Thursday, June 08, 2023

Travel Updates

When I posted the last travel update, I was in Henderson, AR. That marked the important milestone of having stepped foot in every one of the 48 states in the continental US. That includes all the travel done since coming to the US, 26 years ago.

After leaving Henderson, AR traveled east and reached Warren, MA, the final destination on the US east coast. On the way visited Tennessee, Kentucky, Illinois, Indiana, Ohio, Pennsylvania, New York states and stayed a week each in different towns in those states. Wonderful experience.

Coast to coast, across the country, travel completed. The direct coast to coast distance is about 3,000 miles. In my case, I have traveled approximately 14,000 miles since November 2022. Since I spent the entire winter in the warm regions of southern Texas (on the Mexico border), it took so long and so much driving. Fun!



Monday, June 05, 2023

ಅಲ್ಲಾ ಹೋ ಅಕ್ಬರ್...

ಅದು ಒನ್ನೆತ್ತಾ (1978-79) ಕಾಲ. 

ನಾನೊಮ್ಮೆ ನನ್ನ ಜಾನೇಮನ್ ಮಿತ್ರರಾದ ಬಾಬುಸಾಬ ಹಾಸಿಂವಾಲೇ, ಪೈಗಂಬರವಾಸಿ ಮೆಹಮೂದ್ ಬಿಜಾಪುರ ಮತ್ತು ಅಬ್ದುಲ್ ಗಫಾರ್ ಶೇಕ್ ಸನದಿ ಜೊತೆ ಇಂಟೀರಿಯರ್ ಅತ್ತಿಕೊಳ್ಳದ ವೀಕ್ಷಣೆಗೆ ಹೋಗಿದ್ದೆ. ಧಾರವಾಡದ ಅತ್ತಿಕೊಳ್ಳ ಅಂದರೆ ಅಂದಿಗೆ ಮತ್ತು ಇಂದಿಗೂ ಕೂಡ ಮುಸ್ಲಿಂ ಬಾಹುಳ್ಯದ ಬಡಾವಣೆ. ಅದರ ಬಗ್ಗೆ ಕೆಟ್ಟ ಕುತೂಹಲ. 

ಹಾಗಾಗಿ ಒಮ್ಮೆ ಮೇಲೆ ಹೇಳಿದ 'ಬಾಂಧವ' ಮಿತ್ರರ ಜೊತೆ ಅತ್ತಿಕೊಳ್ಳವನ್ನುಸುತ್ತಲು ಹೋಗಿದ್ದೆ. ಮೇಲ್ಮೆಲಿಂದ ಅತ್ತಿಕೊಳ್ಳವನ್ನು ಓಡ್ಯಾಡಿ, ಹೊರಬಂದಾಗ ಎದುರಿಗೆ ಕಂಡಿದ್ದು ಅಲ್ಲಿನ ಮಸೀದಿ. ಅದು  ನಮಾಜ್ ಸಮಯ ಎಂದು ನಂತರ ತಿಳಿಯಿತು. ನಂಬಿಕಸ್ತರಿಗೆ ಕೇಳಲಿ ಎಂದು ಅಜಾನ್ ಮೊಳಗಿತು. ಅಜಾನ್ ಕೇಳಿದ ಕೂಡಲೇ ಪ್ರಾರ್ಥನೆಗೆ ಕೂಡಬೇಕಂತೆ. ಅದು ಸಾಧ್ಯವಿಲ್ಲ ಅಂತಾದರೆ ಕನಿಷ್ಠಪಕ್ಷ ತಲೆ ಮುಚ್ಚಿಕೊಳ್ಳಬೇಕಂತೆ. ಹಾಗಂತ ಬಾಬುಸಾಬ್  ಹೇಳಿದ. 

ನಾನು ಕಿಸೆ ತಡಕಾಡಿದರೆ ಕರ್ಚೀಫ್ ಇರಲಿಲ್ಲ. "ತಲಿ ಮ್ಯಾಗ ಕೈ ಇಟ್ಟುಕೊಂಡರೂ ನಡಿತೈತಿ," ಅಂದ ಬಾಬು. ಇದೇನು ರಸ್ತೆ ಮಧ್ಯೆ ಎಬಡರ ಹಾಗೆ ತಲೆ ಮೇಲೆ ಕೈಹೊತ್ತು ನಿಲ್ಲುವುದು ಎಂದು ವಿಚಾರ ಮಾಡುತ್ತಿರುವಾಗ, ನನ್ನಹಿಂಜರಿಕೆ  ನೋಡಿದ ಬಾಬೂನೇ ಹೇಳಿದ,"ಇದು ನಮ್ಮ ಗುಡೀಪಾ. ನಮ್ಮ ಪದ್ಧತಿಪಾ. ನಾವು ಸಾಲ್ಯಾಗ ನೀವು ಯಾಕುಂಡೆ (ಯಾ ಕುಂದೆಂದು ತುಷಾರ ಹಾರ ಧವಳಾ..) ಅಂದು, ಊದಿನಕಡ್ಡಿ ಹಚ್ಚಿ ತಿರುಗಿಸಿದಾಗ ನಾವು ನಿಮ್ಮ ದೇವರಿಗೆ ಕೈ  ಮುಗಿತೇವಲ್ಲಾ?? ಇದೂ ಹಾಂಗss. ಈಗ ನಮ್ಮ ದೇವರ ಗುಡಿ ಮುಂದ ನಿಂತೇವಿ. ಹಾಂಗಾಗಿ ನಮ್ಮ ದೇವರ ಸಲುವಾಗಿ ತಲಿ ಮುಚ್ಚಿಕೋಬೇಕು," ಅಂದ.ನಾವು ಶಾಲೆಯಲ್ಲಿ ದಿನವೂ ಹೇಳುತ್ತಿದ್ದ ಸರಸ್ವತಿ ಸ್ತೋತ್ರ ಇವನ ಬಾಯಲ್ಲಿ "ಯಾಕುಂಡೆ" ಆಗಿದ್ದು ಕೇಳಿ "ಯಾ ಅಲ್ಲಾಹ್" ಎನ್ನುವ ಉದ್ಗಾರ ಹೊರಹೊಮ್ಮಬೇಕಿತ್ತು. ಆದರೆ ಆಗೆಲ್ಲ ಅಷ್ಟೆಲ್ಲಾ ಹಿಂದಿ ಸಿನೆಮಾ ನೋಡಿರಲಿಲ್ಲ. ಹಾಗಾಗಿ "ಯಾ ಅಲ್ಲಾಹ್" ಅನ್ನುವ ಸಾಮಾನ್ಯ ಉದ್ಗಾರ ಹೊರಬೀಳಲಿಲ್ಲ.

ನಮಾಜಿಗೆ ಹೋಗುತ್ತಿದ್ದ ಜನ ಮಸೀದಿ ಮುಂದೆ ನಿಂತ ನಾವು ನಾಲ್ವರು ಚೊಣ್ಣಧಾರಿ ಚಿಣ್ಣರನ್ನು ವಿಚಿತ್ರವಾಗಿ ನೋಡಿ ಒಳಗೆ ಹೋಗತೊಡಗಿದರು. ಕೆಲವರು ಮೂವರು ಮಿತ್ರರನ್ನು ತಮ್ಮವರೇ ಎಂದು ಗುರುತಿಸಿ, "ಅಂದರ್ ಆ ಬಾ," ಎಂದೂ ಕರೆದರು. ನನ್ನನ್ನು ನೋಡಿ, "ಏ ಕೌನ್ ಹೈ ಬಾ??" ಎಂದೂ ಕೇಳಿರಬಹುದು. ನಮಗೆ ಆವಾಗ ಹಿಂದಿ ಮುಲಾಂ (ಮಾಲೂಮ್) ನಹಿ. ಹಾಗಾಗಿ ತಿಳಿಯಲಿಲ್ಲ.

ಮಿತ್ರ ಬಾಬುಸಾಬ ಹೇಳಿದ ಮೇಲೆ ಮುಗಿಯಿತು. ಕೆಲ ವಿಷಯಗಳಲ್ಲಿ ಅವನ ಮಾತೇ ಅಂತಿಮ. ಹಾಗಾಗಿ ನಮಾಜ್ ಮುಗಿಯುವವರೆಗೆ ತಲೆ ಮೇಲೆ ಕೈಯಿಟ್ಟುಕೊಂಡು ನಿಂತೆ. ತಿರುಗಿ ನೋಡಿದರೆ ಉಳಿದವರೂ ಅದೇ ಭಂಗಿಯಲ್ಲಿ ನಿಂತಿದ್ದರು. ಜಾಸ್ತಿ ಏನೂ ಮುಜುಗರ ಅನ್ನಿಸಲಿಲ್ಲ. ಒಂದು ರೀತಿಯಲ್ಲಿ ಪರೋಕ್ಷ ನಮಾಜ್ ನಾವೂ ಮಾಡಿದ ಭಾವನೆ ಬಂತು. 

ಅಲ್ಲಾ ಹೋ ಅಕ್ಬರ್ 🙏🙏🙏

Tuesday, April 25, 2023

ಗೌಳಿ ಜಮುನಾ

ಹಿಂದಿನ ಬ್ಲಾಗ್ ಪೋಸ್ಟಿನಲ್ಲಿ ಮನೆ ಕೆಲಸಕ್ಕೆ ಬರುತ್ತಿದ್ದ ಬೂಬುಗಳ ಬಗ್ಗೆ ಬರೆದಿದ್ದೆ. ಓದಿದ ಮಿತ್ರ, ಶ್ರೀನಾಥ್ ಬೆಟಗೇರಿ (ಪುರಾತನ ಸಾಹಿತಿ ಆನಂದಕಂದ ಉರ್ಫ್ ಬೆಟಗೇರಿ ಕೃಷ್ಣಶರ್ಮರ ಮೊಮ್ಮಗ) ಹೇಳಿದ, 'ಬರೇ ಬೂಬುಗಳು ಅಷ್ಟೇ ಅಲ್ಲಪ್ಪಾ. ಗೌಳಿ ಓಣಿಯ ಗಂಗಾ ಜಮುನಾಗಳೂ ಬೇಕಾದಷ್ಟು ಮಂದಿ ಮನೆ ಕೆಲಸಕ್ಕೆ ಬರ್ತಿದ್ದವು.'

ಹೌದಲ್ಲ. ಮಾಳಮಡ್ಡಿಯ ರಾಯರ ಮಠದ ಆಕಡೆಯಿರುವ ಗೌಳಿಗರ ಓಣಿಗೆ ಅದರದ್ದೇ ಆದ ಖ್ಯಾತಿ, ವಿಶೇಷತೆ ಇದೆ. ಒಂದು ಕಾಲದಲ್ಲಿ ಎಲ್ಲ ಕಡೆ ಹಾಲು ಸರಬರಾಜು ಮಾಡುತ್ತಿದ್ದವರೇ ಅವರು. ಅದು ಸ್ವಲ್ಪ ಕಮ್ಮಿಯಾದ ಮೇಲೆ ಅವರ ಮನೆ ಹೆಂಗಸರು ಮನೆ ಕೆಲಸ ಇತ್ಯಾದಿಗಳಿಗೆ ಬರಲು ಶುರು ಮಾಡಿದರು ಎಂದು ಕಾಣುತ್ತದೆ.

ಕಲ್ಯಾಣ ನಗರದಲ್ಲಿ ನಮ್ಮ ಪಕ್ಕದ ಮನೆಯಲ್ಲಿ ಇದ್ದವರು ಬಾಸೆಲ್ ಮಿಷನ್ ಗರ್ಲ್ಸ್ ಸ್ಕೂಲಿನ ನಿವೃತ್ತ ಶಿಕ್ಷಕಿ ಉಪಾಧ್ಯೆ ಟೀಚರ್. ಅವರ ತಂದೆ ಡಾ. ಉಪಾಧ್ಯೆ ನಮ್ಮ ತಂದೆಯವರ ಮೂಲ ವೈದ್ಯರು. ಅವರೆಲ್ಲ ಕಾಲವಾಗಿದ್ದರು. ಅವಿವಾಹಿತೆ ಉಪಾಧ್ಯೆ ಟೀಚರ್ (ನಮ್ಮೆಲ್ಲರ ಪಾಲಿಗೆ ಕಮ್ಮಕ್ಕ) ತಮ್ಮ ವೃದ್ಧ ತಾಯಿಯೊಂದಿಗೆ ಇದ್ದರು. ಅವರ ಮನೆಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾಕೆ ಸುಂದರಾಬಾಯಿ ಎಂಬ ಬಾರಾಕೊಟ್ರಿಯ ಮರಾಠಿ ವಿಧವೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು. ಉಪಾಧ್ಯೆ ಟೀಚರ್ ಸಹ ಮರಾಠಿ ಮೂಲದವರು. ಸುಂದರಾಬಾಯಿ ಕೂಡ ಡೋಂಗ್ರೆನೋ ಪಾಂಗ್ರೇನೋ ಏನೋ. ಒಟ್ಟಿನಲ್ಲಿ ಮರಾಠಿ. ಇಬ್ಬರ ಮಧ್ಯೆ ಮರಾಠಿಯಲ್ಲಿ ಬ್ಲೇಡ್ ಹಾಕಿಕೊಳ್ಳಲು ಬೆಸ್ಟ್ ಆಗಿತ್ತು ಎಂದು ನಮ್ಮ ಜೋಕ್.

ಉಪಾಧ್ಯೆ ಟೀಚರ್ ಆಕೆಯನ್ನು ತಲೆ ಮೇಲೆ ಏರಿಸಿಕೊಂಡರೋ ಅಥವಾ ಆಕೆಯೇ ಹತ್ತಿ ಕುಳಿತಳೋ  ಗೊತ್ತಿಲ್ಲ. ಒಟ್ಟಿನಲ್ಲಿ ಸಂಬಂಧ ಕೆಟ್ಟು ಆಕೆ ಕೆಲಸ ಬಿಟ್ಟು ಹೋದಳು. ಈಗ ಉಪಾಧ್ಯೆ ಟೀಚರಿಗೆ ಬೇರೆ ಕೆಲಸದ ಹೆಂಗಸಿನ ಅವಶ್ಯಕತೆ ಬಂತು. ಆವಾಗ ಬಂದಾಕೆಯೇ ಗೌಳಿಗರ ದಡ್ಡಿಯ (ಗೌಳಿ ಓಣಿಯ) ಜಮುನಾ. 

ಜಮುನಾಗೆ ಆವಾಗ ಸುಮಾರು ೨೦ - ೨೫ ವರ್ಷವಿರಬಹುದು. ಇನ್ನೂ ಮದುವೆಯಾಗಿರಲಿಲ್ಲ. ತಕ್ಕಮಟ್ಟಿಗೆ ತೆಳ್ಳಗೆ ಬೆಳ್ಳಗೆ ಲಕ್ಷಣವಾಗಿದ್ದಳು. ಮತ್ತೆ ಅವರ ವೇಷ ಭೂಷಣವೂ ಬೇರೆ. ಅವರ ಮಹಿಳೆಯರು ವರ್ಣರಂಜಿತ ಬಣ್ಣಗಳ ಲಂಗ ದಾವಣಿ ಮಾದರಿಯ ದಿರುಸು ಧರಿಸಿ, ಯಾವಾಗಲೂ ಕೃಷ್ಣನೊಂದಿಗೆ ರಾಸಲೀಲೆ ಆಡಲು ಸಿದ್ಧವಿರುವ ಗೋಪಿಕೆಯರಂತೆ ಕಾಣುತ್ತಾರೆ. ಅಂತಹ ಸಂಕೀರ್ಣವಾಗಿರುವ ದಿರುಸು ಧರಿಸಿ ಅದೇಗೆ ಮನೆ ಕೆಲಸ ಮಾಡುತ್ತಾರೆ ಎನ್ನುವ ವಿಚಾರ ಈಗ ಬರುತ್ತದೆ.

ಜಮುನಾ ಸ್ವಲ್ಪ slow on uptake ಮಾದರಿಯ ಹುಡುಗಿ. ಪೆದ್ದಿ. ಮೊದ್ದು. ಮತ್ತೆ ಕನ್ನಡವೂ ಅಷ್ಟಕಷ್ಟೇ. ಮರಾಠಿ ಗೊತ್ತಿಲ್ಲ. ಒಟ್ಟಿನಲ್ಲಿ ಹೇಗೋ ಮಾಡಿ ಉಪಾಧ್ಯೆ ಟೀಚರ್ ಆಕೆಯಿಂದ ಕೆಲಸ ತೆಗೆಯುತ್ತಿದ್ದರು. ಒಬ್ಬರಿಗೊಬ್ಬರು ಹೊಂದಿಕೊಳ್ಳಲಿಕ್ಕೆ ಸುಮಾರು ಸಮಯ ಹಿಡಿಯಿತು.

ಉಪಾಧ್ಯೆ ಟೀಚರ್ ತಂಗಿಯೊಬ್ಬರು ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿದ್ದರು. ವರ್ಷಕ್ಕೊಮ್ಮೆ ಬಂದು ಧಾರವಾಡದಲ್ಲಿ ಒಂದೆರೆಡು ವಾರ ಇದ್ದು ಹೋಗುತ್ತಿದ್ದರು. ಅವರು ಸಂಸಾರ ಸಮೇತ ಬಂದರು ಅಂದರೆ ಉಪಾಧ್ಯೆ ಟೀಚರ್ ಒಬ್ಬರಿಗೇ ಅಲ್ಲ, ನಮಗೂ ಎಲ್ಲ ಸಡಗರವೇ. ಮರೆಯದೇ ಉಡುಗೊರೆ ತರುತ್ತಿದ್ದರಲ್ಲ. ಮತ್ತೆ ಎಲ್ಲರನ್ನೂ ತುಂಬಾ ಹಚ್ಚಿಕೊಂಡು, ಪ್ರೀತಿಸುತ್ತಿದ್ದ ಜನ ಅವರೆಲ್ಲ.

ಸರಿ, ಒಂದು ಸಲ ಅವರು ಎಂದಿನಂತೆ ಧಾರವಾಡಕ್ಕೆ ಬಂದರು. ವೇಳೆ ಕಳೆದರು. ವಾಪಸ್ ಹೋಗುವ ದಿನ ಬಂತು. ಅವರು ಬೆಳಗಾವಿ ತನಕ ರೈಲು, ಬಸ್ಸಿನಲ್ಲಿ ಹೋಗಿ ಅಲ್ಲಿಂದ ವಿಮಾನ ಹಿಡಿಯುತ್ತಿದ್ದರು. ಅಥವಾ ಅಲ್ಲಿದ್ದ ತಮ್ಮ ಸಂಬಂಧಿಕರ ಕಡೆ ತಂಗುತ್ತಿದ್ದರು. ಒಟ್ಟಿನಲ್ಲಿ ಧಾರವಾಡದಿಂದ ಅವರಿಗೆ ಬೆಳಗಾವಿಗೆ ಹೋಗಬೇಕು.

ಮನೆಯಿಂದ ಹೊರಡಲಿಕ್ಕೆ ಆಟೋರಿಕ್ಷಾ ಬೇಕು. ಆಗ ಈಗ ಸಿಗುವಂತೆ ಕಲ್ಯಾಣ ನಗರ ಬಡಾವಣೆಯಲ್ಲಿ ಮಾರಿಗೊಂದು ಆಟೋರಿಕ್ಷಾ ಸಿಗುತ್ತಿದ್ದಿಲ್ಲ. ಜನ ವಸತಿ ತುಂಬಾ ವಿರಳವಾಗಿತ್ತು. ಇದು ೧೯೮೩-೮೪ ಸುಮಾರಿನ ಮಾತು. ದಿನಕ್ಕೆ ೩-೪ ಸಿಟಿ ಬಸ್ ಇದ್ದವು ಅಷ್ಟೇ. ಅವು ತಪ್ಪಿದರೆ ರೈಲು ನಿಲ್ದಾಣಕ್ಕೆ ಹೋಗಿ ಬಸ್ ಹಿಡಿಯಬೇಕು. ಇಲ್ಲವಾದರೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋಗಿ ಬಸ್ ನೋಡಬೇಕು. ಆಟೋರಿಕ್ಷಾ ಬೇಕು ಅಂದರೆ ರೈಲು ನಿಲ್ದಾಣದ ರಿಕ್ಷಾ ಸ್ಟಾಂಡಿನಿಂದಲೇ ತರಬೇಕು. ಸುಮಾರು ಒಂದು ಒಂದೂವರೆ ಕಿಲೋಮೀಟರು ದೂರ. 

ರಿಕ್ಷಾ ತರಲು ಯಾರಾದರೂ ಹೋಗಬೇಕು. ಹೋಗಿ, ಭಾಡಿಗೆ ಮಾತಾಡಿ, ಅದರಲ್ಲೇ ಹತ್ತಿ, ಮನೆಗೆ ಕರೆದುಕೊಂಡು ಬರಬೇಕು.

