Wednesday, April 30, 2014

ಎಲ್ಲಾದರೂ ಇರು. ಎಂತಾದರೂ ಇರು. 'Insider Trading' ಮಾತ್ರ ಮಾಡದಿರು. ಮಾಡಿದರೂ ಸಿಕ್ಕಿಬಿದ್ದು ಜೈಲಿಗೆ ಮಾತ್ರ ಹೋಗದಿರು!

ಭಾರತೀಯ ಮೂಲದ ಅಮೇರಿಕನ್ ರಜತ್ ಗುಪ್ತಾ ಎಂಬ ವೈಟ್ ಕಾಲರ್ ಕ್ರಿಮಿನಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಉನ್ನತ ನ್ಯಾಯಾಲಯ ತಿರಸ್ಕರಿಸಿ, ಕಚಪಚಾ ಅಂತ ಮುದ್ದೆ ಮಾಡಿ, ರದ್ದಿ ಪೇಪರಿನಂತೆ ಕಸದ ಬುಟ್ಟಿಗೆ ಒಗೆದು ಬಿಟ್ಟಿದೆ. ಇದರೊಂದಿಗೆ ಭಾರತೀಯ ಮೂಲದ ದೊಡ್ಡ ಕಾರ್ಪೊರೇಟ್ ಕುಳವೊಂದು, ಕೇಸರಿ ಬಣ್ಣದ ಜೈಲು ಕೈದಿಗಳ ಜಂಪ್ ಸೂಟ್ ಹಾಕಿಕೊಂಡು, ಅಲುಮಿನಿಯಂ ತಟ್ಟೆ ಬಟ್ಟಲು ಹಿಡಕೊಂಡು, ಸಾಮಾನ್ಯ ಕೈದಿಯಂತೆ ಅಮೇರಿಕಾದ ಜೈಲಿನಲ್ಲಿ ಎರಡು ವರ್ಷ ಇದ್ದು ಬರಲಿಕ್ಕೆ ತಯಾರಾಗತೊಡಗಿದೆ. 

ರಜತ್ ಗುಪ್ತಾ - ೬೨ ವರ್ಷದ ದೊಡ್ಡ ಕಾರ್ಪೊರೇಟ್ ಕುಳ. ಮಾತೆತ್ತಿದರೆ ಬಿಲ್ ಕ್ಲಿಂಟನ್, ಕೋಫಿ ಅನ್ನನ್ ಅನ್ನುತ್ತಿದ್ದವನ ಇವತ್ತಿನ ಪರಿಸ್ಥಿತಿ ಬರೋಬ್ಬರಿ ಅಕ್ಕನ್, ಅಮ್ಮನ್ ಆಗಿ ಬಿಟ್ಟಿದೆ. IIT Entrance ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ೧೫ ನೆ ರಾಂಕ್ ಬಂದಿದ್ದ ಮಹಾನುಭಾವ. IIT ಡೆಲ್ಲಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ. ನಂತರ ಸೀದಾ ವಿಶ್ವವಿಖ್ಯಾತ ಹಾರ್ವರ್ಡ್ ಯೂನಿವರ್ಸಿಟಿಗೆ ಪೂರ್ಣ ಶಿಷ್ಯವೇತನದೊಂದಿಗೆ MBA ಪ್ರವೇಶ. ನಂತರ McKinsey ಎಂಬ strategic consulting ಕಂಪನಿಯಲ್ಲಿ ಅಖಂಡ ಮೂವತ್ತು ವರ್ಷ ನೌಕರಿ. ಮೂರು ಸಾರಿ ಸತತವಾಗಿ ಮ್ಯಾನೇಜಿಂಗ್ ಡೈರೆಕ್ಟರ್ ಅಂತ ಆಯ್ಕೆ. ಓಬಾಮನಿಗೆ ಖಾಸ್. ಮನಮೋಹನ್ ಸಿಂಗ್, ಅಂಬಾನಿ, ಟಾಟಾ, ಬಿರ್ಲಾ ಎಲ್ಲ ಕ್ಲೋಸ್. Indian School of Business ಎಂಬ ಪ್ರಸಿದ್ಧ MBA ಸಂಸ್ಥೆಯ ಸ್ಥಾಪಕ ಕೂಡ. ಜಗತ್ತಿನ ಮೂಲೆ ಮೂಲೆಯಲ್ಲಿ ವ್ಯಾಪಕ ಉನ್ನತ ಸಂಪರ್ಕವುಳ್ಳ ವ್ಯಕ್ತಿ. ತಂದೆ ಸ್ವಾತಂತ್ರ ಹೋರಾಟಗಾರರು. ತನ್ನ ಹದಿಹರೆಯದಲ್ಲಿಯೇ ತಬ್ಬಲಿಯಾಗಿ, ತಂಗಿ, ತಮ್ಮಂದಿರನ್ನು ಸಾಕಿದ ಧೀರ.

ನಾನು ಕ್ರಿಮಿನಲ್ಲೇ? ಅನ್ನುವ ಭಂಗಿಯಲ್ಲಿ ರಜತ್ ಗುಪ್ತಾ

ಇಂತಹ ಮಹಾನುಭಾವ insider trading ಮಾಡಲು ಹೋಗಿ ಪೂರ್ತಿ ಬರ್ಬಾದ ಆಗಿ ಜೇಲಿಗೆ ಹೊರಟಿದ್ದಾನೆ. ಸುಮಾರು ಐದು ವರ್ಷದಿಂದ ಕೋರ್ಟಿನಲ್ಲಿ ಗುದ್ದಾಡಿಯೇ ಗುದ್ದಾಡಿದ. ಮಿಲಿಯನ್ ಗಟ್ಟಲೆ ಡಾಲರ್ ದಾನ ಧರ್ಮ ಮಾಡಿದ್ದೇನೆ ಅಂತ ತೋರಿಸಿದ. ಬಿಲ್ ಗೇಟ್ಸ್ ನಿಂದ ಹಿಡಿದು, ಕೋಫಿ ಅನ್ನನ್ ತನಕ ಎಲ್ಲರಿಂದ ಶಿಫಾರಸು ಪತ್ರ ತಂದ. ಜೈಲು ಬೇಡ. ಆಫ್ರಿಕಾದ ರವಾಂಡಾಗೆ ಕಳಿಸಿಬಿಡಿ. ಅಲ್ಲಿದ್ದು ಸಮಾಜ ಸೇವೆ ಮಾಡುತ್ತೇನೆ, ಅಂತ ಅಂದ. ಏನೂ ಇಲ್ಲ. ಸುಮ್ಮನೆ ನಡಿ ಜೈಲಿಗೆ, ಅನ್ನುವ ರೀತಿಯಲ್ಲಿ ಅವನ ಮೇಲ್ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಚಡಾ ಬಡಾ ಅನ್ನುವಂತೆ ಬಾರಿಸಿ ಬಿಟ್ಟಿದೆ. ಇದೇ ಜೂನ್ ೧೭ ರಂದು ಮಧ್ಯಾನ್ಹ ೨ ಘಂಟೆಗೆ ಜೈಲಿಗೆ ಬಂದು ರಿಪೋರ್ಟ್ ಮಾಡು ಅಂತ ಹೇಳಿ, ಇವನ ನಸೀಬದ ಮೇಲೆಯೇ ಹೊಡೆದಂತೆ ಮೇಜಿನ ಮೇಲೆ ತಮ್ಮ ಸುತ್ತಿಗೆ ಕುಟ್ಟಿ, ನ್ಯಾಯಾಧೀಶರು ಎದ್ದು ಹೋಗಿದ್ದಾರೆ.

ದೀಪಾವಳಿ ದಿವಸದಂದೇ ಅರೆಸ್ಟ್ ಆಗುವಂತಹ ಲಫಡಾ ಏನು ಮಾಡಿಕೊಂಡಿದ್ದ ಈ ಪುಣ್ಯಾತ್ಮ ಅಂತ ನೋಡುತ್ತ ಹೋದರೆ ಸಿಗುತ್ತದೆ ಒಂದು ಭಯಾನಕ ವೈಟ್ ಕಾಲರ್ ಕ್ರೈಂ - insider trading (trading on the basis of insider information)

ಮೊದಲೇ ಹೇಳಿದಂತೆ ಈ ರಜತ್ ಗುಪ್ತಾ ದೊಡ್ಡ ಕಾರ್ಪೊರೇಟ್ ಕುಳ. ರಿಟೈರ್ ಆದ ನಂತರ ಸುಮಾರು ಕಂಪನಿಗಳ ಡೈರೆಕ್ಟರ್ (in the board of directors) ಆದ. ಅವೆಲ್ಲ ಷೇರುಪೇಟೆಯಲ್ಲಿ publicly traded companies. ಡೈರೆಕ್ಟರ್ ಆಗಿದ್ದಕ್ಕೆ ಕಂಪನಿ ಒಳಗಿನ ರಹಸ್ಯ ವಿಷಯ ತಿಳಿಯುತ್ತಿತ್ತು. ಕಂಪನಿಯ ಶೇರು ಬೆಲೆ ಮೇಲೆ ಹೋಗುತ್ತದೆಯೋ, ಕೆಳಗೆ ಹೋಗುತ್ತದೆಯೋ ಅಂತ ನಿರ್ಧರಿಸಲಿಕ್ಕೆ ಬೇಕಾಗುವಂತಹ ಖಾಸ್ ಮಾಹಿತಿ. ಅಂತಹ ಮಾಹಿತಿಯನ್ನು ರಹಸ್ಯವಾಗಿ ಒಬ್ಬ ಹೆಜ್ ಫಂಡ್ (hedge fund) ಖದೀಮನಿಗೆ ಪೂರೈಸಿ, ಅನೇಕ ವಿಧವಾದ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಕಾಯಿದೆ ಉಲ್ಲಂಘನೆ ಮಾಡಿದ್ದಾನೆ, ತನಗೆ ಬೇಕಾದವರಿಗೆ ಮಿಲಿಯಗಟ್ಟಲೆ ಹಣ ಕಾಯಿದೆ ಬಾಹಿರ ಮಾಡಿಕೊಳ್ಳಲು ಪೂರ್ತಿ ಸಹಕರಿಸಿದ್ದಾನೆ ಅಂತ ಈ ರಜತ್ ಗುಪ್ತಾ ಮೇಲಿನ ಆಪಾದನೆ.

