Tuesday, July 01, 2014

ಯಾರದ್ದೋ ಔಷದಿ, ಇನ್ನ್ಯಾರೋ ತೊಗೊಂಡು, ತೊಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದು!

ರಾಮ್ ಜೇಠ್ಮಲಾನಿ. ಯಾರಿಗೆ ಗೊತ್ತಿಲ್ಲ. ದೊಡ್ಡ ವಕೀಲರು. ಸಂವಿಧಾನ ಶಾಸ್ತ್ರಜ್ಞರು. ಹಿಂದೆ ಕಾನೂನು ಮಂತ್ರಿ ಮತ್ತು ಇತರೆ ಮಂತ್ರಿ ಆಗಿದ್ದವರು. ತುರ್ತು ಪರಿಸ್ಥಿತಿ ಟೈಮಿನಲ್ಲಿ ಅಂಜದೇ ಇಂದಿರಾ ಗಾಂಧಿ ವಿರುದ್ಧ ತಿರುಗಿ ಬಿದ್ದು ಹೋರಾಡಿದವರು. ತೊಂಬತ್ತು ವರ್ಷವಾದರೂ ಭಯಂಕರ ಹುರುಪಿನಿಂದ ಇರುವವರು.

ರಾಮ ಜೇಠ್ಮಲಾನಿ ಹೆಸರಲ್ಲಷ್ಟೇ ರಾಮ. ಬಾಕಿ ಎಲ್ಲದರಲ್ಲಿ ಕೃಷ್ಣ ಪರಮಾತ್ಮ. ಹಾಗಂತ ಅವರೇ ಹೇಳಿಕೊಳ್ಳುತ್ತಾರೆ. ಅಧಿಕೃತವಾಗಿಯೇ ಎರಡು ಮದುವೆ ಆದವರು. 'ಅದೆಂಗ್ರೀ ಅಧಿಕೃತವಾಗಿ ಎರಡು ಮದುವೆ!?' ಅಂತ ಕೇಳಿದರೆ, 'ಏ ನಾನು ಎರಡನೇ ಮದುವೆ ಆಗಿದ್ದು ೧೯೪೭ ರಲ್ಲಿ. ಆವಾಗ ಇನ್ನೂ ನಮ್ಮ ಸಂವಿಧಾನ ಬಂದಿರಲಿಲ್ಲ. ಹಾಗಾಗಿ ಎಲ್ಲಾ ಓಕೆ,' ಅಂತ ಹೇಳಿ, ತಮ್ಮ ಪರ್ಫೆಕ್ಟ್ ಲಾ ಪಾಯಿಂಟ್ ಹಾಕಿ ನಕ್ಕು ಬಿಡುತ್ತಾರೆ. ಪಾರ್ಟಿಗೆ ಹೋದರೆ ಈ ವಯಸ್ಸಿನಲ್ಲೂ ಸುತ್ತ ಮುತ್ತ ಸಖಿಯರೇ ಸಖಿಯರು. ವರ್ಣರಂಜಿತ ಕೃಷ್ಣ ಪರಮಾತ್ಮನಂತಿರುವ ಅವರ ಕೃಷ್ಣಲೀಲೆಗಳ ಕಥೆಗಳೂ ಅಷ್ಟೇ ಮಜೇದಾರ್. 'ಅಯ್ಯೋ, ನನ್ನ ಕೃಷ್ಣಲೀಲೆಗಳ ಬಗ್ಗೆ ಮುಚ್ಚಿಡುವಂತದ್ದು ಏನೂ ಇಲ್ಲಾರೀ. ಆದ್ರೆ ಬೇರೆಯವರಿಗೆ ಮುಜುಗರವಾಗಬಾರದು ಅಂತ ನಾನು ಅದರ ಬಗ್ಗೆ ಹೆಚ್ಚು ಮಾತಾಡುವದಿಲ್ಲ. ಅವರ ಅನುಮತಿ ತೆಗೆದುಕೊಂಡು ಬನ್ರೀ. ಎಲ್ಲ ಬಿಚ್ಚಿ ಹೇಳಿ ಬಿಡ್ತೇನಿ,' ಅಂತ ತೊಂಬತ್ತರ ಈ ಅಜ್ಜ(!) ಪೆಕಪೆಕಾ ಅಂತ ತುಂಟ ನಗೆ ಬೀರುತ್ತಾರೆ. 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ, ರಜತ್ ಶರ್ಮಾ,  'ರಾಮ್ ಸಾಬ್, ನಿಮಗೆ ಇಬ್ಬರು ಹೆಂಡತಿಯರಂತೆ. ಹೌದಾ?' ಅಂತ ಕಿಚಾಯಿಸಲು ನೋಡಿದಾಗ,' ರಜತ್, ನನ್ನ ಒಂದನೇ ಹೆಂಡತಿ ನಿನ್ನ ಒಂದೇ ಹೆಂಡತಿಕಿಂತ ಸುಖವಾಗಿದ್ದಾಳೆ ಕಣಯ್ಯಾ' ಅಂತ ವಾಪಸ್ ಜೋಕ್ ಹೊಡೆದಿದ್ದರು. ಅವರ ಪಂಚ್ ಲೈನಿಗೆ, ಡೈಲಾಗ್ ಡೆಲಿವರಿ ಶೈಲಿಗೆ ಅಲ್ಲಿ ನೆರೆದಿದ್ದ ಸಭಿಕರು ಹೊಡೆದ ಸೀಟಿ, ಚಪ್ಪಾಳೆ ಅಬ್ಬರಕ್ಕೆ ರಜತ್ ಶರ್ಮಾನ ಬಕ್ಕ ತಲೆ ಮೇಲಿನ ವಿಗ್ಗು ಅಲ್ಲಾಡಿ ಹೋಗಿತ್ತು. ಅದು ಜೇಠ್ಮಲಾನಿ ತಾಕತ್ತು.

