ಕರೀಂ ಮತ್ತೆ ಸಿಕ್ಕಿದ್ದ.
ಬಾರೋ ದೋಸ್ತಾ......ಹಾಪ್ ಚಾ ಕುಡದ ಬರೋಣ್ ....ಬಾ
ಇಲ್ಲ ಸಾಬ್.....ಚಾ ಕುಡಿಯೋ ಹಾಲತ್ ಇಲ್ಲಾ ಸಾಬ್.
ಯಾಕೋ ಏನಾತ್ ? ಎಂತಾ ಬ್ಯಾನಿ ಬಂದರೂ ಚಾ ಕುಡಿಬೋದು .....ಬಾರೋ..ಅದೂ ಹಾಪ್ ಚಾ.
ಜುಲ್ಮಿ ಮಾಡ ಬ್ಯಾಡ್ರಿ ಸಾಬ್.....ಭಾಳ್ ಗ್ಯಾಸ್ ಆಗಿ ಬಿಟ್ಟಿದೆ. ಕೂಡಲಿಕ್ಕೆ, ಒಂದು ನಿಮಿಷ, ಒಂದು ಕಡೆ ಕೂಡಲಿಕ್ಕೆ ಆಗದಷ್ಟು ಪ್ರಾಬ್ಲೆಮ್ ಆಗಿದೆ ಸಾಬ್.
ಚಿಂತಿ ಮಾಡ ಬ್ಯಾಡ್....ಯಾರಿಗೆ ಗ್ಯಾಸ್ ಆಗೋದಿಲ್ಲಪಾ? ಎಲ್ಲರಿಗೂ ಅವರ ಅವರ ಪ್ರಕೃತಿ ಗೆ ಅನುಗುಣವಾಗಿ ಆಗ್ತದಪಾ. ಆಗೋದು ಆಗ್ತದ. ಅದು ನಮ್ಮ ಕೈಯಾಗ್ ಇಲ್ಲ. ನೋಡ್ಕೊಂಡು ಬಿಟ್ಟರ ಆತಪಾ. ಚಾ ಬ್ಯಾಡ್ ಅಂದ್ರ ಒಂದು ಸೋಡಾ ವಿಥ್ ಇನೋ ಕುಡಸಲಿ ಏನು? ಏಕ್ದಂ ಆರಾಮ್ ಸಿಗ್ತದ ನೋಡು.....ಟ್ರೈ ಮಾಡೋ .
ಅವನ ಖತರ್ನಾಕ್ ಗ್ಯಾಸ್ ಗೆ ಸಿಕ್ಕಿ ಎಲ್ಲೇ ನಾನ ಭೋಪಾಲ್ ಗ್ಯಾಸ್ ಟ್ರಾಜೆಡಿ ವಿಕ್ಟಿಮ್ ಆಗೋ ಭಯ ಹುಟ್ಟಿ ಇವನ್ಗ ಲಗೂನ ಇನೋ ಕುಡಸಲಿಕ್ಕೇ ಬೇಕು ಅಂತ ಭಟ್ಟನ ಅಂಗಡಿ ಹತ್ತರ ಕರ್ಕೊಂಡ ಹೊಂಟೆ.
ಸಾಬ್ ಅದಕ್ಕಿಂತ ದೊಡ್ಡ ಪ್ರಾಬ್ಲೆಮ್ ಆಗಿದೆ....ಅಂದ ಕರೀಂ.
ಏನಪಾ?
ನಮ್ಮ ಬೇಗಂ ರಾತ್ರಿ ಬಿಸ್ತರ್ನಿಂದ ಹಾರಿ ಹಾರಿ ಹೋಗ್ತಾರೆ ಸಾಬ್.
ಏನೋ ಹಾಂಗ ಅಂದ್ರ? ಬೇಗಂ ಬಿಸ್ತರನಿಂದ ಹಾರಲಿಕ್ಕೆ ಅವರ ಮೈಯಾಗ ಏನು ದೆವ್ವ ಬಂದದ ಏನು?
ಇಲ್ಲ ಸಾಬ್ ಅಕಿನೂ ಸಂಸ್ಕೃತ ತೊಗೊಂಡಿದ್ದಳು ಹೈಸ್ಕೂಲ್ ನ್ಯಾಗೆ.