ರಾಜ್ ರಾಜರತ್ನಂ - ಶ್ರೀಲಂಕಾ ಮೂಲದ ತಮಿಳ. ಪಕ್ಕಾ LTTE. LTTE ಗೆ ಹಲವಾರು ಮಿಲಿಯನ್ ಡಾಲರ್ ದೇಣಿಗೆ ಕೊಡುತ್ತಿದ್ದ. ಒಂದು ಕಾಲದಲ್ಲಿ ತಾನೂ ಸಹಿತ ತಮಿಳು ಬಂಡುಕೋರರ ಜೊತೆ ಇದ್ದೆ, ಕಿವಿ ಪಕ್ಕದಲ್ಲೇ ಗುಂಡು ಹಾರಿ ಹೋಗಿತ್ತು, LTTE ಪ್ರಭಾಕರನ್ ತುಂಬ ಕ್ಲೋಸ್, ಅಂತೆಲ್ಲ ಭೋಂಗು ಬಿಡುತ್ತ, ಇಲ್ಲದ ಸಲ್ಲದ ರೋಚಕ ಕಥೆ ಹೇಳುತ್ತ ಎಲ್ಲರನ್ನೂ ಇಂಪ್ರೆಸ್ ಮಾಡುತ್ತಿದ್ದ. ಅವನ ಕಿವಿ ಪಕ್ಕ ಗುಂಡೇ ಹಾರಿ ಹೋಯಿತೋ ಅಥವಾ ಕಾಗೆಯೇ ಹಾರಿ ಹೋಯಿತೋ ಅಥವಾ ಇವನೇ ಹಾಗಂತ  'ಕಾಗೆ ಹಾರಿಸಿದನೋ' ಗೊತ್ತಿಲ್ಲ. ಈ ರಾಜ ರಾಜರತ್ನಂ ಅನ್ನುವ ಲಂಕಾದ ರಾವಣ ಮಾತ್ರ ಎಲ್ಲರ ಕಿವಿ ಮೇಲೆ ಹೂವಂದೇ ಏನು ಇಡೀ ಲಾಲ್ ಬಾಗ್, ಕಬ್ಬನ್ ಪಾರ್ಕ್ ಎಲ್ಲ ಇಟ್ಟು ಬಿಟ್ಟಿದ್ದ.

ಈ ರಾಜ್ ರಾಜರತ್ನಂ ದೊಡ್ಡ ಹೆಜ್ ಫಂಡ್ ಕುಳ. ದೊಡ್ಡ ದೊಡ್ಡ ಮಂದಿಯಿಂದ ದೊಡ್ಡ ದೊಡ್ಡ ಮೊತ್ತ ಸಂಗ್ರಹಿಸಿ, ಅವನ್ನೆಲ್ಲ ತುಂಬಾ ತಲೆ ಉಪಯೋಗಿಸಿ invest ಮಾಡಿ, ದೊಡ್ಡ ಪ್ರಮಾಣದ returns ಕೊಡಿಸುವದು ಇವನ ಉದ್ಯೋಗ. ಮ್ಯೂಚುಯಲ್ ಫಂಡ್ ಮ್ಯಾನೇಜರ್ ಇದ್ದ ಹಾಗೆ. ಸಾವಿರ ಡಾಲರ್ ಹಾಕುವ ತಾಕತ್ತು ಇದ್ದ ಆರ್ಡಿನರಿ ಮಂದಿಗೆ ಮ್ಯೂಚುಯಲ್ ಫಂಡ್. ಮಿಲಿಯನ್ ಡಾಲರ್ ಹಾಕಿ, ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಂಡು, ಒಂದಕ್ಕೆ ನಾಕು ಪಟ್ಟು ದುಡ್ಡು ಬೇಗನೆ ಮಾಡಿಕೊಳ್ಳಬೇಕು ಅನ್ನುವವರಿಗೆ ಹೆಜ್ ಫಂಡ್. ಅಂತಹ ಒಂದು ಹೆಜ್ ಫಂಡ್ ಈ ರಾಜ್ ರಾಜರತ್ನಂ ಇಟ್ಟಿದ್ದ. ಮೊದಲಿನ ಕೆಲ ವರ್ಷ ಸಿಕ್ಕಾಪಟ್ಟೆ ರಿಟರ್ನ್ಸ್ ಮಾಡಿಕೊಟ್ಟಿದ್ದ. ವೈಯಕ್ತಿಕ ಮಟ್ಟದಲ್ಲಿ ಸ್ವತಹ ಅವನೇ ಬಿಲಿಯನಿಯರ್ ಆಗಿ ವಿಶ್ವದ ನಾಕುನೂರು ಶ್ರೀಮಂತರ ಪಟ್ಟಿಯಲ್ಲಿ ಬಂದು ಬಿಟ್ಟಿದ್ದ. ಮತ್ತೆ ಎಲ್ಲಿಯೋ ಅಬ್ಬೇಪಾರಿ ತಮಿಳ ಅಂತ ಮಾಡಿಬಿಟ್ಟೀರಿ! ಇವನೂ ಸಹಿತ ಇಂಗ್ಲೆಂಡ್ ನಲ್ಲಿ ಓದಿ, ನಂತರ ಖ್ಯಾತ ವಾರ್ಟನ್ ನಿಂದ MBA ಮಾಡಿಕೊಂಡು, ವಿಶ್ವದ ಶೇರು ಮಾರುಕಟ್ಟೆಯ ಕೇಂದ್ರವಾದ ನ್ಯೂಯಾರ್ಕ್ ನಲ್ಲಿ ದೊಡ್ಡ ದೊಡ್ಡ ಕೆಲಸ ಮಾಡಿ, ಒಂದು ಸಂಸ್ಥೆಯ ಮುಖ್ಯಸ್ಥನೂ ಆಗಿ, ತಿಂಗಳ ಕೇವಲ ಲಕ್ಷ ಡಾಲರ್ ಸಂಬಳ ಯಾರಿಗೆ ಬೇಕ್ರೀ!? ಸ್ವಂತ ಹೆಜ್ ಫಂಡ್ ನಡೆಸಿ, ಬಿಲಿಯನ್ ಗಟ್ಟಲೆ ಕಮಾಯಿಸುತ್ತೇನೆ, ಅಂತ ಹೊರಬಂದು, ಹೇಳಿದಂತೆ ಮಾಡಿ ತೋರಿಸಿದ್ದ ಧೀರ.

ರಾಜ್ ರಾಜರತ್ನಂ. ಹಡಬೆ ರೊಕ್ಕದ ಮಜಾನೇ ಬೇರೆ!

ಈ ಮಹಾನುಭಾವರೆಲ್ಲರ ಚಡ್ಡಿ ಹೇಗೆ ಕಳಚಿ ಬಿದ್ದಿತು ಅಂತ ನೋಡುತ್ತ ಹೋದರೆ ಅದೇ ಒಂದು ರೋಚಕ ವೃತ್ತಾಂತ.

ರೋಮಿ ಖಾನ್ - ಭಾರತೀಯ ಮೂಲದ ಪಂಜಾಬಿ ಮಹಿಳೆ. ಬಾಂಗ್ಲಾದೇಶಿ ಒಬ್ಬನನ್ನು ಮದುವೆ ಆಗಿ ಖಾನ್ ಆಗಿದ್ದಳು. ಇವಳೂ ಭಯಂಕರ ಪ್ರತಿಭಾವಂತೆ. ದೊಡ್ಡ ದೊಡ್ಡ ಡಿಗ್ರಿ ಮಾಡಿಕೊಂಡು ಇಂಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದೆಂಗೊ ಆಗಿ ರಾಜ್ ರಾಜರತ್ನಂ ಪರಿಚಯವಾಗಿದ್ದ. ಬಹಳ ವರ್ಷದ ಹಿಂದೆಯೇ ಇಂಟೆಲ್ ಕಂಪನಿಯ ರಹಸ್ಯ ಮಾಹಿತಿಯೆಲ್ಲ ಕದ್ದು, ರಾಜನಿಗೆ ಫ್ಯಾಕ್ಸ್ ಮಾಡುತ್ತಿದ್ದಳು. ಅದನ್ನು ಉಪಯೋಗಿಸಿಕೊಂಡು ರಾಜ್ ಶೇರು ಮಾರುಕಟ್ಟೆಯಲ್ಲಿ ಬಿಂದಾಸ್ ದುಡ್ಡು ಮಾಡುತ್ತಿದ್ದ. ಇವಳಿಗೂ ಪ್ರಸಾದ ಕೊಡುತ್ತಿದ್ದ. ಇಂಟೆಲ್ ಕಂಪನಿಗೆ ಸಂಶಯ ಬಂತು. ಫ್ಯಾಕ್ಸ್ ಮಷೀನ್ ಮೇಲೆ ಎರಡು ರಹಸ್ಯ ಕ್ಯಾಮೆರಾ ಹಾಕಿಸಿಟ್ಟರು. ರೋಮಿಯ ಕಾರ್ನಾಮೆಯಲ್ಲ ಬಯಲಾಯಿತು. FBI ಗೆ ಹಿಡಿದು ಕೊಟ್ಟ ಇಂಟೆಲ್ ಆಕೆಯನ್ನು ನೌಕರಿ ಬಿಟ್ಟು ಓಡಿಸಿತ್ತು. ಅದೆಂಗೊ ಮಾಡಿ FBI ಗೆ, ಕೋರ್ಟಿಗೆ ಏನೇನೋ ಹೇಳಿ ದೊಡ್ಡ ಮಟ್ಟದ ಶಿಕ್ಷೆಯಿಂದ ಪಾರಾಗಿ ಬಂದಿದ್ದಳು ರೋಮಿ. ಆದ್ರೆ ಹಡಬೆ ದುಡ್ಡಿನ ಹುಚ್ಚು ಬಿಟ್ಟಿರಲಿಲ್ಲ. ತನ್ನ ಹಳೆಯ ಗೆಳಯ ರಾಜ್ ರಾಜರತ್ನಂ ಜೊತೆ ಸಂಪರ್ಕದಲ್ಲಿ ಇದ್ದಳು. ಇಂಟೆಲ್ ಕಂಪನಿ ಬಗ್ಗೆ ಮಾಹಿತಿ ಕೊಡಲಿಕ್ಕೆ ಸಾಧ್ಯವಿಲ್ಲದಿದ್ದರೆ ಏನಾಯಿತು. ಬೇರೆ ಕಂಪನಿಗಳಲ್ಲಿ ಇದ್ದ ಗೆಳೆಯರು, ಆಪ್ತರಿಂದ ರಹಸ್ಯ ಮಾಹಿತಿ ತೆಗೆದು ರಾಜನಿಗೆ ಮಾಹಿತಿ ಕೊಟ್ಟು, ಅವನಿಂದ ಹಡಬೆ ದುಡ್ಡು ಸಂಪಾದಿಸಿ ಅದ್ದೂರಿಯ ಜೀವನ ನಡೆಸುತ್ತಿದ್ದಳು.

