Thursday, June 27, 2013

'ಗೋಪಿ' ಮಂಚೂರಿಯನ್....ಮಂಗೋಚಾರ್ಯ ಸ್ಪೆಷಲ್


ಗೋಬಿ ಮಂಚೂರಿಯನ್
'ಗೋಬಿ ಮಂಚೂರಿಯನ್' ತಿನ್ನಲು ಸಿಕ್ಕೀತೆಂದು ಹೋದರೆ ತಿನ್ನಲು ಬಾರದಂತಹ 'ಗೋಪಿ' ಮಂಚೂರಿಯನ್ ಸಿಗಬೇಕೆ?!

ಆವತ್ತು ಸಂಡೇ. ಸುಮಾರು ಮಧ್ಯಾನ್ಹ ಹನ್ನೊಂದುವರೀ ಪೌಣೆ ಹನ್ನೆರಡರ ಟೈಮ್. ನಾ ನಮ್ಮ ಖಾಯಂ ಅಡ್ಡಾ ಭೀಮ್ಯಾನ ಪಾನ್ ಅಂಗಡಿ ಮುಂದ 'ಡ್ರೈ ಮಾವಾ' ಮೆಲಕಾಡಿಸಿಕೋತ್ತ ನಿಂತಿದ್ದೆ. ನಮ್ಮ ದೋಸ್ತ ಚೀಪ್ಯಾ ಮನಿ ಕಡೆಯಿಂದ ಓಡಿ ಬರೋದು ಕಾಣಿಸ್ತು. ಗೊತ್ತಾತು. ರೂಪಾ ವೈನಿ ಏನೋ ಜಲ್ದೀ ಒಳಗ ತರಲಿಕ್ಕೆ ಓಡಿಸ್ಯಾರ. ಅದಕ್ಕss ಹೀಂಗ ಕುಂಡಿಗೆ ಕಾಲ್ ಹಚ್ಚಿ ಓಡಲಿಕತ್ತಾನ.

ವೈನಿ ಕಥಿ ಅಂದ್ರ, ಒಗ್ಗರಣಿಗೆ ರೆಡಿ ಮಾಡಿಕೊಂಡು ಮೆಣಶಿನಕಾಯಿ ಚಟಪಟ ಅನ್ನಲಿಕತ್ತಾಗ ಅವರಿಗೆ ಏಕದಂ ಸಾಸಿವಿ ಇಲ್ಲ ಅಂತ ಗೊತ್ತಾಗ್ತದ. ರೀ, ಭರಕ್ಕನ ಹೋಗಿ ಸಾಸವಿ ತೊಂಗೊಂಡು ಬರ್ರಿ, ಅಂತ ಚೀಪ್ಯಾನ್ನ 'ನರಸಿಂಹ ಕಿ ರಾಣಿ'  ಸ್ಟೋರ್ ಗೆ ಓಡಿಸ್ತಾರ. ರಾಣಿ ಸಾಹಿಬಾ ಕಡೆ ಬೈಸ್ಕೊಂಡ ಚೀಪ್ಯಾ ಕಿ'ರಾಣಿ' ಅಂಗಡಿಗೆ ಓಡ್ತಾನ. ಇವತ್ತು ಇವಾ ಓಡೋ ಪರಿ ನೋಡಿದ್ರ ಹಾಂಗೇ ಏನೋ ಆಗಿರಬೇಕು ಅಂತ ಅನ್ನಿಸ್ತು.

ಇಷ್ಟು ಅರ್ಜೆಂಟ್ ಒಳಗ ಓಡಲಿಕತ್ತಾನ ಅಂದ್ರ ಮುದ್ದಾಂ ನಿಲ್ಲಿಸಿ ಕೇಳಲೇ ಬೇಕು. ಟ್ರಾಫಿಕ್ ಜಾಸ್ತಿ ಇರಲಿಲ್ಲ. ಸೊಯ್ಯ ಅಂತ ಓಡಿ ರಸ್ತೆ ಕ್ರಾಸ್ ಮಾಡಿಬಿಟ್ಟೆ. ಮರುಕ್ಷಣದಾಗ ಚೀಪ್ಯಾನ ಆಟಕಾಯಿಸ್ಕೊಂಡೆ. ವಿಧಿ ಇಲ್ಲದೇ ನಿಂತಾ ಚೀಪ್ಯಾ.

ಏನಲೇ ಚೀಪ್ಯಾ? ಓಡೋದು ನೋಡಿದ್ರ ವಗ್ಗರಣಿಗೆ ಏನೋ ತರಲಿಕ್ಕೆ ಹೊಂಟಂಗ ಅದಲ್ಲ? ಏನು ತರಲಿಕ್ಕೆ ಎಲ್ಲಿ ಓಡಿಸ್ಯಾರ ವೈನಿ? ಹಾಂ? ಹಾಂ? - ಅಂತ ಕೇಳಿದೆ.

ಏ....ಬಿಡೋ ಮಾರಾಯಾ....ಭಾಳ ಅರ್ಜೆಂಟ್....ಆ ಮ್ಯಾಲೆ ಎಲ್ಲಾ ಹೇಳತೇನಿ....ನೀನೂ ಊಟಕ್ಕ ಬಂದು ಬಿಡು, ಅಂತ ಅತ್ಯುನ್ನತ ಆಮಿಷ, ಊಟದ ಆಮಿಷ, ತೋರಿಸಿ ಚೀಪ್ಯಾ ಕಳಚಿಕೊಳ್ಳಲಿಕ್ಕೆ ನೋಡಿದ.

ಊಟಕ್ಕ ಕರದಾನ. ಅದೂ ಬಿಟ್ಟಿ. ಇನ್ನೂ ಇವಂಗ ತ್ರಾಸ್ ಕೊಡಬಾರದು ಅಂತ ಬಿಡಲಿಕ್ಕೆ ತಯಾರ ಆದೆ.

ಏನ್ ತರಲಿಕ್ಕೆ ಹೊಂಟೀಲೇ ಚೀಪ್ಯಾ? ಇವತ್ತು ರವಿವಾರ. ಭಾಳ ಅಂಗಡಿ ಬಂದು ಇರ್ತಾವ. ಹೇಳು..ಹೇಳು, ಅಂತ ಕೇಳಿದೆ. ಈ ಯಬಡಾ ಗೊತ್ತಿಲ್ಲದೇ ತಾಸು ಗಟ್ಟಲೇ ಮಾರ್ಕೆಟ್ ಸುತ್ತಿಗೋತ್ತ ಇದ್ದಾನು, ನಂತರ ವೈನಿ ಕಡೆ ಮನಗಂಡ ಕಟಿಸಿಕೊಂಡ ಗಂಡ ಆದಾನು ಅಂತ ಕಾಳಜಿ ನಮಗ.

ಏ....ಬಿಡೋ ಮಾರಾಯಾ...ಈಗೆಲ್ಲಿ ನಿನ್ನ ಮುಂದ ಕಿರಾಣಾ ಲಿಸ್ಟ್ ಓದಿಕೋತ್ತ ಕೂಡಲಿ? ಜಲ್ದೀ ಹೋಗಬೇಕು. ಬಂದು ಬಿಡು ಊಟಕ್ಕ. ಇನ್ನು ಒಂದು ತಾಸು ಬಿಟ್ಟು, ಅಂತ ಹೇಳಿದ ಚೀಪ್ಯಾ ಹೊಂಟು ನಿಂತ. ನಿಂತ ಏನು ಬಂತು ಹೊಂಟೇ ಬಿಟ್ಟ.

