Sunday, May 04, 2014

LoC - ಲೈನ್ ಆಫ್ ಕಂಟ್ರೋಲ್ ( ಗುಲ್ಜಾರ್ ಹೇಳಿದ ಕಥೆ)

೧೯೪೮ ರಲ್ಲಿ  ಪಾಕಿಸ್ತಾನದ ಜೊತೆ ಆದ ಯುದ್ಧದ ನಂತರ ಎರಡೂ ಕಡೆಯ ಸೇನೆಗಳು ಕಾಶ್ಮೀರ ಗಡಿಯಲ್ಲಿ ಪರ್ಮನೆಂಟ್ ಆಗಿ ಝೇಂಡಾ ಹೊಡೆದುಬಿಟ್ಟವು. ತಾತ್ಕಾಲಿಕವಾಗಿ ಯುದ್ಧದ ಸಂದರ್ಭಕ್ಕೆ ಅಂತ ಮಾಡಿದ್ದ ಕ್ಯಾಂಪುಗಳು ಈಗ ಬ್ಯಾರಕ್ಕುಗಳಾಗಿ ಒಂದು ತರಹದ ಶಾಶ್ವತ ಅನ್ನುವ ಹಾಗೆ ಆಗಿಬಿಟ್ಟಿದ್ದವು. ೧೯೬೫ ಬರುವ ಹೊತ್ತಿಗೆ ಬಾರ್ಡರ್ ಏರಿಯಗಳಲ್ಲಿ ಒಂದು ತರಹದ 'ಸದಾ ಹೀಗೆ' ಅನ್ನುವಂತಹ ಬಿಗಿ ವಾತಾವರಣ ಬಂದು ಬಿಟ್ಟಿತ್ತು. ಗಡಿಯಲ್ಲಿ ಗುಂಡಿನ ಚಕಮಕಿ, ದಿಲ್ಲಿ ಮತ್ತು ಇಸ್ಲಾಮಾಬಾದಗಳಲ್ಲಿ ರಾಜಕೀಯ ನಾಟಕ ಎಲ್ಲ ಸಹಜವಾಗಿಬಿಟ್ಟಿದ್ದವು. ಯಾವದಾದರೂ ಮಂತ್ರಿ ಗಡಿ ವೀಕ್ಷಣೆಗೆ ಬರುತ್ತಿದ್ದಾನೆ ಅಂತಾದರೆ ಸ್ಪೆಷಲ್ ಎಫೆಕ್ಟ್ ಸಲುವಾಗಿ ಅಂತ ಒಂದು ಗುಂಡಿನ ಚಕಮಕಿ ಮಾಡುವದು ಸಹಜವಾಗಿಬಿಟ್ಟಿತ್ತು. ಎರಡೂ ಕಡೆಯ ಸೈನಿಕರು ಗಡಿ ದಾಟಿ ಆಕಡೆ ಹೋಗಿ, ಈಕಡೆ ಬಂದು, ಗಡಿಯಲ್ಲಿರುವ ಹಳ್ಳಿಗಳಿಂದ ಮೇಕೆ, ಕೋಳಿ ಎತ್ತಾಕಿಕೊಂಡು ಹೋಗಿ, ಮಟನ್ ಬಿರ್ಯಾನಿ, ಚಿಕನ್ ಬಿರ್ಯಾನಿ ಮಾಡಿಕೊಂಡು ತಿಂದರೆ ಯಾರೂ ಹುಬ್ಬೇರಿಸುತ್ತಿರಲಿಲ್ಲ. ಎಲ್ಲ ನಾರ್ಮಲ್. ಎಲ್ಲ ಕಾಮನ್. ಎಲ್ಲ ರೂಟೀನ್.

ಗಡಿಗುಂಟ ಸೈನ್ಯಗಳ ಮಧ್ಯೆ ಗುಂಡಿನ ಚಕಮಕಿ ಸಹಜವೇ ಆಗಿದ್ದರೂ, ಅದರಲ್ಲಿ ಎಲ್ಲಿಯಾದರೂ ನಾಗರೀಕರು ಸಿಕ್ಕಿಕೊಂಡು ಪ್ರಾಣಹಾನಿ ಆದರೆ ಮಾತ್ರ ಪರಿಸ್ಥಿತಿ ಗರಂ ಆಗಿ ಬಿಡುತ್ತಿತ್ತು. ಪತ್ರಿಕೆಗಳಲ್ಲಿ, ಪುಡಾರಿಗಳ ಭಾಷಣಗಳಲ್ಲಿ ತುಂಬ ಪ್ರಚೋದನಕಾರಿ ಹೇಳಿಕೆಗಳು ಇತ್ಯಾದಿ ಬಂದು ಗಡಿ ಸುತ್ತ ಮುತ್ತ ಎಲ್ಲ ಕೊತಕೊತ ಕುದಿಯುತ್ತಿತ್ತು.

ಕೆಲವೊಮ್ಮೆ ಎಷ್ಟೋ ದಿನಗಟ್ಟಲೆ, ತಿಂಗಳುಗಟ್ಟಲೆ ಎಲ್ಲ ಶಾಂತವಾಗಿರುತ್ತಿತ್ತು. ಗಡಿಗುಂಟ ಒಂದು ಸ್ಮಶಾನ ಮೌನ. ಎರಡೂ ದೇಶಗಳ ನಡುವೆ ಎಲ್ಲ ಮುಗಿದು ಹೋದ ಥಂಡಾ ಥಂಡಾ ಫೀಲಿಂಗ್. ಹಳೆ ಸಂಬಂಧ, ಜಗಳ ಮತ್ತೆ ಶುರು ಮಾಡಲೂ ಸಹಿತ ಮತ್ತೆ ಅದೇ ಬೇಕು - ಒಂದು ಚಿಕ್ಕ ಗುಂಡಿನ ಚಕಮಕಿ. ಸಂಬಂಧ ಮುಗಿಯಲು, ಶುರುಮಾಡಲು ಎಲ್ಲದಕ್ಕೂ ಅದೇ. ಆ ಕಡೆ ಮೂವರು ಸತ್ತರು ಈ ಕಡೆ ನಾಲ್ವರು ಸತ್ತರು. ಖಾತೆಗಳಲ್ಲಿ ಜಮಾ, ಖರ್ಚು ಬರೆದಂತೆ. ಈ LoC ಎಂಬುದೊಂದು ಖಾತೆ ಖಿರ್ದಿ ಪುಸ್ತಕ. ಆ ಕಡೆ ಜಮಾ ಆದರೆ ಈ ಕಡೆ ಖರ್ಚು.