ಕೆಲಸದಾಕೆ ಜಮುನಾಳನ್ನು ಕರೆದು, 'ಇವರು ಬೆಳಗಾವಿಗೆ ಹೊಂಟಾರ. ರೈಲ್ವೆ ಸ್ಟೇಷನ್ ಗೆ ಹೋಗು. ಅಲ್ಲಿ ರಿಕ್ಷಾ ಇರ್ತಾವ. ಒಂದು ತೊಗೊಂಡು ಬಾ. ಎರಡು ರೂಪಾಯಿಗಿಂತ ಜಾಸ್ತಿ ಕೊಡಬ್ಯಾಡ. ಚೌಕಾಸಿ ಮಾಡಿ ಎರಡು ರೂಪಾಯಿಗೆ ಅಂತ ಖಾತ್ರಿ ಮಾಡಿಕೊಂಡೇ ಕರಕೊಂಡು ಬಾ,' ಎಂದು ಹೇಳಿದ್ದಾರೆ. ಇವಳು ಅರ್ಥವಾಯಿತು ಎಂಬಂತೆ ತಲೆಯಾಡಿಸಿದ್ದಾಳೆ. ಕುಣಿಕುಣಿಯುತ್ತಾ ಸ್ಟೇಷನ್ ಕಡೆ ಹೋಗಿದ್ದಾಳೆ. ಅವಳು ನಡೆದರೂ ಕುಣಿದಂತೆ ಕಾಣುತ್ತಿತ್ತು. ಅದು ಅವಳ ಹಾರಾಡುತ್ತಿದ್ದ ದಿರುಸಿನ ಪರಿಣಾಮವೋ ಗೊತ್ತಿಲ್ಲ.

ರೈಲ್ವೆ ಸ್ಟೇಷನ್ನಿಗೆ ಹೋಗಿ, ರಿಕ್ಷಾ ತರಲು ಹೆಚ್ಚೆಂದರೆ ಅರ್ಧ ಘಂಟೆ ಸಾಕು. ಅಷ್ಟೂ ಬೇಡ. ಅರ್ಧ ಘಂಟೆ ಆಯಿತು. ಮುಕ್ಕಾಲು ಘಂಟೆ ಆಯಿತು. ರಿಕ್ಷಾ ತರಲು ಹೋದ ಜಮುನಾಳ ಪತ್ತೆಯಿಲ್ಲ. ಇವರಿಗೆ ತಡವಾಗತೊಡಗಿತು. ರಿಕ್ಷಾ ಬರಬೇಕು, ನಂತರ ಇವರ ಸಿಕ್ಕಾಪಟ್ಟೆ ಸಾಮಾನು ಅದರಲ್ಲಿ ಲೋಡ್ ಆಗಬೇಕು, ಓಣಿ ಮಂದಿಗೆಲ್ಲ ಹೋಗಿ ಬರುತ್ತೇನೆ ಎಂದು ಮತ್ತೆ ಮತ್ತೆ ಹೇಳುವ ಆಚರಣೆ ಮುಗಿಯಬೇಕು. ವೇಳೆಗೆ ಸರಿಯಾಗಿ ಹೊರಟಾಗಲೇ ಲೇಟ್ ಮಾಡಿಕೊಳ್ಳುತ್ತಿದ್ದರು. ಈಗ ಅಷ್ಟೇ ಮತ್ತೆ. ಇನ್ನೂ ಈ ಎಬಡ ಜಮುನಾಳನ್ನು ನಂಬಿಕೊಂಡರೆ ಅಷ್ಟೇ ಮತ್ತೆ ಎಂದು ವಿಚಾರ ಮಾಡಿ, ಬೇರೆ ಯಾರಿಗೋ ಹೋಗಿ ರಿಕ್ಷಾ ತರಲು ಹೇಳಿದರು. 

ಅವರಿಗೆ ದಾರಿಯಲ್ಲಿಯೇ ಒಂದು ಖಾಲಿ ಆಟೋ ಸಿಕ್ಕಿತು ಎಂದು ಕಾಣುತ್ತದೆ. ಕರೆದುಕೊಂಡು ಬಂದರು. ಮನೆ ಮುಂದೆ ಬಂದು ನಿಂತ ಆಟೋ ಡ್ರೈವರ್, ತುಂಬಾ ಕ್ಯಾಶುಯಲ್ ಎಂಬಂತೆ ಹೇಳಿದ, 'ಅಲ್ಲಿ ಸ್ಟೇಷನ್ನಿನ್ಯಾಗ ಯಾವುದೋ ಒಬ್ಬಾಕಿ ಹುಚ್ಚಿ ಅಂತಾಕಿ ಬಂದಾಳ ರೀ. ಬೆಳಗಾವಿಗೆ ಹೋಗೋದೈತಿ. ಎರಡು ರೂಪಾಯಿ ಕೊಡ್ತೇನಿ. ಬರ್ತಿಯೇನು ಅಂತ ಕೇಳ್ಕೊತ್ತ ನಿಂತಾಳ್ರೀ. ಎಲ್ಲಾರೂ ನಕ್ಕೋತ್ತ ಅಕಿ ಜೋಡಿ ಮಷ್ಕಿರಿ ಮಾಡಿಕೋತ್ತ ಇದ್ದಾರ ನೋಡ್ರಿ. ಎರಡು ರೂಪಾಯಿಗೆ ಯಾರರ ಬೆಳಗಾವಿಗೆ ಬರ್ತಾರೇನ್ರೀ??' ಎಂದುಬಿಟ್ಟಿದ್ದಾನೆ.

ಅಲ್ಲಿಗೆ ವಿಷಯ ಏನೂಂತ ಎಂದು ತಿಳಿದು ಕೆಲವರು ನಕ್ಕಿದ್ದಾರೆ. ಜಮುನಾಳ ಕಾರಣಕ್ಕೆ ತಲೆ ಹನ್ನೆರಡಾಣೆ ಆದವರು ತಲೆ ತಲೆ ಚಚ್ಚಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಜಮುನಾ ಪೆದ್ದಿ. ಭಾಷೆ ಬೇರೆ ಸರಿಯಾಗಿ ಅರ್ಥವಾಗುತ್ತಿದ್ದಿಲ್ಲ. ಮತ್ತೆ ಗಡಿಬಿಡಿಯಲ್ಲಿ ಇದ್ದ ಮನೆ ಜನ ಬರೋಬ್ಬರಿ ಹೇಳಿ, ಖಾತ್ರಿ ಮಾಡಿಕೊಂಡರೋ ಅಥವಾ ಅದು ಸಾಕಾಗಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಆಕೆಯ ತಲೆಯಲ್ಲಿ ಉಳಿದಿದ್ದು…ಬೆಳಗಾವಿಗೆ ಹೋಗಬೇಕು. ರಿಕ್ಷಾ ಬೇಕು. ಎರಡು ರೂಪಾಯಿಗಿಂತ ಹೆಚ್ಚಿಗೆ ಭಾಡಿಗೆ ಕೊಡುವಂತಿಲ್ಲ. ಇಷ್ಟು ವಿಷಯವನ್ನು ಗಟ್ಟಿ ಮಾಡಿಕೊಂಡಾಕೆ ಅದರ ಪ್ರಕಾರವೇ ವಾದ ಮಾಡುತ್ತಾ ಅಲ್ಲೇ ನಿಂತು ಬಿಟ್ಟಿದ್ದಾಳೆ. ಎಲ್ಲರಿಗೂ ಪುಕ್ಕಟೆ ಮನರಂಜನೆ. ಮನೆಯವರಿಗೆ ಫುಲ್ ಟೆನ್ಶನ್.

ಬಂದು ನಿಂತಿದ್ದ ಆಟೋ ರಿಕ್ಷಾದಲ್ಲಿ ರೈಲ್ವೆ ನಿಲ್ದಾಣ ತಲುಪಿ ನೋಡಿದರೆ… ಗ್ರೇಟ್ ಜಮುನಾಳ ಪ್ರಹಸನ ಮುಂದುವರೆದಿತ್ತು. ಎಲ್ಲರೂ ಬಿದ್ದು ಬಿದ್ದು ನಗುತ್ತಾ, ಆಕೆಯನ್ನೂ ಮತ್ತೂ ರೇಗಿಸುತ್ತಾ, ಮಜಾ ತೆಗೆದುಕೊಳ್ಳುತ್ತಿದ್ದರು. ಅವರು ಏನೇ ಹೇಳಿದರೂ ಈಕೆಯದು ಒಂದೇ ವಾರಾತ…ಆಟೋ ಬೇಕು. ಬೆಳಗಾವಿಗೆ. ಎರಡೇ ರೂಪಾಯಿ.

ರೈಲು ಹಿಡಿಯಬೇಕಾದವರು ಒಳಗೆ ಹೋದರು. ಉಳಿದವರು ಜಮುನಾಳನ್ನು ಸಮಾಧಾನಿಸಿ, ಇವತ್ತಿನ ಕೆಲಸ ಸಾಕು, ಮನೆಗೆ ಹೋಗು ಎಂದು ಮನೆಗೆ ಕಳಿಸಿರಬೇಕು. ಒಟ್ಟಿನಲ್ಲಿ ಎಲ್ಲ ಸುಖಾಂತ್ಯವಾದ ಮೇಲೆ ಎಲ್ಲರೂ ನಕ್ಕಿದ್ದೇ ನಕ್ಕಿದ್ದು.

ಇದಾದ ನಂತರ ಆಕೆ ಎರಡು ರೂಪಾಯಿ ಗೌಳಿ ಜಮುನಾ ಅಂತಲೇ ಖ್ಯಾತಳಾದಳು. ನಾನು ಬೆಳಿಗ್ಗೆ ಹತ್ತು ಹತ್ತೂವರೆ ಸಮಯಕ್ಕೆ ಸೈಕಲ್ ಮೇಲೆ ಶಾಲೆಗೆ ಹೋಗುವಾಗ ಉಪಾಧ್ಯೆ ಟೀಚರ್ ಮನೆಗೆ ಕೆಲಸಕ್ಕೆ ಬರುತ್ತಿದ್ದ ಜಮುನಾ ಕಾಣುತ್ತಿದ್ದಳು. ರೇಗಿಸಲು ವಿಷಯ ಇಲ್ಲದಾಗಲೂ ವಿನಾಕಾರಣ ಬಡಪಾಯಿಗಳನ್ನು ರೇಗಿಸುವ ಸ್ವಭಾವ ನಮ್ಮದು. ಇನ್ನು ಇಂತಹ ಲೈಟ್ ಮೆಂಟಲ್ ಗಿರಾಕಿ ಸಿಕ್ಕರೇ? ಅಷ್ಟೇ ಮತ್ತೆ.

'ಏನ್ ಜಮುನಾ, ಎರಡು ರೂಪಾಯಿಗೆ ಬೆಳಗಾವಿಗೆ ಹೋಗಲಿಕ್ಕೆ ಆಟೋ ರಿಕ್ಷಾ ಸಿಕ್ಕಿತೇನು?' ಎಂದು ಕಿಚಾಯಿಸುತ್ತಿದ್ದೆ. ಗಹಗಹಿಸಿ ಅಟ್ಟಹಾಸ ಬೇರೆ. ಜೊತೆಗೆ ಸ್ನೇಹಿತರಿದ್ದರೆ ಅವರೂ ನಗುತ್ತಿದ್ದರು. ಅವರಿಗೂ ಎಲ್ಲ ಇವಳ ಖತರ್ನಾಕ್ ಕಾರ್ನಾಮೆ ಬಗ್ಗೆ ಹೇಳಿದ್ದೆ ನೋಡಿ. 

ನಾವು ಕಿಚಾಯಿಸಿದರೆ ಪಾಪದ ಜಮುನಾ ಉರಿದುಕೊಳ್ಳುತ್ತಿದ್ದಳು. ಅವಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. 'ಏ, ನನ್ನ ಜೋಡಿ ಮಷ್ಕಿರಿ ಮಾಡಬ್ಯಾಡ. ನೋಡ ಮತ್ತ. ನಿಮ್ಮ ಅವ್ವಾಗ ಹೇಳ್ತೇನು,' ಎಂದು ಹೇಳುತ್ತಾ, ತೋರ್ಬೆರಳು ತೋರಿಸುತ್ತಾ ಎಚ್ಚರಿಕೆ ಕೊಡುತ್ತಿದ್ದಳು. ನಮಗೆ ಮತ್ತಷ್ಟು ನಗು. ಹೇಳಿ ಕೇಳಿ ಮಸ್ತಿಯ ದಿನಗಳು ಅವು. ಮೈಯ್ಯಾಗಿನ ತಿಮಿರು. ಮನಸ್ಸಿನ್ಯಾಗಿನ ಮಸ್ತಿ. ಜೊತೆಗೆ ಸ್ನೇಹಿತರಿದ್ದರೆ ಕೇಳಬೇಕೇ?

ಅಷ್ಟು ಕಿಚಾಯಿಸಿದ್ದರೂ ಆಕೆ ಮನೆವರೆಗೆ ಬಂದು ಕಂಪ್ಲೇಂಟ್ ಮಾಡಿದ್ದು ನೆನಪಿಲ್ಲ. ಮತ್ತೆ ಅಂತಹ ಕಂಪ್ಲೈಂಟ್ ನನ್ನ ಬಗ್ಗೆ ಹಲವಾರು ಜನ ಮಾಡಿರಬಹುದು. ಒಂದೋ ಕಿಚಾಯಿಸುವುದು. ಇಲ್ಲ ಉದ್ಧಟತನದಿಂದ ಮಾತಾಡಿ ನೀನು ಅಂದರೆ ನಿಮ್ಮಪ್ಪ ಅಂದುಬಿಡುವುದು ಅಂದಿನ ದಿನಗಳ ಮಾತಿನ ಶೈಲಿ. ಹಾಗಾಗಿ ಅದರ ಬಗ್ಗೆ ಯಾರೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ.ಇದು ಸುಧಾರಿಸುವ ಕೇಸಲ್ಲ. ಮತ್ತೂ ಕೆಟ್ಟು ಕೆರ ಹಿಡಿಯದಿದ್ದರೆ ಸಾಕು ಎಂದು ನನ್ನ ಪಾಡಿಗೆ ನನ್ನನ್ನು ಬಿಟ್ಟು ಕೈಮುಗಿದಿದ್ದರು.

ಮುಂದೆ ಕೆಲವು ವರ್ಷಗಳ ನಂತರ ಉಪಾಧ್ಯೆ ಟೀಚರ್ ಮತ್ತು ಡೋಂಗ್ರೆ ಸುಂದರಾಬಾಯಿ ಮಧ್ಯೆ ಮಾಂಡವಳಿ ಆಗಿ ವಾಪಸ್ ಕೆಲಸಕ್ಕೆ ಬಂದರು. ಇಬ್ಬರೂ ಸರಿಯಾದ ಪಾಠ ಕಲಿತಿದ್ದರು ಎಂದು ಕಾಣುತ್ತದೆ. ಉಪಾಧ್ಯೆ ಟೀಚರ್ ಸ್ವರ್ಗಕ್ಕೆ ಹೋಗಿಯೇ ಇಪ್ಪತ್ತು ವರ್ಷಗಳ ಮೇಲಾಗಿಹೋಯಿತು. ಸುಂದರಾಬಾಯಿ ಹೋಗಿಯೂ ಹತ್ತು ಹದಿನೈದು ವರ್ಷಗಳ ಮೇಲೆ ಆಯಿತು. ಆದರೂ ಅವರ ವಂಶಸ್ಥರು ಇನ್ನೂ ಅವರ ಮನೆ, ಆಸ್ತಿಯ ದೇಖರೇಖಿ ಮಾಡುತ್ತಾರೆ. ಉಪಾಧ್ಯೆ ಟೀಚರ್ ತಂಗಿ ಕೊಲ್ಲಿಯಲ್ಲಿ ಐವತ್ತು ವರ್ಷ ಕಳೆದ ನಂತರ ವಾಪಸ್ ಭಾರತಕ್ಕೆ ಮರಳಿದ್ದಾರೆ. ತಮ್ಮ ವೇಳೆಯನ್ನು ಧಾರವಾಡ, ನಾಸಿಕ್, ಗ್ವಾಲಿಯರ್, ಇಂಗ್ಲೆಂಡ್, ಅಮೇರಿಕಾ ಮಧ್ಯೆ ಕಳೆಯುತ್ತಾರೆ. ಈಗ ಮಾರಿಗೊಂದು ರಿಕ್ಷಾ ಸಿಕ್ಕರೂ ಅವರ ವಯಸ್ಸಿಗೆ ರಿಕ್ಷಾ ಒಗ್ಗುವುದಿಲ್ಲ. ಈಗೇನಿದ್ದರೂ ಎಸಿ ಟ್ಯಾಕ್ಸಿ. ಜಮುನಾ ಎಲ್ಲಿ ಹೋದಳೋ ಗೊತ್ತಿಲ್ಲ. ಪೆದ್ದಿಯಾದರೂ ತುಂಬಾ ಒಳ್ಳೆಯವಳಾಗಿದ್ದಳು ಆಕೆ.

ವಿ. ಸೂ: ಗೌಳಿಗರ ಗಂಗಾ, ಜಮುನಾ ಎಂದು ಹೇಳಿ ಈ ಘಟನೆ ನೆನಪಾಗಲು ಕಾರಣನಾದ ದೋಸ್ತ ಬೆಟಗೇರಿಗೆ ಧನ್ಯವಾದಗಳು. ಅವರ ಅಜ್ಜ ಆನಂದಕಂದ. ಇವನು ಆನಂದ'ಕೊಂದ' ಎಂದು ನಾವು ರೇಗಿಸುತ್ತೇವೆ. :)

Tuesday, April 18, 2023

ಹಿಂದಿ ಪಾಠಶಾಲೆ

ಮನೆಯೇ ಮೊದಲ ಪಾಠಶಾಲೆ
ತಾಯಿಯೇ ಮೊದಲ ಗುರು…

ಆದರೆ ಹಿಂದಿ ಭಾಷೆಯ ವಿಷಯಕ್ಕೆ ಬಂದರೆ ಮಾತ್ರ…

ಭಾಂಡೆ ತಿಕ್ಕುವ ಜಾಗವೇ ಮೊದಲ ಪಾಠಶಾಲೆ,
ಬೂಬುವೇ ಮೊದಲ ಗುರು…

ಬೂಬು = ಅತ್ತಿಕೊಳ್ಳದಿಂದ ಬರುತ್ತಿದ್ದ  ಭಾಂಡೆ ತಿಕ್ಕುವ ಕರ್ಮಚಾರಿಗಳು. ಹೆಸರು ಏನೇ ಇದ್ದರೂ, ಜನೌಷಧಿ ಹೆಸರಿನ ಮಾದರಿಯಲ್ಲಿ, ಅವಳು  ಬೂಬು. ಮೆಹಬೂಬಿ ಎಂಬ ಆ ವಂಶದ ಮೂಲಸ್ತ್ರೀಯ ಹೆಸರು ಮಾಳಮಡ್ಡಿ ಜನರ ಬಾಯಲ್ಲಿ ಶಾರ್ಟ್ ಅಂಡ್ ಸ್ವೀಟಾಗಿ ಬೂಬು ಆಗಿದ್ದು ಐತಿಹಾಸಿಕ. 

ಮಾಳಮಡ್ಡಿಯಲ್ಲಿ  ಭಾಂಡೆ ತಿಕ್ಕೋದು ಅಂದ್ರೆ ಬೂಬು. ಬೂಬು ಅಂದ್ರೆ  ಭಾಂಡೆ ತಿಕ್ಕಾಕಿ. Synonymous and monopoly. ಬೂಬು ರಜೆ ಮೇಲೆ ಹೋದರೆ ಅವರ ಮನೆಯದೇ ಇನ್ನೊಂದು ಬೂಬು ಬರುತ್ತಿತ್ತು. ಸೇವೆಯಲ್ಲಿ ಸ್ಥಿರತೆ  ಮತ್ತು ನಿರಂತರತೆ  ಮುಂದುವರೆಯುತ್ತಿತ್ತು. ವರ್ಷಕ್ಕೊಂದು ಹಡೆಯುತ್ತಿದ್ದ ಬೂಬು ಆಗಾಗ ರಜೆ ಮೇಲೆ ಹೋಗುತ್ತಿದ್ದಳು. ಅವಳ ತಂಗಿ ಅಥವಾ ಹಿರಿಯ ಮಗಳು ಬೂಬುವಿನ ಅವತಾರವೆತ್ತಿ ಬರುತ್ತಿದ್ದವು. 

ಬೂಬು ಒಬ್ಬಳೇ  ಬರುತ್ತಿದ್ದಿಲ್ಲ. ಜೊತೆಗೆ ಅವಳ  ಅರ್ಧ ಡಜನ್ ಚಿಳ್ಳೆ ಪಿಳ್ಳೆ ಮಕ್ಕಳು. ಭಾಂಡೆ ತಿಕ್ಕುವ ಕೆಲಸದ ಜೊತೆ ಬೇಬಿ ಸಿಟ್ಟಿಂಗ್ ಕೂಡ. 

ಬೂಬುಗೆ ತಕ್ಕಮಟ್ಟಿಗೆ ಹರ್ಕು ಮುರ್ಕು ಕನ್ನಡ ಬರುತ್ತಿತ್ತು. ಒಬ್ಬರ ಮನೆಯ ಸುದ್ದಿಯನ್ನು ಮತ್ತೊಬ್ಬರ ಕಿವಿಯಲ್ಲಿ ಊದುವ ಪುಣ್ಯದ ಕೆಲಸವನ್ನು  ಭಾಳ ಚೆನ್ನಾಗಿ ಮಾಡುತ್ತಿದ್ದರು. ಮಠದ ವೃಂದಾವನದ ಕೆಳಗೆ ಬಂಗಾರ ಹುಗಿದಿಟ್ಟಿದ್ದಾರೆ ಎಂಬ (ಸುಳ್ಳು)ಸುದ್ದಿಯನ್ನು ಹಬ್ಬಿಸಿದವರು ಬೂಬುಗಳೇ ಎನ್ನುವ ಸಂಶಯ ಇದೆ.