ಏನ್ ತರಲಿಕ್ಕೆ ಅಷ್ಟು ಅರ್ಜಂಟಿಲೆ ಹೊಂಟಿ ಅಂತ ಹೇಳಿ ಹೋಗೋ ಪುಣ್ಯಾತ್ಮಾ, ಅಂತ ವದರಿದೆ.

ಅದ..ಅದು...ಗೋಬಿ.....ಚಂದಾ....ಮಂಚೂರಿಯನ್..... ಅಂತ ಚೀಪ್ಯಾ ಏನೇನೋ ಅಡ್ಡಂಬಡ್ಡ ಹೇಳಿ ಹೋಗಿ ಬಿಟ್ಟ.

ಹಾಂ!!! ಏನು ಇವರ ಮನಿಯಾಗ ಇವತ್ತು ಗೋಬಿ ಮಂಚೂರಿಯನ್ ಮಾಡ್ಯಾರ? ಚಂದಾ ಬಂದಾಳ? ಆಹಾ!! ಆಹಾ!! ಏನು ಸೌಭಾಗ್ಯ ನಮ್ಮದು ಇವತ್ತು. ಇಂತಹ ದಿನಾನ ನಮ್ಮನ್ನ ಊಟಕ್ಕ ಬ್ಯಾರೆ ಕರೆದು ಬಿಟ್ಟಾನ. ಏನು ನಮ್ಮ ನಸೀಬಾ!!! ಅಂತ ದೇವರಿಗೆ ಮನಸ್ಸಿನ್ಯಾಗ ಸಾವಿರ ನಮಸ್ಕಾರ ಹಾಕಿದೆ. ಗಡದ್ದ ಊಟ ಆದ ಮ್ಯಾಲೆ ಮೆಲ್ಲಲಿಕ್ಕೆ ಬೇಕು ಅಂತ ಒಂದು ಸ್ಪೆಷಲ್ ಜರ್ದಾ 420 ಪಾನ್ ಮಾಡಿಸಿ ಕಟ್ಟಿಸಿಬಿಟ್ಟೆ. 300 ರತ್ನಾ ಜರ್ದಾ ಮತ್ತ 120 ಬಾಬಾ ಜರ್ದಾ ಹಾಕಿ ಮಾಡಿದ್ದೇ 420 ಪಾನ್!

ಚಂದಾ ಅಂದ್ರ ಚಂದ್ರಕಲಾನೇ ಇರಬೇಕು. ಚೀಪ್ಯಾನ ನಾದನಿ. ರೂಪಾ ವೈನಿ ತಂಗಿ. ಏನೋ ಒಂದು ಟೈಪ್ ಚಂದ ಇದ್ದಾಳ. ಕಣ್ಣು ಮೂಗು ಎಲ್ಲಾ ತಿರಗಿಸೋ ವಯಸ್ಸು. ಗಿರಿ ಗಿರಿ ತಿರಿಗಿಸಿಕೋತ್ತ, ಏನೋ ಹುಚ್ಚುಚ್ಚರೆ ಮಾತಾಡಿಕೋತ್ತ, ಮಂಗ್ಯಾತನ ಮಾಡಿಕೋತ್ತ ಇರ್ತದ ಹುಡುಗಿ. ಊಟದ ಜೊತಿ ಕಂಪನಿಗೆ ಛೋಲೋನೇ ಆತು ತೊಗೊ, ಅಂತ ಅಂದುಕೊಂಡೆ.

ಗೋಬಿ ಮಂಚೂರಿಯನ್ ತಿನ್ನೋ ಭಾಗ್ಯ ನಮ್ಮದು ಇವತ್ತು. ಅದೂ ಮನಿಯೊಳಗ ಶುದ್ಧವಾಗಿ ಮಾಡಿದ್ದು. ಅವನೌನ್!ಸ್ಟೇಷನ್ ರೋಡ್ ಮ್ಯಾಲೆ ದೊಡ್ಡ ಗಟಾರದ ಮ್ಯಾಲೆ ಕಲ್ಲು ಹಾಕಿಕೊಂಡು, ಅದರ ಮ್ಯಾಲೆ ಗಾಡಿ ಇಟ್ಟುಕೊಂಡು, ಗೋಬಿ ಮಂಚೂರಿಯನ್ ಮತ್ತ ಎಗ್ ಫ್ರೈಡ್ ರೈಸ್ ಮಾಡಿ ಮಾರೋ ಮಂದಿ ಕಡೆ ಅವನ್ನು ತಿಂದು, ಬರಬಾರದ ರೀತಿಯೊಳಗ ಏನೇನೋ ಬ್ಯಾನಿ ಬಂದು, ಪಡಬಾರದ ಪಾಡು ಪಟ್ಟು, ಡಾಕ್ಟರ ಕುಂಡಿ ಮ್ಯಾಲೆ ಕೊಡಬಾರದ ರೀತಿಯೊಳಗ ಇಂಜೆಕ್ಷನ್ ಕೊಟ್ಟು, ಅದರ ಮ್ಯಾಲೆ ಒಂದಕ್ಕೆರಡು ಡಾಕ್ಟರ್ ಬಿಲ್ ಕೊಟ್ಟು ಸಾಕಾಗಿ ಬಿಟ್ಟದ. ರೂಪಾ ವೈನಿ ಸಹಿತ ಗೋಬಿ ಮಂಚೂರಿಯನ್ ಜೊತಿ ಎಗ್ ಫ್ರೈಡ್ ರೈಸ್ ಮಾಡಿರ್ತಾರೋ ಏನೋ? ಅಂತ ಮನಸ್ಸಿನ್ಯಾಗಾ ಮಂಡಿಗಿ ತಿಂದೆ. ಮನಸ್ಸಿನ್ಯಾಗ ಮಂಡಿಗಿ ತಿನ್ನೋದು ಅಂದ ಮ್ಯಾಲೆ ಜೊತಿಗೆ ಹಾಲು ತುಪ್ಪಾ ಸಹಿತ ಮಸ್ತ ಹಾಕಿಕೊಂಡ ತಿಂದುಬಿಟ್ಟೆ. ಫ್ರೀ ನೋಡ್ರೀ!