ಗಡಿಯಲ್ಲಿ ನಮ್ಮವರ ಬಂಕರುಗಳು ಮತ್ತು ಪಾಕಿಗಳ ಬಂಕರುಗಳು ಅದೆಷ್ಟು ಹತ್ತಿರವಿದ್ದವೆಂದರೆ, ಈಕಡೆಯವರು ಆಕಡೆಯವರು ಅಂತಾಕ್ಷರಿ ಹಾಡಿಕೊಂಡು, ಒಬ್ಬರಿಗೊಬ್ಬರು ರೇಗಿಸುವಂತಹ ಹಾಡು ಹಾಡಿ, ಮನೋರಂಜನೆ ಮಾಡಿಕೊಂಡು ಬಂದೂಕುಗಳಿಗೆ ವಿಶ್ರಾಂತಿ ಕೊಡುತ್ತಿದ್ದರು. ಆಕಡೆಯವ ಸಿಗರೇಟ್ ಬಾಯಲ್ಲಿಟ್ಟುಕೊಂಡರೆ ಈಕಡೆಯವ ಬೆಂಕಿ ಕೊಡುವಷ್ಟು ಹತ್ತಿರ. ಅಷ್ಟು ಹತ್ತಿರತ್ತಿರ.

ಒಮ್ಮೆ ಅಲ್ಲಿದ್ದ ಮೇಜರ್ ಕುಲವಂತ್ ಸಿಂಗ್ ತನ್ನ ಜೂನಿಯರ್ ಕ್ಯಾಪ್ಟನ್ ಮಜೀದನಿಗೆ ಕೇಳಿದ್ದನು. ಅಲ್ಲಯ್ಯಾ, ಈಗ ಮಾತ್ರ ಸ್ವಲ್ಪ ಹೊತ್ತಿನ ಹಿಂದೆ ನಮಾಜಿನ ಕರೆ ಕೇಳಿ ಬಂತು. ಇದೇನು ಅರ್ಧ ಘಂಟೆ ನಂತರ ಮತ್ತೊಮ್ಮೆ?

ಮಜೀದ್ ನಕ್ಕು ಹೇಳಿದ. ಸರ್, ಅದೇನು ಅಂದ್ರೆ, ಪಾಕಿಸ್ತಾನ ನಮಗಿಂತ ಅರ್ಧ ಘಂಟೆ ಹಿಂದಿದೆ ನೋಡಿ ಅದಕ್ಕೆ. ಮೊದಲು ಕೇಳಿದ್ದು ನಮ್ಮವರದ್ದು. ಈಗ ಕೇಳಿದ್ದು ಅವರದ್ದು.

ಹಾಗಿದ್ದರೆ ಮಜೀದ್ ನೀನು ಯಾರ ಕರೆ ಕೇಳಿದಾಗ ನಮಾಜ್ ಮಾಡುತ್ತಿ? ಅಂತ ಕೇಳಿದ ಮೇಜರ್ ಕುಲವಂತ ಸಿಂಗ್.

ಆವತ್ತಿನ ಮಟ್ಟಿಗೆ, ಆಹೊತ್ತಿನ ಮಟ್ಟಿಗೆ ಯಾರದ್ದು ಅನುಕೂಲವೋ ಆ ಕರೆಯ ಪ್ರಕಾರ ಆಹೊತ್ತಿನ ನಮಾಜು ಸರ್, ಅಂತ ಹೇಳಿದ ಮಜೀದ್ ಖಡಕ್ಕಾಗಿ ಒಂದು ಸಲ್ಯೂಟ್ ಹೊಡೆದು ತನ್ನ ಕೆಲಸ ನೋಡಿಕೊಂಡು ಹೋಗಿದ್ದ.

ಮಜೀದ್ ಹೋದಾಕ್ಷಣ ಕುಲವಂತ್ ಸಿಂಗನಿಗೆ ಏನೋ ಒಂದು ತರಹ ಅನ್ನಿಸಿತು. ಇವನ ಜೊತೆ ತನಗೇಕೆ ಇಷ್ಟು ಪ್ರೀತಿ, ಗೆಳೆತನ ಎಲ್ಲ? ಈ ಮಜೀದನ ಮುಖ ನೋಡಿದಾಗೆಲ್ಲ ಅನ್ನಿಸುತ್ತದೆ ಇವನು ನನ್ನ ತಮ್ಮನಂತವನು ಅಂತ. ಯಾಕೋ, ಏನೋ?

ಒಂದು ದಿವಸ ರಾತ್ರಿ ಮೇಜರ್ ಕುಲವಂತ ಸಿಂಗನ ಟೆಂಟಿಗೆ ಕ್ಯಾಪ್ಟನ್ ಮಜೀದ್ ಬಂದ. ಬಂದವನೇ ಮೇಜರ್ ಮುಂದಿದ್ದ ಸಣ್ಣ ಟೀಪಾಯಿ ಮೇಲೆ ಒಂದು ಟಿಫನ್ ಕ್ಯಾರಿಯರ್ ಇಟ್ಟ.

ಏನಿದು? ಅಂದ ಮೇಜರ್ ಕುಲವಂತ ಸಿಂಗ.

ಸರ್, ಮಟನ್. ಮನೆಯಲ್ಲಿ ಮಾಡಿದ್ದು, ಅಂದ ಕ್ಯಾಪ್ಟನ್ ಮಜೀದ್.

ಕೈಲಿದ್ದ ವಿಸ್ಕಿ ಗ್ಲಾಸನ್ನು ಮೇಜಿನ ಮೇಲಿಟ್ಟ ಮೇಜರ್ ಎದ್ದು ನಿಂತ.

ಭಾಳ ಒಳ್ಳೇದು. ಏನಿವತ್ತು ಮಟನ್? ಏನು ವಿಶೇಷ? ಅಂತ ಕೇಳಿದ ಮೇಜರ್ ಕುಲವಂತ ಸಿಂಗ.

ಸರ್, ಇವತ್ತು ಬಕ್ರೀದ್ ಅಲ್ಲವಾ? ಇದು ಕುರ್ಬಾನಿ ಮಾಡಿದ ಮೇಕೆ ಸರ್. ನೀವು ತಿಂತೀರಿ ತಾನೇ? ಅಂತ ಕೇಳಿದ ಮಜೀದ್.

ಎಸ್, ಎಸ್, ಖಂಡಿವಾಗಿ, ಅಂದ ಮೇಜರ್ ಕುಲವಂತ್ ಸಿಂಗ್, ಟಿಫನ್ ಕ್ಯಾರಿಯರ್ ಬಿಚ್ಚಿ ಒಂದಿಷ್ಟು ರೋಸ್ಟ್ ಮಟನ್ ಬಾಯಿಗೆ ಹಾಕಿಕೊಂಡ. ಮಜೀದ್, ನೀನೂ ಒಂದು ಡ್ರಿಂಕ್ ಮಾಡಿಕೋ, ಅಂತ ಹೇಳುವದನ್ನು ಮರೆಯಲಿಲ್ಲ.

