Saturday, June 23, 2012

ತುಲಾ ರಾಶಿ

ಕರೀಂ ಯಾಕೋ upset ಆಗಿ ಬರಲಿಕತ್ತಿದ್ದಾ.

ಯಾಕೋ ಕರೀಂ ಏನಾತು?

ಆ ಜೋಶಿ ಹಿಡದು ವದಿ ಬೇಕು ನೋಡಿ ಸಾಬ್.

ಯಾಕಪಾ....ಯಾವ್  ಜೋಶಿನೋ ? ನಮ್ಮ ದೋಸ್ತ ಭಾಳ್  ಮಂದಿ ಜೋಶಿ ಅಂತ ಇದ್ದಾರ್. ಎಲ್ಲ ವಳ್ಳೆ ಮಂದಿ. ಅದನ್ನ ಬಿಟ್ಟರ ನಮ್ಮ ಭೀಮಣ್ಣಾ. ಅವರು ಭಾರತ ರತ್ನ ಸಂಗತಿಗೆ ತೊಗೊಂಡು ಮ್ಯಾಲೆ ಹೋದರು. ಜೋಶಿ ಟೀಚರ್ ಪಾಪಾ. ಅವರು ನಿನಗ ನಾಕ ಜಾಸ್ತಿ ಕಡತಾ ಕೊಟ್ಟಿರಬೇಕು. ಅದೂ ಎಷ್ಟ  ವರ್ಷದ ಹಿಂದ. ಅವರಿಗೆ ವದಿಬೇಕು ಏನು? ಅದು ಮಹಾಪಾಪ. ನೋಡ್ಕೋ ಮತ್ತ.

ಇಲ್ಲ ಸಾಬ....ಅದು ಯಾವದೇ ಜೋಶಿ ಅಲ್ಲಾ ಸಾಬ್. ನಮಗೆ ಅವರೆಲ್ಲ ಜೋಶಿ ಗೊತ್ತಿಲ್ಲ ಕ್ಯಾ ?....ಎಲ್ಲ ಭಾಳ್ ವಳ್ಳೆ ಮಂದಿ...ವಳ್ಳೆ ದೋಸ್ತ್ ....ವಳ್ಳೆ ಟೀಚರ್. ವಳ್ಳೆ ಸಿಂಗರ್ . ಅವರಿಗೆ ಯಾಕ ವದಿಬೇಕು ಸಾಬ್? ಅವರಿಗೆ  ವದ್ದು ನಮಗೆ ನರಕಾಗೆ ಹೋಗೋದು ಬ್ಯಾಡ ಸಾಬ್.

ಮತ್ತ ಯಾವ್ ಜೋಶಿಗೆ ವದಿಬೇಕ್ ಅಂತ ಮಾಡಿ?

ಅದೇ ಸಾಬ್ ಅಲ್ಲೇ ಮಾಳಮಡ್ಡಿ ಮನೋಹರ್ ನಿವಾಸ್ ಮುಂದೆ ಟೆಂಟ್ ಹಾಕಿ ಭವಿಷ್ಯ ಹೇಳೋ ಜೋಶಿ ಸಾಬ್.

ಓಹೋ .....ಟೆಂಟ್ ಜೋತಿಷಿ .....ಗೊತ್ತಾತ್....ಗೊತ್ತಾತ್ ....ಆದ್ರ ಒಂದ ನೆನಪ ಇಟ್ಟಿರ ನೀ...ಎಲ್ಲ ಜೋಶಿ ಮಂದಿ ಜೋತಿಷಿ ಇರೋದಿಲ್ಲ....ಮತ್ತ ಎಲ್ಲ ಜೋತಿಷಿ ಹೆಸರೂ ಹಾಂಗ ಇರಬೇಕ್ ಅಂತ ಇಲ್ಲ...

ಅದೆಲ್ಲ ನಮಗೆ ಯಾಕೆ ಸಾಬ್...ಆ ಮಂಗ್ಯಾನ್ ಕೆ ಜೋಶಿ ನಮಗೆ ಭಾಳ ಬುರಾ  ಭಲಾ ಹೇಳಿದ ಸಾಬ್.

