುಟುಂಬಗಳ ಮಧ್ಯೆ ಗೆಳೆತನ ಮೊದಲಿಂದಲೂ ಇತ್ತು. ತನ್ನ ಮಗಳನ್ನು ಜಾವೇದ್ ಮಿಯಾಂದಾದನ ಮಗನಿಗೆ ಮದುವೆ ಮಾಡಿಕೊಟ್ಟ ದಾವೂದ್ ಕ್ರಿಕೆಟಿಗನ ಬೀಗನಾಗಿ ಬದಲಾಗಿದ್ದ. ಈ ಐತಿಹಾಸಿಕ ಮದುವೆ ಭಯಂಕರ ವಿಜೃಂಭಣೆಯಿಂದ ಜರುಗಿತ್ತು. ಪಾಕಿಸ್ತಾನದ ಕರಾಚಿಯಲ್ಲಿ, ಸೌದಿಯ ಮೆಕ್ಕಾದಲ್ಲಿ ವೈಭವೋಪೇತ ಸಮಾರಂಭಗಳು ನಡೆದಿದ್ದವು. ಅಲ್ಲೆಲ್ಲ ದಾವೂದ್ ಹಾಜರಿದ್ದ. ಅಲ್ಲೆಲ್ಲ ಅವನಿಗೆ ಬರೋಬ್ಬರಿ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ದುಬೈನಲ್ಲಿ ಆರತಕ್ಷತೆಯನ್ನು ಇಟ್ಟುಕೊಳ್ಳಲಾಗಿತ್ತು. ಅದಕ್ಕೆ ಮಾತ್ರ ದಾವೂದ್ ಬರಲೇ ಇಲ್ಲ ಎಂದು ಗುಲ್ಲಾಗಿತ್ತು. ದುಬೈಗೆ ಬರಲಿರುವ ದಾವೂದನ್ನು ಉಡಾಯಿಸಿಬಿಡುವ ಖತರ್ನಾಕ್ ಸ್ಕೀಮ್ ಒಂದನ್ನು ಭಾರತೀಯ ಬೇಹುಗಾರರು ಹಾಕಿದ್ದಾರೆ ಎಂದು ಮೊದಲೇ ಮಾಹಿತಿ ಪಡೆದುಕೊಂಡ ದಾವೂದ್ ಅದೆಲ್ಲ ರಿಸ್ಕ್ ಬೇಡವೇ ಬೇಡ ಎಂದು ದುಬಾಯಿಗೆ ಬರಲೇ ಇಲ್ಲ. ಅವನ ಅನುಪಸ್ಥಿತಿಯಲ್ಲಿಯೇ ಅವನ ಮಗಳ ಆರತಕ್ಷತೆ ನಡೆದುಹೋಯಿತು. ಇಂತಹ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಬಂದಿತ್ತು. ಅದನ್ನೇ ಇಲ್ಲಿಯವರೆಗೆ ನಾವೂ ಕೂಡ ನಂಬಿದ್ದೆವು.

ಆದರೆ ಮೊತ್ತಮೊದಲಬಾರಿಗೆ ಶೀಲಾ ರಾವಲ್ ತಮ್ಮ ಪುಸ್ತಕದಲ್ಲಿ  Godfathers of Crime (Face-to-Face with India's most wanted) ಹೊಚ್ಚ ಹೊಸ ಖತರ್ನಾಕ್ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಬೆಚ್ಚಿಬೀಳಿಸುವ ಮಾಹಿತಿ ಎಂದರೆ - ದುಬೈನಲ್ಲಿ ನಡೆದ ಮಗಳ ಆರತಕ್ಷತೆಗೆ ಖುದ್ದು ದಾವೂದ್ ಮುದ್ದಾಂ ಬಂದಿದ್ದ. ತನ್ನ ಹಿತೈಷಿಗಳ ಸಲಹೆ ಪ್ರಕಾರ ಕೊಂಚ low profile ಕಾದುಕೊಂಡಿದ್ದ. ಪ್ರಚಾರದಿಂದ ದೂರವಿದ್ದ. ಆದರೆ ಯಾರ್ಯಾರನ್ನು ತನ್ನ ಪುತ್ರಿಯ ಮದುವೆಯ ಆರತಕ್ಷತೆಯಲ್ಲಿ ಸ್ವಾಗತಿಸಬೇಕಿತ್ತೋ, ಯಾರ್ಯಾರ ಖಾತಿರ್ದಾರಿ ಮಾಡಬೇಕಿತ್ತೋ ಅವೆಲ್ಲವನ್ನೂ ದಾವೂದ್ ಬರೋಬ್ಬರಿ ನಿಭಾಯಿಸಿದ್ದ. ಭಾರತಕ್ಕೆ, ಪಾಕಿಸ್ತಾನಕ್ಕೆ, ಅರಬ್ ಸಂಯುಕ್ತ ಸಂಸ್ಥಾನಕ್ಕೆ ಮುಜುಗರವಾಗದಿರಲಿ, ಅಲ್ಲಿನ ಸರ್ಕಾರಗಳಿಗೆ ಮುಖಭಂಗವಾಗದೇ ಇರಲಿ ಅನ್ನುವ ಕಾರಣಕ್ಕೆ ಅವನಿಗೆ ಕಡ್ಡಾಯವಾಗಿ low profile ಕಾದುಕೊಳ್ಳಲು ಕಟ್ಟುನಿಟ್ಟಾಗಿ ಹೇಳಲಾಗಿತ್ತು. ಹಾಗಾಗಿಯೇ ದಾವೂದ್ ದುಬೈಗೆ ಬರಲೇ ಇಲ್ಲ. ಅವನಿಗೆ ಇಲ್ಲಿ ಪ್ರವೇಶವಿಲ್ಲ ಎಂದು ನಂತರ ಹೇಳಿಕೊಳ್ಳಲು ಸಾಧ್ಯವಾಗಿದ್ದು.