ಮಂಗ್ಯಾನ್ ಕೆ....ಕರೀಂ...ತಲಿ ತಿನ್ ಬ್ಯಾಡ....ಸೀದಾ ಸೀದಾ ಹೇಳು....ಅಕಿ ಸಂಸ್ಕೃತ ತೊಗೊಂಡಿದ್ದಕ್ಕು, ನಿನ್ನ ಗ್ಯಾಸ್ ಗೂ, ಮತ್ತ ಆಕಿ ರಾತ್ರಿ ಹಾರಿ ಹಾರಿ ಹೋಗುದಕ್ಕು ಏನ ಲಿಂಕ್ ಅಂತ.
ಇದು ಏನೋ ಭಯಂಕರ ಕೇಸ್ ಅನ್ನಿಸ್ತು.
ನೋಡಿ ಸಾಬ್ ಆ ಹೆಗಡೆ ಮಾಸ್ತರ್ ಇಲ್ಲ...?.ಅವರು ನಮಗೂ ನಿಮಗೂ ಸಂಸ್ಕೃತ ಕಲಿಸಿದಾರೆ..... ನಮ್ಮ ಬೇಗಂಗೂ ಕಲಿಸಿದಾರೆ. ನಮ್ಮ ಬೇಗಂ ಸಂಸ್ಕೃತದಲ್ಲಿ ವೀಕ್ ಅಂತ ಟೂಶನ್ ಗೆ ಹೋಗ್ತಾ ಬ್ಯಾರೆ ಇದ್ದಳು. ನಿಮಗೆ ಹೆಗಡೆ ಮಾಸ್ತರ್ ಗೊತ್ತಲ್ಲ? ಟೂಶನ್ ಭಾಳ ಮಸ್ತ ಕೊಡ್ತಾ ಇದ್ದರು ಅಂತ...ಹಾಗೆ ಟೂಶನ್ ಗೆ ಹೋದಾಗ ಟೆಕ್ಸ್ಟ್ ಬುಕ್ ನಲ್ಲಿ ಇಲ್ಲದೆ ಇರೋ ಹಾಳು ಮೂಳು ಶ್ಲೋಕ ಎಲ್ಲ ನಮ್ಮ ಬೇಗಂ ಗೆ ಹೇಳಿ ಬಿಟ್ಟಿ ಆಕಿ ಹಾಪ್ ಆಗಿ ಬಿಟ್ಟಿದಾಳೆ.
ಹೆಗಡೆ ಮಾಸ್ತರ್.... ಮುಂಜಾನೆ ನೆನಪ್ ಮಾಡ್ಕೊಳ್ಳೋ ಅಂತಹ ದೇವತಾ ಮನುಷ್ಯಾ....ಅವರು ಕರೀಮ್ನ ಹೆಂಡತಿಗೆ ಅದೆಂತ ಸಂಸ್ಕೃತ ಶ್ಲೋಕ ಹೇಳಿ ಕೊಟ್ಟಿರಬೇಕು?...ಅದೂ ಅಕಿ ನಮ್ಮ ಕರೀಮನ್ನ ಹಾಸಿಗೆಯಿಂದ ಬಿಟ್ಟು ಓಡೋ ತರಹದ ಶ್ಲೋಕ.
ಯಾವ್ ಶ್ಲೋಕಾನೋ ಕರೀಂ ಭಾಯಿ ?
ಸಾಬ್ ನಿಮಗೆ ಗೊತ್ತು ನಮ್ಮ ಸಂಸ್ಕೃತ ವೀಕ್ ಅಂತ....ಗಲತ್ ಗಲತ್ ಹೇಳತೇನಿ.
ಇರ್ಲಿ ತೊಗೋ....ನಿನಗ ಹ್ಯಾಂಗ ನೆನಪ ಅದ ಹಾಂಗ ಹೇಳು.
ಸಾಬ್ ಅದೇನೋ ಅದೇ ನೋಡಿ ಅಂತ ಕರೀಂ ಶುರು ಮಾಡಿಕೊಂಡ.
ಜಾತಾ ವಾಯು ದೇಹಾಸೆ
ಬೀವಿ ಭಾಗ್ತಿ ಐಸೆ ಬದನ್ ಸೆ ||
ಸಾಬರ...ಇದು ಯಾವ್ ಭಾಷಾ? ಸಂಸ್ಕೃತ ಅಂತೂ ಅಲ್ಲ.
