Thursday, October 25, 2012

ಟಗರ್ಮಂಗೋಲಿ

ಟಗರ್ಮಂಗೋಲಿ ಮಂಗ್ಯಾ

ಮನ್ನೆ ಚೀಪ್ಯಾ ಸಿಕ್ಕಿದ್ದ.

ಅವನ.....ಶ್ರೀಖಂಡ....ತಿಳಿಲಿಲ್ಲ?

ಶ್ರೀಪಾದ ಖಂಡುರಾವ್ ಡಕ್ಕನೆಕರ್ ಎಂಬ ರಿಗ್ವೇದಿ ದೇಶಸ್ಥ ಬ್ರಾಹ್ಮಣ ಚೀಪ್ಯಾ ಆಗಿ, ಆಗಾಗ ಶ್ರೀಖಂಡ ಅಂತ ಕೂಡ ಕರೆಯೆಲ್ಪಡುತ್ತಾನೆ.

ಅವಾ ನಾನು ಬಾಲವಾಡಿ ದೋಸ್ತರು. ಮೊದಲನೆ ದಿನ ಸಾಲಿಯೊಳಗ ಸಿಕ್ಕಿದ್ದ.

"ಏನೋ ನಿನ್ನ ಹೆಸರು?"  ಅಂತ ಕೇಳಿದ್ದೆ.

ತೊದಲ್ನುಡಿಯಾಗ, "ನನ್ನೆಸರು ಚೀಪಾದ", ಅಂದಿದ್ದ.

ಧಾರವಾಡ ಮಂದಿ ಸಂಜಯ ಅನ್ನೋವನ್ನ ಸಂಜ್ಯಾ, ಮಂಗೇಶ್ ಅನ್ನೋವನನ್ನ ಮಂಗ್ಯಾ, ಸಚಿನ್ ಅನ್ನೋವನನ್ನ ಸಚ್ಯಾ ಅಂತ ಕರೀತಾರ. ಹಾಂಗಾಗಿ ಶ್ರೀಪಾದ ಅನ್ನೋವಾ ಚೀಪಾದ ಆಗಿ ಅಲ್ಲಿಂದ ಚೀಪ್ಯಾ ಅಂತಾಗಿಬಿಟ್ಟಿದ್ದ. ಹಾಂಗಂತ ಅವಾ ಚೀಪ್  ಅಂತ ತಿಳ್ಕೋಬಾರದು.ಅದು ತಪ್ಪಾಗ್ತದ.

ಮುಂದ ಪ್ರೈಮರಿ ಸ್ಕೂಲ್ ಜಾಗ್ರಫಿ ಒಳಗ ಆಫ್ರಿಕಾ ಖಂಡಕ್ಕ ಕಪ್ಪು ಖಂಡ (dark continent) ಅಂತಾರ ಅಂತ ಒಬ್ಬರು ಮಾಸ್ತರು ಹೇಳಿದ್ರು. ಯಾವದೋ ಕಿಡಿಗೇಡಿ, "ಸಿಹಿಯಾದ ಖಂಡಕ್ಕ ಏನಂತಾರ?", ಅಂತ ಕೇಳಿದ್ದ. "ಏನಲೇ ಹಾಂಗಂದ್ರಾ?" ಅಂತ ಕೇಳಿದ್ರಾ, "ಹೀ....ಹೀ.....ಸಿಹಿಯಾದ ಖಂಡ ಅಂದ್ರ ಶ್ರೀಖಂಡ ಉರ್ಫ್ ನಮ್ಮ ಚೀಪ್ಯಾ" ಅಂತ ಹೇಳಿ ಜೋಕ್ ಹೊಡೆದಿದ್ದ.

ಶ್ರೀಖಂಡ.....ಶ್ರೀಪಾದ ಖಂಡುರಾವ್ ಡಕ್ಕನೆಕರ್......ಉರ್ಫ್ ಶ್ರೀಖಂಡ.

ಎಲ್ಲೋ ಡೆಕ್ಕನ್ ಪ್ಲೆಟ್ಯು (Deccan Plateau) ಕಡೆ ಮಂದಿ ಇರಬೇಕು. ಅದರಿಂದಾನ ಡಕ್ಕನೆಕರ್ ಅಂತ ಅವರ ಅಡ್ದೆಸರು.`

