Tuesday, December 24, 2019

ರಾವಣ ಕೇಳಿದ ದಕ್ಷಿಣೆ

ಭಗವಾನ್ ಪರಶಿವ ಆರಾಮಾಗಿ ಸ್ಮಶಾನ ಗಿಶಾನ ಅಲೆದುಕೊಂಡು ಹಾಯಾಗಿದ್ದ. ಎಲ್ಲಿಯವರೆಗೆ?? ಯಾರನ್ನೂ ಬಿಡದ ಮಾಯೆ ಮಹಾಮಾತೆ ಪಾರ್ವತಿಯ ರೂಪದಲ್ಲಿ ಶಿವನ ಜೀವನದಲ್ಲಿ ಎಂಟ್ರಿ ಕೊಡುವವರೆಗೆ.

ಪಾರ್ವತಿಯನ್ನು ವಿವಾಹವಾದರೂ ಶಿವನ ಜೀವನಶೈಲಿಯೇನೂ ಬದಲಾಗಲಿಲ್ಲ. ಸ್ಮಶಾನದಲ್ಲೇ ಅಲೆದಾಡಿಕೊಂಡಿರುತ್ತಿದ್ದ. ಮನಸ್ಸು ಬಂದಾಗ ಕಂಡಲ್ಲಿ ತಾಂಡವ ನೃತ್ಯ ಬಿಂದಾಸ್ ಮಾಡಿಕೊಂಡಿರುತ್ತಿದ್ದ. ತಾನೂ ಬೂದಿ ಬಳಿದುಕೊಂಡ. ಪೌಡರ್ ಸ್ನೋ ಕೇಳಿದ ಪಾರ್ವತಿಗೂ 'ಟ್ರೈ ದಿಸ್ ಬೂದಿ! ಇದು ಎಲ್ಲದರಕಿಂತ ಬೆಸ್ಟ್!' ಅಂದ. ಆಕೆ ಹಣೆಹಣೆ ಚಚ್ಚಿಕೊಂಡಳು.

ಎಷ್ಟು ದಿನ ಆಕೆ ಸ್ಮಶಾನದಲ್ಲಿ ಸಂಸಾರ ಮಾಡಿಯಾಳು? ಸಂಸಾರದ ಕೆಲಸ ಮುಗಿಸಿದವರು ಅಂತಿಮವಾಗಿ ಬರುವ ಜಾಗ ಸ್ಮಶಾನ. ಶಿವ ಪಾರ್ವತಿ ದಂಪತಿ ಈಗ ಮಾತ್ರ ಸಂಸಾರ ಶುರು ಮಾಡಿದವರು.

'ರೀ, ನಾವೂ ಒಂದು ಮನೆ ಕಟ್ಟೋಣ. ಅಥವಾ ಫ್ಲಾಟ್ ತೆಗೆದುಕೊಳ್ಳೋಣ. ಈ ಸ್ಮಶಾನದಲ್ಲಿ ಸಂಸಾರ ಮಾಡಲು ಆಗುತ್ತಿಲ್ಲ. ಆ ಕಷ್ಟ ಒಂದು ಕಡೆಯಾದರೆ ಯಾರನ್ನೂ ಯಾವುದಕ್ಕೂ ಕರೆಯಲಾಗದ ಕಿರಿಕಿರಿ ಮೇಲಿಂದ. ಬೇಗ ಒಂದು ಮನೆ ಮಾಡ್ರೀ!' ಎಂದು ಇಂಡೆಂಟ್ ಇಟ್ಟಳು ಪಾರ್ವತಿ.

ಬಿಂದಾಸ್ ಬ್ಯಾಚುಲರ್ ಮನೋಭಾವದ ಶಿವ ಸಾಕಷ್ಟು ತಿಳಿಸಿ ಹೇಳಿದ. ಸ್ಮಶಾನದಲ್ಲಿ ನೆಲೆಸುವುದರಲ್ಲಿ ಇರುವ ಹಲವಾರು 'ಲಾಭ'ಗಳ ಬಗ್ಗೆ ತಿಳುವಳಿಕೆ ನೀಡಲು ಪ್ರಯತ್ನಿಸಿದ. ಮನೆ ಮಠ ಮಾಡಿಕೊಂಡ ನಂತರ ಬರುವ ಕಿರಿಕಿರಿಗಳ ಬಗ್ಗೆ ವಿವರಿಸಿದ. ಆದರೆ ಪಾರ್ವತಿ ಕೇಳಲಿಲ್ಲ. ಅವಳಿಗೆ ಮನೆ ಮಾಡುವ ಭೂತ ತಲೆಗೇರಿತ್ತು ಅಂತ ಕಾಣುತ್ತದೆ.