ನೋಡಿ ಸಾಬ್....ನಾನು ಹೇಳಿದೆ ನಿಮಗೆ. ನಮ್ಮದು ಸಂಸ್ಕೃತ ಭಾಳ ತುಟ್ಟಿ ಅಂತಾ....ನಮಗೆ ಎಷ್ಟು ನೆನಪ ಅದೇ ಅಷ್ಟು ಹೇಳಿದೆ ಸಾಬ್.
ಏನು...ಇದು...?ಈ ಶ್ಲೋಕಾ ಕೇಳಿ ಸಾಬರ ಹೆಂಡ್ರು ರಾತ್ರಿ ಇವರು ಗಾಸ್ ಬಿಟ್ಟಾಗೊಮ್ಮೆ ಇವರಿಂದ ದೂರ ದೂರ ಹಾರ್ತಾರ್ ಅಂದ್ರ ಇದರಲ್ಲಿ ಏನೋ ನಿಗೂಢ ರಹಸ್ಯ ಇರಬೇಕು ಅಂತ ಅನ್ನಿಸ್ತು.
ಇದೆಲ್ಲ ಇವನ ಕಡೆ ಬಗೆಹರೆಯೂದ ಅಲ್ಲ...ಸೀದಾ ಪೂಜ್ಯ ಹೆಗಡೆ ಮಾಸ್ತರ್ ಕಡೆ ಹೋಗಿ ಕೇಳಬೇಕು ಅಂತ.
ಹೋದ್ವಿ ಹೆಗಡೆ ಮಾಸ್ತರ್ ಕಡೆ.
ಹೋಯ್ .....ಹೆಗಡೆ ಮಾಸ್ತರ್ರು...ನಮಸ್ಕಾರ....ನಿಮ್ಮ ಶ್ಲೋಕದ ಪ್ರಭಾವ ನೋಡಿ. ನಮ್ಮ ಕರೀಮ್ನ ಹೆಂಡತಿ ಅವನ್ನ ಬಿಟ್ಟಿಕ್ಕೆ ಹೋಪ ತಯಾರಿ ಮಾಡ್ತಾ ಇದ್ದು. ಎಂತ ಹೇಳಿ ಅವನ ಹೆಂಡ್ತಿ ತಲೆ ಕೆಡಸಿದ್ರಿ ನೀವು?...........ಅಂತ ಸೀದಾ ಹವ್ಯಕ ಭಾಷೆಯಲ್ಲಿ ಆವಾಜ್ ಹಾಕಿದೆ. ನಾನೂ ಹವ್ಯಕ ಬ್ರಾಹ್ಮಣ ನೋಡ್ರಿ.
ಎಂತದಾ ಮಾಣಿ ....? ಅಪರರೂಪಕ್ಕೆ 25 ವರ್ಷ ಮ್ಯಾಲೆ ಸಿಕ್ಕವ ನೀನು. ಅದೂ ಆ ಮಳ್ಳ ಕರೀಮನ ಕರ್ಕಂಡು ಬಂಜೆ. ಎಂತದಾ ಮಾರಾಯ ನಿನ್ನ ಪ್ರಾಬ್ಲೆಮ್? 25 ವರ್ಷದ ಮ್ಯಾಲೂ ನಿನ್ನ ತಲೆ ಬಿಸಿ ಹೋಜಿಲ್ಲೆ ಮಾರಾಯ....ಅಂತ ಹೆಗಡೆ ಮಾಸ್ತರ ಶುದ್ದ ಹವ್ಯಕ ಭಾಷೆಯಲ್ಲಿ ಅಲವತ್ತುಕೊಂಡರು.
ಕರೀಮ್ಗ ಕನ್ನಡಾನ ಸರಿ ಬರೋದಿಲ್ಲ. ಇನ್ನು ನಮ್ಮ ಹವ್ಯಕ ಕನ್ನಡ ದೂರ ಉಳೀತ್. ಮಿಕಿ ಮಿಕಿ ನೋಡ್ಕೊತ್ತ ನಿಂತಿದ್ದ.
