Wednesday, July 29, 2020

ಭೂಗತಲೋಕದೊಂದಿಗೆ ಮತ್ತೊಮ್ಮೆ ಭಾನಗಡಿ...ಸೂಪರ್ ಕಾಪ್ ರಾಕೇಶ್ ಮಾರಿಯಾ ಜೀವನಕಥನದಿಂದ

ಸೂಪರ್ ಕಾಪ್  ರಾಕೇಶ್ ಮಾರಿಯಾ ಜೀವನಕಥನ

ಅದು ಅಕ್ಟೋಬರ್ ೧೯೯೮ ರ ಸಮಯ. ಮುಂಬೈನಲ್ಲಿ ತುಂಬಾ ಆತಂಕದ ದಿನಗಳು ಅವು.   ಭೂಗತಲೋಕದವರಿಂದ ಹಫ್ತಾ ವಸೂಲಿ ಮತ್ತು ಗುಂಡಿನ ದಾಳಿಗಳು ಉತ್ತುಂಗದಲ್ಲಿದ್ದವು. ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ ಮತ್ತು ಆತನ ಸೋದರ ಅನೀಸ್ ಇಬ್ರಾಹಿಂ ಮುಂಬೈನ ಹವಾಮಾನವನ್ನು ತುಂಬಾ ಗರಮ್ ಮಾಡಿಬಿಟ್ಟಿದ್ದರು. ಅವರ ಪರವಾಗಿ ಅವರ ಬಂಟರಾದ ಛೋಟಾ ಶಕೀಲ್ ಮತ್ತು ಅಬು ಸಲೇಮ್ ಮುಂಬೈ ತುಂಬಾ 'ಧೂಮ್ ಮಚಾಲೇ ಧೂಮ್!' ಎಂಬಂತೆ ದಾಂಗುಡಿ ಇಟ್ಟಿದ್ದರು. ಬಾಲಿವುಡ್ ಚಿತ್ರೋದ್ಯಮ, ಬಿಲ್ಡರುಗಳು, ವ್ಯಾಪಾರಿಗಳೇ ಅವರ ಮುಖ್ಯ ಟಾರ್ಗೆಟ್ಟುಗಳು. ಭೂಗತಲೋಕದ ಇತರ ಡಾನುಗಳಾದ ಛೋಟಾ ರಾಜನ್, ಅರುಣ್ ಗಾವ್ಳಿ, ಅಶ್ವಿನ್ ನಾಯಕ್ ಕೂಡ ಸಕ್ರಿಯರಾಗಿದ್ದರು. ಒಟ್ಟಿನಲ್ಲಿ ಇವರೆಲ್ಲರ ಕಾರ್ನಾಮೆಗಳಿಂದ ಮುಂಬೈ ಗಡ ಗಡ ಗಡ ಗಡ!

ಆಗ ಭಾಜಪ - ಶಿವಸೇನೆಯ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು. ಟಫ್ ಕಾಪ್ ಎಂದೇ ಖ್ಯಾತರಾಗಿದ್ದ ಖಡಕ್ ಪೊಲೀಸ್ ಅಧಿಕಾರಿ ಅರವಿಂದ್ ಇನಾಮದಾರ್ ರಾಜ್ಯದ ಪೊಲೀಸ್ ಮುಖ್ಯಸ್ಥರಾಗಿದ್ದರು. ಮುಂಬೈ ಶಹರದ ಪೊಲೀಸ್ ಕಮಿಷನರ್ ಆಗಿ ಮತ್ತೊಬ್ಬ ಟಫ್ ಕಾಪ್ ರಾನ್ನಿ ಮೆಂಡೋನ್ಸಾ ಇದ್ದರು. ೧೯೯೭ ರಲ್ಲಿ ಕ್ಯಾಸೆಟ್ ಕಿಂಗ್ ಗುಲಶನ್ ಕುಮಾರನನ್ನು, ಕೇಳಿದಷ್ಟು ಹಫ್ತಾ ಕೊಡಲಿಲ್ಲ ಎನ್ನುವ ಕಾರಣಕ್ಕೆ, ಡಾನ್ ಅಬು ಸಲೇಂನ ಬಂಟರು ನಡುಬೀದಿಯಲ್ಲಿ ಉಡಾಯಿಸಿದ್ದರು. ತಾಳತಪ್ಪುತ್ತಿರುವ ಕಾನೂನು ವ್ಯವಸ್ಥೆಯನ್ನು ಸರಿದಾರಿಗೆ ತರಲು ಗಟ್ಟಿಗ ರಾನ್ನಿ ಮೆಂಡೋನ್ಸಾರನ್ನು ಮುದ್ದಾಂ ತಂದು ಕಮಿಷನರ್ ಹುದ್ದೆಯಲ್ಲಿ ಕೂರಿಸಲಾಗಿತ್ತು.

ಸರಕಾರದ ಮೇಲೆ ಮತ್ತು ಪೊಲೀಸರ ಮೇಲೆ ಒತ್ತಡ ದಿನದಿಂದ ದಿನಕ್ಕೆ ತುಂಬಾ ಜಾಸ್ತಿಯಾಗುತ್ತಿತ್ತು. ಮಾಧ್ಯಮಗಳು ಭೂಗತಲೋಕದ ಆಟಾಟೋಪಗಳನ್ನು ಹೈಲೈಟ್ ಮಾಡಿ, 'ಮುಂಬೈನಲ್ಲಿ ಏನಾಗುತ್ತಿದೆ? ಜವಾಬ್ದಾರರು ಯಾರು? ಉತ್ತರ ಕೊಡುವವರು ಯಾರು?' ಎಂದು ನಿರಂತರವಾಗಿ ಬೊಬ್ಬೆ ಹೊಡೆಯುತ್ತಿದ್ದವು.

೧೯೯೮, ಅಕ್ಟೋಬರ್ ೮ ರಂದು, ದೊಡ್ಡ ಬಿಸಿನೆಸ್ ಕುಳ ಭರತ್ ಷಾ ಅವರನ್ನು ಭೂಗತಲೋಕದವರು ಗುಂಡು ಹಾರಿಸಿ ಉಡಾಯಿಸಿಬಿಟ್ಟರು. 'ರೂಪಂ' ಮತ್ತು 'ರೂಪಮಿಲನ್' ಎಂಬ ಪ್ರಸಿದ್ಧ ಸಿದ್ಧಉಡುಪುಗಳ ಅಂಗಡಿಗಳ ಮಾಲೀಕನಾಗಿದ್ದ ಭರತ್ ಷಾನನ್ನು ಮುಂಬೈ ಪೊಲೀಸ್ ಕಮಿಷನರ್ ಕಚೇರಿಯ ಸಮೀಪದಲ್ಲೇ, ಕೊಂಚ ಆಚೆ ಇರುವ ರಸ್ತೆಯಲ್ಲಿ, ಗುಂಡಿಕ್ಕಿ ಕೊಲ್ಲಲಾಗಿತ್ತು. Underworld was becoming very daring and unafraid of anything or anybody!

(ಪುಸ್ತಕದ ಹೊರಗಿನ ಹೆಚ್ಚಿನ ಮಾಹಿತಿ: ಮೇಲಿನ ಭರತ್ ಷಾ ಬೇರೆ ಮತ್ತು ವಜ್ರದ ವ್ಯಾಪಾರಿ, ದೊಡ್ಡ ಬಾಲಿವುಡ್ ಕುಳ ಭರತ್ ಷಾ ಬೇರೆ.  ವಜ್ರದ ವ್ಯಾಪಾರಿ ಆ ಭರತ್ ಷಾ ಕೂಡ ಭೂಗತಲೋಕದ ಲಫಡಾದಲ್ಲಿ ಮುಂದೊಂದು ದಿನ ಸಿಕ್ಕಾಕಿಕೊಂಡಿದ್ದ. ಛೋಟಾ ಶಕೀಲನ ಪರವಾಗಿ ಬಾಲಿವುಡ್ಡಿನಲ್ಲಿ ಹಣ ತೊಡಗಿಸುತ್ತಾನೆ ಎಂದು ಬಂಧಿಸಿದ್ದರು ಅವನನ್ನು. 'ಚೋರಿ ಚೋರಿ ಚುಪ್ಕೇ ಚುಪ್ಕೇ' ಎನ್ನುವ ಸಲ್ಮಾನ್ ಖಾನ್, ಪ್ರೀತಿ ಜಿಂಟಾ, ರಾಣಿ ಮುಖರ್ಜಿ ನಟಿಸಿದ್ದ ಸಿನಿಮಾ ಬಗ್ಗೆ ತನಿಖೆ ಮಾಡಿದ್ದ ಪೊಲೀಸರು ನಿರ್ದೇಶಕ ನದೀಮ್ ರಿಜ್ವಿಯನ್ನು ಹಾಕಿ ರುಬ್ಬಿದಾಗ ಎಲ್ಲ ಬಾಯಿಬಿಟ್ಟಿದ್ದ. ಅವರೆಲ್ಲ ಭೂಗತರೊಂದಿಗೆ ಮಾತಾಡಿದ್ದ ಫೋನ್ ರೆಕಾರ್ಡಿಂಗ್ ಸಿಕ್ಕಿತ್ತು. ಆದರೆ ಕೊನೆಗೆ ಎಲ್ಲರೂ ನಿರಪರಾಧಿಗಳು ಎಂದು ಬಿಡುಗಡೆಯಾಗಿದ್ದು ಕೂಡ ಅಷ್ಟೇ ಸತ್ಯ...ಏನು ಹೇಳೋಣ ಅದಕ್ಕೆ!? Irony of our times!?)

ಈ ಭಯಾನಕ ಹತ್ಯೆಯ ನೆನಪು ಮಾಸುವ ಮೊದಲೇ, ಕೇವಲ ಒಂದು ವಾರದ ಮೊದಲು, ಅಕ್ಟೋಬರ್ ೧೩ ರಂದು, ಭಾಂಡುಪ್ಪಿನಲಿ ಹೋಟೆಲ್ ನಡೆಸಿಕೊಂಡಿದ್ದ ಕುರುಪ್ ಸಹೋದರರಾದ ಕೃಷ್ಣದಾಸ್ ಮತ್ತು ಹರಿದಾಸರನ್ನು, ಅವರು ಹೋಟೆಲಿನ ಗಲ್ಲಾಪೆಟ್ಟಿಗೆ ಮೇಲೆ ಕುಳಿತಿದ್ದಾಗೇ, ಗುಂಡಿಟ್ಟು ಕೊಲ್ಲಲಾಯಿತು. ಅಷ್ಟಕ್ಕೇ ಸುಮ್ಮನಾಗದ ಅಂಡರ್ವರ್ಲ್ಡ್ ಶೂಟರುಗಳು ಅಲ್ಲಿ ಕುಳಿತು ಉಪಹಾರ ಸೇವಿಸುತ್ತಿದ್ದ ಗ್ರಾಹಕರ ಮೇಲೂ ಅಡ್ಡಾದಿಡ್ಡಿಯಾಗಿ ಗುಂಡು ಹಾರಿಸಿ ಮೋಟಾರಬೈಕ್ ಮೇಲೆ ಪರಾರಿಯಾದರು.

ಇಂತಹ ಘಟನೆಗಳು ಸರ್ವೇಸಾಮಾನ್ಯ ಎಂಬಂತಾಗಿಬಿಟ್ಟಿತ್ತು. ಸದಾ ಚಮಕಾಯಿಸುತ್ತಿರುವ ಶಹರ ಎಂದೇ ಖ್ಯಾತವಾದ ಮುಂಬೈ ಮೇಲೆ ಮಂಕು ಛಾಯೆ ಕವಿದಿತ್ತು. ಭೂಗತಲೋಕದಿಂದ ಯಾವಾಗ ಫೋನ್ ಕರೆ ಬರುತ್ತದೋ ಎಂದು ಎಲ್ಲರೂ ಚಿಂತಿತರು. ಎಲ್ಲಿಂದ ಮತ್ತು ಯಾರಿಂದ ಎನ್ನುವುದಷ್ಟೆ ಪ್ರಶ್ನೆ. ಕರೆ ಬರುವುದು ಮಾತ್ರ ಖಾತ್ರಿ. ಮನೆಯಲ್ಲಿ ಏನಾದರೂ ಶುಭಕಾರ್ಯ ಅಥವಾ ದೊಡ್ಡ ಮಟ್ಟದ ಖರೀದಿ ಮಾಡಿದರಂತೂ ಮುಗಿದೇಹೋಯಿತು. ಭೂಗತಲೋಕಕ್ಕಾಗಿ ಪಾಲು ತೆಗೆದಿಟ್ಟೇ  ಖರ್ಚು ಮಾಡಬೇಕು. ಇಲ್ಲವಾದರೆ ಕಂಡಕಂಡವರ ಮೇಲೆ ಕಂಡಲ್ಲಿ ಗುಂಡು. ಯಾರಿಗೆ ಬೇಕು ಇದೆಲ್ಲಾ ಭಾನಗಡಿ ಎಂದು ಭೂಗತರಿಗೆ ಕೊಡುವ ಕಾಣಿಕೆ ಕೊಟ್ಟು ಶಾಂತಿಯನ್ನು ತಕ್ಕ ಮಟ್ಟಿಗಾದರೂ ಖರೀದಿ ಮಾಡುತ್ತಿದ್ದರು ಜನ. ಪೊಲೀಸರಿಗೆ ಬಂದು ದೂರು ಕೊಡುವ ಹುಚ್ಚು ಧೈರ್ಯ ಯಾರೂ ಮಾಡುತ್ತಿರಲಿಲ್ಲ.

ದಸರಾ ಹಬ್ಬದ ನಂತರದ ಹದಿನೈದು ದಿವಸಗಳಲ್ಲಿ ಹನ್ನೆರೆಡು ಶೂಟ್ ಔಟ್ ಗಳು ಆಗಿದ್ದವು ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು ಎಂದು ತಿಳಿಯಬಹುದು. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ದೆಹಲಿಯಿಂದ ಖುದ್ದು ಗೃಹ ಕಾರ್ಯದರ್ಶಿಯವರನ್ನು ಮುಂಬೈಗೆ ಕಳಿಸಿತು. ವರದಿಯನ್ನು ತರಿಸಿಕೊಂಡಿತು. ಅಷ್ಟು ಖರಾಬಾಗಿತ್ತು ಪರಿಸ್ಥಿತಿ.

ಅಂದು ಭೂಗತಲೋಕದ ಕೈ ಮೇಲಾಗಿ ಪೊಲೀಸರು ಕೊಂಚ ಮಂಕಾಗಲು ಒಂದು ಕಾರಣ ನ್ಯಾಯಮೂರ್ತಿ ಆಗಿಯಾರ್ ಕೊಟ್ಟಿದ್ದ ಒಂದು ವರದಿ. ಅದು ಪೊಲೀಸರಿಗೆ ವ್ಯತಿರಿಕ್ತವಾಗಿತ್ತು. ನೈತಿಕ ಬಲವನ್ನು ಕುಗ್ಗಿಸಿತ್ತು.

ಹಿಂದಿನ ವರ್ಷ ಮುಂಬೈ ಪೊಲೀಸರು ಎಂಬತ್ತು ಎನ್ಕೌಂಟರುಗಳನ್ನು ಮಾಡಿದ್ದರು. ಭೂಗತಲೋಕದವರ ಆಟಾಟೋಪವನ್ನು ನಿಯಂತ್ರಿಸಲು ಅವು ಸಹಾಯ ಮಾಡಿದ್ದವು. ಆದರೆ ಅವುಗಳ ವಿರುದ್ಧ ಸಮಾಜದ ಕೆಲ ವಲಯಗಳಲ್ಲಿ ಅಸಹನೆ ಮತ್ತು ಅಸಮಾಧಾನ ಮೂಡಿತ್ತು. ಅಂಥವರು ರಿಟ್ ಹಾಕಿದರು. ಎನ್ಕೌಂಟರುಗಳು ನಕಲಿ ಎಂದು ಆರೋಪಿಸಿದರು. ಆವಾಗ ಸರ್ಕಾರ ನ್ಯಾಯಮೂರ್ತಿ ಆಗಿಯಾರ್ ಅವರನ್ನು ತನಿಖೆಗೆ ನೇಮಿಸಿತು. ಮೂರು ವಿವಾದಾತ್ಮಕ ಎನ್ಕೌಂಟರ್ ಹತ್ಯೆಗಳನ್ನು ವಿವರವಾಗಿ ತನಿಖೆ ಮಾಡಲು ಕುಳಿತರು ನ್ಯಾಯಮೂರ್ತಿ ಆಗಿಯಾರ್. ಆ ಮೂರು ಎನ್ಕೌಂಟರುಗಳು ನಕಲಿ ಎಂದು ವರದಿ ಕೊಟ್ಟುಬಿಟ್ಟರು ನ್ಯಾಯಮೂರ್ತಿ ಆಗಿಯಾರ್. ಹೈಕೋರ್ಟ್ ಆ ವರದಿಯನ್ನು ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಲಿತ್ತು. ಎನ್ಕೌಂಟರ್ ಮಾಡಿದ್ದ ಎನ್ಕೌಂಟರ್ ಸ್ಪೆಷಲಿಸ್ಟ್ ಮಾದರಿಯ ಅಧಿಕಾರಗಳ ಮೇಲೆ, ಅವರ ತಂಡಗಳ ಮೇಲೆ ತುಂಬಾ ಒತ್ತಡ. ಇಲಾಖೆಗೆ ಆತಂಕ. ಕಾನೂನು ವ್ಯವಸ್ಥೆ ಕುಸಿಯುತ್ತಿದೆ ಎಂದು ಬೊಬ್ಬೆ ಹೊಡೆಯುವವರು ಒಂದು ಕಡೆ. ಮತ್ತೊಂದು ಕಡೆ ನಕಲಿ ಎನ್ಕೌಂಟರ್ ಮಾಡುತ್ತೀರಾ ಎಂದು ಜೋರು ಮಾಡುವವರ ಕಿರಿಕಿರಿ. ಇವುಗಳ ಮಧ್ಯೆ ಹೈರಾಣಾಗಿತ್ತು ಮುಂಬೈ ಪೊಲೀಸ್.

ಈ ಕಾಲಘಟ್ಟದಲ್ಲಿ ನಾನು ಸಹಾಯಕ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದೆ. ಡಿಜಿಪಿ ಸಾಹೇಬರ ಕಚೇರಿಯಲ್ಲಿ ಅವರ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದೆ. ಹಾಗಿದ್ದಾಗ ಒಂದು ದಿನ ಅಲ್ಲಿಗೆ ಯಾರು ಬಂದಿರಬಹದು? ಊಹಿಸಿ. ಮುಂಬೈ ಪೊಲೀಸ್ ಕಮಿಷನರ್ ಟಫ್ ಕಾಪ್ ರಾನ್ನಿ ಮೆಂಡೋನ್ಸಾ ಖುದ್ದಾಗಿ ಬಂದಿದ್ದರು. ಪಟಕ್ಕೆಂದು ಎದ್ದು ನಿಂತು ಸಟಕ್ಕೆಂದು ಒಂದು ಸಲ್ಯೂಟನ್ನು ಸ್ಮಾರ್ಟ್ ಆಗಿ ಹಾಕಿದ್ದೆ. ವಿಧೇಯತೆಯಿಂದ ನಿಂತೆ.

'ಇಲ್ಲೇನು ಮಾಡುತ್ತಿದ್ದೀರಿ, ರಾಕೇಶ್?' ಎಂದರು ರಾನ್ನಿ ಮೆಂಡೋನ್ಸಾ. ಸದಾ ಹಸನ್ಮುಖಿ ಅವರು. 'ನೀವು ನನಗೆ ಮುಂಬೈ ಶಹರದಲ್ಲಿ ಕೆಲಸ ಮಾಡಲು ಬೇಕು. ಅಲ್ಲಿ ಯುದ್ಧ ನಡೆಯುತ್ತಿದೆ' ಅಂದರು ಅವರು. ಯುದ್ಧ ಎಂದರೆ ಭೂಗತಲೋಕದ ವಿರುದ್ಧದ ಯುದ್ಧ ಎಂದು ನನಗೆ ಅರ್ಥವಾಗಿತ್ತು.

'ನಿಮಗೇನು ಸರಿ ಅನ್ನಿಸುತ್ತದೋ ಹಾಗೆ ಆಗಲಿ ಸರ್,' ಎಂದು ಹೇಳಿದೆ. ಅವರ ಮಾತಿನ ಅರ್ಥವನ್ನು ಅವರ ನಿರ್ಭಾವುಕ ಮುಖದಲ್ಲಿ ಹುಡುಕಿದೆ. ಡಿಜಿಪಿ ಸಾಹೇಬರನ್ನು ಭೇಟಿ ಮಾಡಲು ಬಂದಿದ್ದರು. ಅವಸರದಲ್ಲೇ ವಾಪಸ್ ಹೋಗಿದ್ದರು ಕಮಿಷನರ್ ರಾನ್ನಿ ಮೆಂಡೋನ್ಸಾ. ಆದರೆ ಅವರು ಆಡಿದ ಮಾತಿಗೆ ಪಕ್ಕಾ ಎನ್ನುವ ಭಾವನೆ ನನಗೆ ಬಂದಿತು.

ಜಾಸ್ತಿ ಕಾಯುವ ಪ್ರಮೇಯ ಬರಲಿಲ್ಲ. ಮಹಾರಾಷ್ಟ್ರದ ಅಂದಿನ ಗೃಹಮಂತ್ರಿ ಗೋಪಿನಾಥ್ ಮುಂಡೆ ನನಗೆ ಕರೆ ಮಾಡಿದರು. ಬಂದು ಭೇಟಿಯಾಗಲು ತಿಳಿಸಿದರು.

ತಕ್ಷಣ ನನ್ನ ಮೇಲಾಧಿಕಾರಿಯಾದ ಡಿಜಿಪಿ ಅರವಿಂದ ಇನಾಮದಾರ್ ಅವರನ್ನು ಕಂಡು ಗೃಹಮಂತ್ರಿಗಳ ಕರೆ ಬಂದಿದ್ದರ ಬಗ್ಗೆ ತಿಳಿಸಿದೆ. ಗೃಹಮಂತ್ರಿ ಮುಂಡೆ, ಡಿಜಿಪಿ ಮತ್ತು ಕಮಿಷನರ್ ಮೊದಲೇ ಮಾತಾಡಿಕೊಂಡಿದ್ದಾರೆ ಎಂದು ನಂತರ ತಿಳಿಯಿತು. ಹದಗೆಡುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ನನ್ನನ್ನು ಮತ್ತೆ ಮುಂಬೈ ಶಹರದಲ್ಲಿ ಸಕ್ರಿಯ ಕರ್ತವ್ಯಕ್ಕೆ ಹಾಕುವ ಪ್ರಸ್ತಾವ ಚರ್ಚೆಯಾಗಿದೆ ಎಂದು ತಿಳಿಸಿದರು. ನಾನು ಹಿಂದೆ ಮುಂಬೈನಲ್ಲಿ ಸಕ್ರಿಯ ಅಧಿಕಾರಿಯಾಗಿದ್ದಾಗ ಸೂಕ್ಷ್ಮವಾಗಿ ಸೃಷ್ಟಿಸಿ ಮತ್ತು ಅಷ್ಟೇ ಜತನದಿಂದ ಅಭಿವೃದ್ಧಿಪಡಿಸಿಕೊಂಡಿದ್ದ ಮಾಹಿತಿದಾರರ ಜಾಲದ ಬಗ್ಗೆ ಅವರಿಗೆ ಗೊತ್ತಿತ್ತು. ಭೂಗತಲೋಕವನ್ನು ಪರಿಣಾಮಕಾರಿಯಾಗಿ ಹಣಿಯಲು ಅಂತಹ ಮಾಹಿತಿದಾರರ ಜಾಲದ ಅವಶ್ಯಕತೆ ಮತ್ತು ಅದನ್ನು ಸಂಬಾಳಿಸಿಕೊಂಡು ಹೋಗಬಲ್ಲ ದಕ್ಷ ಅಧಿಕಾರಿಯೊಬ್ಬ ಬೇಕಾಗಿತ್ತು. ಹಾಗಾಗಿ ನನಗೆ ಬುಲಾವಾ ಬಂದಿತ್ತು. ಡಿಜಿಪಿ ಇದನ್ನೆಲ್ಲಾ ಹೇಳಿದಾಗ ಒಂದು ಕ್ಷಣ ಆಶ್ಚರ್ಯವಾಯಿತು.