ಏನು ಹೇಳಿದ?

ಅಲ್ಲ ಸಾಬ್....ಹೋದ ಕೂಡಲೇ ಕುಂಡಿ ತಂದಿ ಏನು ಅಂದಾ ಸಾಬ್? ಅದು ಕ್ಯಾ ಕೇಳೋ ಸವಾಲ್? ಅದು ಇಲ್ಲದೆ ಆದ್ಮಿ ಹೋಗೋಕೆ ಬರೋಕೆ ಆಗ್ತದೆ ಕ್ಯಾ?

ನಾನು ಏನೋ ಜೋಶಿ ಸೀರಿಯಸ್ ಆಗಿ ಕೇಳ್ತಾರೆ..... ಅದಕ್ಕೆ....ಹೌದು ಜೋಶಿಜಿ ...ಅದೂ  ನಮ್ಮ ಕೂಡ ಬಂದಿದೆ.... ಅಂದೆ ಸಾಬ್.

ನನಗಂತೂ ನಮ್ಮ ಕರೀಮಾ ಕುಂಡಲಿ ಅಂತ ಜೋತಿಷಿ ಅವರು ಹೇಳಿದ್ದನ್ನ ಕುಂಡಿ ಅಂತ ಕೇಳಿಸ್ಕೊಂಡು ಅನರ್ಥ ಮಾಡಿಕೊಂಡು  ತಲಿ  ಬಿಸಿ ಮಾಡಿಕೊಂಡಿದ್ದು ನೋಡಿ ಸಿಕ್ಕಾಪಟ್ಟೆ ನಗು ಬರಲಿಕ್ಕೆ ಹತ್ತಿತ್ತು. ಆದ್ರ ಇವನ ಫುಲ್ ಸ್ಟೋರಿ ಕೇಳೋಣ ಅಂತ ಸುಮ್ಮನ ಇದ್ದೆ.

ಹ್ಞೂ .....ಮುಂದೆ ಹೇಳಪಾ ಕರೀಂ....

ಅಲ್ಲ ಸಾಬ್....ಎಂತ ಬೇಶರಂ ಆದ್ಮಿ ಅವ ಅಂತೇನಿ.....ನಾನು ಇದೆ ಅಂದ ಕೂಡಲೇ ಅವ ನನಗೆ ತೋರ್ಸು ಅನ್ನೋದಾ?....ನನಗೆ ಭಾಳ ಕನಫುಸನ್ ಆತು ಸಾಬ್....ಮೈ ಕ್ಯಾ ಜೋಷಿ ಕೆ ಪಾಸ್ ಆಯಾ ಇಲ್ಲ ಡಾಕ್ಟರ್ ಕಡೆ ಬಂದೆ ಅಂತ....

ಸಾಬ್....ನಾನು ಹೇಳಿಬಿಟ್ಟೆ ಸಾಬ್....ಅದೆಲ್ಲ ಪಬ್ಲಿಕ್ನಲ್ಲಿ ತೋರಿಸೋಕೆ ಬರೋದಿಲ್ಲ ಅಂತ

ಮುಂದ?..................ಅಂದೆ

ಮುಂದೆ ಏನು ಸಾಬ್? ಮುಂದೆ ಜೋಶಿ ನಕ್ಕೋತ್ತ ಕೂತಿತ್ತು.

ಆ ಜೋಶಿ ಹೇಳ್ದ ಸಾಬ್....ನಿಮ್ಮದು ಕಡೆ  ಕುಂಡಿ ಇಲ್ಲ...ಅದಕ್ಕೆ ರಾಶಿ ಮ್ಯಾಲೆ ನಿಮದು ಭವಿಷ್ಯಾ ಹೇಳ್ಬೇಕ್ ಆಗ್ತದೆ....ಆದ್ರೆ ಅದು ಅಷ್ಟು ಸರಿಯಾಗಿ ಬರೋದಿಲ್ಲ ನೋಡ್ರಿ ಅಂತ....

ರಾಶಿ ಭವಿಷ್ಯಾ ಕೇಳಿಕೊಂಡು ಬಂದಿ ಏನಪಾ ?