೨೦೦೮, ೨೦೦೯ ರ ಸಮಯ. ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿ ಎಕ್ಕುಟ್ಟಿ ಹೋಗುತ್ತಿತ್ತು. ಉರಿಯುವ ಮನೆಯಲ್ಲಿಯೇ ಗಳ ಹಿರಿದು, ತಮ್ಮ ತಮ್ಮ ಬೀಡಿ ಹಚ್ಚಿಕೊಂಡವರು ಈ insider trading ಮಾಡಿದ ಮಂದಿ. ಪ್ರತಿ ದಿನ ಶೇರು ಮಾರುಕಟ್ಟೆ ೨೦%, ೩೦% ಮೇಲೆ ಕೆಳಗೆ ಆಗಿದ್ದೂ ಇತ್ತು. ಹಾಗಿದ್ದಾಗ  ಸರಿಯಾದ ರಹಸ್ಯ ಮಾಹಿತಿ ಸಿಕ್ಕರೆ ರಾಜರತ್ನಂ ತರಹದ ಜನ ದಿನಕ್ಕೆ ಮಿಲಿಯನ್ ಡಾಲರ್ ಗಟ್ಟಲೆ ಹಡಬೆ ದುಡ್ಡು ಮಾಡಿಕೊಂಡು ಉದ್ಧಾರವಾಗಿ ಹೋದರು. ಶೇರುಪೇಟೆಯಲ್ಲಿ ದುಡ್ಡು ಹಾಕಿದ್ದ ಬಡಪಾಯಿಗಳು ಪೂರ್ತಿ ಬರಬಾದಾಗಿ, ಹಾಕ್ಕೊಂಡಿದ್ದ ಅಂಗಿ ಪ್ಯಾಂಟ್ ಸಹಿತ ಕಳೆದುಕೊಂಡು ನಿರ್ನಾಮವಾಗಿ ಹೋಗುತ್ತಿದ್ದರೆ, ರಾಜ್ ರಾಜರತ್ನಂ ತನ್ನ ಇಡೀ ಕಂಪನಿಯನ್ನು ಕರೆದುಕೊಂಡು ಆಫ್ರಿಕಾಕ್ಕೆ ಸಫಾರಿ ನೋಡಲು ಹೋದೆ, ವೆಸ್ಟ್ ಇಂಡೀಸ್ ಗೆ ಕ್ರಿಕೆಟ್ ಮ್ಯಾಚ್ ನೋಡಲು ಹೋದೆ ಅಂತ ಉಡೀಸ್ ಅಂತ ಮೋಜು ಉಡಾಯಿಸುತ್ತಿದ್ದ.

FBI ಏಜೆಂಟರು ಹಳೆ ಕಳ್ಳರು ಸುಳ್ಳರ ಮೇಲೆ ಯಾವಾಗಲೂ ಕಣ್ಣಿಟ್ಟಿರುತ್ತಾರೆ. ಜೊತೆಗೆ SEC (Securities Exchange Commission) ಎಂಬ ಸಂಸ್ಥೆ ಸಹ. ಏನೋ ಸಂಶಯದ ಮೇಲೆ ರೋಮಿ ಖಾನ್, ರಾಜ್ ರಾಜರತ್ನಂ ಸಂಬಂಧವನ್ನು ಕೆದಕತೊಡಗಿದರು. ಸಂಶಯ ಮತ್ತೂ ಬಲವಾಯಿತು. ರಾಜರತ್ನಂ ಫೋನ್ ಟ್ಯಾಪ್ ಮಾಡಲು ಪರ್ಮಿಷನ್ ತೆಗೆದುಕೊಂಡು ಬಂದು, ಸಂಭಾಷಣೆ ಕೇಳಲು ಶುರು ಮಾಡಿದರು ನೋಡಿ! ಎಲ್ಲ ಬಣ್ಣ ಬಯಲಾಗತೊಡಗಿತು.

ಅನಿಲ್ ಕುಮಾರ್ - ಇವನೂ ಮಹಾ ಪ್ರತಿಭಾವಂತ. IIT ಮುಂಬೈ ಪದವಿಧರ. ಡಿಗ್ರಿ ಮುಗಿಯುತ್ತಿದ್ದಂತೆ ಲಂಡನ್ನಿನ ಇಂಪೀರಿಯಲ್ ಕಾಲೇಜಿನಿಂದ ಪೂರ್ತಿ ಸ್ಕಾಲರ್ಷಿಪ್ ಸಿಕ್ಕಿತು. ಅತ್ಯಂತ ಫೇಮಸ್ ಡೀ ಬೀರ್ಸ್ ಸ್ಕಾಲರ್ಷಿಪ್. IIT ಮುಂಬೈ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅದು ಸಿಕ್ಕಿದ್ದು. ಜೊತೆಗೆ ಅಮೇರಿಕಾದ ವಾರ್ಟನ್ ನಿಂದಲೂ MBA ಗೆ ಅಡ್ಮಿಶನ್ ಸಿಕ್ಕಿತ್ತು. ಪೂರ್ತಿ ಶಿಷ್ಯವೇತನದೊಂದಿಗೆ. ನಮ್ಮ IIT ಗೆ ಮೊಟ್ಟ ಮೊದಲ ಬಾರಿಗೆ ಇಂಪೀರಿಯಲ್ ಕಾಲೇಜಿನಿಂದ ಡೀ ಬೀರ್ಸ್ ಸ್ಕಾಲರ್ಷಿಪ್ ಬಂದಿದೆ. ಅನಿಲ್, ನೀನು ಅದನ್ನೇ ಸ್ವೀಕರಿಸಿ, ಅಲ್ಲಿಯೂ ನಿನ್ನ ಪ್ರತಿಭೆ ತೋರಿಸಿ, IIT ಮುಂಬೈ ಕೀರ್ತಿಪತಾಕೆಯನ್ನು ಅಲ್ಲಿಯೂ ಹಾರಿಸಿ ಬರಲೇಬೇಕು. ವಾರ್ಟನ್ ನಲ್ಲಿ ನಂತರವೂ MBA ಮಾಡಲು ಸಾಧ್ಯ, ಅಂತ  IIT ಮುಂಬೈ ಮಾಸ್ತರರೆಲ್ಲ ಪರಿಪರಿಯಾಗಿ ಹೇಳಿದರು. ಅನಿಲ ಕುಮಾರ್ ವಿಚಾರ ಮಾಡಿದ. ವಾರ್ಟನ್ ಗೆ ಪತ್ರ ಬರೆದು,  ಕೊಟ್ಟ ಅಡ್ಮಿಶನ್, ಸ್ಕಾಲರ್ಷಿಪ್ ಎರಡು ವರ್ಷ postpone ಮಾಡಲು ವಿನಂತಿಸಿದ. ವಾರ್ಟನ್ ರಿಪ್ಲೈ ಮಾಡಿತು. ಎರಡು ವರ್ಷ ಮುಂದೆ ಹಾಕಲು ಸಾಧ್ಯವಿಲ್ಲ. ಹೆಚ್ಚೆಂದರೆ ಒಂದು ವರ್ಷ ಮಾತ್ರ ಸಾಧ್ಯ, ಅಂತ. ಅನಿಲ್ ಕುಮಾರ್ ಅದನ್ನು ಚಾಲೆಂಜ್ ಎಂಬಂತೆ ತೊಗೊಂಡ. ಇಂಪೀರಿಯಲ್ ಕಾಲೇಜಿನ ಎರಡು ವರ್ಷದ ಅತಿ ಕಷ್ಟದ ಉನ್ನತ ಶಿಕ್ಷಣವನ್ನು ಅಲ್ಲಿಯ ಮಾಸ್ತರುಗಳೇ ಬೆರಗಾಗುವಂತೆ ಒಂದೇ ವರ್ಷದಲ್ಲಿ ಮುಗಿಸಿ, ಮುಂದಿನ ವರ್ಷ ಬಂದು ವಾರ್ಟನ್ ನಲ್ಲಿ MBA ಶುರುಮಾಡಿಕೊಂಡು, ಅದನ್ನೂ ಅತಿ ಉನ್ನತ ದರ್ಜೆಯಲ್ಲಿ ಪಾಸು ಮಾಡಿ, ತನ್ನ ಅದ್ಭುತ ಪ್ರತಿಭೆ ಮೆರದಿದ್ದ. MBA ನಲ್ಲಿ ಅವನ ಕ್ಲಾಸ್ ಮೇಟ್ ಇದೇ LTTE ರಾಜ್ ರಾಜರತ್ನಂ!

ಹೀಗೆ ಸಿಕ್ಕಾಪಟ್ಟೆ ಬುದ್ಧಿವಂತನಾದ ಅನಿಲ್ ಕುಮಾರ್ MBA ನಂತರ ಸೇರಿದ್ದು ಅದೇ ರಜತ್ ಗುಪ್ತಾ ಕಂಪನಿ McKinsey. ಆಗ ರಜತ್ ಗುಪ್ತಾ ಆಗಲೇ ದೊಡ್ಡ ಮಟ್ಟಕ್ಕೆ ಏರಿದ್ದ. ಈ ಅನಿಲ್ ಕುಮಾರನನ್ನು ತನ್ನ ಪಟ್ಟದ ಶಿಷ್ಯನಂತೆ ಸ್ವೀಕರಿಸಿ protege ಎಂಬಂತೆ ತಯಾರು ಮಾಡತೊಡಗಿದ. ರಜತ್ ಗುಪ್ತಾ ನಂತರ ಈ ಅನಿಲ್ ಕುಮಾರನೇ MD ಆದರೂ ಆದ ಅನ್ನುವ ರೀತಿಯಲ್ಲಿ ರಜತ್ ಮತ್ತು ಅನಿಲ್ ಮಧ್ಯೆ ಗುರು ಶಿಷ್ಯರ ಸಂಬಂಧ. ಮುಂದೊಂದು ದಿವಸ ಇದೇ ಶಿಷ್ಯ ಅನಿಲ್ ಕುಮಾರ್ ರಜತ್ ಗುಪ್ತಾನ ಬುಡಕ್ಕೇ ಬಾಂಬಿಟ್ಟಾನು ಅಂತ ರಜತ್ ಗುಪ್ತಾ ಕನಸು ಮನಸ್ಸಿನಲ್ಲಿಯೂ ಎಣಸಿರಲಿಕ್ಕಿಲ್ಲ!

ಅನಿಲ್ ಕುಮಾರ್. ಎಲ್ಲರಿಗೂ ಟೊಪ್ಪಿ ಹಾಕಿದವ ಕೊನೆಗೆ ತಾನೇ ಟೊಪ್ಪಿ ಹಾಕಿಕೊಂಡ!