ಪೊಲೀಸರಿಗೆ ಬರೋಬ್ಬರಿ ಮಾಹಿತಿ ಕೊಡುವ ಮಾಹಿತಿದಾರರು (ಖಬರಿಗಳು) ಅಂದರೆ ನನಗೆ ತುಂಬಾ ಆಸಕ್ತಿ. ಅವರದ್ದೊಂದು ವಿಶಿಷ್ಟ ಲೋಕ. ಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವುದಿಲ್ಲ. ಹಾಗಿರುತ್ತಾರೆ ಪೊಲೀಸ್ ಖಬರಿಗಳು ಮತ್ತು ಅವರ ಲೋಕ. ಭೂಗತಲೋಕ ಮತ್ತು ಸಾಮಾನ್ಯರ ಲೋಕದ ನಡುವಿನ ಗಡಿಪ್ರದೇಶ ಅದು.

ಹಿಂದೆ ಮುಂಬೈನಲ್ಲಿ ಕ್ರೈಂ ಬ್ರಾಂಚಿನ ಡಿಸಿಪಿಯಾಗಿದ್ದಾಗ, ೧೯೯೩ ರ ಮುಂಬೈ ಸರಣಿ ಸ್ಪೋಟಗಳನ್ನು ತನಿಖೆ ಮಾಡುವಾಗ, ನಾನು ಖಬರಿಗಳ ಜಾಲವನ್ನು ಸೃಷ್ಟಿಸಲು ಆರಂಭಿಸಿದ್ದೆ. ಈ ಖಬರಿಗಳು ಒಂದು ತರಹದ ವಿಚಿತ್ರ ಜನ. ಒಮ್ಮೆ ನಿಮ್ಮನ್ನು ನಂಬಿದರು ಅಂದರೆ ಮುಗಿಯಿತು. ಜೀವನಪೂರ್ತಿ ನಿಮ್ಮ ಜೊತೆಯಿರುತ್ತಾರೆ ಅವರು. ನಿಮ್ಮ ಹುದ್ದೆ, ಕೆಲಸ ಬದಲಾಗಬಹುದು. ಆದರೆ ನಿಮ್ಮ ಖಬರಿ ಮಾತ್ರ ನಿಮಗೆ ಮಾಹಿತಿ ಕೊಡುತ್ತಲೇ ಇರುತ್ತಾನೆ. ನೀವು ಎಲ್ಲೇ ಇದ್ದರೂ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತೀರಿ ಎಂದು ನಂಬುತ್ತಾನೆ ಮತ್ತು ನಿರೀಕ್ಷಿಸುತ್ತಾನೆ ಕೂಡ. ೧೯೯೩ ರ ಸರಣಿ ಸ್ಫೋಟಗಳ ತನಿಖೆ ಮುಗಿಸಿ, ಕ್ರೈಂ ಬ್ರಾಂಚಿನಿಂದ ವರ್ಗಾವಣೆಯಾಗಿ, ಡಿಜಿಪಿ ಕಚೇರಿಯಲ್ಲಿ ಇದ್ದಾಗಲೂ ಕೂಡ ಮುಂಬೈ ಖಬರಿಗಳು ನನಗೆ ಮಾಹಿತಿ ಕೊಡುತ್ತಲೇ ಇದ್ದರು. ನನಗೆ ಆ ಮಾಹಿತಿಗಳು ಅಷ್ಟೇನೂ ಉಪಯೋಗಕ್ಕೆ ಬರುತ್ತಿರಲಿಲ್ಲ. ಆದರೆ ಖಬರಿಗಳ ಮಹತ್ವ ಗೊತ್ತಿತ್ತು. ಅವರ ವಿಶ್ವಾಸವನ್ನು ಕಾಪಾಡಿಕೊಂಡು ಬರುತ್ತಿದ್ದೆ.

ಒಮ್ಮೆ ಒಬ್ಬ ಖಬರಿ ಕೊಟ್ಟಿದ್ದ ಮಾಹಿತಿ ತುಂಬಾ ಖರಾಬಾಗಿತ್ತು. ತುಂಬಾ critical ಆಗಿತ್ತು. It was absolutely chilling!

ಬರೋಬ್ಬರಿ ನೆನಪಿದೆ. ಅಂದು ೨೨ ಏಪ್ರಿಲ್ ೧೯೯೭. ರಾತ್ರಿ ತುಂಬಾ ವೇಳೆಯಾಗಿತ್ತು. ಹಾಸಿಗೆ ಪಕ್ಕದ ಫೋನ್ ಮೊರೆಯತೊಡಗಿತ್ತು. ಪೊಲೀಸ್ ಅಧಿಕಾರಿಗಳಾದ ನಮಗೆ ಹೊತ್ತಲ್ಲದ ಹೊತ್ತಲ್ಲಿ ಬರುವ ಫೋನ್ ಕರೆಗಳು ವಿಶೇಷವೇನೂ ಅಲ್ಲ. ಕಣ್ಣು ತಿಕ್ಕುತ್ತಾ ಎದ್ದು ಕೂತು ಫೋನ್ ಎತ್ತಿದೆ. ಕರೆಯಿಂದ ನಿದ್ರಾಭಂಗವಾದ ಪತ್ನಿ ಪ್ರೀತಿ ಕೂಡ ಎದ್ದು ಕೂತಳು.

'ಸಾಬ್, ಗುಲಶನ್ ಕುಮಾರನ ವಿಕೆಟ್ ಬೇಗ ಬೀಳಲಿದೆ!' ಅಂದಿತು ಆ ಕಡೆಯಿದ್ದ ಧ್ವನಿ. ಅವನು ನನ್ನ ಖಾಸ್ ಖಬರಿ. ಕೊಟ್ಟ ಮಾಹಿತಿ ಯಾವಾಗಲೂ ಪಕ್ಕಾ. ಖೋಟಾ ಆಗಿದ್ದೇ ಇಲ್ಲ. ಅಂಥವನು ಹೇಳುತ್ತಿದ್ದ - ಶೀಘ್ರದಲ್ಲೇ ಗುಲಶನ್ ಕುಮಾರನ ವಿಕೆಟ್ ಬೀಳಲಿದೆ. ಅಂದರೆ ಭೂಗಲೋಕ ಅವನನ್ನು ಕೊಲ್ಲಲಿದೆ.

ಗುಲಶನ್ ಕುಮಾರ ಒಬ್ಬ ದೊಡ್ಡ ಬಿಸಿನೆಸ್ ಕುಳ. ಕ್ಯಾಸೆಟ್ ಕಿಂಗ್ ಎಂದೇ ಹೆಸರಾಗಿದ್ದ. ಸಾಕಷ್ಟು ವಿವಾದಾತ್ಮಕ ವ್ಯಕ್ತಿ. ದೆಹಲಿಯಲ್ಲಿ ರಸ್ತೆ ಮೇಲೆ ಹಣ್ಣಿನ ರಸ ಮಾರಿಕೊಂಡಿದ್ದ ವ್ಯಕ್ತಿ ಅವನು. ಸಣ್ಣ ಪ್ರಮಾಣದಲ್ಲಿ ಮ್ಯೂಸಿಕ್ ಕ್ಯಾಸೆಟ್ ವ್ಯವಹಾರ ಶುರು ಮಾಡಿದ. ಕಾಪಿ ರೈಟ್ ಕಾಯಿದೆಯಲ್ಲಿನ ಲೋಪದೋಷಗಳನ್ನು ಕಂಡುಕೊಂಡ. ಅವುಗಳನ್ನು ಉಪಯೋಗಿಸಿಕೊಂಡು, ಮಿಮಿಕ್ರಿ ಕಲಾವಿದರಂತವರನ್ನು ಹಿಡಿದು, ಅವರಿಂದ ಜನಪ್ರಿಯ ಗೀತೆಗಳನ್ನು ಹಾಡಿಸಿ, ಅವನ್ನು ಕಮ್ಮಿ ಬೆಲೆಯ ಕ್ಯಾಸೆಟ್ಟುಗಳ ಮೇಲೆ ಮುದ್ರಿಸಿ, ಹತ್ತು ಹದಿನೈದು ರೂಪಾಯಿಗಳಿಗೆಲ್ಲ ಮಾರಾಟ ಮಾಡಿ ನೋಡನೋಡುತ್ತಿದಂತೆ ಸಿಕ್ಕಾಪಟ್ಟೆ ರೊಕ್ಕ ಮಾಡಿಬಿಟ್ಟ. ಬಹು ಎತ್ತರಕ್ಕೆ ಬೆಳೆದ. ಹಲವರ ಕೆಂಗಣ್ಣಿಗೆ ಗುರಿಯಾದ. ಮಹತ್ವಾಕಾಂಕ್ಷಿಯಾಗಿದ್ದ ಅವನು ಕನಸಿನ ನಗರಿ ಮುಂಬೈಗೆ ಬಂದ. ಇಲ್ಲಿ ಹಲವಾರು ಉದ್ಯಮಗಳಿಗೆ ಕೈ ಹಾಕಿದ. ಕ್ಯಾಸೆಟ್ ಉದ್ಯಮವನ್ನು ಮತ್ತೂ ಬೆಳೆಸಿದ. ಬಾಲಿವುಡ್ಡಿಗೆ ದಾಖಲಾದ. ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡ. ಇಂತಹ ಗುಲಶನ್ ಕುಮಾರನ ವಿಕೆಟ್ಟನ್ನು ಭೂಗತಲೋಕ ಸದ್ಯದಲ್ಲೇ ಉರುಳಿಸಲಿದೆ ಎಂದು ನನ್ನ ಮಾಹಿತಿದಾರ ಹೇಳಿದಾಗ ಇದೆಲ್ಲ ಒಮ್ಮೆಲೆ
ನೆನಪಾಯಿತು.

'ಯಾರು ಉರುಳಿಸಲಿದ್ದಾರೆ ವಿಕೆಟ್?' ಎಂದು ಕೇಳಿದೆ.

'ಅಬು ಸಲೇಂ, ಸಾಬ್. ಅವನು ತನ್ನ ಶಾರ್ಪ್ ಶೂಟರುಗಳ ಜೊತೆ ಸೇರಿ ಪ್ಲಾನ್ ನಿಕ್ಕಿ ಮಾಡಿದ್ದಾನೆ. ಗುಲಶನ್ ಕುಮಾರ್ ದಿನವೂ ಬೆಳಿಗ್ಗೆ ಮನೆಯಿಂದ ಹೊರಟ ನಂತರ ಹತ್ತಿರದ ಶಿವಮಂದಿರವೊಂದಕ್ಕೆ ಹೋಗುತ್ತಾನೆ. ಅಲ್ಲಿಯೇ ಅವನ ಕೆಲಸ ಮುಗಿಸಲಿದ್ದಾರೆ!' ಎಂದು ಸ್ಪಷ್ಟವಾಗಿ ಹೇಳಿದ ಮಾಹಿತಿದಾರ.

ಬೇರೆ ಏನೇ ಇದ್ದರೂ ಗುಲಶನ್ ಕುಮಾರ್ ದೇವರ ಪರಮ ಭಕ್ತ. ಶಿವ ಮತ್ತು ದೇವಿ ಅವನ ಆರಾಧ್ಯದೈವಗಳು.

'ಮಾಹಿತಿ ಪಕ್ಕಾ ಇದೆ ತಾನೇ?' ಎಂದು ಕೇಳಿದೆ.

'ಏಕ್ದಂ ಪಕ್ಕಾ ಸಾಬ್. ಪಕ್ಕಾ ಇಲ್ಲದ್ದಿದ್ದರೆ ನಿಮಗೆ ಹೇಳುತ್ತೇನೆಯೇ ನಾನು?' ಎಂದು ತಿರುಗಿ ಕೇಳಿದ ಮಾಹಿತಿದಾರ.

'ಸರಿ. ಮತ್ತೇನಾದರೂ ಮಾಹಿತಿ ಸಿಕ್ಕರೆ ತಿಳಿಸುತ್ತಿರು,' ಎಂದು ಮಾಹಿತಿದಾರನಿಗೆ ಹೇಳಿ ಫೋನಿಟ್ಟೆ.

ಗಹನವಾದ ಯೋಚನೆಯಲ್ಲಿ ತೊಡಗಿದ್ದ ನನ್ನನ್ನು ಗಮನಿಸಿದ ಪತ್ನಿ,'ಎಲ್ಲ ಓಕೆ ನಾ?' ಎಂದು ಕೇಳಿದಳು. ಗೊತ್ತಾಗಿತ್ತು ಅವಳಿಗೆ 'ಎಲ್ಲ ಓಕೆ ಇಲ್ಲ' ಎಂದು.

'ಯಾರೋ ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಿದ್ದಾರೆ. ಹಾಗಂತ ಮಾಹಿತಿ ಬಂದಿದೆ,' ಎಂದು ಕ್ಲುಪ್ತವಾಗಿ ಹೇಳಿದೆ.

'ಮತ್ತೇನು. ಎಚ್ಚರಿಸಿ ಅವರನ್ನು!' ಎಂದಳು ಆಕೆ.

'ಅದು ಗೊತ್ತು ನನಗೆ. ಅದಕ್ಕಿಂತ ಮೊದಲು ನಾನು ಒಂದು ವಿಷಯವನ್ನು ಖಾತ್ರಿ ಮಾಡಿಕೊಳ್ಳಬೇಕು,' ಎಂದು ಹೇಳಿದೆ.

ಇಷ್ಟಾದ ನಂತರ ನಾವಿಬ್ಬರೂ ನಿದ್ದೆ ಮಾಡಲಿಲ್ಲ. ನಿದ್ದೆ ಬರಲಿಲ್ಲ. ಮುಂಜಾನೆಯಾದ ನಂತರ ನಾನು ಮಾಡಿದ ಮೊದಲ ಕೆಲಸವೆಂದರೆ ಬಾಲಿವುಡ್ಡಿನ ಡೈರೆಕ್ಟರ್ ಮಹೇಶ್ ಭಟ್ಟರಿಗೆ ಫೋನ್ ಮಾಡಿದ್ದು. ಅಷ್ಟು ಬೆಳಬೆಳಿಗ್ಗೆ ನನ್ನಿಂದ ಫೋನ್ ಬಂತು ಎಂದು ಅವರಿಗೆ ಒಂದು ತರಹದ ಆಶ್ಚರ್ಯವಾಯಿತು. ನಾನು ಸೀದಾ ವಿಷಯಕ್ಕೆ ಬಂದೆ.

'ನಿಮಗೆ ಗುಲಶನ್ ಕುಮಾರ್ ಗೊತ್ತೇ?' ಎಂದು ಕೇಳಿದೆ.

'Of course ಗೊತ್ತು. ಅವರಿಗಾಗಿ ಒಂದು ಸಿನೆಮಾ ನಿರ್ದೇಶಿಸುತ್ತಿದ್ದೇನೆ,' ಎಂದರು ಮಹೇಶ್ ಭಟ್.

'ಒಂದು ಕೆಲಸ ತ್ವರಿತವಾಗಿ ಮಾಡಿ. ಅರ್ಜೆಂಟ್ ಮತ್ತು ಇಂಪಾರ್ಟೆಂಟ್. ಗುಲಶನ್ ಕುಮಾರ್ ಅವರು ದಿನವೂ ಬೆಳಿಗ್ಗೆ ಮನೆ ಹತ್ತಿರದ ಶಿವಮಂದಿರಕ್ಕೆ ಹೋಗುತ್ತಾರೋ ಎಂದು ಕೇಳಿ ವಿಚಾರಿಸಿ. ನನಗೆ ತಿಳಿಸಿ,' ಎಂದು ಹೇಳಿದೆ. ನಂತರ ಅನ್ನಿಸಿತು, ಬೆಳಬೆಳಿಗ್ಗೆ ಹೀಗೆ ಒಮ್ಮೆಲೇ ಕೇಳಿದರೆ ಅವರಿಗೆ ವಿಷಯ ತಿಳಿಯಲಿಕ್ಕಿಲ್ಲ. ಹಾಗಾಗಿ ಹೆಚ್ಚಿನ ವಿವರಣೆ ನೀಡಿದೆ. ಗುಲಶನ್ ಕುಮಾರ್ ಅವರಿಗೆ ಅಪಾಯವಿರುವುದರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದೆ.

ಸ್ವಲ್ಪ ಸಮಯದ ನಂತರ ಮಹೇಶ್ ಭಟ್ ವಾಪಸ್ ಫೋನ್ ಮಾಡಿದರು. ಗುಲಶನ್ ಕುಮಾರ್ ದಿನವೂ ಮನೆ ಹತ್ತಿರದ ಶಿವಮಂದಿರಕ್ಕೆ ಹೋಗುತ್ತಾನೆ ಎಂಬುದನ್ನು ಖಾತ್ರಿ ಪಡಿಸಿದರು. ನಾನು ತಿಳಿಸಿದ್ದ ಅಪಾಯದ ಬಗೆಗೂ ಅವರಿಗೆ ತಿಳಿಸಿದ್ದರು. ಎಚ್ಚರ ವಹಿಸುವಂತೆ ಹೇಳಿದ್ದರು. ನಾನು ಮಹೇಶ್ ಭಟ್ಟರಿಗೆ ಮತ್ತೊಂದು ಕೆಲಸ ಮಾಡಲು ಹೇಳಿದೆ, 'ನಾನು ಈಗಲೇ ಮುಂಬೈ ಕ್ರೈಂ ಬ್ರಾಂಚಿಗೆ ವಿಷಯ ಮುಟ್ಟಿಸುತ್ತೇನೆ. ಅವರು ಸರಿಯಾದ ರಕ್ಷಣಾ ವ್ಯವಸ್ಥೆ ಮಾಡುತ್ತಾರೆ. ಅಲ್ಲಿಯ ತನಕ ಗುಲಶನ್ ಕುಮಾರರಿಗೆ ಮನೆ ಬಿಟ್ಟು ಹೊರಗೆ ಬಾರಬಾರದು ಎಂದು ತಿಳಿಸಿ.'

ನಂತರ ನಾನು ಮುಂಬೈನ ಕ್ರೈಂ ಬ್ರಾಂಚ್ ವಿಭಾಗಕ್ಕೆ ಕರೆ ಮಾಡಿದೆ. ಎಲ್ಲ ವಿವರ ತಿಳಿಸಿದೆ. ಅವರು ಗುಲಶನ್ ಕುಮಾರರಿಗೆ ಬೇಕಾದ ರಕ್ಷಣೆ ಕೊಟ್ಟರು.

ಇಷ್ಟೆಲ್ಲಾ ಮತ್ತು ಹೀಗೆಲ್ಲಾ ಆದ ನಂತರವೂ ೧೨ ಆಗಸ್ಟ್ ೧೯೯೭ ರಂದು ಗುಲಶನ್ ಕುಮಾರರನ್ನು ಕೊಲೆ ಮಾಡಲಾಯಿತು. ಅದನ್ನು ಕೇಳಿ ನನಗೆ ದೊಡ್ಡ ಆಘಾತ.

ಗುಲಶನ್ ಕುಮಾರ್ ಕೊಲೆಯಾಯಿತು ಎಂದು ಮಾಹಿತಿ ಬಂದಾಗ ನಾನು ಕೇಳಿದ ಮೊದಲ ಪ್ರಶ್ನೆ, 'ಎಲ್ಲಿ?'

'ಅವರು ಶಿವಮಂದಿರದಿಂದ ಹೊರಬರುತ್ತಿದ್ದರು. ಆವಾಗ ಕೊಲ್ಲಲಾಲಗಿದೆ,' ಎನ್ನುವ ಉತ್ತರ ಬಂತು.

'ಅರೇ! ಅದು ಹೇಗೆ ಸಾಧ್ಯ? ಅವರಿಗೆ ಮುಂಬೈ ಪೊಲೀಸ್ ರಕ್ಷಣೆ ಇರಲಿಲ್ಲವೇ?' ಎಂದು ಕೇಳಿದೆ. ಉತ್ತರ ಆ ಕ್ಷಣ ಸಿಗಲಿಲ್ಲ.

ಒಂದೆರೆಡು ಕಡೆ ವಿಚಾರಿಸಿದಾಗ ನಿಜವಾದ ವಿಷಯ ತಿಳಿಯಿತು. ಮೊದಲು ಮುಂಬೈ ಪೊಲೀಸರು ರಕ್ಷಣೆ ಕೊಟ್ಟಿದ್ದರು. ನಂತರ ಗುಲಶನ್ ಕುಮಾರ್ ಉತ್ತರ ಪ್ರದೇಶದ ಪೊಲೀಸ್ ಕಮಾಂಡೋಗಳಿಂದ ರಕ್ಷಣೆ ಪಡೆದುಕೊಂಡರು. ಉತ್ತರ ಪ್ರದೇಶದ ನೋಯಿಡಾದಲ್ಲಿ ಅವರ ದೊಡ್ಡ ಕ್ಯಾಸೆಟ್ ಕಾರ್ಖಾನೆ ಇತ್ತಲ್ಲ. ಹಾಗಾಗಿ ಉತ್ತರ ಪ್ರದೇಶ ಸರ್ಕಾರಕ್ಕೂ ಅವರೊಬ್ಬ ಅಮೂಲ್ಯ ಉದ್ದಿಮೆದಾರ. ಅವರ ರಕ್ಷಣೆ ಉತ್ತರ ಪ್ರದೇಶ ಸರ್ಕಾರದ ಹೊಣೆ ಕೂಡ. ಹಾಗಾಗಿ ಅವರೂ ರಕ್ಷಣೆ ಕೊಟ್ಟಿರಬೇಕು. ಭೂಗತಲೋಕದ ಅಬು ಸಲೇಂ ಕಡೆಯ ಹಂತಕರು ಎಲ್ಲವನ್ನೂ ಗಮನಿಸುತ್ತಿದ್ದರು. ತಮ್ಮ ಯೋಜನೆಯನ್ನು ಕೊಂಚ ಮುಂದೂಡಿದರು. ತಮ್ಮ ಬೇಟೆ ಮೈಮರೆಯುವದನ್ನೇ ಕಾಯುತ್ತಿದ್ದರು. ಒಂದೆರೆಡು ತಿಂಗಳಾದರೂ ತನ್ನ ಮೇಲೆ ಯಾವ ದಾಳಿಯೂ ಆಗಲಿಲ್ಲ ಎಂದು ಗುಲಶನ್ ಕುಮಾರ್ ಕೊಂಚ ನಿರಾಳರಾದರು. ಭದ್ರತೆ ಬಗ್ಗೆ ನಿರ್ಲಕ್ಷ ಮಾಡಿದರು. ಭದ್ರತಾ ಸಿಬ್ಬಂದಿ ಕೂಡ ರಿಲಾಕ್ಸ್ ಆಗಿರಬೇಕು. ಇಂತಹ ಸನ್ನಿವೇಶಕ್ಕಾಗಿಯೇ ಕಾಯುತ್ತಿದ್ದರು ಹಂತಕರು. ಮತ್ತೊಮ್ಮೆ ಮುಹೂರ್ತ ನಿಕ್ಕಿ ಮಾಡಿದರು. ಶಿವಮಂದಿರದ ಮುಂದೆಯೇ ಗುಂಡಿಟ್ಟು ಕೊಂದರು. ಗುಲಶನ್ ಕುಮಾರರನ್ನು ಉದ್ದೇಶಿಸಿ ಹಂತಕರಾಡಿದ ಕೊನೆಯ ಮಾತು - 'ಯೋ! ಇಲ್ಲಿ ಪೂಜೆ ಮಾಡಿದ್ದು ಸಾಕು. ಉಳಿದಿದ್ದನ್ನು 'ಮೇಲೆ' ಹೋಗಿ ಮಾಡು!' ನಂತರ ಮೊರೆದಿದ್ದು ಅವರ ಬಂದೂಕುಗಳು. ಢಮ್! ಢಮ್! ಹದಿನಾರು ಗುಂಡುಗಳನ್ನು ನುಗ್ಗಿಸಿದ್ದರು. ಕ್ಯಾಸೆಟ್ ಕಿಂಗ್ ಖಲ್ಲಾಸ್!

