Friday, July 30, 2021

ಭೂಗತಲೋಕದ ಕಥೆ ಹೇಳುವ ಕಿಂದರಜೋಗಿ ಬಲಜೀತ್ ಪರಮಾರ್...

ಕಳೆದ ಸುಮಾರು ಐದು ದಶಕಗಳಿಂದ ಅಪರಾಧಲೋಕದ ಬಗ್ಗೆ, ಅದರಲ್ಲೂ ಪ್ರಮುಖವಾಗಿ ಮುಂಬೈ ಭೂಗತಲೋಕದ ಬಗ್ಗೆ, ಖಡಕ್ಕಾಗಿ ನಿರ್ಭಿಡೆಯಿಂದ ನಿರ್ಭೀತಿಯಿಂದ ವರದಿ ಮಾಡಿಕೊಂಡು ಬರುತ್ತಿರುವ ಹಿರಿಯ ಪತ್ರಕರ್ತ, ಲೇಖಕ ಬಲಜೀತ್ ಪರಮಾರ್ YouTube ಮೇಲೆ ಚಾನೆಲ್ ಒಂದನ್ನು ಮಾಡಿಕೊಂಡ್ದಾರೆ. ಅದರ ಕೊಂಡಿ ಇಲ್ಲಿದೆ - Baljeet Parmar 4 U

ಭೂಗತಲೋಕದ ಕಥೆಗಳನ್ನು ರೋಚಕವಾಗಿ, ಆದರೆ ಅನಗತ್ಯವಾಗಿ ವೈಭವೀಕರಿಸದೆ, ಯಾವುದೇ ಡಾನ್ ಗಳಿಗೆ ಬಕೆಟ್ ಹಿಡಿಯದೆ, ಏಕ್-ಮಾರ್-ದೋ-ತುಕಡಾ ಮಾದರಿಯಲ್ಲಿ ವರದಿ ಮಾಡುವುದರಲ್ಲಿ ಬಲಜೀತ್ ಪರಮಾರ್ ನಿಸ್ಸೀಮರು. ಆ ವಿಷಯದಲ್ಲಿ ಅವರಿಗೆ ಅವರೇ ಸಾಟಿ. 

ಇಷ್ಟು ಓದಿದ ನಂತರ ಈ ಬ್ಲಾಗ್ ಪೋಸ್ಟನ್ನು ಜಾಸ್ತಿ ಜನ ಓದಲಿಕ್ಕಿಲ್ಲ. ಸೀದಾ YouTube ಗೆ ಹೋಗಿ ಬಲಜೀತ್ ಹೇಳುವ ಕಥೆಗಳಲ್ಲಿ ತಲ್ಲೀನರಾಗಿಬಿಟ್ಟಾರು. ಆದರೂ ಬಲಜೀತ್ ಪರಮಾರ್ ಬಗ್ಗೆ ಒಂದಿಷ್ಟು buildup ಕೊಡುತ್ತೇನೆ. 

೧೯೯೭ ರಲ್ಲಿ ಡಾನ್ ಛೋಟಾ ರಾಜನ್ ಇವರ ಮೇಲೆ ಗುಂಡಿನ ದಾಳಿ ಮಾಡಿಸಿದ್ದ. ಒಂಬತ್ತು ಜನ ಹಂತಕರು ಹಲವಾರು ಗುಂಡು ಹಾರಿಸಿದ್ದರು. ಮೂರ್ನಾಲ್ಕು ಇವರಿಗೂ ಬಿದ್ದಿತ್ತು. ಗುಂಡು ಹಾರುತ್ತಿರುವಾಗ ಪ್ರಾಣವನ್ನು ಕಾಪಾಡಿಕೊಳ್ಳಲು ಓಡುವುದನ್ನು ಬಿಟ್ಟು, ಬರಿಗೈಯಲ್ಲಿ ಹಂತಕರ ಮೇಲೆ ಬಿದ್ದಿದ್ದರು ಈ ಧೀರ ಪತ್ರಕರ್ತ. ದಾಳಿಕೋರರ ಮೋಟಾರ್ ಸೈಕಲ್ ಹ್ಯಾಂಡಲ್ ಹಿಡಿದುಕೊಂಡವರು ಅದನ್ನು ಬಿಡಲೇ ಇಲ್ಲ. ಹಂತಕರೇ ಬೈಕ್ ಬಿಟ್ಟು ಓಡಿಹೋಗಿದ್ದರು. ಅದೃಷ್ಟ ಚೆನ್ನಾಗಿತ್ತು. ಗುಂಡೇಟು ತಿಂದರೂ ಬಚಾವಾದರು. ಚೇತರಿಸಿಕೊಂಡು ವರದಿಗಾರಿಕೆಯನ್ನು ಮೊದಲಿನಂತೆಯೇ ಮುಂದುವರೆಸಿದರು. ದಾಳಿ ಮಾಡಿಸಿದ್ದ ಡಾನ್ ರಾಜನ್ ಮುಂದೊಂದು ದಿವಸ ಇದೇ ಪರಮಾರ್ ಸಾಹೇಬ್ರಿಗೆ ಫೋನ್ ಮಾಡಿ ತಪ್ಪು ಗ್ರಹಿಕೆಯ ಕಾರಣದಿಂದ ದಾಳಿ ಮಾಡಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದ. ಮುಂದೊಂದು ದಿನ ಡಾನ್ ರಾಜನ್ ಪತ್ನಿಯನ್ನು ಮುಂಬೈ ಪೊಲೀಸರು ಬಂಧಿಸಿ, ಆ ಮೂಲಕ ವಿದೇಶದಲ್ಲಿ ನೆಲೆಸಿದ್ದ ರಾಜನ್ ಮೇಲೆ ಒತ್ತಡ ಹಾಕಿದಾಗ ಇವರಿಗೇ ಫೋನ್ ಮಾಡಿ ಗೊಳೋ ಅಂದಿದ್ದ. ಸಹಾಯ ಮಾಡುವಂತೆ ಕೇಳಿಕೊಂಡಿದ್ದ. 

'ನಿಮ್ಮ ಮೇಲೆ ಅಂದು ದಾಳಿ ಮಾಡಿದ್ದ ಒಂಬತ್ತು ಜನ ರೌಡಿಗಳು ಏನಾದರು?' ಎಂದು ಕೇಳಿದರೆ, 'ಅವರಲ್ಲಿ ಐದು ಜನ ಗ್ಯಾಂಗ್ ಘರ್ಷಣೆಗಳಲ್ಲಿ ಪರಸ್ಪರ ಬಡಿದಾಡಿಕೊಂಡು ಸತ್ತರು. ಉಳಿದ ನಾಲ್ವರನ್ನು ಪೊಲೀಸರು ಎನ್ಕೌಂಟರುಗಳಲ್ಲಿ ಉಡಾಯಿಸಿಬಿಟ್ಟರು. ನಾನು ಮಾತ್ರ ಆರಾಮಾಗಿದ್ದೇನೆ,' ಎಂದು ನಿರುಮ್ಮಳವಾಗಿ ಹೇಳುತ್ತಾರೆ ಬಲಜೀತ್ ಪರಮಾರ್. 

ಭೂಗತಲೋಕದ ಬಗ್ಗೆ ವರದಿ ಮಾಡಲು ಹೋಗಿ, ಅಲ್ಲೇನೋ ಲಫಡಾ ಆಗಿ, ಯಾರದ್ದೋ ಕೆಂಗಣ್ಣಿಗೆ ಗುರಿಯಾಗಿ ದಾಳಿಗೆ ಒಳಗಾದವರು ಅಥವಾ ಗುಂಡೇಟು ತಿಂದು ಶಿವನ ಪಾದ ಸೇರಿದ ಪತ್ರಕರ್ತರು ಸುಮಾರು ಜನ ಇದ್ದಾರೆ. ಆದರೆ ಸಾಮಾಜಿಕ ಬದ್ಧತೆಯಿಂದ, ಯಾವುದೋ ಒಳ್ಳೆಯ ಕೆಲಸವನ್ನು ಬೆಂಬಲಿಸಲು ಹೋಗಿ, ಆ ಕಾರಣದಿಂದ ಭೂಗತರ ಕೆಂಗಣ್ಣಿಗೆ ಗುರಿಯಾಗಿ, ಆ ಕಾರಣಕ್ಕೆ ಗುಂಡೇಟು ತಿಂದ ಪತ್ರಕರ್ತರು ಇರಲಿಕ್ಕಿಲ್ಲ. ಆದರೆ ಬಲಜೀತ್ ಅಂತಹವರು. 

ಮುಂಬೈನ ಖ್ಯಾತ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ದೊಡ್ಡ ತೊಂದರೆಗೆ ಸಿಕ್ಕಾಕಿಕೊಂಡಿದ್ದರು. ಭ್ರಷ್ಟಾಚಾರದ ಕೇಸಿನಲ್ಲಿ ಅಮಾನತ್ತಾಗಿದ್ದರು. ಆರು ವರ್ಷವಾದರೂ ಸರ್ಕಾರ ಅವರ ಬಗ್ಗೆ ಒಂದು ನಿರ್ಣಯ ಕೈಗೊಳ್ಳಲಿಲ್ಲ. ಅಮಾನತ್ತಿನ ತ್ರಿಶಂಕುಸ್ವರ್ಗದಲ್ಲಿ ದಯಾರನ್ನು ನೇತಾಕಿ ಮಾನಸಿಕ ಹಿಂಸೆ ನೀಡಿತು ಸರ್ಕಾರ. ಎಲ್ಲದಕ್ಕೆ ಕಾರಣ ಪೊಲೀಸ್ ಇಲಾಖೆಯಲ್ಲಿನ ರಾಜಕೀಯ ಮತ್ತು ಗುಂಪುಗಾರಿಕೆ. ದೊಡ್ಡ ತಲೆಗಳ ತಿಕ್ಕಾಟಕ್ಕೆ ದಯಾ ನಾಯಕರಂತಹ ಅಧಿಕಾರಿ ಬಲಿಯಾಗಿದ್ದರು ಎಂದು ಸುದ್ದಿ. ಆರು ವರ್ಷಗಳಾದರೂ ಒಂದು ತೀರ್ಮಾನ ಸಿಗದ ದಯಾ ತುಂಬಾ ಬೇಸರಗೊಂಡಿದ್ದರು. ಎಲ್ಲ ಪ್ರಯತ್ನ ಮಾಡಿದ್ದರು. ಏನೂ ಉಪಯೋಗವಾಗಿರಲಿಲ್ಲ. ಅದೇನೋ ಕಾರಣದಿಂದ ದಯಾ ನಾಯಕ್ ಮತ್ತು ಬಲಜೀತ್ ಪರಮಾರ್ ಭೇಟಿಯಾಗುವ ಸಂದರ್ಭ ಬಂತು. ದಯಾರ ಕಥೆ ಕೇಳಿದ ಬಲಜೀತ್ ಕರಗಿದರು. ಒಳ್ಳೆ ಮನುಷ್ಯನಿಗೆ ಅನ್ಯಾಯವಾಗಿದೆ ಅನ್ನಿಸಿತು. ತಮಗೆ ಪರಿಚಯವಿದ್ದ ಅಂದಿನ ಡಿಜಿಪಿ ವಿರ್ಕರನ್ನು ಕಂಡು ಅವರನ್ನು ಕೇಳಿಕೊಂಡಿದ್ದು ಇಷ್ಟೇ - 'ದಯಾ ನಾಯಕನಿಗೆ ಒಂದು ದಾರಿ ತೋರಿಸಿ. ಭ್ರಷ್ಟ ಎಂದು ಸಾಬೀತಾಗಿದೆಯೇ? ಆಗಿದ್ದರೆ ಮುಲಾಜಿಲ್ಲದೆ ವಜಾಗೊಳಿಸಿ ಮನೆಗೆ ಕಳಿಸಿ. ಇಲ್ಲವಾದರೆ ಇಲಾಖೆಗೆ ಮರಳಿ ತೆಗೆದುಕೊಂಡು ಒಂದು ಪೋಸ್ಟಿಂಗ್ ಕೊಡಿ. ಆ ಮನುಷ್ಯ ಖಿನ್ನತೆಯಿಂದ ಆತ್ಮಹತ್ಯೆಯ ವಿಚಾರ ಕೂಡ ಮಾಡುತ್ತಿದ್ದಾನೆ. ಹಾಗೇನಾದರೂ ಆದರೆ ದೊಡ್ಡ ದುರಂತವಾಗುತ್ತದೆ. ಪ್ಲೀಸ್ ಸರ್!' ಎಂದವರೇ ಡಿಜಿಪಿ ವಿರ್ಕ್ ಸಾಹೇಬರ ಮರುಮಾತಿಗೂ ಕಾಯದೆ ಎದ್ದು ಬಂದಿದ್ದರು. ವಿರ್ಕ್ ಸಾಹೇಬರು ಮುಂದಿನ ಕೆಲ ದಿವಸಗಳಲ್ಲೇ ದಯಾ ನಾಯಕರನ್ನು ಮರುನೇಮಕ ಮಾಡಿಕೊಂಡಿದ್ದರು. ಹೀಗೆ ಒಬ್ಬ ಒಳ್ಳೆ ಅಧಿಕಾರಿಗೆ ಸಹಾಯ ಮಾಡಿದ ಪುಣ್ಯ ಬಲಜೀತ್ ಪರಮಾರ್ ಸಂಪಾದಿಸಿದ್ದರು. 

ನಮಗೆಲ್ಲಾ ೧೯೮೦ ರ ದಶಕದಲ್ಲಿ ಮುಂಬೈ ಭೂಗತಜಗತ್ತು ಹೇಗಿರುತ್ತದೆ ಎಂಬುದನ್ನು ವರದಿಗಳ ಮೂಲಕ ತಿಳಿಸಿಕೊಟ್ಟವರು ಬಲಜೀತ್ ಪರಮಾರ್. ಆಗ 'ಮಿಡ್ ಡೇ' ಪತ್ರಿಕೆಯಲ್ಲಿ ಅವರ ವರದಿಗಳು ಸದಾ ಪ್ರಕಟವಾಗುತ್ತಿದ್ದವು. ಅವುಗಳನ್ನು ಕನ್ನಡದ ಪತ್ರಿಕೆಗಳು ಕನ್ನಡೀಕರಿಸಿ ಪ್ರಕಟಿಸುತ್ತಿದ್ದವು. 'ವಾರ ಪತ್ರಿಕೆ'ಯಲ್ಲಿ ಓದಿದ ನೆನಪು. ದಾವೂದ್ ಇಬ್ರಾಹಿಮ್ಮನ ಅಣ್ಣ ಸಬೀರ್ ಇಬ್ರಾಹಿಮ್ಮನ ಹತ್ಯೆಯ ವರದಿಯನ್ನು ಅದೆಷ್ಟು ಸೊಗಸಾಗಿ ಬರೆದಿದ್ದರು ಅಂದರೆ ಒಂದು ಥ್ರಿಲ್ಲರ್ ನೋಡಿದ ಹಾಗಿತ್ತು. ಅದರಲ್ಲಿ ಎಲ್ಲ ಸಹಜ ಮಸಾಲೆಯಿತ್ತು. ಪ್ರಳಯಾಂತಕ ರೌಡಿ ಸಬೀರ್ ಇಬ್ರಾಹಿಂ, ಅವನ ಜೊತೆ ಆ ಹೊತ್ತಿನ ಸಂತೋಷಕ್ಕಾಗಿ ಒಂದು ಪಟಾಕಾ ಮಾಲ್ ಹುಡುಗಿ, ಅವರ ರೋಮ್ಯಾನ್ಸ್, ಪೆಟ್ರೋಲ್ ಹಾಕಿಸಲು ನಿಂತಾಗ ಬಂದೆರಗುವ ಪಠಾಣ್ ಗ್ಯಾಂಗಿನ ಹಂತಕರ ಪಡೆ, ನಂತರ ಕೆಲಕಾಲ ನಿರಂತರವಾಗಿ ಮೊರೆಯುವ ಬಂದೂಕುಗಳು, ಮಾಯವಾದ ಹುಡುಗಿ, ಹೆಣವಾಗಿ ಬಿದ್ದ ಸಬೀರ್. 

ಮುಂದೇನಿದೆ? ಸಬೀರ್ ಇಬ್ರಾಹಿಮ್ಮನ ಹತ್ಯೆಯಾಗಿದ್ದೇ ಆಗಿದ್ದು ಕ್ರುದ್ಧಗೊಂಡ ದಾವೂದ್ ಇಬ್ರಾಹಿಮ್  ಪಠಾಣ್ ಗ್ಯಾಂಗಿನ ವಿರುದ್ಧ ಬಹಿರಂಗ ಸಮರ ಸಾರಿದ. ಮುಂಬೈನ ಗಲ್ಲಿಗಲ್ಲಿಗಳಲ್ಲಿ ರಕ್ತದ ಓಕುಳಿ. ಗ್ಯಾಂಗ್ ಯುದ್ಧವನ್ನು ಒಂದು ಹಂತಕ್ಕೆ ತಂದಾದ ಮೇಲೆಯೇ ದಾವೂದ್ ದುಬೈಗೆ ಉಡ್ಕಿ ಹಾರಿದ್ದು. ಅಲ್ಲಿಂದ ಭಾರತದ ಭೂಗತಲೋಕವನ್ನು ಆಳಿದ್ದು. ಅದು ೧೯೮೫ ರ ಸಮಯ. 

ಇವೆಲ್ಲಾ ಕಥೆಗಳನ್ನು ಬಲಜೀತ್ ರೋಚಕವಾಗಿ ಹೇಳುತ್ತಾರೆ. ಅವರಿಗೆ ಈಗ ಸುಮಾರು ೭೫-೮೦ ವರ್ಷವಾದರೂ ನೆನಪಿನ ಶಕ್ತಿ ತುಂಬಾ ಚೆನ್ನಾಗಿದೆ. 