ಲಂಕಾ ರಾವಣ ರಾಜರತ್ನಂ ತನ್ನ insider trading ಗೆ ರಹಸ್ಯ ಮಾಹಿತಿ ಕೊಡುವ ಹೊಸ ಹೊಸ ಬಕರಾಗಳಿಗಾಗಿ ಹುಡುಕತ್ತಲೇ ಇದ್ದ. ಆಗ ಕಂಡವನು ಹಳೆ MBA ಕಾಲದ ಮಿತ್ರ - ಅನಿಲ್ ಕುಮಾರ್. ಆಗ ಅನಿಲ್ ಕುಮಾರ್ AMD ಅನ್ನುವ ದೊಡ್ಡ ಸೆಮಿಕಂಡಕ್ಟರ್ ಕಂಪನಿಗೆ adviser ಅಂತ ಇದ್ದ. strategic consulting ಮಾಡುತ್ತಿದ್ದ McKinsey ಕಂಪನಿ AMD ಯಿಂದ ವರ್ಷಕ್ಕೆ ಮಿಲಿಯನ್ ಗಟ್ಟಲೆ ಫೀಸ್ ತೆಗೆದುಕೊಳ್ಳುತ್ತಿತ್ತು. ಪ್ರಮುಖ ಕನ್ಸಲ್ಟೆಂಟ್ ಆಗಿದ್ದ ಅನಿಲ್ ಕುಮಾರ್ ಸೀದಾ CEO ಜೊತೆ ಅತಿ ನಿಕಟ ಬಾಂಧವ್ಯ ಹೊಂದಿದ್ದ. ಅದನ್ನು ರಾಜರತ್ನಂ ಗಮನಿಸಿದ್ದ. AMD ಬಗ್ಗೆ insider ಮಾಹಿತಿ ಕೊಡು. ನಿನ್ನನ್ನು ಮಾಲಾಮಾಲ್ ಮಾಡಿಬಿಡುತ್ತೇನೆ, ಅಂತ ಅನಿಲ್ ಕುಮಾರನಿಗೆ ಆಮಿಷ ತೋರಿಸಿದ. ತನಕಿಂತ ಕಮ್ಮಿ ಬುದ್ಧಿವಂತ ರಾಜ್ ತನಗಿಂತ ಸಾವಿರ ಪಟ್ಟು ಹೆಚ್ಚು ಯಶಸ್ವಿಯಾಗಿಬಿಟ್ಟಿದ್ದಾನಲ್ಲ ಅಂತ ಅನಿಲ್ ಕುಮಾರನಿಗೆ ಒಳೊಳಗೆ ಅಸೂಯೆ. AMD ಕಂಪನಿಯ ರಹಸ್ಯ ಮಾಹಿತಿ ಕೊಟ್ಟರೆ, ವರ್ಷಕ್ಕೆ ಬರೋಬ್ಬರಿ ಒಂದು ಮಿಲಿಯನ್ ಡಾಲರ್ ಕೊಡುವೆ ಅಂತ ಅನಿಲ್ ಕುಮಾರನಿಗೆ ರಾಜರತ್ನಂ ಆಮಿಷ ಒಡ್ಡಿದ. ಅದನ್ನು ಬೇನಾಮಿಯಾಗಿ ಜಮಾ ಮಾಡುವ ಹೊಣೆಯನ್ನೂ ಹೊತ್ತುಕೊಂಡು ಅನಿಲ್ ಕುಮಾರನ ಕಾಳಜಿ ಕಮ್ಮಿ ಮಾಡಿಕೊಟ್ಟ. AMD ಕಂಪನಿಯಲ್ಲಾಗ ಮಹತ್ವದ ಬದಲಾವಣೆಗಳಾಗುತ್ತಿದ್ದವು. AMD ಕಂಪನಿ ATI ಅನ್ನುವ ಇನ್ನೊಂದು ಕಂಪನಿಯನ್ನು ಕೊಳ್ಳುವ ಮಾತುಕತೆಯಲ್ಲಿ ತೊಡಗಿತ್ತು. ಬಿಲಿಯನ್ ಗಟ್ಟಲೆ ಡಾಲರುಗಳ ಲೆಕ್ಕಾಚಾರ. ATI ಕಂಪನಿಯ ಶೇರು ಬೆಲೆ ಆಕಾಶ ಮುಟ್ಟುವದರಲ್ಲಿತ್ತು. ಸಾರ್ವಜನಿಕವಾಗಿ ಲಭ್ಯವಿಲ್ಲದ ಈ ಮಾಹಿತಿಯನ್ನು ತನ್ನ ಕಳ್ಳ ಬಾತ್ಮೀದಾರ ಅನಿಲ್ ಕುಮಾರನಿಂದ ಪಡೆದ LTTE ರಾಜರತ್ನಂ ಸಿಕ್ಕಾಪಟ್ಟೆ ATI ಶೇರು ಖರೀದಿ ಮಾಡಿದ. AMD ಕಂಪನಿ ATI ಕಂಪನಿಯನ್ನು ಕೊಳ್ಳುವ ಸುದ್ದಿ ಹೊರಬಿದ್ದಾಕ್ಷಣ ATI ಶೇರು ಸಿಕ್ಕಾಪಟ್ಟೆ ಮೇಲೆ ಹೋಯಿತು. ಒಂದೇ ಹೊಡೆತದಲ್ಲಿ ನೂರಾರು ಮಿಲಿಯ ಡಾಲರ್ ಫಾಯಿದೆ ರಾಜರತ್ನಂಗೆ. ಅದರಲ್ಲಿ ಒಂದಿಷ್ಟು ಬಿಡಿಗಾಸು ಅನಿಲ್ ಕುಮಾರನಿಗೆ ಕೊಟ್ಟ. ಈ ರಾಜರತ್ನಂ ಇಷ್ಟು ಜಾಬಾದ್ ಪಂಟರ್ ಅಂದರೆ ಆ ಕಾಲದ AMD ಕಂಪನಿ CEO ರೂಯಿಜ್ ಜೊತೆ ಮಲಗುತ್ತಿದ್ದ wall street  ವೇಶ್ಯೆಯಂತಹ ಒಬ್ಬಾಕೆಯನ್ನೂ ಸಹ ಪಟಾಯಿಸಿಬಿಟ್ಟಿದ್ದ. ಆಕೆಗೂ ಒಂದಿಷ್ಟು ಕಾಸು ಕೊಟ್ಟಿದ್ದ. AMD ಕಂಪನಿ CEO ಹಾಸಿಗೆ ಮೇಲೆ ಬಿದ್ದುಕೊಂಡು, ಖಬರಿಲ್ಲದೆ ಹೇಳುತ್ತಿದ್ದ ಮಹತ್ವದ ಮಾಹಿತಿಯೆಲ್ಲ ಆಕೆ ಕೂಡ ರಾಜನಿಗೆ ಮಾರಿ ರೊಕ್ಕಾ ಮಾಡಿಕೊಂಡಳು. ಆಕೆ IBM ಕಂಪನಿಯ ಒಬ್ಬ ಉಪಾಧ್ಯಕ್ಷನ ಕೂಡ ಸಹಿತ ಹಾಸಿಗೆ ಹಂಚಿಕೊಂಡು, ಆ ಕಂಪನಿ ಕೆಲವೊಂದು ಸೀಕ್ರೆಟ್ ಸಹಿತ ರಾಜರತ್ನಂನಿಗೆ ತಲುಪಿಸಿ, ಆ ಉಪಾಧ್ಯಕ್ಷ ಮಾಹಿತಿ ಕೊಟ್ಟ ತಪ್ಪಿಗೆ ಜೈಲಿಗೆ ಹೋಗುವಂತಾಗಿದೆ.

ಹೀಗೆ ರಜತ್ ಗುಪ್ತಾ, ಅನಿಲ್ ಕುಮಾರ್, ರೋಮಿ ಖಾನ್, ರಾಜೀವ್ ಗೋಯಲ್ ಮತ್ತಿತರರ ಮೂಲಕ insider information ಕದ್ದು ಪಡೆದುಕೊಳ್ಳುತ್ತಿದ್ದ ರಾಜರತ್ನಂ ಪೊಗದಸ್ತಾಗಿ ದುಡ್ಡು ಮಾಡಿದ. ಯಾರಿಗೂ ಏನೂ ಗೊತ್ತೇ ಇಲ್ಲ ಅಂತ ಅದು ಹೇಗೆ ಅಂದುಕೊಂಡರೋ ಅಥವಾ ಏನೇ ಆಗಲೀ ಎಲ್ಲ ದಕ್ಕಿಸಿಕೊಳ್ಳುತ್ತೀನಿ ಅಂತ ಹುಂಬತನವೋ! ಗೊತ್ತಿಲ್ಲ. FBI ಮತ್ತು SEC ಮಾತ್ರ ಕ್ರಮಬದ್ಧವಾಗಿ ಇವರೆಲ್ಲರ ವಿರುದ್ಧ ಒಂದು solid, water tight ಕೇಸ್ ತಯಾರು ಮಾಡುತ್ತಿದ್ದವು. ಒಮ್ಮೆ ಎಲ್ಲರ ವಿರುದ್ಧ ಬೇಕಾದಷ್ಟು ಸಾಕ್ಷಿ ಜಮಾ ಆದ ತಕ್ಷಣ FBI ನ ಚಾಣಾಕ್ಷ ಏಜೆಂಟ್ ಕಂಗ್ ಈ ಹರಾಮಿಗಳ ದಸ್ತಗಿರಿ ಮಾಡಿ, ಬೆಂಡೆತ್ತುವ ಪ್ಲಾನ್ ಬರೋಬ್ಬರಿ ಹಾಕಿಕೊಂಡ.

ಏಜೆಂಟ್ ಕಂಗ್ ಮೊದಲು ಎತ್ತಾಕಿಕೊಂಡಿದ್ದು ರೋಮಿ ಖಾನಳನ್ನು. ಸಾಕ್ಷಿ ಮುಂದಿಟ್ಟು, ಏನಿದೆಲ್ಲ? ಅಂತ ಜಬರಿಸಿ ಕೇಳಿದ ತಕ್ಷಣ ಆಕೆ ಏನೂ ನಖರಾ ಮಾಡದೆ, ತಪ್ಪಾತ್ರೀ ಸರ್ರಾ! ಅಂತ ಅಂಬೋ ಅಂದಳು. ಸರ್ಕಾರದ ಪರವಾಗಿ ಸಾಕ್ಷಿ ಹೇಳು. ಕಮ್ಮಿ ಜೈಲು ಕೊಡಿಸೋಣ, ಅಂತ ಹೇಳಿ ಆಕೆ ಜೊತೆ ಡೀಲ್ ಮಾಡಿಕೊಂಡಿತು ಸರಕಾರ. ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಹಿಡಿಯಬೇಕಾದರೆ ಕೆಲವು ಸಣ್ಣ ಮೀನುಗಳಿಗೆ ವಿನಾಯಿತಿ, ರಿಯಾಯತಿ  ನೀಡಬೇಕಾಗುತ್ತದೆ. ಇದೂ ಹಾಗೆಯೇ. ರೋಮಿ ಖಾನ್ ಪೂರ್ತಿಯಾಗಿ ಬಾಯ್ಬಿಟ್ಟು ರಾಜರತ್ನಂನ ವಿರುದ್ಧ ಹಾರ್ಡ್ ಎವಿಡೆನ್ಸ್ ಸಿಕ್ಕಿತು.