ಏ! ಬೇಡ ಸರ್! ಅಂತ ಮಜೀದ್ ಸಂಕೋಚದಿಂದ ಹೇಳಿದ.

Come on! ಒಂದು ಡ್ರಿಂಕ್ ಮಾಡಿಕೋ ಮಾರಾಯಾ. ಈದ್ ಮುಬಾರಕ್, ಅಂತ ಸ್ವಲ್ಪ ಒತ್ತಾಯ ಮಾಡಿದ ಮೇಜರ್.

ಕೈಯಲ್ಲಿ ಮಟನ್ ಚಾಪ್ಸ್ ಹಿಡಿದುಕೊಂಡೇ ಮಜೀದನನ್ನು ಅವರ ಸಂಪ್ರದಾಯದ ಪ್ರಕಾರ ಮೂರು ಸಾರಿ ಆಲಂಗಿಸಿ ಈದ್ ಮುಬಾರಕ್ ಹೇಳಿದ ಮೇಜರ್ ಕುಲವಂತ್ ಸಿಂಗ್.

ಒಂದಾನೊಂದು ಕಾಲದಲ್ಲಿ ಫತ್ತು ಮೌಶಿ ಈ ತರಹದ ಮಟನ್ ಚಾಪ್ಸ್ ನಮಗಾಗಿ ಮಾಡುತ್ತಿದ್ದಳು. ಫತ್ತು ಮೌಶಿ ಅಂದ್ರೆ ಅವಳೇ, ಅದೇ ಮುಷ್ತಾಕನ ತಾಯಿ, ಫಾತಿಮಾ. ಇದೆಲ್ಲ ತುಂಬಾ ಹಳೆಯ ಮಾತು. ನಾವು ಸಹಾರನಪುರದಲ್ಲಿ ಇದ್ದಾಗಿನ ಮಾತು, ಅಂತ ಹಳೆಯದನ್ನು ಏನನ್ನೋ ನೆನಪಿಸಿಕೊಂಡ ಮೇಜರ್ ಕುಲವಂತ್ ಸಿಂಗ್ ಕ್ಯಾಪ್ಟನ್ ಮಜೀದ್ ಕಡೆ ತಿರುಗಿ, ನೀನು ಎಂದಾದರೂ ಕಪ್ಪು ಕಡಲೆ ಹಾಕಿ ಮಾಡಿದ ಘುಗ್ಗನಿ ತಿಂದಿದ್ದಿಯಾ? ಮಟನ್ ಚಾಪ್ಸ್ ಜೊತೆ ಸಕತ್ತಾಗಿರತ್ತೆ. ಈ ಮಟನ್ ಚಾಪ್ಸ್ ಜೊತೆ ಘುಗ್ಗನಿ ಸಿಗುತ್ತದೆ ಅಂದ್ರೆ ಸಾಯಲಿಕ್ಕೂ ಸಿದ್ಧ ನೋಡಯ್ಯ. ಅಷ್ಟು ರುಚಿ ಅದು, ಅಂತ ಹೇಳಿದ ಮೇಜರ್.

ಮಜೀದ್ ಏನೋ ಹೇಳಬೇಕೆಂದುಕೊಂಡ. ಆದರೆ ಹೇಳಲೋ ಬೇಡವೋ ಅನ್ನುವಂತೆ ವಿಚಾರ ಮಾಡಿ ಹೇಳಲಿಲ್ಲ. ಆದರೆ ಮತ್ತೂ ಸ್ವಲ್ಪ ವಿಚಾರ ಮಾಡಿದ ನಂತರ ಹೇಳಿದ. ಸರ್, ಈ ಮಟನ್ ರೋಸ್ಟ್ ನನ್ನ ತಂಗಿ ಮಾಡಿ ಕಳಿಸಿದ್ದು.

ಹಾಂ!? ನಿನ್ನ ತಂಗಿ ಇಲ್ಲಿರುತ್ತಾಳೆಯೇ? ಅದೂ ಇಲ್ಲಿ ಕಾಶ್ಮೀರದಲ್ಲಿ? ಗಡಿಯಲ್ಲಿ? ಅಂತ ಆಶ್ಚರ್ಯದಿಂದ ಕೇಳಿದ ಮೇಜರ್ ಕುಲವಂತ್ ಸಿಂಗ್.

ಹೌದು ಸರ್. ಇಲ್ಲೇ ಕಾಶ್ಮಿರದಲ್ಲೇ. ಆದರೆ.................... ಅಂತ ಮಜೀದ್ ಮಾತು ನಿಲ್ಲಿಸಿದ.

ಆದರೆ....ಏನು ಆದರೆ? ಅಂತ ಕೇಳಿದ ಮೇಜರ್.

ಸರ್, ಅವಳು ಝಾರ್ಗಲ್ಲಿನಲ್ಲಿ ಇರುತ್ತಾಳೆ. ಗಡಿಯ ಆಕಡೆ. ಪಾಕಿಸ್ತಾನದಲ್ಲಿ! ಅಂದುಬಿಟ್ಟ ಮಜೀದ್.

ಮಟನ್ ಚಾಪ್ಸ್ ಮೂಳೆಯೊಳಗಿನ ನೆಣ ಚೀಪಿ ಚೀಪಿ ಆಹ್ಲಾದಿಸುತ್ತಿದ್ದ ಮೇಜರ್ ಕುಲವಂತ್ ಸಿಂಗ್, ಅರ್ರೇ ವಾಹ್! ಅಂತ ದೊಡ್ಡ ದನಿಯಲ್ಲಿ ಹೇಳಿದವನೇ, ಮಜೀದನಿಗಾಗಿ ಅಂತ ಒಂದು ಡ್ರಿಂಕ್ ಮಾಡಿಕೊಟ್ಟವನೇ, ಚೀಯರ್ಸ್! ಮತ್ತೊಮ್ಮೆ ಈದ್ ಮುಬಾರಕ್! ಅಂತ ಶುಭಾಶಯ ಹೇಳಿದ.

ಮಜೀದನ ಗ್ಲಾಸಿಗೆ ತನ್ನ ಗ್ಲಾಸನ್ನು ಕಿಂಕಿಣಿಸಿದ ಮೇಜರ್ ಕೇಳಿದ, ನಿನ್ನ ತಂಗಿ ಇದನ್ನು ಗಡಿ ಈಕಡೆ ಹೇಗೆ ಕಳಿಸಿಕೊಟ್ಟಳು? ಹಾಂ?

ಮಜೀದನಿಗೆ ಸ್ವಲ್ಪ ಕಸಿವಿಸಿಯಾಯಿತು. ಇಲ್ಲಿ ತನಕ ಹಾಯಾಗಿದ್ದ ವಾತಾವರಣ ಸ್ವಲ್ಪ ಉಸಿರುಗಟ್ಟಲು ಶುರುವಾಯಿತು. ಏನೂ ಹೇಳದೆ ಸುಮ್ಮನೆ ನಿಂತಿದ್ದ.

