Tuesday, October 23, 2012

ಅಂದಿನ ಮರ್ಫೀ ಬೇಬಿ ಇಂದಿನ 'ಮಂದಿ' ಗಂಡ

ಮರ್ಫೀ ಬೇಬಿ 

 ಮರ್ಫೀ ಬೇಬಿ......ಅಯ್ಯೋ!!!....ಎಷ್ಟು ಮುದ್ದಾಗಿದೆ!!!.....ಎತ್ತಿಕೊಂಡು ಕಂಡಾಪಟ್ಟೆ ಪಪ್ಪಿ ಕೊಡೊ ಹಾಗೆ ಇದೆ.

ನಮ್ಮ ಕಾಲದಲ್ಲಿ ಇದ್ದಿದ್ದು ಎರಡೇ ರೇಡಿಯೋ ಬ್ರಾಂಡ್. ಒಂದು ಫಿಲಿಪ್ಸ್. ಇನ್ನೊಂದು ಮರ್ಫಿ.

ನಮ್ಮ ತಂದೆಯವರ ಕಾಲದಲ್ಲಿ ಅಂದ್ರೆ ಅವರು ಸ್ಟುಡೆಂಟ್ ಆಗಿದ್ದಾಗ ಇನ್ನೊಂದು ಬ್ರಾಂಡ್ ಅಂದ್ರೆ ಬುಶ್. ಅವರ ಕಡೆ ಅದೇ ಬುಶ್ ರೇಡಿಯೋ ಇತ್ತು. 1950 ರ ದಶಕದಲ್ಲಿ ಮಹಾ ದುಬಾರಿ ರೇಡಿಯೋ ಅದು. 50 ವರ್ಷದ ಮೇಲಾಯಿತು. ಇನ್ನೂ ಮಸ್ತ ಇದೆ ಆ ರೇಡಿಯೋ.

ಮನೆಯಲ್ಲಿ ಬುಶ್ ರೇಡಿಯೋ. ಆ ಮ್ಯಾಲೆ ಆಪ್ತರೊಬ್ಬರು  ಸಿಂಗಾಪುರಿಂದ ತಂದು ಕೊಟ್ಟಿದ್ದ ಚಿಕ್ಕ ಪಾಕೆಟ್ ರೇಡಿಯೋ ಎಲ್ಲಾ ಇದ್ದರೂ, ಯಾಕೋ ಮರ್ಫಿ ರೇಡಿಯೋ ಮೇಲೆ ನಮ್ಮ ಕಣ್ಣು. ಆ ಸುಂದರ ಬೇಬಿ ಮಾಣಿಯಿಂದಾಗಿರಬೇಕು.

1984 ರಲ್ಲಿ ನಮ್ಮ ಅದೃಷ್ಟ ಖುಲಾಯಿಸಿಬಿಟ್ಟಿತು. ನಮಗೆ ತುಂಬಾ ಆಪ್ತರಾದ ಒಬ್ಬರು ಧಾರವಾಡದಲ್ಲಿ ಹೊಸಾ ಇಲೆಕ್ಟ್ರೋನಿಕ್ಸ್ ಉಪಕರಣಗಳ ಅಂಗಡಿ ತೆಗೆದರು. ನಾವೂ ಹೋಗಿದ್ವಿ ಓಪನಿಂಗ್ ಸೆರೆಮನಿಗೆ. ಹೋದ ಮೇಲೆ ಬೋಣಿಗೆ ಮಾಡಲೇ ಬೇಕು ನೋಡಿ. ಇಲ್ಲಾಂದ್ರೆ ಹೇಗೆ?  ನಾನು ತಂದೆಯವರಿಗೆ ಗಂಟು ಬಿದ್ದು ಕೊಡಿಸಿಕೊಂಡಿದ್ದು ಆ ಕಾಲದಲ್ಲೇ ಸುಮಾರು 150-200 ರೂಪಾಯಿ ಬೆಲೆಯ ಮರ್ಫೀ ರೇಡಿಯೋ. ಏನು ಮಸ್ತ ಇತ್ತು ಅಂತೀರಿ!!!! ಎರಡು ಬ್ಯಾಂಡ್ ಇತ್ತು. ಒಂದು ಮೀಡಿಯಂ ವೇವ್. ಮತ್ತೊಂದು ಶಾರ್ಟ್ ವೇವ್. "ನನಗೆ ಕಾಮೆಂಟರಿ ಕೇಳಲು ಬೇಕು. ದರಿದ್ರ ಧಾರವಾಡ ಆಕಾಶವಾಣಿ ಪೂರ್ತಿ ಕಾಮೆಂಟರಿ ಕೇಳಿಸೋದಿಲ್ಲ. ಸಾಂಗ್ಲಿ, ದೆಹಲಿ ಇತ್ಯಾದಿ ಸ್ಟೇಶನ್ ನಿಮ್ಮ ಹಳೆ ಬುಶ್ ರೇಡಿಯೋದಲ್ಲಿ ಸರಿ ಸಿಗೋದಿಲ್ಲ. ಅದಕ್ಕೇ ಒಂದು ಒಳ್ಳೆ ರೇಡಿಯೋ ಕೊಡಿಸಿ", ಅಂತ ನಂದು ವರಾತ. ತಂದೆಯವರಿಗೂ ಇಲೆಕ್ಟ್ರೋನಿಕ್ಸ್ ಉಪಕರಣ ಅಂದ್ರೆ ಹುಚ್ಚು. ಹ್ಞೂ...ಅಂತ ಹೇಳಿ ಕೊಡಿಸೇ ಬಿಟ್ಟರು. ದೊಡ್ಡ ಮಟ್ಟದ ಬೋಣಿಗೆ ಮಾಡಿದ್ದಕ್ಕೆ ನಮ್ಮ ಹೊಸ ಅಂಗಡಿ ಸಾವಕಾರರು ಫುಲ್ ಖುಷ್. ಅವರ ಅಂಗಡಿಯೂ ಮಸ್ತ ಉದ್ಧಾರ ಆಗಿಹೋಯಿತು. ಅದು ಬೇರೆ ಮಾತು.

