Tuesday, September 18, 2012

ಯೋಗಃ ಚಿತ್ತ ವೃತ್ತಿ ನಿರೋಧಃಕರೀಂ ಎಲ್ಲಿಂದಲೋ ಬರ್ಲಿಕತ್ತಿದ್ದ. ಯಾಕೋ ಮಾರಿ ಸ್ವಲ್ಪ ಸಣ್ಣದಾಗಿತ್ತು. ಏನೋ ಲಫಡಾ ಆಗಿರಲೇ ಬೇಕು ಅನ್ನಿಸ್ತು.

ಸಲಾಂ ಕರೀಂ ಸಾಬ್. ಏನು ಆರಾಮ್ ಏನು? ಏನು ಸುದ್ದೀಪಾ, ದೊಡ್ಡ ಮನುಷ್ಯಾ? - ಅಂತ ಕೇಳಿದೆ.

ಅಯ್ಯೋ ಸಾಬ್. ದೊಡ್ಡ ಸುದ್ದಿ ಅಂದ್ರೆ ನಾನು ಫೇಲ್ ಆಗಿ ಬಿಟ್ಟೆ. ಕ್ಲಾಸಿಂದ ಓಡಿಸಿಬಿಟ್ಟರು - ಅಂದ ಕರೀಂ.

ಯಾವ ಪರೀಕ್ಷಾದಾಗ ಫೇಲ್ ಆದ್ಯೋ? ಟೆಂತ್ ಆದ ಮ್ಯಾಲೆ ನೀನು ಸೀದಾ ದಂಧಾಕ್ಕ ಇಳಿದು ಶಾಣ್ಯಾ ಕೆಲಸ ಮಾಡಿದ್ದಿ. ಸಿಕ್ಕಾಪಟ್ಟೆ ಕಲ್ತವರು, ಕಲ್ತೇವಿ ಅಂತ ತಿಳಕೊಂಡವರು, ಎಲ್ಲಾ ಒಂದಲ್ಲ ಒಂದು ತರಹದ ಕೂಲಿ ಕೆಲಸ ಮಾಡ್ಕೊತ್ತಿದ್ದರ, ನೀನು ಏನೇನೋ ವ್ಯಾಪಾರ, ಇಂಪೋರ್ಟ್ ಎಕ್ಸ್ಪೋರ್ಟ್ ಅದು ಇದು ಅಂತ ದಿಲದಾರ್ ಆಗಿ ಇದ್ದಿ. ಏನು ಕಲಿಲಿಕ್ಕೆ ಹೋಗಿ, ಪರೀಕ್ಷಾದಾಗ ಫೇಲ್ ಆಗಿ ಬಂದ್ಯೋ? ಹೇಳೋ - ಅಂತ ಕೇಳಿದೆ.

ಅಯ್ಯೋ ಸಾಬ್. ಪರೀಕ್ಷಾ ಗೀರಿಕ್ಷಾ ಏನೂ ಇಲ್ಲ. ಯೋಗ ಕ್ಲಾಸಿನಿಂದ ನಮ್ಮದೂಕೆ ಓಡಿಸಿ ಬಿಟ್ಟರು ಸಾಬ್. ನಾವು ಒಂದೇ ಪ್ರಶ್ನೆ ಕೇಳಿದ್ವಿ ಸಾಬ್. ಅಷ್ಟಕ್ಕೇ ಆ ಯೋಗ ಮೇಡಂ, ಅಕಿ ನಾಮ ಹಾಕಿಕೊಂಡ ಗಂಡ ಚಿಟಿ ಚಿಟಿ ಚೀರಿ, ರೈಸ್ ಆಗಿ ನಮಗೆ ಓಡಿಸಿ ಬಿಟ್ಟರು ಸಾಬ್. ನಮಗೆ ಬೇಜಾರ್ ಆಯ್ತು - ಅಂದ ಕರೀಂ.

ಏನೋ ಅವಗಢ ಅನಾಹುತ ಮಾಡಿಕೊಂಡಾನ ಅಂತ ಗ್ಯಾರಂಟೀ ಆತು.

ಏನು? ನೀನು ಯೋಗ ಕ್ಲಾಸ್ ಸೇರಿಕೊಂಡಿದ್ಯಾ? ಯಾಕೋ? ಮಸ್ತ ಹೊನಗ್ಯಾ ಪರ್ಸನಾಲಿಟಿ ಇಟ್ಟಿ. ಎಷ್ಟ ಮಂದಿಗೆ ಬುಟ್ಟಿ ಒಳಗ ಹಾಕ್ಕೊಂಡಿ. ಈಗೂ ಒಬ್ಬಾಕಿ ಅಧಿಕೃತ ಬೇಗಂ, ಎರಡ ಮೂರು ಅನಧಿಕೃತ ಡೌ ಇಟ್ಟಿ. ನಲವತ್ತಾದ್ರೂ ಮಸ್ತ ಇಪ್ಪತ್ತರ ಚಿಕಣಾ ಹಾಂಗ ಇದ್ದಿ. ನಿನಗ್ಯಾಕೋ ಯೋಗಾ? ಮಸ್ತ ಲೈಫ್ ಭೋಗಿಸಿ ಭೋಗಿಯಾಗೋ. ಯೋಗಿ ಪೋಗಿ ಎಲ್ಲಾ ನಿನಗ ಮತ್ತ ನಿನ್ನ ಬಿಂದಾಸ್ ಪ್ರಕೃತಿಗೆ ಒಗ್ಗೊದಿಲ್ಲೋ - ಅಂತ ಹೇಳಿದೆ.

ಸಾಬ್....ಅದು ನಮ್ಮ ಬೇಗಂಗೆ  ಏನೋ ಯೋಗದ್ದು ಹುಚ್ಚು ಹತ್ತಿದೆ. ಅದು ಯಾವದೋ ಅರಿಷ್ಟಾಂಗ ಯೋಗ ಅಂತೆ. ಯಾವದೋ ಒಂದು ನಾಮದ ಕಪಲ್ ಬಂದು ಅಲ್ಲಿ ಕಲ್ಯಾಣ ಮಂಟಪದದಲ್ಲಿ ಕ್ಲಾಸ್ ಮಾಡ್ತದಂತೆ. ಅದಕ್ಕೆ ಅಕಿ ಮತ್ತು ಅಕಿ ಗೆಳತಿಯರು ಎಲ್ಲಾ ಹೋಗ್ತಾರಂತೆ. ಜೊತಿಗೆ ಅವರ ಅವರ ಗಂಡರೂ ಸಹ ಗತಿ ಇಲ್ಲದೆ ಹೋಗ್ತಾರೆ. ನಮ್ಮ ಬೇಗಂ ನನಗೂ ಗಂಟು ಬಿದ್ದು ಬಿಟ್ಟಳು. ನಾನೂ ಬರಲೇ ಬೇಕು ಅಂತ. ಅದಕ್ಕೆ ಹೋಗಿದ್ದೆ ಸಾಬ್ - ಅಂದ ಕರೀಂ.

ಏನು ಇದು ಎಂತಾ ಅರಿಷ್ಟ ಹೆಸರು? ಅರಿಷ್ಟಾಂಗ ಯೋಗ ಅಂತ. ಇಂತಾ ಹಾಪ್ ಹೆಸರು ಇಟ್ಟ ಯೋಗ ಹೇಳಿ ಕೊಡೊ ಅರಿಷ್ಟ ಮುಂಡೇವು ಯಾರೋ? - ಅಂದೆ.