ಚಿತ್ರನಟ ಸಂಜಯ್ ದತ್  ಮುಂಬೈ ಸ್ಫೋಟಗಳಲ್ಲಿ, ಪರೋಕ್ಷವಾಗಿ, ಭಾಗಿಯಾಗಿದ್ದಾನೆ ಎಂದು ಸುದ್ದಿಯನ್ನು ಬ್ರೇಕ್ ಮಾಡಿದವರೇ ಬಲಜೀತ್. ಆ ಸುದ್ದಿಯನ್ನು ಅವರು ಬೇಟೆಯಾಡಿದ್ದೇ ಒಂದು ರೋಚಕ ಕಥೆ. ಬೆರಳು ತೋರಿಸಿದರೆ ದೇಹವನ್ನೇ ನುಂಗಿಬಿಡುವ ಪ್ರಳಯಾಂತಕ ಈತ. ಆ ಸುದ್ದಿಯೊಂದು ಬ್ರೇಕ್ ಆಗದಿದ್ದರೆ ಸಂಜಯ್ ದತ್ ಬಚಾವಾಗಿದ್ದರೂ ಆಶ್ಚರ್ಯವಿರಲಿಲ್ಲ. ಏಕೆಂದರೆ ಆತನ ತಂದೆ ಸುನಿಲ್ ದತ್ ಪ್ರಭಾವಿ ರಾಜಕೀಯ ಮುಖಂಡರಾಗಿದ್ದರು. ಹಣಬಲವಿತ್ತು. ಜನಪ್ರಿಯತೆ ಇತ್ತು. ಆದರೆ ಥ್ಯಾಂಕ್ಸ್ ಟು ಬಲಜೀತರ ವರದಿಗಳು ಸಂಜಯ್ ದತ್ ಪೊಲೀಸರ ಮುಂದೆ ಎಲ್ಲ ಒಪ್ಪಿಕೊಂಡ. ಆತನನ್ನು ಮುಂದೆ ಕೂಡಿಸಿಕೊಂಡು ವಿಚಾರಣೆ ಮಾಡಿದ್ದ ಖಡಕ್ ಪೊಲೀಸ್ ಆಫೀಸರ್ ರಾಕೇಶ್ ಮಾರಿಯಾ ನಖರಾ ಮಾಡಿದ ಹೀರೊ ದತ್ತನ ಭುಜದವರೆಗೆ ಬೆಳೆಸಿಕೊಂಡಿದ್ದ ಜುಟ್ಟು ಹಿಡಿದು ಕಪಾಳಕ್ಕೆ ರಪ್ರಪಾ ರಪ್ರಪಾ ಎಂದು ಬಾರಿಸಿದ್ದೆ ಎಂದು ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಅದೆಲ್ಲಾ ಆಗಿದ್ದು ಬಲಜೀತರ ವರದಿಗಳ ಫಲಶ್ರುತಿ. 

ಮತ್ತೊಬ್ಬ ಚಿತ್ರನಟ ಫರ್ದೀನ್ ಖಾನ್ ಎಂಬ ಎಡಬಿಡಂಗಿ ಕೊಕೇನ್ ಖರೀದಿಸಿ ಸಿಕ್ಕಾಕಿಕೊಂಡಿದ್ದೂ ಸಹ ಮುಚ್ಚಿಹೋಗುತ್ತಿತ್ತೋ ಏನೋ. ಅದನ್ನೂ ಬಲಜೀತ್ ಬಿಡಲಿಲ್ಲ. ವಿಸ್ತ್ರತವಾಗಿ ವರದಿ ಮಾಡಿದ್ದರು. ಅದೆಷ್ಟು ಚೆನ್ನಾಗಿ ವರದಿ ಮಾಡಿದ್ದರು ಅಂದರೆ ಮಾದಕದ್ರವ್ಯ ನಿಗ್ರಹ ದಳ (NCB), 'ನೀವೇ ನಮ್ಮ ಪರವಾಗಿ ಉಳಿದ ಮಾಧ್ಯಮದವರಿಗೆ ಒಂದು ಬ್ರೀಫಿಂಗ್ ಕೊಟ್ಟುಬಿಡಿ,' ಅಂದಿತ್ತು. ಅದೊಂದು ತಮಾಷೆಯ ಘಟನೆ. ನೀವದನ್ನು YouTube ಮೇಲೆ ನೋಡಿ, ಕಥೆಯನ್ನು ಅವರ ಬಾಯಲ್ಲೇ ಕೇಳಿ ಆನಂದಿಸಬೇಕು. 

ಡಾನ್ ದಾವೂದ್ ಇಬ್ರಾಹಿಂನ ಪರಮಾಪ್ತ, ಕುಖ್ಯಾತ ಮಾದಕವಸ್ತುಗಳ ಕಳ್ಳಸಾಗಾಣಿಕೆದಾರ ಇಕ್ಬಾಲ್ ಮಿರ್ಚಿಯನ್ನು ತಡವಿಕೊಳ್ಳಲೂ ಹಿಂದೆಮುಂದೆ ನೋಡಲಿಲ್ಲ ಬಲಜೀತ್. ಇವರು ಮಾಡಿದ ಖಡಕ್ ವರದಿಗಳಿಂದ ಇಕ್ಬಾಲ್ ಮಿರ್ಚಿಯ ಕುಖ್ಯಾತ ಕ್ಯಾಬರೆ ಅಡ್ಡೆಯೊಂದು ಶಾಶ್ವತವಾಗಿ ಬೀಗ ಜಡಿಸಿಕೊಂಡಿತು. 'ಏನು ಸಾಬ್ ಹೀಗೆ ಮಾಡಿಬಿಟ್ಟಿರಿ?' ಎಂದು ಲಂಡನ್ನಿನಲ್ಲಿ ನೆಲೆಸಿದ್ದ ಇಕ್ಬಾಲ್ ಮಿರ್ಚಿ ಫೋನ್ ಮಾಡಿ ಗೋಳಾಡಿಕೊಂಡರೆ, 'ಅಲ್ಲಪ್ಪಾ, ನೀನು ಕ್ಯಾಬರೆ ನಡೆಸು. ಆದರೆ ಕಾನೂನುಬದ್ಧವಾಗಿ ನಡೆಸು. ನಿನ್ನ ಕ್ಯಾಬರೆ ಅಡ್ಡೆಯಲ್ಲಿ ಏನೇನು ಅಕ್ರಮಗಳು ನಡೆಯುತ್ತವೆ ಎಂದು ನಿನಗೆ ಗೊತ್ತೇ? ಗೊತ್ತಿಲ್ಲದಿದ್ದರೆ ನನ್ನ ವರದಿಗಳನ್ನು ಓದು,' ಎಂದು ಹೇಳಿ ಫೋನ್ ಇಟ್ಟಿದ್ದರು. ಅರ್ಥಮಾಡಿಕೊಂಡ ಮಿರ್ಚಿ 'ಲಂಡನ್ನಿಗೆ ಬನ್ನಿ ಸಾಬ್!' ಅಂದಿದ್ದ. ಆಮಿಷಗಳಿಗೆ ಒಳಗಾಗುವ ಪಾರ್ಟಿ ಇದಲ್ಲ ಎಂದು ಗೊತ್ತಾದ ಮೇಲೆ ಇವರ ಒಳ್ಳೆ ಮಾಹಿತಿದಾರನಾಗಿದ್ದ. ಖತರ್ನಾಕ್ ಮಾಹಿತಿಗಳನ್ನು ಕೊಡುತ್ತಿದ್ದ. ಬಲಜೀತರ ಸ್ಪೋಟಕ ವರದಿಗಳಿಗೆ ಅಂತಹ ಮಾಹಿತಿಗಳೇ ಬೇಕು. 

ದಾವೂದ್ ಬಗ್ಗೆ ಪುಂಖಾನುಪುಂಖವಾಗಿ ಬರೆಯುವವರು ಬಹಳ ಜನ. ಎಲ್ಲ ಊಹಾಪೋಹ. ೧೯೯೩ ರ ಮುಂಬೈ ಸ್ಫೋಟಗಳ ನಂತರ ದಾವೂದ್ ಯಾರ ಕಣ್ಣಿಗೂ ಬಿದ್ದಿಲ್ಲ. ಯಾವ ವರದಿಗಾರರ ಜೊತೆಗೂ ಮಾತಾಡಿಲ್ಲ. ಬಲಜೀತ್ ಕೂಡ ಆತ ಅವರ ಜೊತೆ ಮಾತಾಡಿದ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೆ ೧೯೯೩ ರ ಮೊದಲೂ ಸಹ ದಾವೂದನನ್ನು ಭೇಟಿಯಾದವರು ಬಹಳ ಕಮ್ಮಿ. ಆದರೆ ಬಲಜೀತ್ ಹಲವಾರು ಬಾರಿ ದಾವೂದನನ್ನು ಭೇಟಿಯಾಗಿದ್ದಾರೆ. ಎಲ್ಲಿಯವರೆಗೆ ಅಂದರೆ ಒಮ್ಮೆ ದಾವೂದ್ ಮತ್ತು ಆತನ ಬೀಗರು, ಅಂದರೆ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್, ಬಲಜೀತರನ್ನು ಲಂಡನ್ನಿನಲ್ಲಿ ಭೇಟಿಯಾಗಿದ್ದೊಂದೇ ಅಲ್ಲ ಕ್ಯಾಸಿನೊ ಅದು ಇದು ಎಂದು ಸುತ್ತಾಡಿಸಿದ್ದರಂತೆ. ಆ ಘಟನೆಯ ಬಗ್ಗೆ ಕೂಡ ಒಂದು ವಿವರವಾದ ವಿಡಿಯೋ ಮಾಡಿದ್ದಾರೆ ಬಲಜೀತ್. 

ಭೂಗತಲೋಕದ ಜೊತೆಗಿನ ತಮ್ಮ ಸಂಪರ್ಕಗಳನ್ನು ವೈಯಕ್ತಿಕ ಫಾಯಿದೆಗಳಿಗಾಗಿ ಬಳಸಿಕೊಂಡ ಅನೇಕ ಪೊಲೀಸ್ ಅಧಿಕಾರಿಗಳಿದ್ದಾರೆ. ಪತ್ರಕರ್ತರಿದ್ದಾರೆ. ರಾಜಕಾರಣಿಗಳೂ ಇದ್ದಾರೆ. ಒಮ್ಮೆ ಒಳ್ಳೆ ಸ್ನೇಹ ಸಂಬಂಧ ಬೆಳೆದ ನಂತರ ಭೂಗತರೂ ಇಂತವರ ಮಾತು ಕೇಳುತ್ತಾರೆ. ಸಹಾಯ ಕೇಳಿದರೆ ಸಾಧ್ಯವಾಗುವಂತಹ ಕೆಲಸವಾದರೆ ಮಾಡಿಯೂ ಕೊಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತಾವೇ ದೊಡ್ಡ ಡಾನ್ ಆಗಿ ಬಿಡುತ್ತಾರೆ. ವಸೂಲಿ, ಕಮಿಷನ್ ದಂಧೆಗೆ ನಿಂತುಬಿಡುತ್ತಾರೆ. ಆದರೆ ಬಲಜೀತ್ ಹಾಗಲ್ಲ. ಅವರಿಗೆ ಸಂಪೂರ್ಣವಾಗಿ ಅರಿವಿತ್ತು. ತಮ್ಮ ಸಂಪರ್ಕಗಳನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳಲಿಲ್ಲ. ಆದರೆ ಇನ್ನೊಬ್ಬರಿಗೆ ಸಹಾಯವಾಗುತ್ತದೆ ಎಂದರೆ ಮುದ್ದಾಂ ಉಪಯೋಗಿಸಿಕೊಂಡರು. ಉದಾಹರಣೆಗೆ ಡಿಜಿಪಿ ವಿರ್ಕ್ ಜೊತೆಗಿನ ಸಂಪರ್ಕವನ್ನು ಉಪಯೋಗಿಸಿಕೊಂಡು ದಯಾ ನಾಯಕರ ವೃತ್ತಿ ಜೀವನವನ್ನು ಮರಳಿ ಹಳಿ ಹತ್ತಿಸಿಕೊಟ್ಟರು. 

ಮತ್ತೊಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಬಲಜೀತ್. ೧೯೯೫ ರಲ್ಲಿ ಪ್ರದೀಪ್ ಜೈನ್ ಎಂಬ ರಿಯಲ್ ಎಸ್ಟೇಟ್ ಕುಳವನ್ನು ದಾವೂದ್ ಗ್ಯಾಂಗ್ ಉಡಾಯಿಸಿತು. ಆತ ವಸೂಲಿ ರೊಕ್ಕ ಕೊಡಲು ತಡಮಾಡಿದ್ದ. ದಾವೂದ್ ಪರವಾಗಿ ಅಬು ಸಲೇಂ ಫೋನ್ ಮಾಡಿ ಧಮ್ಕಿ ಹಾಕಿದ. ಪ್ರದೀಪ್ ಜೈನ್ ಅದ್ಯಾವ ಮೂಡಿನಲ್ಲಿದ್ದನೋ ಗೊತ್ತಿಲ್ಲ. ಅವನೂ ಕೊಂಚ ತಿರಸಟ್ಟನಂತೆ ಉದ್ಧಟತನದಿಂದ ಮಾತಾಡಿಬಿಟ್ಟ. ಮಹಾ ದುರಹಂಕಾರಿ ಅಬು ಸಲೇಂಗೆ ಅಷ್ಟೇ ಸಾಕಾಯಿತು. ಕೊಡುವ ರೊಕ್ಕವನ್ನೂ ಕೊಟ್ಟಿಲ್ಲ. ಮೇಲಿಂದ ರೋಪ್ ಹಾಕುತ್ತಾನೆ ಎಂದುಕೊಂಡವನೇ 'ಸಾಲೇ ಕೋ ಉಡಾ ಡಾಲೋ' ಎಂದು ಆಜ್ಞೆ ಮಾಡಿದ. 

'ನೀನು ಪ್ರದೀಪ್ ಜೈನ್ ತಾನೇ?' ಎಂದು ಖಾತ್ರಿ ಮಾಡಿಕೊಂಡೇ ಹಂತಕರು ಪ್ರದೀಪ್ ಜೈನನನ್ನು ಎತ್ತಿದ್ದರು. ಅಬು ಸಲೇಂ ಅದೆಷ್ಟು ದುಷ್ಟ ಮತ್ತು ಕ್ರೂರಿ ನೋಡಿ. ಪ್ರದೀಪ್ ಜೈನ್ ಸತ್ತ ಬರೋಬ್ಬರಿ ಹದಿಮೂರನೇ ದಿನಕ್ಕೆ ಅವನ ಮನೆಗೆ ಫೋನ್ ಮಾಡಿದ್ದ. ಸತ್ತ ಪತಿಯ ಹದಿಮೂರನೇ ದಿನದ ಕಾರ್ಯಗಳಲ್ಲಿ ಭಾಗಿಯಾಗಿದ್ದ ಪ್ರದೀಪ್ ಜೈನನ ವಿಧವೆಯನ್ನು ಎಬ್ಬಿಸಿ ಫೋನ್ ಮೇಲೆ ಕರೆಯಿಸಿಕೊಂಡಿದ್ದ. 'ಹೊಸದಾಗಿ ಬಂದಿರುವ ವಿಧವೆ ಪಟ್ಟ ಹೇಗಿದೆ?' ಎಂದು ಆ ಹತಭಾಗ್ಯ ಅಬಲೆಯನ್ನು ಲೇವಡಿ ಮಾಡಿ ಗಹಗಹಿಸಿ ರಕ್ಕಸ ನಗೆ ನಕ್ಕಿದ್ದ. ತನ್ನ ವಿಕೃತ ಮನಸ್ಥಿತಿಯನ್ನು ಜಗಜ್ಜಾಹೀರು ಮಾಡಿಕೊಂಡಿದ್ದ. ಮುಂದೆ ಅದೇ ಕೇಸಿನಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯಾಗಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ. (ಮಾಹಿತಿ ಮೂಲ: My Name Is Abu Salem by S. Hussain Zaidi)

ಪ್ರದೀಪ್ ಜೈನ್ ಏನೋ ಸತ್ತು ಸ್ವರ್ಗ ಸೇರಿಕೊಂಡ. ಆದರೆ ದಾವೂದ್ ಇಬ್ರಾಹಿಂನ ಮೀಟರ್ ಮಾತ್ರ ನಿಲ್ಲಲಿಲ್ಲ. ಅದು ಓಡುತ್ತಲೇ ಇತ್ತು. ಈಗ ಪ್ರದೀಪ್ ಜೈನನ ತಮ್ಮ ಸುನೀಲ್ ಜೈನನನ್ನು ಅಟಕಾಯಿಸಿಕೊಂಡರು. 'ನಿನ್ನ ಅಣ್ಣ ಪ್ರದೀಪ್ ಮೂರು ಕೋಟಿ ಕೊಡಬೇಕಾಗಿತ್ತು. ಕೊಡದೇ ಸತ್ತ. ಈಗ ನೀನು ನಾಲ್ಕು ಕೋಟಿ ಕೊಡು. ಲೆಕ್ಕ ಚುಕ್ತಾ ಮಾಡು. ಬದುಕಿಕೊ. ಇಲ್ಲವಾದರೆ ನಿನ್ನನ್ನೂ ನಿನ್ನ ಅಣ್ಣನ ಬಳಿ ಸ್ವರ್ಗಕ್ಕೆ ಕಳಿಸಬೇಕಾಗುತ್ತದೆ. ಖಬರ್ದಾರ್,' ಎಂದು ಸುನೀಲ್ ಜೈನನಿಗೆ ಬೆದರಿಕೆಗಳ ಮೇಲೆ ಬೆದರಿಕೆ. 

'ಮೂರು ಕೋಟಿಗೆ ಮಾತಾಗಿತ್ತು. ಈಗ ನಾಲ್ಕು ಕೋಟಿಯೇಕೆ!?' ಎಂದು ಸುನೀಲ್ ಜೈನ್ ಅಲವತ್ತುಕೊಂಡರೆ, 'ಹೆಚ್ಚಿನ ಒಂದು ಕೋಟಿ ತಡವಾಗಿದ್ದಕ್ಕೆ. ಲೇಟ್ ಫೀ (late fee) ಇದ್ದಂಗೆ. ಜಲ್ದಿ ಮೊತ್ತ ರೆಡಿ ಮಾಡು,' ಎಂದು ಅಬ್ಬರಿಸಿ ಫೋನ್ ಕಟ್ ಮಾಡಿದವ ದಾವೂದನ ಬಲಗೈ ಬಂಟ ಛೋಟಾ ಶಕೀಲ್. 