ನೀನು ಗಡಿಯಾಚೆ ಪಾಕಿಸ್ತಾನದೊಳಕ್ಕೆ ಹೋಗಿದ್ದೆಯಾ ಮಜೀದ್? ನಿಜ ಹೇಳು! ಅಂತ ಮಿಲಿಟರಿ ಅಧಿಕಾರಿ ತನ್ನ ಕೆಳಗಿನ ಆಧಿಕಾರಿಯನ್ನು ಕೇಳುವ ಗತ್ತಿನಿಂದ ಕಠಿಣವಾಗಿ ಕೇಳಿದ ಮೇಜರ್ ಕುಲವಂತ್ ಸಿಂಗ್.

ಇಲ್ಲ ಸರ್! ನಾನು ಗಡಿಯಾಚೆ ಹೋಗಿಲ್ಲ. ಒಂದು ಸಲವೂ ಹೋಗಿಲ್ಲ, ಅಂತ ಹೇಳಿದ ಮಜೀದ್.

ಮತ್ತೆ!!!!!!?????? ಅಂತ ಹೂಂಕರಿಸಿದ ಮೇಜರ್ ಕುಲವಂತ್ ಸಿಂಗ್.

ನನ್ನ ಭಾವ (ತಂಗಿ ಗಂಡ) ಲೆಫ್ಟಿನೆಂಟ್ ಕಮಾಂಡರ್. ಗಡಿಯ ಆಕಡೆ. ಪಾಕಿಸ್ತಾನದ ಸೈನ್ಯದಲ್ಲಿ. ನನ್ನ ತಂಗಿ ಅವನನ್ನು ಭೆಟ್ಟಿ ಮಾಡಲು ಬಂದಿದ್ದಳು, ಅಂದ ಮಜೀದ್.

ತನ್ನ ವಿಸ್ಕಿ ಗ್ಲಾಸ್ ಎತ್ತಿದ ಮೇಜರ್ ಕುಲವಂತ್ ಸಿಂಗ್ ಒಂದು ಗುಟುಕು ಹೀರಿದ. ಟೆಂಟಿನ ಒಳಗೆ ವಾತಾವರಣ ಬೇರೆ ಬೇರೆ ಕಾರಣಗಳಿಂದ ಗರಂ ಆಗುತ್ತಿತ್ತು. ಟೇಬಲ್ ಮೇಲಿದ್ದ ಟಿಫನ್ ಕ್ಯಾರಿಯರನ್ನು ದಡ ಬಡ ಅನ್ನುವಂತೆ ಮುಚ್ಚಿದ ಮೇಜರ್ ಕುಲವಂತ್ ಸಿಂಗ್ ಗತ್ತಿನಿಂದ ಸೀರಿಯಸ್ ದನಿಯಲ್ಲಿ ಕೇಳಿದ, ಇದನ್ನು ನೀನು ಗಡಿಯ ಈಕಡೆ ಹೇಗೆ ತಂದೆ? ಅದು ನನಗೆ ತಿಳಿಯಲೇ ಬೇಕು. ನಿನ್ನ ಮತ್ತು ಗಡಿಯಾಚೆ ಇರುವ ನಿನ್ನ ತಂಗಿ ಗಂಡನ ನಡುವೆ ಅದೇನು ವ್ಯವಸ್ಥೆ ಇದೆ? ಏನು ಮಸಲತ್ತು ನಡೆಯುತ್ತಿದೆ? ಹಾಂ!?

ಮಜೀದ್ ಸುಮ್ಮನೆ ನಿಂತಿದ್ದ. ಮೌನವೇ ಸ್ವಾಮಿ ಶರಣು ಅಯ್ಯಪ್ಪ!

ಏನು ಮಸಲತ್ತು ನಿಮ್ಮಿಬ್ಬರ ಮಧ್ಯೆ ಅಂತ ಕೇಳಿದೆ! ಅಂತ ಮೇಜರ್ ಕುಲವಂತ್ ಸಿಂಗ್ ಏರಿದ ದನಿಯಲ್ಲಿ ಅಬ್ಬರಿಸಿದ.

ಸರ್, ಅದು ಏನು ಅಂದ್ರೆ, ಕೆಳಗಿರುವ ಹಳ್ಳಿಯಲ್ಲಿ ಹೇಗಿದೆ ಅಂದ್ರೆ ಭಾಳ ಜನರ ಮನೆ ಗಡಿಯ ಈಕಡೆ ಇದೆ. ಹೊಲಗದ್ದೆ ಎಲ್ಲ ಗಡಿಯ ಆಕಡೆಯಿವೆ. ಗಡಿಯ ಆಕಡೆ ಪಾಕಿಸ್ತಾನದ ಕಡೆ ಸಹಿತ ಹಾಗೆ ಇದೆ. ಕುಟುಂಬ, ಸಂಬಂಧಗಳೂ ಸಹಿತ ಹೊಲಗದ್ದೆಗಳ ಹಾಗೆ ಈಕಡೆ ಆಕಡೆ ಆಗಿಬಿಟ್ಟಿವೆ....................... ಅಂತ ತಡವರಿಸುತ್ತ ಹೇಳಿದ ಮಜೀದ್.

ಮೇಜರ್ ಕುಲವಂತ್ ಸಿಂಗನಿಗೆ ಮಜೀದನ ಮಾತುಗಳಿಗಿಂತ ಧ್ವನಿಯಲ್ಲಿಯೇ ನಂಬುಗೆ ಹೆಚ್ಚು. ಪದಗಳಲ್ಲಿ ಇರಬಹುದಾದ ಸುಳ್ಳು ದನಿಯಲ್ಲಿ ನುಸುಳಿದರೆ ಆರಾಮಾಗಿ ತಿಳಿಯುತ್ತಿತ್ತು ಮೇಜರ್ ಸಿಂಗನಿಗೆ. ಮಜೀದ್ ನಿಜ ಹೇಳುತ್ತಿದ್ದಾನೆ ಅಂತ ಅನ್ನಿಸಿತು.

ಒಂದು ಧೀರ್ಘ ಮೌನದ ನಂತರ ಮುಚ್ಚಿಟ್ಟಿದ್ದ ಟಿಫನ್ ಕ್ಯಾರಿಯರ್ ಮತ್ತೆ ತೆಗೆದ ಮೇಜರ್ ಕುಲವಂತ್ ಸಿಂಗ್ ಮತ್ತೊಂದಿಷ್ಟು ಮಟನ್ ಚಾಪ್ಸ್ ತಟ್ಟೆಗೆ ಹಾಕಿಕೊಂಡ. ಅಲ್ಲಿಯ ತನಕ ತುಂಬಾ ಆತಂಕಗೊಂಡಿದ್ದ ಮಜೀದನಿಗೆ ನಿರಾಳವಾದ ಅನುಭವ.