ಅವಾ ಹಾಪ್ ಮರಾಠಿ ಹಾಪ್ ಕನ್ನಡ ಬ್ರಾಹ್ಮಣ ಇದ್ದ. ಏನೋ ದೇಶಸ್ಥ ಬ್ರಾಹ್ಮಣ ಅಂತ. ನಾವು ಅವಂಗ, "ಲೇ ನೀವು ಅಲ್ಲೆಲ್ಲೋ ಮಹಾರಾಷ್ಟ್ರ ಕಡೆ ಕಿತಬಿ ಮಾಡಿ ಅಲ್ಲಿಂದ ನಿಮ್ಮನ್ನ ದೇಶಭ್ರಷ್ಟ ಮಾಡಿ ಓಡಿಸ್ಯಾರ. ಅದನ್ನ ದೇಶಸ್ಥ ಅನ್ನಕೋತ್ತ ನಮಗ ಮಂಗ್ಯಾ ಮಾಡ್ತಿ ಏನಲೇ ಚೀಪ್ಯಾ? ಹಾಂ? ಹಾಂ?", ಅಂತ ಕೂಡ ಕಾಡಿಸ್ತಿದ್ವಿ. ಅವಾ ಪಾಪ, "ಇಲ್ಲೋ....ಇಲ್ಲೋ....ನಾವ ಒಳ್ಳೆ ಬ್ರಾಹ್ಮ್ರು. ರಿಗ್ವೇದಿ ಬ್ರಾಹ್ಮ್ರು" ಅನ್ನಕೊತ್ತ ಡಿಫೆಂಡ್ ಮಾಡ್ಕೊತ್ತಿದ್ದ.

ಮನ್ನೆ ಸಿಕ್ಕಿದ್ದ ಚೀಪ್ಯಾ. ಎಲ್ಲೆ ಅಂದ್ರ ಮತ್ತೆಲ್ಲೆ? ರೆಗ್ಯುಲರ್ ಅಡ್ಡಾ. ಭೀಮ್ಯಾನ್ ಚುಟ್ಟಾ ಅಂಗಡಿ.

ಬಂದವನ ಮಾಣಿಕಚಂದ್ ಗುಟ್ಕಾದ ಒಂದು ಹತ್ತರ ಮಾಲಿ ಕೇಳಿ ತೊಗೊಂಡ. ಒಂದ ಮಾಲಿ ಇರಲಿಲ್ಲ. ಭೀಮು ನಾಕ ಚೀಟಿಂದು ಒಂದ ಮಾಲಿ, ಮೂರು ಚೀಟಿದು ಎರಡ ಮಾಲಿ ಕೊಟ್ಟು, ಒಟ್ಟು ಹತ್ತು ಗುಟ್ಕಾ ಕೊಟ್ಟ. ಇಷ್ಟೆಲ್ಲಾ ಇಸ್ಕೊಬೇಕಾದ್ರ ಒಂದು ಕೆಳಗ ಬಿದ್ದು ಬಿಡ್ತು. ಐದು ರುಪಾಯಿಗೆ ಒಂದು ಗುಟ್ಕಾ ಚೀಟಿ. ಕೆಳಗ ಬಿತ್ತು ಅಂತ ಬಿಡಲಿಕ್ಕೆ ಬರ್ತದ ಏನು? ಇಲ್ಲ. ಚೀಪ್ಯಾ ಬಗ್ಗಿ ಆರಿಸಿಕೊಳ್ಳಲಿಕ್ಕೆ ಹೋದ.

"ಬಾಬಾ....ಆಯಿರೇ.....ನಂದು ಸೊಂಟಾ ಹೋತೋ", ಅಂತ ಚೀಪ್ಯಾ ನೋವಿಂದ ಮುಲುಗಿದ.

"ಯಾಕೋ ಚೀಪ್ಯಾ? ಏನಾತು? ಯಾರರ ಸೊಂಟ ಮುರದರು ಏನು?", ಅಂತ ಕೇಳಿದೆ.

"ಇಲ್ಲಪಾ ದೋಸ್ತಾ. ಎಲ್ಲಾ ನನ್ನ ಹೆಂಡ್ತಿ ಕೃಪಾ. ಅಕಿಂದನಾ ನನ್ನ ಸೊಂಟಾ ಹೋತೋ", ಅಂದವನ ಮತ್ತ ಮರಾಠಿ ಒಳಗಾ ಆಯೀ ಬಾಬಾ ಅಂತ ಮುಲುಗಿದ.

"ಹಾಂ? ಕೃಪಾ?!!!!! ನಿನ್ನ ಮೊದಲಿನ ಹೆಂಡ್ತಿ ಹೆಸರು ರೂಪಾ ಅಲ್ಲಾ? ಈಗ ಕೃಪಾ ಯಾರು? ಮತ್ತೊಂದು ಮದ್ವೀ ಮಾಡ್ಕೊಂಡಿ ಏನು? ಏನಪಾ ಇದು ಈ ವಯಸ್ಸಿನ್ಯಾಗ?", ಅಂತ ಕೇಳಿದೆ.