ಸುನೀಲ್ ಜೈನ್ ಫುಲ್ ಹೈರಾಣಾಗಿ ಹೋದ. ಮೊದಲೇ ಭೂಗತಲೋಕದವರ ಕೆಂಗಣ್ಣಿಗೆ ಗುರಿಯಾದ ಬಿಲ್ಡರ್. ಇಂತಹವನ ಕಟ್ಟಡದಲ್ಲಿ ಡೆಪಾಸಿಟ್ ಕೊಟ್ಟು ಫ್ಲಾಟ್ ಬುಕ್ ಮಾಡಿದರೆ ಮುಂದೇನು ಕಾದಿದೆಯೋ ಎಂಬ ಹೆದರಿಕೆಯಿಂದ ಫ್ಲ್ಯಾಟುಗಳು ಬುಕ್ಕಾಗುತ್ತಿಲ್ಲ. ರೊಕ್ಕದ ಹರಿವಿಲ್ಲ. ನಾಲ್ಕು ಕೋಟಿ ಮೊತ್ತ ಕೂಡುತ್ತಿಲ್ಲ. ಭೂಗತರ ಬೆದರಿಕೆ ಕರೆಗಳು ಮಾತ್ರ ನಿರಂತರ. ಡಾನ್ ಕೊಟ್ಟ ವಾಯಿದೆ ದಿನ ಹತ್ತಿರಕ್ಕೆ ಬರುತ್ತಿತ್ತು. ವಾಯಿದೆಯನ್ನು ಯಾವುದೇ ಕಾರಣಕ್ಕೆ ಮುಂದೂಡುವುದಿಲ್ಲ. ಹೆಚ್ಚಿನ ಸಮಯ ನೀಡುವುದಿಲ್ಲ ಎಂದು ಛೋಟಾ ಶಕೀಲ್ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದ. ಸುನೀಲ್ ಜೈನನಿಗೆ ಊಟ ಸೇರುತ್ತಿಲ್ಲ. ನಿದ್ದೆ ಬರುತ್ತಿಲ್ಲ. ಸಾವಿನ ಭಯ. ಅವನೂ ಅಣ್ಣನನ್ನು ಸ್ವರ್ಗದಲ್ಲಿ ಸೇರಲು ರೆಡಿಯಾಗಿದ್ದ. 

ಸುನೀಲ್ ಜೈನ್ ಮಾಡುವ ಪ್ರಯತ್ನ ಎಲ್ಲ ಮಾಡಿದ. ಏನೇ ಮಾಡಿದರೂ ಭೂಗತರು ಒಪ್ಪಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಆತನ ವಕೀಲರು ಆತನನ್ನು ಪತ್ರಕರ್ತ ಬಲಜೀತ್ ಪರಮಾರರ ಹತ್ತಿರ ಕರೆದುಕೊಂಡು ಬಂದರು. ವಿಷಯ ವಿವರಿಸಿದರು. ಭೂಗತಲೋಕದ ನಾಡಿಮಿಡಿತ ಬರೋಬ್ಬರಿ ಗೊತ್ತಿದ್ದ ಬಲಜೀತ್ ಪರಮಾರ್ ಎಲ್ಲ ವಿಷಯ ಅರಿತಿದ್ದರು. ಸುನೀಲ್ ಜೈನ್ ನಿಜವಾಗಿ ಕಷ್ಟದಲ್ಲಿದ್ದಾನೆ ಎಂದು ಅವರಿಗೆ ಅರಿವಾಯಿತು. 

ಮಹತ್ವದ ಫೋನ್ ನಂಬರುಗಳಿದ್ದ ತಮ್ಮ ಪುಸ್ತಕ ತೆಗೆದು ಛೋಟಾ ಶಕೀಲನ ದುಬೈ ನಂಬರಿಗೆ ಫೋನಾಯಿಸಿದರು. ಆತ ಜಗತ್ತಿನ ಯಾವ ಮೂಲೆಯಲ್ಲಿದ್ದನೋ ಗೊತ್ತಿಲ್ಲ. ಇವರ ಮೇಲಿನ ಗೌರವದಿಂದ ಫೋನ್ ಎತ್ತಿದ ಛೋಟಾ ಶಕೀಲ್, 'ಹೇಳಿ ಭಾಯೀಸಾಬ್, ಏನು ಸಮಾಚಾರ?' ಎಂದು ವಿಚಾರಿಸಿದ. ಬಲಜೀತ್ ಎಲ್ಲವನ್ನೂ ವಿವರಿಸಿದರು. ಎಲ್ಲವನ್ನೂ ಕೇಳಿಸಿಕೊಂಡ ಶಕೀಲ್ ನಕ್ಕ. 'ನಿಮ್ಮ ಹತ್ತಿರ ಈ ಗಿರಾಕಿ ಬರುತ್ತಾನೆ ಅನ್ನುವ ವಿಷಯ ಆಗಲೇ ತಿಳಿದುಬಂದಿತ್ತು. ಆದರೆ ಇಷ್ಟು ಬೇಗ ಬಂದು ನಿಮ್ಮ ಕಾಲು ಹಿಡಿಯುತ್ತಾನೆ ಎಂದುಕೊಂಡಿರಲಿಲ್ಲ...' ಎಂದು ಗಹಗಹಿಸಿದ. 

ಬಲಜೀತ್ ಕೊನೆಯದಾಗಿ ಹೇಳಿದ್ದು ಒಂದೇ ಖಡಕ್ ಮಾತು - 'ಶಕೀಲ್, ಇವನ ಹತ್ತಿರ ತುರ್ತಾಗಿ ನಿನಗೆ ಕೊಡಲು ಹಣ ನಿಜವಾಗಿಯೂ ಇಲ್ಲ. ಅದು ನನಗೆ ಮನದಟ್ಟಾಗಿದೆ. ನಿನ್ನ ಹತ್ತಿರ ಎಂದೂ ಏನೂ ಸಹಾಯ ಕೇಳಿಲ್ಲ. ಈಗ ಈ ಮನುಷ್ಯನಿಗೆ ಕೊಂಚ ಕಾಲಾವಕಾಶ ಕೊಟ್ಟು ನೋಡು ಎಂದು ಮಾತ್ರ ಕೇಳುತ್ತೇನೆ. ಅಷ್ಟೇ. ಉಳಿದದ್ದನ್ನು ನಿರ್ಧರಿಸುವ ವಿವೇಚನೆ ನಿನಗಿದೆ ಎಂದು ನಂಬುತ್ತೇನೆ,' ಎಂದು ಮಾತು ಮುಗಿಸಲು ಮುಂದಾದರು. 

'ಆಯಿತು ಭಾಯಿ ಸಾಬ್, ನೀವು ಹೇಳಿದಿರಿ ಎಂದರೆ ಮುಗಿಯಿತು. ಪ್ರದೀಪ್ ಜೈನನಿಗೆ ನಿಶ್ಚಿಂತೆಯಿಂದ ಇರಲು ಹೇಳಿ. ದುಬೈಗೆ ಬಂದು ನಮ್ಮವರನ್ನು ದಾವೂದ್ ಭಾಯಿಯ ಬಂಗಲೆ ವೈಟ್ ಹೌಸಿನಲ್ಲಿ ಕಾಣಲು ಹೇಳಿ. ಏನಾದರೂ ಡೀಲ್ ವರ್ಕ್ ಔಟ್ ಮಾಡಿಕೊಡೋಣ. ನಿಮಗಾಗಿ ಅಷ್ಟೂ ಮಾಡಲಿಲ್ಲ ಅಂದರೆ ಹೇಗೆ?' ಎಂದು ಹೇಳಿದ ಶಕೀಲ್. ಧನ್ಯವಾದ ಹೇಳಿದ ಬಲಜೀತ್ ಕರೆ ಮುಗಿಸಿದರು. 

ಎಲ್ಲವನ್ನೂ ಅಲ್ಲೇ ಕುಳಿತು ಸ್ಪೀಕರ್ ಫೋನ್ ಮೇಲೆ ಕೇಳಿಸಿಕೊಂಡ ಪ್ರದೀಪ್ ಜೈನ್ ಸೀದಾ ಬಲಜೀತರ ಕಾಲಿಗೆ ಡೈವ್ ಹೊಡೆದುಬಿಟ್ಟ. 

'ಮಂದಿರಕ್ಕೆ ಹೋದೆ. ಮಸೀದಿಗೆ ಹೋದೆ. ಮಂತ್ರಿಗಳನ್ನು ಕಂಡೆ. ಅವರ ಸಂತ್ರಿಗಳನ್ನು ಕಂಡೆ. ಪೊಲೀಸರನ್ನು ಕಂಡೆ. ಪೋದ್ದಾರರನ್ನು ಕಂಡೆ. ಯಾರೂ ಇಷ್ಟು ಸಹಾಯ ಮಾಡಲಿಲ್ಲ. 'ನಿನ್ನ ವಿಷಯ ಈ ಮಟ್ಟಕ್ಕೆ ಬಂದು ಮುಟ್ಟಿದೆ. ಶಕೀಲ್ ಸಿಟ್ಟಿಗೆದ್ದಿದ್ದಾನೆ ಅಂದರೆ ಸಾವಿನಿಂದ ನಿನ್ನನ್ನು ಯಾರೂ ಬಚಾವ್ ಮಾಡಲು ಸಾಧ್ಯವಿಲ್ಲ. ಹೋಗ್ಹೋಗು,' ಎಂದು ಕಳಿಸಿದ್ದರು. ಏನೆಲ್ಲಾ ಕೊಡುತ್ತೇನೆ ಎಂದರೂ ದೊಡ್ಡದೊಡ್ಡವರಿಂದ ಆಗದ ಕೆಲಸವನ್ನು ನೀವು ಮಾಡಿಕೊಟ್ಟಿರಿ. ನಿಮ್ಮ ಈ ಸಹಾಯ ಮರೆಯಲಾರೆ,' ಎಂದು ಕಾಲಿನ ಮೇಲೆ ಬಿದ್ದು ಉಳ್ಳಾಡಿದ. ಶಕೀಲನ ಬಂಟರು ತನ್ನ ಗೇಮ್ ಬಾರಿಸುವುದಿಲ್ಲ, ಕೊಲ್ಲುವುದಿಲ್ಲ ಎನ್ನುವುದನ್ನು ಮತ್ತೆ ಮತ್ತೆ ಖಾತ್ರಿ ಮಾಡಿಕೊಂಡ. 

'ನನಗೆ ಮಾತು ಕೊಟ್ಟಿದ್ದಾನೆ. ಏನೂ ಆಗುವುದಿಲ್ಲ. ಹೋಗಿ ಬಾ,' ಎಂದು ಬಲಜೀತ್ ಆತನನ್ನು ಮತ್ತು ಜೊತೆಗೆ ಬಂದಿದ್ದ ಆತನ ವಕೀಲನನ್ನು ಕಳಿಸಿಕೊಟ್ಟರು. ಅದೇ ಕೊನೆ. 

ಮುಂದೆ ಪ್ರದೀಪ್ ಜೈನ್ ದುಬೈಗೆ ಹೋದ. ಭೂಗತಲೋಕದದವರ ದುಬೈ ಮಹಲು ವೈಟ್ ಹೌಸಿನಲ್ಲಿ ಚೌಕಾಸಿ ಕುದುರಿಸಿದ. ವಾಪಸ್ ಬಂದ. ಇವತ್ತಿಗೂ ಚೆನ್ನಾಗಿದ್ದಾನೆ. ಆದರೆ ಇದಾದ ನಂತರ ಒಂದು ಬಾರಿಯೂ ನನ್ನನ್ನು ಬಂದು ಭೇಟಿಯಾಗಲಿಲ್ಲ. ಧನ್ಯವಾದ ಹೇಳುವುದು ದೂರದ ಮಾತು. ಅಂತಹದರ ಅಪೇಕ್ಷೆ ಇರಲಿಲ್ಲ ಬಿಡಿ. ಆದರೂ... ಎಂದು ಬಲಜೀತ್ ಆ ಕಥೆ ಮುಗಿಸುತ್ತಾರೆ. 

ಇಂತಹ ಹಲವಾರು, ಎಲ್ಲೂ ಸಿಗದ, ಹಿಂದೆಂದೂ ಯಾರೂ ವರದಿ ಮಾಡಿರದ ಪುರಾತನ ಕಥೆಗಳನ್ನು ತಮ್ಮದೇ ಸಾಟಿಯಿಲ್ಲದ ಶೈಲಿಯಲ್ಲಿ ವಾರಕ್ಕೆ ಒಂದು ಎರಡು ಬಾರಿ YouTube ಮೇಲೆ ಹೇಳುತ್ತಾರೆ ಬಲಜೀತ್. ಆಸಕ್ತರಿಗೆ ರಸದೌತಣ. ಎಲ್ಲೂ ಭೂಗತರ, ದುಷ್ಟರ ವೈಭವೀಕರಣವಿಲ್ಲ. ಅಪರಾಧ ಕೃತ್ಯಗಳ ವಿಜೃಂಭಣೆ ಇಲ್ಲ. just matter of fact ಶೈಲಿಯಲ್ಲಿ ಕಥೆ ಹೇಳುತ್ತಾರೆ ಬಲಜೀತ್.

ಇಷ್ಟೆಲ್ಲಾ ಮಾಹಿತಿ ಹೊಂದಿರುವ, ಪತ್ರಕರ್ತರೂ ಆಗಿದ್ದ ಬಲಜೀತ್ ಪುಸ್ತಕ ಬರೆದಿದ್ದು ಕಡಿಮೆ. ಕ್ರೈಂ ಪುಸ್ತಕಗಳನ್ನು ಬರೆಯಲೇ ಇಲ್ಲ. ಎಲ್ಲೋ ಹಿಂದಿ ಉರ್ದು ಕವಿತೆಗಳ ಒಂದು ಪುಸ್ತಕ ಬರೆದಿದ್ದು ಬಿಟ್ಟರೆ ಉಳಿದವೆಲ್ಲಾ ಕ್ರೈಂ ವರದಿಗಳು ಮಾತ್ರ. ಅದು ಪುಸ್ತಕ ಪ್ರಪಂಚಕ್ಕೆ, ಪುಸ್ತಕಪ್ರೇಮಿಗಳಿಗೆ ಆದ ನಷ್ಟ ಎಂದು ನನ್ನ ಭಾವನೆ. ಬಿಡಿಬಿಡಿಯಾಗಿ ಕಥೆಗಳನ್ನು ಕೇಳುವ ಸುಖ ಬೇರೆ. ಒಂದು ಪುಸ್ತಕ ಹಿಡಿದು ನಾಲ್ಕಾರು ತಾಸು ಅದರಲ್ಲೇ ಕಳೆದುಹೋಗುವ ಪರಮಸುಖವೇ ಬೇರೆ. ಈ ವಯಸ್ಸಿನಲ್ಲಿ ಬಲಜೀತ್ ತಾವೇ ಖುದ್ದಾಗಿ ಬರೆಯದಿದ್ದರೂ ಬೇರೆಯವರಿಂದ ಬರೆಸುವಂತಾದರೂ ಸಾಕು. ಮುಂದಿನ ಪೀಳಿಗೆಗಳಿಗೆ ಅಪರಾಧ ಜಗತ್ತಿನ ನಿಜ ರೂಪ ದಾಖಲೆಯಾಗಿ ಉಳಿಯುತ್ತದೆ. ಹಾಗಾಗಲಿ. ಅಲ್ಲಿಯ ತನಕ ಅವರು ಹೇಳುವ ಕಥೆಗಳನ್ನು YouTube ಮೇಲೆ ಕೇಳಿ ಆನಂದಪಡೋಣ.

Tuesday, July 27, 2021

ಸಿಂಹಕಟಿ ಸುಂದರಿಯ ಜೀವನದ ಸಿಂಹಾವಲೋಕನ...

ಸಿಂಹಕಟಿ ಅಂದರೆ ಸಿಂಹಕ್ಕೆ ಕಟಿ ಅಂತ ಅರ್ಥವಲ್ಲ. ನಮ್ಮ ಧಾರವಾಡ ಕಡೆ ಕಟಿ ಎಂದರೆ ಬಡಿ, ಹೊಡಿ, ಬಾರಿಸು ಎಂದೂ ಅರ್ಥವಿದೆ. ನಮ್ಮ ಕಡೆ (ಉಡಾಳ) ಹುಡುಗರು ಮೃಗಾಲಯಕ್ಕೆ ಹೋದಾಗ ಸುಮ್ಮನೆ ನೋಡಿ ಬರುವುದಿಲ್ಲ. ಅವಕಾಶ ಸಿಕ್ಕಾಗೊಮ್ಮೆ ಅಲ್ಲಿರುವ ಮೃಗಗಳನ್ನು ಕಾಡಿಸಿ, ಪೀಡಿಸಿ ಬರುತ್ತಾರೆ. ಪೀಡೆ ಮುಂಡೇವು! ಆ ದೃಷ್ಟಿಯಲ್ಲಿ ನೋಡಿದರೆ ಪಂಜರದಿಂದ ಹೊರಗೆ ನಿಂತು ಒಳಗಿರುವ ಪ್ರಾಣಿಗಳನ್ನು ಕಾಡುತ್ತಿರುವವರೇ ಕಾಡು ಪ್ರಾಣಿಗಳು. 'ಕಾಡು ಪ್ರಾಣಿಗಳು ಕಾಡಲ್ಲಿವೆ. ಕಾಡುವ ಪ್ರಾಣಿಗಳು ನಾಡಲ್ಲಿವೆ,' ಎನ್ನುವ ಮಾತು ಅಷ್ಟರ ಮಟ್ಟಿಗೆ ಸತ್ಯ.

ಮೃಗಾಲಯದಲ್ಲಿ ಸಿಂಹ ಕಂಡರೆ, 'ಏ, ಅಲ್ಲಿ ನೋಡಲೇ. ಸಿಂಹ ಐತಿ. ಆದ್ರ ಮಕ್ಕೊಂಡೈತಿ. ಎಬ್ಬಿಸಲೇ ಅದನ್ನ. ತೊಗೋ ಕಲ್ಲು. ಒಗಿ ಅದಕ್ಕ. ರೊಕ್ಕಾ ಕೊಟ್ಟು ನೋಡಾಕ ಬಂದೇವಿ. ಸಿಂಹಕ್ಕ ಕಲ್ಲು ಒಗೆದು, ಅದನ್ನು ಎಬ್ಬಿಸಿ, ಗುರ್ ಅನ್ನಿಸಿಯೇ ಹೋಗೋದು,' ಎಂದು ಕಲ್ಲೆಸೆದರೆ ಅದು ಸಿಂಹಕ್ಕೆ ಕಟಿದಂತೆ. 'ಸಿಂಹಕ್ಕ ಚೂಪ ಕಲ್ಲಿಂದ ಒಂದು ಕಟಿದೆ ನೋಡು. ಗಜ್ಜ ಬಿದ್ದ ಕೂಡಲೇ ಕುಂಡಿ ತಿರುಗಿಸಿ ಎದ್ದು ಗುರ್ ಅಂತು,' ಎಂದು ಹೇಳಿಕೊಂಡು ತಿರುಗಲು ಅಡ್ಡಿಯಿಲ್ಲ.

ಈ ಕಿತಾಪತಿಯನ್ನು ನೋಡಿದ ಹಿರಿಯರಾರೋ ಇವರ ಬುರುಡೆಗೆ ಸಮಾ ಕಟಿದಿರುತ್ತಾರೆ. ಆ ಮಾತು ಬೇರೆ. ಬಿಟ್ಟಿಯಲ್ಲಿ ಬುರುಡೆ ತಟ್ಟುವುದು ಹಿರಿಯರಿಗೆ ಇರುವ ಒಂದು ಸೌಲಭ್ಯ. ತಾವು ಜೀವಮಾನವಿಡೀ ತಮ್ಮ ಬುರುಡೆ ಮತ್ತೊಂದು ಕಡೆ ಕಟಿಸಿಕೊಂಡಿದ್ದನ್ನು ಬಾಲವಿಲ್ಲದ ಇಂತಹ ಬಾಲಕರ ಬುರುಡೆಗೆ ತಟ್ಟುವ ಮೂಲಕ ತೀರಿಸಿಕೊಂಡು ವಿಕೃತಾನಂದ ಅನುಭವಿಸುತ್ತಾರೆ. ೧೯೮೩ ರಲ್ಲಿ, ಐದನೇ ಕ್ಲಾಸಿನಲ್ಲಿ ಇದ್ದಾಗ, ಮೈಸೂರಿಗೆ ಪ್ರವಾಸ ಹೋದಾಗ, ಅಲ್ಲಿನ ವಿಶ್ವವಿಖ್ಯಾತ ಮೃಗಾಲಯಕ್ಕೆ ಹೋದಾಗ ಸಿಂಹಕ್ಕೆ ಕಟಿದ ನೆನಪಿಲ್ಲ. ಆದರೆ ಬ್ರೌನ್ ಬಣ್ಣದ ಗೊರಿಲ್ಲಾಕ್ಕೆ ಕಟಿದು ಅದನ್ನು ಮರಳಿ ಮರಕ್ಕೆ ಹತ್ತಿಸಿದ್ದು ನಮ್ಮ ಜೊತೆಗಾರರ ಅನನ್ಯ ಸಾಧನೆ ಎಂದು ಇವತ್ತಿಗೂ ನೆನಪಿದೆ. ಮನಗಂಡ ಕಟಿಸಿಕೊಂಡ ಗೊರಿಲ್ಲಾ ನಾವು ಅಲ್ಲಿರುವ ತನಕ ಮರ ಬಿಟ್ಟು ಕೆಳಗೆ ಬಂದರೆ ಕೇಳಿ. 'ಮಂಗ್ಯಾ ಅಂದ್ರ ಗಿಡದಾಗ ಇರಬೇಕು. ಅಲ್ಲೆನಲೇ?'  ಎಂದು ಸಮರ್ಥನೆ ಬೇರೆ!

ಇರಲಿ. ಸಿಂಹಕಟಿ ವಿಷಯಕ್ಕೆ ಬರೋಣ. ಸಿಂಹಕಟಿ ಅಂದರೆ ಸಿಂಹದ ಸೊಂಟ. ಸೊಂಟ? 'ಸೊಂಟದ ವಿಷಯ ಬೇಡವೋ ಶಿಷ್ಯ' ಅಂತೇನೋ ಪಡ್ಡೆ ಹುಡುಗರ ಸಿನೆಮಾ ಹಾಡೂ ಇತ್ತು ಅಂತ ನೆನಪು. ಸಿಂಹದ ಸೊಂಟ ತುಂಬಾ ಚಿಕ್ಕದಾಗಿ, ನೀಟಾಗಿ, ಮಾಟಾಗಿ ಇರುತ್ತದೆ. ಸಿಂಹದ ಬೇರೆ ಅಂಗಾಂಗಗಳಿಗೆ ಹೋಲಿಸಿದರೆ ಸಿಂಹದ ಸೊಂಟ ತುಂಬಾ ಚಿಕ್ಕದು ಅನ್ನಿಸುತ್ತದೆ. ಹಾಗೆ ಚಿಕ್ಕ ಸೊಂಟ ಉಳ್ಳವರಿಗೆ ಸಿಂಹಕಟಿ ಹೊಂದಿದ ಮಹಿಳೆ ಅಥವಾ ಪುರುಷ ಎಂದು ಪ್ರಶಂಸೆ ಮಾಡುವ ರೂಢಿ ಇದೆ. ವಯಸ್ಸಾದಂತೆ ಸಿಂಹಕಟಿ ಹೋಗಿ ಗಜಕಟಿ (ಆನೆ ಸೊಂಟ), ಎಮ್ಮೆನಿತಂಬ (ಎಮ್ಮೆ ಕುಂಡಿ) ಇತ್ಯಾದಿ ಆಗುತ್ತವೆ. ಆ ಮಾತು ಬೇರೆ.

ಬಾಲಿವುಡ್ ಮಾಜಿ ನಟಿ, ಚೆಂದುಳ್ಳಿ ಚೆಲುವೆ ಶಿಲ್ಪಾ ಶೆಟ್ಟಿಗೆ ಸಿಂಹಕಟಿ ಸುಂದರಿ ಎನ್ನುವ ಬಿರುದು (ಬಾವಲಿಯ ಜೊತೆ) ಕೊಟ್ಟು ಹೊಗಳಿದ್ದು ಇದೆ. ಯೋಗಾಸನ ಹಾಕಿ ಹಾಕಿ ನಲವತ್ತೈದರ ಹರೆಯದಲ್ಲೂ ತುಂಬಾ ಸುಂದರವಾಗಿ ಆರೋಗ್ಯದ ಚಿಲುಮೆಯಾಗಿ ಕಾಣುತ್ತಾರೆ ಶಿಲ್ಪಾ ಶೆಟ್ಟಿ. ಬಾಬಾ ರಾಮದೇವರ ಜೊತೆ ಸವಾಲ್ ಹಾಕಿ ಜಿದ್ದಿಗೆ ಬಿದ್ದಂತೆ ಸಾರ್ವಜನಿಕವಾಗಿ ಯೋಗ ಮಾಡುತ್ತಾರೆ. ಅದ್ಭುತವಾದ ಮೈಕಟ್ಟನ್ನು ಕಾದುಕೊಂಡು ಬಂದಿದ್ದಾರೆ. ೧೯೯೦ ರ ದಶಕದಲ್ಲಿ 'ಬಾಝಿಗರ್' ಎನ್ನುವ ಸೂಪರ್ ಹಿಟ್ ಸಿನೆಮಾದ ಮೂಲಕ ಗಮನ ಸೆಳೆದ ಶಿಲ್ಪಾ ಮುಂದೆ ಸಾಕಷ್ಟು ಯಶಸ್ವಿ ನಟಿಯಾದರು. ಅಂದಿನ ಎಳಸಲು ಶಿಲ್ಪಾಳ ಮುಗ್ಧ ಸೌಂದರ್ಯ ಬೇರೆಯೇ ಇದ್ದರೆ ಇವತ್ತಿನ ಪ್ರಬುದ್ಧ ಶಿಲ್ಪಾಳ ಸೌಂದರ್ಯವೇ ಬೇರೆ. ಮರ್ಯಾದೆಯಿಂದ ಮಾಗುವ (graceful ageing) ಪ್ರಕ್ರಿಯೆಗೆ ಅತ್ಯುತ್ತಮ ಉದಾಹರಣೆ ಆಕೆ.

ಈಗ ಸಿಂಹಕಟಿಯ ಮನುಷ್ಯರನ್ನು ಬ್ಯಾಟರಿ ಹಾಕಿ ಹುಡುಕಿಕೊಂಡು ಹೋಗಬೇಕಾಗಿದೆ. ಮೊದಲಾಗಿದ್ದರೆ ಪುರುಷರು ಮಹಿಳೆಯರು ಇಬ್ಬರೂ ಸಹಜವಾಗಿ ಸಿಂಹಕಟಿಯನ್ನೇ ಹೊಂದಿರುತ್ತಿದ್ದರು. ಮಹಿಳೆಯರಿಗೆ ಸಿಂಹಕಟಿ ಸೌಂದರ್ಯದ ಸಂಕೇತವಾದರೆ, ಪುರುಷಸಿಂಹರಿಗೆ ಅದು ಪುರುಷತ್ವದ ಸಂಕೇತ.

ಸೊಂಟ, ಅದರಲ್ಲೂ ಮಹಿಳೆಯರ ಸೊಂಟ, ಏಕೆ ಸಣ್ಣಗಿರುತ್ತಿತ್ತು ಅಂದರೆ ಮಕ್ಕಳು ಅದರಲ್ಲಿ ವರಚ್ಚಾಗಿ (Snugly) ಫಿಟ್ ಆಗಿ ಕುಳಿತುಕೊಂಡು, ಮಹಿಳೆಗೆ ಹೆಚ್ಚಿನ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗಲಿ ಎಂದು. ಸೊಂಟದ ಒಂದು ಕಡೆ ನೀರಿನ ಕೊಡಪಾನ. ಸೊಂಟದ ಇನ್ನೊಂದು ಕಡೆ ಕೈಗೂಸು. ತಲೆ ಮೇಲೆ ಒಗೆಯಬೇಕಾದ ವಸ್ತ್ರಗಳ ಗಂಟು. ಇದು ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಕಂಡುಬರುವ stereotypical ದೃಶ್ಯ. ಹೀಗೆ ಮಹಿಳೆ ನದಿಯತ್ತ ನಡೆಯುತ್ತಿದ್ದಾಗಲೇ ವಿಲನ್ ಪ್ರತ್ಯಕ್ಷವಾಗಬೇಕು. ಅಲ್ಲೊಂದು ಹೊಡೆದಾಟವಾಗಬೇಕು. ಅದು ಟಿಪಿಕಲ್ ಮೂವಿ ಸೀನ್.

ಇಸ್ರೇಲ್ ದೇಶ ಪಾಲೆನ್ಸ್ಟಿನ್ ಜಾಗಗಳಲ್ಲಿ ಮಾಡಿಕೊಳ್ಳುವ ಅಕ್ರಮ settlement ಜಾಗಗಳ ಹಳೆಯ ಫೋಟೋಗಳನ್ನು ನೋಡಿ. ಅಲ್ಲಿಯೂ ಮಹಿಳೆಯರು ಸಾರ್ವಜನಿಕ ಕೊಳಾಯಿಗೆ ಹೋಗಿ ನೀರು ತರುತ್ತಾರೆ. ಸೊಂಟದ ಒಂದು ಕಡೆ ಹಸುಗೂಸು. ಇನ್ನೊಂದು ಕಡೆ ನೀರಿನ ಕೊಡ. ಗಮನ ಸೆಳೆಯುವ extra fitting ಅಂದರೆ ಎದೆಗೆ ಅಡ್ಡಡ್ಡ ತೂಗಾಕಿಕೊಂಡಿರುವ ಉಝಿ(Uzi) ಆಟೋಮ್ಯಾಟಿಕ್ ರೈಫಲ್. Uzi ಇಸ್ರೇಲಿನ ಹೆಮ್ಮೆಯ ಆಯುಧ. ಯಾವಾಗ ದುಷ್ಟ ಉಗ್ರರು ಎಲ್ಲಿ ದಾಳಿ ಮಾಡುತ್ತಾರೋ ಗೊತ್ತಿಲ್ಲ. ಹಾಗೆಂದು ಅವರಿಗೆ ಹೆದರಿ ಮನೆಯಲ್ಲಿ ಕೂಡಲಾಗುವುದಿಲ್ಲ. ಎಲ್ಲರೂ ಸೈನ್ಯದ ತರಬೇತಿ ಪಡೆದಿರುತ್ತಾರೆ. ಸೈನ್ಯದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಿರುತ್ತಾರೆ. ಹಾಗಾಗಿ ಉಝಿ ಬಂದೂಕು ನೇತಾಕಿಕೊಂಡು ಮನೆಗೆಲಸ ಮಾಡಿಕೊಳ್ಳುವುದು ಅವರಿಗೆ ಉಸಿರಾಡಿದಷ್ಟೇ ಸಹಜ. ಹಾಗೆ ಉಝಿ ಬಂದೂಕು ನೇತಾಕಿಕೊಂಡು ಜೊತೆಗೆ ಮಗುವನ್ನೂ ಸೊಂಟದ ಮೇಲೆ ಏರಿಸಿಕೊಂಡು ತಮ್ಮ ಕೆಲಸ ಮಾಡಿಕೊಳ್ಳುವ ಇಸ್ರೇಲಿ ಮಹಿಳೆಯರು ನಿಜವಾದ ಸಿಂಹಕಟಿಯ ಮಹಿಳೆಯರು. ಕಟಿಯೊಂದೇ ಅಲ್ಲ ಇಡೀ ಸಿಂಹದ ಪ್ರತಿರೂಪ. ನರಸಿಂಹ ಮತ್ತು ನಾರಿಸಿಂಹಿಣಿಯರು.

ಮಹಿಳೆಯರು ಈಗ ತಹತಹಿಸುವ hourglass ಫಿಗರ್ ಮೊದಲು ಸಹಜವಾಗಿತ್ತು. ಈಗ ವಿರಳವಾಗಿದೆ. ಹಾಗಾಗಿ ಅಪರೂಪಕ್ಕೆ ಮಕ್ಕಳನ್ನು ಸೊಂಟದ ಮೇಲೆ ಇಟ್ಟುಕೊಂಡರೂ ಅವು ಸರಕ್ ಅಂತ ಜಾರಿ ಕೆಳಗೆ ಬಂದುಬಿಡುತ್ತವೆ. ಪ್ರತ್ಯೇಕ ಜಾರುಬಂಡೆ ಬೇಕಾಗಿಲ್ಲ. ಅಮ್ಮನ ಸೊಂಟದ ಮೇಲೆ ಕುಳಿತರೆ ಸಾಕು. ಅಲ್ಲೇ ಜಾರುಬಂಡೆ. 'ಅಮ್ಮಾ, ನೀನು ನಕ್ಕರೆ, ನಮ್ಮ ಬಾಳು ಸಕ್ಕರೆ. ನಿನ್ನ ಕಾಲಲ್ಲಿ ಸ್ವರ್ಗವಿದೆ. ಸೊಂಟದಲ್ಲಿ ಜಾರುಬಂಡೆಯಿದೆ. ಧನ್ಯ ನಾನು ತಾಯೀ!'

ಹೊಟ್ಟೆ ಬಂದ (ನಮ್ಮಂತಹ) ಗಂಡಸರ ಸೊಂಟದ ಮೇಲೆ ಪ್ಯಾಂಟ್ ನಿಲ್ಲುವುದಿಲ್ಲ. ಸೊಂಟ ದಪ್ಪಗಾದ ಹೆಂಗಸರ ಸೊಂಟದ ಮೇಲೆ ಕೂಸುಗಳು ನಿಲ್ಲುವುದಿಲ್ಲ. ಮಕ್ಕಳಿಗೆ ಸೊಂಟಾಸನದ ಮೇಲೆ ಕುಳಿತುಕೊಳ್ಳುವ ಭಾಗ್ಯಕ್ಕಾದರೂ ಸಿಂಹಕಟಿ ಇದ್ದರೆ ಅನುಕೂಲ ಅನ್ನಿಸುತ್ತದೆ.

ಸಿಂಹಕಟಿ ಎಂದಾಗ ಇಷ್ಟೆಲ್ಲಾ ವಿಷಯ ನೆನಪಿಗೆ ಬಂತು. ಇನ್ನು ಸಿಂಹಾವಲೋಕನ. ಸಿಂಹ ನಡೆಯುತ್ತಿರುವಾಗ ಆಗಾಗ ನಿಂತು ವಿವರವಾಗಿ ತನ್ನ ಹಿಂದೆ ಮತ್ತು ಸುತ್ತಮುತ್ತ ನೋಡಿ, ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ನಂತರ ಮುಂದೆ ನಡೆಯುತ್ತದೆ. ಒಂದು ಅಮೂಲಾಗ್ರ ಪುನರಾವಲೋಕನಕ್ಕೆ ಸಿಂಹಾವಲೋಕನ ಅನ್ನುತ್ತಾರೆ. Comprehensive review ಅನ್ನಬಹುದೇನೋ.

ಈಗ ಸಿಂಹಕಟಿಯ ನಟಿ ಶಿಲ್ಪಾ ಶೆಟ್ಟಿಯ ಜೀವನದ  ಸಿಂಹಾವಲೋಕನಕ್ಕೆ ಬಂದರೆ...ಅವರ ಪತಿ ಅದು ಯಾರೋ ರಾಜ್ ಕುಂದ್ರಾ ಅಂತೆ. ದೊಡ್ಡ ಶ್ರೀಮಂತ. ಅಡ್ನಾಡಿ ಸುದ್ದಿಗಳಲ್ಲೇ ಹೆಚ್ಚು ರಾರಾಜಿಸಿದವ. ಸ್ವಲ್ಪ ವರ್ಷಗಳ ಹಿಂದೆ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಅದು ಇದು ಅಂತ ಲಫಡಾ ಆದಾಗ ಕೂಡ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಆತನಿಗೆ ವಿಚಾರಣೆಗೆ ಆಮಂತ್ರಣ ಕೊಟ್ಟಿತ್ತು. ವಿಚಾರಣೆ ಎದುರಿಸಿ ಬಂದಿದ್ದ ಅಂತ ಸುದ್ದಿಯಾಗಿತ್ತು. ಈಗ ಆತನನ್ನು ವಿಚಾರಣೆಗೆ ಕರೆಸಿದ್ದು ಮಾತ್ರವಲ್ಲ ಬಂಧಿಸಿಯೂ ಬಿಟ್ಟಿದ್ದಾರೆ. ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಈ ಸಲ ಅಶ್ಲೀಲಚಿತ್ರಗಳ ನಿರ್ಮಾಣದ ಆರೋಪದಲ್ಲಿ. ಅವನ ಸಮರ್ಥಕರು 'ಏ, ಅವು ಅಶ್ಲೀಲಚಿತ್ರಗಳು ಅಲ್ಲ. ಅವು ಶೃಂಗಾರಚಿತ್ರಗಳು. Pornography ಮತ್ತು Erotica ಮಧ್ಯೆ ವ್ಯತ್ಯಾಸವಿದೆ. ರಾಜ್ ಕುಂದ್ರಾ ನಿರ್ದೋಷಿಯಾಗಿ ಹೊರ ಬರುತ್ತಾರೆ,' ಎಂದು ಹೇಳುತ್ತಾರೆ. ಇದರಲ್ಲಿ ನಿಜವಿರಬಹುದು. ಶೃಂಗಾರ ಚಿತ್ರಗಳ ಹೆಸರಲ್ಲಿ ಏನೇನೋ ನಡೆದು ಹೋಗುತ್ತದೆ. ಅಶ್ಲೀಲ ಮತ್ತು ಶೃಂಗಾರದ ನಡುವೆ ಇರುವ separating line ತುಂಬಾ ಮಸುಕುಮಸುಕಾಗಿದೆ. ಕಾನೂನಿನಲ್ಲಿ ಕೂಡ. It is very blurry.

ಹೀಗೆ ಗುಂಡಾಂತರ ಮಾಡಿಕೊಂಡ ಗಂಡ ಕಂಬಿ ಹಿಂದೆ ಹೋದ ಅಂದರೆ ಅದೊಂದು ಮಾತು. ಪೊಲೀಸರು ಶಿಲ್ಪಾರನ್ನು ಕೂಡ ವಿಚಾರಣೆಗೆ ಕರೆದು, ಐದಾರು ತಾಸು ವಿಚಾರಣೆ ಮಾಡಿ ಬಿಟ್ಟು ಕಳಿಸಿದ್ದಾರೆ. ಶಿಲ್ಪಾರಿಗೆ ಇದೇನೂ ಹೊಸದಲ್ಲ. ಸಿಂಹಾವಲೋಕನ ಮಾಡಿದರೆ ಈಗ ಸುಮಾರು ೧೮-೨೦ ವರ್ಷಗಳ ಹಿಂದೆ ಅವರ ಮೇಲೆ ಬೇರೊಂದು ಗುರುತರ ಆರೋಪ ಬಂದಿತ್ತು. ಆಗ ಇನ್ನೂ ಅವರ ವಿವಾಹವಾಗಿರಲಿಲ್ಲ. ಬಾಲಿವುಡ್ಡಿನಲ್ಲಿ ಸಾಕಷ್ಟು ಬೇಡಿಕೆಯ ಹೊಂದಿದ್ದ ಯಶಸ್ವಿ ತಾರೆಯೆನಿಸಿಕೊಂಡಿದ್ದರು. ಆಗ ಒಂದು ಲಫಡಾದಲ್ಲಿ ಶಿಲ್ಪಾ ಶೆಟ್ಟಿ ಕುಟುಂಬ ಸಿಕ್ಕಿಕೊಂಡಿತ್ತು.

ಏನಾಗಿತ್ತು ಅಂದರೆ....ಆಗ ಶಿಲ್ಪಾ ಶೆಟ್ಟಿ ಗುಜರಾತ್ ಮೂಲದ ಉದ್ಯಮಿಯೊಬ್ಬರ ಸೀರೆಗಳ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಕೋಟ್ಯಂತರ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದರು. ಇವರೇನೋ ರೂಪದರ್ಶಿಯಾಗಿ ಕೆಲಸ ಮಾಡಿಕೊಟ್ಟರು. ಆ ಉದ್ಯಮಿ ರೊಕ್ಕ ಬಿಚ್ಚಲಿಲ್ಲ. ಬಿಚ್ಚಿದರೂ ದೊಡ್ಡ ಮೊತ್ತವನ್ನು ಉಳಿಸಿಕೊಂಡ. ಉಳಿಸಿಕೊಂಡ ಮೊತ್ತವನ್ನು ವಸೂಲಿ ಮಾಡುವುದೇ ದೊಡ್ಡ ತಲೆಬಿಸಿಯಾಯಿತು. ಆಗ ಎಂಟ್ರಿ ಕೊಟ್ಟಿದ್ದೇ ಮುಂಬೈ ಭೂಗತಲೋಕ. Mumbai Underworld.

ಆರೋಪವೇನೆಂದರೆ...ಶಿಲ್ಪಾರ ಪಾಲಕರು ಉದಯ್ ಶೆಟ್ಟಿಎಂಬ ಮುಂಬೈನ ಹೋಟೆಲ್ ಉದ್ಯಮಿಯ ಮೂಲಕ ವಿದೇಶದಲ್ಲಿ ನೆಲೆಸಿದ್ದ ಅಂಡರ್ವರ್ಲ್ಡ್ ಡಾನ್ ಫಝಲ್-ಉಲ್- ರಹಮಾನ್ ನನ್ನು ಸಂಪರ್ಕಿಸಿದರು. ಆತ ವಸೂಲಿಯ ಡೀಲ್ ತೆಗೆದುಕೊಂಡ. ಗುಜರಾತ್ ಮೂಲದ ಸೀರೆ ಉದ್ಯಮಿಯನ್ನು ಬೆದರಿಸಿದ. ಉದ್ಯಮಿ ಮಾಂಡವಳಿಗೆ (ಸಂಧಾನಕ್ಕೆ) ಮುಂದಾದ. ಎಲ್ಲರೂ ಒಪ್ಪುವಂತಹ ಡೀಲ್ ಕುದುರಲಿಲ್ಲ. ಭೂಗತರ ಧಮ್ಕಿಗೆ ಬೆದರಿದ ಉದ್ಯಮಿ ಪೊಲೀಸರಿಗೆ ದೂರು ಕೊಟ್ಟು ಅಂಬೋ ಅಂದ.

ಆಗ ಶಿಲ್ಪಾ ಶೆಟ್ಟಿಯ ಪಾಲಕರ ಮೇಲೆ ಮೊಕದ್ದಮೆ ದರ್ಜಾಗಿತ್ತು. ಪಾಲಕರು, ಡೀಲ್ ಕುದುರಿಸಿದ್ದ ಹೊಟೇಲಿಗ ಉದಯ್ ಶೆಟ್ಟಿ ಅಂದರ್ ಆಗಿದ್ದರು. ನಂತರ ಜಾಮೀನ್ ಮೇಲೆ ಹೊರಗೆ ಬಂದರು. ಸುಮಾರು ಬೇಗನೆಯೇ ಜಾಮೀನು ಸಿಕ್ಕಿದ್ದು ವಿಶೇಷ. ಆಗ ಕೂಡ ಗುಜರಾತಿನ ಪೊಲೀಸರು ಶಿಲ್ಪಾ ಶೆಟ್ಟಿ ಕುಟುಂಬದ ಸದಸ್ಯರನ್ನು ತೀವ್ರವಾದ ವಿಚಾರಣೆಗೆ ಗುರಿಪಡಿಸಿದ್ದರು ಎಂದು ಪತ್ರಿಕೆಗಳಲ್ಲಿ ಓದಿದ ನೆನಪು.

ಮುಂದೆ ಏನಾಯಿತು? ಮುಖ್ಯ ಆರೋಪಿ ಭೂಗತ ಪಾತಕಿ ಫಝಲ್-ಉಲ್-ರಹಮಾನ್ ಆಗ ವಿದೇಶದಲ್ಲಿ ಸುತ್ತಾಡಿಕೊಂಡಿದ್ದ. ನಂತರ ಮುಂದೆ ಹಲವಾರು ವರ್ಷಗಳ ನಂತರ ಯಾವುದೋ ದೇಶದಲ್ಲಿ ಬಂಧಿತನಾದ ಅವನನ್ನು ಭಾರತಕ್ಕೆ ಕಳಿಸಲಾಯಿತು. ಬಂದು ಗುಜರಾತಿನ ಯಾವುದೋ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಕೇಸ್ ಇನ್ನೂ ನಡೆದಿದೆ ಅಂತ ಕಾಣುತ್ತಿದೆ. ಶಿಲ್ಪಾ ಶೆಟ್ಟಿಯ ತಂದೆ ನಿಧನರಾಗಿದ್ದಾರೆ. 

ಶಿಲ್ಪಾ ಶೆಟ್ಟಿಯ ಗಂಡ ರಾಜ್ ಕುಂದ್ರಾ ಮತ್ತೆ ಲಫಡಾದಲ್ಲಿ ಸಿಕ್ಕಾಕಿಕೊಂಡಾಗ ಶಿಲ್ಪಾ ಶೆಟ್ಟಿ ನೆನಪಾದಳು. ಸಿಂಹಕಟಿ ಸುಂದರಿ ಎಂದು ಆಕೆಗೆ ಮೆಚ್ಚುಗೆಯಿಂದ ಕೊಟ್ಟಿದ್ದ ಬಿರುದು ನೆನಪಾಯಿತು. ಹಾಗಾಗಿ ಒಂದು ಸಿಂಹಾವಲೋಕನ ಮಾಡಿದ್ದಾಯಿತು.

Saturday, July 24, 2021

ಹಿಂತಿರುಗಿ ನೋಡಿದಾಗ : ತ.ರಾ.ಸು ಜೀವನಕಥನ ಓದಿದಾಗ ನೆನಪಾಗಿದ್ದು...

ತ.ರಾ.ಸು - ಕಳೆದ ಶತಮಾನದ ಕನ್ನಡದ ವರಿಷ್ಠ ಮತ್ತು ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು. ಕನ್ನಡದಲ್ಲಿ ಬರೆದೇ ಬದುಕಿದ ಕೆಲವೇ ಕೆಲವು ಸಾಹಿತಿಗಳಲ್ಲಿ ಒಬ್ಬರು. ಇವತ್ತಿನ ಜಮಾನಾದಲ್ಲಿ ಬರೆದೇ ಬದುಕುತ್ತೇನೆ ಎಂದು ಇರುವವರು ಬಹಳ ಕಮ್ಮಿ. ಭೈರಪ್ಪನವರು ಒಬ್ಬರು ತಮ್ಮ ಕಾದಂಬರಿಗಳಿಂದ ಒಂದಿಷ್ಟು ರೊಕ್ಕ ಗಳಿಸುತ್ತಿರಬಹುದು. ಬೇರೆ ಯಾರೂ ಇದ್ದಂತಿಲ್ಲ. ಏನೋ ಬರೆದು, ಅದಕ್ಕೆ ತಿಂಗಳ ಪಗಾರ ಪಡೆಯುವವರು ಈ ವರ್ಗದಲ್ಲಿ ಬರುವುದಿಲ್ಲ. ಆದರೆ ತರಾಸು ಕಾಲದಲ್ಲಿ ಹಾಗಿರಲಿಲ್ಲ. ಬರೆದು ಕೊಡಿ ಎಂದು ಮುಂಗಡ ಕೊಟ್ಟು ಹೋಗುತ್ತಿದ್ದರು. ಇಷ್ಟು ಪುಟ ಬರೆದುಕೊಟ್ಟ ನಂತರ ಮುಂದಿನ ಕಂತು ಸಿಗುತ್ತಿತ್ತು. ಅದರಲ್ಲೇ ಜೀವನ. ತರಾಸು ಅವರಂತಹ ಶ್ರೇಷ್ಠ ಬರಹಗಾರರು ಅದರಲ್ಲೇ ಸಾರ್ಥಕ ಜೀವನ ಮಾಡಿದರು. ಸಾಕಷ್ಟು ಕಷ್ಟ ನಷ್ಟ ಅನುಭವಿಸಿದರು. ಖ್ಯಾತಿಯ ಜೊತೆ ಹಣವೂ, ಅಪರೂಪಕ್ಕೆ, ಬಂದಾಗ ಎಲ್ಲೋ ಒಂದಿಷ್ಟು ಸುಖ ಪಟ್ಟರು. ಆದರೆ ನಿಯಮಿತ ಆದಾಯವಿಲ್ಲದೆ ಕಷ್ಟಗಳನ್ನು ಅನುಭವಿಸಿದ್ದೇ ಜಾಸ್ತಿ. ಅದೆಲ್ಲ ಅವರ ಜೀವನಚರಿತೆಯಲ್ಲಿ ವಿಸ್ತೃತವಾಗಿ ದಾಖಲಾಗಿದೆ. 

ಹಿಂತಿರುಗಿ ನೋಡಿದಾಗ - ಅವರ ಜೀವನಕಥನ. ಇದರ ವಿಶಿಷ್ಟತೆ ಏನೆಂದರೆ ಇದನ್ನು ಅರ್ಧ ಬರೆದಿಟ್ಟಾಗ ತರಾಸು ನಿಧನರಾದರು. ಉಳಿದಿದ್ದನ್ನು ಅವರ ಪತ್ನಿ ಅಂಬುಜಾ ತರಾಸು ಪೂರ್ಣಗೊಳಿಸಿದ್ದಾರೆ. ಪತಿ ಬರೆದಿದ್ದನ್ನು ಓದುವ ಹವ್ಯಾಸ ಹೊಂದಿದ್ದರು ಶ್ರೀಮತಿ ತರಾಸು. ಆದರೆ ಎಂದೂ ಬರೆದವರೇ ಅಲ್ಲ ಅವರು. ಪತಿಯ ನಿಧನಾನಂತರ, ತರಾಸು ಅವರ ಅಭಿಮಾನಿಗಳ ಕೋರಿಕೆಯಂತೆ, ಜೀವನಕಥನದ ಉಳಿದ ಭಾಗವನ್ನು ಯಶಸ್ವಿಯಾಗಿ ಬರೆದಿದ್ದಾರೆ. ತರಾಸು ಅವರ ಅಭಿಮಾನಿ ಮತ್ತು ಅವರ ಅಂತಿಮ ವರ್ಷಗಳಲ್ಲಿ ಅವರ ಬರವಣಿಗೆಗೆ ಸಹಾಯಕರಾಗಿದ್ದ ಪಾಂಡವಪುರದ ಸಾಹಿತಿ ನಾ. ಪ್ರಭಾಕರ ಸಹಾಯ ಮಾಡಿದ್ದಾರೆ. 

ತರಾಸು ಏನೇ ಬರೆದರೂ ಅದು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಅದರಲ್ಲಿ ದೂಸರಾ ಮಾತಿಲ್ಲ. ತುಂಬಾ ಸರಳವಾಗಿ, ನೇರವಾಗಿ, ಅನಗತ್ಯ ಕ್ಲೀಷೆಗಳ ಗೊಂದಲವಿಲ್ಲದೆ ಬರೆಯುತ್ತಾರೆ ತರಾಸು. ಶಕ್ತಿಯುತ ಭಾಷೆ. ಕಣ್ಣಿಗೆ ಕಟ್ಟಿದಂತೆ ಚಿತ್ರಿಸುವ ಕಲೆ ಸಿದ್ಧಿಸಿಕೊಂಡಿದ್ದರು. ಅವರ ಆತ್ಮಕಥೆ ಕೂಡ ಇದಕ್ಕೆ ಭಿನ್ನವಾಗಿಲ್ಲ. ಅಂಬುಜಾ ತರಾಸು ಕೂಡ ಅಷ್ಟೇ ಸೊಗಸಾಗಿ ಆತ್ಮಚರಿತ್ರೆಯನ್ನು ಪೂರ್ಣಗೊಳಿಸಲು ಕಾರಣ ಅವರ ಪತಿದೇವರ ಪ್ರೇರಣೆ ಮತ್ತು ಎಲ್ಲಿದ್ದಾರೋ ಅಲ್ಲಿಂದಲೇ ಮಾಡಿದ ಆಶೀರ್ವಾದ ಎಂದು ಹೇಳಲು ಅಡ್ಡಿಯಿಲ್ಲ. 

ತರಾಸು ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. ಅವರು ಬರೆದಿದ್ದು ತುಂಬಾ ಇದೆಯಾದರೂ ನಾನು ಓದಿದ್ದು ತುಂಬಾ ಕಮ್ಮಿ. ತರಾಸು ಕಾದಂಬರಿಗಳನ್ನು ತಾಯಿಯವರು ಗ್ರಂಥಾಲಯದಿಂದ ತಂದು ಓದುತ್ತಿದ್ದನ್ನು ನೋಡಿದ್ದೆ. ಆಗ ತುಂಬಾ ಚಿಕ್ಕವನಾಗಿದ್ದ ಕಾರಣದಿಂದ ಕಾದಂಬರಿ ಓದುವ ಹವ್ಯಾಸ ಇನ್ನೂ ಬೆಳೆದಿರಲಿಲ್ಲ. 

ತರಾಸು ಬರೆದಿದ್ದನ್ನು ಓದಲು ಪ್ರೇರೇಪಿಸಿದ ಒಬ್ಬ ಐತಿಹಾಸಿಕ ಹೀರೋಗೆ ಧನ್ಯವಾದ ಹೇಳಲೇಬೇಕು. ಅವನು ಯಾರು ಅಂದರೆ ಚಿತ್ರದುರ್ಗದ ಗಂಡುಗಲಿ ಮದಕರಿ ನಾಯಕ. ಮದಕರಿ ನಾಯಕನ ಬಗ್ಗೆ, ಓಬ್ಬವ್ವನ ಬಗ್ಗೆ ಯಾರು ಕೇಳಿಲ್ಲ? ರೇಡಿಯೋ ಹಚ್ಚಿದಾಗೆಲ್ಲ 'ಕನ್ನಡ ನಾಡಿನ ವೀರ ರಮಣಿಯ...' ಎನ್ನುವ ಸಿನಿಮಾ ಗೀತೆ ಸದಾ ಮೊರೆಯುತ್ತಿತ್ತು. ಮಕ್ಕಳಿಗೆ ಕಥೆ ಹೇಳುವಾಗ ಓಬವ್ವನ ಕಥೆ ಮೊದಲಿನ ಒಂದೆರೆಡು ವರ್ಷಗಳಲ್ಲೇ ಕೇಳಿಯಾಗುತ್ತಿತ್ತು. ಆ ಕಥೆ ಎಲ್ಲ ಪಾಲಕರ ಬತ್ತಳಿಕೆಯಲ್ಲಿರುವ ಸಾಮಾನ್ಯ ಕಥೆ ಎಂದು ನನ್ನ ಭಾವನೆ. ಓಬ್ಬವ್ವನ ಕಥೆ ಕೇಳಿದಾಗ ಅಷ್ಟೇನೂ ಮಹಾ ಅನ್ನಿಸಿರಲಿಲ್ಲ. ಹೆಚ್ಚಾಗಿ ಅದರ ಮಹತ್ವ, ಗಂಭೀರತೆ ಅರ್ಥವಾಗಿರಲಿಲ್ಲ. ಆದರೆ ಮುಂದೆ ಒಂದಕ್ಕೊಂದು ಅಕ್ಷರ ಕೂಡಿಸಿ ಓದುವುದನ್ನು ಕಲಿತಾಗ ಮೊದಲು ಕೈಗೆ ಬಂದವೇ 'ಭಾರತ ಭಾರತಿ' ಪುಸ್ತಕಗಳ ಭಂಡಾರ. ರಾಷ್ಟ್ರೋತ್ಥಾನ ಪರಿಷತ್ತಿನವರು ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಚಿಕ್ಕ ಚಿಕ್ಕ ಪುಸ್ತಕಗಳನ್ನು 'ಭಾರತಿ ಭಾರತಿ' ಸರಣಿಯಲ್ಲಿ ಪ್ರಕಟಿಸಿದ್ದರು. ಚಿಕ್ಕ ಡೈರಿ ಸೈಜಿನ ಪುಸ್ತಕಗಳು. ೩೦-೪೦ ಪುಟಗಳು ಅಷ್ಟೇ. ಸರಳ ಭಾಷೆ. ಅದರಲ್ಲಿ ಸುಲಭವಾಗಿ ಗುರುತಿಸಬಲ್ಲಂತಹ ನೀತಿ ಪಾಠಗಳು. ಬೇರೆಯೇ ಜಗತ್ತಿಗೆ ಕೊಂಡಯ್ಯುವಂತಿದ್ದ ವಿನೂತನ ರೇಖಾಚಿತ್ರಗಳು. ಎಲ್ಲ ಕೂಡಿ ೨೫೦೦ - ೩೦೦೦ ಪದಗಳಲ್ಲಿ ಒಬ್ಬ ವ್ಯಕ್ತಿಯ ಜೀವನಗಾಥೆಯನ್ನು ಯಶಸ್ವಿಯಾಗಿ ಕಟ್ಟಿಕೊಡುವ ಪ್ರಯತ್ನ. ಆ ದಿಸೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದವು ಆ 'ಭಾರತಿ ಭಾರತಿ'ಯೆಂಬ ಪುಸ್ತಕರತ್ನಗಳು. ಇವತ್ತಿಗೂ ಮಕ್ಕಳು ಹಾಳುವರಿ ಕಾಮಿಕ್ಸ್ ಅದು ಇದು ಓದುವ ಬದಲಿ 'ಭಾರತ ಭಾರತಿ' ಓದಿದರೆ ಅವರಿಗೆ ತುಂಬಾ ಸಹಾಯಕಾರಿ ಎಂದು ನನ್ನ ಖಡಕ್ ನಂಬಿಕೆ. 