ಆ ಕಾಲದಲ್ಲಿ ಇಂಟರ್ನೆಟ್ ಪಂಟರ್ನೆಟ್ ಇರಲಿಲ್ಲ. ನಮಗೂ ಗೊತ್ತಿರಲಿಲ್ಲ. ಕಾಮೆಂಟರಿ ನಿರಂತರವಾಗಿ ಸಿಕ್ಕಿದ್ದರೆ ಅದೇ ದೊಡ್ಡ ನಸೀಬ. 1983 ವಿಶ್ವಕಪ್ ಫೈನಲ್ ಇದ್ದಾಗ ದರಿದ್ರ ಧಾರವಾಡ ರೇಡಿಯೋ ಸ್ಟೇಶನ್ ಅರ್ಧಕ್ಕೆ ಕಾಮೆಂಟರಿ ಬಂದ ಮಾಡಿ, ನಮ್ಮ ತಂದೆಯವರ ಹಳೆ ಬುಶ್ ರೇಡಿಯೋದಲ್ಲಿ ಕಾಮೆಂಟರಿ ಹತ್ತದೆ, ಇಂಡಿಯಾದ ವಿನ್ನಿಂಗ್ ಮಿಸ್ ಮಾಡಿಕೊಂಡವರು ನಾವು. ದುರಾದೃಷ್ಟ. ಈಗ ಒಳ್ಳೆ ಹೊಸಾ ಮಾಡೆಲ್ ಮರ್ಫಿ ರೇಡಿಯೋ ಬಂದ ಮೇಲೆ ಯಾವ ಸ್ಟೇಶನ್ ಬೇಕಾದರೂ ಸಿಗುತಿತ್ತು. ಲಕಿ.

ಈ ಮರ್ಫೀ ಬೇಬಿ ಯಾರು ಅಂತ ಅವತ್ತೂ ಗೊತ್ತಿರಲಿಲ್ಲ. ಯಾರೋ ಬ್ರಿಟಿಶ್ ಮಾಣಿ ಇರಬೇಕು ಅಂತ ಮಾಡಿದ್ವಿ. ಎಷ್ಟು ಚಂದ ಮಾಣಿ!!!!!! ಆ ಲುಕ್ ನಮ್ಮ ದೇಸಿ ಮಂದಿಗೆ ಬರಲಿಕ್ಕೆ ಸಾಧ್ಯವೇ ಇಲ್ಲ.

ಮನ್ನೆ ಮನ್ನೆ ಗೊತ್ತಾಯಿತು ಆ ಮರ್ಫೀ ಬೇಬಿ ಯಾರು ಅಂತ. ಅವ ಈಗಿನ ಮುಂಡೆ ಗಂಡ.....ಅಲ್ಲಲ್ಲ....ಛೆ....ಛೆ..."ಮಂದಿ ಗಂಡ" ಅಂದ್ರೆ ನಂಬುತ್ತೀರಾ!!!!!!!!!? ಹಾಂ? ಹಾಂ?

