Sunday, June 17, 2012

ಬ್ರೇನ್ ವಾಶ್ ಸೆ ಡ್ರೈವಾಶ್ ತಕ್....

ಕರೀಮ್ ಮತ್ತ ಸಿಕ್ಕಿದ್ದ.

ಸಿಕ್ಕ ಕೂಡಲೇ, 'ಸರ್ರಾ! ನಂದು ಡ್ರೈ ವಾಶ್ ಆತ್ರಿ,' ಅಂದ.

'ಏನೋ ಡ್ರೈವಾಶ್ ಅರಬಿಗೆ ಅಲ್ಲೇನೋ ಮಾಡೋದು? ಏನ್ ಅನ್ಲಿಕತ್ತಿ ನೀನು?' ಅಂದೆ.

'ಅದಲ್ಲರೀ ಸರ್ರಾ,ಬೀವಿ ಗೆ ಗಂಡು ಬಿಡೋದು. ತಿಳಿತ್ರಿ?' ಅಂದ ಕರೀಮ.

'ಏನೋ ಹಾಂಗ ಅಂದ್ರ??' ಅಂತ ಫುಲ್ confuse ಆಗಿ ಕೇಳಿದೆ. ಏನ ಅನ್ಲಿಕತ್ತಾನ ಇವ? ಬೀವಿಗೆ ಗಂಡು ಬಿಡೋದು? ಎಲ್ಲೆ ಆಕಳಕ್ಕ ಹೋರಿ ಬಿಡೋದು ಅನ್ನಲಿಕ್ಕೆ ಹಿಂಗ ಅನ್ಲಿಕತ್ತಾನೇನು ಅಂತ ಡೌಟ್ ಬಂತ.

'ಡ್ರೈವಾಶ್ ಸಾಬ್....ಡ್ರೈವಾಶ್....ಅದೇ ಸಾಬ್ ನಾವು ಅದಕ್ಕೆ ತಲಾಕ್ ಅನ್ನೋದಿಲ್ಲ?....ಅದೇ ಸಾಬ್,' ಅಂತ ಮತ್ತೂ ಹೆಚ್ಚಿನ ವಿವರಣೆ ಕೊಟ್ಟ.

'ಹೋಗ್ಗೋ ಸಾಬ್ರಾ! ನಿಮ್ಮ ಮಂದಿ ಒಳಗ ಅಷ್ಟ ಸಿಂಪಲ್ ಆಗಿ  ತಲಾಕ್ ಅಂತ ಹೆಸರ ಇಟ್ಟಾರ. ಅದನ್ನ ಹೇಳೋದು ಬಿಟ್ಟು ಡೈವೋರ್ಸ್ ಅನ್ನಲಿಕ್ಕೆ ಹೋಗಿ ಡ್ರೈವಾಶ್ ಮಾಡಿ ಬಿಟ್ಟರಲ್ಲರಿ,' ಅಂತ ತಲಿ ತಲಿ ಚಚ್ಚಿಕೊಳ್ಳುದ್ರಾಗ ಆಗ ಮಾತ್ರ ಹಣಿ ಮ್ಯಾಲೆ  ಎಳಕೊಂಡ ಬಂದ ಭಸ್ಮದ ಮೂರು ಪಟ್ಟಾ ಎಲ್ಲ ಕೆದರಿ ರಾಡಿ ಎತ್ತು. ಜೋಡಿ ಕೆಂಪ ಕುಂಕುಮ ಮಿಕ್ಸ್ ಆಗಿ ಮಸ್ತ ಲುಕ್ ಬಂದಿರ್ಬೇಕು ನನ್ನ ಮಸಡಿದು.

'ಯಾಕ? ಏನಾತು ಕರೀಂ? ನೀನ ಕೊಟ್ಟಬಿಟ್ಟಿ ಏನು? ಮೂರ ಸಲ ತಲಾಕ್, ತಲಾಕ್, ತಲಾಕ್ ಅಂದ್ರ ಆತಂತಲ್ಲ? ಮಾಡಿ ಮುಗಿಸಿಬಿಟ್ಟಿ ಏನು??' ಅಂದೆ.

'ಇಲ್ಲ ಸಾಬ್. ನಾವು ಡ್ರೈವಾಶ್ ಮಾಡ್ಲಿಲ್ಲ,' ಅಂದ ಕರೀಮ.