ಮಾಸ್ತರೇ...ಅದೆಂತೋ ಗ್ಯಾಸ್ ಬಿಟ್ಟ ಕೂಡಲೇ ಗಂಡನಿಂದ ದೂರ ಹಾರವು ಹೇಳ ಶ್ಲೋಕ ನಮ್ಮ ಕರೀಂನ ಹೆಂಡತಿಗೆ ಹೇಳಿ ಕೊಟ್ಟಿದ್ದ್ರಳ ನೀವು. ಅದೂ ಟೆಕ್ಸ್ಟ್ ಬುಕ್ ನಲ್ಲಿ ಇಲ್ಲದೆ ಇಪ್ಪದು. ಆ ಮಳ್ಳ ಸಾಬರ ಕೂಸು ನಿಂಗವು ಎಂತ ಹೇಳಿ ಕೊಟ್ಟರ, ಅದು ಎಂತ ಅರ್ಥ ಮಾಡಿಕೆನ್ಡ್ತಾ, ಒಟ್ಟಿನಲ್ಲಿ ಕರೀಂ ಗ್ಯಾಸ್ ಬಿಟ್ಟ ಕೂಡಲೇ ಅವನ ಬದಿಯಿಂದ ಚಂಗನೆ ಗುಪ್ಪ ಹಾಕಿ ಹಾರ್ತಡ ನೋಡಿ....ಇದಕ್ಕೆಲ್ಲ ನಿಮ್ಮ ಶ್ಲೋಕನೆ ಕಾರಣ ಹೇಳಿ.....ಸರಿ ಆವಾಜ್ ಹಾಕಿದೆ ಮಾಸ್ತರ್ ಗೆ.
ಹೆಗಡೆ ಮಾಸ್ತರ್ ಫುಲ್ ದಂಗು. ಫುಲ್ ಥಂಡ ಹೊಡೆದರು.
ನೋಡಾ ಮಾಣಿ....ಆನು ಭಜಗೋವಿಂದಮ್ ಬಿಟ್ಟರೆ ಬ್ಯಾರೆ ಯಾವದೂ ಶ್ಲೋಕ ಯಾರಿಗೋ ಹೇಳಿ ಕೊಟ್ಟಿದ್ದ್ನಿಲ್ಲೇ ಮಾರಾಯ...ಎನ್ನ ಮಾತ್ ನಂಬೋ....ಅಂತ ಹೆಗಡೆ ಮಾಸ್ತರ್ ಅಂಬೋ ಅಂದರು.
ಭಜಗೋವಿಂದಂ ಯನಗೂ ಗೊತ್ತಿದ್ದೂ....ಯನ್ನ ಅಪ್ಪ ಮನೆಯಲ್ಲಿ ದಿನ ಬೆಳಿಗ್ಗೆ ಅದನ್ನ ಬಜಾಯಿಸ್ತ...ಆದ್ರೆ ಅದರಲ್ಲಿ ಗಂಡ ಗ್ಯಾಸ್ ಬಿಟ್ಟರೆ ಹೆಂಡ್ತಿ ಎದ್ದು ಓಡಿ ಹೋಗವು ಹೇಳಿ ಎಲ್ಲಿ ಇದ್ದು ಹೇಳಿ? ಆ ಸಾಬರ ಕೂಸಿಗೆ ಎಂತ ಅರ್ಥ ಹೇಳಿದ್ರಿ ನೀವೂ? ಪಾಪ ಅವಕ್ಕೆ ಸಂಸ್ಕೃತ ಸರಿ ಬತ್ತಿಲ್ಲೆ ಹೇಳಿ ಹ್ಯಾಂಗ ಬೇಕಾದ್ರ್ ಹಾಂಗೆ ಹೇಳಿ ಅವರ ಮಜ ತಗತ್ತರನು ನೀವು? ಹಾಂಗ್ ಮಾಡಿದ್ರ ದೊಡ್ಡ ಪಂಚಾಯತಿ ಮಾಡ್ಸಿ ಬಿಡ್ತಿ ಆನು. ಆನು ಯಾರ್ ಮಗ ಹೇಳಿ ಗೊತ್ತಿದ್ದ ಇಲ್ಲ್ಯ ನಿಮಗೆ?.....ಹೇಳಿ ಕರೀಮನ ಮ್ಯಾಲ್ನ ಬಾಲ್ಯದ ಪ್ರೀತಿಯಿಂದ ಹೆಗಡೆ ಮಾಸ್ತರ್ ಗೆ ಸಿಕ್ಕಾಪಟ್ಟೆ ಅವಾಜ್ ಹಾಕಿಬಿಟ್ಟೆ.