ನಂತರ FBI ಹೋಗಿ ತಗಲಾಕಿಕೊಂಡಿದ್ದು ಅನಿಲ್ ಕುಮಾರನಿಗೆ. ಬೆಳಿಗ್ಗೆ ಬೆಳಿಗ್ಗೆ ಮನೆಗೆ ಬಂದು, ನಮಸ್ಕಾರ್ರೀ ಸರ್ರಾ! ಅಂದ FBI ಪೋಲೀಸರನ್ನು ನೋಡಿದ ಅನಿಲ್ ಕುಮಾರನಿಗೆ ತಲೆ ಸುತ್ತು ಬಂದು, ಮೂರ್ಛೆ ತಪ್ಪಿ ಬಿದ್ದು ಬಿಟ್ಟ! ಮುಖಕ್ಕೆ ಸರಿಯಾಗಿ ನೀರು ಗೊಜ್ಜಿ ಎಬ್ಬಿಸಿದ FBI, ಸಕಲ ಸನ್ಮಾನದೊಂದಿಗೆ ಎಳೆದುಕೊಂಡು ಬಂದ ಪೊಲೀಸರು ಅವನಿಗೂ ಅವನದ್ದೇ ಫೋನ್ ಸಂಭಾಷಣೆ ಕೇಳಿಸಿ, ಏನಂತೀರಿ? ಅಂತ ಝಾಡಿಸಿ ಕೇಳಿದ್ದಕ್ಕೆ ಅವನೂ ತಪ್ಪೊಪ್ಪಿಕೊಂಡ. ಅವನಿಗೂ ಡೀಲ್ ಕೊಟ್ಟರು. ಕಮ್ಮಿ ಜೈಲು ತೊಗೊಂಡು ಸರಕಾರೀ ಸಾಕ್ಷಿದಾರನಾಗು ಅಂತ. ಆ ಪುಣ್ಯಾತ್ಮನಿಗೆ ರೊಕ್ಕದ ಚಿಂತೆ. ವಕೀಲರಿಗೆ ಎಲ್ಲಿ ಕಾಸು ಕೊಟ್ಟು ಭಿಕಾರಿಯಾಗೋದು ಅಂತ ಒಪ್ಪಿಕೊಂಡು ರಾಜರತ್ನಂ, ರಜತ್ ಗುಪ್ತಾ ಮತ್ತಿತರರ ಚಡ್ಡಿ ಬಿಚ್ಚೇ ಬಿಟ್ಟ. ಗುರುವಿನಂತಿದ್ದ ರಜತ್ ಗುಪ್ತಾಗೇ ತಿರುಮಂತ್ರ!!!!

ಹೀಗೆ ದೊಡ್ಡ ಮಟ್ಟದ hard evidence ಸಂಗ್ರಹಿಸಿದ FBI ಈಗ ದೊಡ್ಡ ತಿಮಿಂಗಿಲಗಳಾದ ರಾಜ್ ರಾಜರತ್ನಂ ಮತ್ತು ರಜತ್ ಗುಪ್ತಾ ಹಿಂದೆ ಬಿದ್ದರು.

ರಾಜ ರಾಜರತ್ನಂ ಮನೆ ಮೇಲೆ FBI ದಾಳಿಯಾಯಿತು. ಪೈಜಾಮಾ ಹಾಕಿಕೊಂಡು, ಟ್ರೇಡ್ ಮಿಲ್ ಮೇಲೆ ಓಡುತ್ತ, ಬುಸು ಬುಸು ಶ್ವಾಸ ಬಿಡುತ್ತ,  ಚರ್ಬಿ ಕರಗಿಸುತ್ತಿದ್ದ ರಾಜರತ್ನಂನನ್ನು ಕೆಳಗೆ ಇಳಿಸಿ, ಅಂಗಿ, ಪ್ಯಾಂಟು, ಸ್ವೆಟರು, ಮೇಲೊಂದು ಕೋಟು ಬೇರೆ ಹಾಕಿಸಿ, ಕೈಗೆ ಬೇಡಿ ಹಾಕಿ, ಲೆಫ್ಟ್ ರೈಟ್ ಲೆಫ್ಟ್ ಅಂತ ಸರಿಯಾಗಿ ಕವಾಯಿತು ಮಾಡಿಸಿ ರಾಜರತ್ನಂನನ್ನು ಎಳೆದುಕೊಂಡು ಬಂದು ಜೈಲಿಗೆ ಒಗೆದರು. ಅವನಿಗೆ ಡೀಲು ಗೀಲು ಏನೂ ಇಲ್ಲ. ಕೇಸ್ ಫೈಟ್ ಮಾಡಿ ಗೆದ್ದರೆ ಹೊರಗೆ. ಇಲ್ಲಾಂದ್ರೆ ಕೋರ್ಟ್ ವಿಧಿಸಿದಷ್ಟು ವರ್ಷ ಜೈಲಿಗೆ.

ನಂತರದ ಪಾಳಿ ರಜತ್ ಗುಪ್ತಾನದು. FBI ಏಜೆಂಟರಿಗೆ ರಜತ್ ಗುಪ್ತಾನಿಗೂ ಕೈಗೆ ಬೇಡಿ, ಕಾಲಿಗೆ ಸಂಕೋಲೆ ಹಾಕಿಸಿ, ಕಾವಾಯಿತು ಮಾಡಿಸಿಯೇ, ಮಾಧ್ಯಮಗಳ ಮುಂದೆ ಒಂದು ಹೈ ಪ್ರೊಫೈಲ್ ಅರೆಸ್ಟ್ ಮಾಡಿಸಬೇಕು ಅಂತ ದೊಡ್ಡ ಆಸೆ. ಅವರು ಸ್ಕೋಪ್ ತೆಗೆದುಕೊಳ್ಳೋದು ಬೇಡವಾ? ಮೀಡಿಯಾ ಎದುರು ಹೀರೋ ಆಗೋದು ಬೇಡವಾ? ಆದರೂ ಈ ರಜತ್ ಗುಪ್ತಾನ ಹಿಂದಿನ ಸ್ಥಾನ ಮಾನ ನೋಡಿ, ನೀನೆ ಬಂದು ಶರಣಾಗು, ಅಂತ ಒಂದು option ಕೊಟ್ಟರು. ಪಾಪ ಅವರಿಗೆ ಗೊತ್ತಿರಲಿಲ್ಲ, ಆ ದಿನ ದೀಪಾವಳಿಯಾಗಿತ್ತು ಅಂತ. ದೀಪಾವಳಿ ದಿವಸ, ಸಕುಟುಂಬ ಸಮೇತ ಬಂದ ರಜತ್ ಗುಪ್ತಾ ಸರೆಂಡರ್ ಆದ. ಅವನಿಗೂ ಏನೂ ಡೀಲ್ ಕೊಡಲಿಲ್ಲ. ಬೇಕಾದರೆ ಕೇಸ್ ಫೈಟ್ ಮಾಡಿ ಗೆದ್ದುಕೋ ತಾಕತ್ತಿದ್ದರೆ ಅಂದ FBI ಅವನನ್ನೂ ಲಾಕಪ್ಪಿಗೆ ತಳ್ಳಿತು.

ರಾಜರತ್ನಂ ಮತ್ತು ರಜತ್ ಗುಪ್ತಾ ಇಬ್ಬರೂ ದೊಡ್ಡ ದೊಡ್ಡ ವಕೀಲರ ಮೂಲಕ ಜಾಮೀನ ಮೇಲೆ ಹೊರಗೆ ಬಂದು ಕೇಸ್ ನಡೆಸಿದರು. ಆದರೆ ಸಾಕ್ಷಿ ಬಲವಾಗಿತ್ತು. ಅನಿಲ್ ಕುಮಾರಂತೂ ತನ್ನ ಅಪೂರ್ವ ಜ್ಞಾಪಕ ಶಕ್ತಿ ಉಪಯೋಗಿಸಿ ಒಳ್ಳೆ ಗಿಳಿಯಂತೆ ಪಾಠ ಒಪ್ಪಿಸಿಬಿಟ್ಟ. ಅಲ್ಲಿಗೆ ರಾಜರತ್ನಂ ತುಂಬ ವರ್ಷಗಳ ಮಟ್ಟಿಗೆ ಜೈಲಿಗೆ ಹೋಗುವದು ಖಾತ್ರಿಯಾಯಿತು. ಎಷ್ಟೇ ದೊಡ್ಡ ವಕೀಲರಿದ್ದರೂ, ಈ ವೈಟ್ ಕಾಲರ್ ಕ್ರಿಮಿನಲ್ಲುಗಳಿಂದ ಮತ್ತು ಗತಿಗೆಟ್ಟು ಹೋಗಿದ್ದ ಅವತ್ತಿನ ಅರ್ಥ ವ್ಯವಸ್ಥೆಯಿಂದ ರೊಚ್ಚಿಗೆದ್ದಿದ್ದ ಜನ ಸಾಮಾನ್ಯರ ಜ್ಯೂರಿ, ನಡಿ ಮಗನೇ ಜೈಲಿಗೆ! ಅಂತ ತೀರ್ಪು ಕೊಟ್ಟಿತು. ಹನ್ನೊಂದು ವರ್ಷದ ಕಾರಾಗ್ರಹವಾಸ ಶಿಕ್ಷೆ ಕೊಟ್ಟರು ರಾಜರತ್ನಂಗೆ. ಮೇಲ್ಮನವಿ, ಅಪೀಲ್ ಎಲ್ಲ ತಿರಸ್ಕೃತವಾಗಿ ರಾಜರತ್ನಂ ಜೈಲಿಗೆ ಹೋದ. ಬಿಳಿಯರು, ಕರಿಯರು ಯಾರೂ ನನ್ನ ವಿರುದ್ಧ ಸಾಕ್ಷಿ ಹೇಳಲಿಲ್ಲ. ಕೇವಲ ಭಾರತೀಯರು ಮಾತ್ರ ನನ್ನ ವಿರುದ್ಧ ಸಾಕ್ಷಿ ಹೇಳಿ ನಾನು ಜೈಲಿಗೆ ಬರುವಂತಾಗಿದೆ, ಅಂತ ತನ್ನ ಒಂದು ಕಾಲದ ದೋಸ್ತರಾದ ಅನಿಲ್ ಕುಮಾರ್, ರಜತ್ ಗುಪ್ತಾ ಮೇಲಿನ ಕೋಪ ತಾಪವನ್ನು ಸಾರಾಸಗಟಾಗಿ ಭಾರತೀಯರ ಮೇಲೆ ಕಾರಿಕೊಂಡುಬಿಟ್ಟಿದ್ದಾನೆ LTTE ರಾಜರತ್ನಂ!