ಬೂಬುವಿನ ಜೊತೆ ಬರುತ್ತಿದ್ದ ಮಕ್ಕಳಿಗೆ ಕನ್ನಡ ಅಷ್ಟಕ್ಕಷ್ಟೇ. ಅವು ಅತ್ತಿಕೊಳ್ಳದ ಕಂಪು ಸೂಸುತ್ತಿದ್ದ ಉರ್ದು ಕೋವಿದರು. ಬಾಯಿ ಬಿಟ್ಟರೆ LKB, ಚಿನಾ…ಕೆ, ತೇರಿ ಮಾ ಕಿ, ಇಂತವೇ ಮಾತು. ಆದರೂ ಅಮ್ಮ ಬೂಬುವಿನ ಸುತ್ತಮುತ್ತ ಬೈಸಿಕೊಂಡು, ಬಡಿಸಿಕೊಂಡು ಏನೋ ಮಾಡಿ ಟೈಮ್ ಪಾಸ್ ಮಾಡಿಕೊಂಡು ಇರುತ್ತಿದ್ದವು. 

ನನಗೆ ಹಿಂದಿ ಕಲಿಸಿದ ಮೊದಲ ಗುರು ನಾಭಿ ಸಾಬಾ. ನಮ್ಮ ತಾಯಿಯ ಬಾಯಲ್ಲಿ ನಬೀ ಎನ್ನುವ ಮುಸಲ್ಮಾನ್ ಹುಡುಗ ನಾಭಿ ಸಾಬಾ ಆಗಿದ್ದು ನಾಭಿಯಿಂದ ಪದ್ಮ ಹೊರತಂದ ಪದ್ಮನಾಭ ಉರ್ಫ್ ವಿಷ್ಣುವಿನ ಮಹಿಮೆ ಇರಬಹುದೇ ಗೊತ್ತಿಲ್ಲ. ಒಟ್ಟಿನಲ್ಲಿ ಅವನು ನಾಭಿ ಸಾಬ. ನಮ್ಮ ದೋಸ್ತ. ಭಾಂಡೆ ತಿಕ್ಕುವಷ್ಟು ಸಮಯ. ಬಟ್ಟೆ ಒಗೆಯಾಣ ಮುಗಿಯುವ ತನಕ ಅವನ ಜೊತೆ ಆಟ, ಅವನ ಜೊತೆ ದ್ವಿಪಕ್ಷೀಯ ಮಾತುಕತೆ. ದ್ವಿಪಕ್ಷೀಯ ಮಾತುಕತೆ ನಡೆದಾಗ ಅವನು ಮನೆಯಲ್ಲಿ ಯಾವ್ಯಾವ ಪಕ್ಷಿ, ಪ್ರಾಣಿ ಅಲ್ಲಾ ಕೋ ಪ್ಯಾರೆ ಆಗಿ, ಕುರ್ಬಾನಿ, ಕುರ್ಬಾನಿ ಆಗಿ ಸ್ವಾಹಾ ಆಗಿದ್ದವು ಎಂದು ಕೂಡ ಹೇಳುತ್ತಿದ್ದ. ಅವನ ಸ್ವಾಹಾ ಭಾಗ್ಯ ನಮಗಿಲ್ಲವೇ ಎಂದು ಅನ್ನಿಸಿದ್ದೂ ಉಂಟು. ಏನು ಮಾಡೋಣ ತತ್ತಿ ತಿನ್ನಲಿಕ್ಕೇ ಪರದಾಡುವ ಪರಿಸ್ಥಿತಿ. ಇನ್ನು ನಾಭಿ ಸಾಬನ ಹಾಗೆ ಕುರಿ, ಕೋಳಿ ತಿಂದಂತೆಯೇ. ಮೊದಲೇ ಕರ್ಮಠ ಬ್ರಾಹ್ಮಣರ ವಠಾರ. "ಎಲ್ಲಿ ಹೆಗಡೆಯವರು ಕದ್ದು ಮುಚ್ಚಿ ಮೀನ ಬೇಯಿಸುತ್ತಾರೋ!??" ಎಂಬ ಸಂಶಯ ವಠಾರದ ಖಾಯಂ ಸದಸ್ಯರಾಗಿರುತ್ತಿದ್ದ ಕೆಲವು ಕೆಂಪು ಸೀರೆ ಬೋಡಮ್ಮಗಳಿಗೆ ಇರುತ್ತಿತ್ತು. ಹಾಗಿರುವಾಗ ಕೋಳಿ, ಕುರಿ ಬಹಳ ದೂರ. ಕದ್ದು ಮುಚ್ಚಿ ತತ್ತಿ  ತಿನ್ನುವಷ್ಟರಲ್ಲಿ ನಾವೇ ತತ್ತಿ ಇಟ್ಟಷ್ಟು ತಾಪತ್ರಯ ಉಂಟಾಗುತ್ತಿತ್ತು.

ಹೊಸ ಭಾಷೆಯಲ್ಲಿನ ಬೈಗುಳ ಸಹಜವಾಗಿ ಬಂದುಬಿಡುತ್ತವೆಯಂತೆ. ಹಾಗೇ ಆಯಿತು. ಆದರೆ ನಾಭಿ ಸಾಬನ ಬೈಗುಳಗಳ ಆರ್ಭಟ ಸಿಕ್ಕಾಪಟ್ಟೆ ಇತ್ತು. ಅವನ ಅಮ್ಮಿ ಜಾನ್ ಬೂಬು ಅವನಿಗೆ ಏನೇನು ಹೇಳಿ ಬೈಯ್ಯುತ್ತಿದ್ದಳೋ ಅವನ್ನೆಲ್ಲ ಅವನು ಕಲಿತು ಅವಳಿಗೂ ತಿರುಗಿ ಬೈಯುತ್ತಿದ್ದ. ಅವೆಲ್ಲ ನಮ್ಮ ಕಿವಿ ಮೇಲೆ ಬಿದ್ದು, ನಮ್ಮ ಕಿವಿಗಳೂ ಪಾವನವಾಗಿ, ಅವೆಲ್ಲ ಬಾಯಿಪಾಠ ಆಗಿ, ಅರ್ಥ ತಿಳಿಯದಿದ್ದರೂ ಕಂಡವರಿಗೆ LKB, ಅದು ಇದು ಎಂದು ಹೇಳಿ, ಬೈಸಿಕೊಂಡು, ಹಿರಿಯರಿಂದ ತಿಳಿಸಿ ಹೇಳಿಸಿಕೊಂಡು, ಅಷ್ಟರಮಟ್ಟಿಗೆ ಕೆಟ್ಟ ಅಭ್ಯಾಸ ಬಿಟ್ಟರೂ ಅವೆಲ್ಲ ಈಗಲೂ ಕಿವಿಯಲ್ಲಿ ಗುಂಯ್ ಅನ್ನುತ್ತಿರುತ್ತವೆ. ಒಂದು ತರಹದ ಶಕ್ತಿಶಾಲಿ ಮಂತ್ರಗಳಂತೆ. ಪಠಣ ನಿಂತ ನಂತರವೂ ಮಂತ್ರಗಳ ತರಂಗಗಳು ಪಸರಿಸುತ್ತಿರುತ್ತವೆಯಂತೆ. ಆ ರೀತಿ.

ಹಿಂದಿ ಬರೆಯಲು ಓದಲು ಕಲಿತಿದ್ದು ತಡವಾಗಿ ಆದರೂ ವ್ಯವಹಾರಿಕ ಹಿಂದಿ ಎಂದೋ ಕಲಿತಿದ್ದಾಗಿತ್ತು. ಈಗ ಉಪಯೋಗಕ್ಕೆ ಅದೇ ಬರುತ್ತದೆ. ಸಿಟ್ಟು ಬಂದು, ಮೈ ಪರಚಿಕೊಳ್ಳುವಾಗ ನಾಭಿ ಸಾಬನ ಹಿಂದಿಯಷ್ಟು ಉಪಯುಕ್ತ ಭಾಷೆ ಮತ್ತೊಂದಿಲ್ಲ. 

ನಿಡಗುಂದಿ ಟೀಚರ್, ಚಿಕ್ಕಮಠ ಸರ್ ಮುಂದೆಂದೋ ದಿನ ಹಿಂದಿ ಕಲಿಸಿದ್ದಿರಬಹುದು. ಆದರೆ ಭಾಂಡೆ ತಿಕ್ಕುವ ಪವಿತ್ರ ಜಾಗದಲ್ಲಿ ಹಿಂದಿ ಕಲಿಸಿದ ಬೂಬು ಮತ್ತು ನಾಭಿ ಸಾಬನಿಗೆ ಸಹಸ್ರ ವಂದನೆಗಳು. 

ನಾಭಿ ಸಾಬನ ಸಹವಾಸ ಕೇವಲ ಒಂದೋ ಎರಡೋ ವರ್ಷವಷ್ಟೇ. ನಂತರ ಕಲ್ಯಾಣ ನಗರ ಕಡೆ ಬಂದಾಗ ಬೂಬುಗಳು ಹೋಗಿ ಬಾರಾಕೊಟ್ರಿಯ ಮರಾಠಿ ಬಾಯಿಗಳು ಬಂದವು. ಆದರೆ ಮರಾಠಿ ಕಲಿಸಲಿಲ್ಲ. ಅವರ ಮರಾಠಿಯಲ್ಲಿ ಅತ್ತಿಕೊಳ್ಳದ ಹಿಂದಿ ಉರ್ದುವಿನಷ್ಟು ಸತ್ವ ಇರಲಿಲ್ಲ ಎಂದು ಕಾಣುತ್ತದೆ. 

Thursday, April 13, 2023

ಲೈಫು ಇಷ್ಟೇನೇ... ಘಂಟೆ ಬದುಕು

ಒಮ್ಮೊಮ್ಮೆ ಗುಡಿಯ ಘಂಟೆ. ಬಂದವರೆಲ್ಲ ಬಾರಿಸಿ ಹೋಗುತ್ತಾರೆ. ಕೈಗೆ ಎಟುಕದವರು ಜಿಗಿಜಿಗಿದು ಎಗರಿ ಬಾರಿಸಿ ಹೋಗುತ್ತಾರೆ. ಜಿಗಿದೆಗರಿದರೂ ನಿಲುಕದವರು ಬೇರೆಯವರಿಂದ ಎತ್ತಿಸಿಕೊಂಡಾದರೂ ಸರಿ... ಬಾರಿಸಿಯೇ ಹೋಗುತ್ತಾರೆ.  

ಒಮ್ಮೊಮ್ಮೆ ಪುರೋಹಿತರ ಘಂಟೆ. ಅವರೂ ತೂಗುತ್ತ ಬಾರಿಸುತ್ತಾರೆ. ಒಮ್ಮೊಮ್ಮೆ ಬಿಸಿ ಮಂಗಳಾರತಿ ತಾಕಿಸಿ ಬಿಡುತ್ತಾರೆ. ತೂಗಿಸಿಕೊಂಡು ಬಾರಿಸಿಕೊಂಡ ಜೀವಕ್ಕೆ ಬಿಸಿ ಬೇರೆ ತಾಕುತ್ತದೆ. 

ಒಮ್ಮೊಮ್ಮೆ ಗಡಿಯಾರದ ಘಂಟೆ. ತಾಸಿಗೊಮ್ಮೆ ತಾಸಿಗಿಷ್ಟು ಎಂಬಂತೆ ಒಂದರಿಂದ  ಹಿಡಿದು ಹನ್ನೆರೆಡರ ತನಕ  ಬಾರಿಸುತ್ತದೆ. ಮೇಲಿಂದ ಅರ್ಧ ಗಂಟೆಗೊಮ್ಮೆ ತಪ್ಪದ ಸಿಂಗಲ್ ಘಂಟೆ ಬೋನಸ್. 

ಒಮೊಮ್ಮೆ ಶಾಲೆಯ ಘಂಟೆ. ಶುರುವಿನಲ್ಲಿ ಘಂಟೆಗಳು ಬಾರಿಸಿದಾಗ ಬೇಸರ. ವೇಳೆ ಕಳೆಯುತ್ತಾ ಹೋದಂತೆ, ಅವಧಿಗಳು ಮುಗಿಯುತ್ತಾ ಹೋದಂತೆ, ಗಂಟೆಗೊಮ್ಮೆ ಘಂಟೆ ಬಾರಿಸಿದಾಗೊಮ್ಮೆ ಖುಷಿ. ಕೊನೆಯ ಉದ್ದನೆಯ ಢಣಢಣ ಬಾರಿಸಿದಾಗ ಖುಷಿಯ ಉತ್ತುಂಗ. 

Wednesday, April 12, 2023

ಮೊಸರಿಗೊಂದು ಪಾತ್ರೆ ಕೊಡಿಸಿ...

ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ವಿಚ್ಛೇದನ ಕೊಡುವುದರ ಬಗ್ಗೆ ದಂಪತಿಯೇ ಒಪ್ಪಿಕೊಂಡಿದ್ದರು. ಬಾಕಿ ಉಳಿದ ವಿಷಯಗಳೆಂದರೆ ಆಸ್ತಿ ಹಂಚಿಕೆ ಮತ್ತು ಮಕ್ಕಳ ಕಸ್ಟಡಿ ವಿಷಯ.

ಮಕ್ಕಳ ಕಸ್ಟಡಿ ಪತಿಗೆ ಕೊಡಲೇಬಾರದು ಮತ್ತು ಎಷ್ಟು ಆಗುತ್ತದೋ ಅಷ್ಟು ಕಾಸು, ಆಸ್ತಿ ಕೆತ್ತಿಬಿಡಬೇಕು ಎಂಬುದು ಪತ್ನಿಯ ದೂ(ದು)ರಾಲೋಚನೆ. ಪತಿಯದು ಅದಕ್ಕೆ ತದ್ವಿರುದ್ಧ. ಮಕ್ಕಳ ಹೆಚ್ಚಿನ ಕಸ್ಟಡಿ ಬರುವಂತೆ ಮಾಡಿಕೊಳ್ಳಬೇಕು ಮತ್ತು ಅತಿ ಕಮ್ಮಿ ರೊಕ್ಕ, ಆಸ್ತಿ ಬೋಳಿಸಿಕೊಳ್ಳಬೇಕು.

ಪತಿ, ಪತ್ನಿ ಇಬ್ಬರ ವಕೀಲರೂ ಸಿಕ್ಕಾಪಟ್ಟೆ ವಾದ, ವಿವಾದ ಮಾಡಿದರು. ಒಂದು ಹಂತದಲ್ಲಿ ಪತಿಯ ವಕೀಲನ ವಾದ ಜೋರಾದಂತೆ ಕಂಡು ಬಂದು, ನ್ಯಾಯಾಧೀಶರು ಆ ಕಡೆ ವಾಲುತ್ತಿರುವಂತೆ ಕಂಡುಬಂತು. ಪತ್ನಿ ಆತಂಕಕ್ಕೆ ಒಳಗಾದಳು. ವಿಷಯವನ್ನು ತನ್ನ ಕೈಗೇ ತೆಗೆದುಕೊಳ್ಳಬೇಕು, ಇಲ್ಲವಾದರೆ ಕೇಸ್ ಕೈಬಿಟ್ಟುಹೋಗುತ್ತದೆ ಎಂದವಳೇ ತಾನೇ ವಾದ ಮಾಡುವುದಾಗಿ ವಿನಂತಿ ಮಾಡಿಕೊಂಡಳು. ನ್ಯಾಯಾಧೀಶರು ಒಪ್ಪಿಗೆ ಕೊಟ್ಟರು. ಪತ್ನಿಯ ವಕೀಲ ವಾಪಸ್ ಬಂದು ಸುಧಾರಿಸಿಕೊಳ್ಳುತ್ತ ಕೂತ. ಪತಿಯ ವಕೀಲ ಈ ಗೃಹಿಣಿ ಏನು ಮಹಾ ವಾದ ಮಾಡಿಯಾಳು ಎಂಬ ಕುತೂಹಲದಿಂದ ನೋಡುತ್ತಾ ನಿಂತ.

ನೋಡಿ, ಮೈ ಲಾರ್ಡ್, ಪಾತ್ರೆ ನನ್ನದು. ಹಾಲು ನನ್ನದು. ಈ ಭಡವ ಒಂದು ಹನಿ ಹೆಪ್ಪು ಹಾಕಿಬಿಟ್ಟ. ಮೊಸರು ಮಾಡಿಬಿಟ್ಟ. ಈಗ ಅಷ್ಟೂ ಮೊಸರು ತನಗೇ ಬೇಕೆನ್ನುತ್ತಾನೆ. ಇದು ನ್ಯಾಯವೇ?

ಪರಿಶುದ್ಧವಾಗಿದ್ದ ಹಾಲಿಗೆ ಹನಿ ಹೆಪ್ಪು ಬಿಟ್ಟು ಮೊಸರು ಮಾಡಿದ ದುರುಳ ಮೊಸರನ್ನು ತೂಗು ಹಾಕಿ ಶ್ರೀಖಂಡ ಮಾಡುವುದಿಲ್ಲ ಎಂಬುದರ ಬಗ್ಗೆ ಏನು ಗ್ಯಾರಂಟಿ? ಅಥವಾ ಕಡುಗೋಲಿನಿಂದ ಮೊಸರನ್ನು ಕಡೆದು ಲಸ್ಸಿ ಮಾಡಿಬಿಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?

ಸ್ವಾಮೀ, ಹಾಗಾಗಿ ಇವನಿಗೆ ಮೊಸರನ್ನು ಕೊಡಲೇಬಾರದು. ಸ್ವಾಮೀ, ಈ ಅಮೂಲ್ಯವಾದ ಮೊಸರನ್ನು ಕಾದಿಟ್ಟುಕೊಳ್ಳಲು ನನ್ನ ಹತ್ರ ಒಂದು ಒಳ್ಳೆಯ ಪಾತ್ರೆಯೂ ಇಲ್ಲ. ಅದಕ್ಕಾಗಿ ಅವನಿಂದ ಒಂದು ಪಾತ್ರೆ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ.

ಇವಳಅಪ್ರತಿಮ ಬಲಿಷ್ಠ ವಾದದಿಂದ ನ್ಯಾಯಾಧೀಶರು ಪ್ರಭಾವಿತರಾದರು. ದೊಡ್ಡ ವಕೀಲರು  ತಾಸುಗಟ್ಟಲೆ ವಾದ ಮಾಡಿದರೂ ಇಷ್ಟುಪರಿಣಾಮಕಾರಿಯಾಗಿ ವಾದ ಮಾಡಿ, ಪಾಯಿಂಟ್ಸ್ ಬರೋಬ್ಬರಿ ಹಾಕಿರಲಿಲ್ಲ.

ಮೊಸರಿನಂತಹ ಮಕ್ಕಳ   ಹತ್ತಿರ ಪತಿಯನ್ನು ಬಿಟ್ಟರೆ ಅವಕ್ಕೆ ಚಿತ್ರಹಿಂಸೆ ಕೊಟ್ಟು  ಶ್ರೀಖಂಡ, ಲಸ್ಸಿ ಏನೋ ಮಾಡಿಬಿಟ್ಟಾನು. ಹಾಗಾಗಿ ಪತಿಗೆ ಮಕ್ಕಳ ಕಸ್ಟಡಿ ನಿರಾಕರಿಸಲಾಗಿದೆ. ಮೊಸರಿನನ ರಕ್ಷಣೆಗೆ ಪಾತ್ರೆ ಬೇಕು. ಮಕ್ಕಳ ರಕ್ಷಣೆಗೆ ಮನೆ ಬೇಕು. ಹಾಗಾಗಿ ಪತಿಯ ದೊಡ್ಡ ಮನೆಯನ್ನು ಪೂರ್ತಿಯಾಗಿ ಪತ್ನಿಗೆ ಕೊಡಲಾಗಿದೆ, ಎಂದು ತೀರ್ಪು ಬರೆದವರೇ ಸುತ್ತಿಗೆ ಕುಟ್ಟಿ ಎದ್ದುಬಿಟ್ಟರು. 

ಮೊದಲೇ ಎಲ್ಲ ಕೊಟ್ಟು ಬೋಳಿಸಿಕೊಂಡು ಬೀದಿಗೆ ಬಂದು ಫುಟ್ಪಾತ್ ಮೇಲೆ ನಿಂತಿದ್ದ ಪತಿಯ ಹತ್ತಿರ ಇದ್ದಿದ್ದೇ ಅದೊಂದು ಮನೆಯಾಗಿತ್ತು. ಈಗ ಅದೂ ಹೋಯಿತು. ಈಗ ಪೂರ್ತಿ ರೋಡಿನ ಮೇಲೆ ಬಂದು ನಿಂತ. ಕರೋಡ್ ಪತಿಯಾಗಿದ್ದವ. ರೋಡ್ ಪತಿಯಾದ. 

ಮಾಜಿ ಪ್ರೀತಿಪಾತ್ರೆಗೆ ಮೊಸರು ಕರುಣಿಸಿದ ಕಾರಣಕ್ಕೆ ತಾನೇ ತಿಕ್ಕಿದ್ದ ಪಾತ್ರೆಯೊಂದನ್ನು ಉಳಿದ ಭಾಂಡೆಗಳೊಂದಿಗೆ ಕೊಟ್ಟು ಕೈಮುಗಿದ. ಇನ್ನು ಮಂದಿ ಮನೆ ಭಾಂಡೆ ತಿಕ್ಕಬೇಕೇ ಎಂದು ತಲೆ ಮೇಲೆ ಟವೆಲ್ ಹಾಕಿಕೊಂಡ. ಅಲ್ಲೇ ಇದ್ದರೆ ಟವೆಲ್ ಜೊತೆ ಲಂಗೋಟಿ ಕೂಡ ಕೇಳಿಯಾಳು ಎಂದು ಹೆದರಿ ಕೋರ್ಟ್ ಪಕ್ಕದ ಬಾರಿನ ಕತ್ತಲೆ ಮೂಲೆಯಲ್ಲಿ ಕುಳಿತು ಕಂಟ್ರಿ ಸಂತ್ರಾ ಆರ್ಡರ್ ಮಾಡಿದ. 

ವಿ. ಸೂ: ಅಂತರ್ಜಾಲದಲ್ಲಿ ಸಿಕ್ಕಿದ್ದನ್ನು ಮಾರ್ಪಡಿಸಿ ಬರೆದಿದ್ದು.

Friday, April 07, 2023

ತುಪ್ಪದ ದೀಪ

1979-80. ಎರಡನೇ ಕ್ಲಾಸು. ಮಾಳಮಡ್ಡಿ ರಾಯರಮಠದ ಸಮೀಪ ನಮ್ಮ ಮನೆ. ಮಹಿಷಿ ಕಾಂಪೌಂಡ್.  ಜೂನಿಯರ್ ಮಿತ್ರ ರವಿ ಶೂರ್ಪಾಲಿಯ ಇಂದಿನ ಮನೆ ಎದುರಲ್ಲಿ. 

ಮಿತ್ರ ಮನೋಜ್ ಕರ್ಜಗಿ ತುಂಬಾ ಆತ್ಮೀಯ. ಅವನ ಮನೆ ಅಲ್ಲಿ ಕೊಂಚ ಮೇಲೆ ಮಾಸೂರ್ ನಾಯಕ್ ಕಾಂಪೌಂಡಿನಲ್ಲಿ ಇತ್ತು. 

ಒಂದು ದಿನ ಸಂಜೆ ನಾನು ಮತ್ತು ನಮ್ಮ ತಾಯಿಯವರು ಮಾಳಮಡ್ಡಿಯ ಸ್ಟೇಷನ್ ರಸ್ತೆ ಗುಂಟ ಎಮ್ಮಿಕೇರಿ ಕಡೆ ಹೊರಟಿದ್ದೆವು. ದಾರಿಯಲ್ಲಿ ಗುಂಜಾಳ್ ಕಿರಾಣಿ ಅಂಗಡಿ ಮುಂದೆ ಸಿಕ್ಕನಲ್ಲ ನಮ್ಮ ಭೂಪ ಮಿತ್ರ ಕರ್ಜಗಿ ಮನ್ಯಾ. ಬಾಯಲ್ಲಿ ಬುರ್ರ್ ಅಂತ ಮೋಟಾರ ಬಿಡುತ್ತ ಕೈಯಲ್ಲಿ ಸ್ಟಿಯರಿಂಗ್ ತಿರುಗಿಸುತ್ತಾ ಸಿಕ್ಕಾಪಟ್ಟೆ ಸ್ಪೀಡಿನಲ್ಲಿ ಓಡಿ ಬರುತ್ತಿದ್ದ. ನಮ್ಮನ್ನು ನೋಡಿ ಗಕ್ಕನೆ ಬ್ರೇಕ್ ಹಾಕಿದ.

'ಏನೋ? ಎಲ್ಲಿ ಹೊಂಟಿ ಇಷ್ಟ ಜೋರ್ ಗಾಡಿ ಬಿಟ್ಟುಕೊಂಡು?' ನಮ್ಮ ಮಾತಾಶ್ರೀ ಉವಾಚ.

'ಅಂಗಡಿಗೆ ಸಾಮಾನು ತರಲಿಕ್ಕೆ ಕಳಿಸ್ಯಾರ್ರೀ…' ಮನ್ಯಾ ಉವಾಚ.

'ಏನು ಸಾಮಾನು??'

'ಡಾಲ್ಡಾ ತೊಗೊಂಡು ಬಾ ಅಂದಾರ್ರೀ.'

'ಡಾಲ್ಡಾನೇ?? ಯಾಕ??'

'ತುಪ್ಪದ ದೀಪಕ್ಕೆ ಹಾಕಲಿಕ್ಕೆ ಬೇಕಂತ್ರೀ.'

'ತುಪ್ಪದ ದೀಪ ಅಂತಿ. ಅದಕ್ಕ ಡಾಲ್ಡಾ ಹಾಕ್ತಿಯೇನು?' ಜಸ್ಟ್ ಲೈಟಾಗಿ ಕಾಲೆಳೆದರು ಅಂತ ಕಾಣುತ್ತದೆ.

ಮನ್ಯಾ ಮುಂದೆ ಒಗೆಯಲಿರುವ ಬಾಂಬಿಗೆ ಅವರೂ ರೆಡಿ ಆಗಿರಲಿಕ್ಕಿಲ್ಲ.

'ಏ, ತುಪ್ಪದ ದೀಪಕ್ಕೆ ತುಪ್ಪ ಸ್ವಾಮಿಗಳು ಬಂದಾಗ ಅಷ್ಟರೀ. ಬಾಕಿ ವೇಳ್ಯಾದಾಗ ಡಾಲ್ಡಾನೇ ರೀ,' ಅಂದುಬಿಟ್ಟ ಮನ್ಯಾ.

ನಮ್ಮ ಮಾತಾಜಿ ತುಂಬಾ ನಕ್ಕರು.

'ಆತು. ಶಾಣ್ಯಾ ಇದ್ದಿ. ತೊಗೊಂಡು ಹೋಗು. ಸಾವಕಾಶ ಹೋಗು,'

'ಹೂನ್ರೀ,' ಅಂದವನೇ ಮನ್ಯಾ ಮತ್ತೆ ತನ್ನ ಮೋಟರನ್ನು ಬರ್ರ್ ಅಂತ ಬಿಟ್ಟುಕೊಂಡು ಹೋದ. ಅಂದು ಗುಂಜಾಳ್ ಎಷ್ಟು ಡಾಲ್ಡಾ ಮಾರಿದ??

ತುಪ್ಪದ ದೀಪ -ಅದು ಹಾಗೆಯೇ. ಹೆಸರಿಗೆ ಮಾತ್ರ.

ದೀಪದ ತುಂಬಾ ಒಳ್ಳೆಣ್ಣೆ (ರೇಷನ್ ನಲ್ಲಿ ಸಿಗುತ್ತಿದ್ದ) ತುಂಬಿ, ಒಂದು ಚಮಚ ತುಪ್ಪ ಹಾಕಿದರೆ ಅದು ತುಪ್ಪದ ದೀಪವೇ. ನಮ್ಮ ಮನೆಯಲ್ಲೂ ಹಾಗೆಯೇ. ಡಾಲ್ಡಾ ಇರಲಿಲ್ಲ. ಬದಲಿಗೆ ರೇಷನ್ ಪಾಮ್ ಆಯಿಲ್. ತುಪ್ಪವೂ ಅಂಗಡಿಯಲ್ಲಿ ಸಿಗುತ್ತಿದ್ದ ನಂದಿನಿ, ಹಂದಿನಿ ಮಾದರಿಯ ಕಲಬೆರಕೆ ತುಪ್ಪ. ಶಿರಸಿಯಿಂದ ಬರುತ್ತಿದ್ದ ಖರೆ ತುಪ್ಪ ನಾವು ಸ್ವಾಹಾ ಮಾಡಲು ಮಾತ್ರ. ಶಿರಸಿಯಿಂದ ಹೊಸ ತುಪ್ಪ ಬಂದಾಗ ಶಾಸ್ತ್ರಕ್ಕೆ ದೇವರಿಗೆ ಒಂದು ಚಮ್ಮಚೆ ದೀಪಕ್ಕೆ ಹಾಕಿ ನಂತರ ಅವನಿಗೆ ನಂದಿನಿ + ಒಳ್ಳೆಣ್ಣೆ ದೀಪವೇ ಗತಿ. ಹಬ್ಬಕ್ಕೋ ಪಬ್ಬಕ್ಕೋ ಪೂರ್ತಿ ದಿವಸ ತುಪ್ಪದ ದೀಪ ಇರುತ್ತಿತ್ತೋ ಏನೋ . 

ಡಾಲ್ಡಾದಲ್ಲಿ ಎಮ್ಮೆ ಚರ್ಬಿ ಹಾಕುತ್ತಾರೆ ಎಂದು ಪತ್ರಿಕೆಗಳಲ್ಲಿ ಬಂದ ಮೇಲೆ ಡಾಲ್ಡಾ ಉಪಯೋಗ ಬಹಳ ಜನ ಬಿಟ್ಟರು. ಹೆಸರಿಗೆ ಮಾತ್ರ ವನಸ್ಪತಿ. ನೋಡಿದರೆ ಎಮ್ಮೆ ಚರ್ಬಿ ಹಾಕಿದ ಪ್ರಾಣಿಸ್ಪತಿ.

**

ಪೇಜಾವರ ಮಠದ ವಿಶ್ವೇಶತೀರ್ಥರನ್ನು ನನಗೆ ಮೊದಲು ಬಾರಿ ಭೇಟಿ ಮಾಡಿಸಿದವನೇ ಮನೋಜ್ ಕರ್ಜಗಿ. 

1979-80 ರಲ್ಲಿ ಮಾಳಮಡ್ಡಿಯ ಪ್ರಹ್ಲಾದ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದರು. ಮನ್ಯಾ ಕರೆದುಕೊಂಡು ಹೋಗಿ ಮೊದಲನೇ ಸಾಲಿನಲ್ಲಿ ಪಕ್ಕದಲ್ಲೇ ಕೂಡಿಸಿಕೊಂಡು ಸ್ವಾಮಿಗಳಿಂದ ನನ್ನನ್ನೂ, ನನ್ನಿಂದ ಸ್ವಾಮಿಗಳನ್ನೂ ಕಾಪಾಡಿದ್ದ. 😂😂😂😂😂

**

ವಿ. ಸೂ: ಶಾಲಾ ವಾಟ್ಸಪ್ಪ್ ಗುಂಪಿನಲ್ಲಿ ಮಿತ್ರರ virtual 'ಅಭಿನಂದನಾ ಸಮಾರಂಭ' ನಡೆಯುತ್ತಿರುತ್ತದೆ. ನಾನು ಮಿತ್ರ ಮನೋಜ್ ಕರ್ಜಗಿಯ 'ಗುಣಗಾನ' ಮಾಡಿದ್ದು ಹೀಗೆ.

Thursday, April 06, 2023

ಹಜಾಮತ್ ಸೇ ಹಜಾಮತ್ ತಕ್...

ಕಯಾಮತ್ ಸೇ ಕಯಾಮತ್ ತಕ್...ಈ ಸಿನೆಮಾದ ಅಭೂತಪೂರ್ವ ಯಶಸ್ಸಿನ ನಂತರ ಅಮೀರ್ ಖಾನನಿಗೆ ಅಂತಹದೇ ಇನ್ನೊಂದು ಚಿತ್ರದ ಆಫರ್ ಬಂತು.

ಚಿತ್ರದ ಹೆಸರು... ಹಜಾಮತ್ ಸೇ ಹಜಾಮತ್ ತಕ್....

ಅನಾಹುತ ಹೆಸರು ಕೇಳಿಯೇ ವಿಚಲಿತನಾದ ಅಮೀರ್ ಖಾನ್, ಇರಲಿ ಚಿತ್ರಕಥೆ ಕೇಳೋಣ, ನಂತರ ನಿರ್ಧರಿಸೋಣ ಎಂದು ಚಿತ್ರಕಥೆ ಕೇಳಲು ಕುಳಿತ. 

ಕಟಿಂಗ್, ಶೇವಿಂಗ್ ಇಲ್ಲದೇ ನಾಡಿಗೆ ತಪ್ಪಿಸಿಕೊಂಡು ಬಂದಿರುವ ಕಾಡುಪ್ರಾಣಿ ಕರಡಿಯಂತೆ ಕಾಣುವ ಮನುಷ್ಯನೊಬ್ಬ ಹೇರ್ ಕಟಿಂಗ್ ಸಲೂನ್  ಹೊಕ್ಕಿ ಹೊರಬಂದಾಗ ಬೋಳು ಹೆರೆಸಿಕೊಂಡ ಮಂಗನಂತೆ ಕಾಣುವುದೇ ಚಿತ್ರದ ಕಥೆಯಂತೆ. 

What a splendid story! What a marvelous transformation! ಎಂದು ಉದ್ಗರಿಸಿದ ಅಮೀರ್ ಅಲ್ಲಿಂದ ಏಕಾಏಕಿ ಗಾಯಬ್ ಆದನಂತೆ. ಒಟ್ಟಿನಲ್ಲಿ ಹಜಾಮತ್ ಸೇ ಹಜಾಮತ್ ತಕ್... ಎಂಬ ಐತಿಹಾಸಿಕ ಚಿತ್ರಕ್ಕೆ ಕೈಯೆತ್ತಿಬಿಟ್ಟ.

ಸುತ್ತಿಕೊಂಡ ಕರ್ಮ ಬಿಡುವುದಿಲ್ಲ ನೋಡಿ. ಸರಿ ಸುಮಾರು ಮೂವತ್ತು ವರ್ಷಗಳ ನಂತರ ಹಾಲಿವುಡ್ ಸಿನೆಮಾ ಕದ್ದು ಅದೇನೋ 'ಲಾಲ್ ಸಿಂಗ್ ಚಡ್ಡಾ' ಎಂಬ ಸಿನೆಮಾ ಮಾಡಿದ ಅಮಿರ್ ಖಾನ್. ಇಷ್ಟೊತ್ತಿಗೆ ಭಾರತದಲ್ಲಿ ಅಸಹಿಷ್ಣುತೆ ಎಂದೆಲ್ಲಾ ಮಾತಾಡಿ ಹೆಸರು ಕೆಡಿಸಿಕೊಂಡಿದ್ದ. ಜನ 'ಲಾಲ್ ಸಿಂಗ್ ಚಡ್ಡಾ' ಸಿನೆಮಾದ ಚಡ್ಡಿ ಕಳೆದು ಬತ್ತಲೆ ಓಡಿಸಿದರು. ಅಭೂತಪೂರ್ವ ಅಪಯಶಸ್ಸು ಕಂಡ. ಆವಾಗ ಅಂದುಕೊಂಡಿರಬಹುದು…ಇದೂ ಒಂದು ರೀತಿಯಲ್ಲಿ ಕ್ಲೀನ್ ಹಜಾಮತ್ ಆಗಿಹೋಯಿತಲ್ಲ. ಚಡ್ಡಿ ಕಳೆದಿದ್ದು ಲಾಲ್ ಸಿಂಗ್ ಚಡ್ಡಾ ಸಿನೆಮಾದ್ದು. ಅಷ್ಟೂ ರೊಕ್ಕದ ಹಜಾಮತ್ ಆಗಿದ್ದು ಮಾತ್ರ ನನ್ನದು. ಒಟ್ಟಿನಲ್ಲಿ ಹಜಾಮತ್ ಸೇ ಹಜಾಮತ್ ತಕ್…

ಹಜಾಮತ್ ಸೇ ಹಜಾಮತ್ ತಕ್…ಚಿತ್ರದ ಬಗ್ಗೆ ಕೇಳಿದ ಧಾರವಾಡ ಮಂದಿ ಉವಾಚ…

ಇದ್ರಾಗ ಏನು ಮಹಾ ಅದ? ಶ್ರಾವಣ ಮಾಸ ಮುಗಿದ ಕೂಡಲೇ ಧಾರವಾಡದಾಗ ಕ್ಯಾಮೆರಾ ಇಟ್ಟಿದ್ದರ ಮೂವೀ ಆಗಿಹೋಗಿತ್ತು. ಊರು ಪೂರ್ತಿ  ಕಟಿಂಗ್, ದಾಡಿ ಇಲ್ಲದೇ ಅಡ್ಯಾಡೋ ಅಡ್ನಾಡಿ ಮಂದಿಯಿಂದ ತುಂಬಿಹೋಗಿರ್ತದ. ಶ್ರಾವಣ ಮುಗಿತಂದ್ರ ಎಲ್ಲರೂ ಒಮ್ಮೆಲೇ ಹುಯ್ಯ ಅಂತ ಸಲೂನಿಗೆ ನುಗ್ಗಿ ಬಿಡ್ತಾರ. ಕರಡಿ ಗತೆ ಇದ್ದವರು ಹೊರಗ ಬಂದಾಗ ಮಂಗ್ಯಾನಂತೆಯೇ ಕಾಣ್ತಾರ. 

ಶಬ್ದಾರ್ಥ ಸೂಚಿ:

ಬೋಳು ಹೆರೆಸಿಕೊಂಡ ಮಂಗ = ನಾಪಿತನ ಅಚಾತುರ್ಯದಿಂದ ಹೇರ್ ಕಟಿಂಗ್ ಎಡಬಿಡಂಗಿ ಆಗಿ, ತಲೆಗೆ ಟೊಪ್ಪಿಗೆ ಧರಿಸಿಕೊಂಡು ಓಡಾಡುವ ಅನಿವಾರ್ಯ ಪರಿಸ್ಥಿತಿಗೆ ಸಿಕ್ಕ ಮನುಷ್ಯ. 

ಬಂಗಾರದ ಬೆಲೆ

ಬಂಗಾರದ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಅಲ್ಲವೇ? 

ಸ್ನೇಹಿತರಿಬ್ಬರು ಅದರ ಬಗ್ಗೆ ಮಾತಾಡುತ್ತಿದ್ದರು.

'ನಿನ್ನ ಕಡೆ ಒಟ್ಟು ಎಷ್ಟು ಬಂಗಾರ ಅದಪಾ ದೋಸ್ತ?'

ವಿಚಾರ ಮಾಡಿ, ಲೆಕ್ಕ ಗಿಕ್ಕ ಹಾಕಿ, 'ನನ್ನ ಕಡೆ 150 kg 55 gram ಬಂಗಾರ ಅದನೋ,' ಎಂದ.

'ಯಪ್ಪಾ!! ಏನಲೇ ನಿನಗೇನರೇ ತಿರುಪತಿ ತಿಮ್ಮಪ್ಪನ ಬಂಗಾರ ಸಿಕ್ಕದೇನಲೇ? ಕ್ವಿಂಟಲಗಟ್ಟಲೆ ಬಂಗಾರ. ಅವ್ವಾ!!'

'ತಿರುಪತಿ ತಿಮ್ಮಪ್ಪನ ಬಂಗಾರವೂ ಇಲ್ಲ. ಕಿತಾಪತಿ ಮಂಗಪ್ಪನ ಬಂಗಾರವೂ ಇಲ್ಲ. ಎಲ್ಲ ನನ್ನದೇ ಬಂಗಾರ,'

'ಹಾಂಗಾ?? ಸ್ವಲ್ಪ ವಿವರಿಸಿ ಹೇಳು ನೋಡೋಣ. ಲೆಕ್ಕ ಕೊಡಲ್ಲಾ?'

'ನೋಡು ನನ್ನ ಕಿರುಬೆರಳಿನಾಗ 5 ಗ್ರಾಮಿನ  ಸಣ್ಣ ಉಂಗುರ ಅದ. ಮದುವ್ಯಾಗ ಮಾವ ಕೊಟ್ಟಿದ್ದು. ಮಗಳ ಮೈಮ್ಯಾಲೆ 20 ಗ್ರಾಮ್ ಬಂಗಾರ ಅದ. ಹೆಂಡತಿ ಮೈಮ್ಯಾಲೆ ಒಂದು 30 ಗ್ರಾಮ್ ಬಂಗಾರ ಅದ.'

'5+20+30 = 55 ಗ್ರಾಮ್ ಬಂಗಾರ ಆತು. ಬಾಕಿ 150 kg ಎಲ್ಲಿ? ಎಲ್ಲಿಲೇ?'

'ನನ್ನ ಹೆಂಡತಿಗೆ ಚಿನ್ನ, ಬಂಗಾರ, ಚಿನ್ನೂ ಅದು ಇದು ಅಂತೇನಿ. ಅಕಿ ಬಂಗಾರಕ್ಕೆ ಸಮಾನ. ಅಕಿ ವೇಟ್ ಬರೋಬ್ಬರಿ  90 kg. ಮಗಳಿಗೆ ಸೋನಾ, ಸೋನೂ, ಚೋನೂ, ಗೋಲ್ಡಿ ಬೇಬಿ ಅಂತೇನಿ. ಅಕಿನೂ ಬಂಗಾರಕ್ಕೆ ಸಮಾನ. ಅಕಿ ವೇಟ್ ಬರೋಬ್ಬರಿ  60 kg. ಟೋಟಲ್ 90+60 = 150 kg. ಬರೋಬ್ಬರಿ ಆತಿಲ್ಲೋ??'