ಕರೀಂ ಮಾತ್ರ ಭಾರಿ ಅಭಿಮಾನದಿಂದ ನೋಡಿಕೋತ್ತ ನಿಂತಿದ್ದ.
ಹೊಯ್....ಮಾಣಿ...ಅಂದ್ರು ಹೆಗಡೆ ಮಾಸ್ತರ್ ಕರ್ಚೀಪ್ ನಿಂದ ಬೆವರ ವರ್ಸಿಕೊತ್ತ .
ಯಂತದು ಮಾಸ್ತರೇ? ನೆನಪ ಆತಾ? ನಿಮ್ಮ ಮನೆಹಾಳ್ ಶ್ಲೋಕಾ?
ನೋಡ ತಮ್ಮಾ ....ಆ ಭಜಗೋವಿಂದಂನಲ್ಲಿ ಎರಡು...ಎರಡೇ ಎರಡು ಸಾಲು ಇದ್ದಪ...ಆ ನಮ್ನಿ ಅರ್ಥ ಬಪ್ಪದು....ಹೆಸಿಟೇಟ್ ಮಾಡ್ತಾ ಮಾಡ್ತಾ ಅಂದ್ರು ಮಾಸ್ತರು.
ಹೇಳಿ ಅದನ್ನ....ನೋಡವ....ಕರೀಮನ್ನ ಮಳ್ಳ ಹೆಂಡ್ತಿ ಕೇಳಿದ್ದು ಅದೇ ಶ್ಲೋಕಾನೆ ಹೌದ ಹೇಳಿ....ಅಂತ ಮಾಸ್ತರ್ ಗೆ ಹೇಳೋಕೆ ಅನುಮತಿ ಕೊಟ್ಟೆ.
ಮಾಣಿ....ಆ ಭಜಗೋವಿಂದಂ ನಡೂ ಮಧ್ಯೆ....ಹೇಳಿ ಹೆಗಡೆ ಮಾಸ್ತರ್ ಶುರು ಮಾಡಿದ್ರು.
ಗತವತಿ ವಾಯು ದೇಹಾ ಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ ||
ಸಾಬ್...ಸಾಬ್....ಇದೆ ಶ್ಲೋಕಾ ಸಾಬ್....ಇದೆ....ನಮ್ಮ ಬೇಗಂ ಇದನ್ನೇ ರೆಫರ್ ಮಾಡಿ ಮಾಡಿ ನಾನು ಗ್ಯಾಸ್ ಬಿಡೋಕೆ ತಡ ಇಲ್ಲ ಬಿಸ್ತರ್ನಿಂದ ಚಂಗ ಅಂತಾ ಹಾರ್ತಾಳೆ ಸಾಬ್.....ಕರೀಂ ಎಕ್ಸೈಟ್ ಆಗಿ ಹೇಳಿದ.
ಹೆಗಡೆ ಮಾಸ್ತರೇ....ಇದರ ಅರ್ಥ ಎಂತದು? ಟೂಶನ್ ಗೆ ಬಪ್ಪ ಕೂಸಗಕ್ಕೆ ಎಂತ ಹೇಳಿ ಅರ್ಥ ಹೇಳಿ ಕೊಟ್ಟಿದ್ರಿ?....ಹೇಳಿ....... ಸೀರಿಯಸ್ ಆಗಿ ಕೇಳಿದೆ ಕೇಳಿದೆ.
ಹೆಗಡೆ ಸರ್ ಸ್ವಲ್ಪ ರೆಲಾಕ್ಸ್ ಆದ ಲುಕ್ ಕೊಟ್ಟರು. ಪ್ರಾಬ್ಲೆಮ್ ಸಾಲ್ವ್ ಮಾಡಿದೆ ಈ ಮಳ್ಳ ಮಾಣಿ, ಈ ಮಳ್ಳ ಸಾಬಂದು ಹೇಳ ಲುಕ್ ಬಂತು ಸರ್ ಮುಖದಲ್ಲಿ.