ಆದರೆ ದಾವೂದ್ ಪುತ್ರಿಯ ಆರತಕ್ಷತೆಗೆ ಹರಸಾಹಸ ಮಾಡಿ ಆಮಂತ್ರಣ ಗಿಟ್ಟಿಸಿದ್ದ ಶೀಲಾ ರಾವಲ್ ದಾವೂದನನ್ನು ನೋಡಿದ್ದೊಂದೇ ಅಲ್ಲ, ದಾವೂದ್ ತಮಗೆ ಗೌರವದಿಂದ ಸಲಾಂ ಕೂಡ ಮಾಡಿದ್ದ ಎನ್ನುವ ಬ್ರೇಕಿಂಗ್ ನ್ಯೂಸ್ ನೀಡಿ ಎಲ್ಲ ಸರ್ಕಾರಗಳು ನೀಡಿದ ಹೇಳಿಕೆಗಳು ಶುದ್ಧ ಭೋಂಗು ಎಂದು ತಿಳಿಯುವಂತೆ ಮಾಡಿದ್ದಾರೆ.

'ಅಲ್ಲ ಶೀಲಾ ಅವರೇ, ದಾವೂದನ ಪುತ್ರಿಯ ವಿವಾಹದ ಆರತಕ್ಷತೆ ಆಗಿದ್ದು ೨೦೦೫ ರಲ್ಲಿ. ದಾವೂದ್ ದುಬೈಗೆ ಬರಲೇ ಇಲ್ಲ ಎನ್ನುವ ಸುದ್ದಿಯೇ ಅಂದಿನಿಂದಲೂ ಚಾಲ್ತಿಯಲ್ಲಿತ್ತು. ಈಗ ೨೦೧೫ ರಲ್ಲಿ ನೀವು ನಿಮ್ಮ ಪುಸ್ತಕದಲ್ಲಿ ದಾವೂದ್ ಖುದ್ದಾಗಿ ಅಲ್ಲಿ ಹಾಜರಿದ್ದ ಎಂದರೆ ಹೇಗೆ ನಂಬೋದು?' ಎಂದು ಕೇಳಿದರೆ ಅದಕ್ಕೂ ಸಮರ್ಪಕ ವಿವರಣೆ ಕೊಡುತ್ತಾರೆ ಲೇಖಕಿ ಪತ್ರಕರ್ತೆ ಶೀಲಾ. 'ಆಗಲೇ ಆ ಸುದ್ದಿಯನ್ನು ಬ್ರೇಕ್ ಮಾಡಲು ಕೆಲವು ಅನಿವಾರ್ಯತೆಗಳು ಇದ್ದವು. ಸರ್ಕಾರಗಳಿಂದ ವಿನಂತಿಭರಿತ ಒತ್ತಡವಿತ್ತು. ಬೇರೆಬೇರೆ ದೇಶಗಳ ಸರ್ಕಾರಗಳಿಗೆ ಅವರದೇ ಆದ ಕಾರಣಗಳಿಗಾಗಿ ದಾವೂದ್ ದುಬೈಗೆ ಬರಲೇ ಇಲ್ಲ ಎಂದು ಹೇಳಿಕೊಳ್ಳಬೇಕಾಗಿತ್ತು. ಹಾಗಾಗಿ ನಿಜ ಸುದ್ದಿ ತಿಳಿದಿದ್ದ ನಮ್ಮಂತವರೂ ಕೂಡ ಅಂತಹ ವಿನಂತಿ ಮತ್ತು ಒತ್ತಡಗಳ ಕಾರಣಗಳಿಂದ ಆಗ ಆ ಸ್ಟೋರಿಯನ್ನು ಬ್ರೇಕಿಂಗ್ ನ್ಯೂಸ್ ಮಾಡಲಾಗಲಿಲ್ಲ.'

ಇದು ನಂಬಲಾಗದ ವಿವರಣೆ ಏನಲ್ಲ. ಎಂತಹ ದಿಟ್ಟ ಪತ್ರಕರ್ತರೇ ಆಗಲಿ, ಒಮ್ಮೊಮ್ಮೆ ಅತಿ ದೊಡ್ಡಮಟ್ಟದಿಂದ ವಿನಯಪೂರ್ವಕ ವಿನಂತಿಗಳು ಬಂದಾಗ ಒಪ್ಪಲೇಬೇಕಾಗುತ್ತದೆ. ದೇಶದ ಹಿತದ ಪ್ರಶ್ನೆ, ಮಾನದ ಪ್ರಶ್ನೆ ಅಂತೆಲ್ಲ ಫಿಟ್ಟಿಂಗ್ ಇಟ್ಟುಬಿಡುತ್ತಾರೆ. ಮತ್ತೆ ಪತ್ರಕರ್ತರಿಗೆ ಅಮೂಲ್ಯ ಸಂಪರ್ಕಗಳನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ಸುದ್ದಿ ಗೊತ್ತಾದ ತಕ್ಷಣ ಬರೆದು ಬಿಸಾಡಲು ಆಗುವದಿಲ್ಲ. ವೃತ್ತಿಪರರ ಅನಿವಾರ್ಯತೆಗಳು ಅವರಿಗೇ ಗೊತ್ತು.