೧೯೫೦ ರ ಸಮಯ. ಆಗ ಜೇಠ್ಮಲಾನಿ ಮುಂಬೈನಲ್ಲಿ ದೊಡ್ಡ ಕ್ರಿಮಿನಲ್ ವಕೀಲರೆಂದು ಪ್ರಖ್ಯಾತರಾಗುತ್ತಿದ್ದ ಸಮಯ. ದೇಶ ವಿಭಜನೆಯಾದಾಗ ಕರಾಚಿ ಬಿಟ್ಟು ಮುಂಬೈಗೆ ಬಂದಿದ್ದರು. ಮುಂಬೈನಲ್ಲಿ ಮತ್ತೆ ವಕೀಲಿಕೆ ಶುರು ಮಾಡಿಕೊಂಡು ಪ್ರವರ್ಧಮಾನಕ್ಕೆ ಬರುತ್ತಿದ್ದರು ಜೇಠ್ಮಲಾನಿ. ಆ ಸಮಯದಲ್ಲಿ ಅವರಿಗೆ ಒಂದು ಅಂತರಾಷ್ಟ್ರೀಯ ಕಾನೂನು ಸಮಾವೇಶಕ್ಕೆ ಆಹ್ವಾನ ಬಂತು. ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ನಗರಕ್ಕೆ ಹೊರಟರು ಜೇಠ್ಮಲಾನಿ. ಅದು ಅವರ ಮೊತ್ತ ಮೊದಲ ವಿದೇಶ ಪ್ರಯಾಣ ಬೇರೆ.

ಎಲ್ಲ ತಯಾರಾಗಿ ಹೊರಟರು. ಕರಾಚಿಯಲ್ಲಿ ವಿಮಾನ ನಿಂತಿತು. ಜೇಠ್ಮಲಾನಿ ಕರಾಚಿ ಮೂಲಕ ಹೋಗುತ್ತಿದ್ದಾರೆ ಅಂತ ತಿಳಿದ ಅವರ ಗೆಳೆಯ, ಹಳೆಯ ಲಾ ಪಾರ್ಟನರ್ ಮೊದಲೇ ಒಂದು ಸೂಟಿಗೆ ಆರ್ಡರ್ ಕೊಟ್ಟಿದ್ದರು. ಅವರ ಕರಾಚಿಯ ಖಾಸ್ ದರ್ಜಿ ವಿಮಾನ ನಿಲ್ದಾಣಕ್ಕೇ ಸೂಟ್ ತೆಗೆದುಕೊಂಡು ಬಂದು, ಟ್ರಯಲ್ ನೋಡಿ, ಫೈನಲ್ ಟಚ್ ಕೊಟ್ಟು, ಕರಾಚಿ ಬಿಡುವಷ್ಟರಲ್ಲಿ ಹೊಸದೊಂದು ಸೂಟು ಕೊಟ್ಟು ಹೋಗಿದ್ದ. ಕರಾಚಿ ಬಿಟ್ಟು ಬಂದಿದ್ದರೂ ಕರಾಚಿಯ ಮಿತ್ರರು, ಆತ್ಮೀಯರು ಜೇಠ್ಮಲಾನಿ ಅವರನ್ನು ಮರೆತಿರಲಿಲ್ಲ.

ಜೇಠ್ಮಲಾನಿ ಹೋಗಿ ಮುಟ್ಟಿದರು ಸಿರಿಯಾದ ಡಮಾಸ್ಕಸ್ಸಿಗೆ. ಸುಮಾರು ಹತ್ತು ಹದಿನೈದು ದಿವಸಗಳ ಅಧಿವೇಶನ, ಕೆಲಸ ಎಲ್ಲ ಇತ್ತು. ದೇಶ ವಿದೇಶಗಳ ಕಾನೂನು ಪರಿಣಿತರೆಲ್ಲ 'ಹೌದು! ಹೌದು!' ಅಂತ ತಲೆದೂಗುವಂತೆ ವಿಷಯ ಮಂಡನೆ ಮಾಡಿ, ಎಲ್ಲರ ಮೆಚ್ಚುಗೆ ಗಳಿಸಿದ್ದೇ ಗಳಿಸಿದ್ದು. ಭಯಂಕರ ತಲೆ ಅವರದ್ದು.

ರಾತ್ರಿ ಸ್ವಲ ಖಾನಾ ಪೀನಾ ಮಾಡಿ, ರಿಲ್ಯಾಕ್ಸ್ ಆಗಿ ಬರೋಣ ಅಂತ ಯಾವದೋ ಕ್ಲಬ್ಬಿಗೆ ಹೋಗಿ ಕುಳಿತರು ಜೇಠ್ಮಲಾನಿ. ಅಲ್ಲಿನ ಡ್ಯಾನ್ಸರ್ ಒಬ್ಬಳ ರೂಪದಲ್ಲಿ ಬಂದು ಕಾಡಿತ್ತು ಮಾಯೆ! ಫುಲ್ ಫಿದಾ ಆಗಿ ಬಿಟ್ಟರು ನಮ್ಮ ಕೃಷ್ಣ ಪರಮಾತ್ಮ. ಪೂರ್ತಿ ರಾತ್ರಿ ಆಕೆಯ ಡ್ಯಾನ್ಸನ್ನೇ ನೋಡುತ್ತ ಕುಳಿತು ಬಿಟ್ಟರು. ಬೆಳಗಿನ ಜಾವ ಕ್ಲಬ್ ಮುಚ್ಚಿ, ಎದ್ದು ಹೋಟೆಲಿಗೆ ಬಂದರೂ ನಿದ್ದೆ ಇಲ್ಲ. ಆ ಕ್ಲಬ್ಬಿನ ಡ್ಯಾನ್ಸರ್ ತನು, ಮನ ಎಲ್ಲ ಆವರಿಸಿಕೊಂಡು ಕೃಷ್ಣ ಪರಮಾತ್ಮ ಜೇಠ್ಮಲಾನಿ ಫುಲ್ ಹಾಪ್ ಆಗಿ ಬಿಟ್ಟರು. ಹೇಗೋ ಮಾಡಿ ಮರುದಿವಸದ ಅಧಿವೇಶನದ ಕೆಲಸ ಮುಗಿಸಿ ಸಂಜೆಯಾಗುವದನ್ನೇ ಕಾಯುತ್ತಿದ್ದರು. ಸಂಜೆ ಆದ ಕೂಡಲೇ ಮತ್ತೆ ಅದೇ ಕ್ಲಬ್ಬಿಗೆ ಹೋಗಿ ಅದೇ ಡ್ಯಾನ್ಸರ್ ಡಾನ್ಸ್ ನೋಡುತ್ತ ಕುಳಿತು ಬಿಡುತ್ತಿದ್ದರು.

ಒಂದೆರೆಡು ದಿವಸ ಹೀಗೆ ಆಯಿತು. ಮೂರನೇ ದಿವಸ ಹೋಗಿ, 'ಹಲೋ, ಐ ಯಾಮ್  ರಾಮ್. ಫ್ರಾಂ ಇಂಡಿಯಾ. ಯುವರ್ ಗುಡ್ ನೇಮ್ ಪ್ಲೀಸ್?' ಅಂತ ಮೆಲ್ಲಗೆ ಕಾಳು ಹಾಕಿದರು ಜೇಠ್ಮಲಾನಿ. ಕಾಳು ಹಾಕುವದನ್ನು ಅವರಿಗೆ ಹೇಳಿ ಕೊಡಬೇಕೇ? ಅದರಲ್ಲಿ ಮಾಹಿರ್ ಅವರು. ಪಾಪ ಆ ಅರಬ್ಬೀ ಸುಂದರಿಗೂ ಸಹ ಇವರ ಮೇಲೆ ಏನೋ ಅಕ್ಕರೆ. ಆದರೆ ಭಾಷೆಯದೇ ಸ್ವಲ್ಪ ತೊಂದರೆ. ಜೇಠ್ಮಲಾನಿ ಅವರಿಗೆ ಅರೇಬಿಕ್ ಭಾಷೆ ಬರುತ್ತಿದ್ದಿಲ್ಲ. ಅವಳಿಗೆ ಅರೇಬಿಕ್ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಆದರೆ ಪರಸ್ಪರ ಆಕರ್ಷಣೆ, ಲವ್ವು, ಡವ್ವಿಗೆ ಭಾಷೆ ಯಾಕೆ? ಸನ್ನೆ ಓಕೆ ಅಂತ ಹೇಳಿ, ರಾಮ ಜೇಠ್ಮಲಾನಿ ರಾಮನನ್ನು ಓಡಿಸಿ, ಪೂರ್ತಿ ಕೃಷ್ಣಾವತಾರ ಎತ್ತಿ, ರಾಧಾ ಕೃಷ್ಣ ಸರಸ ಸಲ್ಲಾಪ ಶುರು ಹಚ್ಚಿಕೊಂಡೇ ಬಿಟ್ಟರು. ಹಗಲು ಪೂರ್ತಿ ಅಧಿವೇಶನದ ಕಲಾಪ. ಸಂಜೆಯಾದ ತಕ್ಷಣ ಬೆಳಗಿನ ಜಾವದ ತನಕ ಅರಬ್ಬೀ ಸುಂದರಿಯೊಂದಿಗೆ ಸಲ್ಲಾಪ.

ಏನು ಮಾಡೋದು? ವಾಪಸ್ ಹೋಗೋ ಟೈಮ್ ಬಂತು. 'ಪತ್ರಾ ಗಿತ್ರಾ ಬರಕೊಂಡು, ಪ್ರೀತಿ ಗೀತಿ ಮಾಡಿಕೊಂಡು ಇರೋಣ. ಓಕೆ?' ಅಂತ ಅರಬ್ಬೀ ಸುಂದರಿಗೆ ಹೇಳಿ ವಾಪಾಸ್ ಬಂದರು ಜೇಠ್ಮಲಾನಿ. ಮುಂಬೈಗೆ ವಾಪಸ್ ಬಂದರೆ ಅವಳದ್ದೇ ನೆನಪು. ಏನೂ ಬೇಡ ಮತ್ತೆ ಡಮಾಸ್ಕಸ್ಸಿಗೆ ಹೋಗಿ ಬಿಡೋಣ ಅನ್ನಿಸುತ್ತಿತ್ತು. ಆದ್ರೆ ಏನು ಮಾಡೋದು? ಕರ್ಮ. ಪತ್ರ ಬರೆಯಲು ಶುರುವಿಟ್ಟುಕೊಂಡರು. ಮತ್ತೆ ಅದೇ ಭಾಷೆಯ ತೊಂದರೆ. ಇವರು ಇಂಗ್ಲೀಷ್ ನಲ್ಲಿ ಬರೆದ ಪತ್ರ ಆಕೆ ಯಾರದ್ದೋ ಹತ್ತಿರ ಓದಿಸಿ, ಅರ್ಥ ಮಾಡಿಸಿಕೊಂಡು, ಅರಬ್ಬೀ ಭಾಷೆಯಲ್ಲಿ ಇವರಿಗೆ ಉತ್ತರ ಬರೆಯುತ್ತಿದ್ದಳು. ಇವರು ಇಲ್ಲಿ ಮುಂಬೈನಲ್ಲಿ ಇನ್ಯಾರನ್ನೋ ಹಿಡಿದು, ಅರಬ್ಬೀ ಭಾಷೆಯಲ್ಲಿದ್ದ ಪತ್ರ ಓದಿಸಿಕೊಂಡು, ಮತ್ತೆ ಇಂಗ್ಲೀಷ್ ನಲ್ಲಿ ಮರು ಉತ್ತರ ಬರೆಯುತ್ತಿದ್ದರು. ದೊಡ್ಡ ತೊಂದರೆ. ದೊಡ್ಡ ತಾಪತ್ರಯ.

ಹೇಳಿ ಕೇಳಿ ಜೇಠ್ಮಲಾನಿ ಮೆದುಳು ಅಂದ್ರೆ ಅದು ಅಂತಿಂಥ ಮೆದುಳಲ್ಲ. ಸೂಪರ್ ಕಂಪ್ಯೂಟರ್ ಅದು. ತಮ್ಮ ಅರಬ್ಬೀ ಸುಂದರಿ ಜೊತೆ ಸರಾಗವಾಗಿ ಪತ್ರ ವ್ಯವಹಾರ ಮಾಡಲು ಅನುಕೂಲವಾಗುವಂತೆ ತಾವೇ ಏಕೆ ಅರೇಬಿಕ್ ಕಲಿಯಬಾರದು ಅಂತ ಜೇಠ್ಮಲಾನಿ ಯೋಚಿಸಿದರು. ತಲೆಯಲ್ಲಿ ವಿಚಾರ ಬಂದಿದ್ದೇ ತಡ ಮಾಡದೇ ಒಬ್ಬ ಅರೇಬಿಕ್ ಓದಿದ್ದ ಮೌಲ್ವಿಯನ್ನು ಅರೇಬಿಕ್ ಪಾಠಕ್ಕೆ ಗುರ್ತು ಮಾಡಿಕೊಂಡೇ ಬಿಟ್ಟರು. ಆ ಮೌಲ್ವಿ ಬಂದು ಜೇಠ್ಮಲಾನಿ ಅವರಿಗೆ ಅರೇಬಿಕ್ ಪಾಠ ಹೇಳಿಕೊಡಲು ಶುರು ಮಾಡಿದ. ತನ್ಮಯತೆಯಿಂದ ಅರೇಬಿಕ್ ಕಲಿಯಲು ಶುರು ಮಾಡಿದರು ಜೇಠ್ಮಲಾನಿ. ಒಮ್ಮೆ ಅರೇಬಿಕ್ ಬಂದರೆ ಸಾಕು, ಸಿರಿಯನ್ ಡವ್ ಜೊತೆ ಮನ ಬಿಚ್ಚಿ ಮಾತಾಡಬಹುದು. ಆಕೆಯೂ ಅಷ್ಟೇ. ಬೇಗ ಬೇಗನೆ ಅರೇಬಿಕ್ ಕಲಿಸಿಕೊಡಯ್ಯಾ! ಅಂತ ಆತುರ ಅವರದ್ದು.

ಒಂದು ದಿವಸ ಜೇಠ್ಮಲಾನಿ ಕಚೇರಿಯಲ್ಲಿದ್ದರು. ಅರೇಬಿಕ್ ಕಲಿಸುವ ಮೌಲ್ವಿ ಬಂದು ಕೂತಿದ್ದ. ಅರೇಬಿಕ್ ಪಾಠ ನಡೆದಿತ್ತು. ಯಾರೋ ಕಕ್ಷಿದಾರರು ಬಂದರು. ಅವರ್ಯಾರೋ ಆಯುರ್ವೇದ ಪಂಡಿತರಂತೆ. ಅರೇಬಿಕ್ ಕಲಿಯುವ ತರಾತುರಿಯಲ್ಲಿದ್ದ  ಜೇಠ್ಮಲಾನಿ ಬೇಗಬೇಗನೆ ಆ ಆಯುರ್ವೇದ ಪಂಡಿತರನ್ನು ನಿಪಟಾಯಿಸಿ ಕಳಿಸಿದರು. ಆಯುರ್ವೇದ ಪಂಡಿತರು ಹೋಗೋ ಮೊದಲು, ಏನೋ ಒಂದು ಔಷದಿ ತರಹದ ಬಾಟಲಿ ಕೊಟ್ಟು, 'ಒಪ್ಪಿಸಿಕೊಳ್ಳಿ ಸ್ವಾಮೀ' ಅನ್ನುವ ಧನ್ಯತಾ ಭಾವದಿಂದ ಹೇಳಿದರು. 'ಸರಿ, ಸರಿ. ಆಯಿತು ಹೋಗಿ ಬನ್ನಿ' ಅಂತ ರಾಮ್  ಜೇಠ್ಮಲಾನಿ ಅವರನ್ನು ಸಾಗಹಾಕಿದರು. ಅವರು ಕೊಟ್ಟ ಔಷದಿ ಬಾಟಲಿಯನ್ನು ಪಕ್ಕಕ್ಕೆ ಸರಿಸಿಟ್ಟರು. ಅವರಿಗೆ ಅದು ಏನು ಅಂತಲೂ ಗೊತ್ತಿರಲಿಕ್ಕೆ ಇಲ್ಲ. ಇನ್ನು ಆ ಔಷದಿ ತೆಗೆದುಕೊಳ್ಳುವದು ದೂರದ ಮಾತು. ಏನೋ ಕಕ್ಷಿದಾರರು, ಪ್ರೀತಿಯಿಂದ ಕೊಟ್ಟಿರುತ್ತಾರೆ ಅಂತ ಇಸಿದುಕೊಂಡಿದ್ದರು ಅಷ್ಟೇ.

ಅರೇಬಿಕ್ ಕಲಿಸಲು ಬಂದಿದ್ದ ಮೌಲ್ವಿ ಅಲ್ಲೇ ಕುಳಿತು ಎಲ್ಲ ನೋಡುತ್ತಿದ್ದನಲ್ಲ. ಅವನ ಕಣ್ಣುಗಳು ಇಷ್ಟಗಲ ಅರಳಿಬಿಟ್ಟವು ಆ ಔಷದಿ ಬಾಟಲಿ ನೋಡಿ. 'ನಿಮಗೆ ಅದು ಬೇಡ ಅಂತಾದರೆ ನಾನು ತೆಗೆದುಕೊಂಡು ಹೋಗಲಾ?' ಅಂತ ಕೇಳೇಬಿಟ್ಟ ಮೌಲ್ವಿ. 'ಆಯಿತಯ್ಯ. ತೊಗೋ. ತೊಗೊಂಡು ಹೋಗಿ ಮಜ್ಜಾ ಮಾಡು' ಅಂತ ಹೇಳಿ ಅವನಿಗೆ ಆ ಔಷದಿ ಬಾಟಲಿ ಕೊಟ್ಟ ಜೇಠ್ಮಲಾನಿ ತಮ್ಮ ಅರೇಬಿಕ್ ಕಲಿಕೆಯೆತ್ತ ಗಮನ ಹರಿಸಿದರು.

ಆವತ್ತಿನ ಪಾಠ ಮುಗಿಸಿ, ಔಷದಿ ಬಾಟಲಿ ತೊಗೊಂಡು ಹೋದ ಮೌಲ್ವಿ. ಅವತ್ತೇ ಕೊನೆ. ನಂತರ ನಾಪತ್ತೆಯಾಗಿಬಿಟ್ಟ. ಅರೇಬಿಕ್ ಕಲಿಯಲು ತುಂಬ ಉತ್ಸುಕರಾಗಿದ್ದ ರಾಮ್ ಜೇಠ್ಮಲಾನಿ, 'ಎಲ್ಲಿ ಹೋದನೋ ಏನೋ? ಒಳ್ಳೆ ಟೈಮ್ ನಲ್ಲಿ ಕೈಕೊಟ್ಟುಬಿಟ್ಟನಲ್ಲ ಈ ಅರೇಬಿಕ್ ಮಾಸ್ತರ್. ಥತ್ ಇವನ!' ಅಂತ ಕೈ ಕೈ ತಿಕ್ಕಿಕೊಂಡು, ಆ ಹೊತ್ತಿನ ಮಟ್ಟಿಗೆ ಅರೇಬಿಕ್ ಕಲಿಯೋ ಆಸೆ ಬಿಟ್ಟು ಕೂತಿದ್ದರು. ಸಿರಿಯನ್ ಸುಂದರಿಗೆ ಅರೇಬಿಕ್ ಭಾಷೆಯಲ್ಲಿ ಪತ್ರ ಬರೆಯೋಣ ಅಂದುಕೊಂಡರೆ ಪಾಪ ಹೀಗಾಗಿ ಬಿಡಬೇಕೆ? ಛೆ!

ಸುಮಾರು ಒಂದು ತಿಂಗಳಾದ ಮೇಲೆ ಮೌಲ್ವಿ ಪ್ರತ್ಯಕ್ಷನಾದ.

'ಏನ್ರೀ!? ಎಲ್ಲಿ ನಾಪತ್ತೆಯಾಗಿದ್ದಿರಿ ಮೌಲ್ವೀ ಸಾಬ್? ಅದೂ ಹೇಳದೇ ಕೇಳದೇ ಟೋಟಲ್ ಸಿಂಕಾಗಿ ಬಿಟ್ಟಿದ್ದಿರಿ. ಏನು ಸಮಾಚಾರ?' ಅಂತ ತಮ್ಮ ಅರೇಬಿಕ್ ಗುರುವನ್ನು ವಿಚಾರಿಕೊಂಡರು ಜೇಠ್ಮಲಾನಿ.