'ಓಹೋ!! ನಿನ್ನ 150 kg 55 gram ಬಂಗಾರ ಹೀಂಗ ಅಂತಾತು. ಇದು ತಿರುಪತಿ ತಿಮ್ಮಪ್ಪನ ಖಜಾನೆ ಬಂಗಾರ ಅಲ್ಲ. ಗ್ಯಾರಂಟೀ ಕಿತಾಪತಿ ಮಂಗಪ್ಪನ ಖಜಾನೆಯದ್ದೇ! ಡೌಟ್ ಬ್ಯಾಡ. ಬಾಪರೇ!'

'ಬಂಗಾರದಂತಹ ಹೆಂಡತಿ ಸೋನಾಬಾಯಿಯಂತಹ ಮಗಳ ವೇಟ್ ಹೇಳಿದಿ. ಅವರ ಹೈಟ್??'

'ಹೆಂಡತಿ 4'11" ಇದ್ದಾಳ. ಮಗಳು 3'11" ಇದ್ದಾಳ.'

ಕೇಳಿದ ಮಿತ್ರ 'ನೀ ಲಕಿ ಬಿಡಪಾ,' ಎನ್ನುತ್ತಾ ಜಾಗ ಖಾಲಿ ಮಾಡಿದ.

Wednesday, April 05, 2023

Travel updates

Started full time travel from June 2022.

The details of the travel from June to September 2022 can be seen here.

After returning from the vacation in India in October, 2022, re-started the journey.

Winter limits travel as it is cold in most of the US. So relatively less travel from January to March-2023. Spent most of the time along the Texas coast where it is relatively warmer and no snowfall at all.

After March 15, 2023, picked up traveling every weekend.

Now in Henderson, Arkansas.

Here an important milestone was achieved. When I arrived in Henderson, Arkansas, I can say I have at least set foot in every 48 of the contiguous states in the USA. Two states Alaska and Hawaii are not connected. So traveling there by road is difficult. One can drive to Alaska by driving in Canada. Hawaii being an island in the Pacific is not reachable by automobile.

All contiguous 48 states touched in 26 years. Not a big deal. I have not seen much as I am not much of a tourist. I enjoy traveling but stay away from crowded touristy places.

When the full time travel started last June 2022, I had 18 states yet to touch. Idaho, Montana, North Dakota, Minnesota, Wisconsin, Iowa, Missouri, Kansas, Nebraska, South Dakota, Wyoming, Colorado, New Mexico, Texas were touched as part of the travel before September 2022. This time new states are Louisiana, Oklahoma, Arkansas. So all done. 48/50. Checked and done.

This time so far 9,500 miles since October 2022.

Will slowly move to the east coast and then back to Texas for the winter.

Cheers!




Tuesday, April 04, 2023

ಸ್ಮಾರ್ಟ್ ಬ್ರಾಹ್ಮಣ...

ನಮ್ಮ ಬ್ಯಾಚಿನ "ಸ್ಮಾರ್ಟ್ ಬ್ರಾಹ್ಮಣ" ಪ್ರಸನ್ನ ದೇಸಾಯಿಗೆ ಹುಟ್ಟುಹಬ್ಬದ ಶುಭಾಶಯಗಳು!

ಪ್ರಸನ್ನ ದೇಸಾಯಿ ಯಾವಾಗ ಸ್ಮಾರ್ಟ್ ಬ್ರಾಹ್ಮಣ ಆದ?

ಕೆಸಿಡಿಯಲ್ಲಿ ಪಿಯೂಸಿ ಮಾಡುತ್ತಿರುವಾಗ ಅದ್ಯಾವದೋ ಅರ್ಜಿ ಭರ್ತಿ ಮಾಡಬೇಕಿತ್ತು. ಧರ್ಮ, ಜಾತಿ ಕಾಲಮ್ಮಿನಲ್ಲಿ ಈ ಪುಣ್ಯಾತ್ಮ ಸ್ಮಾರ್ತ ಬ್ರಾಹ್ಮಣ ಎಂಬುದನ್ನು ಇಂಗ್ಲೀಷಿನಲ್ಲಿ smarth brahman ಎಂದು ಬರೆಯಲು ಹೋಗಿ, smarth ಎಂದು ಬರೆಯುವಾಗ ಕೊನೆಯಲ್ಲಿ h ಗಾಯಬ್ ಮಾಡಿದ್ದಾನೆ. ಅದು smart brahman ಆಗಿ, ಊರೆಲ್ಲಾ ಗುಲ್ಲಾಗಿ, ಒಟ್ಟಿನಲ್ಲಿ ಇವನು ಸ್ಮಾರ್ಟ ಬ್ರಾಹ್ಮಣ ಎಂದು ಖ್ಯಾತನಾಗಿಬಿಟ್ಟಿದ್ದಾನೆ. ಇದು ಕಥೆಯೋ, ದಂತಕಥೆಯೊ ಅಥವಾ ನಿಜವೋ ಎಂಬುದನ್ನು ನಮ್ಮ ಸ್ಮಾರ್ಟ ದೋಸ್ತನೇ ಖಾತ್ರಿ ಮಾಡಬೇಕು. 

ತುಂಬಾ ಸ್ಮಾರ್ಟಾಗಿ ಇದ್ದ(ಇರುವ) ಇವನು ಸ್ಮಾರ್ಟ ಬ್ರಾಹ್ಮಣ ಎನ್ನುವ ಬಿರುದನ್ನು (ಜೊತೆಗೆ ಬಾವಲಿಯನ್ನು, ಕಣ್ಕಪಡಿಯನ್ನು) ಧರಿಸಲು ಎಲ್ಲ ರೀತಿಯಿಂದಲೂ ಅರ್ಹನಾಗಿದ್ದ. ಆಗ ಧಾರವಾಡ ತುಂಬಾ ಬ್ರೇಕ್ ಡ್ಯಾನ್ಸ್ ಹವಾ (ಘಾಟು) ಎಬ್ಬಿಸಿದ್ದ ಪ್ರವೀಣ್ ಪಾಂಡೆಯ ಎಂಬ ಪ್ರಭೂತಿಯ ಶಿಷ್ಯನೂ ಆಗಿದ್ದ. ಪ್ರವೀಣ್ ಪಾಂಡೆಯೇನೋ ಸಿಕ್ಕಸಿಕ್ಕ ಎಲ್ಲ ಮಂದಿಗೆ  (ರೊಕ್ಕ ಕೊಟ್ಟರೆ ಹಂದಿಗೆ ಕೂಡ) ಬ್ರೇಕ್ ಡಾನ್ಸ್ ಕಲಿಸಲು ಸಿದ್ಧನಿದ್ದ. ಆದರೆ ನಮ್ಮ ಮಿತ್ರರಲ್ಲಿ ಯಾರೂ ಅವನ ಶಿಷ್ಯರಾದ ಬಗ್ಗೆ ಮಾಹಿತಿ ಇರಲಿಲ್ಲ. ಚೋರ ಗುರುವಿಗೆ ಚಾಂಡಾಲ ಶಿಷ್ಯನ ಮಾದರಿಯಲ್ಲಿ ಪ್ರವೀಣ್ ಪಾಂಡೆ ಎಂಬ ಬ್ರೇಕ್ ಡಾನ್ಸ್ ಗುರುವಿನ ಶಿಷ್ಯ ನಮ್ಮ ಪ್ರಸನ್ನ.

'ಪಚ್ಯಾ, ಪ್ರವೀಣ್ ಪಾಂಡೆ ಕಡೆ ಹೋಗಿ ಬ್ರೇಕ್ ಡಾನ್ಸ್ ಕಲಿತಾನಂತಲೇ,' ಎಂದು ಒಬ್ಬ ಮಿತ್ರ ಉದ್ಗರಿಸಿದರೆ, 'ಪಚ್ಯನಾ?? ಬ್ರೇಕ್ ಡಾನ್ಸ್?? ಸೀದಾ ನಡೀಲಿಕ್ಕೆ ಬರೂದಿಲ್ಲ ಮಂಗ್ಯಾನಮಗ್ಗ. ಸೊಟ್ಟಗಾಲ ಹಾಕಿ ನಡಿತಾನ. ಬ್ರೇಕ್ ಡಾನ್ಸ್ ಅಂತ ಬ್ರೇಕ್ ಡಾನ್ಸ್,' ಎಂದು ಅವರದೇ ರೀತಿಯಲ್ಲಿ 'ಪ್ರಶಂಸೆ' ಮಾಡಿದ ಅವನ ಮಿತ್ರರೂ ಇದ್ದರು. ಅವರೇ ಸಂಜೆ ಭೆಟ್ಟಿಯಾದಾಗ ಪಚ್ಯಾನ ಮುಂದೆ, 'ಪಚ್ಯಾ. ಏನ್ ಬ್ರೇಕ್ ಡಾನ್ಸ್ ಹೊಡಿತಿಲೇ? ಗ್ರೇಟ್ ಬಿಡಲೇ. ನಿನ್ನ ಮುಂದ ಮೈಕೇಲ್ ಜ್ಯಾಕ್ಸನ್  ಏನೂ ಅಲ್ಲ. ಅವನ್ನ ನಿವಾಳಿಸಿ ಒಗಿಬೇಕು,' ಎಂದು ಹೊಗಳಿ ಉಬ್ಬಿಸಿ ಏನಾದರೂ ಚಿಲ್ಲರೆ ಕಾಸು ವಸೂಲಿ ಮಾಡಿದರೂ ಮಾಡಿದ್ದಾರು. ಹಲ್ಕಟ್ ದೋಸ್ತರು ಮತ್ತು ಅವರ ಮಷ್ಕಿರಿ. ಜೀವನದ ಒಂದು ಅಂಗ. ಅದು ನಿಜವಾದ ಅಮೃತಕಾಲ. 

ನಾನ್ -ವೆಜ್ ಹೋಟೆಲಿನ ವೇಟರನಿಗೆ ತಪ್ಪದೆ ಟಿಪ್ಪು ಕೊಡಬೇಕು ಇಲ್ಲವಾದರೆ ಮುಂದಿನ ಸಲ ಹೋದಾಗ ಲಿವರ್ ಪೀಸ್ ಹಾಕುವುದಿಲ್ಲ ಎಂಬ ಅದ್ಭುತ ಸಂಶೋಧನೆ ಬಗ್ಗೆ ನಾನು ಕೇಳಿದ್ದೇ ಈ ಸ್ಮಾರ್ಟ್ ಮನುಷ್ಯನಿಂದ. ಪಚ್ಯಾ ಆಗಲೇ ಬಹಳ ಮುಂದುವರೆದ ಪ್ರವರ್ಗಕ್ಕೆ ಸೇರಿ ಭಯಂಕರ ಸಂಶೋಧನೆಗಳನ್ನು ಕೈಗೊಂಡಿದ್ದ. ಎಲ್ಲೋ ಹೋಗಿ ಭರ್ಜರಿ ಪಾರ್ಟಿ ಮಾಡಿ ಬಂದಿದ್ದರು ಎಂದು ಕಾಣುತ್ತದೆ. ನಂತರ ಮುಂದಿನ ಪಾರ್ಟಿಯವರೆಗೆ ಅದೇ ಸುದ್ದಿ. ಆಡು ಮುಟ್ಟದ ಸೊಪ್ಪಿಲ್ಲ. ಸ್ಮಾರ್ಟ್ ಬ್ರಾಹ್ಮಣ ಮುಟ್ಟಿ ನೋಡಿ ಸ್ವಾಹಾ ಮಾಡದ ಆಡಿಲ್ಲ.

ಪಿಯೂಸಿ ನಂತರ ಬೆಳಗಾವಿಗೆ ಹೋಗಿಬಿಟ್ಟ. ಬಿಇ ಮುಗಿಸಿದ ನಂತರ ಮೀನು ಸಾಕಲು ಹೋಗಿದ್ದನಂತೆ. ಬಿಇ ನಂತರ 'ಉದರ ನಿಮಿತ್ತಂ ಬಹುಕೃತ ವೇಷಮ್'  ಅಂದರೆ ಹೊಟ್ಟೆಪಾಡಿಗೆ ಏನೇನೋ ವೇಷ ಹಾಕುತ್ತಲೇ ಇರಬೇಕಾಗುತ್ತದೆ. 'ಧರ್ಮೋ ರಕ್ಷತಿ ರಕ್ಷಿತಃ' ಅಂದರೆ ಧರ್ಮವನ್ನು ರಕ್ಷಿಸಿದವನನ್ನು ಧರ್ಮ ರಕ್ಷಿಸುತ್ತದೆ. 'ಮೀನೋ ಸಾಕತಿ ಸಾಕತಃ'  ಅಂದರೆ ಮೀನು ಸಾಕಿದವನನ್ನು ಮೀನು ಸಾಕುತ್ತದೆ. ಈ ಧ್ಯೇಯವಾಕ್ಯದಿಂದ ಪ್ರೇರಿತನಾಗಿ ಮೀನು ಸಾಕಿ ಮತ್ಸೋದ್ಯಮಿ ಆಗಬೇಕೆಂದಿದ್ದ ಎಂದು ಕಾಣುತ್ತದೆ. ಅದರಂತೆ ಮೀನು ಸಾಕಿದ. ಸಾಕಿದ ಮೀನು ಕೈಹಿಡಿದ ಹಾಗೆ ಕಾಣಲಿಲ್ಲ. ಯಾರಿಗೆ ಗೊತ್ತು ಈಗಲೂ ಪಾರ್ಟ್ ಟೈಮ್ ಮೀನು ಹಿಡಿಯುತ್ತಾ, ಸಾಕುತ್ತಾ ಇದ್ದಾನೋ ಏನೋ??ಆವಾಗ ಮತ್ಸ್ಯ ಈಗ ಮತ್ಸ್ಯಕನ್ಯೆ?? ಯಾವ ಹುತ್ತದಲ್ಲಿ ಯಾವ ಹಾವೋ. ಸ್ಮಾರ್ಟ್ ಬ್ರಾಹ್ಮಣನ ಗಾಳಕ್ಕೆ ಯಾವ ಮತ್ಸ್ಯವೋ, ಯಾವ ಮತ್ಸ್ಯಕನ್ಯೆಯೋ?? ಸ್ಮಾರ್ಟ್ ದೋಸ್ತನೇ ವಿವರಿಸಬೇಕು.

ಸ್ಮಾರ್ಟ್ ದೋಸ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು. 

ವಿ.ಸೂ: ಮಿತ್ರ ಪ್ರಸನ್ನ ದೇಸಾಯಿಯ ಜನ್ಮದಿನದಂದು ಶಾಲಾ ವಾಟ್ಸಪ್ಪ್ ಗುಂಪಿನಲ್ಲಿ ಹಂಚಿಕೊಂಡ ಸಂದೇಶ.

ಟಾಂಗಾ ಸಿದ್ಯಾ...

ಏಳನೇ ಕ್ಲಾಸಿನಲ್ಲಿ ಲಂಬೂ ಜೋಶಿ ಟೀಚರ್ ಇಂಗ್ಲೀಷ್ ಪಾಠ ಮಾಡುತ್ತಿದ್ದರು. ಕವನವೊಂದರ ಪಾಠ. ಟೀಚರ್ ಪದೇ ಪದೇ stanza stanza ಅನ್ನುತ್ತಿದ್ದರು. ಏಕೆಂದು ಗೊತ್ತಿಲ್ಲ. Stanza ಎಂಬ ಪದವನ್ನು ಅವರೇ ಹೊಸದಾಗಿ ಕಲಿತು ಬಂದಿದ್ದರೋ ಏನೋ

Stanza ಅಂದರೆ ಕವನದ ಚರಣ. ಏನು ಕವನವೋ, ಏನು ಚರಣವೋ… ಹಚ್ಚಿಕೊಟ್ಟ ಧಾಟಿಗೆ ಕರ್ಕಶವಾಗಿ ವಿಕಾರವಾಗಿ ಕವನ ಹಾಡುವುದನ್ನು ಬಿಟ್ಟರೆ ನಮಗೇನೂ ಹೆಚ್ಚು ಬೇಕಾಗಿರಲಿಲ್ಲ. 

ಅವರು stanza stanza ಪದೇ ಪದೇ ಅಂದಿದ್ದು ಈ ಪುಣ್ಯಾತ್ಮ ಸಿದ್ಯಾನಿಗೆ ಟಾಂಗಾ ಎಂದು ಹೇಗೆ ಕೇಳಿಸಿತೋ ಆ ಎಡೆಯೂರು ಸಿದ್ದಲಿಂಗೇಶ್ವರನೇ ಬಲ್ಲ. 

ಟೀಚರ್ ಏನ್ ಪದೇ ಪದೇ ಟಾಂಗಾ ಟಾಂಗಾ ಅನ್ನಾಕತ್ತಾರ್??? ಏನಿವತ್ತ ಟಾಂಗಾ ಹತ್ತಿ ಸಾಲಿಗೆ ಬಂದಾರೇನು???....ಎಂದು ಸಿದ್ಯಾನ ಬಾಂಬ್. 

ಆಗ ಧಾರವಾಡದಲ್ಲಿ ಟಾಂಗಾ ಕುದುರೆ ಗಾಡಿಗಳು ಇನ್ನೂ ಕಾಣುತ್ತಿದ್ದವು. ಹಾಗಾಗಿ stanza ಅಂದಾಗ ಟಾಂಗಾ ನೆನಪಾಗಿದ್ದು ಸಹಜ. 

ಸಿದ್ಯಾನ spontaneous ಮಾತು ತುಂಬಾ ನಗು ತರಿಸಿತ್ತು. ಎಲ್ಲರೂ  ಪೆಕಪೆಕ  ನಕ್ಕರೆ ಎಲ್ಲರ ಪಾಲಿನ ಕಡತ ಹೊಡೆತ ತಿಂದವ ಮಾತ್ರ ಎಂದಿನಂತೆ ವರ್ಗದ ಹುತಾತ್ಮ ಜಂಗಣ್ಣವರ. ಎಲ್ಲರ ಪರವಾಗಿ ಅವನಿಗೇ ಜಾಸ್ತಿ ಕಟಿಯುತ್ತಿದ್ದರು. ಏಕೆಂದರೆ ಶಿಲೆಯಲ್ಲಿ ಕಟಿದ ಮೂರ್ತಿಯಂತಿದ್ದ ಆತನಿಗೆ ಕಟಿಯುವುದು ಮಾಸ್ತರ್ ಟೀಚರ್ ಮಂದಿಗೆ ಉಸರಾಡಿದಷ್ಟೇ ಸಹಜವಾಗಿತ್ತು. 

ಸಿದ್ಯಾ ಈಗ ತಾನೇ ಖುದ್ದು ಇಂಗ್ಲೀಶ್ ಮಾಸ್ತರ್ ಆಗಿದ್ದಾನೆ. Stanza ಅಂದರೆ ಏನು ಅಂತ ಭರ್ಜರಿ ಪಾಠ ಮಾಡುತ್ತಿರಬಹುದು. 

ಸಿದ್ಯಾ, ಟಾಂಗಾ…ಅಲ್ಲಲ್ಲ stanza ಅಂದ್ರ ಏನಲೇ??? ಜೋಶಿ ಟೀಚರ್ ಕೇಳ್ಯಾರ್…


ವಿ.ಸೂ: ಮಿತ್ರ ಸಿದ್ದಲಿಂಗ ಪ್ರಸಾದನ ಜನ್ಮದಿನದಂದು ಶಾಲಾ ವಾಟ್ಸಪ್ಪ್ ಗುಂಪಿನಲ್ಲಿ ಹಂಚಿಕೊಂಡ ಸಂದೇಶ.

ಪೇಪರ್ ಹಾಕಿಬಿಡುತ್ತೇನೆ...

ಬೆಂಗಳೂರು ಕಡೆ IT ಕೆಲಸದಲ್ಲಿರುವ ಜನ ಆಗಾಗ ಪೇಪರ್ ಹಾಕಿಬಿಡುತ್ತೇನೆ, ಪೇಪರ್ ಹಾಕಿಬಿಡುತ್ತೇನೆ ಎನ್ನುತ್ತಿದ್ದಾಗ ಹಾಗೆಂದರೆ ಏನೆಂದು ಅರ್ಥವಾಗಿರಲಿಲ್ಲ. 

ಪೇಪರ್ ಹಾಕಿಬಿಡುತ್ತೇನೆ ಅಂದರೆ ಕೆಲಸಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಅರ್ಥವಂತೆ. 

ಈಗಿನ ಪರಿಸ್ಥಿತಿಯಲ್ಲಿ ಯಾರೂ ಪೇಪರ್ ಹಾಕಿಬಿಡುತ್ತೇನೆ ಎಂದು ಹಾರಾಡುತ್ತಿಲ್ಲ. ಏಕೆಂದರೆ ಇದ್ದ ಕೆಲಸಕ್ಕೆ ಪೇಪರ್ ಹಾಕಿ ಹೊರಬಿದ್ದರೆ ಮುಂಜಾನೆ ಮನೆಮನೆಗೆ ನಿಜವಾದ ಪೇಪರ್ ಹಾಕುವ ಕೆಲಸವೂ ಸಿಗುವುದಿಲ್ಲ. 