ಡಾನ್ ಛೋಟಾ ಶಕೀಲನನ್ನು ತುಂಬಾ ಕಾಡಿ ಬೇಡಿ ದಾವೂದ್ ಪುತ್ರಿಯ ಆರತಕ್ಷತೆ ಸಮಾರಂಭಕ್ಕೆ ಆಮಂತ್ರಣ ಗಿಟ್ಟಿಸಿದ್ದರು ಶೀಲಾ. ಆಮಂತ್ರಣ ಸಿಕ್ಕಿತು ಅಂದಾಕ್ಷಣ ಕೈಬೀಸಿಕೊಂಡು, ಬೇಕಾದರೆ ಲಕೋಟೆಯಲ್ಲಿ ನೂರು ರೂಪಾಯಿ ನೋಟಿನ ಆಹೇರು ಇಟ್ಟುಕೊಂಡು, ಹೋಗಿಬಿಡಲು ಅದೇನು ಸಾಮಾನ್ಯನ ಮಗಳ ಮದುವೆಯೇ? ಅಂತರರಾಷ್ಟ್ರೀಯ ಉಗ್ರವಾದಿ ಎಂದು ಎಲ್ಲ ಕಡೆ ನೋಟೆಡ್ ಆದ ಭೂಗತಪಾತಕಿಯ ಖಾಸಗಿ ಸಮಾರಂಭ ಅದು. ದುಬೈನ ಪರಮ ದುಬಾರಿ ಐಷಾರಾಮಿ ಹಿಲ್ಟನ್ ಹೋಟೆಲ್ ಅಂದು ಅಕ್ಷರಶಃ ಕೋಟೆಯಾಗಿತ್ತು. ಆ ಮಟ್ಟದ ರಕ್ಷಣಾ ವ್ಯವಸ್ಥೆಯಿತ್ತು. ಸಾರ್ವಜನಿಕವಾಗಿ ದಾವೂದ್ ಇಬ್ರಾಹಿಂನನ್ನು ಟೆರರಿಸ್ಟ್, ಡಾನ್, ಪಾತಕಿ ಏನೇ ಅನ್ನಿ ಆದರೆ ಒಂದು ಖತರ್ನಾಕ್ ಓಪನ್ ಸೀಕ್ರೆಟ್ ಅಂದರೆ ಅನೇಕ ದೇಶಗಳ ಬೇಹುಗಾರಿಕೆ ಸಂಸ್ಥೆಗಳಿಗೆ ಆತನ ಅವಶ್ಯಕತೆ ತುಂಬಾ ಇದೆ. ಅದಕ್ಕೆ ಮುಖ್ಯ ಕಾರಣ ಆತನ ಹತೋಟಿಯಲ್ಲಿರುವ ದಕ್ಷ ಹವಾಲಾ ವ್ಯವಸ್ಥೆ. ಪ್ರಪಂಚದ ಯಾವ ಮೂಲೆಗೆ ಬೇಕಾದರೂ ಆತ ನಿಮಿಷಾರ್ಧದಲ್ಲಿ ಕೋಟಿ ಕೋಟಿ ಡಾಲರುಗಳನ್ನು ಬೇಕಾದ ಕರೆನ್ಸಿಯಲ್ಲಿ ನೀಟಾಗಿ ತಲುಪಿಸಬಲ್ಲ. ಅದೇ ಅವನ ಸ್ಪೆಷಾಲಿಟಿ. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮತ್ತು ಪರ್ಯಾಯ ದೊರೆ ಬರದ ಹೊರತೂ ದಾವೂದನ ಕೂದಲು ಕೂಡ ಕೊಂಕುವದಿಲ್ಲ. ಕೊಂಕಲು ಕೆಲವೊಂದು ಜಾಗತಿಕ ಹಿತಾಸಕ್ತಿಗಳು ಬಿಡುವದೂ ಇಲ್ಲ. ಈ ಕಡೆ ಭಾರತ ಮತ್ತು ಪಾಕಿಸ್ತಾನ ಅದೆಷ್ಟೇ ಗಜುಮ್ ಹಾಕಿದರೂ ಸರಿ, ಅದೇನೇ ಲಗಾಟಿ ಹೊಡೆದರೂ ಸರಿ, ಏನೂ ಆಗುವದಿಲ್ಲ. ಆಕಡೆ ಗಹಗಹಿಸಿ ರಕ್ಕಸನಗೆ ನಗುತ್ತ ದಾವೂದ್ ಆರಾಮಾಗಿ ಇರುತ್ತಾನೆ. ಶೀಲಾ ರಾವಲ್ ಕೂಡ ಅದನ್ನೇ ಬರೆಯುತ್ತಾರೆ.