ಇಂತಿಪ್ಪ 'ಭಾರತ ಭಾರತಿ' ಪುಸ್ತಕದಲ್ಲಿ ಕೈಗೆ ಸಿಕ್ಕವ ಚಿತ್ರದುರ್ಗದ ಮದಕರಿ ನಾಯಕ. ಓದಿ ಫುಲ್ ರೋಮಾಂಚನ. ಅಷ್ಟು thrilling ಆಗಿತ್ತು. ಅದನ್ನು ಬರೆದಿದ್ದ ಲೇಖಕರು ಯಾರು ಎಂದು ಮರೆತುಹೋಗಿದೆ. ಆದರೆ ಮದಕರಿ ನಾಯಕನ ವೀರಚರಿತ್ರೆಯನ್ನು ಅದೆಷ್ಟು ಚೆನ್ನಾಗಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದರು ಎಂದರೆ ಆ ಪುಸ್ತಕವನ್ನು ಅದೆಷ್ಟು ಬಾರಿ ಓದಿದೆನೋ ನನಗೇ ನೆನಪಿಲ್ಲ. ಆ ಕಾಲದ ದುರ್ಗದ ರಾಜರು, ಅವರ ಶೌರ್ಯ, ಪರಾಕ್ರಮ, palace intrigues, ಒಳೊಳಗಿನ ಕಪಟತನ, ತಮ್ಮವರಿಂದಲೇ ಮೋಸ ಹೋಗಿದ್ದು, ಚಿತ್ರದುರ್ಗದಲ್ಲಿ ಅವರು ಕಟ್ಟಿಕೊಂಡಿದ್ದ ಅಭೇದ್ಯ ಕೋಟೆ, ಚಿತ್ರದುರ್ಗದಂತಹ ಬಿಸಿಲಿನ ನಾಡಿನಲ್ಲಿ ಎಂದಿಗೂ ನೀರಿನ ಬರ ಬರದಂತೆ ಕೆರೆ ಕಟ್ಟೆಗಳ ಮೂಲಕ ಮಾಡಿಕೊಂಡಿದ್ದ ನೀರಾವರಿ ವ್ಯವಸ್ಥೆ, ಸುತ್ತಮುತ್ತಲಿನ ಎಲ್ಲ ಸಂಸ್ಥಾನಗಳ ಪಾಳೇಗಾರರು ನಾಯಕರೇ ಆಗಿದ್ದರೂ ಅವರವರ ಮಧ್ಯೆಯೇ ಅಹಂ(ego) ಕದನಗಳು. ಇವನ್ನೆಲ್ಲ ಸರಿಯಾಗಿ ಉಪಯೋಗಿಸಿಕೊಂಡ ಹೈದರ್, ಟಿಪ್ಪು ಇತ್ಯಾದಿ ಶತ್ರುಗಳು. ದುರ್ಗದ ಬೇಡರ ಸೇನೆ ಮತ್ತು ಅವರ ತಾಕತ್ತು. ಕಿತ್ತೂರು ಚೆನ್ನಮ್ಮನ ಬೆಂಗಾವಲಾಗಿ ಸಂಗೊಳ್ಳಿ ರಾಯಣ್ಣ ಇದ್ದಂತೆ ದುರ್ಗದ ನಾಯಕರ ಬೆಂಗಾವಲಾಗಿ ಅಪ್ರತಿಮ ವೀರ ಗುದಗುತ್ತಿ ಅನ್ನುವವನು ಇದ್ದ ಎಂದು ನೆನಪು. ಒಟ್ಟಿನಲ್ಲಿ ಕೈಗೆತ್ತಿಕೊಂಡಾಗೊಮ್ಮೆ ಹದಿನಾರನೇ ಶತಮಾನದ ದುರ್ಗದ ವೈಭವಕ್ಕೆ ಕರೆದೊಯ್ಯುತ್ತಿತ್ತು ಆ ಚಿಕ್ಕ ಪುಸ್ತಕ. 

ಅದನ್ನು ಓದಿದಾಗಿಂದ ಚಿತ್ರದುರ್ಗದ ಇತಿಹಾಸ ಎಂದರೆ ತುಂಬಾ ಆಸಕ್ತಿ ಮತ್ತು ಅಚ್ಚರಿ. ಚಿತ್ರದುರ್ಗದ ಬಗ್ಗೆ ತರಾಸು ೧೯೫೦ ರ ದಶಕದಲ್ಲೇ ವ್ಯಾಪಕವಾಗಿ ಬರೆದಿದ್ದಾರೆಂದು ಗೊತ್ತಾಗಲು ಸುಮಾರು ವರ್ಷಗಳೇ ಬೇಕಾಯಿತು. ಅದಕ್ಕಿಂತ ಮೊದಲು ದುರ್ಗದವರೇ ಆದ ಖ್ಯಾತ ಕಾದಂಬರಿಕಾರ ಬಿ. ಎಲ್. ವೇಣು ಬರೆದ ಒಂದು ಕಾದಂಬರಿ ಸಿಕ್ಕಿತ್ತು. ವೇಣು ನುರಿತ ಕಥೆಗಾರರು. ಅವರ ಹಲವು ಕಾದಂಬರಿಗಳು ಯಶಸ್ವಿ ಸಿನೆಮಾಗಳಾಗಿವೆ. ತುಂಬಾ ಸೊಗಸಾಗಿ ದುರ್ಗದ ಚರಿತ್ರೆಯನ್ನು ಕಾದಂಬರಿ ಮೂಲಕ ಕಟ್ಟಿಕೊಟ್ಟಿದ್ದರು. ಕೆಲವೊಂದು ಕಡೆ creative freedom ತೆಗೆದುಕೊಂಡಿದ್ದೇನೆ. ಕೆಲವು ಸನ್ನಿವೇಶಗಳನ್ನು glamorize ಮತ್ತು glorify ಮಾಡಿದ್ದೇನೆ ಎಂದು honest ಆಗಿ ಹೇಳಿಕೊಂಡಿದ್ದರು ಲೇಖಕ ವೇಣು.

ತರಾಸು ನಿಧನದ ಬಳಿಕ 'ತರಂಗ' ವಾರಪತ್ರಿಕೆ ಅವರ 'ದುರ್ಗಾಸ್ತಮಾನ' ಕಾದಂಬರಿಯನ್ನು ಪ್ರಕಟಿಸಿತು. ತರಾಸು ಅವರು ಚಿತ್ರದುರ್ಗದ ಬಗ್ಗೆ ಬರೆದ ಮೊದಲಿನ ಕಾದಂಬರಿಗಳ ತೂಕವೇ ಒಂದಾದರೆ ದುರ್ಗಾಸ್ತಮಾನದ ತೂಕವೇ ಒಂದು.  ದುರ್ಗಾಸ್ತಮಾನ ಅವರ magnum opus ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ. ದುರ್ಗದ ಜನರ ಅಭಿಮಾನವನ್ನು ಮನ್ನಿಸಿ, ಅವರ ಕೋರಿಕೆಯಂತೆ ಅದನ್ನು ಬರೆದಿದ್ದರಂತೆ ತರಾಸು. ಕೇವಲ ನಾಲ್ಕೇ ತಿಂಗಳಲ್ಲಿ ಬರೆದು ಮುಗಿಸಿದ ೬೦೦ ಪುಟಗಳ ಬೃಹತ್ ಕಾದಂಬರಿ. ಆಗ ಅವರ ಆರೋಗ್ಯ ಕೂಡ ತುಂಬಾ ಕೆಟ್ಟಿತ್ತು. ಆದರೆ ದುರ್ಗ ಎಂದರೆ ಅದೆಲ್ಲಿಂದ ಹುರುಪು ಉಕ್ಕಿ ಬರುತ್ತಿತ್ತೋ. ಚಿತ್ರದುರ್ಗದ ಅವಸಾನದ ಕೊನೆಯ ದಿನಗಳ ದುಃಖದ ಕಥೆಯನ್ನು ಸಾವಿರಾರು ಪುಟಗಳಲ್ಲಿ ಬರೆದಿದ್ದನ್ನು ೬೦೦ ಪುಟಗಳಿಗೆ ಇಳಿಸಬೇಕಾಗಿ ಬಂತಂತೆ. ದುರ್ಗದ ಬಗ್ಗೆ ಇರುವ ಎಲ್ಲ ಮಾಹಿತಿ ಅವರ ತಲೆಯಲ್ಲಿತ್ತು. ಬರೆಯಲು ಕುಳಿತರೆ ಓತಪ್ರೋತವಾಗಿ ಇಳಿದು ಬರುತ್ತಿತ್ತು. 

ದುರ್ಗಾಸ್ತಮಾನ ತರಂಗದಲ್ಲಿ ಪ್ರಕಟವಾದಾಗ ಅಲ್ಲಲ್ಲಿ ಬಿಡಿಬಿಡಿಯಾಗಿ ಓದಿದ್ದೆ. ತರಂಗ ನಾವು ತರಿಸುತ್ತಿದ್ದಿಲ್ಲ. ಅಲ್ಲಲ್ಲಿ ಕಂಡಾಗ ಪೂರ್ತಿಯಾಗಿ ಓದದೇ ಬಿಟ್ಟಿದ್ದಿಲ್ಲ. ಹಾಗಾಗಿ ದುರ್ಗಾಸ್ತಮಾನದ ರುಚಿ ನೋಡಿಯಾಗಿತ್ತು. ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಎಷ್ಟೋ ವರ್ಷಗಳ ಮೇಲೆ ಪುಸ್ತಕ ರೂಪದಲ್ಲಿ ಪ್ರಕಟವಾಯಿತು ಎಂದು ನೆನಪು. ನಾನು ಕೆಲವು ವರ್ಷಗಳ ಹಿಂದೆಯಷ್ಟೇ ಅದನ್ನು ಕೊಂಡೆ. ಓದಿದೆ. ನಂತರ ಇಲ್ಲಿನ ಸಹೃದಯಿ ಪುಸ್ತಕಪ್ರೇಮಿಯೊಬ್ಬರಿಗೆ ಕೊಟ್ಟೆ. 

ಮಾಧ್ಯಮಿಕ ಶಾಲೆಗೆ ಬಂದ ನಂತರ ಪಠ್ಯೇತರ ಪುಸ್ತಕಗಳ ಓದು ಕೊಂಚ ಕಮ್ಮಿಯೇ ಆಯಿತು. ಪಿಯೂಸಿ ಮುಗಿಯುವವರೆಗೆ ಕನ್ನಡದ ಪುಸ್ತಕಗಳನ್ನು ಓದಿದ್ದು ಕಮ್ಮಿ. ಯಾವುದೇ ತರಹದ ಅಡೆತಡೆ, ಅನಿವಾರ್ಯತೆಗಳು ಇಲ್ಲದಿದ್ದರೆ ಕನ್ನಡದ ಕಾದಂಬರಿಗಳನ್ನು ಓದಿಕೊಂಡು, ಎಲ್ಲ ಸಿನೆಮಾಗಳನ್ನು ನೋಡಿಕೊಂಡು, ಮನಸ್ಸಾದಾಗ ಇಂಗ್ಲಿಷ್ ಪುಸ್ತಕಗಳನ್ನು ಓದಿಕೊಂಡು ಆರಾಮಾಗಿ ಇರುವುದು ಪರಮಸುಖ - utopia. ಆದರೆ ವಾಸ್ತವಿಕತೆಯನ್ನೂ ನೋಡಬೇಕಲ್ಲ. ಮನಸ್ಸಿರಲಿ ಇಲ್ಲದಿರಲಿ 'ಮಾರ್ಕ್ಸವಾದಿ'ಯಾಗಲೇಬೇಕು. ಒಂದಿಷ್ಟು ಒಳ್ಳೆ ಮಾರ್ಕ್ಸ್ ತೆಗೆಯಲೇಬೇಕು. ಹೊಟ್ಟೆತುಂಬಿಸುವಂತಹ ನೌಕರಿ ಕೊಡಬಹುದಾದ ಡಿಗ್ರಿಗಾಗಿ ಓದಲೇಬೇಕು. ಅದಕ್ಕಾಗಿ 'ಹೆಗ್ಗಣದ ಪಂದ್ಯ'ದಲ್ಲಿ (Rat race) ಓಡಿ ಗೆಲ್ಲಲೇಬೇಕು. ಹಾಗಾಗಿ ೧೯೮೫ ರ ನಂತರ ಕನ್ನಡ ಕಾದಂಬರಿ ಇತ್ಯಾದಿಗಳನ್ನು ತಾತ್ಕಾಲಿಕವಾಗಿ ಕಟ್ಟಿಡಬೇಕಾಯಿತು. 

ಮುಂದೆ ವೇಳೆ ಸಿಕ್ಕಾಗ ತರಾಸು ಚಿತ್ರದುರ್ಗದ ಬಗ್ಗೆ ಬರೆದ 'ಕಂಬನಿಯ ಕುಯಿಲು', 'ರಕ್ತರಾತ್ರಿ', ಇತ್ಯಾದಿಗಳನ್ನು ಓದಿದೆ. ಅವರ ಕೆಲವು ಸಾಮಾಜಿಕ ಕಾದಂಬರಿಗಳನ್ನೂ ಓದಿದೆ. ಅವರ ಕಾದಂಬರಿಯಾಧಾರಿತ 'ನಾಗರಹಾವು' ಇಂದಿಗೂ ನನ್ನ ಪ್ರೀತಿಯ ಚಿತ್ರ. ಆದರೆ ತರಾಸು ಆ ಚಿತ್ರದಿಂದ ಬೇಸರಗೊಂಡಿದ್ದರು. ನಿರ್ದೇಶಕ ಪುಟ್ಟಣ್ಣ ಕಣಗಾಲರು ತಮ್ಮ ಕಾದಂಬರಿಗೆ ನ್ಯಾಯ ಒದಗಿಸಲಿಲ್ಲ ಎಂದು ನೊಂದುಕೊಂಡು 'ಅದು ನಾಗರಹಾವಲ್ಲ. ಕೇರೆಹಾವು...' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

೧೯೬೦ ರ ದಶಕದಲ್ಲಿ ತರಾಸು ಬರೆಯುವದನ್ನು ಕೊಂಚ ಕಮ್ಮಿ ಮಾಡಿದರು. ಕರ್ನಾಟಕದ ಏಕೀಕರಣಕ್ಕೆ, ಕನ್ನಡ ಭಾಷೆಯ ಏಳ್ಗೆಗಾಗಿ ನಡೆದ ಚಳುವಳಿಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಯಕರಾದರು. ಆದರೂ ಪುಸ್ತಕಗಳ ಪ್ರಕಾಶಕರು ಅವರನ್ನು ಹಿಡಿದು ಬರೆಸದೇ ಬಿಡಲಿಲ್ಲ. ಇಡೀ ಕರ್ನಾಟಕವನ್ನು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತಿದರು. ಅದರಲ್ಲೇ ಬಿಡುವು ಮಾಡಿಕೊಂಡು ಸಾಕಷ್ಟು ಬರೆದರು. 

ಪತ್ನಿ ಅಂಬುಜಾ ತರಾಸು ಹೇಳುತ್ತಾರೆ... ತರಾಸು ಬರೆಯಲು ಕುಳಿತರು ಎಂದರೆ ಘಂಟೆಗಟ್ಟಲೆ ನಿರಂತರವಾಗಿ ಬರೆಯುತ್ತಲೇ ಕುಳಿತುಬಿಡುತ್ತಿದ್ದರು. ಕಾಫಿ ಸರಬರಾಜು ತಡೆಯಿಲ್ಲದೇ ನಡೆಯುತ್ತಿರಬೇಕು. ಸಿಗರೇಟಿನ ಪರಮಭಕ್ತರಾಗಿದ್ದರು. ಕಾಫಿ ಮತ್ತು ಸಿಗರೇಟು ಅವರ ಬರವಣಿಗೆ ಗಾಡಿಯ ಇಂಧನಗಳಾಗಿದ್ದವು. ಬರೆದು ಬರೆದು ಬೆರಳುಗಳು ಬಾತುಕೊಂಡರೆ ಪತ್ನಿ ಬಿಸಿನೀರು ಕಾಯಿಸಿ ಕೊಡುತ್ತಿದ್ದರು. ಅದರಲ್ಲಿ ಬೆರಳದ್ದಿಕೊಂಡು, ಸುಧಾರಿಸಿಕೊಂಡು ಬರವಣಿಗೆ ಮುಂದುವರೆಸುತ್ತಿದ್ದರೇ ವಿನಃ ನಿಲ್ಲಿಸುತ್ತಿದ್ದಿಲ್ಲ. ವಿಶ್ರಾಂತಿ ಪಡೆಯುತ್ತಿದ್ದಿಲ್ಲ. ಸೃಜನಶೀಲತೆ ಎಂದರೆ ಹಾಗೆಯೇ. ಸುಖಾಸುಮ್ಮನೆ ವೇಳಾಪಟ್ಟಿಗೆ ಅನುಗುಣವಾಗಿ ಒಸರುವುದಿಲ್ಲ. ಒರತೆ ಒಸರಿದಾಗ ಹಿಡಿದುಕೊಳ್ಳಬೇಕು. ಮನಸ್ಸಿನಲ್ಲಿ ಮೂಡಿದ್ದನ್ನು ಕಾಗದದ ಮೇಲೆ ಇಳಿಸಬೇಕು. ಬರಹಗಾರನ ಬದುಕೇನು ಸುಲಭವೇ?

ತರಾಸು ಜೀವನಚರಿತೆಯಲ್ಲಿ ತುಂಬಾ interesting ಅನ್ನಿಸುವಂತಹ ಜನ ಬಂದು ಹೋಗುತ್ತಾರೆ. ಮೈಸೂರಿನಲ್ಲಿ ನೆಲೆಸಿದ್ದಾಗ, ಆಗ ಮೆಡಿಕಲ್ ಓದುತ್ತಿದ್ದ ಲೇಖಕಿ ತ್ರಿವೇಣಿ ಅವರ ನೆರೆಹೊರೆಯವರು. ಮೆಡಿಕಲ್ ಓದುತ್ತಿರುವಾಗಲೇ ತ್ರಿವೇಣಿ ಬರೆಯುತ್ತಿದ್ದರು. ಆಗಲೇ ತ್ರಿವೇಣಿ ಸ್ತ್ರೀಸಮಾನತೆ, ಮಹಿಳಾ ಸಬಲೀಕರಣ ಮುಂತಾದ feminist ಪರಿಕಲ್ಪನೆಗಳ ಬಗ್ಗೆ ಖಡಕ್ ಅಭಿಪ್ರಾಯ ಹೊಂದಿದ್ದರು. ಟಿಪಿಕಲ್ ಸಂಪ್ರದಾಯಸ್ಥ ಗೃಹಿಣಿಯಂತೆ ಬಾಳುತ್ತಿದ್ದ ಅಂಬುಜಾ ತರಾಸು ಅವರನ್ನು ತ್ರಿವೇಣಿ ಕೇಳುತ್ತಿದ್ದರಂತೆ - 'ನೀವೇಕೆ ಅಷ್ಟೊಂದು ನಿಕೃಷ್ಟವಾಗಿ ಬಾಳುತ್ತೀರಿ? ಪತಿಯ ಎಲ್ಲ ಕಿರಿಕಿರಿ, ತೊಂದರೆ ಎಲ್ಲವನ್ನೂ ಏಕೆ ಬಾಯಿಮುಚ್ಚಿಕೊಂಡು ಸಹಿಸಿಕೊಳ್ಳುತ್ತೀರಿ? ಪ್ರತಿಭಟಿಸಬೇಕು ತಾನೇ?' ಅಂಬುಜಾ ತರಾಸು ನಕ್ಕು, 'ನೀನೇ ಬಂದು ನಮ್ಮ ಮನೆಯವರ ಹತ್ತಿರ ಮಾತಾಡಮ್ಮಾ' ಅಂದರೆ 'ಅವರ ಜೊತೆ ನಾನು ಮಾತಾಡುವುದೇ? ಅಷ್ಟು ದೊಡ್ಡ ಸಾಹಿತಿ ಜೊತೆ?' ಎಂದು ಭಯಮಿಶ್ರಿತ ಸಂಕೋಚ ವ್ಯಕ್ತಪಡಿಸುತ್ತಿದ್ದರಂತೆ ತ್ರಿವೇಣಿ. ಆದರೆ ತಾವು ಬರೆದ ಬರಹಗಳನ್ನು ತರಾಸು ಅವರಿಗೆ ಓದಲು ಕೊಡುತ್ತಿದ್ದರು. ಅವರ ಅಭಿಪ್ರಾಯ ಕೇಳುತ್ತಿದ್ದರು. ಅವೆಲ್ಲ ತಮ್ಮ ಬರವಣಿಗೆ ಅನುಕೂಲವಾಯಿತು ಎಂದು ತ್ರಿವೇಣಿ ಹೇಳಿಕೊಳ್ಳುತ್ತಿದ್ದರಂತೆ. 

ತರಾಸು ಅವರು ಮತ್ತೊಬ್ಬ ಕನ್ನಡದ ಕಟ್ಟಾಳು ಅನಕೃ ಅವರನ್ನು ತಮ್ಮ ಗುರು ಎಂದು ಭಾವಿಸಿದ್ದರು. ಇಬ್ಬರೂ ಕರ್ನಾಟಕದ ಏಕೀಕರಣಕ್ಕಾಗಿ, ಭಾಷೆಯ ಏಳಿಗೆಗಾಗಿ ಜೊತೆಯಾಗಿ ಹೋರಾಡಿದರು. ಜೊತೆಗೆ ಮ. ರಾಮಮೂರ್ತಿ ಕೂಡ ಇದ್ದರು. 

ತರಾಸು ಬರವಣಿಗೆ, ಚಳುವಳಿ ಎಂದೆಲ್ಲ ಬ್ಯುಸಿ ಆಗಿದ್ದರೆ ಮನೆ ಕಡೆ ಪೂರ್ತಿ ಜವಾಬ್ದಾರಿ ಅಂಬುಜಾ ಅವರದು. ತರಾಸು ಅವರಿಗೆ ಹಣದ ಬಗ್ಗೆ ಯಾವ ಕಾಳಜಿಯೂ ಇರಲಿಲ್ಲ. ಬರೆದಿದ್ದಕ್ಕೆ ಸಂಭಾವನೆ ತೆಗೆದುಕೊಳ್ಳದಿದ್ದರೆ ಜೀವನ ನಡೆಯುವದಿಲ್ಲ ಒಂದೇ ಕಾರಣಕ್ಕೆ ಸಂಭಾವನೆ ಬಗ್ಗೆ ಕೊಂಚ ಗಮನ ಕೊಡುತ್ತಿದ್ದರು. ಕೊಟ್ಟಷ್ಟು ತೆಗೆದುಕೊಳ್ಳುತ್ತಿದ್ದರು. ಲೆಕ್ಕ ಗಿಕ್ಕ ಇಟ್ಟು ಗೊತ್ತಿಲ್ಲ. ಹಾಗಾಗಿ ಎಷ್ಟೋ ಸಲ ಪೂರ್ತಿ ಸಂಭಾವನೆ ಬಂದಿದ್ದೇ ಇಲ್ಲ. ಅಂಬುಜಾ ಗಮನ ಕೊಡದಿದ್ದರೆ ಅಷ್ಟೂ ಬರುತ್ತಿರಲಿಲ್ಲ. 

ಕೈಯಲ್ಲಿ ಹಣ ಇದ್ದಾಗ ಶೋಕಿ ಮಾಡುವುದರಲ್ಲಿ ತರಾಸು ಕೊಂಚ ಮುಂದೆಯೇ. ಕೊಂಚ ಕಾಸು ಕೈಗೆ ಬಂದಾಗ ಒಂದು ಲಡಕಾಸಿ ಸೆಕೆಂಡ್ ಹ್ಯಾಂಡ್ ಕಾರ್ ಕೊಂಡರು. ಅದು ಲಡಕಾಸಿ ಅಂತ ನಂತರ ಗೊತ್ತಾಯಿತು. ಕಾರ್ ಕೊಂಡ ಸಂತಸದಲ್ಲಿ ಸಂಸಾರ ಸಮೇತ ಪ್ರವಾಸ ಕೈಗೊಂಡರು. ಬಳ್ಳಾರಿ ಕಡೆ ಇದ್ದಾಗ ಕಾರ್ ತಾಂತ್ರಿಕ ತೊಂದರೆಯಿಂದ ಕೆಟ್ಟು ನಿಂತಿತು. ಅಲ್ಲೇ ಯಾವುದೋ ಮೆಕ್ಯಾನಿಕ್ ಬಳಿ ರಿಪೇರಿಗೆ ಬಿಟ್ಟು, ರೈಲಿನಲ್ಲೋ ಬಸ್ಸಿನಲ್ಲೋ ಮನೆ ಮುಟ್ಟಿಕೊಂಡರು. ಎಷ್ಟೋ ದಿವಸಗಳ ನಂತರ ಮೆಕ್ಯಾನಿಕ್ ಪತ್ರ ಬರೆದ. ಕಾರನ್ನು ದುರಸ್ತಿ ಮಾಡಲು ಎಷ್ಟು ವೆಚ್ಚವಾಗುತ್ತದೆ ಎನ್ನುವುದರ ಬಗ್ಗೆ estimate ಕೊಟ್ಟಿದ್ದ. ಅಷ್ಟು ರೊಕ್ಕವಿಲ್ಲದ ತರಾಸು, 'ಕಾರ್ ಮಾರಿಬಿಡು ಮಾರಾಯಾ. ಮಾರಿ ಬಂದ ರೊಕ್ಕದಲ್ಲಿ ನಿನ್ನ ಖರ್ಚು ಇಟ್ಟುಕೊಂಡು, ಏನಾದರೂ ಉಳಿದಿದ್ದರೆ ನನಗೆ ಕಳಿಸು,' ಎಂದು ತಿರುಗಿ ಉತ್ತರ ಬರೆದು ಕಾರಿನ ಅಧ್ಯಾಯ ಬರಖಾಸ್ತು ಮಾಡಿದ್ದರು. ಇಂತಹ ವಿನೋದದ ಪ್ರಸಂಗಗಳೂ ಅವರ ಜೀವನಚರಿತ್ರೆಯಲ್ಲಿ ಕಂಡು ಬರುತ್ತವೆ. 

ತರಾಸು ೧೯೮೪ ರಲ್ಲಿ ತೀರಿಕೊಂಡಾಗ ಅವರಿಗೆ ಕೇವಲ ೬೪ ವರ್ಷ. ತುಂಬಾ ವರ್ಷ ಅನಾರೋಗ್ಯ ಕಾಡಿತ್ತು. ಅದು ಸ್ವಯಂಕೃತ ಅಪರಾಧ ಎಂದು ಮನೆಯವರ ಭಾವನೆ. ಎಲ್ಲದಕ್ಕೆ ಕಾರಣ ವಿಪರೀತವಾಗಿದ್ದ ಸಿಗರೇಟ್ ಸೇವನೆ ಮತ್ತು ಅಡ್ಡಾದಿಡ್ಡಿ ಜೀವನಶೈಲಿ. ಮಧ್ಯದಲ್ಲಿ ತೀವ್ರವಾಗಿ ಆರೋಗ್ಯ ಕೆಟ್ಟಾಗ ಒಮ್ಮೆ ಸಿಗರೇಟ್ ಬಿಟ್ಟಿದ್ದರು. ಅದರಿಂದ ಆರೋಗ್ಯ ಸಾಕಷ್ಟು ಸುಧಾರಿಸಿತ್ತು. ಆದರೆ ಮುಂದೊಮ್ಮೆ ಯಾರೋ ಹೇಳಿದರು 'ಆಗೀಗ ಸಿಗರೇಟ್ ಸೇವನೆ ಮಾಡಿದರೆ ತೊಂದರೆಯಿಲ್ಲ...' ಅಷ್ಟೇ ಸಾಕಾಯಿತು. ಆಗೀಗ ಸೇದೋಣ ಎಂದು ಮತ್ತೆ ಶುರುಮಾಡಿಕೊಂಡ ದುರಭ್ಯಾಸ ಆರೋಗ್ಯವನ್ನು ಕಸಿಯಿತು. ಮತ್ತೆ ಅವರು ಚೇತರಿಸಿಕೊಳ್ಳಲಿಲ್ಲ. ನಿಧನರಾಗುವ ಸಂದರ್ಭದಲ್ಲೂ ಅನೇಕ ಮಹತ್ವಾಕಾಂಕ್ಷೆಯ ಪುಸ್ತಕಗಳ ಮೇಲೆ ಕೆಲಸ ಮಾಡುತ್ತಿದ್ದರು. ಬೇಕಾಗುವ ಮಾಹಿತಿ ಸಂಗ್ರಹಿಸುತ್ತಿದ್ದರು. ಆದರೆ ಅವೆಲ್ಲಾ ಅಪೂರ್ಣವಾಗಿಯೇ ಉಳಿದವು. ಶೃಂಗೇರಿಯ ಬಗ್ಗೆ ಒಂದು ಅದ್ಭುತ ಗ್ರಂಥ ಬರೆಯಬೇಕು ಎಂದು ತುಂಬಾ ಆಸೆಪಟ್ಟಿದ್ದರು ತರಾಸು. ಆದರೆ ಅದು ಪೂರ್ಣಗೊಳ್ಳಲಿಲ್ಲ. 

ಕಳ್ಳಿ ನರಸಪ್ಪಯ್ಯ - ಚಿತ್ರದುರ್ಗದ ಇತಿಹಾಸದಲ್ಲಿ ಬರುವ ಒಬ್ಬ ಪ್ರಮುಖ ಆದರೆ ಅಷ್ಟೇ ವಿವಾದಾತ್ಮಕ ವ್ಯಕ್ತಿ. ಹೆಚ್ಚಿನ ಪುಸ್ತಕಗಳಲ್ಲಿ ಆತನನ್ನು ರಾಜದ್ರೋಹಿ ಎಂಬಂತೆ ಚಿತ್ರಿಸಲಾಗಿದೆ. ಆತ ಹೈದರ್, ಟಿಪ್ಪುವಿನೊಂದಿಗೆ ಒಳಸಂಧಾನ ಮಾಡಿಕೊಂಡು ಮದಕರಿ ನಾಯಕನ ಬೆನ್ನಿಗೆ ಚೂರಿ ಹಾಕಿದ. ಮೋಸ ಮಾಡಿದ ಎಂದು ಕಥೆ. ಮೀರ್ ಸಾದಿಕ್ ಮಾದರಿಯವನು ಎಂದುಕೊಳ್ಳಿ. ಆದರೆ ತರಾಸು ಮಾತ್ರ ಅವನನ್ನು ಒಬ್ಬ ತಪ್ಪಾಗಿ ಅರ್ಥೈಸಲ್ಪಟ್ಟ ಮೇಧಾವಿ ಎಂದು ಹೇಳುತ್ತಾರೆ. ಅವನು ಒಳ್ಳೆ ಸಲಹೆ ಕೊಡುತ್ತಿದ್ದ. ದುರಹಂಕಾರಿಯಾಗಿದ್ದ ಮದಕರಿಗೆ ಅವು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಅವರನ್ನು ನಿರ್ಲಕ್ಷ ಮಾಡಿದ. ಕಳ್ಳಿ ನರಸಪ್ಪಯ್ಯನನ್ನು ಅವಮಾನ ಮಾಡಿದ. ನೊಂದುಕೊಂಡ ಹಿರಿಜೀವ ಕಳ್ಳಿ ನರಸಪ್ಪ ದೂರವಾದ. ಸಂಸಾರದೊಂದಿಗೆ ದೇಶಾಂತರ ಹೋದ. ವಾಪಸ್ ಬರುವಷ್ಟರಲ್ಲಿ ಮದಕರಿ, ದುರ್ಗ ಎಲ್ಲ ನಿರ್ನಾಮವಾಗಿತ್ತು ಎಂದು ತರಾಸು ಅಭಿಪ್ರಾಯ. ಬಿ. ಎಲ್. ವೇಣು ಅದನ್ನು ಒಪ್ಪಲಿಲ್ಲ. ಇಬ್ಬರ ಮಧ್ಯೆ ಸಾಕಷ್ಟು ವಾದ ವಿವಾದಗಳು ಆದವು. ತರಾಸು ಅವರು ವೇಣು ಮೇಲೆ ಕೇಸ್ ಕೂಡ ಹಾಕಿದ್ದರಂತೆ. ಕೇಸ್ ನಿಲ್ಲಲಿಲ್ಲ. ಕಳ್ಳಿ ನರಸಪ್ಪ ಬ್ರಾಹ್ಮಣನಾಗಿದ್ದ ಎನ್ನುವ ಕಾರಣಕ್ಕೆ ಬ್ರಾಹ್ಮಣರೇ ಆಗಿದ್ದ ತರಾಸು ಆತನನ್ನು ಸುಭಗ ಎಂಬಂತೆ ಚಿತ್ರಿಸಲು ಪ್ರಯತ್ನಿಸಿ ವಿಫಲರಾದರು ಎಂದು ವೇಣು ಮೊನ್ನೆ ಕಲಾಮಾಧ್ಯಮಕ್ಕೆ ಕೊಟ್ಟ ಸಂದರ್ಶನವೊಂದರಲ್ಲಿ ಹೇಳಿದ್ದು ಕೇಳಿದ ನನಗೆ ಅದೊಂದು ಹೊಸ ವಿಷಯ.

ತರಾಸು ಅವರ ಜೀವನಚರಿತೆ ಮತ್ತು ಕೆಲವು ಕಾದಂಬರಿಗಳನ್ನು ಓದಲು ಬಯಸುವಿರಾದರೆ ಅವು ನಿಮಗೆ ಇಲ್ಲಿ ಸಿಗುತ್ತವೆ. ಓದುವ ಸುಖ ನಿಮ್ಮದಾಗಲಿ. https://manjunathtahir.blogspot.com/2014/11/kannada-novels-and-books-free-download.html. ಕೊಂಚ ಕೆಳವರೆಗೆ scroll ಮಾಡಿ. 

***

ಮತ್ತೆ ನಿಯಮಿತವಾಗಿ ಬ್ಲಾಗ್ ಬರೆಯಲು ಆರಂಭಿಸಿದ್ದೇನೆಯೇ? ಗೊತ್ತಿಲ್ಲ. ಅಪೂರ್ಣವಾಗಿರುವ ಇಂತಹ ತುಂಬಾ ಲೇಖನಗಳು ಇವೆ. ಅವನ್ನು ಪೂರ್ತಿಗೊಳಿಸುವ ಒಂದು ಪ್ರಯತ್ನ. ಅಷ್ಟು ಸುಲಭವಲ್ಲ. ಅಷ್ಟು ಚೆನ್ನಾಗಿಯೂ ಮೂಡಿ ಬರಲಿಕ್ಕಿಲ್ಲ. ಎಂದೋ ಯಾವುದೋ ಓಘದಲ್ಲಿ ಬರೆಯುತ್ತಿರುತ್ತೇವೆ. ಸಡನ್ನಾಗಿ ಬ್ರೇಕ್ ಹಾಕಿ ಅಪೂರ್ಣ ಲೇಖನವನ್ನು ಶೈತ್ಯಾಗಾರಕ್ಕೆ ನೂಕಿರುತ್ತೇವೆ. ಅದನ್ನು ಮುಂದೆಂದೋ ತೆಗೆದು, ತಿದ್ದಿ ತೀಡಿ ಪ್ರಕಟಿಸುತ್ತೇವೆ ಎಂದರೆ ಎಂದೋ ಸತ್ತ ಹೆಣಕ್ಕೆ ಎಂದೋ ಪೋಸ್ಟ್ ಮಾರ್ಟಮ್ ಮಾಡಿ ಮತ್ತೆಂದೋ ಶವಸಂಸ್ಕಾರ ಮಾಡಿದಂತೆಯೋ? ಗೊತ್ತಿಲ್ಲ. ಅಥವಾ ಅರ್ಧ ಸುಟ್ಟ ಹೆಣವನ್ನು ಗಂಗೆಯಲ್ಲಿ ತೇಲಿಬಿಟ್ಟಂತೆಯೋ? ಗೊತ್ತಿಲ್ಲ. ಹೊಟ್ಟೆಗೆ ಹಾಕಿಕೊಳ್ಳಿ. ಹೊಟ್ಟೆ ಕೆಟ್ಟರೆ ENO ಇದೆ ತಾನೇ? ಹೀ.... ಹೀ...ದರಿದ್ರ PJ :)

Thursday, July 22, 2021

ವೇಳೆ ಎಲ್ಲಾ ಎಲ್ಲಿ ಹೋಯಿತು ಶಿವಾ?