ಮಾಣಿ....ನೋಡ....ಇದರ ಅರ್ಥ ರಾಶಿ ಡೀಪ್ ಇದ್ದು ಬಿಲ.....ಹೇಳಿ ಶುರು ಮಾಡಿದ್ರು ಹೆಗಡೆ ಸರ್.
ಹೇಳ್ರಾ ನೀವು...ಯನಗಂತೂ ಗೊತ್ತಾಗ್ತು...ಸಾಬಂಗೆ ಅವಂಗೆ ಗೊತ್ತಪ್ ರೀತಿನಲ್ಲಿ ಆನು ಕಡಿಗೆ ಹೇಳ್ತಿ ಅವಂಗೆ....ಅಂದೆ ನಾನು.
ಹೆಗಡೆ ಸರ್ ಮುಂದುವರ್ಸಿದ್ರು.
ಪರಮ ಪೂಜ್ಯ ಆದಿ ಶಂಕರರು ಹೇಳದು ಎಂತದು ಅಂದ್ರೆ......ಸಂಸ್ಕೃತ ಪಿರಿಯಡ್ ನಲ್ಲಿ ಹೇಳ ತರಾನೇ ಶುರು ಮಾಡಿದ್ರು ಸರ್.
ಗತವತಿ = ಹೋಗುತ್ತದೆಯೋ
ವಾಯು = ಪ್ರಾಣ ವಾಯು
ದೇಹಾ ಪಾಯೇ = ದೇಹದಿಂದ
ಭಾರ್ಯಾ = ಪತ್ನಿ
ಬಿಭ್ಯತಿ = ದೂರ ಹಾರಿ ಓಡುತ್ತಾಳೆ
ತಸ್ಮಿನ್ ಕಾಯೇ = ಅಂತಹ ದೇಹದಿಂದ
ಹೆಗಡೆ ಸರ್ ಮುಂದೆ ವರ್ಸಿದರು ....ಸ್ಟೈಲ್ ನಲ್ಲಿ ಚೇಂಜ್ ಇಲ್ಲ...ಸೇಮ್ ಟು ಸೇಮ್ 25 ವರ್ಷದ ನಂತರವೂ.
ಅರ್ಥಾತ್.....ಆದಿ ಶಂಕರರು ಹೇಳ್ತಾರೆ....ಯಾವ ಪತ್ನಿ ನಿನ್ನ ದೇಹದಲ್ಲಿ ಜೀವ ಇರೋ ತನಕ ನಿನ್ನ ಪಕ್ಕದಲ್ಲಿ ಇರ್ತಾ ಇದ್ದಳೋ, ಅಂತಾ ಪತ್ನಿ, ಯಾವ ನಿಮಿಷದಲ್ಲಿ ನಿನ್ನ ದೇಹದಿಂದ ಅಮೂಲ್ಯ ಪ್ರಾಣ ವಾಯು ಹಾರಿ ಹೋಯಿತೋ, ಅದೇ ಘಳಿಗೆಯಲ್ಲಿ ಜೀವವಿಲ್ಲದ ಆ ದೇಹದಿಂದ ಪತ್ನಿಯೂ ಸಹ ಹೆದರಿ ಹಾರಿ ದೂರ ಜಿಗಿಯುತ್ತಾಳೆ.
ಅಂತಾ ಹೇಳಿ ಹೆಗಡೆ ಮಾಸ್ತರ್ ವಿವರಣೆ ಮುಗ್ಸಿ...ಪ್ರಶ್ನೆ ಇದ್ದರೆ ಕೇಳಿ ಅನ್ನೋ ಲುಕ್ ಕೊಟ್ಟರು.
ನಾ ಮಾತ್ರ ಕನ್ವಿನ್ಸ ಆಗಿರಲಿಲ್ಲ.
