ಅದು ಒನ್ನೆತ್ತಾ (1978-79) ಕಾಲ.
ನಾನೊಮ್ಮೆ ನನ್ನ ಜಾನೇಮನ್ ಮಿತ್ರರಾದ ಬಾಬುಸಾಬ ಹಾಸಿಂವಾಲೇ, ಪೈಗಂಬರವಾಸಿ ಮೆಹಮೂದ್ ಬಿಜಾಪುರ ಮತ್ತು ಅಬ್ದುಲ್ ಗಫಾರ್ ಶೇಕ್ ಸನದಿ ಜೊತೆ ಇಂಟೀರಿಯರ್ ಅತ್ತಿಕೊಳ್ಳದ ವೀಕ್ಷಣೆಗೆ ಹೋಗಿದ್ದೆ. ಧಾರವಾಡದ ಅತ್ತಿಕೊಳ್ಳ ಅಂದರೆ ಅಂದಿಗೆ ಮತ್ತು ಇಂದಿಗೂ ಕೂಡ ಮುಸ್ಲಿಂ ಬಾಹುಳ್ಯದ ಬಡಾವಣೆ. ಅದರ ಬಗ್ಗೆ ಕೆಟ್ಟ ಕುತೂಹಲ.
ಹಾಗಾಗಿ ಒಮ್ಮೆ ಮೇಲೆ ಹೇಳಿದ 'ಬಾಂಧವ' ಮಿತ್ರರ ಜೊತೆ ಅತ್ತಿಕೊಳ್ಳವನ್ನುಸುತ್ತಲು ಹೋಗಿದ್ದೆ. ಮೇಲ್ಮೆಲಿಂದ ಅತ್ತಿಕೊಳ್ಳವನ್ನು ಓಡ್ಯಾಡಿ, ಹೊರಬಂದಾಗ ಎದುರಿಗೆ ಕಂಡಿದ್ದು ಅಲ್ಲಿನ ಮಸೀದಿ. ಅದು ನಮಾಜ್ ಸಮಯ ಎಂದು ನಂತರ ತಿಳಿಯಿತು. ನಂಬಿಕಸ್ತರಿಗೆ ಕೇಳಲಿ ಎಂದು ಅಜಾನ್ ಮೊಳಗಿತು. ಅಜಾನ್ ಕೇಳಿದ ಕೂಡಲೇ ಪ್ರಾರ್ಥನೆಗೆ ಕೂಡಬೇಕಂತೆ. ಅದು ಸಾಧ್ಯವಿಲ್ಲ ಅಂತಾದರೆ ಕನಿಷ್ಠಪಕ್ಷ ತಲೆ ಮುಚ್ಚಿಕೊಳ್ಳಬೇಕಂತೆ. ಹಾಗಂತ ಬಾಬುಸಾಬ್ ಹೇಳಿದ.
ನಾನು ಕಿಸೆ ತಡಕಾಡಿದರೆ ಕರ್ಚೀಫ್ ಇರಲಿಲ್ಲ. "ತಲಿ ಮ್ಯಾಗ ಕೈ ಇಟ್ಟುಕೊಂಡರೂ ನಡಿತೈತಿ," ಅಂದ ಬಾಬು. ಇದೇನು ರಸ್ತೆ ಮಧ್ಯೆ ಎಬಡರ ಹಾಗೆ ತಲೆ ಮೇಲೆ ಕೈಹೊತ್ತು ನಿಲ್ಲುವುದು ಎಂದು ವಿಚಾರ ಮಾಡುತ್ತಿರುವಾಗ, ನನ್ನಹಿಂಜರಿಕೆ ನೋಡಿದ ಬಾಬೂನೇ ಹೇಳಿದ,"ಇದು ನಮ್ಮ ಗುಡೀಪಾ. ನಮ್ಮ ಪದ್ಧತಿಪಾ. ನಾವು ಸಾಲ್ಯಾಗ ನೀವು ಯಾಕುಂಡೆ (ಯಾ ಕುಂದೆಂದು ತುಷಾರ ಹಾರ ಧವಳಾ..) ಅಂದು, ಊದಿನಕಡ್ಡಿ ಹಚ್ಚಿ ತಿರುಗಿಸಿದಾಗ ನಾವು ನಿಮ್ಮ ದೇವರಿಗೆ ಕೈ ಮುಗಿತೇವಲ್ಲಾ?? ಇದೂ ಹಾಂಗss. ಈಗ ನಮ್ಮ ದೇವರ ಗುಡಿ ಮುಂದ ನಿಂತೇವಿ. ಹಾಂಗಾಗಿ ನಮ್ಮ ದೇವರ ಸಲುವಾಗಿ ತಲಿ ಮುಚ್ಚಿಕೋಬೇಕು," ಅಂದ.ನಾವು ಶಾಲೆಯಲ್ಲಿ ದಿನವೂ ಹೇಳುತ್ತಿದ್ದ ಸರಸ್ವತಿ ಸ್ತೋತ್ರ ಇವನ ಬಾಯಲ್ಲಿ "ಯಾಕುಂಡೆ" ಆಗಿದ್ದು ಕೇಳಿ "ಯಾ ಅಲ್ಲಾಹ್" ಎನ್ನುವ ಉದ್ಗಾರ ಹೊರಹೊಮ್ಮಬೇಕಿತ್ತು. ಆದರೆ ಆಗೆಲ್ಲ ಅಷ್ಟೆಲ್ಲಾ ಹಿಂದಿ ಸಿನೆಮಾ ನೋಡಿರಲಿಲ್ಲ. ಹಾಗಾಗಿ "ಯಾ ಅಲ್ಲಾಹ್" ಅನ್ನುವ ಸಾಮಾನ್ಯ ಉದ್ಗಾರ ಹೊರಬೀಳಲಿಲ್ಲ.
ನಮಾಜಿಗೆ ಹೋಗುತ್ತಿದ್ದ ಜನ ಮಸೀದಿ ಮುಂದೆ ನಿಂತ ನಾವು ನಾಲ್ವರು ಚೊಣ್ಣಧಾರಿ ಚಿಣ್ಣರನ್ನು ವಿಚಿತ್ರವಾಗಿ ನೋಡಿ ಒಳಗೆ ಹೋಗತೊಡಗಿದರು. ಕೆಲವರು ಮೂವರು ಮಿತ್ರರನ್ನು ತಮ್ಮವರೇ ಎಂದು ಗುರುತಿಸಿ, "ಅಂದರ್ ಆ ಬಾ," ಎಂದೂ ಕರೆದರು. ನನ್ನನ್ನು ನೋಡಿ, "ಏ ಕೌನ್ ಹೈ ಬಾ??" ಎಂದೂ ಕೇಳಿರಬಹುದು. ನಮಗೆ ಆವಾಗ ಹಿಂದಿ ಮುಲಾಂ (ಮಾಲೂಮ್) ನಹಿ. ಹಾಗಾಗಿ ತಿಳಿಯಲಿಲ್ಲ.
ಮಿತ್ರ ಬಾಬುಸಾಬ ಹೇಳಿದ ಮೇಲೆ ಮುಗಿಯಿತು. ಕೆಲ ವಿಷಯಗಳಲ್ಲಿ ಅವನ ಮಾತೇ ಅಂತಿಮ. ಹಾಗಾಗಿ ನಮಾಜ್ ಮುಗಿಯುವವರೆಗೆ ತಲೆ ಮೇಲೆ ಕೈಯಿಟ್ಟುಕೊಂಡು ನಿಂತೆ. ತಿರುಗಿ ನೋಡಿದರೆ ಉಳಿದವರೂ ಅದೇ ಭಂಗಿಯಲ್ಲಿ ನಿಂತಿದ್ದರು. ಜಾಸ್ತಿ ಏನೂ ಮುಜುಗರ ಅನ್ನಿಸಲಿಲ್ಲ. ಒಂದು ರೀತಿಯಲ್ಲಿ ಪರೋಕ್ಷ ನಮಾಜ್ ನಾವೂ ಮಾಡಿದ ಭಾವನೆ ಬಂತು.
ಅಲ್ಲಾ ಹೋ ಅಕ್ಬರ್ 🙏🙏🙏