"ಇಲ್ಲೋ ಮಾರಾಯ. ರೂಪಾನ ಹೆಂಡ್ತಿ. ಅಕಿ ಕೃಪಾ ಮಾಡಿದ್ದಕ್ಕ ನನ್ನ ಸೊಂಟಾ ಹೋತೋ ದೋಸ್ತಾ", ಅಂದ ಚೀಪ್ಯಾ.

ನನಗ ತಿಳಿಲಿಲ್ಲ. ಅದಕ್ಕ ನಾನೂ ಒಂದು ಗುಟ್ಕಾ ಹಾಕಿದೆ. ಅದರ ಕಿಕ್ಕಿಂದ ತಿಳಿದರೂ ತಿಳಿಬಹುದು ಅಂತ.

"ಹೋಗ್ಗೋ.....ಚೀಪ್ಯಾ....ಮತ್ತ ಏನೇನೋ  ಸೂತ್ರದ, ಶಾಸ್ತ್ರದ ಬುಕ್ಸ್  ಓದಿ ಹೊಸ ಹೊಸ ಭಂಗಿ ಟ್ರೈ ಮಾಡಿದಿ ಏನು? ಅದಕ್ಕಾ ಸೊಂಟ ಹಿಡಕೊಂಡಿರಬೇಕು. ಅಲ್ಲಾ?", ಅಂತ ಕಿಡಿಗೇಡಿ ಲುಕ್ ಕೊಟ್ಟುಗೊತ್ತ ಕೇಳಿದೆ. ಕಣ್ಣ ಹೊಡೆದೆ.

"ಏನ್ ಭಂಗಿ ಹಚ್ಚಿ? ನಮ್ಮ ಮನಿಯೊಳಗ ಈಗ ಪಾಯಖಾನಿಗೆ ಸೆಪ್ಟಿಕ್ ಟ್ಯಾಂಕ್ ಅದ. ಭಂಗಿ ಗಿಂಗಿ ಮಂದಿ ಈಗ ಬರಂಗಿಲ್ಲ", ಅಂದ ಚೀಪ್ಯಾ.

ಇವರ ಮನಿ ದೇವ್ರಾಣಿ ಇವಂಗ ನಾ ಹೇಳಿದ ಭಂಗಿ ಏನು ಅಂತ ತಿಳಿದಿಲ್ಲ ಅಂತ ಗೊತ್ತಾತು.

"ಹ್ಞೂ....ಇರಲೀ ಬಿಡಪಾ. ಭಂಗಿ ಮಂದಿ ಎಲ್ಲಾ ಜಾತಿ ಕನ್ವರ್ಟ್ ಮಾಡಿಕೊಂಡು ಕ್ರಿಸ್ಟೋಫರ್ ಶಾಂತಪ್ಪಾ ಆಗಿ ಬಿಟ್ಟಾರ. ಭಂಗಿ, ಲುಂಗಿ ಬಿಡು. ನೀ ಹೇಳಪಾ ಏನಾತು ಅಂತ", ಅಂತ ಅಂದೆ.

"ಹೌದೋ....ರಂಗೋಲಿ ಹಾಕ್ಲಿಕ್ಕೆ ಹೋಗಿ ಸೊಂಟಾ ಹೋತೋ", ಅಂದ ಚೀಪ್ಯಾ.

ರಂಗೋಲಿ
"ಏನು ನೀನು ರಂಗೋಲಿ ಹಾಕಿದ್ಯಾ? ಯಾಕ? ರಂಗೋಲಿ ಹಾಕಿ ರಂಗ್ಯಾ ಆಗಬೇಕಾಗಿತ್ತು ನೀನು. ಅದೆಲ್ಲೋ ರಂಗೋಲಿ ರಾಂಗಾಗಿ ಮಂಗ್ಯಾ ಆಗಿ ಸೊಂಟಾ ಉಳಿಕಿಸಿಕೊಂಡಿಯಲ್ಲೋ. ಇದೆಲ್ಲೋ ರಂಗೋಲಿ ಹೋಗಿ ಮಂಗೋಲಿ ಆಗಿ ಬಿಟ್ಟದಲ್ಲೋ. ಲೇ...ಮಂಗೋಲಿ ಮಂಗ್ಯಾ.....ಹೀ.....ಹೀ.....", ಅಂತ ನಕ್ಕೆ. ಅವಂಗ ಕಾಡಿಸಿದ ಫೀಲಿಂಗ ಬಂತು. ಅದೆಲ್ಲಾ ಕಾಮನ್ ದೋಸ್ತ ಮಂದಿಯೊಳಗ.