ಸರ್,  ಗಡಿ ಆಕಡೆಯಿರುವ ಪಾಕಿಸ್ತಾನಿ ಕಮಾಂಡರ್ ನಿಮ್ಮ ಗೆಳೆಯ. ಅಲ್ಲವಾ ಸಾರ್? ನನಗೆ ಗೊತ್ತು. ಯಾಕೆಂದರೆ ನೀವು ಅವನ ಬಗ್ಗೆ ಒಂದು ಲೇಖನ ಬರೆದಿದ್ದೀರಿ. ಅಲ್ಲವಾ? ಅಂತ ಕೇಳಿದ ಮಜೀದ್.

ಮೇಜರ್ ಕುಲವಂತ್ ಸಿಂಗ್ ಫುಲ್ ಥಂಡಾ ಹೊಡೆದ. ವಿಸ್ಕಿ ನಶೆಯೆಲ್ಲ ಪೂರ್ತಿ ಇಳಿದು ಹೋದ ಅನುಭವ. ಅವನಿಗೆ ಒಂದೇ ಒಂದು ಹೆಸರು ನೆನಪಿಗೆ ಬಂತು. ಅದೇ ಹೆಸರನ್ನು ಮಜೀದ್ ಉಸುರಿದಾಗ ಮೇಜರ್ ಕುಲವಂತ್ ಸಿಂಗ್ ಕಣ್ಣಿನಲ್ಲಿ ನೀರು!

ಮುಷ್ತಾಕ್ ಅಹಮದ್ ಖೋಕರ್......ಸಹಾರನಪುರದವರು!

ಮೇಜರ್ ಕುಲವಂತ್ ಸಿಂಗನ ಕೈಗಳು ಗಡಗಡ ನಡುಗತೊಡಗಿದವು. ಟೆಂಟಿನ ಕಿಟಕಿ ಮುಂದೆ ನಿಂತ ಮೇಜರ್ ಹೊರಗೆ ನೋಡಿದ. ಹೊರಗೆ ಒಂದಿಷ್ಟು ಸೈನಿಕರು ಅಲ್ಲಲ್ಲಿ ಓಡಾಡುತ್ತಿದ್ದರು.

ಸರ್, ಕಮಾಂಡರ್ ಮುಷ್ತಾಕ್ ಅಹಮದ್ ನನ್ನ ತಂಗಿಯ ಮಾವ, ಅಂತ ಸಣ್ಣ ದನಿಯಲ್ಲಿ ಹೇಳಿದ ಕ್ಯಾಪ್ಟನ್ ಮಜೀದ್.

ಮಾವ!? ಓಯ್! ನಿನ್ನ ತಂಗಿ ಗಂಡ ಮುಷ್ತಾಕ ನಸೀಮಾ ದಂಪತಿಗಳ ಮಗನೇ?  ಅಂತ ಆಶ್ಚರ್ಯದಿಂದ ಕೇಳಿದ ಮೇಜರ್ ಕುಲವಂತ್ ಸಿಂಗ್.

ಹೌದು ಸರ್! ಅಂದು ಸುಮ್ಮನಾದ ಮಜೀದ್.

ಏ! ಇವನೇ.....ಮಜೀದ್, ಅನ್ನುವಷ್ಟರಲ್ಲಿ ಮೇಜರ್ ಕುಲವಂತ ಸಿಂಗನ ಮಾತು ನಿಂತು ಹೋಯಿತು. ಕೊರಳು ಕಟ್ಟಿಹೋಯಿತು. ಮುಂದೆ ಮಾತಾಡಲು ಆಗಲೇ ಇಲ್ಲ. ಗ್ಲಾಸನ್ನು ಎತ್ತಿದವನೇ ಅದರಲ್ಲಿದ್ದಷ್ಟೂ ವಿಸ್ಕಿಯನ್ನು ಒಂದೇ ಗುಕ್ಕಿಗೆ ಸೀದಾ ಗಂಟಲಿಗೆ ಸುರಿದುಕೊಂಡು ಬಿಟ್ಟ. ಕೊರಳಲ್ಲಿ ಕಟ್ಟಿಕೊಂಡು ಮಾತು ನಿಲ್ಲಿಸಿದ್ದ ಗಡ್ಡೆಯನ್ನು ಕರಗಿಸಲೋ ಎಂಬಂತೆ.

ಮುಷ್ತಾಕ್ ಮತ್ತು ಕುಲವಂತ್ ಇಬ್ಬರೂ ಉತ್ತರ ಪ್ರದೇಶದ ಸಹಾರನಪುರದವರು. ಒಂದು ಕಾಲದಲ್ಲಿ ಇಬ್ಬರೂ ಡೂನ್ ಕಾಲೇಜಿನಲ್ಲಿ ಕೂಡಿ ಓದಿದ್ದರು. ಇಬ್ಬರೂ ಕೂಡಿಯೇ ಡೂನ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕರಾಗಿ ತಯಾರಾಗಿದ್ದರು. ಅವರಿಬ್ಬರ ತಾಯಂದಿರು ಸಹ ಅತಿ ಆತ್ಮೀಯ ಗೆಳತಿಯರು. ನಂತರ ಹಿಂದುಸ್ತಾನ, ಪಾಕಿಸ್ತಾನ ಅಂತ ಭಾರತ ವಿಭಜನೆಯಾಯಿತು. ಹಾಗೆಯೇ ಸೈನ್ಯ ಕೂಡ ವಿಭಜನೆಯಾಯಿತು. ಮುಷ್ತಾಕ್ ಅಹಮದ್ ತನ್ನ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ಹೊರಟು ಹೋದ. ಕುಲವಂತ್ ಸಿಂಗ್ ಈಕಡೆ ಉಳಿದ. ನಂತರ ಎರಡೂ ಕುಟುಂಬಗಳ ಮಧ್ಯೆ ಏನೂ ಸಂಪರ್ಕವಿರಲಿಲ್ಲ.

ಈ ಕಡೆ  ಭಾರತ ಸೈನ್ಯದಲ್ಲಿ ಕುಲವಂತ್ ಸಿಂಗ್ ಕಾಶ್ಮೀರ ಗಡಿಗೆ ಬಂದ. ಬಂದ ಸ್ವಲ್ಪೇ ದಿವಸದಲ್ಲಿ ಗಡಿಗುಂಟ ತನ್ನ ಜೂನಿಯರ್ ಆಫೀಸರ್ ವಿಶ್ವ ಅನ್ನುವವನೊಡನೆ ಹೋಗುತ್ತಿದ್ದ ಮೇಜರ್ ಕುಲವಂತ್ ಸಿಂಗನಿಗೆ ಒಂದು ವಿಚಾರ ಬಂತು. ಗಡಿಯಾಚೆ ಇರುವ ಪಾಕಿಸ್ತಾನದ ಅಧಿಕಾರಿ ಜೊತೆ ಯಾಕೆ ರೇಡಿಯೋ ಸಂಪರ್ಕ ಮಾಡಬಾರದು? ಅಂತ. ತಲೆಗೆ ಹೊಳೆದಿದ್ದನ್ನ ಮಾಡಿಯೇ ರೂಢಿ ಸರ್ದಾರ್ಜಿಗೆ. ರೇಡಿಯೋ ಸಂಪರ್ಕ ಮಾಡಿ ಆಕಡೆಯಿದ್ದ ಪಾಕಿ ಅಧಿಕಾರಿಗೆ ಹಲೋ ಅಂದೇ ಬಿಟ್ಟ ಮೇಜರ್ ಕುಲವಂತ್ ಸಿಂಗ್!