ಇಲ್ಲ ಸಾಬ್.....ಪೂರ್ತಿ ಕೇಳೋ ಹಾಂಗೆ ಇರಲಿಲ್ಲ ಸಾಬ್...ಅಷ್ಟು ಖರಾಬ್ ಅದೇ ನಮ್ಮದು.

ಏನು ನಿನ್ನ ಭವಿಷ್ಯಾ ಅಷ್ಟು ಖರಾಬ್ ಅದ ಅಂತ ಏನು?

ಇಲ್ಲ ಸಾಬ್....ಭವಿಷ್ಯಕೋ ಗೋಲಿ ಮಾರೋ....ನಮ್ಮದು ರಾಶಿನೇ ಸರಿ ಇಲ್ಲ ಸಾಬ್....ಬಹುತ್ ಗಂಧಾ ರಾಶಿ....ಆ ಹಾಪ್ ಸೂಳೆಮಗ ರಾಶಿ ಹೇಳಿದ ತಕ್ಷಣ ನಾನು ಎದ್ದು ಬಂದೆ ಸಾಬ್....ಅದು ನಮ್ಮದು ರಮ್ಜಾನ್ ರೋಜಾ  ಮಹಿನಾ ನೆಡದದೆ ಸಾಬ್....ಇಂತ ಟೈಮ್ ನಲ್ಲಿ ಅಂತ ಹೊಲಸ್ ರಾಶಿ ನಮಗೆ ಹೇಳೂದು  ಕ್ಯಾ?

ಕರೀಂ ಸಾಬರ....ರಾಶಿ ವಳಗ ಯಾವದೂ ಹೊಲಸ್ ರಾಶಿ ಅಂತಾ ಇರೋದಿಲ್ಲರಿ. ನಿಮ್ಮ ನಿಮ್ಮ ಟೈಮ್ ಮ್ಯಾಲೆ ಡಿಪೆಂಡ್ ಆಗಿ ಎಲ್ಲ ಆಗ್ತಾವ್ ನೋಡ್ರಿ.

ಇಲ್ಲ ಸಾಬ್....ಕೆಲೊ ರಾಶಿ ಭಾಳ ಬೇಕಾರ್ ಸಾಬ್.

ಕರೀಂ ಸಾಬರ...ಯಾವ್ ರಾಶಿ ಅಂತ ನಿಮ್ಮದು?

ತೋಬಾ .....ತೋಬಾ.....ನಾವು ನಮ್ಮದು ಬಾಯಿಂದ ಆ ಶಬ್ದಾ ಹೇಳೋದಿಲ್ಲ ಸಾಬ್ ...ಅದೂ ನಮ್ಮ ರಮ್ಜಾನ್ ರೋಜಾ ಟೈಮ್ ನಲ್ಲಿ ಅದರ ಬಗ್ಗೆ ಮಾತಾಡೋದು,  ಅದರ ಬಗ್ಗೆ ವಿಚಾರ ಮಾಡೋದು ಎಲ್ಲ ತಪ್ಪು ತಪ್ಪು ಸಾಬ್.

ಹೋಗ್ಗೋ ನಿಮ್ಮ ಸಾಬರ ...ರಾಶಿ ಬಗ್ಗೆ ಭಾಳ್ ತಲಿ ಕೆಡಿಸಕೊಂಡಿರಿ ನೋಡ್ರಿ.

ಹೋಗ್ಲಿ ನಿಮ್ಮ ಡೇಟ್ ಆಫ್ ಬರ್ತ್ ಏನು?