ಮುಂದಿನ ಪ್ರಶ್ನೆ, ಈ "ಮಂದಿ" ಯಾರು? ಮಂದಿ ಅಂದರೆ ಜನರಾ? 

ಮಂದಿ ಅಂದ್ರೆ ಹುಡುಗಿ ಹೆಸರು. ನಮ್ಮ ಧಾರವಾಡ ಕಡೆ ಹಾಗೆಯೇ. ಸೀಮಾ ಸೀಮಿ ಆಗುತ್ತಾಳೆ. ಇಂದಿರಾ ಇಂದ್ರಿ ಆಗುತ್ತಾಳೆ. ಕಾಂಚನಾ ಕಾಂಚಿ ಆಗುತ್ತಾಳೆ. ಸಂಧ್ಯಾ ಸಂಧಿ ಆಗುತ್ತಾಳೆ. ಮಂಗಲಾ, ಕುಂಡಲಿನಿ, ಪ್ರಾಣೇಶ್ವರಿ  ಏನೇನು ಆಗುತ್ತಾರೆ ಅಂತ ನೀವೇ ವರ್ಕ್ ಔಟ್ ಮಾಡಿ.

ಮಂದಿ ಅಂದ್ರೆ ಮಂದಾಕಿನಿ. 

ಏನು? ಮರ್ಫಿ ಬೇಬಿ ಮಂದಿ ಗಂಡ ಅಂದ್ರೆ ಮಂದಾಕಿನಿ ಗಂಡನಾ?!!!!!

ಯಾವ ಮಂದಾಕಿನಿ? 

ಅದೇರೀ.....ರಾಮ್ ತೇರಿ ಗಂಗಾ ಮೈಲಿ ಹೋಗಯೀ, ಪಾಪಿಯೋನ್ ಕೆ ಪಾಪ್ ಧೋತೆ ಧೋತೆ................ ಅನ್ನುತ್ತ ಹಲವಾರು ಪಡ್ಡೆ ಹುಡುಗರ ಮನಸ್ಸನ್ನು ಮೈಲೀ ಮಾಡಿದ್ದ ಪುರಾತನ ಬಾಂಬಿಂಗ್ ನಟಿ ಮಂದಾಕಿನಿ.

1990 ದಶಕದಲ್ಲಿ ಮರ್ಫೀ ಬ್ರಾಂಡ್ ಇಲ್ಲವಾಯಿತು ಅಂತ ಅನ್ನಿಸುತ್ತದೆ. ಹಾಗಾಗಿ ಮರ್ಫೀ ಬೇಬಿ ಅಡ್ವರ್ಟೈಸ್ಮೆಂಟ್ ಎಲ್ಲೂ ಕಾಣುತ್ತಿರಲಿಲ್ಲ. ಹಾಗೆಯೇ "ರಾಮ್ ತೇರಿ ಗಂಗಾ ಮೈಲಿ" ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆದರೂ, ನಟಿ ಮಂದಾಕಿನಿ ಕೂಡ ಬಾಲಿವುಡ್ ನಿಂದ ಮಾಯವಾಗಿ ಬಿಟ್ಟಿದ್ದಳು. ಆಕೆಯ ಸುತ್ತ ಮುತ್ತ ಏನೇನೋ ಕಥೆಗಳಿದ್ದವು. ಗೂಗಲ್ ಮಾಡಿ ನೋಡಿ ರೋಚಕ ವಿವರಗಳು ಸಿಕ್ಕಾವು.

ಏನೇ ಇರಲಿ. "ರಾಮ್ ತೇರಿ ಗಂಗಾ ಮೈಲಿ" ಫಿಲಿಂ ಮಾತ್ರ ಏಕ್ದಂ ರಾಜ್ ಕಪೂರ್ ಬ್ರಾಂಡ್. ರಾಜ್ ಕಪೂರನ ಕೊನೆ ಮಗ ರಾಜೀವ್ ಕಪೂರನ ಮೊದಲ ಫಿಲಂ ಅದು. ಅವನೂ ಒಂದೆರಡು ಫಿಲಂ ಮಾಡಿ ನಾಪತ್ತೆ ಆದ. 

ನಾವು "ರಾಮ್ ತೇರಿ ಗಂಗಾ ಮೈಲಿ" ನೋಡಿದ್ದು 1987 ರಲ್ಲಿ. ಧಾರವಾಡದ ಪರಮ ಕೊಳಕ್ "ರೀಗಲ್" ಥೇಟರಿನಲ್ಲಿ. ತಗಣಿಗಳಿಗೆ ಫೇಮಸ್ ಆ ಥೇಟರ್. 6-9 pm ಫಿಲಿಂ ನೋಡಿ, ಹೋಟೆಲಿನಲ್ಲಿ ಊಟ ಮಾಡಿ ಬಂದಿದ್ದು ನೆನಪಿದೆ. ಸೈನ್ಸ್ ಎಕ್ಸಿಬಿಶನ್ ಸಲುವಾಗಿ ಊಟದ ಕೂಪನ್ ಕೊಟ್ಟಿದ್ದರು. ಅದೇ ಊರಿನವರಾದ ನಮಗೆ ಹೋಟೆಲ್ಲಿನಲ್ಲಿ ಊಟ ಮಾಡುವ ಅಗತ್ಯ ಇರಲಿಲ್ಲ. ಆದರೂ ಅಂತಹ ಹಾಟ್ ಸಿನೆಮಾ ನೋಡಿದ ಮೇಲೆ ಮನೆಯೂಟ ಸಪ್ಪೆಯಾದೀತು ಅಂತ ಬಿಟ್ಟಿ ಕೂಪನ್ನಿನಲ್ಲಿ ಊಟ ಜಡಿದು, ಕವಳ (ಎಲೆ ಅಡಿಕೆ) ಬಾಯಲ್ಲಿ ತುಂಬಿಕೊಂಡು ಮನಗೆ ಬಂದಿದ್ದು ಆಯಿತು.

ನಮ್ಮ ಇಂಗ್ಲೀಶ್ ಮಾಸ್ತರರೇ ಹೇಳಿ ಬಿಟ್ಟಿದ್ದರು, "ರಾಮ್ ತೇರಿ ಗಂಗಾ ಮೈಲಿ ಸಿನೆಮಾದಲ್ಲಿ ಗಂಗಾ ನದಿ ಹುಟ್ಟುವ ಜಾಗ ಗಂಗೊತ್ರೀ ಚೆನ್ನಾಗಿ ತೋರ್ಸಿದ್ದಾರೆ", ಅಂತ. ಅಷ್ಟು ಸಾಕಿತ್ತು ನಮಗೆ. ಯಾರಾದರು, ಯಾಕೆ ಆ ಸಿನೆಮಾಕ್ಕೆ ಹೋಗಿದ್ದೆ? ಅಂತ ಕೇಳಿದ್ರೆ ಹೇಳಲಿಕ್ಕೆ. ನೋಡಲಿಕ್ಕೆ ಹೋಗಿದ್ದು "ಬೇರೆಯದನ್ನೇ" ಅಂತ ಹೇಳೋ ಜರೂರತ್ ಇಲ್ಲ. ಅಲ್ಲವಾ?

ಇರಲಿ. 25 ವರ್ಷಗಳ ಮೇಲೆ, ಅಂದ್ರೆ ಈಗ ಏನೋ ವಿಚಾರ ಮಾಡುತ್ತ ಗೂಗಲ್ ಮಾಡಿದರೆ, ಅಂದಿನ ಮರ್ಫೀ ಬೇಬಿ ಇಂದಿನ ಮಂದಿ ಗಂಡ ಅನ್ನೋ ಸುದ್ದಿ ಸಿಗಬೇಕಾ?!!!!! ಭಯಂಕರ ಸುದ್ದಿ.

ಆ ಮರ್ಫೀ ಬೇಬಿ ಮಾಣಿ ಮೂಲತ ಟಿಬೇಟಿ ಅಂತೆ. ಈಗ ಟಿಬೇಟಿ ಸನ್ಯಾಸಿ ಆಗಿ ಯೋಗಾ, ಟಿಬೇಟಿ ಔಷಧಿ ಮತ್ತೊಂದು ಕೊಡುತ್ತಾನಂತೆ. 1992-93 ನಂತರ ನಾಪತ್ತೆ ಆಗಿದ್ದ ಮಂದಿ ಉರ್ಫ್ ಮಂದಾಕಿನಿ ಅವರ ಪತ್ನಿ.

ಒಟ್ಟಿನಲ್ಲಿ ಆರಾಮ್ ಇದ್ದಾರೆ.


ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ಸ್ ಓದಿ:


2 comments:

angadiindu said...

ಹೆಗಡೆಯವರಿಗೆ ನಮಸ್ಕಾರ.ಮಂದಾಕಿನಿ ಬಗ್ಗೆ ನಾ ಬ್ಯಾರೆ ಎನೇನೋ ಕೆಟ್ಟ ವಿಚಾರಾ ಕೇಳಿದ್ದೆ.ನೀವು ಕೊಟ್ಟಿದ್ದ ಲಿಂಕ್ ಗೆ ಹೋಗಿ ಓದಿದ ಮ್ಯಾಲೆ ಅಕೀ ಅಂಥಾಕಿ ಅಲ್ಲಾ ಅಂಥ ಗೊತ್ತಾತು.ಇನ್ನ, ಧಾರವಾಡದ ಆಕಾಶವಾಣಿ ಕೇಂದ್ರಕ್ಕ ಯಾಕ "ದರಿದ್ರ" ಸ್ಟೇಶನ್ ಅಂದ್ರಿ ಗೊತ್ತಾಗಲಿಲ್ಲಾ. ಯಾಕಂದ್ರ ಮಲ್ಲಿಕಾರ್ಜುನ ಮನ್ಸೂರ್, ಭೀಮಸೇನ ಜೋಶಿಯವರಿಂದ ಹಿಡಿದು ಇವತ್ತಿನ ಸಂಗೀತಾ ಕಟ್ಟಿಯವರು ಎಲ್ಲಾರೂ ಧಾರವಾಡ ಆಕಾಶವಾಣಿಯಿಂದನ ಬೆಳಕಿಗೆ ಬಂದಾರ.ಈ ಬ್ರೇಕಿಂಗ್ ನ್ಯೂಸ್ ಯುಗದೊಳಗ ನಮ್ಮ ಧಾರವಾಡ ಆಕಾಶವಾಣಿ ಇನ್ನೂ ತನ್ನತನಾನ ಉಳಿಸಿಕೊಂಡೈತಿ. ಅದಕ್ಕ ಅದರ ಮ್ಯಾಲ ಸ್ವಲ್ಪ ಸಾಫ್ಟ್ ಕಾರ್ನರ್ ಐತಿ.
ಅಂದಂಗ ಮೊನ್ನೆ ಊರಿಗೆ ಹೋದಾಗ ನೋಡಿದೆ. ಆ ಕೊಳಕ್ ರೀಗಲ್ ಟಾಕೀಜ ನೆಲಸಮಾ ಮಾಡ್ಯಾರು.ಬಹುಶಃ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟತಾರು ಅನ್ನಿಸ್ತೈತಿ.

Mahesh Hegade said...

ಅಂಗಡಿ ಅವರಿಗೆ ನಮಸ್ಕಾರ.

ಮಂದಾಕಿನಿ ಬಗ್ಗೆ ಅದು ಇದು ಸುದ್ದಿ ಭಾಳ್ ಇದ್ದಿದ್ದು ಖರೆ. ಅವೆಲ್ಲಾ 'ಜವಾನಿ ಕಿ ಕಹಾನಿ'. ಎಷ್ಟು ಖರೆನೋ? ಎಷ್ಟು ಸುಳ್ಳೋ? ಈಗ ಆರಾಮ್ ಇದ್ದಾಳ್ ತೊಗೊರೀ :) :)

ಧಾರವಾಡ ಆಕಾಶವಾಣಿಗೆ 'ದರಿದ್ರ'ಅಂದಿದ್ದು ಅವರು ನಡು ನಡು ಕಾಮೆಂಟರಿ ಪ್ರಸಾರ ನಿಲ್ಲಿಸಿ ತಮ್ಮ ಲೋಕಲ್ ಪ್ರೋಗ್ರಾಮ್ ಚಾಲೂ ಮಾಡಿ ಬಿಡ್ತಿದ್ರು. ಅವರ ರೀಸನ್ ಅವರಿಗೆ ಇರ್ತದ ಬಿಡ್ರೀ. ಆದ್ರಾ ನಮಗ ಕಾಮೆಂಟರಿ ೧-೨ ತಾಸ್ ಮಿಸ್ ಆಗಿ ಬೇಜಾರ್ ಆಗ್ತಿತ್ತು. ಅಷ್ಟ ಹೊರತೂ ಮತ್ತೇನೂ ಬೇಸರ ಇಲ್ಲ. ನೀವು ಹೇಳಿದ್ದು ಖರೆ. ಭಾಳ್ ಮಂದಿ ಅಲ್ಲಿನ್ದನ ಮ್ಯಾಲೆ ಬಂದಾರ್.

ರೀಗಲ್ ಟಾಕೀಜ್ ಬಗ್ಗೆ ಕೇಳಿದೆ. ಒಟ್ಟಿನ್ಯಾಗ ಒಂದು ಹಳೆ ಸ್ಮಾರಕ ಹೋತ ಬಿಡ್ರೀ.

ಓದಿ ಕಾಮೆಂಟ್ ಹಾಕಿದ್ದಕ್ಕ ಥ್ಯಾಂಕ್ಸ್!