'ಹೋಗ್ಗೋ ನಿನ್ನ! ಇರ್ಲಿ. ನಿನಗ ಡೈವೋರ್ಸ್ ಅನಬೇಕಾಗ್ಯದ ಆದ್ರ ನಾಲಗಿ ಹೊಳ್ಳದ ಡ್ರೈವಾಶ್ ಅನಕೊತ್ತ ಇರು. ಇರ್ಲಿ ಮುಂದ ಹೇಳಪಾ ದೋಸ್ತ,' ಅಂದು ನಿಂತೆ.

'ಇಲ್ಲ ಸಾಬ್. ಆಕಿದು ಒಬ್ಬಾಕಿ ದೋಸ್ತ ಆಕಿದು ಬ್ರೇನ್ ವಾಶ್ ಮಾಡಿಬಿಟ್ಟಿ ಡ್ರೈವಾಶ್ ಮಾಡಿಸಿಬಿಟ್ಟಳು ಸಾಬ್,' ಅಂದ ಕರೀಂ

'ಹೋಗ್ಗೋ ಸಾಬ್ರಾ. ಸದ್ಯಾ ಏನರ Washington ಕಡೆ ಹೋಗಿ ಬಂದೀರಿ ಏನು? ಮೊದಲು ಡ್ರೈ ವಾಶ್ ಆತು. ಈಗ ಬ್ರೇನ್ ವಾಶ್ ಅಂತೀರಿ?ವಾಶ್ ವಾಶ್ .... ಏನು ಕಥಿರೀ?' ಅಂದೆ. ಇವತ್ತು ಫುಲ್ washout ಅಂತ ಕಾಣಿಸ್ತದ ಇವನ ಕಾಲದಾಗ.

'ಅದೇ ಸಾಬ್. ನಾವು ಬಕ್ರೀದು (ಆಡಿಂದು) ಭೇಜಾ ಫ್ರೈ ಮಾಡೋದಿಲ್ಲ? ಹಾಗೆ ಈ ಮಂದಿ ನೋಡಿ ಸಾಬ್ ಭೇಜಾನೆ ವಾಶ್ ಮಾಡಿ ಬಿಡ್ತಾರೆ ಸಾಬ್,' ಅಂದ ಕರೀಮ.

ಈಗ ಮಿಕ್ಸ್. ಬ್ರೇನ್ ಹೋಗಿ ಭೇಜಾ ಆತು. ವಾಶ್ ಹಾಂಗ ಉಳಿತು. ಸೊ ಭೇಜಾ ವಾಶ್...ಅಂತ ಹೇಳಿದ ಕರೀಂ.

'ಹೂಂ. ಮುಂದ ಹೇಳಪಾ. ಹ್ಯಾಂಗ ನಿನ್ನ ಹೆಂಡತೀದು ಭೇಜಾ ವಾಶ್ ಮಾಡಿದಳು ಅಕಿ ಗೆಳತಿ?' ಅಂತ ಕೇಳಿದೆ.

'ಕಾನ್ ಮೇ ಮೂತ್ ಕೆ ಸಾಬ್!' ಅಂತ ಬಾಂಬ್ ಹಾಕಿದ ಕರೀಮ.

'ಏನೋ ಇದು!? ಯಾರೋ ಯಾವದೋ ಕಾನ್ ಅಂದ್ರ ಅಡವಿ ಒಳಗ ಮೂತ್ ಅಂದ್ರ ಉಚ್ಚಿ ಹೊಯ್ದ ಬಂದ್ರ ನಿನ್ನ ಹೆಂಡತೀದು ಬ್ರೇನ್ ವಾಶ್ ಹ್ಯಾಂಗ ಆಗ್ತದಪಾ? ತಲಿ ಸರಿ ಅದನೋ ಇಲ್ಲೋ??' ಅಂದೆ. ಫುಲ್ ಘಾಬರಿ ನನಗ.

'ಆ ಕಾನ್ ಅಂದ್ರೆ ನಿಮ್ಮದು ಅಡವಿ, ಜಂಗಲ್ ಅಲ್ಲ ಸಾಬ್. ಕಾನ್, ಕಾನ್,' ಅಂತ ಕಾನ್ಪಟ್ಟಿ ಮ್ಯಾಲೆ ಎರಡೂ ಕೈ ತೊಗೊಂಡ ಕಿವಿ ಹಿಡಕೊಂಡ ಮ್ಯಾಲೇನೇ ನಂಗ ಗೊತ್ತಾತು ಅವ ಕಿವಿ ಅನ್ನಲಿಕತ್ತಾನ ಅಂತ.

'ಈಗ ಇದೆಲ್ಲ ಬ್ಯಾಡ. ಸೀದಾ ಕನ್ನಡದಾಗ ಹೇಳಪಾ ಕರೀಂ ಭಾಯ್,' ಅಂತ ಅಂದೆ.