ಅದು ಕ್ಯಾ ಸಾಬ್? ನಿಮಗೆ ಕಿತ್ತೂರ್ ಚೆನ್ನಮ್ಮ್ ಟ್ರೈನ್ ನಲ್ಲಿ ಬರ್ತು ಬೇಕು ಕ್ಯಾ...? ಯಾವ್ ಡೇಟ್ ಗೆ ಬೇಕು? ಚಿಂತಾ ನಕೋ ಕರೋ ಸಾಬ್.....ನಮ್ಮ ಮೆಹಮೂದ್ ಇಲ್ಲ...?.ಆಟೋ ಡ್ರೈವರ್ ...? ಯಾವಾಗಲೂ ಸ್ಟೇಷನ್ ಮುಂದೆ ಇರ್ತಾನೆ.....ಬುಕ್ ಮಾಡಿ ಕೊಡಸ್ತಾನೆ ....ಬೆಂಗಳೂರ್ ಗೆ ಹೊಂಟ್ರಿ  ಕ್ಯಾ?

ಇಲ್ಲಪ್ಪ.....ಪುಣ್ಯಾತ್ಮಾ..ಎಲ್ಲೂ  ಹೊಂಟಿಲ್ಲ ....ನಿನ್ನ ಹುಟ್ಟಿದ ತಾರಿಕ್ ಹೇಳಪಾ .....ಅಷ್ಟು ಸಾಕು ನಿನ್ನ ರಾಶಿ ಕಂಡು ಹಿಡಿಲಿಕ್ಕೆ.

ಅಂತೂ ಬರ್ತ್ ಡೇಟ್ ಕೊಟ್ಟ.

ಸಾಬರ.....ನಿಮಗ ಮೂನ್ ಸೈನ್ ಮ್ಯಾಲೆ ರಾಶಿ ಹೇಳಲೋ ಇಲ್ಲ ಸನ್ ಸೈನ್ ಮ್ಯಾಲೆ ಹೇಳಲೋ?

ಹಂಗೂ ಇರ್ತದೆ ಕ್ಯಾ? ಎರಡೂ ಹೇಳಿ ಸಾಬ್...ಹೊಲಸ್ ರಾಶಿ ಯಾವದು ಇಲ್ಲ ಅದನ್ನ ನಾವ್ ಇಟ್ಟಗೋತ್ತಿವಿ.

ಮೊದಲು ಮೂನ್ ಸೈನ್ ನೋಡೋಣ ಇರ್ರಿ...ಅದು ನಮ್ಮ ದೇಸಿ ಸಂಪ್ರದಾಯ.

ಸಾಬ್ರ ....ನಿಮ್ಮ ರಾಶಿ ತು..ತು...........ಇನ್ನೂ ಪೂರ್ತಿ ಮಾಡಿರಲಿಲ್ಲ ನನ್ನ ಮಾತು.

ಕರೀಂ ಏಕ್ದಂ ಎಕ್ಸೈಟ್ ಆಗಿ, ಫುಲ್ ರೈಸ್ ಆಗಿ,  ದನಿ ಏರ್ಸಿ,  ಕೈ ಮುಂದ ತಂದು ನನ್ನ ಮಾರಿ ಮುಂದ ಹಿಡದ.

ಸಾಬ್ ಆ ರಾಶಿ ಹೆಸರು ಮಾತ್ರ ಹೇಳಬ್ಯಾಡಿ.....ನಿಮಗೆ ವದಿಲಿಕ್ಕೆ ಆಗೋದಿಲ್ಲಾ.....ನಮ್ಮ ದೋಸ್ತ್ ನೀವು...ಆದ್ರೆ ಆ ರಾಶಿ ಹೆಸರು ಮಾತ್ರ ಹೇಳಬ್ಯಾಡ್ರಿ.

ನಾನು ಕರೀಮನ sudden ರೈಸಿಂಗ್ ನೋಡಿ ಅವಾಕ್ಕಾಗಿ ಸ್ವಲ್ಪ ಘಾಬ್ರಿಗೆ ವಳಗಾದೆ.

ಯಾಕಪಾ....ಹಾಂಗಂತಿ ? ಇದ್ರಾಗ್ ಏನ ಖರಾಬ್ ಅದೇ?

ಸಾಬ್ ಆ ರಾಶಿ ನಮ್ ಆಡೋ ಭಾಶಾದಲ್ಲಿ ಭಾಳ ಖರಾಬ್ ಮೀನಿಂಗ್ ಕೊಡ್ತದೆ ಸಾಬ್...ಅದಕ್ಕೆ ಬೇಡ ಸಾಬ್.

ಯಾಕೋ....????

ನೋಡಿ ಸಾಬ್...ಈಗ ರಮ್ಜಾನ್ ಮಹಿನಾ ...ಫುಲ್ ರೋಜಾ ನೆಡದದೆ ನಮ್ದು ...ಬೇಗಂ ಹತ್ರನೂ ಹೋಗೋ ಹಾಗೆ ಇಲ್ಲ..ಅಂತದ್ರಲ್ಲಿ ಈ ರಾಶಿ ನೆನಪ ಆದ್ರೆ ಎಲ್ಲ ಹಾಳಾಗಿ ಬಿಡ್ತದೆ ಸಾಬ್. ಆ ರಾಶಿ ಮಾತ್ರ ಬ್ಯಾಡ.

ಅಲ್ಲೋ ನಿನ್ನ ರಾಶಿಗೂ ನಿನ್ನ ಬೇಗಮ್ಗೂ ಏನ ಲಿಂಕ್?

ನಿಮಗೆ ಅದೆಲ್ಲ ತಿಳಿಯೋದಿಲ್ಲ ಸಾಬ್.....ನೀವು ಶಬರಿ ಅಯ್ಯಪ್ಪಗೆ ಹೋಗೋವಾಗ ಮಾಲೆ ಹಾಕ್ತೀರಿ ಅಲ್ಲಾ...? ಆವಾಗ ಬೇಗಂ ಹತ್ರಾ ಹೋಗ್ತೀರಿ ಕ್ಯಾ? ಹೋಗೋದಿಲ್ಲ ನೋಡಿ....ಹಾಗೆ ನಮ್ಮದು.

ನಿಮ್ಮದು ಬಿಡಿ. ನೀವು ಯಾವಾಗಲೂ ಮಾಲೇನಾ ಹಾಕ್ಕೊಂಡು ಇರ್ತೀರಿ....ಶಾದೀನೇ ಮಾಡಿಕೊಂಡಿಲ್ಲ ನೀವು....ಎಷ್ಟು ಹೇಳಿದೆ ನಿಮಗೆ....ನಮಗೆ ಮೂರು ಆಯಿತು....ನಿಮಗೆ ಒಂದೂ ಆಗಲಿಲ್ಲಾ ....ಅಂತ ವಿಕಾರವಾಗಿ ನಕ್ಕ.

ನೋಡ್ರಿ ಸಾಬರ....ನಮ್ಮ ವಿಷಯ ಬಿಡ್ರಿ...ವ್ಯಂಗ್ಯವಾಗಿ ಯಾಕ್ ಮಾತಾಡ್ತೀರಿ?...ನಿಮ್ಮ ರಾಶಿ ನೋಡಿ ಭವಿಷ್ಯಾ ಹೇಳೋಣ ಅಂತ ಮಾಡಿದ್ದೆ. ಬ್ಯಾಡ ಅಂದ್ರ ಬಿಡ್ರಿ. ಟಾಂಟ್ ಯಾಕ್ ಹೊಡಿತೀರಿ?

ಸಾಬ್ ತಪ್ಪು ತಿಳ್ಕೊಬ್ಯಾಡಿ....ನಿಮಗೆ ಗೊತ್ತಾಗಲಿ ಅಂತ ಉದಾರಣೆ ಕೊಟ್ಟೆ ಸಾಬ್.

ನೋಡಿ ಸಾಬ್....ಹ್ಯಾಂಗೆ ಅಯ್ಯಪ್ಪಾಗೆ ಹೋಗೋ ಮಂದಿ ಮಾಲೆ ಹಾಕಬಿಟ್ಟಿ , ಕಪ್ಪು ಕಪಡ ಹಾಕ್ಕೊಂಡಿ, ಫುಲ್ ಸಂಸಾರದಿಂದ ದೂರ ಇರ್ತಾರೆ ನೋಡಿ....ನಾವು ಹಾಂಗೆ ಈ ಮಹಿನಾದಲ್ಲಿ....ಅಷ್ಟೇ ಸಾಬ್....ನೀವು ನಮ್ಮ ಖಾಸ್ ದೋಸ್ತ ನಿಮಗೆ ಯಾಕ್ ನಾವು ಟಾಂಟ್ ಹೊಡಿಬೇಕು?