ಏಕದಂ ಫ್ಲಾಶ್ ಆತು. ಬ್ರಾಹ್ಮಣರ ಮನಿ. ವೈನಿ ಬ್ಯಾರೆ ಸ್ವಲ್ಪ ಕಟ್ಟರ್. ಎಗ್ ಗಿಗ್ಗ್ ಮನಿಯೊಳಗ ವರ್ಜ್ಯ. ಹಾಂಗಾಗಿ ಎಗ್ ಫ್ರೈಡ್ ರೈಸ್ ಏನೂ ಮಾಡಲಿಕ್ಕೆ ಇಲ್ಲ. ಕಲಸನ್ನನೋ, ವಾಂಗೀ ಭಾತೋ, ಮಸಾಲಿ ಭಾತೋ ಏನಾರಾ ಮಾಡೇ ಮಾಡಿರ್ತಾರ. ಬರೇ ಗೋಬಿ ಮಂಚೂರಿಯನ್ನು, ಅನ್ನಾ, ಸಾರು, ಪಲ್ಯಾ ಮಾಡಿ ಅರ್ಧಂ ಬರ್ಧಾ ಬಡಾ ಖಾನಾ ಮಾಡಲಿಕ್ಕೆ ರೂಪಾ ವೈನಿ ತಲಿ ಏನೂ ಕೆಟ್ಟಿರಲಿಕ್ಕೆ ಇಲ್ಲ. ಗೋಬಿ ಮಂಚೂರಿಯನ್ನು, ಚಿತ್ರಾನ್ನ ಉರ್ಫ್ ವಗ್ಗರಣಿ ಅನ್ನ ಮಾಡಬಹುದು ಅಂತ ಇಟ್ಟುಕೊಳ್ಳೋಣ. ಸ್ವೀಟ್ ಏನು ಮಾಡಬಹುದು? ಕಮ್ಮಿ ಕಮ್ಮಿ ಅಂದ್ರೂ ಶಾವಿಗಿ ಪಾಯಸಾ ಮಾಡ್ತಾರ ಅನ್ಕೊತ್ತೇನಿ. ಏನೂ ಇಲ್ಲಂದ್ರೂ ಹಳೆ ಪಳೆ ಬಾಳಿ ಹಣ್ಣು ಕತ್ತರಿಸಿ, ಅವನ್ನ ಹಾಲಾಗ ಒಗದು, ಒಂದೆರಡು ಯಾಲಕ್ಕಿ ಜಜ್ಜಿ ಹಾಕಿ ಪಂಚಾಮೃತದಂತಹ ಬಾಳಿ ಹಣ್ಣಿನ ಪಾಯಸಾ ಅಂತೂ ಮಾಡೇ ಮಾಡಿರ್ತಾರ. ಹಾಕ್ಕ! ಅವನೌನ್!!!

ಚೀಪ್ಯಾ ಮೂರ ಶಬ್ದ....ಗೋಬಿ....ಚಂದಾ....ಮಂಚೂರಿಯನ್...ಅಂತ ಹೇಳಿದಾ. ಅಥವಾ ನಾ ಹಾಂಗ ಕೇಳಿಸಿಕೊಂಡೆ. ಅದರ ಮ್ಯಾಲೆ ಏನೋ ಊಟಕ್ಕ ಬಾ ಅಂತ ಹೇಳಿ ಬಿಟ್ಟರ ನಾವು ಇಷ್ಟು ದೊಡ್ಡ ಮಂಡಿಗಿ ಮನಸ್ಸಿನ್ಯಾಗ ತಿಂದು ಬಿಟ್ಟಿವಿ. ಮನಸ್ಸಿನ್ಯಾಗ ಮಂಡಿಗಿ ತಿಂದ್ರ ಪುಣ್ಯಕ್ಕ ಹೊಟ್ಟಿ ತುಂಬೋದಿಲ್ಲ. ಇಲ್ಲಂದ್ರ ಹೋಗಿ ಗಡದ್ದ ಊಟಾ ಕಟೀಲಿಕ್ಕೆ ಆಗತಿರಲಿಲ್ಲ. ಟೈಮ್ ನೋಡಿಕೊಂಡೆ. ಹಾಂ!!!ಒಂದು ತಾಸ ಆಗಲಿಕ್ಕೆ ಬಂದೇ ಬಿಟ್ಟಿತ್ತು. ಲಗೂನ ಹೋಗಿ ಪಂಕ್ತಿ ಒಳಗ ಮೊದಲ ಕೂಡಬೇಕು. ಇಲ್ಲಂದ್ರ ಒಮ್ಮೊಮ್ಮೆ ಪಂಕ್ತಿ ತುದಿಗೆ ಬರೋ ತನಕಾ ಮಾಡಿದ ಅಡಿಗಿ ಖಾಲಿ ಆಗಿಬಿಡ್ತಾವ. ಮೊದಲೇ ಬ್ರಾಹ್ಮಣರು ಗೋಬಿ ಮಂಚೂರಿಯನ್ ಎಲ್ಲಾ ಮಾಡೋದು ಭಾಳ ಅಪರೂಪ. ಎಲ್ಲರೆ ರಾಯರ ಮಠದ ಆಚಾರ್ರು, ಗುಡಿ ಭಟ್ಟರು ಊಟಕ್ಕ ಬರ್ತಾರೋ ಏನೋ? ಅವರೆಲ್ಲಾ ಬಂದು ಪಂಕ್ತಿ ಒಳಗ ಫಸ್ಟ್ ಸೆಕೆಂಡ್ ಕೂತು ಬಿಟ್ಟರ ಮುಗೀತು ಅಷ್ಟ. ಅದಕ್ಕss ಲಗೂ ಹೋಗಿ ಹ್ಯಾಂಗರ ಮಾಡಿ ಪಂಕ್ತಿ ಒಳಗ ಮಸ್ತ ಜಗಾ ಹಿಡಿಬೇಕು ಅನಕೋತ್ತ ಚೀಪ್ಯಾನ ಮನಿ ಕಡೆ ಹೊಂಟು ಬಿಟ್ಟೆ.

ಚೀಪ್ಯಾನ ಮನಿ ಬಂದು ಮುಟ್ಟಿದೆ. ಯಾರನ್ನ ನಿರೀಕ್ಷೆ ಮಾಡಿದ್ದೆ ಅವರ್ಯಾರೂ ಇರಲಿಲ್ಲ. ಮಠದ ಆಚಾರ್ರು, ಗುಡಿಯ ಭಟ್ಟರು ಇರಲಿಲ್ಲ. ಒಳ್ಳೇದಾತು. ನಾವೇ ಮಸ್ತಾಗಿ ಗೋಬಿ ಮಂಚೂರಿಯನ್ ಮುಕ್ಕಬಹುದು. ಯಾರೂ ಪ್ರತಿಸ್ಪರ್ಧಿ ಇಲ್ಲ. ಗುಡ್! ಐ ಲೈಕ್ ಇಟ್! ರೂಪಾ ವೈನಿ ಯಬಡ ತಂಗಿ ಕನ್ಯಾಕುಮಾರಿ ಚಂದಾ ಸಹಿತ ಕಾಣಲಿಲ್ಲ. ಒಳ್ಳೇದೇ ಆತು. ಅಕಿ ಹಾಪರ ಗತೆ ಖೀ....ಖೀ....ಅಂತ ನಕ್ಕೋತ್ತ, ನನ್ನ ಕಾಡಿಸಿಕೋತ್ತ ಇರತಾಳ. ಶಾಂತಿಯಿಂದ ಊಟ ಮಾಡಬಹುದು.

ನಿರೀಕ್ಷೆ ಮಾಡಿದವರು ಅಂತೂ ಯಾರೂ ಇರಲಿಲ್ಲ. ಆದರೇ ಒಬ್ಬ ಅನಿರೀಕ್ಷಿತ ವ್ಯಕ್ತಿ ಮಾತ್ರ ಅಲ್ಲಿದ್ದ. ಅವನ್ನ ನೋಡಿ ಫುಲ್ ಘಾಬರಿ ಆದೆ. ಥಂಡಾ ಏನ್ ಬಂತು ಫುಲ್ ಐಸ್ ಕೋಲ್ಡ್ ಹೊಡದ ಬಿಟ್ಟೆ. ಹಾಂಗಿದ್ದ ಆ ವ್ಯಕ್ತಿ. ಅದೂ ಚೀಪ್ಯಾನ ಮನಿಯಾಗ ಸಿಕ್ಕು ಬಿಟ್ಟಾನ.