ಸಾಬ್....ನಮಗೆ ಏನು ಗೊತ್ತು ಸಾಬ್. ಅದು ಯಾರೋ ನಿಮ್ಮ ಪೈಕಿ ಹಳೆ ಕಾಲದ ಪಕೀರ್ ಅಂತೆ. ಅವನ ಹೆಸರು ಅಂದ್ರೆ.....ಏನು....ಹಾಂ.....ಪತಲೀ ಅಲಿ ಅಂತೆ. ನಮ್ಮದು ಪೈಕಿ ಕ್ಯಾ? ಪತಲೀ ಗಲಿ ಸೆ ಓಡಿ ಹೋಗೋ ಅಲಿ ಅಂತ ಇರಬೇಕು. ಅದಕ್ಕೇ  ಪತಲೀ ಅಲಿ. ಅವನು ಏನೋ ಎಂಟೆಂಟು ಅಂಗ ಇರೋ ಯೋಗಾ ಶಾಸ್ತ್ರಾ ಬರೆದಾನಂತೆ. ಅದಕ್ಕೆ ಅರಿಷ್ಟ ಅಂಗಾದು ಯೋಗ ಅಂತಾರಂತೆ. ಅದನ್ನ ಯಾರೋ ದೊಡ್ಡ ನಾಮದ ನಿಮ್ಮ ಪೈಕಿ ಬ್ರೆಮಿನ್ ಅಜ್ಜಾರು ಎಲ್ಲಾ ಕಡೆ ಫೇಮಸ್ ಮಾಡಿದಾರಂತೆ. ಅದೇ ದೊಡ್ಡ ನಾಮದ ಬ್ರೆಮಿನ್ ಅಜ್ಜಾವರ ಕಡೆ ಕಲ್ತು ಬಂದವರೇ ಇವರು ಗಂಡ ಹೆಂಡತಿ ಯೋಗಾ ಮಾಸ್ತರ್ ಮತ್ತು ಮಾಸ್ತರ್ಣಿ - ಅಂದ ಕರೀಂ.

ಹಳೆ ದೋಸ್ತ ನೋಡ್ರೀ. ಏನೇನೋ ಅಪಭ್ರಂಶ ಮಾಡಿ ಅವ ಹೇಳಿ ಹೇಳಿ, ನಾ ಕೇಳಿ ಕೇಳಿ ಒಂದು ತರಹದ ಪ್ಯಾಟರ್ನ್ ರೆಕಗ್ನಿಶನ್ ಕಲತೇನಿ. ಏನು ಯಬಡೇಶಿ ಹಾಂಗ ಹೇಳಿದ ಅಂತ ಗೊತ್ತಾತು.

ಸಾಬ್ರಾ.....ಅಯ್ಯೋ.....ಅದು ಅಷ್ಟಾಂಗ ಯೋಗ ಅಂತರೀಪಾ. ಮತ್ತ ಅವಾ ಪತಲೀ ಗಲಿಯಿಂದ ಓಡಿ  ಹೋಗೋ ಪತಲೀ ಅಲಿ ಅಲ್ಲರೀಪಾ. ಅವ ಪತಂಜಲಿ ಅಂತ. ಮತ್ತ ಅದನ್ನ ಜಗತ್ತಿನ ತುಂಬಾ ಫೇಮಸ್ ಮಾಡಿದವರು ಅಯ್ಯಂಗಾರ್ ಅಂತ. ಅವರು ನಾಮದ ಬ್ರಾಹ್ಮಣ ಖರೆ. ಆದ್ರ ಪತಂಜಲಿಯ ಅಷ್ಟಾಂಗ ಯೋಗವನ್ನು ಅದರಲ್ಲೂ ಒಂದು ಅಂಗವಾದ ಆಸನಗಳನ್ನು ಜಗತ್ತಿಗೆ ಪರಿಚಯಿಸಿ, ಒಂದು ಶಾಸ್ತ್ರಬದ್ಧವಾದ ಸಿಲೆಬಸ್ ಅಂತ ಮಾಡಿ, ಸಾಕಷ್ಟು ಮಂದಿ ಟ್ರೇನರ್ ತಯಾರ್ ಮಾಡಿದವರು ಅಯ್ಯಂಗಾರ್ ಗುರುಗಳು. ಅವರ ಕಡೆ ಕಲ್ತು ಬಂದವರು ಇರಬೇಕು ಈ ನಿನ್ನ ಸಣ್ಣ ನಾಮದ ಯೋಗಾ ಕಪಲ್. ಹೀಂಗೇನು ಕಥಿ? - ಅಂತ ಕೇಳಿದೆ.

ಹಾಂ.....ಹೌದು ನೋಡಿ ಸಾಬ್. ಬಿಲ್ಕುಲ್ ಬರಾಬರ್. ಎಲ್ಲಾ ಕರೆಕ್ಟ್ ಅದೆ ನೀವು ಹೇಳಿದ್ದು. ಅವರೂ ಎಲ್ಲಾ ಇದನ್ನೇ ಹೇಳಿದರು. ನನಗೆ ಮರ್ತು ಹೋಗಿತ್ತು. ಒಂದೇ ಶಬ್ದಾದು ಮೇಲೆ ನಮ್ಮದೂಕಿ ಗಮನಾ ಇತ್ತು. ಅದಕ್ಕೇ ಎಲ್ಲಾ ಮರ್ತು ಹೋಯ್ತು. ನಮಗೆ ಒಂದು ಡೌಟ್ ಸಾಬ್ - ಅಂದ ಕರೀಂ.

ಏನು ಡೌಟ್? ಎಲ್ಲಾ ತಿಳಿಸಿ ಹೇಳಿದ್ನಲ್ಲೋ ಈಗ ಮಾತ್ರ - ಅಂದೆ.

ಸಾಬ್....ಅಷ್ಟಾಂಗ ಯೋಗ ಇದ್ದ ಹಾಗೆ 'ಪಂಚಾಂಗ' ಯೋಗ ಅಂತ ಐತೆ ಕ್ಯಾ? - ಅಂದ ಕರೀಂ. ಅಂದವನೇ ಖೀ.....ಖೀ.....ಹೀ.....ಹೀ......ಅಂತ ಅಂಡು ತಟ್ಟಿಕೊಂಡು ನಕ್ಕ.

ತಥ್ ನಿನ್ನ.....ಹೇಶಿ ಮಂಗ್ಯಾನ್ ಕೆ....ಆ ಟೆಂತ್ ಕ್ಲಾಸಿನ್ಯಾಗ ಸಮಾಸ ಬಿಡಿಸಿದ ಜೋಕ್ ಇನ್ನೂ ಮರ್ತಿಲ್ಲ ನೋಡು ನೀ. ಪಂಚಾಂಗ ಯೋಗ ಅಂತ. ಏನು ಮಸ್ತ ಸಮಾಸ ಬಿಡ್ಸ್ತಿದ್ಯೋ ನೀನು. ನೀ ಸಮಾಸ ಬಿಡಿಸೋ ಅಬ್ಬರಕ್ಕ ಸಂಸ್ಕೃತ ಮಾಸ್ತರ ಮಂದಿಗೆ ಸಂಸ್ಕೃತ ಮರ್ತು ಹೋಗ್ತಿತ್ತು. ಹೇಳು ನೋಡೋಣ ನೀ ಹ್ಯಾಂಗ ಸಮಾಸ ಬಿಡ್ಸಿದ್ದಿ ಪಂಚಾಂಗ ಅನ್ನೋದನ್ನ? - ಅಂತ ಅಂದೆ.