ನನಗ ಫುಲ್ ಕನಫೂಸ್. ರಾಶಿ ಅಂದ್ರ ಹೆಂಡ್ತಿ ಅಂತಾನ. ಹೆಂಡ್ತಿಂದಾ ದೂರ ಅಂತಾನ. ಅಯ್ಯಪ್ಪ ಸ್ವಾಮಿಗೆ ಹೋಗವರು ಅಂತಾನ....ಏನಪಾ ಇದೆಲ್ಲ....ವಟ್ಟ ತಲಿ ಅನ್ನೋದು ಕೆಟ್ಟ ಮಸರ ಗಡಿಗಿ ಆಗಿ ಹೋತು.

ಸಾಬ್.....ನಾನು ಬರ್ತೀನಿ....ಆ ಜೋಶಿ ಇನ್ನೂ ಅಲ್ಲೇ ಟೆಂಟ್ ಹಾಕ್ಕೊಂಡು ಇದ್ದರೆ ನಮ್ಮ ಸೈದಾಪುರ್ ಹುಡ್ಗುರನ್ನ ಕರ್ಕೊಂಡು ಹೋಗಿ ಅವನ ಕುಂಡಿ ಮ್ಯಾಲೆ ರೇಸರ್ ಹಾಕ್ಸಿ ಬರ್ತೀನಿ....ಮತ್ತೆ ಯಾರಿಗೂ ಕುಂಡಿ ತಂದಿ ಏನು? ಕುಂಡಿ ತೋರ್ಸು ಅಂತ ಜೀವನದಲ್ಲಿ ಅಂದಿರಬಾರದು ನೋಡ್ರಿ...ಅಂತ ಕಾಲರ್ ಸರಿ ಮಾಡಕೋತ್ತಾ ಹೊಂಟ ಕರೀಂ.

ನೋಡ್ಕೊಂಡ ಹೊಡಿರೀಪಾ.....ಪಾಪ....ಬಡ ಬ್ರಾಹ್ಮಣ ಜೋತಿಷಿ ಇರಬಹುದು.

ಕರೀಂ ಏನ್ ಕಿವಿ ಮ್ಯಾಲ್ ಹಾಕ್ಕೊಂಡಾಂಗ್ ಕಾಣಲಿಲ್.

ಅಲ್ಲ ಅಷ್ಟಕ್ಕೂ....ಅವನ ರಾಶಿ ಅವಂಗ್ ಯಾಕ ಸೇರಲಿಲ್ಲ?

ಯಾವ್ ರಾಶಿ? ತುಲಾ ರಾಶಿ.

ತುಲಾ ರಾಶಿ.....ತುಲಾ ರಾಶಿ  ಅಂತ ನಾಕಾರ್ ಸಾರೆ ಹೇಳೋ ತನಕ, ಮತ್ತ ಕರೀಮ್ಗೆ ಅದು ಹ್ಯಾಂಗ ಕೇಳಿರ್ಬೋದು ಅನ್ನೋದನ್ನ ಊಹಾ ಮಾಡಿಕೊಂಡ ಕೂಡಲೇ ತಿಳೀತು ನಮ್ಮ ಸಾಬಣ್ಣಗೆ ಯಾಕೆ ಈ ರಾಶಿ ಸೇರೋದಿಲ್ಲ ಅಂತ. ರಮ್ಜಾನ್, ಬೇಗಂ ಸೆ ದೂರ್ ....ಅಯ್ಯಪ್ಪ ಸ್ವಾಮಿ....ಮಾಲೆ ಹಾಕೋದು...ಸಂಸಾರದಿಂದ ದೂರ ಇರೋದು....ಎಲ್ಲ ಒಂದೊಂದಾಗಿ ಅರ್ಥ ಆತು.

ಜನಿವಾರ ಕಿವಿ ಮ್ಯಾಲೆ ಏರ್ಸಿ ಹೊಂಟೆ.

No comments: