Tuesday, July 03, 2018

ಕಾಮಧೇನು

ಭಕ್ತನೊಬ್ಬ ದೇವರಿಗೆ ಅದನ್ನು ಕರುಣಿಸು, ಇದನ್ನು ಕರುಣಿಸು ಎಂದು ತುಂಬಾ ಕಾಡುತ್ತಿದ್ದ. ಭಕ್ತನ ಕಿರಿಕಿರಿ ತಾಳಲಾಗದ ಭಗವಂತ ಸಕಲ ಇಷ್ಟಾರ್ಥಗಳನ್ನೂ ಪೂರೈಸಬಲ್ಲ ಪೂಜ್ಯ ಕಾಮಧೇನುವನ್ನೇ ಭಕ್ತನಿಗೆ ಕರುಣಿಸಿಬಿಟ್ಟ. ಕಾಮಧೇನು ದೊರಕಿದ ಮೇಲಾದರೂ ಭಕ್ತನ ಕಿರಿಕಿರಿ ತಪ್ಪಬಹುದು ಎಂದು ದೇವರ ನಿರೀಕ್ಷೆ.

ಭಕ್ತನಿಗೆ ಆ ಪೂಜ್ಯ ಗೋವು ಕಾಮಧೇನು ಎಂದಾದರೂ ತಿಳಿಯಿತೋ ಇಲ್ಲವೋ ಗೊತ್ತಿಲ್ಲ. ದೇವರು ಕೊಟ್ಟ 'ದನ' ಎಂದು ಭೂಮಿಗೆ ಕರೆತಂದ. ಮನೆಗೆ ಬಂದರೆ ಒಂದು ಕೊರತೆ ತುರ್ತಾಗಿ ಕಾಡುತ್ತಿತ್ತು. ಅದೇನೆಂದರೆ ಗದ್ದೆ ಊಳಲು (ಸಾಗುವಳಿ ಮಾಡಲು) ಎತ್ತು ಇರಲಿಲ್ಲ. ಅರ್ಜೆಂಟಾಗಿ ಗದ್ದೆ ಊಳಿ, ಬೀಜ ಬಿತ್ತಬೇಕಿತ್ತು.

ಎತ್ತಿಗಾಗಿ ಏನು ಮಾಡಲಿ? ಎಂದು ಯೋಚಿಸಿದ ಭಕ್ತ. ಎದುರಲ್ಲೇ ಕಂಡಿತು ಭವ್ಯ ಕಾಮಧೇನು. ಮತ್ತೇನೂ ವಿಚಾರ ಮಾಡಲಿಲ್ಲ. ಕಾಮಧೇನುವನ್ನು ಎಳೆದೊಯ್ದವನೇ ನೇಗಿಲಿಗೆ ಕಟ್ಟಿಬಿಟ್ಟ. ತಬ್ಬಿಬ್ಬಾದ ಪುಣ್ಯಕೋಟಿ ಕಾಮಧೇನುವಿಗೆ ಬಾರಕೋಲಿನಲ್ಲಿ ಚಟಾರ್ ಎಂದು ಎರಡು ಬಿಟ್ಟವನೇ ಹೊಲಕ್ಕೆ ಕರೆದೊಯ್ದ.

ಅದು ಹೇಳಿಕೇಳಿ ಕಾಮಧೇನು. ಆಕಳು. ಹಸು. ಎತ್ತಂತೂ ಅಲ್ಲವೇ ಅಲ್ಲ. ಅದರಲ್ಲೂ ದೇವಲೋಕದ ಆಕಳು. ಇಂತಹ ಆಕಳಿಗೆ ಗದ್ದೆ ಊಳುವ ಕರ್ಮ.

ಕಾಮಧೇನುವನ್ನು ಗದ್ದೆ ಊಳಲು ಬಳಸುವದೇ? ಎಲ್ಲಾದರೂ ಉಂಟೇ? ಗದ್ದೆ ಊಳಲು ತುರ್ತಾಗಿ ಎತ್ತು ಬೇಕಾಗಿತ್ತು ಅಂತಲೇ ಅಂದುಕೊಳ್ಳೋಣ. ಕಾಮಧೇನುವನ್ನು ಕೇಳಿದ್ದರೆ ಸಕಲವನ್ನೂ ಕರುಣಿಸುವ ಶಕ್ತಿಯುಳ್ಳ ಅದು ಒಂದು ಎತ್ತಲ್ಲ ಬದಲಿಗೆ ಒಂದು ಜೋಡಿ ಎತ್ತುಗಳನ್ನೇ ಕರುಣಿಸುತ್ತಿತ್ತು. ಅವನ್ನು ಉಪಯೋಗಿಸಿ ಉಳುಮೆ ಮಾಡಬಹುದಿತ್ತು. ಅದರ ಬದಲಿಗೆ ಕಾಮಧೇನುವನ್ನೇ ಬಳಸಿ, ಅದನ್ನು ಹಿಂಸಿಸಿ ಉಳುಮೆ ಮಾಡಿಬಿಟ್ಟಿದ್ದ ಭಕ್ತ ಭೂಪ.

ಕಥೆ ಬಾಲಿಶ ಅನಿಸಿದರೂ ಯೋಚಿಸಿ ನೋಡಿ. ಅಜ್ಞಾನದಲ್ಲಿ ನಾವು ಹೆಚ್ಚಿನವರು ಮಾಡುತ್ತಿರುವದು ಇದೇ ಅಲ್ಲವೇ? ಮಾನವಜನ್ಮವೆಂಬ ಅಮೂಲ್ಯ ಕಾಮಧೇನುವನ್ನು ಜೀವನವೆಂಬ ಹೊಲವನ್ನು ಊಳಿ, ಲೌಕಿಕ ಸುಖವೆಂಬ ಬೆಳೆ (ಕಳೆ) ತೆಗೆಯಲು ಉಪಯೋಗಿಸುತ್ತಿದ್ದೇವೆ. ಮೇಲಿಂದ ಕಾಮಧೇನುವಿಗೆ ಬಾರಕೋಲಿನ 'ಪೂಜೆ' ಬೇರೆ! ಆಹಾ ನಮ್ಮ (ಅ)ಜ್ಞಾನವೇ!

ತುಂಬಾ ಯೋಚಿಸಲು ಹಚ್ಚಿದ ಚಿಕ್ಕ  ಕಥೆ.

ವಿ.ಸೂ: ಓದಿದ್ದು ಚೆನ್ನಾಗಿ ನೆನಪಿರಬೇಕು ಅಂದರೆ ಓದಿದ್ದನ್ನು ಬರೆದು ತೆಗೆಯಬೇಕು ಎಂದು ಗುರುಗಳು ಹೇಳುತ್ತಿದ್ದರು. ಅದನ್ನೇ ಮಾಡುತ್ತಿರುವದು. ಅಷ್ಟೇ ವಿನಃ ಬೇರೆ ಏನೂ ಇಲ್ಲ. 

2 comments:

sunaath said...

ತಲೆ ಬಾಗಿದೆ!

Mahesh Hegade said...

ಧನ್ಯವಾದಗಳು, ಸುನಾಥ್ ಸರ್.