'ಅದೇ ಸಾಬ್. ನಂದು ಹೆಂಡ್ತಿದು ಗೆಳತಿ ಇಲ್ಲಾ? ಆಕಿ ನಮ್ಮ ಹೆಂಡತಿದು ಕಿವಿ ಒಳಗೆ ಉಚ್ಚಿ ಹೊಯ್ದು ಫುಲ್ ಬ್ರೇನ್ ವಾಶ್ ಮಾಡಿ,ತಲಿ ಕೆಡಸಿ, ನನಗೆ ಡ್ರೈವಾಶ್ ಮಾಡಿಸಿಬಿಟ್ಟಳು ಸಾಬ್. ಬರ್ಬಾದ್ ಹೋಗಯಾ ಕರೀಂ!' ಅಂತ ಅಲವತ್ತುಕೊಂಡ.

'ಓಹೋ ಹಾಂಗ ಅನ್ನು. ಅಂದ್ರ ನಿನ್ನ ಹೆಂಡ್ತಿ ಕಿವಿಯೊಳಗ ಹೇಳಬಾರದ್ದು ಹೇಳಿ, ತಲಿ ಕೆಡಸಿ, ನಿನಗ ತಲಾಕ್ ನಾಮಾ ಕೊಟ್ಟು ನಾಮ ಹಾಕಿದರು ಅಂದಂಗ ಆತು. ಇರ್ಲಿ ತೊಗೋ. ಈ ರೀತಿ ಆದರೂ ನಿನಗೂ ನಾಮ ಹಾಕ್ಕೊಳ್ಳೋ ಸೌಭಾಗ್ಯ ಬಂತು,' ಅಂತ ಅನಬೇಕಂತ ಮಾಡಿದ್ದೆ. ಆದ್ರ ಅದು ಭಾಳ ಬಹಳ insensitive ಅಂತ ಅನ್ನಿಸಿ ಹೂಂ ಹೂಂ ಅಂತ ಹೆಗಲು ಕೊಟ್ಟೆ ಕರೀಮಗ ಅಳಲಿಕ್ಕೆ.

ಆದ್ರ ಒಂದು ಡೌಟ್ ಬಂತು.

'ಅಲ್ಲೋ ಕರೀಮ, ಕಿವ್ಯಾಗ ಉಚ್ಚಿ ಹೊಯ್ದರ(ಛೇ! ಛೇ! ನಂದೂ ಭಾಷಾ ಫುಲ್ ಚೇಂಜ್ ಆಗ್ಲಿಕತ್ತದ), ಅಲ್ಲೋ ಯಾರೋ ಏನೋ ಕಿವ್ಯಾಗ ತುಂಬಿದರ ನಿನ್ನ ಹೆಂಡತಿಗೆ ಏನ ಬುದ್ಧಿ ಇರಲಿಲ್ಲ ಏನು? ಹೇಳಿದ್ದು ಎಲ್ಲ ನಂಬಲಿಕ್ಕೆ?ಹಾಂ?' ಅಂತ ಕೇಳಿದೆ.

'ಇಲ್ಲ ಸಾಬ್. ಅದು ನಮಗೆ ಏನು ಗೊತ್ತು? ಎಲ್ಲ ಹಾಪ್ ಮಂದಿ ಸಾಬ್. ಕಿವಿನಲ್ಲಿ ಕೇಳಿದ್ದು, ಕಣ್ಣಲ್ಲಿ ಕಂಡಿದ್ದು, ಪರಾಮರ್ಶಿಸಿ  ನೋಡೋ ಸಬರ್, ಅಕಲ್ ಎರಡೂ ಇಲ್ಲ ಸಾಬ್,' ಅಂದ ಕರೀಂ ಒಳ್ಳೆ ತತ್ವಜ್ಞಾನಿ ಗತೆ.

ಹೂಂ. ಆಗಿದ್ದ ಆತು. ಇನ್ನ ಮ್ಯಾಲೆ ಫುಲ್ ಟೈಮ್ ಫಕೀರ್ ಆಗಿ ಬಿಡು. ಇದೆಲ್ಲ ಸಾಕು. ಖುದಾ ಹಾಫಿಜ್ ಕರಿಂ ಸಾಬ್ರಾ,' ಅಂತ ಹೇಳಿ ಹೊರಟುಬಂದೆ.