ಅಲ್ಲೇ ಸ್ಮಶಾನದ ಹತ್ತಿರವೇ ಒಂದು ಜಾಗ ನೋಡಿದ ಶಿವ. ಎಲ್ಲ ಚೌಕಾಸಿ ಮಾಡಿದ ನಂತರ ಆ ಜಾಗವನ್ನು ಕೊಂಡುಕೊಂಡ. ಕಂಟ್ರಾಕ್ಟರ್ ಒಬ್ಬನನ್ನು ಹಿಡಿದು ಒಂದು ಮನೆಯನ್ನೂ ಕಟ್ಟಿ ಮುಗಿಸಿದ.

ಮನೆಯನ್ನೇನೋ ಕಟ್ಟಿದ್ದಾಯಿತು. ಶಿವ ಡೈರೆಕ್ಟ್ ಆಗಿ ಎಂಟ್ರಿ ಹೊಡೆಯಲು ರೆಡಿ ಆಗಿದ್ದ. ಪಾರ್ವತಿ ನೆನಪಿಸಿದಳು - ಗೃಹಪ್ರವೇಶ ಮಾಡಬೇಕು.

ಹೌದಲ್ಲ. ಮಾಡಲೇಬೇಕು. ಪೂಜೆ ಪುನಸ್ಕಾರ ಮಾಡಬೇಕು ಅಂದರೆ ಬ್ರಾಹ್ಮಣ ಪುರೋಹಿತರು ಬೇಕು. ಯಾರನ್ನು ಕರೆಯಬೇಕು? ಎಂದು ಶಿವ ತಲೆಮೇಲಿನ ಜಟೆ ಕೆರೆದುಕೊಂಡ.

ಆಗ ನೆನಪಾದವನು ಒಬ್ಬ ಮಹಾಬ್ರಾಹ್ಮಣ. ಶಿವನ ಪರಮಭಕ್ತ...ಅವನೇ ಲಂಕಾಧಿಪತಿ ರಾವಣ.

ರಾವಣನನ್ನು ಕರೆದು ಗೃಹಪ್ರವೇಶದ ಪೂಜೆಯನ್ನು ಮಾಡಿಕೊಡುವಂತೆ ಕೇಳೋಣ ಎನ್ನುವ ತೀರ್ಮಾನವಾಯಿತು. ಪಾರ್ವತಿಯದೇನೂ ಆಕ್ಷೇಪಣೆ ಇದ್ದಂತೆ ಕಾಣಲಿಲ್ಲ. ರಾವಣನನೋ, ಮತ್ತೊಬ್ಬ ಪುರೋಹಿತರೋ... ಒಟ್ಟಿನಲ್ಲಿ ಬೇಗ ಗೃಹಪ್ರವೇಶವಾಗಿ ಜಲ್ದಿ ಮನೆ ಸೇರಿಕೊಂಡರೆ ಸಾಕಾಗಿದೆ ಆಕೆಗೆ. ಸ್ಮಶಾನವಾಸ ಸಾಕಾಗಿಹೋಗಿದೆ.

ರಾವಣನಿಗೆ ಶಿವನ ಕರೆ ಹೋಯಿತು. ರಾವಣ ಒಪ್ಪಿಕೊಂಡ.

ಒಪ್ಪಿಕೊಂಡ ದಿನ ಮುಹೂರ್ತಕ್ಕೆ ಬರೋಬ್ಬರಿಯಾಗಿ ರಾವಣ ಆಗಮಿಸಿದ.