ಇಂತಹದೇ ಮತ್ತೊಂದು ಮಾಹಿತಿಯನ್ನು ನಾನು ಕ್ರೈಂ ಬ್ರಾಂಚ್ ವಿಭಾಗಕ್ಕೆ ಕೊಟ್ಟಿದ್ದೆ. ಬಟ್ಟೆಯ ಮಿಲ್ಲುಗಳ ಕಾರ್ಮಿಕ ನಾಯಕ ಡಾ. ದತ್ತಾ ಸಾಮಂತ್ ಭೂಗತಲೋಕದವರ ನಿಶಾನೆಯಲ್ಲಿ ಬಂದಿದ್ದರು. ಅವರದ್ದೂ ವಿಕೆಟ್ ಸದ್ಯದಲ್ಲೇ ಉರುಳಲಿದೆ ಎನ್ನುವ ಖಚಿತ ಮಾಹಿತಿ ಬೇರೊಂದು ಸಂದರ್ಭದಲ್ಲಿ ನನ್ನ ಮಾಹಿತಿದಾರನೊಬ್ಬ ಕೊಟ್ಟಿದ್ದ. ೧೬ ಜನೆವರಿ ೧೯೯೭ ರಂದು ದತ್ತಾ ಸಾಮಂತರನ್ನು ಗುಂಡಿಟ್ಟು ಕೊಲ್ಲಲಾಯಿತು. ಆ ದಿನ ನಾನು ಕಚೇರಿಯ ಕೆಲಸಕ್ಕೆಂದು ಔರಂಗಾಬಾದಿಗೆ ಹೋಗಿದ್ದೆ. ಆಗ ಫೋನ್ ಬಂತು. ಫೋನ್ ಮೇಲಿದ್ದವರು ಅಂದಿನ ಮುಂಬೈ ಕ್ರೈಂ ಬ್ರಾಂಚಿನ ಚೀಫ್ ರಂಜಿತ್ ಸಿಂಗ್ ಶರ್ಮಾ. 'ನೀವು ಬಂದು ನಮಗೆ ತನಿಖೆಯಲ್ಲಿ ಸಹಾಯ ಮಾಡಬಹುದೇ?' ಎಂದು ಕೇಳಿದ್ದರು. ವಿನಂತಿಸಿಕೊಂಡಿದ್ದರು.

ನನ್ನ ಕಿರಿಯ ಸಹೋದ್ಯೋಗಿಗಳು ನನ್ನ ಕುರಿತು ಸದಾ ತಮಾಷೆ ಮಾಡುತ್ತಿರುತ್ತಾರೆ. 'ಮುಂದಾಗಲಿರುವ ದುರಂತಗಳ ಬಗ್ಗೆ ಭವಿಷ್ಯ ನುಡಿಯುವ ಜ್ಯೋತಿಷಿ ನಮ್ಮ ಮಾರಿಯಾ ಸಾಹೇಬರು!' ಎಂದು.

ಹೀಗೆ ತುಂಬಾ ನಿಖರ ಮಾಹಿತಿ ಕೊಡುವ ಮಾಹಿತಿದಾರರ ಅತ್ಯುತ್ತಮ ಜಾಲವನ್ನು ನಾನು ಹೊಂದಿದ್ದೆ. ಎಲ್ಲೇ ಇರಲಿ, ಏನೇ ಆಗಲಿ ನನಗೆ ಮಾಹಿತಿ ಹರಿದುಬರುತ್ತಲೇ ಇತ್ತು. ಇದರ ಸದುಪಯೋಗ ಮಾಡಿಕೊಳ್ಳಲು ನನ್ನನ್ನು ಮತ್ತೊಮ್ಮೆ ಮುಂಬೈ ಶಹರಕ್ಕೆ ನಿಯೋಜಿಸುವ ಬಗ್ಗೆ ಪ್ರಸ್ತಾವ ಮತ್ತು ಚರ್ಚೆಯಾಗಿತ್ತು.

ಗೃಹಮಂತ್ರಿ ಗೋಪಿನಾಥ ಮುಂಡೆಯವರ ಅಣತಿಯಂತೆ ನಾನು ಹೋಗಿ ಅವರನ್ನು ಭೇಟಿಯಾದೆ. ತೀವ್ರವಾಗಿ ಬೆಳೆಯುತ್ತಿರುವ ಭೂಗತಲೋಕದ ಚಟುವಟಿಕೆಗಳ ಬಗ್ಗೆ ಸರ್ಕಾರ ತುಂಬಾ ಆತಂಕಗೊಂಡಿದೆ ಎಂದು ಮುಂಡೆ ತಿಳಿಸಿದರು. ಉದ್ಯಮಿಗಳು ಅಧೀರರಾಗುತ್ತಿದ್ದಾರೆ ಮತ್ತು ಶುದ್ಧ ಬಿಸಿನೆಸ್ ಶಹರ ಎನ್ನುವ ಮುಂಬೈನ ಪ್ರತಿಷ್ಠೆಗೆ ಕಳಂಕ ಬರುತ್ತಿದೆ ಎನ್ನುವುದರ ಬಗ್ಗೆ ಅವರು ಚಿಂತಿತರಾಗಿದ್ದಾರೆಂದು ತಿಳಿಸಿದರು. ಸರ್ಕಾರ ನನ್ನನ್ನು ಮುಂಬೈ ಶಹರದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ನಾನು ನನ್ನ ಕೆಲಸದಲ್ಲಿ ಯಶಸ್ವಿಯಾಗಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ, ಸರ್ ಎಂದು ಹೇಳಿದೆ.

ಮುಂದಿನ ಮೂರ್ನಾಲ್ಕು ದಿವಸಗಳಲ್ಲಿ ನನ್ನನ್ನು ಮುಂಬೈನ ಅಡಿಷನಲ್ ಕಮಿಷನರ್ ಆಫ್ ಪೊಲೀಸ್ ಎಂದು ನೇಮಕ ಮಾಡಿರುವ ಆದೇಶ ಕೈಸೇರಿತು. ತಕ್ಷಣ ಹೋಗಿ ವರದಿ ಮಾಡಿಕೊಂಡೆ. ಒಬ್ಬ ಹೆಚ್ಚುವರಿ ಆಯುಕ್ತರ ಸೇವೆಯನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವುದು ಸಂಪೂರ್ಣವಾಗಿ ಕಮಿಷನರ್ ಸಾಹೇಬರಿಗೆ ಬಿಟ್ಟಿದ್ದು. ಕಮಿಷನರ್ ರಾನ್ನಿ ಮೆಂಡೋನ್ಸಾ ಅವರನ್ನು ಹೋಗಿ ಭೇಟಿಯಾದೆ. 'ನಿಮ್ಮ ಹೊಸ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು ಎಂದುಕೊಂಡಿದ್ದೀರಿ, ರಾಕೇಶ್?' ಎಂದು ಕೇಳಿದರು ಬಾಸ್ ಮೆಂಡೋನ್ಸಾ. 'ಸರ್, ನೀವು ಬಯಸಿದರೆ ನನ್ನನ್ನು ಕ್ರೈಂ ಬ್ರಾಂಚಿಗೆ ನಿಯುಕ್ತಿ ಮಾಡಿ. ಅಲ್ಲಿನ ಉತ್ಕೃಷ್ಟ ಮೂಲಸೌಕರ್ಯಗಳನ್ನು ಮತ್ತು ನುರಿತ ಮಾನವಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಭೂಗತಲೋಕವನ್ನು ಹಣಿಯಬಹುದು ಸರ್,' ಎಂದು ಸಲಹೆ ನೀಡಿದೆ. ಮೆಂಡೋನ್ಸಾ ಒಂದು ಕ್ಷಣ ವಿಚಾರ ಮಾಡಿದರು. 'ಅದು ಬೇಡ. ನಾನು ನಿಮ್ಮನ್ನು ನೈಋತ್ಯ ವಲಯಕ್ಕೆ ಅಡಿಷನಲ್ ಕಮಿಷನರ್ ಎಂದು ನೇಮಕ ಮಾಡುತ್ತೇನೆ,' ಎಂದರು ಅವರು.

ಸಮಸ್ಯೆಯತ್ತ ವಿಭಿನ್ನವಾಗಿ ನೋಡುವ ಪ್ರಯತ್ನ ಅವರದ್ದಾಗಿತ್ತು. ಮುಂಬೈ ಭೂಗತಲೋಕದ ತಾಯಿಬೇರುಗಳು ಇದ್ದದ್ದೇ ನೈಋತ್ಯ ವಲಯದಲ್ಲಿ. ಬಾಲಿವುಡ್ ಉದ್ಯಮದ ಹೆಚ್ಚಿನ ಭಾಗ ಅಲ್ಲಿತ್ತು. ಹೆಚ್ಚಿನ ಪಾಲು ಬಿಲ್ಡರುಗಳು ಮತ್ತು ಅವರ ಹೊಸ ಹೊಸ ವಸತಿ ಸಮುಚ್ಛಯಗಳ ಯೋಜನೆಗಳು ಕೂಡ ಅಲ್ಲೇ ಇದ್ದವು. ಭೂಗತದಲೋಕದ ಹಫ್ತಾ ವಸೂಲಿ ಮತ್ತು ಗುಂಡಿನ ಚಕಮಕಿಗಳು ಕೂಡ ಹೆಚ್ಚಾಗಿ ಬಾಂದ್ರಾದಿಂದ ದಹಿಸರದ ವರೆಗೆ ಹಬ್ಬಿದ್ದವು.

ನನ್ನ ಮೇಲೆ ತುಂಬಾ ನಿರೀಕ್ಷೆಗಳು ಇದ್ದವು. ಇದು ನನ್ನನ್ನು ತುಂಬಾ ಒತ್ತಡಕ್ಕೆ ದೂಕಿತು. ಆದರೆ ಕೆಲವು ರೀತಿಗಳಲ್ಲಿ ಒಳ್ಳೆಯದೂ ಆಯಿತೆನ್ನಿ. ನಾನು ಮೂಲತಃ ಬಾಂದ್ರಾ ಏರಿಯಾದವನೇ. 'ಮರಳಿ ಗೂಡಿಗೆ' ಎನ್ನುವಂತಹ ಸಂತಸದ ಪೋಸ್ಟಿಂಗ್ ಅದಾಗಿತ್ತು. ತಾಯಿ ಮತ್ತು ಸಹೋದರಿ ಪೂನಂ ಅವರ ಮನೆಗಳು ನನ್ನ ಹೊಸ ಕಚೇರಿಯ ತುಂಬಾ ಹತ್ತಿರದಲ್ಲಿದ್ದವು. ಅವರನ್ನು ಆಗಾಗ ಭೇಟಿಯಾಗಬಹುದು ಎನ್ನುವುದು ಸಂತಸದ ವಿಷಯವಾಗಿತ್ತು.

ನಾನು ಅಂದೇ ಚಾರ್ಜ್ ತೆಗೆದುಕೊಂಡೆ. ಅಂದು ತುಂಬಾ ಬಿಸಿಯಾಗಿದ್ದೆ. ಎಲ್ಲ ಸಿಬ್ಬಂದಿ ಜೊತೆ ಅನೇಕ ಸುದೀರ್ಘವಾದ ಮತ್ತು ವಿವರವಾದ ಸಭೆಗಳನ್ನು ಮಾಡಿದೆ. ಭೂಗತಲೋಕವನ್ನು ಬಗ್ಗು ಬಡಿಯುವ ಬಗ್ಗೆ ಯೋಜನೆಗಳು ರೂಪಿತಗೊಂಡವು. ಎಲ್ಲ ಮುಗಿದಾಗ ಮಧ್ಯರಾತ್ರಿ! ಕಚೇರಿ ಬಿಟ್ಟವನು ಸೀದಾ ಹೋಗಿದ್ದು ಅಮ್ಮನ ಬಳಿ. ತಡರಾತ್ರಿಯಾದರೂ ಅಮ್ಮ ಮಾತ್ರ ಕಾಯುತ್ತಿದ್ದಳು. ಪತ್ನಿ ಪ್ರೀತಿ ಕೂಡ ಅಮ್ಮನ ಮನೆ ತಲುಪಿಕೊಂಡಿದ್ದಳು. ಹೊಸ ಹುದ್ದೆಯ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಅಮ್ಮನ ಆಶೀರ್ವಾದ ಬೇಕಾಗಿತ್ತು.

'ಇನ್ನು ಮುಂದೆ ಹೆಚ್ಚೆಚ್ಚು ನನ್ನನ್ನು ನೋಡಲು ಬರುತ್ತೀ ತಾನೇ!?' ಎಂದಳು ಅಮ್ಮ. ಬಗ್ಗಿ ನಮಸ್ಕರಿಸಿದೆ.

'of course ಅಮ್ಮಾ,' ಎಂದು ಹೇಳಿದೆ. ಮತ್ತು I meant it.

'ಜನರಿಗೆ ಸಹಾಯ ಮಾಡಲೆಂದು ದೇವರು ನಿನಗೆ ಈ ಹುದ್ದೆಯನ್ನು ಕೊಟ್ಟಿದ್ದಾನೆ. ಯಾವಾಗಲೂ ಯಾವುದಕ್ಕೂ ಹೆದರದಿರು. ಏಕೆಂದರೆ ಸತ್ಯ ನಿನ್ನನ್ನು ರಕ್ಷಿಸುವ ಗುರಾಣಿಯಾಗಿರುತ್ತದೆ. ಸತ್ಯಮೇವ ಜಯತೆ,' ಎಂದು ಹೇಳಿದಳು ಅಮ್ಮ. ಆಕೆ ಯಾವಾಗಲೂ ಹೇಳಿದ್ದು ಅದೇ ಮಾತು. ಆದರೆ ಪ್ರತಿಯೊಮ್ಮೆ ಆಕೆ ಆ ಮಾತುಗಳನ್ನು ಹೇಳಿದಾಗ ಅದು ನನ್ನಲ್ಲಿನ ನಿಲುವನ್ನು ಮತ್ತೂ ಧೃಡಗೊಳಿಸುತ್ತಿತ್ತು. ಮತ್ತೆ ಮತ್ತೆ ನನ್ನ ನಿಜವಾದ ಗುರಿಯನ್ನು ಸ್ಪಷ್ಟಪಡಿಸುತ್ತಿತ್ತು. ಮಧ್ಯರಾತ್ರಿಯ ನಂತರ ಮನೆ ಕಡೆ ಹೊರಟರೆ ತಲೆ ತುಂಬಾ ಯೋಚನೆಗಳು ಮತ್ತು ಯೋಜನೆಗಳು. ಹೊಸ ಹುದ್ದೆಯ ಸವಾಲುಗಳನ್ನು ಎದುರಿಸಲು ನಾನು ಉತ್ಸುಕನಾಗಿದ್ದೆ.

ಆರಾಮಾಗಿ ಕುಳಿತು ಯೋಚಿಸಲು ವೇಳೆ ಇರಲಿಲ್ಲ. ಹೊಸ ಹುದ್ದೆಗೆ ಬಂದು ಹದಿನೈದು ದಿನಗಳೂ ಕಳೆದಿರಲಿಲ್ಲ. ಆಗಲೇ ಆಗಿಹೋಯಿತು ಒಂದು ದೊಡ್ಡ ಶೂಟ್ ಔಟ್! ಡಿಸೆಂಬರ್ ೮, ೧೯೯೮ ರಂದು ಅಂಧೇರಿಯಲ್ಲಿ ಇಕ್ಬಾಲ್ ಜುಮ್ಮಾ ಚುನ್ನಾವಾಲಾ ಎನ್ನುವ ಇಪ್ಪತ್ತೆಂಟು ವರ್ಷದ ಯುವೋದ್ಯಮಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಜೊತೆಗೆ ಅವನ ಸೇವಕ ಮಣಿ ಸುಬ್ರಮಣಿಯನ್ ಸ್ವಾಮಿ ಕೂಡ ಖಲ್ಲಾಸ್!

'ಭೂಗತಲೋಕ ನಿಮಗೆ ಸ್ವಾಗತ ಕೋರಿದೆ, ಸಾಬ್!' ಎಂದು ಗಂಭೀರವಾಗಿಯೇ ಹೇಳಿದರು ನನ್ನ ಸಿಬ್ಬಂದಿ. ಅವರೇನೇ ಹೇಳಿದರೂ ನನಗೆ ಖಚಿತವಾಗಿತ್ತು...ಭೂಗತಲೋಕ ನನ್ನನ್ನು ಮತ್ತು ನನ್ನ ಆಳವನ್ನು ಅಳೆಯುತ್ತಿದೆ. ಪರೀಕ್ಷಿಸುತ್ತಿದೆ. ಸಂಶಯವೇ ಬೇಡ!

'ದಾನ ಕೊಡಿ. ಗ್ರಹಣದಿಂದ ಮುಕ್ತರಾಗಿ,' ಇದು ಛೋಟಾ ಶಕೀಲನ ಟ್ಯಾಗ್ ಲೈನ್ ಆಗಿಹೋಗಿತ್ತು.  ಮುಂಬೈನ ಭಿಕ್ಷುಕರು ಗ್ರಹಣದ ಸಮಯದಲ್ಲಿ ಭಿಕ್ಷೆಯೆತ್ತುವಾಗ ಬಳಸುವ ವಾಕ್ಯವನ್ನು ಈ ಭೂಗತಜೀವಿ ಶ್ರೀಮಂತರನ್ನು ಫೋನ್ ಮಾಡಿ ಬೆದರಿಸುವಾಗ ಬಳಸುತ್ತಿದ್ದ. ಭೂಗತಲೋಕವೆಂಬುದು ನಿಮ್ಮನ್ನು ಕಾಡುತ್ತಿರುವ ಗ್ರಹಣವಿದ್ದಂತೆ. ಈ ಗ್ರಹಣದಿಂದ ಮುಕ್ತಿ ಬೇಕಾದರೆ 'ದಾನ' ಕೊಡಿ. ಅಷ್ಟೇ ದಾನವನ್ನು ಹವಾಲಾ ಮೂಲಕ ದುಬೈ ಮುಖಾಂತರ ಕರಾಚಿಗೆ ಕಳಿಸಿಬಿಡಿ. ಈ ಕಡೆ ರೊಕ್ಕ ಬಂದಂತೆ ನಿಮ್ಮ ಗ್ರಹಣ ಕೂಡ ಬಿಡುತ್ತದೆ. ಮುಂಬೈ ಭಿಕ್ಷುಕರ ಟ್ಯಾಗ್ ಲೈನ್ ಉಪಯೋಗಿಸಲು ಅವನಿಗೇನೋ ತಮಾಷೆ. ರೊಕ್ಕ ಕೊಟ್ಟು ಮುಕ್ತಿ ಪಡೆದುಕೊಳ್ಳುವವರಿಗೆ ಪ್ರಾಣ ಸಂಕಟ. ದಾನ ಕೊಡದೇ ಗ್ರಹಣ ಸಂಪೂರ್ಣವಾಗಿ ಆವರಿಸಿಕೊಂಡರೆ ಅಷ್ಟೇ ಮತ್ತೆ! ಮತ್ತದೇ ಗೋಲಿಬಾರ್! ಢಮ್! ಢಮ್!

1998 ರಲ್ಲಿ ಬರೋಬ್ಬರಿ 341 ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ವರದಿಯಾದವು. ಉದ್ಯಮಿಗಳಲ್ಲಿ ಮತ್ತು ಬಾಲಿವುಡ್ ಗಣ್ಯರಲ್ಲಿ ಧೈರ್ಯ ತುಂಬಿ ಭೂಗತಲೋಕದ ಬಗ್ಗೆ ಇದ್ದ ಭಯವನ್ನು ದೂರ ಮಾಡುವುದು ನಮ್ಮ ಪ್ರಮುಖ ಆದ್ಯತೆಯಾಯಿತು. ಸಂಶಯ ಬಂದವರನ್ನು ಪ್ರತಿಬಂಧಕ ಬಂಧನಕ್ಕೆ ಒಳಪಡಿಸಿದೆವು. ಕಠಿಣ ಕಾಯ್ದೆಗಳಡಿ ಬುಕ್ ಮಾಡಿ ಜೈಲಿಗೆ ಕಳಿಸಿದೆವು. 638 ಜನರನ್ನು ಅಂದರ್ ಮಾಡಲಾಯಿತು. ಅಷ್ಟರಮಟ್ಟಿಗೆ ಭೂಗತಲೋಕದ ಕಾಲಾಳುಗಳು ಒಳಗೆ ಹೋಗಿ ಕಿರ್ಕಿರಿ ಕೊಂಚ ಕಮ್ಮಿಯಾಯಿತು. ನನ್ನ ವಲಯದಲ್ಲಿ ಭೂಗತಲೋಕಕ್ಕೆ 'ಶೂನ್ಯ ಸಹಿಷ್ಣುತೆ' (zero tolerance) ಪಾಲಿಸಿ ಜಾರಿಯಲ್ಲಿದೆ ಎನ್ನುವ ಸ್ಪಷ್ಟ ಸಂದೇಶ ಕೂಡ ಭೂಗತಲೋಕಕ್ಕೆ  ಹೋಯಿತು. ಇಂತಹ ಕ್ರಮಗಳು ಕ್ರಮೇಣವಾಗಿ ಫಲ ನೀಡಲಾರಂಭಿಸಿದವು. Tide had begun to turn!

ನನಗೆ ಒಮ್ಮೊಮ್ಮೆ ಅನ್ನಿಸುತ್ತಿತ್ತು- ಈ ಭೂಗತಲೋಕದವರು ಬಾಲಿವುಡ್ಡಿನ ಜನರೊಂದಿಗೆ ಬೆಕ್ಕು ಇಲಿಯ ಚೆಲ್ಲಾಟವಾಡುತ್ತಿದ್ದರೆ ಎಂದು. ಕಳ್ಳ ಬೆಕ್ಕಾದ ಭೂಗತಲೋಕಕ್ಕೆ ಚೆಲ್ಲಾಟವಾದರೆ ತೆರೆ ಮೇಲೆ ಹುಲಿಯಂತೆ ಮೆರೆದರೂ ನಿಜಜೀವನದಲ್ಲಿ ಇಲಿಯಂತಿರುವ ಬಾಲಿವುಡ್ಡಿಗೆ ಪ್ರಾಣ ಸಂಕಟ. ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟ. ದೂರದ ದೇಶದಲ್ಲೆಲ್ಲೋ ಕುಳಿತು ಒಂದು ಫೋನ್ ಕರೆ ಮಾಡಿ ಬಾಲಿವುಡ್ ದಿಗ್ಗಜರನ್ನು ಬಗ್ಗಿಸಿ ಬಾರಿಸುವುದರಲ್ಲಿ ಭೂಗತಲೋಕದದವರಿಗೆ ಅದೇನೋ ತರಹದ ವಿಕೃತಾನಂದ. ಪರದೇಸಿ ಡಾನ್ ಗಳು ತಮಗೆ ಬೇಕಾದ ನಟ ನಟಿಯರಿಗೆ ಅವಕಾಶ ಕೊಡುವಂತೆ ಆಜ್ಞೆ ಮಾಡುತ್ತಿದ್ದರು. ಸಿನೆಮಾದ ಜಾಗತಿಕ ಮಾರಾಟದ ಹಕ್ಕುಗಳನ್ನು ತಮಗೆ ಬೇಕಾದವರಿಗೆ ಬೇಕಾಬಿಟ್ಟಿ ದರಕ್ಕೆ ಮಾರುವಂತೆ ಬೆದರಿಕೆ ಹಾಕುತ್ತಿದ್ದರು. ತಾವು ಇಷ್ಟಪಟ್ಟ ನಟ ನಟಿಯರನ್ನು ತಮಗೆ ಬೇಕಾದ ಹಾಗೆ ವಿದೇಶಗಳಲ್ಲಿರುವ ತಮ್ಮ ನೆಲೆಗಳಿಗೆ ಬಿಂದಾಸಾಗಿ ಕರೆಯಿಸಿಕೊಳ್ಳುತ್ತಿದರು. ತಮ್ಮ ತಾಳಕ್ಕೆ ಕುಣಿಸುತ್ತಿದರು. literally ಕುಣಿಸುತ್ತಿದರು. ಭೂಗತ ಡಾನ್ ಗಳ ಖಾಸಗಿ ಪಾರ್ಟಿಗಳಲ್ಲಿ ಕುಣಿದು ಬಂದ ನಟ ನಟಿಯರು ಬಹಳ ಜನ.

1994 ರಲ್ಲಿ ಆದ ಜಾವೇದ್ ಸಿದ್ದಿಕ್ ಎನ್ನುವ ಬಾಲಿವುಡ್ ನಿರ್ದೇಶಕ ನಿರ್ಮಾಪಕನ ಹತ್ಯೆ ಇದಕ್ಕೊಂದು ಒಳ್ಳೆ ಉದಾಹರಣೆ. ಜಾವೇದ್ ಸಿದ್ದಿಕ್ ಅಷ್ಟೇನೂ ದೊಡ್ಡ ಕುಳನಲ್ಲ. ಏನೋ ಒಂದು ಫಿಲಂ ಮಾಡಲು ಯೋಜನೆ ಹಾಕಿದ. ಬಂತು ದುಬೈನಿಂದ ಫೋನ್! 'ಪಾಕಿಸ್ತಾನಿ ನಟಿ ಅನಿತಾ ಅಯೂಬಳನ್ನು ನಾಯಕಿಯಾಗಿ ಹಾಕಿಕೊಳ್ಳಬೇಕು. ದೂಸರಾ ಮಾತಾಡುವಂತಿಲ್ಲ!' ಪಾಕಿಸ್ತಾನಿ ಸುಂದರಿ ಅನಿತಾ ಅಯೂಬ್ ಆಗಲೇ ದುಬೈ ಭೂಗತದೊರೆಗಳ 'ಆಪ್ತ' ಗೆಳತಿ ಎನ್ನುವ ಪಿಸುಮಾತಿತ್ತು. 'ಅವಳನ್ನು ಹಾಕಿಕೊಂಡರೆ ಫಿಲಂ ಮಕಾಡೆ ಮಲಗಿಬಿಡುತ್ತದೆ. ಲಾಭ ಹೋಗಲಿ ಹಾಕಿದ ಬಂಡವಾಳ ಕೂಡ ವಾಪಸ್ ಬರುವುದಿಲ್ಲ ಭಾಯ್! ಪ್ಲೀಸ್ ಅರ್ಥ ಮಾಡಿಕೋ,' ಎಂದು ಬಡಪಾಯಿ ಜಾವೇದ್ ಸಿದ್ದಿಕ್ ಡಾನ್ ಅಬು ಸಲೇಂ ಎದುರು ಕಷ್ಟ ಹೇಳಿಕೊಂಡ. ಸುಂಕದವನ ಮುಂದೆ ಕಷ್ಟ ಹೇಳಿಕೊಂಡಂತಾಯಿತು. ಇವರೆಲ್ಲಾ ದಪ್ಪ ಚರ್ಮದ ಮಂದಿ ಸರಳವಾಗಿ ಮಾತು ಕೇಳುವುದಿಲ್ಲ. ಎಲ್ಲರಿಗೂ ಒಂದು ಬರೋಬ್ಬರಿ ಪಾಠ ಕಲಿಸಬೇಕು ಎಂದುಕೊಂಡ ಅಬು ಸಲೇಂ ಫೋನೆತ್ತಿಕೊಂಡು ತನ್ನ ಬಂಟರಿಗೆ ಹೇಳಿದ್ದು ಒಂದೇ ಮಾತು. ಉಡಾದೋ ಉಸ್ಕೊ! ಅವನನ್ನು ಉಡಾಯಿಸಿಬಿಡಿ. ಬಾಸ್ ಹೇಳಿದಂತೆ ಬಂಟರು ಜಾವೇದ್ ಸಿದ್ದಿಕನನ್ನು ದಿನ್ದಹಾಡೇ ಗುಂಡಿಟ್ಟು ಕೊಂದರು. ಆಗ ಅವನ ಪತ್ನಿ ಅವನ ಜೊತೆಯಲ್ಲಿದ್ದಳು. ತಾರೀಕು 7 ಜೂನ್ 1994.

ಬಾಲಿವುಡ್ಡಿನ ಜಗಳಗಳೂ ಸಹ ಡಾನ್ ದಾವೂದ್ ಇಬ್ರಾಹಿಮ್ಮನ ನ್ಯಾಯಾಲಯದಲ್ಲಿ ತೀರ್ಮಾನವಾಗತೊಡಗಿದವು. ಇಬ್ಬರು ನಿರ್ಮಾಪಕರ ಎರಡು ಹೊಸ ಸಿನೆಮಾಗಳು ಒಂದೇ ಹೊತ್ತಿಗೆ ಬಿಡುಗಡೆಗೆ ತಯಾರಾದವು. ಯಾರ ಸಿನೆಮಾ ಯಾವಾಗ ಬಿಡುಗಡೆಯಾಗಬೇಕು? ಯಾವ ರೀತಿ ಬಿಡುಗಡೆಯಾದರೆ ಯಾರಿಗೆ ಜಾಸ್ತಿ ಲಾಭ? ನಿರ್ಮಾಪಕರು ಮಾತಾಡಿಕೊಂಡರು. ಜಗಳ ಬಗೆಹರಿಯಲಿಲ್ಲ. ಭೂಗತಲೋಕದ ದೊರೆಯಿಂದ ಬಂತು ಬುಲಾವಾ. 'ಇಬ್ಬರೂ ದುಬೈಗೆ ಬನ್ನಿ. ಕುಳಿತು ಮಾತಾಡೋಣ!' ಬುಲಾವಾ ಬಂದ ಮೇಲೆ ದೂಸರಾ ಮಾತೇ ಇಲ್ಲ. ಇಬ್ಬರೂ ಘಟಾನುಘಟಿ ನಿರ್ಮಾಪಕರು ದುಬೈ ವಿಮಾನ ಹತ್ತಿದರು. ದಾವೂದನ ನ್ಯಾಯಾಲಯದಲ್ಲಿ ದುವಾ ಸಲಾಮಿ ಮಾಡಿಕೊಂಡು, ತಮ್ಮ ತಮ್ಮ ವಾದ ಮಂಡಿಸಿದರು. ದಾವೂದ್ ನಿರ್ಧರಿಸಿದ. ಅಲ್ಲಿಗೆ ಕೇಸ್ ಖತಮ್. ಡಾನ್ ತೀರ್ಪು ಕೊಟ್ಟ ಅಂದರೆ ಮುಗಿಯಿತು. ಅದನ್ನು ಪಾಲಿಸಲೇಬೇಕು. ಯಾಕೆಂದರೆ ಭೂಗತಲೋಕ ನೀಡಿದ ತೀರ್ಪಿಗೆ ಮೇಲ್ಮನವಿ ಸಲ್ಲಿಸುವಂತಿಲ್ಲ. ಎದುರಾಡಿದರೆ ಸೀದಾ 'ಮೇಲೇ' ಹೋಗಬೇಕಾದೀತು! ಜೋಕೆ!

ನಿಮಗೆ ಇನ್ನೊಂದು ತಮಾಷೆಯ ವಿಷಯ ಹೇಳುತ್ತೇನೆ. ಒಮ್ಮೆ ಒಬ್ಬ ಖ್ಯಾತ ಬಾಲಿವುಡ್ ಹೀರೋ ದುಬೈಗೆ ಹೋಗಿದ್ದ. ಅವನಿಗೂ ಬಲಾವಾ ಬಂದಿತ್ತು. ಭಾಯಿ ದಾವೂದನ ಹುಟ್ಟುಹಬ್ಬ. ದಾವತ್ ಇರುತ್ತದೆ. ನೀನು ಬಂದು ಕುಣಿಯಬೇಕು! ಆಯಿತು ಮತ್ತೇನು ಮಾಡಿಯಾನು ಹೀರೋ? ಹೋದ. ಕುಣಿದು ಬಂದ. ದುಬೈನಿಂದ ಹೊರಟವ ಮುಂಬೈ ವಿಮಾನನಿಲ್ದಾಣದಲ್ಲಿ ಇಳಿದು ಹೊರಬಂದರೆ ಕಿಡ್ನಾಪ್ ಮಾಡಲ್ಪಟ್ಟ. ತಲೆಗೆ ಗನ್ನಿಟ್ಟಿದ್ದರು ಮುಂಬೈನ ಲೋಕಲ್ ಭೂಗತರು. ಲೋಕಲ್ ಡಾನ್ ಅರುಣ್ ಗಾವ್ಳಿಗೆ ಎಲ್ಲ ವಿಷಯ ತಿಳಿದಿತ್ತು. ಅವನ ಪರಮಶತ್ರುವಾದ ದಾವೂದನ ದರ್ಬಾರಿನಲ್ಲಿ ಕುಣಿದುಬಂದರಾಯಿತೇ? ತನ್ನ ದರ್ಬಾರಿನಲ್ಲೂ ಕುಣಿಯಬೇಕು ತಾನೇ? ಆ ನಟನನ್ನು ತಲೆಗೆ ಗನ್ನಿಟ್ಟುಕೊಂಡೇ ಅರುಣ್ ಗಾವ್ಳಿಯ ಅಡ್ಡೆಯಾದ ಖತರ್ನಾಕ್ ದಾಗಡಿ ಚಾಳ್ ಗೆ ಕರೆದೊಯ್ಯಲಾಯಿತು. 'ನಮ್ಮದೂ ನವರಾತ್ರಿ ಹಬ್ಬ ನಡೆದಿದೆ. ಇಲ್ಲೂ ಕುಣಿ ಮಗನೇ!' ಎಂದು ನವರಾತ್ರಿ ಪೆಂಡಾಲಿನಲ್ಲಿ ರಾತ್ರಿಯಿಡೀ ಆ ನಟನನ್ನು ಕುಣಿಸಿ ಮಜಾ ತೆಗೆದುಕೊಂಡರು. ಹೀಗೆ ಭೂಗತರ ನಡುವಿನ ದ್ವೇಷದ ಅಡಕತ್ತರಿಯಲ್ಲಿ ಚೂರ್ಚೂರಾಗಿ ಕತ್ತರಿಸಲ್ಪಡುತ್ತಿದ್ದವರು ನಮ್ಮ ಹೀರೋ ನಟನಂತವರು.

ಇನ್ನೊಂದು ಘಟನೆ ನನಗೆ ಬರೋಬ್ಬರಿ ನೆನಪಿದೆ. ತುಂಬಾ ಹಿರಿಯ ಮತ್ತು ಪ್ರತಿಷ್ಠಿತ ನಿರ್ದೇಶಕ ನಿರ್ಮಾಪಕರೊಬ್ಬರು ಒಮ್ಮೆ ನನ್ನ ಕಚೇರಿಗೆ ಬಂದಿದ್ದರು. ಅವರ ಜೊತೆಗೆ ಬುರ್ಖಾ ಧರಿಸಿದ್ದ ಒಬ್ಬ ಮಹಿಳೆ ಕೂಡ ಇದ್ದಳು.

'ಈ ಮಹಿಳೆಯ ಪರವಾಗಿ ನಿಮ್ಮ ಸಹಾಯವನ್ನು ಕೇಳಿಕೊಂಡು ಬಂದಿದ್ದೇನೆ, ಮಿಸ್ಟರ್ ಮಾರಿಯಾ,' ಅಂದರು ಆ ಹಿರಿಯ ಬಾಲಿವುಡ್ ಮನುಷ್ಯ. ಅವರ ಮಾತಿನಿಂದಲೇ ಅರ್ಥವಾಯಿತು ವಿಷಯ ತುಂಬಾ ಗಂಭೀರವಾಗಿದೆ ಎಂದು. ಅವರು ಕಳಿಸಿದ್ದ ಸಂದರ್ಶಕರ ಚೀಟಿ (visitor's slip) ನೋಡಿದೆ. ಜೊತೆಗಿದ್ದ ಬುರ್ಖಾಧಾರಿ ಮಹಿಳೆಯ ಹೆಸರು ಅದರಲ್ಲಿ ಇರಲಿಲ್ಲ.

'ಸರಿ. ಹೇಳಿ. ನಾನು ಹೇಗೆ ನಿಮಗೆ ಸಹಾಯ ಮಾಡಲಿ?' ಎಂದು ಕೇಳಿದೆ.

'ಸರ್, ಈಕೆ ಖ್ಯಾತ ಸಿನೆಮಾ ಮತ್ತು ಟೆಲಿವಿಷನ್ ನಟಿ. ಇವಳಿಗೆ ಇತ್ತೀಚೆಗೆ ಅನೀಸ್ ಇಬ್ರಾಹಿಂನಿಂದ ಬೆದರಿಕೆ ಕರೆಗಳು ಬರುತ್ತಿವೆ. ದೂರು ಕೊಟ್ಟರೆ ಕೊಲ್ಲುವದಾಗಿ ಈಕೆಯನ್ನು ಬೆದರಿಸಿದ್ದಾರೆ. ನಿಮ್ಮನ್ನು ಭೇಟಿ ಮಾಡಲು ಈಕೆ ಸಿದ್ಧಳಿರಲಿಲ್ಲ. ನೀನು ಯಾರಂತ ಯಾರಿಗೂ ಗೊತ್ತಾಗುವುದಿಲ್ಲ ಎನ್ನುವ ಭರವಸೆ ಕೊಟ್ಟು ಕರೆದುಕೊಂಡು ಬಂದಿದ್ದೇನೆ ಸರ್. ನೀವು ಸಹ ಗೌಪ್ಯತೆಯನ್ನು ಕಾಯ್ದುಕೊಳ್ಳಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ. ಇವಳ ಹೆಸರು ಎಲ್ಲೂ ಹೊರಬರಬಾರದು,' ಎಂದರು ಅವರು.

'ಮುದ್ದಾಂ ಸಹಾಯ ಮಾಡೋಣ. ಎಲ್ಲವನ್ನೂ ಗೌಪ್ಯವಾಗಿಯೇ ಇಡೋಣ. ಆದರೆ ನೀವು ಎಲ್ಲ ವಿಷಯವನ್ನೂ ನಮಗೆ ತಿಳಿಸಬೇಕು. ಪೂರ್ತಿ ವಿಷಯ ತಿಳಿಯದಿದ್ದರೆ ಹೇಗೆ ಸಹಾಯ ಮಾಡೋಣ?' ಎಂದು ಭರವಸೆ ನೀಡಿದೆ.

'ಎಷ್ಟು ಹಣ ಡಿಮಾಂಡ್ ಮಾಡುತ್ತಿದ್ದಾನೆ ಆತ (ಅನೀಸ್ ಇಬ್ರಾಹಿಂ)?' ಎಂದು ಕೇಳಿದೆ.

ಮುಂದೆ ಕೆಲವು ಕ್ಷಣ ಯಾರೂ ಮಾತಾಡಲಿಲ್ಲ. ನಂತರ ಆ ಬುರ್ಖಾಧಾರಿ ಮಹಿಳೆ ಮಾತಾಡಿದಳು.

'ಅವನು ದುಡ್ಡಿಗಾಗಿ ಡಿಮಾಂಡ್ ಮಾಡುತ್ತಿಲ್ಲ. ದುಬೈಗೆ ಬರುವಂತೆ ಆಗ್ರಹ ಪಡಿಸುತ್ತಿದ್ದಾನೆ,' ಎಂದಳು ಆಕೆ. ಮುಖವನ್ನು ಮುಚ್ಚಿದ್ದ ಬುರ್ಖಾ ಮಾತ್ರ ತೆಗೆಯಲಿಲ್ಲ.

'ದುಬೈಗೆ ಕರೆಯುತ್ತಿದ್ದಾನೆಯೇ??' ಎಂದು ಕೇಳಿದೆ. ಮುಖದಲ್ಲಿ ಪ್ರಶ್ನೆಯಿತ್ತು. ಆಕೆ ಏನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಮತ್ತು ನಾನು ಈ ವಿಷಯದ ಬಗ್ಗೆ ಏನೆಂದುಕೊಳ್ಳಲು ಶುರು ಮಾಡಿದ್ದೇನೆ ಎರಡೂ ಒಂದೇ ಇರಬಹುದೇ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಬೇಕಿತ್ತು.

'ಅವನ ಜೊತೆ ನಾನು ಮಲಗಬೇಕಂತೆ!' ಎಂದು ಹೇಳಿದಳು. ಆಕೆಗೆ ಮುಂದೆ ಮಾತಾಡಲಾಗಲಿಲ್ಲ. ಬಿಕ್ಕಳಿಸತೊಡಗಿದಳು. ಈಗ ಬುರ್ಖಾ ಪರದೆ ಸರಿಯಿತು. ಮುಖದ ದರ್ಶನವಾಯಿತು. ಆಕೆಯ ಕಣ್ಣಾಲಿಗಳಿಂದ ಪ್ರವಾಹ. ಆಕೆಯೊಬ್ಬ ಪ್ರತಿಷ್ಠಿತ ಮತ್ತು ಸಂಭಾವಿತ ನಟಿಯಾಗಿದ್ದಳು.

'ಸದಾ ಫೋನ್ ಕಾಲ್ ಮೇಲೆ ಫೋನ್ ಕಾಲ್ ಬರುತ್ತಿವೆ. ಅವನಿಗೆ ಇವಳ ಹುಚ್ಚು ಹಿಡಿದಿದೆ. He seems to be obsessed with her. ಇವಳು ಆತ್ಮಹತ್ಯೆಯ ವಿಚಾರ ಕೂಡ ಮಾಡುತ್ತಿದ್ದಳು. ಅದೃಷ್ಟವಶಾತ್ ನನ್ನ ಬಳಿ ಹೇಳಿಕೊಂಡಳು. ಈಗ ಹೇಳಿ ಸರ್. ಇವಳನ್ನು ಹೇಗೆ ರಕ್ಷಿಸಬಹುದು?' ಎಂದರು ಬಾಲಿವುಡ್ಡಿನ ಆ ಹಿರಿಯ ಜೀವಿ. ಅವರು ಅವರಿಬ್ಬರ ಜೀವಗಳನ್ನು ನನ್ನ ತೆಕ್ಕೆಗೆ ಹಾಕಿದ್ದರು. ಪೂರ್ತಿ ನಂಬಿದ್ದರು. ನಾವು ಪೊಲೀಸರು ಕೊಂಚ ಅಜಾಗರೂಕತೆಯಿಂದ ವರ್ತಿಸಿದರೂ ಇಬ್ಬರ ಪ್ರಾಣಕ್ಕೂ ಕುತ್ತು ಬರುತ್ತಿತ್ತು.

'ನಿಮ್ಮ ವಿವೇಕಕ್ಕೆ ಮತ್ತು ಧೈರ್ಯಕ್ಕೆ ಒಂದು ಸಲಾಮ್ ಸರ್. ನೀವು ನಮ್ಮಲ್ಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಏನೆಲ್ಲಾ ಬೇಕೋ ಅದನ್ನು ಮಾಡುತ್ತೇನೆ,' ಎಂದು ಮಾತು ಕೊಟ್ಟೆ.

'ಆದರೆ ಮಿಸ್ಟರ್ ಮಾರಿಯಾ, ನೀವು ಕಂಪ್ಲೇಂಟ್ ದರ್ಜು ಮಾಡಿಕೊಂಡರೆ ನನಗೆ ತುಂಬಾ ತೊಂದರೆಯಾಗುತ್ತದೆ. ಆ ಹೆಚ್ಚಿನ ಒತ್ತಡವನ್ನು ನಾನು ಭರಿಸಲಾರೆ. ದಿನದಿಂದ ದಿನಕ್ಕೆ ನನ್ನ ಖಿನ್ನತೆ ಹೆಚ್ಚಾಗುತ್ತಿದೆ. ಆತ್ಮಹತ್ಯೆಯ ಹೊರತು ನನಗೇನೂ ತೋಚುತ್ತಿಲ್ಲ. ಹೋಗಿ ಅವನ ತೆಕ್ಕೆಯಲ್ಲಿ ಬೀಳುವದಕ್ಕಿಂತ ನನಗೆ ಸಾವೇ ಮೇಲೆನಿಸುತ್ತಿದೆ,' ಎಂದು ಆ ನಟಿ ಪರಿಪರಿಯಾಗಿ ಬೇಡಿಕೊಂಡಳು.

ನನ್ನ ಕೆಲವು ಹಿರಿಯ ಮತ್ತು ಅನುಭವಿ ಸಿಬ್ಬಂದಿಯನ್ನು ಕರೆದು ಈ ವಿಷಯದ ಬಗ್ಗೆ ವಿವರಿಸಿದೆ. ಸೂಕ್ಷ್ಮತೆ ಬಗ್ಗೆ ಹೇಳಿದೆ. ಗೌಪ್ಯತೆ ಬಗ್ಗೆ ಅವರಿಗೆ ಅರಿವಿತ್ತು. ಅವರು ತುಂಬಾ ಚಾಕ್ಯಚಕ್ಯತೆಯಿಂದ ಈ ಮ್ಯಾಟರನ್ನು ನಿಪಟಾಯಿಸಿದರು. ಆ ಪಾಪದ ನಟಿಗೆ ರಹಸ್ಯವಾಗಿ ಎಲ್ಲ ರಕ್ಷಣೆ ನೀಡಲಾಯಿತು. ಅವಳಿಗೂ ತಕ್ಕ ಮಟ್ಟಿನ ಧೈರ್ಯ ಬಂದಿತು. ತೀವ್ರ ಖಿನ್ನತೆಗೆ ಜಾರಿದ್ದ ಆಕೆ ಚೇತರಿಸಿಕೊಂಡಳು. ಅವಳ ಮಾನ ಮತ್ತು ಪ್ರಾಣ ಎರಡನ್ನೂ ಕಾಪಾಡುವಲ್ಲಿ ಯಶಸ್ವಿಯಾಗಿದ್ದೆವು. ಅದರ ಬಗ್ಗೆ ಹೆಮ್ಮೆ ಇದೆ. ಆದರೆ ವೃತ್ತಿಯ ಅನಿವಾರ್ಯತೆಗಳು ಇರುತ್ತವೆ ನೋಡಿ. ಇಂತಹ ಯಶಸ್ಸನ್ನು ಬಹಿರಂಗವಾಗಿ ಸಂಭ್ರಮಿಸುವಂತಿಲ್ಲ.

ಹೀಗೆ ಭೂಗತಲೋಕದ ಕಬಂಧಬಾಹುಗಳು ಬಾಲಿವುಡ್ಡಿನ ಎಲ್ಲ ಕಡೆ ಚಾಚಿಕೊಂಡಿವೆ. ಎಲ್ಲಿ ಹೇಗೆ ಏನನ್ನು ತಟ್ಟಿದರೆ ಏನು ಹೇಗೆ ಉದುರುತ್ತದೆ ಎನ್ನುವುದು ಭೂಗತಲೋಕದ ಖೂಳರಿಗೆ ಬರೋಬ್ಬರಿ ಗೊತ್ತಿದೆ. ಹಾಗಾಗಿ ತಟ್ಟಿ ತಟ್ಟಿ ಮಜಾ ತೆಗೆದುಕೊಳ್ಳುತ್ತಾರೆ. ಜೊತೆಗೆ ರೊಕ್ಕ ಮಾಡಿಕೊಳ್ಳುತ್ತಾರೆ.

ಬಾಲಿವುಡ್ಡಿನ ದೊಡ್ಡ ದೊಡ್ಡ ಮನುಷ್ಯರಿಂದ ಹಿಡಿದು ಸಣ್ಣ ಪುಟ್ಟ ನಟ ನಟಿಯರ ಜೊತೆ ನಾನು ಸದಾ ಸಂಪರ್ಕದಲ್ಲಿ ಇರುತ್ತಿದ್ದೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ.

'ಭೂಗತಲೋಕದ ಡಿಮಾಂಡುಗಳಿಗೆ ತಲೆಬಾಗಬೇಡಿ. ಧೈರ್ಯದಿಂದ ದೂರು ಕೊಡಿ. ನಾವು ನಿಮಗೆ ರಕ್ಷಣೆ ಕೊಡುತ್ತೇವೆ,' ಎನ್ನುವುದು ಬಾಲಿವುಡ್ ಜನರಿಗೆ ನನ್ನ ಸದಾ ವಿನಂತಿ ಮತ್ತು ಸಲಹೆಯಾಗಿತ್ತು. ಇದನ್ನು ಹೇಳುವುದು ಸುಲಭ. ಆದರೆ ಆಚರಣೆಯಲ್ಲಿ ತರುವುದು ತುಂಬಾ ಕಷ್ಟ ಎಂದು ಗೊತ್ತಿತ್ತು. ಸಾಮಾನ್ಯರು ಭೂಗತಲೋಕದ ಉಪಟಳವನ್ನು ಸಹಿಸುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಅವರಿಗೆ ಅವರ ಜೀವದ ಮತ್ತು ಅವರ ಪ್ರೀತಿಪಾತ್ರರ ಜೀವದ ಬಗ್ಗೆಯೇ ಚಿಂತೆ. ಅದು ಸಹಜ ಕೂಡ. ಆದರೆ ಬಾಲಿವುಡ್ಡಿನ ಕೆಲವು ಹಿರಿತಲೆಗಳಾದ ಯಶ್ ಚೋಪ್ರಾ, ರಮೇಶ್ ಸಿಪ್ಪಿ, ಮಹೇಶ್ ಭಟ್, ವಿಧು ವಿನೋದ್ ಚೋಪ್ರಾ, ಮನಮೋಹನ್ ದೇಸಾಯಿ ಮುಂತಾದವರು ಭೂಗತಲೋಕದ ಬೆದರಿಕೆಗಳಿಗೆ ಅಷ್ಟಾಗಿ ಜಗ್ಗಲಿಲ್ಲ. ದೂರು ಕೊಟ್ಟರು. ನಾವು ಅವರನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯೂ ಆದೆವು. ನನ್ನ ದೃಷ್ಟಿಯಲ್ಲಿ ಅಂಥವರು ಬಾಲಿವುಡ್ಡಿನ ನಿಜವಾದ ಹೀರೋಗಳು!

ನಾನು ಈ ಹುದ್ದೆಗೆ ಬಂದು ಹದಿಮೂರು ತಿಂಗಳಾಗಿದ್ದವು. ಸಾಧಾರಣವಾಗಿ ಎರಡು ವರ್ಷಗಳ ಪೋಸ್ಟಿಂಗ್ ಇರುತ್ತದೆ. ಅದೇ ಹೊತ್ತಿಗೆ ಸರಕಾರ ಬದಲಾಯಿತು. ಭಾಜಪ - ಶಿವಸೇನೆ ಮನೆಗೆ ಹೋದವು. NCP - ಕಾಂಗ್ರೆಸ್ ಅಧಿಕಾರ ಹಿಡಿಯಿತು. ಆ ಹೊತ್ತಿಗೆ ನನ್ನ ಏರಿಯಾದಲ್ಲಿ ಒಂದು ಚಿಕ್ಕ ಗಲಾಟೆ ನಡೆಯಿತು. ಸಾಮಾನ್ಯವಾಗಿ ಬಾರುಗಳಲ್ಲಿ ನಡೆಯುವ ಘಟನೆ. ತಿಂದು ಕುಡಿದು ಬಿಲ್ ಕೊಡದೆ ಪರಾರಿಯಾಗಲು ಯತ್ನಿಸಿದ್ದರು ಪೊರ್ಕಿಗಳು. ಬಾರಿನವರು ಆಕ್ಷೇಪಿಸಿದ್ದರು. ಪೊರ್ಕಿಗಳು ಹೋಗಿ ತಮ್ಮ ಗ್ಯಾಂಗ್ ಕರೆದುಕೊಂಡು ಬಂದು ಬಾರಿನಲ್ಲಿ ತೋಡ್ ಪೋಡ್ ಮಾಡಿ ದಾಂಧಲೆ ಎಬ್ಬಿಸಿದ್ದರು.

ಪೊರ್ಕಿಗಳ ಮೇಲೆ ಕೇಸ್ ಹಾಕಿ ಕ್ರಮ ಕೈಗೊಳ್ಳುವಂತೆ ಹೇಳಿದ್ದೇ ತಪ್ಪಾಯಿತು ಎಂದು ಕಾಣುತ್ತದೆ. ಪೊರ್ಕಿಗಳು ಅಂದಿನ ಹೊಸ ಗೃಹಮಂತ್ರಿಗಳಿಗೆ 'ಸಮೀಪ'ದವರಾಗಿದ್ದರಂತೆ. ಕೇಸ್ ಹಾಕದೇ ಇರಲು ಒತ್ತಡ ಬಂತು. ನಾನು ಕ್ಯಾರೇ ಮಾಡಲಿಲ್ಲ. ಆಗ ಹರಿದಾಡತೊಡಗಿತು ನನ್ನ ವರ್ಗಾವಣೆಯ ಬಗ್ಗೆ ಗುಸುಗುಸು ಪಿಸುಮಾತು.

ಮಕ್ಕಳ ರಜೆಗಳು ಬಂದಿದ್ದವು. ಅವರಿಗೆ ಮಾಡಿದ ಪ್ರಾಮಿಸ್ ಉಳಿಸಿಕೊಳ್ಳಬೇಕಿತ್ತು. ಹಾಗಾಗಿ ಮೊದಲೇ ನಿರ್ಧರಿಸಿದಂತೆ ರಜೆ ಮೇಲೆ ತೆರಳಲು ನಿರ್ಧರಿಸಿದೆ. ಬಾಸ್ ಮೆಂಡೋನ್ಸಾ ಹೇಳಿದರು, 'ರಜೆಯಲ್ಲಿದ್ದಾಗ ನಿನ್ನನ್ನು ವರ್ಗಾವಣೆ ಮಾಡಬಹುದು. ಅದು ಚೆನ್ನಾಗಿರಲ್ಲ. ನಂತರ ಬೇಕಾದರೆ ರಜೆ ತೆಗೆದುಕೋ.'

'ವರ್ಗಾವಣೆ ಆಗುವುದಿದ್ದರೆ ಆಗೇ ಆಗುತ್ತದೆ ಸರ್. ಕುಟುಂಬಕ್ಕೆ ಮಾಡಿದ ಪ್ರಾಮಿಸ್ ಉಳಿಸಿಕೊಳ್ಳಬೇಕಿದೆ. ಪೂರ್ವನಿರ್ಧರಿತ ರಜೆ ಮೇಲೆ ಹೋಗಲು ಅನುಮತಿ ಕೊಡಿ,' ಎಂದೆ. ರಜೆ ಮೇಲೆ ಹೋದೆ. ಒಂದು ರಜೆ ವಿಶ್ರಾಂತಿ ನಿಜವಾಗಿಯೂ ಬೇಕಾಗಿತ್ತು.

ನಿರೀಕ್ಷಿಸಿದಂತೆ ರಜೆಯಲ್ಲಿದ್ದಾಗ ವರ್ಗಾವಣೆಯ ಆದೇಶ ಬಂತು. ಎರಡು ವರ್ಷ ಇರಬೇಕಾದವನು ಹದಿಮೂರು ತಿಂಗಳಲ್ಲೇ ಎತ್ತಂಗಡಿಯಾಗಿದ್ದೆ.

ರೈಲ್ವೆ ಪೊಲೀಸ್ ಇಲಾಖೆಯ ಕಮಿಷನರ್ ಪೋಸ್ಟ್ ನನಗಾಗಿ ಕಾಯುತ್ತಿತ್ತು. ಅದರ ಸವಾಲುಗಳಿಗೆ ತಯಾರಾಗತೊಡಗಿದೆ.

ಹೀಗೆ ತಮ್ಮ ಜೀವನಕಥನದ ಒಂದು ಅಧ್ಯಾಯದ ಕಥೆ ಹೇಳಿ ಮುಗಿಸುತ್ತಾರೆ ಸೂಪರ್ ಕಾಪ್ ರಾಕೇಶ್ ಮಾರಿಯಾ.

ಮಾಹಿತಿ ಮೂಲ: ಸೂಪರ್ ಕಾಪ್ ರಾಕೇಶ್ ಮಾರಿಯಾ ನಿವೃತ್ತಿಯ ನಂತರ ಬರೆದುಕೊಂಡಿರುವ, tell-it-all ಮಾದರಿಯ, ಜೀವನಕಥನ - Let Me Say It Now by Rakesh Maria.

ಮೂಲ ಪುಸ್ತಕಕ್ಕೆ ಹೋಲಿಸಿದರೆ ಈ ಬ್ಲಾಗ್ ಲೇಖನ ಬರೆಯುವಾಗ ಶೈಲಿ ಬದಲಾಗಿರಬಹುದು. ಪುಸ್ತಕದ ಭಾಷಾಂತರ ಉದ್ದೇಶವಲ್ಲ. ಒಂದು ಒಳ್ಳೆಯ ಪುಸ್ತಕವನ್ನು ಪರಿಚಯಿಸುವ ಉದ್ದೇಶ ಮತ್ತು ಪ್ರಯತ್ನ ಮಾತ್ರ.

ಕೆಲವು ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲ, ರಾಕೇಶ್ ಮಾರಿಯಾ ಬಗ್ಗೆ ಹಿಂದೆ ಬರೆದಿದ್ದ ಬ್ಲಾಗ್ ಲೇಖನಗಳು, ಇತರೆ ಪುಸ್ತಕಗಳು, ಸಿನೆಮಾಗಳು, ಮುಂತಾದವುಗಳಿಂದ ಆರಿಸಿದ್ದು.

ಮತ್ತೂ ಹೆಚ್ಚಿನ ಮಾಹಿತಿಗೆ 'ಓಂ ಗೂಗಲ್ಲಾಯ ನಮಃ' ಮಂತ್ರ ಪಠಿಸಿ. :)

ರಾಕೇಶ್ ಮಾರಿಯಾ ಬಗ್ಗೆ ಬರೆದಿದ್ದ ಹಳೆಯ ಬ್ಲಾಗ್ ಲೇಖಗಳು:

** ಸೂಪರ್ ಕಾಪ್ ರಾಕೇಶ ಮಾರಿಯಾ ಈಗ ಮುಂಬೈನ ಟಾಪ್ ಕಾಪ್

** ರಾಹುಲ್ ಭಟ್ ಬುಡಕ್ಕೆ ಬಿಸಿ, ಮಹೇಶ್ ಭಟ್ ಮಂಡೆ ಬಿಸಿ

Wednesday, July 22, 2020

ಆಪರೇಷನ್ ಒಪೇರಾ...ಇರಾಕಿನ ಅಣುಸ್ಥಾವರದ ಮೇಲೆ ಇಸ್ರೇಲಿನ ರೋಚಕ ಕಾರ್ಯಾಚರಣೆ

ಆ ದಿನ ಶುಕ್ರವಾರ, ಜೂನ್ ೭, ೧೯೮೧.  ಅಂದು ಯಹೂದಿಗಳಿಗೆ ಹಬ್ಬದ ದಿನ. ಗತಕಾಲದಲ್ಲಿ ಆ ದಿನವೇ ದೇವರು ಯಹೂದಿಗಳಿಗೆ ಸೈನೈ ಪರ್ವತದ ಮೇಲೆ ಅವರ ಧರ್ಮಗ್ರಂಥವಾದ 'ತೋರಾ'ವನ್ನು ದಯಪಾಲಿಸಿದ ಎಂದು ಯಹೂದಿಗಳು ನಂಬುತ್ತಾರೆ. ಆ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ. ಹಲವಾರು ಇಸ್ರೇಲಿಗಳು ಅಂದು ತಮ್ಮ ದೇವಾಲಯಗಳಲ್ಲಿ ನೆರೆದಿದ್ದರು. ಮತ್ತೆ ಅನೇಕರು ಇಸ್ರೇಲಿನ ಬಂಗಾರದಂತಹ ಮರಳುಳ್ಳ ಸಮುದ್ರತಟದ ಬೀಚುಗಳಲ್ಲಿ ಬೋರಲು ಬಿದ್ದು ಮಜಾ  ಮಾಡುತ್ತಿದ್ದರು.

ಮಧ್ಯಾಹ್ನ ಸುಮಾರು ೪ ಘಂಟೆ ಹೊತ್ತಿಗೆ ನೆತ್ತಿ ಮೇಲೆ ಒಮ್ಮೆಲೇ ಹಾರಿಹೋದವು ಇಸ್ರೇಲಿ ವಾಯುಪಡೆಯ ಅಮೇರಿಕಿ ನಿರ್ಮಿತ ಅತ್ಯಾಧುನಿಕ ಎಂಟು F-16 ಯುದ್ಧವಿಮಾನಗಳು. ಇಸ್ರೇಲಿನ ಎಲಿಯಾಟ್ ಕೊಲ್ಲಿಯನ್ನು ದಾಟಿ ಸೌದಿ ಅರೇಬಿಯಾದತ್ತ ವಿಮಾನಗಳು ಹಾರಿದ್ದನ್ನು ಬೀಚುಗಳ ಮೇಲಿದ್ದವರು ಗಮನಿಸದೇ ಇರಲು ಸಾಧ್ಯವಿರಲಿಲ್ಲ.

ಆ F-16 ವಿಮಾನಗಳು ಇಸ್ರೇಲಿನ ಸೈನೈ ಪ್ರದೇಶದಲ್ಲಿರುವ ಎಟ್ಜಿಯಾನ್ ವಾಯುನೆಲೆಯಿಂದ ಹಾರಿದ್ದವು. ಅವುಗಳ ಹಿಂದೆಯೇ ಅವುಗಳ ಅಂಗರಕ್ಷರೋ ಎಂಬಂತೆ ಭಯಂಕರ sonic boom ಮಾಡುತ್ತ ಮುಗಿಲಿಗೆ ಲಗ್ಗೆ ಹಾಕಿದವು ಹೆಚ್ಚಿನ ಎಂಟು F-15 ಫೈಟರ್ ವಿಮಾನಗಳು. ಒಟ್ಟಿನಲ್ಲಿ ಹದಿನಾರು ಡೆಡ್ಲಿ ಯುದ್ಧವಿಮಾನಗಳ ಮೆರವಣಿಗೆ ಎಲ್ಲೋ ಹೊರಟಿತ್ತು. ಎಲ್ಲೇನು ಮಟಾಷ್ ಆಗಲಿತ್ತೋ ಆವತ್ತು!?

ಜೋರ್ಡಾನ್ ಇಸ್ರೇಲಿನ ಪಕ್ಕದ ದೇಶ. ಅಂದು ಅದೇನು ಕಾಕತಾಳಿಯವೋ ಗೊತ್ತಿಲ್ಲ. ಜೋರ್ಡಾನ್ ದೇಶದ ರಾಜ ಕಿಂಗ್ ಹುಸೇನ್ ಅದೇ ಹೊತ್ತಿಗೆ ತಮ್ಮ ಐಷಾರಾಮಿ ರಾಯಲ್ ಹಡಗಿನಲ್ಲಿ ಸಮುದ್ರವಿಹಾರ ಮಾಡಿಕೊಂಡಿದ್ದರು. ಹೇಳಿಕೇಳಿ ಮಹಾರಾಜರು. ಅವರ ಬಳಿ ಹತ್ತಾರು ರಾಯಲ್ ಹಡಗುಗಳು, ದೋಣಿಗಳು ಇದ್ದವು. ಎಲ್ಲ ವ್ಯವಸ್ಥೆ ಹೊಂದಿರುವಂತಹವು. ದೇಶವಿದೇಶದ ಸಖಿಯರನ್ನು ಒಟ್ಟಾಕಿಕೊಂಡು ಕೆಂಪು ಸಮುದ್ರದ ಎಲಿಯಾಟ್ ಕೊಲ್ಲಿಯಲ್ಲಿ ಮೀನು ಹಿಡಿಯುವದೆಂದರೆ ಮಹಾರಾಜರಿಗೆ ಖುಷಿಯೋ ಖುಷಿ. ಅಂತಹ ಖುಷಿಯಲ್ಲಿದ್ದರೂ ಅವರೂ ಸಹ ತಲೆ ಮೇಲೆ ಹತ್ತಾರು ಇಸ್ರೇಲಿ ಯುದ್ಧವಿಮಾನಗಳು ಹಾರಿಹೋಗಿದ್ದನ್ನು ಗಮನಿಸದಿರಲಿಲ್ಲ.

ಬೇರೆ ಅರಬ್ ದೇಶಗಳಿಗೆ ಹೋಲಿಸಿದರೆ ಇಸ್ರೇಲ್ ಮತ್ತು ಜೋರ್ಡನ್ ನಡುವೆ ಸಂಬಂಧ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೂ ಮೊದಲು ಬೇಕಾದಷ್ಟು ಸಲ ಯುದ್ಧವಾಗಿತ್ತು ಕೂಡ. ಯಾವುದಕ್ಕೂ ಸೇಫ್ಟಿಗೆ ಇರಲಿ ಎಂದು ವಿಚಾರ ಮಾಡಿದ ಕಿಂಗ್ ಹುಸೇನ್ ಮಾಡಿದ ಮೊದಲ ಕೆಲಸವೆಂದರೆ ಸೀದಾ ತಮ್ಮ ಐಷಾರಾಮಿ ಹಡಗಿನ ರೇಡಿಯೋ ರೂಮಿಗೆ ಹೋಗಿದ್ದು. ಅಲ್ಲಿ ವಯರ್ಲೆಸ್ ಸೆಟ್ ಎತ್ತಿಕೊಂಡವರೇ ತಮ್ಮ ಸೇನೆಗೆ ಸುದ್ದಿ ಮುಟ್ಟಿಸಿದರು...'ಇಸ್ರೇಲಿ ಯುದ್ಧವಿಮಾನಗಳು ಆಕಾಶಕ್ಕೇರಿವೆ. ಯಾವುದಕ್ಕೂ ಎಚ್ಚರ ವಹಿಸಿ. ಈ ಮಾಹಿತಿಯನ್ನು ಸುತ್ತಮುತ್ತಲಿನ ನಮ್ಮ ಇತರೇ ಅರಬ್ ಮಿತ್ರ ದೇಶಗಳೊಂದಿಗೆ ಹಂಚಿಕೊಳ್ಳಿ!'

ಯಾಕೋ ಏನೋ ಗೊತ್ತಿಲ್ಲ. ಈ ಮಾಹಿತಿಯನ್ನು ಸ್ವೀಕರಿಸಿದ ಜೋರ್ಡನ್ ಸೇನೆಯ ಕಂಟ್ರೋಲ್ ರೂಮ್ ಸಿಬ್ಬಂದಿ ಇದನ್ನು ಯಾರೊಂದಿಗೂ ಹಂಚಿಕೊಳ್ಳಲೇ ಇಲ್ಲ.  ದಿನನಿತ್ಯ ಬರುವಂತಹ ಅನೇಕ ರೂಟೀನ್ ಮಾಹಿತಿಗಳಲ್ಲಿ ಇದೂ ಒಂದಿರಬಹುದು ಎಂದುಕೊಂಡರೋ ಏನೋ. ಒಟ್ಟಿನಲ್ಲಿ ಇಸ್ರೇಲಿ ಯುದ್ಧವಿಮಾನಗಳು ತರಾತುರಿಯಲ್ಲಿ ಕೆಂಪು ಸಮುದ್ರದ ಮೇಲೆ ಹಾರಿಹೋಗಿದ್ದು ಸುದ್ದಿಯಾಗಲೇ ಇಲ್ಲ. ಮಾಹಿತಿಯನ್ನು ಅಕ್ಕಪಕ್ಕದ ದೇಶಗಳೊಡನೆ ಹಂಚಿಕೊಳ್ಳಲೇ ಇಲ್ಲ.

ಅದು ಒಳ್ಳೆಯದೇ ಆಯಿತು. ಅಂದು ಅದೃಷ್ಟಲಕ್ಷ್ಮಿ ಇಸ್ರೇಲಿಗಳ ಪಕ್ಷದಲ್ಲಿ ಇದ್ದಳು ಅಂತ ಕಾಣುತ್ತದೆ. ಏಕೆಂದರೆ ಆ ಹದಿನಾರು ಇಸ್ರೇಲಿ ಯುದ್ಧವಿಮಾನಗಳು ಸುಖಾಸುಮ್ಮನೆ ಗಗನಕ್ಕೆ ಚಿಮ್ಮಿರಲಿಲ್ಲ. ಆವತ್ತಿನ ಕಾರ್ಯಾಚರಣೆ ಬಹು ಮುಖ್ಯವಾದ ಕಾರ್ಯಾಚರಣೆಯಾಗಿತ್ತು. ಅದರ ಕೋಡ್ ನೇಮ್ ಆಪರೇಷನ್ ಒಪೇರಾ. ಉದ್ದೇಶ ಸ್ಪಷ್ಟವಾಗಿತ್ತು. ಇರಾಕಿನಲ್ಲಿ ಸದ್ದಾಮ ಹುಸೇನ್ ನಿರ್ಮಿಸುತ್ತಿದ್ದ ಅಣುಸ್ಥಾವರವನ್ನು ನೆಲಸಮ ಮಾಡುವುದು ಮತ್ತು ಯಾವುದೇ ಹಾನಿಯಿಲ್ಲದಂತೆ ವಾಪಸ್ ಇಸ್ರೇಲ್ ತಲುಪಿಕೊಳ್ಳುವುದು.

ಇಂತಹದೊಂದು ರಹಸ್ಯ ಮತ್ತು ಖತರ್ನಾಕ್ ವೈಮಾನಿಕ ಕಾರ್ಯಾಚರಣೆಗೆ ತಯಾರಿ ಕೆಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ೧೯೭೬ ರಲ್ಲಿ ಇರಾಕ್ ದೇಶ ಫ್ರಾನ್ಸ್ ದೇಶದೊಂದಿಗೆ ಅಣುಸ್ಥಾವರದ ನಿರ್ಮಾಣಕ್ಕಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಫ್ರೆಂಚರು ಆ ಅಣುಸ್ಥಾವರಕ್ಕೆ ಒಸಿರಾಕ್ ಎಂದು ಕರೆದರೆ ಇರಾಕಿಗಳು ತಾಮೂಜ್ ಎಂದು ನಾಮಕರಣ ಮಾಡಿಕೊಂಡಿದ್ದರು. ಇರಾಕಿನ ಅಪಾರ ಪೆಟ್ರೋಲ್ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದ ಆಸೆಬುರುಕ ಫ್ರೆಂಚರು ಇರಾಕಿಗಳಿಗೆ ಆಟಂ ಬಾಂಬ್ ಮಾಡಲು ಬೇಕಾಗುವಷ್ಟು ಯುರೇನಿಯಂ ಕೂಡ ಕೊಡುವದಾಗಿ ಹೇಳಿದ್ದರು.

ಈ ವಿಷಯವನ್ನು ಇರಾಕ್ ಮತ್ತು ಫ್ರಾನ್ಸ್ ಅದೆಷ್ಟೇ ಗುಪ್ತವಾಗಿ ಇಡಲು ಯತ್ನಿಸಿದರೂ ಇಸ್ರೇಲಿನ ಖಡಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಇದರ ಮಾಹಿತಿಯನ್ನು ಬಹುಬೇಗನೆ ಸಂಪಾದಿಸಿ ಸರ್ಕಾರಕ್ಕೆ ಮುಟ್ಟಿಸಿತ್ತು. ಇಸ್ರೇಲ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾಕಿಗೆ ಅಣುಸ್ಥಾವರ ಸಿಗುವುದನ್ನು ತಪ್ಪಿಸಲು ನೋಡಿತು. ತಲೆಕೆಟ್ಟ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಅಣುಶಕ್ತಿಯನ್ನು ಗಳಿಸುತ್ತಾನೆ ಎಂದರೆ ಅದು ಇಸ್ರೇಲಿನ ಅಸ್ತಿತ್ವದ ಬುಡಕ್ಕೇ ಬಾಂಬಿಟ್ಟಂತೆ. ಅದನ್ನು ತಡೆಗಟ್ಟಿ ಎಂದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಜಾಗಟೆ ಬಾರಿಸಿತು ಇಸ್ರೇಲ್. ರೊಕ್ಕ ಮಾಡುವ ತರಾತುರಿಯಲ್ಲಿದ್ದ ಫ್ರೆಂಚರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರು ಸದ್ದಾಮ್ ಹುಸೇನನ್ನು ನುಣ್ಣಗೆ ಬೋಳಿಸುವಲ್ಲೇ ಮಗ್ನರು. ಅವನಿಗೋ ರೊಕ್ಕವೆಂಬುವುದು ಕರಡಿ ಮೈಮೇಲಿನ ಕೂದಲಿದ್ದಂತೆ. ಫ್ರೆಂಚರು ಬೋಳಿಸಿದಷ್ಟೂ ಬೆಳೆಯುತ್ತಿತ್ತು. ಒಟ್ಟಿನಲ್ಲಿ ಇಸ್ರೇಲಿಗಳ ಆಕ್ಷೇಪಣೆ  ಅರಣ್ಯರೋದನವಾಯಿತೇ ವಿನಃ ಮತ್ತೇನೂ ಉಪಯೋಗವಾಗಲಿಲ್ಲ.

ಆಗ ಮೊಸ್ಸಾದ್ ಕಾರ್ಯಾಚರಣೆಗೆ ಇಳಿಯಿತು. ನುರಿತ ಗೂಢಚಾರರನ್ನು ಉಪಯೋಗಿಸಿಕೊಂಡು ಫ್ರೆಂಚ್ ದೇಶದಿಂದ ಇರಾಕಿಗೆ ಹೋಗಬೇಕಾಗಿದ್ದ ಅಣುಸ್ಥಾವರದ ಉಪಕರಣಗಳನ್ನು ರಹಸ್ಯವಾಗಿ ಹಾಳುಮಾಡಿತು. ಸದ್ದಾಮ ಹುಸೇನ್ ಹೆಚ್ಚಿನ ರೊಕ್ಕ ಕೊಟ್ಟು ಅವುಗಳ ದುರಸ್ತಿ ಮಾಡಿಸಿಕೊಂಡ. ಹೆಚ್ಚಿನ ರಕ್ಷಣಾವ್ಯವಸ್ಥೆ ಮಾಡಿಸಿಕೊಂಡು ಇರಾಕಿಗೆ ತರಿಸಿಕೊಂಡ. ಸಣ್ಣ ಸಣ್ಣ ಕಾರ್ಯಾಚರಣೆಗಳ ಮೂಲಕ ಸದ್ದಾಮ ಹುಸೇನನ ಯೋಜನೆಗೆ ಭಂಗ ತರುವುದು ಎಂದರೆ ಆನೆಯನ್ನು ಸೂಜಿಯಿಂದ ಚುಚ್ಚಿ ಚುಚ್ಚಿ ಕೊಲ್ಲಲು ಪ್ರಯತ್ನಿಸಿದಂತೆ ಎಂದು ಇಸ್ರೇಲಿಗೆ ಮನವರಿಕೆ ಆಯಿತು. ಆನೆಯನ್ನು ನೆಲಕ್ಕೆ ಉರುಳಿಸಬೇಕು ಅಂದರೆ ನಡುನೆತ್ತಿಗೆ ಬರೋಬ್ಬರಿ ಗುರಿಯಿಟ್ಟು ದೊಡ್ಡ ಕಾಡತೂಸನ್ನೇ ಹೊಡೆಯಬೇಕು. ಬಾಕಿ ಎಲ್ಲ ವ್ಯರ್ಥ ಪ್ರಯತ್ನ ಎಂದು ಮನದಟ್ಟಾಯಿತು ಇಸ್ರೇಲಿಗೆ.

೧೯೭೭ ರಲ್ಲಿ ಮೇನಾಕೇಮ್ ಬೆಗಿನ್ ಇಸ್ರೇಲಿನ ಪ್ರಧಾನಿ. ಭಯಂಕರ ಖಡಕ್ ಮನುಷ್ಯ. ರಕ್ಷಣಾ ಸಚಿವ ಯೇಜರ್ ವೈಸಮನ್ ಮತ್ತು ಸೇನಾಪಡೆಗಳ ಮುಖ್ಯಸ್ಥ ರಾಫುಲ್ ಏಟಾನ್ ಕೂಡ ಅಷ್ಟೇ ಗಟ್ಟಿಗರು. ಆದರೆ ಫ್ರಾನ್ಸ್ ದೇಶಕ್ಕೆ ಏನೂ ಮಾಡುವಂತಿಲ್ಲ. ಒಂದು ತರಹದ ಮಿತ್ರ ದೇಶವದು. ಏನೇ ಮಾಡಿದರೂ ಇರಾಕಿಗೇ ಮಾಡಬೇಕು. ಇರಾಕಿಗೆ ಮಾಡುವುದೇನೂ ಬಾಕಿ ಉಳಿದಿಲ್ಲ. ದೊಡ್ಡ ಮಟ್ಟದ ಕಾರ್ಯಾಚರಣೆಯೇ ತಕ್ಕ ಮದ್ದು ಎಂದುಕೊಂಡರು. ಯೋಜನೆ ಹಾಕಲು ಕುಳಿತರು.

ಈ ಕಾರ್ಯಾಚರಣೆಗೆ ಸ್ಕೆಚ್ ಹಾಕುವ ಪೂರ್ಣ ಜವಾಬ್ದಾರಿಯನ್ನು ಇಸ್ರೇಲಿ ವಾಯುಸೇನೆಯ ಡೇವಿಡ್ ಐವರಿ ಅವರಿಗೆ ವಹಿಸಲಾಯಿತು. ಅವರಿಗೆ ಸಹಾಯಕರಾಗಿ ಕರ್ನಲ್ ಅವಿಯಮ್ ಸೆಲ್ಲಾ ನಿಯೋಜಿತರಾದರು. ಬೇಕಾದ ಮಾಹಿತಿಯನ್ನು ಒದಗಿಸಲು ಮೊಸ್ಸಾದ್ ಸದಾ ಸಿದ್ಧವಿತ್ತು.

೧೯೮೧ ರ ಸೆಪ್ಟೆಂಬರ್ ಹೊತ್ತಿಗೆ ಅಣುಸ್ಥಾವವರ ಪೂರ್ಣಗೊಳ್ಳುತ್ತದೆ ಅನ್ನುವ ಪಕ್ಕಾ ಮಾಹಿತಿ ಬಂದಿದ್ದು ದೊಡ್ಡ ಆತಂಕಕ್ಕೆ ಎಡೆಮಾಡಿಕೊಟ್ಟಿತು. ಅದಕ್ಕಿಂತ ಮೊದಲೇ ಸದ್ದಾಮನ ಹೆಮ್ಮೆಯ ಅಣುಸ್ಥಾವರಕ್ಕೆ ಒಂದು ಶಾಶ್ವತ ಗತಿ ಕಾಣಿಸಲೇಬೇಕು ಎನ್ನುವ ಧೃಡ ನಿರ್ಧಾರಕ್ಕೆ ಬಂದರು ಪ್ರಧಾನಿ ಬೆಗಿನ್.

ತುಂಬಾ ಅನಿರೀಕ್ಷಿತವೆಂಬಂತೆ ಈ ಯೋಜನೆಗೆ ಪರೋಕ್ಷ  ಸಹಾಯ ಒಂದು ವಿಚಿತ್ರ ದೇಶದಿಂದ ಬಂತು. ಅದು ಇರಾಕಿನ ಪಕ್ಕದ ದೇಶ ಇರಾನಿನಿಂದ. ೧೯೭೯ ರಲ್ಲಿ ಇರಾನಿನಲ್ಲಿ ಧಾರ್ಮಿಕ ಕ್ರಾಂತಿಯಾಗಿತ್ತು. ಅಲ್ಲಿನ ಮಹಾರಾಜ ರೇಝಾ ಪೆಹ್ಲವಿಯನ್ನು ಖೊಮೇನಿ ಎಂಬ ಶಿಯಾ ಧರ್ಮಗುರುವಿನ ಹಿಂಬಾಲಕರು ಓಡಿಸಿದ್ದರು. ರೇಝಾ ಪೆಹ್ಲವಿ ತುಂಬಾ ದುಷ್ಟನಾಗಿದ್ದ. ಜನರಿಗೂ ಸಾಕಾಗಿತ್ತು. ಒಟ್ಟಿನಲ್ಲಿ ಇರಾನಿನಲ್ಲಿ ಮಹಾರಾಜ ರೇಝಾ ಪೆಹ್ಲವಿಯ ಅಮೇರಿಕನ್ ಸ್ನೇಹಿ ಸರ್ಕಾರ ಹೋಗಿ ಅಮೇರಿಕಾ, ಇಸ್ರೇಲ್ ಮುಂತಾದ ಪಶ್ಚಿಮದ ದೇಶಗಳನ್ನು ನಖಶಿಖಾಂತ ದ್ವೇಷಿಸುವ ಖೊಮೇನಿ ಸರ್ಕಾರ ಇರಾನ್ ದೇಶದಲ್ಲಿ ಸ್ಥಾಪಿತವಾಗಿತ್ತು.

ಮಹಾರಾಜ ರೇಝಾ ಪೆಹ್ಲವಿಯ ಸರ್ಕಾರವಿದ್ದಾಗ ಅವನು ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ಅಮೇರಿಕಾದಿಂದ ಕೊಳ್ಳುತ್ತಿದ್ದ. ಹಾರ್ಡ್ ಕ್ಯಾಶ್ ಕೊಡುತ್ತಿದ್ದ ಕಾರಣ ಅವನ ಬೇಡಿಕೆಗಳನ್ನು ತ್ವರಿತ ಆದ್ಯತೆ ಮೇಲೆ ಪೂರೈಸುತ್ತಿತ್ತು ಅಮೇರಿಕಾ. ಅವನು ದೇಶ ಬಿಟ್ಟು ಹೋಗುವ ಮೊದಲಷ್ಟೇ ದೊಡ್ಡ ಪ್ರಮಾಣದ F - 16 ಯುದ್ಧವಿಮಾನಗಳಿಗೆ ಆರ್ಡರ್ ಕೊಟ್ಟಿದ್ದ. ಇಸ್ರೇಲ್ ಕೂಡ ನಮಗೂ ಬೇಗ F - 16 ಕೊಡಿ ಎಂದು ಕೇಳಿತ್ತು. ಇಸ್ರೇಲ್ ಎಷ್ಟೆಂದರೂ ಉದ್ದರಿ ಗಿರಾಕಿ. ಒಮ್ಮೊಮ್ಮೆ ಬಿಟ್ಟಿಯಾಗೂ ಕೇಳುತ್ತಿತ್ತು. ಇರಾನ್ ಹಾರ್ಡ್ ಕ್ಯಾಶ್ ಕೊಡುತ್ತಿದ್ದ ಗ್ರಾಹಕ. ಹಾಗಾಗಿ ಇಸ್ರೇಲಿಗೆ ಅತ್ಯಾಧುನಿಕ F - 16 ಯುದ್ಧ ವಿಮಾನಗಳ ಪೂರೈಕೆ ತಡವಾಗಿತ್ತು. ಇರಾನಿನಲ್ಲಿ ಸರ್ಕಾರ ಬದಲಾಗಿ ಯಾವಾಗ ಅಮೇರಿಕಾವನ್ನು ದ್ವೇಷಿಸುವ ಸರ್ಕಾರ ಬಂತೋ ಅಂದೇ ಅಮೇರಿಕಾ ಇರಾನಿಗೆ ರಕ್ಷಣಾ ಸಾಮಗ್ರಿಗಳ ಪೂರೈಕೆ ನಿಲ್ಲಿಸಿತು. ಇರಾನಿಗೆ ಹೋಗಬೇಕಾಗಿದ್ದ F - 16 ವಿಮಾನಗಳನ್ನು ಇಸ್ರೇಲಿಗೆ ಕೊಡುವದಾಗಿ ಹೇಳಿತು.

ಇರಾಕ್ ವಿರುದ್ಧ ಇಸ್ರೇಲ್ ಮಾಡಲು ಕುಳಿತಿದ್ದ ರಹಸ್ಯ ಕಾರ್ಯಾಚರಣೆಗೆ F - 16 ಯುದ್ಧವಿಮಾನಗಳು ತುಂಬಾ ಮುಖ್ಯವಾಗಿದ್ದವು. ಹಿಂದೆಂದೂ ಯಾರೂ ಮಾಡಿರದಂತಹ ವೈಮಾನಿಕ ಕಾರ್ಯಾಚರಣೆ. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನವಿದ್ದ ವಿಮಾನ ಜರೂರ್ ಬೇಕಾಗಿತ್ತು.

ಎಂಟು F - 16 ಯುದ್ಧವಿಮಾನಗಳು ಮುಖ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದೆಂದು ಮತ್ತು ಎಂಟು F - 15 ಫೈಟರ್ ವಿಮಾನಗಳು ಅವುಗಳಿಗೆ ಬೆಂಬಲ ನೀಡುವದೆಂದು ಕಾರ್ಯಾಚರಣೆಯ ದೊಡ್ಡಮಟ್ಟದ ರೂಪುರೇಷೆ ತಯಾರಾಯಿತು.

ವಿಮಾನದ ಪೈಲಟ್ಟುಗಳು ಮತ್ತು ಅವರ ಸಂಗಡಿಗರು ಅಭ್ಯಾಸ ಆರಂಭಿಸಿದರು. ಇಸ್ರೇಲಿನ ನೆಗೆವ್ ಮರಭೂಮಿಯಲ್ಲಿ ಇರಾಕಿನ ಅಣುಸ್ಥಾವರವನ್ನು ಹೋಲುವ ಒಂದು ಮಾದರಿಯನ್ನು ನಿರ್ಮಿಸಲಾಯಿತು. ಅದರ ಮೇಲೆ ಇಸ್ರೇಲಿನ ಸೇನೆ ಕಾರ್ಯಾಚರಣೆಯ ತಯಾರಿಯನ್ನು ಶುರು ಮಾಡಿತು.

ಸೇನಾ ಮುಖ್ಯಸ್ಥ ರಾಫುಲ್ ಏಟಾನ್ ಖುದ್ದಾಗಿ ಸಮರಾಭ್ಯಾಸದಲ್ಲಿ ಭಾಗಿಯಾದರು. ಪೈಲಟ್ ಪಕ್ಕ ಕುಳಿತು, ಅಭ್ಯಾಸದ ಬಾಂಬಿಂಗ್ (mock bombing raid) ದಾಳಿಯಲ್ಲಿ ಪಾಲ್ಗೊಂಡು, ಎಲ್ಲವೂ ಸರಿಯಾಗಿದೆ ಎಂದು ಅವರಿಗೆ ಖುದ್ದಾಗಿ ಮನದಟ್ಟಾಗಬೇಕಿತ್ತು. ಅಲ್ಲಿಯವರೆಗೆ ಅವರಿಗೆ ಸಮಾಧಾನವಿಲ್ಲ. ಮತ್ತು ದೇಶದ ಪ್ರಧಾನಿಯೆದುರು ಹೋಗಿ ೧೦೦% ಖಾತ್ರಿ ಕೊಡುವ ಬಗ್ಗೆ ವಿಶ್ವಾಸವಿರಲಿಲ್ಲ.

ತಾವು ಖುದ್ದಾಗಿ ಪಾಲ್ಗೊಂಡಿದ್ದ ಸಮರಾಭ್ಯಾಸದ ದಾಳಿಯ ನಂತರ ಸೇನಾ ಮುಖ್ಯಸ್ಥ ಏಟಾನ್ ಮನೆಯೆತ್ತ ನಡೆದರು. ಪಕ್ಕದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಅವಿರಾಮ್ ಸೆಲ್ಲಾ ಹಿಂಬಾಲಿಸಿದರು. ಬಾಸ್ ಏನು ಹೇಳುತ್ತಾರೋ ಎಂಬ ಬಗ್ಗೆ ಸೆಲ್ಲಾ ಅವರಿಗೆ ಕುತೂಹಲ ಮತ್ತು ಆತಂಕ. ರಾಫುಲ್ ಏಟಾನ್ ಒಪ್ಪಿದರೆ ಮಾತ್ರ ಯೋಜನೆ ಮುಂದುವರೆಯುತ್ತದೆ. ಇಲ್ಲವಾದರೆ ಮತ್ತೆ ಶುರುವಿಂದ ಯೋಜನೆ ಮಾಡಲು ಕೂಡಬೇಕು. ಸಮಯ ಕಮ್ಮಿಯಿತ್ತು. ಒತ್ತಡ ತುಂಬಾ ಇತ್ತು.

ರಾಫುಲ್ ಏಟಾನ್ ಅಂದರೆ ಅವರೊಂದು ಬಗೆಯ ನಿಗೂಢ ರಹಸ್ಯ...Enigma. ಸದಾ ಮೌನಿ. ಎಲ್ಲವನ್ನೂ ಬಾಯಿಬಿಟ್ಟು ಹೇಳುವವರಲ್ಲ. ತಲೆ ಮಾತ್ರ ಹನ್ನೆರೆಡೂ ಘಂಟೆ ಓಡುತ್ತಲೇ ಇರುತ್ತಿತ್ತು. ರಷಿಯನ್ ನಿರಾಶ್ರಿತರಾಗಿ ಇಸ್ರೇಲಿಗೆ ಬಂದಿದ್ದರು ಅವರ ಪೂರ್ವಜರು. ಸೇನೆ ಸೇರುವ ಮೊದಲು ಏಟಾನ್ ಕೃಷಿಕರಾಗಿದ್ದರು. ಒಳ್ಳೆಯ ಬಡಗಿ ಕೂಡ.

ಸೇನೆ ಸೇರಿದ ಏಟಾನ್ ಇಸ್ರೇಲ್ ಕಂಡ ಮಹಾ ಸೇನಾನಿ ಏರಿಯಲ್ ಶರೋನ್ ಕೆಳಗೆ ಪಳಗಿದರು. ಅವರ ನೆರಳಿನಂತೆ ಕೆಲಸ ಮಾಡಿದರು. ೧೯೬೦, ೧೯೭೦ ರ ದಶಕಗಳ ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದ್ದರು. ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದರು. ಇಸ್ರೇಲಿನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ದೊಡ್ಡ ಮಟ್ಟದ ಕಾಣಿಕೆ ಸಲ್ಲಿಸಿದ್ದರು. ೧೯೭೮ ರಲ್ಲಿ ಇಸ್ರೇಲಿ ಸೇನಾಪಡೆಗಳ ಮುಖ್ಯಸ್ಥರಾಗಿ ನೇಮಕವಾಗಿದ್ದರು.

ಇಂತಹ ರಾಫುಲ್ ಏಟಾನ್ ದಾರಿಯುದ್ದಕ್ಕೂ ಒಂದೇ ಒಂದು ಮಾತಾಡಲಿಲ್ಲ. ಪಕ್ಕದಲ್ಲಿ ಕುಳಿತ ಅವಿರಾಮ್ ಸೆಲ್ಲಾಗೆ ಇನ್ನಿಲ್ಲದ ಚಡಪಡಿಕೆ. ಅರ್ಧ ಘಂಟೆಯ ಪ್ರಯಾಣದ ಬಳಿಕ ಏಟಾನ್ ಕ್ಲುಪ್ತವಾಗಿ ಹೇಳಿದ್ದು ಒಂದೇ ಮಾತು... 'ಚಿಂತೆ ಬೇಡ. ಸರ್ಕಾರ ನಿಮ್ಮ ಯೋಜನೆಯನ್ನು ಅನುಮೋದಿಸುತ್ತದೆ.' ಈ ಮಾತನ್ನು ಕೇಳಿದ ಸೆಲ್ಲಾ ಸಮಾಧಾನದ ನಿಟ್ಟುಸಿರನ್ನು ಬಿಟ್ಟರು. ಮನದಲ್ಲಿ ಸಾರ್ಥಕ ಭಾವನೆ. ತಮ್ಮ ಸೇನಾನಾಯಕನ ಬಗೆಗೊಂದು ದೊಡ್ಡ ಮಟ್ಟದ ಗೌರವ.

ಸೇನೆಯ ಮಹಾದಂಡನಾಯಕರು ಖುದ್ದಾಗಿ ಎಲ್ಲ ಪರಿಶೀಲನೆ ಮಾಡಿ ಓಕೆ ಕೊಟ್ಟರೂ ಇತರ ಅನೇಕರಿಗೆ ಈ ಖತರ್ನಾಕ್ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಸಂಪೂರ್ಣ ವಿಶ್ವಾಸವಿರಲಿಲ್ಲ. ಅದರಲ್ಲೂ ನಾಯಕ ಸಮೂಹದಲ್ಲಿ ಅತಿ ಪ್ರಮುಖರಾಗಿದ್ದ ಸೇನಾ ಬೇಹುಗಾರಿಕೆ ಮುಖ್ಯಸ್ಥ ಯೇಷುವಾ ಸಾಗಿ, ಅಂದಿನ ಮೊಸ್ಸಾದ್ ಮುಖ್ಯಸ್ಥ ಇಜ್ಜಾಕ್ ಹೋಫೀ, ಸಚಿವ ಎಝೆರ್ ವೆಯಿಸ್ಮನ್, ಉಪಪ್ರಧಾನಿ ಯಿಗೇಲ್ ಯಾಡಿನ್ ಯೋಜನೆಯನ್ನು ಅನುಮೋದಿಸಲಿಲ್ಲ. ಕಾರ್ಯಾಚರಣೆ ವಿಫಲವಾದರೆ ಇಸ್ರೇಲಿನ ಬುಡಕ್ಕೇ ಬರುತ್ತದೆ. ದೊಡ್ಡಮಟ್ಟದ ಅವಮಾನ ಮುಜುಗರವಾಗುತ್ತದೆ. ಇಂತಹ ಅಪಾಯಕಾರಿ ಕಾರ್ಯಾಚರಣೆ ಬೇಡ ಎಂದರು. ಉಪಪ್ರಧಾನಿ ಯಾಡಿನ್ ಅಂತೂ ರಾಜೀನಾಮೆ ಬಿಸಾಡಿ ಎದ್ದು ಹೊರಟಿದ್ದರು. ಮುತ್ಸದ್ದಿ ಪ್ರಧಾನಿ ಬೆಗಿನ್ ಅವರನ್ನು ತಡೆದರು. ಇತರರಿಗೆ ಮನವರಿಕೆ ಮಾಡಿಕೊಡಲು ಕುಳಿತರು. ತಮ್ಮ ಸಹವರ್ತಿಗೆಗಳಿಗೆ ಮನವರಿಕೆ ಮಾಡಿಕೊಟ್ಟು, ಕಾರ್ಯಾಚರಣೆಯ ಯೋಜನೆಗೆ ಅವರ ಒಪ್ಪಿಗೆಯನ್ನು ತ್ವರಿತವಾಗಿ ಪಡೆಯಬೇಕಾಗಿದ್ದುದು ಅವರ ಅಂದಿನ ಬಹುಮುಖ್ಯ ಆದ್ಯತೆಯಾಗಿತ್ತು.

ಅಂತೂ ಇಂತೂ ಎಲ್ಲಾ ಪ್ರಮುಖರ ಒಪ್ಪಿಗೆ ಸಿಕ್ಕಿತು. ಮೇ ೮, ೧೯೮೧ ಕ್ಕೆ ಮುಹೂರ್ತ ನಿಗದಿಯಾಯಿತು. ಎಲ್ಲವೂ ಸಂಪೂರ್ಣವಾಗಿ ತಯಾರಾಗಿತ್ತು. ಎಲ್ಲಿಯವರೆಗೆ ಅಂದರೆ ಪೈಲಟ್ಟುಗಳು ವಿಮಾನಗಳನ್ನೇರಿ ಕುಳಿತಿದ್ದರು. ವಿಮಾನಗಳು ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ಮತ್ತೊಂದು ವಿಘ್ನ. ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ 'ಪ್ರೇಮ ಪತ್ರ' ಕಳಿಸಿದ್ದರು. 'ಈ ಅಪಾಯಕಾರಿ ಕಾರ್ಯಾಚರಣೆ ಬೇಡ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲಿಗೆ ದೊಡ್ಡ ಮುಜುಗರವಾಗುತ್ತದೆ. ಇನ್ನೂ ತಡವಾಗಿಲ್ಲ. ಕಾರ್ಯಾಚರಣೆಯನ್ನು ರದ್ದು ಮಾಡಿ,' ಎಂಬುದು ಅವರ ಪ್ರೇಮ ಪತ್ರದ ಸಾರಾಂಶ.

ಇದು ಪ್ರಧಾನಿ ಬೆಗಿನ್ ಅವರಿಗೆ ದೊಡ್ಡ ಕಿರಿಕಿರಿಯಾಯಿತು. ಇದು ಅತ್ಯಂತ ರಹಸ್ಯವಾದ ಕಾರ್ಯಾಚರಣೆಯಾಗಿತ್ತು. ಅಧಿಕಾರದಲ್ಲಿದ್ದ ಪಕ್ಷದ ಕೆಲವೇ ಕೆಲವು ಜನರಿಗೆ, ಅದೂ ಅವಶ್ಯವಿದ್ದರೆ ಮಾತ್ರ, ಬೇಕಾದಷ್ಟೇ ಮಾಹಿತಿಯನ್ನು ಕೊಡಲಾಗಿತ್ತು. ಹೀಗಿದ್ದಾಗ ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ ಅವರಿಗೂ ಮಾಹಿತಿ ದೊರಕಿದೆ ಅಂದರೆ ಏನರ್ಥ? ಎಲ್ಲಿ ಮಾಹಿತಿ ಸೋರಿಕೆಯಾಗಿದೆ? ಇದರ ಪರಿಣಾಮಗಳೇನು? ಎಂದು ಪ್ರಧಾನಿ ಬೆಗಿನ್ ತಲೆಕೆಡಿಸಿಕೊಂಡರು.

ರಾಜಕೀಯದ ರಾಡಿಯನ್ನು ತುರ್ತಾಗಿ ಸಂಬಾಳಿಸಬೇಕಿತ್ತು. ಕಾರ್ಯಾಚರಣೆಯನ್ನು ಸ್ವಲ್ಪ ಮಟ್ಟಿಗಾದರೂ ಮುಂದಕ್ಕೆ ಹಾಕಲೇಬೇಕಾದ ಅನಿವಾರ್ಯತೆ ಅವರಿಗೆ. ಸೇನೆಯಲ್ಲಿ ದೊಡ್ಡ ಮಟ್ಟದ ನಿರಾಶೆ. ಏನೂ ಮಾಡಲಿಕ್ಕೆ ಆಗುವುದಿಲ್ಲ. ಒಮ್ಮೊಮ್ಮೆ ಹೀಗಾಗಿಬಿಡುತ್ತದೆ.

ಪ್ರಧಾನಿ ಬೆಗಿನ್ ಪೂರ್ತಿಯಾಗಿ ಹಿಮ್ಮೆಟ್ಟಲಿಲ್ಲ. ಒಂದು ತಿಂಗಳು ಮುಂದಕ್ಕೆ ಹಾಕಿದರು. ಜೂನ್ ೭ ಕ್ಕೆ ಹೊಸ ಮುಹೂರ್ತ ನಿಗದಿ ಮಾಡಿದರು.

ಅಣುಸ್ಥಾವರದ ಮೇಲೆ ದಾಳಿ ಮಾಡಲಿದ್ದ ಎಂಟು F - 16 ವಿಮಾನಗಳ ಮುಂಭಾಗದಲ್ಲಿ ಸ್ಥಾಪಿತರಾಗಿ ನಾಯಕತ್ವ ವಹಿಸಿಕೊಂಡಿದ್ದವರು ಪೈಲಟ್ ಝೀವ್ ರಾಝ್. ಬೆಂಗಾವಲಿನ ಮತ್ತೊಂದು ಎಂಟು F-15 ವಿಮಾನಗಳ ಗುಂಪಿನ ನಾಯಕರಾಗಿದ್ದವರು ಸ್ಕ್ವಾಡ್ನರ್ನ್ ಕಮ್ಯಾಂಡರ್ ಆಮಿರ್ ನಾಚುಮಿ. ಅಮೋಸ್ ಯಾಡ್ಲಿನ್ ಮತ್ತಿತರ ಪೈಲಟ್ಟುಗಳಲ್ಲಿ ಮುಖ್ಯರು. ಅವರು ಮುಂದೊಂದು ದಿನ ಸೇನಾ ಬೇಹುಗಾರಿಕೆ ಸಂಸ್ಥೆಯ ಮುಖ್ಯಸ್ಥರಾದರು.

ಪೈಲಟ್ ಇಲಾನ್ ರಾಮೋನ್ ಎಲ್ಲರಿಗಿಂತ ಚಿಕ್ಕವರು. ಅನನುಭವಿ. ಆದರೆ ತುಂಬಾ ಚೆನ್ನಾಗಿ ಓದಿಕೊಂಡಿದ್ದರು.  ಎಲ್ಲ ಪುಸ್ತಕಗಳನ್ನು ಬರೋಬ್ಬರಿ ತಿರುವಿಹಾಕಿ, ತಪ್ಪಿಲ್ಲದಂತೆ ಲೆಕ್ಕಾಚಾರ ಹಾಕಿ, ಒಂದು ಪ್ರಮುಖ ನಿರ್ಧಾರಕ್ಕೆ ಬರಲು ಸಹಾಯಕರಾಗಿದ್ದರು. ಅದೇನೆಂದರೆ... ಇಸ್ರೇಲಿ ಯುದ್ಧವಿಮಾನಗಳು ಯಾವುದೇ ತೊಂದರೆಯಿಲ್ಲದೆ, ಹೊರಗಿನಿಂದ ಇಂಧನದ ಮರುಭರ್ತಿಯ ಅವಶ್ಯಕತೆ ಇಲ್ಲದೆ ೯೬೦ ಕಿಲೋಮೀಟರುಗಳ ಪ್ರಯಾಣವನ್ನು ಮಾಡಬಲ್ಲವು. ಈ ಪಕ್ಕಾ ಲೆಕ್ಕಾಚಾರ ಯೋಜನೆ ಹಾಕಲು ಕುಳಿತವರಿಗೆ ತುಂಬಾ ಸಹಾಯಕಾರಿಯಾಗಿತ್ತು. ಅನನುಭವಿಯಾದರೂ ತಮ್ಮ ಬುದ್ಧಿಮತ್ತೆಯಿಂದ ಇಲಾನ್ ರಾಮೋನ್ ಕಾರ್ಯಾಚರಣೆಯ ತಂಡದಲ್ಲಿ ತಮ್ಮ ಜಾಗ ಗಿಟ್ಟಿಸಿಕೊಂಡಿದ್ದರು.

ಹಿಂದೆಂದೂ ಮಾಡದ ಕಾರ್ಯಾಚರಣೆಯಾಗಿದ್ದ ಕಾರಣ ಯೋಜನಾ ಮುಖ್ಯಸ್ಥ ಡೇವಿಡ್ ಇವ್ರಿ ಸಾಮಾನ್ಯವಾಗಿ ರೂಡಿಯಲ್ಲಿ ಇಲ್ಲದ (unusual) ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ವಿಮಾನದ ಎಂಜಿನುಗಳು ಚಾಲನೆಯಲ್ಲಿ ಇರುವಾಗಲೇ ಇಂಧನ ತುಂಬುವುದು. ಇಂಧನದ ಟ್ಯಾಂಕುಗಳು ಖಾಲಿಯಾದಂತೆ ಅವುಗಳನ್ನು ಅಲ್ಲಲ್ಲಿಯೇ ಬಿಸಾಕಿಬಿಡಿ ಎಂಬುದು ಇನ್ನೊಂದು ನಿರ್ಧಾರ. ಕಾರ್ಯಾಚರಣೆಯ ಬೇರೆ ಬೇರೆ ಅಪಾಯಗಳನ್ನು ಎದುರಿಸಲು ಈ ಅಪಾಯಗಳನ್ನು ತೆಗೆದುಕೊಳ್ಳಲೇಬೇಕಾಗಿತ್ತು. ಅದಕ್ಕೆ ತಕ್ಕ ಅಭ್ಯಾಸಗಳನ್ನು ತಂಡ ಪದೇ ಪದೇ ಮಾಡಿ ಎಷ್ಟೋ ಪ್ರಮಾಣದ ಅಪಾಯದ ಸಾಧ್ಯತೆಗಳನ್ನು ಸಾಕಷ್ಟು ಕಮ್ಮಿ ಮಾಡಿತ್ತು. There is a saying in risk management. You manage certain risks so that you can take those risks which you can't manage. ಆ ಮಾದರಿಯಲ್ಲಿ.

ಅದೇ ಸಮಯದಲ್ಲಿ ಇರಾನ್ ಮತ್ತು ಇರಾಕ್ ನಡುವೆ ಭೀಕರ ಯುದ್ಧ ನಡೆದಿತ್ತು. ಇರಾಕ್ ತನ್ನ ಅಣುಸ್ಥಾವರವರದ ರಕ್ಷಣೆಗಾಗಿ ಮಿಸೈಲ್ ಬ್ಯಾಟರಿ ಮತ್ತು ಫೈಟರ್ ವಿಮಾನಗಳನ್ನು ನಿಯೋಜಿಸಿರುವ ಸಾಧ್ಯತೆಗಳು ಬಹಳವಿದ್ದವು. ಹೀಗಾಗಿ ಬೆಂಗಾವಲಿಗೆ ಹೋಗಲಿದ್ದ ಇಸ್ರೇಲಿ F-15 ಫೈಟರ್ ವಿಮಾನಗಳ ಮುಖಾಮುಖಿ ಇರಾಕಿನ ಬಳಿಯಿದ್ದ ಸೋವಿಯೆಟ್ ಪೂರೈಸಿದ್ದ ಮಿಗ್ ವಿಮಾನಗಳ ಜೊತೆ ಆಗುವುದು ಖಾತ್ರಿಯಿತ್ತು. ಅದಕ್ಕೂ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಇರಾಕಿ ಮಿಗ್ ವಿಮಾನಗಳು ಗಗನಕ್ಕೇರಿ ಇಸ್ರೇಲಿ ಯುದ್ಧವಿಮಾನಗಳ ಜೊತೆ 'ಶ್ವಾನ ಯುದ್ಧ' (Dog Fight) ಗೆ ನಿಂತುಬಿಟ್ಟವು ಅಂದರೆ ಅಷ್ಟೇ ಮತ್ತೆ. ಗೋವಿಂದಾ ಗೋವಿಂದ! ಒಂದು ರಹಸ್ಯ ಕಾರ್ಯಾಚರಣೆ ಹಾಳಾಗಿಹೋಗಿ ಅದು ಮೂರನೇ ವಿಶ್ವಯುದ್ಧಕ್ಕೆ ಕಾರಣವಾದರೂ ಅಚ್ಚರಿಯಿರಲಿಲ್ಲ. ಹಾಗಾಗದಂತೆ ನೋಡಿಕೊಳ್ಳಬೇಕಿತ್ತು.

ಎಂತಹ ದೊಡ್ಡ ಮಟ್ಟದ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಎಲ್ಲರಿಗೂ ಗೊತ್ತಿತ್ತು. ಒಂದು ವೇಳೆ ಇರಾಕಿಗಳು ಎಚ್ಚೆತ್ತುಕೊಂಡು ಮರುದಾಳಿ ಮಾಡಿದರೆ ಬಚಾವಾಗುವ ಸಾಧ್ಯತೆಗಳು ಬಹಳ ಕಮ್ಮಿಯಿದ್ದವು. ವಿಮಾನಗಳ ನಡುವಿನ 'ಶ್ವಾನ ಯುದ್ಧದಲ್ಲಿ' ಬಡಿಸಿಕೊಂಡು, ಹೊತ್ತಿ ಉರಿಯುತ್ತಿರುವ ವಿಮಾನ ಬಿಟ್ಟು, ಪ್ಯಾರಾಚೂಟ್ ಮೂಲಕ ಹಾರಿಕೊಂಡರೂ ಇರಾಕಿನಲ್ಲಿ ಬೀಳುತ್ತಿದ್ದರು ಇಸ್ರೇಲಿಗಳು. ಒಮ್ಮೆ ಇರಾಕಿಗಳ ಕೈಯಲ್ಲಿ ಸಿಕ್ಕರೆ ಮುಂದೆ ಭೀಕರ. ಕೊಡಬಾರದ ಹಿಂಸೆ ಕೊಟ್ಟು ಕೊಲ್ಲುತ್ತಿದ್ದರು. ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂತಹ ಕ್ರೂರಿಗಳು ಸದ್ದಾಮನ ಬಂಟರು. ಇದನ್ನೆಲ್ಲಾ ಎಲ್ಲರಿಗೂ ಎಳೆಎಳೆಯಾಗಿ ಬಿಡಿಸಿ ಹೇಳಲಾಗಿತ್ತು. ಎಲ್ಲವನ್ನೂ ಮೀರಿದ್ದು ಇಸ್ರೇಲಿಗಳ ದೇಶಪ್ರೇಮ. ಮಾಡು ಇಲ್ಲವೇ ಮಡಿ ಎನ್ನುವಂತಹ ಅನಿವಾರ್ಯತೆ. ಹಾಗಾಗಿ ಕಾರ್ಯಾಚರಣೆಗೆ ಅರ್ಪಿಸಿಕೊಂಡಿದ್ದರು.

ಜೂನ್ ೭, ೧೯೮೧. ಕಾರ್ಯಾಚರಣೆಯ ದಿನ ಬಂದೇಬಿಟ್ಟಿತು. ಇಸ್ರೇಲಿನಿಂದ ಹಾರಿದ ಹದಿನಾರು ವಿಮಾನಗಳು ಕೆಂಪು ಸಮುದ್ರದ ಅಕಾಬಾ ಕೊಲ್ಲಿಯ ಮೇಲಿಂದ ಉತ್ತರ ಸೌದಿ ಅರೇಬಿಯಾದ ಮರಭೂಮಿಯತ್ತ ಹಾರಿದವು. ಯೂಫ್ರೆಟೀಸ್ ನದಿಯನ್ನು ದಾಟಿ ಇರಾಕಿನ ಗಡಿಯನ್ನು ಪ್ರವೇಶಿಸಿದವು.

ಇಸ್ರೇಲಿಗಳು ಹಾಕಿಕೊಂಡಿದ್ದ ಅಸಾಂಪ್ರದಾಯಿಕ ವಾಯುಮಾರ್ಗದಲ್ಲಿ  (flight path) ಒಂದು ಖಚಿತ ಹೆಗ್ಗುರುತು (landmark) ಇತ್ತು. ಅದೊಂದು ದೊಡ್ಡ ಸರೋವರ ಮತ್ತು ಸರೋವರದ ಮಧ್ಯದಲ್ಲಿರುವ ಒಂದು ನಡುಗಡ್ಡೆ. F-16 ವಿಮಾನಗಳನ್ನು ಮುನ್ನೆಡಿಸುತ್ತಿದ್ದ ನಾಯಕ ಝೀವ್ ರಾಝ್ ಆ ಹೆಗ್ಗುರಿತಿಗಾಗಿ ಹುಡುಕಿಯೇ ಹುಡುಕಿದರು. ಸರೋವರ ಕಂಡರೂ ಅದರೊಳಗೆ ಇದ್ದ ನಡುಗಡ್ಡೆ ಮಾತ್ರ ಕಾಣಲಿಲ್ಲ. ಒಂದು ಕ್ಷಣ ಗಾಬರಿಗೊಂಡರು ಅವರು. ದಾರಿ ತಪ್ಪಿ ಎಲ್ಲೋ ಬಂದುಬಿಟ್ಟಿದ್ದೆವೋ ಏನೋ ಎನ್ನುವ ಆತಂಕ ಕಾಡಿತು. ಬೇಗನೇ ಸಮಸ್ಯೆ ಪರಿಹಾರವಾಯಿತು. ಆ ದಿನಗಳಲ್ಲಿ ತುಂಬಾ ಮಳೆಯಾಗಿತ್ತು. ಸರೋವರ ಬಹಳ ತುಂಬಿತ್ತು. ನಡುಗಡ್ಡೆ ಸ್ವಲ್ಪ ಮುಳುಗಿತ್ತು. ಹಾಗಾಗಿ ಮೇಲ್ನೋಟಕ್ಕೆ ಕಂಡಿರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಕಂಡಿತು. ಅಬ್ಬಾ! ಎಂದು ನಿಟ್ಟುಸಿರಿಟ್ಟ ನಾಯಕ  ಝೀವ್ ರಾಝ್ ಆ ಕ್ಷಣಕ್ಕೆ, ತಾತ್ಕಾಲಿಕವಾದರೂ, ನಿರುಮ್ಮಳರಾದರು. Such moments of solace were absolute luxuries even if temporary!

ಅಂತೂ ಕೊನೆಗೆ ಇರಾಕಿನ ಅಣುಸ್ಥಾವರ ಅವರ ಕಣ್ಣಳತೆಯಲ್ಲಿ ಬಂದಿತು. ಸದ್ದಾಮ್ ಹುಸೇನನ ಹೆಮ್ಮೆಯ ಪ್ರತೀಕದಂತೆ ಎದ್ದು ನಿಂತಿತ್ತು. ಸುತ್ತಲೂ ಎತ್ತರವಾದ ಮತ್ತು ಸಾಕಷ್ಟು ಧೃಡವಾದ ರಕ್ಷಣಾಗೋಡೆಗಳು ಇದ್ದವು.

ಅಲ್ಲಿಯ ತನಕ ಗೌಪ್ಯತೆಯನ್ನು ಕಾಯ್ದುಕೊಳ್ಳಲು ವಿಮಾನಗಳ ಮಧ್ಯೆ ಸಂಪೂರ್ಣ ರೇಡಿಯೋ ನಿಶ್ಶಬ್ದವಿತ್ತು. Complete radio silence. ಈಗ ಅನಿವಾರ್ಯವಾಗಿ ಪೈಲಟ್ ಝೀವ್ ರಾಝ್ ತಮ್ಮ ರೇಡಿಯೋ ಎತ್ತಿಕೊಂಡರು. ತಮ್ಮ ಸಹವರ್ತಿಗಳಿಗೆ ಕ್ಲುಪ್ತ ಸಂದೇಶವನ್ನು ರವಾನಿಸಿದರು. ಅಣುಸ್ಥಾವರವನ್ನು ಸಮೀಪಿಸಿದ್ದೇವೆ. ಎಲ್ಲರೂ ಎತ್ತರವನ್ನು ಹೆಚ್ಚಿಸಿಕೊಳ್ಳಿ. ಶತ್ರುದೇಶಗಳ ರೇಡಾರುಗಳಿಂದ ತಪ್ಪಿಸಿಕೊಳ್ಳಲೆಂದು ಅತಿ ಕಮ್ಮಿ ಎತ್ತರದಲ್ಲಿ ಹಾರಿ ಬಂದಿದ್ದರು. ಈಗ ವಿದ್ಯುತ್ಕಂಬ ಮುಂತಾದವುಗಳಿಂದ ಬಚಾವಾಗಲು ಎತ್ತರ ಹೆಚ್ಚು ಮಾಡಿಕೊಳ್ಳಬೇಕಾಗಿತ್ತು.

ಒಂದು ವಿಷಯ ಮಾತ್ರ ಎಲ್ಲರನ್ನೂ ಅಚ್ಚರಿಗೀಡುಮಾಡಿತು. ತುಂಬಾ ಸೋಜಿಗವೆನ್ನಿಸುವಂತೆ ಅಲ್ಲೆಲ್ಲೂ ವೈಮಾನಿಕ ರಕ್ಷಣಾ ವ್ಯವಸ್ಥೆ ಇರಲೇ ಇಲ್ಲ! ಇಸ್ರೇಲಿನ ಹದಿನಾರು ವಿಮಾನಗಳು ಅಣುಸ್ಥಾವರವನ್ನು ಸಮೀಪಿಸಿದರೂ ಒಂದೇ ಒಂದು ಇರಾಕಿ ಮಿಗ್ ವಿಮಾನ ಗಗನಕ್ಕೇರಿರಲಿಲ್ಲ. ಮಿಸೈಲ್ ಬ್ಯಾಟರಿ ಕಾಣಲಿಲ್ಲ. ಸಣ್ಣ ಪ್ರಮಾಣದ anti artillery ತೋಪುಗಳು ಹಾರಿಸಲ್ಪಟ್ಟರೂ ಅವು ಯಾವುದೂ ಗುರಿ ಮುಟ್ಟಲಿಲ್ಲ. ಇಸ್ರೇಲಿ ಯುದ್ಧವಿಮಾನಗಳಿಗೆ ಯಾವುದೇ ತರಹದ ಹಾನಿಯಾಗಲಿಲ್ಲ.

ಎತ್ತೆರಕ್ಕೇರಿದ್ದ ಯುದ್ಧ ವಿಮಾನಗಳು ಒಮ್ಮೆಲೇ ಡೈವ್ ಹೊಡೆದವು. ಒಂದಾದಮೇಲೊಂದರಂತೆ ಬರೋಬ್ಬರಿ ೩೫ ಡಿಗ್ರಿ ಕೋನದಲ್ಲಿ ಬಾಂಬಿಂಗ್ ಮಾಡಿದವು. ನೋಡನೋಡುತ್ತಿದ್ದಂತೆ ಸದ್ದಾಮ ಹುಸೇನನ ಅಣುಸ್ಥಾವರದ ಬಕ್ಕ ತಲೆಯಂತಹ ಗುಮ್ಮಟ ಢಮಾರ್ ಎಂದುಬಿಟ್ಟಿತು. ಬುರುಡೆ ಬಿಚ್ಚಿಕೊಂಡ ಅಬ್ಬರಕ್ಕೆ ಎಲ್ಲೆಡೆ ಧೂಳು ಅಂದರೆ ಅಷ್ಟು ಧೂಳು!

ಉಳಿದ ಬಂಕರ್ ಬಸ್ಟರ್ ಮಾದರಿಯ ಬಾಂಬುಗಳು ತಳತನಕ ಇಳಿದು ನಂತರ ಸ್ಪೋಟವಾಗಿ ಎಲ್ಲವನ್ನೂ ಗುಡಿಸಿ ಗುಂಡಾಂತರ ಮಾಡಿಬಿಟ್ಟವು. ಇಸ್ರೇಲಿ ಪೈಲಟ್ ಒಬ್ಬ ಪೊರಪಾಟಿನಲ್ಲಿ ಪಕ್ಕದ ಕಟ್ಟಡದ ಮೇಲೂ ಬಾಬಿಂಗ್ ಮಾಡಿಬಿಟ್ಟ. ಅದೂ ಕೂಡ ಟೋಟಲ್ ಉಡೀಸ್!

ಇಷ್ಟೆಲ್ಲಾ ಆಗಲು ತೆಗೆದುಕೊಂಡಿದ್ದು ಕೇವಲ ಎಂಬತ್ತು ಸೆಕೆಂಡುಗಳು ಅಂದರೆ ನೀವು ನಂಬಲಿಕ್ಕಿಲ್ಲ. ಆದರೆ ಅದೇ ವಾಸ್ತವ. Simply unbelievable!

ಶತ್ರು ದೇಶದಿಂದ ಹೊರಬೀಳುವ ಮೊದಲು ಎಲ್ಲ ಇಸ್ರೇಲಿ ಪೈಲೆಟ್ಟುಗಳು ಸುರಕ್ಷಿತರಾಗಿದ್ದಾರೆ ಎಂದು ಖಾತ್ರಿ ಮಾಡಿಕೊಳ್ಳಬೇಕಾಗಿತ್ತು. ಅದು ಯೋಜನೆಯ ಒಂದು ಪ್ರಮುಖ ಹೆಜ್ಜೆ. ದಾಳಿ ಮಾಡಿದ F-16 ವಿಮಾನತಂಡದ ಕ್ಯಾಪ್ಟನ್ ಮತ್ತು ಬೆಂಗಾವಲಿಗಿದ್ದ F-15 ವಿಮಾನತಂಡದ ಕ್ಯಾಪ್ಟನ್ ರೇಡಿಯೋ ಜಾಲಕ್ಕೆ ದಾಖಲಾದರು. ಎಲ್ಲರಿಗೂ ತಾವು ಸುರಕ್ಷಿತರಾಗಿದ್ದೇವೆ ಎಂದು ಖಾತ್ರಿ ಪಡಿಸಲು ಕೋರಿದರು. ಒಬ್ಬರಾದ ಮೇಲೆ ಒಬ್ಬರಂತೆ ಹದಿನೈದು ಜನ ಪೈಲೆಟ್ಟುಗಳು 'ಚಾರ್ಲಿ' ಎನ್ನುವ ಕೋಡೆಡ್ ಸಂದೇಶ ರವಾನಿಸುವ ಮೂಲಕ ತಮ್ಮ ತಮ್ಮ ಇರುವಿಕೆಯನ್ನು ಖಾತ್ರಿ ಪಡಿಸಿದರು.

ಆದರೆ ಹದಿನಾರನೇ ಸಂದೇಶ ಬರಲೇ ಇಲ್ಲ. ಯಾರು ಕಳೆದುಹೋಗಿದ್ದಾರೆ ಎಂದು ಎಲ್ಲರೂ ತಲೆಕೆಡಿಸಿಕೊಂಡರು.ಆತಂಕಗೊಂಡರು.

ತಾಳೆ ಹಾಕಿದರೆ ತಂಡದ ಅತ್ಯಂತ ಕಿರಿಯ ಸದಸ್ಯನಾಗಿದ್ದ ರಾಮೋನ್ ಗಾಯಬ್! ಅವನಿಗೆ ಏನಾಯಿತು!? ಎಂದು ಎಲ್ಲರೂ ಗಾಬರಿಗೊಂಡರು. ನಂತರ ಬಿದ್ದು ಬಿದ್ದು ನಕ್ಕರು. ರಾಮೋನ್ ಅನನುಭವಿ. ಹಾಗಾಗಿ ಎಲ್ಲರಿಗಿಂತ ಕೊನೆಯಲ್ಲಿದ್ದ. ಒಂದು ಕ್ಷಣ ಅವನಿಗೆ ಅದೇನು ಮಂಕು ಕವಿಯಿತೋ ಗೊತ್ತಿಲ್ಲ. ಇರಾಕಿ ಮಿಗ್ ವಿಮಾನವೊಂದು ದಾಳಿ ಮಾಡಲು ಬೆನ್ನೆಟ್ಟಿಬರುತ್ತಿದೆ ಎಂದು ಭ್ರಮಿಸಿಬಿಟ್ಟ. ಒಮ್ಮೊಮ್ಮೆ ಯುದ್ಧದ adrenaline rush ಹೇಗಿರುತ್ತದೆ ಅಂದರೆ ಇಲ್ಲದ ಕಡೆಯೂ ಶತ್ರುಗಳು ಕಾಣುತ್ತಾರೆ. ಇಲ್ಲದ ಮಿಗ್ ವಿಮಾನವನ್ನು ಕಲ್ಪಿಸಿಕೊಂಡು, ಅದು ತನ್ನನ್ನು ಮತ್ತು ಇತರ ಇಸ್ರೇಲಿಗಳನ್ನು ಹೊಡೆದುರುಳಿಸುವ ಮುನ್ನ ಅದನ್ನು ನಾಶಪಡಿಸುವುದು ಹೇಗೆ ಎಂದು ಸ್ಕೆಚ್ ಹಾಕುತ್ತಿದ್ದ ರಾಮೋನ್ 'ಚಾರ್ಲಿ' ಸಂದೇಶ ಕಳಿಸದೇ ಇತರರನ್ನು ಚಿಂತೆಗೆ ದೂಡಿದ್ದ. ಪುಣ್ಯಕ್ಕೆ ಬಹುಬೇಗನೆ ತಪ್ಪಿನ ಅರಿವಾಗಿ ಕಟ್ಟಕಡೆಯ 'ಚಾರ್ಲಿ' ಸಂದೇಶ ರವಾನಿಸಿದ್ದ. ನಾಯಕರು ನಿಟ್ಟುಸಿರು ಬಿಟ್ಟು ವಿಮಾನಗಳನ್ನು ಶರವೇಗದಲ್ಲಿ ಇಸ್ರೇಲಿನತ್ತ ತಿರುಗಿಸಿದರು. ಮುಂದೊಂದು ದಿನ ಮಹಾನ್ ಪ್ರತಿಭಾವಂತ ರಾಮೋನ್ ಇಸ್ರೇಲಿನ ಪ್ರಪಥಮ ಬಾಹ್ಯಾಕಾಶಯಾನಿ ಎಂದು ಪ್ರಸಿದ್ಧನಾದ. ಆದರೆ ೨೦೦೩ ರಲ್ಲಿ ಆದ ಕೊಲಂಬಿಯಾ ಬಾಹ್ಯಾಕಾಶ ನೌಕೆಯ ಸ್ಪೋಟದ ದುರಂತದಲ್ಲಿ ಪ್ರಾಣ ಕಳೆದುಕೊಂಡ. ಭಾರತೀಯ ಮೂಲದ ಅಮೇರಿಕಾದ ಬಾಹ್ಯಾಕಾಶಯಾನಿ ಕಲ್ಪನಾ ಚಾವ್ಲಾ ಕೂಡ ಅದೇ ದುರಂತದಲ್ಲಿ ಅಸುನೀಗಿದ್ದರು.

ವಾಪಸ್ ಇಸ್ರೇಲಿನತ್ತ ಹೊರಟರೂ ಇರಾಕಿನ ಗಡಿ ದಾಟುವ ಮೊದಲು ಇರಾಕಿ ಮಿಗ್ ವಿಮಾನಗಳು ದಾಳಿ ಮಾಡಿಯೇ ಮಾಡುತ್ತವೆ ಎಂದುಕೊಂಡೇ ಹೊರಟಿದ್ದರು ಇಸ್ರೇಲಿಗಳು. ಆದರೆ ಹಾಗೇನೂ ಆಗಲೇ ಇಲ್ಲ. ಎಲ್ಲ ಹದಿನಾರೂ ವಿಮಾನಗಳು ಸುರಕ್ಷಿತವಾಗಿ ಇಸ್ರೇಲ್ ತಲುಪಿಕೊಂಡವು.

ಅಂದು ಅದು ಇಸ್ರೇಲಿಗಳ ಸುದೈವವೋ ಅಥವಾ ಆ ಇರಾಕಿ ಅಧಿಕಾರಿಯ ದುರ್ದೈವವೋ ಗೊತ್ತಿಲ್ಲ. ಅಣುಸ್ಥಾವರದ ರಕ್ಷಣಾ ಅಧಿಕಾರಿ ರಾಜಧಾನಿ ಬಾಗ್ದಾದಿನ ಕೆಫೆಯೊಂದರಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ. ಈ ಕಡೆ ಅಣುಸ್ಥಾವರ ಧೂಳೆದ್ದು ಹೋಗುತ್ತಿದ್ದರೆ ಈ ಪುಣ್ಯಾತ್ಮ ಮಾತ್ರ 'ಯಾ ಹಬೀಬಿ! ಯಾ ಹಬೀಬಿ!' ಎಂದು ಪಲಕುತ್ತ ಒಂದಾದ ಮೇಲೊಂದು ಏಲಕ್ಕಿ ಪರಿಮಳದ ಕಾಫೀ ಹೀರುತ್ತಾ ಕುಳಿತಿದ್ದ. ಅದು ಅರಬರ ಪದ್ಧತಿ ಬಿಡಿ. ಅವನ ಕೆಳಗಿನ ಜನರಿಗೆ ಅವನ ಆಜ್ಞೆ ಬರದ ಹೊರತೂ ಮಿಸೈಲ್ ಹಾರಿಸುವಂತಿಲ್ಲ ಮತ್ತು ಮಿಗ್ ವಿಮಾನಗಳನ್ನು ಇಸ್ರೇಲಿಗಳ ಬೇಟೆಗೆ ಕಳಿಸುವಂತಿಲ್ಲ. ಕಾಫೀ ಮೇಲೆ ಕಾಫೀ ಕುಡಿಯುತ್ತ ಕುಳಿತಿದ್ದ ಈ ಪುಣ್ಯಾತ್ಮ ಸಂಪರ್ಕಕ್ಕೆ ಸಿಗಲಿಲ್ಲ. ಮುಂದೆ ಆತ ಯಾರಿಗೂ ಎಲ್ಲಿಗೂ ಸಿಗಲಿಲ್ಲ. ತನ್ನ ಹೆಮ್ಮೆಯ ಅಣುಸ್ಥಾವರ ಮಟಾಷ್ ಆಯಿತೆಂದು ಕೊತಕೊತ ಕುದಿಯುತ್ತಿದ್ದ ಸದ್ದಾಮ ಹುಸೇನ್ ಬಲಿಗಾಗಿ ಹಾತೊರೆಯುತ್ತಿದ್ದ. ಸರಿಯಾಗಿ ಕೆಲಸ ಮಾಡದ ಈ ಗಿರಾಕಿ ಸಿಕ್ಕ. ಸಿಕ್ಕ ಮೇಲೆ ಮತ್ತೇನು? ಇತರರಿಗೆ ಒಂದು ಪಾಠವೆಂಬಂತೆ ಆ ರಕ್ಷಣಾ ಅಧಿಕಾರಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿಬಿಟ್ಟ ಸದ್ದಾಮ್ ಹುಸೇನ್. ಹಾಗೆ ಗಲ್ಲಿಗೆ ಹಾಕುವುದು ತುಂಬಾ ಸಾಮಾನ್ಯವಾಗಿತ್ತು ಬಿಡಿ. ಇಂದಿಗೂ ಕೂಡ ಅರಬ್ ದೇಶಗಳಲ್ಲಿ ಶಿಕ್ಷೆಗಳನ್ನು ಬಹಿರಂಗವಾಗಿ ಕೊಡಲಾಗುತ್ತದೆ. ಕೆಲವೊಮ್ಮೆ ಚಿತ್ರಹಿಂಸೆಗಳನ್ನೂ ಕೂಡ!

ಇಸ್ರೇಲ್ ಮಾಡಿದ ದಾಳಿಯಲ್ಲಿ ಹತ್ತು ಇರಾಕಿ ಸೈನಿಕರು ಮತ್ತು ಒಬ್ಬ ಫ್ರೆಂಚ್ ಇಂಜಿನಿಯರ್ ಹತನಾದ ಎಂದು ವರದಿಯಾಯಿತು.

ಇಸ್ರೇಲಿನ ಈ ಜಾಬಾದ್ ಕಾರ್ಯಾಚರಣೆ ಇಸ್ರೇಲಿನ ನಾಗರಿಕರಿಗೆ ಒಂದು ತರಹದ ನೆಮ್ಮದಿಯನ್ನು ತಂದುಕೊಟ್ಟಿತು. ಆ ನೆಮ್ಮದಿ ಸಂಭ್ರಮಕ್ಕೆ ಅನುವು ಮಾಡಿಕೊಟ್ಟಿತು. ಎಲ್ಲರೂ ಸಂಭ್ರಮಿಸಿದರು. ಈ ಕಾರ್ಯಾಚರಣೆ ಅಸಾಧ್ಯ ಎಂದು ಹೇಳಿದವರೂ ಸಹ ತಾವು ಇಸ್ರೇಲಿ ವಾಯುಪಡೆಯ ಕ್ಷಮತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ವಿಷಾದ ಹೇಳಿದರು. ಸಂಭ್ರಮದಲ್ಲಿ ಪಾಲ್ಗೊಂಡರು. ಒಂದು ತರಹದ ವಿಚಿತ್ರ ಶಾಂತಿಯ ಮಂತ್ರ ಪಠಿಸುತ್ತ ಕುಳಿತಿರುತ್ತಿದ್ದ ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ ಅವರನ್ನು ಹೊರತುಪಡಿಸಿ ಎಲ್ಲರೂ ಇಸ್ರೇಲಿ ಸೇನೆಯ daredevil ಕಾರ್ಯಾಚರಣೆಯನ್ನು ಕೊಂಡಾಡಿದರು. ಏನು ಅವರ ಶಾಂತಿ ಮಂತ್ರವೋ ಏನು ಅವರ ಭ್ರಾಂತಿ ಮಂತ್ರವೋ ಕೊನೆವರೆಗೂ ಇಸ್ರೇಲಿಗಳಿಗೆ ತಿಳಿಯಲಿಲ್ಲ ಅನ್ನಿ.

ಬೇರೆ ಬೇರೆ ದೇಶಗಳು ಇಸ್ರೇಲನ್ನು ಕಟುವಾಗಿ ಖಂಡಿಸಿದವು. ಅದು ಅವುಗಳ ಅನಿವಾರ್ಯತೆ. ಅಂತರರಾಷ್ಟ್ರೀಯ ಸಮುದಾಯ, ಅದು ಇದು, ಮಣ್ಣು ಮಸಿ ಅಂತೆಲ್ಲ ಕಟ್ಟುಪಾಡು ನೀತಿನಿಯಮ ಇರುತ್ತವೆ ನೋಡಿ. ಹಾಗಾಗಿ ಹೆಚ್ಚಿನ ದೇಶಗಳು ಇಸ್ರೇಲನ್ನು ಖಂಡಿಸಿ ಠರಾವು ಪಾಸ್ ಮಾಡಿದವು. ಇಸ್ರೇಲಿನ ಪರಮಾಪ್ತ ಅಮೇರಿಕಾ ಕೂಡ ಕಾಟಾಚಾರಕ್ಕೆ ಎಂದು ಇಸ್ರೇಲನ್ನು ಖಂಡಿಸಿತು. ಸಣ್ಣಪುಟ್ಟ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು. ಅಂದು ಅಮೇರಿಕಾದ ಅಧ್ಯಕ್ಷರಾಗಿದ್ದವರು ರೊನಾಲ್ಡ್ ರೀಗನ್ ಸಾಹೇಬರು. ಮೊದಲು ಹಾಲಿವುಡ್ಡಿನಲ್ಲಿ ಸಿನಿಮಾ ನಟನಾಗಿದ್ದರು. ಅವರಿಗೆ ನಟನೆ ಹೇಳಿಕೊಡಬೇಕೇ? ಬಹಿರಂಗವಾಗಿ ಇಸ್ರೇಲನ್ನು ಟೀಕಿಸುತ್ತ ಅಂತರಂಗದಲ್ಲಿ ಇಸ್ರೇಲಿನ ಬೆನ್ನುತಟ್ಟಿದರು. ಅಮೇರಿಕಾ ಮಾಡಲಾಗದ ಆದರೆ ಮಾಡಲೇಬೇಕಾದ ಇನ್ನಿತರ ಕಪ್ಪು ಕಾರ್ಯಾಚರಣೆಗಳ ಸುಪಾರಿಯನ್ನು ಇಸ್ರೇಲಿಗೆ ಕೊಟ್ಟರು. ರೇಗನ್ ಸಾಹೇಬರಿಗೆ ಸದ್ದಾಮನ ನಂತರ ಲಿಬಿಯಾದ ಸರ್ವಾಧಿಕಾರಿ ಗಡ್ಡಾಫಿಯನ್ನು ಹಣಿಯಬೇಕಾಗಿತ್ತು. ಅದಕ್ಕಾಗಿ ರಂಗಸ್ಥಳ ಸಜ್ಜಾಗಬೇಕಿತ್ತು. ಅದನ್ನು ಇಸ್ರೇಲ್ ಅದರಲ್ಲೂ ಇಸ್ರೇಲಿನ ಮೊಸ್ಸಾದ್ ಬಿಟ್ಟು ಬೇರೆ ಯಾರೂ ಮಾಡಿಕೊಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿತ್ತು. ಇಸ್ರೇಲನ್ನು ಖಂಡಿಸಿದ ಹಾಗೆ ನಟಿಸಿದ ರೇಗನ್ ಸಾಹೇಬರು ಮುಂದೆ ಹೇಗೆ ಅದೇ ಇಸ್ರೇಲನ್ನು ಉಪಯೋಗಿಸಿಕೊಂಡು ಗಡಾಫಿಯನ್ನು ಹಣಿದರು ಎಂದು ನೋಡಿದರೆ ಅದೊಂದು ರೋಚಕ ಕಥೆ.

ಮುಂದೆ ಬರೋಬ್ಬರಿ ಹತ್ತು ವರ್ಷಗಳ ನಂತರ ಅಂದರೆ ೧೯೯೧ ರಲ್ಲಿ ಮೊದಲ ಗಲ್ಫ್ ಯುದ್ಧ ಶುರುವಾಯಿತು. ಕುವೈತ್ ದೇಶವನ್ನು ಆಕ್ರಮಿಸಿ ಕೂತಿದ್ದ ಸದ್ದಾಮ್ ಹುಸೇನನನ್ನು ಓಡಿಸಲು ಎಂದು ಶುರುವಾದ ಯುದ್ಧವದು. ಹಾಗಂತ ಅಮೇರಿಕಾ ಜಗತ್ತಿಗೆ ಪುಂಗಿತ್ತು. ನಿಜವಾದ ವಿಷಯ ಎಲ್ಲರಿಗೂ ನಂತರ ಗೊತ್ತಾಯಿತು. ಒಂದು ಕಾಲದಲ್ಲಿ ಸದ್ದಾಮ ಹುಸೇನ್ ಅಮೇರಿಕಾದ ಬಂಟ. ಅಮೇರಿಕಾದ ಮಾತು ಕೇಳಿ ಮಳ್ಳನಂತೆ ಇರಾನ್ ವಿರುದ್ಧ ಸೆಣೆಸಿದ. ಉಪಯೋಗವಿಲ್ಲದ ಯುದ್ಧ ಮಾಡಿದ. ನಂತರ ತಪ್ಪಿನ ಅರಿವಾಯಿತೇನೋ ಗೊತ್ತಿಲ್ಲ. ಅಮೇರಿಕಾದ ಸಂಗ ತೊರೆದು ಹೊರಟ. ಬಿಟ್ಟಿಯಾಗಿ ಪೆಟ್ರೋಲ್ ಕೊಡಲು ಒಪ್ಪಲಿಲ್ಲ. ಸದ್ದಾಮನಿಗೆ ನಾಲ್ಕು ಪೆಟ್ಟು ಕೊಟ್ಟು ಬುದ್ಧಿ ಹೇಳಬೇಕು ಎನ್ನುವ ಗ್ರಾಂಡ್ ಸ್ಕೀಮಿನಡಿಯಲ್ಲಿ ಮೊದಲ ಗಲ್ಫ್ ಯುದ್ಧ ಶುರುವಾಯಿತು. ಅದಕ್ಕೆ ತಾತ್ಕಾಲಿಕವಾಗಿ ಬಲಿಯಾಗಿದ್ದು ಕುವೈತ್. ಅದೇನೇ ಇರಲಿ. ೧೯೯೧ ರ ಮೊದಲ ಗಲ್ಫ್ ಯುದ್ಧದ ಸಂದರ್ಭದಲ್ಲಿ ಮಾತ್ರ ಅಂದಿನ ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ (ಸೀನಿಯರ್) ಮತ್ತು ರಕ್ಷಣಾ ಕಾರ್ಯದರ್ಶಿ ಡಿಕ್ ಚೀನಿ ಇಸ್ರೇಲ್ ಹತ್ತು ವರ್ಷದ ಹಿಂದೆ, ಇಡೀ ಅಂತರರಾಷ್ಟ್ರೀಯ ಸಮುದಾಯವನ್ನು ಎದುರಾಕಿಕೊಂಡು, ಮಾಡಿದ ಕಾರ್ಯಾಚರಣೆಯನ್ನು ಹೊಗಳಿದ್ದರು. ಅಂದು ಇಸ್ರೇಲ್ ಸದ್ದಾಮ್ ಹುಸೇನನ ಅಣುಸ್ಥಾವರವನ್ನು ನಿರ್ನಾಮ ಮಾಡಿರದಿದ್ದರೆ ನಮಗೆ ಇವತ್ತು ಅದೊಂದು ದೊಡ್ಡ ತಲೆನೋವಾಗುತ್ತಿತ್ತು. ಕುವೈತಿನ ವಿಮೋಚನೆ ಅಷ್ಟು ಸುಲಭವಾಗಿ ಆಗುತ್ತಿರಲಿಲ್ಲ ಎಂದು ಪುಂಗಿದರು. ಹೆಚ್ಚಿನವರು ಅಹುದಹುದು ಎಂಬಂತೆ ತಲೆದೂಗಿದರು. ಒಳಗಿನ ಹೂರಣ ಗೊತ್ತಿದ್ದವರು ಪೆಕಪೆಕನೆ ನಕ್ಕರು. It was again all about cheap oil.

ಈ perfect ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪೈಲಟ್ ಝೀವ್ ರಾಝ್ ಅವರಿಗೆ ಇಸ್ರೇಲಿನ ಪ್ರತಿಷ್ಠಿತ ಸೇವಾ ಪದಕವನ್ನು ನೀಡಲಾಯಿತು. 'ನನಗೊಬ್ಬನಿಗೇ ಪದಕ ಕೊಟ್ಟರೆ ಹೇಗೆ? ಉಳಿದ ಹದಿನೈದು ಜನರಿಗೂ ಕೊಡಬೇಕು' ಎಂದು  ಝೀವ್ ರಾಝ್ ನಮ್ರತೆಯಿಂದಲೇ ಆಕ್ಷೇಪಣೆ ವ್ಯಕ್ತಪಡಿಸಿದರೆ ಸೇನಾ ಮುಖ್ಯಸ್ಥ ರಾಫುಲ್ ಏಟಾನ್ ಏನೆಂದರು ಗೊತ್ತೇ? 'ಬಡಿದಾಟವಿಲ್ಲ. ಕಾದಾಟವಿಲ್ಲ. ಹೋದಿರಿ. ಬಾಂಬ್ ಹಾಕಿದಿರಿ. ವಾಪಸ್ ಬಂದಿರಿ. ಆಕಾಶದಲ್ಲಿ ಯುದ್ಧ ಗಿದ್ಧ ಏನೂ ಆಗಲಿಲ್ಲವಲ್ಲ. ಹಾಗಾಗಿ ಉಳಿದವರಿಗೆಲ್ಲ ಪದಕ ಯಾಕೆ? ಮುಂದೆ ನಿಜವಾದ ಕಾದಾಟವಾದಾಗ ನೋಡೋಣ,' ಎಂದು ಬೂಟು ಕುಟ್ಟುತ್ತ ಹೊರಟುಬಿಟ್ಟರು. ಆ ಮನುಷ್ಯ ಎಷ್ಟು insensitive ಎಂದು ಅನ್ನಿಸಬಹುದು. ಆದರೆ ಇಸ್ರೇಲಿಗಳೇ ಹಾಗೆ. ಕೊಂಚ ಕಟು ಸ್ವಭಾವದವರು. ಸೇನೆಯಲ್ಲಂತೂ ಕೊಂಚ ಜಾಸ್ತಿಯೇ ಅನ್ನಿ. Everybody is a winner ಎಂದು ಎಲ್ಲರ ತಲೆಗೆ ಎಣ್ಣೆ ತಿಕ್ಕಿ, ಎಲ್ಲರನ್ನೂ ಒಂದು ತರಹದ mediocrity ಗೆ ತಳ್ಳುವ ಸಂಪ್ರದಾಯವಿಲ್ಲ. Bar of excellence is very high.

ಇದಾದ ನಂತರ ಇಸ್ರೇಲ್ ಬಹಿರಂಗವಾಗಿ ತನ್ನ ವಿದೇಶಾಂಗ ನೀತಿಯನ್ನು ಪ್ರಕಟಿಸಿತು. ಅದರ ತಿರುಳು ತುಂಬಾ ಸರಳವಾಗಿತ್ತು ಮತ್ತು ಅಷ್ಟೇ ಸ್ಪಷ್ಟವಾಗಿತ್ತು. ಮಧ್ಯಪ್ರಾಚ್ಯದ ಯಾವುದೇ ದೇಶ ಪರಮಾಣು ತಂತ್ರಜ್ಞಾನವನ್ನು ಹೊಂದುವುದನ್ನು ಅಥವಾ ಅಭಿವೃದ್ಧಿ ಪಡಿಸುವುದನ್ನು ಇಸ್ರೇಲ್ ಸಹಿಸುವುದಿಲ್ಲ. ಸಹಿಸುವುದಿಲ್ಲ ಅಷ್ಟೇ ಅಲ್ಲ. ಇಸ್ರೇಲ್ ಅಂತಹ ಪ್ರಯತ್ನಗಳನ್ನು ಶತಾಯಗತಾಯ ವಿರೋಧಿಸುತ್ತದೆ ಮತ್ತು ತಡೆಯುತ್ತದೆ.

ಮುಂದೆ ಇದು Begin Doctrine ಎಂದೇ ಖ್ಯಾತವಾಯಿತು. ಇಸ್ರೇಲ್ ಅದನ್ನು ಕರಾರುವಕ್ಕಾಗಿ ಪಾಲಿಸಿಕೊಂಡು ಬಂದಿದೆ ಕೂಡ. ಇರಾಕಿನ ನಂತರ ಅಣುಸ್ಥಾವರ ಕಟ್ಟಲು ಹೋದ ಸಿರಿಯಾಕ್ಕೆ ಅದೇ ಗತಿಯಾಯಿತು. ಸದ್ಯಕ್ಕೆ ಇರಾನಿಗೂ ಅದೇ ಗತಿಯಾಗುತ್ತಿದೆ. ಆದರೆ ಚಿಕ್ಕ ಚಿಕ್ಕ ಡೋಸುಗಳಲ್ಲಿ ಇರಾನಿಗೆ ಕಂಪ್ಯೂಟರ್ ವೈರಸ್ ಮೂಲಕ, ಕಂಡಕಂಡಲ್ಲಿ ಇರಾನಿ ಅಣುವಿಜ್ಞಾನಿಗಳನ್ನು ನಿಗೂಢವಾಗಿ ಕೊಲ್ಲುವ ಮೂಲಕ, ಸೇನಾ ಮುಖ್ಯಸ್ಥ ಸುಲೇಮಾನಿ ಅಂತವರನ್ನು ಅಮೇರಿಕಾವನ್ನು ಮುಂದಿಟ್ಟುಕೊಂಡು ಡ್ರೋನ್ ಮುಖಾಂತರ ಉಡಾಯಿಸಿಬಿಡುವ ಮೂಲಕ ಇರಾನಿಗೆ ಬಿಸಿ ಮುಟ್ಟಿಸುತ್ತಿದೆ ಇಸ್ರೇಲ್. ಮುದೊಂದು ದಿನ ಇರಾನಿನ ಅಣುಸ್ಥಾವರವೂ ಭೂಮಿಯಲ್ಲಿ ಲೀನವಾದರೆ ಯಾವ ಆಶ್ಚರ್ಯವೂ ಇಲ್ಲ. ಏಕೆಂದರೆ Begin Doctrine ಚಾಲ್ತಿಯಲ್ಲಿದೆ. ಮುಂದೂ ಇರುತ್ತದೆ.

ಮುಖ್ಯ ಮಾಹಿತಿ ಮೂಲ: No Mission Is Impossible: The Death-Defying Missions of the Israeli Special Forces by Michael Bar-Zohar, Nissim Mishal