ಬ್ಯಾಕ್ ಟು ದಾವೂದ್ ಪುತ್ರಿಯ ಆರತಕ್ಷತೆ ಸಮಾರಂಭ...ವಧುವರರು ಸ್ಥಾಪಿತರಾಗಿದ್ದ ಮಂಟಪದಿಂದ ಕೊಂಚ ದೂರದಲ್ಲಿ, ಕೊಂಚ ಕತ್ತಲಿರುವ ಜಾಗದಲ್ಲಿ, ಮೃದು ದಪ್ಪನೆ ಚರ್ಮದ ದುಬಾರಿ ಖುರ್ಚಿ ಮೇಲೆ ಡಾನ್ ದಾವೂದ್ ಇಬ್ರಾಹಿಂ ಕಾಲ ಮೇಲೆ ಕಾಲು ಹಾಕಿಕೊಂಡು ವಿರಾಜಮಾನನಾಗಿದ್ದ. ಮಿರಿಮಿರಿ ಮಿಂಚುತ್ತಿರುವ ದುಬಾರಿ ಸೂಟ್ ಧರಿಸಿದ್ದ ಆತ ಚಮಕಾಯಿಸುತ್ತಿದ್ದ. ವಧುವರರಿಗೆ ಶುಭಕೋರಲು ಬಂದು ಹೋಗುತ್ತಿದ್ದ ಎಲ್ಲರೂ ಆತನಿಗೆ ಬರೋಬ್ಬರಿ ಕಾಣುತ್ತಿದ್ದರು. ಆದರೆ ಆತ ಎಲ್ಲರಿಗೂ ಅಷ್ಟು ಸುಲಭವಾಗಿ ಕಾಣುತ್ತಿರಲಿಲ್ಲ. ನನಗೆ ಕಂಡ. ದೊಡ್ಡ ಮೀಸೆಯ ಅವನನ್ನು ನಾನು ಮಿಸ್ ಮಾಡಿಕೊಳ್ಳುವಂತೆಯೇ ಇರಲಿಲ್ಲ. ಕೊಂಚ ತಲೆ ತಗ್ಗಿಸಿ, ಕಣ್ಣಲ್ಲೇ ವಂದಿಸಿದೆ. ಗೌರವ ಸೂಚಿಸಿದೆ. ಅದಕ್ಕೆ ಪ್ರತಿಯಾಗಿ ದಾವೂದ್ ಸಹ ಗೌರವ ಸಲ್ಲಿಸಿದ. ಸಲಾಂ ಮಾಡಿದ. ಹೀಗೆ ತಮ್ಮ ಅತಿ ದುರ್ಲಭ 'ದಾವೂದ್ ದರ್ಶನ'ದ ಬಗ್ಗೆ ಬರೆದುಕೊಂಡಿದ್ದಾರೆ ಶೀಲಾ ರಾವಲ್.

ದಾವೂದ್ ಇಬ್ರಾಹಿಂ ಬಿಟ್ಟರೆ ಮತ್ತೊಬ್ಬ ದೊಡ್ಡ ಡಾನ್ ಅಂದರೆ ದಾವೂದನ ಕಡುವೈರಿ ಛೋಟಾ ರಾಜನ್. ಸೆಪ್ಟೆಂಬರ್ ೨೦೦೦ ನಲ್ಲಿ ಥೈಲಾಂಡಿನ ರಾಜಧಾನಿ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ದಾವೂದ್ ಕಳಿಸಿದ್ದ ಶಾರ್ಪ್ ಶೂಟರ್ಸ್ ಮಾರಣಾಂತಿಕ ಹಲ್ಲೆ ಮಾಡಿದರು. ನಾಲ್ಕಾರು ಗುಂಡೇಟು ತಿಂದಿದ್ದ ಛೋಟಾ ರಾಜನ್ ಬಚಾವಾಗಿದ್ದೇ ಒಂದು ದೊಡ್ಡ ಪವಾಡ. ಛೋಟಾ ರಾಜನ್ನನ ಅತ್ಯಾಪ್ತರಿಗೆ ಇನ್ನಿಲ್ಲದ ಆಮಿಷ ತೋರಿಸಿ ಅವರ ನಿಯತ್ತನ್ನು ಖರಾಬ್ ಮಾಡಿದ್ದ D ಕಂಪನಿ ಅವರ ಮೂಲಕ ಛೋಟಾ ರಾಜನ್ ಇರುವ ರಹಸ್ಯ ಸ್ಥಳದ ಮಾಹಿತಿ ತೆಗೆದಿತ್ತು. ಮಾಹಿತಿ ಸಿಕ್ಕಿದ್ದೇ ತಡ, ಛೋಟಾ ಶಕೀಲ್ ಹಂತಕರ ಒಂದು ಟೀಮ್ ತಯಾರು ಮಾಡಿ ಬ್ಯಾಂಕಾಕಿಗೆ ಕಳುಹಿಸಿಬಿಟ್ಟ. ರಾಜನ್ನನಿಗೆ ಮರಾಮೋಸ ಮಾಡಿದ್ದ ಅವನ ಮನುಷ್ಯನೊಬ್ಬ ಬಂದು ರಾಜನ್ ಇದ್ದ ಮನೆಯ ಬಾಗಿಲು ಬಡಿದಿದ್ದ. ಯಾರು ಎಂದು ಬಾಗಿಲಲ್ಲಿರುವ ಸಣ್ಣ ಪೀಪ್ ಹೋಲ್ ಮೂಲಕ ನೋಡಿದ ರಾಜನ್ನನ ಖಾಸ್ ಆದ್ಮಿ ರೋಹಿತ್  ವರ್ಮಾ. ಇವನು ನಮ್ಮವನೇ ತಾನೇ ಎಂದು ಬಾಗಿಲು ತೆಗೆದುಬಿಟ್ಟ. ಅದೇ ಅವನು ಮಾಡಿದ ದೊಡ್ಡ ತಪ್ಪು. ದೊಡ್ಡ ಪೊರಪಾಟಾಗಿಬಿಟ್ಟಿತು. ಗದ್ದಾರಿ ಮಾಡಿದ್ದ ಮನುಷ್ಯ ಸರಕ್ ಎಂದು ಪಕ್ಕಕ್ಕೆ ಸರಿದುಬಿಟ್ಟ. ಅವನ ಬೆನ್ನ ಹಿಂದೆ ಅವಿತುಕೊಂಡಿದ್ದರು ಛೋಟಾ ಶಕೀಲ್ ಕಳಿಸಿದ್ದ ಹಂತಕರು. ಮೊದಲು ಒಳಗೆ ನುಗ್ಗಿದವ ಛೋಟಾ ಶಕೀಲನ ಖಾಸ್ ಬಂಟ ಮುಂಬೈ ಜೋಗೇಶ್ವರಿ ಮೂಲದ ಮುನ್ನಾ ಜಿಂಗಾಡಾ. ಹಿಂದೆಯೇ ಮೊರೆದವು ಹಂತಕರ ಬಂದೂಕುಗಳು. ಹಲವಾರು ಗುಂಡೇಟು ತಿಂದ ರೋಹಿತ್  ವರ್ಮಾ ಅಲ್ಲೇ ಜರಡಿ ಜರಡಿಯಾಗಿ ರಕ್ತ ಸುರಿಸುತ್ತ ಸತ್ತ. ಅವನ ನೇಪಾಳಿ ಹೆಂಡತಿ ಕೂಡ ಹಂತಕರ ಗುಂಡಿಗೆ ಬಲಿಯಾದಳು. ಬಾಗಿಲು ಹಾಕಿದ್ದ ಕೋಣೆಯೊಂದರಲ್ಲಿ ಇದ್ದ ಎನ್ನುವ ಒಂದೇ ಕಾರಣಕ್ಕೆ ರಾಜನ್ ಬಚಾವಾದ. ಬಾಗಿಲ ಮೂಲಕವೇ rapid ಫೈರಿಂಗ್ ಮಾಡಿದ್ದರು. ನಾಲ್ಕಾರು ಗುಂಡು ರಾಜನ್ನನಿಗೆ ಬಿತ್ತು ಕೂಡ. ಅಂತಹ ಪರಿಸ್ಥಿತಿಯಲ್ಲೂ ಬಾಲ್ಕನಿ ಜಿಗಿದು ಕೆಳಕ್ಕೆ ಹಾರಿ ಫುಟ್ ಪಾತ್ ಮೇಲೆ ಬಿದ್ದಿದ್ದ ಛೋಟಾ ರಾಜನ್ನನನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ಹಾಗಾಗಿ ಬದುಕಿಕೊಂಡ.