ಸಾಬ್ ಏನು ಮಸ್ಕಗಿರಿ ಮಾಡ್ತೀರಿ ನೀವು? ನಾವು ಸಂಸ್ಕೃತ ಮತ್ತು ಕನ್ನಡ ಒಳಗೆ ವೀಕ್ ಸಾಬ್. ನಾವು ನಮಗೆ ತಿಳಿದ ಹಾಂಗೆ - ಪಂಚೆಯಲ್ಲಿ ಇರುವ ಅಂಗ ಪಂಚಾಂಗ - ಅಂತ ಸಮಾಸ ಬಿಡ್ಸಿದ್ರೆ, ಅದನ್ನೇ ನೆನಪು ಇಟ್ಟುಕೊಂಡು ನಮಗೆ ಈಗೂ ಕಾಡಿಸೋದು ಕ್ಯಾ?.......... ಏನು ಮಾಡೋದು? ಉತ್ತರ ಕೊಡಲಿಲ್ಲ ಅಂದ್ರೆ ಕಡತ ಬೀಳ್ತಿತ್ತು. ಅದಕ್ಕೇ ಅಲ್ಲಾಹು ಹೇಗೆ ಬುದ್ಧಿ ಕೊಟ್ಟಾ ಹಾಗೆ ನಾವು ಸಮಾಸ ಬಿಡ್ಸಿ ಬಿಟ್ಟ್ವಿ. ಡಬಲ್ ಕಡತ ಬಿತ್ತು. ಆ ಬ್ಯಾಚಲರ್ ಲೇಡಿ ಟೀಚರ್- ಪಂಚೆಯಲ್ಲಿ ಇರುವ ಅಂಗ ಪಂಚಾಂಗ- ಅನ್ನೋದನ್ನ ಕೇಳಿ, ಫುಲ್ ಕೆಂಪಾಗಿ, ರಾಂಗಾಗಿ, ಚಿಟಿ ಚಿಟಿ ಚೀರುತ್ತಾ ಹೋಗಿ, ಆ ಕರಪ್ ಹೊನಗ್ಯಾ ಮಾಸ್ತರ್ ಗೆ ಕರ್ಕೊಂಡು ಬಂದು, ಅವರು ನನಗೆ - ಪಂಚಾಂಗ ಪಂಚಾಂಗ ಸಮಾಸಾ ಬಿಡಿಸಿ ಬದ್ಮಾಶಿ ಮಾಡ್ತಿಯೇನೋ ಮಂಗ್ಯಾನ್ ಕೆ - ಅಂತಾ ಬೈತಾ ಬೈತಾ ಪಂಚೆ ಒಳಗೆ ಹಿಂದೆ ಇರುವ ಅಂಗಕ್ಕೆ ಬಾಸುಂಡಿ ಬರೋ ಹಾಗಿ ಕಡತಾ ಹಾಕಿ ಬಿಟ್ಟಿದ್ದರು ಸಾಬ್- ಅಂತ ಹೇಳಿದ ಕರೀಂ. ಮಸ್ತ ನಕ್ಕವೀ ಇಬ್ಬರೂ.

ನಮ್ಮ ಕರೀಂ ಪಂಚಾಂಗ ಬಿಟ್ಟು ಇನ್ನೂ ಕೆಲವು ಸಮಾಸ ಬಿಡಿಸಿದ್ದ. ಅವೆಲ್ಲ ಇಲ್ಲೆ ಬ್ಯಾಡ. ಆ ಮ್ಯಾಲೆ ನಮ್ಮ ಬ್ಲಾಗ್ ಮಲಯಾಳಿ ಪಿಚ್ಚರ್ ಗತೆ A ಸರ್ಟಿಫಿಕೇಟ್ ಹಾಕ್ಕೋಬೇಕಾಗ್ತದ. ತಲಿ ಮ್ಯಾಲೆ ಬಾಲ್ ಇರುವ, ಇಲ್ಲದ ಬಾಲ್ ಬಚ್ಚೆ ಇರೋ ಸಂಸಾರಸ್ಥ  ಮಂದಿ ನಮ್ಮ ಬ್ಲಾಗ್ ಓತ್ತಾರ. ಅದಕ್ಕ ಅವೆಲ್ಲ ಇಲ್ಲೆ ಬ್ಯಾಡ.

ನೋಡು ಕರೀಂ. ಪತಂಜಲಿ ಅಷ್ಟಾಂಗ ಯೋಗದ ಮೇಲೆ ಪ್ರಭವಾನಂದರು ಒಂದು ಅದ್ಭುತ ಪುಸ್ತಕ ಬರದಾರ. ಅದನ್ನ ಮುದ್ದಾಂ ಓದು. ನನ್ನ ಕಡೆ ಅದ. ಮುಂದಿನ ಸರೆ ಮನಿಗೆ ಬಂದಾಗ ಕೊಡತೇನಿ. ಭಾಳ ಚಂದಾಗಿ ಸರಳ ಇಂಗ್ಲಿಶ್ ನ್ಯಾಗ ಬರದಾರ - ಅಂತ ಹೇಳಿದೆ.

ಇಲ್ಲದ ಅಧಿಕಪ್ರಸಂಗಿತನ ಮಾಡೋ ಮೂಡಿನ್ಯಾಗ ಇದ್ದ ಹಾಪ್ ಮಂಗ್ಯಾನ್ ಕೆ ಕರೀಂ.

ಸಾಬ್....ಈ ಪ್ರಭವಾನಂದ ಅಂದ್ರೆ ದಿನೇಶ್ ಆನಂದ್ ಪೈಕಿ ಕ್ಯಾ? - ಅಂತ ಕೇಳಿದ.

ಯಾವ ದಿನೇಶ್ ಆನಂದ್? ಅವರು ಸ್ವಾಮಿಗಳು ಏನು? - ಅಂತ ಸೀರಿಯಸ್ಸಾಗಿ ಕೇಳಿದೆ.

ಹೀ....ಹೀ.....ಇಲ್ಲ ಸಾಬ್....ಅದೇ ಹಿಂದಿ ಮೂವಿನಲ್ಲಿ ಕ್ಯಾರೆಕ್ಟರ್ ರೋಲ್ ಮಾಡ್ತಾ ಇದ್ದ ಸಣ್ಣ ನಟ. ಈಗ ಸ್ವಲ್ಪ ವರ್ಷದ ಹಿಂದೆ ಗ್ಯಾಂಗಸ್ಟರ್ ಅಬು ಸಲೇಂ ಕಡೆ ಮಂದಿ ಅವನ ತಲಿಗೆ ಗೋಲಿ ಹೊಡೆದು ಮುಂಬೈನಲ್ಲಿ ಕೊಂದು ಬಿಟ್ಟರು. ಅವರ ಪೈಕಿ ಕ್ಯಾ? - ಅಂತ ಹಾಪರ ಗತೆ ನಕ್ಕೊತ್ತಾ ಕೇಳಿದ.

ನಾ ಸೀರಿಯಸ್ಸಾಗಿ ಸ್ವಾಮಿ ಪ್ರಭವಾನಂದರ ಬಗ್ಗೆ ಹೇಳಲಿಕತ್ತರ ಇವಂಗ ಜೋಕ್. ಹುಸ್ಸೂಳೆಮಗ. ನಮ್ಮ ಪ್ರೀತಿಯ ದೋಸ್ತ ಕಿತಬಿ ಹುಸ್ಸೂಳೆಮಗ ಕರೀಂ.

ಸ್ವಾಮಿ ಪ್ರಭವಾನಂದ ಅವರು ದಿನೇಶ್ ಆನಂದ್ ಪೈಕಿನೂ ಅಲ್ಲ. ಬಾಬ್ಬಿ ಆನಂದ್ ಪೈಕಿನೂ ಅಲ್ಲ. ಇವರು ರಾಮಕೃಷ್ಣ ಮಿಶನ್ ಸ್ವಾಮಿಗಳು. ಅಮೇರಿಕಾದಲ್ಲಿ ಇದ್ದು ದೊಡ್ಡ ಹೆಸರು ಮಾಡಿದವರು. ಭಾಳ ಒಳ್ಳೆ ಒಳ್ಳೆ ಪುಸ್ತಕ ಬರದಾರ. ಇಲ್ಲೆ ನಾ ಪತಂಜಲಿ ಅಷ್ಟಾಂಗ ಯೋಗದ ಬಗ್ಗೆ ಹೇಳೋಣ ಅಂದ್ರ ದರಿದ್ರ ಮಾಫಿಯಾ ಮಂದಿ ಹೆಸರು ತರ್ತಿಯಲ್ಲೋ? - ಅಂತ ಬೈದೆ.

ಕರೀಂ ಮಳ್ಳ ಮಸಡಿ ಮಾಡಿ ನಕ್ಕ.

ರಗಡ ಖಬರ್ ಇಟ್ಟೀರಿ ಸಾಬ್ ನೀವೂ. ಅವನು ಬಾಬ್ಬಿ ಆನಂದಗೆ ಕೂಡ ಪೊಲೀಸರು ಹಿಡದು ಇನ್ಕೊಯರೀ ಮಾಡಿದ್ದರು. ಅವನು ಮಾಫಿಯಾಗೆ ಫ್ರಂಟ್ ಮ್ಯಾನ ಅಂತೆ. ಮಸ್ತ ಮಾಹಿತಿ ಇಟ್ಟೀರಿ ಸಾಬ್. ಮಾನ್ ಗಯೇ ಉಸ್ತಾದ್ - ಅಂದ. ಭಾಳ ಇಂಪ್ರೆಸ್ಸ್ ಆಗಿದ್ದ.

ಏನಂತ ತಿಳ್ಕೊಂಡಿ? ಒಂದ ಕಾಲದಾಗ ಇಂಡಿಯನ್ ಅಂಡರ್ವರ್ಲ್ಡ್ ಮ್ಯಾಲೆ ಭಾಳ ಮಾಹಿತಿ ಇತ್ತಪಾ ನನ್ನ ಕಡೆ. ಈಗ ಅವೆಲ್ಲ ಬಿಟ್ಟೇನಿ. ಏನೂ ಮಜಾ ಉಳದಿಲ್ಲ ಈಗ ಮುಂಬೈ ಅಂಡರ್ವರ್ಲ್ಡ್ ನ್ಯಾಗ. ಮೊದಲಿನ ಗತೆ ಗ್ಯಾಂಗ್ ವಾರ್, ಎನ್ಕೌಂಟರ್ ಎಲ್ಲಾ ಬಂದಾಗಿ, ಫುಲ್ ಥಂಡಾ ಆಗಿ ಬಿಟ್ಟದ - ಅಂದೆ.

ಅವರು ಯೋಗಾ ಕಲಸೋ ನಾಮದ ಗಂಡಾ ಹೆಂಡತಿ ಹೆಸರು ಏನು? ಹೇಳೋ. ನಮಗ ಗೊತ್ತಿರವರು ಏನೋ ಅಂತ ನೋಡೋಣ - ಅಂತ ಕೇಳಿದೆ.

ನೋಡಿ ಸಾಬ್. ಆ ಮೇಡಂ ಹೆಸರು 'ಆಲಮೇಲ್ ಅಂಡಾಹಾಳ್' ಅಂತೆ. ಅವ ಆದ್ಮಿ ಹೆಸರು 'ದೇಸಿ ಕಾ ಅಚಾರ್'. ಇಬ್ಬರೂ ನಿಮ್ಮದು ಪೈಕಿ ಬ್ರೆಮಿನ್ ಲೋಗ್. ಆದ್ರೆ ನಿಮ್ಮದು ಗತೆ ಅವರು ಅಡ್ಡಡ್ಡ ಬೂದಿ ರಾಖ್ ಹಚ್ಚಿಗೋಳ್ಳೋದಿಲ್ಲ ಸಾಬ್. ಉದ್ದಾಗಿ ಲಾಂಗಾಗಿ ಎರಡು ವೈಟ್ ಒಂದು ರೆಡ್ ನಾಮಾಗೆ ಹಾಕಿಕೊಂಡು ಮಸ್ತಾಗೆ ಕಾಣ್ತಾರೆ - ಅಂದ.

ಸಾಬ್ರಾ....ಅದು ಅಲುಮೇಲು ಅಂಡಾಳ್ ಮತ್ತು ದೇಸಿಕಾಚಾರ್ ಅಂತ ಹೆಸರು ಇರಬೇಕು ನೋಡ್ರಿ. ಫುಲ್ ಫಿಮೇಲ್ ಮೇಡಂ ಹೆಸರು ಆಲಮೇಲ್ ಅಂಡಾಹಾಳ್ ಅಂತ. ಪಾಪ ಅಕಿ ಗಂಡ ದೇಸಿಕಾಚಾರ್, ದೇಸಿ ಕಾ ಅಚಾರ್ ಅಂತ. ಸಾಬ್ರಾ.....ನಾವು ಹಣಿ ಮ್ಯಾಲೆ ಅಡ್ಡಡ್ಡ ಹಚ್ಚಿಗೋಳ್ಳುದು ಪರಮ ಪವಿತ್ರ ಭಸ್ಮ. ಅದು ಅಂತಾ ಇಂತಾ  ಬೂದಿ ಅಲ್ಲ. ರಾಖ್ ಅಂತ ರಾಖ್. ಮಂಗ್ಯಾನ್ ಕೆ - ಅಂತ ತಿಳಿಸಿ ಹೇಳಿದೆ.

ಓಕೆ....ಓಕೆ...ಸಾಬ್....ಮಾಫ್ ಕರೋಜಿ.....ನಮಗೆ ಅದೆಲ್ಲ ಗೊತ್ತಿಲ್ಲ ಸಾಬ್.....ಈಗ ಒಮ್ಮೆ ಹೇಳಿಕೊಟ್ಟರೆ ಸಾಕು ನಾವು ಮತ್ತೊಮ್ಮೆ ಅಂಡಾಹಾಳ್, ಮನಿಹಾಳ್, ದೇಸಿ ಕಾ ಅಚಾರ್, ವಿದೇಶಿ ಕಾ ಅಚಾರ್ ಅಂತೆಲ್ಲ ಹೇಳೋದಿಲ್ಲ ಸಾಬ್.....- ಅಂತ ಹೇಳಿ ಕರೀಂ ಮೈಲ್ಡಾಗಿ ಮಸ್ಕಾ ಹೊಡೆದ.

ಹ್ಮಂ.....ಈಗ ಹೇಳೋ ಯಾಕ ನಿನ್ನ ಯೋಗಾ ಕ್ಲಾಸಿನಿಂದ ಒದ್ದು ಓಡಿಸಿ ಬಿಟ್ಟರು ಅಂತ? - ಅಂತ ಕೇಳಿದೆ.