ಯಾರಿರಬಹುದು? ಅವನ್ನ ನೋಡಿ ನಾ ಯಾಕ ಅಷ್ಟು ಥಂಡಾ ಹೊಡದೆ?

ಚೀಪ್ಯಾನ ಮನಿಯೊಳಗ ಒಬ್ಬವ ಚಿಂಕಿ ಅಂದ್ರ ಚೈನಾ ಮಂಗೋಲಿಯಾ ಆ ಕಡೆ ಮನುಷ್ಯಾ ಬಂದು ಕೂತು ಬಿಟ್ಟಾನ! ಬರೆ ಚಿಂಕಿ ಅಂದ್ರ ಓಕೆ. ಈಗ ಎಲ್ಲಾ ಕಡೆ ವಿದೇಶೀ ಮಂದಿ ಬರ್ತಾರ, ಊರೂರು ತಿರಗತಾರ, ಎಲ್ಲೆಲೋ ಇರತಾರ, ಸಾಮಾನ್ಯ ಮಂದಿ ಜೊತಿ ಅವರೊಂದಿಗೇ ಇದ್ದು ಜೀವನಾ ಕಲಿತೇವಿ ಅದು ಇದು ಅಂತಾರ. ಅದೆಲ್ಲಾ ಓಕೆ. ಆದ್ರ ಈ ಚಿಂಕಿ ಮಾತ್ರ ಭಾರಿ ವಿಚಿತ್ರನೇ ಇದ್ದ.

ಮಸ್ತ ನಾಮಾ, ಮುದ್ರಿ, ಅದು, ಇದು ಅಂತ ಚೀಪ್ಯಾನ ಜಾತಿ ಮಂದಿ ಹಾಂಗ ಇದ್ದ. ಇವೆಲ್ಲಿ ಚಿಂಕಿ ಬ್ರಾಹ್ಮಣ ಬಂದಾ ಅಂತ ಆಶ್ಚರ್ಯ ಪಟ್ಟೆ! ಮಸ್ತ ಚಂಡಿಕಿ ಬ್ಯಾರೆ ಬಿಟ್ಟಾನ! ಹಾಂ! ಹಾಂ!

ಅಷ್ಟರಾಗ ಆ ಚಿಂಕಿನೇ ಜನಿವಾರ ಹೊಸಗೋತ್ತ, ಅದನ್ನ ಆಕಡೆಯಿಂದ ಈ ಕಡೆ, ಪಕ್ಕಾ ಆಚಾರ ಮಂದಿ ಹಾಂಗ, ಮಾಡಿಕೋತ್ತ, ಹಿಂದ ಧೋತ್ರಾ ಮತ್ತ ಮತ್ತ ಎತ್ತಿ ಸರಿ ಮಾಡಿ ಸಿಕ್ಕಿಸಿಕೋತ್ತ ಬಂದು, ಸ್ವಚ್ಚ ಕನ್ನಡ ಒಳಗ, ಅವನ ಚಿಂಕಿ ಆಕ್ಸೆಂಟ್ ಒಳಗ, ನಮಸ್ಕಾರ, ಅಂದು ಬಿಟ್ಟ!

ನಾ ಫುಲ್ ಫ್ಲಾಟ್!

ನಮಸ್ಕಾರ, ಅಂದೆ ನಾನೂ.

ಇನ್ನೂ ಚಿಂಕಿ ಆಚಾರಿ ನೋಡಿ ಆದ ಶಾಕಿನಿಂದ ಹೊರಗ ಬಂದಿದ್ದಿಲ್ಲ.

ನನ್ನ ಹೆಸರು ಗೋವರ್ಧನಾಚಾರ್ಯ, ಕ್ಯಾ ಕ್ಯೂ, ಅಂತ ಆ ಚಿಂಕಿನೇ ಮತ್ತ ಹೇಳಿದ.

ಕನ್ನಡ ಬಂದ್ರ ಏನಾತು? ಅವರ ಆಕ್ಸೆಂಟ್ ಹ್ಯಾಂಗ ಅಂದ್ರ ನಮಗ ಕೊನಿಗೆ ಕ್ಯಾ ಕ್ಯೂ ಅಂತ ಅವಾ ಮೂಗಿನೊಳಗ ಹೇಳಿದಂಗ ಕೇಳತದ.

ನಮಸ್ಕಾರ....ನಮಸ್ಕಾರ....ಗೋವರ್ಧನಾಚಾರ್ಯ ಅವರಿಗೆ. ಸಂತೋಷ. ಎಲ್ಲಿಂದ ಬಂದೀರಿ? - ಅಂತ ಕೇಳಿದೆ.

ನಾವು ಮಂಚೂರಿಯಾದಿಂದ ಬಂದಿದೇವೆ, ಅಂದ ಚಿಂಕಿ.

ಈಗ ಗೊತ್ತಾತು ನೋಡಲೇ!! ಮಂಚೂರಿಯಾದಿಂದ ಗೆಸ್ಟ್ ಬಂದಾರ ಅಂತ ಹೇಳಿಯೇ ಮನಿಯೊಳಗ ಗೋಬಿ ಮಂಚೂರಿಯನ್ ಮಾಡ್ಯಾರ ಅಂತಾತು. ಬೆಷ್ಟ ಆತು ತೊಗೋ!!

ಏನ್ ಗೋವರ್ಧನ ಆಚಾರ್..... ನಿಮಗ ಗೋಬಿ ಮಂಚೂರಿಯನ್ ಭಾಳ ಸೇರ್ತದ ಏನು? - ಅಂತ ಕೇಳಿದೆ.

ಅವಾ ಫುಲ್ confuse ಆಗಿ, ಕ್ಯಾ ಕ್ಯೂ, ಅಂತ ಮೂಗಿನೊಳಗ ಅಂದ. ಅವಂಗ ಅವರಪ್ಪನ ಆಣಿಗೂ ಗೋಬಿ ಮಂಚೂರಿಯನ್ ಅಂದ್ರ ಏನು ಅಂತ ತಿಳಿಲಿಲ್ಲ. ಇರಲಿ ಅವರ ಭಾಷಾ ಒಳಗ ಅದಕ್ಕ ಬ್ಯಾರೆನೇ ಏನೋ ಹೆಸರು ಇರಬೇಕು.  ಅದಕ್ಕ ಅಂತ ಬಿಟ್ಟೆ.

ಏನು ಗೋವರ್ಧನಾಚಾರ್ಯ ಈ ಕಡೆ ಬಂದೀರಿ? -ಅಂತ ಕೇಳಿದೆ.

ನಿಮ್ಮದು ದೇಶದಲ್ಲಿ ವೇದಾಂತ ಕಲೀಬೇಕು ಅಂತ ಬಂದು ಹದಿನೈದು ವರ್ಷದ ಮೇಲಾಗಿ ಹೋಯಿತು, ಅಂದ ಚಿಂಕಿ.

ವಾಹ್! ಭಾಪರೆ!! ನಮ್ಮ ಮಂದಿ ನಮ್ಮ ವೇದಾಂತ ಅದು ಇದು ಎಲ್ಲಾ ಬಿಟ್ಟು ಕೂತರ ಹೊರಗಿನ ಮಂದಿಗೆ ಭಾಳ ಆಸಕ್ತಿ. ಬಹಳ ಹೆಮ್ಮೆ ಅನ್ನಿಸ್ತು. ಚಿಂಕಿ ಬಗ್ಗೆ ಒಂದು ತರಹದ ಗೌರವ ಭಾವನೆ ಮೂಡಿತು.