ಛೋಟಾ ರಾಜನ್ ಮೇಲೆ ದಾಳಿಯಾಗಿದೆ ಎಂದು ಸರಕಾರ ಖಾತ್ರಿ ಪಡಿಸುವ  ಮೊದಲೇ ತಮ್ಮ ಮಾಹಿತಿದಾರರ ಮೂಲಕ ಎಲ್ಲ ಮಾಹಿತಿ ತೆಗೆದಿದ್ದ ಖತರ್ನಾಕ ಪತ್ರಕರ್ತೆ ಶೀಲಾ ಭಟ್ ತುರಂತವಾಗಿ ಥೈಲ್ಯಾಂಡಿಗೆ ಹಾರಿದ್ದರು. ಅದೆಂತಹ ಪರ್ಫೆಕ್ಟ್ ಮಾಹಿತಿಜಾಲ ಅವರದ್ದು ನೋಡಿ. ವಿಮಾನ ಇಳಿದವರೇ ಸೀದಾ ಹೋಗಿದ್ದು ಛೋಟಾ ರಾಜನ್ ದಾಖಲಾಗಿದ್ದ ಆಸ್ಪತ್ರೆಗೆ. ರಾಜನ್ ಕೊಂಚ ಚೇತರಿಸಿಕೊಂಡಿದ್ದ. ಅವನನ್ನು ಮತ್ತು ಅವನ ಸಹಚರರನ್ನು ಸಂದರ್ಶಿಸಿ ವಾರಗಳ ಕಾಲ ಒಂದರಮೇಲೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟವರು ಶೀಲಾ ಭಟ್. ಆಗ ಟೆಲಿವಿಷನ್ ಚಾನೆಲ್ಲುಗಳು ಅಷ್ಟೊಂದು ವ್ಯಾಪಕವಾಗಿರಲಿಲ್ಲ. ಥೈಲಾಂಡಿನಲ್ಲಿ ಕೂತು ಹಾಟ್ ನ್ಯೂಸ್ ವರದಿಗಳನ್ನು ಫಟಾಫಟ್ ಅಂತ ಬರೆದು ಬರೆದು ರೋಚಕ ಸಂಚಲನ ಸೃಷ್ಟಿಸಿದವರು ಶೀಲಾ ರಾವಲ್.

ಮುಂದೆ ೨೦೦೩ ರ ಹೊತ್ತಿಗೆ ಡಾನ್ ಅಬು ಸಲೇಂನನ್ನು ಅಮೇರಿಕಾದ FBI ಪೋರ್ಚುಗಲ್ ದೇಶದ ಸಹಕಾರದೊಂದಿಗೆ ಲಿಸ್ಬನ್ ಶಹರದಲ್ಲಿ ಅಟ್ಟಾಡಿಸಿ ಬಂಧಿಸಿತು. ಜೊತೆಗೆ ಸೆರೆ ಸಿಕ್ಕಾಕೆ ಅವನ ಪ್ರೇಯಸಿ ಬಾಲಿವುಡ್ ನಟಿ ಮೋನಿಕಾ ಬೇಡಿ. ಶೀಲಾ ರಾವಲ್ ಎಲ್ಲರಿಗಿಂತ ಭಿನ್ನ. ಅವರು ಬೇರೆ ಮಾಹಿತಿಯನ್ನು ಹುಡುಕುತ್ತ ಅಮೇರಿಕಾದ ಅಟ್ಲಾಂಟಾ ನಗರಕ್ಕೆ ಹಾರಿದ್ದರು. ಅವರಿಗೆ ಗೊತ್ತಿತ್ತು ಡಾನ್ ಅಬು ಸಲೇಂನ ಅಧಿಕೃತ ಪತ್ನಿ ಸಮೀರಾ ಜುಮಾನಿ ಅಟ್ಲಾಂಟಾ ನಗರದಲ್ಲೆಲ್ಲೋ ನೆಲೆಸಿದ್ದಾಳೆ ಎಂದು. ನಿಖರವಾಗಿ ಎಲ್ಲಿ ಎಂದು ಗೊತ್ತಿರಲಿಲ್ಲ. ಮತ್ತೆ ತಮ್ಮ ಮಾಹಿತಿದಾರರ ಜಾಲವನ್ನು ಜಾಲಾಡಿದ ಶೀಲಾ ರಾವಲ್ ಹುಲ್ಲಿನ ರಾಶಿಯಲ್ಲಿ ಸೂಜಿ ಹುಡುಕಿದಂತೆ ಸಮೀರಾ ಜುಮಾನಿಯ ವಿಳಾಸ ಕಂಡುಹಿಡಿದಿದ್ದು ಮಾತ್ರವಲ್ಲ ಆಕೆಯನ್ನು ಕಾಡಿ ಬೇಡಿ, ಏನೇನೋ ಮಾಡಿ, ಸಂದರ್ಶನ ಕೂಡ ಮಾಡಿದ್ದರು. ಅಮೇರಿಕಾದ ಅಟ್ಲಾಂಟಾ ನಗರದಿಂದ ಅಬು ಸಲೇಂನ ಯಾರಿಗೂ ಗೊತ್ತಿಲ್ಲದ ಅಮೇರಿಕಾದಲ್ಲಿನ ಜೀವನದ ಬಗ್ಗೆ ಕರಾರುವಕ್ಕಾಗಿ ವರದಿ ಮಾಡಿದ್ದರು. ದೊಡ್ಡ ಸ್ಕೂಪ್ ಕೊಟ್ಟಿದ್ದರು.

ಶೀಲಾ ರಾವಲ್ ಅವರ ಲೇಟೆಸ್ಟ್ ಸ್ಕೂಪ್ ಅಂದರೆ ಬಾಲಿವುಡ್ಡಿನ ಪುರಾತನ ಮಾದಕ ನಟಿ ಮಮತಾ ಕುಲಕರ್ಣಿಯನ್ನು ಕೀನ್ಯಾ ದೇಶದ ಮೊಂಬಾಸಾ ಶಹರದಲ್ಲಿ ಸಂದರ್ಶನ ಮಾಡಿದ್ದು. ಅದೇನು ಕರ್ಮವೋ ಏನೋ. ಎಲ್ಲರೂ ಆ ಪುಣ್ಯಾತಗಿತ್ತಿ ಮಮತಾ ಕುಲಕರ್ಣಿಯನ್ನು ಮಾದಕ ನಟಿ ಮಾದಕ ನಟಿ ಅಂದಿದ್ದೇ ಅಂದಿದ್ದು ಅವಳು ಹೋಗಿ ಹೋಗಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಜಾಲದಲ್ಲಿ ಸಿಕ್ಕಾಕಿಕೊಂಡುಬಿಡಬೇಕೇ!? ಆಕೆಯ ಪತಿ ವಿಕಿ ಗೋಸ್ವಾಮಿ ಕುಖ್ಯಾತ ಡ್ರಗ್ ಸ್ಮಗ್ಲರ್ ಎಂದು ಆಪಾದನೆ. ತನಿಖಾ ಸಂಸ್ಥೆಗಳಿಂದ ಬಚಾವಾಗಲು ವಿಕಿ ಗೋಸ್ವಾಮಿ ಮತ್ತು ಬಾಲಿವುಡ್ಡಿನಲ್ಲಿ ಕಿರಿಕ್ ಮಾಡಿಕೊಂಡು ಸವಕಲು ನಾಣ್ಯವಾಗಿದ್ದ ಮಮತಾ ಕುಲಕರ್ಣಿ ದುಬೈನಲ್ಲಿ ನೆಲೆಸಿದ್ದರು. ವಿಕಿ ಗೋಸ್ವಾಮಿಯ ನಸೀಬ್ ಖರಾಬಾಗಿತ್ತು. ದುಬೈ ಸರ್ಕಾರ ಅವನನ್ನು ಬಂಧಿಸಿ ಸೆರೆಮನೆಗೆ ಕಳಿಸಿತ್ತು. ಅಂದಿನ ಪ್ರೇಯಸಿ ಮಮತಾ ಕುಲಕರ್ಣಿ ಅವನ ಬಿಡುಗಡೆಗಾಗಿ ಕಾದು ಕೂತಿದ್ದಳು. ಗೆಳೆಯ ಗೋಸ್ವಾಮಿ ಜೈಲಿನಲ್ಲಿದ್ದಾಗ ನೀನು ಏನು ಮಾಡುತ್ತಿದ್ದೆ ಎಂದು ಕೇಳಿದರೆ ಅದೇ ಸಮಯದಲ್ಲಿ ಹಿಮಾಲಯದಲ್ಲಿ ಅಧ್ಯಾತ್ಮ ಸಾಧನೆ ಮಾಡಿ ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡೆ ಅನ್ನುತ್ತಾಳೆ. ಎಲ್ಲಿಂದ ನಗಬೇಕೋ ತಿಳಿಯುವದಿಲ್ಲ. ವಿಕಿ ಗೋಸ್ವಾಮಿಯ ಬಿಡುಗಡೆ ನಂತರ ಮದುವೆಯಾಗಿ ಗಂಡ ಹೆಂಡತಿ ಇಬ್ಬರೂ ಕೀನ್ಯಾ ದೇಶದಲ್ಲಿ ನೆಲೆಸಿದರು. ಅವರ ಪ್ರಕಾರ ಕಾನೂನುಬದ್ಧ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದಾರೆ. ತನಿಖಾ ಸಂಸ್ಥೆಗಳ ಪ್ರಕಾರ ಅವರು ಕುಖ್ಯಾತ ಡ್ರಗ್ ಕಳ್ಳಸಾಗಾಣಿಕೆದಾರರು. ಮುಂಬೈ ಪೊಲೀಸರು, ಅಮೇರಿಕಾದ drug enforcement  agency (DEA) ಎಲ್ಲ ಅವರ ಹಿಂದೆ ಬಿದ್ದಿದ್ದಾರೆ. ಈಗ ಎರಡು ಮೂರು ವರ್ಷಗಳ ಹಿಂದೆ ವಿಕಿ ಗೋಸ್ವಾಮಿ ಮತ್ತು ಕೀನ್ಯಾದ ಕುಖ್ಯಾತ ಆಕಾಶಾ ಸಹೋದರರನ್ನು DEA ಬಂಧಿಸಿದಾಗ ಒಂದು ಕಾಲದ ಮಾದಕ ನಟಿ ಮಮತಾ ಕುಲಕರ್ಣಿಯನ್ನೂ ಸಹ ಬಂಧಿಸಲಾಗಿದೆ ಎನ್ನುವ ಸುದ್ಧಿ ಹಬ್ಬಿತ್ತು. ಬಾಕಿ ಪತ್ರಕರ್ತರೆಲ್ಲ ಇಲ್ಲೇ ಕೂತು ಪುಂಖಾನುಪುಂಖವಾಗಿ ಕಲರ್ ಕಲರ್ ಗಾಳಿಪಟ ಹಾರಿಸಿದರೆ ಶೀಲಾ ರಾವಲ್ ಎಂದಿನಂತೆ ತಮ್ಮ ವಿಭಿನ್ನ ದಾರಿ ಹಿಡಿದರು. ಮೇಜರ್ ಸ್ಕೂಪ್ ಎಂಬಂತೆ ಸೀದಾ ಕೀನ್ಯಾಕ್ಕೆ ಹೋಗಿ ಮಮತಾ ಕುಲಕರ್ಣಿಯ ಸಂದರ್ಶನವನ್ನೇ ಸಂಪಾದಿಸಿಬಿಟ್ಟರು. ಆತ್ಮ ಸಾಕ್ಷಾತ್ಕಾರ ಮಾಡಿಕೊಂಡು ಸಾಧ್ವಿಯಾಗಿರುವೆ ಎನ್ನುವ ಮಮತಾ ಕುಲಕರ್ಣಿಯ ಸಂದರ್ಶನ ತುಂಬಾ ಕುತೂಹಲಭರಿತವಾಗಿದೆ ಮತ್ತು ಮಜವಾಗಿದೆ.

ಇಸ್ರೇಲಿ ಮಹಿಳೆ ಎಷ್ಟು ಸಬಲವಾಗಿದ್ದಾಳೆ ಎನ್ನುವ ಕುರಿತು ಇಸ್ರೇಲಿನ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಗೋಲ್ಡಾ ಮೀರ್ ಒಂದು ಮಾತು ಹೇಳಿದ್ದರು. ಅದೇನೆಂದರೆ - In Israel, women don't break the glass ceiling, they shatter it. ದಿಟ್ಟ ಪತ್ರಕರ್ತೆ ಶೀಲಾ ರಾವಲ್ ಅವರಿಗೆ ಇದು ಬರೋಬ್ಬರಿಯಾಗಿ ಒಪ್ಪುತ್ತದೆ. ಪುರುಷಪ್ರಾಧಾನ್ಯವಾದ ಕ್ರೈಂ ಪತ್ರಿಕೋದ್ಯಮದ ಗಾಜಿನ ಛಾವಣಿಯನ್ನು ಮುಟ್ಟಿದ್ದೊಂದೇ ಅಲ್ಲ ಅದನ್ನು ಚೂರುಚೂರಾಗಿ ಛಿದ್ರ ಮಾಡಿದ ಮೊದಲ ಮಹಿಳಾ ಪತ್ರಕರ್ತೆ ಶೀಲಾ ರಾವಲ್ ಅವರೇ ಇರಬೇಕು ಅನ್ನಿಸುತ್ತದೆ. ಅವರ ದಿಟ್ಟತನಕ್ಕೆ ಮತ್ತು ಅವರು ಸದಾ ಕೊಡುವ ರೋಚಕ ವರದಿಗಳಿಗೆ ಒಂದು ಸಲಾಂ.

ಇನ್ನೂ ಹೆಚ್ಚಿನ ರೋಚಕ ವಿವರಗಳಿಗೆ ಅವರ ಪುಸ್ತಕ ಮುದ್ದಾಂ ಓದಿರಿ. ಪೂರ್ತಿ ಓದಿ ಮುಗಿಸುವ ಮುನ್ನ ನೀವು ಅದನ್ನು ಕೆಳಗಿಡುವದಿಲ್ಲ. ಅದು ಗ್ಯಾರಂಟಿ!

ಶೀಲಾ ರಾವಲ್ ಮಾಡಿದ ಮಮತಾ ಕುಲಕರ್ಣಿಯ ಸಂದರ್ಶನ. youtube ಮೇಲೆ ಇತರೆ ವಿಡಿಯೋಗಳು ಸಿಗುತ್ತವೆ.* ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ - ಈ ಬ್ಲಾಗ್ ಪೋಸ್ಟಿನ ಶೀರ್ಷಿಕೆ ವಿಚಿತ್ರವಾಗಿದೆಯಲ್ಲ ಎಂದುಕೊಂಡರೆ ವಿವರಣೆ ಇಷ್ಟೇ, ಅದು ಪುಸ್ತಕದ ಇಂಗ್ಲೀಷ್ ಹೆಸರನ್ನು ಕನ್ನಡೀಕರಿಸುವ ಪ್ರಯತ್ನ. Godfathers of Crime (Face-to-Face with India's most wanted). Godfather ಗೆ ದೇವಪಿತೃ ಸರಿಹೊಂದುತ್ತದೋ ಇಲ್ಲವೋ ಗೊತ್ತಿಲ್ಲ. ಅದಕ್ಕೆ ಬೇರೇನಾದರೂ ಸಮಂಜಸ ಪದವಿದೆಯೇ? ಹಾಗೆಯೇ Most wanted ಗೆ ಏನೆನ್ನಬಹುದು?

4 comments:

sunaath said...

ಮಹೇಶರೆ, ಸ್ವಾರಸ್ಯಕರ ಮಾಹಿತಿಯನ್ನು ಕೊಟ್ಟಿದ್ದೀರಿ. ನಮ್ಮ ಸಾಹಸೀ ಮಹಿಳೆಯರ ಬಗೆಗೆ ಹೆಮ್ಮೆಯೂ ಆಗುತ್ತದೆ. ಇನ್ನು ‘ದೇವಪಿತೃ’ಗಳ ಬಗೆಗೆ ನಾನೂ ಸಾಕಷ್ಟು ವಿಚಾರ ಮಾಡಿದೆ; ಬಗೆ ಹರಿಯಲಿಲ್ಲ. ಇನ್ನು ‘ದೆವ್ವಪಿತೃ’ ಎಂದು ಅನ್ನಬಹುದೇನೊ; ಆದರೆ ಅನೇಕ ಪಿತೃಗಳು ಒಳ್ಳೆಯವರೆ ಇರುವುದರಿಂದ, ಹಾಗೆನ್ನುವುದೂ ಸರಿಯಾಗುವದಿಲ್ಲ. ‘ದೇವಪಿತೃ'ವೇ ಇರಲಿ! ನಿಮ್ಮ ಆಯ್ಕೆಗೇ ನನ್ನದೂ ಒಂದು ವೋಟು!

Mahesh Hegade said...

ಥ್ಯಾಂಕ್ಸ್ ಸುನಾಥ್ ಸರ್.

sunaath said...

ಮಹೇಶ, ಮತ್ತೊಂದು ಮಾತು:
ಶೀಲಾ ರಾವಲ್ ಅವರು ಮಾಡಿದ ಮಮತಾ ಕುಲಕರ್ಣಿಯವರ ಸಂದರ್ಶನ ಪಸಂದಾಯಿತು. ಯಾಕಂತೀರಾ:
ಮಮತಾ ಕುಲಕರ್ಣಿಯವರು bollywoodನಲ್ಲಿದ್ದಾಗ, ಅವರ ಬಗೆಗೆ ಜನ ಏನೇನೋ ಹೇಳುತ್ತಿದ್ದರು. ಶತ್ರುಘ್ನ ಸಿಂಹನಂತೂ ಮಮತಾ ಅವರ ಬಗೆಗೆ ಒಂದು indecent comment ಮಾಡಿದ್ದ.
ಆದರೆ, ಮಮತಾ ಅವರ ಸಂದರ್ಶನ ಸಮಯದಲ್ಲಿ, ಶೀಲಾ ಅವರ ಮುಖಭಾವ ಹಾಗು ದೇಹಭಾಷೆಯನ್ನು ನೋಡಿರಿ. ಶೀಲಾ ಅವರ ಮುಖದ ಮೇಲೆ ಗೌರವದ ಭಾವವೇ ಇದೆ. ‘ನಾನು ನಿಮ್ಮನ್ನು ನಂಬುತ್ತೇನೆ; ನಾನು skeptical ಅಲ್ಲ’ ಎನ್ನುವ ಭಾವವಿದೆ. ಇದು cultivated ಅಥವಾ ನೈಜ ಎನ್ನುವ ಸಂಶಯ ಕೆಲವರಿಗೆ ಬಂದೀತು. ಅದು ಏನೇ ಇರಲಿ, ಶೀಲಾ ಹೇಗೆ ಮಮತಾರನ್ನು ನಂಬುತ್ತಾರೊ, ನಾನೂ ಸಹ ಶೀಲಾರನ್ನು ನಂಬುತ್ತೇನೆ. ನಿಮ್ಮ ಲೇಖನದಲ್ಲಿ ಈ ಸಂದರ್ಶನವನ್ನು ಸೇರಿಸಿದ್ದಕ್ಕೆ ಧನ್ಯವಾದಗಳು.

Mahesh Hegade said...

ಶೀಲಾ ಭಟ್ ರಾವಲ್ ಅವರ ವರದಿಗಳನ್ನು ಸುಮಾರು ಇಪ್ಪತ್ತೈದು ವರ್ಷಗಳಿಂದ ಓದುತ್ತಿದ್ದೇನೆ. ಅವರ ವೃತ್ತಿಪರತೆ ಮತ್ತು ವೃತ್ತಿ ಕೌಶಲ್ಯದ ಬಗ್ಗೆ ದೂಸರಾ ಮಾತಿಲ್ಲ. ಹಾಗಾಗಿಯೇ ಅವರು ಕುಖ್ಯಾತ ಡಾನ್ ಗಳನ್ನು ಎದುರುಹಾಕಿಕೊಂಡಾಗಲೂ ಅವರನ್ನು ಡಾನ್ ಗಳೂ ಸಹ ಗೌರವಿಸಿದ್ದಾರೆ.

ಕಾಮೆಂಟಿಗೆ ಧನ್ಯವಾದ ಸರ್!