ಅದೇನು ಮಾಯೆಯೋ! ಗಡಿಯ ಆಕಡೆ ಪಾಕಿಸ್ತಾನದಲ್ಲಿ ರೇಡಿಯೋ ಸಂದೇಶ ಸ್ವೀಕರಿಸಿದವನು ಅದೇ ಬಾಲ್ಯ ಸ್ನೇಹಿತ ಮುಷ್ತಾಕ್ ಅಹಮದ್ ಖೋಕರ್!

ಮುಷ್ತಾಕ್ ಅಹಮದ್ ಒಂದು ಕ್ಷಣ ಅಪ್ರತಿಭನಾದ. ಸುಧಾರಿಸಿಕೊಳ್ಳಲು ಸುಮಾರು ಹೊತ್ತು ಬೇಕಾಯಿತು. ನಂತರ ನೋಡಿ ಇಬ್ಬರೂ ಮಿತ್ರರೂ ಫಾರ್ಮಿಗೆ ಬಂದು ಬಹೆನ್ ಚೋದ್, ಅದು, ಇದು ಅಂತ  ಪಂಜಾಬಿಯಲ್ಲಿ ಟಿಪಿಕಲ್ ಹಳೆ ಗೆಳೆಯರ ರೀತಿಯಲ್ಲಿ 'ಪ್ರೀತಿಯಿಂದ' ಬೈದುಕೊಳ್ಳಲಿಕ್ಕೆ ಶುರುಮಾಡಿಕೊಂಡರೆ ಇಬ್ಬರ ಕಣ್ಣಲ್ಲೂ ನೀರು ಧಾರಾಕಾರ.

ಮೊದಲು ಸುಧಾರಿಸಿಕೊಂಡ ಮೇಜರ್ ಕುಲವಂತ್ ಸಿಂಗ್ ಕೇಳಿದ ಮೊದಲ ಪ್ರಶ್ನೆ: ಫತ್ತು ಮೌಶಿ ಹೇಗಿದ್ದಾಳೆ ಮಾರಾಯಾ?

ಹಾಂ! ಅಮ್ಮನಿಗೆ  ತುಂಬ ವಯಸ್ಸಾಗಿ ಹೋಗಿದೆ. ಅಜ್ಮೀರದ ಖ್ವಾಜಾ ಮೋಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಏನೋ ಹರಕೆ ಹೊತ್ತಿದ್ದಾಳೆ. ಒಮ್ಮೆ ಅಜ್ಮೇರಿಗೆ ಬಂದು, ಆಕೆಯ ಕೈಯಾರೆ ದರ್ಗಾದಲ್ಲಿ ಚಾದರ್ ಸೇವೆ ಮಾಡಿ ಹೋಗಬೇಕು ಅಂತ ಅಮ್ಮನ ಆಸೆ. ಆದರೆ ಆಕೆಯನ್ನು ಒಬ್ಬಳೇ ಕಳಿಸಲು ಸಾಧ್ಯವಿಲ್ಲ. ಸೊಸೆ ರಬಿಯಾನ ಜೊತೆ ಕಳಿಸೋಣ ಅಂದರೆ ಆಕೆಯ ಮಕ್ಕಳು ಚಿಕ್ಕವರು. ಅವರ ಶಾಲೆ ಅದು ಇದು ಅಂತ. ಹಾಗಾಗಿ ರಬಿಯಾ ಅಮ್ಮನ ಜೊತೆ ಹೋಗಲು ಸಾಧ್ಯವಿಲ್ಲ. ಅದೆಲ್ಲ ಇರಲಿ. ನನ್ನ ತಲೆ. ಏನೇನೋ ಕೊರೆಯಲು ಶುರುಮಾಡಿಬಿಟ್ಟೆ ನಾನು. ಅಲ್ಲ? ನಿನಗೆ ರಬಿಯಾ ಯಾರು ಅಂತ ಗೊತ್ತಿರಲಿಕ್ಕೆ ಸಾಧ್ಯವಿಲ್ಲ. ಅಲ್ಲವಾ? ಅಂತ ಹೇಳಿ ಮುಷ್ತಾಕ್ ಒಂದು ಸಲಕ್ಕೆ ಮಾತು ನಿಲ್ಲಿಸಿದ.

ಗೊತ್ತಿಲ್ಲದೇ ಏನು? ನಮ್ಮ ಮಜೀದನ ತಂಗಿ. ನಿನ್ನ ಸೊಸೆ. ಅವಳೇ ತಾನೇ ರಬಿಯಾ? ಸರಿಯಾ? ಅಂತ ಕೇಳಿದ ಕುಲವಂತ್ ಸಿಂಗ್, ಮಜೀದ್ ಸೈನ್ಯದಲ್ಲಿ ನನ್ನ ಜೂನಿಯರ್ ಮಾರಾಯಾ, ಅಂತ ವಿವರಣೆ ನೀಡಿದ.

ಮುಷ್ತಾಕನಿಗೆ ಡಬಲ್ ಆಶ್ಚರ್ಯ. ಬಾಲ್ಯದ ಗೆಳೆಯ ಸಿಕ್ಕಿದ್ದು ಒಂದಾದರೆ, ಸೊಸೆಯ ಅಣ್ಣ ಗೆಳೆಯನ ಜೂನಿಯರ್ ಎಂಬುದು.

ಓಯ್! ಓಯ್! ಅಂತ ಮತ್ತೆ ಖುಷಿಯಿಂದ ಕೂಗಲು ಶುರುಮಾಡಿದ ಮುಷ್ತಾಕ್ ಮತ್ತೊಂದಿಷ್ಟು ಬೈಗಳ ಮಳೆ ಸುರಿಸಿದ. ಎಲ್ಲ ಪ್ರೀತಿಯಿಂದ.

ನಮ್ಮ ಸೊಸೆ ಅಣ್ಣ ಮಜೀದನ ಒಳ್ಳೆ ರೀತಿಯಿಂದ ನೋಡಿಕೋ, ಅಂತ ಹೇಳಿದ ಮುಷ್ತಾಕ್ ಫುಲ್ ಸೆಂಟಿ ಸೆಂಟಿ ಆದ.

