Sunday, March 02, 2014

ಸೂಪರ್ ಕಾಪ್ ರಾಕೇಶ ಮಾರಿಯಾ ಈಗ ಮುಂಬೈನ ಟಾಪ್ ಕಾಪ್

ರಾಕೇಶ ಮಾರಿಯಾ
"ಯಾವದಾದರೂ ಒಂದು ಏರಿಯಾದಲ್ಲಿ ಯಾರಾದರೂ ದಾದಾ, ರೌಡಿ, ಗೂಂಡಾ ಅಂತ ಇದ್ದರೆ ಅದು ಆ ಏರಿಯಾದ ಪೋಲೀಸ್ ಇನ್ಸ್ಪೆಕ್ಟರ್ ಮಾತ್ರ ಆಗಿರಬೇಕು!" ಅಂತ ಹೂಂಕರಿಸುತ್ತ ಸೂಪರ್ ಕಾಪ್ ರಾಕೇಶ ಮಾರಿಯಾ ಸಾಹೇಬರು ಮುಂಬೈ ನಗರದ ಪೋಲೀಸ್ ಕಮಿಷನರ್ ಅಂತ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ಪತ್ರಿಕೆ, ಪುಸ್ತಕ, ಸಿನೆಮಾ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಚಮಕಾಯಿಸಿದ ಪೊಲೀಸರಲ್ಲಿ ಮುಂಚೂಣಿಯಲ್ಲಿ ಕಾಣುವವರು ರಾಕೇಶ ಮಾರಿಯಾ. ಅವರು ಮಾಡಿದ ತನಿಖೆಗಳು, ಭೇದಿಸಿದ ಪ್ರಕರಣಗಳು, ಬಂಧಿಸಿದ ಹೈ ಪ್ರೊಫೈಲ್ ಪಾತಕಿಗಳು ಮಾರಿಯಾ ಸಾಹೇಬರನ್ನು ಒಂದು ತರಹದ ಲಿವಿಂಗ್ ಲೆಜೆಂಡ್ ಮಾಡಿಬಿಟ್ಟವು.

೧೯೯೩ ಮಾರ್ಚ್. ಮುಂಬೈಯಲ್ಲಿ ಸರಣಿ ಸ್ಪೋಟಗಳಾದವು. ಕೆಲ ತಿಂಗಳ ಹಿಂದೆ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದಕ್ಕೆ ಪ್ರತಿಕಾರ ಎಂಬಂತೆ ಅಷ್ಟು ದೊಡ್ಡ, ಹಿಂದೆಂದೂ ಆಗಿರದ ಅನಾಹುತ ಒಂದು ಆಗಿ ಹೋಗಿತ್ತು. ಯಾರು ಮಾಡಿದವರು? ಹೇಗೆ ಮಾಡಿದರು? ಅನ್ನುವ ಒಂದು ಸಣ್ಣ ಸುಳಿವು ಸಹ ಪೊಲೀಸರಿಗೆ ಸಿಕ್ಕಿರಲಿಲ್ಲ. ಆಗಿನ ಮುಂಬೈ ಪೋಲೀಸ್ ಕಮಿಷನರ್ ಆಗಿದ್ದ ಅಮರಜೀತ್ ಸಿಂಗ್ ಸಾಮ್ರಾ ಮೇಲೆ ಇನ್ನಿಲ್ಲದ ಒತ್ತಡ. ಆ ಕಾಲದ ಮುಂಬೈ ಕ್ರೈಂ ಬ್ರಾಂಚಿನ ಚೀಫ್ ಮಹೇಶ ನಾರಾಯಣ ಸಿಂಗ ಏನೆಲ್ಲ ತನಿಖೆ ಮಾಡುತ್ತಿದ್ದರೂ, ಒಂದೂ ಫಲ ಕೊಡದೆ, ಪೋಲೀಸರ ಮೇಲೆ ಮತ್ತೂ ಹೆಚ್ಚಿನ ಒತ್ತಡ. ಬೇಗ ಕೇಸ್ ಭೇದಿಸಿ, ಅಪರಾಧಿಗಳನ್ನ ಬಂಧಿಸಿ ಅಂತ. ಏನಾದರೂ ಒಂದು ಸರಿಯಾದ ಕ್ಲೂ ಸಿಕ್ಕರೆ ತಾನೇ ಕೇಸ್ ಭೇದಿಸುವದು?

ಆ ಕಾಲದಲ್ಲಿ ಮಾರಿಯಾ ಸಾಹೇಬರು ಮುಂಬೈನಲ್ಲಿ ಟ್ರಾಫಿಕ್ ವಿಭಾಗದ DCP ಅಂತ ಇದ್ದವರು. ೧೯೮೧ ರ IPS ಬ್ಯಾಚಿನ ಅವರು ಆಗಲೇ ತುಂಬಾ ಪ್ರಾಮಿಸಿಂಗ್ ಆಫೀಸರ್ ಅಂತ ಮೇಲೆ ಬರುತ್ತಿದ್ದರು. ಇಡೀ ಮುಂಬೈ ಪೋಲೀಸ್ ವ್ಯವಸ್ಥೆಯೇ ಈ ಸರಣಿ ಬಾಂಬ್ ಸ್ಪೋಟದ ಹಿಂದೆ ಬಿದ್ದು ಅವರೂ ತನಿಖೆಯಲ್ಲಿ ಶಾಮೀಲಾದರು. ಶಾಮೀಲ ಆಗಿದ್ದೆ ಆಗಿದ್ದು ಮೊದಲ ಬ್ರೇಕ್ ಥ್ರೂ ಕೊಟ್ಟವರೇ ಅವರು. ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿದ್ದ ಒಂದು ಸ್ಕೂಟರ್ ದೊಡ್ಡ ಸುಳಿವು ಕೊಟ್ಟಿತ್ತು. ಅದರ ಮಾಲೀಕರ ಸುಳಿವು ಹಿಡಿದು ಹೋದ ಪೊಲೀಸರು ಸೀದಾ ಹೋಗಿ ನಿಂತಿದ್ದು ಇಡೀ ಸ್ಪೋಟದ ಸಂಚಿನ ರೂವಾರಿ ಟೈಗರ್ ಮೆಮನ್ & ಸೋದರರ ಮನೆ ಮುಂದೆ. ಆಗಲೇ ಮೆಮನ್ ಕುಟುಂಬ ಪೂರ್ತಿ ದುಬೈ ಮತ್ತಿತರ ಜಾಗಗಳಿಗೆ ಹಾರಿ ಹೋಗಿತ್ತು. ನಂತರ ಒಂದರ ಹಿಂದೆ ಇನ್ನೊಂದು ಸುಳಿವುಗಳು ಸಿಕ್ಕವು, ಮುಂಬೈ ಸರಣಿ ಸ್ಪೋಟಗಳು ಹೇಗೆ ಆದವು ಅನ್ನುವದು ತಿಳಿಯಿತು. ಪಾಕಿಗಳು ಮಾಡಿಸಿದ್ದರು. ಮುಂಬೈ ಮಾಫಿಯಾ ಸಾಥ್ ನೀಡಿತ್ತು. ದೊಡ್ಡ ಕುಳಗಳೆಲ್ಲ ದುಬೈ, ಪಾಕಿಸ್ತಾನದಲ್ಲಿ ಕೂತಿದ್ದರೂ ಗ್ರೌಂಡ್ ಲೆವೆಲ್ ಆಪರೇಟರ್ ಎಲ್ಲ ಸಿಕ್ಕಿ ಬಿದ್ದರು. ರಾಕೇಶ ಮಾರಿಯಾ ಸಾಹೇಬರಿಗೇ ಮುಂದೆ ಆ ಪ್ರಕರಣದ ತನಿಖೆಯ ಪೂರ್ತಿ ಜವಾಬ್ದಾರಿ ವಹಿಸಲಾಯಿತು. (ಹೆಚ್ಚಿನ ಮಾಹಿತಿಗೆ ಹುಸೇನ್ ಝೈದಿ ಬರೆದ - Black Friday - ಪುಸ್ತಕ ಓದಿ. ಅದೇ ಹೆಸರಿನ ಒಳ್ಳೆಯ ಸಿನೆಮಾ ಕೂಡ ಆಗಿದೆ)