ಈ ಕಡೆ ರಜತ್ ಗುಪ್ತಾಗೆ ತನ್ನ ಮೇಲಿನ ಕೇಸ್ ನಿಲ್ಲಲಿಕ್ಕೆ ಸಾಧ್ಯವೇ ಇಲ್ಲ ಅಂತ ತುಂಬ ವಿಶ್ವಾಸವಿತ್ತು. ಅದಕ್ಕೆ ಕಾರಣವೂ ಇತ್ತು. ರಜತ್ ಗುಪ್ತಾ ತಾನಿದ್ದ ಕಂಪನಿಗಳ ರಹಸ್ಯ ಮಾಹಿತಿ ಕೊಟ್ಟಿದ್ದ. ಅದಕ್ಕೆ ಪುರಾವೆ ಇತ್ತು. ನಿಜ. ಆದರೆ ಆ ಮಾಹಿತಿ ಬಳಸಿಕೊಂಡ ರಾಜರತ್ನಂ ಹಡಬೆ ರೊಕ್ಕಾ ಮಾಡಿದ ಮತ್ತು ಮುಖ್ಯವಾಗಿ ಅದರಲ್ಲಿ ರಜತ್ ಗುಪ್ತಾಗೆ ಪಾಲು ಕೊಟ್ಟ ಅನ್ನುವದಕ್ಕೆ ಏನೂ ಸಾಕ್ಷಿ ಇರಲಿಲ್ಲ. ಆದರೆ ಸರಕಾರ ಕತ್ತಲಲ್ಲಿ ಒಂದು ಬಾಣ ಬಿಟ್ಟಿತು. ಅದೇನೆಂದರೆ, ಮಾಹಿತಿ ಕೊಟ್ಟಿದ್ದಕ್ಕೆ ಪ್ರತಿಫಲವಾಗಿ ರಜತ್ ಗುಪ್ತಾಗೆ ಕಾಸು ಕೊಟ್ಟಿಲ್ಲ. ನಿಜ. ಆದರೆ ರಜತ್ ಗುಪ್ತಾಗೇ ಎಂದೇ ಒಂದು ದೊಡ್ಡ ಮಟ್ಟದ ಹೆಜ್ ಫಂಡ್ ಮಾಡಿಕೊಡುವದಾಗಿ ರಾಜರತ್ನಂ ಮಾತು ಕೊಟ್ಟಿದ್ದ. ಅದರ ಪ್ರಕಾರ 'ನ್ಯೂ ಸಿಲ್ಕ್ ರೌಟ್' ಎಂಬ ಫಂಡಿನ ಮಾಹಿತಿಯೆಲ್ಲ ತೆಗೆದು ನ್ಯಾಯಾಲಯದ ಮುಂದಿಟ್ಟಾಗ ರಜತ್ ಗುಪ್ತಾನ ಖೇಲ್ ಖತಂ ಆಗಿ ಹೋಗಿತ್ತು. ತಾನು ಭಯಂಕರ ಚಾಣಾಕ್ಷ ಅಂತ ತಿಳಿದುಕೊಂಡಿದ್ದ ರಜತ್ ಗುಪ್ತಾ ಕ್ಯಾಶ್ ಬೇಡ ಅದರ ಬದಲಿಗೆ ಬೇರೆ ರೀತಿಯಲ್ಲಿ ಪ್ರಸಾದ ಕೊಟ್ಟುಬಿಡಿ ಅಂತ ಸ್ಕೀಮ್ ಹಾಕಿಕೊಂಡು ಎಲ್ಲರನ್ನೂ ಯಾಮಾರಿಸೋಣ ಅಂತ ನೋಡಿದರೆ ಅದನ್ನೂ ಕಂಡು ಹಿಡಿದ ಸರಕಾರೀ ವಕೀಲರು ಅವನ ಲಾಡಿ ಎಳದು ಚಡ್ಡಿ ಬಿಚ್ಚಿ ಬಿಡಬೇಕೇ? ರಜತ್ ಗುಪ್ತಾ ಚಾಪೆ ಕೆಳಗೆ ನುಸುಳಿದ್ದರೆ ರಂಗೋಲಿ ಕೆಳಗೆ ನುಗ್ಗಿತ್ತು ಸರ್ಕಾರ!

ಏನೇನೋ ಡೀಲಿಂಗ್ ಆಗಿ, ರಜತ್ ಗುಪ್ತಾನ ಹಿಂದಿದ್ದ ಸ್ಥಾನ ಮಾನ, ಮಾಡಿದ್ದ ಅಂತ ಹೇಳಲಾದ ದಾನ ಧರ್ಮದ ಕೆಲಸ, ದೊಡ್ಡ ದೊಡ್ಡ ಜನರಿಂದ ಬಂದ ಶಿಪಾರಸ್ಸು ಎಲ್ಲ ನೋಡಿ, ನೀವು ಎರಡು ವರ್ಷ ಜೇಲಿಗೆ ಹೋಗಿ ಬನ್ನಿ. ಒಂದಿಷ್ಟು ಮಿಲಿಯನ್ ಡಾಲರ್ ದಂಡ ಕಟ್ಟಿ ಬಿಡಿ. ಇದೇ ನಿಮಗೆ ಶಿಕ್ಷೆ, ಅಂತ ಅಮೇರಿಕಾದ ನ್ಯಾಯಾಲಯ ಹೇಳಿದಾಗ ರಜತ್ ಗುಪ್ತಾ ಆಗಲಿ, ಅಲ್ಲೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಪತ್ನಿ, ನಾಕು ಹೆಣ್ಣು ಮಕ್ಕಳಾಗಲಿ ತಮ್ಮ ಕಿವಿ ತಾವು ನಂಬಲಿಲ್ಲ. ಕೇಸ್ ಬಡಿದಾಡಲು ಅಲ್ಲಿಯ ತನಕ ಕಮ್ಮಿ ಕಮ್ಮಿ ಅಂದರೂ ಮೂವತ್ತು ಮಿಲಿಯನ್ ಡಾಲರ್ ವಕೀಲರ ಫೀಸ್ ಅಂತನೇ ಧೂಳೆದ್ದು ಹೋಗಿತ್ತು. ಮೊದಲೇ ಸುಮಾರು ನೂರೈವತ್ತು ಮಿಲಿಯನ್ ಡಾಲರ್ ಆಸ್ತಿವಂತ ಕುಳವಾಗಿದ್ದ ರಜತ್ ಗುಪ್ತಾ ನೀರಿನಂತೆ ಖರ್ಚು ಮಾಡಿದ್ದ ರೊಕ್ಕಾ ಎಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿತ್ತು.

ಪತ್ನಿ ಅನಿತಾ ಗುಪ್ತಾ ನ್ಯಾಯಾಲಯದಲ್ಲೇ ತಗ್ಗಿಸಿದ ತಲೆ ನಂತರ ಮೇಲೆ ಎತ್ತಿಲ್ಲವಂತೆ. ಚಿಕ್ಕ ಮಗಳು, ಬಾಬಾ!!! ಅನ್ನುತ್ತ ಹೋ!!! ಅಂತ ಕೊರ್ಟಿನಲ್ಲೇ ಅಳುತ್ತ ತಂದೆಯನ್ನು ತಬ್ಬಿಕೊಂಡಳು. ಉಳಿದ ಮೂವರು ಹೆಣ್ಣು ಮಕ್ಕಳು, ಮುಂದೇನು ಅಪ್ಪಾ? ಅನ್ನುವಂತೆ ತೀರ್ಪಿನಿಂದ ಪೂರ್ತಿ ಬೆಪ್ಪನಾಗಿದ್ದ ಅಪ್ಪನನ್ನು ನೋಡಿದರು. ಪೊಲೀಸರು ಬಂದು, ನಡ್ರೀ! ಅಂತ ಎಳಕೊಂಡು ಹೋದರು.

ಮೇಲಿನ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತೇನೆ ಅಂತ ಎರಡು ವರ್ಷದಿಂದ ಗುದ್ದಾಟ ನೆಡೆಸಿದ್ದ ರಜತ್ ಗುಪ್ತಾ. ಮತ್ತಿಷ್ಟು ಮಿಲಿಯನ್ ಡಾಲರ್ ಉಡಾಯಿಸಿ, ದೊಡ್ಡ ದೊಡ್ಡ ವಕೀಲರನ್ನು ಇಟ್ಟು ಅಪೀಲ್ ಹಾಕಿಸಿದ. ಅದೇ ಅಪೀಲ್ ಈಗ ರಿಜೆಕ್ಟ್ ಆಗಿದೆ. ರಜತ್ ಗುಪ್ತಾ ಜೈಲಿಗೆ ಹೋಗುವದು ಖಚಿತವಾಗಿದೆ. ಇದ್ದುದರಲ್ಲಿಯೇ ಸ್ವಲ್ಪ posh ಇದ್ದು, ಎಲ್ಲ ಸೌಲಭ್ಯಯುಳ್ಳ ಮತ್ತು ಮನೆಗೆ ಹತ್ತಿರದ ಜೈಲಿಗೆ ಹಾಕ್ರೀ! ಪ್ಲೀಸ್! ಅಂತ ಒಂದು ಆಖರೀ ಮನವಿ ಮಾಡಿಕೊಂಡಿದ್ದಾನೆ. ನೋಡ್ರೀ ಖದೀಮನ ಗೈರತ್ತು!!! ಅದಕ್ಕೆ ಕೋರ್ಟ್ ಓಕೆ ಅನ್ನುತ್ತದೆ ಅಂತ ಅವನ ಪರವಾದ ವಕೀಲರು ಹೇಳಿದ್ದಾರಂತೆ. insider trading ಮಾಡಿ ಇಡೀ ಸಮಾಜವನ್ನು ಬಗ್ಗಿಸಿ ಬಗ್ಗಿಸಿ ಬಾರಿಸಿದ ಕೊರಮನಿಗೆ ರೆಗ್ಯುಲರ್ ಜೈಲಿಗೆ ಹೋಗಲು ತುಂಬಾ ಭಯ. ಎಲ್ಲಿ ತನ್ನನ್ನು ಅಲ್ಲಿನ ಕುಖ್ಯಾತ ಪಾತಕಿಗಳು ಬಗ್ಗಿಸಿ ಬಾರಿಸಿಬಿಟ್ಟಾರು ಅಂತ ಹೆದರಿಕೆ. ಅಮೇರಿಕನ್ ಜೈಲುಗಳು ಹಿಂಸೆಗೆ ತುಂಬ ಫೇಮಸ್!