"ಹಾಂಗ ಆತೋ ದೋಸ್ತ. ಇಕಿ ರಂಗೋಲಿ, ಮುಂಜಾನೆದ್ದು ಹಾಕೋ ಕರ್ಮ ನಂದು. ಅದರಾಗ ಟಗರ್ ಬ್ಯಾರೆ ಅಲ್ಲೇ ಬರಬೇಕ. ಅದೂ ನಮ್ಮ ದೋಸ್ತ ಕರೀಂ ಬಕ್ರೀದಕ್ಕ ಅಂತ ತಂದಿದ್ದ ಟಗರು", ಅಂತ ಅಂದುಬಿಟ್ಟ ಚೀಪ್ಯಾ. ತಲಿ ಕೆಟ್ಟ ಮಸರ ಗಡಗಿ ಆತು.

ಹೆಂಡ್ತಿ ರಂಗೋಲಿ. ಇವಾ ಹಾಕವ. ಕರೀಮನ ಟಗರು. ಇವನ ಸೊಂಟಾ.............ಒಂದಕ್ಕೊಂದು ಏನು ನಂಟು? ತಿಳಿಲಿಲ್ಲ.

"ಏನಾತು ಅಂತ ಸರಿ ಮಾಡಿ ಹೇಳೋ ಚೀಪ್ಯಾ?" , ಅಂದೆ.

"ದೋಸ್ತ....ಈಗ ನಮ್ಮನಿ ಮುಂದ ಸ್ಪೆಷಲ್ ರಂಗೋಲಿ ಮಾರಾಯ. ಶ್ರೀಚಕ್ರದ ರಂಗೋಲಿ. ಅವಾ ಯಾರೋ ಪೂಜಾರಿನೋ, ಮಂತ್ರವಾದಿನೋ ನನ್ನ ಹಾಪ್ ಹೆಂಡತಿಗೆ ಹೇಳ್ಯಾನ ಅಂತ. ನಿಮ್ಮ ಮನಿ ಮುಂದ ಶ್ರೀಚಕ್ರದ ರಂಗೋಲಿ ಹಾಕಿದರ ಮಸ್ತ ರೊಕ್ಕ ಬರ್ತದ ಅಂತ. ದಿನಾ ತಪ್ಪದಂತ 21 ದಿವಸ ಮುಂಜಾನೆ ಕರೆಕ್ಟ್ ಐದು ಘಂಟೆಕ್ಕ ಎದ್ದು ಮಡಿಯೊಳಗ ಹಾಕ್ರಿ ಅಂತ ಹೇಳಿ ಎರಡ ಸಾವಿರ ರೊಕ್ಕಾ ಬೋಳಿಸಿ ಕಳ್ಸಿದ ಆವಾ. ಇಕಿ ಒಂದೋ ಎರಡೋ ದಿನ ಮುಂಜಾನೆ ಲಗೂನ ಎದ್ದು ಹಾಕಿದಳು.......", ಅಂತ ಹೇಳಿ ಗುಟ್ಕಾ ಪಿಚಕಾರಿ ಹಾರಿಸಲಿಕ್ಕೆ ಒಂದು ಸಣ್ಣ ಬ್ರೇಕ್ ತೊಗೊಂಡ ಚೀಪ್ಯಾ.

"ಗೊತ್ತಲ್ಲ ನಿನಗ ಅಕಿ ಆರಂಭಶೂರತ್ವ? ಎರಡು ದಿನ ಎದ್ದು ಹಾಕಿದಳು. ಇಕಿ ಎದ್ದು ಧಡಾ ಬಡಾ ಮಾಡೋದ್ರಾಗ ನನಗ ನಿದ್ದಿ ಇಲ್ಲ. ಮೂರನೇ ದಿನ ನನಗ ಒಂದು ಕೆಟ್ಟ ಕನಸು ಬಿದ್ದು ಏಕದಂ ಎಚ್ಚರ ಆಗಿ ಬಿಡ್ತು. ಟೈಮ್ ನೋಡಿದ್ರ 4.40 am ಆಗಿತ್ತು. ಇಕಿ ಬಾಜೂಕ ಕುಂಡಿ ಸೈಡ್ ಮಾಡಿಕೊಂಡು, ಹಿಡಂಬಿ ಗತೆ ಗೊರಕೀ ಹೊಡಕೋತ್ತ, ಮೂಗಿನ್ಯಾಗ ಬೆಟ್ಟ ಹೆಟ್ಟಿಗೊಂಡು, ಜೊಲ್ಲ ಸುರಿಸ್ಕೋತ್ತ, ಹೇಶಿ ಗತೆ  ನಿದ್ದಿ ಮಾಡ್ಲಿಕತ್ತಿದ್ದಳು. ಏಳು ಹಾಂಗ ಕಾಣಲಿಲ್ಲ. ಸ್ನಾನ ಆಗಿ ಮಡಿಯೊಳಗ ರಂಗೋಲಿ ಹಾಕ್ಬೇಕು. ತಪ್ಪಿದರ ಶ್ರೀಚಕ್ರ ಕೆಲಸ ಮಾಡೋದಿಲ್ಲ. ಅದಕ್ಕ ಅಕಿನ್ನ ಅಲುಗಾಡಿಸಿ ಎಬ್ಬಿಸೋ ಪ್ರಯತ್ನ ಮಾಡಿದೆ", ಅಂದ ಚೀಪ್ಯಾ.

"ಮುಂದ ಏನಾತು? ಎದ್ದು ಮಡಿಯೊಳಗ ರಂಗೋಲಿ ಹಾಕಿ ಬಂದು ಮತ್ತ ಗುಡಾರ್ ಹೊಚಗೊಂಡು ಮಲ್ಕೊಂಡಳು ಏನು?", ಅಂತ ಕೇಳಿದೆ.

"ಎಲ್ಲಿದು? ನನಗ ಬೈದು ಬಿಟ್ಟಳು ಅಕಿ", ಅಂತ ಮಳ್ಳ ಮಸಡಿ ಮಾಡಿದ ಚೀಪ್ಯಾ.
 
"ಏನಂತ ಬೈದಳು ಚೀಪ್ಯಾ?", ಅಂತ ಕೇಳಿದೆ.

"ನಾ ಏನ ಏಳಂಗಿಲ್ಲ. ಬೇಕಾದ್ರ ನೀವ ಎದ್ದು  ಮಡಿಯೊಳಗ ರಂಗೋಲಿ ಹಾಕ್ಕೊರೀ. ಇಲ್ಲಾ ಮಂಗೋಲಿ ಹಾಕ್ಕೊರೀ. ನೀವು ಇರೋ ಕರ್ಮಕ್ಕ ನಾ ಎಂತಾ ರಂಗೋಲಿ ಹಾಕಿದ್ರೂ ನಮ್ಮ ಕಡೆ ರೊಕ್ಕ ಬರೋದು ಅಷ್ಟರಾಗ ಅದ. ಹಾಳಾಗಿ ಹೋಗ್ರೀ. ನನಗ ನಿದ್ದಿ ಮಾಡಲಿಕ್ಕೆ ಬಿಡ್ರೀ", ಅಂತ ಬೈದಳಂತ ಚೀಪ್ಯಾನ ಹೆಂಡ್ತಿ.

"ಈಗ ಕ್ಲೀಯರ್ ಆತು ನೋಡು ಮಂಗೋಲಿ ಅಂದ್ರ ಏನು ಅಂತ", ಅಂದೆ.

"ಏನಪಾ ಅಂಥಾ ದೊಡ್ಡದು ಕ್ಲೀಯರ್ ಆತು?" ಅಂತ ಚೀಪ್ಯಾ ಚಾಲೆಂಜ್ ಮಾಡಿದ.

"ನೋಡೋ......ಮುಂಜಾನೆ ರಂಗೋಲಿ ಹಾಕ್ಲಿಕ್ಕೆ ಹೆಂಡ್ತಿ ಎಬ್ಬಿಸಿಲಿಕ್ಕೆ ಹೋಗಿ, ಅಕಿ ಕಡೆ ಯಕ್ಕಾಮಕ್ಕಾ ಬೈಸ್ಕೊಂಡು 'ಮಂಗ್ಯಾ' ಆಗಿ, ಅದ ಮಂಗ್ಯಾನ್ ಮಸಡಿ ಇಟ್ಟುಗೊಂಡು, ಕದ್ದು ಹೋಗಿ ಹಾಕೋ ರಂಗೋಲಿಗೆ ಮಂಗೋಲಿ ಅಂತಾರ. ಇದ ಕ್ಲೀಯರ್ ಆತು.", ಅಂದು 'ಹ್ಯಾಂಗಲೇ' ಅನ್ನೋ ಲುಕ್ ಕೊಟ್ಟೆ.

ಹಾಳಾಗಿ ಹೋಗು ಅನ್ನೋ ಲುಕ್ ಕೊಟ್ಟಾ ಚೀಪ್ಯಾ.

ಮಂಗೋಲಿ ಮಂಗ್ಯಾ 

"ಚೀಪ್ಯಾ....ರಂಗೋಲಿ ಹಾಕಿದ್ರಾ ಸೊಂಟಾ ಹೋಗುವಂತಾದ್ದು ಏನದನೋ? ಹಾಂ?ಹಾಂ?", ಅಂದೆ.

"ಅದನೋ....ಅದ.....ಎಲ್ಲಾ ಬಗ್ಗಿ ಹಾಕೋದ್ರಾಗನ ಅದ. ಅಂದ್ರ ಬಗ್ಗಿ ರಂಗೋಲಿ ಹಾಕೊದ್ರಾಗ ಅದ ನೋಡೋ......ಹೋತೋ ನನ್ನಾ ಸೊಂಟಾ ಹೋತೋ....." ಅಂತ ಹೇಳಿ ಮತ್ತ ಮುಲುಗಿದ. ಭಾಳ ನೋಯಿಸ್ಲಿಕತ್ತಿತ್ತು ಅಂತ ಅನ್ನಸ್ತದ.

"ಇಕಿ ಹುಚ್ಚ ಖೋಡಿ ಏನೂ ಹಾಶ್ಗಿ ಬಿಟ್ಟು ಏಳು ಹಾಂಗ ಕಾಣಲಿಲ್ಲ. ನಾನ ಎದ್ದು, ಭರಕ್ಕನ ಒಂದೆರಡು ತಂಬ್ಗಿ ಸ್ನಾನದ ಶಾಸ್ತ್ರ ಮುಗಿಸಿ, ಒದ್ದಿ ಪಂಜಾ ಉಟ್ಗೊಂಡು, ರಂಗೋಲಿ ಡಬ್ಬಿ ಹಿಡಕೊಂಡು, ಯಾರರ ನೋಡಿ ಗೀಡ್ಯಾರು ಅಂತ ಆ ಕಡೆ ಈ ಕಡೆ ನೋಡ್ಕೊತ್ತ, ನಮ್ಮ ತುಳಸಿ ಕಟ್ಟಿ ಮುಂದ ಹೋದೆ ನೋಡಪಾ. ಆಗ ಸುಮಾರ್ ಬೆಳಗ ಆಗಿತ್ತು. ಅಲ್ಲೇ ಗೇಟ್ ಮುಂದ ನಮ್ಮ ಕರೀಂ ಸಾಬನ ಕುಡ್ಡ ಕಾಕಾ ಕುರಿ ಬಿಟ್ಗೊಂಡು ನಿಂತಿದ್ದ. ಅವಂಗೇನ ಕಣ್ಣ ಕಾಣಂಗಿಲ್ಲ. ಓಕೆ ಅಂತ ಹೇಳಿ ರಂಗೋಲಿ ಹಾಕ್ಲಿಕ್ಕೆ ರೆಡಿ ಆದೆ ಏನಪಾ. ಅವನೌನ್ ತುಳಸಿ ಕಟ್ಟಿ ಮುಂದ ಬಗ್ಗಿ ಇನ್ನೇನ್ ರಂಗೋಲಿ ಹಾಕ್ಲಿಕ್ಕೆ ಶುರು ಮಾಡ್ಬೇಕು ಅನ್ನೋದ್ರಾಗ ಹಿಂದಿಂದ ಸರೀತ್ನಾಗಿ ಯಾರೋ ಕುಂಡಿಗೆ ಜಾಡ್ಸಿ ಒದ್ದಾಂಗ ಆತು. ಬ್ಯಾಲನ್ಸ್ ತಪ್ಪಿ ಮುಂದ ಬಿದ್ದೆ. ಭಾಳ್ ನೋವಾತು. ಜೀವಾ ಹೋದಂಗಾತು. ಸುಧಾರಿಸಿಕೊಂಡು ಈ ಕಡೆ ಮಗ್ಗಲಾಗಿ ಏಳೋಣ ಅಂತ ಹೊರಳಿದ್ರಾ , ಸ್ವಲ್ಪ ದೂರದಾಗ ಕರ್ರಗ ದೆವ್ವದಾಂಗ ನಿಂತಿತ್ತು!!!!!!", ಅಂದ ಚೀಪ್ಯಾ.

ಭಯಂಕರ ಸಸ್ಪೆನ್ಸ್.

"ಏನು ನಿಂತಿತ್ತೋ? ದೆವ್ವಾ? ದೆವ್ವಾ ನಿನಗ ಒದಿತಾ?", ಅಂತ ಕೇಳಿದೆ.

ಕರ್ರ ಟಗರು
 "ಇಲ್ಲೋ.....ನಾ ಬಗ್ಗಿ ನಿಂತಿದ್ದು ಅಲ್ಲೇ ಮೇಯ್ಕೊತ್ತಿದ್ದ ಟಗರಿಗೆ ಏನೋ ಫೀಲಿಂಗ್ ಕೊಟ್ಟಿರಬೇಕು. ಅದಕ್ಕ ನನ್ನ ಪಿಛವಾಡ ಇನ್ನೊಂದು ಟಗರಿನ ಹಾಂಗ ಕಂಡಿರಬೇಕು. ಅದಕ್ಕ ಬಂದು, ಟಗರು ಟಗರಿಗೆ ಟಕ್ಕರ್ ಕೊಟ್ಟು ಗುದ್ದಾಡೋದಿಲ್ಲ? ಹಾಂಗ ಕರ್ರನೆ ಟಗರ್ ಸೂಡ್ಲಿ ಬಂದು ಗುದ್ದೇ ಬಿಡ್ತು. ಆದ್ರಾ ನನ್ನ ಪಿಛವಾಡ ಸಾಫ್ಟ್. ಮತ್ತ ಕೋಡಿಲ್ಲ. ಟಗರು ಕೊಟ್ಟ ಗಜ್ಜಿಗೆ ನಾನು ಡಮಾರ್ ಅಂತ ಬಿದ್ದೆ. ಟಗರು ಮತ್ತೊಮ್ಮೆ ಕೋಡಿಗೆ ಕೋಡ ಹಚ್ಚಿ ಕುಸ್ತಿ ಮಾಡೋಣ ಬಾ, ಅನ್ನೋ ಹಾಂಗ ಸ್ವಲ್ಪ ದೂರ ಹೋಗಿ ನಿಂತು, ನಾ ತಿರಗೋದನ್ನ ವೇಟ್ ಮಾಡ್ಲಿಕತ್ತಿತ್ತು. ನಾ ಹೊಳ್ಳಿದ್ದ ನೋಡಿದ್ ಕೂಡಲೇ, ತಲಿ ಕೆಳಗ ಬಗ್ಗಿಸ್ಕೊಂಡು, ಕೋಡ್ ಮ್ಯಾಲೆ ಎಬ್ಬಿಸ್ಕೊಂಡು ಓಡಿ ಬಂದ  ಬಿಡ್ತ. ಈ ಸರೆ ಸೀದಾ ತೊಡಿ ಮಧ್ಯದ ಪೂಜಾ ಸ್ಥಾನಕ್ಕ ಗಜ್ಜು ಬಿದ್ದು, ಜನರೇಟರ್ ಜ್ಯಾಮ್ ಆಗಿ, ಪಂಚೆಯೊಳಗಿನ ಪಂಚಾಂಗ ಫುಲ್ ಲ್ಯಾಪ್ಸ್ ಆಗೋ ರಿಸ್ಕ್ ಇತ್ತು. ನಮ್ಮನಿ ದೇವರು ಪಂಡರಾಪುರದ ಪಾಂಡುರಂಗನ್ನ ನೆನೆಸಿಕೊಂಡು, ಒಂದು ಡೈವ್ ಹೊಡದ ಬಿಟ್ಟೆ ಸೈಡಿಗೆ. ಒಂದೆರಡು ಇಂಚಿನ್ಯಾಗ ಟಗರ್ ದಾಳಿಯಿಂದ ಬಚಾವ್ ಆದೆ. ಟಗರ್ ಹೋಗಿ ತುಳಸಿ ಕಟ್ಟಿಗೆ ಡಿಕ್ಕಿ ಹೊಡ್ಕೊಂಡು, ಏನ ಆಗಿಲ್ಲ ಅನ್ನೋರಾಂಗ ಮತ್ತ ತನ್ನ ಪೋಸಿಶನ್ ಗೆ ಹೋಗಿ ನಿಂತು, ಮತ್ತ ಓಡಿ ಬರಲಿಕ್ಕೆ ರೆಡಿ ಇತ್ತು. ಇದು ದೆವ್ವ ಹೊಕ್ಕ ಟಗರು ಅಂತ ಹೇಳಿ, ರಂಗೋಲಿ ಪುಡಿ ಡಬ್ಬಿ ಒಗದು, ಬರೆ ಪಟ್ಟಾಪಟ್ಟಿ ಚಡ್ಡಿಯೊಳಗ ಮನಿಯೊಳಗ ಓಡಿ ಬಂದೆ. ಇಷ್ಟು ಆಗಿದ್ದು ನೋಡಪಾ", ಅಂತ ಹೇಳಿ ಫುಲ್ ವಿವರಣೆ ಕೊಟ್ಟ.

ಫುಲ್ ಕೊಬ್ಬಿದ ಟಗರು ಹಿಂದಿಂದ ಬಂದು ಗುದ್ದಿ, ಇವಾ ಬಿದ್ದಿದ್ದಕ್ಕ ಇಷ್ಟು ದೊಡ್ಡ ಪ್ರಮಾಣದ ಸೊಂಟಾ ಝಕಮ್ ಆಗ್ಯದ ಅಂತ ಗೊತ್ತಾತು.


ಅಷ್ಟರಾಗ ಕರೀಂ ಸಹ ಅಲ್ಲೇ ಬಂದು ಬಿಟ್ಟ. ಅವನ್ನ ನೋಡಿದ ಕೂಡಲೇ ಚೀಪ್ಯಾನ ಬೀಪಿ ಸಿಕ್ಕಾಪಟ್ಟೆ ಏರಿ ಹೋತು.