ಇದೇ ಪ್ರಕರಣದ ಸಂಬಂಧ ನಿಷೇಧಿತ ಎಕೆ - ೫೬ ಬಂದೂಕು ಹೊಂದಿದ್ದ ಸಂಜಯ್ ದತ್ತ್ ಎಂಬ ಬಾಲಿವುಡ್ ಹೀರೋ ರಾಕೇಶ ಮಾರಿಯಾರ ಮುಂದೆ ಬಂದು ಕೂತು, ಹೊಡಿ ಬ್ಯಾಡ್ರೀ, ಎಲ್ಲಾ ಹೇಳಿ ಬಿಡ್ತೇನಿ, ಅಂತ ಪೂರ್ತಿಯಾಗಿ ತಪ್ಪೊಪ್ಪಿಗೆ ಬರೆದುಕೊಟ್ಟು ಹೋಗಿದ್ದ. ಕ್ರೈಂ ಬ್ರಾಂಚಿನ ಪಕ್ಕದ ಲಾಕಪ್ಪುಗಳಲ್ಲಿ ಇತರೆ ಅಪರಾಧಿಗಳ ಬಾಯಿ ಬಿಡಿಸುವ ಕಾರ್ಯಕ್ರಮ ಸಾಂಗೋಪಸಾಂಗವಾಗಿ ನೆಡೆದು, ಅವರ ನರಳಾಟ ಸರಿಯಾಗಿ ಸಂಜಯ್ ದತ್ತನ ಕಿವಿಗೆ ಬಿದ್ದು, ಇದ್ದಿದ್ದು ಹೇಳದಿದ್ದರೆ ತಂದೂ ಅದೇ ಗತಿ ಆಗುತ್ತದೆ ಎಂದು ಹೆದರಿದ್ದ ದತ್ತ ಕೇಳುವ ಮೊದಲೇ ಎಲ್ಲ ಹೇಳಿ, ಗೊಳೋ ಎಂದು ಸಾಹೇಬರ ಮುಂದೆ ಅತ್ತು ಬಿಟ್ಟಿದ್ದ. ಅವನಿಗೆ ಒಂದು ಏಟೂ ಹಾಕದೆ, ಚಹಾ ಕುಡಿಸಿ, ಬೆನ್ನು ಚಪ್ಪರಿಸಿ ಜೈಲಿಗೆ ಕಳಿಸಿ, ಈ ಹೀರೋಗಳ ಕರ್ಮವೇ ಇಷ್ಟು, ಅಂತ ಮಾರಿಯಾ ಸಾಹೇಬರು ನಕ್ಕಿದ್ದರು. ಮಾರಿಷಸ್ ನಲ್ಲಿ ಶೂಟಿಂಗ ಮಾಡುತ್ತಿದ್ದ ಸಂಜಯ್ ದತ್ತ ತನ್ನ ಮೇಲೆ ಪೊಲೀಸರಿಗೆ ಸಂಶಯ ಬಂದಿದೆ ಅಂದ ಕೂಡಲೇ, ಶೂಟಿಂಗ ನಿಲ್ಲಿಸಿ, ಸಿಕ್ಕಿದ ವಿಮಾನ ಹತ್ತಿ  ಓಡಿ ಬಂದಿದ್ದ. ಮುಂಬೈಗೆ ಬಂದು ಇಳಿದವನನ್ನು ಕರೆದೊಯ್ಯಲು ಪೋಲೀಸ್ ಪಡೆ ವಿಮಾನ ನಿಲ್ದಾಣಕ್ಕೆ ಬಂದು ನಿಂತಿತ್ತು. ಹೇಳಿ ಕೇಳಿ ಕಿತಾಪತಿ ಸಂಜಯ ದತ್ತ. ವಿಮಾನ ಇಳಿದು ಬಂದವನೇ, ಕಾದಿದ್ದ ಪೋಲೀಸರ ಜೊತೆ ಕಿರಿಕ್ ಮಾಡಿಕೊಂಡ. ಅದು ಇದು ಅಂದ. ಹೀರೋಗಿರಿ ತೋರಿಸಲು ಹೋದ. ಅಪ್ಪ ಸುನೀಲ್ ದತ್ತ್ ಬೇರೆ ದೊಡ್ಡ ರಾಜಕಾರಣಿಯಾಗಿದ್ದ. ಅದೂ ಒಂದು ಕೊಬ್ಬು. ರಾತ್ರಿ ಹಗಲು ಎನ್ನದೆ, ಊಟ ನಿದ್ರೆ ಬಿಟ್ಟು, ಸಿಕ್ಕಾಪಟ್ಟೆ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಿಗೆ ಆ ನಖರಾಗಳನ್ನೆಲ್ಲ ಸಹಿಸಿಕೊಳ್ಳುವ ದರ್ದು, ಅನಿವಾರ್ಯತೆ ಎಲ್ಲಕಿಂತ ಮುಖ್ಯವಾಗಿ ಸಹನೆ ಇರಲೇ ಇಲ್ಲ. ಸಂಜಯ್ ದತ್ತನಿಕಿಂತ ಒಂದು ಫೂಟು ಗಿಡ್ಡನಿದ್ದ ಪೋಲೀಸ್ ಅಧಿಕಾರಿಯೊಬ್ಬರು ವಿಮಾನ ನಿಲ್ದಾಣದಲ್ಲಿಯೇ ಅವನಿಗೆ ನಾಕು ತಪರಾಕಿ ಹಾಕಿದ್ದರು ಅಂತ ಸುದ್ದಿ ಮಾತ್ರ ಆಗಿತ್ತು. ಮಾಮೂಲಿ ಚಿಲ್ಲರೆ ರೌಡಿಯಂತೆ ಪೊಲೀಸರಿಂದ ಗೂಸಾ ತಿಂದೇ ಕ್ರೈಂ ಬ್ರಾಂಚ್ ಲಾಕಪ್ಪಿಗೆ ಬಂದಿದ್ದ ದತ್ತ ಕೇಳುವ ಮೊದಲೇ ಎಲ್ಲ ಹೇಳಿ, ಅತ್ತು, ನಮಸ್ಕಾರ ಹೊಡೆದು, ಕೊಟ್ಟ ಚಹಾ ಕುಡಿದು, ಜೈಲಿಗೆ ಹೋಗಿ ತೆಪ್ಪಗೆ ಕೂತಿದ್ದರಲ್ಲಿ ದೊಡ್ಡ ಮಾತಿರಲಿಲ್ಲ ಬಿಡಿ.

ಮುಂದೆ ಅನಿರುದ್ಧ ಬಹಲ್ ಎಂಬ 'ತೆಹೆಲ್ಕಾ' ಪತ್ರಕರ್ತ ಸುಮಾರು ೧೯೯೬-೯೭ ರ ಸಮಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮೇಲೆ ಸ್ಟಿಂಗ್ ಆಪರೇಷನ್ ಶುರು ಮಾಡಿದ. ಅದು ಮೊಹಮದ್ ಅಝರುದ್ದೀನ, ಅಜಯ ಜಡೇಜಾ ಎಲ್ಲರಿಗೆ ಬತ್ತಿ ಇಟ್ಟು ಬಿಟ್ಟಿತು. ಈ ಅನಿರುದ್ಧ ಬಹಲ್ ಎಂಬ ಪತ್ರಕರ್ತ ಆ ಕಾಲದ ಕ್ರೈಂ ಬ್ರಾಂಚ್ DCP ಆಗಿದ್ದ ರಾಕೇಶ ಮಾರಿಯಾ ಸಾಹೇಬರನ್ನೂ ಭೆಟ್ಟಿ ಮಾಡಿದ್ದ. ಆಫ್ ದಿ ರೆಕಾರ್ಡ್, ಇದೆಲ್ಲ ಬರೆಯುವಂತಿಲ್ಲ ಅಂತ ಹೇಳಿಯೇ ಮಾರಿಯಾ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳ ಪರಿಚಯ ಮಾಡಿಸಿದ್ದರು. ತೆಹೆಲ್ಕಾ ಮಂದಿಗೆ ಸ್ಟಿಂಗ್ ಆಪರೇಷನ್ ಹುಚ್ಚು. ಆ ಪಿರ್ಕಿ ಪತ್ರಕರ್ತ ರಾಕೇಶ ಮಾರಿಯಾ ಅವರು unofficial ಅಂತ ಹೇಳಿದ್ದನ್ನೂ ಸಹಿತ ರೆಕಾರ್ಡ್ ಮಾಡಿಕೊಂಡು, ಇದ್ದಕ್ಕಿದ್ದ ಹಾಗೆ ಬರೆದು ಮರಿಯಾ ಅವರಿಗೆ ಮುಜುಗರ ಉಂಟು ಮಾಡಿದ್ದ. ನಂತರ ಮಾಧ್ಯಮಗಳಿಂದ ಸ್ವಲ್ಪ ದೂರವೇ ಉಳಿದಿದ್ದರು ಮಾರಿಯಾ. ಮೊಹಮದ್ ಅಝರುದ್ದೀನ, ಅಜಯ ಜಡೇಜಾ ಕ್ರಿಕೆಟ್ ಜಗತ್ತಿನಿಂದ ಮರೆಯಾದರು.