ಮತ್ತೆ ಈ IT ಮಂದಿ ಪೇಪರ್ ಹಾಕುವ ಕೆಲಸ ಮಾಡಿಯಾರೇ??? ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಿದಂತಲ್ಲ ಅದು.

ಒಟ್ಟಿನಲ್ಲಿ ಪೇಪರ್ ಹಾಕುವುದರ ಬದಲು ಪೇಪರಿನಲ್ಲಿ ಮುಖ ಮತ್ತೊಂದು ಒರೆಸಿಕೊಂಡು ಬಕೆಟ್ ಹಿಡಿಯುವ ಕೆಲಸ ಮುಂದುವರೆಸಬೇಕಾಗಿದೆ. 

Monday, April 03, 2023

ಆಧುನಿಕ ಶಬರಿ...

ಮೊನ್ನೆ ರಾಮ ನವಮಿಗೆ ನೆನಪಾಗಿದ್ದು. ಹಳೆಯ ಶಾಲೆ ಹಾಡು. ಹೊಸ ಜಾಡು. 

ಕಾದಿರುವಳು ಶಬರಿ
ಬಾಜೂ ಇದೆ ಖಾಲಿ ಡಬರಿ
ರಾಮ ಬರುವನೆಂದು
RMD ಕೊಡುವನೆಂದು…

ಶಬರಿ ರಾಮನಿಗಾಗಿ ಡಬರಿ ತುಂಬಾ ಬೋರೆ ಹಣ್ಣು ತಂದಳು. ರಾಮ ಬರಲು ತಡವಾಯಿತು. ಶಬರಿಗೆ ಹಸಿವಾಯಿತು. ಎಲ್ಲ ಬೋರೆ ಹಣ್ಣು ಗುಳುಂ ಮಾಡಿ ಕುಳಿತಳು. ರಾಮನಿಗಾಗಿ ಮತ್ತೂ ಕಾದಳು…ರಾಮನ ಹತ್ತಿರ RMD ಗುಟ್ಕಾ ಇಸಿದುಕೊಂಡು ಹೋದರಾಯಿತು ಎಂದು. 

ಇದು ಆಧುನಿಕ ಶಬರಿಯ ಭಕ್ತಿ. 

😂😂😂😂😂😂

ಮಿತ್ರ ಶರದ್ ಪಾಟೀಲ್, RMD ಎಂದರೆ ರಾಮನಿಂದ ಮುದುಕಿಗೆ ದಾನ ಎಂದು ಅರ್ಥವೇ ಎಂದು, ಕೇಳಿದಾಗ ತುಂಬಾ ನಗು ಬಂತು. ಅದ್ಭುತ ಸಂಶೋಧನೆ! ನನಗೂ ಹೊಳೆದಿರಲಿಲ್ಲ. 

ಕೊಡಲಿ ಕಾವು ಕುಲಕ್ಕೆ ಮೂಲ...

ಕೊಡಲಿಯ ಕಾವು (handle) ಕಟ್ಟಿಗೆಯ ಒಂದು ತುಂಡು ಅಷ್ಟೇ. ಆದರೆ ತುಂಬಾ ಮುಖ್ಯವಾದ ವಸ್ತು. ಕೊಡಲಿ ಅದೆಷ್ಟೇ ಹರಿತವಾಗಿದ್ದರೂ ಒಂದು ಸರಿಯಾದ ಕಾವು ಇಲ್ಲದಿದ್ದರೆ ಅದು ನಿಷ್ಪ್ರಯೋಜಕ. 

ಅದೇ ಒಳ್ಳೆ ಹಿಡಿತವಿರುವ ಕಾವೊಂದನ್ನು ಕೊಡಲಿಗೆ ಹಾಕಿ ನೋಡಿ. ನೋಡನೋಡುತ್ತಿದ್ದಂತೆ ಇಡೀ ಕಾಡಿಗೆ ಕಾಡೇ ಬೋಳುಗುಡ್ಡ ಆಗಿ ಹೋಗುತ್ತದೆ. ಅದು ಕಾವಿನ ಮಹತ್ವ. ಕಾವೆಂಬ ಕಟ್ಟಿಗೆಯ ತುಂಡು ಇಡೀ ಕುಲ ಎಂದರೆ ಕಾಡಿನ ಸರ್ವನಾಶಕ್ಕೆ ಕಾರಣವಾಗುತ್ತದೆ.

ಕೃತಕ ಬುದ್ಧಿಮತ್ತೆ  (artificial intelligence) ವಿಷಯದಲ್ಲಿ ಇದೇ ಆಗಿದೆ. ಬುದ್ಧಿವಂತರೆಲ್ಲ ಕೂಡಿ ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಪಡಿಸಿದರು. ಈಗ ಅದೇ ಕೃತಕ ಬುದ್ಧಿಮತ್ತೆ ಈಗ ಬುದ್ಧಿವಂತರ ಬುದ್ಧಿವಂತಿಕೆಯ ಬುಡಕ್ಕೆ ಬತ್ತಿ ಇಡುತ್ತಿದೆ.

ನೀನೇ ಸಾಕಿದಾ ಗಿಣಿ. ನಿನ್ನಾ ಮುದ್ದಿನಾ ಗಿಣಿ. ಹದ್ದಾಗಿ ಕುಕ್ಕಿತಲ್ಲೋ. ನಿನ್ನ ಹದ್ದಾಗಿ ಕುಕ್ಕಿತಲ್ಲೋ...

ನಾವಾಗೇ ಕೋಲು ಕೊಟ್ಟು ತಾರಾಮಾರಾ ಬಡಿಸಿಕೊಂಡೆವೇ ನಾವು?

ಇದೇ ಕಾರಣಕ್ಕೋ ಏನೋ, AI ಕ್ಷೇತ್ರದಲ್ಲೂ ಕೈಯಾಡಿಸುತ್ತಲೇ ಇರುವ, ವಿಶ್ವದ ಅತಿ ದೊಡ್ಡ ಶ್ರೀಮಂತ ಈಲಾನ್ ಮಸ್ಕ್ ಮತ್ತು ಇತರ ಮಹತ್ವದ ಜನರು, ಸ್ವಲ್ಪ ದಿನ AI ಮೇಲಿನ ಸಂಶೋಧನೆ ಮತ್ತು ಅಭಿವೃದ್ಧಿ ಬಂದ್ ಮಾಡಿ ಎಂದು ಬ್ಯಾಂಡ್ ಬಾರಿಸುತ್ತಿದ್ದಾರೆ. ಅವರೇ ಬ್ಯಾಂಡ್ ಬಾರಿಸುತ್ತಿದ್ದಾರೆ ಎಂದರೆ ಉಳಿದವರ ಬ್ಯಾಂಡ್ ಜಾಸ್ತಿ ಜೋರಾಗಿಯೇ ಬಾರಿಸಿದೆ ಎಂದರ್ಥ.

Chat GPT ಮತ್ತು ಸಂಬಂಧಿಸಿದ ತಂತ್ರಜ್ಞಾನ IT ಮಂದಿಯನ್ನು ಬೀದಿಯಲ್ಲಿ ಚಾಟ್ ಅಂಗಡಿ ಇಡುವ ಪರಿಸ್ಥಿತಿಗೆ ತಂದರೂ ಏನೂ ಆಶ್ಚರ್ಯವಿಲ್ಲ. 

ವಿಶ್ವದ ಎಲ್ಲ ಕಡೆ ನರೇಗಾ (MNREGA) ಮಾದರಿಯ ಯೋಜನೆಗಳು ಜಾರಿಗೆ ಬರುತ್ತದೆ. ನರೇಗಾ ಇಲ್ಲದಿದ್ದರೆ ಮರೇಗಾ!

ಭಾರತದ ರಾಹುಲ್ ಗಾಂಧಿ ಮತ್ತು ಅವನ ಆರ್ಥಿಕ ಸಲಹೆಗಾರರಾದ ರಘುರಾಮ್ ರಾಜನ್ ಇತ್ಯಾದಿ ಜನ 'ನ್ಯಾಯ' ನಂತಹ ಯೋಜನೆಗಳ ಮೂಲಕ ತಿಂಗಳಿಗೆ ಇಷ್ಟು ರೊಕ್ಕ ನಿರುದ್ಯೋಗಿಗಳಿಗೆ (ಎಲ್ಲರಿಗೆ) ಅಂದಾಗ ಮೂಗು ಮುರಿದವರೇ ಹೆಚ್ಚು. ಆದರೆ ಆ ವಿಷಯ ವಿಶ್ವದಾದ್ಯಂತ ಚರ್ಚೆಗೆ ಒಳಪಡುತ್ತಿದೆ. 

AI ತಂತ್ರಜ್ಞಾನ ಹೆಚ್ಚು ಲಾಭ ತಂದುಕೊಡುತ್ತದೆ ಅಂತಾದರೆ ಆ ಲಾಭದ ಒಂದು ಭಾಗವನ್ನು ಸಮಾಜಕ್ಕೆ ಕೊಡಲೇಬೇಕಾಗಬಹುದು. ಇಲ್ಲವಾದರೆ ಸಾಧ್ಯವಾದವರು ಚಾಟ್ ಅಂಗಡಿ ಇಟ್ಟಾರು. ಆಗದವರು ಅಪರಾಧಕ್ಕೆ ಇಳಿಯುತ್ತಾರೆ. ಹಾಗಾಗಬಾರದು ಅಂದರೆ ಹೊಟ್ಟೆಗೆ, ಬಟ್ಟೆಗೆ ಮತ್ತು ಮೇಲಿನ ಖರ್ಚಿಗೆ ರೊಕ್ಕ ಕೊಡಲೇಬೇಕು. ಹೀಗೆ ಮಾಡಿದರೆ ಜನರು ಆಲಸಿ ಆಗುವುದಿಲ್ಲವೇ ಎಂದರೆ ಸದ್ಯಕ್ಕೆ ಬೇರೆ ಏನೂ ತೋಚುತ್ತಿಲ್ಲ. ಕಡಿಮೆ ಕೌಶಲ್ಯಗಳ ಕೆಲಸಗಳೇ ಮಾಯವಾಗುತ್ತಿವೆಯಲ್ಲ. ಏನು ಮಾಡೋಣ.

ಆದರೆ ಕೌಶಲ್ಯವಿದ್ದರೆ (skills) ಮತ್ತು ವೃತ್ತಿಪರತೆ (professionalism) ಇದ್ದರೆ ಆದಾಯಕ್ಕೆ ಕೊರತೆಯಿಲ್ಲ. ಇನ್ನು ಮುಂದೆ ಡಿಗ್ರಿಗೆ ಜಾಸ್ತಿ ಕಿಮ್ಮತ್ತು ಇರುವುದಿಲ್ಲ. ಆದರೆ ಕೌಶಲ್ಯ, ವೃತ್ತಿಪರತೆ ಮತ್ತು ಸಂಘಟನೆಗೆ ಹೆಚ್ಚಿನ ಮಹತ್ವ. ನೀವು ಅತ್ಯುತ್ತಮ ಕಾರ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಪ್ಲಮ್ಬರ್, ಕೇಶವಿನ್ಯಾಸಕ, ಇತ್ಯಾದಿ ಆಗಿದ್ದು ವೃತ್ತಿಪರತೆಯಿಂದ ಸೇವೆ ನೀಡುತ್ತಿರಿ ಅಂದಾದರೆ ನೀವು ಅಭಿವೃದ್ಧಿ ಪಥದಲ್ಲಿ ಇರುತ್ತೀರಿ. ಕೇವಲ ಡಿಗ್ರಿ ತೆಗೆದುಕೊಂಡು ಕೌಶಲ್ಯವಿರದ ಜನರಿಗಿಂತ ಮುಂದಿರುತ್ತೀರಿ.

ಏನಂತೀರಿ??

Wednesday, March 01, 2023

ವಾಲಿ, ಘರವಾಲಿ ಮತ್ತು ವಾರ್ನಿಷ್ (Varnish)

ಶಾಲಾ WhatsApp ಗ್ರುಪ್ಪಿನಲ್ಲಿ ಹರಟೆ ನಡೆದಿತ್ತು.

'ಎಲ್ಲಾರೂ ಹೋಳಿ ಹುಣ್ಣಿಮಿಗೆ ಇಲ್ಲೇ ಬರ್ರಿ. ಕೂಡಿ ಬಣ್ಣ ಆಡೋಣ,' ಎಂದು ಆಹ್ವಾನ ಕೊಟ್ಟ ಒಬ್ಬ ಮಿತ್ರ.

'ಬ್ಯಾಡ್ಲೇಪ್ಪಾ, ಸಣ್ಣ ಹುಡುಗೂರ ಚಡ್ಡಿ ಕಳದು ವಾರ್ನಿಷ್ (Varnish) ಹಚ್ಚಿ ಕಳಸ್ತಾರ,' ಎಂದು ಜೋಕ್ ಹೊಡೆದೆ ನಾನು.

ಧಾರವಾಡದಲ್ಲಿ ಹೋಳಿಗೆ ಬಣ್ಣ ಆಡುವುದು ಸಂತೋಷಕ್ಕೋ ಅಥವಾ ಸೇಡು ತೀರಿಸಿಕೊಳ್ಳಲೋ ಎಂದು ತಿಳಿಯುವುದಿಲ್ಲ. ಬಣ್ಣದ ನೆಪದಲ್ಲಿ ವಾರ್ನಿಷ್, ಆಯಿಲ್ ಪೈಂಟ್, ಟರ್ಪೆನ್ಟೈನ್, ಮತ್ತೆ ಏನೇನೋ ದ್ರವಗಳನ್ನು ಹಚ್ಚಿ, ತೋಕಿ, ಸೋಕಿ ವಿಕೃತಾನಂದ ಪಡುತ್ತಾರೆ. ಎಬಡರು. 

ಹೋಳಿ ಹುಣ್ಣಿಮೆ ದಿನ ಚಿಕ್ಕಮಕ್ಕಳು ಸಿಕ್ಕರೆ ಚಡ್ಡಿ ಬಿಚ್ಚಿಸಿ 'ಅದಕ್ಕೆ' ವಾರ್ನಿಷ್ ಹಚ್ಚಿ ಕಳಿಸುತ್ತಾರೆ ಎನ್ನುವ ಪ್ರತೀತಿ ಇತ್ತು. ಹೇಗೂ ಕಟ್ಟಿಗೆಗೆ ಪಾಲಿಶ್ ಮಾಡಲು ವಾರ್ನಿಷ್ ಉಪಯೋಗಿಸುತ್ತಾರೆ. 'ಇದಕ್ಕೂ' ಪಾಲಿಶ್ ಮಾಡಿದರಾಯಿತು ಎಂದು ವಾರ್ನಿಷ್ ಹಚ್ಚಿ ಕಳಿಸುತ್ತಿದ್ದರೋ ಏನೋ ಗೊತ್ತಿಲ್ಲ. ಹಾಗಾಗಿ ನಾವು ಅಣ್ಣಂದಿರ ಜೊತೆಗೇ ಬಣ್ಣವಾಡಲು ಹೋಗುತ್ತಿದ್ದೆವು. ದೊಡ್ಡವರ ಜೊತೆ ಹೋದರೆ ಸೇಫ್. 

ನಾನು ಚಡ್ಡಿ ಬಿಚ್ಚಿ ವಾರ್ನಿಷ್ ಹಚ್ಚಿ ಕಳಿಸುತ್ತಾರೆ ಅಂದರೆ ತುಂಟ ಗೆಳೆಯ 'ವಾರ್ನಿಷ್ ಹಚ್ಚಿದರೆ ವಾಲಿಯ ಬಲ ಬರುತ್ತದೆ,' ಅಂದುಬಿಟ್ಟ. ತುಂಟ.

'ವಾಲಿಗೆ ಬಣ್ಣ ಹಚ್ಚಿದ್ದನ್ನು ಘರವಾಲಿ ನೋಡಿಬಿಟ್ಟರೆ??' ಎಂದು ನಾನು ತಿರುಗಿಟ್ಟೆ.

ಹರಟೆಗೆ ಕೊಂಚ ತಡವಾಗಿ ಬಂದ ಇನ್ನೊಬ್ಬನಿಗೆ ಪೂರ್ತಿ context ಅರ್ಥವಾಗಿಲ್ಲ ಎಂದು ಕಾಣುತ್ತದೆ. 'ಯಾರೋ ಭಿಕ್ಷುಕ ಬಂದಾನ ಅಂದುಕೊಂಡು, 'ಏನೂ ಇಲ್ಲ. ಮುಂದೆ ಹೋಗಪ್ಪಾ,' ಅಂದಾರು,' ಎಂದು ಹೇಳಿದ.

'ವಾರ್ನಿಷ್ ಹಚ್ಚಿಸಿಕೊಂಡು ಬಂದ ತನ್ನ ವಾಲಿಯನ್ನೇ ಗುರುತಿಸಲು ಆಗದವಳು ಅದೆಂತಹ ಘರವಾಲಿ ಮಾರಾಯಾ??' ಎಂದೆ. ಎಲ್ಲರೂ ತಟ್ಟಿಕೊಂಡು ಪೆಕಾ ಪೆಕಾ ನಕ್ಕರು.

'ತಾನು ಕಣ್ಣು ಕಟ್ಟಿಕೊಂಡರೂ ಕಟ್ಟಿಕೊಂಡ ಗಂಡನನ್ನು ಗುರುತಿಸಬಲ್ಲ ಗಾಂಧಾರಿಯಂತಹ ಪತ್ನಿಯನ್ನು ಅಪೇಕ್ಷಿಸಿದರೆ ವಾರ್ನಿಷ್ ಹಚ್ಚಿಸಿಕೊಂಡು ಮನೆಗೆ ಬಂದ ತನ್ನದೇ ವಾಲಿಯನ್ನು ಗುರುತಿಸಲಾಗದೇ 'ಮುಂದೆ ಹೋಗಪ್ಪಾ,' ಎನ್ನುವಂತಹ ಘರವಾಲಿ ಸಿಕ್ಕರೆ ಹೆಂಗೆ ಶಿವಾ???' ಎಂದು ಶಿವನೇ ಶಂಭುಲಿಂಗ ಎಂದು ತಲೆ ಮೇಲೆ ಕೈಯಿಟ್ಟುಕೊಂಡೆ.

ಇದರ ಬಗ್ಗೆ ಚಿಂತಿಸುತ್ತಾ ಗೆಳೆಯರ ಗುಂಪು ಕರಗಿತು. ರಾತ್ರಿ ತುಂಬಾ ಆಗಿತ್ತು. ನಿಶೆಯ ನಶೆ ಇಳಿಯುವದೊಳಗೆ ನಿದ್ರೆಗೆ ಜಾರಬೇಕು. ಇಲ್ಲವಾದರೆ ಕಷ್ಟ. 

Sunday, February 26, 2023

Travels...

Traveling since 1-June-2022. 

Following maps show my travel between 1-June-2022 to 17-September-2022. Total around 10,000 miles. Includes long distance travel between the states and local travel.






Travel continues....will update when the current phase completes. Expected - 28-June-2023.

Saturday, February 25, 2023

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 'ಮುಖ ಗುರುತಿಸುವಿಕೆ' (facial recognition) ತಂತ್ರಜ್ಞಾನ

'ಮುಖ ಗುರುತಿಸುವಿಕೆ' (facial recognition) ತಂತ್ರಜ್ಞಾನ ತಿರುಪತಿಯಲ್ಲಿ ಬಳಕೆಯಾಗಲಿದೆಯಂತೆ. ಭಕ್ತರ ಪಂಜೀಕರಣ (ನೋಂದಣಿ) ಮಾಡಲಿಕ್ಕೆ ಮತ್ತು ದರ್ಶನವನ್ನು ತ್ವರಿತವಾಗಿ  ಮಾಡಿಸಲು ಈ ತಂತ್ರಜ್ಞಾನ ಸಹಾಯಕಾರಿಯಂತೆ. ಹಾಗಂತ ಆಡಳಿತ ಮಂಡಳಿಯ ಅಭಿಪ್ರಾಯ ಮತ್ತು ಆಶಯ. ಒಳ್ಳೇದು. 

ತಿರುಪತಿ ಅಂದ ಕೂಡಲೇ ನೆನಪಾಗುವದು ಎಂದರೆ ಒಂದು ನಾಮ, ಎರಡನೆಯದು ಕೇಶಮುಂಡನ. ನನ್ನ ಜಿಜ್ಞಾಸೆ ಏನೆಂದರೆ ಕೇಶಮುಂಡನ ಮಾಡಿಸಿಕೊಂಡು, ನಾಮ ಹಾಕಿಸಿಕೊಂಡು ಹಾಜರಾದರೆ ಈ 'ಮುಖ ಗುರುತಿಸುವಿಕೆ' ತಂತ್ರಜ್ಜಾನ ಕೆಲಸ ಮಾಡೀತೇ ಎಂದು. ಸಾಮಾನ್ಯ ಹೇರ್ ಕಟಿಂಗ್ ಮಾಡಿಸಿದರೇ ಮಂಗನ ಮುಖವಾಗಿ ಪುನಃ ಮನುಷ್ಯನ ಮುಖವಾಗುವ ಹೊತ್ತಿಗೆ ಮರಳಿ ಕಟಿಂಗ್ ಮಾಡಿಸುವ ಸಮಯವಾಗಿರುತ್ತದೆ. ಸಾಮಾನ್ಯ ರೀತಿಯಲ್ಲಿ ಮಂಡೆ ಹೆರೆದಾಗಲೇ ಚಹರಾಪಟ್ಟಿಯಲ್ಲಿ ಅಂತಹ ಕ್ರಾಂತಿಕಾರಿ ಬದಲಾವಣೆ ಕಂಡುಬರುತ್ತದೆ ಅಂತಾದರೆ ಪೂರ್ತಿ ಗುಂಡು ಹೊಡೆಸಿ ಮೇಲಿಂದ ವರ್ಣರಂಜಿತ ನಾಮ ಹಾಕಿಕೊಂಡರೆ ಚಹರಾಪಟ್ಟಿಸಂಪೂರ್ಣ ಬದಲಾವಣೆಯಾದೀತು. ಹಾಗಂತ ನನ್ನ ಭಾವನೆ. ಅಂತಹ ಬಂಡಾಯಕಾರಿ ಬದಲಾವಣೆಯನ್ನು 'ಮುಖ ಗುರುತಿಸುವಿಕೆ' ತಂತ್ರಜ್ಞಾನ ಬಗೆಹರಿಸೀತೇ? ಆ ಏಳು ಕುಂಡಲವಾಡ ವೆಂಕಪ್ಪನೇ ಬಲ್ಲ. ನಾ ಮಂಕಪ್ಪನಿಗೇನು ಗೊತ್ತು?

facial recognition ತಂತ್ರಜ್ಞಾನದ ಫಲಪ್ರದತೆಯನ್ನು (efficacy) ಕಂಡು ಹಿಡಿಯಲು ಅತ್ಯುತ್ತಮ ವಿಧಾನವೆಂದರೆ facial ಮಾಡಿಸಲು ಬ್ಯೂಟಿ ಪಾರ್ಲರ್ ಒಳಹೊಕ್ಕ ಮಹಿಳೆ ಮತ್ತು facial ಮಾಡಿಸಿಕೊಂಡು ಹೊರಬಿದ್ದ ಮಹಿಳೆ ಇಬ್ಬರೂ ಒಬ್ಬರೇ ಎಂದು ಸ್ಥಿರವಾಗಿ, ನಿಯಮಿತವಾಗಿ, ಕರಾರುವಕ್ಕಾಗಿ ಹೇಳಬಲ್ಲದಾದರೆ ಈ ತಂತ್ರಜ್ಞಾನ prime time ಗೆ ಸಜ್ಜಾಗಿದೆ ಎಂದು ಹೇಳಬಹುದು ಎಂದು ಕಿಡಿಗೇಡಿಗಳ ಕಿತಾಪತಿ ವಿಚಾರ.

facial ಮಾಡಿಸಿಕೊಂಡ ಒಬ್ಬ ಮಹಿಳೆ ಮನೆಗೆ ಬಂದಳಂತೆ. ಬಾಗಿಲು ತೆಗೆದ ಗಂಡ, 'ಯಾರು ನೀವು? ಯಾರು ಬೇಕಾಗಿತ್ತು?' ಎಂದು ಕೇಳಿದ. ಅವನಿಗೆ ಗೊತ್ತೇ ಆಗಲಿಲ್ಲ. ಯಬಡೇಶಿ.

'ಅಯ್ಯೋ, ನಾನ್ರೀ. ನಿಮ್ಮ ಹೆಂಡತಿ. ಅಷ್ಟೂ ಗೊತ್ತಾಗಲಿಲ್ಲ?? ಬ್ಯೂಟಿ ಪಾರ್ಲರಿಗೆ ಹೋಗಿಬರ್ತೇನಿ ಅಂತ ಹೇಳಿ ಹೋಗಿದ್ದೆನಲ್ಲ?' ಎಂದು ರಾಗವಾಗಿ ಹೇಳಿದಳು ಪತ್ನಿ.

'ನೋಡ್ರೀ. ನೀವು ಯಾರಂತ ಗೊತ್ತಿಲ್ಲ. ಹೆಂಡತಿ ಗಿಂಡತಿ ಅಂತ ಹೇಳ್ಕೊತ್ತ ಬಂದ್ರ ನಾ ಪೊಲೀಸರಿಗೆ ಫೋನ್ ಹಚ್ಚಬೇಕಾಗ್ತದ ನೋಡ್ರೀ!' ಎಂದು ಆವಾಜ್ ಹಾಕಿಬಿಟ್ಟ ಗಂಡ. ಅವನ ಹೆಂಡತಿಯೋ ಚಾಂಡಾಲಿ ಮಾದರಿ ಇದ್ದಳು. ಇವಳು ನೋಡಿದರೆ ಚಾಂದನಿ ಮಾದರಿಯಲ್ಲಿ ಇದ್ದಾಳೆ. ಎಲ್ಲಿಯ ಚಾಂಡಾಲಿ. ಎಲ್ಲಿಯ ಚಾಂದನಿ.

ಹೆಂಡತಿ ತಾನೇ ಹೆಂಡತಿ ಎಂದು ಹೇಳಿಯೇ ಹೇಳಿದಳು. ಗಂಡ ಒಪ್ಪಲು ತಯಾರಿಲ್ಲ. ಅಷ್ಟರಲ್ಲಿ ಭೋರ್ಗರೆದು ಮಳೆ ಬಂತು. ಮಳೆಯಲ್ಲಿ ನೆನೆದು ತೊಪ್ಪೆಯಾದಳು. ಮೇಕ್ಅಪ್ ಎಲ್ಲಾ ತೊಳೆದು ಹೋಗಿ ಒರಿಜಿನಲ್ ಕಪ್ಪೆ ರೂಪ ವಾಪಸ್ ಬಂತು. ಗಂಡ ಸಿಕ್ಕಾಪಟ್ಟೆ ಆಶ್ಚರ್ಯ ಪಟ್ಟ. ಮೂಗಿನ ಮೇಲೆ ಬೆರಳಿಟ್ಟುಕೊಂಡ. ಇವಳು ಅವನ ತಲೆ ಮೇಲೆ  ಕೈಯಿಟ್ಟು ಜೋರಾಗಿ ಫಟ್ ಅಂತ ಒಂದು ಕೊಟ್ಟಳು. ಸಾವಿರಾರು ರೂಪಾಯಿ ಕೊಟ್ಟು ಮುಖಕ್ಕೆ facial, ಮಂಡೆಗೆ ಮೆಹಂದಿ ಎಲ್ಲಾ ಹಚ್ಚಿಸಿಕೊಂಡು ಚಾಂಡಾಲಿಯಾಗಿದ್ದಾಕೆ ಚಾಂದನಿಯಾಗಿ ಚಂದಾಗಿಚಮಕಾಯಿಸುತ್ತಾ ಕುಣಿಕುಣಿಯುತ್ತಾ ಬಂದರೆ ಯಬಡೇಶಿ ಗಂಡ ಬಾಗಿಲಲ್ಲೇ ನಿಲ್ಲಿಸಿದ್ದ. ದರಿದ್ರ ಮಳೆಯೂ ಆವಾಗಲೇ ಬರಬೇಕೇ?

ಏಳೇಳು ಜನ್ಮದ ಸಾಥ್ ನಿಭಾನಾ ಮಾಡುತ್ತೇನೆಂದು ಹೇಳಿಕೊಂಡು ಒಂದೇ ಜನ್ಮದಲ್ಲಿ ಏಳೇಳು ಜನ್ಮದ ಪರಿಚಯ ಮಾಡಿಕೊಂಡ ಗಂಡನೇ ಬ್ಯೂಟಿ ಪಾರ್ಲರಿನಿಂದ ಬಂದ  ಹೆಂಡತಿಯನ್ನು ಗುರುತಿಸಲು ವಿಫಲನಾದರೆ facial recognition ತಂತ್ರಜ್ಞಾನ ಯಶಸ್ವಿಯಾದೀತೇ? ಗೊತ್ತಿಲ್ಲ. ಅದು ತಿರುಪತಿ ತಿಮ್ಮಪ್ಪನಿಗೆ ಮಾತ್ರ ಗೊತ್ತು.

ಒಟ್ಟಿನಲ್ಲಿ facial ಮತ್ತಿತರ ಬ್ಯೂಟಿ ಟ್ರೀಟ್ಮೆಂಟ್ ಮಾಡಿಸಿಕೊಂಡು ಬಂದ ಮಹಿಳಾಮಣಿಯರ ಟೆಸ್ಟ್ ಮಾಡಿ ಅದರಲ್ಲಿ ಯಶಸ್ವಿಯಾದರೆ ನಂತರ ತಿಮ್ಮಪ್ಪನ ಸನ್ನಿಧಿಯಲ್ಲಿ ಉಪಯೋಗ ಮಾಡಬಹುದು ಎಂದು ಕೆಲವರ ಭಾವನೆ.

ಏನಂತೀರಿ??

facial recognition ಎಂಬುದು artificial intelligence (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೇಲೆ ಅವಲಂಬಿತವಾದ ಒಂದು ಉಪ ತಂತ್ರಜ್ಞಾನ.

artificial intelligence ಬಗ್ಗೆ ಇರುವ ತಮಾಷೆಯ ಮಾತೆಂದರೆ Artificial intelligence is created by humans with natural stupidity. 

Artificial Intelligence ವಿರುದ್ಧ ಶಬ್ದ Natural Stupidity.

Friday, February 24, 2023

ಆಂಟಿ...

ಹಳಸಿದ ಜೋಕೊಂದನ್ನು ಮತ್ತೊಮ್ಮೆ ಯಾರೋ ವಾಟ್ಸಪ್ಪ್ ನಲ್ಲಿ ಕಳಿಸಿದ್ದರು.

ಭಕ್ತ: ದೇವರೇ, ಹುಡುಗಿಯರು ಅದೆಷ್ಟು ಸುಂದರವಾಗಿಯೂ, ಕೋಮಲವಾಗಿಯೂ ಇರುತ್ತಾರೆ. ಆದರೆ ಹೆಂಡತಿಯರು ಹೀಗೇಕೆ? ಸದಾ ಸಿಡುಕುತ್ತ ಜಗಳವಾಡುತ್ತಿರುತ್ತಾರೆ??

ದೇವರು: ಹುಡುಗಿ ನನ್ನ ಸೃಷ್ಟಿ. ಹೆಂಡತಿ ನಿನ್ನ ಸೃಷ್ಟಿ.

ಹೀಗೆ ಹೇಳಿ ಭಗವಂತ ಮಾಯವಾದ.

ಆಂಟಿಯರೂ (ಬೇರೆಯವರ ಹೆಂಡತಿಯರು) ಕೂಡ ತುಂಬಾ ಸುಂದರವಾಗಿಯೂ, ಕೋಮಲೆಯರಾಗಿಯೂ ಇರುತ್ತಾರೆ. ಅಥವಾ ಹಾಗಿದ್ದಂತೆ ಕಾಣುತ್ತಾರೆ. ಏಕೆಂದರೆ ಆಂಟಿಯರೂ ಕೂಡ ದೇವರ ಸೃಷ್ಟಿಗಳೇ. ಅದು ಹೇಗೆ!? ಮಹಿಳೆಯೊಬ್ಬಳು ಆಂಟಿಯಾಗುವದು ಯಾವಾಗ? ಮಕ್ಕಳು ಆಂಟಿ ಆಂಟಿ ಎಂದು ಕರೆದಾಗ. ಆಂಟಿ ಅಂತಹ ಮಕ್ಕಳ ಸೃಷ್ಟಿ. ಮಕ್ಕಳು ದೇವರ ಸಮಾನ. ಹಾಗಾಗಿ ಆಂಟಿಯರು ದೇವರ ಸೃಷ್ಟಿ. ಹಾಗಾಗಿ ಅವರು ತುಂಬಾ ಇಷ್ಟವಾಗುತ್ತಾರೆ. ಹಾಗಾಗುವುದು ಮಾಯೆಯ ಪರಾಕಾಷ್ಠೆ ಎಂದು ಆಂಟಿಯರ ಸಖ್ಯ  ಮಾಡಿದವರ ಅಭಿಪ್ರಾಯ. ನಂತರ ಅವರು ಆಂಟಿಯರು ಭಗವಂತನ ಸೃಷ್ಟಿ ಎಂದು ಹರ್ಗೀಸ್ ಹೇಳುವುದಿಲ್ಲ. ಅದೇನಿದ್ದರೂ ದೇವರ ಲೀಲೆ. ಸಂಸಾರದ ಮಾಯೆ ಎಂದು ಹೇಳುತ್ತಾ ತಲೆ ಮೇಲೆ ಟವೆಲ್ ಹಾಕಿಕೊಂಡು ಖಾಲಿ ಕಿಸೆಯಲ್ಲಿ ಕೈಬಿಡುತ್ತಾರೆ. ಆಂಟಿ ಸಹವಾಸ ಅಂತಹ ಶೋಚನೀಯ ಸ್ಥಿತಿಗೆ ತಂದಿರುತ್ತದೆ. ಪಾಪ.

ಬೆಂಗಳೂರಿನಂತಹ ದೊಡ್ಡ ಶಹರಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಸೆಂಟ್ರಲ್  ಕ್ರೈಂ ಬ್ರಾಂಚ್ ಎನ್ನುವ ಒಂದು elite ವಿಭಾಗವಿರುತ್ತದೆ. ಅದರಲ್ಲಿ anti rowdy squad ಅನ್ನುವ ಉಪವಿಭಾಗ ಇರುತ್ತದೆ. ಅಥವಾ ರೌಡಿಸಂ ಜಾಸ್ತಿಯಾದಾಗ ಸೃಷ್ಟಿಸಲ್ಪಡುತ್ತದೆ. ನಾನಂತೂ ಅದನ್ನು ಆಂಟಿ ರೌಡಿ ಸ್ಕ್ವಾಡ್ ಎಂದೇ ಓದಿ ನಗುತ್ತಿದ್ದೆ. ರೌಡಿಯಂತಹ ಆಂಟಿಯರನ್ನು ಸಂಬಾಳಿಸಲು ಇರುವ ಪೊಲೀಸ್ ತಂಡ. 

ಸಿನೆಮಾ ಒಂದರ ದೃಶ್ಯ. ಅದರಲ್ಲಿ ನಟ ಕೋಮಲ್ ಕುಮಾರ್ (ನಟ ಜಗ್ಗೇಶ್ ತಮ್ಮ) ಒಂದು ವಿಡಿಯೋ, ಸಿಡಿ ಬಾಡಿಗೆಗೆ ಕೊಡುವ ಅಂಗಡಿ ಇಟ್ಟಿರುತ್ತಾನೆ. ರಹಸ್ಯವಾಗಿ ಬ್ಲೂಫಿಲಂ ಕೂಡ ಕೊಡುತ್ತಿರುತ್ತಾನೆ. ಆಗ ಯಾರೋ ಅವನಿಗೆ ಜೋರು ಮಾಡುತ್ತಾರೆ. ಹಾಗೆಲ್ಲಾ ಬ್ಲೂಫಿಲಂ ಸಿಡಿ ಚಲಾವಣೆ ಮಾಡಿದರೆ ಆಂಟಿ ರೌಡಿ ಸ್ಕ್ವಾಡ್ ಗೆ ದೂರು ಕೊಡುವುದಾಗಿ ಹೆದರಿಸುತ್ತಾರೆ. ಹಾಗೆ ರೋಪ್ ಹಾಕಿದಾಗ ಕೋಮಲ್ ಹೊಡೆವ ರಿವರ್ಸ್ ಡೈಲಾಗ್ - ರೀ ಸ್ವಾಮೀ, ಏನು ಆಂಟಿ ರೌಡಿ ಸ್ಕ್ವಾಡಿಗೆ ಹೋಗ್ತೀರಾ? ಹೋಗಿ. ಹೋಗಿ. ಆಂಟಿ ಮತ್ತು ರೌಡಿ ಕೂಡಿಯೇ ಈ ಅಂಗಡಿ ಹಾಕಿಕೊಟ್ಟಿದ್ದು. ಗೊತ್ತಾ!?

ಅವನ ಅಂಗಡಿಯ ಅಸಲಿ ಮಾಲೀಕರು ಆ ಏರಿಯಾದ ಒಬ್ಬ ಖತರ್ನಾಕ್ ಆಂಟಿ ಮತ್ತು ಒಬ್ಬ ಖರಾಬ್ ರೌಡಿ. 

ಹೀಗೆ ಆಂಟಿ ಮಹಿಮೆ ಅಪಾರ!!

Saturday, February 11, 2023

ನಮ್ಮ ಬ್ಯಾಚಿನ "ಸೆಂಚುರಿ ಗೌಡ"

"ತಿಥಿ" ಕನ್ನಡ ಸಿನೆಮಾ ನೋಡಿದ್ದೀರಾ? ತುಂಬಾ ಚೆನ್ನಾಗಿದೆ. ಅದರಲ್ಲಿ "ಸೆಂಚುರಿ ಗೌಡ" ಎಂಬ ಪಾತ್ರವಿದೆ. ಆ ಪಾತ್ರದಾರಿ ಸಿಕ್ಕಾಪಟ್ಟೆ ಫೇಮಸ್ ಆಗಿಹೋದ.

"ಸೆಂಚುರಿ ಗೌಡ" ಎಂದು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ನಮ್ಮ ಮಿತ್ರ ವಿನೋದ್ ಕಲ್ಲನಗೌಡರ್. ವಿನೋದ್ ಕಲ್ಲನ"ಸೆಂಚುರಿ"ಗೌಡರ್ ಎಂದು ಬದಲಾಯಿಸಿ ಬಹಳ ನಕ್ಕೆ.

ನನಗೆ ಗೊತ್ತಿದ್ದಂತೆ ನಾವು ಶಾಲೆಯಲ್ಲಿ ಇದ್ದ ಆರು ವರ್ಷಗಳಲ್ಲಿ ಯಾರೂ ಕ್ರಿಕೆಟ್ ಪಂದ್ಯದಲ್ಲಿ ಸೆಂಚುರಿ ಹೊಡೆದಿರಲಿಲ್ಲ. ಹೀಗಿರುವಾಗ ಶಾಲೆಯ ಪಂದ್ಯವೊಂದರಲ್ಲಿ ಪಪ್ರಥಮ ಶತಕ ಬಾರಿಸಿದ ಕೀರ್ತಿ ವಿನೋದ್ ಕಲ್ಲನಗೌಡರ್ ಉರ್ಫ್ ಸೆಂಚುರಿಗೌಡರನಿಗೇ ಸಲ್ಲಬೇಕು.

ಎಂಟನೇ ಕ್ಲಾಸ್. ೧೯೮೫ -  ೮೬. C ಕ್ಲಾಸಿನ ಟೀಮಿನವರು ಬೇರೆ ಯಾವುದೋ ಕ್ಲಾಸ್ ವಿರುದ್ಧ ಮ್ಯಾಚ್ ಕೊಟ್ಟಿದ್ದರು. ನಮ್ಮ A ಕ್ಲಾಸಿನ ವಿರುದ್ಧವಂತೂ ಅಲ್ಲ. ಅದು ಖಾತ್ರಿಯಿದೆ. A ಕ್ಲಾಸಿನವರು ಆಗ ಬ್ಯಾಡ್ಮಿಂಟನ್ ಗುಂಗಿನಲ್ಲಿ ಇದ್ದರು. 

ಅಂತಹ ಮ್ಯಾಚಿನಲ್ಲಿ ನಾಲ್ಕಾರು ದಿವಸಗಳ ಅವಧಿಯಲ್ಲಿ ಶತಕ ಬಾರಿಸಿದ್ದು ಈ ವಿನೋದ್ ಕಲ್ಲನಗೌಡರ್  ಉರ್ಫ್ ಸೆಂಚುರಿಗೌಡರ್ .

ಶತಕ ಮುಟ್ಟಿದ ಸಂಭ್ರಮದ ಆಚರಣೆಗಾಗಿ ತಯಾರಿ ಭರ್ಜರಿಯಾಗಿತ್ತು. ನಾವೆಲ್ಲರೂ ನಮ್ಮ ನಮ್ಮ (ಕಪಿ)ಮುಷ್ಠಿಗಳಲ್ಲಿ ಸಿಕ್ಕಿದ ಮಣ್ಣು ಕಲ್ಲು ಹಿಡಿದುಕೊಂಡು ತಯಾರಾಗಿ ನಿಂತಿದ್ದೆವು. (ನಾವೆಲ್ಲರೂ ಆಗ ಕಪಿಮುಂಡೇವೇ ತಾನೇ? ಹಾಗಾಗಿ ಕಪಿಮುಷ್ಠಿ ಎಂದೆ.)

ಮಿತ್ರ ವಿನೋದ್ ಚೆಂಡನ್ನು ಪುಶ್ ಮಾಡಿ ಓಡಿದ. ಚೆಂಡು ನೋಡುತ್ತಾ ನಿಂತವರ ಮಧ್ಯೆ ನುಸುಳಿ ಹೋಗತೊಡಗಿತು. ಪಿಚ್ಚಿನ ಸುತ್ತ ಕಿಕ್ಕಿರಿದಿದ್ದ ಯಾವದಾದರೂ ಮಂಗ್ಯಾನಮಗನ ಕಾಲಿಗೋ ಬಾಲಕ್ಕೋ ಚೆಂಡು  ಬಡಿದು, ಅದು ಅಲ್ಲೇ ನಿಂತುಹೋಗಿ, ಶತಕಕ್ಕೆ ವಿಘ್ನ ಬಂದೀತು ಎನ್ನುವ ಎಚ್ಚರಿಕೆಯಲ್ಲಿ C ಕ್ಲಾಸಿನ ವಿಘ್ನನಿವಾರಕ ಪೈಲ್ವಾನ್ ಶ್ರೀಕಾಂತ್  ದೇಸಾಯಿ ಎಲ್ಲರನ್ನೂ 'ಪ್ರೀತಿಯಿಂದ' ವಾಚಾಮಗೋಚರವಾಗಿ ಬೈಯ್ಯುತ್ತಾ, 'ಎಲ್ಲಾರೂ ಬಾಜೂ ಸರೀರೋ ನಿಮ್ಮೌರ್. ಸೆಂಚುರಿ ಮಿಸ್ ಆತಂದ್ರ ಅಷ್ಟ ಮತ್ತ. ನೊಡ್ರಿಲ್ಲೇ. ಕೈಯಾಗ ಇರೋ ಕಾರ್ಕ್ ಬಾಲ್ ಸೀದಾ ಒಗೆದು ಒಬ್ಬಬರ ಡುಬ್ಬಾ ಮುರಿತೀನಿ' ಎಂದು ಖಡಕ್  ಆವಾಜ್ ಹಾಕಿದ ಅಬ್ಬರಕ್ಕೆ ಸಮುದ್ರ ಇಬ್ಭಾಗವಾಗಿ ಮೋಸೆಸ್ಸನಿಗೆ ದಾರಿ ಮಾಡಿಕೊಟ್ಟಂತೆ ಪ್ರೇಕ್ಷಕ ಮಂಗ್ಯಾನಮಕ್ಕಳೆಲ್ಲ ಆಕಡೆ ಈಕಡೆ ಸರಿದು, ಚೆಂಡಿಗೆ ದಾರಿ ಮಾಡಿಕೊಟ್ಟು, ಚೆಂಡು ದಾಟಿ  ಹೋಗಿ, ಅಂತೂ ಇಂತೂ ಒಂದೋ ಎರಡೂ ರನ್ ಬಂದು ಶತಕ ಪೂರೈಸಿತು. ಸೆಂಚುರಿ!!

ಎಲ್ಲರೂ ಕೈಯಲ್ಲಿದ್ದ ಮಣ್ಣು ಕಲ್ಲು ಎತ್ತರ ಪತ್ತರ ಮೇಲಕ್ಕೆ ತೂರಿ, ಚಿತ್ರವಿಚಿತ್ರವಾಗಿ ಕೇಕೆ (ಕ್ಯಾಕಿ) ಹೊಡೆದು ಶತಕವನ್ನು ಸಂಭ್ರಮಿಸಿದರು. ಅವೆಲ್ಲಾ ತಿರುಗಿ ನಮ್ಮ ತಲೆಯ ಮೇಲೆಯೇ ಅಕ್ಷತೆ ಮಾದರಿಯಲ್ಲಿ ಬಿದ್ದು ನಾವು ಮಂಗ್ಯಾ ಆದೆವು. ಈ ಐತಿಹಾಸಿಕ ಘಟನೆಗೆ ದೇವತೆಗಳು ಮೇಲಿಂದ ಪುಷ್ಪವೃಷ್ಟಿ ಮಾಡಲಿಲ್ಲ. ಹಾಗಾಗಿ ನಾವು ನಮ್ಮಷ್ಟಕ್ಕೆ ನಾವು ಮಣ್ಣು ಕಲ್ಲಿನ ವೃಷ್ಟಿಯನ್ನು, ನಮ್ಮ ಮೇಲೆಯೇ ಮಾಡಿಕೊಂಡು ಸಂಭ್ರಮಿಸಿದೆವು. ಅದರಲ್ಲಿ ಆ ಕ್ಲಾಸಿನವ ಈ ಕ್ಲಾಸಿನವ ಎನ್ನುವ ಭೇದ ಇರಲಿಲ್ಲ. ನಂತರ ವಿನೋದ್ ಸೆಂಚುರಿಗೌಡನನ್ನು ಮೆರವಣಿಗೆಯಲ್ಲಿ ಭುಜದ ಮೇಲೆ ಹೊತ್ತು ಕರೆದುಕೊಂಡು ಹೋದರೇ? ಅದು ನೆನಪಿಲ್ಲ. ಅಷ್ಟರಲ್ಲಿ ಪ್ಯೂನ್ ಹನುಮಂತ ಪೂಜಾರಿ ಬಾರಿಸಿದ್ದ. ಅಂದರೆ  ಢಣಢಣ ಗಂಟೆ ಬಾರಿಸಿದ್ದ. ಊಟದ ಸೂಟಿ ಮುಗಿದಿತ್ತು. ಕ್ಲಾಸಿಗೆ ವಾಪಸ್. ಊಟದ ಸೂಟಿಯ ನಂತರದ ಪೀರಿಯೆಡ್ಡುಗಳು ಶುದ್ಧ ಬೋರ್. 

ಮರುದಿವಸ ಪ್ರಾರ್ಥನೆಯ ನಂತರ ಪಟೇಲ್ ಸರ್  ಎಂದಿನಂತೆ ಮಾಡುತ್ತಿದ್ದ ಘೋಷಣೆಗಳ (Announcements) ಮಧ್ಯೆ ವಿನೋದನ ಶತಕದ ಬಗ್ಗೆಯೂ ಹೇಳಿ ಹಾರ್ದಿಕವಾಗಿ ಅಭಿನಂದಿಸಿದರು. ಹೇಳುವ ಭರದಲ್ಲಿ 'ಶತಕ ಬಾರಿಸಿದ ಬಾಲ!' ಎಂದುಬಿಟ್ಟರು. ಬಾಲಕ ಅಂದಿದ್ದರೆ ಛಲೋ ಇತ್ತು. ನಮಗೆ ಬಾಲ ಅಂದ್ರೆ ಬಾಲ. ಮಂಗ್ಯಾನ ಬಾಲ, ಕತ್ತೆ ಬಾಲ ಇತ್ಯಾದಿ.

ವಿನೋದ್ ಸೆಂಚುರಿಗೌಡರನಿಗೆ ಸೆಂಚುರಿ ಹೊಡೆದ ನಂತರ ಬಾಲ ಬಂದಿರಬಹುದೇ ಎನ್ನುವ ಜೋಕ್ ಚಾಲ್ತಿಯಲ್ಲಿತ್ತು. ಮಂಗನಿಂದ ಮಾನವನಾದ ಮೇಲೆ ಬಾಲ ಮಾಯವಾಗಿದ್ದರೂ ಸೆಂಚುರಿ ಹೊಡೆದ ಮೇಲೆ ಮತ್ತೆ ಬಂದುಬಿಟ್ಟಿದೆಯೇನೋ ಎನ್ನುವ ಜೋಕ್. ಎಲ್ಲದಕ್ಕೆ ಕಾರಣ ಪಟೇಲ್ ಸರ್ "ಬಾಲ" ಎಂದಿದ್ದು. ಮಾಸ್ತರ್ ಮಂದಿ ಏನೇ ಹೇಳಿದರೂ ಅದಕ್ಕೊಂದು ಅನರ್ಥ ಕಲ್ಪಿಸಿ ಇಡೀ ದಿನ ಅದನ್ನೇ ಮತ್ತೆ ಮತ್ತೆ ಹೇಳಿ ನಗುವುದಿದೆಯೆಲ್ಲಾ ಅದರಲ್ಲಿರುವ ಮಜಾ ಅನುಭವಿಸಿದವರಿಗೇ ಗೊತ್ತು. 

ಒಟ್ಟಿನಲ್ಲಿ ವಿನೋದ್ ಕಲ್ಲನಗೌಡರ್ ಎಂಬ 'ಬಾಲ' ಸೆಂಚುರಿ ಹೊಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆ ದಾಖಲೆ ಇನ್ನೂ ಹಾಗೇ ಇರಬಹುದು. ಮಧ್ಯಾಹ್ನದ ಸೂಟಿಯಲ್ಲಿ ತಿಂಗಳುಗಟ್ಟಲೆ ನಡೆಯುತ್ತಿದ್ದ ಪಂದ್ಯಗಳಲ್ಲಿ ಮೊದಲ ಸೆಂಚುರಿ ದಾಖಲಿಸಿದ ಹೆಮ್ಮೆ ನಮ್ಮ ಬ್ಯಾಚಿಗಿದೆ.ಅದು ಸಾಧ್ಯವಾಗಿದ್ದು ನಮ್ಮ ಬಾಲ ದಾಂಡಿಗ  ವಿನೋದ್ ಸೆಂಚುರಿಗೌಡರ್ ಮೂಲಕ!

Thursday, February 02, 2023

ವಿಶೂ ಭೆಸ್ಟಾಫ್ ಲಕ್...

ಶಾಲಾ ದಿನಗಳಲ್ಲಿ ಪರೀಕ್ಷೆ ದಿನಗಳಂದು ಪರೀಕ್ಷೆ ಶುರುವಾಗುವ ಮೊದಲು ಪರಸ್ಪರರಿಗೆ Wish you best of luck ಎಂದು ಹಾರೈಸುವ ಪದ್ಧತಿ ಇತ್ತು.

ಅದರ ಅರ್ಥ, ಬರೋಬ್ಬರಿ ಉಚ್ಚಾರಣೆ ಯಾರಿಗೂ ಗೊತ್ತಿದ್ದಂತೆ ಇರಲಿಲ್ಲ. ಹೆಚ್ಚಿನವರ ಬಾಯಲ್ಲಿ ಅದು "ವಿಶೂ ಭೆಸ್ಟಾಫ್ ಲಕ್" ಎಂದು ಬರುತ್ತಿತ್ತೋ ಅಥವಾ ಹಾಗೆ ಕೇಳುತ್ತಿತ್ತೋ ಗೊತ್ತಿಲ್ಲ.

ಒಟ್ಟಿನಲ್ಲಿ ಪರೀಕ್ಷೆ ಮೊದಲು ಎಲ್ಲರೂ "ವಿಶೂ ಭೆಸ್ಟಾಫ್ ಲಕ್" ಅಂದು ಗದ್ದಲ ಎಬ್ಬಿಸುತ್ತಿದ್ದರು. ಎಲ್ಲಕಡೆ ವಿಶೂ ವಿಶೂ ಎನ್ನುವ ಕಲರವ.

ವಿಶ್ವನಾಥ ಅಂತ ಒಬ್ಬ ಮಿತ್ರ ಕೂಡ ಇದ್ದ. ಹೆಚ್ಚಿನವರಿಗೆ ಅವನು ವಿಶ್ಯಾ.  ಅವನ  ಚಡ್ಡಿ ದೋಸ್ತ್ ಒಬ್ಬನಿದ್ದ. ವಿನಯ ಅಂತ ಅವನ ಹೆಸರು. ಅವನಿಗೆ  ಮಾತ್ರ ಅವನು ವಿಶೂ.ಅದೂ ಜಾಸ್ತಿ ಪ್ರೀತಿ ಬಂದಾಗ ಮಾತ್ರ ವಿಶೂ. 

ವಿಶ್ಯಾನ ಆ ಚಡ್ಡಿ ಮಿತ್ರನಿಗೆ ಪರೀಕ್ಷೆ ದಿನದಂದು ಎಲ್ಲರೂ  ವಿಶೂ ಭೆಸ್ಟಾಫ್ ಲಕ್, ವಿಶೂ ಭೆಸ್ಟಾಫ್ ಲಕ್ ಅಂದು ಅಂದು ಮಿತ್ರ ವಿಶ್ವನಾಥನ ನಾಮಸ್ಮರಣೆಯಲ್ಲಿ ತೊಡಗಿಬಿಟ್ಟಿದ್ದಾರಲ್ಲ ಎಂದು ಅನ್ನಿಸಿರಬೇಕು. ಮೊದಲೇ ಹೇಳಿದಂತೆ ಹೆಚ್ಚಿನ  ಹುಡುಗರಿಗೆ ಅರ್ಥವಂತೂ ಗೊತ್ತಿರಲಿಲ್ಲ. 

"ಎಲ್ಲರೂ  ವಿಶೂ ಭೆಸ್ಟಾಫ್ ಲಕ್ , ವಿಶೂ ಭೆಸ್ಟಾಫ್ ಲಕ್  ಅಂತ ಯಾಕ್ ಹೇಳ್ ಬೇಕಲೇ? ಎಲ್ಲಾ ಕಡೆ ಬರೇ ವಿಷ್ಯಾನೇ ಬರಬೇಕೇನು?? ನಾ  ಎಲ್ಲರಿಗೂ ವಿನಯ್ ಭೆಸ್ಟಾಫ್ ಲಕ್ ಅಂತ ಹೇಳವಾ. ನೀವೂ ಎಲ್ಲರೂ ವಿನಯ್ ಭೆಸ್ಟಾಫ್ ಲಕ್ ಅಂತೇ ಹೇಳ್ರಿಲೇ, " ಎಂದವನೇ ಎಲ್ಲರಿಗೂ ಅಂದು "ವಿನಯ್  ಭೆಸ್ಟಾಫ್ ಲಕ್" ಎಂದೇ ಹಾರೈಸಿದ. 

ಅಂತಹ ವಿಶ್ವನಾಥ ಉರ್ಫ್ ವಿಶ್ಯಾ ಯಾನೇ ವಿಶೂನ ಜನ್ಮದಿವಸ ಇವತ್ತು. ವಿಶೂ ಹ್ಯಾಪಿ ಬರ್ತಡೇ (Wish you happy birthday) ಅನ್ನಬೇಕೋ ಅಥವಾ ವಿನಯ್ ಹ್ಯಾಪಿ ಬರ್ತಡೇ ಅನ್ನಬೇಕೋ ಅನ್ನುವ ಗೊಂದಲ. ಇರಲಿ ಇಬ್ಬರಿಗೂ ಒಪ್ಪುವಂತೆ ವಿಶೂ, ವಿನಯ್ ಹ್ಯಾಪಿ ಬರ್ತಡೇ ಅಂದು ಬಿಟ್ಟರೆ ಇಬ್ಬರಿಗೂ ಖುಷಿಯಾಗಬಹುದೇ??

ಮತ್ತೊಮ್ಮೆ... ವಿಶೂ, ವಿನಯ್ ಹ್ಯಾಪಿ ಬರ್ತಡೇ!!

Monday, January 30, 2023

Supplementary ಮತ್ತು ಸಪ್ಲಿಮೆಂಟ್ ರೀ …

ಪರೀಕ್ಷೆ ನಡೆದಿತ್ತು. ರೇಖಾಗಣಿತ ವಿಷಯ. 

ಹಿಂದಿ ಕಲಿಸುವ ಟೀಚರ್ ಪರೀಕ್ಷಾ ಕೊಠಡಿಯ ಮೇಲ್ವಿಚಾರಕಿ.

"ಟೀಚರ್!"

"ಯಾರೋ ಅದು? ಏನು? ಈಗಷ್ಟೇ ಪರೀಕ್ಷಾ ಶುರು ಆಗ್ಯದ? ಏನು?"

"ಸಪ್ಲಿಮೆಂಟ್ ರೀ?"

"ಸಪ್ಲಿಮೆಂಟ್ ಬೇಕಾ? ಇಷ್ಟ ಲಗೂ? ಏನೆಲ್ಲಾ ಬರೆದು ಒಗೆದುಬಿಟ್ಟಿ ಇಷ್ಟ ಲಗೂ??"

ಎನ್ನುತ್ತಾ ತಮ್ಮ ಪೀಠದಿಂದ ಕೆಳಗಿಳಿದು ಬಂದು ಸಪ್ಲಿಮೆಂಟ್ ಕೊಡಲು ಹೋದರೆ…

"ಇದಲ್ಲರೀ…" ಎನ್ನುತ್ತಾ ಪ್ರಶ್ನೆ ಪತ್ರಿಕೆ ತೋರಿಸಿ ಮತ್ತೆ "ಸಪ್ಲಿಮೆಂಟ್ ರೀ" ಅನ್ನುತ್ತಾನೆ.

ಟೀಚರ್ ಫುಲ್ ತಲೆ ಹಾಪ್.

"ಸಪ್ಲಿಮೆಂಟ್ ರೀ ಅಂತಿ. ಕೊಡಲಿಕ್ಕೆ ಬಂದ್ರ question ಪೇಪರ್ ತೋರಸ್ತೀ!! ಏನು? ಆಟಾ ಹಚ್ಚೀ?"

"ಅಲ್ಲರೀ…."ಸಪ್ಲಿಮೆಂಟ್ ರೀ" ಅಂದರೇನ್ರೀ???"

ಇವನಿಗೋ ಜಾಮಿಟ್ರಿ ಪ್ರಶ್ನೆ ಪತ್ರಿಕೆಯಲ್ಲಿದ್ದ supplementary angle ಎಂದರೇನು ತಿಳಿದಿಲ್ಲ. ಅದನ್ನು ಕೇಳಿ ತಿಳಿದುಕೊಳ್ಳಲು ಸಪ್ಲಿಮೆಂಟ್ ರೀ ಸಪ್ಲಿಮೆಂಟ್ ರೀ ಅಂದ. ಅವರು ಸಪ್ಲಿಮೆಂಟ್ ಕೊಡಲು ಬಂದರು. ಇವನು ಪ್ರಶ್ನೆ ಪತ್ರಿಕೆ ತೋರಿಸಿ ಸಪ್ಲಿಮೆಂಟ್ ರೀ ಅಂದರೆ ಅವರು ಉತ್ತರ ಪತ್ರಿಕೆಗೆ ಸಂಬಂಧಿಸಿದ ಸಪ್ಲಿಮೆಂಟ್ ಕೊಡಲು ಹೋಗಿದ್ದರು.

ಮುಂದೆ ಅವನು ಪ್ರಶ್ನೆ ಪತ್ರಿಕೆ ಹಿಡಿದುಕೊಂಡು ಊರೆಲ್ಲಾ ಅಂದರೆ ಶಾಲೆಯೆಲ್ಲಾ ಅಡ್ಯಾಡಿ ಬಂದ ….ಯಾರಾದ್ರೂ "ಸಪ್ಲಿಮೆಂಟ್ ರೀ " supplementary ಅಂದರೆ ಏನೆಂದು ಹೇಳುತ್ತಾರೋ ಎಂದು.

ಕನ್ನಡ ಮಾಧ್ಯಮದಿಂದ ಎಂಟನೇ ಕ್ಲಾಸಿಗೆ ಒಮ್ಮೆಲೇ ಇಂಗ್ಲಿಷ್ ಮಾಧ್ಯಮಕ್ಕೆ ಬರುವುದಿದೆಯೆಲ್ಲಾ…ಶಿವ ಶಿವಾ! ಆ ಫಜೀತಿ ಯಾರಿಗೂ ಬೇಡ.

*****

ಆಗಾಗ ಏನೇನೋ "ಗೀಚಿ" ಇಟ್ಟಿದ್ದರೂ, ಅವನ್ನು ತಿದ್ದಿ, ಬ್ಲಾಗ್ 'ಪ್ರಕಟಿಸದೇ' ವರ್ಷದ ಮೇಲಾಗಿ ಹೋಗಿತ್ತು. ಕಾರಣ ಒಂದು ಅಂತಿಲ್ಲ. ಆಸಕ್ತಿಯ ಕೊರತೆ. ಅಷ್ಟೇ. ಮೇಲಿಂದ ಹೆಚ್ಚಾದ ತಿರುಗಾಟ. ಕೋವಿಡ್ ಕಾಲದಲ್ಲಿ ಮನೆಯಲ್ಲಿ ಕೂತವರು revenge travel ಮಾದರಿಯಲ್ಲಿ ಯದ್ವಾತದ್ವಾ ತಿರುಗಾಡಿದ್ದಾಯಿತು. ಹಾಗಾಗಿ ಬರವಣಿಗೆ ಹಿಂದೆ ಹೋಗಿದೆ. 

ಆಸಕ್ತಿಯ ಹಣೆಬರಹವೇ ಅಷ್ಟು. ಹೇಗೆ ಬರುತ್ತದೆಯೋ ಹಾಗೇ ಹೋಗಿಬಿಡುತ್ತದೆ ಕೂಡ. ಸ್ವಾಮಿ ಅನುಭವಾನಂದರು "ಆಸಕ್ತಿ" ಮತ್ತು "ಜಾಸಕ್ತಿ" ಎಂದು ಜೋಕ್ ಹೊಡೆಯುತ್ತಾರೆ. ಬರುವುದು ಆಸಕ್ತಿಯಾದರೆ ಹೋಗುವುದು ಜಾಸಕ್ತಿ ಎಂದು ಅರ್ಥ. :)

ಸಂದೇಶ ಕಳಿಸಿ ಕ್ಷೇಮ ವಿಚಾರಿಸಿದ ಎಲ್ಲರಿಗೂ ಧನ್ಯವಾದ. ನೀವೂ ಎಲ್ಲ ಕ್ಷೇಮ ಎಂದು ಭಾವಿಸುವೆ.