ಓದಿದ್ದು ಕಮ್ಮಿ. ಬರೆದಿದ್ದು ಮತ್ತೂ ಕಮ್ಮಿ. ಹಾಗಾದರೆ ವೇಳೆ ಎಲ್ಲಾ ಎಲ್ಲಿ ಹೋಯಿತು ಶಿವಾ? ಒಳ್ಳೆ ಪ್ರಶ್ನೆ. ಇದನ್ನು ಎಷ್ಟೋ ಬಾರಿ ನನ್ನನ್ನೇ ನಾನು ಕೇಳಿಕೊಂಡಿದ್ದೇನೆ. ಮತ್ತೊಮ್ಮೆ ೨೦೧೫ ಬರಬಾರದೇ? ಎಂದುಕೊಂಡಿದ್ದೇನೆ. ಆ ವರ್ಷ ಅದೆಷ್ಟು ಓದಿದೆ. ೧೫೦+ ಪುಸ್ತಕಗಳು. ಬರೆದಿದ್ದೂ ಸಾಕಷ್ಟಿತ್ತು. ಅದರಲ್ಲಿ ಕಾಳೆಷ್ಟೋ ಜೊಳ್ಳೆಷ್ಟೋ. ಆ ಮಾತು ಬೇರೆ. ಅದು ಒತ್ತಟ್ಟಿಗಿರಲಿ. ಆದರೆ ಎಲ್ಲ ದೃಷ್ಟಿಯಿಂದಲೂ ೨೦೧೫ was one of the best years ಅಂದರೆ ಶಂಬರ್ ಟಕಾ ಸತ್ಯ. 

YouTube ನೋಡುವುದು ಕೊಂಚ ಜಾಸ್ತಿಯಾಯಿತು. ಕಳೆದ ಕೆಲವು ವರ್ಷಗಳಲ್ಲಿ YouTube ಮೇಲೆ ಅದ್ಭುತ  ಅನ್ನುವಂತಹ ಮಾಹಿತಿ ಸಿಗುತ್ತಿದೆ. ಅದೂ ಫುಲ್ ಬಿಟ್ಟಿ. ಫ್ರೀ. ಯಾವುದೇ ವಿಷಯವನ್ನು ಅಧ್ಯಯನ ಮಾಡಬೇಕು ಅಂದರೆ YouTube ತುಂಬಾ ಸಹಾಯಕಾರಿಯಾಗಿದೆ. ಜಗತ್ತಿನ ಸರ್ವಶ್ರೇಷ್ಠ ವಿಶ್ವವಿದ್ಯಾಲಯಗಳು, ಅವುಗಳಲ್ಲಿನ ಪ್ರಾಧ್ಯಾಪಕರು ಬೋಧನೆ ಮಾಡಿರುವ ಪಾಠಗಳ, ವಿಡಿಯೋಗಳನ್ನು ಅಲ್ಲಿ ಹಾಕಿರುತ್ತಾರೆ. ನಿಮಗೆ ಬೇಕಾದ ವಿಷಯಗಳನ್ನು, ನಿಮಗೆ ಅನುಕೂಲವಾಗುವ ರೀತಿಯಲ್ಲಿ ಅಧ್ಯಯನ ಮಾಡಬಹುದು. ವೇಳೆಯ ಒತ್ತಡವಿಲ್ಲ. ಹಾಜರಾತಿಯ ಕಿರಿಕಿರಿಯಿಲ್ಲ. ಮಾಸ್ತರ್ ಮಂದಿಗೆ ಬಕೆಟ್ ಹಿಡಿಯಬೇಕಾಗಿಲ್ಲ. ಪರೀಕ್ಷೆಯ ತಲೆಬಿಸಿಯಿಲ್ಲ. ಹಾಗೆ ಮುಕ್ತ ಅಧ್ಯಯನ ಮಾಡುತ್ತಿರುವಾಗಲೂ ಅಲ್ಲಲ್ಲಿ ಒಂದೆರೆಡು ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಮಜಾ ಇರುತ್ತದೆ ಅನ್ನಿ. Knowledge is not power. Knowledge properly applied is power. ಇದನ್ನು ಅರ್ಥ ಮಾಡಿಕೊಳ್ಳುವದರಲ್ಲಿ ಅರ್ಧ ಜೀವನ ಮುಗಿದಿದ್ದು ಹೆಚ್ಚಿನ ಜ್ಞಾನಿಗಳ (ಮಾಹಿತಿವಂತರ ಅಂದರೆ ಸರಿ) ಕರ್ಮ. ವಿಪರ್ಯಾಸ. 

YouTube ಮೇಲೆ ವಿಶ್ವವಿದ್ಯಾಲಯಗಳ ಪಾಠಗಳನ್ನೇ ಕೇಳಿ ಕೇಳಿ ಮತ್ತೂ ಪುಸ್ತಕದ ಬದನೆಕಾಯಿಯೇ ಆಗಬೇಕು ಅಂತೇನೂ ಇಲ್ಲ. ಸಾಕಷ್ಟು ಬೇರೆ ರೀತಿಯ ಉಪಯುಕ್ತ ವಿಡಿಯೋಗಳೂ ಇವೆ. 

ಉದಾಹರಣೆಗೆ, ನಿಮಗೆ ತರಕಾರಿ ಕತ್ತರಿಸುವ ಚಾಕುವನ್ನು ಸಾಣೆ ಹಿಡಿದು ಚೂಪಾಗಿ ಮಾಡುವುದು ಹೇಗೆ ಎಂದು ಗೊತ್ತೇ? ಭಾರತದಲ್ಲಿ ಬಿಡಿ. ಸಾಣೆ ಹಿಡಿಯುವ ಮಂದಿ ಅಲ್ಲಲ್ಲಿ ಕಂಡುಬರುತ್ತಿದ್ದರು. ಅವರು reasonable ರೊಕ್ಕ ತೆಗೆದುಕೊಂಡು ಚಾಕು ಬಾಕು ಇತ್ಯಾದಿಗಳನ್ನು ಹರಿತ ಮಾಡಿ ಕೊಡುತ್ತಿದ್ದರು. ಇಲ್ಲೂ ಸೂಪರ್ ಮಾರ್ಕೆಟ್ ಮುಂದೆ ಅಂತಹ ಮಂದಿ ಬಿಡಾರ ಹೂಡಿದ್ದನ್ನು ನೋಡಿದ್ದೇನೆ. ಆದರೆ ಹೋಗಿ ವಿಚಾರಿಸಿರಲಿಲ್ಲ. ನೋಡಿದರೆ ಅವರು ಇಂಚಿನ ಲೆಕ್ಕದಲ್ಲಿ ಚಾರ್ಜ್ ಮಾಡುತ್ತಾರಂತೆ. ಇಷ್ಟು ಉದ್ದದ ಚಾಕು ಇದ್ದರೆ ಇಷ್ಟು ಡಾಲರ್. ಹಾಗಾಗಿ ಆ ಲೆಕ್ಕದಲ್ಲಿ ಸಾಣೆ ಹಿಡಿಸುವ ವೆಚ್ಚದಲ್ಲಿ ನಾಲ್ಕಾರು ಚಾಕುಗಳನ್ನು ಕೊಳ್ಳಬಹುದು. ಚೀನಾ ಮಾಲಿನ ಚಾಕು ೨-೩ ಡಾಲರಿಗೆ ಸಿಕ್ಕೀತು. ಅದಕ್ಕೆ ಸಾಣೆ ಹಿಡಿಸಲು ೬-೮ ಡಾಲರ್ ಆದೀತು. ಈ ಕಾರಣದಿಂದ ನನ್ನ ಹತ್ತಿರ ಕೂಡ ನಾಲ್ಕಾರು ತರಕಾರಿ ಕತ್ತರಿಸುವ ಚಾಕು ಬಿದ್ದಿವೆ. ಬೇಕೆಂದಾಗ ಒಂದೂ ಸರಿಯಾಗಿ ಕೆಲಸ ಮಾಡುವುದಿಲ್ಲ. 

ಈ ಸಮಸ್ಯೆಯ ಪರಿಹಾರಕ್ಕಾಗಿ ಮತ್ತೆ YouTube ನಮಃ. ಅದೆಷ್ಟು ರೀತಿಯಲ್ಲಿ ಚಾಕುವನ್ನು ಸಾಣೆ ಹಿಡಿಯುವ ರೀತಿಗಳಿವೆ. ಅದೆಷ್ಟು ವಿಡಿಯೋಗಳು ಇವೆ. ಸರಿಯಾಗಿ ಸಾಣೆ ಹಿಡಿಯುವ ಪದ್ಧತಿ ಅಂದರೆ ಸಾಣೆಕಲ್ಲು whetstone ತಂದುಕೊಂಡು ಸಾಣೆ ಹಿಡಿದು, ಚರ್ಮದ ಪಟ್ಟಾ (Strop) ಮೇಲೆ ಹೊಸೆಯುವುದು. ಒಹೋ! ಇದು ನಾಪಿತರ ಸ್ಟೈಲ್. ಸಂಸ್ಕೃತದ ಹೆಗಡೆ ಸರ್ ಇದಕ್ಕೆ 'ಶಸ್ತ್ರಾಭ್ಯಾಸ' ಎಂದು ಹಾಸ್ಯ ಮಾಡುತ್ತಿದ್ದರು. ಸಲೂನುಗಳಲ್ಲಿ ಗ್ರಾಹಕ ಇಲ್ಲದಿದ್ದಾಗ ನಾಪಿತರು ಇದನ್ನೇ ಮಾಡುತ್ತಿರುತ್ತಾರೆ. ಗ್ರಾಹಕ ಬಂದಾಕ್ಷಣ ನುಣ್ಣಗೆ ಬೋಳಿಸುತ್ತಾರೆ. ತಲೆಯನ್ನು. ತರಕಾರಿ ಕತ್ತರಿಸುವ ಚಾಕುವೇ ಇರಲಿ ತಲೆ ಹೆರೆಯುವ ಕತ್ತಿಯೇ ಇರಲಿ ಹರಿತಗೊಳಿಸುವ ಪದ್ಧತಿ ಒಂದೇ. 

ಹೋಗ್ರೀ! ಸಾಣೆಕಲ್ಲು, ಚರ್ಮದ ಪಟ್ಟಾ ಅಂತೆಲ್ಲಾ ಹೋದರೆ ಮತ್ತೂ ೨೦-೩೦ ಡಾಲರಿಗೆ ಗುನ್ನ ಬೀಳುತ್ತದೆ. ಅದರಲ್ಲಿ ೮-೧೦ ಚೀನಾ ಮಾಲು ಚಾಕು ಬರುತ್ತದೆ. ಇನ್ನೂ ಏನಾದರೂ ಸರಳ ಪದ್ಧತಿ ಇರಬಹುದೇ ಎಂದು ಹುಡುಕಿದರೆ YouTube ಅಕ್ಷಯಪಾತ್ರೆ ಇದ್ದಂತೆ. ಯಾರೋ ಒಬ್ಬರು ಸಿರಾಮಿಕ್ ಕಾಫಿ ಕಪ್ ಹಿಂಭಾಗ ಉಪಯೋಗಿಸಿ ಚಾಕುವನ್ನು ಹೇಗೆ ಹರಿತಗೊಳಿಸಬಹುದು ಎಂದು ತೋರಿಸಿಕೊಟ್ಟರು. ನಂಬಿಕೆ ಬರಲಿಲ್ಲ. ಪ್ರಯತ್ನ ಮಾಡಿ ನೋಡಿದೆ. ಅದ್ಭುತ ಪರಿಣಾಮ ಬಂತು. ಈಗ ನನ್ನ ಎಲ್ಲಾ ಚಾಕುಗಳೂ ಹರಿತ ಹರಿತ! ಟಚ್ ಮಾಡಿದರೆ ಕಚಕ್ ಆಗುವಷ್ಟು ಹರಿತ. ಚಾಕು ಹರಿತವಾದ ಖುಷಿಯಲ್ಲಿ ಕತ್ತರಿಸಿದ್ದೇ ಕತ್ತರಿಸಿದ್ದು. ಕೇವಲ ತರಕಾರಿಗಳನ್ನು ಮಾತ್ರ. ಹಾಗಾಗಿ ಒಂದು ವಾರದಲ್ಲಿ ಒಂದು ವರ್ಷದ ಸಲಾಡ್ ತಿನ್ನುವ ಭಾಗ್ಯ!

ಕಾರುಗಳಲ್ಲಿ ಎರಡು ಫಿಲ್ಟರ್ ಇರುತ್ತವೆ. ಒಂದು ಕಾರೊಳಗಿನ ಗಾಳಿ ಶುದ್ಧಗೊಳಿಸುವ ಕ್ಯಾಬಿನ್ ಏರ್ ಫಿಲ್ಟರ್. ಮತ್ತೊಂದು ಎಂಜಿನ್ ಏರ್ ಫಿಲ್ಟರ್. ಎರಡನ್ನೂ ೩ ವರ್ಷ ಅಥವಾ ೩೦,೦೦೦ ಮೈಲುಗಳಿಗೆ ಬದಲಾಯಿಸಿ ಎಂದು ಕಾರ್ ತಯಾರಕರ ಸಲಹೆ. ಇವನ್ನೂ ಸುಲಭವಾಗಿ ನೀವೇ ಮಾಡಿಕೊಳ್ಳಬಹುದು. ಹೊಸ ಮಾಡೆಲ್ಲಿನ ಕಾರುಗಳಲ್ಲಿ ತುಂಬಾ ಸುಲಭ. ನಟ್ ಬೋಲ್ಟ್ ಕೂಡ ಇರುವುದಿಲ್ಲ. ಒಂದೆರೆಡು ಕ್ಲಿಪ್ ತರಹದ್ದು ಇರುತ್ತದೆ. ತೆಗೆಯಿರಿ. ಹಳೆ ಫಿಲ್ಟರ್ ತೆಗೆದು ಹೊಸದು ಹಾಕಿರಿ. ಕ್ಲಿಪ್ ಹಾಕಿ ಮುಚ್ಚಿದರೆ ಕೆಲಸ ಮುಗಿಯಿತು. ನಮ್ಮದು ಸಾಕಷ್ಟು ಹಳೆಯ ಕಾರ್. ಜಾಸ್ತಿ ಓಡಿಲ್ಲ. ತೊಂದರೆ ಕೊಟ್ಟಿಲ್ಲ ಅಂತ ಅದನ್ನೇ ಓಡಿಸುತ್ತೇವೆ. ನಮ್ಮ ಕಾರಿನ ಫಿಲ್ಟರ್ ಚೇಂಜ್ ಮಾಡುವುದು ಕೊಂಚ ಕೆಲಸ ಇರುತ್ತದೆ. ನಟ್ ಬೋಲ್ಟ್ ಬಿಚ್ಚಿ ಕೆಲಸ ಮಾಡಬೇಕು. ಅದಕ್ಕೂ YouTube  ಮೇಲೆ ವಿಡಿಯೋ ಸಿಕ್ಕವು. ಅವನ್ನು ಅನುಸರಿಸಿ ಆ ಕೆಲಸಗಳನ್ನೂ ಮಾಡಿಕೊಂಡೆ. ಸುಮಾರು ೧೫೦-೨೦೦ ಡಾಲರ್ ಉಳಿಯಿತು. 

ಡ್ರೈವರ್ ತಲೆ ಮೇಲಿರುವ ಕನ್ನಡಿಯುಳ್ಳ  ವೈಸರ್ ಹೋಗಿತ್ತು. ಅದನ್ನೂ YouTube ನೋಡಿಯೇ ಬದಲಾಯಿಸಿದೆ. ಅಲ್ಲೂ ಒಂದಿಷ್ಟು ಉಳಿಯಿತು. ಅದೇ ರೀತಿ ಡಿಕ್ಕಿ ಓಪನ್ ಮಾಡುವ ಲ್ಯಾಚಿನ ಮೇಲಿನ ರಬ್ಬರ್ ಬದಲಾಯಿಸಲು ಮಾಡಲು ಹೋಗಿ ರಾಡಿ ಎಬ್ಬಿಸಿದೆ. ಅದು ಕೊಂಚ ಸಹನೆ ಕೇಳುವ ಕೆಲಸವಾಗಿತ್ತು. ನನಗೋ ಸಹನೆ ಅಂದರೆ ಏನು ಎನ್ನುವ ರೀತಿ. Screw ಜಾರಿತು. ಅದರ ತಲೆ (ಹೆಡ್) Strip ಆಯಿತು. ಈಗ ಹೊರಗೆ ಬರುತ್ತಿಲ್ಲ. ಅದೇನೂ ಅಷ್ಟು ಅವಶ್ಯದ ಭಾಗವಲ್ಲ ಬಿಡಿ. ಕಾಣುವುದೂ ಇಲ್ಲ. ಇದರಿಂದ ಕಲಿತ ಪಾಠ. ಸರಿಯಾಗಿ ಓದಿ, ಮನನ ಮಾಡಿಕೊಂಡು, ವಿಚಾರ ಮಾಡಿದ ಮೇಲೆ screw ಮತ್ತು unscrew ಮಾಡಬೇಕು. ಇಲ್ಲವಾದರೆ ಕೆಲಸ ಕೆಡುತ್ತದೆ. ಇದರಲ್ಲಿ ಡಬಲ್ ಮೀನಿಂಗ್ ಏನೂ ಇಲ್ಲ ಮಾರಾಯರೆ! ಶಿವಾಯ ನಮಃ!

YouTube  ನೋಡಿ. ಕೆಲಸ ಕಲಿತುಕೊಳ್ಳಿ. ಮಾಡಿಕೊಳ್ಳಿ. ಕೆಲಸ ಕಲಿತಂತೆಯೂ ಆಯಿತು. ರೊಕ್ಕ ಉಳಿಸಿದಂತೆಯೂ ಆಯಿತು. ಅದೆಷ್ಟು ಚಿಕ್ಕ ಕೆಲಸವೇ ಇರಲಿ. ಕಲಿತು ಅದರಲ್ಲಿ ತಕ್ಕಮಟ್ಟಿನ ಪ್ರಾವೀಣ್ಯತೆ ಸಾಧಿಸಿದರೆ ಏನೋ ಒಂದು ರೀತಿಯ ಸಂತೃಪ್ತಿ. ಅಂತಹ ಚಿಕ್ಕ ಚಿಕ್ಕ ಸಂತೃಪ್ತಿಗಳಲ್ಲೇ ಜೀವನದ ಸಾರ್ಥಕತೆ ಇದೆ ಅನ್ನಿಸುತ್ತದೆ. ಅಲ್ಲವೇ?