ಮೊದಲೇ ಮಹಾಬ್ರಾಹ್ಮಣ. ತನ್ನ ಆರಾಧ್ಯದೈವ ಪರಶಿವನ ಮನೆಯ ಗೃಹಪ್ರವೇಶದ ಪೂಜೆ ಎಂದು ಭರ್ಜರಿ ಪೂಜೆ ಮಾಡಿದ. ಸಕಲ ಕಾರ್ಯವನ್ನೂ ಸರಿಯಾಗಿ ಸಂಪನ್ನ ಮಾಡಿಕೊಟ್ಟ.

ಪೂಜೆ ಮುಗಿಸಿದ ಬ್ರಾಹ್ಮಣನಿಗೆ ದಕ್ಷಿಣೆ ಕೊಡಬೇಕಲ್ಲವೇ? ಕೊಡಲೇಬೇಕು. ಇಲ್ಲವಾದರೆ ಪೂಜೆಯ ಫಲ ದಕ್ಕುವುದಿಲ್ಲ.

'ರಾವಣ, ನಿನಗೆ ಏನು ದಕ್ಷಿಣೆ ಕೊಡೋಣ?' ಎಂದು ಕೇಳಿದ ಶಿವ.

ರಾವಣ ಬೆರಗಾದ. ಬಂದ ಪುರೋಹಿತರ ಹತ್ತಿರ ಯಾರೂ ಏನು ದಕ್ಷಿಣೆ ಎಂದು ಕೇಳುವುದಿಲ್ಲ. ಪದ್ಧತಿ ಪ್ರಕಾರ, ರೂಢಿ ಪ್ರಕಾರ ಮತ್ತು ತಮ್ಮ ಶಕ್ತ್ಯಾನುಸಾರ ಕೊಡುತ್ತಾರೆ. ಅಲ್ಲಿಗೆ ಬಾತ್ ಖತಮ್. ಪುರೋಹಿತರಿಗೆ ಅದರಿಂದ ತೃಪ್ತಿಯಾಗುತ್ತದೋ ಇಲ್ಲವೋ ಅದು ಬೇರೆ ಮಾತು.

ರಾವಣ ಕಣ್ಣರಳಿಸಿ ಅತ್ತಿತ್ತ ನೋಡಿದ. ಶಿವನ ಹತ್ತಿರ ದಕ್ಷಿಣೆಯಾಗಿ ಕೊಡುವಂತಹದ್ದು ಏನೂ ಕಾಣಲಿಲ್ಲ. ಅದು ಗೊತ್ತೇಯಿತ್ತು. ಶಿವ ಎಲ್ಲವನ್ನೂ ತ್ಯಜಿಸಿದವ. ಅದೇನೋ ಪಾರ್ವತಿಯ ಒತ್ತಡದ ಪೊರಪಾಟಿನಲ್ಲಿ ಮನೆಯೊಂದನ್ನು ಕಟ್ಟಿಬಿಟ್ಟಿದ್ದಾನೆ. ಅದು ಬಿಟ್ಟರೆ ಅವನ ಹತ್ತಿರ ಬೇರೇನೂ ಇಲ್ಲ.

'ಮಹಾಪ್ರಭು, ಈ ಮನೆಯನ್ನೇ ನನಗೆ ದಕ್ಷಿಣೆಯಾಗಿ ಕೊಟ್ಟುಬಿಡಿ...' ಅಂದುಬಿಟ್ಟ ರಾವಣ. ಹೊಡಿರೀ ಹಲಗಿ!

ಪೂಜೆ ಮಾಡಿದ ಪುರೋಹಿತ. ಆತ ಕೇಳಿದ ದಕ್ಷಿಣೆ ಬಗ್ಗೆ ಚೌಕಾಸಿ ಮಾಡುವಂತಿಲ್ಲ. ಮಾಡಿದರೂ ದಕ್ಷಿಣೆಯಾಗಿ ಕೊಡಲು ಬೇರೇನೂ ಇಲ್ಲ.

ಶಿವನಿಗೆ ಮಾಡಲು ಬೇರೇನೂ ಇರಲಿಲ್ಲ. ಹೊಸ ಮನೆಯನ್ನು ರಾವಣನಿಗೆ ಕೊಟ್ಟು ಎಳ್ಳು ನೀರು ಬಿಟ್ಟ. ಮತ್ತೆ ಪಾರ್ವತಿಯನ್ನು ಕರೆದುಕೊಂಡು ಸ್ಮಶಾನದ ಕಡೆಗೆ ಹೋದ. ಮೂಲನೆಲೆಗೆ ಬಂದಿದ್ದಕ್ಕೆ ಅವನಿಗೆ ಸಂತೋಷವೇ ಆಗಿತ್ತು. ಅದೇ ಖುಷಿಯಲ್ಲಿ terrific ತಾಂಡವ ಮಾಡಿಬಿಟ್ಟ.