ಸುಕೇತು ಮೆಹತಾ ಎಂಬ ಲೇಖಕ ಬರೆದ 'Maximum City' ಎಂಬ ಪುಸ್ತಕದಲ್ಲಿ 'ಅಜಯ್ ಲಾಲ್ ' ಎಂಬ ಪೋಲೀಸ್ ಅಧಿಕಾರಿಯ ಒಂದು ಪಾತ್ರ ಇದೆ. ಯಾರಿಗಾದರೂ ಸುಲಭವಾಗಿ ಗೊತ್ತಾಗುವ ವಿಷಯ ಅಂದರೆ ಅದು ರಾಕೇಶ ಮಾರಿಯಾ ಅವರ ಕ್ಯಾರೆಕ್ಟರ್ ಎಂದು. ತಮ್ಮ ಹೆಸರು ಇಲ್ಲದ್ದರಿಂದ ಮನಸ್ಸು ಬಿಚ್ಚಿ ಲೇಖಕ ಸುಕೇತು ಮೆಹತಾ ಅವರೊಂದಿಗೆ ಮಾತಾಡಿದ್ದಾರೆ ಮಾರಿಯಾ ಸಾಹೇಬರು. ಆ ಪುಸ್ತಕವನ್ನ ಮಾರಿಯಾ ಸಾಹೇಬರ ಒಂದು ಸಣ್ಣ ಆತ್ಮಕಥೆ ಎಂದರೂ ಅಡ್ಡಿ ಇಲ್ಲ. ಯಾಕೆಂದರೆ ಅವರ ಜೀವನ, ಕುಟುಂಬ, ಪೋಲೀಸ್ ಇಲಾಖೆಯ ಬಗ್ಗೆ ವಿವರಗಳು ಇತ್ಯಾದಿ ಎಲ್ಲ ಇವೆ. ಆ ಪುಸ್ತಕ ಬರೆಯಲು ಸುಮಾರು ಎರಡು ವರ್ಷ ಮುಂಬೈನಲ್ಲೇ ಇದ್ದ ಲೇಖಕ ಸುಕೇತು ಮೆಹತಾ, ರಾಕೇಶ ಮಾರಿಯಾ ಅವರಿಗೆ ಸಿಕ್ಕಾಪಟ್ಟೆ ಆಪ್ತರಾಗಿ, ಅವರ ಅಂತರಂಗದ ಎಲ್ಲ ಸೂಕ್ಷ್ಮ ವಿವರಗಳನ್ನು ತೆಗೆದು, 'ಅಜಯ ಲಾಲ್' ಎಂಬ ಒಂದು ಕಾಲ್ಪನಿಕ ಕ್ಯಾರೆಕ್ಟರ್ ತಯಾರು ಮಾಡಿ, ಮಾರಿಯಾ ಸಾಹೇಬರು ಓಪನ್ ಆಗಿ ಹೇಳಲು ಕಷ್ಟವಾಗಬಹುದಾದ ವಿಷಯಗಳನ್ನೆಲ್ಲ ಒಂದು ತರಹದ ನಿಖರ ರೀತಿಯಲ್ಲಿ ಹೇಳಿದ್ದಾರೆ. ಒಳ್ಳೆಯ ಪುಸ್ತಕ.

ರಾಕೇಶ ಮಾರಿಯಾ ಸಿನೆಮಾ ಹಿನ್ನಲೆಯಿಂದ ಬಂದವರು. ಅವರ ತಂದೆಯವರು ಹಿಂದಿ ಫಿಲಂ ನಿರ್ಮಾಪಕರು. 'Maximum City' ಪುಸ್ತಕದಲ್ಲಿ ಮಾರಿಯಾ ಸಾಹೇಬರು ಹೇಳುವ ಒಂದು ಘಟನೆ ತುಂಬ ತಮಾಷೆಯಾಗಿ ಕಾಣುತ್ತದೆ. ಅದು ೧೯೯೬-೨೦೦೦ ಸಮಯ. ಬಾಲಿವುಡ್ ಮೇಲೆ ಪೂರ್ತಿ ಮಾಫಿಯಾ ನೆರಳು. ದಿನ ಬೆಳಗಾದರೆ ಸಿನಿಮಾ ಮಂದಿಗೆ ಎಲ್ಲೆಲ್ಲೊ ದೂರ ದೂರ ದೇಶದಲ್ಲಿ ಕೂತಿದ್ದ ಭೂಗತ ಡಾನ್ ಜನರಿಂದ ಹಫ್ತಾಕ್ಕಾಗಿ ಬೆದರಿಕೆ. ಕೊಡದಿದ್ದರೆ ಸೀದಾ ಗುಂಡು. ಕಾಸು ಬಿಚ್ಚದ ಮ್ಯೂಸಿಕ್ ಕ್ಯಾಸೆಟ್ ಕಿಂಗ್ ಗುಲಶನ್ ಕುಮಾರನನ್ನು ಮಾಫಿಯಾ ಹತ್ಯೆ ಮಾಡಿತ್ತು. ದುಬೈಯಿಂದ ಫೋನ್ ಬಂತು ಅಂದರೆ ಬಾಲಿವುಡ್ ಮಂದಿಯ ಚಡ್ಡಿ ಒದ್ದೆಯಾಗುತ್ತಿತ್ತು. ಆ ಸಮಯದಲ್ಲಿ ಕ್ರೈಂ ಬ್ರಾಂಚಿನ DCP ಇದ್ದವರು ಇವರೇ. ಮತ್ತೆ ಇವರಿಗೆ ಮೊದಲಿಂದಲೂ ಸಿನಿಮಾ ಸಂಪರ್ಕ ಜಾಸ್ತಿ.  ಹಾಗಾಗಿ ಹಫ್ತಾ ಬೆದರಿಕೆ ಬಂದ ತಕ್ಷಣ ಬಾಲಿವುಡ್ ಜನರಿಗೆ ನೆನಪಾಗುತ್ತಿದ್ದ ಹೆಸರು ರಾಕೇಶ ಮಾರಿಯಾ. ಹಾಗೆ ರಕ್ಷೆ ಕೇಳಿಕೊಂಡು ಬಂದವರಲ್ಲಿ ಆ ಕಾಲದ ಅನೇಕ ದೊಡ್ಡ ದೊಡ್ಡ ಹೀರೋಗಳು ಸಹಿತ ಇದ್ದರು. ಅಂತವರಲ್ಲಿ ಕೆಲವರು ಫಿಲಂ ನಿರ್ಮಾಪಕರಾಗಿದ್ದ ರಾಕೇಶ ಮಾರಿಯಾ ತಂದೆಗೆ ಕೊಡಬಾರದ ಕಷ್ಟ ಕೊಟ್ಟಿದ್ದರು. ಹೀರೋಗಳು ನಿರ್ಮಾಪಕರಿಗೆ ಕೊಡುವಂತಹ ಕಷ್ಟ. ಡೇಟ್ ಕೊಟ್ಟು ಶೂಟಿಂಗಿಗೆ ಬರದೇ ಇರುವದು, ಇತ್ಯಾದಿ ನಖರಾ. ಹೀರೋ ಹೀರೋಯಿನ್ನುಗಳ ಇಂತಹ ಕೆಲವೊಂದು ನಖರಾಗಳಿಂದ ಮಾರಿಯಾ ತಂದೆ ಸಾಕಷ್ಟು ದುಡ್ಡು ಕಳೆದುಕೊಂಡು ನಷ್ಟ ಅನುಭವಿಸಿದ್ದರು. ಅಂತಹ ನಟರೇ ಇಂದು ಪೊಲೀಸ ಅಧಿಕಾರಿಯಾದ ಮಾರಿಯಾ ಮುಂದೆ ಕೂತು, ದುಬೈನಿಂದ ಬರುತ್ತಿದ್ದ ಧಮಿಕಿ ಕರೆಗಳಿಂದ ಬಚಾವ್ ಮಾಡಿ ಅಂತ ಬೇಡುತ್ತಿದ್ದರು. ಕಾಲ ಹೇಗೆ ಚೇಂಜ್ ಆಗುತ್ತದೆ ನೋಡಿ ಸುಕೇತು. ಒಂದು ಕಾಲದಲ್ಲಿ ನಮ್ಮಪ್ಪ ಇದೇ ಹೀರೋಗಳ ಮನೆ ಮುಂದೆ ಹೋಗಿ ಫಿಲಂ ಮುಗಿಸಿಕೊಡಿ ಅಂತ ಗೋಗರಿಯುತ್ತಿದ್ದ. ಆವತ್ತು ಮನೆಯಿಂದ ತಂದೆಯವರನ್ನು  ಅವಮಾನ ಮಾಡಿ ಓಡಿಸಿದ್ದ ಜನರೇ ಇಂದು ನನ್ನ ಮುಂದೆ ಬಂದು ಕೂತು, ಹಫ್ತಾಕ್ಕಾಗಿ ಬರುವ ಧಮಕಿಗಳಿಂದ ಬಚಾವ್ ಮಾಡಿ ಅನ್ನುತ್ತಿದ್ದಾರೆ. ಏನಂತೀರಿ ಇದಕ್ಕೆ? ಅಂತ ಕೇಳುತ್ತಾರೆ ಮಾರಿಯಾ. ಹಾಂಗಂತ ಅವರಿಗೆ ಕೊಡುವ ಪೊಲೀಸ ರಕ್ಷಣೆ ಕೊಟ್ಟೇ ಕೊಟ್ಟರು, ಆ ಮಾತು ಬೇರೆ.

ವಿಕ್ರಮ ಚಂದ್ರ ಬರೆದ 'Sacred Games' ಮುಂಬೈ ಅಂಡರ್ವರ್ಲ್ಡ್ ಮೇಲೆ ಬರೆದಂತಹ ಒಂದು magnum opus ಅನ್ನುವಂತಹ ಕಾದಂಬರಿ. ಕಾದಂಬರಿ ಅಂತ ಹೆಸರಿಗೆ ಮಾತ್ರ. ಮುಂಬೈ ಅಂಡರ್ವರ್ಲ್ಡ್ ಬಗ್ಗೆ ಸ್ವಲ ಗೊತ್ತಿದ್ದವರೂ ಸಹ ಅದರಲ್ಲಿ ಬರುವ ಅನೇಕ ಸನ್ನಿವೇಶಗಳನ್ನು ಮುಂಬೈ ಅಂಡರ್ವರ್ಲ್ಡ್ ನಲ್ಲಿ ಆದ ಅನೇಕ ಘಟನೆಗಳಿಗೆ ಹೋಲಿಸಿ ಸಾಮ್ಯತೆ ಕಾಣಬಹುದು. ಲೇಖಕ ವಿಕ್ರಮ ಚಂದ್ರರಿಗೂ ಎಲ್ಲ ಮಾಹಿತಿ ಒದಗಿಸಿದವರು ಇವರೇ - ರಾಕೇಶ ಮಾರಿಯಾ.

೨೦೦೮ ಮಾರಿಯಾ ಅವರಿಗೆ ಅತಿ ಮುಖ್ಯ ವರ್ಷ. ಮೊದಲು ಆಗಿದ್ದು ನೀರಜ್ ಗ್ರೋವರ್ ಕೊಲೆ ಪ್ರಕರಣ. ಸ್ಥಳೀಯ ಪೋಲೀಸರ ನಿರ್ಲಕ್ಷದಿಂದ ಮುಚ್ಚಿ ಹೋಗುತ್ತಿದ್ದ ಒಂದು ಪ್ರಕರಣವನ್ನು ಕ್ರೈಂ ಬ್ರಾಂಚಿಗೆ ತರಿಸಿಕೊಂಡು, ಚಾಕಚಕ್ಯತೆಯಿಂದ ಭೇದಿಸಿ, ಒಂದು ದೊಡ್ಡ sensational ಕೇಸ್ ಆಗಲು ಕಾರಣ ಇವರೇ - ರಾಕೇಶ ಮಾರಿಯಾ.

ನೀರಜ್ ಗ್ರೋವರ್ - debonair ಪ್ಲೇಬಾಯ್ ತರಹದ ಹುಡುಗ. ಯಾವದೋ ಒಂದು ಮೀಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಾನ್ಪುರ ಅವನ ಮೂಲ ಊರು. ಮುಂಬೈಗೆ ಬಂದು ಪೂರ್ತಿ ಶೋಕಿದಾರನಾಗಿದ್ದ. ಹಿಂದೆ, ಮುಂದೆ, ಅಕ್ಕ, ಪಕ್ಕ ಹುಡುಗಿಯರೇ ಹುಡುಗಿಯರು. ನಡುವೆ ಚೆಲ್ಲಾಟ ಆಡುವ ಈ ಕೃಷ್ಣ - ನೀರಜ್ ಗ್ರೋವರ್.

ಮಾರಿಯಾ ಸುಸೈರಾಜ - ಮೈಸೂರಿನ ಹುಡುಗಿ. ಕನ್ನಡದಲ್ಲಿ ಒಂದೆರಡು ಸಿನೆಮಾ ಮಾಡಿ, ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಬೇಕು ಅಂತ ಮುಂಬೈಗೆ ಬಂದಿದ್ದಳು. ಆಕೆಯ ವಿವಾಹ ನಿಶ್ಚಯವಾಗಿತ್ತು. ಆಕೆಯ ಗಂಡನಾಗುವವ ನೌಕಾಪಡೆಯಲ್ಲಿ ಕ್ಯಾಪ್ಟನ್. ಕೋಚಿನ್ ನಲ್ಲಿ ಇದ್ದ. ಜೆರೋಮ್ ಮ್ಯಾಥ್ಯೂ ಅಂತ ಅವನ ಹೆಸರು.

ಅದೇನು ಕನೆಕ್ಷನ್ ಬೆಳೆಯಿತೋ ಈ ನೀರಜ್ ಗ್ರೋವರ್ ಮತ್ತು ಮಾರಿಯಾ ಸುಸೈರಾಜ್ ಮಧ್ಯೆ. ಒಂದು ಅಫೇರ್ ಶುರು ಆಗೇ ಹೋಯಿತು. ನೀರಜ್ ಗ್ರೋವರನಿಗೆ ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಚಲ್ಲಾಟ ಆಡುವ ಹುಚ್ಚು. ಈಕೆಗೆ ಸಿನಿಮಾ, ಸೀರಿಯಲ್ಲಿನಲ್ಲಿ ಅವಕಾಶ ಸಿಗುತ್ತದೆ ಎಂದರೆ ಏನೂ ಮಾಡಲು ಸಿದ್ಧ ಅನ್ನುವಂತಹ ಮನಸ್ಥಿತಿ. ಟಿಪಿಕಲ್ casting couch ಇದ್ದರೂ ಇರಬಹುದು.

ಹೀಗಿರುವಾಗ ಮಾರಿಯಾ ಸುಸೈರಾಜಳನ್ನು ಮದುವೆಯಾಗಬೇಕಿದ್ದ ಹುಡುಗನಿಗೆ ಇವರ ಅಫೇರ್ ಬಗ್ಗೆ ತಿಳಿಯಲು ಶುರು ಆಯಿತು. ಮೊದಲಿನಕ್ಕಿಂತ ಹೆಚ್ಚೇ possessive ಆದ ಆ ನೇವಿ ಕ್ಯಾಪ್ಟನ್.

ಒಂದು ದಿವಸ ರಾತ್ರಿ ನೀರಜ್ ಗ್ರೋವರ್ ಮಾರಿಯಾಳ ಮನಗೆ ಬಂದ. ಊಟ ಗೀಟ ಮಾಡಿ ಅವಳ ಜೊತೆಗೇ ರಾತ್ರಿ ಕಳೆಯುವ ಪ್ಲಾನ್ ಇತ್ತು. ಅದೇ ಸಮಯದಲ್ಲಿ ದೂರದ ಕೋಚಿನ್ ನಿಂದ ಜೆರೋಮಿ ಫೋನ್ ಮಾಡಿದ, ತನ್ನ ಹುಡುಗಿ ಮಾರಿಯಾ ಜೊತೆ ಮಾತಾಡಲು. ಅದು ಹೇಗೋ ಅವನಿಗೆ ಅಲ್ಲಿ ತನ್ನ ಹುಡುಗಿ ಜೊತೆ ಬೇರೊಬ್ಬ ಗಂಡಸು ಇರುವ ಸುಳಿವು ಹತ್ತಿಬಿಟ್ಟಿತು. ಫೋನ್ ಇಟ್ಟವನೇ ಸೀದಾ ಕೋಚಿನ್ ಏರ್ಪೋರ್ಟ್ ಗೆ ಬಂದು, ಮುಂಬೈಗೆ ಸಿಕ್ಕ ಮೊದಲ ವಿಮಾನ ಹತ್ತಿ, ಮುಂಜಾನೆ ಆರರ ಹೊತ್ತಿಗೆ ಮಾರಿಯಾಳ ಮುಂಬೈ ಫ್ಲಾಟ್ ಎದುರಲ್ಲಿ ನಿಂತು, ಕರೆಗಂಟೆ ಒತ್ತಿದಾಗ ಬಂದು ಬಾಗಿಲು ತೆಗೆದ ಮಾರಿಯಾ ಸುಸೈರಾಜ ಒಂದು ಕ್ಷಣ ಫುಲ್ ಥಂಡಾ ಹೊಡೆದಳು. ಬಾಗಿಲಲ್ಲಿ ನಿಂತಿದ್ದಾನೆ ಮುಂದೆ ಮದುವೆಯಾಗಬೇಕಿರುವ ಹುಡುಗ. ಒಳಗೆ ಬೆಡ್ರೂಮಿನಲ್ಲಿ ಮಂಚದ ಮೇಲೆ ನಗ್ನವಾಗಿ ಮಲಗಿರುವ ನೀರಜ್ ಗ್ರೋವರ್. ರಾತ್ರಿಯಿಡೀ ಇಬ್ಬರೂ ಕಬಡ್ಡಿ ಆಡಿದ್ದಕ್ಕೆ ಬೇಕಾದಷ್ಟು ಪುರಾವೆ ಎದ್ದು ಕಾಣುತ್ತಿವೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಳು ಮಾರಿಯಾ ಸುಸೈರಾಜ ಎಂಬ ನಟಿಮಣಿ.

ಕಣ್ಣಲ್ಲಿ ಕೆಂಡ ಕಾರುತ್ತಿದ್ದ ಜೆರೋಮ್ ಮಾರಿಯಾಳನ್ನು ಆಚೆ ತಳ್ಳಿ ಒಳಗೆ ಬಂದು ನೋಡಿದರೆ, ಆದ ಗದ್ದಲದಿಂದ ಆಗ ತಾನೇ ಮೈಮುರಿಯುತ್ತ ಏಳುತ್ತಿದ್ದ ನೀರಜ್ ಗ್ರೋವರ್, ಅರೆ ಬರೆ ಚಡ್ಡಿ ಹಾಕಿಕೊಂಡು, ಮಂಚದ ಮೇಲೆ ಬಿದ್ದುಕೊಂಡೇ ದಿನದ ಮೊದಲಿನ ಸಿಗರೇಟ್ ಹಚ್ಚಿದ್ದ. ಬೆಂಕಿ ಸಿಗರೇಟಿಗೇ ಕೊಟ್ಟಿದ್ದನಾದರೂ, ದ್ವೇಷದ ಬೆಂಕಿ ಜೆರೋಮನ ಎದೆಯಲ್ಲಿ ಭುಗ್ ಅಂದಿತ್ತು. ಜೆರೋಮ್ ಕಡೆ ನೋಡಿದ ನೀರಜ್, ರಾತ್ರಿಯಿಡಿ ನಿನ್ನ ಹುಡಿಗಿ ಜೊತೆ ಕಬಡ್ಡಿ ಆಡಿ ಬಿಟ್ಟೆ, ಏನು ಮಾಡ್ಕೊತ್ತಿಯೋ ಮಾಡಿಕೊ, ಏನು ತರ್ಕೊತ್ತೀಯೋ ತರ್ಕೋ ಅನ್ನುವ ಹಾಗೆ ಅವನ ಮುಖದ ಮೇಲೆ ಸಿಗರೇಟ್ ಹೊಗೆ ಬಿಟ್ಟ. ಕುಹಕ ನಗೆ ನಕ್ಕ.

ಆ ಜೆರೋಮ್ ಮ್ಯಾಥ್ಯೂಗೆ ಸಿಟ್ಟು ಅದೆಲ್ಲಿಂದ ಬಂತೋ, ತಲೆಯಲ್ಲಿ ಯಾವ ಯಾವ ನರ ನಾಡಿಯಲ್ಲಿ ಏನೇನು ಸಂಚಾರವಾಯಿತೋ ಗೊತ್ತಿಲ್ಲ. ಅಡಿಗೆಮನೆಗೆ ಹೋದವನೇ ಒಂದು ಚಾಕು ತಂದು, ಗಾಂಚಾಲಿ ಮಾಡಿ, ಅಪಹಾಸ್ಯ ಮಾಡಿದ್ದ ನೀರಜ್ ಗ್ರೋವರನನ್ನು ಮನಸೋ ಇಚ್ಛೆ ಇರಿದು ಇರಿದು ಕೊಂದ. ಆ ಪರಿ ಇರಿತಕ್ಕೆ ಒಳಗಾದ ನೀರಜ್ ಗ್ರೋವರ್ ಸತ್ತೇ ಹೋದ. ಜೆರೋಮಿಯ ತಲೆ ಇಷ್ಟರ ಮಟ್ಟಿಗೆ ಕೆಟ್ಟಿತ್ತು ಅಂದರೆ ಸತ್ತ ನೀರಜ್ ಗ್ರೋವರನ ಹೆಣ ಮಂಚದಿಂದ ಕೆಳಗೆ ತಳ್ಳಿ, ಅದೇ ಮಂಚದ ಮೇಲೆ ತಾನು ಮದುವೆಯಾಗಬೇಕಾದ ಮಾರಿಯಾಳನ್ನು ತಳ್ಳಿದ. ತಳ್ಳಿದವನೇ, ಪಕ್ಕದಲ್ಲಿ ರಕ್ತ ಹರಿಸುತ್ತ ಬಿದ್ದಿರುವ ಹೆಣವೊಂದು ಇದೆ ಅನ್ನುವದರ ಖಬರೂ ಇಲ್ಲದೆ, ಆಕೆಯೊಂದಿಗೆ ಮಿಲನ ಮಹೋತ್ಸವ ಆಚರಿಸಿ ಕೇಕೆ ಹಾಕಿಯೇ ಬಿಟ್ಟ. ಇಷ್ಟು ಮಾಡಿದ ಮೇಲೆ ಅವನ ಆವೇಶ ಇಳಿದಿತ್ತು. ಮಾಡಿದ ದೊಡ್ಡ ಲಫಡಾ ಬಗ್ಗೆ ಅರಿವಾಗಿತ್ತು.

ಈಗ ಮಾರಿಯಾ ಮತ್ತು ಆಕೆಯ ಪತಿಯಾಗಲಿದ್ದ ಜೆರೋಮ್ ಇಬ್ಬರೂ ಒಂದಾದರು. ಹೇಗಾದರೂ ಮಾಡಿ ನೀರಜ್ ಗ್ರೋವರ್ ಮರ್ಡರ್ ಮುಚ್ಚಿ ಹಾಕಲೇ ಬೇಕಾದ ಅನಿವಾರ್ಯತೆ. ಅವನ ಹೆಣವನ್ನು ಬಾತ್ರೂಮಿಗೆ ತೆಗೆದುಕೊಂಡು ಹೋದವರೇ, ಚಿಕ್ಕದಾಗಿ ಪೀಸ್ ಪೀಸ್ ಮಾಡಿ ಒಂದು ಗೋಣಿ ಚೀಲದಲ್ಲಿ ತುಂಬಿದರು. ಈ ಕಡೆ ಜೆರೋಮ್ ಮನೆ ಕ್ಲೀನ್ ಮಾಡುವ ಪ್ರಯತ್ನ ಮಾಡಿದರೆ, ಮಾರಿಯಾ ಸುಸೈರಾಜ್ ಹೆಣ ಸಾಗಿಸಲು ಗೆಳೆಯನೊಬ್ಬನ ಗಾಡಿ ತರಲು ಹೋದಳು. ಆಕೆ ಗಾಡಿ ತರುವ ಹೊತ್ತಿಗೆ, ಜೆರೋಮ್ ರೆಡಿ ಆಗಿದ್ದ. ಮುಂಬೈನಿಂದ ಸುಮಾರು ದೂರ ತೆಗೆದುಕೊಂಡು ಹೋಗಿ, ಪೆಟ್ರೋಲ್ ಹಾಕಿ, ನೀರಜ್ ಗ್ರೋವರನ ಹೆಣದ ತುಂಡುಗಳನ್ನು ಸುಟ್ಟೇ ಬಿಟ್ಟರು. ಎಲ್ಲ ಫಿನಿಶ್.

ಹೀಗೆ ಶವ ನಾಪತ್ತೆ ಮಾಡಿದ ಮಾರಿಯಾ ಸುಸೈರಾಜ್ ಮತ್ತು ಜೆರೋಮ್ ವಾಪಸ್ ಬಂದರು. ಜೆರೋಮ್ ಕೋಚಿನ್ ಗೆ ವಾಪಸ್ ಹೋದ. ಇತ್ತಕಡೆ ಮಾರಿಯಾ ಸುಸೈರಾಜ ಪೋಲೀಸ್ ಕಂಪ್ಲೇಂಟ್ ಕೊಡಲು ನೀರಜ್ ಗ್ರೋವರನ ಇತರೆ ಗೆಳಯ ಗೆಳತಿಯರೊಂದಿಗೆ ಲೋಕಲ್ ಪೋಲಿಸ್ ಸ್ಟೇಷನ್ ಗೆ ಹೋದಳು. ನೀರಜನ ಎಲ್ಲ ಗೆಳಯ ಗೆಳತಿಯರಿಂದ ಹೇಳಿಕೆ ಪಡೆದ ಪೊಲೀಸರು, ಇದನ್ನ ಒಂದು ಸಾದಾ ಕಾಣೆಯಾಗಿರುವ ಕೇಸ್ ಎಂದು ದಾಖಲಿಸಿಕೊಂಡು ಜಾಸ್ತಿ ಏನೂ ತನಿಖೆ ಮಾಡಲೇ ಇಲ್ಲ. ತನಿಖೆಯನ್ನೇ ಮಾಡಲಿಲ್ಲ ಅಂದ ಮೇಲೆ ಮಾರಿಯಾ ಸುಸೈರಾಜ ಮೇಲೆ ಸಂಶಯ ಬರುವದು ದೂರೇ ಉಳಿಯಿತು ಬಿಡಿ.

ಇತ್ತ ಕಡೆ ಕಾನ್ಪುರನಿಂದ ನೀರಜ್ ಗ್ರೋವರನ ತಂದೆ ತಾಯಿ ಕಳೆದುಹೋದ ಮಗನನ್ನು ಹುಡುಕಲು ಮುಂಬೈಗೆ ಬಂದು ಕೂತರು. ಲೋಕಲ್ ಪೊಲೀಸರು ಏನೂ ಹೆಚ್ಚು ಸಹಾಯ ಮಾಡಲಿಲ್ಲ. ಅಯ್ಯೋ, ಇಂತಹ ಕಾಣೆಯಾಗಿರುವವರ ಸಾವಿರ ಕೇಸ್ ಇರುತ್ತವೆ, ಹೋಗಿ, ಹೋಗಿ, ಅಂತ ಓಡಿಸಿ ಬಿಟ್ಟರು. ವೃದ್ಧ ತಂದೆ ತಾಯಿ ಮುಂಬೈನಲ್ಲಿ ಹುಚ್ಚರಂತೆ ಓಡಾಡಿದರು.

ಆಗ ಮುಂಬೈ ಕ್ರೈಂ ಬ್ರಾಂಚಿನ ಚೀಫ್ ಆಗಿದ್ದವರು ಇದೇ ರಾಕೇಶ ಮಾರಿಯಾ ಸಾಹೇಬರು. ಯಾರೋ ಹೇಳಿದರು ನೀರಜ್ ಗ್ರೋವರನ ವೃದ್ಧ ತಂದೆ ತಾಯಿಯರಿಗೆ, ನೀವು ಒಂದು ಸಲ ಹೋಗಿ ಮಾರಿಯಾ ಸಾಹೇಬರನ್ನು ಯಾಕೆ ನೋಡಬಾರದು? ಅವರನ್ನು ನೋಡಿ, ನಿಮ್ಮ ಮಗ ಕಳೆದು ಹೋದ ವಿಷಯ ತಿಳಿಸಿ. ಸಾಹೇಬರು ಏನಾದರೂ ಸಹಾಯ ಮಾಡಬಹುದು, ಅಂತ.

ಅದರಂತೆ ನೀರಜ್ ಗ್ರೋವರನ ವೃದ್ಧ ತಂದೆ ಒಂದು ದಿವಸ ಕ್ರೈಂ ಬ್ರಾಂಚ್ ಆಫೀಸ್ ಗೆ ಹೋಗಿ, ಜಾಯಿಂಟ್ ಕಮಿಷನರ್ ರಾಕೇಶ್ ಮಾರಿಯಾ ಅವರನ್ನು ನೋಡಬೇಕು ಅಂತ ವಿನಂತಿ ಮಾಡಿಕೊಂಡರು. ಮಾರಿಯಾ ಮೊದಲಿಂದಲೂ ಜನರಿಗೆ ಸುಲಭವಾಗಿ ಸಿಗುತ್ತಿದ್ದರು, ಬೆರೆಯುತ್ತಿದ್ದರು, ಅವರ ಕಷ್ಟ ಕೋಟಲೆ ಕೇಳುತ್ತಿದ್ದರು. ಹಾಗಾಗಿ ನೀರಜ ಗ್ರೋವರ್ ಅವರ ವೃದ್ಧ ತಂದೆಯನ್ನು ಭೆಟ್ಟಿ ಆಗೇ ಬಿಟ್ಟರು. ಸಾಹೇಬರ ಚೇಂಬರ್ ಒಳಗೆ ಬಂದ ವೃದ್ಧ ತಂದೆ, ತಮ್ಮ ಮಗ ನೀರಜ್ ಕಳೆದು ಹೋಗಿದ್ದು, ಲೋಕಲ್ ಪೊಲೀಸರು ಅದರ ಬಗ್ಗೆ ಏನೂ ಆಸಕ್ತಿ ವಹಿಸದೆ ಇರುವದನ್ನು ಎಲ್ಲ ವಿವರಿಸಿದರು. ಮಾರಿಯಾ ಸಾಹೇಬರಿಗೆ ಅದೇನು ಅನ್ನಿಸಿತೋ ಏನೋ ಅಥವಾ ಈ ಕೇಸ್ ಕೇವಲ ಒಬ್ಬ ಮನುಷ್ಯ ಕಾಣೆಯಾಗಿರುವ ಸಿಂಪಲ್ ಕೇಸ್ ಅಲ್ಲವೇ ಅಲ್ಲ ಅಂತ ಅವರ ಪೋಲೀಸ್ ಮನಸ್ಸಿಗೆ ಅನ್ನಿಸಿತೋ ಏನೋ ಗೊತ್ತಿಲ್ಲ. ನೀರಜ್ ಗ್ರೋವರ್ ಕೇಸನ್ನು ಆಗಿಂದಾಗೆ ಕ್ರೈಂ ಬ್ರಾಂಚಿಗೆ ವರ್ಗಾವಣೆ ಮಾಡಿಸಿಕೊಂಡೇ ಬಿಟ್ಟರು. ತನಿಖೆ ಮಾಡಲು ಅವರ ಖಾಸ್ ಇನ್ಸ್ಪೆಕ್ಟರ್ ರಾವ್ ರಾಣೆಯನ್ನು ನೇಮಕ ಮಾಡಿ, ನೀರಜ್ ಗ್ರೋವರ್ ತಂದೆಗೆ ಯಾವಾಗ ಬೇಕಾದರೂ ಫೋನ್ ಮಾಡಿ ಅಂತ ಆಶ್ವಾಸನೆ ಕೊಟ್ಟು ಕಳಿಸಿದರು. ಅದೊಂದು ದೊಡ್ಡ ಮಾನವೀಯ ನಡತೆ ಮಾರಿಯಾ ಸಾಹೇಬರಿಂದ. ಹಾಟ್ಸ್ ಆಫ್!

ಈಗ ಶುರುವಾಯಿತು ನೋಡಿ ಮಜಾ. ಕ್ರೈಂ ಬ್ರಾಂಚ್ ಪೊಲೀಸರು ಮಾಡುವ ತನಿಖೆ ಅಂದ್ರೆ ಅದರ ರೀತಿಯೇ ಬೇರೆ. ಒಂದು ಪದ್ಧತಿ ಪ್ರಕಾರ ತನಿಖೆ ಶುರು ಮಾಡಿದ ಇನ್ಸ್ಪೆಕ್ಟರ್ ರಾವ್ ರಾಣೆ ಎಲ್ಲ ವಿಷಯ ರಾಕೇಶ ಮಾರಿಯಾ ಅವರಿಗೆ ತಿಳಿಸುತ್ತಲೇ ಇದ್ದರು. ಒಂದು ದಿವಸ ನೀರಜ್ ಗ್ರೋವರನ ಎಲ್ಲ ಗೆಳಯ ಗೆಳತಿಯರನ್ನು ಹಾಗೇ ಸುಮ್ಮನೆ ಭೇಟಿಗೆಂದು ರಾಕೇಶ ಮಾರಿಯಾ ಅವರ ಕ್ರೈಂ ಬ್ರಾಂಚ್ ಆಫೀಸ್ ಗೆ ಇನ್ಸ್ಪೆಕ್ಟರ್ ರಾವ್ ರಾಣೆ ಕರೆ ತಂದರು.

ಹೇಳಿ ಕೇಳಿ ರಾಕೇಶ ಮಾರಿಯಾ ಮಾಸ್ಟರ್ investigator. ಸೂಪರ್ ಕಾಪ್. ಬಂದ ನೀರಜ್ ಗ್ರೋವರನ ಗೆಳಯ ಗೆಳತಿಯರಿಗೆ ಚಹಾ ಅದು ಇದು ಕುಡಿಸಿ, ಸುಮ್ಮನೆ ಹರಟೆ ಹೊಡೆದ ಹಾಗೆ ಮಾತಾಡಿದರು. ಮಾರಿಯಾ ಸುಸೈರಾಜಳಿಗೆ ಒಳಒಳಗೆ ಪುಕು ಪುಕು. ಕಳ್ಳನ ಜೀವ ಹುಳ್ಳ ಹುಳ್ಳಗೆ ಅಂದ ಹಾಗೆ. ಸ್ವಲ್ಪ ಜಾಸ್ತಿಯೇ ಮಾತಾಡತೊಡಗಿದಳು. ಸಾರ್, ನೀರಜ್ ಬಗ್ಗೆ ಏನಾರು ತಿಳಿಯಿತಾ? ಎಲ್ಲಿ ಹೋಗಿರಬಹುದು? ಯಾರ ಮೇಲಾದ್ರೂ ಸಂಶಯ ಇದೆಯಾ? ಅದು ಇದು ಅಂತ.

ಆಗಲೇ ಕ್ರೈಂ ಬ್ರಾಂಚ್ ತಂಡ ಮಾರಿಯಾ ಸುಸೈರಾಜ್ ಮೇಲೆ ಸಂಶಯ ಬಂದಿದೆ, ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿಬೇಕು, ಅಂತ ರಾಕೇಶ ಮಾರಿಯಾ ಅವರಿಗೆ ಹೇಳಿತ್ತು. ಇನ್ನೂ ಸ್ವಲ್ಪ ದಿವಸ ನೋಡೋಣ ಇರೀ ಅಂತ ಹೇಳಿ ಸುಮ್ಮನಾಗಿಸಿದ್ದರು ರಾಕೇಶ್ ಮಾರಿಯಾ.

My dear young lady, you are my number one suspect, ಅಂತ ಒಂದು ಬಾಣ ಕತ್ತಲಲ್ಲಿ ಬಿಟ್ಟೇ ಬಿಟ್ಟರು ರಾಕೇಶ ಮಾರಿಯಾ. ಎದುರಿಗೆ ಕೂತು ಮಳ್ಳಿಯಂತೆ ನಟಿಸುತ್ತಿದ್ದ ಮಾರಿಯಾ ಸುಸೈರಾಜಳ ಚಹರಾಪಟ್ಟಿ ಪೂರ್ತಿ ಬದಲಾದದ್ದನ್ನು ಗಮನಿಸದಷ್ಟು ಮೂರ್ಖರಲ್ಲ ರಾಕೇಶ ಮಾರಿಯಾ. ಎಲ್ಲರನ್ನೂ ಕಳಿಸಿಕೊಟ್ಟ ನಂತರ ತಮ್ಮ ಇನ್ಸ್ಪೆಕ್ಟರ್ ರಾವ್ ರಾಣೆಗೆ ರಾಕೇಶ ಮಾರಿಯಾ ಹೇಳಿದ್ದು ಒಂದೇ ಮಾತು: ಆಕೆಯನ್ನು ಹಿಡಿದು ಸರಿ ಮಾಡಿ ವಿಚಾರಿಸಿ. ಎಲ್ಲ ಹೊರಗೆ ಬರುತ್ತದೆ, ಅಂತ.

ಕ್ರೈಂ ಬ್ರಾಂಚ್ ಪೊಲೀಸರು ಹಿಡಿದು ತಂದು ಸ್ವಲ್ಪ ಬಿಸಿ ಮಾಡಿದ್ದೇ ಮಾಡಿದ್ದು ಮಾರಿಯಾ ಸುಸೈರಾಜ ಬೆಣ್ಣೆಯಂತೆ ಕರಗಿ ತುಪ್ಪದಂತೆ ಎಲ್ಲಾ ಮಾಹಿತಿ ಕೊಟ್ಟೇ ಬಿಟ್ಟಳು. ಅದರ ಪ್ರಕಾರ ಜೆರೋಮ್ ಕೂಡ ಬಂಧಿತನಾದ. ಮುಂದೆ ಇಬ್ಬರ ಮೇಲೂ ಕೋರ್ಟ್ ಒಳಗೆ ಕೇಸ್ ನಡೆಯಿತು. ಜೆರೋಮನಿಗೆ ದೊಡ್ಡ ಶಿಕ್ಷೆಯಾಗಿದೆ. ಮಾರಿಯಾ ಸುಸೈರಾಜ ಕೊಲೆಯ ಸಾಕ್ಷ್ಯ ನಾಶಮಾಡಿದ್ದಳು ಅನ್ನುವ ಆರೋಪ ಮಾತ್ರ ಹೊತ್ತಿದ್ದಳು. ಹಾಗಾಗಿ ಅವಳಿಗೆ ವಿಚಾರಣೆ ಸಮಯದಲ್ಲಿ ಕಳೆದ ಜೈಲು ಶಿಕ್ಷಯೇ ಸಾಕು ಅಂತ ಬಿಡುಗಡೆ ಮಾಡಲಾಯಿತು.

ಒಂದು ವೃದ್ಧ ತಂದೆಗೆ ಕೊಟ್ಟ ಭಾಷೆಯನ್ನು ರಾಕೇಶ ಮಾರಿಯಾ ಉಳಿಸಿಕೊಂಡಿದ್ದರು. ರಾಕೇಶ ಮಾರಿಯಾ ಪೋಲಿಸ್ ಅಧಿಕಾರಿಯಾದರೆ ಮಾರಿಯಾ ಸುಸೈರಾಜ ಅಪರಾಧಿ. ಅವರ ಅಡ್ಡೆಸರು ಈಕೆಯ ಹೆಸರು ಎರಡೂ ಒಂದೇ - ಮಾರಿಯಾ. ಈ ಕೇಸ್ ಮಾರಿಯಾ ಅವರ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿತು. (ಹೆಚ್ಚಿನ ಮಾಹಿತಿಗೆ - Death in Mumbai - ಪುಸ್ತಕ ಓದಿ)

ಮುಂದೆ ೨೬/೧೧/೨೦೦೮ ರಂದು LeT ಉಗ್ರರು ಬಂದು ಮುಂಬೈಯನ್ನು ಮಸಣ ಮಾಡಿ ಬಿಟ್ಟರು. ಲಿಯೋಪೋಲ್ಡ್ ಕೆಫೆ, ರೈಲ್ವೆ ಸ್ಟೇಷನ್, ತಾಜ್ ಹೋಟೆಲ್, ಒಬೆರಾಯ್ ಹೋಟೆಲ್ಲಿನಲ್ಲಿ ಮನಸೋ ಇಚ್ಛೆ ಗುಂಡು ಹಾರಿಸಿ ನೂರಾರು ಜನರನ್ನು ಕೊಂದರು. ಆವಾಗ ಸಹಿತ ರಾಕೇಶ ಮಾರಿಯಾ ಅವರೇ ಕ್ರೈಂ ಬ್ರಾಂಚಿನ ಮುಖ್ಯಸ್ಥರಾಗಿದ್ದರು. ಕಂಟ್ರೋಲ್ ರೂಮಿನಲ್ಲಿ ಕೂತು ಇಡೀ ಮುಂಬೈ ಪೋಲೀಸರನ್ನು ನಿಯಂತ್ರಿಸುವ ಜವಾಬ್ದಾರಿ ಅವರ ಮೇಲಿತ್ತು. ಸ್ಪಾಟಿಗೆ ಹೋಗಿ, ಲೈವ್ ಆಕ್ಷನ್ ನಲ್ಲಿ ಭಾಗವಹಿಸಬೇಕು ಅಂತ ಅವರಿಗೆ ತುಂಬಾ ಆಸೆ ಇತ್ತು. ಆದರೆ ಪೋಲಿಸ್ ಕಮಿಷನರ್ ಹಸನ್ ಗಫೂರ್ ಮಾರಿಯಾ ಅವರಿಗೆ ಕಂಟ್ರೋಲ್ ರೂಮಿನ ಚಾರ್ಜ್ ತೆಗೆದುಕೊಂಡು ಸಂಬಾಳಿಸುವಂತೆ ಆಜ್ಞೆ ನೀಡಿದ್ದರು. ಅದನ್ನೂ ಸಹಿತ ರಾಕೇಶ ಮಾರಿಯಾ ಒಳ್ಳೆಯ ರೀತಿಯಿಂದಲೇ ನಿಭಾಯಿಸಿದ್ದರು. ಸೆರೆ ಸಿಕ್ಕ ಕಸಬ್ ನನ್ನು ಅವರೇ ವಿಚಾರಣೆ ಮಾಡಿದ್ದರು. ಮುಂದೆ ೨೬/೧೧ ಸಿನೆಮಾ ಆದಾಗ ರಾಕೇಶ ಮಾರಿಯಾ ಪಾತ್ರವನ್ನ ನಾನಾ ಪಾಟೇಕರ್ ತುಂಬಾ ಚನ್ನಾಗಿ ಮಾಡಿದ್ದರು.

ಆ ಮೇಲೆ ಪ್ರಮೋಷನ್ ಸಿಕ್ಕಿ anti terrorist ತಂಡದ ಮುಖ್ಯಸ್ಥರಾಗಿ ಹೋಗಿದ್ದ ರಾಕೇಶ ಮಾರಿಯಾ ಈಗ ಮುಂಬೈ ನಗರಕ್ಕೆ ಕಮಿಷನರ್ ಆಗಿ ಬಂದಿದ್ದಾರೆ.

ಇಷ್ಟೆಲ್ಲ ಒಳ್ಳೆಯ ಪೋಲೀಸ್ ಕೆಲಸ ಮಾಡಿದ ಮಾರಿಯಾ ಮೇಲೆ ಯಾರೂ ಏನೂ ಟೀಕೆ ಮಾಡೇ ಇಲ್ಲವಾ? ಅಂತ ಕೇಳಿದರೆ ಉತ್ತರ ಸಹಿತ ಮತ್ತೆ ಪತ್ರಿಕೆ, ಪುಸ್ತಕಗಳಲ್ಲಿಯೇ ಸಿಗುತ್ತದೆ.

೨೬/೧೧/೨೦೦೮ ರಲ್ಲಿ LeT ಉಗ್ರರೊಂದಿಗೆ ಕಾದಾಡುತ್ತಲೇ ಮೃತರಾದ ಇನ್ನೊಬ್ಬ IPS ಅಧಿಕಾರಿ ಅಶೋಕ ಕಾಮಟೆ ಅವರ ಪತ್ನಿ, ವಿನೀತಾ ಕಾಮಟೆ, ೨೬/೧೧ ರ ದಾಳಿಯ ಸಮಯದಲ್ಲಿ ಆದ ಪೋಲೀಸ್ ವೈಫಲ್ಯದ ಬಗ್ಗೆ, ಕಂಟ್ರೋಲ್ ರೂಮಿನಲ್ಲಿ ಕೂತಿದ್ದ ರಾಕೇಶ ಮಾರಿಯಾ ಅವರ ಕಾರ್ಯ ವೈಖರಿ ಬಗ್ಗೆ, ಉಗ್ರರನ್ನು ಎದುರುಹಾಕಿಕೊಂಡು ಸೆಣಸುತ್ತಿದ್ದ ಪೋಲಿಸ್ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಮತ್ತು ಸರಿಯಾದ ರೀತಿಯಲ್ಲಿ ಸಹಾಯ ಒದಗಿಸುವಲ್ಲಿ ರಾಕೇಶ ಮಾರಿಯಾ ಪೂರ್ತಿ ವಿಫಲರಾದರು ಅಂತ ವಿನೀತಾ ಆರೋಪಿಸಿದ್ದು ಒಂದೇ ಅಲ್ಲದೆ ಅದಕ್ಕೆ ಪೂರಕ ಮಾಹಿತಿಯನ್ನು RTI ಮೂಲಕ ಪಡೆದು ಒಂದು ದೊಡ್ಡ ಇಶ್ಯೂ ಮಾಡಿದ್ದರು. ಅದನ್ನೆಲ್ಲ ವಿನೀತಾ ಕಾಮಟೆ 'To the last bullet' ಅನ್ನುವ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಒಂದು ಒಳ್ಳೆಯ ಪುಸ್ತಕ.

ಇನ್ನು ಎಸ್.ಎಮ್. ಮುಶ್ರೀಫ್ ಎಂಬ ಮಹಾರಾಷ್ಟ್ರದ ಮಾಜಿ IPS ಅಧಿಕಾರಿ 'Who killed Karkare?' ಅಂತ ಒಂದು ಪುಸ್ತಕ ಬರೆದಿದ್ದಾರೆ. ಅದರಲ್ಲಿ ರಾಕೇಶ ಮಾರಿಯಾ ಮೇಲೆ ನೇರವಾಗಿ ಯಾವದೇ ಆಪಾದನೆ ಮಾಡಿರದಿದ್ದರೂ, ಮುಶ್ರೀಫ್ ಕೆಲವೊಂದು ಕಠಿಣ ಪ್ರಶ್ನೆಗಳನ್ನು ಮಾತ್ರ ಕೇಳುತ್ತಾರೆ. ಕೆಲವೊಂದು alternative hypothesis ಅನ್ನುವ ಹಾಗೆ ತಮ್ಮದೇ ಆದ ಥಿಯರಿಗಳನ್ನೂ ಹರಿ ಬಿಡುತ್ತಾರೆ. ಅವರ ಮುಖ್ಯ ಪ್ರಶ್ನೆ ಅಂದ್ರೆ ಇಷ್ಟೇ - ನಮಗೆ ಹೇಳಿದ ಹಾಗೆಯೇ ೨೬/೧೧ ಆಯಿತಾ ಅಥವಾ ಹೊರಬರದಿರುವ ಸತ್ಯಗಳೂ ಇನ್ನೂ ಇವೆಯೋ ಹೇಗೆ? ತೆರೆದ ಮನಸ್ಸಿನಿಂದ ಓದುವವರಿಗೆ ಅದೂ ಒಂದು ಒಳ್ಳೆಯ ಪುಸ್ತಕವೇ.

The Siege: 68 Hours Inside the Taj Hotel ಎಂಬ ಪುಸ್ತಕದಲ್ಲಿ ಆ ಹೊತ್ತಿನ ಮುಂಬೈ ಪೋಲೀಸ್ ವ್ಯವಸ್ಥೆ ಆ ತರಹದ ಉಗ್ರರ ದಾಳಿಯನ್ನು ಎದುರಿಸುವಲ್ಲಿ ಎಷ್ಟು ದುರ್ಬಲವಾಗಿತ್ತು ಎಂಬುದನ್ನ ಕಟುವಾಗಿ ಟೀಕಿಸಿದೆ. ರಾಕೇಶ ಮಾರಿಯಾ ಮತ್ತು ಸುಮಾರು ಹಿರಿಯ ಅಧಿಕಾರಿಗಳನ್ನು ಟೀಕಿಸಲಾಗಿದೆ.

ಇದೆಲ್ಲದರ ಮಧ್ಯೆ ಸೂಪರ್ ಕಾಪ್ ರಾಕೇಶ ಮಾರಿಯಾ ಮುಂಬೈನ ಟಾಪ್ ಕಾಪ್ ಆಗಿ ನೇಮಕವಾಗಿದ್ದಾರೆ. ಅವರಿಗೊಂದು ಅಭಿನಂದನೆ. ಇನ್ನೂ ಒಳ್ಳೆ ಕೆಲಸ ಅವರಿಂದ ಆಗಲಿ.

** ಇನ್ನೂ ಸ್ವಲ್ಪ ಹೆಚ್ಚಿನ ಮಾಹಿತಿ ಮುಂದಿನ ಬ್ಲಾಗ್ ಪೋಸ್ಟಿನಲ್ಲಿದೆ. ಓದಿ.

8 comments:

Harihar Bhat said...

ಓದಲು ಸಾಕಸ್ಟು ವಿಷಯ ನೀಡಿದ್ದೀರಿ. ಧನ್ಯವಾದಗಳು.

Mahesh Hegade said...

ಧನ್ಯವಾದ, ಹರಿಹರ ಭಟ್ಟರಿಗೆ.

Girish Kamat said...

hai Mahesh thanks for the article....

Mahesh Hegade said...

Thanks Kamat!

Vimarshak Jaaldimmi said...


Very interesting!

Hope the super-cop makes Mumbai a much better place. It may help him tactically to drastically enhance his K9 Jummies team.

sujith said...

Its really good

sujith said...

Its really good

Mahesh Hegade said...

Thank you, Sujith