"ಲೇ....ಮಂಗ್ಯಾನ್ ಕೆ....ಕರೀಂ.....ಟಗರ್ ತಂದು ರಸ್ತೆದಾಗ ಮೇಯಲಿಕ್ಕೆ ಬಿಡ್ತಿ. ಅದರ ಮ್ಯಾಲೆ ಅದನ್ನ ಕಾಯಲಿಕ್ಕೆ ನಿಮ್ಮ ಕುಡ್ಡ ಕಾಕಾ. ನಿನ್ನ ಟಗರ್ ನನ್ನ ಕೊಂದ ಬಿಟ್ಟಿತ್ತು. ಗೊತ್ತದ ಏನು? ದರಿದ್ರದವನ....." ಅಂತ ಅವಂಗ ಬೈದ.

ಕರೀಮಗ ತಲಿ ಬುಡ ತಿಳಿಲಿಲ್ಲ. ಪ್ಯಾ....ಪ್ಯಾ....ಅಂದ.

ನಾನು ಕರೀಮಗ ತಿಳಿಯುಹಾಂಗ ಹೇಳಿದೆ.

"ಓ!!!!! ಆ ಟಗರು ಕ್ಯಾ? ಬಕ್ರೀದ್ ಗೆ ಅದರದ್ದು ಕುರ್ಬಾನಿ ಮಾಡಿ, ಅದರಿಂದ ಬಿರ್ಯಾನಿ ಮಾಡಿ, ಎಲ್ಲಾ ತಿಂದು ಆಯ್ತು ಸಾಬ್....", ಅಂತ ಹೇಳಿ ಖುಷ್ ಲುಕ್ ಕೊಟ್ಟ ಕರೀಂ.

"ಗರಂ ಮಸಾಲ ಮಸ್ತ ವಾಸನಿ ಅದೇ", ಅನ್ನಕೊತ್ತ ಕೈ ಮೂಸಿ ಮೂಸಿ ಬಿರ್ಯಾನಿ ವಾಸನಿ ನೋಡ್ಕೊಂಡ ಕರೀಂ. ಹಾಪ್ಸೂಳೆಮಗ. (ಪ್ರೀತಿ ಬೈಗಳ)

ಬಕ್ರೀದ ಹಬ್ಬಕ್ಕ ತಂದ ಟಗರು ಅಲ್ಲಾ-ಕೋ-ಪ್ಯಾರೆ ಆಗಿ ಬಿಟ್ಟಿತ್ತು. ಚೀಪ್ಯಾ ಫುಲ್ ದಂಗಾಗಿ ಬಿಟ್ಟ. ಮನ್ನೆ ಮನ್ನೆ ಕುಂಡಿಗೆ ಗುದ್ದಿದ ಟಗರು ಇವತ್ತು ಎದ್ರಿಗೆ ನಿಂತ ಕರೀಮನ ಹೊಟ್ಟಿಯೊಳಗ ಅಂದ್ರ ಏನು?

ಜೀವನ ಎಷ್ಟು ನಶ್ವರ. ಅಲ್ಲ?
------------------------------------------------------------------------------------------------------
* ಟಗರು = ಆಡು, ಮೇಕೆ

* ಟಗರ್  + ಮಂಗೋಲಿ = ಟಗರ್ಮಂಗೋಲಿ (ಯಾವ ಸಂಧಿನೋ ಗೊತ್ತಿಲ್ಲ)

* ಬಗ್ಗಿದವರಿಗೆ ಬಂದು ಗುದ್ದೋದು ಟಗರುಗಳ ಸಹಜ ಧರ್ಮ. ಯಾಕೋ ಗೊತ್ತಿಲ್ಲ. ನಮ್ಮ ಬಾಜು ಮನಿ ಅಜ್ಜಾವರಿಗೂ ಸಹ ಟಗರು ಬಂದು ಗುದ್ದಿತ್ತು. ಆ ಘಟನೆಯೂ ಒಂದು ಸ್ಪೂರ್ತಿ.

* ರಂಗೋಲಿ, ಮಂಗೋಲಿ - ದೋಸ್ತರೊಂದಿಗೆ ಹರಟೆ ಹೊಡೆದಾಗ ಉತ್ಪತ್ತಿ ಮಾಡಿ ನಕ್ಕಿದ್ದು. ಆ ದೋಸ್ತರಿಗೂ ಒಂದು ಥ್ಯಾಂಕ್ಸ್.

3 comments:

ವಿ.ರಾ.ಹೆ. said...

"ಬಗ್ಗಿದವರಿಗೆ ಬಂದು ಗುದ್ದೋದು ಟಗರುಗಳ ಸಹಜ ಧರ್ಮ"
LOL.

TOTAL ARTICLE IS BIG 'ROFL'

ENJOYED VERYMUCH...:D :D

Mahesh Hegade said...

Thanks Vikas.

It was fun writing this!

Unknown said...

enjoyed reading this ...