ಧನ್ಯನಾದೆ ಮಂಗೋಚಾರ್ರ!!!!ಧನ್ಯನಾದೆ ಮಂಗೋಚಾರ್ರ, ಅಂತ ಉದ್ಗರಿಸಿದೆ.

ನಮಗೆ ಮಂಗಾ ಅಂತೀರಾ ನೀವು? ಕ್ಯಾ ಕ್ಯೂ, ಅಂತ ಸ್ವಲ್ಪ ಸಿಟ್ಟಿನಿಂದ ಕೇಳಿದ ಚಿಂಕಾಚಾರ್ಯಾ.

ಇಲ್ಲರೀಪಾ.....ಇಲ್ಲ.....ಮಂಚೂರಿಯನ್ ಗೋವರ್ಧನಾಚಾರ್ರ ಅನ್ನೋದು ಭಾಳ ಉದ್ದಾತು. ಅದಕ್ಕ ಶಾರ್ಟಾಗಿ ಮಂಗೋಚಾರ್ರ ಅಂದೇ ಅಷ್ಟ. ಎಲ್ಲಿ ಮಂಗ್ಯಾ? ನಾವೆಲ್ಲಾ ಮಂಗ್ಯಾಗಳು. ಅಷ್ಟು ದೂರದ ಚೀನಾ ದೇಶದಿಂದ ಪ್ರಾಚೀನ ಕಾಲದಾಗ ಹೂಯೇನ್ ತ್ಸಾಂಗ್ ಬಂದಾಂಗ ಬಂದು ಬಿಟ್ಟೀರಿ. ಅವನಗತೆ ಕುಂಡಿಗೆ ಖುರ್ಚಿ, ತಲಿಗೊಂದು ಛತ್ರಿನೂ ಕಟ್ಟಿಗೊಂಡು ಬಂದೀರೋ ಹ್ಯಾಂಗ? ಅಲ್ಲಾ ಮಾತಿಗೆ ಕೇಳಿದೆ. ವರ್ಷಗಟ್ಟಲೆ ಅಡ್ಡಾಡೋರು ಅದಕ್ಕ ಕೇಳಿದೆ, ಅಂತ ಚಿಂಕಾಚಾರ್ಯನ ಕೋಪ ಶಮನ ಮಾಡಿದೆ.

ಕುಂಡಿಗೆ ಖುರ್ಚಿ, ತಲಿಗೆ ಛತ್ರೀ ಕಟ್ಟಿಕೊಂಡು ಭಾರತಕ್ಕೆ ಬಂದಿದ್ದ ಆ ಕಾಲದ ಬ್ಯಾಕ್ ಪ್ಯಾಕರ್ ಹೂಯೇನ್ ತ್ಸಾಂಗ

ನಾವೆಲ್ಲ ಮಾಡರ್ನ್ ಹೂಯೇನ್ ತ್ಸಾಂಗ್. ನಮ್ಮ ಹತ್ತಿರ ಮಾಡರ್ನ್ ಬ್ಯಾಕ್ ಪ್ಯಾಕಿಂಗ್ ಎಲ್ಲಾ ಸಾಮಾನು ಇದೆ, ಅಂತ ಅವನ ಕಡೆ ಸ್ಲೀಪಿಂಗ್ ಬ್ಯಾಗ್, ಅದು, ಇದು ಅಂತ ಹೇಳಿದ.

ಓಹೋ!!! ಹಾಂಗ? ವೆರಿ ಗುಡ್, ವೆರಿ ಗುಡ್, ಅಂದು ಮುಂದೇನು ಈ ಚಿಂಕಾಚಾರ್ಯನ ಜೊತಿ ಮಾತಾಡಬೇಕು ಅನ್ನೋದ್ರಾಗ ರೂಪಾ ವೈನಿ, ಊಟಕ್ಕ ಬರ್ರಿ ಎಲ್ಲಾರೂ, ಅಂತ ಟಾಪ್ ವಾಯ್ಸ್ ಒಳಗ ಹೊಯ್ಕೊಂಡಿದ್ದು ಕೇಳಿಸ್ತು.

ಭರಕ್ಕನ ಹಾರಿ ಹೋಗಿ ಪಂಕ್ತಿ ಒಳಗ ಮೊದಲ ಸೀಟ್ ಹಿಡದ ಬಿಟ್ಟೆ. ಮಠದ ಆಚಾರ್ರು, ಗುಡಿ ಭಟ್ಟರು ಇರದಿದ್ದರ ಏನಾತು? ಈ ಚಿಂಕ್ಯಾ ಮಂಗೋಚಾರ್ಯ, ಚೀಪ್ಯಾ ಇಬ್ಬರೇ ಕೂಡಿ ಅಷ್ಟೂ ಗೋಬಿ ಮಂಚೂರಿಯನ್ ತಿಂದು ಸ್ವಾಹಾ ಮಾಡಿ ಮುಗಿಸಿ ಬಿಟ್ಟರೆ? ಹಾಂ? ಹಾಂ?!

ಆ ಪರಿ ರೇಸ್ ಹಚ್ಚಿ ಓಡಿ ಹೋಗಿ ಸೀಟ್ ಹಿಡಿಯೋದನ್ನ ನೋಡಿದ ರೂಪಾ ವೈನಿ, ಇದು ಎಂದೂ ಸುಧಾರಿಸೋ ಪೈಕಿ ಅಲ್ಲ, ಅಂತ ತಲಿ ಅಲ್ಲಾಡಿಸಿದರು. ಇಗ್ನೋರ್! ಜಸ್ಟ್ ಇಗ್ನೋರ್! ಅಂತ ಇಗ್ನೋರ್ ಮಾಡಿ ಎಲಿ ಮುಂದ ಕೂತು ಬಿಟ್ಟಿವಿ. ಗೋಬಿ ಮಂಚೂರಿಯನ್ ಯಾವಾಗ ಬರ್ತದೋ ಏನೋ?! ಆತುರಾ, ಕಾತುರಾ! ಟೈಮ್ ವೇಸ್ಟ್ ಮಾಡ ಬ್ಯಾಡ್ರೀ....ಲಗೂನ ಅನ್ನಾ, ತವ್ವಿ ಶಾಸ್ತ್ರ ಮುಗಿಸಿ, ಲಗೂನ ಗೋಬಿ ಮಂಚೂರಿಯನ್ ಹಾಕಿ ಬಿಡ್ರೀ, ಅಂತ ಹೊಯ್ಕೊಳ್ಳೋಣ ಅಂತ ಮಾಡಿದೆ. ಮಂದಿ ಮನಿ, ಅದೂ ಚಿಂಕಿ ಆಚಾರಿ ಬ್ಯಾರೆ ಬಂದಾನ ಅಂತ ಬಿಟ್ಟೆ.