ಹೀಗೆ ಬಾಲ್ಯಮಿತ್ರರಿಬ್ಬರು ಅತಿ ವಿಚಿತ್ರವೆಂಬಂತೆ ಮತ್ತೆ ಜೋತೆಗೂಡಿದ್ದರು. ಅವರ ನಡುವೆ ಮನುಷ್ಯ ಅಡ್ಡಾದಿಡ್ಡಿಯಾಗಿ ಎಳೆದಿದ್ದ LoC ಇತ್ತು ನಿಜ. ಆದರೆ ರೇಡಿಯೋ ತರಂಗಗಳಿಗೆ, ಹೃದಯದ ಭಾವನೆಗಳಿಗೆ ಎಲ್ಲಿಯ ಗಡಿ, ಎಲ್ಲಿಯ LoC, ಎಲ್ಲಿಯ ಅಡೆತಡೆ? ಇಲ್ಲವೇ ಇಲ್ಲ.

ಕುಲವಂತ್ ಮತ್ತು ಮುಷ್ತಾಕ್ - ಮಿತ್ರರಿಬ್ಬರೂ ನಿರ್ಧರಿಸಿಯೇ ಬಿಟ್ಟರು. ಪಾಕಿಸ್ತಾನದಿಂದ ಮುಷ್ತಾಕ್ ಅಹಮದ್ ತನ್ನ ತಾಯಿ ಫಾತಿಮಾಳನ್ನು ವಾಘ್ ಬಾರ್ಡರ್ ಪೋಸ್ಟಿಗೆ ತರುವದು. ಅಲ್ಲಿ ಕುಲವಂತ್ ಸಿಂಗನ ಹೆಂಡತಿ ಸಂತೋಷ್ ಕೌರ್ ಬಂದು ಆಕೆಯನ್ನು ಬರಮಾಡಿಕೊಳ್ಳುತ್ತಾಳೆ. ನಂತರ ಸಂತೋಷ್ ಕೌರ್ ಫಾತಿಮಾಳನ್ನು ದೆಲ್ಲಿಗೆ ಕರೆದೊಯ್ಯುತ್ತಾಳೆ. ಮೊದಲು ಅಜ್ಮೇರಿಗೆ ಕರೆದುಕೊಂಡು ಹೋಗಿ ಫಾತಿಮಾಳ ಹರಕೆ ತೀರಿಸಿ ನಂತರ ಸಹಾರನಪುರಕ್ಕೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿರುತ್ತಾಳೆ ಕುಲವಂತ್ ಸಿಂಗನ ವೃದ್ಧ ತಾಯಿ. ಅಲ್ಲಿ ಹಳೆ ಗೆಳತಿಯರಿಬ್ಬರ ಸಮ್ಮಿಲನ. ಇದು ಮಾಡಿದ್ದ ಪ್ಲಾನ್. ತಾಯಿಯ ಹರಕೆ ಪೂರೈಸುವದು ಹೇಗಪ್ಪಾ ಅಂತ ಚಿಂತೆಯಲ್ಲಿದ್ದ ಮುಷ್ತಾಕ್ ಅಹಮದ್ ಗೆ ಎದೆಯಿಂದ ಬಂಡೆ ಎತ್ತಿಟ್ಟಷ್ಟು ನಿರಾಳ.

ನಂತರ ಒಂದು ದಿವಸ ಪಾಕಿಸ್ತಾನದ ಮುಷ್ತಾಕನ ಕಡೆಯಿಂದ ಸಂದೇಶವೊಂದು ಬಂತು. ತಾಯಿಯ ಭಾರತದ ವೀಸಾ ಬಂದಿದೆ ಅಂತ. ಈಕಡೆ ಮೇಜರ್ ಕುಲವಂತ್ ಸಿಂಗ್ ತನ್ನ ಪತ್ನಿ ಸಂತೋಷ್ ಕೌರಳಿಗೆ ಫೋನ್ ಮಾಡಿ ವಾಘ್ ಗಡಿಗೆ ಬರುವ ದಿನ ನಿಕ್ಕಿ ಮಾಡಲು ಹೇಳಿದ. ಎಲ್ಲ ವ್ಯವಸ್ಥೆ ಮಾಡಿಯಾಗಿತ್ತು. ಆಕಡೆಯಿರುವ ಮುಷ್ತಾಕನಿಗೆ ತಿಳಿಸುವದೊಂದೇ ಬಾಕಿ ಇತ್ತು.

ಆವಾಗಲೇ ರಕ್ಷಣಾ ಮಂತ್ರಿ ಗಡಿಗೆ ಬಂದು ವಕ್ಕರಿಸಬೇಕೆ! ಎರಡೂ ಕಡೆಯಿಂದ ಬಂದೂಕುಗಳು ಮೊರೆಯತೊಡಗಿದವು. ಮಂತ್ರಿ ಮಹೋದಯರು ಬಾರ್ಡರಿಗೆ ಬಂದಾಗೆಲ್ಲ ಅವರಿಗೆ ಸ್ವಾಗತ ಮಾಡಲೋ ಏನೋ ಎಂಬಂತೆ ಗುಂಡಿನ ಚಕಮಕಿ. ಮೇಜರ್ ಕುಲವಂತ್ ಸಿಂಗನಿಗೆ ಗೊತ್ತಿತ್ತು ಇದೂ ಕೂಡ ತಾತ್ಕಾಲಿಕ, ಮುಗಿದು ಹೋಗಲಿದೆ ಅಂತ. ಈ ಗದ್ದಲದ ನಡುವೆ ಆಕಡೆಯಿರುವ ಮುಷ್ತಾಕನನ್ನು ರೇಡಿಯೋ ಮೇಲೆ ಸಂಪರ್ಕಿಸಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಕೆಳಗಿನ ಹಳ್ಳಿಯಲ್ಲಿರುವ ಯಾರನ್ನಾದರೂ ಕಳಿಸಿ ಸಂದೇಶ ಮುಟ್ಟಿಸಬಹುದು ಬಿಡಿ. ಮಜೀದನಿಗೆ ಅಂತವರು ಬೇಕಾದಷ್ಟು ಜನ ಗೊತ್ತಿದ್ದರು. ಗಡಿಯಿಂದ ಆಚೆ ಈಚೆ ಹೋಗಿ ಬಂದು ಮಾಡುವದು ಅವರಿಗೆ ಮನೆಯಂಗಳ ದಾಟಿ ಪಕ್ಕದ ಮನೆಗೆ ಹೋಗಿ ಬಂದಷ್ಟೇ ಸಹಜ. ಆದರೂ ಕುಲವಂತ್ ಸಿಂಗನಿಗೆ ಚಿಂತೆ. ಪತ್ನಿ ಸಂತೋಷ್ ಕೌರ್ ಬೇರೆ ಫೋನ್ ಮಾಡಿ ಮಾಡಿ ಹೇಳುತ್ತಿದ್ದಳು. ಅಯ್ಯೋ! ಸಹಾರನಪುರದಿಂದ ನಿಮ್ಮ ತಾಯಿ ಕೂಡ ಪದೇ ಪದೇ ಫೋನ್ ಮಾಡುತ್ತಿದ್ದಾರೆ. ಅವರದ್ದು ಒಂದೇ ಗೋಳು. ಫಾತಿಮಾ ಬರುತ್ತಿದ್ದಾಳೆ ತಾನೇ? ಖಂಡಿತ ಬರುತ್ತಿದ್ದಾಳೆ ತಾನೇ? ನಿನಗೆ ಒಬ್ಬಳೇ ವಾಘ್ ಬಾರ್ಡರಿಗೆ ಹೋಗಲಾಗುತ್ತದಯೇ? ನೀನು ಫಾತಿಮಾಳನ್ನು ಹೇಗೆ ಗುರುತು ಹಿಡಿಯುತ್ತಿ ಸಂತೋಷ್? ನಾನೂ ಬಂದು ಬಿಡಲೇ ನಿನ್ನ ಜೊತೆ ವಾಘ್ ಗಡಿ ತನಕ? ಅಂತ. ಎಂದು ತನ್ನ ಹಳೆಯ ಗೆಳತಿಯನ್ನು ಭೆಟ್ಟಿಯಾದೇನೋ ಅಂತ ಕುಲವಂತ್ ಸಿಂಗನ ವೃದ್ಧ ತಾಯಿಯ ಕಾತುರ.