ಮಾಣಿ....ನನ್ನ ನಂಬು ಮಾರಾಯ....ನಾ ಎಲ್ಲರಿಗೂ ಹೇಳಿದ್ದು ಇದೇ ಅರ್ಥ ಮಾರಾಯ.....ಆ ಮಳ್ಳ ಸಾಬರ ಕೂಸು ತಪ್ಪ ಅರ್ಥ ಮಾಡಿಕೊಂಡು....ನಿನ್ನ ಈ ಸಾಬ್ ದೋಸ್ತ ಕರೀಮ ಗ್ಯಾಸ್ ಬಿಟ್ಟಾಗ್ ಒಂದ ಸರಿ ಹಾಸಿಗೆ ಬಿಟ್ಟ ಹಾರದ್ರಲ್ಲಿ ಎನ್ನ ತಪ್ಪು ಎಂತದೂ ಇಲ್ಲೇ ಮಾರಾಯ...ನನ್ನ ಬಿಟ್ಟು ಬಿಡು ಮಾರಾಯ.....ಬಡ ಮಾಸ್ತರ್ ನಾನು...ನಿನ್ನ ಅಪ್ಪನೂ ಮಾಸ್ತರ್. ನೋಡ್ಕ್ಯಾ ಮತ್ತೆ.
ಈಗ ನಗಬಾರದ ಜಾಗ ಎಲ್ಲದರಿಂದಲೂ ನಗಿ ಬಂದಿದ್ದು ನನಗೆ.
ಕರೀಂ ಮಾತ್ರ ಫುಲ್ ಕನಫೂಸ ಆಗಿ ನಿಂತಿದ್ದ.
ಸಾಬರ....ಬರ್ರಿ.....ಎಲ್ಲ ಹೇಳತೇನಿ....ಹೆಗಡೆ ಮಾಸ್ತರ್ ಹೇಳಿದ್ದ ನಿಮ್ಮ ಬೇಗಂ ತಪ್ಪ ಅರ್ಥ ಮಾಡಿಕೊಂಡಾರ.
ಹೆಗಡೆ ಮಾಸ್ತರ್ ಗೆ ಇಬ್ಬರೂ ಒಂದು ತರಹದ ಗಿಲ್ಟಿ ಫೀಲಿಂಗ್ ನಮಸ್ಕಾರ ಹಾಕಿ ಹೊರಟು ಬಂದ್ವಿ.
ಕರೀಮ....ಮಾಸ್ತರ್ ಹೇಳಿದ್ದು ತಿಳಿತೇನೋ ?
ಇಲ್ಲ ಸಾಬ್.....ಅಂತ ಕನಫೂಸ ಲುಕ್ ಕೊಟ್ಟ.
ನೋಡು...ಕರೀಂ...ಆ ಶ್ಲೋಕದಾಗ ಬರೋ ವಾಯು ಬ್ಯಾರೇದು. ನೀ ರಾತ್ರಿ ಹೆಂಡ್ತಿ ಬಾಜೂಕ ಮಲಕೊಂಡಾಗ್ ಬಿಟ್ಟು ಅಕಿನ್ನ ಹಾಸ್ಗಿಯಿಂದ ಹಾರ್ಸೋ ವಾಯು ಬ್ಯಾರೇದು....ಈ ವಾಯು ಸಲುವಾಗಿ ನಿಮ್ಮ ಬೇಗಂ ಹಾರೋ ಜರೂರತ್ ಇಲ್ಲ.
ಮತ್ತೆ ಸಾಬ್?
ನೋಡು.....ನೀ ಇನ್ನೂ ಮಸ್ತ ಲೈಫ್ ಎಂಜಾಯ್ ಮಾಡಿ...ಭಾಳ ವರ್ಷ ಆದ ಮ್ಯಾಲೆ...ಯಾವಾಗರ ಒಮ್ಮೆ ಸತ್ತು ಮ್ಯಾಲ್ ಹೋಗ್ತಿ ನೋಡು....ಆವಾಗ ನಿನ್ನ ದೇಹದಿಂದ ಹೋಗೋ ಗ್ಯಾಸ್ ಗೆ ಪ್ರಾಣ ವಾಯು ಅಂತಾರ್...ಆವಾಗ ನಿನ್ನ ಹೆಂಡ್ತಿ ನಿನ್ನ ವೇಸ್ಟ್ ಬಾಡಿಯಿಂದ ದೂರ ಹಾರ್ತ್ಲಾಳ ನೋಡು...ಅದು ಓಕೆ....ಆರ್ಡಿನರಿ ದಿನಾ ಬಿಡೋ ಗ್ಯಾಸ್ ಗೆ ಅಕಿ ಹಾಸಗಿ ಬಿಟ್ ಹಾರೋ ಜರೂರತ್ ಇಲ್ಲ.