ಹೂಂ ಸಾಬ್. ನಾನು ಫಕೀರ್ ಆಗಿಬಿಟ್ಟಿ ಎಲ್ಲರಿಗೂ ದುವಾ ಮಾಡ್ತೇನಿ. ಮಂದಿಗೆ ಬುದ್ಧಿ ದವಾದಿಂದ ಇಲ್ಲ ಸಾಬ್ ದುವಾದಿಂದಲೇ ಬರೋಕೆ ಸಾಧ್ಯ,' ಅಂದ ಕರೀಮ.

ಕರೀಮನ ಕಥಿ ಏನೇ ಇರಬಹುದು. ಆದ್ರ ವಿಚಾರ ಮಾಡ್ರಿ. ದಿನ ಬೆಳಗಾದ್ರ ನಿಮ್ಮ ಕಿವಿಯೊಳಗ ಯಾರ ಯಾರು ಏನೇನ ತುಂಬ್ತಾರ ಅಂತ. ನೀವೂ ಸಹ ವಿವೇಚನೆ ಇಲ್ಲದ ನಿಮ್ಮ ಕಿವಿನ ಕಿವಿ ಹಾಂಗ ಇಟ್ಟುಗೊಳ್ಳದ ಸುಲಭ ಶೌಚಾಲಯದ ಮೂತ್ರಿ ತರಹ ಮಾಡ್ಕೊತ್ತೀರಿ ಏನು? ನಿಮಗ ಬಿಟ್ಟಿದ್ದು. ಎಲ್ಲ ಶಾಣ್ಯಾ ಮಂದಿ.

ಇನ್ನು ಮಂದಿ ಕಿವಿಯೊಳಗ ಉಚ್ಚಿ ಹೊಯ್ಯವರಿಗೆ ಏನು ಹೇಳೋದು? ಅವರದ್ದು ತಪ್ಪು ಇಲ್ಲ. ಅವರು ಬಂದಾಗ ಕಿವಿನ ಸುಲಭವಾಗಿ ಸುಲಭ ಶೌಚಾಲಯದ ಮೂತ್ರಿ ನಾವು ಮಾಡಿಕೊಳ್ಳಲಿಲ್ಲ ಅಂದ್ರ ಅವರು ಬ್ಯಾರೆ ಕಡೆ ಹೋಗ್ತಾರ. ಆಮ್ಯಾಲೆ ಎಲ್ಲೂ ಸಿಗದ ಖರೆ ಕಾನ್ (ಅಂದ್ರ ಜಂಗಲ್) ಗೆ ಹೋಗಿ ಅಲ್ಲೇ ಗಿಡಕ್ಕೋ ಮರಕ್ಕೋ ಹೋಗಿ ಹೊಯ್ದ (ಹೇಳಿ) ಬರ್ತಾರ.

ಕಿವಿ ಕಿವಿಯಾಗೇ  ಇರಲಿ ಸಾರ್ವಜನಿಕ ಮೂತ್ರಿ ಆಗದಿರಲಿ.

ಡ್ರೈವಾಶ್ extreme ಕೇಸ್ ಆಗಿರಬಹುದು. ಆದ್ರ ಮಂದಿ ಕಡೆ ಕಿವ್ಯಾಗ ಉಚ್ಚಿ ಹೊಯ್ಸ್ಕೊಂಡು, ಗೆಳೆತನ ಇನ್ನೊಂದು ಕಳಕೊಂಡು, ಕಾನ್ಪಟ್ಟಿ ಮ್ಯಾಲೆ ಗಜ್ಜು ತಿಂದು, ಮಂಗ್ಯಾ ಆಗಿ, ಆಮ್ಯಾಲೆ deeply ರಿಗ್ರೆಟ್ ನಾವೇ ಎಷ್ಟೋ ಸಾರಿ ಆಗಿರತೇವಿ. ಅದು ಆಗೋದು ಬ್ಯಾಡ. ಯಾರು ಏನೇ ಹೇಳಲಿ ಪರಾಮರ್ಶಿಸಿ ನೋಡೋ ವಿವೇಕ ಸದಾ ಇರಲಿ ಅಂತ ಆಶಾ ಅಷ್ಟ.

ಜೈ ಶಂಭುಲಿಂಗ.

ಪ್ರೇರಣೆ: ಕೆಲವೊಂದು ಡೈಲಾಗ್ಸ್, ಸ್ಟೈಲ್ ದಿ. ಧೀರೇಂದ್ರ ಗೋಪಾಲ್ ಅವರ ಹಲವಾರು ಪ್ರಹಸನಗಳಿಂದ ಎತ್ತಿದ್ದು. ಅದಕ್ಕೆ ಲಾಸ್ಟ್ ನಲ್ಲಿ ಜೈ ಶಂಭುಲಿಂಗ.

No comments: