Tuesday, May 29, 2018

ನೆರಳು

ಒಮ್ಮೆ ಒಬ್ಬ ಮನುಷ್ಯ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಒಮ್ಮೆಲೇ ಸಿಂಹದ ಗರ್ಜನೆ ಕೇಳಿಸಿತು. ಭೀತನಾದ ಮನುಷ್ಯ ಅತ್ತಿತ್ತ ನೋಡುವಷ್ಟರಲ್ಲಿ ಭೀಕರ ಸಿಂಹವೊಂದು ಅಟ್ಟಿಸಿಕೊಂಡು ಬಂದಿತು. ಜೀವ ರಕ್ಷಿಸಿಕೊಳ್ಳಲು ಓಡಿದ. ಇನ್ನೇನು ಸಿಂಹ ಮೈಮೇಲೆ ಎರಗುತ್ತದೆ ಅನ್ನುವಷ್ಟರಲ್ಲಿ ಸಿಕ್ಕ ಮರವೊಂದನ್ನೇರಿ ಬಚಾವಾದ. ಸಿಂಹ ಮರದ ಕೆಳಗೇ ನಿಂತು ರೋಷದಿಂದ ಗರ್ಜಿಸುತ್ತಿತ್ತು.

ಅದೇ ಮರದ ಮೇಲೆ ಕೋತಿಯೊಂದು ಸಹ ಇತ್ತು. ಅದು ಕೂಡ ಸಿಂಹ ಬಂದಿದ್ದರಿಂದ ತುಂಬಾ ಹೆದರಿತ್ತು. ಸಿಂಹ ಕೋತಿಯನ್ನು ಗಮನಿಸಿತು. ಮೊದಲು ಒಂದೇ ಬೇಟೆ ಎಂದುಕೊಂಡರೆ ಈಗ ಎರಡು ಬೇಟೆ ಇವೆ ಮರದ ಮೇಲೆ. ಒಂದನ್ನಾದರೂ ಬೇಟೆಯಾಡಲೇಬೇಕು. ಆದರೇನು ಮಾಡುವದು? ಎರಡೂ ಮರದ ಮೇಲೆ ಕೂತಿವೆ. ಕೆರಳಿದ ಸಿಂಹ ಮತ್ತೂ ಜೋರಾಗಿ ಗರ್ಜಿಸತೊಡಗಿತು. ಸಿಂಹಕ್ಕೆ ಅದೇನೆನ್ನಿಸಿತೋ ಏನೋ. ನೆಲದ ಮೇಲೆ ಮೂಡಿದ್ದ ಕೋತಿಯ ನೆರಳಿನ ಮೇಲೆ ಪಂಜಾದಿಂದ ಆಕ್ರಮಣ ಮಾಡುತ್ತ ಮತ್ತೂ ಭೀಕರವಾಗಿ ಗರ್ಜಿಸತೊಡಗಿತು.

ಕೋತಿ ಮತ್ತೂ ಭೀತಗೊಂಡಿತು. ಸಿಂಹ ಭೀಕರವಾಗಿ ಗರ್ಜಿಸಿ, ಕೋತಿಯ ನೆರಳಿನ ಮೇಲೆ ಪಂಜಾದಿಂದ ಹೊಡೆದಾಗೊಮ್ಮೆ ಕೋತಿ ಎಲ್ಲಿ ತನ್ನ ಮೇಲೆಯೇ ಸಿಂಹ ಆಕ್ರಮಣ ಮಾಡಿತೋ ಎಂಬಂತೆ ಪ್ರಾಣಭಯದಿಂದ ಸಿಕ್ಕಾಪಟ್ಟೆ ಕಿರುಚಾಡುತ್ತ, ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಹಾರುತ್ತಿತ್ತು. ಕೂತ ಕಡೆ ಕೂಡಲಿಲ್ಲ. ಅಷ್ಟು ಭಯ, ಗಾಬರಿ ಕೋತಿಗೆ.

ಸುಮಾರು ಹೊತ್ತು ಹೀಗೇ ನಡೆಯಿತು. ಕೋತಿಯ ನೆರಳಿನ ಮೇಲೆ ಸಿಂಹ ಆಕ್ರಮಣ ಮಾಡುವದು. ಅದಕ್ಕೆ ಪ್ರತಿಯಾಗಿ ಕೋತಿ ಕಿರುಚಾಡುತ್ತ ಭೀತಿಯಿಂದ ಆಕಡೆಯಿಂದ ಈಕಡೆಗೆ ನೆಗೆದಾಡುವದು. ಕೋತಿಯ ನಸೀಬ್ ಕೆಟ್ಟಿತ್ತು. ಒಮ್ಮೆ ಕೊಂಬೆಯಿಂದ ಕೊಂಬೆಗೆ ಹಾರುವಾಗ ಪೊರಪಾಟಿನಲ್ಲಿ ಆಯತಪ್ಪಿ ಕೆಳಗೆ ಬಿತ್ತು. ಮುಂದೇನು? ಅದಕ್ಕೇ ಕಾದಿದ್ದ ಸಿಂಹ ಒಂದೇ ಏಟಿನಲ್ಲಿ ಕೋತಿಯನ್ನು ಮುಗಿಸಿ ಸ್ವಾಹಾ ಮಾಡಿತು. ಪೆದ್ದು ಕೋತಿ! ಮರದ ಮೇಲೆ ಸುಮ್ಮನೆ ಕೂತಿದ್ದರೆ ಬದುಕುಳಿಯುತ್ತಿತ್ತು. ಸಿಂಹದ ಗರ್ಜನೆಗೆ ಹೆದರಿ, ಗಾಬರಿಗೊಂಡು, ತನ್ನ ನೆರಳಿನ ಮೇಲೆ ಸಿಂಹ ಆಕ್ರಮಣ ಮಾಡಿದಾಗೊಮ್ಮೆ ಅತ್ತಿಂದಿತ್ತ ಹಾರಾಡಿ, ಆಯತಪ್ಪಿ ಬಿದ್ದು, ಸಿಂಹಕ್ಕೆ ಆಹಾರವಾಗಿತ್ತು.

ಕೋತಿಯನ್ನು ಹೀಗೆ ಬೇಟೆಯಾಡಿದ ಸಿಂಹ ಏನೋ ಪಾಠ ಕಲಿತಿತು. ಕೋತಿಯ ನೆರಳಿನ ಮೇಲೆ ಆಕ್ರಮಣ ಮಾಡಿದರೆ ಮರದ ಮೇಲಿಂದ ಕೋತಿ ಉದುರಿ ಬಿತ್ತು. ಹಾಗಾದರೆ ಮನುಷ್ಯನ ನೆರಳಿನ ಮೇಲೆ ದಾಳಿ ಮಾಡಿದರೆ ಮೇಲಿರುವ ಮನುಷ್ಯನೂ ಕೆಳಗೆ ಉರುಳಿ ಬಿದ್ದರೂ ಬೀಳಬಹುದು. ಹೊಟ್ಟೆ ಇನ್ನೂ ತುಂಬಿಲ್ಲ. ಮನುಷ್ಯನನ್ನೂ ಬೇಟೆಯಾಡಿಬಿಡಬೇಕು ಎಂದುಕೊಂಡಿತು.

ಕೋತಿಯ ನೆರಳಿನ ಮೇಲೆ ಆಕ್ರಮಣ ಮಾಡಿದಂತೆಯೇ ಮನುಷ್ಯನ ನೆರಳಿನ ಮೇಲೂ ಆಕ್ರಮಣ ಮಾಡಿ ಭೀಕರವಾಗಿ ಗರ್ಜನೆ ಮಾಡಿತು. ಅದೆಷ್ಟೇ ಬಾರಿ ಮನುಷ್ಯನ ನೆರಳಿನ ಮೇಲೆ ಆಕ್ರಮಣ ಮಾಡಿದರೂ ಮನುಷ್ಯ ಕೆಳಗೆ ಬೀಳಲಿಲ್ಲ. ತಲೆಯೆತ್ತಿ ನೋಡಿದರೆ ಕೂತಲ್ಲೇ ಕೂತಿದ್ದಾನೆ. ಕೋತಿಯಂತೆ ಅತ್ತಿತ್ತ ಹಾರಾಡುತ್ತಿಲ್ಲ. ಭೀತನಾಗುತ್ತಿಲ್ಲ. ಪ್ರತಿಕ್ರಿಯೆ ತೋರುತ್ತಿಲ್ಲ.

ಸುಮಾರು ಹೊತ್ತು ಮನುಷ್ಯನ ನೆರಳಿನ ಮೇಲೆ ದಾಳಿ ಮಾಡಿದ ಸಿಂಹ ಆ ಮನುಷ್ಯ ಕೆಳಗೆ ಬೀಳುವದಿಲ್ಲ ಎಂದು ಖಾತ್ರಿಯಾದ ಮೇಲೆ ಅಲ್ಲಿಂದ ಹೊರಟುಹೋಯಿತು. ಸಿಂಹ ಹೋಯಿತು ಎಂದು ಖಾತ್ರಿಯಾದ ಮೇಲೆ ಮರದ ಮೇಲಿಂದ ಕೆಳಗಿಳಿದು ಬಂದ ಮನುಷ್ಯ ತನ್ನ ಮನೆ ಸೇರಿಕೊಂಡ.

ನೀತಿ: ನಮ್ಮ ಜೀವನದಲ್ಲಿ ಆಗುತ್ತಿರುವ ಎಲ್ಲ ಘಟನೆಗಳು, ಅನುಭವಗಳು ಎಲ್ಲ ನಮ್ಮ ನೆರಳಿನ ಮೇಲೆ ಆಗುತ್ತಿವೆ ಎಂದು ತಿಳಿಯಬೇಕು. ಸುಖವಿರಲಿ, ದುಃಖವಿರಲಿ, ನಲಿವಿರಲಿ, ನೋವಿರಲಿ, ಲಾಭವಿರಲಿ, ನಷ್ಟವಿರಲಿ, ಆರೋಗ್ಯವಿರಲಿ, ರೋಗವಿರಲಿ  - ಇದ್ಯಾವುದೂ "ನಮಗೆ" ಆಗುತ್ತಿಲ್ಲ. ನಮ್ಮ ನೆರಳಿಗೆ ಆಗುತ್ತಿವೆ ಎಂದು ತಿಳಿಯಬೇಕು. ಹಾಗೆ ತಿಳಿದಾಗ ಮಾತ್ರ ನಿರ್ಲಿಪ್ತತೆಯಿಂದ ಸಂಸಾರದ ಸಾಗರವನ್ನು ದಾಟಬಹುದು. ಅದನ್ನು ಬಿಟ್ಟು ಮೂಢ ಕೋತಿಯಂತೆ ಸಿಂಹ ನೆರಳಿನ ಮೇಲೆ ದಾಳಿ ಮಾಡಿದಾಗ ವಿನಾಕಾರಣ ಗಾಬರಿಗೊಂಡು ಅತ್ತಿಂದಿತ್ತ ಹಾರಾಡಿ ಪೊರಪಾಟಿನಲ್ಲಿ ಕೆಳಗೆ ಬಿದ್ದು ಸಿಂಹದ ಪಾಲಾಗಬಾರದು. ಮರದ ಮೇಲಿರುವ ಕೋತಿ ಅಜ್ಞಾನದಿಂದ ಕೂಡಿರುವ ಜೀವಾತ್ಮ. ಸಿಂಹ ವಿಧಿ. ಸಿಂಹದ ಆಕ್ರಮಣ ಕರ್ಮಫಲ. ಸಿಂಹ ಅದೆಷ್ಟೇ ರೋಷದಿಂದ ಗರ್ಜಿಸಿ ನೆರಳಿನ ಮೇಲೆ ಆಕ್ರಮಣ ಮಾಡಿದರೂ ವಿಚಲಿತನಾಗದೇ ಸ್ಥಿತಪ್ರಜ್ಞನಾಗಿ ಕುಳಿತ ಮನುಷ್ಯನೂ ಜೀವಾತ್ಮನೇ. ಅಷ್ಟೇ ಅವನಿಗೆ ಜ್ಞಾನೋದಯವಾಗಿದೆ. ತಾನು ಪರಬ್ರಹ್ಮ (ಅಹಂ ಬ್ರಹ್ಮಾಸ್ಮಿ) ಎಂದು ಮನವರಿಕೆಯಾಗಿದೆ. ಸಂಸಾರದ ಪ್ರಕ್ರಿಯೆಗಳೆಲ್ಲ ತನ್ನದೇ ನೆರಳಾದ ಜೀವಾತ್ಮದ ಮೇಲೆ ಎಂದು ತಿಳಿದಿರುವ ಕಾರಣ ಆತ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವದಿಲ್ಲ. ಬಂದದ್ದನ್ನೆಲ್ಲಾ ಎದುರಿಸುತ್ತಾನೆ. ಫಲಾಫಲಗಳನ್ನು ನಿರ್ಲಿಪ್ತತೆಯಿಂದ ಸ್ವೀಕರಿಸುತ್ತಾನೆ. ಸ್ಥಿತಪ್ರಜ್ಞನಾಗಿ ಇರುತ್ತಾನೆ.

ಮಹಾರಾಷ್ಟ್ರದಲ್ಲಿ ಆಗಿಹೋದ ಶ್ರೇಷ್ಠ ಸಂತರಾದ ಸಂತ ಜ್ಞಾನೇಶ್ವರರು ಬರೆದ 'ಜ್ಞಾನೇಶ್ವರಿ' ಎಂಬ ಪುಸ್ತಕದಲ್ಲಿ ಬರುವ ನೀತಿಕಥೆ.

ಇಂತಹ ನೀತಿಕಥೆಗಳಿಂದ ಏನುಪಯೋಗ?  ಬದುಕಿನ ಬಾಣಲೆಯಲ್ಲಿ ವಿಧಿ ಹೊತ್ತಿಸಿದ ಬೆಂಕಿಯಲ್ಲಿ ಬರೋಬ್ಬರಿ ಹುರಿದು / ಉರಿದು ಹೋಗುತ್ತಿರುವಾಗ ಇವೆಲ್ಲ ನೆನಪಾಗುತ್ತವೆಯೇ? ಉಪಯೋಗವಾಗುತ್ತವೆಯೇ? ಎಂದು ಕೇಳಿದರೆ ಅಂತಹ ಸಂದರ್ಭಗಳಲ್ಲೇ ಇಂತಹ ನೀತಿಕಥೆಗಳ ಗರಿಷ್ಠ ಮೌಲ್ಯ ಮತ್ತು ಉಪಯೋಗ. ಇಲ್ಲವಾದರೆ ಕ್ರೂರ ವಿಧಿ ಬಹು ಬೇಗ ಹಣಿದುಬಿಟ್ಟೀತು. 

6 comments:

sunaath said...

ಮಹೇಶರೆ,
ನೀವು ನೀತಿಕಥೆಯನ್ನೇ ಹೇಳಲಿ ಅಥವಾ ಅನೀತಿಕಥೆಯನ್ನೇ ಹೇಳಲಿ, ನಿಮ್ಮ ಶೈಲಿ ನನಗೆ ರುಚಿಸುತ್ತದೆ.

Mahesh Hegade said...

ಧನ್ಯವಾದಗಳು ಸುನಾಥ್ ಸರ್.

Unknown said...

Truely said..with such stories legends imbibed so many values in their life.Today we need t tell such stories t children, youths nd to self..thank u

Mahesh Hegade said...

Thank you Shivaleela Kuravatti for your comment.

Unknown said...

Maheshananda swamigale,

Kathe Chennagide. Haage olleya sandesavide. Heege bareyuttiri.

Mahesh Hegade said...

ಧನ್ಯವಾದಗಳು ಮಂಜು ಮಾಯಾ ಅವರಿಗೆ.