ಕ್ಯಾ ಸಾಬ್...?.ಈ ಸಂಸ್ಕೃತ ತೊಗೊಂಡಿ ಲೈಫ್ ಬರ್ಬಾದ್.....ಗ್ಯಾಸ ವಳಗೂ ದಿನಾ ಬಿಡೋ ಗ್ಯಾಸು, ಸಾಯೋವಾಗ ಬಿಡೋ ಗ್ಯಾಸು ಅಂತ ಬೇರೆ ಬೇರೆ ಇರ್ತದೆ...ಕ್ಯಾ?
ಹೌದಪಾ ...ಹೌದು ...ಸಾಯೋ ಮುಂದ ಬಿಡೋ ಪ್ರಾಣ ಗ್ಯಾಸ್ ಬ್ರಹ್ಮರಂಧ್ರದಿಂದ ಹೊರಗೆ ಹೋಗ್ತದೆ ನೋಡಪಾ.
ಕ್ಯಾ ಬ್ರಹ್ಮಾದು ರಂಧ್ರಾ ಸಾಬ್? ಅದು ಕ್ಯಾ ಓನ್ಲಿ ಬ್ರಾಹ್ಮಣರಿಗೆ ಇರ್ತದೆ ಕ್ಯಾ? ನಾವೆಲ್ಲಾ ಮತ್ತೆ ಎಲ್ಲಿಂದ ಪ್ರಾಣ ಗ್ಯಾಸ್ ಬಿಡಬೇಕು ಸಾಬ್..ಅಂದ ಕರೀಂ.
ಹೋಗ್ಗೋ ನಿನ್ನ....ಬ್ರಹ್ಮರಂಧ್ರ ಬಗ್ಗೆ ಮತ್ತೆ ಯಾವಾಗರ ಹೇಳತೇನಿ..ಅದು ಎಲ್ಲರಿಗೂ ಇರ್ತದ. ಕೇವಲ ಬ್ರಾಹ್ಮಣರಿಗೆ ಮಾತ್ರ ಅಲ್ಲ.
ಚೊಲೋ ನೋಡಿ...ಸಾಬ್...ಇಲ್ಲ ಅಂದ್ರ...ಪ್ರಾಣ ಗ್ಯಾಸ್ ಎಲ್ಲಿಂದ ಬಿಡೋದು ಅಂತ ಚಿಂತಿ ನಮಗೆ.
ಸಾಬರ....ಎಲ್ಲ ಸುಸೂತ್ರ ಆತಲ್ಲ ಈಗ? ಸ್ವಲ್ಪ ರಾತ್ರಿ ಮಲಗೋ ಮುಂದೆ ಇನೋ, ಜೆಲುಸಿಲ್ ತೊಗುಂಡು ಯಾಲಕ್ಕಿ, ಲವಂಗ, ಜೇಷ್ಟಮದ್ದು ಮಿಕ್ಸ್ಚರ್ ತೊಗೊಂಡು ಮಲ್ಕೊಳ್ಳರಿ ಬೇಗಂ ಹಾರೋದು ದೂರ ಉಳಿತು....ಅಂತ ಮಾತ್ ನಿಲ್ಲಸಿದೆ.
ಹಾರೋದಿಲ್ಲ ಅಂದ್ರೆ ಹತ್ರಾ ಬರ್ತಾಳಾ ಕ್ಯಾ ಸಾಬ್? ....ಅಂತ ಭಾಳ ಆಸೆಯಿಂದ ಕೇಳಿದ.
ಬಂದರೂ ಬರಬಹುದು. ಹೋಗಿ ಬರ್ರಿ...ಶುಭವಾಗಲಿ.
ಅಂತ ಹೇಳಿ....ಸಾಬರಿಗೆ ಖುದಾ ಹಾಫಿಜ್ ಹೇಳಿ ಬಂದೆ.
ಮನಿಗೆ ಬಂದು ಭಜಗೋವಿಂದಂ ಡಿಟೇಲ್ ಆಗಿ ಸ್ಟಡಿ ಮಾಡಲು ಶುರು ಮಾಡಿದೆ.
No comments:
Post a Comment