ಪಾರ್ವತಿ ಶಿವ ಮದುವೆಯಾದ ಹೊಸದರಲ್ಲಿ ಹೇಳಿದ ಮಾತನ್ನು ನೆನಪುಮಾಡಿಕೊಂಡು ನಿಡುಸುಯ್ಯ್ದಳು....'ನಾನು ಶಿವ. ಎಲ್ಲವನ್ನೂ ಬಿಟ್ಟವನು. ಸಂಸಾರಿಗಳಿಗೆ ಇದೇ ನಿಮ್ಮ ಕೊನೆಯ ಮನೆ ಎಂದು ತೋರಿಸಲು ಸ್ಮಶಾನದಲ್ಲಿ ನಿಂತವನು. ನನಗೆ ಮನೆ ಮಠದ ಯೋಗವಿಲ್ಲ.'

===

ಸ್ವಾಮೀ ಅನುಭವಾನಂದರು ಹೇಳಿದ ಕಥೆ.

ಹತ್ತು ಹದಿನೈದು ವರ್ಷಗಳ ಹಿಂದೆ ಫ್ಲಾಟ್ ಬುಕ್ ಮಾಡಿ ಇನ್ನೂ ಸಿಗದವರು ಕೂಡ ಈಗಿತ್ತಲಾಗೆ ಇದೇ ತರಹದ ವೇದಾಂತ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಮಕಾಡೆ ಮಲಗಿರುವ ರಿಯಲ್ ಎಸ್ಟೇಟ್ ಉದ್ಯಮ ಕೂಡ ತಮ್ಮ ಪ್ರಾಜೆಕ್ಟುಗಳಿಗೆ ಶಿವಾ ರೆಸಿಡೆನ್ಸಿ, ಶಿವಾ ಪ್ಯಾರಡೈಸ್, ಶಿವಾ ಹೆವೆನ್ಸ್ ಅಂತೆಲ್ಲ ಹೆಸರಿಟ್ಟು ಬುಕಿಂಗ್ ರೊಕ್ಕ ಮುಂಡಾಯಿಸಿ ಪಾಪದ ಮಂದಿಯನ್ನು ಸ್ಮಶಾನದ ಕಡೆ ಕಳಿಸುತ್ತಿದೆ. ಒಂದು ಕಡೆ ಭಾಡಿಗೆ, ಇನ್ನೊಂದು ಕಡೆ ಸಿಗದ ಪ್ಲಾಟಿನ EMI ಕಟ್ಟಿ ಜನ ಬೇಗನೆ ಸ್ಮಶಾನ ಸೇರುವ ಶೋಚನೀಯ ಪರಿಸ್ಥಿತಿಗೆ ಬಂದಿದ್ದಾರೆ. ಅದು ದುರಂತ.

ಮನೆ ಮಠ ಕಟ್ಟಲೇಬೇಡಿ. ಭಾಡಿಗೆ ಮನೆಯಲ್ಲಿ ಹಾಯಾಗಿರಿ. ಅದು ಮೀರಿ ಮನೆ ಮಠ ಮಾಡಿಕೊಳ್ಳಲೇಬೇಕು ಅಂತಾದರೆ ಜಾಗ ತೆಗೆದುಕೊಂಡು ಇಂಡಿಪೆಂಡೆಂಟ್ ಮನೆ ಕಟ್ಟಿಕೊಳ್ಳಿ. ಕಷ್ಟ ಮತ್ತು ಬೆಲೆ ಜಾಸ್ತಿಯಾದರೂ ಜಾಗ ನಿಮ್ಮದಾಗಿರುವದರಿಂದ ಅದಕ್ಕೊಂದು ಬೆಲೆ ಅನ್ನೋದು ಇರುತ್ತದೆ. ಅದೂ ಸದ್ಯದ ಮಟ್ಟಿಗೆ ನೋಡಿದರೆ. ಮುಂದೆ ಹೇಗೋ ಗೊತ್ತಿಲ್ಲ.

ಇನ್ನು ಫ್ಲ್ಯಾಟೇ ಬೇಕು, ಅಪಾರ್ಟ್ಮೆಂಟೇ ಬೇಕು ಅನ್ನುವವರು ಸಿದ್ಧವಾಗಿರುವ ಫ್ಲಾಟ್ ಕೊಳ್ಳಿ. ಮುಂಗಡ ಬುಕಿಂಗ್ ಮಾಡಿದ್ದರಕಿಂತ ೧೦-೨೦% ಜಾಸ್ತಿ ಬೆಲೆಯಾದೀತು. ಆದರೆ ತಲೆಬಿಸಿ ಕಮ್ಮಿ. ರೊಕ್ಕ ಕೊಟ್ಟ ಮೇಲೆ ಹೋಗಿ ಉಳಿಯಬಹುದು. ಕಮ್ಮಿ ಬೆಲೆಯಲ್ಲಿ ಸಿಗುತ್ತದೆ ಎಂದು ಬುಕಿಂಗ್ ಮಾಡಿಕೊಂಡು, EMI ಕಟ್ಟುತ್ತಾ ಕುಳಿತಿರೋ, ಈಗಿನ ಪರಿಸ್ಥಿತಿ ನೋಡಿದರೆ ಫ್ಲಾಟ್ ಸಿಗುವುದು ಯಾವ ಕಾಲಕ್ಕೋ.

ಮತ್ತೆ ಅದೇನೋ ಗೊತ್ತಿಲ್ಲ... ಹೊಸದರಲ್ಲಿ ಅದೆಷ್ಟು ಲಕ್ಸುರಿಯಾಗಿ ಕಾಣುವ ಅಪಾರ್ಟ್ಮೆಂಟುಗಳು ಒಂದೆರೆಡೇ ವರ್ಷದಲ್ಲಿ ಎಲ್ಲ ಸೌಂದರ್ಯ ಕಳೆದುಕೊಂಡು ಅದೆಷ್ಟು ಅಸಡ್ಡಾಳ ಕಾಣುತ್ತವೆ ಎಂದರೆ ಇವಕ್ಕೇ ನಾವು ಕೋಟಿ ಕೋಟಿ  ಕೊಟ್ಟು ಕೋತಿಗಳು ಆದೆವೇ ಎಂದು ಎನ್ನಿಸದೇ ಇರದು. ಮತ್ತೆ ಮೇಲಿಂದ ನೆರೆಹೊರೆಯವರ ಗದ್ದಲ. ಅದನ್ನು ಕೇಳಬೇಡಿ. ಅದು ಬೋನಸ್ ಆಫರ್ ಮಾದರಿ.

ಮೊನ್ನೆ ಎಲ್ಲೋ ಓದಿದೆ... return ON investment ಹಾಳಾಗಿಹೋಗಲಿ return OF investment ಬಂದರೆ ಸಾಕಾಗಿದೆ. ಅದು ಖರೆ. ಶಂಬರ್ ಟಕಾ ಖರೆ!

ಮನೆ ಮಠದ ವಿಷಯದಲ್ಲಿ ಸ್ಮಶಾನ ವೈರಾಗ್ಯ ಬೇಗ ಬಂದಷ್ಟೂ ಒಳ್ಳೆಯದು. ಅಷ್ಟರಮಟ್ಟಿಗೆ ನೀವು ಅದೃಷ್ಟವಂತರು. ಮನೆ ಮಠಗಳ ಬಗ್ಗೆ ಸ್ಮಶಾನ ವೈರಾಗ್ಯ ಬರಬೇಕು. ಸ್ಮಶಾನದ ಬಗ್ಗೆ ಅಂದರೆ ವೈರಾಗ್ಯದ ಬಗ್ಗೆ ಇನ್ನಿಲ್ಲದ ಆಸಕ್ತಿ ಮೋಹ ಬರಬೇಕು. ಅಂದರೆ ಮುಮುಕ್ಷತ್ವದತ್ತ ಹೊರಟಿರಿ ಎಂದರ್ಥ.