ಸರಕಾರದ ಜೊತೆ ಡೀಲಿಂಗ್ ಮಾಡಿಕೊಂಡಿದ್ದ ಅನಿಲ್ ಕುಮಾರನಿಗೆ ಎರಡು ವರ್ಷದ ಪ್ರೋಬೇಶನ್ ಅನ್ನುವ ಗೃಹಬಂಧನ ಅನ್ನಬಹುದಾದ ಶಿಕ್ಷೆ. ಸರಕಾರದ ಜೈಲಲ್ಲಿ ಕೊಳೆಯುವದಕ್ಕಿಂತ ಮನೆಯಲ್ಲಿಯೇ ಕೊಳೆತು ಹಾಳಾಗಿ ಹೋಗು ಅನ್ನುವ ಹಾಗೆ. ನೌಕರಿಯಿಂದ ಒದ್ದು ಓಡಿಸಲಾಗಿದೆ. ಇಂಟೆಲ್ ಕಂಪನಿಯ ರಾಜೀವ್ ಗೋಯಲ್ಲಿನಿಗೂ ಇದೇ ಶಿಕ್ಷೆ!

ಈ ಅನಿಲ್ ಕುಮಾರ್ ತನ್ನ ಹಡಬೆ ರೊಕ್ಕ ಎಲ್ಲ ತನ್ನ ಮನೆ ಕೆಲಸದಾಕೆಯ ಹೆಸರಲ್ಲಿ ಬೇನಾಮಿ ಇಡಲಿಕ್ಕೆ ನೋಡಿದ್ದ ಖದೀಮ. ಪಾಪ ಬಡಪಾಯಿ ಮಂಜು ದಾಸ್ ಅನ್ನುವ ಉಬ್ಬು ಹಲ್ಲಿರುವ ಕೆಲಸದ ಹೆಂಗಸಿನ ಬೇನಾಮಿ ಖಾತೆಯಲ್ಲಿ ಮಿಲಿಯನ್ ಡಾಲರ್ ನೋಡಿದ FBI ಏಜೆಂಟರು ಅಂಡು ತಟ್ಟಿಕೊಂಡು ನಕ್ಕು, ಯೋ! ಆಕೆಗೆ ನೀನು ನಿಜವಾಗಿ ಮಿಲಿಯನ್ ಡಾಲರ್ ಸಂಬಳ ಕೊಟ್ಟಿದ್ದರೆ ಆಕೆ ಹೋಗಿ ತನ್ನ ಉಬ್ಬು ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಂಡು ಬರ್ತಿದ್ದಳು. ಛೋಡೋದಕ್ಕೂ ಒಂದು ಲಿಮಿಟ್ ಇರಬೇಕು ಕಣಯ್ಯಾ, ಅಂತ ಅನಿಲ್ ಕುಮಾರನ ಅಪಹಾಸ್ಯ ಮಾಡಿಬಿಟ್ಟರಂತೆ. ಅದೊಂದು ಬೋನಸ್ ಅವಮಾನ!

ರೋಮಿ ಖಾನ್ ಪೂರ್ತಿ ದಿವಾಳಿ ತೆಗೆದು, ಮನೆ ಮಠ ಮಾರಿಕೊಂಡು ಓಡಿದ್ದಾಳೆ. ಆದರೆ ಬೇರೊಂದು ಇದೇ ತರಹದ ಕೇಸಿನಲ್ಲಿ ಜೈಲಿಗೆ ಹೋಗಿದ್ದಾಳೆ.

ಈ ಪ್ರಕರಣದ ಒಂದು ದೊಡ್ಡ ವಿಶೇಷತೆ ಅಂದ್ರೆ ಕಾನೂನು ಮುರಿದವರು ಮತ್ತು ಅವರನ್ನು ಹಿಡಿದು ಜೈಲಿಗೆ ಹಾಕಿದವರು ಎಲ್ಲ ಭಾರತೀಯ ಮೂಲದವರೇ. LTTE ರಾಜರತ್ನಂ ಶ್ರೀಲಂಕಾದವನು. ರಜತ್ ಗುಪ್ತಾ, ಅನಿಲ್ ಕುಮಾರ್, ರಾಜೀವ್ ಗೋಯಲ್, ರೋಮಿ ಖಾನ್ ಎಲ್ಲ ಭಾರತೀಯ ಮೂಲದ ಅಮೇರಿಕನ್. ಸರ್ಕಾರದ ಪರವಾಗಿ ಪ್ರೀತ್ ಭರ್ರಾರಾ ಎನ್ನುವ ಪಬ್ಲಿಕ್ ಪ್ರಾಸಿಕ್ಯೂಟರ್. ಪಕ್ಕಾ ಪಂಜಾಬಿ. ಅದೂ ಸರ್ದಾರ್ಜೀ. SEC ಅನ್ನುವ ಸರ್ಕಾರದ ಸಂಸ್ಥೆ ಪರವಾಗಿ ಸಂಜಯ್ ವಾಧ್ವಾ ಅನ್ನುವ ಮತ್ತೊಬ್ಬ ವಕೀಲ ಸಹಿತ ಪಂಜಾಬಿ. ದೇಸಿಗಳ ಮಧ್ಯೆಯೇ ಘೋರ ಕದನ.

ವೈಟ್ ಕಾಲರ್ ಕ್ರಿಮಿನಲ್ಲುಗಳಿಗೆ ಒಂದು ದೊಡ್ಡ ಸಂದೇಶ ರವಾನೆಯಾಗಿದೆ. ವೈಟ್ ಕಾಲರ್ ಕ್ರಿಮಿನಲ್ಲುಗಳು ಎಷ್ಟೇ ದೊಡ್ಡವರಿದ್ದರೂ, ಎಷ್ಟೇ ಪ್ರಭಾವಶಾಲಿಗಳಾದರೂ ಸರ್ಕಾರ ಬಿಡುವದಿಲ್ಲ, ಅಂತ ಸರ್ಕಾರ ಬ್ಯಾಂಡ್ ಬಾರಿಸಿದೆ. ಮತ್ತೆ ಕೆಲವು ಜನ ಹೇಳುವ ಪ್ರಕಾರ, ಭಾರತೀಯ ಮೂಲದ ಅಮೇರಿಕನ್ನರಲ್ಲಿ ಹಲವರು ತಮ್ಮ ಸ್ಥಾನ ಮಾನದ ದುರುಪಯೋಗ ಮಾಡಿಕೊಂಡು, insider trading ನಂತಹ ವೈಟ್ ಕಾಲರ್ ಅಪರಾಧಗಳನ್ನು ಯಾವ ಮುಲಾಜಿಲ್ಲದೆ ಮಾಡಿಕೊಂಡು ಬರುತ್ತಿದ್ದರು. ಈ ಇಂಡಿಯನ್ ಅಮೇರಿಕನ್ ಜನರಿಗೆ ಅಂತನೇ ಒಂದು ಪಾಠ ಕಲಿಸಬೇಕಾಗಿತ್ತು. ಅದಕ್ಕೇ ನೋಡಿ ನೋಡಿಯೇ ಇಂಡಿಯನ್ ಮೂಲದ ಜನರನ್ನು ಟಾರ್ಗೆಟ್ ಮಾಡಿ ಹಣಿಯಲಾಗಿದೆ, ಅಂತ. ಇರಬಹುದು.

ಈ ಖದೀಮರಿಗೆ ಜೈಲು ಶಿಕ್ಷೆಗಿಂತ ಭರಿಸಲು ದುರ್ಭರವಾಗಿದ್ದು ಕಾರ್ಪೊರೇಟ್ ವಲಯ ಇಂತಹ ಜನರನ್ನು ಸಾರಾಸಗಟಾಗಿ ತಿರಸ್ಕರಿಸಿ ಕೊಳೆತ ತರಕಾರಿಯಂತೆ ಬಿಸಾಡಿದ್ದು. ರಜತ್ ಗುಪ್ತಾನಿಗೆ ಎಲ್ಲ ಕಂಪನಿ ಇತ್ಯಾದಿಗಳಿಂದ ರಾಜೀನಾಮೆ ಕೊಟ್ಟು ಹೋಗುವಂತೆ ತಿಳಿಸಲಾಯಿತು. ಅನಿಲ್ ಕುಮಾರನಿಗೂ ಅಷ್ಟೇ. ಬೆಂಬಲಿಗರು ರಜತ್ ಗುಪ್ತಾನ ಪರವಾಗಿ ಸಹಿ ಸಂಗ್ರಹಿಸುತ್ತಿದ್ದರೆ, ವಿನೋದ್ ಖೋಸ್ಲಾ ಅನ್ನುವ ಮತ್ತೊಬ್ಬ ದೊಡ್ಡ ವೆಂಚರ್ ಕ್ಯಾಪಿಟಲಿಸ್ಟ್ ಕುಳ, ನನ್ನ ಹೆಸರು ತೆಗೆಯಿರೀ!! ರಜತ್ ಜೊತೆ ಸೇರಿ ನನ್ನ ಹೆಸರು ಹಾಳಾಗಿ ಹೋಗುತ್ತದೆ ಅಂದನಂತೆ. ಕೆಲವೇ ದಿವಸಗಳ ಮುಂಚೆ ಇವರೆಲ್ಲ ಗಳಸ್ಯ ಕಂಠಸ್ಯ. ಈಗ ಈ ವಿನೋದ್ ಖೋಸ್ಲಾನ ಮಗಳದ್ದು ನಗ್ನ ಚಿತ್ರ, ರೊಕ್ಕಕ್ಕಾಗಿ ಬೆದರಿಕೆ ಅಂತ ಬೇರೇನೇ ತರಹದ ಲಫಡಾ ಆಗಿದೆ. ಅದು ಬಿಡಿ ಬೇರೆ ಸುದ್ದಿ.