'ಏನು ಹೇಳೋದು ಸಾಬ್!' ಅಂತ ಏನೋ ಅನಾಹುತವಾಗಿದೆ ಅನ್ನುವಂತೆ ದೊಡ್ಡ ನಿಟ್ಟುಸಿರು ಬಿಟ್ಟ ಮೌಲ್ವಿ.

'ಏನ್ರೀ ಏನಾಯಿತು?' ಸ್ವಲ್ಪ ಘಾಬರಿ ಬಿದ್ದೇ ಕೇಳಿದರು  ಜೇಠ್ಮಲಾನಿ.

'ಅದು ಆ ಔಷದಿ......' ಅಂತ ಎಳೆದ ಮೌಲ್ವಿ.

ಜೇಠ್ಮಲಾನಿ ಅವರಿಗೆ  ಅದರ ನೆನಪೂ ಇರಲಿಲ್ಲ. ಮೌಲ್ವಿಯೇ ನೆನಪು ಮಾಡಿಕೊಟ್ಟ.

'ಹಾಂ! ಅದು. ಆವತ್ತು ಪಂಡಿತರು ಕೊಟ್ಟು ಹೋಗಿದ್ದು. ನೀವು ಆಸೆಪಟ್ಟು ಕೇಳಿ ತೆಗೆದುಕೊಂಡು ಹೋಗಿದ್ದಿರಿ. ಅದನ್ನು ತೊಗೊಂಡು ಒಂದಕ್ಕೆರೆಡು ಆಯಿತಾ? ಛೆ! ಈಗ ಹೇಗಿದ್ದೀರಿ? ಎಂತಾ ಆಯುರ್ವೇದಿ ಔಷದಿ ಆಗಿತ್ತೋ ಏನೋ!?' ಅಂತ ಸಂತಾಪ ಮತ್ತೊಂದು ವ್ಯಕ್ತಪಡಿಸಿದರು.

'ಅಯ್ಯೋ ಜೇಠ್ಮಲಾನಿಜೀ! ಅದಲ್ಲ ವಿಷಯ!' ಅಂತ ತಲೆ ಮತ್ತೂ ಕೆಡಿಸಿಬಿಟ್ಟ ಮೌಲ್ವಿ.

'ಏನ್ರೀ ಮತ್ತೆ?' ಅಂತ ಕೊಂಚ ಅಸಹನೆಯಿಂದ ಕೇಳಿದರು ಜೇಠ್ಮಲಾನಿ.

'ನನ್ನ ಹೆಂಡತಿ ಸತ್ತು ಹೋದಳು!!' ಅಂತ ಮೌಲ್ವೀ ಗೊಳೋ ಅಂದ.

'ಹಾಂ! ಔಷದಿ ತೆಗೆದುಕೊಂಡವರು ನೀವು. ಸತ್ತವರು ನಿಮ್ಮ ಹೆಂಡತಿ! ಅದೆಂತಾ ಔಷದಿರೀ?!' ಅಂತ ಅವಾಕ್ಕಾದರು ಜೇಠ್ಮಲಾನಿ.

ಮೌಲ್ವೀ ಏನೂ ಹೇಳಲಿಲ್ಲ. ಸುಮ್ಮನೆ ನಿಂತಿದ್ದ. ನಿಂತೇ ಇದ್ದ!

ಅದೆಂತ ಔಷದಿಯಾಗಿತ್ತು? ಅದನ್ನು ರಾಮ್ ಜೇಠ್ಮಲಾನಿ ಅವರಿಗೇ ಯಾಕೆ ಆ ಆಯುರ್ವೇದಿ ಪಂಡಿತರು ತಂದು ಕೊಟ್ಟಿದ್ದರು? ಅದರ ಮೇಲೆ ಮೌಲ್ವಿಯ ಕಣ್ಣು ಯಾಕೆ ಬಿತ್ತು? ಔಷದಿ ಕೇಳಿ ತೊಗೊಂಡು ಹೋದ ಮೌಲ್ವೀ ಒಂದು ತಿಂಗಳು ರಜೆ ಹಾಕಿ ಯಾಕೆ ನಾಪತ್ತೆ ಆದ? ಒಂದು ತಿಂಗಳು ಏನು ಮಾಡಿದ? ಮೌಲ್ವಿ ಔಷದಿ ತೆಗೆದುಕೊಂಡರೆ ಅವನ ಬೇಗಂ ಯಾಕೆ ಮೇಲೆ ಹೋದಳು?

ಹಲವಾರು ಪ್ರಶ್ನೆಗಳು. ಎಲ್ಲದಕ್ಕೆ ಉತ್ತರ 'ಅವರವರ ಭಾವಕ್ಕೆ. ಅವರವರ ಭಕುತಿಗೆ' ಎಂಬಂತೆ. ಸಿದ್ಧ ಉತ್ತರ ಲಭ್ಯವಿಲ್ಲ.

'ಅಯ್ಯೋ! ಮೌಲ್ವಿ ಔಷದ ತೆಗೆದುಕೊಳ್ಳುವದಕ್ಕೂ ಅವರ ಬೇಗಂ ಮೇಲೆ ಹೋಗುವದಕ್ಕೂ ಏನ್ರೀ ಸಂಬಂಧ!? ಇದು ಕಾಕತಾಳೀಯ ಇರಬೇಕು ಬಿಡ್ರೀ. just a coincidence,' ಅಂದ್ರೆ ತಮ್ಮದೇ ರೀತಿಯಲ್ಲಿ ತಲೆ ಓಡಿಸುವ ಪರಮ ತುಂಟರು 'ಇದು cockತಾಳೀಯ' ಅಂತ ಅಂದು ಪೋಲಿ ಪೋಲಿಯಾಗಿ ನಕ್ಕರು. ಪೆಕಪೆಕಾ ಅಂತ ನಕ್ಕರು. 'ತಿಳಿಲಿಲ್ಲ. ತಿಳಿಸಿ ಹೇಳಿ' ಅಂದ್ರೆ ''ಅನಂತನ ಆವಾಂತರ' ಚಿತ್ರ ನೋಡಿದ್ದೀರಾ?' ಅಂತ ಕೇಳಿದರು. 'ಹೂಂ! ನೋಡಿದ್ದೀವಿ' ಅಂದ್ರೆ 'ಅಜ್ಜಿ ಲೇಹ್ಯ! ಅಜ್ಜಿ ಲೇಹ್ಯ!' ಅಂತ ಕಣ್ಣು ಹೊಡೆದು, ಚಿತ್ರ ವಿಚಿತ್ರವಾಗಿ ನಕ್ಕು, ಅಡ್ಡ ಗೋಡೆ ಮೇಲೆಯೇ ಇದ್ದ ದೀಪವನ್ನು ಮತ್ತೂ ಅಡ್ಡಡ್ಡ ಸರಿಸಿಬಿಟ್ಟರು. ಏನರ್ಥವೋ!? ಶಿವನೇ ಬಲ್ಲ  :)

ಯಾರದ್ದೋ ಔಷದಿ, ಬೇರೆ ಯಾರೋ ತೊಗೊಂಡು, ತೊಂಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದಳ ತಂಗಿ, ಕೋಡಗನ ಕೋಳೀ ನುಂಗಿತ್ತ, ನೋಡವ್ವ ತಂಗಿ ಕೋಡಗನ ಕೋಳೀ ನುಂಗಿತ್ತ! ಅನ್ನೋ ಹಾಗಾಗಿ ಹೋಯಿತು ಈ ಕಥೆ.

ನಳಿನಿ ಗೇರಾ ಬರೆದ ರಾಮ್  ಜೇಠ್ಮಲಾನಿ ಅವರ ಅಧಿಕೃತ ಆತ್ಮಚರಿತೆಯಿಂದ ಎತ್ತಿದ್ದು. ತುಂಬ ಸ್ವಾರಸ್ಯಕರ ಪುಸ್ತಕ.  ಜೇಠ್ಮಲಾನಿ ಅವರ ಬಗ್ಗೆ ಹಿಂದೆಲ್ಲೂ ಬಂದಿರದಿದ್ದ ಹಲವಾರು ಸ್ವಾರಸ್ಯಕರ, ರೋಚಕ ವಿವರಗಳಿವೆ. ಬರೆದ ಶೈಲಿ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಇದೇ ಪುಸ್ತಕದಿಂದ ಆರಿಸಿದ ಇನ್ನೊಂದು ಘಟನೆ ಬಗ್ಗೆ ಮತ್ತೊಂದು ಬ್ಲಾಗ್ ಪೋಸ್ಟ್ ಬರೆಯಬೇಕಿದೆ.

ಇದೇ ಪುಸ್ತಕವನ್ನು ಆಧರಿಸಿ ಬರೆದ ಇನ್ನೊಂದು ಬ್ಲಾಗ್ ಪೋಸ್ಟ್.


1 comment:

Vimarshak Jaaldimmi said...


Interesting!

Did "danada dactru" also use such techniques?