ಸರ್! ಪಾಕಿಸ್ತಾನಿಗಳು ತುಂಬ ಜೋರಾಗಿ ಶೆಲ್ಲಿಂಗ್ ಶುರುಮಾಡಿಬಿಟ್ಟಿದ್ದಾರೆ, ಅಂತ ಅಷ್ಟರಲ್ಲಿ ಬಂದ ಮಜೀದ್ ವರದಿ ಒಪ್ಪಿಸಿದ.

ಕುಲವಂತ್ ಸಿಂಗ್ ಉರಿದುಕೊಂಡ. ಹಾಳಾಗಿ ಹೋಗಲಿ ಆ ಪಾಕಿಸ್ತಾನದವರು. ಫತ್ತು ಮೌಶಿಯ ಗತಿಯೇನು? ಅವರು ಈಕಡೆ ಬರುವದು ಹೇಗೆ? ಇಗಲೇ ಈ ಪಾಕಿಗಳದೊಂದು ಪೀಡೆ, ಅಂತ upset ಆದ.

ಇದಾದದ್ದು ಆಗಸ್ಟ್ ೫, ೧೯೬೫.

ಅದೇ ದಿವಸ ಪಾಕಿಸ್ತಾನಿ ಪಡೆಗಳು ಚಾಂಬ ಪ್ರದೇಶದಲ್ಲಿ ಭಾರತೀಯ ಪಡೆಗಳ ಆಕ್ರಮಣ ಮಾಡಿದವು ಮತ್ತು LoC ಕ್ರಾಸ್ ಮಾಡಿಬಿಟ್ಟವು.

ಆಗಸ್ಟ್ ೨೮, ೧೯೬೫ ರಂದು ಭಾರತೀಯ ಪಡೆಗಳು ತಿರುಗಿ ಸರಿಯಾಗಿ ಉತ್ತರ ಕೊಟ್ಟವು. ಹಾಜಿ ಪೀರ್ ಪಾಸನ್ನು ವಶಪಡಿಸಿಕೊಂಡಿದ್ದು ಮಾತ್ರವಲ್ಲದೆ ಗಡಿ ದಾಟಿ ಎಂಟು ಕಿಲೋಮೀಟರ್ ಪಾಕಿಸ್ತಾನದೊಳಗೆ ನುಗ್ಗಿ ತಿರಂಗಾ ಧ್ವಜ ಹಾರಿಸಿಯೇ ಬಿಟ್ಟವು.

ಅದೇ ದಿವಸ, ಆಗಸ್ಟ್ ೨೮, ೧೯೬೫ ರಂದು ಅಲ್ಲಿ ಪಾಕಿಸ್ತಾದಲ್ಲಿ ಫಾತಿಮಾ ಮಟನ್ ರೋಸ್ಟ್ ಮಾಡುತ್ತಿದ್ದಳು. ಈ ಕಡೆ ಸಹಾರನಪುರದಲ್ಲಿ ಕುಲವಂತ್ ಸಿಂಗನ ವೃದ್ಧ ತಾಯಿ ಘುಗ್ಗನಿ ಮಾಡಲು ಕಪ್ಪು ಕಡಲೆ ಬೇಯಿಸುತ್ತಿದ್ದಳು. ಎರಡೂ ಮೇಜರ್ ಕುಲವಂತ್ ಸಿಂಗನಿಗೆ ತುಂಬ ಪ್ರಿಯವಾದ ಖಾದ್ಯಗಳೇ.

ಆಗ ಬರಸಿಡಿಲಿನಂತೆ ಬಂದು ಅಪ್ಪಳಿಸಿತು ಸುದ್ದಿ.

LoC ಬಳಿ ಹನ್ನೊಂದು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅವರಲ್ಲಿ ಮೇಜರ್ ಕುಲವಂತ್ ಸಿಂಗ ಸಹಿತ ಇದ್ದ.

ಆಕಡೆ ಫತ್ತು ಮೌಶಿಯ ಮಟನ್ ಚಾಪ್ಸ್ ರೋಸ್ಟ್ ಆಗುತ್ತಲೇ ಇತ್ತು. ಈಕಡೆ ಸಹಾರನಪುರದಲ್ಲಿ ಕರಿ ಕಡಲೆ ಬೇಯುತ್ತಲೇ ಇತ್ತು. ಅವಕ್ಕೇನು ಗೊತ್ತು ರುಚಿ ರುಚಿ ಮಾಡಿಕೊಂಡು ಚಪ್ಪರಿಸಬೇಕಾದವ LoC ಬಳಿ ಹೆಣವಾಗಿ ಮಲಗಿದ್ದ ಅಂತ.


(ಗುಲ್ಜಾರರ ಅಠಣ್ಣಿ (ಎಂಟಾಣೆ) ಎಂಬ ಕಥಾಸಂಕಲನದಿಂದ ಆಯ್ದ ಕಥೆ. ಒಂದಕ್ಕಿಂತ ಒಂದು ಅದ್ಭುತ ಕಥೆಗಳಿವೆ. )

ಗುಲ್ಜಾರ್

1 comment:

Vimarshak Jaaldimmi said...


Very good!

Human relations (and, of course, with Jummies) are far more important.