ಅನಿಲ್ ಕುಮಾರನಿಗೆ ಕೆಲಸವಿಲ್ಲ. ಏನಾದರೂ voluntary ಕೆಲಸ, charity ಕೆಲಸ ಮಾಡಿ ಸ್ವಲ್ಪ ಪಾಪ ಪರಿಹಾರ ಮಾಡಿಕೊಳ್ಳೋಣ ಅಂತ ಯಾವದೋ ಶಾಲೆಗೆ ಹೋಗಿ ಪಾಠ ಹೇಳುತ್ತೇನೆ ಅಂದನಂತೆ. ಇವನ ಪೂರ್ವಾಪರ ವಿಚಾರಿಸಿದ ಶಾಲೆಯವರು, ಮೊದಲು ಇಲ್ಲಿಂದ ಜಗಾ ಖಾಲಿ ಮಾಡು! ಅಂತ ಅಬ್ಬರಿಸಿ, ಹೊರಡಲು ತಿರುಗಿ ನಿಂತವನ ಅಂಡಿಗೆ ಬಂದು ತಟ್ಟುವಂತೆ ಬಾಗಿಲು ಮುಚ್ಚಿದರಂತೆ. ಸಾಕಾ ಮರ್ಯಾದಿ? ಹಾಂ?

ರಜತ್ ಗುಪ್ತಾನ ಪಾಡಂತೂ ಕೇಳಲೇಬೇಡಿ. ಕಾರ್ಪೊರೇಟ್ ಜಗತ್ತು ಅಂದ್ರೆ ಅದೊಂದು  ಕರುಣೆಯಿಲ್ಲದ ruthless ದುನಿಯಾ. ಮಾತೆತ್ತಿದರೆ ಕ್ಲಿಂಟನ್, ಓಬಾಮಾ, ಟಾಟಾ, ಬಿರ್ಲಾ, ಅಂಬಾನಿ ಅನ್ನುತ್ತಿದ್ದವನಿಗೆ ಈಗ ಯಾರೂ ಫೋನ್ ಮಾಡುವದಿಲ್ಲವಂತೆ. ಇವನೇ ಮಾಡಿದರೆ ಅವರೆಲ್ಲ ಇವನ ಫೋನ್ ಎತ್ತುವದೂ ಇಲ್ಲವಂತೆ. ಪಾಪ!

ಮನ್ನಿತ್ತಲಾಗೆ ಯಾರೋ ಈ ರಜತ್ ಗುಪ್ತಾ ಎಂಬ ಮಾಜಿ ಕಾರ್ಪೊರೇಟ್ ಬಾದಶಹಾನನ್ನು ಇಲ್ಲಿಯ ಸೂಪರ್ ಮಾರ್ಕೆಟ್ ತರಹದ Costco ಅನ್ನುವ ಅಂಗಡಿಯಲ್ಲಿ ನೋಡಿದರಂತೆ. ಎಲ್ಲರಂತೆ ಶಾಪಿಂಗ್ ಮಾಡುತ್ತಿದ್ದನಂತೆ. ಯಾರದ್ದೋ ಫೋನ್ ಬಂತಂತೆ. ಸುತ್ತ ಮುತ್ತ ಯಾರಿದ್ದಾರೆ ಅನ್ನುವದನ್ನೂ ಗಮನಿಸಿದೇ ರಜತ್ ಗುಪ್ತಾ ಫೋನಿನಲ್ಲಿ ಜೋರಾಗಿ ಚೀರಲು ಶುರು ಮಾಡಿಬಿಟ್ಟನಂತೆ. ನನಗೆ ಈಗಿತ್ತಲಾಗೆ ಯಾರೂ ಫೋನ್ ಮಾಡುತ್ತಿಲ್ಲ. ನನ್ನ ಫೋನ್ ಯಾರೂ ತೆಗೆದುಕೊಳ್ಳುತ್ತಿಲ್ಲ. ಯಾಕೆ ಹೀಗೆ? ಹಾಂ! ಅಂತ. ನೋಡಿದ ಕೆಲವರಿಗೆ ಆಗ ಗೊತ್ತಾಯಿತಂತೆ ಇವನು ಕಾರ್ಪೊರೇಟ್ ಖದೀಮ ರಜತ್ ಗುಪ್ತಾ ಅಂತ!!!

ಈ ರಜತ್ ಗುಪ್ತಾ management ಮೇಲೆ ಲೆಕ್ಚರ್ ಕೊಡುವಾಗ ಭರಪೂರ ಭಗವದ್ಗೀತೆ, ಹಿಂದೂ ಅಧ್ಯಾತ್ಮ ಎಲ್ಲ ಸೇರಿಸಿ ಸಕತ್ತಾಗಿ ಪಿಟೀಲು ಕೊಯ್ಯುತ್ತಿದ್ದನಂತೆ. ಕರ್ಮಣ್ಯೇ ವಾಧಿಕಾರಾಸ್ತೆ ಮಾ ಫಲೇಶು ಕದಾಚನ! ಅನ್ನುವದು ಅವನ ಮೂಲ ಮಂತ್ರವಂತೆ.

ನಾಟಕಕಾರ ಮಾಸ್ಟರ್ ಹೀರಣ್ಣಯ್ಯ ತುಂಬ ಮಜವಾಗಿ ಆ ಶ್ಲೋಕದ ಅರ್ಥ ತಮ್ಮ ನಾಟಕಗಳಲ್ಲಿ ಹೇಳುತ್ತಿದ್ದರು. ಅದು ಈಗ ಇವನಿಗೆ ಅನ್ವಯಿಸುವ ಹಾಗಿದೆ. ಕರ್ಮಣ್ಯೇ ಅಂದ್ರೆ ನಾಣ್ಯವನ್ನು ಗಳಿಸಲು ಮಾಡಿದ ಕರ್ಮಗಳೆಲ್ಲ, ವ್ಯಾಧಿಕಾರಾಸ್ತೆ ಅಂದ್ರೆ ಜೈಲು, ಮಾನಹಾನಿ ಇತ್ಯಾದಿ ವ್ಯಾಧಿಗಳ ರೂಪದಲ್ಲಿ ಬಂದಿವೆ. ಅದಕ್ಕೆ ಜೈಲಿಗೆ ಹೋಗಿ ಮಾಫಲೇಶು ಅಂದ್ರೆ ಮಾವಿನ ಹಣ್ಣನ್ನು ತಿನ್ನುತ್ತೇನೆ ಅಂತ ಜೈಲಿಗೆ ಹೊರಟು ನಿಂತಿದ್ದಾನೆ ರಜತ್ ಗುಪ್ತಾ.  ಬೆಳ್ಳಿ ಅನ್ನುವ ಅರ್ಥದ ರಜತ್ ಅಂತ ಹೆಸರಿಟ್ಟುಕೊಂಡು ಕಿಲಬು ಹತ್ತಿ ಬೆಳ್ಳಿಯ ಶೈನಿಂಗ್ ಮಸುಕಾದ ಹಾಗೆ ಗುಪ್ತಾನ ಸ್ಥಿತಿ. 

ಈ ಕಡೆ ತಪ್ಪು ಮಾಡಿದ ಭಾರತೀಯ ಮೂಲದ ಜನರಿಗೆ ಸರಿಯಾಗಿ ಬಾರಿಸುತ್ತೇನೆ ಅಂತ ಸರ್ಕಾರಿ ವಕೀಲ ಪ್ರೀತ್ ಭರ್ರಾರಾ ಟೊಂಕ ಕಟ್ಟಿ ನಿಂತು ಬಿಟ್ಟಿದ್ದಾನೆ. ಮನ್ನೆ ದೇವಯಾನಿ ಖೊಬ್ರಾಗಡೆ ಎಂಬ ರಾಯಭಾರಿಯನ್ನೂ ಸಹ ಮಟ್ಟ ಹಾಕಿದವನು ಇವನೇ. ತುಂಬಾ ambitious ಆಗಿರುವ ಅವನು ಮುಂದೊಂದು ದಿವಸ ಅಮೇರಿಕಾದ ಅಟಾರ್ನಿ ಜನರಲ್ ಗ್ಯಾರಂಟೀ ನೋಡಿ! ಅವನಿಗೆ ಅಧ್ಯಕ್ಷನಾಗಬೇಕೆಂಬ ಮಹದಾಸೆ ಇತ್ತು. ಆದರೆ ಇಲ್ಲಿಯೇ ಹುಟ್ಟದ್ದರಿಂದ ಅದು ಅಸಾಧ್ಯ.

ಇಸ್ರೇಲಿನ ಸ್ಥಾಪಕ ಮತ್ತು ಮೊದಲ ಪ್ರಧಾನ ಮಂತ್ರಿ ಡೇವಿಡ್ ಬೆನ್ ಗುರಿಯನ್ ಒಂದು ಮಾತು ಸದಾ ಹೇಳುತ್ತಿದ್ದರು. ಒಂದು ದೇಶ, ಒಂದು ಸಮುದಾಯ ಎಲ್ಲರ ಗಮನಕ್ಕೆ ಬರಬೇಕು, ಮನ್ನಣೆ ಗಳಿಸಬೇಕು ಅಂದ್ರೆ ಅದರಲ್ಲಿ ಎಲ್ಲ ತರಹದವರೂ ಇರಬೇಕು. ಎಲ್ಲಿ ತನಕ ಕಳ್ಳರು, ಸುಳ್ಳರು, ಕಾಕರು, ಪೋಕರು, ಮತ್ತೆ ಸೂಳೆಯರು ಇರುವದಿಲ್ಲವೋ ಅಲ್ಲಿಯವರೆಗೆ ಅಂತಹ ದೇಶವನ್ನು, ಸಮುದಾಯವನ್ನು ಯಾರು ತಾನೇ ಮಾನ್ಯ ಮಾಡುತ್ತಾರೆ? :)

ಅಮೇರಿಕಾದಲ್ಲಿ ಭಾರತ ಮೂಲದ ಜನ ಕೇವಲ ಪಂಡಿತರು, ವೈದ್ಯರು, ತಂತ್ರಜ್ಞರು, ಒಳ್ಳೆಯವರು ಮಾತ್ರ ಇದ್ದರು ಅಥವಾ ಅಂಥವರು ಮಾತ್ರ ಎಲ್ಲರಿಗೆ ಗೊತ್ತಿದ್ದು ಒಂದು ಸರ್ವಸಾಮಾನ್ಯ ಮಾನ್ಯತೆ ಭಾರತೀಯ ಸಮುದಾಯಕ್ಕೆ ಬಂದಿರಲಿಲ್ಲ. ಈಗ ಈ ತರಹದ ವೈಟ್ ಕಾಲರ್ ಕ್ರಿಮಿನಲ್ಲುಗಳು ಎಬ್ಬಿಸಿದ ಹೊಲಗೇರಿಯಿಂದ ಇಲ್ಲೂ India is shining!

ಶಿವನೇ ಶಂಭುಲಿಂಗ!

ಇದೆಲ್ಲ ಮಾಹಿತಿ ಕೆಳಕಂಡ ಅದ್ಭುತ ಪುಸ್ತಕದಿಂದ.

1 comment:

Vimarshak Jaaldimmi said...


Very good!

Will there be a new market now to share inside traders' ನಿಕ್ಕೆರ's insides?