ಚೀಪ್ಯಾ, ಮಂಚೂರಿಯನ್ ಗೋವರ್ಧನಾಚಾರಿ ಬಂದು ಸ್ಥಾಪಿತರಾದರು. ಭಾಳ ಶಾಸ್ತ್ರ ಸಮ್ಮತವಾಗಿ ಇಬ್ಬರೂ ಪತ್ರಾವಳಿ ಎಲಿ ಬಾಜೂಕ ಚಿತ್ರಾವಳಿ ಹಾಕಿ ಒಂದ್ನಾಕು ಅಗಳು ಅನ್ನಾ ದೇವರಿಗೆ ಇಟ್ಟು, ಏನೇನೋ ಮಂತ್ರಾ ಹೇಳಿ, ನೀರು ಮ್ಯಾಲೆ ನೀರು ಆಚಮನ ತೊಗೊಂಡು, ಅದೇನೋ ಶಾಸ್ತ್ರ ಇಬ್ಬರೂ ಮುಗಿಸಿ, ಊಟಕ್ಕ ರೆಡಿ ಅಂತ ಸಿಗ್ನಲ್ ಕೊಟ್ಟರು. ನನಗೂ ಮುಂಜ್ವಿ ಆದ ಹೊಸತರಲ್ಲಿ ಅದೆಲ್ಲಾ ಸ್ವಲ್ಪ ಸ್ವಲ್ಪ ಬರ್ತಿತ್ತು. ಈಗ ಜನಿವಾರನೇ ಇಲ್ಲ. ಈಗಾಗಲೇ ವಾರದಾಗ ಏಳು 'ವಾರ' ಅವ, ಜನಿ'ವಾರ' ಅಂತ ಇನ್ನೊಂದು ವಾರ ಹಾಕೋದು ಬ್ಯಾಡ ಅಂತ ಜನಿವಾರ ತ್ಯಜಿಸಿ ಭಾಳ ವರ್ಷದ ಮ್ಯಾಲೆ ಆತು. ಮತ್ತ ವೇದ ಉಪನಿಷತ್ತುಗಳ ಹೇಳಿ ಬಿಟ್ಟಾವ, ಬ್ರಹ್ಮಜ್ಞಾನ ಬಂದವರಿಗೆ ಜನಿವಾರ, ಉಡದಾರ, ಚಂಡ್ಕಿ ಮತ್ತೊಂದು ಎಲ್ಲಾ ಬ್ಯಾಡ ಅಂತ ಹೇಳಿ. ಬ್ರಹ್ಮಜ್ಞಾನ ಡ್ರಮ್ಮಜ್ಞಾನ ನಮಗೂ ಅದ ಅಂತ ಹೇಳಿ ನಾವೂ ಅವೆಲ್ಲಾ ಬಿಟ್ಟ ಬಿಟ್ಟೇವಿ. ಬಾಜೂಕ ಕೂತ ಇಬ್ಬರು ವಿಪ್ರೋತ್ತಮರು ಅವರ ಪದ್ಧತಿ ಅನುಸರಿಸೋವಾಗ ನಾವು ಕೋಸಂಬರಿ, ರಸಾ, ಉಪ್ಪಿನಕಾಯಿ ನೆಕ್ಕೋತ್ತ, ಚೀಪ್ಯಾನ ಕನ್ಯಾರತ್ನಗಳಾದ ಕುಂತಿ ನಿಂತಿ ಜೊತಿ ಮಂಗ್ಯಾನಾಟಾ ಮಾಡಿಕೋತ್ತ, ರೂಪಾ ವೈನಿ ಕಡೆ ಬೈಸಿಕೋತ್ತ, ಗೋಬಿ ಮಂಚೂರಿಯನ್ನಿಗೆ ಕಾದು  ಕೂತಿದ್ವಿ.

ಬಡಿಸಲಿಕ್ಕೆ ಶುರು ಮಾಡಿದ್ರು. ಒಂದಾದ ಮ್ಯಾಲೆ ಒಂದು ಬರೆ ಪಕ್ಕಾ ಬ್ರಾಹ್ಮಣರ ಅಡಿಗಿ. ಅದೇ ಅನ್ನಾ, ತೊವ್ವಿ, ಚಪಾತಿ,
ಸಾರು, ಹುಳಿ, ರಸಾ, ಅದರ ಮ್ಯಾಲೆ ಶ್ರಾದ್ಧದ ವಡಿ ಬ್ಯಾರೆ. ಯಾರ ಶ್ರಾದ್ಧನೋ ಏನೋ?ಶ್ರಾದ್ಧದ ಊಟ ಮಾಡಿದ್ರ ಸತ್ತವರ ಪಾಪ ನಮಗೂ ಹತ್ತದಂತ. ಯಾವ ಪಾಪಿ ಮುಂಡೆ ಗಂಡ ಗೊಟಕ್ಕ ಅಂದನೋ ಏನೋ! ಅವನ ಶ್ರಾದ್ಧಾ. ಹಾಳಾಗಿ ಹೋಗ್ಲೀ ಅಂತ ಹಾಕಿದ್ದೆಲ್ಲಾ ಮಸ್ತಾಗಿ ಗುಳುಂ ಗುಳುಂ ಮಾಡಿಕೋತ್ತ ಬರಬಹುದಾದ ಗೋಬಿ ಮಂಚೂರಿಯನ್ನಿಗೆ ಕಾದು ಕೂತಿದ್ದೆ. ಅದು ಬರೋ ಲಕ್ಷಣನ ಇಲ್ಲ!!!

THE END ಅನ್ನೋ ಹಾಂಗ ಮೊಸರು ಮಜ್ಜಿಗಿ ತಂದು ಬಿಟ್ಟರು. ಛೆ!!! ಇದಾದ ಮ್ಯಾಲೆ ಗೋಬಿ ಮಂಚೂರಿಯನ್ನು ಬರಲಿಕ್ಕೆ ಇಲ್ಲ. ಎಲ್ಲರ ರೂಪಾ ವೈನಿ ಗೋಬಿ ಮಂಚೂರಿಯನ್ನ ಮಾಡಿದ್ದನ್ನ ಮರತು ಬಿಟ್ಟಾರೋ ಏನೋ! ಅಂತ ಸಂಶಯ ಬಂತು. ಕೇಳೆ ಬಿಡಬೇಕು ಅಂತ ಕೇಳೇ ಬಿಟ್ಟೆ. ಹಾಳಾಗಿ ಹೋಗ್ಲೀ!!

ಏನ್ರೀ ವೈನಿ ಗೋಬಿ ಮಂಚೂರಿಯನ್ನ ಮಾಡಿಲ್ಲ ಏನು? ಮರತರೇನು ಬಡಿಸಲಿಕ್ಕೆ? ಹಾಂ? ಹಾಂ? - ಅಂತ ಕೇಳಿಬಿಟ್ಟೆ.

ಏನು?! ಏನು?! ಅನ್ನೋ ಸರ್ಪ್ರೈಸ್ ಲುಕ್ ಕೊಟ್ಟರು ವೈನಿ.

ಗೋಬಿ ಮಂಚೂರಿಯನ್ನ!!ಗೋಬಿ ಮಂಚೂರಿಯನ್ನ!!! ನೀವು ಉಳಿ ಬಸಪ್ಪನ ಗುಡಿ ಜಾತ್ರಿ ಒಳಗ ತಿಂದಿದ್ರಿ ನೋಡ್ರೀ. ಅದss. ಮಾಡೀರಿ ಏನು?  - ಅಂತ ಕೇಳಿದೆ.

ಅಯ್ಯೋ!!! ಶನಿ ಮುಂಡೆ ಗಂಡ. ಏನಂತ ಕೇಳ್ತಿಯೋ???!!! ಅಂದ್ರು ರೂಪಾ ವೈನಿ.

ಈ ಮಂಗೇಶಂಗ ಏನು ದೊಡ್ಡ ಬ್ಯಾನಿ ಬಂದದರೀ ಶ್ರೀಪಾದ ರಾವ್? ಶ್ರಾದ್ಧದ ಊಟ ಅಂತೂ ಬ್ರಾಹ್ಮಣರ ಪಂಕ್ತಿಯೊಳಗ ಕೂತು ಹೊಲೆಯಾರ ಗತೆ ಜನಿವಾರಿಲ್ಲದ, ಅಂಗಿ ಬಿಚ್ಚದ ಉಣ್ಣಲಿಕತ್ತನಾ. ಅದರ ಮ್ಯಾಲೆ ಉಳಿ ಬಸಪ್ಪನ ಗುಡಿ ಜಾತ್ರಿ ಒಳಗ ಗೋಬಿ ಮಂಚೂರಿಯನ್ನ ತಿಂದ ಸುದ್ದಿ ಬ್ಯಾರೆ ಹೇಳ್ತಾನ. ಏನ್ ಆಗ್ಯದರೀ ಇವಂಗ? - ಅಂತ ರೂಪಾ ವೈನಿ ಶಂಖಾ ಹೊಡೆದರು.

ಅಯ್ಯ ಇವರss!!! ಗೋಬಿ ಮಂಚೂರಿಯನ್ನ ಅಂದೆ ಇವರಿಗೆ ತಿಳಿಲಿಲ್ಲ. ಲಾಸ್ಟ್ ಟೈಮ್ ಉಳಿ ಬಸಪ್ಪನ ಗುಡಿ ಜಾತ್ರಿ ಒಳಗ ತಿಂದಿದ್ದರು. ಚೀಪ್ಯಾನss ಕೊಡಸಿದ್ದ. ಅದನ್ನ ನೆನಪು ಮಾಡಿ ಕೊಟ್ಟರ ಚಿಟ್ಟಂತ ಚೀರ್ಲಿಕತ್ತಾರ ವೈನಿ. ಯಾಕಂತ ತಿಳಿಲಿಲ್ಲ.

ಹಾಂ!!! ಈಗ ನೆನಪಾತು ವೈನಿ ಯಾಕ ಚೀರಿದರು ಅಂತ. ಅದೇನಾಗಿತ್ತು ಅಂದ್ರ ವೈನಿ ಉಳಿ ಬಸಪ್ಪನ ಗುಡಿ ಜಾತ್ರಿ ಒಳಗ ಗೋಬಿ ಮಂಚೂರಿಯನ್ನ ಮಸ್ತಾಗಿ ಮೇಯಕೋತ್ತ ಇರಬೇಕಾದರ ಯಾರೋ ಒಬ್ಬವ ಕಿಡಿಗೇಡಿ ಅವರ ಕುಂಡಿ ಚೂಟಿ ಬಿಟ್ಟಿದ್ದ. ಚೂಟಿದ ಅಬ್ಬರಕ್ಕ ವೈನಿ ರೈಸ್ ಆಗಿ, ಗೋಬಿ ಮಂಚೂರಿಯನ್ನ ಪ್ಲೇಟ್ ಮುಂದ ಒಗದು, ಅದು ಯಾರೋ ದೊಡ್ಡ ಮನುಷ್ಯಾರ ಹೊಸಾ ವಸ್ತ್ರದ ಮ್ಯಾಲೆ ಬಿದ್ದು, ದೊಡ್ಡ ರಾಮಾ ರಾಡಿ ಆಗಿ, ಏನೇನೋ ಆಗಿ, ಯಾರ್ಯಾರಿಗೋ ಕಡತ ಬಿದ್ದು, ಗೋಬಿ ಮಂಚೂರಿ ಅಂಗಡಿಯವ ಎಲ್ಲಾರಿಗೂ ಒಂದೊಂದು ಪ್ಲೇಟ್ ಫ್ರೀ ಕೊಟ್ಟು, ನನ್ನ ದಂಧಾ ಹಾಳು ಮಾಡ ಬ್ಯಾಡ್ರೀ, ಕೈ ಮುಗೀತೀನಿ, ಹೋಗ್ರೀ, ಅಂತ ಹೇಳಿ ಏನೇನೋ ಆಗಿತ್ತು.

ಯಾಕಲೇ ಮಂಗ್ಯಾ ಮಂಗೇಶ್???!!! ಏನು ತಲಿಹರಟಿ ಮಾತ ಹಚ್ಚಿ? ನಮ್ಮನ್ಯಾಗ ಇವತ್ತು ಗೋಬಿ ಮಂಚೂರಿಯನ್ನ ಮಾಡ್ಯಾರ ಅಂತ ನಾ ಹೇಳಿದ್ದೆ ಏನು? ಊಟಕ್ಕ ಬಾರಪಾ ಅಂತ ಬೇವರ್ಸೀ ಬ್ರಹ್ಮಚಾರಿ ಮುಂಡೆ ಗಂಡನ್ನ ಕರದರ, ಕಂಠ ಪೂರ್ತಿ ಶ್ರಾದ್ಧದ ಊಟ ಜಡದು, ಗೋಬಿ ಮಂಚೂರಿಯನ್ನ ಮಾಡಿಲ್ಲೇನು ಅಂತ ಕೇಳ್ತೀ ಏನೋ ಹಾಪಾ? - ಅಂತ ಚೀಪ್ಯಾ ಸಹಿತ ತನ್ನ ಇಲ್ಲದ ಪೌರುಷಾ ಹೆಂಡ್ತಿ ಮುಂದ ತೋರಿಸಿಕೊಂಡ. ಚಿಂಕಿ ಆಚಾರಿ ಮಾತ್ರ ಏನೂ ಸಂಬಂಧ ಇಲ್ಲದವಾರಂಗ ಸಾರು ಮಸ್ತ ಅದ ಮಸ್ತ ಅದ ಅನ್ನಕೋತ್ತ ಕೈ ವಾಸಿನಿ ಕುಡಕೋತ್ತ ಮತ್ತ ಮತ್ತ ಹಾಕಿಸಿಕೊಂಡು ಊಟ ಮಾಡ್ಲಿಕತ್ತಿದ್ದಾ.

ಅಲ್ಲಲೇ ಚೀಪ್ಯಾ! ಈಗ ಎರಡು ತಾಸಿನ ಹಿಂದ ಗೋಬಿ....ಚಂದಾ....ಮಂಚೂರಿಯನ್ನ ಅಂತ ಅನಕೋತ್ತ ಏನೋ ತರಲಿಕ್ಕೆ ಮಾರ್ಕೆಟ್ ಗೆ ಓಡಲಿಕತ್ತಿದ್ದಿ. ಅದರ ಮ್ಯಾಲೆ ಮನಿಗೆ ಬಂದು ನೋಡಿದ್ರ ಮಂಚೂರಿಯಾದ ಗೋವರ್ಧನಾಚಾರ್ರು ಬ್ಯಾರೆ ಬಂದು ಕೂತಾರ. ಹಾಂಗಾಗಿ ಮುದ್ದಾಂ ಗೋಬಿ ಮಂಚೂರಿಯನ್ ಮಾಡಿರಲಿಕ್ಕೇ ಬೇಕು ಅಂತ ಅನ್ನಿಸ್ತು ನೋಡಪಾ, ಅಂತ ಹೇಳಿದೆ.

ಹುಸ್ಸೋಳೆಮಗನ!!! ಹುಚ್ಚ ಮಂಗೇಶ!!! ಹುಚ್ಚ ಮಂಗೇಶ್!!! ನಾ ಆವಾಗ ಗಡಿಬಿಡಿ ಒಳಗ ಇದ್ದೆ ಮಾರಾಯಾ. ಅರ್ಜೆಂಟ್ ಇತ್ತು. ಏನು ತರಲಿಕ್ಕೆ ಹೊಂಟಿ? ಅಂತ ನಿಲ್ಲಿಸಿ ಕೇಳಿದಿ. ಮಂಚೂರಿಯಾದಿಂದ ಬಂದ ಆಚಾರ್ರು ನಮ್ಮ ಮನಿ ಒಳಗ ಒಂದೆರಡು ದಿನದ ಮಟ್ಟಿಗೆ ನಿಂತಾರ, ಅವರಪ್ಪನ ಶ್ರಾದ್ಧಾ ಮಾಡವರು ಇದ್ದಾರ, ಅವರು ಸಂಧ್ಯಾ ಮಾಡಲಿಕ್ಕೆ ಕೂಡಲಿಕ್ಕೆ ತಯಾರ ಆಗ್ಲಿಕತ್ತಾರ, ಅಷ್ಟರಾಗ ನೋಡಿದ್ರ ಗೋಪಿ ಚಂದನ ಖಾಲಿ ಆಗಿ ಬಿಟ್ಟದ, ಅದಿಲ್ಲ ಅಂದ್ರ ಹ್ಯಾಂಗ ಸಂಧ್ಯಾ? ಪೂಜಾ? ಅಂತ ಹೇಳಿ ಭರಕ್ಕನ ಗೋಪಿ ಚಂದನ ತರಲಿಕ್ಕೆ ಹೊಂಟಿದ್ದೆ ಮಾರಾಯಾ. ಅದನ್ನ ಶಾರ್ಟ್ ಆಗಿ ಹೇಳಿದರ ಮನಿಯೊಳಗ ಗೋಬಿ ಮಂಚೂರಿಯನ್ನ ಮಾಡ್ಯಾರ ಅಂತ ಬಂದು ಕೂತಿಯಲ್ಲೋ ಮಾರಾಯಾ. ಏನು ಅನ್ನೋಣ?- ಅಂತ ಚೀಪ್ಯಾ ಅಂಡು ತಟ್ಟಿಕೊಳ್ಳದೆ ನಕ್ಕ. ತಟ್ಟಿಕೊಂಡು ನಗತಿದ್ದನೋ ಏನೋ....ಆದ್ರ ಒಂದು ಕೈ ಎಂಜಾಲಾಗಿತ್ತು ನೋಡ್ರೀ ಅದಕ್ಕ ಬ್ಯಾಡ ಅಂತ ಬಿಟ್ಟಿರಬೇಕು. 

ಗೋಪೀ ಚಂದನ
ಹೋಗ್ಗೋ ಇವರೌರ್ರ!!! ಮಂಚೂರಿಯನ್ನ ಆಚಾರ್ರಿಗೆ ಗೋಪಿ ಚಂದನ ತರಲಿಕ್ಕೆ ಹೊಂಟೇನಿ ಅನ್ನೋದನ್ನ ನಾನು ಗೋಬಿ ಮಂಚೂರಿಯನ್ನ ಅಂತಾ ಊಹಾ ಮಾಡಿಕೊಂಡು ಬಂದು ಬಿಟ್ಟಿದ್ದೆ. ಬಾಜೂಕ ಕೂತ ಮಂಚೂರಿ ಆಚಾರಿದss ಮಂಚೂರಿಯನ್ನ ಮಾಡಿ ತಿನ್ನೋವಷ್ಟು ಸಿಟ್ಟು ಬಂದಿತ್ತು. ಅದು ಬ್ರಹ್ಮಹತ್ಯಾ ದೋಷಾ ಆದೀತು ಅಂತ ಬಿಟ್ಟೆ. ಸಾದಾ ಬ್ರಾಹ್ಮಣ ಅಲ್ಲ ಬ್ಯಾರೆ, ಚಿಂಕಿ ಬ್ರಾಹ್ಮಣ ನೋಡ್ರೀ! ಅಡಿಷನಲ್ ಪಾಪಾ ಬಂದೀತು!

ಏನು ಮಾಡೋದು? ಗೋಬಿ ಮಂಚೂರಿಯನ್ನ ತಿನ್ನೋ ತಲಬಂತೂ ಎಬ್ಬಿಸಿಬಿಟ್ಟಾನ ಮಂಗ್ಯಾ ಸೂಳೆಮಗ ಚೀಪ್ಯಾ. ಇನ್ನು ಸಂಜಿ ಮುಂದ ಗಟರ ಮ್ಯಾಲೆ ಗಾಡಿ ಹಾಕಿಕೊಂಡು ಮಾಡವಂದss ಗೋಬಿ ಮಂಚೂರಿ ಮತ್ತ ಎಗ್ ಫ್ರೈಡ್ ರೈಸ್ ತಿನ್ನಬೇಕಾತು. ಥತ್ !!!!!

ಊಟ ಹಾಕಿದ್ದಕ್ಕ ಒಂದು ದೊಡ್ಡ ಥ್ಯಾಂಕ್ಸ್ ಹೇಳಿ, ಸ್ಪೆಷಲ್ ಅಂತ ಮಾಡಿಸಿಕೊಂಡಿದ್ದ 420 ಜರ್ದಾ ಪಾನ್ ಹಾಕಿಕೊಂಡು ಮನಿ ಕಡೆ ಹೊಂಟೆ.

ಇವಾ ಚೀಪ್ಯಾ ಮಂಚೂರಿಯನ್ ಗೋವರ್ಧನ ಆಚಾರಿಗೆ ಗೋಪಿ ಚಂದನ ತರೋ ಅಬ್ಬರದಾಗ ನಮಗ ಗೋಬಿ ಮಂಚೂರಿಯನ್ನ ತಪ್ಪಿ ಹೊಗಿತ್ತು. ಅದಕ್ಕೇ ಗೋಪಿ ಮಂಚೂರಿಯನ್ನ. ಅದೂ ಮಂಗೋಚಾರ್ಯ ಉರ್ಫ್ ಮಂಚೂರಿಯನ್ ಗೋವರ್ಧನಾಚಾರ್ಯ ಸ್ಪೆಶಲ್.

6 comments:

ವಿ.ರಾ.ಹೆ. said...

ಅಬ್ಬಾ! ಎಲ್ಲಿಂದ ಎಲ್ಲೆಲ್ಲಿಗೆ ಲಿಂಕ್ ಮಾಡ್ತೆ ಮಾರಾಯ! ಹ್ಹ ಹ್ಹ..

Mahesh Hegade said...

Thanks, Vikas!!! :)

Unknown said...

Chennai(TN) nalli Gobhi Manchhori.... Gopi machuri.....nanu hinde chennai ge hodagalella Hotel Menu nodi biddu biddu naguttidde.....eega CHEPYA MANENALLI Gopi manchuri... madisidri...he he

Mahesh Hegade said...

Thank you!!! :)

Unknown said...

😂😂😂😂😂😂👌👌👌👌👌👌

Mahesh Hegade said...

@Unknown - thank you very much! :)