ಸಾಬ್....ನೋಡಿ....ಯೋಗಾ ಹೇಳಿಕೊಡೋ ಮೇಡಂ ಮಾತಿಗೊಮ್ಮೆ 'ಯೋಗಾ ಮೀನ್ಸ್ ಚಿತ್ತಾಗಿ ಒತ್ತಿ ನಿರೋಧ', 'ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ' ಅಂತ ಮ್ಯಾಲಿಂದ ಮ್ಯಾಲೆ ಹೇಳಿದಳು. ಅದೇನೋ ಸಂಸ್ಕೃತ ಅಂತೆ. ಅವನೇ ಪತಲೀ ಅಲಿ ಪತಂಜಲಿನೇ ಹೇಳಿದ್ದಾನಂತೆ. ಅದರ ಅರ್ಥ ಇಂಗ್ಲೀಷಿನಲ್ಲಿ ಹೇಳಿದಳು. ನಮಗೆ ತಿಳಿಲಿಲ್ಲ. ನಗು ಬಂತು. ಕಿಸಿ ಕಿಸಿ ಅಂತೆ ನಕ್ಕೆ. ನಮ್ಮ ಭಾಂಜಾ ಮೆಹಮೂದ್ ಸಹ ಬಂದಿದ್ದ ನೋಡಿ. ಅವನೂ ನಕ್ಕ. ನಾಮದ ಯೋಗಾ ಮೇಡಂ ಕೆಟ್ಟ ಮಸಡಿ ಮಾಡಿ - ಯಾಕೆ ನಗತೀರಿ - ಅಂತ ತಮಿಳ್ ಮಿಕ್ಸ್ ಕನ್ನಡದಲ್ಲಿ ಕೇಳಿದಳು. ಏನೂ ಇಲ್ಲ ಮೇಡಂ ಅಂದ್ವಿ. ಅವಳು ಮತ್ತೆ ಮತ್ತೆ 'ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ' ಅಂತ ಅಂದಾಗೆ ಮಾತ್ರ ತುಂಬಾ ನಗು ಬರ್ತಿತ್ತು. ಒಟ್ಟು ಮೂವತ್ತು ನಿಮಿಷದ ಯೋಗಾ ಕ್ಲಾಸಿನಲ್ಲಿ ಕಂಸೆಕಂ ಇಪ್ಪತ್ತು ಸಾರೆ ಚಿತ್ತಾಗಿ ಒತ್ತಿ ಚಿತ್ತಾಗಿ ಒತ್ತಿ ನಿರೋಧ ನಿರೋಧ ಅಂತ ಹೊಯ್ಯ್ಕೊಂಡಳು ಆಕಿ. ಅಂತೂ ಇಂತೂ ಕ್ಲಾಸ್ ಮುಗಿತು. ನಾವು ಹೊರಗೆ ಬರಬೇಕು ಅನ್ನೋದ್ರಾಗೆ ಆ ನಾಮದ ಯೋಗಾ ಟೀಚರ್ ನಮ್ಮ ಕಡೆ ಕೈ ಮಾಡಿ, ಮಿಸ್ಟರ್ ಕರೀಂಖಾನ್.....ನೀವೇ.....ಬನ್ನಿ ಇಲ್ಲೆ. ನಿಮ್ಮ ಕಡೆ ಮಾತಾಡ್ಬೇಕು....ಅಂತ ಕರೆದಳು ಸಾಬ್. ನಾವು ಅಕಿ ಕಡೆ ಹೋದ್ವಿ ಸಾಬ್ - ಅಂತ ಹೇಳಿದ ಕರೀಂ ನಿಲ್ಲಿಸಿದ.

ಸಾಬ್ರಾ.....ಮುಂದೇನಾತು ಹೇಳ್ರೀಪಾ? - ಅಂತ ಕೇಳಿದೆ.

ಮಿಸ್ಟರ್ ಕರೀಂ.....ಯಾಕೆ ನಗ್ತಾ ಇದ್ದಿರಿ? ಯಾಕೆ? ಯಾಕೆ? ಏನು ಫನ್ನಿ ಇದೆ ?ಹಾಂ....ಹಾಂ.....ಅಂತ ನಮಗೆ ಆ ಯೋಗಾ ಮೇಡಂ ಕೇಳಿದಳು ಸಾಬ್. ನಮಗೆ 'ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ' ಅಂತ ಅಂದ್ರೆ ಏನು ಅಂತ ತಿಳಿದಿರಲಿಲ್ಲ. ನಿಮಗೆ ನಮ್ಮದು ನೇಚರ್ ಗೊತ್ತು ಅಲ್ಲ? ನಮಗೆ ತಿಳಿದಂಗೆ ಅರ್ಥ ಮಾಡಿಕೊಂಡು ಬಿಟ್ಟಿ, ಅದನ್ನ ಹೇಳಿ, ತಪ್ಪೋ ಸರಿಯೋ ಅಂತ ಮಾಲೂಮ್ ಮಾಡ್ಕೊತ್ತೀವಿ. ಅದು ನಮ್ಮ ರೀತಿ - ಅಂದ ಕರೀಂ.

ಹ್ಞೂ....ಮುಂದ ಏನಾತೋ?

ನೋಡಿ ಮೇಡಂ.....ನೀವು ಪದೇ ಪದೇ ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ ಅಂದ್ರಿ ನೋಡಿ....ಅಂತ ಹೇಳಿದೆ ಸಾಬ್ - ಅಂದ ಕರೀಂ.

ಎಸ್....ಎಸ್....ಸೋ ವಾಟ್?- ಅಂತ ಕೇಳಿದಳಂತೆ ಯೋಗಾ ಮೇಡಂ.

ನೋಡಿ ಮೇಡಂ. ನೀವು "ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ" ಅಂತ ಅಂದ್ರಿ. ನಮಗೆ ತಿಳಿದದ್ದು ಇಷ್ಟು. ಚಿತ್ತಾಗಿ ಅಂದ್ರೆ ಸಿಕ್ಕಾಪಟ್ಟೆ ಶೆರೆ ಕುಡಿದು ಕುಡಿದು ಚಿತ್ತಾಗೋದು. ಒತ್ತಿ ಅಂದ್ರೆ ಅಷ್ಟು ಚಿತ್ತಾದ ಮೇಲೆ ಮೈಮೇಲೆ ಖಬರೇ ಇರೋದಿಲ್ಲ. ಅಂತಾದ್ರೊಳಗೆ ಏನು ಒತ್ತತೀವೋ, ಎಲ್ಲಿ ಒತ್ತತೀವೋ, ಯಾರಿಗೆ ಒತ್ತತೀವೋ ಅಂತ ನಮಗೇ ಗೊತ್ತಿರೋದಿಲ್ಲ. ಅದರ ಮ್ಯಾಲೆ ನಿರೋಧ ಬ್ಯಾರೆ. ಇದೆಲ್ಲಾ ಗಲತ್ ಕಾಮ್ ಮಾಡೋದು, ಹೊಲಸ್ ಹೊಲಸ್ ಕೆಲಸ ಮಾಡೋದು ನಿಮ್ಮ ಅರಿಷ್ಟಾಂಗ ಯೋಗಾ ಕ್ಯಾ? ಏನು ಮೇಡಂ? - ಅಂತ ಕರೀಂ ಸಾಬರು ಯೋಗಾ ಮೇಡಂಗೆ ಕೇಳಿ ಬಿಟ್ಟರಂತ.

ಯೋಗಾ ಮೇಡಂ ಅಲುಮೇಲು ಅಂಡಾಳ್ ಫುಲ್ ಶಾಕ್.

ಮಿಸ್ಟರ್ ಕರೀಂ!!!!!!!!!!!!!ಏನು? ಏನು? ವಾಟ್ ಡು ಯು ಮೀನ್? ವಾಟ್ ಕುಡಿಯೋದು? ವಾಟ್ ಒತ್ತೋದು? ಅಂಡ್ ವಾಟ್ ಇಸ್ ನಿರೋಧ? ಹಾಂ? ಹಾಂ? - ಅಂತ ಯೋಗಾ ಮೇಡಂ ಸಾಬರಿಗೆ ತಿರುಗಿ ಕೇಳಿದ್ದಾಳೆ.

ಮೇಡಂ.....ನಿರೋಧ ಅಂದ್ರೆ...ಅದು...ಅದು...ಅದೇ ನಾಕಾಣೆಗೆ ಮೂರು ಸಿಗ್ತದೆ ಮೇಡಂ. ಗೊತ್ತಿಲ್ಲ ಕ್ಯಾ? ಎಷ್ಟು ಭೋಲಿ ಹಾಂಗೆ ಏನೂ ಗೊತ್ತಿಲ್ಲ ಅನ್ನೋ ಹಾಂಗೆ ನಾಟಕ್ ಮಾಡ್ತೀರಿ ಕ್ಯಾ? ಕಳ್ಳಿ ಮೇಡಂ. ಬದ್ಮಾಶ್ ಮೇಡಂ - ಅಂತ ನಮ್ಮ ಕರೀಂ ಆ ಮೇಡಂ ಹತ್ತಿರ ಮಜಾಕ್ ಮಾಡ್ಯಾನ.

ಆ ಯೋಗಾ ಮೇಡಂಗೆ ಮೊದಲ ಕನ್ನಡ ಸರಿ ಬರೋದಿಲ್ಲ. ಹಾಪ್ ತಮಿಳ್ ಅಕಿ. ಇವ ಬ್ಯಾರೆ ಕಣ್ಣ ಹೊಡದ ಹೊಡದ - ನಿರೋಧ ಅಂದ್ರೆ ಗೊತ್ತಿಲ್ಲ ಕ್ಯಾ? ಗೊತ್ತಿಲ್ಲ ಕ್ಯಾ? -ಅಂತ ತಲಿ ತಿಂದಾನ. ಅಕಿಗೂ ತಲಿ ಕೆಟ್ಟಿರಬೇಕು. ಅದಕ್ಕ ಕೇಳಿ ಬಿಟ್ಟಾಳ.

ಮಿಸ್ಟರ್ ಕರೀಂ....ಟೆಲ್ ಮಿ ನವ್....ಐ ಸೇ ನವ್....ವಾಟ್ ಇಸ್ ನಿರೋಧ? - ಅಂತ ಯೋಗಾ ಮೇಡಂ ಚೀರ್ಯಾಳ.

ಮೇಡಂ....ಇಲ್ಲಿ ಹತ್ತಿರ ಬನ್ನಿ. ಖುಲ್ಲಂ ಖುಲ್ಲ ಹೇಳಿದರೆ, ನಮ್ಮದು ನಿಮ್ಮದು ಇಬ್ಬರದೂ ಇಜ್ಜತ್ ಮಟ್ಟಿ ಮಟ್ಟಿ ಅಂದ್ರೆ ಮಣ್ಣಲ್ಲಿ ಹೋಗಿ ಬಿಡ್ತದೆ - ಅಂತ ಕರದಾನ ನಮ್ಮ ಕರೀಂ.

ಅಕಿ ಏನೋ ಮಹತ್ವದ ಸುದ್ದಿ ಹೇಳ್ತಾನ ಅಂತ ಮಾಡಿ ಬಂದಾಳ. ಅಕಿ ಕಿವಿಯೊಳಗ ಬಾಂಬ್ ಹಾಕೇ ಬಿಟ್ಟಾನ ಕರೀಂ. ನಿರೋಧ ಅಂದ್ರ ಏನು ಅಂತ ಕರೀಮನ ಗಾವಟಿ ಭಾಷಾದಾಗ ಕೇಳಿದ ಬೇಗಂ ಎಚ್ಚರ ತಪ್ಪಿ ಬಿದ್ದು ಬಿಟ್ಟಳಂತ.

ಹೋಗ್ಗೋ ಸಾಬ್ರಾ.....ಘಾತ ಮಾಡಿ ಹಾಕಿದ್ರಲ್ಲರಿ.....ಹೋಗ್ಗೋ ನಿಮ್ಮ......ನನಗ ಮಾತಾಡ್ಲಿಕ್ಕೆ ಆಗವಲ್ಲತು -ಅಂತ ಹೊಟ್ಟಿ ಹಿಡಕೊಂಡು ನಕ್ಕೆ. ನಕ್ಕೇ ನಕ್ಕೆ. ಸುಮಾರು ಹೊತ್ತು ನಕ್ಕೆ.

ಯಾಕೆ ಸಾಬ್? "ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ" ಅಂತ ನಾವು ಕೇಳಿಸಿಕೊಂಡಿದ್ದರಲ್ಲಿ ತಪ್ಪು ಐತೆ ಕ್ಯಾ? ನಾವು ಹೇಳಿದ ಅರ್ಥದಲ್ಲಿ ತಪ್ಪು ಐತೆ ಕ್ಯಾ? ಹಾಂ? ಹಾಂ? - ಅಂದ ಕರೀಂ.

ಹೌದ್ರೀ ಸಾಬ್ರಾ. ಎರಡೂ ತಪ್ಪು. ಅದು "ಯೋಗಃ ಚಿತ್ತ ವೃತ್ತಿ ನಿರೋಧಃ" ಅಂತ ಪತಂಜಲಿ ಯೋಗವನ್ನು ಡಿಫೈನ್ ಮಾಡಿದ ರೀತಿ. ಅದರ ಅರ್ಥ - ಯೋಗ ಅಂದರೆ ಮನಸ್ಸಿನಲ್ಲಿ (ಚಿತ್ತದಲ್ಲಿ) ಏಳುವ ಅಲೆಗಳನ್ನು ನಿಯಂತ್ರಿಸುವದು ಅಂತ. ಆ ಚಿತ್ತ ಅಂದ್ರ ಮನಸ್ಸು. ಶೆರೆ ಕುಡದು ಟೈಟ್ ಆಗಿ  ಚಿತ್ತ್  ಆಗೋದು ಅಲ್ಲ. ಅದು ವೃತ್ತಿ. ಒತ್ತಿ ಅಲ್ಲ. ಅಂದ್ರೆ ಕೆಲಸ. ಒತ್ತೋದು ಅಲ್ಲ. ದಬಾನಾ ಅಲ್ಲ. ಮನಸ್ಸಿನಲ್ಲಿ ಏಳುವ ಅಲೆಗಳು ಅಂತ ಇಲ್ಲಿ ಅರ್ಥ. ನಿರೋಧ ಅಂದ್ರ ನೀವು ತಿಳ್ಕೊಂಡಿದ್ದು ಅಲ್ಲವೇ ಅಲ್ಲ. ನಿರೋಧಿಸುವದು. ನಿಯಂತ್ರಿಸುವದು ಅಂತ. ಒಟ್ಟಿನಲ್ಲಿ 'ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವದೇ ಯೋಗ' ಅಂತ ಪತಂಜಲಿ ಮಹಾಮುನಿಗಳು ಹೇಳಿದ್ದಾರೆ. ಅದನ್ನ ಹ್ಯಾಂಗ ಸಾಧ್ಯ ಮಾಡಿಕೊಳ್ಳೋದು ಅನ್ನೋದನ್ನ ಕಲಿಲಿಕ್ಕೆ ಎಂಟು ಅಂಗವಿರುವ ಅಷ್ಟಾಂಗ ಯೋಗ ಅನ್ನುವದನ್ನ ವಿಸ್ತಾರವಾಗಿ ತಯಾರ ಮಾಡ್ಯಾರ. ಅದರ ಬಗ್ಗೆ ಬರದಾರ. ತಿಳೀತು? - ಅಂತ ಹೇಳಿದೆ. ತಲಿ ತಲಿ ಬಡ್ಕೊಂಡೆ. ಕರೀಂ ಬಸವಣ್ಣನ ಗತೆ ತಲಿ ಕುಣಿಸಿದ.

ಓಹೋ...ಹಾಂಗೆ ಕ್ಯಾ ಸಾಬ್? ನಾವು ಫುಲ್ ತಪ್ಪು ಕೇಳಿಸ್ಕೊಂಡು, ಫುಲ್ ತಪ್ಪು ತಪ್ಪು ಅರ್ಥ ಮಾಡಿಕೊಂಡು, ಕಿಸಿ ಕಿಸಿ ನಕ್ಕು ಬಿಟ್ಟಿವಿ. ಆ ಮ್ಯಾಲೆ ಮೇಡಂ ಕೇಳಿದಾಗ ನಮಗೆ ತಿಳಿದಾಂಗೆ, ಶೆರೆ ಕುಡಿದು ಚಿತ್ತಾಗಿ, ಎಲ್ಲೆಲ್ಲೋ ಒತ್ತಿ, ಮ್ಯಾಲೆ ನಿರೋಧ ಅಂತ ಹೇಳಿದ್ರೆ, ಆ ಮೇಡಂ ಬೇಹೋಶ್ ಆಗಿ ಬೀಳೋದ್ರಲ್ಲಿ ಏನು ಆಶ್ಚರ್ಯ ಸಾಬ್? ಛೆ....ಛೆ.....- ಅಂದ ಕರೀಂ. ಅವಂಗೂ ಮಸ್ತ ನಗಿ ಬಂದಿತ್ತು.

ಅನಾಹುತದ ಮುಂದಿನ ಭಾಗ ಏನಪಾ ಕರೀಮಾ? - ಅಂತ ಕೇಳಿದೆ.

ಸಾಬ್....ಅಕಿ ಯೋಗಾ ಮೇಡಂ ಅಂಡಾಹಾಳ್ ಆಲಮೇಲ್  ಬೇಹೋಶ್ ಆಗಿ ಬಿದ್ದ ಕೂಡಲೇ ಎಲ್ಲ ಲೇಡಿ ಸ್ಟುಡೆಂಟ್ಸ ಕಿಟಾರ್ ಅಂತ ಚೀರಿಕೊಂಡರು. ಆಗ ಮಾತ್ರ ಯೋಗಾ ಸ್ಟುಡಿಯೋ ಬಿಟ್ಟು ಒಳಗೆ ವಸ್ತ್ರ ಚೇಂಜ್ ಮಾಡಲು ಹೋಗಿದ್ದ ಆಕಿ ಗಂಡ ದೇಸಿಕಾಚಾರ್ ಓಡಿ ಬಂದ. ಕೇವಲ ಹನುಮಾನ್ ಲಂಗೋಟಿ ಹಾಕಿಕೊಂಡು ಬಂದು ಬಿಟ್ಟಿದ್ದ. ಏನು ಮಾಡ್ತಾನೆ ಪಾಪ? ಕಪಡಾ ಚೇಂಜ್ ಮಾಡ್ತಾ ಇದ್ದ ಅಂತ ಅನ್ನಿಸ್ತದೆ. ನಡುವೆಯೇ ಚೀರೋದ  ಕೇಳಿ ಓಡಿ ಬಂದಾನೆ. ಅದಕ್ಕೆ ಇರಬೇಕು ಕೇವಲ ಲಂಗೋಟಿ ಹಾಕ್ಕೊಂಡು ಬಂದಿದ್ದ. ಬಂದವನೇ ಬೇಹೋಶ್ ಹೆಂಡತಿಗೆ ನೋಡಿದವನೇ ಒಳಗೆ ಓಡಿದ. ಬರೋವಾಗ ಕೈಯಲ್ಲಿ ತಾಮ್ರದ್ದು, ನಿಮ್ಮ ಋಷಿ ಮಂದಿ ಹಿಡ್ಕೊಳೋ, ಚಂಬು ತಂದ. ಅದರಲ್ಲಿಂದ ನೀರು ತೆಗೆದು ಮೇಡಂ ಮಸಡಿಗೆ ಗೊಜ್ಜಿದ. ಆವಾಗ ಅಕಿ ಪಿಳಿ ಪಿಳಿ ಅಂತ ಕಣ್ಣು ಬಿಟ್ಟಳು ಸಾಬ್ - ಅಂತ ಹೇಳಿದ ಕರೀಂ.

ಸಾಬ್ರಾ....ಅದು ಕಮಂಡಲು. ಚಂಬು ಅಲ್ಲ. ಅಂತೂ ಕಮಂಡಲದ ನೀರು ಗೊಜ್ಜಿಸಿಕೊಂಡ ಯೋಗಾ ಮೇಡಂ ಎದ್ದರು ಅಂತ ಆತು. ಮುಂದ ಏನಾತು? - ಅಂತ ಕೇಳಿದೆ.

ಮುಂದೆ ಕ್ಯಾ ಸಾಬ್? ಆ ಅಂಡಾಹಾಳ್ ಯೋಗಾ ಮೇಡಂ ಗುಸ್ಸೇಸೆ ಸೊಯ್ ಸೊಯ್ ಅಂತ ಉಸಿರು ಬಿಟ್ಟುಗೋತ್ತ ನಾನು ಏನು ಹೇಳಿದೆ ಅಂತ ಅಕಿ ಗಂಡ ಯೋಗಾ ಟೀಚರ್ ದೇಸಿ ಕಾ ಅಚಾರ್ ಗೆ ಹೇಳಿತು. ಅವನು ಸಿಟ್ಟಿನಿಂದ ನಂಗೆ ಗೆಟ್ ಔಟ್ ಅಂತ ಕೂಗಿದ. ನಾನು ಯಾಕೆ ಗುರೂಜಿ, ಏನು ತಪ್ಪು ಆಯಿತು? ನಿರೋಧ ಅಂದಿದ್ದು ತಪ್ಪಾಗಿದ್ರೆ, ಮಾಫ್ ಮಾಡ್ಬಿಟ್ಟಿ ಹೊಟ್ಟಿಯೊಳಗೆ ಹಾಕ್ಕೊಂಡು ಬಿಡ್ರೀ ಅಂತ ಹೇಳಿದೆ. ಅದಕ್ಕೆ ಅವನು ಮತ್ತೂ ರೈಸ್ ಆಗಿ, ಮತ್ತೂ ಜೋರಾಗಿ, ನಿರೋಧ ಏನು ಹೊಟ್ಟಿಯೊಳಗೆ ಹಾಕ್ಕೋ ಬೇಕೋ.....ಬೇವಕೂಫ್.....ಗೆಟ್ ಔಟ್....ಗೆಟ್ ಔಟ್ ಅಂತ ಮತ್ತೂ ಜೋರಾಗಿ ಕೂಗಿದ. ನಾವು ಅದಕ್ಕೆ, ನಿರೋಧ ಅಲ್ಲ ಗುರೂಜಿ, ನಮ್ಮದೂಕಿ ತಪ್ಪು ಹೊಟ್ಟಿಯೊಳಗ ಹಾಕೊರೀ. ನಿರೋಧ ಹೊಟ್ಟಿಗೆ ಯಾರೂ ಹಾಕ್ಕೋಳೋದಿಲ್ಲ. ಅದು ನಮಗೂ ಮಾಲೂಮ್ ಇದೆ .....ಅಂತ ಹೇಳೋಕೆ ಹೋದ್ರೆ ಅವನು ನಿಮ್ಮ ದೇವರು ಶಿವಾಜಿ ಹಾಂಗೆ ತಾಂಡವದು ಡ್ಯಾನ್ಸ್ ಶುರು ಮಾಡಿ ಬಿಟ್ಟ. ಇನ್ನೇನು ಮಾಡೋದು ಅಂತ ವಾಪಸ್ ಬಂದ್ವಿ ಸಾಬ್ - ಅಂದ ಕರೀಂ ಕಥಿ ಮುಗಿಸಿದ.

ನಮ್ಮ ಕರೀಮನ ಮಾತು ಕೇಳಿದ ದೇಸಿಕಾಚಾರಿ ತಾಂಡವ ನೃತ್ಯ ಮಾಡಿದ್ದರೊಳಗ ಏನೂ ಆಶ್ಚರ್ಯ ಇರಲಿಲ್ಲ. ಪಾಪ ಅರ್ಥ ಆಗದೆ ಇನೋಸೆಂಟ್ ಮಿಸ್ಟೇಕ್ ಮಾಡಿ ಬಿಟ್ಟಿದ್ದ ಕರೀಂ.

ಹೋಗ್ಗೋ ಸಾಬ್ರಾ....ಒಟ್ಟಿನಲ್ಲಿ ಯೋಗಾ ಮೇಡಂ, ಯೋಗಾ ಸರ್ ಇಬ್ಬರಿಗೂ ಬೀಪಿ ರೇಸ್ ಮಾಡಿಸಿ, ಬೈಸ್ಕೊಂಡು, ಕ್ಲಾಸಿನಿಂದ ಹೊರಗ ಹಾಕಿಸ್ಕೊಂಡು ಬಂದ್ರಿ ಅಂದಂಗ ಆತು. ಹೋಗ್ಲಿ ಬಿಡ್ರೀ. ನೀವು ಪತಂಜಲಿ ಪುಸ್ತಕ ಓದ್ರಿ. ನಾ ಕೊಡತೇನಿ. ನಿಮ್ಮ ಬೇಗಂ ಬೇಕಾದ್ರೆ ಆ ನಾಮಧಾರಿ ಮಂದಿ ಕಡೆ ಯೋಗಾ ಕಲ್ತು ಬರಲಿ - ಅಂತ ಹೇಳಿದೆ. ಕರೀಂ ಓಕೆ ಓಕೆ ಅಂದ.

ಮನಿಗೆ ಬಂದ ಮೇಲೆ ನಮ್ಮ ಬೇಗಂ ನಮಗೆ ಹಾಕಿಕೊಂಡು ಬೈದರು ಸಾಬ್- ಅಂತ ಹೇಳಿ ಕರೀಂ ನಿಗೂಢ ಲುಕ್ ಕೊಟ್ಟ.

ಏನಂತ ಬೈದರು ನಿಮ್ಮ ಹಾಪ್ ಬೇಗಂ? - ಅಂತ ಕೇಳಿದೆ.

ಕ್ಯಾಜಿ ಕರೀಂಖಾನ್ ಸಾಬ್.....ಎಲ್ಲಾ ಹೋಗ್ಬಿಟ್ಟಿ ಯೋಗಾ ಮೇಡಂ ಕಡೆ ಅತಿ ಚೀಪಾದ, ಅದೂ ಸರ್ಕಾರಿ ಮಾಲ್ ಆದ ನಿರೋಧ ಅಂತ ಅನ್ನೋದು ಕ್ಯಾ? ನಿಮಗೆ ಅಕಲ್ ಇಲ್ಲ ಕ್ಯಾ? ತಲಿ ಇಲ್ಲ ಕ್ಯಾ? ಯಾರಾದ್ರೂ ನಮ್ಮ ಲೆವೆಲ್ ಮಂದಿ ಅದನ್ನ ಯೂಸ್ ಮಾಡ್ತಾರೆ ಕ್ಯಾ? ನಿಮಗೆ ಅರ್ಥ ಆಗಿಲ್ಲ ಅಂದ್ರೆ  'ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ಕೊಹಿನೂರ್, ಡ್ಯೂರೆಕ್ಸ್, ಟ್ರೋಜನ್' ಅಂತ ಒಳ್ಳೆ ಒಳ್ಳೆ ಬ್ರಾಂಡ್ ನೆನಪ ಮಾಡಿಕೊಳ್ಳಬಾರದಾಗಿತ್ತು ಕ್ಯಾ? ಪಾಪ ಯೋಗಾ ಮೇಡಂಗೆ ನಾಕಾಣೆಗೆ ಮೂರು ಸಿಗೋ ದೇಸಿ ಬ್ರಾಂಡ್ ಹೇಳಿ ಬಿಟ್ಟಿರಿ. ಅವರಿಗೆ ಗುಸ್ಸಾ ಬಂತು. ಹಾಗೆ ಮಾಡೋದು ಕ್ಯಾ? - ಅಂತ ಕರೀಮನ ದೀಡ ಪಂಡಿತ್ ಬೇಗಂ ಹೇಳಿದಳಂತ. ಇನ್ನೂ ಶಾಣ್ಯಾ ಅಕಿ. ಇಂಪೋರ್ಟೆಡ್ ಬ್ರಾಂಡ್ ಅಂತ. ದೊಡ್ಡ ಮಂಗ್ಯಾ ಅಕಿ ಬೇಗಂ.

ಹೋಗ್ಗೋ ಸಾಬ್ರಾ.....ಪುಣ್ಯಕ್ಕ ನನ್ನ ಕಡೆ ಮೊದಲು ಅರ್ಥ ಕೇಳಿಕೊಂಡು ಒಳ್ಳೇದ ಮಾಡಿಕೊಂಡ್ರಿ. ಇಲ್ಲಾಂದ್ರ ಕೊಹಿನೂರ್, ಡ್ಯೂರೆಕ್ಸ್, ಟ್ರೋಜನ್ ಅಂತ ಇನ್ನೂ ಕೆಟ್ಟ ಕೆಟ್ಟಾಗಿ ವಿದೇಶಿ ಅಸಡ್ಡಾಳ ಹೆಸರೆಲ್ಲಾ ಹೇಳಿ ಏನೇನು ಅನಾಹುತ ಮಾಡಿಕೊಂಡು ಬರ್ತಿದ್ದರೋ ಏನೋ? ಹೌದಿಲ್ಲೋ? - ಅಂತ ಕೇಳಿದೆ.

ಹೌದು...ಸಾಬ್....ಏಕ್ದಂ ಬರೋಬ್ಬರ್ ಸಾಬ್ ನೀವು ಹೇಳಿದ್ದು. ನಿಮ್ಮ ಕಡೆ ಕೇಳಿದ್ದು ಚೊಲೋ ಆಯಿತು. ನಾನು ಬರ್ತೇನಿ ಸಾಬ್. ಖುದಾ ಹಾಫಿಜ್. ಪತಲೀ ಅಲಿ....ಅಲ್ಲಲ್ಲ....ಪತಂಜಲಿ ಪುಸ್ತಕ ತೆಗೆದು ಇಟ್ಟಿರೀ. ಓಕೆ? - ಅಂತ ಹೇಳಿ ಕರೀಂ ಹೋದ.

ನಾನೂ ವಾಪಾಸ್ ಬಂದೆ. 

ಬಂದು ಪ್ರಭವಾನಂದರು ಬರೆದ ಪುಸ್ತಕ ತೆಗೆದು ತಿರುಗಿಸಿದರ ಯಾವ ಸೂತ್ರ ಎದ್ದು ಬರಬೇಕು? ಅದ - ಯೋಗಃ ಚಿತ್ತ ವೃತ್ತಿ ನಿರೋಧಃ.

ಟೀವಿ ಹಚ್ಚಿದ್ರ.......ಯಪ್ಪಾ.......ಪೂಜಾ ಬೇಡಿ, ಮಾರ್ಕ್ ರಾಬಿನ್ಸನ್ ಇದ್ದ 'ಕಾಮಸೂತ್ರ' ದ ಜಾಹೀರಾತು. ಚಿಟ್ಟನೆ ಚೀರಿ ಟಿವಿ ಬಂದು ಮಾಡಿದೆ.

ಪುಸ್ತಕ ಘಟ್ಟಿಯಾಗಿ ಹಿಡಕೊಂಡೆ.

** ಸ್ವಾಮಿ ಪ್ರಭವಾನಂದರು ಬರೆದ ಅತ್ಯುತ್ತಮ ಪುಸ್ತಕ. ಪತಂಜಲಿಯ ಯೋಗ ಸೂತ್ರಗಳ ಇಂಗ್ಲಿಷ್ ಅನುವಾದ ಮತ್ತು ವಿವರಣೆ. How to Know God: The Yoga Aphorisms of Patanjali

** ಯೋಗಃ ಚಿತ್ತ ವೃತ್ತಿ ನಿರೋಧಃ

** ಪತಲೀ ಗಲಿ - ಮುಂಬೈ ಭಾಷೆ. ಹಿಂದಿನ ಬಾಗಿಲು, ರೋಡು. ಪತಲೀ ಗಲಿ ಸೆ ಭಾಗ್ ಗಯಾ ಸಾಲಾ.

No comments: